Sunday, 31 July 2011

ನೋವು


ನೋವು ಸರ್ವಾಂತರ್ಯಾಮಿ. ಬುದ್ಧ ಹೇಳಿದ ಹಾಗೇ ಸಾವಿಲ್ಲದ ಮನೆ ಇರುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನೋವಿಲ್ಲದ ಮನವೂ ಅಲಭ್ಯ. ಅಂತಹ ನೋವನ್ನು ಉಂಡ/ಉಣ್ಣುತ್ತಿರುವ  ಎಷ್ಟೋ  ಮನಗಳಿಗೆ ಈ ಕವನದ ಅರ್ಪಣೆ. 

ಎಲ್ಲೆಂದರಲ್ಲಂತೆ, ಎಲ್ಲೆ ಇರದಂತೆ ಹಬ್ಬಿಕೊಂಡಿದೆ ನೋವು
ಸೂರ್ಯರಶ್ಮಿ ಕಾಣದಲ್ಲೂ, ಕವಿಯ ಪ್ರಜ್ಞೆ ನೋಡದಲ್ಲೂ
ವಾಯುವೇ ಉಸಿರುಗಟ್ಟುವಲ್ಲೂ, ನೀರಪಸೆ ಮುಟ್ಟದಲ್ಲೂ
ಭೌತ ಮಾತ್ರಕೆ ವ್ಯಾಪ್ತಿಮಿತಿಯ ಹಂಗಲ್ಲದೇ ಭಾವಕುಂಟೇ

ಊರ ಹೊರಗಿನ ಹೆಬ್ಬಲಸಿನ ಮರಕೆ ಗೊತ್ತು; ಭಗ್ನಪ್ರೇಮದ ನೋವು
ಗೆಳೆಯರಾಗೇ ಉಳಿದು ಹೋಗುವ ಭಯದಿ ಪ್ರೇಮ ನಿವೇದಿಸಿ
ಒಂದು ಉತ್ತರವೂ ಸಿಗದೇ ನರಳಿ, ಇದ್ದ ಸ್ನೇಹವೂ ಮರೆಯಾಗಿ
ತಿರುತಿರುಗಿ ಬಿಕ್ಕಿದ ಹುಡುಗನೊಬ್ಬನ ಮನದಾಳದ ವೇದನೆ||೧||  

ಹೆರಿಗೆ ಆಸ್ಪತ್ರೆಯ ಹಾಸಿಗೆಗೆ ಗೊತ್ತು; ಜೀವಸೃಷ್ಟಿಯ ಕಾರ್ಪಣ್ಯ
ಮೂಲ ತಿಳಿಯದ ನೋವೇ, ಭಾವವಾಗಿ ಹೊಸ ಜೀವಕೆ ತಾವಾಗಿ
ಬರಿಮಾಂಸ ಮುದ್ದೆಯೊಂದು ತಾಯಿಯೊಬ್ಬಳಿಗೆ ಜನ್ಮ ನೀಡಿತೆಂದರೂ
ಅಮ್ಮ ಮಗುವನ್ನು ಜೋಡಿಸಿತೆಂದರೂ ಪಟ್ಟ ನೋವಿಗೆ ಸಮವೇ||೨||

ಕಟುಕನ ಮನೆಯ ಗೂಟಕೆ ಗೊತ್ತು; ಪ್ರಾಣಹರಣವ ನೋಡುವ ವ್ಯಥೆ
ಗೊತ್ತಿದ್ದರೂ ಹೇಳಲಾಗದ, ಹೇಳಿದರೂ ಉಳಿಯದ ಅಸಹಾಯಕತೆ
ರಕ್ತದೋಕುಳಿಗಾ ಸಾಕ್ಷಿಯಾಗಿ ಮೂಕವಾಗಿ, ಕಣ್ಣಮುಚ್ಚಿ, ಹಲ್ಲು ಕಚ್ಚಿ
ಯಾವ ನೋವು ಹೆಚ್ಚೋ, ಯಾರ ಭಾವ ಹೆಚ್ಚೋ ದೇವಬಲ್ಲನು ||೩||

Thursday, 28 July 2011

ಕರೆ


೩೧-೦೭-೨೦೧೧ದ ಕರ್ಮವೀರದಲ್ಲಿ ಪ್ರಕಟವಾದ ನನ್ನ ಸಣ್ಣಕಥೆಯಿದು .ಒಂದೂವರೆ ವರ್ಷದ ಕೆಳಗೆ ಬರೆದಿದ್ದ ಕಥೆ ಈಗ ಪ್ರಕಟವಾದದ್ದು ತಡವೆನಿಸಿದರೂ ನೀಡಿದ ಸಂತೋಷ ಅಮಿತ.
...
          ಬೆಂಗಳೂರಿನ ಮಳೆಗೂ, ಪಂಚಾಂಗದ ತಿಂಗಳುಗಳ ಲೆಕ್ಕಾಚಾರಕ್ಕೂ ಯಾವುದೇ ಸಬಂಧವಿಲ್ಲ ಎಂಬ ತನ್ನದೇ ಸಿದ್ಧಾಂತವನ್ನು ಉದಾಹರಣೆಯೊಂದಿಗೆ ಪ್ರಮಾಣೀಕರಿಸುವ ಉತ್ಸಾಹದಲ್ಲಿದ್ದಂತೆ ಜನವರಿ ಎಂಬ ಚಳಿಗಾಲ-ಬೇಸಿಗೆಕಾಲಗಳ ಸಂಧಿಕಾಲದಲ್ಲಿ ಮಳೆ ಧೋssss ಎಂದು ಸುರಿಯುತ್ತಿತ್ತು. ಅಹುದು, ಅಹುದು, ಎಂದು ತಲೆದೂಗುವ ಭಟ್ಟಂಗಿಗಳಂತೆ, ಬೆಂಗಳೂರೆಂಬ ಉದ್ಯಾನನಗರಿಯಲ್ಲಿ ಅಳಿಯದೇ ಉಳಿದಿದ್ದ ಕೆಲವೇ ಕೆಲವು ಬೀದಿ ಬದಿಯ ಮರಗಳು ಸಾಧ್ಯವಿರುವಷ್ಟರ ಮಟ್ಟಿಗೆ ತಮ್ಮ ರೆಂಬೆಗಳನ್ನು ಅಲ್ಲಾಡಿಸುತ್ತಿದ್ದವು. ನಾಳಿನ ಕ್ರಿಕೆಟ್ ಪಂದ್ಯಕ್ಕೆ ಈಗಲೇ ಹೊನಲು-ಬೆಳಕಿನ ವ್ಯವಸ್ಥೆ ಸಿದ್ಧವಿದೆ ಎಂಬಂತೆ ಗುಡುಗು, ಸಿಡಿಲು, ಮಿಂಚುಗಳು ಮೇಳೈಸಿದ್ದವು.
ಅಂದು ಶುಕ್ರವಾರ ಬೇರೆ. ನಾಳೆ ಚಿನ್ನಸ್ವಾಮಿ ಕ್ರೀಡಂಗಂಣದಲ್ಲಿ ನಡೆಯುವ ಪಂದ್ಯಕ್ಕೆ, ತನ್ಮೂಲಕ ವಾರಾಂತ್ಯದ ರಜಕ್ಕೆ ಎಲ್ಲಿ ಈ ಮಳೆ ತಣ್ಣೀರು ಎರಚಿಬಿಡುತ್ತದೆಯೇನೋ ಎಂದು ಶಪಿಸುತ್ತಾ, ಸಾಧ್ಯವಾದಷ್ಟೂ ನೆನೆಯದಂತೆ ಜಯನಗರ ೩ನೇ ಬ್ಲಾಕಿನ ಮುನೆಯತ್ತ ವಿಶ್ವ(ವಿಶ್ವಂಭರ) ಸಾಗುತ್ತಿದ್ದ. ಕೇಂದ್ರಗ್ರಂಥಾಲಯದ ಬಳಿ ಇಳಿದು ತಲೆ ಮತ್ತು ಲ್ಯಾಪ್ ಟಾಪನ್ನಾದರೂಮಳೆಯಿಂದ ರಕ್ಷಿಸಿಕೊಳ್ಳುವ ಹಂಬಲದಲ್ಲಿ ಕೊಡೆಯನ್ನು ಗುರಾಣಿಯಂತೆ ಹಿಡಿದು ಸಾಗುತ್ತಿದ್ದ, ಎದುರಿನಿಂದ ಬರುತ್ತಿದ್ದ ರಿಕ್ಷಾ ಕರ್ಕಶವಾಗಿ ಹಾರ್ನ್ ಮಾಡುವವರೆಗೂ. ರಿಕ್ಷಾದ ವೇಗಕ್ಕೂ ಚಾಲಕನ ಆವೇಗಕ್ಕೂಹೆದರಿ ಸಾಧ್ಯವಿರುವಷ್ಟರ ಮಟ್ಟಿಗೆ ಪಕ್ಕಕ್ಕೆ ಸರಿದು ನಿಂತಾಗ ಕಂಡ ದೃಶ್ಯ ನಿಜಕ್ಕೂ ವಿಚಿತ್ರವಾಗಿತ್ತು.
ಸುಮಾರು ಐವತ್ತು ಪ್ರಾಯದ, ದಢೂತಿ ಹೊಟ್ಟೆಯ , ವೀರಪ್ಪನ್ ಮೀಸೆಯ, ಹಳ್ಳಿಹೈದನಂತಿದ್ದ ಆಸಾಮಿಯೊಬ್ಬ, ತನ್ನೊಂದಿಗೆ ಎಮ್ಮೆಯೊಂದನ್ನು ಹಾಗೇ ನಿಲ್ಲಿಸಿಕೊಂಡಿದ್ದ.ಮನಸ್ಸು ಏನೋ ಕೆಡುಕನ್ನು ಯೋಚಿಸಿತಾದರೂ ಏನಿರಬಹುದೆಂಬುದು ಸ್ಪಷ್ಟವಾಗಿ ತಿಳಿಯಲಿಲ್ಲ.ಛೇ, ಕಪ್ಪಾಗಿರುವನೆಂದೇ ನಾನು ಹೀಗೆಲ್ಲಾ ಸಂಶಯ ಪಡುತ್ತಿರುವುದು ಎನ್ನಿಸಿ, ಮನಸ್ಸಿಗೆ ಬೈದುಕೊಂಡು ಸುಮ್ಮನಾಗಿಸಿದೆನಾದರೂ ಒಳಮನಸ್ಸು ಅಷ್ಟೇ ಅಲ್ಲ ಎಂದು ಹಠ ಹಿಡಿದು ಕುಳಿತಂತಾಯ್ತು. ಟ್ರಾನ್ಸ್ ಫಾರ್ಮರ್ ಕೆಳಗೆ ನಿತ್ತುಕೊಂಡ ಈ ಪುಣ್ಯಾತ್ಮನ ಅಸ್ತಿತ್ವ ಯಾಕೋ ವಿಚಿತ್ರವೂ, ಕೇಡಿನದಾಗಿಯೂ ಕಂಡುಬಂತು. ದಿನಪತ್ರಿಕೆಗಳಲ್ಲಿ ಬರುತ್ತಿದ್ದ ’ಸಿಡಿಲು ಬಡಿದು ಸಾವು’ಗಳಂತಹ ಶೀರ್ಷಿಕೆಗಳ ಪ್ರಭಾವವೋ, ಸಾಮಾನ್ಯ ಪ್ರಜ್ಞೆಯೋ, ಮತ್ತೊಬ್ಬ ಮನುಷ್ಯನ ಬಗೆಗಿನ ಕನಿಷ್ಟ ಮಾನವೀಯತೆಯೋ ಯಾವುದೋ ಒಂದು ವಿಶ್ವನಿಗೆ ಸ್ಪೂರ್ತಿ ನೀಡಿ, ಆ ದೃಶ್ಯವನ್ನು ಕಂಡೂ ಕಾಣದಂತೆ ಮುಂದಕ್ಕೆ ಹೋಗಲು ಮನಸ್ಸು ಬಾರದೇ, ವಿಶ್ವ ಕೂಗಿ ಹೇಳಿದ್ದ ಆ ವ್ಯಕ್ತಿಗೆ,
"ಏಯ್ ಹಲ್ಲೋ, ಈ ರೀತಿ ಮಳೆ ಬರ‍್ತಾ ಇದೆ. ಇಷ್ಟು ಗುಡುಗು, ಸಿಡಿಲು ಬೇರೆ ಇದೆ. ಅಂತಾದ್ರಲ್ಲಿ ಬೇರೆ ಎಲ್ಲೂ ಜಾಗ ಸಿಗಲಿಲ್ವಾ ನಿನಗೆ? ಈ ಟ್ರಾನ್ಸ್ ಫಾರ್ಮರ್ ಕೆಳಗೆ ನಿಂತಿದ್ದೀಯಲ್ಲಾ, ಬೇರೆಲ್ಲಾದರೂ ಹೋಗೋ, ಅದನ್ನು ಕರೆದುಕೊಂಡು" ಎಂದ ಆ ವ್ಯಕ್ತಿಯ ಎಮ್ಮೆಯತ್ತ ಬೆರಳು ತೋರಿಸಿ.
ಆ ಮನುಷ್ಯನಿಗೆ ಅರ್ಥವಾದ ಹಾಗಿರಲಿಲ್ಲ. ಭಾಷೆಯೇ ಅರ್ಥವಾಗಲಿಲ್ಲವೋ ಅಥವಾ ಹೇಳಿದ್ದೇ ಕೇಳಲಿಲ್ಲವೋ ಸುಮ್ಮನೇ ಬೆಪ್ಪನಂತೆ ನಿಂತಿದ್ದ. ಮತ್ತೆ ಐದು ನಿಮಿಷದ ಒಳಗೆ ವಿಶ್ವ ಎಂಟು ಸಲ ಕೂಗಿಯಾಗಿತ್ತು. ಮೇಲೆ ಹೇಳಿದ್ದ ವಾಕ್ಯವನ್ನೇ ಸ್ವಲ್ಪ ತಿರುಚಿ ಹೇಳಿಯೂ ಪ್ರಯತ್ನ ಮಾಡಿದ್ದ.ತನಗೆ ಬರುತ್ತಿದ್ದ ಅರೆಬರೆ ತಮಿಳಿನಲ್ಲಿಯೇ ಹೇಳಲೂ ನೋಡಿದ. ಆ ಮನುಷ್ಯ ಕೊನೆಯ ಎರಡು ಬಾರಿ ಹೇಳಿದ್ದನ್ನು ಸ್ವಲ್ಪ ಕೇಳಿಸಿಕೊಂಡಂತೆ ಮಾಡಿದನಾದರೂ ಯಾವುದೇ ಪ್ರತಿಕ್ರೀಯೆಯನ್ನು ಕೊಡಲಿಲ್ಲ.ಇದೇ ಕೊನೆಯ ಬಾರಿ ಎಂದುಕೊಂಡು ಒಂಬತ್ತನೆಯ ಬಾರಿ ಕೂಗಲು ಬಾಯಿ ತೆರೆಯುವ ಮೊದಲು ವಿಶ್ವನಿಗೆ ಹೊಳೆದಿತ್ತು, ತಮ್ಮಿಬ್ಬರ ಮಧ್ಯೆ ಏನಿಲ್ಲವೆಂದರೂ ೧೦ಮೀಟರ್ ಅಂತರವಿತ್ತೆಂದು. ಈ ದೂರದ ಜೊತೆಗೆ ಮಳೆಯ ಆರ್ಭಟವೂ ಸೇರಿ ಅವನಿಗೆ ಕೇಳಿರದೇ ಹೋಗಿರಲು ಸಾಧ್ಯವಿದೆ ಎಂದೆಣಿಸಿ ಅವನ ಬಳಿಗೇ ಹೋಗಿ ಕೂಗಿ ಇಂತೆಂದ.
"ಕಿವಿ ಕೇಳಲ್ವಾ ನಿಂಗೆ, ಅಷ್ಟು ಬಾರಿ ಕೂಗಿದ್ರೂ ಕೇಳಿಸಲಿಲ್ವಾ, ಟ್ರಾನ್ಸ್ ಫ಼ಾರ್ಮರ್ ಕೆಳಗೇ ನಿಂತಿದ್ದಿಯಲ್ಲಾ, ಆಚೆ .........." ವಾಕ್ಯ ಪೂರ್ತಿಯಾಗುವ ಮೊದಲೇ ಕಣ್ನು ಕೊರೈಸುವ ಮಿಂಚಿನೊಡಗೂಡಿದ ಸಿಡಿಲು ವಿಶ್ವ ನಿಂತಿದ್ದ ಜಾಗಕ್ಕೆ ಅದೇ ಟ್ರಾನ್ಸ್ ಫ಼ಾರ್ಮರ್ ನ ಪಕ್ಕಕ್ಕೆ ಹೊಡೆದಿತ್ತು. ವಿಶ್ವ ಅಷ್ಟಕ್ಕೇ ನಿಲ್ಲಿಸಿದ್ದ ತನ್ನ ಕೊನೆಯ ಮಾತನ್ನು ಪೂರ್ತಿ ಮಾಡುವ ಅವಕಾಶವಿಲ್ಲದೇ.
...
ಕೊನೆಗೂ ’ಆತ’ ತನ್ನ ಟ್ರಾನ್ಸ್ ಫ಼ಾರ್ಮರ್ ನ ಪಕ್ಕದ ಜಾಗ ಖಾಲಿ ಮಾಡಿ ತನ್ನ ಎಮ್ಮೆಯ ಮೇಲೇರಿ ಹೊರಟ, ವಿಶ್ವನ ಪಾಪ ಪುಣ್ಯಗಳನ್ನು ಲೆಕ್ಕ ಹಾಕುತ್ತಾ, ಮತ್ತಾರಿಗೋ ’ಕರೆ’ ಕಳಿಸುತ್ತಾ.
...

Wednesday, 27 July 2011

ಕರೆ

ನನ್ನ ’ಕರೆ’ ಎಂಬ ಸಣ್ಣಕಥೆ ಕರ್ಮವೀರದಲ್ಲಿ ಪ್ರಕಟವಾಗಿದೆ ಎಂಬಲ್ಲಿಗೆ ನನ್ನ ಬರಹ ಕೇವಲ ನನ್ನ ಬ್ಲಾಗಿಗೆ ಮಾತ್ರ ಸೀಮಿತವಲ್ಲ ಎಂದು ನಾನು ಖುಷಿ ಪಡುವಂತಾಯ್ತು. ಮೊದಲ ಬಾರಿ ಪ್ರಕಟವಾದ ಲೇಖನ ಕೊಡುವ ಸಂತೋಷ ಇದೆಯಲ್ಲಾ ಅದು ನಿಜವಾಗಿಯೂ ಸಾಟಿಯಿಲ್ಲದ್ದು. ಕರ್ಮವೀರದ link ಸಿಗದ ಕಾರಣ ಓದ ಬಯಸುವವರು ಕೊಳ್ಳಲೇಬೇಕಾಗಬಹುದು. :P

Sunday, 24 July 2011

ನಾವೇಕೆ ದೇವರನ್ನು ನಂಬಬೇಕು?



ದೇವರು ನಿಜವಾಗಲೂ ಇದ್ದಾನೆಯೇ?
ಈ ಪ್ರಶ್ನೆ ಇಂದು ನಿನ್ನೆಯದಲ್ಲ, ನನಗೆ ಬುದ್ಧಿ ಬಂತು ಎಂದು ನಾನು ತಿಳಿದುಕೊಂಡಾಗಿನಿಂದ ಎಷ್ಟು ಸಹಸ್ರ ಕೋಟಿ ಸಲ ನನಗೆ ನಾನೇ ಇದನ್ನು ಕೇಳಿಕೊಂಡಿದ್ದೇನೋ? ಅಷ್ಟೂ ಸಲವೂ ಒಂದೊಂದು ಉತ್ತರ ಸಿಕ್ಕಿದೆಯಾದರೂ ಪ್ರತೀ ಸಲ ಅದು ಹಿಂದಿನ ಸಲಕ್ಕಿಂತ ವಿಭಿನ್ನವಾಗಿ ಬಂದಿದ್ದು ಒಂದು ತಮಾಷೆಯ ವಿಷಯ.ಮೊನ್ನೆ ಮತ್ತೊಂದು ಬಾರಿ ಹಳೆಯ ಪ್ರಶ್ನೆ ಹೊಸ ರೂಪದಲ್ಲಿ ಹೆಡೆಯೆತ್ತಿ ಎದ್ದು ನಿಂತಾಗ, ನಾನು ಆಸ್ತಿಕನೇ ನಾಸ್ತಿಕನೇ ಎಂಬ ಪ್ರಶ್ನೆ ಮತ್ತಿಷ್ಟು ದಟ್ಟವಾಯಿತು. ಆಸ್ತಿಕನೊಬ್ಬನು ದೇವರನ್ನು ತಾನೇ ಕಂಡಿರುವ ಹಾಗೆ ಮಾತನಾಡುವಾಗ ಹುಟ್ಟು ನಾಸ್ತಿಕನಂತಾಡುವ ನಾನೇ, ಚಾರ್ವಾಕನ ದತ್ತು ಮಕ್ಕಳ ತರಹ ಮಾತನಾಡುವವರ ಜೊತೆಗೆ ಪಕ್ಕ ದೈವಭಕ್ತನ ತರಹ ಆಡುತ್ತೇನೆ.ಅದಿರಲಿ ಬಿಡಿ, ನನ್ನ ಬರಹವನ್ನು ಕೇವಲ ತಲೆಬರಹದ ವ್ಯಾಪ್ತಿಗಷ್ಟೇ ಮಿತಿಗೊಳಿಸಿ, ದೇವರು ಇರುತ್ತಾನೆ ಎಂದೇ ಭಾವಿಸಿ/ನಂಬಿಕೊಂಡು, ನಾವು ಶ್ರೀಸಾಮಾನ್ಯರೆನಿಸಿಕೊಂಡವರು ಏಕಾದರೂ ದೇವರನ್ನು ನಂಬಬೇಕು ಎಂಬುದಷ್ಟಕ್ಕೇ ಪ್ರಸ್ತುತದ ಪ್ರಶ್ನೆಯನ್ನು ಸೀಮಿತಗೊಳಿಸಿಕೊಂಡು ಮುಂದುವರಿಯುತ್ತಿದ್ದೇನೆ.
’ನಾವೇಕೆ ದೇವರನ್ನು ನಂಬಬೇಕು?’
ಮೊದಲನೆಯದಾಗಿ ಮತ್ತೇನೂ ಅಲ್ಲದೇ ಹೋದರೂ ಒಂದು ’ನಂಬಿಕೆ’ಯ ಕಾರಣಕ್ಕಾಗಿಯಾದರೂ ದೇವರು ಎಂಬ ಒಬ್ಬ ವ್ಯಕ್ತಿ ಅಥವಾ ಒಂದು ವಿಚಾರ ಬೇಕು. ಹೌದು, ನಂಬಿಕೆ ಏನನ್ನಾದರೂ ಮಾಡಬಲ್ಲುದು. ಮೂಕನನ್ನು ವಾಚಾಳಿಯಾಗಿಸಬಲ್ಲದು, ಕುರುಡನು ಗಿರಿಯನ್ನು ಹತ್ತುವಂತೆ ಮಾಡಬಲ್ಲುದು, ಕೊರಡ ಕೊನರಿಸಬಲ್ಲುದು, ಶಿಲೆಯನ್ನು ಅಹಲ್ಯೆಯಾಗಿಸಬಲ್ಲುದು.  ನಂಬಿಕೆ ಎಂಬುದೇ ಒಂದು ಶಕ್ತಿ, ಜೀವನದಲ್ಲಿ ನಾವು ಮಾಡಿರುವ ಒಳ್ಳೆಯದು ಕೆಟ್ಟದ್ದನ್ನೆಲ್ಲ ಲೆಕ್ಕ ಇಟ್ಟು ದೇವರು ಫಲ ಕೊಡುತ್ತಾನೆ ಎಂಬುದು ಒಂದು ನಂಬಿಕೆ. ನನ್ನ ಯಾವ ಗೆಳೆಯರೂ ನನ್ನನ್ನು ಅರ್ಥ ಮಾಡಿಕೊಳ್ಳಲಾರರು ಎಂದುಕೊಳ್ಳುವಾಗ ದೇವರಿಗೆ ಸಿಗುವ ವಿನಾಯತಿ ಅದೇ ನಂಬಿಕೆಯ ಮತ್ತೊಂದು ರೂಪ, ಅದು ದೇವರಾಗಿರಬಹುದು, ದೈವವಾಗಿರಬಹುದು. ಒಂದು ಅಮೂರ್ತ ಶಕ್ತಿಯನ್ನು ನಮ್ಮ ಇಂದ್ರಿಯಗಳ ಮಟ್ಟಿಗೆ ಸಾಕ್ಷಾತ್ಕರಿಸಿಕೊಡಲು ಒಂದು ಮೂರ್ತ ಸ್ವರೂಪದ ಅವಶ್ಯಕತೆಯಾಗಿ ದೇವರು ಇದ್ದಾನೆ. ಪರಿಸ್ಥಿತಿ ಕೈ ಮೀರಿ ಹೋದಾಗ, ಈ ಜಗತ್ತಿನ ಯಾವ ಭೌತ ಶಕ್ತಿಯೂ ಇನ್ನು ಸಹಾಯ ಮಾಡಲಾರದು ಎಂದಾಗ ಈ ’ನಂಬಿಕೆ’ ಎಂಬ ಮಾಯಾಶಬ್ದ ನಿಜವಾಗಿಯೂ ಚಮತ್ಕಾರವನ್ನು ಮಾಡಬಲ್ಲುದು. ’ನಾವು ಅತಿಕಷ್ಟದಲ್ಲಿರುವಾಗಲೂ ಯಾವುದೋ ಒಂದು ಶಕ್ತಿ ನಮಗೆ ಸಹಾಯ ಮಾಡಬಲ್ಲುದು’ ಎಂಬ ನಂಬಿಕೆಯಿದೆಯಲ್ಲಾ, ಅದು ನಮ್ಮ ಮಾನಸಿಕ ಸ್ಥೈರ್ಯ ಬಿದ್ದುಹೋಗದಂತೆ ಕಾಪಾಡಿ, ಸದ್ಯದ ತೊಂದರೆಯಿಂದ ಹೊರಬರುವ ಶಕ್ತಿಯನ್ನು ನಮಗೆ ಕೊಡುತ್ತದೆ. ದೇವರನ್ನು ನಂಬಲೇ ಬಾರದೆಂದು ಹಠ ತೊಟ್ಟವರು ಅಥವಾ ನಿಜವಾಗಿಯೂ ಆ ಮಾನಸಿಕ ಸ್ಥೈರ್ಯ ಇರುವವರು ಇದನ್ನು ಅಲ್ಲಗಳೆಯಬಹುದಷ್ಟೇ!
ನನಗೆ ಕಾಣುವ ಎರಡನೆಯ ಕಾರಣ ’ಹೆದರಿಕೆ’. ’ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ’ ಎಂಬ ದೇವರ image ಇದೆಯಲ್ಲಾ, ಅದು ಚಿಕ್ಕ ಮಕ್ಕಳು ಹಠ ಮಾಡುವುದರಿಂದ ಹಿಡಿದು ದೊಡ್ಡವರು ಕಳ್ಳತನ ಮಾಡುವುದರವರೆಗೆ ಬಹಳ ಅನಪೇಕ್ಷಿತ ಕಾರ್ಯಗಳನ್ನು ನಿಲ್ಲಿಸಬಲ್ಲುದು. ನಮಗೇ, ಆರಕ್ಷಕ ವ್ಯವಸ್ಥೆಯ ಹೆದರಿಕೆಯಿಲ್ಲದೇ ಇದ್ದಿದ್ದರೆ ನಾವಿಷ್ಟು ನಾಗರೀಕರ ಹಾಗೆ ಬದುಕುತ್ತಿದ್ದೆವೋ? ನಾವು ಜನಸಾಮಾನ್ಯರು ಶಿಕ್ಷೆಯ ಹೆದರಿಕೆಯಿಲ್ಲದೇ ಹೋದರೆ ತಪ್ಪು ಎನಿಸಿದರೂ ಅದನ್ನು ಮಾಡದೇ ಹೋಗಲಾರೆವು, ಅಲ್ಲವೇ? ಹಾಗೆಯೇ ದೇವರು ಈ ತಪ್ಪು ಮಾಡದಂತೆ ತಡೆಯುವ ಆರಕ್ಷಕ, ಆದರೆ ಅವನ ಶಕ್ತಿ, ವ್ಯಾಪ್ತಿ ದೊಡ್ಡದು. ಎಷ್ಟೋ ಜನರು ನರಕದ ಶಿಕ್ಷೆಗಂಜಿಯೇ ಒಳ್ಳೆಯವರಾಗಿ ಉಳಿದಿದ್ದಾರೆ ಎಂದರೆ ಸ್ವಲ್ಪ ಉತ್ಪ್ರೇಕ್ಷೆಯಾದೀತೇನೋ, ಆದರೆ ಒಂದು ದೃಷ್ಟಿಯಿಂದ ಅದು ನಿಜ. ಮನಸ್ಸಾಕ್ಷಿಯ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದವರಿಗೆ ದೇವರು ಅತ್ಯಗತ್ಯ.
ದೇವರ ಅವಶ್ಯಕತೆ ಮತ್ತೆ ಬರುವುದು ಅಹಂ ಎಂಬ ಒಂದು ಅರಿಷಡ್ವರ್ಗವನ್ನು ಹತ್ತಿಕ್ಕಲು. ನಾವೇ ಸರ್ವೋಚ್ಚರು ಎಂದು ಭಾವಿಸಿ, ಅದನ್ನೇ ನಿಜ ಎಂದು ನಂಬಿಕೊಂಡುಬಿಡುವ ಮನುಷ್ಯನ ಮೂಲ ಲಕ್ಷಣವನ್ನು ಒಂದು ಮಿತಿಯಲ್ಲಿಡಲು ಜಗತ್ತಿನ ಹೋಲಿಕೆಗಳಿಗೆ ಮೀರಿದ ಒಬ್ಬ ಅಪ್ರಮೇಯ ದೇವರೇ ಬೇಕು. ಏನೇನನ್ನೋ ಕಂಡುಹಿಡಿದು ಯಾವ ಯಾವುದೋ ವೈಚಿತ್ರ್ಯಗಳನ್ನು ವಿವರಿಸಿದ ವಿಜ್ಞಾನವೇ ಅರ್ಧಜ್ಞಾನವೆನಿಸಿಕೊಳ್ಳಬೇಕಾದರೆ ಇನ್ನೂ ಸಾಧಿಸಬೇಕಾಗಿರುವುದೇನೋ ಇದೆ , ಇನ್ನೂ ಕಂಡುಕೊಳ್ಳಬೇಕಾಗಿರುವುದೇನೋ ಇದೆ ಎಂಬುದನ್ನು ಆ ಅಸ್ತಿತ್ವ ತೋರಿಸುತ್ತದೆ. ನಮಗೆ ಅರ್ಥವೇ ಆಗದ ದೇವರ ಅಸ್ತಿತ್ವದ ಬಗ್ಗೆ ಮಾತನಾಡುವ ಹಕ್ಕು ನಮಗೆಷ್ಟರ ಮಟ್ಟಿಗೆ ಇದೆ? ಏನೇ ಇರಲಿ, ನಾವೆಷ್ಟು ಚಿಕ್ಕವರು ಎಂಬುದರ ಅರಿವು ನಮ್ಮಲ್ಲಿ ಹುಟ್ಟುವುದಕ್ಕೆ ನಮಗಿಂತ ಎಲ್ಲದರಲ್ಲಿಯೂ ಶ್ರೇಷ್ಠವಾದ ಒಬ್ಬ ದೇವರು ಬೇಕು.
ಮತ್ತೊಂದು ಅಂಶ, ಪ್ರಾಚೀನ ಕಾಲದಿಂದ ಹಿಡಿದು ಇಂದಿನವರೆಗೂ ಸಾಹಿತ್ಯ, ಚಿತ್ರಕಲೆ, ಸಂಗೀತ ಎಲ್ಲಾ ಕಲಾಪ್ರಕಾರಕ್ಕೂ ದೇವರೇ ಮೂಲಸೆಲೆ, ಸ್ಪಷ್ಟವಾಗಿ ತಿಳಿಯದ ದೇವರ ಸ್ವರೂಪ ಎಷ್ಟೋ ಕಲಾನವೀನತೆಗೆ ದಾರಿಮಾಡಿಕೊಟ್ಟಿದೆ.
ಪಂಪ, ರನ್ನ ,ಕುಮಾರವ್ಯಾಸಾದಿಗಳು ಬರೆದದ್ದೂ ದೇವರ ಕಥೆಯನ್ನೇ, ದಾಸಶ್ರ‍ೇಷ್ಟರು, ಅಕ್ಕ, ಬಸವಣ್ಣಾದಿಗಳು ಹಾಡಿಹೊಗಳಿದ್ದು ದೇವರ ವಿವಿಧ ರೂಪಗಳನ್ನೇ, ಅಜಂತ, ಎಲ್ಲೋರಾಗಳಲ್ಲಿ ಶಿಲೆ ಕಲೆಯಾಗಿದ್ದು ದೇವರ ಮೂರ್ತಿಯ ರೂಪದಲ್ಲಿಯೇ! ಒಂದು ವೇಳೆ ದೇವರೆಂಬ ವಿಚಾರವೇ ಇಲ್ಲದಿದ್ದರೆ ಕಲೆಗೆ ಆಗುತ್ತಿದ್ದ ಹಾನಿ ಅಪಾರ.
ಈ ವ್ಯಾಪಾರೀಕೃತ ಕಾಲದಲ್ಲಿ ದೇವರು ಕೇವಲ ಅಧ್ಯಾತ್ಮಿಕ ಶಕ್ತಿಯಾಗಷ್ಟೇ ಉಳಿಯದೇ ಎಷ್ಟೋ ಜನರ ಉದ್ಯೋಗವಾಗಿದ್ದಾನೆ ಉದಾ: ದೇಶದ ಕೋಟ್ಯಾಂತರ ದೇವಸ್ಥಾನಗಳಲ್ಲಿರುವ ಅರ್ಚಕರ ಹೊಟ್ಟೆಪಾಡಿನ ಪ್ರಶ್ನೆಯೇ ದೇವರು. ಈ ಒಂದು ನಂಬಿಕೆಯನ್ನು ಹಣವಾಗಿ ಪರಿವರ್ತಿಸಿಕೊಳ್ಳಲೇ ಎಷ್ಟೋ ದೇವಸ್ಥಾನಗಳು, ದೇವಸ್ಥಾನ ಸರಪಳಿಗಳು*( ಹೌದು, ಹೋಟೆಲ್ ಉದ್ಯಮದ ಹಾಗೆಯೇ) ಈಗಲೂ ಜನ್ಮತಾಳುತ್ತಿವೆ.ಅದು ತಪ್ಪು ಎಂದು ನಮಗೆ ಅನ್ನಿಸಿದರೂ ಅವರ ಹೊಟ್ಟೇಪಾಡೂ ನಡೆಯಬೇಕೆಂಬುದೂ ಸತ್ಯವಷ್ಟೇ!
ಇನ್ನೂ ಎಷ್ಟೋ ವಿಷಯಗಳಿವೆಯಾದರೂ ಸದ್ಯಕ್ಕೆ ಇಷ್ಟು ಸಾಕೆಂದುಕೊಂಡು ಒಂದು ಪೂರ್ಣವಿರಾಮವನ್ನಿಡುತ್ತಿದ್ದೇನೆ.

ಟಿಪ್ಪಣಿ:
೧. * - ಒಂದು ಈ ತರಹದ ಸರಪಳಿಯ ಹೆಸರನ್ನು ಬರೆಯುವ ಬಯಕೆಯನ್ನು ಸುಮ್ಮನೇ ಅದುಮಿಡುತ್ತಿದ್ದೇನೆ. :-|
೨.ಈ ಲೇಖನದ ಅರ್ಥ ನಾನು ಆಸ್ತಿಕ ಎಂದಾಗಲೀ ನಾಸ್ತಿಕ ಎಂದಾಗಲೀ ಅಲ್ಲ.