ಪ್ರೀತಿಯ ವೈತರಣಿ*,
ಆಗ ನಾನು ಒಂಬತ್ತನೇ ಕ್ಲಾಸಿನಲ್ಲಿದ್ದೆ. ಬಾಲ್ಯವಿನ್ನೂ ಕಳೆದಿರದ, ಇರುವ ಅರ್ಧಬುದ್ಧಿಯನ್ನು ಪ್ರೌಢಿಮೆ ಎಂದು ಅಪಾರ್ಥ ಮಾಡಿಕೊಂಡಿದ್ದ ಸಮಯವದು. ಹದಿವಯಸ್ಸಿನ ಮಂಗಾಟದಲ್ಲಿ ಜಗತ್ತೇ ವರ್ಣಮಯವಾಗಿ ಕಾಣುತ್ತಿದ್ದ ಪ್ರಾಯ. ಆಗಷ್ಟೇ ಶಾಲೆ ಸುರುವಾಗಿತ್ತು, ಹೆಚ್ಚೆಂದರೆ ಒಂದು ವಾರ ಆಗಿರಬೇಕು, ಅಷ್ಟೇ. ಬೇಸಿಗೆಯಿಡೀ ಆಗಸದ ಕಡೆಗೆ ಆಸೆಯಿಂದ ಬಾಯ್ಬಿಟ್ಟು ಕುಳಿತಿದ್ದ ಭೂದೇವಿ ಇನ್ನು ಮಳೆಯ ಮೊದಲ ಹನಿಗೆ ಕಾಯುತ್ತಾ ಕುಳಿತಿರಲಾರೆ ಎಂದು ಬುಸುಗುಡುತ್ತಿದ್ದ ಹವಾಮಾನ. ಅಂತಹ ಒಂದು ದಿನ ನೀನು ಬಂದಿದ್ದೆ ನೀನು. ಪೂರ್ಣಚಂದ್ರನಂತಹ ತಂಪುಬೆಳಕಿನ ಪುಂಜದಂತೆ ನೀನು ಸಾವಿರ ಫ್ರಿಲ್ಲುಗಳ ಫ್ರಾಕನ್ನು ಒದೆಯುತ್ತ ಬರುತ್ತಿದ್ದರೆ ಹೊರಗೆ ವರಾಂಡದ ಮೇಲೆ ಕುಳಿತ ನಮ್ಮ ಪಡ್ಡೆ ಸೈನ್ಯವೇನು, ಕೆಲವು ಶಿಕ್ಷಕರೇ ಕಣ್ಣು ಕಣ್ಣು ಬಿಟ್ಟು ನೋಡಿದ್ದರು. ಎಂಟನೇ ತರಗತಿಗೆ ಬಂದ ಹೊಸಹುಡುಗಿಯಿರಬೇಕು ಎಂದ ನನ್ನ ಅಂದಾಜನ್ನು ಸುಳ್ಳು ಮಾಡಿ ನಮ್ಮ ಒಂಬತ್ತನೇ ಕ್ಲಾಸಿಗೇ ಬಂದು ಕೂತಿದ್ದೆ, ತುಂಬುಕಂಗಳ ತುಂಬಾ ತುಂಟನಗೆಯನ್ನು ಬೀರುತ್ತಾ. ಮೊದಲ ನೋಟದಲ್ಲೇ ಎಂತಹವರನ್ನು ಬೇಕಾದರೂ ಆಕರ್ಷಿಸಿ ಬಿಸಾಕಿಬಿಡಬಲ್ಲಂತಹ ವ್ಯಕ್ತಿತ್ವದ ನಿನ್ನ ಮೋಡಿಗೆ ನಾನು ಸಿಕ್ಕಿಬಿದ್ದಿದ್ದು ಆಶ್ಚರ್ಯವೇನೂ ಅಲ್ಲ ಬಿಡು. ಕ್ಲಾಸಿನಲ್ಲಿ ಎಲ್ಲರ ಬಾಯಲ್ಲೂ ಮಲ್ಲಿಗೆಯಂತಹ ಹೊಸಹುಡುಗಿಯ ಬಗೆಗಿನ ಮಾತೇ, ನಿನ್ನ ಫ್ರಾಕಿನ ಉದ್ದದ ಬಗೆಗಿನ ಯೋಚನೆಯೇನು, ನಿನ್ನ ಕಾಲಿನ ನುಣುಪಿನ ಕುರುತಾದ ಚರ್ಚೆಯೇನು, ಹುಡುಗರಂತೆ ಕಟ್ ಮಾಡಿದ್ದ(ಅದಕ್ಕೆ ಬಾಬ್ ಕಟ್ ಎಂದು ಹೇಳುತ್ತಾರೆ ಎಂದು ನನಗೆ ದೇವರಾಣೆಗೂ ಗೊತ್ತಿರಲಿಲ್ಲ ಬಿಡಿ) ಗಿಡ್ಡ ಕೂದಲಿನ ಬಗೆಗಿನ ಕುತೂಹಲವೇನು, ನೀನು ಶಾಲೆಗೆ ಬಂದ ಎರಡು ಗಂಟೆಯೊಳಗೆ ಒಂದು phenomenon ಆಗಿ ಹೋಗಿದ್ದೆ.
ಕ್ಲಾಸಿನವರೆಲ್ಲರ ವಿಜ್ಞಾನದ ಪ್ರಯೋಗಪಟ್ಟಿಯಲ್ಲಿನ್ನು ಶೇಖರಿಸಿ ಟೀಚರ್ ಟೇಬಲ್ ಮೇಲೆ ಇಟ್ಟು ಬರುವುದು ಕ್ಲಾಸಿನ ಹೆಡ್ ಆಗಿದ್ದ ನನ್ನ ಜವಾಬ್ದಾರಿಯಾಗಿತ್ತು. ಮೊದಲೆರೆಡು ಪೀರಿಯಡ್ ಆದ ಮೇಲೆ, ಅದಕ್ಕೆಂದು ಸ್ಟಾಫ಼್ ರೂಮಿಗೆ ಹೋದರೆ ಅಲ್ಲಿಯೂ ನಿನ್ನ ದರ್ಶನ. ಗಣಿತದ ಟೀಚರ್ ಕೂಡ ಆಗಿದ್ದ ಹೆಡ್ ಮಾಸ್ಟರ್ ಎದುರು ನಿನ್ನ ಅಪ್ಪನೊಂದಿಗೆ ನಿಂತು ಅದ್ಯಾವುದೋ ಫಾರ್ಮನ್ನು ತುಂಬುತ್ತಿದ್ದರೆ ನನಗೆ ಯಾಕೋ ಗೊತ್ತಿಲ್ಲ ಬಂದ ಕೆಲಸವೇ ಮರೆತು ಹೋಗಿತ್ತು. ಅದ್ಯಾವುದೋ ಪುಳಕದಲ್ಲಿ ಮನಸ್ಸು ಹಿಗ್ಗಿ ತೊನೆದು, ಯಾವಾಗಲೋ ಹಿಂದಿನ ವಾರ ಕಲಿಸಿದ್ದ ಗಣಿತದ ಪಾಠದ ಬಗ್ಗೆ ನಾನು ಸುಳ್ಳು ಸುಳ್ಳೇ ಡೌಟ್ ಕೇಳಲು ಹೋಗಿ, ಅದಕ್ಕೆ ಅವರು"ಪಾಲಕರ ಜೊತೆಗೆ ನಾನು ಮಾತನಾಡುತ್ತಿರುವಾಗಲೇ ಇದನ್ನು ಕೇಳಬೇಕಾ? ಅಷ್ಟಾಗಿ ಈ ಪ್ರಶ್ನೆಯನ್ನು ಹೋಂವರ್ಕಿಗೆ ಕೊಟ್ಟಿದ್ದೆ ಅಲ್ವ? ಅದಕ್ಕೆ ಉತ್ತರವನ್ನು ನಿನ್ನ ನೋಟ್ಬುಕ್ಕಿನಲ್ಲಿಯೇ ನೋಡಿದ ಹಾಗಿತ್ತು, ಮತ್ತಾರೂ ಮಾಡಿರಲಿಲ್ಲ ಅನ್ಸತ್ತೆ ಏನಕ್ಕೂ ಕೊನೆಗೆ ಬಾ. ಅಷ್ಟಕ್ಕೂ ಪೋಸ್ಟ್ ಆಫೀಸ್ ತೆಗೆದುಕೊಂಡಿದೆ" ಎಂದಾಗ ನಿನ್ನನ್ನೇ ದಿಟ್ಟಿಸುತ್ತಿದ್ದ ನನಗೆ ಎರಡು ನಿಮಿಷಗಳವರೆಗೆ ಏನೂ ಹೊಳೆದಿರಲಿಲ್ಲ. ನೀನು ನನ್ನನ್ನೇ ನೋಡುತ್ತಾ ಗೊತ್ತಾಗಿಯೂ ಗೊತ್ತಾಗದಂತೆ ಕಣ್ಣಿನಲ್ಲೇ ಪಿಸಕ್ಕನೆ ನಕ್ಕಾಗಲೇ ಗೊತ್ತಾಗಿದ್ದು, ನನ್ನ ಪ್ಯಾಂಟಿನ ಜಿಪ್ ತೆಗೆದುಕೊಂಡಿದೆ ಎಂದು. ಯಾರೂ ಮಾಡಿರದ ಲೆಕ್ಕವನ್ನು ನಾನು ಮಾಡಿದ್ದೆ ಎಂದು ಗುರುಗಳೇ ನಿನ್ನೆದುರಿಗೆ ಗುರುತಿಸಿದ್ದರು ಎಂದು ಖುಷಿ ಪಡಬೇಕೇ? ಅಥವಾ ನನಗಾದ ಅಪರಿಮಿತ ಅವಮಾನಕ್ಕೆ ನಾಚಿಕೆ ಪಟ್ಟುಕೊಳ್ಳಬೇಕೇ? ನಿನ್ನನ್ನೇ ನೋಡುತ್ತಾ ಬಾಯಿಬಿಟ್ಟು ಕಣ್ಣುನೆಟ್ಟು ನಿಂತಿದ್ದವನಿಗೆ ಏನು ಮಾಡಬೇಕೆಂದು ಗೊತ್ತಾಗಿರಲಿಲ್ಲವೆಂಬುದು ಸೋಜಿಗವಲ್ಲ ಬಿಡಿ.
ರೀಸಸ್ ಮುಗಿಸಿ ಕನ್ನಡ ಕ್ಲಾಸಿಗೆ ಬಂದು ಕುಳಿತರೆ ಮನಸತುಂಬಾ ನಿನ್ನದೇ ಘಮ. ಏನೋ ಒಂದು ಆಹ್ಲಾದ, ಹೆಸರಿರದ ಏನೋ ಒಂದು ಉತ್ಸಾಹ. ಕನ್ನಡದ ಮಾಷ್ಟ್ರೋಬ್ಬರೇ ಹಾಜರಿಯನ್ನು ಹೆಸರಿಡಿದು ಕರೆಯುತ್ತರಾದ್ದರಿಂದ ಈ ಕ್ಲಾಸಿನಲ್ಲಿ ನಿನ್ನ ಹೆಸರು ತಿಳಿದು ಹೋಗುತ್ತದೆಯೆಂಬ ಕಾತರ. ಆ ಘಮಕ್ಕೆ, ಅಷ್ಟರಲ್ಲಿಯೇ ಮೂಡಿದ್ದ ಒಂದು ಕನಸಿಗೆ ಒಂದು ಹೆಸರೇನಿರಬಹುದೆಂಬ ಕುತೂಹಲ. ಹೆಸರನ್ನೆಲ್ಲ ಕರೆದು ಮುಗಿದು ಸರ್ ರಿಜಿಸ್ಟರನ್ನು ಮಡಚಿಡಬೇಕು ಎನ್ನುತ್ತಿರುವಾಗ ಮೊದಲನೆಯ ಬೆಂಚಿನ ಕೊನೆಯ ತುದಿಯಿಂದ ನಿನ್ನ ಸ್ವರ ಬಂದಿತ್ತು ಸ್ಪಷ್ಟವಾದ ಇಂಗ್ಲೀಷಿನಲ್ಲಿ. "Sir, Can you please add my name to the register. My admission was done today" ನೀನು ಹೇಳಿದ್ದು ನಮಗೆ ಸರಿಯಾಗಿ ಗೊತ್ತಾಗಲಿಲ್ಲವಾದರೂ ಹೆಸರು ಹಾಕಿಸಲು ಹೇಳುತ್ತಿರುವೆ ಎಂಬುದು ಸಂದರ್ಭದಿಂದ ಗೊತ್ತಾಗಿತ್ತು, ನಮ್ಮ ಕನ್ನಡ ಮಾಷ್ಟ್ರ ಸ್ಥಿತಿಯೂ ಅಷ್ಟೇ. ಅವರೋ "ನೋಡಮ್ಮಾ ಇದು ಕನ್ನಡ ಕ್ಲಾಸು. ಇಲ್ಲಿ ನಾವೆಲ್ಲ ಕನ್ನಡದಲ್ಲೇ ಮಾತನಾಡಬೇಕು" ಎಂದು ನುಣುಚಿಕೊಂಡು ನಿನ್ನ ಬಳಿ ಕನ್ನಡದಲ್ಲಿಯೇ ಕೇಳಿಸಿ ಸರಿಯಾಗಿ ಅರ್ಥ ಮಾಡಿಕೊಂಡು(ಅಷ್ಟು ಸ್ಪಷ್ಟ ಇಂಗ್ಲಿಷಿಗಿಂತ ನಿನ್ನ ಹರುಕು ಮುರುಕು ಕನ್ನಡ ನಮಗೆ ಹೆಚ್ಚು ಅರ್ಥವಾಗಿದ್ದು ನಿನಗೆ ವಿಚಿತ್ರವೆನಿಸಿರಲಿಕ್ಕೂ ಸಾಕು.) ಅಷ್ಟಾಗಿಯೂ ನಿನ್ನ ಹೆಸರು 'ವೈತರಣಿ' ಎಂದು ನೀನು ಹೇಳಿದಾಗ ಕನ್ನಡ ಮಾಷ್ಟ್ರು "ಓಹ್, ತುಂಬಾ ಚೆನ್ನಾಗಿದೆ ಹೆಸರು, ವೈತರಣಿ, ವೈತರಣಿ ಮ್ಯಾಥ್ಯೂಸ್, ಮುದ್ದಾದ ಹೆಣ್ಣುಮಗಳ ಮುದ್ದಾದ ಹೆಸರು" ಎಂದು ಏನೇನೋ ಬಡಬಡಿಸಿದರೆ, ನಾನು ಪಿಸುಕ್ಕೆಂದು ನಕ್ಕಿದ್ದೆ, ಧ್ವನಿ ಎಣಿಸಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಹೊರಕ್ಕೆ ಬಂದಿತ್ತು. ಇಡೀ ಕ್ಲಾಸೇ ತಿರುಗಿ ನನ್ನ ಕಡೆ ನೋಡಿತ್ತು. ನೀನಾದರೂ ಕುತ್ತಿಗೆ ನಿಲುಕಿಸಿ ನನ್ನ ಮುಖವನ್ನು ಗೊತ್ತು ಮಾಡಿಕೊಂಡು ಗುರಾಯಿಸಿದ್ದೆ, ಅದೇ ತುಂಬು ಕಣ್ಣುಗಳನ್ನು ಬಿಟ್ಟುಕೊಂಡು.
ಮಧ್ಯಾಹ್ನದ ಊಟದ ಸಮಯದಲ್ಲಿ ನಾವು ಗೆಳೆಯರೆಲ್ಲಾ ಕೂಡಿ ಊಟಮಾಡುತ್ತಿದ್ದ ಕಡೆಗೆ ನೇರವಾಗಿ ನಡೆದು ಬಂದು "Excuse me, I wanted to talk to you for a moment" ಎಂದಿದ್ದೆ. ಮತ್ತದೇ ಸ್ಪುಟ ಇಂಗ್ಲೀಷು. ನಮಗೋ ಲೋಕಲ್ ಇಂಗ್ಲೀಷಿನಲ್ಲಿ ಮಾತಾಡಿದರೆ ಅರ್ಧಂಬರ್ಧ ಅರ್ಥವಾಗುತ್ತಿತ್ತೇ ವಿನಃ ನಿನ್ನ 'ಪ್ಯಾಟೆ' ಇಂಗ್ಲೀಷಿಗೆ ಜವಾಬು ಕೊಡಲು ಸುತಾರಾಂ ಬರುತ್ತಿರಲಿಲ್ಲ, ನಾನಾದರೋ "talk" ಎಂದಷ್ಟೇ ಹೇಳಿಬಿಟ್ಟಿದ್ದೆ. ಆಗ ನಿನಗೇನು ಕಂಡಿತ್ತೋ ನೀನೇ ನಿನ್ನ ಹರುಕು ಮುರುಕು ಕನ್ನಡದಲ್ಲಿ "ಸ್ವಲ್ಪ personal ಆಗಿ talk ಮಾಡ್ಬೇಕಿತ್ತು" ಎಂದಿದ್ದೆ. ನನಗೆ ಸ್ವಲ್ಪ ನಗೆ ಬಂದಿದ್ದು ಹೌದಾದರೂ, ನನ್ನ ಇಂಗ್ಲೀಷಿಗಿಂತ ನಿನ್ನ ಕನ್ನಡ ಉತ್ತಮ ಎನ್ನಿಸಿತ್ತು. "ಅದೇಕೆ ನನ್ನ ಹೆಸರನ್ನು ಕರೆದಾಗ ನೀನು ಹಾಗೆ ನಕ್ಕಿದ್ದು? ಎಲ್ಲರೂ ನನ್ನ ಹೆಸರು ಚೆನ್ನಾಗಿದೆ, differernt ಆಗಿದೆ ಎಂದು ಹೊಗಳುತ್ತಾರೆ, ಆದರೆ ನೀನು ವ್ಯಂಗ್ಯದಿಂದ ನಕ್ಕಿದ್ದೆ, ಯಾಕೆ?" ಎಂದು ಒಂದಾದ ಮೇಲೊಂದು ಪ್ರಶ್ನೆಗಳ ಬಾಣ ಬಿಡುತ್ತಿದ್ದರೆ ನಾನು ನಿನ್ನದೇ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದೆ. ನೀನೇ ಹಿಡಿದು ಅಲುಗಾಡಿಸಿದಾಗಲೇ ಎಚ್ಚರ. ನಿನ್ನ ಸ್ಪರ್ಷದಿಂದಾದ ಪುಳಕದ ಮಧ್ಯವೇ ಉತ್ತರ ಹೇಳಿದ್ದೆ ನಾ, "ವೈತರಣಿ ಎಂದರೆ ಅರ್ಥ ಗೊತ್ತೇ ನಿನಗೆ? ಅದು ಗರುಡ ಪುರಾಣದಲ್ಲಿ ಬರುತ್ತದೆ. ನರಕಕ್ಕೆ ಹೋಗುವ ದಾರಿಯಲ್ಲಿ ಬರುವ ನದಿಯ ಹೆಸರದು. ನಮ್ಮ ಅಪ್ಪನ ಕಾರ್ವನ್ನು ಮಾಡುವಾಗ ಪುರೋಹಿತರು ಹೇಳಿದ್ದರು ಈ ನದಿಯ ಬಗ್ಗೆ. ರಕ್ತ, ಕೀವುಗಳಿಂದ ತುಂಬಿದ ಈ ಗಲೀಜು ನದಿಯ ಹೆಸರನ್ನು ಈ ಹುಡುಗಿಗೆ ಇಟ್ಟಿದ್ದಾರಲ್ಲಾ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಹಾಗಿರುವಾಗ ಯಾವುದರ ಬಗ್ಗೆಯೂ ಸರಿಯಾಗಿ ತಿಳಿಯದ ನಮ್ಮ ಕನ್ನಡ ಸರ್ ನಿನ್ನ ಹೆಸರೇ ಅದ್ಭುತ ಎನ್ನುವ ತರಹ ಆಡುತ್ತಿದ್ದರಲ್ಲ , ಅದಕ್ಕೆ ನಗೆ ಬಂದಿತು. ಬೇಜಾರಾದರೆ ಕ್ಷಮಿಸು" ಎಂದು ಸುಮ್ಮಸುಮ್ಮನೇ ಕ್ಷಮೆ ಕೇಳಿ ಸಭ್ಯಸ್ಥನಾಗಲು ನೋಡಿದ್ದೆ. ನೀನಾದರೋ ಒಮ್ಮೆ ಪೆಚ್ಚಾದಂತೆ ಕಂಡುಬಂದರೂ ಏನೂ ಆಗಲೇ ಇಲ್ಲವೇನೋ ಎಂಬಂತೆ ಒಮ್ಮೆ ನಕ್ಕು "ಫ್ರೆಂಡ್ಸ್?" ಎಂದು ಪ್ರಶ್ನಾರ್ಥಕವಾಗಿ ಕೈಚಾಚಿದ್ದೆ ಎಂಬಲ್ಲಿಗೆ ನಾನು ನಮ್ಮ ಶಾಲೆಯಲ್ಲಿ ನಿನ್ನ ಮೊದಲ ಫ್ರೆಂಡ್ ಆಗಿದ್ದೆ ಮತ್ತು ನಾನು ಇಷ್ಟಪಟ್ಟು ಫ್ರೆಂಡ್ ಆದ ಕೊನೆಯ ಹುಡುಗಿಯಾಗಿದ್ದೆ ನೀನು. ಮತ್ತೊಮ್ಮೆ ಯಾವಾಗಲೋ ನಿಅನಗ್ಯಾಕೆ ಆ ಹೆಸರು ಇತ್ತರು ಎಂದಿದ್ದಕ್ಕೆ ನನಗೂ ಗೊತ್ತಿಲ್ಲ, ಅಪ್ಪ ನನಗೆ ಒಂದು ಡಿಫರೆಂಟ್ ಆಗಿರೋ ಹೆಸರನ್ನು ಹುಡುಕುತ್ತಿದ್ದರಂತೆ, ಫಾದರ್ ರೊಡ್ರೀಗ್ಸ್ ಅವರು ಆ ಹೆಸರನ್ನು ಸೂಚಿಸಿದರಂತೆ, ಅಪ್ಪನಿಗೆ ಯಾಕೋ ಇಷ್ಟವಾಗಿ ಹೋಯಿತು, ಅದೇ ನನ್ನ ಹೆಸರಾಯಿತು.
ಅಂದಿನಿಂದ ವೈತರಣಿ ಎಂಬ ತುಂಬುಕಣ್ಣುಗಳ, ಸಾವಿರ ಫ್ರಿಲ್ಲುಗಳ ಫ್ರಾಕಿನ ಹುಡುಗಿ ನಮ್ಮ ಗುಂಪಿನಲ್ಲಿ, ಎಂದರೆ ನಾನು, ಜೋಸೆಫ್, ಪರಮ, ಕೇಶವರ ಪರಮ ಕಿಲಾಡಿ ಗುಂಪಿನಲ್ಲಿ ಬೆರೆತುಹೋಗಿದ್ದಳು. ಹಾಗೆ ನೋಡಿದರೆ ನೀನು ಹುಡುಗಿಯರ ಜೊತೆಗೆ ಇರುತ್ತಿದ್ದುದೇ ಕಡಿಮೆ. ಪಿ. ಇ. ಪೀರಿಯಡ್ಡಿನಲ್ಲಿ ಉಳಿದ ಹುಡುಗಿಯರೆಲ್ಲ ಕುಳಿತು ಕಟ್ಟೆ ಪಂಚಾಯ್ತಿಯಲ್ಲೋ, ರಿಂಗ್ ಎಸೆಯುವ ಪರಮ ಬೋರಿಂಗ್ ಆಟದಲ್ಲೋ ಮಗ್ನವಾಗಿದ್ದರೆ ನೀನು ಅದ್ಯಾವುದೋ ಒಂದು ಟ್ರಾಕ್ ಪ್ಯಾಂಟ್ ಹಾಕಿಕೊಂಡು ನಮ್ಮೊಂದಿಗೆ ಬಾಲ್ ಬ್ಯಾಡ್ಮಿಂಟನ್ನಿಗೋ, ವಾಲಿಬಾಲಿಗೋ ಬಂದು ಕೂತುಬಿಡುತ್ತಿದ್ದೆ. ಹುಡುಗ-ಹುಡುಗಿಯರಿಗೆ ವ್ಯತ್ಯಾಸವೇ ತಿಳಿಯದಷ್ಟು ಚಿಕ್ಕ ವಯಸ್ಸೇನೂ ಅಲ್ಲದೇ ಹೋದರೂ ಮುಜುಗರವಂತೂ ಅಗುತ್ತಿರಲಿಲ್ಲ. ನೀನಾದರೂ ನಾವು ಹುಡುಗರಿಗಿಂತ ಹೆಚ್ಚಾಗಿ ಉತ್ಸಾಹದಿಂದ ಭಾಗಿಯಾಗುತ್ತಿದ್ದೆ. Infact, ಬಾಲ್ ಬ್ಯಾಡ್ಮಿಂಟನ್ನನ್ನು ನಾವು ಹುಡುಗರಿಗಿಂತ ಚೆನ್ನಾಗಿಯೇ ಆಡುತ್ತಿದ್ದೆ ಎನ್ನಿಸುತ್ತದೆ. ಅದೇನೇ ಇರಲಿ, ನಾನಂತೂ ನಿನ್ನ ಸಾನ್ನಿಧ್ಯದ ಖುಷಿಯನ್ನು ಅತಿಯಾಗಿ ಅನುಭವಿಸುತ್ತಿದ್ದೆ ಎಂಬುದಂತೂ ಸತ್ಯ. ನೀನು ಹುಡುಗರೊಂದಿಗೇ ಹೆಚ್ಚು ಹೊತ್ತು ಇರುತ್ತಿದ್ದೆ ಎಂಬ ವಿಷಯ ನಮ್ಮ ನೇತ್ರಾ ಮೇಡಮ್ ರಂತವರ ಕೆಂಗಣ್ಣಿಗೆ ಗುರಿಯಾಗಿತ್ತು. ಅವರಿಗೇನು ಗೊತ್ತು ನಿನ್ನ ಕರಾಟೆಯ ಪರಿಣತಿ. ವಾಲಿಬಾಲ್ ಆಡುವಾಗ ಅನವಶ್ಯಕವಾಗಿ ಹೆಣ್ಣುಮಕ್ಕಳ ಮೈಮೇಲೆ ಬಿದ್ದಂತೆ ಮಾಡುತ್ತಿದ್ದ ಚಪಲಗಾರ ವಿಷ್ಣುವಿಗೆ ಬುದ್ದಿ ಕಲಿಸಿದ್ದು ನೀನು. ಆ ದಿನ ಮನೆಗೆ ಹೋಗುವಾಗ "ಬಾಲ್ ನನ್ನ ಕಡೆ ಬಂದಾಗಲೆಲ್ಲ ಅವನೂ ಬಂದುಬಿಡುತ್ತಿದ್ದ. ಬಾಲನ್ನು ಹೊಡೆಯುತ್ತಿರಲಿಲ್ಲ, ಸುಮ್ಮನೇ ಮೈಸೋಕಿಸುತ್ತಿದ್ದ. ಎರಡು ಸಲ ಹೇಳಿ ನೋಡಿದೆ. ಕೇಳಲಿಲ್ಲ. ಮುಂದಿನ ಸಲ ಬಾಲ್ ನನ್ನ ಕಡೆ ಬಂದಾಗ ಮತ್ತೆ ಇವನೂ ಬಂದ. ಬಾಲ್ ಹೊಡೆಯುವಂತೆ ಮಾಡಿ ಆ ಜಾಗಕ್ಕೆ ಮೊಣಕಾಲುಗಂಟಿನಲ್ಲಿ ಒಂದು ಒದ್ದೆ ನೋಡು ನೋವಿನಿಂಡ ಮುಖ ಕಿವುಚಿಕೊಂಡಿದ್ದ, ಪಾಪ ಆಟದಿಂದ ಕೂಡ ರಿಟೈರ್ ಆಗಿಬಿಟ್ಟ." ಎಂದು ನೀನು ಹೇಳುತ್ತಿದ್ದರೆ ನಾನು ಬಿದ್ದು ಬಿದ್ದು ನಗುತ್ತಿದ್ದೆನಾದರೂ ಮನಸ್ಸಿನಲ್ಲಿ ಮಾರನೆಯ ದಿನ ಪರಮನೊಂದಿಗೆ ಹೋಗಿ ವಿಷ್ಣುವಿಗೆ ಮತ್ತೆರಡು ಬಿಗಿಯಬೇಕೆಂದು ಲೆಕ್ಕ ಹಾಕುತ್ತಿದ್ದೆ. ನಿನ್ನ ಬಗೆಗಿನ ಎಲ್ಲಾ ವಿಷಯಗಳು ಇಷ್ಟವಾಗುತ್ತಿದ್ದವು. ಅರ್ಧ ಜಗತ್ತಿಗೇ ಕೀಟಲೆ ಮಾಡಿ ಮತ್ತರ್ಧ ಜಗತ್ತನ್ನು ನಗಿಸಿಬಿಡುವ ತುಂಟತನ, ಕೆಟ್ಟದ್ದು ಎಂಬುದೇ ಗೊತ್ತಿಲ್ಲದ ಮುಗ್ಧತನ, ಎಲ್ಲವನ್ನು ಕಲಿಯಬೇಕು ಎಂಬ ತುಡಿತ, ಅತಿ ಸಾಮಾನ್ಯವಾದ ಹೆಬ್ಬಲಿಸಿನಂತ ಹಣ್ಣನ್ನೂ ಅನುಭವಿಸಿ ತಿನ್ನುವ ರೀತಿ, ಎಷ್ಟು ಸಲ ತಿರುಗಿದರೂ ದೇವರಗುಡ್ಡದ ಬಗ್ಗೆ ಮಾವಿನಹೊಳೆಯ ಬಗ್ಗೆ ತಣಿಯದ ಕೌತುಕ, ಪ್ರತೀ ಭಾನುವಾರ ತಪ್ಪದೇ ಮಾಡುತ್ತಿದ್ದ ಪ್ರಾರ್ಥನೆಯಲ್ಲಿದ್ದ ತನ್ಮಯತೆ, ಸಾವಿರ ಫ್ರಿಲ್ಲುಗಳ ಫ್ರಾಕು, ಚರ್ಚಿನ ಬೆಲ್ ಟವರಿನ ಮೇಲಿನ ಏಕಾಂತದ ಹರಟೆಗಳು, ರಾಮಾಯಣ ಮಹಾಭಾರತಗಳ ಬಗ್ಗೆ ನಿನಗೆ ಮತ್ತು ನಿನ್ನ ತಂದೆಯವರಿಗೆ ಇದ್ದ ಆಸಕ್ತಿ, ಏನಾದರೂ ಎಲ್ಲರಿಗೂ ಒಳ್ಳೆಯದಾಗುವಂತದ್ದನ್ನು ಮಾಡಬೇಕೆಂಬ ಹಪಾಹಪಿ, ಅದಕ್ಕೋಸ್ಕರ ಡಾಕ್ಟರ್ ಆಗುತ್ತೇನೆಂಬ ನಿರ್ಧಾರ, ಯುನಿಫ಼ಾರ್ಮ್ ಇರದ ದಿನ ನೀನು ಧರಿಸುತ್ತಿದ್ದ ಬಣ್ಣಬಣ್ಣದ ಸಾವಿರ ಫ್ರಿಲ್ಲುಗಳ ಫ್ರಾಕುಗಳು; ಹೀಗೆ ನಿನಗೆ ಸಂಬಂಧಿಸಿದ ಎಲ್ಲ ಎಂದರೆ ಎಲ್ಲವೂ ಇಷ್ಟವಾಗಲು ಸುರುವಾಗಿತ್ತು. ಅದು ಬಾಲ್ಯದ ಅಪ್ರಾಪ್ತ ಆಕರ್ಷಣೆಯೇ? ಹದಿವರೆಯದ ಅನ್ಯಲಿಂಗ ಸ್ನೇಹದ ಹಂಬಲವೇ? ನಿನ್ನ ಬಗ್ಗೆ ನಿಜವಾಗಿ ಮೂಡಿದ್ದ ಪ್ರೀತಿಯೇ? ಅಂದು ಗೊತ್ತಾಗಿರಲಿಲ್ಲ, ಇಂದಿಗೂ ಗೊತ್ತಿಲ್ಲ. ಗೊತ್ತಾಗಿದ್ದರೂ ಅದನ್ನು ನಿನಗೆ ಹೇಳುತ್ತಿದ್ದೆನಾ? ಗೊತ್ತಿಲ್ಲ, ಆದರೆ ಕೆಲವೊಮ್ಮೆ ನಾವು ಬಾಯಿಬಿಡದೇ ಬಹಳಷ್ಟು ಮಾತನಾಡಿಬಿಡುತ್ತೇವೆ. ಅದರಲ್ಲಿಯೂ ನಿನ್ನಂತ ಸೂಕ್ಷ್ಮಮತಿಗೆ ನನ್ನ ಮೌನದ ಮಾತುಗಳು ಅರ್ಥವಾಗಿರಲಿಲ್ಲ ಎಂದು ನೀನೇ ಈಗ ಬಂದು ಹೇಳಿದರೂ ನಾನು ನಂಬಲಾರೆ.
ಇಂದಿಗೂ ನೆನಪಿದೆ, ಹತ್ತನೇ ಕ್ಲಾಸಿನ ಪರೀಕ್ಷೆಗಳು ಮುಗಿದಿದ್ದವು. ಒಂದು ದಿನ ನೀನು ಕೇಳಿದ್ದೆ, "ಮುಂದೇನು?" ಉತ್ತರ ಸ್ಪಷ್ಟವಿರಲಿಲ್ಲ ನನಗೆ. ಗಂಡು ದಿಕ್ಕಿರದ ಮನೆಯನ್ನು ತತ್ಕಾಲಕ್ಕೆ ನೋಡಿಕೊಂಡು ಹೋಗಬೇಕಾದ ಹೊಣೆ ಹಾಗೂ ಮುಂದೆಯೂ ಅಮ್ಮ ಮತ್ತು ತಂಗಿಯನ್ನು ನೋಡಿಕೊಂಡು ಹೋಗಬೇಕು ಎಂಬ ಗುರಿ, ಸೇರಿಕೊಂಡು "ನಾನು ಊರಿನಲ್ಲಿಯೇ ಉಳಿದು ಸಿದ್ದಾಪುರದಲ್ಲಿ ಪಿ. ಯು. ಸಿ. ಮಾಡುತ್ತೇನೆ" ಎಂದೆ ನಾನು. "ಮನೆಯಲ್ಲಿ ನನ್ನನ್ನು ಮೂಡುಬಿದಿರೆಗೋ, ಉಜಿರೆಗೋ ಹಾಕುವ ಬಗ್ಗೆ ಚರ್ಚೆ ಆಗುತ್ತಿದೆ" ಎಂದೆ ನೀನು. ಆದಿನ ಸಂಜೆ ನಾನು ನಿಮ್ಮ ಮನೆಗೆ ಬಂದಾಗಲೂ ಅದೇ ವಿಷಯದ ಬಗ್ಗೆ ಚರ್ಚೆ ಆಗುತ್ತಿತ್ತು ನಿಮ್ಮ ಮನೆಯಲ್ಲಿ. ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ನಿನ್ನ ಮಾತುಗಳು, "ಪಪ್ಪಾ, ನನಗೆ ನಿಮ್ಮನ್ನೆಲ್ಲ ಬಿಟ್ಟು ಬೇರೆ ಕಡೆ ಹೋಗೋಕೆ ಇಷ್ಟವಿಲ್ಲ. ಗೊತ್ತು ನನಗೆ, education is good over there ಅಂತ. ಆದರೆ ನಿಮ್ಮನ್ನು, ಫ್ರೆಂಡ್ಸನ್ನೆಲ್ಲಾ (ಈ ಶಬ್ದವನ್ನು ಹೇಳುವಾಗ ನೀನು ನನ್ನ ಕಡೆ ನೋಡಿದ ನೋಟವನ್ನು ನಾನು ಹೇಗಾದರೂ ಮರೆತೇನು?) ಬಿಟ್ಟು ಬೇರೆ ಕಡೆ ಹೋಗೋಕೆ ಇಷ್ಟವಿಲ್ಲ. ಒಂದು ವೇಳೆ ನಾನು ಹೋಗೋದಾದರೆ ನಚಿಕೇತನೂ ಬರಬೇಕು, i mean ಅವನನ್ನು ನೀವೇ sponsor ಮಾಡಬೇಕು, as a help." ಎಕ್ಸ್ ಮಿಲಿಟರಿ ಅಪ್ಪನ ಜೊತೆಗೆ ನೀನು ಹಾಗೆ ಮಾತನಾಡುತ್ತಿದ್ದರೆ ನನಗೆ ಒಳಗೊಳಗೇ ಸಂಕೋಚ. "ಆಯ್ತು" ಎಂದು ನಿನ್ನ ಅಪ್ಪ unconditional ಆಗಿ ಒಪ್ಪಿಕೊಂಡಿದ್ದರಾದರೂ ನನಗೆ ನನ್ನ ಸ್ವಾಭಿಮಾನ ಅಡ್ಡಬಂದಿತ್ತು, "ಅಂಕಲ್, ನನಗೆ ಸಹಾಯ ಈಗ ಬೇಕು ಎಂಬುದು ನಿಜವಾದರೂ ಸುಮ್ಮನೇ ದುಡ್ಡು ತೆಗೆದುಕೊಳ್ಳಲು ಮನಸ್ಸು ಒಪ್ಪುವುದಿಲ್ಲ. ಅದನ್ನೇ ಸಾಲವಾಗಿ ಕೊಡಿ, ನಾನು ಕೆಲಸಕ್ಕೆ ಸೇರಿದ ಮೇಲೆ ತೀರಿಸುತ್ತೇನೆ". ನಿನ್ನ ಅಪ್ಪನಾದರೂ ಬೆನ್ನು ತಟ್ಟಿ "ಅದು ಸ್ವಾಭಿಮಾನ ಎಂದರೆ. ನನಗೆ ನೀನು ಬೇರೆ ಅಲ್ಲ, ವೈತಿ ಬೇರೆ ಅಲ್ಲ. ನಿನ್ನ ಎಜುಕೇಶನ್ ಭಾರ ನನ್ನದು, ಈ ಋಣವನ್ನು ನೀನು ಓದಿ ತೀರಿಸು, ಸಾಕು ನನಗೆ ಅಷ್ಟು. ಸಾಧ್ಯಾವಾದರೆ ಮುಂದೆ ಯಾರಿಗಾದರೂ ನೀನು ವಿದ್ಯಾದಾನ ಮಾಡು " ಎಂದಿದ್ದರು. ಅಪ್ಪ ಸತ್ತ ಮೇಲೆ ಎಲ್ಲಿ ನಮ್ಮ ಕುಟುಂಬದ ಹೊಣೆ ನಮ್ಮ ಮೇಲೆ ಬಂದು ಬಿಡುತ್ತದೆಯೇನೋ ಎಂದು ಗೊತ್ತೇ ಆಗದಂತೆ ಕಳಚಿಕೊಂಡಿದ್ದ ಬಂಧುಬಳಗದವರನ್ನು ಕಂಡು ಬೆಳೆದಿದ್ದ ನನಗೆ ನಿನ್ನಪ್ಪ ದೈವಸದೃಶವಾಗಿ ಕಂಡಿದ್ದು ಸುಳ್ಳಲ್ಲ.
ಹಾಗೆ ಇಬ್ಬರೂ ಉಜಿರೆಗೆ ಹೋಗಿ ಸೇರುವ ಹೊತ್ತಿಗೆ ನಿನ್ನ ತಂದೆಯವರಿಗೆ ಅಘನಾಶಿನಿ ಪ್ರೊಜೆಕ್ಟಿನಿಂದ ದೆಲ್ಲಿ ಪವರ್ ಕಾರ್ಪೋರೇಶನ್ನಿಗೆ ಟ್ರಾನ್ಸ್ ಫ಼ರ್ ಆಗಿತ್ತು. ನಮ್ಮ ಕಾಲೇಜು ಸುರುವಾಗಿ ಎರಡು ವಾರ ಆಗಿತ್ತಷ್ಟೇ, ನೀನು ಅಪ್ಪಾಜಿಯ ಜೊತೆಗೆ ದೆಲ್ಲಿಗೆ ಹೋಗಿದ್ದೆ. ಅಂದು ಹೋಗುವ ದಿನ ಇಬ್ಬರ ಕಣ್ಣ ತುದಿಯಲ್ಲೂ ನೀರಿತ್ತು. "ನಚಿ, ಅಪ್ಪನಿಗೆ ದೆಲ್ಲಿಯಲ್ಲಿ ಕೆಲಸವಾಗಿದೆ. ಎಲ್ಲರೂ ಶಿಫ಼್ಟ್ ಆಗುತ್ತಿದ್ದಾರೆ, ನಾನೂ ಹೋಗಬೇಕು. ಮೊದಲು ಅಪ್ಪ ಸರ್ವೀಸಿನಲ್ಲಿದ್ದಾಗ ನಾನು ಅಮ್ಮ ಬೆಂಗಳೂರಿನಲ್ಲಿರುತ್ತಿದ್ದೆವಲ್ಲಾ, ಹಾಗೆಯೇ ಉಜಿರೆಯಲ್ಲಿ ಉಳಿದುಬಿಡೋಣ ಎಂದೆ, ಅಪ್ಪ ಒಪ್ಪಲಿಲ್ಲ, ಅಮ್ಮ ಕೂಗಾಡಿಬಿಟ್ಟಳು, "ಎಲ್ಲಾ ಶಾಸ್ತ್ರಿಗಳ ಮಗನಿಂದ. ಅವನ ಎದುರು ಅಪ್ಪನೇ ಬೇಡಾಗಿ ಬಿಟ್ಟರಲ್ಲ" ಎಂದು. ನನಗೆ ಮೊದಲ ಬಾರಿ ಅಮ್ಮನಿಗೆ ನನ್ನ ಮನಸ್ಸು ಅರ್ಥವಾಗಿದೆ ಎನ್ನಿಸಿತು. ಯಾಕೋ ಅಪ್ಪನಿಗೂ ಬೇಜಾರಾದ ಹಾಗೆನ್ನಿಸಿತು. ಅವರಿಗೆ ಬೇಜಾರು ಮಾಡಲು ನನಗೆ ಇಷ್ಟವಿಲ್ಲ, ನಾನು ಹೋಗುತ್ತಿದ್ದೇನೆ. ಹೇಗಾದರೂ ಮಾಡಿ ಆರು ತಿಂಗಳಿಗೋ, ವರ್ಷಕ್ಕೋ ಬಂದೇ ಬರುತ್ತೇನೆ, ಯಾವುದೇ ಖರ್ಚಿಗೆ ದುಡ್ಡು ಬೇಕಾದರೆ ಅಪ್ಪನಿಗೆ ಪತ್ರ ಬರೆ, ಮನಿ ಆರ್ಡರ್ ಮಾಡುತ್ತಾರೆ. ನನ್ನ ಮೇಲೆ ಪ್ರಾಮಿಸ್ ಮಾಡು "ಸಂಕೋಚ ಮಾಡಿಕೊಳ್ಳುವುದಿಲ್ಲ"ಎಂದು. ನಾನು ಪತ್ರ ಬರೆಯುತ್ತೇನೆ ನಿನಗೆ. ಒಂದು ಸಲ ಅಡ್ರೆಸ್ ಗೊತ್ತಾದ ತಕ್ಷಣ ತಿಳಿಸುತ್ತೇನೆ." ಎನ್ನುತ್ತ ನೀನು ಮತ್ತೊಂದು ಸಾವಿರ ಫ್ರಿಲ್ಲುಗಳ ಫ್ರಾಕನ್ನು ಒದೆಯುತ್ತ ತಿರುತಿರುಗಿ ನೋಡುತ್ತಾ ನಿನ್ನ ರೂಮನ್ನು ಖಾಲಿ ಮಾಡಿ ನಿನ್ನ ಅಪ್ಪನೊಂದಿಗೆ ಉಜಿರೆಯಿಂದ ಹೋಗುತ್ತಿದ್ದರೆ ನಾನು ಹಾಸ್ಟೆಲ್ಲಿಗೆ ಓಡಿ ಹೋಗಿ ಬಾತ್ ರೂಮಿನಲ್ಲಿ ಚಿಲಕ ಹಾಕಿಕೊಂಡು ಅತ್ತಿದ್ದೆ, ತಿಳಿಯದೇ ಆವರಿಸಿದ್ದ ಅಗಾಧ ಶೂನ್ಯತೆಯ ಭಾವಕ್ಕೆ. ಅದೇ ನಿನ್ನ ಜೊತೆಗಿನ ಕೊನೆಯ ಭೇಟಿ ಎಂಬುದು ಗೊತ್ತಿದ್ದರೆ ನನ್ನ ಪಾಡು ಏನಾಗುತ್ತಿತ್ತೋ ನಾ ಕಾಣೆ.
ನೀನು ದೆಲ್ಲಿಗೆ ಹೋಗಿ ಎರಡು ತಿಂಗಳಾಗಿದ್ದವು, ಒಂದು ವಾರ ನಾನು ಕಾಗದ ಬರೆಯುವುದು ಮುಂದಿನ ವಾರ ನೀನು ಉತ್ತರ ಬರೆಯುವುದು ಎಂಬ ಲೆಕ್ಕದಲ್ಲಿ ಒಟ್ಟು ಎಂಟು ಪತ್ರಗಳು ನಮ್ಮ ಮಧ್ಯೆ ತಿರುಗಿದ್ದವು. ಅದರಲ್ಲೆಲ್ಲ ಪ್ರೀತಿಯಿತ್ತೇ? ಇಲ್ಲ , ಕೇವಲ ಸಂತೋಷವಿತ್ತು ಆ ಪತ್ರಗಳಲ್ಲಿ, ಪರಸ್ಪರ ಕಾಳಜಿ, ಅಕ್ಕರೆಯಿತ್ತು, ಹವಾಮಾನದ, ಸ್ಥಳದ, ಸುತ್ತಮುತ್ತಲಿನ ವಿದ್ಯಮಾನದ ಬಗೆಗಿನ ಹಂಚಿಕೆಯಿತ್ತು, ಹೊರಜಗತ್ತಿನ ಬಗೆಗಿನ ಅಚ್ಚರಿಯಿತ್ತು. ಯಾವ ಪತ್ರವೂ ಐದು ಪುಟಕ್ಕಿಂತ ಕಡಿಮೆಯಿದ್ದ ನೆನಪಿಲ್ಲ ನನಗೆ. ಒಂದು ಸಲ ನನ್ನ ಹೊಸ ಬ್ಯಾಂಕ್ ಅಕೌಂಟಿಗೆ ನಿಮ್ಮಪ್ಪ ದುಡ್ಡನ್ನು ಹಾಕಿದ್ದರು. ಅದೊಂದು ದಿನ ಕಾಲೇಜಿನಿಂದ ಬರುತ್ತಲೇ ವಾರ್ಡನಿನಿಂದ ಕರೆ ಬಂದಿತ್ತು. ದೆಲ್ಲಿಯಿಂದ ನಿನಗೊಂದು ಕರೆ ಬಂದಿದೆ ಎಂದಾಗ ಮನಸ್ಸು ಕೇಡನ್ನೇಕೆ ನೆನಸಿತ್ತೋ ನಾ ಕಾಣೆ. ಅತ್ತ ಕಡೆಯಿಂದ ನಿನ್ನ ಅಪ್ಪ ಮಾತನಾಡಿದ್ದರು, "ನಚಿ, ವೈತಿಗೆ ಮಲೇರಿಯಾ ಬಂದಿತ್ತು. ಗೊತ್ತೇ ಆಗಲಿಲ್ಲ ಮಲೇರಿಯಾ ಎಂದು, ಒಂದು ವಾರದಿಂದ ಜ್ವರ ಇತ್ತು, ಮೊದಲೆರಡು ದಿನ ನಮಗೇ ಗೊತ್ತಿರಲಿಲ್ಲ. ಗೊತ್ತಲ್ಲ ನಿನಗೆ ಅವಳ ಬಗ್ಗೆ, ಜ್ವರ ಇತ್ತು ಎಂದೂ ನಮಗೆ ಗೊತ್ತಿರಲಿಲ್ಲ, ಮತ್ತೆರಡು ದಿನ ಕ್ಲಿನಿಕ್ಕಿಗೆ ಕರೆದುಕೊಂಡು ಹೋದೆವಾದರೂ ಅವರೂ ಇದು ವೈರಲ್ ಫೀವರ್ ಇರಬಹುದು ಎಂದು ಔಷಧಿಯನ್ನು ಕೊಟ್ಟರು. ಜ್ವರ ಮತ್ತೂ ಜೋರಾದಾಗ ಅಡ್ಮಿಟ್ ಮಾಡಿಸಲು ಹೇಳಿದರು. ಎರಡು ದಿನ ಡ್ರಿಪ್ಸ್ ಮೇಲೇ ಇದ್ದಳು, ಈಗ ನಿನ್ನ ಜೊತೆಗೆ ಒಮ್ಮೆ ಮಾತನಾಡಲೇಬೇಕು ಎಂದು ಹೇಳುತ್ತಿದ್ದಾಳೆ. ಕೊಡುತ್ತೇನೆ ಅವಳಿಗೆ" ಎಂದಾಗಲೇ ನನ್ನ ಜಂಘಾಬಲವೆಲ್ಲಾ ಉಡುಗಿ ಹೋಗಿತ್ತು. "ನಚಿ, ನನಗ್ಯಾಕೋ ಇವತ್ತೇ ಕೊನೇ ದಿನ ಅನ್ನಿಸ್ತಾ ಇದೆ ಕಣೋ. but, ನಾನು ಬದುಕಬೇಕೋ. please, ನನಗೋಸ್ಕರ pray ಮಾಡೋ ನಿಮ್ಮ ದೇವ್ರ ಹತ್ರಾನೂ, ಹೇಗಿದೀಯ ನೀನು? ನನಗ್ಯಾಕೋ ಮತ್ತೆ ಮಾತಾಡಲ್ಲಾ ನಾನು ಅನ್ನಿಸ್ತಾ ಇದೆ, ಶಕ್ತೀನೇ ಇಲ್ಲ ಕಣೋ, ನನಗೋಸ್ಕರನಾದ್ರೂ ನೀನು ದೊಡ್ಡ ಮನುಷ್ಯ ಆಗ್ಬೇಕೋ. ಹಾಗೆ ಆದಾಗ ನಾನು ಮರೆತು ಹೋಗ್ತೀನೇನೋ? " ಇಷ್ಟು ಹೇಳುವುದರ ಒಳಗೆ ನಿನ್ನ ಧ್ವನಿ ಬಹಳ ಸಲ ಒಡೆದಿತ್ತು. ನಾನು ಅಲ್ಲಿಯವರೆಗೆ ಕಾಣದ ಕೇಳದ ಎಲ್ಲ ದೇವರಿಗೂ ಹರಕೆ ಒಪ್ಪಿಸಿದೆ. "ಏನೂ ಆಗಲ್ಲ ವೈತಿ, ನೀನು ಹುಷಾರಾಗ್ತೀಯಾ, ಆಗೇ ಆಗ್ತೀಯಾ" ಎಂದು ಹೇಗೆ ಹೇಳಿ ಪೂರೈಸಿದೆನೋ, ಬಿಕ್ಕಿ ಬಿಕ್ಕಿ ಅತ್ತಿದ್ದೆ, ಅದೇ ಫೋನ್ ಬೂತಿನಲ್ಲಿ. "ಅಳಬೇಡ ನಚಿ ಪ್ರಾಮಿಸ್ ಮಾಡು ನನಗೆ ಅಳಲ್ಲ ಅಂತ " ಎಂದು ನನ್ನಿಂದ ಪ್ರಮಾಣ ತೆಗೆದುಕೊಂಡ ಮೇಲೆಯೇ ನೀನು ಫೋನ್ ಇಡಲು ಬಿಟ್ಟಿದ್ದು. ಅದೇ ದಿನ ನೀನು ಕೊನೆಯುಸಿರೆಳೆದೆ ಎಂದು ನಿಮ್ಮಪ್ಪ ಮತ್ಯಾವಾಗಲೋ ಹೇಳಿದರು. ಅವರಾದರೂ ಕೊನೆಯವರೆಗೂ ನನ್ನ ಎಜುಕೇಶನ್ನಿನ ದುಡ್ಡನ್ನು ಭರಿಸಿದರು.
ಇದೆಲ್ಲಾ ಆಗಿ ಇಂದಿಗೆ ಹನ್ನೆರಡು ವರ್ಷಗಳಾಗಿವೆ ವೈತಿ. ನಾನು ಪ್ರತಿಷ್ಟಿತ ಕಂಪೆನಿಯಲ್ಲಿ ಇಂಜಿನಿಯರ್. ಮನೆಯಲ್ಲಿ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ಈಗಲೂ ಕೆಲವೊಮ್ಮೆ ಅನಿಸುತ್ತದೆ, ಈ ಮದುವೆ ಎನ್ನುವುದು ನಿನ್ನ ನೆನಪಿಗೆ ನಾನು ಮಾಡುವ ದ್ರೋಹವೇ ಎಂದು. ಕೆಲವೊಮ್ಮೆ ಹೌದೆನ್ನಿಸುತ್ತದೆ, ಕೆಲವೊಮ್ಮೆ ನಾನೇ ಏನೇನೋ ಸಮರ್ಥನೆ ಕೊಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಎಲ್ಲಾ ಪೊಳ್ಳು ಎನ್ನಿಸುತ್ತದೆ. ಅಷ್ಟಕ್ಕೂ ಈ ಪತ್ರ ಯಾಕೆ ಬರೆಯುತ್ತಿದ್ದೇನೆ? ಗೊತ್ತಿಲ್ಲ. ಕಾಲನಿಗೆ ಎಂತಹ ನೋವನ್ನಾದರೂ ಮರೆಸುವ ಶಕ್ತಿಯಿದೆ ಎಂಬುದು ನಿಜ ವೈತಿ. ಆದರೆ ನೆನಪನ್ನು ಮರೆಸುವ ಶಕ್ತಿ ಇಲ್ಲವೇನೋ, ನಿನ್ನ ಬಗೆಗಂತೂ ಸಾಧ್ಯವಾಗಿಲ್ಲ. ಅಂದ ಹಾಗೆ ನಾನು ನಿನ್ನನು ಮರೆತಿಲ್ಲ, ಮರೆಯಲು ಸಾಧ್ಯವೂ ಇಲ್ಲ. ನೀನು ಜೀವಂತವಾಗಿಲ್ಲ ಎಂಬುದನ್ನು ಅರಗಿಸಿಕೊಳ್ಳಲೇ ನನಗೆ ಬಹಳಷ್ಟು ಸಮಯ ಹಿಡಿದಿದೆ. ಎಲ್ಲರೂ ಸಾಯುವಾಗ ತಮ್ಮ ಹಿಂದೆ ಒಂದು ಶೂನ್ಯವನ್ನು ಬಿಟ್ಟು ಹೋಗುತ್ತಾರೆ ಎಂಬುದು ನಿಜವೇ ಹೌದಾದರೂ ನೀನು ಇಷ್ಟು ದೊಡ್ಡ ಶೂನ್ಯವನ್ನು ಬಿಟ್ಟು ಹೋಗುತ್ತಿ ಎಂದು ತಿಳಿದಿರಲಿಲ್ಲ, ಇರಲಿ ಬಿಡು. ಆ ಶೂನ್ಯವನ್ನು ತುಂಬುವಷ್ಟು ನೆನಪನ್ನು ಬಿಟ್ಟು ಹೋಗಿದ್ದೀಯಾ. ಅದಕ್ಕಾಗಿ ನಾನು ಕೃತಜ್ಞ.
ಸದ್ಯಕ್ಕಿಷ್ಟೇ ಇರಲಿ. ಮತ್ತೆ ಬರೆಯುತ್ತೇನೆ.
ಯಾವುದೋ ಮಾಯದಲ್ಲಿ ಮತ್ತೆ ನೀನು ಜೀವಂತವಾಗಿ ಬರುತ್ತೀಯಾ ಎಂದು ಕಾಯುತ್ತಲೇ ಇರುವ,
ನಚಿ
(ನಚಿಕೇತ ಶಾಸ್ತ್ರಿ)
*'ಪ್ರೀತಿ'ಯ ವೈತರಣಿ & 'ಪ್ರೀತಿಯ' ವೈತರಣಿ - ಎರಡೂ ಅರ್ಥಪೂರ್ಣ ಎನ್ನಿಸಿತು!
Super Subramanya :D
ReplyDeleteಧನ್ಯವಾದಗಳು ಅನಾಮಧೇಯ ಮಿತ್ರ!
DeleteRangu rangena kathegalanna baritheera subrahmanya ravare :)
ReplyDeleteಬ್ಲಾಗಿಗೆ ರಂಗು ಬರುವುದು ನಿಮ್ಮಂತ ಓದುಗರಿಂದಲೇ ಬಿಡಿ. ಅನಾಮಧೇಯ ಸ್ನೇಹಿತರೆ!
DeleteSuper Kanri Hegde avare :) ello ondu kade nimmade nenapugalu shastri Mukaantara vyaktavaagide anisthide... Edakke Neev en heylthira Hegde?!
ReplyDeleteಧನ್ಯವಾದಗಳು ಕೀರ್ತಿ ಅವರೇ . ಖುಷಿ ಆಯಿತು ನಿಮ್ಮ ಪ್ರತಿಕ್ರೀಯೆ ನೋಡಿ. ಆದರೆ ಇದು ನಿಜ ಜೀವನದ ಕಥೆಯಲ್ಲ. ನನಗೆ ವೈತರಣಿ ಎಂಬ ಹೆಸರಿನ ಯಾರೂ ಗೊತ್ತಿಲ್ಲ ;) ವೈತರಣಿ ಎಂಬ ಹೆಸರನ್ನು ಯಾರೂ ಇಟ್ಟುಕೊಂಡಿಲ್ಲ ಎಂದುಕೊಳ್ಳುತ್ತೇನೆ. ಈ ಕಥೆ pure imagination. :) ನಚಿಕೇತ ಶಾಸ್ತ್ರಿಗೇ ಗೊತ್ತು ವೈತರಣಿ ನಿಜವಾಗಿಯೂ ಇದ್ದಾಳೆ ಎಂದು! ;)
Deletesooper...........
ReplyDeletedhanyavaadagalu samanvaya :)
Deleteಸುಬ್ರಹ್ಮಣ್ಯ ಹೆಗಡೆಯವರೇ,
ReplyDeleteಬಹಳ ಇಷ್ಟಪಟ್ಟು, ಅನುಭವಿಸಿ ಓದಿದ ಬರಹಗಳಲ್ಲೊಂದು ಇದು.
ಇದರ ಹಿನ್ನೆಲೆ ಕೊಂಚ ಹಳ್ಳಿಗಳ ಶಾಲೆಗಳ ವಾತಾವರಣವಿರುವುದರಿಂದ ನಮ್ಮೂರ ಕತೆಯೊಂದನ್ನು ಓದಿದ ಅನುಭವವಾಯಿತು.
ನಿಮ್ಮಂತೆ ನನಗೂ ರವಿ ಬೆಳಗೆರೆ ಇಷ್ಟ.
ಅವರ ಶೈಲಿ ನಿಮ್ಮ ಬರಹದಲ್ಲಿ ಪ್ರಭಾವ ಬೀರಿದೆ ಅನ್ನುವುದನ್ನು ಕೇವಲ ಧನಾತ್ಮಕವಾಗಿ ಮಾತ್ರ ಹೇಳುತ್ತಿದೇನೆ.
ಉಳಿದಂತೆ ನವಿರಾದ ನಿಷ್ಕಲ್ಮಶ ಪ್ರೇಮಕತೆಯೊಂದನ್ನು ಒಂದೊಂದು ಪದದಲ್ಲಿಯೂ ಭಾವನೆಗಳನ್ನು ಪೋಣಿಸಿ ಸುಂದರವಾಗಿ ಹೆಣೆದಿದ್ದೀರ. ಎಲ್ಲೂ ಬೇಸರಗೊಳಿಸುವುದಿಲ್ಲ
ಹವ್ಯಾಸದಲ್ಲಿಯೇ ವಿಭಿನ್ನವಾದ ವಿಶೇಷ ಲೇಖಕರು ಸೃಷ್ಟಿಯಾಗುವುದುಂಟು.
ನಿಮ್ಮ ಸಾಹಿತ್ಯಕೃಷಿ ಹೀಗೆಯೇ ಮುಂದುವರೆಯಲಿ:)
ಸಂತೋಷ್ ಅವರೇ, ಬಹಳ ಎಂದರೆ ಬಹಳ ಖುಷಿ ಆಯ್ತು ನಿಮ್ಮ ಕಾಮೆಂಟ್ ನೋಡಿ.
Deleteನಾವು ಚಿಕ್ಕಂದಿನಲ್ಲಿ ಬೆಳೆದ ವಾತಾವರಣ, ಆ ಪರಿಸರ ನಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತದೆಯಲ್ಲಾ , ಮೆಟ್ರೋ ಸಿಟಿಗೆ ಬಂದು ಆರು ವರ್ಷಗಳಾದರೂ ನನ್ನ ಮೂಲ ಯೋಕಾನೆಗಳು ಹಳ್ಳಿಗನ ಧಾಟಿಯಲ್ಲಿಯೇ ಇರುತ್ತದೆ. ಬಹುಶಃ ನಿಮಗೂ ಇದರ ಅನುಭವವಾಗಿರಲಿಕ್ಕೆ ಸಾಕು.
ರವಿ ಬೆಳಗೆರೆಯವರ ಬರಹ ಪ್ರಭಾವ ಇರುವುದು ಸತ್ಯವೇ
ಬಾಲ್ಯದ ನೆನಪುಗಳ ಜೊತೆಗೆ ಒಂದು ಪ್ರೇಮ ಕಥೆ ಮಿಶ್ರವಾದದ್ದಾರ ಪ್ರಭಾವದ ಉತ್ಪನ್ನವೇ ಒಬ್ಬ ವೈತರಣಿ.
ಮತ್ತೊಮ್ಮೆ ಧನ್ಯವಾದಗಳು ನಿಮ್ಮ ಪ್ರತಿಕ್ರೀಯೆಗೆ.
ತುಂಬಾ ಸಲ ಭಾವಸ್ರಾವವನ್ನು ಇಷ್ಟಪಟ್ಟಿದ್ದೇನೆ. ನಾನು ಇಷ್ಟಪಟ್ಟ ಇನ್ನೊಂದು ಸ್ರಾವ ಇದು ವೈತರಣಿ. ಹೆಸರೇಕೋ ಅಷ್ಟು ಸರಿಯಾಗಲಿಲ್ಲವೇನೋ, ಬರಹ ಚೆನ್ನಾಗಿದೆ. ಬರೆಯುತ್ತಿರಿ.,
ReplyDeleteತುಂಬಾ ಖುಷಿ ಆಯ್ತು , ಒಂದು ಭಾವದ ಸ್ರಾವ ಧನ್ಯವಾಗುತ್ತೆ ಯಾರಿಗಾದರೂ ಇಷ್ಟವಾದರೆ. ವೈತರಣಿ ಧನ್ಯೆ ಬಿಡಿ :)
Deleteಒಬ್ಬ ಫಾದರ್ ವಿಭಿನ್ನ ಹೆಸರನ್ನು ಹುಡುಕುತ್ತಿರುವ ಕ್ರಿಶ್ಚಿಯನ್ ತಂದೆಗೆ ಸೂಚಿಸುವ ಹೆಸರದು, ಬಹುಶಃ ಹಾಗೆ ಸೂಚಿಸುವ ಫಾದರರಿಗೆ ಅದರ ಅರ್ಥ ಗೊತ್ತಿರಲಿಕ್ಕಿಲ್ಲವಷ್ಟೇ. ವೈತರಣಿ ಎಂಬ ಹೆಸರನ್ನೇ ಏಕೆ ತೆಗೆದುಕೊಂಡರೆ ಎಂದರೆ ಹುಡುಗಿಯ ಎದುರು ಹುಡುಗ ತನ್ನ ಪಾಂಡಿತ್ಯ ತೋರಿಸಿ ಅವಳ ಕಣ್ಣಲ್ಲಿ ತಾನು ಹಿರಿಯ ಎಂದು ತೊರಿಸಕೊಲ್ಲಬೇಕೆನ್ಬ ತುಡಿತಕ್ಕೆ ಈ ಹೆಸರು ಸಹಾಯ ಮಾಡುತ್ತಿತ್ತು. ಮತ್ತು ಅರ್ಥ ಗೊತ್ತಿರದಿದ್ದವರಿಗೆ ಇದು ಅಪ್ಯಾಯವಾಗಿ ಕಾಣುವ ಹಾಗಿತ್ತು ಅಲ್ಲವೇ? ನನಗೆ ಹಾಗೆನ್ನಿಸಿತು. :)
superb subbu...i ilke your way of writing...
ReplyDeletesuperb subbu... i like your style of writing...keep it up...post more and more stories...
ReplyDeletethank you keerthan :) reader's liking is the inspiration for every writer, however small he might be writing, and thanks for pouring it on me. Thank you again.
Deleteಚಂದದ ಕಥೆ, ನವಿರಾದ ನಿರೂಪಣೆ...ತುಂಬಾ ಇಷ್ಟ ಆಯ್ತು :))
Deletesumati akka. khushi aythu :)
Deleteಸೂಪರ್ ಭಟ್ರೆ.. ಕತೆ ಒಳಗೇ ಮುಳುಗಿ ಹೋಗಿದ್ದೆ.. ಸಿದ್ದಾಪುರದತ್ರದ ಶಾಲೆಯಲ್ಲೇ ಕಳೆದುಹೋದಂಗೆ ಅನುಸ್ತು :-)
ReplyDeleteಉಜಿರಿಗೆ ಬಂದಾಗ ಕಥೆಗೆ ಸ್ವಲ್ಪ ಜಾಸ್ತಿನೆ ವೇಗ ಸಿಕ್ಕಂಗೆ ಅನುಸ್ತು.. ಚೆನಾಗಿತ್ತು :-)
thank you kanree :) innoo swalpa slow aagi baredidde, edit madbekidre cut madidde :)
Deleteಸುಂದರ ಕಥೆ ನಿರೂಪಣೆ ಶೈಲಿ ತುಂಬಾ ಇಷ್ಟವಾಯಿತು,ವೈತರಿಣಿ ಅಪ್ತವಾದಳು.ಬರೆಯುತ್ತಿರಿ.:-)
ReplyDeletethank you vaishu :) means alot
Deleteವೈತರಣಿ ಹೆಸರು ಸುಂದರವಾಗಿದೆ ವಿವರ ಹೇಳದಿದ್ದರೆ , ವೈತರಣಿ ಪ್ರೇಮ ಕಲ್ಯಾಣಿಯಾದ ಬಗೆ ಚೆನ್ನಾಗಿದೆ . ಬರೆಯುತ್ತಿರಿ
ReplyDeletehoudu, very first time i heard vaitarani as a name i also felt it is such a nice name , but artha berene iddiddu gottirlilla. adroo ade hesrannu itte namma heroine ge , yaako different aagi irli antha :)
Deleteನನ್ನ First Reaction "ಯಪ್ಪಾ ಇಷ್ಟುದ್ದ ಓದ್ಬೆಕಾ...?"
ReplyDeleteಆದರೆ, "ವೈತರಣಿ" ಅನ್ನೋ ರೋಮಾಂಚನ ಮಾಡುವ ಪದವು ನನ್ನ ಅದಾವ ಮಾಯಾಲೋಕಕ್ಕೆ ಕೊಂದೊಯ್ದಿತ್ತೋ ಕಾಣೆ, ಅದನ್ನ ಓದಿ ಮುಗಿಸುವಷ್ಟರಲ್ಲಿ ನನ್ನ ಕಣ್ಣಾಲಿಗಳು ನನಗರಿಯದೆ ತೆವವಾಗಿದ್ದವು...
ನನ್ನನ್ನ ಈ ರೀತಿಯಾಗಿ ಕಾಡಿದ ಬರಹ ಇದುವರೆಗೂ ಬಂದೆ ಇಲ್ಲಾ ಅಂತಾ ..............
ನಾನು ಭಾವುಕನಾಗಿದ್ದೇನೆ .......
ಹೇಳುವುದಿನ್ನೂ ಬೆಟ್ಟದಷ್ಟಿದೆ
"ವೈತರಣಿ" ಓದಿದ ಮೇಲೆ ನಿಮ್ಮ ಕವನ ಅರ್ಥವಾಯಿತು.....
ಆದರೆ, ನನಗೆ ನಾನೇ ಅರ್ಥವಾಗದೇ ಹೋದೆ................... [ಹೇಳಲಾಗುತ್ತಿಲ್ಲ]
raghavare,
Deleteವೈತರಣಿ ಕಥೆ ಬರೀವಾಗ ಕಣ್ಣಾಲಿ ಒದ್ದೆ ಆದಂಗೆ ಆಗಿದ್ದು ಹೌದು ನನಗೂನು, ಹಾಗಂತ ಅದು ಭಾರೀ ಗ್ರೇಟ್ ಅಂತ ಏನೂ ಅಲ್ಲ, ಆದರೂ ಯಾಕೋ ಬರೀತಾ ಬರೀತಾ ಆಪ್ತಾವಗುಟ್ಟಾ ಹೋದವಳು ಅವಳು. ಅವಳು ಸಾಯ್ಬೇಕಿದ್ರೆ ಯಾರೋ ಪರಿಚಯದವರು ತೀರಿಕೊಂಡಾಗ ಉಂಟಾಗುವ ಶೂನ್ಯವೇ ಉಂಟಾಗಿತ್ತು ಎಂದರೆ ಅತಿಶಯೋಕ್ತಿ ಅಲ್ಲ ನನ್ನ ಫ್ರೆಂಡ್ ಒಬ್ಬ ಪಿ. ಯು. ದಲ್ಲಿ ಇರ್ಬೇಕಿದ್ರೆ ತೀರಿಕೊಂಡಿದ್ದ . ಆಗ ಹೇಗೆ ಎನಿಸಿತ್ತೋ ವೈತಿ ಸಾಯೋವಾಗ್ಲೂ ಹಾಂಗೆ ಅನ್ಸಿತ್ತು.
ತುಂಬಾ ಖುಷಿ ಆಯಿತು ನಮ್ಮ ವೈತರಣಿಯನ್ನು ಇಷ್ಟ ಪಟ್ಟಿದ್ದಕ್ಕೆ. :)
ಅಯ್ಯಪ್ಪಾ ದೇವಾ...
ReplyDeleteನಿಮ್ಮ ಬರಹಕ್ಕೊಂದು ಸಲಾಮ್...
ಓದಿಸಿಕೊಂಡು ಹೋದ ಬರಹವದು...
ತುಂಬಾ ದಿನಗಳ ನಂತರ ಒಂದು ಸುಂದರ ಕಥೆ ಓದಿದೆ...
ಬರೀತಾ ಇರಿ ಅಷ್ಟೇ..
ನಮಸ್ತೆ:)
ಖುಷಿ ಆಯ್ತು ನಮ್ಮ ವೈತರನಿಯನ್ನು ಇಷ್ಟ ಪಟ್ಟಿದ್ದಕ್ಕೆ :) ಮತ್ತೆ ಬನ್ನಿ .
Deleteಇಷ್ಟ ಆಯಿತು ಸುಬ್ಬು :-) keep it up :-)
ReplyDeleteThis is Thanuj.
ಯಾವುದೋ ಭಾವ ತರಂಗಗಳ ಸುಳಿಗೆ ಸಿಕ್ಕಿ ಮನಸು ಮೌನದ ಮೊರೆ ಹೋಗಿದೆ....
ReplyDeleteಭಾವ ಬರಹ ಮನದೆ ಅಚ್ಚಾಗಿ ಕೂರುತಿದೆ ಅಂತ ಹೇಳಲಷ್ಟೇ ಶಕ್ಯ ನಾನು....
ಮನ ಮುಟ್ಟಿದ ಭಾವ ...ನಿಮ್ಮ ವೈತು ನಂಗೂ ಇಷ್ಟವಾದ್ಲು ..
ReplyDeleteತುಂಬಾ ನವಿರಾಗಿದೆ ನೆನಪುಗಳ ಬುತ್ತಿ