ಬುಡಸೋರುವ ಕೊಡದಲ್ಲಿ, ಹಿಡಿದಿಡುವ ಆಸೆಯಲಿ
ತುದಿಕಾಣದ ಪಯಣವಿದು ತೀರಬಹುದೇ ದಾರಿ||ಪ||
ಬಗೆಹರಿಯದ ಮೌಲ್ಯವದು ’ಪೈ’ ಎಂದು
ಪರಿಧಿ ವ್ಯಾಸದ ಸರಳ ಅನುಪಾತವದು
ನಿಜಪೂರ್ಣಬೆಲೆಯ ಕಂಡುಹಿಡಿಯಲಾಗದೆ
ಎಷ್ಟು ಯುಗಗಳೋ ಅದರ ಹಿಂದೆ ಹಿಂದೆ
ಆದಿ ಗೂತ್ತಿಲ್ಲ ಈ ಪಯಣಕೆ, ಅಂತ್ಯ ಮೊದಲಿಲ್ಲ
ಮಸುಕು ಗಮ್ಯದ ಕಡೆಗೆ ಹುಡುಕಾಟವೇ ಎಲ್ಲ
ಸನಿಹವಾದರೂ ಎಂದೂ ನಿಖರವಲ್ಲ
ಪೂರ್ಣತೆಯ ಸುಳಿವಿಲ್ಲ, ಪ್ರಯತ್ನ ಬಿಟ್ಟಿಲ್ಲ
ತೀರದ ಹಠಕೆ ಅರ್ಪಣೆಯೇನು ಕಡಿಮೆಯ
ಹೋದೇವ ಹತ್ತಿರ, ಮುಟ್ಟೇವ ಗುರಿಯ?||೧|
ಅನಿಲ ಖನಿಜಗಳಷ್ಟೇ ಅವನಿಯಲಿದ್ದವಂತೆ
ಯಾವ ಮಾಯದಲ್ಲೋ ಜೀವ ಹುಟ್ಟಿತಂತೆ
ನಿರ್ಜೀವ ತಾ ಜೀವಕೆ ಜನ್ಮಕೊಟ್ಟಿತೇ ಇಲ್ಲಿ?
ದೇವ ತಾನೆಲ್ಲರನು ಸೃಷ್ಟಿಸಿದನೇ ಆದಿಯಲ್ಲಿ?
ನಿಜದ ಪೂರ್ಣತೆಗೆ ಅದೆಷ್ಟು ವ್ಯಾಖ್ಯಾನಗಳೋ
ಎಷ್ಟು ವಿಜ್ಞಾನಿ, ಅದೆಷ್ಟು ಕಾಲಜ್ಞಾನಿಗಳೋ
ಹಿಂದೆ ಬಿದ್ದವರು, ತಿರುಗಿ ವಿವರಿಸಹೋದವರು
ಸೃಷ್ಟಿನಿಗೂಢವ ಮುಟ್ಟಬಹುದೆ ಎಂದಿಗಾದರೂ||೨||
ಪ್ರೇಮ, ದ್ವೇಷವಂತೆ, ಮತ್ತಿಷ್ಟು ಅರಿಷಡ್ವರ್ಗಗಳಂತೆ
ಮೂರು ದಿನದ ಬದುಕಿನಲಿ ನೂರೊಂದು ಭೇಧವಂತೆ
ತಪ್ಪೆಂದು ಗೊತ್ತಿದ್ದರೊ ಮೀರಲಾಗದ ದೌರ್ಬಲ್ಯವೇ
ತಿಳಿದರೂ ಅರಿಯದ ಮನಸ್ಸಿನ ಮೂಢತನವೇ
ಒಂದ ಮೆಟ್ಟಿದೆನೆಂದರೆ ತಲೆಯೆತ್ತಿದ್ದು ಮತ್ತೊಂದೆ
ಈ ಸಾಧನೆಯನಿಲ್ಲೇ ಸಾಧಿಸಿ ಮುಗಿಸಬಹುದೇ
ಪೂರ್ಣತೆಯೆಂಬ ಕಲ್ಪನೆಯೇ ಒಂದು ಭ್ರಮೆಯೇ
ದೂರದ ಮರೀಚಿಕೆಗೆ ತುಡಿವುದೇ ಬದುಕ ಮಾಯೆ||೩||
ಚೆನ್ನಾಗಿದೆ,,, ವಿಜ್ಞಾನ ತತ್ತ್ವಜ್ಞಾನ ಹಾಗೂ ಭಾವನೆಗಳ ರಸಪಾಕದಂತೆ:-)
ReplyDeleteವೈಜ್ಞಾನಿಕ ತಳಹದಿಯಲ್ಲಿ ಜೀವ ದರ್ಶನ. ಇಷ್ಟವಾಯಿತು.
ReplyDeleteನನ್ನ ಬ್ಲಾಗಿಗೂ ಸ್ವಾಗತ.