Friday, 28 January 2011

"ಸಾಕ್ಷಿ" -ಒಂದು ವಿಮರ್ಶೆ

ಒಂದು ಸುಳ್ಳನ್ನು ಹೇಳಿ ಅದರಿಂದ ಆದ ಸತ್ಯವೃತಭಂಗಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಂಡ ಪರಮೇಶ್ವರಯ್ಯ , ಗಂಡನಿಂದಲೇ ಬಲಾತ್ಕಾರಕ್ಕೊಳಗಾಗುವ ಸಾವಿತ್ರಿ , ಲೋಭಿ ಮಾವನ ಕೋಟ್ಯಾಂತರ ಆಸ್ತಿಗೆ ಒಡೆಯನಾಗುವ ಅವಕಾಶ ಬಂದರೂ ಅದರಿಂದ ಮಾವನ ಆತ್ಮಕ್ಕೆ ಶಾಂತಿ ಸಿಗಲಾರದೇನೋ ಎಂದು ೬.೫ ಲಕ್ಷ ರೂಪಾಯಿಗಳನ್ನು ಮಾವನ ಚಿತೆಯೊಂದಿಗೆ ಸುಟ್ಟು ಹಾಕುವ ರಾಮಕೃಷ್ಣಯ್ಯ , ಗಾಂಧಿವಾದದ ಕನಸ್ಸಿನಲ್ಲಿ ವರ್ತಮಾನದೊಂದಿಗೆ ರಾಜಿಯಾಗಲು ಹೆಣಗಾಡಿ ,ಮಾಡಿದ ಒಂದು ತಪ್ಪಿಗೆ ಪ್ರಾಯಶ್ಚಿತ್ತ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕೊನೆಯ ಕ್ಷಣದಲ್ಲಿ ಸಾವಿಗೆ ಅರ್ಥ ಕಾಣದೇ ಹಿಂತಿರುಗಿ ಬಂದು ತನ್ನದೇ ದಾರಿಯಲ್ಲಿ ಗ್ರಾಮಾಭಿವೃದ್ಧಿಗೆ ಪ್ರಯತ್ನಿಸುವ ಸತ್ಯನಾರಾಯಣಪ್ಪ ಇವರುಗಳ ಸುತ್ತ ಹೆಣೆಯಲ್ಪಟ್ಟ ಕಥೆ ಹೆಸರೇ ಹೇಳುವಂತೆ ಒಂದು ಸಾಕ್ಷಿಯ ’ಪ್ರಜ್ಞೆ’ಯ ಸುತ್ತ ಹಬ್ಬಿಕೊಳ್ಳುತ್ತದೆ. ತಾನಾಡಿದ ಸುಳ್ಳಿನ (ನಿಜವೆಂದರೆ ಸತ್ಯವನ್ನಾಡದೇ ಸುಮ್ಮನುಳಿದ) ಪರಿಣಾಮ ಮತ್ತಿಷ್ಟು ಘೋರ ಎಂದು ಭಾವಿಸಿ , ನಿಜವಾದ ಪರಿಣಾಮವನ್ನು ತಿಳಿಯದೇ ತನ್ನನ್ನು ಶಿಕ್ಷಿಸಿಕೊಂಡ ಪರಮೇಶ್ವರಯ್ಯನ ಪ್ರೇತಕ್ಕೆ ನಿಯಂತೃನು, ನಿಜವನ್ನು ತಿಳಿವ ಅವಕಾಶ ಕೊಟ್ಟು ಭೂಮಿಗೆ ಕೇವಲ ಸಾಕ್ಷಿ ಮಾತ್ರ ಅಸ್ತಿತ್ವದಲ್ಲಿ ಕಳಿಸಿದಾಗ , ಯಾವ ಕರ್ಮ ಮತ್ತು ಯಾರ ಭಾವಗಳನ್ನು ಬದಲಾಯಿಸಲಾಗದ ಆ ಪ್ರೇತ ನೊಡುವ ಅದರ ಮಾನವ ಜನ್ಮದ ಸಂಬಂಧಿಕರ ಬದುಕಿನ ಚಿತ್ರಣವೇ ’ಸಾಕ್ಷಿ’ .
ಬದುಕಿನಲ್ಲಿ ಸಾಕಷ್ಟು ನೋವನ್ನುಂಡು ಅದರಲ್ಲಿಯೂ ಸತ್ತವರ ಮರ್ಯಾದೆ ತೆಗೆಯುವ ಹಕ್ಕು ತನಗಿಲ್ಲ ಎಂದು ಮೌನಕ್ಕೆ ಶರಣಾಗಿ , ಸತ್ಯವೇ ತನ್ನ ಜೀವನಾಧಾರ ಎಂದು ಭಾವಿಸಿ ಬದುಕಿದ ಪರಮೇಶ್ವರಯ್ಯ ಮಗಳ ಹಠಕ್ಕೆ ಮಣಿದು ತನಗೆ ಸರ್ವಥಾ ಇಷ್ಟವಿಲ್ಲದೇ ಇದ್ದರೂ ಮಾಡುವ ( ಮಾಡಲು ತನ್ನ ನಿರ್ಲಿಪ್ತಿಯಿಂದಲೇ ಒಪ್ಪುವ) ಎರಡು ಕಾರ್ಯಗಳು ಇಡೀ ಕುಟುಂಬದ ಮೇಲೆ ಬೀರುವ ಪರಿಣಾಮಗಳು ೩೨೦ ಪುಟಗಳ ಕಥೆಯನ್ನೇ ಕಟ್ಟಿ ಕೊಡುತ್ತದೆ . ಮೊದಲನೆಯದಾಗಿ ಪರಮೇಶ್ವರಯ್ಯ ತನ್ನ ನಿವೃತ್ತ್ಯಾತ್ಮಕ ಪ್ರವೃತ್ತಿಗೆ ಕಾರಣವಾದ ಮಂಜಯ್ಯನನ್ನು ಮದುವೆಯಾಗುತ್ತೇನೆ ಎಂದು ಹಠ ಹಿಡಿದ ಮಗಳಿಗೆ, ತನ್ನ ಸೌಮ್ಯ ಪ್ರಕೃತಿಗೆ ವಿರುದ್ಧವಾಗಿ ನಾಲ್ಕು ಹೊಡೆದರೂ ಕೇಳದೇ ಹೋದಾಗ, ಮತ್ತೆ ನಿರ್ಲಿಪ್ತವಾಗುವ ಮೂಲಕ ಆದ ಅಪಚಾರಕ್ಕೆ ಪರೋಕ್ಷವಾಗಿ ಒಪ್ಪಿಗೆ ಕೊಟ್ಟಂತಾಯಿತೇ ? ಎರಡನೆಯದಾಗಿ ಅದೇ ಮಂಜಯ್ಯ ಒಂದು ಕೊಲೆ ಮಾಡಿ ಬಂದು ಸುಳ್ಳು ಸಾಕ್ಷಿಯನ್ನು ಹೇಳಲು ಕೇಳಿಕೊಂಡಾಗ , ಅದರಿಂದ ಮಗಳ ಬಾಳಿಗೆ ಎಲ್ಲಿ ಸಹಾಯವಾಗುತ್ತದೆಯೇನೋ ಎಂಬ ಭಾವನೆಯೂ ಬಂದೇ ಒಪ್ಪಿಕೊಂಡಿದ್ದೇ?
ಯೌವ್ವನದ ಆವೇಶದಲ್ಲಿ ಸ್ಫುರದ್ರೂಪಿ ಮಂಜಯ್ಯನನ್ನು ಮದುವೆಯಾಗುತ್ತೇನೆ ಎಂದು ಹಠ ಹಿಡಿದು , ಅಪ್ಪ ಅಣ್ಣ ಎಷ್ಟು ಹೇಳಿದರೂ ಕೇಳದೇ ಮದುವೆಯಾಗಿ ನಂತರ ಅವನಿಂದ ಮೋಸಕ್ಕೊಳಗಾದಾಗ ಅದೇ ಹಠದಿಂದ ಶಿಕ್ಷಕಿಯಾಗಿ ಬೇರೆಯಾಗಿಯೇ ಉಳಿದು ಮಾನಸಿಕವಾಗಿ ಬೆಳೆಯುವ ಸಾವಿತ್ರಿ ಒಂದರ್ಥದಲ್ಲಿ ದುರಂತ ನಾಯಕಿ . ಮುಂದೆ ತನ್ನ ತಾಯಿಯ ಬಗ್ಗೆ ಮಾತು ಕೆಟ್ಟ ಮಾತು ಬಂದಾಗ ತಾಯಿ ಸತ್ತ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವ ಆಕೆ , ಹಠದ ಪ್ರತೀಕವಾಗಿ ನಿಲ್ಲುತ್ತಾಳೆ. ನಾವು ಮಾತಾಡುವ ೯೦% ಭಾಗಕ್ಕಿಂತ ಹೆಚ್ಚು ಮಾತು ಕೇವಲ ’ವ್ಯರ್ಥ’ ಎಂದೂ , ಮಾತಿಗಿಂತಲೂ ಮೌನವೇ ಹೆಚ್ಚು ಸಶಕ್ತವಾಗಿ ಭಾವನೆಗಳನ್ನು ವ್ಯಕ್ತಪಡಿಸಬಲ್ಲದೆಂದೂ ಬಹು ಬೇಗ ಕಂಡುಕೊಂಡು ಪಾಲಿಸಿಕೊಂಡು ಬಂದ ರಾಮಕೃಷ್ಣಯ್ಯ ಅದ್ಭುತ ಆದರ್ಶವಾಗಿ ನಿಲ್ಲುತ್ತಾರೆ. ಮಾವನ ಅತಿ ಜಿಪುಣತನದ ಬಗ್ಗೆ ಮದುವೆಯ ದಿನವೇ ಹೇಸಿಕೆ ಹುಟ್ಟಿದರೂ ತೋರಿಸಿಕೊಳ್ಳದೇ , ಇದ್ದ ಒಬ್ಬನೇ ಮೊಮ್ಮಗನಿಗೂ ಮಾವ ವಾಸದ ಖರ್ಚನ್ನು ಕೇಳಿದಾಗ ಇದ್ದ ಜಮೀನು ಮಾರಿ ಋಣಮುಕ್ತನಾಗುವ ಆತನೇ ಮುಂದೆ ತನ್ನ ಕೈಯಾರೆ ದುಡ್ಡನ್ನು ಹಾಕಿ ಮಾವನ ಅಂತಿಮ ಕರ್ಮಗಳನ್ನು ನಿರ್ವಂಚನೆಯಿಂದ ಮಾಡಿ ಮತ್ತೆ ಋಣಮುಕ್ತ(?)ನಾಗುತ್ತಾನೆ. ತನ್ನ ಹೆಂಡತಿ ಇಷ್ಟು ವರ್ಷ ದಾಂಪತ್ಯ ಮಾಡಿದರೂ ಮೌಲ್ಯಗಳನ್ನು ಕಲಿಯಲಿಲ್ಲವೆಂದು ಹತಾಶೆಯಿಂದ ಸಂದರ್ಭಕ್ಕನುಸಾರವಾಗಿ ಹೊಡೆಯುವ ರಾಮಕೃಷ್ಣಯ್ಯ , ತನ್ನ ಮಗನೇ ಪರ-ಧನಕ್ಕೆ ಆಸೆ ಪಟ್ಟು ಅಜ್ಜನ ಆಸ್ತಿಯನ್ನು ಆಳುತ್ತೇನೆ ಎಂದಾಗಲೂ ಸ್ಥಿಮಿತ ಕಳೆದುಕೊಳ್ಳುವುದಿಲ್ಲ , ಮುಂದೊಮ್ಮೆ ಮಂಜಯ್ಯನ ಅಂತಿಮಸಂಸ್ಕಾರ ಮಾಡಬೇಕಾಗಿ ಬಂದಾಗಲೂ , ಮಗನೂ ಮಂಜಯ್ಯಂತೆಯೇ ಸ್ತ್ರೀಲೋಲನಾದಾಗಲೂ. ಎಲ್ಲರೂ ತಾತ್ವಿಕವಾಗಿ ವಿರೋಧಿಸಿದರೂ ಯಾವ ಸಿಟ್ಟಿನ ಪೂರ್ವಾಗ್ರಹವಿಲ್ಲದೇ ತನಗೆ ಅಷ್ಟೆಲ್ಲಾ ದ್ರೊಹ ಬಗೆದ ಮಂಜಯ್ಯನ ಕರ್ಮಗಳನ್ನು ಮಾಡಲು ಮುಂದಾಗುವ ರಾಮಕೃಷ್ಣಯ್ಯ, ಮನುಷ್ಯ ಹೀಗೂ ಇರಲು ಸಾಧ್ಯವೇ ಎನ್ನಿಸಿಬಿಡುತ್ತಾನೆ.
ಗಾಂಧಿಯಿಂದ ಬಹಳೇ ಪ್ರಭಾವಿತವಾಗಿ , ಸತ್ಯ ಮತ್ತು ಚಾರಿತ್ರ್ಯದ ಬಗ್ಗೆ ಆಗಾಗ ಆತ್ಮಾವಲೋಕನ ಮಾಡಿಕೊಳ್ಳೂತ್ತಿದ್ದರೂ , ಒಂದು ದುರ್ಬಲ ಕ್ಷಣದಲ್ಲಿ ಮೋಹದ ಬಲೆಯಲ್ಲಿ ಬಿದ್ದು ’ಸುಳ್ಳಾಡುವ ’ ಸತ್ಯನಾರಾಯಣಪ್ಪ ಅದರಿಂಟಾದ ಉದ್ಭವವಾದ ಸುಳ್ಳಿನ ಸರಪಳಿಯಿಂದ ಚಾರಿತ್ರ್ಯನಷ್ಟವಾಯಿತೆಂದು ಬಗೆದು ಇದಕ್ಕಿಂತ ಸಾವೇ ಶ್ರೇಷ್ಟವೆಂದು ತಿಳಿಯುತ್ತಾನೆ . ಆದರೆ ಸಾವಿನಿಂದ ಯಾವ ಪುರುಷಾರ್ಥವನ್ನೂ ಕಂಡುಕೊಂಡಂತಾಗುವುದಿಲ್ಲ ಎಂಬ ಜ್ಞಾನೋದಯ ಅಂತಿಮ ಕ್ಷಣದಲ್ಲಾಗಿ , ಕಾಯಿ-ಕಳ್ಳರಾಗಿದ್ದ ಒಂದು ಹಟ್ಟಿಯ ಜನರ ಅಭಿವ್ರದ್ದಿಗೆ ಉಳಿದ ಜೀವನ ಮುಡಿಪಾಗಿಡುವ ಮೂಲಕ ಬದುಕಿಗೆ ಅರ್ಥವನ್ನೂ , ಅವರ ಬಾಳಿಗೆ ಮಾರ್ಗವನ್ನೂ ಕಂಡುಕೊಳ್ಳುತ್ತಾನೆ .
ಕೆಟ್ಟದ್ದನ್ನು ಕೆಟ್ಟದ್ದು ಎಂದು ಹೇಳಲು , ಕೆಟ್ಟದ್ದನ್ನು ಕಲಾವಿದ ಚಿತ್ರಿಸುವುದು ತಪ್ಪಲ್ಲವಾದರೂ ಕೆಲವೊಮ್ಮೆ ಅಶ್ಲೀಲತೆಯು( ವೈಭವೀಕರಿಸದೇಹೋದರೂ ) ಅಗತ್ಯಕ್ಕಿಂತ ಜಾಸ್ತಿಯೇ ಕಥೆಯಲ್ಲಿ ಹಾಸುಹೊಕ್ಕಿದೆ ಎನ್ನಿಸುವುದು ಸುಳ್ಳಲ್ಲ.ಆ ಕಾರಣಕ್ಕಾಗಿಯೇ ಮಂಜಯ್ಯನ ಪಾತ್ರ ಬಹುಮುಖ್ಯವಾದರೂ ನಾನು ವಿಷ್ಲೇಶಣೆ ಮಾಡದೇ ಬಿಡುತ್ತಿದ್ದೇನೆ. ರಾಮಕೃಷ್ಣಯ್ಯ , ಪರಮೇಶ್ವರಯ್ಯನಂತಹ ಪಾತ್ರಗಳು ಹೇಗೆ ಮೇರು ವ್ಯಕ್ತಿತ್ವವನ್ನು ಪ್ರತಿನಿಧಿನಿಸುತ್ತವೆಯೋ ಹಾಗೆಯೇ ಮಂಜಯ್ಯನ ಪಾತ್ರ ಅತಿ ಹೀನವಾಗಿ ಭ್ರಷ್ಟತೆಯ ರಸಾತಳವನ್ನು ಮುಟ್ಟುತ್ತದೆ . ಒಟ್ಟಾರೆಯಾಗಿ ವಿವಿಧ ಪಾತ್ರಗಳ ಪ್ರಥಮ ಪುರುಷದಲ್ಲಿ (ಮಾಮೂಲಿ ಎಸ್.ಎಲ್.ಭೈರಪ್ಪನವರ ಶೈಲಿಯಂತೆ ) ಸಾಗುವ ಕಾದಂಬರಿಯು ಒದುಗನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗುತ್ತದೆ .

No comments:

Post a Comment