ಎರಡನೆಯ ಅಮ್ಮನೆನ್ನಲೇ ನಿನಗೆ ,
ಎಲ್ಲ ಕಡೆ ತಿದ್ದಿ ತೀಡಿದ ಗುರುವೆನ್ನಲೇ
ಅಥವಾ ಮೊದಲ ಗೆಳತಿಯೆಂದರೆ ಸಾಕೆ;
ಏನೆಂದರೇನಂತೆ ನನ್ನಾತ್ಮ ಬಂಧುವೇ
ಹೇಗಾದರೇನಂತೆ ಎಲ್ಲ ತಿಳಿದಿರುವವಳೇ!
ಜೊತೆಗೆ ಆಡಿದ್ದು ಕಮ್ಮಿ, ಕಾಡಿದ್ದೇ ಹೆಚ್ಚು
ಬಾಯಿಗೆ ನಿಜದ ಕೋಲು ಹಾಕುವ ಹುಚ್ಚು
ಜೊತೆಗೆ ಕಳೆದ ದಿನಗಳೆಲ್ಲ ಮರಳುವಂತೆ
ಕಳೆಯಬೇಕು ಮರಳದ ದಿನಗಳನ್ನು
ಕಾಲ ಸ್ತಬ್ಧವಾಗಬಾರದಿತ್ತೇ ಬಾಲ್ಯದಲಿ
ಬಲು ಟೊಳ್ಳಾಗಿ ಬಣ್ಣ ಹಚ್ಚಿ ಬದುಕುವ
ಜನರಿಗಿಂತ ನೀನದೆಷ್ಟು ಭಿನ್ನ
ಮನಸ ಬಿಡಿಸಿ ಓದಬಲ್ಲ ಓದುಗಳೇ
ಸುಮ್ಮನೇ ಶಬ್ದದ ಆಡಂಬರವೇಕೆ
ಮನಸಿನಾಳದ ಮಾತ ಹೇಳಲು ನಿನಗೆ.
ಆಟದಲಿ ಗಾಯವಾಗಿ ರಕ್ತ ಬಂದರೆ
ಒರೆಸಿದ್ದು ನೀನು; ಹಾಕಿದ ಬಟ್ಟೆಯಲಿ
ಬದುಕಲಿ ಸೋತು ಬಂದರೆ
ಸಂತೈಸಿದ್ದು ನೀನೇ; ನಿತ್ತ ನಿಲುವಿನಲಿ
ನಿಷ್ಕಾಮ ಪ್ರೀತಿಯಲಿ ನಂಬಿಕೆ ಹುಟ್ಟಿಸಿದವಳೇ,
ಹೇಳದೇ ಎಲ್ಲ ತಿಳಿದ ನೀ ಬರೀ ಸೋದರಿಯೇ.
ಹೊಸತೊಂದು ಪ್ರತಿಮೆಯನ್ನು ಓದಿ ಸಂತಸವಾಯಿತು. ಅಕ್ಕ ಅನ್ನುವ ಪ್ರತಿಮೆ ಶ್ರೇಷ್ಠವಾದುದು. ನೀವು ತುಂಬಾ ಬಂಧುಗಳನ್ನು ಪ್ರೀತಿಸುತ್ತೀರಿ ಅನ್ನೋದು ಸಂತಸದ ವಿಷಯ.ಅಕ್ಕನಿಗೊಂದು ಕವಿತೆ ಕೊಟ್ಟ ನಿಮಗೆ ಅವರ ಆರ್ಶೀವಾದ ಸದಾ ಕಾಪಾಡಲಿ.
ReplyDeleteಧನ್ಯವಾದಗಳು ರವಿಯವರೇ. ಅಕ್ಕ ಎಂದರೆ ಮೊದಲಿನಿಂದಲೂ ಏನೋ ಹೀಗೇ ಭಾವುಕನಾಗಿಬಿಡುತ್ತೇನೆ, ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ ಗೊತ್ತಿಲ್ಲ. ಕೆಲವೊಮ್ಮೆ ಅಮ್ಮನಿಗಿಂತಲಾ ಸನಿಹ ಎನಿಸಿಬಿಡುತ್ತಾಳೆ. ಅಮ್ಮನೊಂದಿಗಿರುವ ಜನರೇಶನ್ ಗ್ಯಾಪ್ ಇವಳ ಜೊತೆ ಇಲ್ಲದುದಕ್ಕೇನೋ. :)
ReplyDelete