Tuesday, 24 July 2012

ನೀ ಬರಲೇಬೇಕೆ ನಾ ಕರೆದರೆ...

ಕರೆದೆನೆಂದರೆ ಬರಲೇಬೇಕೆ ಓಡೋಡಿ 
ನೀನೇನು ನನ್ನ ಅಮ್ಮನೇ 
ಸತಾಯಿಸು ಒಂದಿಷ್ಟು ಮನವ ಕಾಡಿ 
ಹಾಗೆ ಬರಿದೇ ಸುಮ್ಮನೇ 


ಕಣ್ಮುಚ್ಚಿದರೆ ಕಾಡಲೇ ಬೇಕೇ ಕನಸಾಗಿ
ಪ್ರತೀ ಬಾರಿಯೂ ಮರೆಯದಂತೆ 
ಬರಬಾರದೇ ಒಮ್ಮೆ ನನಸಾಗಿ  
ವಿರಹವಾದರೂ ಅತಿಯಾಗದಂತೆ


ಹೃದಯ ಮರ್ಕಟವಾಗಿ ಕುಣಿದಿದೆ 
ಮನದ ಮರದಲಿ ಹುಚ್ಚಾಗಿ
ಮಾತುಗಳೆಲ್ಲ ಉಕ್ಕಿ ಹರಿದಿದೆ
ನಿನ್ನಯ ಧ್ಯಾನವೇ ಹೆಚ್ಚಾಗಿ


ನಿನ್ನ ನೆನಪಿನಲಿ ತೊಳಲಾಡುತಿರುವೆ 
ಪುರಾವೆಯೇನನು ಕೊಡಲಿ
ಬಿನ್ನಹದಲ್ಲಿಯೇ ನೀ ಆಳುತಲಿರುವೆ
ಹೇಗೆ ನಾ ಅಂಕುಶವಿಡಲಿ 

Sunday, 13 May 2012

ಅಮ್ಮ



ಚಿತ್ರಕೃಪೆ: ಅಂತರ್ಜಾಲ
ಅದು ಪ್ರೀತಿ ಎಂದರೆ, ಅದಕ್ಕೆ ಯಾವ ಬಗೆಯ ಆಕಾಂಕ್ಷೆಗಳಿಲ್ಲ, ನಿರೀಕ್ಷೆಗಳಿಲ್ಲ, ಹೀಗೇ ಇರಬೇಕೆಂಬ ಬಂಧಗಳಿಲ್ಲ, ಸ್ವಾರ್ಥ ಎಂಬುದು ಮೊದಲೇ ಇಲ್ಲ. ಅದೊಂದು ದಿವ್ಯ ಪ್ರೀತಿ. ಯಾವ ಬೇಡಿಕೆಯ ಹುನ್ನಾರವಿಲ್ಲದೇ, ಪ್ರತಿಫ಼ಲದ ಹಂಬಲವಿಲ್ಲದೇ ಇರುವ ಸುಂದರ ಮಧುರ ಮಮತೆ. ನೀವು ಅವಳನ್ನು ಒಲಿಸಬೇಕಿಲ್ಲ, ಪೂಸಿ ಹೊಡೆದು ಮಾತನಾಡಬೇಕಿಲ್ಲ, ಹೋಗಲಿ ಅವಳ ಜನುಮದಿನ ಬಗ್ಗೆ ಶುಭಾಶಯವನ್ನೂ ಹೇಳಲೇಬೇಕೆಂದೇನಿಲ್ಲ,(ಒಂದೇ ಇನ್ವೆಸ್ಟ್ ಮೆಂಟಿನ LICಯ ಜಾಹೀರಾತಿನಂತೆ) ಒಂದು ಸಲ ಸುರುವಾದ ಮೇಲೆ ಅದಕ್ಕೆ ಕೊನೆ ಮೊದಲಿಲ್ಲ. ಅದೇ ತಾಯಿಯ ಪ್ರೀತಿ. ನೀವು ಅವಳಿಗೆ ಮಗನಾ(ಳಾ)ದರೆ ಸಾಕು, ಕೆಲವೊಮ್ಮೆ ಆಗದಿದ್ದರೂ ಪರವಾಗಿಲ್ಲ. ಸುಮ್ಮನೇ ಪ್ರೀತಿಸುವ ಶಕ್ತಿ, ಸಾಮರ್ಥ್ಯ ಆ ತಾಯಿಯದ್ದು. ಅಮ್ಮ , ಆ ಶಬ್ದವೇ ಸಾಕು ಏನೋ ಮಮತೆ, ಏನೋ ಒಂದು secured feeling , ಇನ್ನೂ ಅವಳ ಕೈಗೂಸಾಗಿದ್ದ ಭಾವನೆ . ಒಟ್ಟಾರೆಯಾಗಿ ಆಕೆ ಒಂದು ಅದ್ಬುತ. " ತಾನು ಎಲ್ಲೆಡೆ ಇರಲಾಗದು ಎಂದು ದೇವರು ಅಮ್ಮನನ್ನು ಸೃಷ್ಟಿಸಿದನಂತೆ" ಎಷ್ಟು ಸತ್ಯ ಮಾತು.

ಈ ಮಮತೆ ಇಂದು ನಿನ್ನೆಯದಲ್ಲ. ಮಾನವ ಪ್ರಾಣಿ ಚರಾಚರಗಳೆಲ್ಲ ಸುರುವಾಗುವ ಕಾಲದಿಂದಲೂ ಇದು ಹೀಗೇನೇ. ತನ್ನ ಮಕ್ಕಳೆಂದರೆ ಎಲ್ಲಾ ಸ್ತ್ರೀಕುಲಕ್ಕೂ ಅದೊಂದು ವಿಶೇಷ ಪ್ರೀತಿ.  ಅದೇನೋ ಒಂದು 'protective instinct'. ಮಗ ಬೆಳೆದು ದೊಡ್ಡವನಾದರೂ ತಾಯಿಗೆ ಅವನಿನ್ನೂ ಚಿಕ್ಕವನೇ! ಎಲ್ಲಾದರೂ ಏನಾದರೂ ಚಿಕ್ಕದಾಗಿ ಹೆಚ್ಚು ಕಡಿಮೆಯಾದರೂ ಅವನಿಗಿಂತ ಹೆಚ್ಚು ಅವಳಿಗೇ ಗಾಬರಿ. ನಾವು ಉಂಡರೆ ಅವಳ ಹೊಟ್ಟೆ ತುಂಬೀತು ,ನಾವು ಎಡವಿದರೆ ಅವಳಿಗೆ ಗಾಯ, ನಮಗೆ ನೆಗಡಿ ಆದರೆ ಅವಳಿಗೆ ಕೆಮ್ಮು. ಅಡಿಗೆ ಕಡಿಮೆ ಆದ್ರೆ ಅವಳಿಗೆ ಹಸಿವಿಲ್ಲ ,ನಾವು ಉಂಡು ಒಳ್ಳೆ ಇದೆ ಎಂದರೆ ಅಷ್ಟಕ್ಕೇ ಆಕೆ ಧನ್ಯೆ ,ಇದೆಲ್ಲಾ ಒಬ್ಬ ಅಮ್ಮನನ್ನು ಬಿಟ್ಟು ಮತ್ತಾರಿಂದ ಸಾಧ್ಯ ಇದೆ. ಎಲ್ಲಿ ಮಗ ನೊಂದಾನು ಎಂದು ತನ್ನ ನೋವನ್ನು ತನ್ನಲ್ಲೇ ನುಂಗುವಂತೆ , ಅವನಿಗೂ ಹೇಳದೆ ಉಳಿಯುವಂತೆ ಮತ್ತಾರ ಮಮತೆ ಮಾಡಬಲ್ಲದು.

ಹಾಗೆಂದು ಅವಳಿಗೆ ಯಾವುದೇ ಅಪೇಕ್ಷೆ ಇಲ್ಲವೆಂದಲ್ಲ. ಕೆಲವು ಇವೆ. ತನ್ನ ಮಕ್ಕಳು ಯಾವಾಗಲೂ ಒಳ್ಳೆಯವರಾಗಿರಬೇಕು, ಎಲ್ಲರ ಕೈಯ್ಯಲ್ಲೂ ಹೊಗಳಿಸಿಕೊಳ್ಳಬೇಕು, ನೀತಿವಂತರಾಗಬೇಕು, ಇತ್ಯಾದಿ. ಚಿಕ್ಕಂದಿನಿಂದಲೂ ಸುರುವಾಗುತ್ತದೆ ಅದಕ್ಕೆ ತಯಾರಿ, ರಾಮಾಯಣ, ಮಹಾಭಾರತದ ಅರ್ಜುನ, ರಾಮಚಂದ್ರ, ಶ್ರವಣ, ಕರ್ಣರಿಂದ ಹಿಡಿದು ಮೊನ್ನೆ ಮೊನ್ನೆಯ ಶಾಸ್ತ್ರಿ, ಭಗತ್ ಸಿಂಗ್, ಗಾಂಧಿಯವರೆಗೂ ಎಲ್ಲಾ ಪುಣ್ಯಾತ್ಮರ ನಾಮಸ್ಮರಣೆ ಮಕ್ಕಳ ಮುಂದೆ ಮಾಡುತ್ತಾಳೆ. ಯಾರಾದರೂ ಒಬ್ಬರ ಹಾಗಾದರೂ ಆಗುತ್ತಾನೇನೋ ಎಂದು. ಇಷ್ಟೆಲ್ಲಾ ನೀತಿಕಥೆ ಹೇಳಿಕೊಡುವ ಇದೇ ಅಮ್ಮ ಮಗನಿಗೆ ಯಾವುದಾದರೂ ನೀತಿಯಿಂದ ಶಿಕ್ಷೆಯಾಗುವುದಾದರೆ ಅದಕ್ಕೇ ಸೆಡ್ಡು ಹೊಡೆಯಲು ಹಿಂಜರಿಯಳು. ಬಹುಶಃ ಅದಕ್ಕೇ ಹೇಳುವುದು ಪ್ರೀತಿ ಕುರುಡು ಎಂದು.

ಅಮ್ಮಾ,  ಎಷ್ಟು ಬಾರಿ ಹೇಳಿದರೂ ನಿನ್ನ ಹಿರಿಮೆ ಹೆಚ್ಚೇ , ಗೊತ್ತು. ಆದರೂ ಏನೋ ಒಂದು ಚಿಕ್ಕ ನಮನ ಅಷ್ಟೇ , ಅದಕ್ಕಿಂತ ಹೆಚ್ಚು ಕೊಡಲು ನಮ್ಮಲ್ಲಿ ಏನಾದರೂ ಇದೆ, ಈ ಬದುಕನ್ನೇ ಕೊಟ್ಟವಳಿಗೆ.

Saturday, 17 March 2012

ಅಪ್ಪನ ನಿವೃತ್ತಿಯ ನಂತರ


ಚಿತ್ರಕೃಪೆ: ಅಂತರ್ಜಾಲ
ಮೊನ್ನೆ ಯಾವಗಲೋ ಮನೆಗೆ ಫೋನ್ ಮಾಡಿದ್ದೆ. ಅಮ್ಮ ಮಾತಿನ ಮಧ್ಯದಲ್ಲಿ "ಅಪ್ಪ ರಿಟೈರ್ಡ್ ಆಗುತ್ತಿದ್ದರಲ್ಲಾ ಈ ತಿಂಗಳ ಕೊನೆಗೆ, ಮೊನ್ನೆ ತಾಲೂಕು ಮಟ್ಟದ ಶಿಕ್ಷಕರ ಮೀಟಿಂಗ್ ನಲ್ಲಿ ಎಲ್ಲರೂ ಇವರನ್ನು ಹೊಗಳಿದ್ದೇ ಹೊಗಳಿದ್ದು" ಎಂದಾಗ ನನಗೆ ಇವಳು ಗಂಡನನ್ನು ಹೋಗಳಿದರೆಂಬ ಖುಷಿಯಲ್ಲಿದ್ದಳಾ ಅಥವಾ ಗಂಡ ನಿವೃತ್ತಿಯ ಬಳಿಕ ಏನು ಮಾಡಬಹುದು ಎಂಬ ಆತಂಕದಲ್ಲಿದ್ದಳಾ ಎಂದು ತಿಳಿಯಲಿಲ್ಲ. ಹಾಗೆ ಎಲ್ಲರೂ ಹೊಗಳಿದಾಗಲೂ  ನನ್ನ ಅಪ್ಪನ ಉತ್ತರವೇನೂ ಔಪಚಾರಿಕ ಧನ್ಯವಾದಪೂರ್ವಕ ನಗೆಯಾಗಿರಲಿಲ್ಲ. ಇವರು ಆ ಸಭೆಯಲ್ಲಿ "ನನ್ನ ಬಗ್ಗೆ ಹಿಂದಿನಿಂದ ಯಾರು ಏನೆಂದು ಆಡಿಕೊಂಡಿದ್ದಾರೋ ತಿಳಿಯದು,  ಆದರೆ ನನ್ನ ಮುಂದಂತೂ ಎಲ್ಲರೂ ನನಗೆ  ಗೌರವ ಸಲ್ಲಿಸಿದ್ದಾರೆ. ಅದಕ್ಕಾಗಿ ನಾನು ಕೃತಜ್ಞ" ಅಪ್ಪ ಇರೋದೇ ಹಾಗೆ, ಮಾತು ನೇರ, ಮಾತಿಗಿಂತ ಕೃತಿ ಮತ್ತೂ ನೇರಾನೇರ. ಅದಕ್ಕೇ ಅವರಿಗೆ ಅಷ್ಟು ಸ್ಪಷ್ಟವಾಗಿ ಗೊತ್ತಿರುವುದು, ಇಂದು ಹೀಗೆ ಹೊಗಳುತ್ತಿರುವವರೆಲ್ಲ ಅದನ್ನು ಮನಃಸ್ಪೂರ್ವಕವಾಗಿ ಹೇಳುತ್ತಿಲ್ಲ ಎಂದು. ಅದನ್ನವರು ಆಶಿಸಿದವರೂ ಅಲ್ಲ ಬಿಡಿ.


ಅಮ್ಮ ಹೇಳಿದ ಇವರು ಕೊಟ್ಟ ಉತ್ತರವಲ್ಲ ನನಗೆ ಅಚ್ಚರಿಯೆನಿಸಿದ್ದು, ಹಾಗೆ ಅವರು ಹೇಳದೇ ಹೋಗಿದ್ದರೇ ಆಶ್ಚರ್ಯವಾಗುತ್ತಿತ್ತೇನೋ. ಈ ೨೨ ವರ್ಷಗಳಲ್ಲಿ ಮನೆ ಎಂದರೆ ಹೀಗೆ ಇತ್ತು, ಅಪ್ಪ ಅಮ್ಮ ಬೆಳಿಗ್ಗೆಯೆಲ್ಲ ಶಾಲೆಯಲ್ಲಿ ಇರುವುದು, ಸಂಜೆಯಾಗುವ ಮುಂಚೆ ಅಮ್ಮ ಬಂದು ತಿಂಡಿ ಏನಾದರೂ ಕೊಡುವುದು, ಅದು ತಿಂದು ಜೀರ್ಣವಾಗುವ ಹೊತ್ತಿಗೆ ಸೂಅರ್ಯ ಮುಳುಗುವ ಸಮಯದಲ್ಲಿ ಅಪ್ಪ ಮನೆಗೆ ಬರುವುದು, ಅಲ್ಲಿಯವೆರೆಗಿದ್ದ ಸ್ವೇಚ್ಚೆ ಬರೀ ಸ್ವಾತಂತ್ರ್ಯಕ್ಕೆ ಮಿತಿಯಾಗುವುದು,ಪ್ರತೀ ಬುಧವಾರ ಅವರು ಶಾಲೆಯಿಂದ ಬರುವಾಗ ಸಂತೆಗೆ ಹೋಗಿ ಚೀಲದ ತುಂಬಾ ತರಕಾರಿ ತರುವುದು,ಚಿಕ್ಕವನಾಗಿದ್ದಾಗ ಚೀಲದ ತುಂಬ ತರಕಾರಿ ತರದಿದ್ದರೆ ನಾನು ಮಾಡುತ್ತಿದ್ದ ಗಲಾಟೆಯನ್ನು ನೆನಪಿಸುವುದು,  ವೀಕೆಂಡ್ ಬಂತೆಂದರೆ ಅಪ್ಪ ಊರಿಗೆ(ಕರ್ಕಿಗೆ, ನಮ್ಮ ನಿಜವಾದ ನೇಟಿವ್) ಹೋಗುವುದು, ಬರುವಾಗ ಏನಾದರೂ ತಿಂಡಿಯನ್ನು ತರುವುದು.ಅದಕ್ಕಾಗಿ ಕಾತರದಿಂದ ಕಾಯುವುದು.  ಇವೆಲ್ಲಾ ಮುಗಿದು ಹೋಗುತ್ತದೆಯೇ ಇನ್ನು? ಮತ್ತೆ ಸಿಗಲಾರೆವೇ ಈ ರೊಟೀನ್ ಬೋರಿಂಗ್ ಕ್ಷಣಗಳು?


ಅಪ್ಪನ ಗುರುತಿರುವುದೇ ಹಾಗೆ, ರಾಮ ಮಾಸ್ತರು ಎಂದು, ಆರ್. ಜಿ. ಹೆಗ್ಡೆ ಮೇಷ್ಟ್ರು ಎಂದು. ಶಿಕ್ಷಕರಲ್ಲದ ಬರೀ 'ರಾಮ ಹೆಗಡೆ'ಯವರನ್ನು ಎಷ್ಟು ಜನ ಬಲ್ಲರೋ ನಾನು ತಿಳಿಯೆ. ನಾಲ್ಕು ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ  ಬಿದ್ದಂತೆ ಆಗಿದ್ದ  ಕುಟುಂಬದ ಅಪ್ಪ ಮುಂದೆ ಶಿಕ್ಷಕರಾಗಿ ಮಕ್ಕಳಿಬ್ಬರನ್ನೂ ಇಂಜಿನಿಯರಿಂಗ್ ಓದಿಸಿಬಿಡುತ್ತಾರೆ ಎಂದರೆ ಉಳಿದಿವರಿಗಿರಲಿ ಸ್ವತಃ ಅವರ ತಾಯಿಗೆ ನಂಬಲಾಗುತ್ತಿರಲಿಲ್ಲವೇನೋ, ಆಗ. ಆದರೆ ಅವರಿಗೆ ಒಂದು ಗುರಿಯಿತ್ತು, ಸಾಧಿಸೋ ಛಲವಿತ್ತು, ಸಾಧಿಸಲೇಬೇಕಾದ ಅವಶ್ಯಕತೆಯಿತ್ತು, ಹೊರಲೇಬೇಕಾದ ಹಿರಿಮಗನ ಜವಾಬ್ದಾರಿಯಿತ್ತು, ಎಲ್ಲಕ್ಕಿಂತ ಮಿಗಿಲಾಗಿ ಆ ಪ್ರತಿಭೆಯಿತ್ತು. ಕೈಯ್ಯಲ್ಲಿ ನಯಾಪೈಸೆ ದುಡ್ಡಿರಲಿಲ್ಲ, ಅಕ್ಷರಶಃ. ಬದುಕಿಗೆ ಆಧಾರವಾಗಿ, ಮನೆಯಲ್ಲಿ ಒಂದು ಎಮ್ಮೆಯಿತ್ತು. ಹಾಲು ಕರೆದು ಮಾರುವ ಕೆಲಸವನ್ನು ಮಾಡಿದರು, ಅಡಿಗೆಯನ್ನು ಕಲಿತು ಜನಮೆಚ್ಚುವ ಹಾಗೆ ಮಾಡಿದರು. (ಈಗಲೂ ಸುತ್ತಮುತ್ತಲ ಪ್ರದೇಶದಲ್ಲಿ ಅನ್ನದ ಕೇಸರೀಬಾತಿಗೆ ಹದ ಹಾಕಲು ರಾಮ ಮಾಸ್ತರೇ ಬೇಕು.) ಬೀದಿದೀಪದಲ್ಲಿ ಓದುವುದೊಂದನ್ನು ತಪ್ಪಿಸಿಕೊಂಡರು, ಕೇರಿಯಲ್ಲೆಲ್ಲೂ ಬೀದಿದೀಪವೇ ಇರದೇ ಹೋದರೆ ಅವರಾದರೂ ಹೇಗೆ ಬೀದಿದೀಪದಲ್ಲಿ ಓದಿಯಾರು. ಏನೆ ಇರಲಿ, ನಿಜವಾಗಿಯೂ ಬಹಳವೆಂದರೆ ಬಹಳವೇ ಕಷ್ಟಪಟ್ಟಿದ್ದರು ಅಪ್ಪ ಆಗ. ರಾಮಣ್ಣನ ಮಗ ಎಂಬ ಒಂದೇ ಕಾರಣಕ್ಕೆ ಏನನ್ನಾದರೂ ಮಾಡಬಲ್ಲ ಈತ ಎಂದು ಕರ್ಕಿಯಲ್ಲಿ ನನ್ನ ಹಿಂದೆಯೇ ಜನ ಮಾತನಾಡುವುದನ್ನು ನಾನು ಕೇಳಿದ್ದೇನೆ


ಅದೆಲ್ಲ ಬಿಡಿ, ಅಪ್ಪ ಇನ್ನು ಶಾಲೆಗೆ ಹೋಗುವುದಿಲ್ಲ ಎಂಬ ಸರಳಸತ್ಯವನ್ನು ನನ್ನಿಂದ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಇನ್ನು ಏನು ಮಾಡಬಹುದು, ಎಂದೂ ಟಿ. ವಿ. ನೋಡಿದವರಲ್ಲ(ವಾರ್ತೆಗಳನ್ನು ಬಿಟ್ಟರೆ), ಸುಮ್ಮನೇ ಕುಳಿತು ಪಟ್ಟಂಗ ಹೊಡೆದವರಲ್ಲ, ಸಮಯ ಕೊಲ್ಲಲು ಕಾಫಿ, ಟೀಯನ್ನೋ ಎಲೆ ಅಡಿಕೆಯನ್ನೋ ತಿಂದವರಲ್ಲ, ಆಚೀಚೆ ಮನೆಯವರ ಬಳಿಯೂ ಅವಶ್ಯಕತೆಗಿಂತ ಹೆಚ್ಚು ಮಾತನಾಡಿದವರಲ್ಲ, ಕಥೆ ಕಾದಂಬರಿಯನ್ನು ಓದಿದ ಅಭ್ಯಾಸವಿಲ್ಲ. ಹೇಗೆ ಸಮಯ ಹೋಗುತ್ತಿತ್ತು ಅವರಿಗೆ? ಕೆಲಸ, ಕೆಲಸ, ಕೆಲಸ. ಒಂದಲ್ಲ ಒಂದು ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡು ಬಿಸಿಯಾಗಿದ್ದ ಜೀವವದು. ಶಾಲೆಯಿಂದ ಬರುವುದೇ ತಡವಾಗಿ, ಬಂದ ಮೇಲೂ ಸುಮ್ಮನೇ ಕೂತವರಲ್ಲ. ಪ್ರತೀ ಸಂಜೆಯಿಡೀ ಮಾಡುವಂತಹ ಏನಾದರೂ ಕೆಲಸವನ್ನು ದಿನವೂ ತಲೆಯಲ್ಲಿ ಇಟ್ಟುಕೊಂಡೇ ಇರುತ್ತಿದ್ದರು. ಆದರೆ ಇನ್ನು ಮುಂದೆ? ಏನೋ ಗೊತ್ತಿಲ್ಲ. ಜೀವನದಲ್ಲಿ ಏನೇನನ್ನೋ ಕಂಡಿರುವವರಿಗೆ ನಿವೃತ್ತ ಜೀವನಕ್ಕೆ ಹೊಂದಿಕೊಳ್ಳುವುದೇನೂ ದೊಡ್ಡ ವಿಷಯವಾಗದಿರಬಹುದು, ಆದರೆ ಮನೆಯಲ್ಲಿ ನಮಗೆ ಅದು ಒಂಥರಾ ಕಲ್ಪನೆಗೆ ದಕ್ಕದ್ದು, ಸದ್ಯದ ಮಟ್ಟಿಗೆ.

ಏನೇ ಆಗಲೀ, ಅಪ್ಪ ನಿವೃತ್ತರಾಗುವುದಂತೂ ನಿಜ. ಈಗ ನಮ್ಮ ಬಳಿಯಿರುವ ಒಂದೇ ಆಯ್ಕೆ ಅದಕ್ಕೆ ಹೊಂದಿಕೊಳ್ಳುವುದು. ಇಲ್ಲಿಯವರೆಗಂತೂ ಅವರದ್ದೇ ಎಲ್ಲಾ ಜವಾಬ್ದಾರಿಯಿತ್ತು, ಇನ್ನು ಮುಂದೆ ಸ್ವಲ್ಪವಾದರೂ ತೆಗೆದುಕೊಳ್ಳಬೇಕೆಂದು ನಿರ್ಧರಿಸುತ್ತಾ ಈ ಅಂಕಣವನ್ನು ಮುಗಿಸುತ್ತಿದ್ದೇನೆ.