ಒಂದು ಬೇಸರದ ಸಂಜೆ ಮೌನವು ಮಾತನಾಡಲು ವಿಫಲವಾದಾಗ, ಮಾತನಾಡಿದ್ದು ಕಾವ್ಯ.ಓದಿ ನೋಡಿ. ಕಾಲ್ಪನಿಕ ವಸ್ತುವಿಗೆ ನೈಜದ ಲೇಪನ. ಮದುವೆಯಾಗಿ ಒಂದಿಷ್ಟು ವರ್ಷಗಳು ಕಳೆದ ಮೇಲೆ, ಒಂದು ಸಂಜೆಯ ಹೊತ್ತು, ಮನೆಯ ಅಂಗಳದಲದಲ್ಲಿ ಕೂತು ಮಗುವಿನಾಟ ನೋಡುತ್ತಿದ್ದ ಕವಿ, ಆಗತಾನೆ ಬಂದು ಕುಳಿತ ಮಡದಿಯೊಂದಿಗೆ ಮಾತನಾಡುವ ನಾಲ್ಕು ಮಾತುಗಳನ್ನು ಕಾವ್ಯವಾಗಿಸಲು ನೋಡಿದ್ದೇನೆ.
ನನ್ನವಳ ಎದುರಲ್ಲಿ ಸಂಜೆಸಾಯುವ ಸಮಯಕ್ಕೆ
ಕಾಲುಚಾಚಿ ಕುಳಿತಿದ್ದೆ ಮಗುವಿನಾಟ ನೊಡುತಲಿ
ಯಾಕೊ ಮನಸು ಹೇಳಿಬಿಡು ಎಂತು, ಹೇಳಿಬಿಟ್ಟೆ
’ನೀನೆ ನನ್ನ ಜೀವ’ವೆಂದು ನೋಡಿದಳು ವಿಸ್ಮಯದಿ ||ಪ||
"ಒಂದು ಇಳಿಸಂಜೆಯಲ್ಲಿ ನೇಸರ ಬೇಸರಗೊಂಡಿರಲು
ಮೊದಲ ನೋಟದ ಪ್ರೇಮವ ನಂಬಿದೆ ನಿನ್ನ ನೋಡಿ
ಸುಳಿಮಿಂಚೊಂದು ಹೊಕ್ಕಿತ್ತು ಮೈಮನದೊಳಗೆಲ್ಲಾ
ಸುಳಿವಿನಿತು ಇಲ್ಲದೆ ಬಿದ್ದಿದ್ದೆ ಪ್ರೇಮದಲಿ ಹಾಡುಹಗಲೇ" ||೧||
"ಅತಿಯಾಗಿ ಶೃತಿಯ ಮೀರಿ ಹಾಡತೊಡಗಿತ್ತು ಹೃದಯ
ಇಹ ಮರೆತಿತ್ತು, ಪರವು ತೆರೆದಿತ್ತು ಎಲ್ಲವೂ ನಿನ್ನ ದಯ
ನಿನ್ನ ಸನ್ನಿಧಾನದ ಸವಿಯವಕಾಶಕೆ ಕಾತರಿಸಿದೆ ಸಖಿ"
"ತಿಳಿಯದೇನಾದರೂ ಹೇಳಿರಲ್ಲಾ"ಎಂದು ನಕ್ಕುಬಿಟ್ಟಳಾಕೆ ||೨||
ಪರಿತಪನೆ ಅಂತಿರಲು ಆರಾಧನೆ ಮಿತಿ ಮೀರುತಿರಲು,
"ಪ್ರೀತಿಸುವೆ ಎನ್ನಲು ತಡವರಿಸಿದೆ ನಾ ಮಾತು ಬರದೆ!"
"ತಡವರಿಸಿದಡೇನು, ಒಪ್ಪಲಿಲ್ಲವೆ ನಾನು ಬಾಯಿ ಮುಚ್ಚಿ"
ಉತ್ತರವ ಕೊಟ್ಟಳಾಕೆ ಪ್ರಶ್ನೆ ಮರೆಸುವ ತನ್ನ ಶೈಲಿಯಲ್ಲಿ ||೩||
ಜಗಳವಿತ್ತೆ ನಿನ್ನ ಜೊತೆ, ಸೋತಿದ್ದೆನಲ್ಲಾ ಮೊದಲದಿನವೇ
ಜಿಗಿದಿದ್ದೆ ನಾ ಅನಂತದ ಅಂಬರಕೆ ನೀ ಒಪ್ಪಿದಂದೇ
ಅಂದಿನಿಂದಲೂ ಹಿಂದಿಗಿಂತಲೂ ಇಂದು; ಮುಂದೂ
ಬಯಸಿದ್ದು ನಿನ್ನನ್ನೇ ತಾನೇ ಎಂದಿಗೂ ಎಂದೆಂದಿಗೂ ||೪||
No comments:
Post a Comment