Saturday 29 October 2011

ಭಾವಲೋಕ- ಕನ್ನಡ ರಾಜ್ಯೋತ್ಸವ ವಿಶೇಷ






ಹೌದು ಕನ್ನಡ ರಾಜ್ಯೋತ್ಸ ಮತ್ತೆ ಬಂದು ಬಿಟ್ಟಿದೆ, ಹಿಂದಿನ ವರ್ಷ ಕಟ್ಟಿದ ಹಳದಿ ಕೆಂಪು ಬಣ್ಣದ ಪ್ಲಾಸ್ಟಿಕ್ ಪತಾಕೆಗಳು ಬಣ್ಣ ಕಳೆದುಕೊಳ್ಳುವ ಮೊದಲೇ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯ ತಯಾರಾಗುತ್ತಿದೆ. ಹೀಗೇ ಕನ್ನಡದ ಬಗ್ಗೆ ಬರೆಯಲು, ಅದರ ಹಿರಿಮೆಯನ್ನು ಹೊಗಳಲು ನನ್ನ ಬ್ಲಾಗು ಅತಿ ಚಿಕ್ಕ ಜಾಗವಾದೀತು.ಇರಲಿ ಬಿಡಿ, ಅಂತೆಯೇ ನಾನು ಕನ್ನಡ ರಾಜ್ಯೋತ್ಸವದ ಪ್ರಯುಕ್ತವಾಗಿ ನನಗಿಷ್ಟವಾದ ಒಂದಿಷ್ಟು ಭಾವಗೀತೆಗಳ ಹಾಗೂ ಅದರ ರಚನಾಕಾರರ ಬಗ್ಗೆ ನಾಲ್ಕು ಮಾತು ಬರೆಯೋಣ ಎಂದುಕೊಂಡಿದ್ದೇನೆ.
ಭಾವಗೀತೆ ಎಂದ ಕೂಡಲೇ ನೆನಪಾಗುವುದು ಮೈಸೂರು ಮಲ್ಲಿಗೆಯ ಕೆ. ಎಸ್. ನರಸಿಂಹಸ್ವಾಮಿ, ಒಂದು ರೀತಿಯಲ್ಲಿ ಭಾವಗೀತೆಗಳಿಗೆ ಅನ್ವರ್ಥನಾಮದ ಹಾಗೆ. ಅದ್ವಿತೀಯ ಪ್ರೇಮಕವಿ, ಕಸ್ತೂರಿ ಕನ್ನಡದಲ್ಲಿ ಕಾಮನಬಿಲ್ಲನ್ನು ಚಿತ್ರಿಸಿದರು. ಯಾವ ಹಂಗಿಲ್ಲದೇ ಹೀಗೇ ಶಬ್ದಗಳನ್ನು ಪೊಣಿಸುವ ಗೋಜಿಗೇ ಹೋಗದೇ ಭಾವವನ್ನು ಹಾಗೆಯೇ ಹರಿಬಿಟ್ಟರು, ಒಂದಿಡೀ ಪೀಳಿಗೆಗೆ ಸಾಲುವಷ್ಟು ಪ್ರೀತಿಯನ್ನು ಹಂಚಿದರು. ಭಾವವನ್ನು ಹರಿಯಬಿಡಲು ಕವನ ಮಾಧ್ಯಮವೇ ಸಶಕ್ತವೆಂದು ತಿರುತಿರುಗಿ ತೋರಿಸಿದರು. ಮೈಸೂರು ಮಲ್ಲಿಗೆಯ ಕಂಪನ್ನು ನಾಡಿಡೀ ಸಾರಿದರು. ಸರಸ, ವಿರಸ, ಮುನಿಸು, ಬೇಸರ ಎಲ್ಲ ತಾನೊಂದಾಗಿ ಭಾವಗೀತೆ ಎಂಬ ಪ್ರಕಾರಕ್ಕೆ ಜೀವ ಕೊಟ್ಟರು. "ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ ..." ಎಂದು ಪತ್ನಿಯಾಗಿ ಅಂಗಲಾಚಿದರು."ಒಂದಿರುಳು ಕನಸಿನಲಿ ..." ಎಂದು ಇಬ್ಬರೊಳಗೊಬ್ಬರಾಗಿ ಸಂಭಾಷಿಸಿದರು.  "ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು..." ಎಂದು ಪ್ರೇಮಿಯಾಗಿ ತನ್ನವಳನ್ನು ಅಕ್ಷರಶಃ ಹಾಡಿ ಹೊಗಳಿದರು. ಶಾನುಭಾಗರ ಮಗಳಾಗಿ, ರಾಯರಾಗಿ, ಬಳೆಗಾರ ಚೆನ್ನಯ್ಯನಾಗಿ ಬಂದರು ಮನೆಗೆ, ಮನಕ್ಕೆ ಬಂದರು. ಸರಳ ಭಾಷೆಯಲ್ಲಿಯೇ ಅದ್ಭುತ ರಚನೆ ಸಾಧ್ಯ, ಹೌದಲ್ಲ ಎನ್ನಿಸಿಬಿಟ್ಟರು. ಇಷ್ಟೆಲ್ಲ ಆದರೂ ಸಾಲದು ಎಂಬಂತೆ "ದೀಪವೂ ನಿನ್ನದೇ, ಗಾಳಿಯು ನಿನ್ನದೇ... " ಎಂದು ಒಂದು ಗೀತೆಯನ್ನು ಬರೆದರು ನೋಡಿ, ಎಷ್ಟೋ ಜನರು ಹಾಗೆಯೇ ಮರುಳಾಗಿಹೋದರು.ಹಾಗೂ ಕೆಲವು "ಬದುಕು ಮಾಯೆಯ ಆಟ..." ದಂತಹ ಹಾಡುಗಳನ್ನು ಬರೆದರು ಎಂಬಲ್ಲಿಗೆ ಭಾವ ಮತ್ತು ಬದುಕು ಒಂದಾದವು. ಅವರ ಒಂದು ಕವನಸಂಕಲನದ ಹೆಸರಲ್ಲಿ, ಭಾವಗೀತೆಗಳಿಗೇ ಅರ್ಪಿತವಾದ ಒಂದು ಚಲನಚಿತ್ರವೂ ಬಂತು ಎಂದರೆ ಜನಮನದಲ್ಲಿ ಅವರು ಬೀರಿದ್ದ ಪ್ರಭಾವದ ಅರಿವಾದೀತು. (ಇವರ ಹೆಸರಿನ ಪಾರ್ಕ್ BSK ೩ನೇ ಸ್ಟೇಜ್ ನಲ್ಲಿಯೇ ಇದೆ, ಹಾಗೂ ಅಲ್ಲಿ ಪ್ರತೀ ವರ್ಷ ಜನವರಿ ೨೬ಕ್ಕೆ(ಅವರ ಜನ್ಮದಿನ) ಅವರ ಹಾಡುಗಳ ಗಾಯನ ಕಾರ್ಯಕ್ರಮವಿರುತ್ತದೆಯಂತೆ.)
ದ. ರಾ. ಬೇಂದ್ರೆ ಮತ್ತೊಬ್ಬ ಅದ್ವಿತೀಯ ’ವರಕವಿ’. ನರಸಿಂಹಸ್ವಾಮಿಯವರು ಮೈಸೂರು ಮಲ್ಲಿಗೆಯ ಕಂಪನ್ನು ಹಬ್ಬಿಸಿದರೆ ಬೇಂದ್ರೆಯವರು ಉತ್ತರ ಕರ್ನಾಟಕದ ಗಂಡುಮೆಟ್ಟಿದ ಭಾಷೆಯಲ್ಲಿಯೇ ಬರೆದರು. ಅದರಲ್ಲಿಯೇ ಹಾಡಿದರು. ಅದರ ಜೀವಸತ್ವದ ಸೆಲೆಯನ್ನು ಜಗಕ್ಕೆ ಜನಕ್ಕೆ ತೋರಿಸಿಕೊಟ್ಟರು. ಸಾಮಾನ್ಯವಾಗಿ ಎರಡೆರಡು ಅರ್ಥಗಳಿರುತ್ತಿದ್ದ (ದ್ವಂದ್ವಾರ್ಥ ಅಲ್ಲ) ಪದ್ಯಗಳು ಒಂದು ರೀತಿಯಲ್ಲಿ ಸಾಮಾನ್ಯವಾಗಿಯೂ ಮತ್ತೊಂದು ರೀತಿಯಲ್ಲಿ ಅಧ್ಯಾತ್ಮಿಕವಾಗಿಯೂ ಇರುತ್ತಿದ್ದವು. "ನಾಕು ತಂತಿ...", "ಒಂದೆ ಬಾರಿ ಹಿಂದ ನೋಡಿ..." ಮುಂತಾದವು ಉದಾಹರಣೆಗಳು. ಕೆಲವು ಕಾವ್ಯಗಳು ಮೊದಲ ಸಾಲೊಂದನ್ನೇ ಕೇಳಿದರೆ  ದಾರಿತಪ್ಪಿಸುವ ಹಾಗೆ ಇರುತ್ತಿದ್ದವು. ಅತ್ಯುತ್ತಮ ಉದಾಹರಣೆ, "ನೀ ಹೀಂಗ ನೋಡಬ್ಯಾಡ ನನ್ನ...", ಇದೊಂದೇ ಸಾಲನ್ನು ನೋಡಿದರೆ ಪ್ರೇಮಗೀತೆ ಎಂದೆನಿಸುವ ಹಾಡು ತನ್ನಲ್ಲಿ ಅಡಗಿಸಿಕೊಂಡಿರುವ ನೋವು ಅಪಾರ. ಚಿಕ್ಕ ಮಗು ಸತ್ತಾಗ ಅದರ ಮುಂದೆ ಅಳದೇ ಮೊನವಾಗಿ ಕುಳಿತ ಹೆಂಡತಿಯನ್ನು ನೋಡಿ ಮೂಡಿದ ಕವಿತೆ ಎಂದು ಅರ್ಥವಾಗುವುದು ಇಲ್ಲೇ,"ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ,ನಾ ತಡಿಲಾರೆ ಅದು ಯಾಕ ನೋಡತೀ, ಮತ್ತ ಮತ್ತ ನೀ ಇತ್ತ" ಅದೇ ನೋವಿನಲ್ಲಿ ಮುಂದೆ ಹೇಳುತ್ತಾರೆ, "ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡದಂಗ ಗಾಳಿಯ ನೆವಕ, ಅತ್ತರೆ ಅತ್ತು ಬಿಡು ಹೊನಲು ಬರಲಿ, ನಕ್ಯಾಕ ಮರಸತಿ ದುಃಖ," ಇಂದಿಗೂ ಒಂದು ಅತಿಶ್ರೇಷ್ಟ ಭಾವಗೀತೆ ಎಂದು ನಂಬುತ್ತೇನೆ, ಅದೂ ಸಿ. ಅಶ್ವಥ್ ರ ಧ್ವನಿಯಲ್ಲಿ ಕೇಳಿದ ಮೇಲೆ.
ಮತ್ತೊಬ್ಬ ಭಾವಕವಿ ಎಂದರೆ ಗೋಪಾಲಕೃಷ್ಣ ಅಡಿಗರು, ನವ್ಯಪ್ರಕಾರದ ನೇತಾರರು. ನಾನು ನನ್ನ ಬ್ಲಾಗಿನ ಅಡಿಬರಹವನ್ನು ಕದ್ದಿದ್ದು ಇವರಿಂದಲೇ, "ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ನಡೆವುದೇ ಜೀವನ", ಜೀವನನವನ್ನು ಕಂಡು ಬರೆದ ಕವಿ. ದಿಟ್ಟ ಮಾತಿನ, ನೇರನುಡಿಯ ಎಲೆಮರೆಯ ಕವಿ. "ಯಾವ ಮೋಹನ ಮುರಳಿ ಕರೆಯಿತೋ..." ಅಂತೂ ಇಂದಿಗೂ ಅತೀ ಜನಪ್ರೀಯ ಭಾವಗೀತೆಗಳಲ್ಲಿ ಒಂದು. ಕಣ್ಣು ತುಂಬಿ ಬರುವ ತರಹ ಈಗಲೂ ಅನಿಸುತ್ತದೆ. ಅಂತಹ ಕಾವ್ಯವನ್ನು ಕಟ್ಟಿಕೊಟ್ಟ ಅಡಿಗರೇ "ಎದೆಯು ಮರಳಿ ತೊಳಲುತಿದೆ..." ಅಂತಹ ಪದ್ಯವನ್ನೂ ಬರೆಯುತ್ತಾರೆ. ದುಃಖದ ಭಾವಭಿವ್ಯಕ್ತಿಯಲ್ಲಿ ಕವಿಯ ಸತ್ವದ ಪರೀಕ್ಷೆಯಾಗುತ್ತದೆ ಎಂಬುದೇ ನಿಜವಾದರೆ ಅಡಿಗರು ಮೊದಲ ಪಂಕ್ತಿಯ ಭಾವಕವಿಗಳಲ್ಲಿ ಬರುತ್ತಾರೆ, ಅಲ್ಲದಿದ್ದರೂ ಸಹ.
ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ಮತ್ತೊಬ್ಬ ಕಡಿಮೆ ಪರಿಚಿತ ದೊಡ್ಡ ಕವಿ."ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು ..." ಅತಿ ಅರ್ಥಗರ್ಭಿತ ಕವನ. ಅದರಲ್ಲಿ ಭೂಮಿ-ಮುಗಿಲು, ಹಡಗು-ಕಡಲು, ಕನ್ನಡಿ-ಮುಖ ಹೀಗೆ ಅವರು ಕೊಡುವ ಉದಾಹರಣೆಗಳುಂಟಲ್ಲ, ಅವು ಅವರ ಹಿರಿಮೆಯನ್ನು, ಅವರ ಯೋಚನಾವ್ಯಾಪ್ತಿಯನ್ನು ಪರಿಚಯಿಸುತ್ತವೆ. "ಎಲ್ಲಿ ಜಾರಿತೋ ಮನವು, ಎಲ್ಲೆ ಮೀರಿತು ಮನವು ..." . ಎಂತಹ ಸುಂದರ ಪ್ರಾಸ, ಕಲ್ಪನೆಯಲ್ಲವೇ. ಹೆಚ್ಚಿನವರಿಗೆ ಗೊತ್ತೇ ಇಲ್ಲದ, ಗೊತ್ತಾಗುವ ಹಂಬಲ, ಪ್ರಯತ್ನ ಮಾಡದ ಸರಳಕವಿ. ಇಬ್ಬರು ರಾಷ್ಟ್ರಕವಿಗಳಾದ ಕುವೆಂಪು ಮತ್ತು ಜಿ. ಎಸ್. ಶಿವರುದ್ರಪ್ಪನವರನ್ನು ಹೇಗಾದರೂ ಬಿಡಲಾದೀತು. ಕುವೆಂಪುರವರ ಬಹಳಷ್ಟು ಕವನಗಳು ಬಹಳಷ್ಟು ಜನರಿಗೆ ಅರ್ಥವಾಗದೇ ಕಬ್ಬಿಣದ ಕಡಲೆ ಎನಿಸಿದ್ದು ಹೌದಾದರೂ, ವಿಮರ್ಶಕರ ಪಂಡಿತರ ದೃಷ್ಟಿಯಲ್ಲಿ ಮೆಚ್ಚಿಕೆ ಪಡೆದವು. "ತನುವು ನಿನ್ನದೆ, ಮನವು ನಿನ್ನದೇ..." "ಒ ನನ್ನ ಚೇತನ" ಎಲ್ಲವೂ ಒಂದಕ್ಕಿಂತ ಮತ್ತೊಂದು ಪರಿಪೂರ್ಣ ಕಾವ್ಯಗಳೇ. ನೆನಪಿದೆಯೇ, ಪ್ರೌಢಶಾಲೆಯ ಕನ್ನಡಪದ್ಯಭಾಗದಲ್ಲಿದ್ದ "ದೇವರು ಋಜು ಮಾಡಿದನು..." ಎಂಬ ಪದ್ಯ, ಹಾರಿದ ಬಿಳಿ ಕೊಕ್ಕರೆಗಳ ಸಾಲನ್ನು ದೇವರ ಋಜು ಎಂದು ಭಾವಿಸುವ ಕವಿಯ ಕಲ್ಪನೆ ಮುದ ಕೊಡದೇ ಇದ್ದರೆ ಕೇಳಿ.ಇನ್ನು ಜಿ. ಎಸ್. ಶಿವರುದ್ರಪ್ಪನವರಾದರೋ "ಎದೆ ತುಂಬಿ ಹಾಡಿದೆನು..." ಎಂಬ ಅಮರಗೀತೆಯನ್ನೇ ನೀಡಿದರು, ಕೇಳಿದಾಗಲೆಲ್ಲ ಎದೆ ತುಂಬಿ ಬಂದಂತಾಗುತ್ತದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಬಿ. ಎಂ. ಶ್ರೀಕಂಠಯ್ಯನವರ "ಕರುಣಾಳು ಬಾ ಬೆಳಕೆ..."ಗೆ ಯಾವ ಮಂತ್ರಕ್ಕೂ ಇಲ್ಲದ ಶಕ್ತ್ಯಾಹ್ವಾನದ ಶಕ್ತಿಯಿದೆ.
ಇವೆಲ್ಲ ಹಾಡುಗಳಿಗೂ, ಈ ಪ್ರತೀ ಭಾವಪುಂಜಗಳಿಗೂ ಇರುವ ಸಾಮಾನ್ಯತೆಯೇನು? ಎಲ್ಲವೂ ಒಂದು ಹೇಳಲಾಗದ ಸಮಾಧಾನವನ್ನು ಹೇಳುತ್ತವೆ.ಎಲ್ಲವೂ ಒಂದಲ್ಲಾಒಂದು ರೀತಿಯಲ್ಲಿ ಬದುಕಿನ ಬಗ್ಗೆ ಮಾರ್ಗದರ್ಶನ ಮಾಡುತ್ತವೆ. ಏನೋ ಒಂದು ಸುಖವಾದ ಸಂತೋಷವನ್ನು ಕೊಡುತ್ತದೆ.ಇದನ್ನು ಇಷ್ಟಕ್ಕೆ ಮುಗಿಸಿದರೆ ಎಲ್ಲಾ ಹಾಡುಗಳಿಗೆ ಜೀವ ತುಂಬಿದ ಗಾಯಕರಿಗೆ ದ್ರೋಹ ಬಗೆದಂತಾಗುತ್ತದೆ, ನನಗೆ ನಿಜವಾಗಿಯೂ ಭಾವಗೀತೆಗಳ ಹುಚ್ಚನ್ನ್ನು ಹತ್ತಿಸಿದ್ದು, ಇಂತಹ ಒಬ್ಬ ಹಾಡುಗಾರ್ತಿಯೇ. ಎಂ. ಡಿ. ಪಲ್ಲವಿ, ಸಿ. ಅಶ್ವತ್, ಮೈಸೂರು ಅನಂತಸ್ವಾಮಿ ಇವರಿಗೆಲ್ಲ ನಾನು ಅನತಾನಂತ ಕೃತಜ್ಞನಾಗಿರಬೇಕು.

Saturday 22 October 2011

ಬೇಸರಿಕೆ

ಮತ್ತದೇ ಬೇಸರ, ಅದೇ ಸಂಜೆ! ಶನಿವಾರದ ಸಾಪ್ತಾಹಿಕ ಅಂಕಣ,ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ  ನಾನ್ಯಾಕೋ ಗದ್ಯದಿಂದ  ಪದ್ಯ  ಪ್ರಕಾರದ ಕಡೆಗೇ ವಾಲುತ್ತಿದ್ದೇನೆ ಎನ್ನಿಸುತ್ತಿದೆ.  ಈ ಶಿಫ್ಟ್ ನ ಬಗ್ಗೂ , ಈ ಕವನದ ಬಗ್ಗೂ ಕಮೆಂಟಿಸಿ. :-) 


 ಮುಸ್ಸಂಜೆ ಮಸುಗಪ್ಪಿನಲಿ ಹಬ್ಬಿರುವ ಬೇಸರವೇ,
ಕನಿಕರವು ಮೂಡಿ ಹೊರಟುಹೋಗಲು ಒಲ್ಲೆಯೇಕೆ?
ಉಸಿರ ಮರೆಸುವ ಹಾಗೆ ನಿಡುಸುಯ್ದ ನಿಟ್ಟುಸಿರೆ,
ಮರಳಿ ಬಾರದ ಹಾಗೆ ಮರೆತಿದ್ದು ನಿನ್ನ ಹೆಸರೆ?||ಪ||

ಬಡವಾದ ಬದುಕಿನಲಿ ಕನಸೊಂದು ಹೊರಳಿದಲ್ಲೆ
ಅವಲತ್ತುಕೊಂಡಿರಲು ಸಹಕರಿಸಬಾರದೆ ತಾ ನಲ್ಲೆ.
ಯಾರೂ ಕರೆಯದೆ ಬರುವ ನೆನಪುಗಳ ಆಕ್ರಮಣ
ಮತ್ತಲ್ಲೇ ಚಿಗುರುವ ಬೇಸರಕೆ ಏಕೆ ಬೇಕು ಕಾರಣ||೧||

ಕನಸೆಲ್ಲ ಬರಿದಾಗಿ ಶೂನ್ಯವೇ ಸ್ಥಿರವಾಗಿ  ನಿಲ್ಲಬಹುದೇ
ಕರಗಿ ಹೋಗಿದ್ದು ಮರುಗಿ ಬಂದಾಗ  ತಿರುಗಿ ಸೇರಬಹುದೇ
ಮರೆತು ಹೋದ ಸ್ಪೂರ್ತಿ ತಿರುಗಿ ಬಂದು ಕಾಡಿದಂತಾಗಿ
ತೊಳಲಾಡಿತೆ ಮನವು ಇದ್ದಕ್ಕಿದ್ದಲ್ಲೇ ಬವಳಿ ಬಂದಂತಾಗಿ||೨||

ಮನತುಂಬಿ ಕೇಳಿದೆನು ಮರೆತು ಹೋಗದಿರು ನನ್ನುಸಿರೆ
ಉಸಿರೇ ಇಲ್ಲದ ಮೇಲೆ ಏನಿದೆ ಜೀವನವು ಬರಿ ಹೆಸರೆ
ಬೇಸರಿಕೆ ತಾನೇ ಬೇಸರಿಸಿ, ತನ್ನದೇ ಏಕಾಂತಕೆ ತಲ್ಲಣಿಸಿ
ಹೋಗದೇ ಉಳಿಯಿತೇ, ಮುರಿಯದ ಮೌನಕೆ ಕನಿಕರಿಸಿ||೩||

Saturday 15 October 2011

ಒಂದು ಭಾವಗೀತೆ



ಒಂದು ಬೇಸರದ ಸಂಜೆ ಮೌನವು ಮಾತನಾಡಲು ವಿಫಲವಾದಾಗ, ಮಾತನಾಡಿದ್ದು ಕಾವ್ಯ.ಓದಿ ನೋಡಿ.  ಕಾಲ್ಪನಿಕ ವಸ್ತುವಿಗೆ ನೈಜದ ಲೇಪನ. ಮದುವೆಯಾಗಿ ಒಂದಿಷ್ಟು ವರ್ಷಗಳು ಕಳೆದ ಮೇಲೆ, ಒಂದು ಸಂಜೆಯ ಹೊತ್ತು, ಮನೆಯ ಅಂಗಳದಲದಲ್ಲಿ ಕೂತು ಮಗುವಿನಾಟ ನೋಡುತ್ತಿದ್ದ ಕವಿ, ಆಗತಾನೆ ಬಂದು ಕುಳಿತ ಮಡದಿಯೊಂದಿಗೆ ಮಾತನಾಡುವ ನಾಲ್ಕು ಮಾತುಗಳನ್ನು ಕಾವ್ಯವಾಗಿಸಲು ನೋಡಿದ್ದೇನೆ.


ನನ್ನವಳ ಎದುರಲ್ಲಿ ಸಂಜೆಸಾಯುವ ಸಮಯಕ್ಕೆ
ಕಾಲುಚಾಚಿ ಕುಳಿತಿದ್ದೆ ಮಗುವಿನಾಟ ನೊಡುತಲಿ
ಯಾಕೊ ಮನಸು ಹೇಳಿಬಿಡು ಎಂತು, ಹೇಳಿಬಿಟ್ಟೆ
’ನೀನೆ ನನ್ನ ಜೀವ’ವೆಂದು ನೋಡಿದಳು ವಿಸ್ಮಯದಿ ||ಪ||

"ಒಂದು ಇಳಿಸಂಜೆಯಲ್ಲಿ ನೇಸರ ಬೇಸರಗೊಂಡಿರಲು
ಮೊದಲ ನೋಟದ ಪ್ರೇಮವ ನಂಬಿದೆ ನಿನ್ನ ನೋಡಿ
ಸುಳಿಮಿಂಚೊಂದು ಹೊಕ್ಕಿತ್ತು ಮೈಮನದೊಳಗೆಲ್ಲಾ
ಸುಳಿವಿನಿತು ಇಲ್ಲದೆ ಬಿದ್ದಿದ್ದೆ ಪ್ರೇಮದಲಿ ಹಾಡುಹಗಲೇ" ||೧||

"ಅತಿಯಾಗಿ ಶೃತಿಯ ಮೀರಿ ಹಾಡತೊಡಗಿತ್ತು ಹೃದಯ
ಇಹ ಮರೆತಿತ್ತು, ಪರವು ತೆರೆದಿತ್ತು ಎಲ್ಲವೂ ನಿನ್ನ ದಯ
ನಿನ್ನ ಸನ್ನಿಧಾನದ ಸವಿಯವಕಾಶಕೆ ಕಾತರಿಸಿದೆ ಸಖಿ"
"ತಿಳಿಯದೇನಾದರೂ ಹೇಳಿರಲ್ಲಾ"ಎಂದು ನಕ್ಕುಬಿಟ್ಟಳಾಕೆ ||೨||

ಪರಿತಪನೆ ಅಂತಿರಲು ಆರಾಧನೆ ಮಿತಿ ಮೀರುತಿರಲು,
"ಪ್ರೀತಿಸುವೆ ಎನ್ನಲು ತಡವರಿಸಿದೆ ನಾ ಮಾತು ಬರದೆ!"
"ತಡವರಿಸಿದಡೇನು, ಒಪ್ಪಲಿಲ್ಲವೆ ನಾನು ಬಾಯಿ ಮುಚ್ಚಿ"
ಉತ್ತರವ ಕೊಟ್ಟಳಾಕೆ ಪ್ರಶ್ನೆ ಮರೆಸುವ ತನ್ನ ಶೈಲಿಯಲ್ಲಿ ||೩||

ಜಗಳವಿತ್ತೆ ನಿನ್ನ ಜೊತೆ, ಸೋತಿದ್ದೆನಲ್ಲಾ ಮೊದಲದಿನವೇ
ಜಿಗಿದಿದ್ದೆ ನಾ ಅನಂತದ ಅಂಬರಕೆ ನೀ ಒಪ್ಪಿದಂದೇ
ಅಂದಿನಿಂದಲೂ ಹಿಂದಿಗಿಂತಲೂ ಇಂದು; ಮುಂದೂ
ಬಯಸಿದ್ದು ನಿನ್ನನ್ನೇ ತಾನೇ ಎಂದಿಗೂ ಎಂದೆಂದಿಗೂ ||೪||