ಹತ್ತು ದಿನದ ಕೆಳಗೆ ಅಪ್ಪಂದಿರ ದಿನವಿತ್ತು ಎಂದು ಎಲ್ಲಾ ಬ್ಲಾಗಿಗರು ಬ್ಲಾಗನ್ನು ಪೋಸ್ಟ್ ಮಾಡಿದಾಗಲೇ ತಿಳಿದದ್ದು ನನಗೆ. ಅಷ್ಟರ ಮಟ್ಟಿಗೆ ಮರೆತಿದ್ದೇನೆ ಅಪ್ಪನನ್ನು? ಸಾಧ್ಯವೇ ಇಲ್ಲ. ಅಕ್ಷರಶಃ ಪ್ರತಸ್ಮರಣೀಯರಾದ ಅಪ್ಪನನ್ನು ಹಾಗೆ ಮರೆಯಲಾದೀತೇ? ಅಪ್ಪನ ದಿನ ಮಾತ್ರ ಮರೆತು ಹೋಗಿತ್ತು ಅಷ್ಟೇ. ಯಾಕೋ ಏನೋ ಬರೆಯಬೇಕೆಂಬ ಮೂಡು ಬಂದು ಕೂತು ಬಿಟ್ಟಿತ್ತು ತಲೆಯಲ್ಲಿ. ಮೊದಲೇ ಅಪ್ಪನ ಬಗ್ಗೆ ಎರಡು ಬಾರಿ ಬರೆದಿದ್ದೆನಾದರೂ ಬರೆಯಲು ಬೇಕಾದಷ್ಟು ವಿಷಯಗಳಿದ್ದವು ಬಿದಿದ್ ಅಪ್ಪನ ಬಗ್ಗೆ. ಹಾಗೆ ಹುಟ್ಟಿದ್ದು ಈ ಗದ್ಯದಂತಹ ಪದ್ಯ. ಗದ್ಯವೇ ಇದು? ಅಲ್ಲ ಎನಿಸುತ್ತದೆ . ಪದ್ಯವೇ ಇದು? ಮೊದಲೇ ಅಲ್ಲ. ಸ್ವಲ್ಪ ಶಿಸ್ತಿನ ಹಿಡಿತಕ್ಕೊಳಪಡಿಸಿದ ಭಾವಗಳು ಅಷ್ಟೇ ಇವು, ಗದ್ಯಪದ್ಯವೆಂಬ ಭೇಧವಿಲ್ಲದೆ.
ಅಪ್ಪಾ ನೆನಪಿದೆಯೇ ನಿನಗೆ ,
ದವಾಖಾನೆಯ ವಾಸನೆಯ ನಡುವೆ ಮೊದಲ ಬಾರಿ ಮುತ್ತು ಸುರಿದಂತೆ ನಾನತ್ತಿದ್ದು;
ಕಿಟಕಿಯ ಪಕ್ಕದ ಹಾಸಿಗೆಯ ಗಡಿಯಲ್ಲಿ ಅಂಗಾತದಿಂದ ನಾನು ಮಗ್ಗುಲು ಬದಲಿಸಿದ್ದು;
ಜಾತ್ರೆಯ ಮನೆಯ ಗದ್ದಲದ ಅಂಗಳದಲ್ಲಿ ಅಳುಕುತ್ತಾ ನಾ ಮೊದಲ ಹೆಜ್ಜೆ ಹಾಕಿದ್ದು* ;
ಅಜ್ಜನ ಮನೆಯ ಚಾವಡಿಯಲ್ಲಿ ಮಲಗಿಸಿ, ಪೂರ್ತಿ ಮಳೆಗಾಲಕ್ಕೊಂದು ಬಾಯ್ ಹೇಳಿದ್ದು**.
ಹೋಗಲಿ ಬಿಡು, ನೆನಪಿರಲಿಕ್ಕಿಲ್ಲ ನಿನಗೆ; ಹೇಗಾದರೂ ನೆನಪಿದ್ದೀತು ಈ ಚಿಲ್ಲರೆ ಘಟನೆಗಳು,
ನನ್ನ ನಾಳೆಗಳಿಗಾಗಿ ನಿನ್ನ ವರ್ತಮಾನವ ಅರ್ಪಿಸುವ ನಿನ್ನ ಬಿಡುವಿಲ್ಲದ ಚಟದ ಮಧ್ಯೆ. ॥೧॥
ಅಪ್ಪಾ ಗಮನಿಸಿದ್ದೆಯೇ ನೀನು,
ಕೂಸುಮರಿಯಾಗಿ ನಿನ್ನ ಬೆನ್ನು ಹತ್ತಲೆಂದೇ ಎಷ್ಟೋ ಸಲ ನಾ ಊಟ ಬೇಡವೆಂದಿದ್ದು;
ಕೋಪದ ಕೆಂಪುಕಣ್ಣಿಗೆ ಹೆದರಿ ಬೇಡವೆಂದಾಗಲೂ ಮುದುರಿ ಊಟಕ್ಕೆ ಬಂದು ಕೂತಿದ್ದು
ಶಾಲೆಯ ಮೊದಲ ದಿನ ಹುಡುಗು ಬುದ್ದಿಗೆ ನೀ ಬಾರಿಸಿದಾಗಲೂ ನಾ ಹಲ್ಲು ಕಚ್ಚಿ ನಿಂತಿದ್ದು;
ಊರಿಡೀ ನನ್ನ ಹೊಗಳಿದಾಗಲೂ ನಿನ್ನೊಂದು ನಗೆಯ ಕೊಡುಗೆಗಾಗಿ ನಾನು ಹಂಬಲಿಸಿದ್ದು;
ಇರಲಿಕ್ಕಿಲ್ಲ ಬಿಡು, ಗೊತ್ತಿರಲಿಕ್ಕಿಲ್ಲ ನಿನಗೆ; ನನ್ನ ಈ ಸಣ್ಣ ಕೋರಿಕೆಗಳು ಕನವರಿಕೆಗಳು ;
ಮಗನೆಂಬ ಕನಸನ್ನು ಹಗಲು ರಾತ್ರಿಯೆಂದೆಣಿಸದೆ ಕಂಡ ನಿನ್ನ ಹುಚ್ಚುತನದ ಮಧ್ಯೆ ॥೨॥
ಅಪ್ಪಾ ಗೊತ್ತಿದೆಯೇ ನಿನಗೆ ,
ನೀ ಹೇಳಿದ ಎಲ್ಲ ಆದರ್ಶಪುರುಶರ ಕಥೆಗಳಿಗಿಂತ ನನಗೆ ನಿನ್ನ ಕಥೆಯೇ ಸ್ಪೂರ್ತಿಯಾಗಿದ್ದು;
ನಿನಗೇ ತಿಳಿಯದ ಹಾಗೆ ನಿನ್ನ ಬದುಕ ಕಟ್ಟಿಕೊಂಡಿದ್ದಲ್ಲದೇ ನಮ್ಮ ಬದುಕನೂ ಕಟ್ಟಿಕೊಟ್ಟಿದ್ದು;
ಅಪ್ಪನ ಕಂಡ ನೆನಪಿಲ್ಲದ ನೀನು ನನ್ನ ಮಟ್ಟಿಗೆ ಜಗತ್ತಿನ ಅತಿ ಆದರ್ಶ ಅಪ್ಪನಾಗಿರುವುದು;
ಒರಟುತನದಲ್ಲಿ ಮುಚ್ಚಿಟ್ಟಷ್ಟೂ ನಿನ್ನ ಪ್ರೀತಿ ; ಹೃದಯಕ್ಕೆ ವ್ಯಕ್ತವಾದದ್ದು ಮತ್ತೆ ಹತ್ತಿರವಾದದ್ದು;
ಯಾವುದರ ಬಗೆಗಾದರೂ ಕಲ್ಪನೆಯಿತ್ತೇ ನಿನಗೆ; ಬಂದೇ ಇರಲಿಕ್ಕಿಲ್ಲ ಬಿಡು ಈ ಆಲೊಚನೆಗಳು;
ಗೊತ್ತಾಗಿ ನಿನಗಾದರೂ ಏನಾಗಬೇಕಿದೆ ನನ್ನ ಭವಿಷ್ಯದ ನಿನ್ನದೇ ಯೋಚನೆಗಳ ಮಧ್ಯೆ ॥೩॥
ಟಿಪ್ಪಣಿಗಳು:
*ನಾನು ನಡಿಗೆ ಕಲಿತದ್ದು ಅತಿ ತಡವಾಗಿ. ಅಜ್ಜನ ಮನೆಯಿದ್ದ ಊರಲ್ಲಿ ಜಾತ್ರೆಯಿದ್ದಾಗ, ಪೌರೋಹಿತ್ಯದ ಮನೆಯ ಗಡಿಬಿಡಿಅಲ್ಲಿ ಎಲ್ಲ ಓಡಾಡುತ್ತಿದ್ದಾಗ ಯಾರಿಗೂ ಕಾಣದಂತೆ ಚಪ್ಪರಕ್ಕೆ ಕಟ್ಟಿದ್ದ ಕಂಬಗಳ ಮಧ್ಯೆ ನದೆದಿದ್ದೆನಂತೆ ನಾನು.
** ಅಪ್ಪ ಅಮ್ಮ ಇಬ್ಬರೂ ಶಿಕ್ಷಕರಿದ್ದುದರಿಂದ, ಶಿರಸಿಯಂತ ಶಿರಸಿಯೆಂಬ ಮಲೆನಾಡಿನಲ್ಲಿ ನನ್ನನ್ನು ಶಾಲೆಗೇ ಕರೆದುಕೊಂಡು ಹೋಗುವುದು ಇಬ್ಬರಿಗೂ ಅಸಾಧ್ಯಾವಿದ್ದುದರಿಂದ ನನ್ನನ್ನು ಕಡಲತಡಿಯ ಕುಂದಾಪುರದಲ್ಲಿ ಅಜ್ಜನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು ಮೇ ತಿಂಗಳ ಕೊನೆಯಲ್ಲಿ ಒಂದು ದಿನ ನನ್ನನ್ನು ಮಲಗಿಸಿ ಬರುವಾಗ ದೊಡ್ಡ ಮಾವಿನ ಹಣ್ಣನ್ನು ತರುತ್ತೇವೆ ಎಂದು ಹೇಳಿ ಹೋಗುತ್ತಿದ್ದ ಅಪ್ಪನನ್ನು ಮತ್ತೆ ನೋಡುತ್ತಿದ್ದುದು ನಾನು ಅಕ್ಟೊಬರ್ ರಜೆಯಲ್ಲಿಯೇ.
ಚೆಂದ ಇದ್ದು ಹೆಗ್ಡೇರೆ..
ReplyDeleteಕಾಮೆಂಟ್ಗಳೇ ಯಾಕೋ ಹೃದಯ ತಟ್ಟಿ ಬಿಟ್ತು .. ಲೇಖನ ಚಂದ ಇಲ್ಲೆ ಅಂತಲ್ಲ. ಟಿಪ್ಪಣಿಯ ಅನಿರೀಕ್ಷಿತ ತಿರುವು, ಅದರ ವೇಗ ಯಾಕೋ ಇಷ್ಟ ಆಗಿ ಹೋತು ಸಡನ್ನಾಗಿ :-) ಚಂದದ ಪೋಸ್ಟು.. ಪೋಸ್ಟಿಲ್ಲೆ ಅಂದ ಮಾತ್ರಕ್ಕೆ ಮರೆತೋತು ಅಂತ ಯಾರಾದ್ರೂ ಹೇಳಿದ್ವನಾ ನಿಂಗೆ ? ;-)
ಅತ್ಯುತ್ತಮ ಪೋಸ್ಟ್ ಇದು ಬಾಸ್.
ReplyDeletejust super..... Ellaa appandirante....:)
ReplyDeletesooper.... "fathers are daughter's first love and son's first hero.."
ReplyDelete