Thursday, 5 May 2011

ಅನಾಮಿಕಾ

( ಹೆಸರೇನೆಂದಿಡಲಿ ಎಂದು ತಿಳಿಯದಿದ್ದುದರಿಂದ ಅನಾಮಿಕಎಂಬ ಹೆಸರನ್ನು ಬಳಸುತ್ತಿದ್ದೇನಾಗಲೀ , ಈ ಹೆಸರಿಗೆ ಬೇರಾವ ಅರ್ಥವೂ ಇಲ್ಲ . ಸೂಕ್ತ ಹೆಸರನ್ನು ಸೂಚಿಸಿದರೆ ಸಂತೋಷ , ಹೆಸರೇ ಇಲ್ಲದೇ ಹೋದರೂ ಸಂತೋಷ , ಅಷ್ಟಕ್ಕೂ ಹೆಸರಿನಲ್ಲೇನಿದೆ’ )


ನಿನಗಾಗೇ ಪರಿತಪಿಸುವೆ ನಾ, ನನ್ನಲ್ಲೇ ಒಳಗೊಳಗೆ

ಹೊರಬಾರದೆ ನಲುಗುತಿದೆ ಪರಿಚಯದ ಮುಗುಳುನಗೆ


ಮರೆವನೇ ಮರೆಸುವ ನೀನು ಮರೆಯದಮರ ನೆನಪು

ನಿನ್ನ ಹೆಸರು ಮಾತ್ರ ಸಾಕು ,ಏನು ಪುಳಕ ಏನು ಹುರುಪು

ಚಿತ್ತಭಿತ್ತಿಯಲಿ ಕಾದು ಕೆತ್ತಿರುವೆ ನಿನ್ನಯ ರಮ್ಯಚಿತ್ರ

ಕಂಬನಿಗೊದ್ದೆಯಾಗದೇ ಉಳಿದಿದೆ ನನ್ನ ಪ್ರೇಮಪತ್ರ


ಭಿನ್ನವೆಲ್ಲಿಯದು ಮುನ್ನ ಮರೆತಿಹುದು ನಿನ್ನ ಇರುವಿನಲ್ಲಿ

ನಿನ್ನೆ ಮರಳುವುದು ನಾಳೆ ಬೆಳಗುವುದು ಕಣ್ಣ ನೋಟದಲ್ಲಿ

ನಿನ್ನ ಅತಿಮಾನವ ಹೊಳಪಿನೆದುರು ಬಿಳುಪೇ ಕಡುಗಪ್ಪು

ಅನ್ನ ಸೇರದು, ಹಸಿವು ಮೂಡದು ಏನು ತಪ್ಪು ಯಾರದೊಪ್ಪು


ಯಶವು ಸಿಕ್ಕೀತೇ, ಗುರಿಯ ಮುಟ್ಟೀತೇ ಈ ಒಂದು ಪ್ರೇಮಸುಧೆ

ವಶವು ನಾನಿನಗೆ ನಿತ್ತ ನೆಲದಲ್ಲೇ; ಉತ್ತರವು ಮೂಡಿರದೆ

ಎತ್ತ ನೋಡಿದರತ್ತ ಸುತ್ತ ಮುತ್ತೆಲ್ಲ ಬೆಳಗಿತ್ತು ನಿನ್ನ ಬಿಂಬ

ಕಣ್ಣು ಮುಚ್ಚಿದಡೇನು ಒಳಗಿರುವೆ ನೀನಲ್ಲೇ ಮನದ ತುಂಬ