Tuesday, 9 June 2015

ಶ್ರೀನಿವಾಸ


ಗೃಹಪ್ರವೇಶದ ಹಿಂದಿನ ದಿನ
ಗೃಹಪ್ರವೇಶದ ವಾರ್ಷಿಕೋತ್ಸವದ ದಿನ ಹಾಕೋಣ ಎಂದು ಬರೆಯಲಾರಂಭಿಸಿದ್ದು, ಅಂತೂ ಇಂತೂ ಇಂದು ಪೂರ್ತಿಗೊಳಿಸಿದ್ದೇನೆ ಒಂದು ತಿಂಗಳ ನಂತರ. ನನ್ನ ಉದಾಸೀನತೆಗೆ ಬಯ್ದುಕೊಂಡು ಓದಿಕೊಳ್ಳಿ. :)

ಅದು ಬಹಳ ಕಷ್ಟ ಕಂಡು ಬೆಳೆದಿದ್ದ ಒಬ್ಬ ಮಾಸ್ತರರ ಬಲುದೊಡ್ಡ ಕನಸು, ಅವರ ಹೆಂಡತಿಯ ಪಾಲಿಗೆ ಹೆಮ್ಮೆಯ ನನಸು, ಅವರಿಬ್ಬರು ಮಕ್ಕಳ ಪಾಲಿಗೆ ಅದು ಅಪ್ಪನ ಬೆವರಿನ ಮೂರ್ತರೂಪ, ಅವರ ಅಕ್ಕ ಅಮ್ಮನವರ ಪಾಲಿಗೆ ಬದಲಾದ ವಾಸಸ್ಥಾನ, ಅದೇ ನಮ್ಮ ಮನೆ, ’ಶ್ರೀನಿವಾಸ’. ಮನೆಯ ಗೃಹಪ್ರವೇಶವಾಗಿ ಬರೋಬ್ಬರಿ ೭ ವರ್ಷಗಳಾದವು, ಆದರೂ ನಮ್ಮ ಪಾಲಿಗೆ ಇದು ಹೊಸಮನೆಯೇ.

೮೦-೯೦ರ ದಶಕದ ಪ್ರತೀ ಉದ್ಯೋಗಿಯ ಕನಸದು, ಸ್ವಂತ ಮನೆಯೊಂದನ್ನು ಕಟ್ಟಿಸುವುದು. ಇದ್ದ ಮನೆ ಅಷ್ಟು
ಹಾಲುಕ್ಕಿಸಿದ ಖುಷಿಯಲ್ಲಿ ಅಮ್ಮ
ಗಟ್ಟಿಯಾಗಿರದ, ಬಹಳ ಹಳೆಯ ಮನೆಯಾಗಿದ್ದರಿಂದ ಈ ಆಸೆ ಅಪ್ಪನ ತಲೆಯಲ್ಲಿ ಮತ್ತೂ ಪ್ರಬಲವಾಗಿರಬೇಕು. ಅಪ್ಪನ ತಲೆಯಲ್ಲಿ ಹೊಸಮನೆ ಕಟ್ಟಿಸುವ ಯೋಚನೆ ತುಂಬಾ ಮೊದಲಿಂದಲೇ ಇತ್ತಿರಬೇಕು. ಮದುವೆಯಾಗುವ ಸಮಯದಿಂದಲೇ ಮನೆ ಕಟ್ಟಬೇಕು ಎಂಬ ಯೋಚನೆಯಿತ್ತು ಎಂದು ಅಮ್ಮ ಹೇಳಿದ ನೆನಪು. ದಾಯಾದಿ ಚಿಕ್ಕಮ್ಮನ ಜೊತೆಗಿನ ಮನೆ ಜಾಗದ ಬಗೆಗಿನ ಕೋರ್ಟ್ ಕೇಸು, ಇಬ್ಬರು ಮಕ್ಕಳ ವಿಧ್ಯಾಭ್ಯಾಸ, ಮನೆ ಕಟ್ಟಬೇಕೆಂದಿದ್ದ ಕರ್ಕಿಯಿಂದ ೧೦೦ ಕಿ.ಮೀ. ದೂರದಲ್ಲಿದ್ದ ಕೆಲಸ, ಹೀಗೇ ಅನೇಕ ಕಾರಣಗಳಿಂದ ಮನೆ ಕಟ್ಟುವ ಯೋಜನೆ ೨೦೦೫ರವರೆಗೂ ಮುಂದೆ ಹಾಕಲ್ಪಡುತ್ತಾ ಬಂತು.

ಅಂತೂ ಮನೆ ಕಟ್ಟುವ ಯೋಗ ಬಂದಿದ್ದು ನಾನು ಹತ್ತನೇ ಕ್ಲಾಸಿನಲ್ಲಿದ್ದಾಗಲೇ, ಎಂದರೆ ಅಪ್ಪ-ಅಮ್ಮನ ಮದುವೆಯಾಗಿ
ತುಳಸಿಪೂಜೆಯ ಕಾರ್ಯಕ್ರಮ, ಅಮ್ಮ, ಅಪ್ಪ, ಭಟ್ರು
೨೩ ವರ್ಷಗಳ ನಂತರವೇ. ಇಷ್ಟು ತಡವಾಗಿ ಶುರುವಾದ ಮನೆ ಕಟ್ಟಾಣ, ತೆಗೆದುಕೊಂಡಿದ್ದು ಬರೋಬ್ಬರಿ ಎರಡು ವರ್ಷಗಳನ್ನು, ಬಹುಶಃ ಅದಕ್ಕಿಂತಲೂ ಹೆಚ್ಚು ಸಮಯವನ್ನು. ಅಪ್ಪ ಪ್ರತೀ ವಾರವೂ, ಕೆಲವೊಮ್ಮೆ ಪ್ರತೀ ದಿನವೂ ಮಲೆನಾಡಿನ ಸಿದ್ದಾಪುರದಿಂದ ಕರಾವಳಿಯ ಹೊನ್ನಾವರದ ಕರ್ಕಿಗೆ ಮನೆ ಕಟ್ಟಿಸಲೋಸುಗ ತಿರುಗಾಡಿದ್ದೇನೂ ಕಡಿಮೆ ಸಾಹಸವಲ್ಲ, ಆಚಾರಿಗೆ ಮರದ ಸಾಮಾನು ಬೇಕೆಂದೋ, ಮರದ ತುಂಡುಗಳು ಕಡಿಮೆ ಬಿದ್ದವೆಂದೋ, ಗಾರೆ ಕೆಲಸದವರಿಗೆ ದುಡ್ಡು ಕೊಡಬೇಕಾಗಿದ್ದರಿಂದಲೋ, ಟೈಲ್ಸ್ ಹಾಕುವವನು ಮೊದಲು ಒಪ್ಪಿದ್ದ ಬಣ್ಣವನ್ನು ಬಿಟ್ಟು ಬೇರಾವುದನ್ನೋ ಹಾಕಲು ಹವಣಿಸುತ್ತಿದ್ದಾನೆಂಬ ಹೆದರಿಕೆಗೋ, ನೀರಿನ ಪೈಪ್ ಕೆಲಸ ಮಾಡುತ್ತಿದ್ದ ಹನುಮಂತ ಎರಡು ವಾರದಿಂದ ಪತ್ತೆಯಿಲ್ಲ ಎಂಬ ಗಾಬರಿಗೋ, ಹೀಗೇ ಸಾವಿರ ಕಾರಣಗಳಿಗೆ ಅಪ್ಪ ಓಡಾಡಿದ್ದಿದೆ. ಅಪ್ಪನ ಈ ಶ್ರಮಕ್ಕೆ ಹೇಳಿ ಮುಗಿಸಲಾರದಷ್ಟು ಕಾರಣಗಳಿದ್ದವು, ಅವಶ್ಯಕತೆಗಳಿದ್ದವು, ಘಟ್ಟದ ದಾರಿಯಲ್ಲಿ ವಾಂತಿ ಬರುವಂತಾದರೂ ವಾರಕ್ಕೆ ಆರು ಬಾರಿ ಅದೇ ದಾರಿಯಲ್ಲಿ ತಿರುಗಿದ/ತಿರುಗಬೇಕಾಗಿದ್ದ ಜರೂರತ್ತುಗಳಿದ್ದವು. ನಾನು ಪಿ. ಯು. ಗೆ ಉಜಿರೆಗೆ ಹೋಗುವಾಗ ನಮ್ಮ ಮನೆಯ ನಾಣಜ್ಜನ ಹಿತ್ತಿಲಲ್ಲಿ ಪಾಯ ಹಾಕುತ್ತಿದ್ದಿದ್ದುದು ನೆನಪಿದೆ, ನಾನು ಪಿ.ಯು ಮುಗಿಸುವ ಹೊತ್ತಿಗೆ ಅಪ್ಪ ಕಟ್ಟಿ ನಿಲ್ಲಿಸಿಬಿಟ್ಟಿದ್ದರು ನಮ್ಮ ಹೆಮ್ಮೆಯ ಚಂದದ ಮನೆಯನ್ನು.

ಈಗಲೂ ನಮ್ಮ ಸಂಬಂಧಿಕರಲ್ಲಿ ಇಷ್ಟು ದೊಡ್ಡ ಮನೆಯಾಕೆ ಕಟ್ಟಿಸಿದರು ಎಂಬುದರ ಬಗ್ಗೆ ಪ್ರಶ್ನೆಗಳಿವೆ, ಗೊಂದಲಗಳಿವೆ. ಸ್ವಲ್ಪ ಮಟ್ಟಿಗೆ ನನಗೂ ಇದೆ. ಆದರೆ ಪ್ರತೀಸಲ ನನಗೆ ನಮ್ಮ ಮನೆಯನ್ನು ಕಂಡಾಗ, ಒಳಹೊಕ್ಕಾಗ, ತಿರುಗಾಡಿದಾಗ
ಶ್ರೀನಿವಾಸ - ಹಿಂದಿನಿಂದ 
ಕಾಣುವುದು, ಅನುಭವಕ್ಕೆ ಸಿಗುವುದು ಬರೀ ಮನೆಯಲ್ಲ, ನಮ್ಮ ಮನೆಯೆಂಬ ಆಪ್ತ ಭಾವವಷ್ಟೇ ಅಲ್ಲ, ಇದು ಅಮ್ಮನ ತ್ಯಾಗ, ಅಪ್ಪನ ಬೆವರಿನ ರೂಪ ಎಂಬ ದೊಡ್ಡ ಗೌರವ ಅದು,  ಕಳೆದ ವರ್ಷ ಅಮ್ಮನ ನಿವೃತ್ತಿ ಆದ ಮೇಲೆ ಈಗ ಸಂಪೂರ್ಣವಾಗಿ  ಇಲ್ಲಿಯೇ ಇರುತ್ತಿದ್ದಾರೆ, ಮೊದಲಿನ ಹಾಗೆ ವರ್ಷದ ಅರ್ಧಕಾಲ ಸಿದ್ದಪುರದಲ್ಲಿರುವ ಅವಶ್ಯಕತೆ ಇಲ್ಲ ಅಪ್ಪ ಅಮ್ಮ ಇಬ್ಬರಿಗೂ. ಅಂತೂ ೬೦ ವರ್ಷದ ಮೇಲೆ ಸ್ವಂತ ಮನೆಯಲ್ಲಿ ಇರುವ ಯೋಗ ಬಂದಿದೆ ಅವರಿಬ್ಬರಿಗೂ. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿರುವ ನಾನು, ಅಕ್ಕ ಇಬ್ಬರೂ ಆಗಾಗ ಭೇಟಿ ಕೊಡುವ ವಿಸಿಟರ್ಸ್ ಆಗಿದ್ದೇವೆ ಎಂಬುದಷ್ಟೇ ನಮ್ಮ ಮನೆಯ ಕೊರಗು. 

3 comments:

  1. ಮಲೆನಾಡಿಗರ ಮೂಲ ಭಾವ ಕಣೋ ಅದು; ಮನಸಿನಂತೆಯೇ ಮನೆಯೂ ವಿಶಾಲವಾಗಿ, ಚೊಕ್ಕಟವಾಗಿರಬೇಕೆಂಬುದು...
    ನಲಿವಿರಲಿ - ಮನೆಯಲ್ಲೂ, ಮನದಲ್ಲೂ...
    ಶುಭಾಶಯಗಳು...❤

    ReplyDelete
    Replies
    1. ವತ್ಸಾ,

      ಅದು ನಮ್ಮೆಲ್ಲರ ಮೂಲಸ್ವಭಾವವೇ. ಪೂರ್ತಿಯಾಗಿ ಒಪ್ಪಿಕೊಳ್ಳುತ್ತೇನೆ. ಆದರೆ ಅಪ್ಪ ಅಷ್ಟು ದೊಡ್ಡ ಕನಸು ಕಾಣುತ್ತಾರೆಂದು, ಅದನ್ನು ಅದೇ ರೂಪದಲ್ಲಿ ಸಾಕಾರಗೊಳಿಸಿಬಿಡುತ್ತಾರೆ ಎಂಬ ವಿಷಯ ಎಲ್ಲರಿಗೂ ಅಶ್ಚರ್ಯವೇ ನನ್ನಲ್ಲೂ ಸ್ವಲ್ಪಮಟ್ಟಿನ ವಿಸ್ಮಯವಿತ್ತು, ಒಂದು ಬೆರಗಿತ್ತು, ಇಂದಿಗೂ ಅದರಿಂದ ಸಂಪೂರ್ಣವಾಗಿ ಹೊರಬಂದಿಲ್ಲ ನಾನು.

      ಹೃತ್ಪೂರ್ವಕ ಧನ್ಯವಾದಗಳು, ಶುಭಾಶಯಗಳಿಗೆ, ಚಂದದ ಕಮೆಂಟಿಗೆ. ಖುಷಿ ಆಯ್ತು ಕಣೋ. ಬರ್ತಾ ಇರು. :)

      Delete
  2. ಧನ್ಯವಾದಗಳು ಹೇಮರಾಜ್ ಅವರೇ. ನನ್ನ ಬ್ಲಾಗಿಗೆ ಬಂದಿದ್ದು, ಇಷ್ಟಪಟ್ಟಿದ್ದು ಖುಷಿ ಆಯ್ತು :) ಬರುತ್ತಿರಿ.

    ReplyDelete