ಚಿತ್ರಕೃಪೆ: ಅಂತರ್ಜಾಲ |
ಅಮ್ಮ ಹೇಳಿದ ಇವರು ಕೊಟ್ಟ ಉತ್ತರವಲ್ಲ ನನಗೆ ಅಚ್ಚರಿಯೆನಿಸಿದ್ದು, ಹಾಗೆ ಅವರು ಹೇಳದೇ ಹೋಗಿದ್ದರೇ ಆಶ್ಚರ್ಯವಾಗುತ್ತಿತ್ತೇನೋ. ಈ ೨೨ ವರ್ಷಗಳಲ್ಲಿ ಮನೆ ಎಂದರೆ ಹೀಗೆ ಇತ್ತು, ಅಪ್ಪ ಅಮ್ಮ ಬೆಳಿಗ್ಗೆಯೆಲ್ಲ ಶಾಲೆಯಲ್ಲಿ ಇರುವುದು, ಸಂಜೆಯಾಗುವ ಮುಂಚೆ ಅಮ್ಮ ಬಂದು ತಿಂಡಿ ಏನಾದರೂ ಕೊಡುವುದು, ಅದು ತಿಂದು ಜೀರ್ಣವಾಗುವ ಹೊತ್ತಿಗೆ ಸೂಅರ್ಯ ಮುಳುಗುವ ಸಮಯದಲ್ಲಿ ಅಪ್ಪ ಮನೆಗೆ ಬರುವುದು, ಅಲ್ಲಿಯವೆರೆಗಿದ್ದ ಸ್ವೇಚ್ಚೆ ಬರೀ ಸ್ವಾತಂತ್ರ್ಯಕ್ಕೆ ಮಿತಿಯಾಗುವುದು,ಪ್ರತೀ ಬುಧವಾರ ಅವರು ಶಾಲೆಯಿಂದ ಬರುವಾಗ ಸಂತೆಗೆ ಹೋಗಿ ಚೀಲದ ತುಂಬಾ ತರಕಾರಿ ತರುವುದು,ಚಿಕ್ಕವನಾಗಿದ್ದಾಗ ಚೀಲದ ತುಂಬ ತರಕಾರಿ ತರದಿದ್ದರೆ ನಾನು ಮಾಡುತ್ತಿದ್ದ ಗಲಾಟೆಯನ್ನು ನೆನಪಿಸುವುದು, ವೀಕೆಂಡ್ ಬಂತೆಂದರೆ ಅಪ್ಪ ಊರಿಗೆ(ಕರ್ಕಿಗೆ, ನಮ್ಮ ನಿಜವಾದ ನೇಟಿವ್) ಹೋಗುವುದು, ಬರುವಾಗ ಏನಾದರೂ ತಿಂಡಿಯನ್ನು ತರುವುದು.ಅದಕ್ಕಾಗಿ ಕಾತರದಿಂದ ಕಾಯುವುದು. ಇವೆಲ್ಲಾ ಮುಗಿದು ಹೋಗುತ್ತದೆಯೇ ಇನ್ನು? ಮತ್ತೆ ಸಿಗಲಾರೆವೇ ಈ ರೊಟೀನ್ ಬೋರಿಂಗ್ ಕ್ಷಣಗಳು?
ಅಪ್ಪನ ಗುರುತಿರುವುದೇ ಹಾಗೆ, ರಾಮ ಮಾಸ್ತರು ಎಂದು, ಆರ್. ಜಿ. ಹೆಗ್ಡೆ ಮೇಷ್ಟ್ರು ಎಂದು. ಶಿಕ್ಷಕರಲ್ಲದ ಬರೀ 'ರಾಮ ಹೆಗಡೆ'ಯವರನ್ನು ಎಷ್ಟು ಜನ ಬಲ್ಲರೋ ನಾನು ತಿಳಿಯೆ. ನಾಲ್ಕು ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಂತೆ ಆಗಿದ್ದ ಕುಟುಂಬದ ಅಪ್ಪ ಮುಂದೆ ಶಿಕ್ಷಕರಾಗಿ ಮಕ್ಕಳಿಬ್ಬರನ್ನೂ ಇಂಜಿನಿಯರಿಂಗ್ ಓದಿಸಿಬಿಡುತ್ತಾರೆ ಎಂದರೆ ಉಳಿದಿವರಿಗಿರಲಿ ಸ್ವತಃ ಅವರ ತಾಯಿಗೆ ನಂಬಲಾಗುತ್ತಿರಲಿಲ್ಲವೇನೋ, ಆಗ. ಆದರೆ ಅವರಿಗೆ ಒಂದು ಗುರಿಯಿತ್ತು, ಸಾಧಿಸೋ ಛಲವಿತ್ತು, ಸಾಧಿಸಲೇಬೇಕಾದ ಅವಶ್ಯಕತೆಯಿತ್ತು, ಹೊರಲೇಬೇಕಾದ ಹಿರಿಮಗನ ಜವಾಬ್ದಾರಿಯಿತ್ತು, ಎಲ್ಲಕ್ಕಿಂತ ಮಿಗಿಲಾಗಿ ಆ ಪ್ರತಿಭೆಯಿತ್ತು. ಕೈಯ್ಯಲ್ಲಿ ನಯಾಪೈಸೆ ದುಡ್ಡಿರಲಿಲ್ಲ, ಅಕ್ಷರಶಃ. ಬದುಕಿಗೆ ಆಧಾರವಾಗಿ, ಮನೆಯಲ್ಲಿ ಒಂದು ಎಮ್ಮೆಯಿತ್ತು. ಹಾಲು ಕರೆದು ಮಾರುವ ಕೆಲಸವನ್ನು ಮಾಡಿದರು, ಅಡಿಗೆಯನ್ನು ಕಲಿತು ಜನಮೆಚ್ಚುವ ಹಾಗೆ ಮಾಡಿದರು. (ಈಗಲೂ ಸುತ್ತಮುತ್ತಲ ಪ್ರದೇಶದಲ್ಲಿ ಅನ್ನದ ಕೇಸರೀಬಾತಿಗೆ ಹದ ಹಾಕಲು ರಾಮ ಮಾಸ್ತರೇ ಬೇಕು.) ಬೀದಿದೀಪದಲ್ಲಿ ಓದುವುದೊಂದನ್ನು ತಪ್ಪಿಸಿಕೊಂಡರು, ಕೇರಿಯಲ್ಲೆಲ್ಲೂ ಬೀದಿದೀಪವೇ ಇರದೇ ಹೋದರೆ ಅವರಾದರೂ ಹೇಗೆ ಬೀದಿದೀಪದಲ್ಲಿ ಓದಿಯಾರು. ಏನೆ ಇರಲಿ, ನಿಜವಾಗಿಯೂ ಬಹಳವೆಂದರೆ ಬಹಳವೇ ಕಷ್ಟಪಟ್ಟಿದ್ದರು ಅಪ್ಪ ಆಗ. ರಾಮಣ್ಣನ ಮಗ ಎಂಬ ಒಂದೇ ಕಾರಣಕ್ಕೆ ಏನನ್ನಾದರೂ ಮಾಡಬಲ್ಲ ಈತ ಎಂದು ಕರ್ಕಿಯಲ್ಲಿ ನನ್ನ ಹಿಂದೆಯೇ ಜನ ಮಾತನಾಡುವುದನ್ನು ನಾನು ಕೇಳಿದ್ದೇನೆ
ಅದೆಲ್ಲ ಬಿಡಿ, ಅಪ್ಪ ಇನ್ನು ಶಾಲೆಗೆ ಹೋಗುವುದಿಲ್ಲ ಎಂಬ ಸರಳಸತ್ಯವನ್ನು ನನ್ನಿಂದ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಇನ್ನು ಏನು ಮಾಡಬಹುದು, ಎಂದೂ ಟಿ. ವಿ. ನೋಡಿದವರಲ್ಲ(ವಾರ್ತೆಗಳನ್ನು ಬಿಟ್ಟರೆ), ಸುಮ್ಮನೇ ಕುಳಿತು ಪಟ್ಟಂಗ ಹೊಡೆದವರಲ್ಲ, ಸಮಯ ಕೊಲ್ಲಲು ಕಾಫಿ, ಟೀಯನ್ನೋ ಎಲೆ ಅಡಿಕೆಯನ್ನೋ ತಿಂದವರಲ್ಲ, ಆಚೀಚೆ ಮನೆಯವರ ಬಳಿಯೂ ಅವಶ್ಯಕತೆಗಿಂತ ಹೆಚ್ಚು ಮಾತನಾಡಿದವರಲ್ಲ, ಕಥೆ ಕಾದಂಬರಿಯನ್ನು ಓದಿದ ಅಭ್ಯಾಸವಿಲ್ಲ. ಹೇಗೆ ಸಮಯ ಹೋಗುತ್ತಿತ್ತು ಅವರಿಗೆ? ಕೆಲಸ, ಕೆಲಸ, ಕೆಲಸ. ಒಂದಲ್ಲ ಒಂದು ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡು ಬಿಸಿಯಾಗಿದ್ದ ಜೀವವದು. ಶಾಲೆಯಿಂದ ಬರುವುದೇ ತಡವಾಗಿ, ಬಂದ ಮೇಲೂ ಸುಮ್ಮನೇ ಕೂತವರಲ್ಲ. ಪ್ರತೀ ಸಂಜೆಯಿಡೀ ಮಾಡುವಂತಹ ಏನಾದರೂ ಕೆಲಸವನ್ನು ದಿನವೂ ತಲೆಯಲ್ಲಿ ಇಟ್ಟುಕೊಂಡೇ ಇರುತ್ತಿದ್ದರು. ಆದರೆ ಇನ್ನು ಮುಂದೆ? ಏನೋ ಗೊತ್ತಿಲ್ಲ. ಜೀವನದಲ್ಲಿ ಏನೇನನ್ನೋ ಕಂಡಿರುವವರಿಗೆ ನಿವೃತ್ತ ಜೀವನಕ್ಕೆ ಹೊಂದಿಕೊಳ್ಳುವುದೇನೂ ದೊಡ್ಡ ವಿಷಯವಾಗದಿರಬಹುದು, ಆದರೆ ಮನೆಯಲ್ಲಿ ನಮಗೆ ಅದು ಒಂಥರಾ ಕಲ್ಪನೆಗೆ ದಕ್ಕದ್ದು, ಸದ್ಯದ ಮಟ್ಟಿಗೆ.
ಏನೇ ಆಗಲೀ, ಅಪ್ಪ ನಿವೃತ್ತರಾಗುವುದಂತೂ ನಿಜ. ಈಗ ನಮ್ಮ ಬಳಿಯಿರುವ ಒಂದೇ ಆಯ್ಕೆ ಅದಕ್ಕೆ ಹೊಂದಿಕೊಳ್ಳುವುದು. ಇಲ್ಲಿಯವರೆಗಂತೂ ಅವರದ್ದೇ ಎಲ್ಲಾ ಜವಾಬ್ದಾರಿಯಿತ್ತು, ಇನ್ನು ಮುಂದೆ ಸ್ವಲ್ಪವಾದರೂ ತೆಗೆದುಕೊಳ್ಳಬೇಕೆಂದು ನಿರ್ಧರಿಸುತ್ತಾ ಈ ಅಂಕಣವನ್ನು ಮುಗಿಸುತ್ತಿದ್ದೇನೆ.
ನಿಮ್ಮ ಬಗ್ಗೆ ಬರೆದದ್ದು ಇಷ್ಟವಾಯಿತು. ಸರಳ, ಸಹಜ ಬರೆಹ. ಮುಂದುವರೆಸಿರಿ. ಚೆನ್ನಾಗಿದೆ ಬರವಣಿಗೆ :)
ReplyDelete