"ಹಾಸಿ ಬಿದ್ದಿರುವೆ ಮೈಯ ಚಾಚಿ
ನಿನ್ನಯ ಆಟಕೆ ಅಂಗಳವಾಗಿ,
ನಾನೇ ಹಿರಿಯ ನೀನು ಅಲ್ಪ"
ಎಂದಿತು ಹಲಗೆ ಬಳಪದ ತುಂಡಿಗೆ.
"ಕರಗಿ ನನ್ನೊಳು ನಾನೇ ಇಲ್ಲವಾಗಿ
ಮೂಡುವ ಬರಹಕೆ ದಾರಿಯಾಗಿ
ನಾನು ಇರದೇ, ನಿನ್ನದೇನು? "
ಎಂದುತ್ತರವನಿತ್ತಿತ್ತು ಬಳಪ.
ಕೇಳಿ ವಾದವ,ಅರ್ಥ ಕಾಣದೇ,
ಹಿರಿತನದ ಭ್ರಮೆಗೆ ಬೇಸರಿಕೆ ಮೂಡಿ,
ಗೋಡೆ-ಗಡಿಯಾರ ಸ್ವಗತಗೈದಿತು
"ಯಾರು ಮೇಲು? ಯಾರು ಕೆಳಗು?
ಒಬ್ಬರಿರದೆ ಇನ್ನೊಬ್ಬನಿಲ್ಲ
ಕೈಗಳು ಸೇರದೆ ಶಬ್ದವೇ ಇಲ್ಲ
ಯಾವ ಮುಳ್ಳು* ಹೆಚ್ಚೋ, ಆ ದೇವಬಲ್ಲ"
"ಎಳೆವರು ಕಲ್ಲುಮಣ್ಣನೆಣಿಸದೆ
ನಿನ್ನ ಬೀರಲು ದಾರಿಯಾಗಿ,
ಆಳವಾಗದೇ ಬಾಳಲಾಗದೇ
ನನ್ನ ನೋವಿಗೆ ನಾನೇ ಕಿವಿಯಾಗಿ,
ಹೇಗೆ ನೀನು ಬೆಳೆಯ ಮೂಲ
ನಾನೇ ತಾನೆ ಅಗ್ರಮಾನ್ಯ"
ಎಂದಿತು ನೇಗಿಲು ಬೀಜಕ್ಕೆ.
"ಎಷ್ಟು ಉತ್ತರೂ ಹಾಗೇ ಇರುವೆ ನೀ ;
ನನ್ನ ಹೊಟ್ಟೆಯ ನಾನೇ ಬಗೆದುಕೊಂಡು
ಗಿಡ ಹುಟ್ಟಲು ದಾರಿಯಾದರೂ
ನೀನೇ ಮಾನ್ಯ, ನಾ ನಗಣ್ಯ "
ಉತ್ತರ ಸಿದ್ಧವಿತ್ತು ಬೀಜದ ಬಳಿ.
ಭೂತಾಯಿಗೆ ಬೇಜಾರು ಬಂದಿತ್ತು,
ಇಲ್ಲದ ಹಿರಿಮೆಗೆ, ಸಲ್ಲದ ಜಗಳಕೆ,
ಉಪದೇಶವು ಮನದೊಳೆ ಉಳಿದಿತ್ತು.
"ನಿಮಗೆ ನೀವೇ, ನೀವೇ ಹೆಚ್ಚು
ನಾನು ಎನ್ನುವ ಭ್ರಮೆಯ ಕಿಚ್ಚು
ತೀರದ ಅಹಂನ ಮನ್ನಣೆಯ ಹುಚ್ಚು
ಎಂದು ಕಲಿವಿರೋ ನೀವು, ಆ ದೇವಬಲ್ಲ"
"ನಾ ಕರಗಿ ಹರಿಯದ ಹೊರತು
ಎಂತು ಹುಟ್ಟೀತು ಕವಿತೆ
ಸಾರಹೀನವು ಬರಿಯ ಪದದ ಮಾಲೆ
ಜೀವವಿರದ ಬರಿ ಅಸ್ಥಿಯ ಸಂಕೋಲೆ"
ಭಾವವೆಂದಿತು ಎದೆಯುಬ್ಬಿಸಿ
ತನ್ನ ವ್ಯಾಪ್ತಿಯ ಮಹತ್ವವ ಪ್ರಲಾಪಿಸಿ.
"ಶಬ್ದ ಶಬ್ದದ ಮಧ್ಯ ಸಂಗ ಕೂಡಿ
ಅಲ್ಲಿ ಪ್ರಾಸದ ಸಂಬಂಧ ಮೂಡಿ
ರಾಗಜೋಡಣೆಗೆಷ್ಟೋ ಕ್ರಮಯೋಜನೆ**;
ಎಲ್ಲೂ ಕಾಣದ ಅಮೂರ್ತ ಭಾವಕೆ
ಇಷ್ಟು ಮನ್ನಣೆ ಹೇಗೆ ತಾರ್ಕಿಕ?"
ಎಂದಿತು ಭಾಷೆ ತಾನೇ ಹಿರಿಯವ
ಎಂಬ ಭಾವದಿ,ಭಾವವ ತುಚ್ಛಿಸಿ.
ಬೀಗುತ ಕೇಳಿತ್ತು ಪ್ರಶ್ನೆಯ ಮಾಲೆ.
ಕವಿಮನನೊಂದು, ಪ್ರಲಾಪಿಸಿತ್ತು
"ಯಾರೂ ದೊಡ್ಡವರಲ್ಲ, ಇಲ್ಲಿ
ಅಲ್ಪರು ಯಾರೂ ಇಲ್ಲವೇ ಇಲ್ಲ .
ಯಾವುದ ಬಿಟ್ಟು ಯಾವುದೂ ಇಲ್ಲ,
ಅತಿ ಉತ್ತಮ ಯಾವುದೋ, ಆ ದೇವಬಲ್ಲ"
*ಮುಳ್ಳು- ಗಡಿಯಾರದ ಮುಳ್ಳು
**ಕ್ರಮಯೋಜನೆ- ಆಂಗ್ಲ ಭಾಷೆಯ Permutation
"ನಾ ಕರಗಿ ಹರಿಯದ ಹೊರತು
ReplyDeleteಎಂತು ಹುಟ್ಟೀತು ಕವಿತೆ
ಸಾರಹೀನವು ಬರಿಯ ಪದದ ಮಾಲೆ"
ಎಷ್ಟು ಅರ್ಥಪೂರ್ಣ ಸಾಲು..ಬರವಣಿಗೆ ಇಷ್ಟವಾಯಿತು
@ಮನಸ್ವಿ
ReplyDeleteಧನ್ಯವಾದಗಳು. ಭಾವದ ಹಂಗಿಲ್ಲದೇ ಕವಿತೆ ಮೂಡಲಾರದು ಎಂಬುದು ನನ್ನ ಮೂಲ ನಂಬಿಕೆ. ಬೇರೆ ಸಾಹಿತ್ಯ ಪ್ರಕಾರಗಳಿಗೆ ಬೇಕಾಗದ ಸ್ಪೂರ್ತಿಯ ಅವಶ್ಯಕತೆ ಕವನಕ್ಕೆ ಬೇಕ್, ಅದೂ ಅದು ಭಾವಗೀತೆಯಾಗಿದ್ದರೆ. ಭಾವವೇ ಸರ್ವಸ್ವವೇ, ದೇವಬಲ್ಲ ಅಥವಾ ’ God knows'