Thursday, 10 April 2014

ಹಂಪಿ - ನಾನು ಕಂಡಂತೆ

ಹಂಪಿ, ಮುಸಲರ ಧಾಳಿಯ ವಿರುದ್ಧ ದಕ್ಷಿಣ ಭಾರತಕ್ಕೆ ರಕ್ಷೆಯಾಗಿ ನಿಂತ ವಿಜಯನಗರದ ರಾಜರ ರಾಜಧಾನಿಯಾಗಿ ಮೆರೆದ ಜಾಗವಿದು, ಮುತ್ತು-ಹವಳಗಳನ್ನು ಬೀದಿಬದಿಯಲ್ಲಿ ಮಾರಿದ ಸಮೃದ್ಧಿಯ ಸಿರಿವಂತಿಕೆಯ ನೆನಪಾಗಿ ಉಳಿದಿರುವ ಗುರುತಿದು. ಎಂತೆಲ್ಲ ವೈಭವಗಳನ್ನು ಕಂಡು ಮೆರೆದು ಈಗ ಹೃದಯವಿದ್ರಾವಕ ರೀತಿಯಲ್ಲಿ ಭಗ್ನವಾಗಿ ಕುಳಿತು ಮನ ಮರುಗಿಸುವ ವಿಶ್ವ ಪರಂಪರೆ ತಾಣವಿದು. ಹನುಮಂತನ ಜನ್ಮಸ್ಥಳವಾಗಿ, ವಾಲಿ-ಸುಗ್ರೀವರ ಯುದ್ಧಕಣವಾಗಿ, ಶಬರಿ ಶ್ರೀರಾಮಚಂದ್ರನಿಗೆ ಕಾದ ತಾಣವಾಗಿ ಹೀಗೆ ಪುರಾಣವನ್ನು ಹಾಸಿಹೊದ್ದಿರುವ ಪುಣ್ಯಭೂಮಿಯಿದು.

ನಾನು ಚಿಕ್ಕಂದಿನಿಂದಲೂ ನೋಡಬೇಕೆಂದಿದ್ದ ಕೆಲವು ಸ್ಥಳಗಳಲ್ಲಿ ಹಂಪಿ ಒಂದು. ಚಿಕ್ಕಂದಿನಿಂದಲೇ ಇತಿಹಾಸದ ಬಗ್ಗೆ ಒಲವಿದ್ದ ನನಗೆ ಹಂಪಿ ಆಸಕ್ತಿಕರವಾಗಿ ಗೋಚರಿಸಿದ್ದು ಆಶ್ಚರ್ಯವಲ್ಲ. ಎಷ್ಟ್ ದಿನಗಳ ಯೋಚನೆಯ ನಂತರ ಅಂತೂ ಕೊನೆಗೆ ಹಂಪಿಗೆ ಹೋಗುವ ಸುಯೋಗ ಯುಗಾದಿಯ ವಾರಾಂತ್ಯದ(ಮಾರ್ಚ್ ೨೯-೩೦) ರಜೆಯಲ್ಲಿ ಬಂದಿತ್ತು. ಹೋಗುವ ಮೊದಲು ವಿಜಯನಗರದ ಇತಿಹಾಸವನ್ನು ಸ್ವಲ್ಪ ಓದಿದರೆ ಎಷ್ಟರ ಮಟ್ಟಿಗೆ ಇತಿಹಾಸವನ್ನು ಮರೆತಿದ್ದೆ ಎಂಬುದು ನೆನಪಾಗಿತ್ತು.ಹೊರಡುವ ಎರಡು ದಿನಗಳ ಹಿಂದಿನಿಂದಲೇ ಮನದಲ್ಲಿ ಏನೋ ಒಂದು ಸಡಗರ, ಸಂಭ್ರಮ, ಕುತೂಹಲ. ಹೊರಟಿದ್ದು ನಾನು ಮತ್ತು ಗೆಳೆಯರಾದ ಶಶಾಂಕ, ರಾಜೀವ, ನವೀನ ಮತ್ತು ಗುರು ಭಟ್ಟ. ಶುಕ್ರವಾರ ಸಂಜೆ ಕೆಲಸ ಮುಗಿಸಿ ಹೊರಟ ನಮಗೆ ಸಿಕ್ಕಿದ್ದು ಈ. ಕ. ರ. ಸಾ. ಸಂ. ದ ಕೆಂಪು ಬಸ್ಸಿನ ಕೊನೆಯ ಸೀಟು.(ಕೆಂಪು ಬಸ್ಸಿನ ಕೊನೆಯ ಸೀಟಿನ ಪ್ರಯಾಣ ಯಾವುದನ್ನೂ ಅತಿಯಾಗಿ ಪ್ಲಾನ್ ಮಾಡಲು ಹೋಗದ ಬ್ಯಾಚುಲರ್ ಬದುಕಿನ ಭಾಗವದು). ಹೊಸಪೇಟೆಗೆ ಹೋಗಿ ಮುಟ್ಟಿದ್ದು ಬೆಳಗಿನ ಜಾವ ಐದುವರೆಗೆ. ಅಲ್ಲಿಂದ ಹಂಪಿಗೆ ಹೋಗಿ ಒಂದು ವಿರುಪಾಕ್ಷ ದೇವಸ್ಥಾನದ ಹತ್ತಿರ ಒಂದು ರೂಮನ್ನು ಹಿಡಿದು ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ದಿನದ ತಿರುಗಾಟಕ್ಕೆ ಅಣಿಯಾದೆವು.
ಹಂಪಿಯ ಕಲ್ಲಿನ ರಥ 

ಹಂಪಿಯಲ್ಲಿ ಸುತ್ತಮುತ್ತ ತಿರುಗಾಡಲು ಬಾಡಿಗೆ ಸೈಕಲ್, ಬೈಕ್, ರಿಕ್ಷಾಗಳ ವ್ಯವಸ್ಥೆಯಿದೆ. ನದಿಯ ಬಲದಂಡೆಯ ಎಲ್ಲ ಸ್ಥಳಗಳನ್ನು ಒಂದೆ ದಿನ ನೋಡುವ ಯೋಚನೆಯಿದ್ದಿದ್ದರಿಂದ ಹಾಗೂ ಗುರುತು ಪರಿಚಯವಿರದ ಅತಿಸೆಖೆಯ ಸ್ಥಳದಲ್ಲಿ ತಿರುಗಾಡುವುದರೊಳಗೆ ಬಸವಳಿಯುವ ಭಯವಿದ್ದುದರಿಂದ ರಿಕ್ಷಾದಲ್ಲಿ ಹೋಗಲು ನಿಶ್ಚಿಯಿಸಿ ಮೊದಲು ನಾವಿದ್ದ ಜಾಗದಿಂದ ಅತಿದೂರದ ವಿಜಯವಿಠ್ಠಲ ದೇವಸ್ಥಾನಕ್ಕೆ ಹೊರಟೆವು. ಪ್ರಭುದೇವರಾಯ ಕಟ್ಟಿದ ದೇವಸ್ಥಾನಕ್ಕೆ ಮುಖಮಂಟಪ, ಸಂಗೀತ ಮಂಟಪ, ಕಲ್ಲಿನರಥಗಳನ್ನೆಲ್ಲ ಸೇರಿಸಿದ್ದು ಕೃಷ್ಣದೇವರಾಯ. ಎದುರಿನ ಗೋಪುರದ ಒಳಹೊಕ್ಕ ಕೂಡಲೇ ಕಣ್ಣಿಗೆ ಬೀಳುವುದು ಕಲ್ಲಿನರಥ. ಗರುಡನ ಮೂರ್ತಿಯಿರುವ ಈ ರಥ ಏಳು ಕಲ್ಲುಗಳಿಂದ ಮಾಡಿದ್ದಾದರೂ ಏಕಶಿಲಾಕೆತ್ತನೆಯೇನೋ ಎಂಬ ಸಂಶಯ ಬರುವಷ್ಟು ನಾಜೂಕಾಗಿ ಕೆತ್ತಲ್ಪಟ್ಟಿದೆ. ರಥವೆಳೆಯುವ ಕುದುರೆಗಳು ವಿಜಯನಗರದ ಮೇಲಾದ ಧಾಳಿಯಲ್ಲಿ ಮುರಿದು ಹೋಗಿದ್ದು, ಪುರಾತತ್ವ ಇಲಾಖೆಯವರು ಉತ್ಖನನದಲ್ಲಿ ಸಿಕ್ಕ ಎರಡು ಆನೆಯ ಮೂರ್ತಿಗಳನ್ನು ಕುದುರೆಗಳ ಜಾಗದಲ್ಲಿ ನಿಲ್ಲಿಸಿದ್ದಾರೆ. ಬಿಸಿಲು-ಮಳೆಗೆ ಮೈಯ್ಯೊಡ್ಡಿ ನಿಂತ ರಥದ ಬದಿಗಳಲ್ಲಿ ಇಂದಿಗೂ ಅಂದು ಬಳಸಿದ ಕಾಡಿಗೆಯ ಕಪ್ಪು, ಅಲಂಕಾರದ ಹಸಿರು, ಕೆಂಪು ಬಣ್ಣಗಳನ್ನು ಗಮನಿಸಬಹುದು. ರಥದ ಚಕ್ರಗಳು ತುಸು ಸವೆಯಲು ಕಾರಣವಾದ ಪ್ರವಾಸಿಗರ ಸ್ಪರ್ಷದ ಬಗ್ಗೂ, ಕಲೆಯ ಸ್ವರ್ಗವ ಗುರುತಿಸದೇ ಹಂಪಿಯನ್ನು ಧ್ವಂಸ ಮಾಡಿದ ಪಂಚ ಸುಲ್ತಾನರ ಬಗ್ಗೂ ಹೇಸಿಕೆ ಹುಟ್ಟಿಸುತ್ತದೆ ಶಿಥಿಲಾವಸ್ಥೆಗೆ ಬಂದಿರುವ ಶಿಲ್ಪಗಳು.

ಸಂಗೀತ ಮಂಟಪ, ನಾಜೂಕಾಗಿ ಕೆತ್ತಲ್ಪಟ್ಟ ನೃತ್ಯ ಮಂಟಪ

ವಿಜಯ ವಿಠ್ಠಲ ದೇವಸ್ಥಾನದಲ್ಲಿರುವ ಕೃಷ್ಣದೇವರಾಯನ ಶಿಲ್ಪ,
ಯುದ್ಧಕ್ಕೆ ಹೊರಟು ನಿಂತ ಭಂಗಿ
ರಥದ ಮುಂದಕ್ಕೇ ಇರುವುದು ವಿಜಯವಿಠ್ಠಲ ದೇವಸ್ಥಾನ. ಜಗತ್ಪ್ರಸಿದ್ಧ ಸಂಗೀತ ಮಂಟಪ ಈ ದೇವಸ್ಥಾನದ ಭಾಗವೇ. ಪ್ರತೀ ಕಲ್ಲಿನ ಕಂಬವೂ ನಾಲ್ಕು-ಆರು-ಏಳು ಹೀಗೆ ಭಿನ್ನ ಭಿನ್ನ ಸಂಖ್ಯೆಯ ಮರಿಕಂಬಗಳನ್ನು ಹೊಂದಿದ್ದು, ಪ್ರತೀ ಕಂಬ-ಮರಿಕಂಬ ಹೊರಡಿಸುವ ಧ್ವನಿಯೂ ಭಿನ್ನವೇ. ಕೃಷ್ಣದೇವರಾಯನ ಎರಡನೇ ಹೆಂಡತಿ ಚಿನ್ನಾಂಬಿಕೆ ಈ ಮಂಟಪದಲ್ಲಿ ನೃತ್ಯ ಮಾಡುತ್ತಿದ್ದರೆ ಉಳಿದ ಪ್ರಜೆಗಳು ನೋಡದಂತೆ ಮಾಡಲು ಪರದೆ ಹೊದಿಸುತ್ತಿದ್ದರಂತೆ. ಈ ಪರದೆ ಹಾಕಲು ಬಳಸುತ್ತಿದ್ದ ಕೊಂಡಿಗಳನ್ನು, ಅದರ ಮುಖಾಂತರವೇ ಮಳೆಗಾಲದಲ್ಲಿ ನೀರು ಬಿದ್ದು ಹರಿದುಹೋಗುವಂತೆ, ಶ್ರಾವಣದಲ್ಲಿ ದೀಪಾರಾಧನೆಯ ಸಮಯದಲ್ಲಿ ದೀಪ ಹತ್ತಿಸಿಡಲು ಬಳಕೆಯಾಗುವಂತೆ ಕೆತ್ತಲಾಗಿದೆ. ಈಗ ಪುರಾತತ್ವ ಇಲಾಖೆ ಜೀರ್ಣೋದ್ಧಾರ ಮಾಡುತ್ತಿರುವುದರಿಂದ ಹಾಗೂ ಮೊದಲು ಬಂದ ಪ್ರವಾಸಿಗರು ಹೆಚ್ಚು ಶಬ್ದ ಬರಲಿ ಎಂದು ಈ ಕಲ್ಲುಗಳನ್ನು ಕೀಗಳಿಂದ, ಕಲ್ಲುಗಳಿಂದ ಹೊಡೆದು ಶಿಥಿಲಗೊಳಿಸಲಾರಂಭಿಸಿದ್ದರಿಂದ ಈಗ ಈ ಮಂಟಪದ ಒಳಗೆ ಯಾರನ್ನೂ ಬಿಡುತ್ತಿಲ್ಲ.  ಅಷ್ಟರ ಮಟ್ಟಿಗೆ ಅದು ನಮ್ಮ ದುರಂತವೇ. ಇಡೀ ದೇವಸ್ಥಾನದ ಹೊರಗೋಡೆಯ ಮೇಲೆಲ್ಲ ರಾಮ ವನವಾಸಕ್ಕೆ ಹೊರಟದ್ದರಿಂದ ಶ್ರೀರಾಮ ಪಟ್ಟಾಭಿಷೇಕದವರೆಗಿನ ರಾಮಾಯಣದ ವಿವಿಧ ಸನ್ನಿವೇಶಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಆವರಣದಲ್ಲಿರುವ ಎಲ್ಲ
ಮಂಟಪಗಳೂ ಅದ್ಭುತವಾಗಿ ಕೆತ್ತಲ್ಪಟ್ಟಿವೆ ಎಂದಷ್ಟೇ ಹೇಳಿದರೆ ಈ ಸೌಂದರ್ಯಕ್ಕೆ ಅವಮಾನ ಮಾಡಿದಂತೆಯೇ. ಶಬ್ದಗಳಲ್ಲಿ ಎಲ್ಲವನ್ನು ಕಟ್ಟಿಕೊಡಲು ನಾನು ಶಕ್ತನಲ್ಲವೇನೋ? ಗೊತ್ತಿಲ್ಲ. ಈ ದೇವಸ್ಥಾನದ ಎದುರುಗಡೆ, ಸುಮಾರು ೫೦೦-೬೦೦ ಮೀ ದೂರದವರೆಗೆ ದಾರಿಯ ಇಕ್ಕೆಲಗಳಲ್ಲಿಯೂ ಸಾಲಾಗಿ ನಿಲ್ಲಿಸಿದ ಕಲ್ಲಿನ ಮಂಟಪದತಹ ರಚನೆಗಳಿವೆ. ವಿಜಯನಗರದ ಕಾಲದಲ್ಲಿ, ಮುತ್ತು ರತ್ನ ಗಳನ್ನು ಬೀದಿಬದಿ ಮಾರುತ್ತಿದ್ದರು ಎಂದು ಕೇಳಿದ್ದೆವಲ್ಲಾ, ಅದು ಇಲ್ಲಿಯೇ ಎಂದು ಗೈಡ್ ಹೇಳಿದಾಗ ನನ್ನಲ್ಲಿ ಒಂದು ರೋಮಾಂಚನ.
ವಿಜಯ ವಿಠ್ಠಲ ದೇವಸ್ಥಾನದಲ ಎದುರಿರುವ ಕಲ್ಲಿನ ಮಂಟಪಗಳು,
ಬೀದಿಬದಿಯಲ್ಲಿ ಮುತ್ತುರತ್ನಗಳನ್ನು ಮಾರುತ್ತಿದ್ದುದು ಇಲ್ಲಿಯೇ

ವಿಜಯವಿಠ್ಠಲ ದೇವಸ್ಥಾನದ ಹಿಂದೆಯೇ ತುಂಗಭದ್ರಾ ನದಿಗೆ ತಾಗಿ ಪುರಂದರ ಮಂಟಪ ಇದೆ. ಸದ್ಯಕ್ಕೆ ದುರಸ್ತಿ
ತುಲಾಭಾರ ಮಂಟಪ, ವಿಶೇಷ ಸಮಾರಂಭಗಳಲ್ಲಿ
ರಾಜನನ್ನು ಚಿನ್ನದಲ್ಲಿ ತೂಕ ಮಾಡಿ ಅದನ್ನು ಪ್ರಜೆಗಳಿಗೆ ಹಂಚುತ್ತಿದ್ದರಂತೆ
ಮಾಡುತ್ತಿದ್ದಾರಾದ್ದರಿಂದ ನಾವು ಒಳಗೆ ಹೋಗಲಿಲ್ಲ. ಅಲ್ಲಿಯೇ ಪಕ್ಕದಲ್ಲಿ ತುಲಾಭಾರ ಮಂಟಪವಿದೆ. ವಿಜಯ ವಿಠ್ಠಲ ದೇಗುಲದ ಎದುರುಗಡೆ ಸ್ವಲ್ಪ ಮುಂದಕ್ಕೆ ಕುದುರೆಗೊಂಬೆ ಮಂಟಪವಿದೆ. ಎಲ್ಲ ಕಡೆ ನಾಮಫಲಕಗಳನ್ನು ಹಾಕಿಟ್ಟಿದ್ದಾರಾದರೂ ಮತ್ತೇನೂ ಮಾಡಿಲ್ಲ. ನಮ್ಮ ಸಂಸ್ಕೃತಿಯನ್ನು, ನಮ್ಮ ಇತಿಹಾಸವನ್ನು ಹೇಳುವ ಈ ಜಾಗಗಳ ಬಗ್ಗೆ ನಾವು/ ಸರ್ಕಾರ ಇನ್ನೊಂದು ಸ್ವಲ್ಪ ಹೆಚ್ಚು ಜಾಗೃತಿ ತೋರಿಸಬೇಕೇನೋ ಎನ್ನಿಸಿತು. ಹಲವಾರು ಚಿಕ್ಕಚಿಕ್ಕ ದೇವಸ್ಥಾನಗಳ ಬಳಿ ಯಾರೂ ಇರುವುದಿಲ್ಲ, ಯಾರಾದರೂ ದುಷ್ಕರ್ಮಿಗಳು ಅತಿಸುಲಭದಲ್ಲಿ ವಿಕೃತಿ ಮಾಡಬಹುದು. ಅದಕ್ಕೆ ಉದಾಹರಣೆ ತುಲಾಭಾರ ಮಂಟಪದ ಪಕ್ಕಕ್ಕಿರುವ ಗೋಡೆಯ ಮೇಲೆ ಕಾಣಸಿಗುವ ಇಂಗ್ಲೀಷಿನಲ್ಲಿ ಕೆತ್ತಲ್ಪಟ್ಟ ಅಮರಪ್ರೇಮಿಗಳ(ವ್ಯಂಗ್ಯದ ದನಿಯಲ್ಲಿ ಓದಿಕೊಳ್ಳಿ) ಹೆಸರುಗಳು.

ರಾಣಿಯರ ಸ್ನಾನಗೃಹ


ನವರಾತ್ರಿ ಮೈದಾನದ ದೊಡ್ಡ ವೇದಿಕೆ
ವಿಜಯವಿಠ್ಠಲ ದೇವಸ್ಥಾನವನ್ನು ನೋಡಿ ಮುಗಿಸಿ ಬಂದವರು ಮುಂದೆ ಹೋಗಿದ್ದು ರಾಣಿಯ ಸ್ನಾನ ಗೃಹಕ್ಕೆ, ಈಗ ಸ್ನಾನ ಮಾಡಲು ಯಾವ ರಾಣಿಯೂ ಇಲ್ಲ, ಕೊನೆಗೆ ನೀರೂ ಇಲ್ಲ ಈ ಸ್ನಾನಗ್ರಹದಲ್ಲಿ. ಯಾರದರೂ ರಾಜಾತಿಥಿಗಳು ಬಂದಾಗ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದರಂತೆ ವಿಹಾರಕ್ಕೆ ವಿನೋದಕ್ಕೆ ಮತ್ತು ಸ್ನಾನಕ್ಕೆ. ಇದನ್ನು ಮುಗಿಸಿಕೊಂಡು ಹೋಗಿದ್ದು ನವರಾತ್ರಿ ದಿಬ್ಬಕ್ಕೆ. ಎಕರೆಗಟ್ಟಲೇ ದೊಡ್ಡ ಸಮತಟ್ಟಾದ ಮೈದಾನ. ಅದರ ತುಂಬಾ ಚಿಕ್ಕ ಚಿಕ್ಕ ವೇದಿಕೆಗಳು. ಒಂದು ಕಡೆ ಮೂವತ್ತು-ನಲ್ವತ್ತು ಅಡಿ ಎತ್ತರದ ಕಲ್ಲಿನ ವಿಶಾಲವಾದ ವೇದಿಕೆ. ಈಗ ಮೈಸೂರಿನಲ್ಲಿ ಆಗುತ್ತಿರುವ ನವರಾತ್ರಿ(ದಸರಾ) ಉತ್ಸವ ಮೊದಲು ಹಂಪಿಯಲ್ಲಾಗುತ್ತಿತ್ತಂತೆ. ಆಗ ಈ ಮೈದಾನದ ತುಂಬೆಲ್ಲ ಕಾರ್ಯಕ್ರಮಗಳು. ಮುಖ್ಯ ಕಾರ್ಯಕ್ರಮ ಈ
ನವರಾತ್ರಿ ಮೈದಾನದ ಕಲ್ಯಾಣಿ
ದೊಡ್ಡ ವೇದಿಕೆಯ ಮೇಲೆ. ಈ ವೇದಿಕೆಯಲ್ಲಿಯೂ ಸೂಕ್ಷ್ಮ ಸುಂದರ ಕೆತ್ತನೆಗಳನ್ನು ಗಮನಿಸಬಹುದು. ಇದೇ ಮೈದಾನದ ಒಂದು ಬದಿಗೆ ಕಲ್ಯಾಣಿ ಒಂದಿದೆ. ಸಂಪೂರ್ಣವಾಗಿ symmetric ಆಗಿರುವ ಇದೂ ಒಂದು ಆಕರ್ಷಣೆಯ ಕೇಂದ್ರವೇ. ಈ ಮೈದಾನದಲ್ಲಿಯೇ ಒಂದು ಪಿಸುಮಾತಿನ ಕೆಳಮಹಡಿಯಿದೆ, ನೋಡಿದೆವಾದರೂ ನಮಗೆ ಅದರ ಮಹತ್ವ ತಿಳಿಯಲಿಲ್ಲ.

ಇಲ್ಲಿಂದ ಹೊರಬಂದ ಕೂಡಲೇ ಸಿಗುವುದು ಹಜಾರ ರಾಮ ದೇವಸ್ಥಾನ. ಗೋಡೆಯ ಮೆಲೆಲ್ಲ ರಾಮಾಯಣದ ವಿವಿಧ ಚಿತ್ರಗಳನ್ನು ಕೆತ್ತಿರುವುದರಿಂದ ಹಜಾರ ರಾಮ- ಸಾವಿರ ರಾಮರ ದೇಗುಲ ಎಂಬ ಹೆಸರು ಬಂದಿದೆ. ಉಳಿದೆಲ್ಲ ಕೆತ್ತನೆಗಳಿಗಿಂತ ವಿಭಿನ್ನವಾಗಿ ಕಾಣುವ ಈ ದೇಗುಲದ

ಹಜಾರ ರಾಮಚಂದ್ರ ದೇವಸ್ಥಾನದ ಕೆಲವು ಶಿಲ್ಪಗಳು
ಶಿಲ್ಪಗಳು ತಮ್ಮ ಮೇರು ಸೌಂದರ್ಯದಿಂದ ಎದ್ದು ಕಾಣುತ್ತವೆ. ರಾಜಕುಟುಂಬದವರ ಖಾಸಗಿ ದೇಗುಲವಾಗಿದ್ದ ಇದು, ಹಂಪಿಗೆ ಕೇಂದ್ರಬಿಂದುವಿನಂತಹ ಪ್ರದೇಶದಲ್ಲಿದೆ. ಇದರ ಹಿಂದೆಯೇ ಕೃಷ್ಣದೇವರಾಯನ ಅರಮನೆಯಿತ್ತು ಎಂಬ ವದಂತಿ ಇದೆ. (ಪಂಚ ಸುಲ್ತಾನರ ಧಾಳಿಯಲ್ಲಿ ಹಂಪಿಯ ಅರಮನೆಯನ್ನು ಸುಟ್ಟು ಹಾಕುತ್ತಾರೆ. ಯಾರಿಗೂ ಕೃಷ್ಣದೇವರಾಯನ ಅರಮನೆ ಎಲ್ಲಿದೆ ಎಂದು ನಿಖರವಾಗಿ ನಿರ್ಧರಿಸಲಾಗಿಲ್ಲ.)
ಕಮಲ್ ಮಹಲ್

ಹಜಾರ ರಾಮನ ದೇಗುಲ ನೋಡಿ ಬಂದ ನಾವು ಮುಂದೆ ಹೋಗಿದ್ದು ಹಂಪಿಯ ಮತ್ತೊಂದು ಪ್ರಸಿದ್ಧ ಸ್ಮಾರಕ ಕಮಲ್
ಗಜಶಾಲೆ
ಮಹಲ್ ಗೆ. ಸುತ್ತಲೂ ಹುಲ್ಲುಹಾಸಿನಿಂದ ಸುತ್ತುವರೆದಿರುವ ಇದು ನಿಜಕ್ಕೂ ಚಾಯಚಿತ್ರಗ್ರ್ರಹಕರಿಗೆ ಹೇಳಿ ಮಾಡಿಸಿದ ಜಾಗ. ಎಲ್ಲ ಕೋನಗಳೂ ದಿವ್ಯವೇ, ಭವ್ಯವೇ , ದೃಶ್ಯಕಾವ್ಯವೇ. ಕಮಲದ ರೂಪದಲ್ಲಿರುವುದರಿಂದ ಕಮಲ ಮಹಲ್ ಎಂಬ ಹೆಸರು ಬಂದಿದೆ ಎಂದು ಬೇರೆ ಹೇಳಬೇಕೆಂದೇನಿಲ್ಲ. ಎಲ್ಲವನ್ನೂ ಕಲ್ಲಿನಿಂದ ನಿರ್ಮಿಸಲಾಗಿರುವ ಹಂಪಿಯಲ್ಲಿ ಕಮಲ ಮಹಲ್ ಸುಣ್ಣ ಮತ್ತು ಇಟ್ಟಿಗೆಯಿಂದ ಕಟ್ಟಲ್ಪಟ್ಟಿದೆ. ಇದರ ಹಿಂದಿನ ಆವರಣದಲ್ಲಿ ಗಜಶಾಲೆಯಿದೆ. ಕಮಾನಿನ ಆಕಾರದಲ್ಲಿರುವ ಪ್ರತೀ ರಚನೆಯೂ ರಾಜನ/ದೇವರ ಮೆರವಣಿಗೆಯ ರಾಜಾನೆಗಳಿಗೆ ಆಶ್ರಯ ಕೊಟ್ಟಿತ್ತು. ಇದರ ಎದುರಿರುವ ಮೈದಾನದಲ್ಲಿ ಕವಾಯತುಗಳು, ಮೆರವಣಿಗೆಗಳು ನಡೆಯುತ್ತಿದ್ದವಂತೆ. ಕಮಲ್ ಮಹಲ್ ಮತ್ತು ಗಜಶಾಲೆಯ ವಾಸ್ತುಶಿಲ್ಪವು ವಿಜಯನರದ ಶಿಲ್ಪಕಲೆಯ ಮೇಲೆ ಮುಸ್ಲಿ ವಾಸ್ತುಶಿಲ್ಪದ ಪ್ರಭಾವವನ್ನು ನೋಡಬಹುದು.


ಭೂಮ್ಯಾಂತರ್ಗತ ಶಿವ ದೇವಾಲಯ
ಇಲ್ಲಿಂದ ಹೊರಟವರಿಗೆ ಮುಂದೆ ಸಿಕ್ಕಿದ್ದು ಭೂಮ್ಯಾಂತರ್ಗತ ಶಿವ ದೇವಸ್ಥಾನ. ಎದುರಿರುವ ನಂದಿಯ ವಿಗ್ರಹದ ಆಧಾರದ ಮೇಲೆ ಇಲ್ಲೊಂದು ಶಿವ ದೇವಸ್ಥಾನವಿರಬಹುದು ಎಂಬ ಯೋಚನೆ ಬಂದು ಸಿಕ್ಕ ಈ ದೇಗುಲ ಭೂ ಮಟ್ಟಕ್ಕಿಂತ ಕೆಳಗಿದೆ. ಅರ್ಧ ತುಂಬಿಕೊಂಡಿರುವ ನೀರನ್ನು ತೆಗೆಯುವ, ಶಿಥಿಲಗೊಂಡ ದೇಗುಲವನ್ನು ಪುನಃ ನಿಲ್ಲಿಸುವ ಕಾಮಗಾರಿ ವರ್ಷಾನುಗಟ್ಟಲೆಯಿಂದ ನಡೆಯುತ್ತಲೇ ಇದೆ, ಹಾಗೆಂದು ಅಲ್ಲಿಯೇ ಕೆಲಸ ಮಾಡುತ್ತ ಈಗ ನಿವೃತ್ತಿಯ ಪ್ರಾಯಕ್ಕೆ ಬಂದಿರುವ ಓರ್ವ ಕೆಲಸಗಾರರು ಬೇಜಾರಲ್ಲಿ ಹೇಳಿದರೆ ವಿಜಯನಗರದ ರಾಜರ ನಿಟ್ಟುಸಿರು ಕೊರಳಿಗೆ ತಾಗಿದಂತಿತ್ತು.


ನಂತರ ಹೋಗಿದ್ದು ವಿಶ್ವ ಪ್ರಸಿದ್ಧ ಲಕ್ಷ್ಮಿನರಸಿಂಹನ ವಿಗ್ರಹ ನೋಡಲು. ತೊಡೆಯ ಮೇಲೆ ಪತ್ನಿಯನ್ನು ಕೂರಿಸಿಕೊಂಡಿದ್ದ
ಚಿರವಿರಹಿ ಲಕ್ಷ್ಮಿನರಸಿಂಹ 
ನರಸಿಂಹನ ಬಹು ಎತ್ತರದ ವಿಗ್ರಹವಿದು. ಕುಪ್ರಸಿದ್ಧ ಧಾಳಿಯಲ್ಲಿ ಉಳಿದೆಲ್ಲರಿಗಿಂತಲೂ ಹೆಚ್ಚು ಹಾನಿಗೀಡಾಗಿದ್ದು ನಮ್ಮ ಈ ಲಕ್ಷ್ಮಿನರಸಿಂಹನಿಗೆ. ಲಕ್ಷ್ಮಿಯ ವಿಗ್ರಹವನ್ನು ಮುರಿದು ಹಾಕಿದ ಧಾಳಿಕೋರರು ನರಸಿಂಹನ ಕಣ್ಣಲ್ಲಿ ಒಂದು ಅಸಹನೀಯ ವೇದನೆಯನ್ನು ಮೂಡಿಸಿ ಹೋಗಿಬಿಟ್ಟರು. ಪುರಾತತ್ವ ಇಲಾಖೆಯವರು ಅದನ್ನು ಬದಲಾಯಿಸಿದ್ದಾರಾದರೂ ಮೂಲ ದಿವ್ಯ ರೂಪಕ್ಕೆ ತರಲಾದರೂ ಹೇಗೆ ಸಾಧ್ಯವಾದೀತು? ಈ ಮೂರ್ತಿ ಬಹುಕಾಲದವರೆಗೆ ಮನಸ್ಸಲ್ಲೇ ಕಾಡುತ್ತಿರುತ್ತದೆ. ಇದರ ಪಕ್ಕದಲ್ಲೇ ಒಂದು ಬ್ರಹತ್ ಶಿವಲಿಂಗವಿದೆ. ಪ್ರತೀ ಕಲ್ಲೂ ಶಿಲ್ಪವಾಗಿರುವ ಹಂಪಿಯಲ್ಲಿರದಿದ್ದರೆ ಈ ಶಿವಲಿಂಗವೇ ಒಂದು ಪ್ರವಾಸಿ ತಾಣವಾಗುತ್ತಿತ್ತೇನೋ?

ನೂರಾರು ದೇವಸ್ಥಾನಗಳಿರುವ ಹಂಪಿಯಲ್ಲಿ ಇನ್ನೂ ಪೂಜೆ ಆಗುತ್ತಿರುವುದು ಮುಖ್ಯವಾಗಿ ವಿರುಪಾಕ್ಷ ದೇವಾಲಯದಲ್ಲಿ ಮತ್ತು ಉದ್ದಾನ ವೀರಭದ್ರ ದೇವಾಲಯದಲ್ಲಿ. ಉಳಿದೆಲ್ಲ ಕಡೆ ದೇವರ ಮೂರ್ತಿಗಳು ಭಗ್ನವಾಗಿರುವುದರಿಂದ ಈಗ ಪೂಜೆ ನಡೆಯುತ್ತಿಲ್ಲ. ವೀರಭದ್ರ ದೇಗುಲದ ಗೋಪುರದವರೆಗೂ ರಸ್ತೆ ಬಂದು ಕುಳಿತಿದೆ. ಅಷ್ಟೇನೂ ಶಿಲ್ಪಕಲಾ ಮಹತ್ವ ಕಾಣದಾದರೂ(ಇಡೀ ದಿನ ೪೦ ಡಿಗ್ರಿ ಬಿಸಿಲಲ್ಲಿ ತಿರುಗಿದ್ದ ಮನಸ್ಸಿಗೆ ಕಂಡಿಲ್ಲ ಎಂದರೆ ಅದು ನನ್ನ ಸುಸ್ತನ್ನ ಹೇಳುತ್ತದೆಯೇ ವಿನಃ ಸೌಂದರ್ಯರಾಹಿತ್ಯವಿದೆ ಎಂದಲ್ಲ) ಜೀವಂತಿಕೆಯ ದೃಷ್ಟಿಯಿಂದ ಈ ದೇವಸ್ಥಾನ ಮನಸೆಳೆಯುತ್ತದೆ. ಈ ದೇವಾಲಯವನ್ನು ನೋಡಿ ಮುಗಿಸಿದ ಮೇಲೆ ಎಲ್ಲರೂ ಸುಸ್ತಾಗಿದ್ದೆವು. ಹಂಪಿಯ  ಬಗ್ಗೆ ಹೇಳಲೇಬೇಕಾದ ಅಂಶ ಎಂದರೆ ಸೆಕೆ, ಬಾಯಾರಿಕೆ. ಎಷ್ಟು ನೀರು ಕುಡಿದರೂ ಸಾಲದು, ಎಷ್ಟು ನೀರನ್ನು ತಲೆಯ ಮೇಲೆ ಹೊಯ್ದುಕೊಂಡರೂ ಸಾಲದು. ತಾಳಲಾರದ ಸೆಖೆ. ತಲೆಯ ಮೇಲೆ ಒಂದು ಟೊಪ್ಪಿಯನ್ನೂ ಹಾಕದೇ ತಿರುಗಿದ ನಮಗೆ ರೂಮಿಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವ ಅವಶ್ಯಕತೆಯಾಗಿತ್ತು.

ಮೈ ಕೈ ಕಾಲಲ್ಲೆಲ್ಲ ಸುಸ್ತು. ಮನಸ್ಸಲ್ಲಿ ಬತ್ತದ ಉತ್ಸಾಹ. ಸಂಜೆ ಸೂರ್ಯಾಸ್ತಕ್ಕೆ ಮಾತಂಗ ಪರ್ವತ ಹತ್ತುವುದೆಂದು ನಿರ್ಧರಿಸಿ
ಮಾತಂಗ ಪರ್ವತದ ಮೇಲಿಂದ ಸೂರ್ಯಾಸ್ತ
ಬೆಡ್ಡಿನಲ್ಲಿ ಬಿದ್ದವನಿಗೆ ಅದ್ಭುತ ನಿದ್ದೆ, ಆ ಸೆಖೆಯಲ್ಲಿಯೂ(ಫ್ಯಾನ್ ಕೆಳಗೆ ಬಿದ್ದುಕೊಂಡರೂ ಸ್ವಲ್ಪವೂ ತಂಪಾಗದಂತಹ ಸೆಖೆಯಿದೆ). ಎದ್ದು ಹೊರಟಿದ್ದು ಐದೂವರೆಗೆ. ಆಗಲೇ ಸೂರ್ಯಾಸ್ತದ ಲಕ್ಷಣಗಳು ಕಾಣತೊಡಗಿದ್ದವು. ಹೆಚ್ಚು ಕಮ್ಮಿ ಒಂದರ್ಧ ಕಿ.ಮೀ.ಯನ್ನು ದಡಬಡನೇ ನಡೆದು ಮಾತಂಗ ಪರ್ವತವನ್ನು ತಲುಪಿಕೊಂಡ ನಾವು ಹತ್ತಲು ಸುರುಮಾಡಿದೆವು. ಕಲ್ಲೇ ಗುಡ್ಡವಾಗಿ ನಿಂತಿರುವ ಇಲ್ಲಿಂದ ಹಂಪಿಯ ವಿರುಪಾಕ್ಷ ದೇಗುಲ ಸಮುಚ್ಚಯದ ಒಂದು ಪಕ್ಷಿನೋಟ ಸಿಗುತ್ತದೆ. ಇದರ ಮೇಲೂ ಒಂದು ಗುಡಿಯಿದೆಯಾದರೂ ನನಗೆ ನೋಡಲಾಗಲಿಲ್ಲ. :( ಸೂರ್ಯಾಸ್ತದ ಸಮಯದಲ್ಲಿ ಹಂಪಿಯ ಮಾನವ ನಿರ್ಮಿತ ಅದ್ಭುತ ಶಿಲ್ಪಕಲೆಯು ಪ್ರಕೃತಿಯ ಸುಂದರ ಹಿನ್ನೆಲೆಯೊಂದಿಗೆ ಕಂಗೊಳಿಸುತ್ತದೆ. ನೀವು ಹಂಪಿಯ ಸುತ್ತಮುತ್ತಲಿನ ಯಾವುದಾದರೂ ಗುಡ್ಡವನ್ನು ಹತ್ತಿದರೆ ಸುತ್ತೆಲ್ಲ ಕಾಣುವುದು ಬರೀ ಕಲ್ಲಿನ ರಾಶಿಗಳೇ. ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಕಲ್ಲಿನ ರಾಶಿಗಳೇ, ನೀವು ನಿತ್ತಿರುವುದೂ ಒಂದು ಕಲ್ಲಿನ ರಾಶಿಯ ಮೇಲೆಯೇ ಆಗಿರುತ್ತದೆ.

ವಿರುಪಾಕ್ಷ ದೇವಸ್ಥಾನ , ಮುಖ್ಯಬೀದಿ, ಹಂಪಿ
ಮಾತಂಗ ಪರ್ವತವನ್ನು ಇಳಿದು ಬಂದ ನಾವು ಹೋಗಿದ್ದು ಹಂಪಿಯ ಆಕರ್ಷಣೆಯ ಕೇಂದ್ರಬಿಂದುವಾದ, ಕರ್ನಾಟಕದ ಆ ಲೆಕ್ಕದಲ್ಲಿ ಇಡೀ ಭಾರತದಲ್ಲೇ ಅತಿ ಹಳೆಯ (ಪೂಜೆ ನಡೆಯುತ್ತಿರುವ) ದೇವಸ್ಥಾನಗಳಲ್ಲಿ ಒಂದಾದ ವಿರುಪಾಕ್ಷ ದೇವಸ್ಥಾನಕ್ಕೆ. ೭ನೇ ಶತಮಾನದಲ್ಲಿ ಕಟ್ಟಿರಬಹುದೆಂಬ ಅಂದಾಜಿದೆ. ಎಂತಹ ನಾಸ್ತಿಕನ ಬಳಿಯೂ ಒಮ್ಮೆ ಕೈ ಮುಗಿಸಿಕೊಳ್ಳುವ, ದೇವರು ಇದ್ದರೆ ಇಲ್ಲಿಯೇ ಎಲ್ಲೋ ಇರಬಹುದು ಎಂಬ ಭಾವನೆ ಮೂಡಿಸುವ ತಾಕತ್ತು ಈ ದೇವಸ್ಥಾನಕ್ಕಿದೆ. ಎತ್ತರದ ಗೋಪುರ ದಾಟಿ ಒಳಗೆ ಹೋದರೆ ದೊಡ್ಡ ಪ್ರಾಂಗಣ. ನೂರಾರು ಜನ ಕೂತರೂ ಮತ್ತೂ ಖಾಲಿಯೇ ಇದೆ ಎನ್ನಿಸುವಷ್ಟು. ಇದನ್ನು ದಾಟಿ ಒಳಕ್ಕೆ ಹೋದರೆ ಕಲ್ಲಿನ ಮಂಟಪವೊಂದಿದೆ. ಇಲ್ಲಿನ ಕೆತ್ತನೆಗಳೂ ಅದ್ಭುತವಾಗಿದೆ(ಫೋಟೋಗಳಿಲ್ಲ, ಹೆಚ್ಚು ವಿವರಗಳು ಸಿಕ್ಕಿಲ್ಲ, ಆದ್ದರಿಂದ ಬರೀ ಸುಂದರವಾಗಿದೆ ಎಂದಷ್ಟೇ ಹೇಳಲು ಶಕ್ಯ ನಾನು.) ಇಲ್ಲಿ ಪ್ರತಿ ಹೆಜ್ಜೆಗೂ ’ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ’ ಹಾಡು ರಿಂಗಣಿಸುತ್ತದೆ. ತುಂಗಭದ್ರಾ ನದಿಗೆ ತಾಗಿಕೊಂಡಿರುವ ಈ ದೇಗುಲ ಈ ದೇಗುಲದಲ್ಲಿ ಮೂರು ತಲೆಯ ನಂದಿಯಿದೆಯಂತೆ(ನಮಗೆ ನೋಡಲಾಗಲಿಲ್ಲ ಇದನ್ನು, ಮಾಹಿತಿಯಿರದೇ ಇದ್ದುದರಿಂದ), ಇದು ಒಂದು ವಿಚಿತ್ರ, ವಿಶಿಷ್ಟ ಶಿಲ್ಪ ಎಂಬ ಮಾತಿದೆ.

ಇತಿಹಾಸವನ್ನು ಸ್ವಲ್ಪವೇ ಸ್ವಲ್ಪ ಇಷ್ಟ ಪಡುತ್ತೀರಾದರೆ, ಶಿಲ್ಪಕಲೆಗಳನ್ನು ನೋಡುತ್ತಾ ಮೈಮರೆಯಲು ನಿಮಗೆ ಸಾಧ್ಯವಿದೆ ಎಂದಾದರೆ, ಸ್ವಲ್ಪ ಸೆಖೆ ಹೆಚ್ಚಾದರೂ ಉತ್ಸಾಹ ಬತ್ತದು ಎಂಬ ಖಾತರಿ ಇದ್ದರೆ ನೀವು ಹಂಪಿಯನ್ನು ನೋಡಬೇಕು. ವಿಜಯನಗರವೆಂಬ ಸಾಮ್ರಾಜ್ಯ ಸ್ಥಾಪಿತವಾಗಿ, ಬೆಳೆದು, ಮೆರೆದು, ದುರದೃಷ್ಟಕರವಾಗಿ ಅವನತಿ ಹೊಂದಿದ ಗಂಡುಭೂಮಿಯನ್ನು ಮುಟ್ಟಲೇಬೇಕು, ಮುಟ್ಟಿ ನಮಸ್ಕರಿಸಬೇಕು. ಇಲ್ಲಿರುವ ಕಲೆಯ ಸಿರಿವಂತಿಕೆಗೆ ಹೆಮ್ಮೆ ಪಡಬೇಕು, ಭಗ್ನವಾಗಿ ಕುಳಿತ ಶಿಲ್ಪಗಳ ದುರಂತಕ್ಕೆ ಮರುಗಬೇಕು.  ನಾವೂ ಇತಿಹಾಸದ ಭಾಗವಾಗದೇ ಇದ್ದರೆ ಹಾಳು ಕೊಂಪೆಯಾಗಷ್ಟೇ ಪರಿಚಿತವಾಗುವ ಹಂಪಿ, ಇತಿಹಾಸದ ಬಗ್ಗೆ ಸ್ವಲ್ಪ ಕುತೂಹಲ ವಹಿಸಿದರೂ ಸ್ವರ್ಗವೆನಿಸಿಬಿಡುತ್ತದೆ. ಕಲ್ಲೆಲ್ಲವೂ ಶಿಲ್ಪವಾಗಿರುವ ಊರಿದು, ಕೈ ಮುಗಿದು ಒಳಗೆ ಹೋಗಬೇಕು, ಮನಸ್ಸು ಭಾರವಾಗೇ ವಾಪಸ್ಸು ಬರಬೇಕು.
...

Monday, 31 March 2014

ರಮ್ಯಚೈತ್ರಕಾಲ

"ಮೊದಲನೆಯದಾಗಿ ಎಲ್ಲರಿಗೂ ಯುಗಾದಿಯ ಶುಭಾಷಯಗಳು. "

ಚೈತ್ರ ಎಂದರೆ ಯುಗದ ಆದಿ, ಒಂದು ಹೊಸ ಋತುಚಕ್ರದ ಪ್ರಾರಂಭ. ಮನುಷ್ಯರಿಗೆ ಮಾತ್ರವಲ್ಲ, ಪ್ರಕೃತಿಗೆ ಕೂಡ ಇದು ಹೊಸ ವರ್ಷದ ಪ್ರಾರಂಭ. ಚೈತ್ರ ಎಂದರೆ ಹಸಿರು  ಚಿಗುರುವ ಸಮಯ, ಕೊರಡು ಕೊನರುವ ಸಮಯ, ಮಾಗಿಯಲ್ಲಿ ಕಳೆದುಕೊಂಡ ತನ್ನ ಹಸಿರಸಾಮ್ರಾಜ್ಯವನ್ನು ಮರುವಶಪಡಿಸಿಕೊಳ್ಳಲು ಪ್ರಕೃತಿ ಸಡಗರದಿಂದ ತಯಾರಾಗುವ ಸಮಯ. ಮಳೆಗಾಲದಲ್ಲಿ ಎಲ್ಲವೂ ಹಸಿರಿನಿಂದ ನಳನಳಿಸಬಹುದು, ಆದರೆ ಎಲ್ಲಕ್ಕೂ ಒಂದು ಪ್ರಾರಂಭ ಬೇಕಲ್ಲವೇ, ಅಂತಹ ಪ್ರಾರಂಭ ಇರುವುದು ಈ ಚೈತ್ರದಲ್ಲಿ. ನಮ್ಮ ಮನುಜಕುಲದ ’ಯುಗಾದಿ’ಯನ್ನು, ಹೊಸವರ್ಷದ ಹಬ್ಬವನ್ನು ಪ್ರಕೃತಿಯ ಹೊಸಋತುವಿಗೆ ಮೇಳೈಸಿದ ನಮ್ಮ ನಾಡಿನ ಹಿರಿಯರು ಎಷ್ಟು ವೈಚಾರಿಕವಾಗಿ, ವೈಜ್ಞಾನಿಕವಾಗಿ ಮುಂದುವರಿದಿದ್ದರು ಅಲ್ಲವೇ? ಪ್ರಕೃತಿಯ ಜೊತೆಗೇ ಬದುಕಿದ ನಮ್ಮ ಪೂರ್ವಜರು ಪ್ರಕೃತಿಯನ್ನೇ ಕಾಲದಂಡವಾಗಿರಿಸಿಕೊಂಡಿದ್ದು, ಗಿಡಮರಗಳು ಚಿಗುರುವ ಕಾಲವನ್ನೇ ಹೊಸವರ್ಷದ ಆರಂಭವನ್ನಾಗಿ ಸ್ವೀಕರಿಸಿದ್ದು ಒಂದು ಸರಳ, ಮಹಾನ್ ಯೋಚನೆ ಎನಿಸುತ್ತದೆ.

ಬೇಸಗೆ ಎಂದರೆ ಅದೊಂದು ಸುಂದರ ಕಾಲ. ಮಳೆಗಾಲದ ವರುಣನ ಆರ್ಭಟವಾಗಲೀ, ಚಳಿಗಾಲದ ಮೈಕೊರೆಯುವ ಚಳಿಯಾಗಲೀ ಇರದ ಹಿತಕಾಲ(ಇತ್ತೀಚೆಗಿನ ಕಾಲದಲ್ಲಿ ಹೆಚ್ಚುತ್ತಿರುವ, ಅತಿಯಾಗಿ ಹೆಚ್ಚಿರುವ ಬಿಸಿಲಿನ ಪ್ರಭಾವಗಳನ್ನು ಹೊರತುಪಡಿಸಿ). ಮುಂಜಿ, ಮದುವೆ ಇತ್ಯಾದಿ ಶುಭಕಾರ್ಯಗಳಿಗಾಗಿ ಮನೆಯವರೆಲ್ಲ ಕಾದ ಪಕ್ವಕಾಲ. ಯುಗಯುಗಗಳು ಕಳೆದರೂ ಯುಗಾದಿ ಮತ್ತೆ ಬರುತ್ತದೆ, ಹಳೆಯ ನೋವನ್ನು ಮರೆಸಿ ಹೊಸ ಖುಷಿಯನ್ನು ತರುತ್ತದೆ, ಎಂದು ನಂಬಿಕೊಂಡ ಜನರ ಪಾಲಿನ ಶುಭಪರ್ವಕಾಲ. ಬಾಡಿದ ಕೊರಡಿನಲ್ಲಿಯೂ ಕೂಡ ಹೊಸಬಾಳಿನ ಆಸೆಯಿಂದ ಕೊನರುವ ಧನಾತ್ಮಕ ಯೋಚನೆ ಮೂಡುವ ಕಾಲ. ರಜೆಯ ಮಜದ ಆಸೆಗೆ ಅದಕ್ಕಿಂತ ಮೊದಲಿರುವ ವಾರ್ಷಿಕ ಪರೀಕ್ಷೆಗಳೂ ಲೆಕ್ಕವಲ್ಲ ಎಂದು ಎಲ್ಲ ಮಕ್ಕಳೂ ಒಟ್ಟಿಗೇ ಲೆಕ್ಕಹಾಕಿಕೊಂಡುಬಿಡುವ ಸಮಯ ಇದು. ಊರಹೊರಗಿನ ಕವಳಿ, ಮುಳ್ಳುಹಣ್ಣು ಇತ್ಯಾದಿ ಗಿಡ ಮಟ್ಟಿಗಳು ಹಣ್ಣುಗಳನ್ನು ಬಿಟ್ಟುಕೊಂಡು ಊರಪೋರರನ್ನು  ಆಮಂತ್ರಿಸುತ್ತಿವೆಯೇನೋ ಎಂಬಂತೆ ಭಾಸವಾಗುವ ಕಾಲ. ಗ್ರಾಮಗಳಲ್ಲಾಗುವ ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಟೂರ್ನಮೆಂಟುಗಳಿಗೂ,  ದೇವರ ತೇರು, ಊರ ಜಾತ್ರೆ ಇತ್ಯಾದಿ ಸಂಭ್ರಮದ ಆಚರಣೆಗಳಿಗೂ ಸೂಕ್ತಕಾಲ. ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಕಾರ ಬಹುತೇಕ ಮಕ್ಕಳ ಭವಿಷ್ಯ ನಿರ್ಧರಿತವಾಗುವ ಸಾವಿರಾರು ಪ್ರವೇಶ ಪರೀಕ್ಷೆಗಳ, ನೂರಾರು ’ವರ್ಷವಿಡೀ-ಕಲಿತು-ಮೂರು-ಗಂಟೆ-ಕಕ್ಕು’ವ ಪರೀಕ್ಷೆಗಳ ಪರೀಕ್ಷಾಜ್ವರಕಾಲ. ಹುಳಿಕಾಯಿಯ ಮರಕ್ಕೆ ಮಾವಿನಕಾಯಿಗೆ ಕಲ್ಲು ಹೊಡೆಯುವುದರಿಂದ ಹಿಡಿದು ಹಣ್ಣಿಗೆ ಹಾಕಿದ ಈಶಾಡಿ ಹಣ್ಗಾಯಿಗಳನ್ನು ಕದಿಯುವ ತನಕದ ಮಾವಿನ ಹ(ಬ್ಬದ)ಣ್ಣಿನ ಕಾಲ.

ಬೇಸಗೆ ಎಂದರೆ ನೆನಪಾಗುವುದು ಬಾಲ್ಯ. ಅಲ್ಲಿದ್ದ ರಜಾ ಮತ್ತು ಅದರ ಮಜ. ಈಗಲೂ ಬೇಸಗೆ ಎಂದರೆ ನೆನಪಾಗುವುದು ಚಿಕ್ಕಂದಿನಲ್ಲಿ ಪರೀಕ್ಷೆ ಮುಗಿದ ಮೇಲೆ ಒಂದು ದಿನವೂ ತಪ್ಪದಂತೆ ಬೆಳಿಗ್ಗೆಯಿಂದ ಸಂಜೆಯವರೆಗೂ ಆಡುತ್ತಿದ್ದ ಕ್ರಿಕೆಟ್, ಬಾಲ್ ಬ್ಯಾಡ್ಮಿಂಟನ್ ಅಂತಹ ಸ್ಟಾಂಡರ್ಡ್ ಆಟಗಳು, ಗೇರುಬೀಜದ ಬೆಟ್ಟೆ ಆಟ, ಡಬ್ಬಾಡಿಬ್ಬಿಯಂತಹ ಜಾನಪದ ಆಟಗಳು, ರಜೆ ಮುಗಿಯುವ ಹೊತ್ತಿಗೆ ಮಳೆ ಬೀಳದ ಹೊರತು(ರಜೆಯ ಕೊನೆಯಲ್ಲಿ) ಹಣ್ಣಾಗದ ಮುಂಡಕ್ಕಿ ಹಣ್ಣಿಗೆ ಹಾಕಿದ ಶಾಪಗಳು, ಯಾವುದೇ ಗೊತ್ತು ಗುರಿಯಿಲ್ಲದೆ ಅಜ್ಜನ ಮನೆಯ ಸುತ್ತಲಿನ ಹಾಡಿ*ಯಲ್ಲಿ ಸುತ್ತಾಡಿದ ಅಲೆದಾಟಗಳು, ಗಣಪತಿಕಾಯಿ**ಯಲ್ಲಿ ಮೂರ್ತಿ ಮಾಡಿ ಅಜ್ಜನ ಮನೆಯಲ್ಲಿ ’ಪೂಜೆಯ ಆಟ’ ಆಡಿ; ಟೆರೇಸ್ ಮೇಲೆ ಅಡಿಗೆ ಆಡುತ್ತಿದ್ದ ತಂಗಿಯಂದಿರಿಗೆ ಬೆಂಕಿ ಹಚ್ಚಿಕೊಟ್ಟು, ಮನೆಯವರ ಹತ್ತಿರ ಉಗಿಸಿಕೊಂಡ ಬೈಗುಳಗಳು, ಅಜ್ಜನ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಬ್ರಹ್ಮಚಾರಿಯಾಗಿ ಕುಳಿತು ಗಳಿಸಿದ ದಕ್ಷಿಣೆಗಳು, ಬೇಸಗೆಯ ಕೊನೆಯಲ್ಲಿ ಬರುತ್ತಿದ್ದ ಮೊದಲ ಮಳೆಯಲ್ಲಿ ಮನೆಯ ಎದುರ ತೋಡಿನಲ್ಲಿ ಬಿಟ್ಟ ತಿರುಗಿ ಬಾರ ಕಾಗದದ ದೋಣಿಗಳು, ಅವಲಕ್ಕಿ ಮಜ್ಜಿಗೆಯ ಆಸೆಗೆ ದೊಡ್ಡಮ್ಮನಿಗೆ ಮಾಡಿಕೊಡುತ್ತಿದ್ದ ಮನೆಕೆಲಸಗಳು. ಎಲ್ಲದರಲ್ಲಿಯೂ ಚಿಂತೆಗಳಿಲ್ಲದ ಅದಮ್ಯ ಖುಷಿಯಿತ್ತು, ಜಗತ್ತು ನಮ್ಮದೇ ಏನೋ ಎಂಬಷ್ಟು ಸುಖವಿತ್ತು, ಎಲ್ಲ ದಿನವೂ ಹಬ್ಬವೇನೋ ಎಂಬಷ್ಟು ಸಂಭ್ರಮವಿತ್ತು. ನೆಲನೋಡದೆ ಓಡುವ ತರಾತುರಿಯಿತ್ತು, ಬಾಲ್ಯದ ಮುಗ್ಧ ಸಂತೋಷ ಇತ್ತು. ಎಲ್ಲಿ ಹೋದವು ಎಲ್ಲ; ನಾವು ದೊಡ್ಡವರಾದ ಹಾಗೆ***?

ಟಿಪ್ಪಣಿ:
*ಹಾಡಿ - ಕುಂದಾಪುರ ಕಡೆಯ ಶಬ್ದ, ಚಿಕ್ಕ ಕಾಡು ಎಂಬ ಅರ್ಥ ಬರುತ್ತದೆ.  ಮನೆಯ ಸುತ್ತಲೂ ಇರುತ್ತಿದ್ದ ಚಿಕ್ಕ ಚಿಕ್ಕ ಮರಗಳ ಗುಂಪು. ಎಕರೆಗಟ್ಟಲೆ ಇರುತ್ತಿದ್ದುದು ಹೌದಾದರೂ ಅದು ಎಂದಿಗೂ ಕಾಡು ಎಂದು ಕರೆಸಿಕೊಳ್ಳದು.
**ಗಣಪತಿ ಕಾಯಿ -  ಮಲೆನಾಡಿನಲ್ಲಿ/ಕರಾವಳಿಯ ಸಮೀಪದ ಕಾಡುಗಳಲ್ಲಿ ಬೆಳೆಯುವ ಒಂದು ಮರದ ಕಾಯಿ. ಹೊರಗಿನ ಗಟ್ಟಿಯಾದ ಸಿಪ್ಪೆಯನ್ನು ತೆಗೆದರೆ ಒಳಗೆ ಬಾದಾಮಿಯಂತಹ ಆದರೆ ಚಿಕ್ಕುಕಾಯಿಯಷ್ಟು ದೊಡ್ಡ ಬೀಜ. ಅದರೊಳಗೆ ಸೊಂಡಿಲಿನಂತ ಒಂದು ರಚನೆಯಿದ್ದು, ಅರ್ಧ ತೆರೆದ ಕಾಯಿ ಕುಳಿತ ಗಣಪತಿಯ ವಿಗ್ರಹದ ಹಾಗೆ ಕಾಣುತ್ತದೆ. ಬಾಲ್ಯದ ದೇವರ ಆಟಕ್ಕೆ ಬಲಿಯಾದ ಕಾಯಿಗಳೆಷ್ಟೋ, ಲೆಕ್ಕ ಇಟ್ಟವರಾರು.
***ಈಗೇನೂ ಖುಷಿಯಿಲ್ಲ ಎಂದೇನಲ್ಲ, ಆದರೆ ಆ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೇನೋ ನಾವು ಎನಿಸುತ್ತದೆ.  

Wednesday, 12 February 2014

ಕೋಲಸಿರ್ಸಿ - ಊರು ಮತ್ತು ನಾನು

ಒಂದು ತಿಂಗಳ ಕೆಳಗೆ ಅನಿವಾರ್ಯ ಕೆಲಸದ ಮೇಲೆ ಕೋಲಸಿರ್ಸಿಗೆ ಹೋಗಿದ್ದೆ, ಬೆಂಗಳೂರಿನಿಂದ ಊರಿಗೆ. ಇರಲಾಗಿದ್ದು ಕೇವಲ ಮೂರು ಗಂಟೆಗಳಷ್ಟೇ ಆದರೂ ಕಾಡಿದ ನೆನಪುಗಳು, ’ದೇಜಾ ವು’ ಅನ್ನಿಸಿದ ಕ್ಷಣಗಳು ಅಗಣಿತ ಈ ಸಮಯದೊಳಗೆ. ಬಸ್ ಇಳಿದು ಎದುರಲ್ಲೇ ಇರುವ ಮನೆಯ ಮೆಟ್ಟಿಲು ಹತ್ತುವುದರೊಳಗೆ ಕಣ್ಣು ಒಂದು ವರ್ಷದಲ್ಲಿ ಬದಲಾಗಿ ಹೋದ ನೂರಾರು ಬದಲಾವಣೆಗಳನ್ನು ಗುರುತಿಸಿತ್ತು. ಕೊನೆಯ ಸಲ ನೋಡಿದಾಗ ಇದ್ದದ್ದಕ್ಕೂ ಈಗಿನದಕ್ಕೂ ಅರಿವಿಲ್ಲದೆಯೇ ತುಲನೆ ನಡೆದಿತ್ತು. ಮನೆಯ ಪಕ್ಕದಲ್ಲಿದ್ದ ಪಂಚಾಯತ್ ಆಫೀಸಿನ ಹಳೆ ಕಟ್ಟಡ ಹಾಳು ಬೀಳಲಾರಂಭಿಸಿತ್ತು ನಿಧಾನವಾಗಿ. ಮನೆಯ ಎದುರಲ್ಲೇ ಒಂದು ಹೊಸ ಬಸ್ ಸ್ಟಾಂಡ್ ಎದ್ದು ನಿಂತಿತ್ತು ಹಳೆಯದರ ಪಳೆಯಳಿಕೆಗಳ ಮೇಲೆ. ಪಕ್ಕದ ಮನೆಯ ಮಮತಕ್ಕನ ಮನೆಯ ಬೇಲಿ ತುಸುವೇ ವಿಸ್ತರಿಸಿ ನಮ್ಮ ಮನೆಯೊಳಕ್ಕೆ ಬಂದಿತ್ತು. ಎದುರಲ್ಲಿಯೇ ಬೆಳೆದು ನಿಂತಿದ್ದ ಅತಿಹುಳಿ ಮಾವಿನಕಾಯಿಯ ಮರ ಮತ್ತೆ ಹೂ ಬಿಟ್ಟು ಅಲಂಕೃತವಾಗಿತ್ತು. ಊರು ಪ್ರವೇಶಿಸುವ ಮೊದಲೇ ಹೊಸ ಆಸ್ಪತ್ರೆ, ಕಾಲೆಜು ಎಲ್ಲವೂ ಸ್ವಾಗತಿಸಿದ್ದವು ಎಂಬಲ್ಲಿಗೆ ಕೋಲಸಿರ್ಸಿ ಎಂಬ ನಾ ಬೆಳೆದ ಊರು ಬದಲಾಗುವುದರಲ್ಲಿತ್ತು, ಬದಲಾಗುತ್ತಲಿತ್ತು ಮತ್ತು ಬದಲಾಗಿತ್ತು.

ನಾನು ಯಾರ ಬಳಿಯಾದರೂ ನಾ ಬೆಳೆದ ಊರು ಕೋಲಸಿರ್ಸಿ ಎಂದರೆ ಹೆಚ್ಚಿನವರು ಶಿರ್ಸಿಗೂ, ಕೋಲಸಿರ್ಸಿಯ
ಕೋಲಸಿರ್ಸಿ - ಬಯಲು, ಗದ್ದೆ, ಗುಡ್ಡ, ಕಾಡು
ಹೆಸರಿಗೂ ಸಂಬಂಧ ಇರಬೇಕೆಂದೇ ಭಾವಿಸುತ್ತಾರೆ. ಎರಡೂ ಕಡೆ ಮಾರಿಕಾಂಬೆಯೇ ಮುಖ್ಯದೇವತೆ ಎಂಬುದನ್ನು ಬಿಟ್ಟರೆ ಅಂತ ಹೋಲಿಕೆಗಳಿಲ್ಲ. ಕೋಲಸಿರ್ಸಿಗೆ ಆ ಹೆಸರು ಬಂದಿದ್ದರ ಹಿಂದೆ ಒಂದು ಕಥೆಯಿದೆ. ಈಗಿನ ಸಿದ್ದಾಪುರ ಪ್ರಾಂತ್ಯವನ್ನು ಬಿಳಗಿ ರಾಜರು ಆಳುತ್ತಿದ್ದ ಕಾಲ. ರಾಜರು ಎಂದಮೇಲೆ ಸೈನ್ಯ ಬೇಕಲ್ಲ. ಹಾಗೆ ಸೈನಿಕರನ್ನು ಸೇರಿಸಿಕೊಳ್ಳಲು, ಸೇರಿದ ಸೈನಿಕರಿಗೆ ತರಬೇತಿ ಕೊಡಲು ಕೋಲಸಿರ್ಸಿಯ ಪ್ರದೇಶವನ್ನು ಆಯ್ದುಕೊಂಡಿದ್ದರಂತೆ. ಹೀಗೆ ಸೈನಿಕರ ತರಬೇತಿ ಸ್ಥಳಕ್ಕಿದ್ದ ’ಕಲಿಗಳನ್ನು ಸೇರಿಸಿ’ ಎಂಬ ಹೆಸರು ಕಾಲಕ್ರಮೇಣ ಬಾಯಿಂದ ಬಾಯಿಗೆ ಹೋಗಿ ಕೋಲಸಿರ್ಸಿ ಆಯ್ತು. ಪಕ್ಕದಲ್ಲಿಯೇ ಇರುವ ಕುಣಜಿ ಎಂಬ ಊರಿನ ಹೆಸರಿಗೂ ಇದೇ ಕಾರಣ. ಅದೇ ಊರಿನಲ್ಲಿ ಹುಟ್ಟಿ ಬೆಳೆದ, ನಾಗರಾಜ್ ಮಾಷ್ಟ್ರು ಡ್ರಾವಿಂಗ್ ಕ್ಲಾಸಿನಲ್ಲಿ ಈ ಕಥೆಯನ್ನೆಲ್ಲ ಹೇಳುತ್ತಿದ್ದಾಗ ಮೈಯ್ಯಲ್ಲಿ ರೋಮಾಂಚನ, ಹೆಮ್ಮೆಯ ಭಾವ ಮೂಡಿದ್ದು ಇಂದಿಗೂ ಹಾಗೆಯೇ ನೆನಪಿದೆ.

ವರ್ತಮಾನಕ್ಕೆ ಬಂದರೆ ಕೋಲಸಿರ್ಸಿ ಎಂಬುದು ೭೦೦/೮೦೦ ಜನರಿರುವ ಒಂದು ಹಳ್ಳಿ. ಉಳಿದ ಕಡೆಗೆ ಹೋಲಿಸಿದರೆ ಇದು ಹಳ್ಳಿಯೇ ಆದರೂ, ೪-೫ ಮನೆಗಳಿರುವ ಹಳ್ಳಿಗಳೇ ಹೆಚ್ಚಿರುವ ಸಿದ್ದಾಪುರದಲ್ಲಿ ಕೋಲಸಿರ್ಸಿ ಒಂದು ದೊಡ್ಡ ಊರೇ ಸರಿ. ಒಂದು ಪದವಿಪೂರ್ವ ಕಾಲೇಜು, ಹೊಸದಾಗಿ ಆಗಿರುವ ಆಸ್ಪತ್ರೆ, ಭಾಗಶಃ ನಾಪತ್ತೆಯಾಗಿರುವ ಕಾಡು ಈ ಮಾತಿಗೆ ಪುಷ್ಠಿಕೊಡುತ್ತದೆ. ಹೆಚ್ಚಿನ ಹಳ್ಳಿಗಳಂತೆ ಕೋಲಸಿರ್ಸಿಯಲ್ಲಿಯೂ ಕೃಷಿಯೇ ಮುಖ್ಯವಾದರೂ, ಅಡಿಕೆಯ ವ್ಯಾಪಾರವೂ ಒಂದು ಮುಖ್ಯ ಉದ್ಯೋಗ ಮತ್ತು ನೂರಾರು ಜನ ಕೆಲಸ ಹುಡುಕಿಕೊಂಡು ಬೆಂಗಳೂರಿನ ಹೊಟೆಲ್ ಬಾರುಗಳನ್ನು ಸೇರಿಕೊಂಡಿದ್ದಾರೆ, ಯಶಸ್ವಿಯಾಗಿದ್ದಾರೆ, ಪಕ್ಕಾ ಉಡುಪಿ ಕಡೆಯ ಶೆಟ್ಟರ ತರಹ. ರಸ್ತೆಯಗುಂಟ ಇರುವ ಅಂಗಡಿಕೇರಿಯಲ್ಲಿ ಘಟ್ಟದ ಕೆಳಗಿನಿಂದ ಬಂದು ನೆಲೆಸಿದ ವ್ಯಾಪಾರಸ್ಥರ ಮನೆಗಳಿದ್ದರೆ, ಊರೊಳಗೆ ಘಟ್ಟದ ಮೇಲಿನ ಕೃಷಿಕರ ಮನೆಗಳಿವೆ. ನಾಲ್ಕೈದು ಗೌಡರು, ಸೊನೆಗಾರ ಶೆಟ್ಟರ ಮನೆಗಳನ್ನು ಬಿಟ್ಟರೆ ಇರುವುದೆಲ್ಲವೂ ನಾಮಧಾರಿ ನಾಯ್ಕರ ಮನೆಗಳೇ. ಮಾತಾಡುವ ಭಾಷೆಯಂತೂ ಅಚ್ಚಕನ್ನಡ. ಈಗೀಗ ಮನೆಗೆ ಹೋದರೆ ಊರಿನವರೊಂದಿಗೆ ವ್ಯವಹರಿಸುವಾಗ ಇಂಗ್ಲೀಷ್ ಪದಬಳಸದೇ ಅಚ್ಚಕನ್ನಡದಲ್ಲಿ ಮಾತನಾಡುವ ಅವರನ್ನು ಕಂಡು ಹೆಮ್ಮೆಯಾಗಲು ಸುರುವಾಗಿದೆ. ಆರಿದ್ರೆ ಮಳೆಯ ಕಾಲದಲ್ಲಿ ಆಗುವ ಹಬ್ಬ, ದೀಪಾವಳಿಯಂದು ನಡೆಯುವ ಎತ್ತುಗಳ ಓಟ, ಎಂಟು ವರ್ಷಕ್ಕೊಮ್ಮೆ ಆಗುವ ಊರದೇವಿ ಮಾರಿಕಾಂಬೆಯ ಜಾತ್ರೆ ಸಾಂಸ್ಕೃತಿಕವಾಗಿ ವಿಶಿಷ್ಟ ಆಚರಣೆಗಳು.

ನಾವು ಎಂದರೆ ನಮ್ಮ ಕುಟುಂಬ ಕೋಲಸಿರ್ಸಿಗೆ ಬಂದಿದ್ದು ೧೯೯೫-೯೬ರಲ್ಲಿ, ಅಮ್ಮನಿಗೆ ಇಲ್ಲಿಗೆ ವರ್ಗವಾದಾಗ ಕೋಲಸಿರ್ಸಿಯ ಬಗ್ಗೆ ಎಚ್ಚರಿಸಿದವರೇ ಜಾಸ್ತಿ,  ಅಲ್ಲಿ ಆ ಸಮಯದಲ್ಲಿ ಬಹಳಷ್ಟು ಕಳ್ಳತನ, ದರೋಡೆಗಳಾಗಿದ್ದವಂತೆ. ನಾನು ಮೊದಲನೆಯ ತರಗತಿಗೆ ಎಂದು ಸೇರಿದ್ದು ಇದೇ ಕೋಲಸಿರ್ಸಿಯ ಸ.ಹಿ.ಪ್ರಾ. ಶಾಲೆಗೆ. ಎಷ್ಟೆಲ್ಲ ಸಿಹಿನೆನಪುಗಳನ್ನು, ಬದುಕಿನ ಪಾಠಗಳನ್ನು ನೀಡಿದೆ ಈ ಕೋಲಸಿರ್ಸಿ ನನಗೆ. ಶಾಲೆಯ ಮೊದಲದಿನ ಸ್ವಂತ ಅಪ್ಪನ ಬಳಿಯೇ ಪೆಟ್ಟು ತಿಂದದ್ದು, ಶಾಲೆಯ ಅಂಗಳ ಸಾರಿಸಲು ಸಗಣಿ ತರಲು ಹೋದ ಹಾಗೆ ಮಾಡಿ ಕವಳಿ ಮಟ್ಟಿಗೆ ಲಗ್ಗೆ ಹಾಕುತ್ತಿದ್ದುದು(ತದಕಾರಣ ಹುಡುಗಿಯರದ್ದು ಸಾರಿಸಿ ಮುಗಿದರೂ ನಾವು ಸಗಣಿ ತರಹೋದವರು ಬರದೇ ಒಂದು ದಿನ ಸಿಕ್ಕಿಬಿದ್ದು ಸಾಲಾಗಿ ಕೈ ಮೇಲೆತ್ತಿ ನಿಲ್ಲುವ ಶಿಕ್ಷೆ ಅನುಭವಿಸಿದ್ದು) , ಕಬ್ಬನ್ನು ಅತಿವಿಚಿತ್ರವಾಗಿ ತಿನ್ನುತ್ತಿದ್ದ ಗೆಳೆಯನೊಬ್ಬನನ್ನು ವಿಪರೀತವಾಗಿ ಆಡಿಕೊಂಡಿದ್ದು, ಇಡೀ ಏಳು ವರ್ಷಗಳಲ್ಲಿ ಒಮ್ಮೆ ಮಾತ್ರ ಆದ ಗ್ಯಾದರಿಂಗ್ ನಲ್ಲಿ ಆಡಿದ ನಾಟಕದಲ್ಲಿ ಗಾಂಪರ ಗುಂಪಿನ ನಾಣಿಯಾಗಿದ್ದು, ಸರ್ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿದ್ದದ್ದನ್ನು ನೋಡಿ ಬರುತ್ತಿದ್ದ ನಗುವನ್ನು ತಡೆಹಿಡಿಯಲು ಹೋಗಿ ತಡೆಯಲಾರದೇ ಗೋಳ್ ಎಂದು ನಕ್ಕು ಅವರನ್ನೂ ಎಚ್ಚರಿಸಿ ಆದಕ್ಕಾಗಿ ಒಂದಿಷ್ಟು ಪರೋಕ್ಷವಾಗಿ ಬೈಸಿಕೊಂಡಿದ್ದು, ಪ್ರಿಪರೇಟರಿ ಪರೀಕ್ಷೆಗೆಂದು ಓದಲು ಬಿಟ್ಟಾಗ ಶಾಲೆಯ ಮೇಲೆ ಹರಡಿದ್ದ ಮರದ ಮೇಲೆ ಹತ್ತಿ ಕುಳಿತು ಕದ್ದು ತಂದ ಮಾವಿನಕಾಯಿಗಳ ಉಪ್ಪಿನಕಾಯಿ ಮಾಡಿದ್ದು, ಇನ್ ಸ್ಪೆಕ್ಟರ್ ಬಂದಾಗ scissorನ್ನು ಸ್ಕಿಸರ್ ಎಂದು ಉಚ್ಛರಿಸಿದ ಹುಡುಗಿಗೆ ಚಾಳಿಸಿ (ನನಗೂ ಸರಿಯಾದ ಉಚ್ಛಾರ ಗೊತ್ತಿರಲಿಲ್ಲ ಎಂಬುದು ಬೇರೆ ವಿಷಯ) ಅಳಿಸಿ ಕ್ಷಮೆಕೇಳುವಾಗ ನನ್ನ ಕಣ್ಣ ತುದಿಯೂ ತೇವವಾಗಿದ್ದಕ್ಕೆ ಕಾರಣ ಹುಡುಕಿದ್ದು, ಯಾವುದೋ ಜಗಳಕ್ಕೆ ಬಿದ್ದು ಬಾಲ್ಯದ ಬೆಸ್ಟ್ ಫ್ರೆಂಡ್ ಬಳಿ ಒಂದು ವರ್ಷ ಮಾತು ಬಿಟ್ಟು, ನೀನೇ ಮೊದಲು ಮಾತನಾಡಿಸಬೇಕೆಂದು ಹಠಕ್ಕೆ ಸುಳ್ಳು ಸುಳ್ಳೇ ಹಠ ಮಾಡಿಕೊಂಡು ಕೂತಿದ್ದು, ೭ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಬಿಡು ಬೀಸಾಗಿ ಕಾಪಿ ಹೊಡೆದು ಫಲಿತಾಂಶ ಚೆನ್ನಾಗಿ ಬರದಿದ್ದಾಗ ಮತ್ತೆ ಕಾಪಿ ಹೊಡೆಯುವುದಿಲ್ಲ ಅಂದುಕೊಂಡಿದ್ದು, ಸಂಕ್ರಾಂತಿ ಕಾಳನ್ನು ಶಾಲೆಯಲ್ಲಿ ಹಂಚುತ್ತಾ ಒಂದು ಹೊತ್ತಿಡೀ ಕ್ಲಾಸಿಂದ ಕ್ಲಾಸಿಗೆ ತಿರುಗುತ್ತಲೇ ಇದ್ದದ್ದು, ೭ನೇ ತರಗತಿಯಲ್ಲಿ ಶಲಾಕ ಎಂಬ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮಕ್ಕಳೊಂದಿಗೆ ಸ್ಪರ್ಧಿಸಿ ತಾಲೂಕಿಗೆ ೩ನೇ ಬಂದಿದ್ದು(ನನ್ನನ್ನು ತನ್ನ ಮಕ್ಕಳಿಗೆ ತೋರಿಸಿ ಹೀಗಾಗಬೇಕು ಎಂದ ನಾರಾಯಣಗೌಡ್ರು ಎಂಬ ಬಿ. ಇ. ಓ ಆ ಮೂಲಕ ನನ್ನ ಬಾಲ್ಯದ ಅತಿದೊಡ್ಡ ಬಹುಮಾನವನ್ನು ಕೊಟ್ಟಿದ್ದರು), ನನ್ನದೇ ಶಾಲೆಯಲ್ಲಿ ಇರುತ್ತಿದ್ದ ಅಪ್ಪ ಅಮ್ಮನ ಕಣ್ಣು ತಪ್ಪಿಸಿ ಕ್ರಿಕೆಟ್ ಆಡುತ್ತಿದ್ದುದು, ಸೋಲೆಂದರಿಯದಂತೆ ಏಳನೇ ಕ್ಲಾಸಿನವರೆಗೆ ಬಂದು ಸೋಲಿನ ಎದುರೇ ಮುಖಾಮುಖಿ ಮಾತನಾಡಿದ್ದು, ಒಂದೇ ಎರಡೇ ನೆನಪುಗಳ ಮಾತು ಮಧುರ.  ಅವುಗಳಿಂದ ಕಲಿತ ಪಾಠ ಕ್ಲಾಸಿನ ಪಠ್ಯಕ್ಕಿಂತ ನೇರ, ನಿಷ್ಠುರ, ಪ್ರಯೋಜನಕರ.



ಕೋಲಸಿರ್ಸಿಯ ನೇತಾಜಿ ಸರಕಾರಿ ಪ್ರೌಢಶಾಲೆ
ಪ್ರೌಢಶಾಲೆಯ ವಿಷಯಕ್ಕೆ ಬಂದರೆ ನೆನಪಿರುವುದೆಲ್ಲ ಖುಷಿಯ ವಿಷಯಗಳೇ. ನಾವು ಕನ್ನಡ ಶಾಲೆ ಎಂದು ಕರೆಯುತ್ತಿದ್ದ ಪ್ರಾಥಮಿಕ ಶಾಲೆಯ ನಂತರ ಪೇಟೆಗೆ ಹೋಗುವುದೋ ಅಥವಾ ಊರಿನ ಪ್ರೌಢಶಾಲೆಗೇ ಹೋಗುವುದೋ ಎಂಬ ಬಗ್ಗೆ ಬಹಳಷ್ಟು ಸಂದೇಹ ಗೊಂದಲಗಳಿದ್ದವು. ಆದರೆ ಕೋಲಸಿರ್ಸಿಯ ನೇತಾಜಿ ಪ್ರೌಢಶಾಲೆ ಎಲ್ಲ ಸಂದೇಹಗಳನ್ನು ಕೇವಲ ತಿಂಗಳು ಮಾತ್ರದಲ್ಲಿ ಪರಿಹರಿಸಿ ನಮ್ಮ ಆಯ್ಕೆ ಸರಿಯೆಂದು ಸಾರಿಹೇಳಿಬಿಟ್ಟಿತ್ತು. ಕನ್ನಡಶಾಲೆಯಿಂದ ಗೊತ್ತಿದ್ದ ಅದೇ ಗೆಳೆಯರ ಗುಂಪು, ಯಾವ ಪುಣ್ಯದಿಂದಲೋ ಸಿಕ್ಕಿದ್ದ ಅತ್ಯುತ್ತಮ ಶಿಕ್ಷಕಗಣ, ಪ್ರತೀ ಸಲ ಕ್ರಿಕೆಟ್ ಆಡಬೇಕಾದರೂ ಅಪ್ಪ ಮತ್ತು ಅಮ್ಮನ ಕಣ್ಣು ತಪ್ಪಿಸಿ ಆಡಬೇಕೆಂಬ ಅನಿವಾರ್ಯ ಇಲ್ಲದಿದ್ದುದು, ಊರಾಚಿನ ಸ್ಮಶಾನದ ಮೇಲೆ ಕಟ್ಟಿದ ಶಾಲೆಯಲ್ಲಿನ ಶಾಂತಮೌನ ಎಲ್ಲವೂ ಖುಷಿಯಾಗಿಬಿಟ್ಟಿತ್ತು, ಇಂದಿಗೂ ಇಷ್ಟವಾಗಿಯೇ ಉಳಿದಿದೆ. ಶಾಲೆಯ ಪ್ರವಾಸಮಂತ್ರಿಯಾಗಿ ಏರ್ಪಡಿಸಿದ್ದ ಪ್ರವಾಸಕ್ಕೆ ಹೋಗಲಾಗದೇ ಇದ್ದಂತಹ ವೈರುಧ್ಯಕ್ಕೂ, ಪರೀಕ್ಷೆಗೆ ವಾರವೊಂದು ಬಾಕಿ ಇರುವಾಗ ಆರೋಗ್ಯ ತಪಾಸಣೆಗೆಂದು ಶಾಲೆಗೆ ಬಂದ ವೈದ್ಯರು ಹೃದಯದಲ್ಲೇನೋ ತೊಂದರೆ ಇದೆ ಎಂದಾಗ ಉಂಟಾಗುವ ಆಘಾತಕ್ಕೂ, ಪರೀಕ್ಷೆ ಮುಗಿದ ಮೇಲೆ ದಿನವಿಡೀ ಆಡಬಹುದೆಂಬ ಲಂಚದಾಸೆಗೆ  ಶ್ರಮದಾನ ಮಾಡುತ್ತಿದ್ದ ಉತ್ಸಾಹಕ್ಕೂ, ಮೊದಲ ಬಾರಿಗೆ ಬರೆದ ಕವನ ಓದಿ ಕನ್ನಡ ಪಂಡಿತೆ ರೇಣುಕಾ ಮೇಡಂ ಪ್ರಶಂಸಿಸಿದಾಗ ಇದ್ದ ಧನ್ಯತಾಭಾವಕ್ಕೂ, ಶಾಲೆಯ ಒಂದು ಹೌಸಿನ ಲೀಡರ್ ಆಗುವ ಅವಕಾಶವನ್ನು ತಿರಸ್ಕರಿಸಿ ಮತ್ತೆ ವರ್ಷವಿಡೀ ಅನುಭವಿಸಿದ ಪಶ್ಚಾತ್ತಾಪಕ್ಕೂ, ಕೋಲಸಿರ್ಸಿ ಎಂಬ ಮೂಲೆಶಾಲೆಯ ಹುಡುಗ ರಾಜ್ಯಮಟ್ಟದ ಪ್ರತಿಭಾನ್ವೇಷಣ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹದಿಮೂರನೇ ಸ್ಥಾನ ಬಂದನೆಂಬ ಸಂಭ್ರಮಕ್ಕೂ, ಕ್ಲಾಸನ್ನೇ ಜಂಬೆಹಣ್ಣು, ಸಂಪೆಹಣ್ಣು, ಮುಳ್ಳುಹಣ್ಣು ಇತ್ಯಾದಿಗಳ ಮಂಡಿಯಾಗಿಸಿಕೊಂಡು ವ್ಯವಹರಿಸುತ್ತಿದ್ದ ಹುಡುಗಾಟಿಕೆಗೂ, ಗೆಳೆಯನೊಬ್ಬನ ಜೊತೆ ಕಟ್ಟಿದ ಪಂದ್ಯಕ್ಕಾಗಿ ವಾರ್ಷಿಕೋತ್ಸವ ನಿಮಿತ್ತದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಕಧ್ವನಿಯಲ್ಲಿ ಹಾಡಿದ ಹುಚ್ಚಾಟಕ್ಕೂ ಸಾಕ್ಷಿಯಾಗಿದ್ದು ಕೋಲಸಿರ್ಸಿಯ ಇದೇ ಪ್ರೌಢಶಾಲೆ.

ಪ್ರೌಢಶಾಲೆಯ ನಂತರ ಬೇರೆ ಕಡೆ ಹೋದ ನನಗೆ ಕೋಲಸಿರ್ಸಿಯ ಪರಿಚಯ ಉಳಿದದ್ದು ಅಪ್ಪ-ಅಮ್ಮನ ಮುಖಾಂತರ, ರಜೆಯಲ್ಲಿ ಹೋದಾಗ ಕಳೆಯುತ್ತಿದ್ದ ದಿನಗಳ ಮೂಲಕ ಮಾತ್ರ. ಹೊಸ ಆಫೀಸುಗಳು, ಆಸ್ಪತ್ರೆ, ಕಾಲೇಜು ಎಲ್ಲ ಆಗುತ್ತಾ  ಅಭಿವ್ರದ್ಧಿಯ ನಾಗಾಲೋಟದಲ್ಲಿ ಪಾಲು ತೆಗೆದುಕೊಂಡಿತ್ತು. ಸುತ್ತೆಲ್ಲೂ ಕಂಡುಕೇಳದಷ್ಟು ವೇಗವಾಗಿ ಬೆಳೆಯುತ್ತಿತ್ತು. ಈ ಬೆಳವಣಿಗೆಯ ಮಧ್ಯದಲ್ಲೇ ಎಲ್ಲೋ ತನ್ನ ಹಳ್ಳಿತನವನ್ನು ಕಳೇದುಕೊಂಡಿತೇ ಎಂಬುದು ನನ್ನ ಆತಂಕದ ಸಂಶಯ. ಅಷ್ಟೆಲ್ಲ ನನ್ನದಾಗೇ ಇದ್ದ ಊರು ಹಂತಹಂತವಾಗಿ ದೂರವಾಗುತ್ತ ಬಂದಿತ್ತು. ಈಗ ಅಮ್ಮನ ನಿವೃತ್ತಿಯ ನಂತರ ನಮ್ಮ ಮನೆಯೂ ಖಾಲಿಯಾಗಲಿದೆ. ಅಲ್ಲಿಗೆ ಕೋಲಸಿರ್ಸಿಯೊಂದಿಗಿನ ನನ್ನ ಸಂಬಂಧಕ್ಕೆ ಒಂದು ದೊಡ್ಡ ಅಲ್ಪವಿರಾಮ ಬೀಳಲಿದೆ. ಬಾಲ್ಯದ ಜೊತೆಗಿನ ಒಂದು ಕೊಂಡಿ ಕಳಚಲಿದೆ. ಹಾಗೆ ಎಣಿಸಿಕೊಳ್ಳುವುದರಲ್ಲಿಯೇ ಏನೋ ಒಂದು ನೋವಿದೆ.