Wednesday, 1 May 2013

ಹಾಡು ಮುಗಿದರೇನು...




ಬಹಳ ಹಿಂದೆ ಬರೆದ ಕವನ. ಬ್ಲಾಗಿಗೆ ಹಾಕಬಾರದು ಎಂದುಕೊಂಡಿದ್ದೆ, ಆದರೂ ಪ್ರಕಟಿಸುತ್ತಿದ್ದೇನೆ. ದಕ್ಕದ ಪ್ರೀತಿಗೆ, ಮಾತಾಗಿ ಮೂಡದ ಮನಸ್ಸಿನ ಭಾವನೆಗಳಿಗೆ  ಕೊರಗಿ ನರಳುವ ಒಂದು ಮನಸಿನ ಭಾವನೆಗಳೋ ಇವು? ಪ್ರೀತಿಸುತ್ತಿದ್ದೇನೆ ಎಂಬ ಭಾವವನ್ನು ಪ್ರೀತಿಸಿದ ಹುಚ್ಚುಮನಸ್ಸಿನ ಗೊಂದಲವೋ ಇವು? ಎಲ್ಲ ಬಿಟ್ಟೆನೆಂದ ಮೇಲೂ ಬಿಡಲಾಗದ ಬಂಧದೊಳಗೆ ಸಿಕ್ಕಿಬಿದ್ದ ತೊಳಲಾಟಗಳೇ ಇವು? ನಿರ್ಧಾರ ನಿಮ್ಮದು.


ಹಾಡು ಮುಗಿದರೇನು ಭಾವದ ತೊಳಲಾಟ ಮುಗಿದೀತೇ ಈ ಜನುಮದಲಿ
ಕನಸು ಒಡೆದು ಹೋದರೂ ಅದರ ಮಂಪರು ಸರಿದೀತೇ ಅರೆಕ್ಷಣದಲಿ||ಪ||

ಬಾಗಿಲುಗಳಿಲ್ಲದ ಮಾನಸದೂರಿಗೆ ಪುನಃ ಲಗ್ಗೆಯ ಹಾಕಿದವಳೇ
ಇನಿತೂ ಸುಳಿವಿಲ್ಲದಂತೆ ಪೂರಾ ಕೊಳ್ಳೆಯ ಹೊಡೆದವಳೇ
ತನ್ನಯ ವಿನಹ ನಿನಗೇನಿದೆ ಜಗದಲಿ ಎಂದು ಸವಾಲೆಸೆದವಳೇ
ದಿನವಹಿ ನೆನೆದರೂ ತಿರುಗಿ ತಾ ಹೊಸದೆನಿಸುವ ನಿತ್ಯನೂತನಳೇ||೧||

ಅಗೆದಗೆದು ಮೊಗೆದರೂ ಮುಗಿದು ಹೋಗದಂತ ಚೈತನ್ಯದ ಬುಗ್ಗೆಯೇ
ಅರಳುವ ಮೊದಲೇ ಪರಿಮಳ ಬೀರುವ ಅದಮ್ಯ ಸ್ಪೂರ್ತಿಯ ಮೊಗ್ಗೆಯೇ
ಜ್ಯೋತಿರ್ವರ್ಷಗಳಿಗೆ ಹಿರಿದಾದ ಮನವ ಹಿಡಿಯಲಿ ಬಂಧಿಸಿದ ಶಕ್ತಿಯೇ
ಅರೆನಗೆಯಲಿ ನೀ ದೊರಕಿಸುವುದು ಏಳು ಜನುಮಗಳಿಗಧಿಕದ ಮುಕ್ತಿಯೇ||೨||

ಮನವ ದೇಹದಿಂದಗಲಿಸಿ ಅಪಹರಿಸಿದಾಕೆ ನೀನಾತ್ಮಬಂಧುವೇ
ಬಿಂದುಮಾತ್ರದ ಸಂಧಾನದಲಿ ಬಂಧನಕ್ಕಿಕ್ಕಿದ ಪ್ರೇಮಸಿಂಧುವೇ
ಕೊಳ್ಳೆ ಹೋದ ಮನವಿದು ನೋಯದು, ಲೂಟಿಯ ಧಾಟಿಗೆ ಮರುಳಾಗಿ
ಮೈಮರೆತಿದೆ ದೇಹಹೀನ ಮನಸು,ವಿರಹದ ಸುಖಕೆ ತನ್ಮಯವಾಗಿ||೩||

9 comments:

  1. ನಿಮ್ಮ ಪ್ರತಿ ಸಾಲು ಸತ್ಯವನ್ನೇ ನುಡಿಯುತ್ತದೆ.

    "ಕೊಳ್ಳೆ ಹೋದ ಮನವಿದು ನೋಯದು, ಲೂಟಿಯ ಧಾಟಿಗೆ ಮರುಳಾಗಿ" ಅಲ್ಲವೇ?

    ಶೈಲಿಯಲ್ಲೂ ನಾವೀನ್ಯತೆ ಇದೆ.

    http://badari-poems.blogspot.in

    ReplyDelete
    Replies
    1. ಬದರೀ ಅಣ್ಣಾ,

      ನನಗೂ ಅದು ಇಷ್ಟದ ಸಾಲು ಏನೋ ಯೊಚನೆ ಮಾಡುತ್ತಿದ್ದಾಗ ಸಡನ್ ಆಗಿ ಹೊಳೆದಿದ್ದು , ತುಂಬಾ ಸಂಭ್ರಮಿಸಿಬಿತ್ತಿದ್ದೆ ಆ ಸಾಲಿಗೊಸ್ಕರ ಖುಷಿ ಆಯ್ತು ನಿಮಗೂ ಅದು ಇಷ್ಟ ಆಗಿದ್ದಕ್ಕೆ.:)

      ಬಹುಶಃ ಮೊದಲ ಬಾರಿ ಬಂದಿದ್ದೀರಿ. ಮತ್ತೆ ಬರುತ್ತಿರಿ :)

      Delete
  2. ವಾಹ್ !!
    ತುಂಬಾ ಚೆನ್ನಾಗಿದೆ ಈ ಭಾವ ....
    ನಿಜ ಗೆಳೆಯಾ ,ಕನಸು ಒಡೆದು ಹೋದರೂ ಅದರ ಮಂಪರು ಸರಿಯಲ್ಲ ಅರೇ ಕ್ಷಣಕ್ಕೆ ...
    ಬರೀತಾ ಇರಿ ...

    ReplyDelete
    Replies
    1. ಭಾಗ್ಯಾ,

      ಖುಷಿ ಆತು ಇಷ್ಟ ಆಗಿದ್ದಕ್ಕೆ.

      ಅಲ್ಲವೇ ಗೆಳತಿ, ನಮ್ಮ ಮನಸ್ಸಿನಲ್ಲಿ ಕಾಲಾಂತರದಲ್ಲಿ ಹುಟ್ಟಿ ಚಿಗುರೊಡೆದು ಬೆಳೆದು ನಿಂತ ಭಾವನೆಗಳು , ಯಾವುದೇ ಇರಲಿ, ಪ್ರೀತಿ, ಸ್ನೇಹ , ಮಮತೆ, ದ್ವೇಷ ಯಾವುದೇ ಆದರೂ ಅಷ್ಟು ಸುಲಭದಲ್ಲಿ ಹೋಗಲಾರದು . ಆ ಭಾವನೆಯ ಮೂಲವೇ ಬತ್ತಿ ಹೋದರು ಆ ಭಾವನೆ ಬಾಕಿ ಉಳಿಯುತ್ತದೆ. Isn't it?

      ಯಾವುದೋ ಒಂದು flow ದಲ್ಲಿ ಬರೆದದ್ದು. ಇಷ್ಟಪತ್ತಿದ್ದಕ್ಕೆ ಥ್ಯಾಂಕ್ಸ್ . ಬರ್ತಾ ಇರಿ.

      Delete
  3. >> ಮನವ ದೇಹದಿಂದಗಲಿಸಿ ಅಪಹರಿಸಿದಾಕೆ ನೀನಾತ್ಮಬಂಧುವೇ
    ಬಿಂದುಮಾತ್ರದ ಸಂಧಾನದಲಿ ಬಂಧನಕ್ಕಿಕ್ಕಿದ ಪ್ರೇಮಸಿಂಧುವೇ <<Superb :-)
    ಬರೀತ್ನಲ್ಲೆ, ಟೈಮ್ ಆಗ್ತಲ್ಲೆ ಅಂದವ ಹಳೆ ಕವನವನ್ನಾದ್ರೂ ಹಾಕಿದ್ದು ಖುಷಿ ಆತು.. ಚಂದ ಬರೀತೆ ಅಂತ ಬೇರೆ ಹೇಳಕ್ಕಾ ? :-)
    ಬರೀತಿರೋ :-)

    ReplyDelete
    Replies
    1. ಥ್ಯಾಂಕ್ಸ್ ಪ್ರಶಸ್ತಿ. ರಾಶಿ ಖುಷಿ ಆತು .

      'ಚೆಂದ ಬರೀತೆ ಹೇಳಿ ಬೇರೆ ಹೇಳಕ್ಕ? ' , ಎಂತ ಕಾಮ್ಪ್ಲಿಮೆಂತ್ ಕೊಟ್ಟೆ ಮಾರಾಯ. ನನ್ನೊಳಗಿನ ಅರೆಸತ್ತ ಕವಿ ಧನ್ಯ :)

      Delete
  4. ವಾ ವಾ...
    ಸುಬ್ರಹ್ಮಣ್ಯಜೀ..
    ಮಸ್ತ್...
    ಸರೀನೋ ತಪ್ಪೋ ಗೊತ್ತಿಲ್ಲಾ ಹೀಗೆ ಹೇಳ್ತಿರೋದು...
    ಸಾಮಾನ್ಯವಾಗಿ ಈಗಿನ ಕವಿತೆಗಳಲ್ಲಿ ಒಂದು ಸಾಲಿನಲ್ಲಿ ೩-೪ ಶಬ್ಧಗಳಷ್ಟೇ ಸಿಗುವುದು ನನಗೆ ಕಂಡಂತೆ...
    ಆದರೆ ನಿಮ್ಮ ಸಾಲುಗಳಲ್ಲಿರುವ ಪದಗಳನ್ನಾ ನೋಡಿ ತುಂಬಾ ಖುಷಿ ಆಯ್ತು...
    ಜೊತೆಗೆ ಅಲ್ಲಿ ಎರಡು ಶಬ್ಧಗಳನ್ನು ಕೂಡಿ ಒಂದು ಶಬ್ಧವನ್ನಾಗಿ ಮಾಡಿದ್ದು ತುಂಬಾ ಇಷ್ಟವಾಯ್ತು...
    ಮೊದಲ ಸಾಲಿನಲ್ಲೇ ಹಿಡಿದಿಟ್ಟುಕೊಂಡು ಬಿಡುತ್ತೀರಿ..

    "ಅಗೆದಗೆದು ಮೊಗೆದರೂ ಮುಗಿದು ಹೋಗದಂತ ಚೈತನ್ಯದ ಬುಗ್ಗೆಯೇ"
    ನನಗೆ ತುಂಬಾ ಹಿಡಿಸಿದ ಸಾಲು...

    ಬರೆಯುತ್ತಿರಿ..
    ನಮಸ್ತೆ :)

    ReplyDelete
    Replies
    1. ನೀ ಹೇಳಿದ್ರಲ್ಲಿ ಒಂದಕ್ಷರನೂ ತಪ್ಪಿಲ್ಲೇ ಚಿನ್ಮಯ್. ನಾಲ್ಕು ಸಾಲಿನ ಹತ್ತು ಪದಗಳ ಕವನ ಬರೆಯೋ ಕಾಲ ಇದು. ಯಾವ್ಯಾವ್ದಕ್ಕೋ ದೊಡ್ಡ ದೊಡ್ಡ ವಾಕ್ಯ ಉಪಯೋಗಿಸೋ ನಾನು ಕವನನ ನಾಲ್ಕು ಪದಗಲಲ್ಲಿ ಬರೆಯೋಕೆ ಅಸಮರ್ಥ. ಅಥವಾ ಇನ್ನೊಂದು ಆಯಾಮದಿಂದ ನೋಡಿದರೆ ಈ ಉದ್ದುದ್ದ ಸಾಲುಗಳೇ ನನಗಿಷ್ಟ .

      as usual, ನನ್ನ ಕವನಕ್ಕಿಂತ ನಿನ್ನ ಕಾಮೆಂಟ್ ಚೊಲೊ ಇದ್ದು :)

      ಬರ್ತಾ ಇರು , ನಮಸ್ತೆ :)

      Delete
  5. ತುಂಬಾ ಚನ್ನಾಗಿದೆ.....

    ReplyDelete