ಒಂದು ತಿಂಗಳ ಕೆಳಗೆ ಅನಿವಾರ್ಯ ಕೆಲಸದ ಮೇಲೆ ಕೋಲಸಿರ್ಸಿಗೆ ಹೋಗಿದ್ದೆ, ಬೆಂಗಳೂರಿನಿಂದ ಊರಿಗೆ. ಇರಲಾಗಿದ್ದು ಕೇವಲ ಮೂರು ಗಂಟೆಗಳಷ್ಟೇ ಆದರೂ ಕಾಡಿದ ನೆನಪುಗಳು, ’ದೇಜಾ ವು’ ಅನ್ನಿಸಿದ ಕ್ಷಣಗಳು ಅಗಣಿತ ಈ ಸಮಯದೊಳಗೆ. ಬಸ್ ಇಳಿದು ಎದುರಲ್ಲೇ ಇರುವ ಮನೆಯ ಮೆಟ್ಟಿಲು ಹತ್ತುವುದರೊಳಗೆ ಕಣ್ಣು ಒಂದು ವರ್ಷದಲ್ಲಿ ಬದಲಾಗಿ ಹೋದ ನೂರಾರು ಬದಲಾವಣೆಗಳನ್ನು ಗುರುತಿಸಿತ್ತು. ಕೊನೆಯ ಸಲ ನೋಡಿದಾಗ ಇದ್ದದ್ದಕ್ಕೂ ಈಗಿನದಕ್ಕೂ ಅರಿವಿಲ್ಲದೆಯೇ ತುಲನೆ ನಡೆದಿತ್ತು. ಮನೆಯ ಪಕ್ಕದಲ್ಲಿದ್ದ ಪಂಚಾಯತ್ ಆಫೀಸಿನ ಹಳೆ ಕಟ್ಟಡ ಹಾಳು ಬೀಳಲಾರಂಭಿಸಿತ್ತು ನಿಧಾನವಾಗಿ. ಮನೆಯ ಎದುರಲ್ಲೇ ಒಂದು ಹೊಸ ಬಸ್ ಸ್ಟಾಂಡ್ ಎದ್ದು ನಿಂತಿತ್ತು ಹಳೆಯದರ ಪಳೆಯಳಿಕೆಗಳ ಮೇಲೆ. ಪಕ್ಕದ ಮನೆಯ ಮಮತಕ್ಕನ ಮನೆಯ ಬೇಲಿ ತುಸುವೇ ವಿಸ್ತರಿಸಿ ನಮ್ಮ ಮನೆಯೊಳಕ್ಕೆ ಬಂದಿತ್ತು. ಎದುರಲ್ಲಿಯೇ ಬೆಳೆದು ನಿಂತಿದ್ದ ಅತಿಹುಳಿ ಮಾವಿನಕಾಯಿಯ ಮರ ಮತ್ತೆ ಹೂ ಬಿಟ್ಟು ಅಲಂಕೃತವಾಗಿತ್ತು. ಊರು ಪ್ರವೇಶಿಸುವ ಮೊದಲೇ ಹೊಸ ಆಸ್ಪತ್ರೆ, ಕಾಲೆಜು ಎಲ್ಲವೂ ಸ್ವಾಗತಿಸಿದ್ದವು ಎಂಬಲ್ಲಿಗೆ ಕೋಲಸಿರ್ಸಿ ಎಂಬ ನಾ ಬೆಳೆದ ಊರು ಬದಲಾಗುವುದರಲ್ಲಿತ್ತು, ಬದಲಾಗುತ್ತಲಿತ್ತು ಮತ್ತು ಬದಲಾಗಿತ್ತು.
ನಾನು ಯಾರ ಬಳಿಯಾದರೂ ನಾ ಬೆಳೆದ ಊರು ಕೋಲಸಿರ್ಸಿ ಎಂದರೆ ಹೆಚ್ಚಿನವರು ಶಿರ್ಸಿಗೂ, ಕೋಲಸಿರ್ಸಿಯ
ಹೆಸರಿಗೂ ಸಂಬಂಧ ಇರಬೇಕೆಂದೇ ಭಾವಿಸುತ್ತಾರೆ. ಎರಡೂ ಕಡೆ ಮಾರಿಕಾಂಬೆಯೇ ಮುಖ್ಯದೇವತೆ ಎಂಬುದನ್ನು ಬಿಟ್ಟರೆ ಅಂತ ಹೋಲಿಕೆಗಳಿಲ್ಲ. ಕೋಲಸಿರ್ಸಿಗೆ ಆ ಹೆಸರು ಬಂದಿದ್ದರ ಹಿಂದೆ ಒಂದು ಕಥೆಯಿದೆ. ಈಗಿನ ಸಿದ್ದಾಪುರ ಪ್ರಾಂತ್ಯವನ್ನು ಬಿಳಗಿ ರಾಜರು ಆಳುತ್ತಿದ್ದ ಕಾಲ. ರಾಜರು ಎಂದಮೇಲೆ ಸೈನ್ಯ ಬೇಕಲ್ಲ. ಹಾಗೆ ಸೈನಿಕರನ್ನು ಸೇರಿಸಿಕೊಳ್ಳಲು, ಸೇರಿದ ಸೈನಿಕರಿಗೆ ತರಬೇತಿ ಕೊಡಲು ಕೋಲಸಿರ್ಸಿಯ ಪ್ರದೇಶವನ್ನು ಆಯ್ದುಕೊಂಡಿದ್ದರಂತೆ. ಹೀಗೆ ಸೈನಿಕರ ತರಬೇತಿ ಸ್ಥಳಕ್ಕಿದ್ದ ’ಕಲಿಗಳನ್ನು ಸೇರಿಸಿ’ ಎಂಬ ಹೆಸರು ಕಾಲಕ್ರಮೇಣ ಬಾಯಿಂದ ಬಾಯಿಗೆ ಹೋಗಿ ಕೋಲಸಿರ್ಸಿ ಆಯ್ತು. ಪಕ್ಕದಲ್ಲಿಯೇ ಇರುವ ಕುಣಜಿ ಎಂಬ ಊರಿನ ಹೆಸರಿಗೂ ಇದೇ ಕಾರಣ. ಅದೇ ಊರಿನಲ್ಲಿ ಹುಟ್ಟಿ ಬೆಳೆದ, ನಾಗರಾಜ್ ಮಾಷ್ಟ್ರು ಡ್ರಾವಿಂಗ್ ಕ್ಲಾಸಿನಲ್ಲಿ ಈ ಕಥೆಯನ್ನೆಲ್ಲ ಹೇಳುತ್ತಿದ್ದಾಗ ಮೈಯ್ಯಲ್ಲಿ ರೋಮಾಂಚನ, ಹೆಮ್ಮೆಯ ಭಾವ ಮೂಡಿದ್ದು ಇಂದಿಗೂ ಹಾಗೆಯೇ ನೆನಪಿದೆ.
ವರ್ತಮಾನಕ್ಕೆ ಬಂದರೆ ಕೋಲಸಿರ್ಸಿ ಎಂಬುದು ೭೦೦/೮೦೦ ಜನರಿರುವ ಒಂದು ಹಳ್ಳಿ. ಉಳಿದ ಕಡೆಗೆ ಹೋಲಿಸಿದರೆ ಇದು ಹಳ್ಳಿಯೇ ಆದರೂ, ೪-೫ ಮನೆಗಳಿರುವ ಹಳ್ಳಿಗಳೇ ಹೆಚ್ಚಿರುವ ಸಿದ್ದಾಪುರದಲ್ಲಿ ಕೋಲಸಿರ್ಸಿ ಒಂದು ದೊಡ್ಡ ಊರೇ ಸರಿ. ಒಂದು ಪದವಿಪೂರ್ವ ಕಾಲೇಜು, ಹೊಸದಾಗಿ ಆಗಿರುವ ಆಸ್ಪತ್ರೆ, ಭಾಗಶಃ ನಾಪತ್ತೆಯಾಗಿರುವ ಕಾಡು ಈ ಮಾತಿಗೆ ಪುಷ್ಠಿಕೊಡುತ್ತದೆ. ಹೆಚ್ಚಿನ ಹಳ್ಳಿಗಳಂತೆ ಕೋಲಸಿರ್ಸಿಯಲ್ಲಿಯೂ ಕೃಷಿಯೇ ಮುಖ್ಯವಾದರೂ, ಅಡಿಕೆಯ ವ್ಯಾಪಾರವೂ ಒಂದು ಮುಖ್ಯ ಉದ್ಯೋಗ ಮತ್ತು ನೂರಾರು ಜನ ಕೆಲಸ ಹುಡುಕಿಕೊಂಡು ಬೆಂಗಳೂರಿನ ಹೊಟೆಲ್ ಬಾರುಗಳನ್ನು ಸೇರಿಕೊಂಡಿದ್ದಾರೆ, ಯಶಸ್ವಿಯಾಗಿದ್ದಾರೆ, ಪಕ್ಕಾ ಉಡುಪಿ ಕಡೆಯ ಶೆಟ್ಟರ ತರಹ. ರಸ್ತೆಯಗುಂಟ ಇರುವ ಅಂಗಡಿಕೇರಿಯಲ್ಲಿ ಘಟ್ಟದ ಕೆಳಗಿನಿಂದ ಬಂದು ನೆಲೆಸಿದ ವ್ಯಾಪಾರಸ್ಥರ ಮನೆಗಳಿದ್ದರೆ, ಊರೊಳಗೆ ಘಟ್ಟದ ಮೇಲಿನ ಕೃಷಿಕರ ಮನೆಗಳಿವೆ. ನಾಲ್ಕೈದು ಗೌಡರು, ಸೊನೆಗಾರ ಶೆಟ್ಟರ ಮನೆಗಳನ್ನು ಬಿಟ್ಟರೆ ಇರುವುದೆಲ್ಲವೂ ನಾಮಧಾರಿ ನಾಯ್ಕರ ಮನೆಗಳೇ. ಮಾತಾಡುವ ಭಾಷೆಯಂತೂ ಅಚ್ಚಕನ್ನಡ. ಈಗೀಗ ಮನೆಗೆ ಹೋದರೆ ಊರಿನವರೊಂದಿಗೆ ವ್ಯವಹರಿಸುವಾಗ ಇಂಗ್ಲೀಷ್ ಪದಬಳಸದೇ ಅಚ್ಚಕನ್ನಡದಲ್ಲಿ ಮಾತನಾಡುವ ಅವರನ್ನು ಕಂಡು ಹೆಮ್ಮೆಯಾಗಲು ಸುರುವಾಗಿದೆ. ಆರಿದ್ರೆ ಮಳೆಯ ಕಾಲದಲ್ಲಿ ಆಗುವ ಹಬ್ಬ, ದೀಪಾವಳಿಯಂದು ನಡೆಯುವ ಎತ್ತುಗಳ ಓಟ, ಎಂಟು ವರ್ಷಕ್ಕೊಮ್ಮೆ ಆಗುವ ಊರದೇವಿ ಮಾರಿಕಾಂಬೆಯ ಜಾತ್ರೆ ಸಾಂಸ್ಕೃತಿಕವಾಗಿ ವಿಶಿಷ್ಟ ಆಚರಣೆಗಳು.
ನಾವು ಎಂದರೆ ನಮ್ಮ ಕುಟುಂಬ ಕೋಲಸಿರ್ಸಿಗೆ ಬಂದಿದ್ದು ೧೯೯೫-೯೬ರಲ್ಲಿ, ಅಮ್ಮನಿಗೆ ಇಲ್ಲಿಗೆ ವರ್ಗವಾದಾಗ ಕೋಲಸಿರ್ಸಿಯ ಬಗ್ಗೆ ಎಚ್ಚರಿಸಿದವರೇ ಜಾಸ್ತಿ, ಅಲ್ಲಿ ಆ ಸಮಯದಲ್ಲಿ ಬಹಳಷ್ಟು ಕಳ್ಳತನ, ದರೋಡೆಗಳಾಗಿದ್ದವಂತೆ. ನಾನು ಮೊದಲನೆಯ ತರಗತಿಗೆ ಎಂದು ಸೇರಿದ್ದು ಇದೇ ಕೋಲಸಿರ್ಸಿಯ ಸ.ಹಿ.ಪ್ರಾ. ಶಾಲೆಗೆ. ಎಷ್ಟೆಲ್ಲ ಸಿಹಿನೆನಪುಗಳನ್ನು, ಬದುಕಿನ ಪಾಠಗಳನ್ನು ನೀಡಿದೆ ಈ ಕೋಲಸಿರ್ಸಿ ನನಗೆ. ಶಾಲೆಯ ಮೊದಲದಿನ ಸ್ವಂತ ಅಪ್ಪನ ಬಳಿಯೇ ಪೆಟ್ಟು ತಿಂದದ್ದು, ಶಾಲೆಯ ಅಂಗಳ ಸಾರಿಸಲು ಸಗಣಿ ತರಲು ಹೋದ ಹಾಗೆ ಮಾಡಿ ಕವಳಿ ಮಟ್ಟಿಗೆ ಲಗ್ಗೆ ಹಾಕುತ್ತಿದ್ದುದು(ತದಕಾರಣ ಹುಡುಗಿಯರದ್ದು ಸಾರಿಸಿ ಮುಗಿದರೂ ನಾವು ಸಗಣಿ ತರಹೋದವರು ಬರದೇ ಒಂದು ದಿನ ಸಿಕ್ಕಿಬಿದ್ದು ಸಾಲಾಗಿ ಕೈ ಮೇಲೆತ್ತಿ ನಿಲ್ಲುವ ಶಿಕ್ಷೆ ಅನುಭವಿಸಿದ್ದು) , ಕಬ್ಬನ್ನು ಅತಿವಿಚಿತ್ರವಾಗಿ ತಿನ್ನುತ್ತಿದ್ದ ಗೆಳೆಯನೊಬ್ಬನನ್ನು ವಿಪರೀತವಾಗಿ ಆಡಿಕೊಂಡಿದ್ದು, ಇಡೀ ಏಳು ವರ್ಷಗಳಲ್ಲಿ ಒಮ್ಮೆ ಮಾತ್ರ ಆದ ಗ್ಯಾದರಿಂಗ್ ನಲ್ಲಿ ಆಡಿದ ನಾಟಕದಲ್ಲಿ ಗಾಂಪರ ಗುಂಪಿನ ನಾಣಿಯಾಗಿದ್ದು, ಸರ್ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿದ್ದದ್ದನ್ನು ನೋಡಿ ಬರುತ್ತಿದ್ದ ನಗುವನ್ನು ತಡೆಹಿಡಿಯಲು ಹೋಗಿ ತಡೆಯಲಾರದೇ ಗೋಳ್ ಎಂದು ನಕ್ಕು ಅವರನ್ನೂ ಎಚ್ಚರಿಸಿ ಆದಕ್ಕಾಗಿ ಒಂದಿಷ್ಟು ಪರೋಕ್ಷವಾಗಿ ಬೈಸಿಕೊಂಡಿದ್ದು, ಪ್ರಿಪರೇಟರಿ ಪರೀಕ್ಷೆಗೆಂದು ಓದಲು ಬಿಟ್ಟಾಗ ಶಾಲೆಯ ಮೇಲೆ ಹರಡಿದ್ದ ಮರದ ಮೇಲೆ ಹತ್ತಿ ಕುಳಿತು ಕದ್ದು ತಂದ ಮಾವಿನಕಾಯಿಗಳ ಉಪ್ಪಿನಕಾಯಿ ಮಾಡಿದ್ದು, ಇನ್ ಸ್ಪೆಕ್ಟರ್ ಬಂದಾಗ scissorನ್ನು ಸ್ಕಿಸರ್ ಎಂದು ಉಚ್ಛರಿಸಿದ ಹುಡುಗಿಗೆ ಚಾಳಿಸಿ (ನನಗೂ ಸರಿಯಾದ ಉಚ್ಛಾರ ಗೊತ್ತಿರಲಿಲ್ಲ ಎಂಬುದು ಬೇರೆ ವಿಷಯ) ಅಳಿಸಿ ಕ್ಷಮೆಕೇಳುವಾಗ ನನ್ನ ಕಣ್ಣ ತುದಿಯೂ ತೇವವಾಗಿದ್ದಕ್ಕೆ ಕಾರಣ ಹುಡುಕಿದ್ದು, ಯಾವುದೋ ಜಗಳಕ್ಕೆ ಬಿದ್ದು ಬಾಲ್ಯದ ಬೆಸ್ಟ್ ಫ್ರೆಂಡ್ ಬಳಿ ಒಂದು ವರ್ಷ ಮಾತು ಬಿಟ್ಟು, ನೀನೇ ಮೊದಲು ಮಾತನಾಡಿಸಬೇಕೆಂದು ಹಠಕ್ಕೆ ಸುಳ್ಳು ಸುಳ್ಳೇ ಹಠ ಮಾಡಿಕೊಂಡು ಕೂತಿದ್ದು, ೭ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಬಿಡು ಬೀಸಾಗಿ ಕಾಪಿ ಹೊಡೆದು ಫಲಿತಾಂಶ ಚೆನ್ನಾಗಿ ಬರದಿದ್ದಾಗ ಮತ್ತೆ ಕಾಪಿ ಹೊಡೆಯುವುದಿಲ್ಲ ಅಂದುಕೊಂಡಿದ್ದು, ಸಂಕ್ರಾಂತಿ ಕಾಳನ್ನು ಶಾಲೆಯಲ್ಲಿ ಹಂಚುತ್ತಾ ಒಂದು ಹೊತ್ತಿಡೀ ಕ್ಲಾಸಿಂದ ಕ್ಲಾಸಿಗೆ ತಿರುಗುತ್ತಲೇ ಇದ್ದದ್ದು, ೭ನೇ ತರಗತಿಯಲ್ಲಿ ಶಲಾಕ ಎಂಬ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮಕ್ಕಳೊಂದಿಗೆ ಸ್ಪರ್ಧಿಸಿ ತಾಲೂಕಿಗೆ ೩ನೇ ಬಂದಿದ್ದು(ನನ್ನನ್ನು ತನ್ನ ಮಕ್ಕಳಿಗೆ ತೋರಿಸಿ ಹೀಗಾಗಬೇಕು ಎಂದ ನಾರಾಯಣಗೌಡ್ರು ಎಂಬ ಬಿ. ಇ. ಓ ಆ ಮೂಲಕ ನನ್ನ ಬಾಲ್ಯದ ಅತಿದೊಡ್ಡ ಬಹುಮಾನವನ್ನು ಕೊಟ್ಟಿದ್ದರು), ನನ್ನದೇ ಶಾಲೆಯಲ್ಲಿ ಇರುತ್ತಿದ್ದ ಅಪ್ಪ ಅಮ್ಮನ ಕಣ್ಣು ತಪ್ಪಿಸಿ ಕ್ರಿಕೆಟ್ ಆಡುತ್ತಿದ್ದುದು, ಸೋಲೆಂದರಿಯದಂತೆ ಏಳನೇ ಕ್ಲಾಸಿನವರೆಗೆ ಬಂದು ಸೋಲಿನ ಎದುರೇ ಮುಖಾಮುಖಿ ಮಾತನಾಡಿದ್ದು, ಒಂದೇ ಎರಡೇ ನೆನಪುಗಳ ಮಾತು ಮಧುರ. ಅವುಗಳಿಂದ ಕಲಿತ ಪಾಠ ಕ್ಲಾಸಿನ ಪಠ್ಯಕ್ಕಿಂತ ನೇರ, ನಿಷ್ಠುರ, ಪ್ರಯೋಜನಕರ.
ಪ್ರೌಢಶಾಲೆಯ ವಿಷಯಕ್ಕೆ ಬಂದರೆ ನೆನಪಿರುವುದೆಲ್ಲ ಖುಷಿಯ ವಿಷಯಗಳೇ. ನಾವು ಕನ್ನಡ ಶಾಲೆ ಎಂದು ಕರೆಯುತ್ತಿದ್ದ ಪ್ರಾಥಮಿಕ ಶಾಲೆಯ ನಂತರ ಪೇಟೆಗೆ ಹೋಗುವುದೋ ಅಥವಾ ಊರಿನ ಪ್ರೌಢಶಾಲೆಗೇ ಹೋಗುವುದೋ ಎಂಬ ಬಗ್ಗೆ ಬಹಳಷ್ಟು ಸಂದೇಹ ಗೊಂದಲಗಳಿದ್ದವು. ಆದರೆ ಕೋಲಸಿರ್ಸಿಯ ನೇತಾಜಿ ಪ್ರೌಢಶಾಲೆ ಎಲ್ಲ ಸಂದೇಹಗಳನ್ನು ಕೇವಲ ತಿಂಗಳು ಮಾತ್ರದಲ್ಲಿ ಪರಿಹರಿಸಿ ನಮ್ಮ ಆಯ್ಕೆ ಸರಿಯೆಂದು ಸಾರಿಹೇಳಿಬಿಟ್ಟಿತ್ತು. ಕನ್ನಡಶಾಲೆಯಿಂದ ಗೊತ್ತಿದ್ದ ಅದೇ ಗೆಳೆಯರ ಗುಂಪು, ಯಾವ ಪುಣ್ಯದಿಂದಲೋ ಸಿಕ್ಕಿದ್ದ ಅತ್ಯುತ್ತಮ ಶಿಕ್ಷಕಗಣ, ಪ್ರತೀ ಸಲ ಕ್ರಿಕೆಟ್ ಆಡಬೇಕಾದರೂ ಅಪ್ಪ ಮತ್ತು ಅಮ್ಮನ ಕಣ್ಣು ತಪ್ಪಿಸಿ ಆಡಬೇಕೆಂಬ ಅನಿವಾರ್ಯ ಇಲ್ಲದಿದ್ದುದು, ಊರಾಚಿನ ಸ್ಮಶಾನದ ಮೇಲೆ ಕಟ್ಟಿದ ಶಾಲೆಯಲ್ಲಿನ ಶಾಂತಮೌನ ಎಲ್ಲವೂ ಖುಷಿಯಾಗಿಬಿಟ್ಟಿತ್ತು, ಇಂದಿಗೂ ಇಷ್ಟವಾಗಿಯೇ ಉಳಿದಿದೆ. ಶಾಲೆಯ ಪ್ರವಾಸಮಂತ್ರಿಯಾಗಿ ಏರ್ಪಡಿಸಿದ್ದ ಪ್ರವಾಸಕ್ಕೆ ಹೋಗಲಾಗದೇ ಇದ್ದಂತಹ ವೈರುಧ್ಯಕ್ಕೂ, ಪರೀಕ್ಷೆಗೆ ವಾರವೊಂದು ಬಾಕಿ ಇರುವಾಗ ಆರೋಗ್ಯ ತಪಾಸಣೆಗೆಂದು ಶಾಲೆಗೆ ಬಂದ ವೈದ್ಯರು ಹೃದಯದಲ್ಲೇನೋ ತೊಂದರೆ ಇದೆ ಎಂದಾಗ ಉಂಟಾಗುವ ಆಘಾತಕ್ಕೂ, ಪರೀಕ್ಷೆ ಮುಗಿದ ಮೇಲೆ ದಿನವಿಡೀ ಆಡಬಹುದೆಂಬ ಲಂಚದಾಸೆಗೆ ಶ್ರಮದಾನ ಮಾಡುತ್ತಿದ್ದ ಉತ್ಸಾಹಕ್ಕೂ, ಮೊದಲ ಬಾರಿಗೆ ಬರೆದ ಕವನ ಓದಿ ಕನ್ನಡ ಪಂಡಿತೆ ರೇಣುಕಾ ಮೇಡಂ ಪ್ರಶಂಸಿಸಿದಾಗ ಇದ್ದ ಧನ್ಯತಾಭಾವಕ್ಕೂ, ಶಾಲೆಯ ಒಂದು ಹೌಸಿನ ಲೀಡರ್ ಆಗುವ ಅವಕಾಶವನ್ನು ತಿರಸ್ಕರಿಸಿ ಮತ್ತೆ ವರ್ಷವಿಡೀ ಅನುಭವಿಸಿದ ಪಶ್ಚಾತ್ತಾಪಕ್ಕೂ, ಕೋಲಸಿರ್ಸಿ ಎಂಬ ಮೂಲೆಶಾಲೆಯ ಹುಡುಗ ರಾಜ್ಯಮಟ್ಟದ ಪ್ರತಿಭಾನ್ವೇಷಣ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹದಿಮೂರನೇ ಸ್ಥಾನ ಬಂದನೆಂಬ ಸಂಭ್ರಮಕ್ಕೂ, ಕ್ಲಾಸನ್ನೇ ಜಂಬೆಹಣ್ಣು, ಸಂಪೆಹಣ್ಣು, ಮುಳ್ಳುಹಣ್ಣು ಇತ್ಯಾದಿಗಳ ಮಂಡಿಯಾಗಿಸಿಕೊಂಡು ವ್ಯವಹರಿಸುತ್ತಿದ್ದ ಹುಡುಗಾಟಿಕೆಗೂ, ಗೆಳೆಯನೊಬ್ಬನ ಜೊತೆ ಕಟ್ಟಿದ ಪಂದ್ಯಕ್ಕಾಗಿ ವಾರ್ಷಿಕೋತ್ಸವ ನಿಮಿತ್ತದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಕಧ್ವನಿಯಲ್ಲಿ ಹಾಡಿದ ಹುಚ್ಚಾಟಕ್ಕೂ ಸಾಕ್ಷಿಯಾಗಿದ್ದು ಕೋಲಸಿರ್ಸಿಯ ಇದೇ ಪ್ರೌಢಶಾಲೆ.
ಪ್ರೌಢಶಾಲೆಯ ನಂತರ ಬೇರೆ ಕಡೆ ಹೋದ ನನಗೆ ಕೋಲಸಿರ್ಸಿಯ ಪರಿಚಯ ಉಳಿದದ್ದು ಅಪ್ಪ-ಅಮ್ಮನ ಮುಖಾಂತರ, ರಜೆಯಲ್ಲಿ ಹೋದಾಗ ಕಳೆಯುತ್ತಿದ್ದ ದಿನಗಳ ಮೂಲಕ ಮಾತ್ರ. ಹೊಸ ಆಫೀಸುಗಳು, ಆಸ್ಪತ್ರೆ, ಕಾಲೇಜು ಎಲ್ಲ ಆಗುತ್ತಾ ಅಭಿವ್ರದ್ಧಿಯ ನಾಗಾಲೋಟದಲ್ಲಿ ಪಾಲು ತೆಗೆದುಕೊಂಡಿತ್ತು. ಸುತ್ತೆಲ್ಲೂ ಕಂಡುಕೇಳದಷ್ಟು ವೇಗವಾಗಿ ಬೆಳೆಯುತ್ತಿತ್ತು. ಈ ಬೆಳವಣಿಗೆಯ ಮಧ್ಯದಲ್ಲೇ ಎಲ್ಲೋ ತನ್ನ ಹಳ್ಳಿತನವನ್ನು ಕಳೇದುಕೊಂಡಿತೇ ಎಂಬುದು ನನ್ನ ಆತಂಕದ ಸಂಶಯ. ಅಷ್ಟೆಲ್ಲ ನನ್ನದಾಗೇ ಇದ್ದ ಊರು ಹಂತಹಂತವಾಗಿ ದೂರವಾಗುತ್ತ ಬಂದಿತ್ತು. ಈಗ ಅಮ್ಮನ ನಿವೃತ್ತಿಯ ನಂತರ ನಮ್ಮ ಮನೆಯೂ ಖಾಲಿಯಾಗಲಿದೆ. ಅಲ್ಲಿಗೆ ಕೋಲಸಿರ್ಸಿಯೊಂದಿಗಿನ ನನ್ನ ಸಂಬಂಧಕ್ಕೆ ಒಂದು ದೊಡ್ಡ ಅಲ್ಪವಿರಾಮ ಬೀಳಲಿದೆ. ಬಾಲ್ಯದ ಜೊತೆಗಿನ ಒಂದು ಕೊಂಡಿ ಕಳಚಲಿದೆ. ಹಾಗೆ ಎಣಿಸಿಕೊಳ್ಳುವುದರಲ್ಲಿಯೇ ಏನೋ ಒಂದು ನೋವಿದೆ.
ನಾನು ಯಾರ ಬಳಿಯಾದರೂ ನಾ ಬೆಳೆದ ಊರು ಕೋಲಸಿರ್ಸಿ ಎಂದರೆ ಹೆಚ್ಚಿನವರು ಶಿರ್ಸಿಗೂ, ಕೋಲಸಿರ್ಸಿಯ
ಕೋಲಸಿರ್ಸಿ - ಬಯಲು, ಗದ್ದೆ, ಗುಡ್ಡ, ಕಾಡು |
ವರ್ತಮಾನಕ್ಕೆ ಬಂದರೆ ಕೋಲಸಿರ್ಸಿ ಎಂಬುದು ೭೦೦/೮೦೦ ಜನರಿರುವ ಒಂದು ಹಳ್ಳಿ. ಉಳಿದ ಕಡೆಗೆ ಹೋಲಿಸಿದರೆ ಇದು ಹಳ್ಳಿಯೇ ಆದರೂ, ೪-೫ ಮನೆಗಳಿರುವ ಹಳ್ಳಿಗಳೇ ಹೆಚ್ಚಿರುವ ಸಿದ್ದಾಪುರದಲ್ಲಿ ಕೋಲಸಿರ್ಸಿ ಒಂದು ದೊಡ್ಡ ಊರೇ ಸರಿ. ಒಂದು ಪದವಿಪೂರ್ವ ಕಾಲೇಜು, ಹೊಸದಾಗಿ ಆಗಿರುವ ಆಸ್ಪತ್ರೆ, ಭಾಗಶಃ ನಾಪತ್ತೆಯಾಗಿರುವ ಕಾಡು ಈ ಮಾತಿಗೆ ಪುಷ್ಠಿಕೊಡುತ್ತದೆ. ಹೆಚ್ಚಿನ ಹಳ್ಳಿಗಳಂತೆ ಕೋಲಸಿರ್ಸಿಯಲ್ಲಿಯೂ ಕೃಷಿಯೇ ಮುಖ್ಯವಾದರೂ, ಅಡಿಕೆಯ ವ್ಯಾಪಾರವೂ ಒಂದು ಮುಖ್ಯ ಉದ್ಯೋಗ ಮತ್ತು ನೂರಾರು ಜನ ಕೆಲಸ ಹುಡುಕಿಕೊಂಡು ಬೆಂಗಳೂರಿನ ಹೊಟೆಲ್ ಬಾರುಗಳನ್ನು ಸೇರಿಕೊಂಡಿದ್ದಾರೆ, ಯಶಸ್ವಿಯಾಗಿದ್ದಾರೆ, ಪಕ್ಕಾ ಉಡುಪಿ ಕಡೆಯ ಶೆಟ್ಟರ ತರಹ. ರಸ್ತೆಯಗುಂಟ ಇರುವ ಅಂಗಡಿಕೇರಿಯಲ್ಲಿ ಘಟ್ಟದ ಕೆಳಗಿನಿಂದ ಬಂದು ನೆಲೆಸಿದ ವ್ಯಾಪಾರಸ್ಥರ ಮನೆಗಳಿದ್ದರೆ, ಊರೊಳಗೆ ಘಟ್ಟದ ಮೇಲಿನ ಕೃಷಿಕರ ಮನೆಗಳಿವೆ. ನಾಲ್ಕೈದು ಗೌಡರು, ಸೊನೆಗಾರ ಶೆಟ್ಟರ ಮನೆಗಳನ್ನು ಬಿಟ್ಟರೆ ಇರುವುದೆಲ್ಲವೂ ನಾಮಧಾರಿ ನಾಯ್ಕರ ಮನೆಗಳೇ. ಮಾತಾಡುವ ಭಾಷೆಯಂತೂ ಅಚ್ಚಕನ್ನಡ. ಈಗೀಗ ಮನೆಗೆ ಹೋದರೆ ಊರಿನವರೊಂದಿಗೆ ವ್ಯವಹರಿಸುವಾಗ ಇಂಗ್ಲೀಷ್ ಪದಬಳಸದೇ ಅಚ್ಚಕನ್ನಡದಲ್ಲಿ ಮಾತನಾಡುವ ಅವರನ್ನು ಕಂಡು ಹೆಮ್ಮೆಯಾಗಲು ಸುರುವಾಗಿದೆ. ಆರಿದ್ರೆ ಮಳೆಯ ಕಾಲದಲ್ಲಿ ಆಗುವ ಹಬ್ಬ, ದೀಪಾವಳಿಯಂದು ನಡೆಯುವ ಎತ್ತುಗಳ ಓಟ, ಎಂಟು ವರ್ಷಕ್ಕೊಮ್ಮೆ ಆಗುವ ಊರದೇವಿ ಮಾರಿಕಾಂಬೆಯ ಜಾತ್ರೆ ಸಾಂಸ್ಕೃತಿಕವಾಗಿ ವಿಶಿಷ್ಟ ಆಚರಣೆಗಳು.
ನಾವು ಎಂದರೆ ನಮ್ಮ ಕುಟುಂಬ ಕೋಲಸಿರ್ಸಿಗೆ ಬಂದಿದ್ದು ೧೯೯೫-೯೬ರಲ್ಲಿ, ಅಮ್ಮನಿಗೆ ಇಲ್ಲಿಗೆ ವರ್ಗವಾದಾಗ ಕೋಲಸಿರ್ಸಿಯ ಬಗ್ಗೆ ಎಚ್ಚರಿಸಿದವರೇ ಜಾಸ್ತಿ, ಅಲ್ಲಿ ಆ ಸಮಯದಲ್ಲಿ ಬಹಳಷ್ಟು ಕಳ್ಳತನ, ದರೋಡೆಗಳಾಗಿದ್ದವಂತೆ. ನಾನು ಮೊದಲನೆಯ ತರಗತಿಗೆ ಎಂದು ಸೇರಿದ್ದು ಇದೇ ಕೋಲಸಿರ್ಸಿಯ ಸ.ಹಿ.ಪ್ರಾ. ಶಾಲೆಗೆ. ಎಷ್ಟೆಲ್ಲ ಸಿಹಿನೆನಪುಗಳನ್ನು, ಬದುಕಿನ ಪಾಠಗಳನ್ನು ನೀಡಿದೆ ಈ ಕೋಲಸಿರ್ಸಿ ನನಗೆ. ಶಾಲೆಯ ಮೊದಲದಿನ ಸ್ವಂತ ಅಪ್ಪನ ಬಳಿಯೇ ಪೆಟ್ಟು ತಿಂದದ್ದು, ಶಾಲೆಯ ಅಂಗಳ ಸಾರಿಸಲು ಸಗಣಿ ತರಲು ಹೋದ ಹಾಗೆ ಮಾಡಿ ಕವಳಿ ಮಟ್ಟಿಗೆ ಲಗ್ಗೆ ಹಾಕುತ್ತಿದ್ದುದು(ತದಕಾರಣ ಹುಡುಗಿಯರದ್ದು ಸಾರಿಸಿ ಮುಗಿದರೂ ನಾವು ಸಗಣಿ ತರಹೋದವರು ಬರದೇ ಒಂದು ದಿನ ಸಿಕ್ಕಿಬಿದ್ದು ಸಾಲಾಗಿ ಕೈ ಮೇಲೆತ್ತಿ ನಿಲ್ಲುವ ಶಿಕ್ಷೆ ಅನುಭವಿಸಿದ್ದು) , ಕಬ್ಬನ್ನು ಅತಿವಿಚಿತ್ರವಾಗಿ ತಿನ್ನುತ್ತಿದ್ದ ಗೆಳೆಯನೊಬ್ಬನನ್ನು ವಿಪರೀತವಾಗಿ ಆಡಿಕೊಂಡಿದ್ದು, ಇಡೀ ಏಳು ವರ್ಷಗಳಲ್ಲಿ ಒಮ್ಮೆ ಮಾತ್ರ ಆದ ಗ್ಯಾದರಿಂಗ್ ನಲ್ಲಿ ಆಡಿದ ನಾಟಕದಲ್ಲಿ ಗಾಂಪರ ಗುಂಪಿನ ನಾಣಿಯಾಗಿದ್ದು, ಸರ್ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿದ್ದದ್ದನ್ನು ನೋಡಿ ಬರುತ್ತಿದ್ದ ನಗುವನ್ನು ತಡೆಹಿಡಿಯಲು ಹೋಗಿ ತಡೆಯಲಾರದೇ ಗೋಳ್ ಎಂದು ನಕ್ಕು ಅವರನ್ನೂ ಎಚ್ಚರಿಸಿ ಆದಕ್ಕಾಗಿ ಒಂದಿಷ್ಟು ಪರೋಕ್ಷವಾಗಿ ಬೈಸಿಕೊಂಡಿದ್ದು, ಪ್ರಿಪರೇಟರಿ ಪರೀಕ್ಷೆಗೆಂದು ಓದಲು ಬಿಟ್ಟಾಗ ಶಾಲೆಯ ಮೇಲೆ ಹರಡಿದ್ದ ಮರದ ಮೇಲೆ ಹತ್ತಿ ಕುಳಿತು ಕದ್ದು ತಂದ ಮಾವಿನಕಾಯಿಗಳ ಉಪ್ಪಿನಕಾಯಿ ಮಾಡಿದ್ದು, ಇನ್ ಸ್ಪೆಕ್ಟರ್ ಬಂದಾಗ scissorನ್ನು ಸ್ಕಿಸರ್ ಎಂದು ಉಚ್ಛರಿಸಿದ ಹುಡುಗಿಗೆ ಚಾಳಿಸಿ (ನನಗೂ ಸರಿಯಾದ ಉಚ್ಛಾರ ಗೊತ್ತಿರಲಿಲ್ಲ ಎಂಬುದು ಬೇರೆ ವಿಷಯ) ಅಳಿಸಿ ಕ್ಷಮೆಕೇಳುವಾಗ ನನ್ನ ಕಣ್ಣ ತುದಿಯೂ ತೇವವಾಗಿದ್ದಕ್ಕೆ ಕಾರಣ ಹುಡುಕಿದ್ದು, ಯಾವುದೋ ಜಗಳಕ್ಕೆ ಬಿದ್ದು ಬಾಲ್ಯದ ಬೆಸ್ಟ್ ಫ್ರೆಂಡ್ ಬಳಿ ಒಂದು ವರ್ಷ ಮಾತು ಬಿಟ್ಟು, ನೀನೇ ಮೊದಲು ಮಾತನಾಡಿಸಬೇಕೆಂದು ಹಠಕ್ಕೆ ಸುಳ್ಳು ಸುಳ್ಳೇ ಹಠ ಮಾಡಿಕೊಂಡು ಕೂತಿದ್ದು, ೭ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಬಿಡು ಬೀಸಾಗಿ ಕಾಪಿ ಹೊಡೆದು ಫಲಿತಾಂಶ ಚೆನ್ನಾಗಿ ಬರದಿದ್ದಾಗ ಮತ್ತೆ ಕಾಪಿ ಹೊಡೆಯುವುದಿಲ್ಲ ಅಂದುಕೊಂಡಿದ್ದು, ಸಂಕ್ರಾಂತಿ ಕಾಳನ್ನು ಶಾಲೆಯಲ್ಲಿ ಹಂಚುತ್ತಾ ಒಂದು ಹೊತ್ತಿಡೀ ಕ್ಲಾಸಿಂದ ಕ್ಲಾಸಿಗೆ ತಿರುಗುತ್ತಲೇ ಇದ್ದದ್ದು, ೭ನೇ ತರಗತಿಯಲ್ಲಿ ಶಲಾಕ ಎಂಬ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮಕ್ಕಳೊಂದಿಗೆ ಸ್ಪರ್ಧಿಸಿ ತಾಲೂಕಿಗೆ ೩ನೇ ಬಂದಿದ್ದು(ನನ್ನನ್ನು ತನ್ನ ಮಕ್ಕಳಿಗೆ ತೋರಿಸಿ ಹೀಗಾಗಬೇಕು ಎಂದ ನಾರಾಯಣಗೌಡ್ರು ಎಂಬ ಬಿ. ಇ. ಓ ಆ ಮೂಲಕ ನನ್ನ ಬಾಲ್ಯದ ಅತಿದೊಡ್ಡ ಬಹುಮಾನವನ್ನು ಕೊಟ್ಟಿದ್ದರು), ನನ್ನದೇ ಶಾಲೆಯಲ್ಲಿ ಇರುತ್ತಿದ್ದ ಅಪ್ಪ ಅಮ್ಮನ ಕಣ್ಣು ತಪ್ಪಿಸಿ ಕ್ರಿಕೆಟ್ ಆಡುತ್ತಿದ್ದುದು, ಸೋಲೆಂದರಿಯದಂತೆ ಏಳನೇ ಕ್ಲಾಸಿನವರೆಗೆ ಬಂದು ಸೋಲಿನ ಎದುರೇ ಮುಖಾಮುಖಿ ಮಾತನಾಡಿದ್ದು, ಒಂದೇ ಎರಡೇ ನೆನಪುಗಳ ಮಾತು ಮಧುರ. ಅವುಗಳಿಂದ ಕಲಿತ ಪಾಠ ಕ್ಲಾಸಿನ ಪಠ್ಯಕ್ಕಿಂತ ನೇರ, ನಿಷ್ಠುರ, ಪ್ರಯೋಜನಕರ.
ಕೋಲಸಿರ್ಸಿಯ ನೇತಾಜಿ ಸರಕಾರಿ ಪ್ರೌಢಶಾಲೆ |