Showing posts with label kathe. Show all posts
Showing posts with label kathe. Show all posts

Friday, 25 October 2013

ಬೆಳದಿಂಗಳ ಬಾಲೆ


೧.
          ಪ್ರತೀ ದಿನದಂತೆ, ಕೋರಮಂಗಲದ ನಮ್ಮ ಮನೆಯಿಂದ ಬನಶಂಕರಿಯ ಕಾಲೇಜಿಗೆ ಹೊರಟವನು ಹಾಗೇ JP ನಗರದ ವೈಷ್ಣವಿಯ ಮನೆಯ ಕಡೆಗೆ ಗಾಡಿಯನ್ನು ತಿರುಗಿಸಿದೆ, ಅದೇನೂ ಕಾಲೇಜಿಗೆ ಹೋಗುವ ದಾರಿಯಲ್ಲಿ ಇಲ್ಲದಿದ್ದರೂ, ವೈಷ್ಣವಿ ಇಷ್ಟು ಹೊತ್ತಿಗೆ ಕಾಲೇಜು ಬಸ್ ನ್ನು ಹಿಡಿಯಲು ಮನೆಯಿಂದ ಹೊರಟಾಗಿರುತ್ತದೆ ಎಂದು ತಿಳಿದಿದ್ದರೂ. ಪ್ರೀತಿಸಿದ ವ್ಯಕ್ತಿ ಇದ್ದ ಜಾಗ ಎಂಬ ವಿಷಯ ಇದೆಯಲ್ಲಾ, ಅವಳು ನಡೆದ ದಾರಿಯ ಘಮ ಇಲ್ಲೇ ಹಬ್ಬಿದೆ ಎಂಬ ಭ್ರಮಾಭರಿತ ಸೊಗಸು ಮಾತಿನ ಅಗತ್ಯವಿಲ್ಲದೇ, ಕಾಲದೇಶಗಳ ಹಂಗಿಲ್ಲದೇ, ವ್ಯಕ್ತವಾಗುವ ಕಿಂಚಿತ್ ಪ್ರಯತ್ನವನ್ನೇ ಮಾಡದೇ ಇರುವ ಸ್ಥಿತಿಯಿದೆಯಲ್ಲಾ, ಅದು ಕೊಡುವ ಆನಂದವನ್ನು ಸಾಕ್ಷಾತ್ ಸಾನಿಧ್ಯವೂ ನೀಡಲಾರದು. ಅಂತಹ ಖುಷಿಯನ್ನು ಬಯಸಿ ಎಷ್ಟು ಸಲವೋ ಹೀಗೇ ಅವಳ ಮನೆಯ ಎದುರಿನ ರಸ್ತೆಯಲ್ಲಿ ನೆಲಕ್ಕೆ ಬೇರುಬಿಟ್ಟವನಂತೆ ನಿಂತುಬಿಟ್ಟಿದ್ದೇನೆ, ಎಷ್ಟೋ ಸಲ ಅದೇ ತಿರುವುಗಳಲ್ಲಿ ಹುಚ್ಚು ಹುಚ್ಚಾಗಿ ಅಲೆದಾಡಿದ್ದೇನೆ. ಏನೇ ಇರಲಿ, ವೈಷ್ಣವಿ ಎಂದರೆ ನನ್ನ ಪರಮಾಪ್ತ ಗೆಳತಿ, ಅಷ್ಟೆಯೇ? ಆಕೆ ನನ್ನ ಜೀವದ ಜೀವ, ಪ್ರಾಣದ ಪ್ರಾಣ, ಸರಳವಾಗಿ ಹೇಳಬೇಕೆಂದರೆ ನನ್ನ girlfriend, ಅಧಿಕೃತವಾಗಿಯೂ. ನಮ್ಮದೇ ಕ್ಲಾಸು. ಅಂದ ಹಾಗೆ ನನ್ನ ಹೆಸರು ಹೃಷೀಕೇಷ. ಇದು ಇಂಜಿನಿಯರಿಂಗ್ ನ ಕೊನೆಯ ವರ್ಷ, ಎಂದರೆ ನಾನು ವೈಷ್ಣವಿಯನ್ನು ಭೇಟಿಯಾಗಿ ಮೂರು ವರ್ಷಗಳು ತುಂಬಿವೆ, ಪ್ರಪೋಸ್ ಮಾಡಿ- ಅವಳು ಒಪ್ಪಿಕೊಂಡು ಎಲ್ಲ ಆಗಿಯೇ ಎರಡು ವರ್ಷವಾಗುತ್ತದೆ. ಕೆಲವೊಮ್ಮೆ ನನಗೇ ತಿಳಿಯದೇ ಈ ಐದು ಫೂಟಿನ ಹುಡುಗಿ ಏನು ಮೋಡಿ ಮಾಡಿಬಿಟ್ಟಳು ಎನಿಸುತ್ತದೆ. ಪ್ರೀತಿ ಎಂದರೆ ಹಾಗೇ, ಗೊತ್ತಿದ್ದೇ, ಇಷ್ಟವಿದ್ದೇ, ಬಾವಿಗೆ ಬೀಳುವ ಹುಚ್ಚುತನ, ಅದನ್ನೇ ಪರಮಾನಂದ ಎಂದು ತಿಳಿದುಕೊಂಡು ಖುಷಿಯಾಗಿರುವ ಪ್ರೌಢಿಮೆ. ಎಷ್ಟು ವೇಗವಾಗಿ, ಎಷ್ಟು ಸುಂದರವಾಗಿ ಈ ಎರಡು ವರ್ಷಗಳು ಕಳೆದು ಹೋದವು ಎನ್ನಿಸಿತು. ಕಾಲು ಗಂಟೆಯಾದ ಮೇಲೆ, ಇನ್ನು ಸಾಕು ಎನ್ನಿಸಿ ಕಾಲೇಜಿನ ಕಡೆ ಗಾಡಿಯನ್ನು ತಿರುಗಿಸಿದೆ. ಈ ಎರಡು ವರ್ಷಗಳಲ್ಲಿ ಎಂದಾದರೂ ನನ್ನ ಪ್ರೀತಿಯ ತೀವ್ರತೆ, ಅದರ ಸಾಂದ್ರತೆ ಕಡಿಮೆಯಾಗಿತ್ತೇ? ಎಂಬ ಪ್ರಶ್ನೆ ಏಕೋ ಮೂಡಿತ್ತು, ಆದರೆ ಅದು ಎಂದಾದರೂ ನಿನ್ನ ಹೃದಯಬಡಿತ ನಿಲ್ಲಿಸಿತ್ತೇ ಎಂಬ ಪ್ರಶ್ನೆಯಷ್ಟೇ ಮೂರ್ಖವಾಗಿ ಕಂಡುಬಂದು ತಲೆಕೊಡವಿಕೊಂಡೆ. ಅವಳದ್ದು? ಸಾಧ್ಯವೇ ಇಲ್ಲ, ಅವಳ  ಪ್ರತಿ ಹೃದಯಬಡಿತ, ಮನಸ್ಸಿನ ಪ್ರತೀ ತುಡಿತ ನನಗೆ ಗೊತ್ತು. ಯೋಚನೆ ಹೀಗೇ ಸಾಗಿತ್ತು. ಎದುರಿದ್ದ ಟೆಂಪೋ ಟ್ರಾವೆಲರ್ ಏಕೋ ಸಡನ್ ಆಗಿ ನಿತ್ತಿತ್ತು. ನಾನು ಬ್ರೇಕ್ ಹಾಕುವುದರೊಳಗೆ ಬೈಕ್ ಹೋಗಿ ಅದಕ್ಕೆ ಗುದ್ದಿ ಆಗಿತ್ತು. ಅಂಗಾತ ಬಿದ್ದಿದ್ದೆ, ಹಿಂದಿಂದ ಬರುತ್ತಿದ್ದ ಲಾರಿ ಕಾಲ ಮೇಲೆ ಹರಿದು ಹೋಗಿತ್ತು . ನೋವೆಲ್ಲ ಸಮೀಕರಿಸಿ ತಲೆಗೆ ನುಗ್ಗಿ ನರಮಂಡಲ ಧೀಂ ಎಂದಿತ್ತು. ಅದಕ್ಕೆ ಪರಿಹಾರ ಎಂಬಂತೆ ಪ್ರಜ್ಞೆ ತಪ್ಪಿತ್ತು. ಎಚ್ಚರ ತಪ್ಪುವಾಗ ಎದೆಯೊಳಗಿದ್ದ ವೈಷ್ಣವಿ, ಎಚ್ಚರವಾದಾಗ ಎದುರಿದ್ದಳು, ಆಸ್ಪತ್ರೆಯ ಬೆಡ್ ನ ಪಕ್ಕದಲ್ಲಿ.

೨.
          ಆ ಘಟನೆ ಆಗಿ ತಿಂಗಳಾಗಿದೆ. ನನ್ನ ಬಲಕಾಲು ಪೂರ್ಣವಾಗಿ ಜಜ್ಜಿ ಹೋಗಿದ್ದರಿಂದ ಆಪರೇಶನ್ ಮಾಡಿ ಕಾಲನ್ನು ತೆಗೆಯಬೇಕಾಯಿತು. ತಿಂಗಳಾಗುತ್ತ ಬಂದಿದೆ, ಕಾಲೇಜಿನ ಕಡೆ ಮುಖ ಹಾಕದೇ. ಕಾಲೇಜಿಗೆ ಹೋಗುವುದಕ್ಕೆ ಮೂಲಕಾರಣವೇ ನಾನಿರುವಲ್ಲಿಗೇ ದಿನವೂ ಬರುತ್ತದೆ ಎಂದರೆ, ಯಾರು ತಾನೇ ಕಾಲೇಜನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಬೇಜಾರು ಮಾಡಿಕೊಳ್ಳುತ್ತಾರೆ? ಮೊದಲ ಒಂದು ವಾರವಿಡೀ ಅವಳೂ ಕಾಲೇಜಿಗೆ ಹೋಗಿರಲಿಲ್ಲ. ದಿನವಿಡೀ ನನ್ನ ಅಮ್ಮನೂ, ಅವಳೂ ಆಸ್ಪತ್ರೆಯಲ್ಲಿಯೇ ಇರುತ್ತಿದ್ದರು. ಇಬ್ಬರ ಮನೆಯಲ್ಲಿಯೂ ನಮ್ಮ ಬಗ್ಗೆ ಗೊತ್ತಿದ್ದರಿಂದ, ಅದೆನೂ ಆಶ್ಚರ್ಯಕಾರಿ ಸಂಗತಿಯಲ್ಲ. ಮೊದಲೆರಡು ದಿನ ಅಮ್ಮನೂ ಪ್ರಜ್ಞೆ ಇಲ್ಲದಿದ್ದವಳ ಹಾಗೆ ಕುಳಿತಾಗ, ಇವಳೇ ಮನೆಯಿಂದ ಅಡಿಗೆ ಮಾಡಿಸಿಕೊಂಡು ತರುತ್ತಿದ್ದಳು. ನನಗೂ, ಅಮ್ಮನಿಗೂ ಆ ಸಮಯದಲ್ಲಿ ಒಂದು ದಿಕ್ಕಾಗಿದ್ದು ಅವಳೇ. ಒಂದು ವಾರದ ನಂತರ ಕಾಲೇಜಿಗೆ ಹೋಗಲು ಪ್ರಾರಂಭಿಸಿದಳಾದರೂ, ಮುಗಿಸಿ ಬಂದವಳು ನನ್ನ ಪಕ್ಕ ಬಂದು ಕೂತರೆ ,ಆಸ್ಪತ್ರೆಯನ್ನು ಬಿಟ್ಟು ಹೋಗಲೇ ತಯಾರಿರುತ್ತಿರಲಿಲ್ಲ. ಸಂಜೆಯಾಗಿ ಅವಳನ್ನು ಕಳಿಸಬೇಕಾದರೆ ಅಮ್ಮ, ನಾನು ನಮ್ಮ ಬುದ್ಧಿಶಕ್ತಿಯನ್ನೆಲ್ಲ ಖರ್ಚು ಮಾಡಬೇಕಾಗುತ್ತಿತ್ತು, ಕೆಲವೊಮ್ಮೆ ಅಮ್ಮ ಸುಳ್ಳು ಸುಳ್ಳೇ ಸಿಟ್ಟು ಮಾಡಿಕೊಂಡಿದ್ದೂ ಇದೆ, ಕೆಲವೊಮ್ಮೆ ಅಮ್ಮ ಮರೆಯಲ್ಲಿ ಖುಷಿಯಿಂದ ಕಣ್ಣನ್ನು ಒರೆಸಿಕೊಂಡಿದ್ದೂ ಇದೆ. ಒಂದೆರಡು ವಾರದ ನಂತರ, ನಾನು ದೊಡ್ಡ ತ್ಯಾಗಿಯ ಹಾಗೆ "ಈಗಲೂ, ಹೀಗೆ ನನ್ನ ಕಾಲು ಹೋದ ಮೇಲೂ ನೀನು ನನ್ನನ್ನು ಪ್ರೀತಿಸುತ್ತೀಯಾ ?, ನೀನು ನನ್ನನ್ನು ಮರೆತುಬಿಡುವುದು ಒಳ್ಳೆಯದೇನೋ" ಎಂದೆ ಯಾವುದೋ ಒಂದು ಗೊಂದಲದಲ್ಲಿ. "ಛಟೀರ್!"ಬಿದ್ದಿತ್ತು ನನ್ನ ಕೆನ್ನೆಯ ಮೇಲೊಂದು ಪೆಟ್ಟು. "ಮೂರ್ಖ, ನೀನು ಇಷ್ಟು ಚಿಲ್ಲರೆಯಾಗಿ ಯೋಚಿಸುತ್ತೀಯಾ ಎಂದು ನನಗೆ ತಿಳಿದಿರಲಿಲ್ಲ. ಅಷ್ಟಕ್ಕೂ ನಾನು ಪ್ರೀತಿಸಿದ್ದು ಹೃಷೀಕೇಷ ಎಂಬ ವ್ಯಕ್ತಿಯನ್ನು, ಅವನ ಕಾಲನ್ನಲ್ಲ" ಕಣ್ಣ ತುಂಬ ನೀರನ್ನು ತುಂಬಿಕೊಂಡು ಹೇಳಿದಳು.  ಅವಳ ಪ್ರತಿಕ್ರೀಯೆ ನನ್ನ ಬಗ್ಗೆ ನನಗೇ ಅಸಹ್ಯವಾದ ಹೇಸಿಕೆ ಹುಟ್ಟಿತು. ಅವಳ ಬಗ್ಗೆ ಮನದಲ್ಲಿದ್ದ ಒಂದು ಹೆಮ್ಮೆ ಮತ್ತಿಷ್ಟು ಬಲಿತಿತ್ತು. ಹೀಗೆ ಇವಳು ದಿನವೂ ನನ್ನ ಪಕ್ಕ ಬಂದು ಕೂರುವುದಾದರೆ ಜೀವನ ಪೂರ್ತಿ ಹೀಗೇ ಆಸ್ಪತ್ರೆಯಲ್ಲಿರಲು ನಾನು ತಯಾರಿದ್ದೆ. ಜೀವನದಲ್ಲಿ ಮತ್ತೇನು ಬೇಕು, ಜೀವಕೊಟ್ಟ ಅಮ್ಮ ಮತ್ತು ಜೀವಕೊಡಲು ತಯಾರಿರುವ ಹುಡುಗಿಯ ಸಂಪೂರ್ಣ ಸಾನಿಧ್ಯ ಬಿಟ್ಟು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಹೊತ್ತಿಗೆ ನನ್ನ ಒಂದು ಕಾಲು ಇಲ್ಲದೆಯೇ, ಕುಂಟು ಹಾಕಿಕೊಂಡಿರಬೇಕಾದ ಮುಂದಿನ ಜೀವನಕ್ಕೆ ತಯಾರಾಗಿದ್ದೆ.

೩.
          ಇದಾಗಿ ಮತ್ತೊಂದು ತಿಂಗಳು ಕಳೆದಿತ್ತು. ಅವಳ ಮಾವನ ಮಗ ಸಿಂಧೂರ ಅಮೇರಿಕಾದಿಂದ ಬಂದಿದ್ದ. ಅವಳೊಂದಿಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಒಡನಾಡತೊಡಗಿದ. ಬೈಕಿನಲ್ಲಿ ಕೂರಲು ಹಿಂಜರಿಯುತ್ತಿದ್ದವಳಿಗೆ ದಿನವೂ ಅವನೇ ಡ್ರಾಪ್ ಕೊಡತೊಡಗಿದಾಗ, ಹಾಗಾದರೂ ಅವಳಿಗೆ ಅನುಕೂಲವಾಗುತ್ತದಲ್ಲ ಎಂದು ಸುಮ್ಮನೇ ಇದ್ದೆ, ಮಧ್ಯದ ಬ್ರೇಕ್ ಗಳಲ್ಲಿ ಅವನು ಸುಮ್ಮಸುಮ್ಮನೇ ಕಾಲೇಜಿಗೆ ಬಂದು ಅವಳನ್ನು ಮಾತನಾಡಿಸತೊಡಗಿದರೂ ಏನೋ ಸಂಬಂಧಿಕರು ಎಂದು ಸುಮ್ಮನಿದ್ದೆ, ನನ್ನ ಯೋಗಕ್ಷೇಮದ ಬಗ್ಗೆ ಅವಳು ವಿಚಾರಿಸುವುದನ್ನು ಕಡಿಮೆಮಾಡಿದಾಗಲೂ ಸಿಂಪತಿಯನ್ನು ಅಪೇಕ್ಷಿಸಿತೇ ಮನ ಎಂದು ನನ್ನ ಮನಸ್ಸಿಗೇ ಬೈದುಕೊಂಡು ಸುಮ್ಮನಿದ್ದೆ, ಆದರೆ ನನಗೆ ಬರುತ್ತಿದ್ದ ಮೆಸೇಜು, ಕಾಲುಗಳು ಬತ್ತಿಹೋಗಿ, ನಾನು ಮಾಡಿದ ಮೆಸೆಜುಗಳಿಗೂ ಉತ್ತರ ಬರದೇ ನನ್ನ ಬಗ್ಗೆ ನಿರ್ಲಕ್ಷ್ಯ ತೋರಲಾರಂಭಿಸಿದಾಗ ಮಾತ್ರ ಚಡಪಡಿಸಿಹೋದೆ. ಮುಖಕ್ಕೆ ಮುಖ ಕೊಟ್ಟು ದಿಟ್ಟಿಸಲೂ ಅವಳು ಹಿಂಜರಿದು ತಲೆ ಬಗ್ಗಿಸಿಕೊಂಡು ಹೋದಾಗ ನಾನು ಪಾತಾಳಕ್ಕೆ ಕುಗ್ಗಿಹೋದೆ. "ಏಕೆ ಹೀಗೆ ಮಾಡುತ್ತಿರುವೆ? ನನ್ನ ಕಾಲು ಮುರಿದು ಹೋಗಿದೆ ಎಂಬ ಒಂದೇ ಕಾರಣಕ್ಕಾಗಿಯೇ?" ಎಂದಾಗ "ಇರಬಹುದು,ಈಗ ನಾನು ನಿನ್ನನ್ನಂತೂ ಪ್ರೀತಿಸುತ್ತಿಲ್ಲ " ಎಂದು ಮುಖಕ್ಕೆ ಹೊಡೆದಂತೆ ಅವಳು ಹೇಳಿದಾಗ ಮೊದಲ ಬಾರಿಗೆ ನಾನು ಅಂಗವಿಕಲ ಎನ್ನಿಸಿತು. "ಹಾಗಾದರೆ ಆಸ್ಪತ್ರೆಯಲ್ಲಿ ಹೇಳಿದ್ದೆಲ್ಲಾ?" ಎಂದಿದ್ದಕ್ಕೆ ಮೌನವೇ ಉತ್ತರ. ಮತ್ತೂ ಒತ್ತಾಯಪಡಿಸಿದರೆ "ಆಗಲಾದರೂ ನಾನು ನಿನಗೆ ಮಾನಸಿಕ ಬೆಂಬಲ ಇತ್ತೆನಲ್ಲಾ ಎಂದು ಖುಷಿಪಡು. ಆಗ ನಾನು ಮಾಡಿದ ಸಹಾಯಕ್ಕೆ ಕೃತಜ್ಞನಾಗಿರು" ಎಂದು ಮತ್ತೂ ನಿಷ್ಠುರವಾಗಿ ಹೇಳಿದ್ದು ನನಗೆ ಅವಮಾನಕಾರಿಯಾಗಿ ಕಂಡುಬರಲೆಂದೆಯೇ ಅವಳು ಅಗತ್ಯಕ್ಕಿಂತ ಖಾರವಾಗಿ ಮಾತನಾಡುತ್ತಿದ್ದಾಳೆ ಎಂದು ಒಳಮನಸ್ಸಿಗೆ ಎನ್ನಿಸಿತು, ಆದರೆ ಬುದ್ಧಿ ಅದನ್ನು ತಿರಸ್ಕಾರ ಎಂದೇ ಗಣಿಸಿ, ಅವಳ ಬಗ್ಗೆ ಮತ್ತಿಷ್ಟು ಅಸಹ್ಯಿಸಿಕೊಂಡಿತು. ಹಾಗೆ ನಮ್ಮಿಬ್ಬರ ಸಂಬಂಧ ಮತ್ತೆಂದಿಗೂ ಸರಿಪಡಿಸಲಾರದ ಮಟ್ಟಿಗೆ ಹಾಳಾಯಿತು. ನನಗೇ ಇಂದು ಇಲ್ಲಿ ಬರೆಯಲು ಇಷ್ಟ ಪಡದ ಶಬ್ದಗಳನ್ನೆಲ್ಲಾ ಉಪಯೋಗಿಸಿಕೊಂಡು ಬಯ್ದುಬಿಟ್ಟೆ. ಗೆಳೆಯರ ಬಳಗದಲ್ಲೆಲ್ಲಾ ಅವಳ ಬಗ್ಗೆ ಒಂತರಾ ಕೆಟ್ಟ ಇಮೇಜನ್ನು ಹುಟ್ಟಿಸಿಬಿಟ್ಟೆ. ಇದರ ಮಧ್ಯೆ ಒಂದೆರಡು ಸಲ ಅವಳ ಕಸಿನ್ ನನ್ನ ಬಳಿ ಮಾತನಾಡಲು ನೋಡಿದನಾದರೂ ನಾನು ಅವಕಾಶ ಕೊಡದೇ ತಪ್ಪಿಸಿಕೊಂಡು ಬಿಟ್ಟೆ.

೪.
          ಒಂದು ತಿಂಗಳು ಕಳೆದಿತ್ತೇ? ಲೆಕ್ಕ ಇಟ್ಟವರಾರು? ಭಾವ ಕರಗಿ, ಕೊರಗು ಮೂಡಿ, ದುಃಖ ತಿರುತಿರುಗಿ ಉಮ್ಮಳಿಸಿ ಬಂದು ಮಾತು ಕಟ್ಟಿಹೋದಂತಾದಾಗ ದಿನದ ಲೆಕ್ಕ ಇಡುವ ವ್ಯವಧಾನ ಯಾರಿಗಾದರೂ ಇದ್ದೀತು.   ಒಂದು ಸಂಜೆ ಹೀಗೆ ಕಾಲೇಜಿನ ಕಟ್ಟೆಯ ಮೇಲೆ ಕೂತು ಅವಳ ಬಗ್ಗೆಯೇ ಏನೋ ಒಂದು ಮಾತನಾಡುತ್ತಿರಬೇಕಾದರೆ ಸಿಂಧೂರ ಎಲ್ಲಿಲ್ಲದ ಗಡಿಬಿಡಿಯಿಂದ ಓಡಿಬಂದಾಗಲೇ ಮನಸ್ಸು ಏನೋ ಕೇಡನ್ನು ಸಂಶಯಿಸಿತ್ತು.ಬಂದವನೇ ಹಿಂದೆ ಮುಂದೆ ನೋಡದೇ, ನನ್ನನ್ನು ಒಂದು ಮಾತ್ರ ಮಾತನ್ನೂ ಕೇಳದೇ"ಆಸ್ಪತ್ರೆಗೆ ಹೋಗೋಣ ಬನ್ನಿ" ಎಂದು ಬೈಕಿನಲ್ಲಿ ಕೂರುವಂತೆ ಹೇಳಿ ಸ್ಟಾರ್ಟ್ ಮಾಡಿದ. ಏನಕ್ಕೆ ಎಂಬ ಪ್ರಶ್ನೆಗೆ ಮೌನವೇ ಉತ್ತರ. ಬಹಳೇ ಕಿರಿಕ್ ಮಾಡಿ, ಇನ್ನು ಹೇಳದಿದ್ದರೆ ಓಡುತ್ತಿರುವ ಗಾಡಿಯಿಂದ ಇಳಿದು ಬಿಡುತ್ತೇನೆ ಎಂದು ಬೆದರಿಕೆ ಹಾಕಿದಾಗ, "ನಿಮ್ಮ ಅದೃಷ್ಟ ಸರಿಯಾಗಿದ್ದರೆ ವೈಷ್ಣವಿಯನ್ನು ಜೀವಂತವಾಗಿ ನೋಡಬಹುದು" ಎಂದಷ್ಟೇ ಹೇಳಿ ಇನ್ನು ಹಾರುವುದಾದರೆ ಹಾರಿ ಎಂಬ ಧಾಟಿಯಲ್ಲಿ ಬೈಕನ್ನು ಯಮವೇಗದಲ್ಲಿ ಹೊಡೆಯತೊಡಗಿದ. ಯಾವ ವೇಗದಲ್ಲಿ ಹೋದರೇನು, ಜೀವ ಕಾದಿರಲಿಲ್ಲ. ಬದುಕಿದ್ದಾಗ ಇದ್ದ ಅದೇ ತುಂಟನಗೆಯನ್ನು ಸತ್ತ ಮೇಲೂ ಇರಿಸಿಕೊಳ್ಳಲು ಸಾಧ್ಯವೇ ಎಂದು ಅಚ್ಚರಿಗೊಳ್ಳುವಷ್ಟು ನಿರಾಳವಾಗಿ ಮಲಗಿಕೊಂಡಿದ್ದಳು ಆಸ್ಪತ್ರೆಯ ಮಂಚದ ಮೇಲೆ. ನನಗ್ಯಾಕೋ ನಂಬಲಾಗಲಿಲ್ಲ, ನಂಬಬೇಕು ಎಂದು ಕೂಡ ಎನ್ನಿಸಲಿಲ್ಲ. ನಾವೆಷ್ಟೇ ಸುಳ್ಳು ಸುಳ್ಳಾಗಿ ದ್ವೇಷಿಸಿದಂತೆ ತೋರಿಸಿಕೊಂಡರೂ ಒಮ್ಮೆ ಪ್ರೀತಿಸಿದ ಮೇಲೆ ಆ ವ್ಯಕ್ತಿಯ ಬಗ್ಗೆ ಬೇರಾವ ಭಾವವೂ ಮೂಡಲೂ ಸಾಧ್ಯವಿಲ್ಲ. ಪ್ರೀತಿ ಎಂಬ ಒಂದು ಭಾವನೆ ಎದೆಯಲ್ಲಿ ಬೇರು ಬಿಟ್ಟು ಕೂತ ಮೇಲೆ ಬೇರೆ ಭಾವಗಳಿಗೆ ಜಾಗವಾದರೂ ಎಲ್ಲಿಂದ ಸಿಕ್ಕೀತು. ಆ ವ್ಯಕ್ತಿಯ ಬಗ್ಗೆ ಇರಬಹುದಾದದ್ದು ಮತ್ತೇನೂ ಅಲ್ಲ, ಕೇವಲ ಪ್ರೀತಿ. ಈ ಪ್ರೀತಿ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವುದೆಂದೂ, ನಮ್ಮ ಬಳಿ ಇರುವ  ವ್ಯಕ್ತಿಯ ಮಹತ್ವ ಅವರಿಂದ ದೂರವಾದ ಮೇಲೆ ಮಾತ್ರ ತಿಳಿಯುತ್ತದೆಯೆಂದೂ ತಿಳಿದುಕೊಳ್ಳಲು ನಾನು ಜೀವನದಲ್ಲಿ ಇಷ್ಟು ದೊಡ್ಡ ಬೆಲೆಯನ್ನು ತೆರಬೇಕಾಯಿತೇ?

೫.
          ನನಗಾದ ಶಾಕ್ಅನ್ನೂ , ಆ ದುಃಖವನ್ನೂ ಮತ್ತಾರು ಅರ್ಥ ಮಾಡಿಕೊಂಡರೋ ಇಲ್ಲವೋ ಗೊತ್ತಿಲ್ಲ ಸಿಂಧೂರ ಮಾತ್ರ ಚೆನ್ನಾಗಿ ಅರ್ಥೈಸಿಕೊಂಡ " ಇಲ್ಲೇ ಹೊರಗೆ ಹೋಗಿ ಬರೋಣ" ಎಂದು ಆಸ್ಪತ್ರೆಯಿಂದ ಸ್ವಲ್ಪ ಹೊರಗೆ ಕರೆದುಕೊಂಡು ಬಂದವನು ಮೊದಲೆ ನಿರ್ಧರಿಸಿಕೊಂಡಿದ್ದಂತೆ ಮಾತನಾಡತೊಡಗಿದನು, "ರಿಷಿ, ನೀನು ವೈಷ್ಣವಿಯ ಬಗ್ಗೆ ಏನು ತಿಳಿದುಕೊಂಡಿದ್ದೆಯೋ, ಈಗ ಏನನ್ನು ಭಾವಿಸಿರುವೆಯೋ ನನಗೆ ಗೊತ್ತಿಲ್ಲ. ಅವಳ ಬಗ್ಗೆ ನಿನ್ನಲ್ಲಿರುವ  ಸಂದೇಹಗಳೆಲ್ಲ ಊಹೆಗಳಷ್ಟೇ! ನಾನು ಅರ್ಥ ಮಾಡಿಕೊಳ್ಳಬಲ್ಲೆ, ನಿನ್ನ ಯೋಚನಾಲಹರಿ ಹೇಗೆ ಸಾಗಿರಬಹುದು ಎಂದು. ಆದರೆ ಒಂದಂತೂ ನಿಜ. ಅವಳು ಪುಟಕ್ಕಿಟ್ಟ ವಜ್ರ.ಅಂತಹ ಹುಡುಗಿ ಎಲ್ಲರಿಗೂ ಸಿಗಲಾರಳು. ಎಲ್ಲಿಯೂ..." ಅವನೇ ಸ್ವಲ್ಪ ಹೊತ್ತು ಬಿಟ್ಟು ಮುಂದುವರಿಸಿದ. "ಅವಳು ಬೆಳದಿಂಗಳಂತ ಹುಡುಗಿ. ಬಿಸಿಯಾಗಿರದ ಸುಡದ ತಣ್ಣನೆಯ ಬೆಳಕು ಅವಳು. ನಿನಗೇ ಗೊತ್ತಲ್ಲ, ಮಾತನಾಡಿದರೆ ಮುತ್ತು ಉದುರಿದಂತ ಇಂಪು. ನಡೆದರೆ ಭೂಮಿ ಹಸಿರಾದೀತು ಎಂಬ ಆಸೆ, ಅಂತಹವಳು. ನಾನು ಅವಳೂ ಚಿಕ್ಕಂದಿನಿಂದಲೂ ಆಡಿ ಬೆಳೆದವರು. ಸಿಂಧೂರಣ್ಣ ಎನ್ನುತ್ತಿದ್ದಳು, ಪ್ರೀತಿಯಿಂದ ಸಿಂಧೂ ಎಂದಷ್ಟೇ ಕರೆದುಬಿಡುತ್ತಿದ್ದುದೂ ಇತ್ತು. ನನಗೆ ಸ್ವಂತ ತಂಗಿಯಿದ್ದರೂ ಇಷ್ಟು ದುಃಖಿಸುತ್ತಿರಲಿಲ್ಲವೇನೋ, ಅಂತಹ ಹುಡುಗಿ. ನಾನು MBBS  ಮುಗಿಸಿ ಅಮೇರಿಕಾಕ್ಕೆ ಉನ್ನತ ಶಿಕ್ಷಣಕ್ಕೆ ಹೋದ ಮೇಲೂ ಆವಾಗಾವಾಗ ಫೋನ್ ಮಾಡುತ್ತಿದ್ದಳು, ತಪ್ಪದೇ ಕಾಗದ ಬರೆಯುತ್ತಿದ್ದಳು. ನಿನ್ನ ಬಗ್ಗೆ ನೀನು ಪ್ರಪೋಸ್ ಮಾಡಿದಂದೇ ಹೇಳಿದ್ದಳು. ನಿನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಳು, ಕೊನೆಯವರೆಗೂ ಪ್ರೀತಿಸಿದಳು, ಪ್ರೀತಿಸುತ್ತಲೇ ಕೊನೆಯುಸಿರೆಳೆದಳು." ನನಗಿಂತ ಹೆಚ್ಚಾಗಿ ಅವನು ಬಿಕ್ಕಳಿಸಿದನೇ, ಅದಕ್ಕೋಸ್ಕರವೇ ಮುಖವನ್ನು ಮತ್ತೊಂದೆಡೆಗೆ ತಿರುಗಿಸಿದನೇ, ನಾನು ಹುಡುಕಲು ಹೋಗಲಿಲ್ಲ. "ನನಗೆ ನಿನ್ನ ಕೋಪವೂ ಅರ್ಥವಾಗುತ್ತದೆ. ಹೌದು ಅದಕ್ಕೂ ಅರ್ಥವಿದೆ. ನಿನ್ನ ಜಾಗದಲ್ಲಿ ನಾನಿದ್ದರೂ ನಾನು ಹಾಗೇ ತಿಳಿಯುತ್ತಿದ್ದೆನೇನೋ. ಆದರೆ ಅವಳ ಮನಸ್ಸು ನಮ್ಮ ಕಲ್ಪನೆಗೆ ಸಿಗದಷ್ಟು ದೊಡ್ಡದು. ನಿನಗೆ ಆ ದಿನ ಅಪಘಾತ ಆಗಿ ಕಾಲು ಕತ್ತರಿಸಿದರಲ್ಲ, ಅದಾಗಿ ಒಂದಿಷ್ಟು ದಿನ ಇವಳು ನಿನ್ನೊಂದಿಗೆ ಸರಿಯಾಗೆಯೇ ಇದ್ದಳು ನಿನಗೆ ನೆನಪಿರಬಹುದು. ಸುಮಾರು ಒಂದು ತಿಂಗಳಾದ ಮೇಲೆ ಒಂದು ದಿನ ವಿಪರೀತ ಹೊಟ್ಟೆ ನೋವು ಬಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಳು. ಆಗ ಪರೀಕ್ಷೆ ಮಾಡಿದಾಗ ತಿಳಿದಿದ್ದು, ಈ ಬೆಳದಿಂಗಳ ಹುಡುಗಿಗೆ ಆ ’ಬೆಳದಿಂಗಳ ಬಾಲೆ(ಸುನಿಲ ಕುಮಾರ್ ದೇಸಾಯಿಯವರ ಚಲನಚಿತ್ರ)’ಗೆ ಇದ್ದ ಖಾಯಿಲೆಯೇ ಬಂದಿದ್ದು ಎಂದು. ಕೊನೆಯವರೆಗೂ ಬಾಹ್ಯಲಕ್ಷಣಗಳನ್ನು ತೋರಿಸದೇ ಸುಪ್ತವಾಗಿ ಉಳಿದುಬಿಡುವ ಮದ್ದಿಲ್ಲದ ಖಾಯಿಲೆಯದು. ಈ ವಿಷಯ ತಿಳಿದಿದ್ದುದು ಅವಳಿಗೆ, ನನಗೆ ಹಾಗೂ ಅವಳ ತಂದೆಯವರಿಗೆ ಮಾತ್ರ. ನನಗೆ ತಿಳಿದಾಕ್ಷಣ ನಾನು ಸ್ಟೇಟ್ಸ್ ನಿಂದ ಬಂದೆ. ನಿನಗೆ ಹೇಳಲೇಬಾರದು ಎಂದು ಖಡಾಖಂಡಿತವಾಗಿ ಹೇಳಿದ್ದಳು ಆಣೆ ತೆಗೆದುಕೊಂಡಿದ್ದಳು. ಯಾಕೆ ಎಂದರೆ "ಅವನು ಅದನ್ನು ತಡೆದುಕೊಳ್ಳಲಾರನೋ, ವಿಷಯ ಗೊತ್ತಾದರೆ ನನಗಿಂತ ಮೊದಲೇ ಅವನು ಸಾಯಬಹುದು" ಅವಳ ಧ್ವನಿ ಏನನ್ನೂ ವೈಭವೀಕರಿಸಿದ ಹಾಗೆ ಕೇಳುತ್ತಿರಲಿಲ್ಲ, ಸತ್ಯವನ್ನು ಹೇಳುವ ನಿಷ್ಟುರವಿದ್ದಂತಿತ್ತು. ನಿನ್ನ ಪ್ರೀತಿಯ ಆಳ, ಆ ಪೊಸೆಸಿವ್ ನೆಸ್ ಗಳ ಬಗ್ಗೆ ಅವಳಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಅವಳು ಹೆದರಿಕೊಂಡಿದ್ದುದು, ಎಲ್ಲಿ ನೀನೇನಾದರೂ ಭಾನಗಡಿ ಮಾಡಿಕೊಂಡುಬಿಡುತ್ತೀಯೇನೋ ಎಂದು. ಪರಿಹಾರವೇನು, ನಿನ್ನ ದೃಷ್ಟಿಯಲ್ಲಿ ಅವಳು ಕೆಟ್ಟವಳಾದರೆ ಮಾತ್ರ ಅವಳ ದುರ್ವಾರ್ತೆಯನ್ನು ಅರಗಿಸಕೊಳ್ಳಬಲ್ಲ ಶಕ್ತಿ ನಿನಗೆ ಸಿಗಬಹುದು ಎಂದು ನಿನ್ನಿಂದ ದೂರವಾಗಬೇಕೆಂದುಕೊಂಡಳು, ಅದಕ್ಕಾಗಿ ಕೆಟ್ಟವಳೆಂಬ ಪಟ್ಟವನ್ನು ಹೊರಲೂ ಸಿದ್ಧವಾದಳು. ಹೊತ್ತಳೂ ಕೂಡ. ಅವಳಿಗೆ ಇದ್ದಿದ್ದು ಒಂದೇ ಆಸೆ, ನೀನು ಸುಖವಾಗಿರಬೇಕೆಂದು. ಅದಕ್ಕಾಗಿ, ಅವಳ ನೆನಪಿನಲ್ಲಿ ನೀನು ಕೊರಗಬಾರದೆಂದು ಅವಳು ನಿನ್ನಿಂದ ದೂರವಾಗಲು ನೋಡಿದಳೇ ವಿನಃ ನಿನ್ನ ಕಾಲಿಗಾದ ಅಪಘಾತದಿಂದಲ್ಲ" ನನ್ನ ಪ್ರತಿಕ್ರಿಯೆ, ಭೂಮಿ ಬಾಯ್ಬಿಡಬಾರದೇ ಎನ್ನಿಸುವಂತಿತ್ತು. ಉತ್ತರ ಕೊಡಲು ಯಾವ ಮುಖವಿಲ್ಲದೇ, ಅದಕ್ಕೆ ಬೇಕಾದ ಶಕ್ತಿ, ಇಚ್ಛೆಗಳಿಲ್ಲದೇ, ನಾನು ಸುಮ್ಮನೇ ಥೇಟು ’ಬೆಳದಿಂಗಳ ಬಾಲೆ’ಯ ಕೊನೆಯಲ್ಲಿ ಅನಂತನಾಗ್ ಬರುವ ಹಾಗೆ ಸಾವಿನ ಮನೆಯಿಂದ ದುಃಖದ ಮೂಟೆಯನ್ನು ಮನದಲ್ಲಿ ಹೊತ್ತು ಗುರಿ-ದಿಕ್ಕುಗಳ ಹಂಗಿಲ್ಲದೇ ಅಲ್ಲಿಂದ ಸುಮ್ಮನೇ ಹೊರಬಿದ್ದೆ.

…
ಈ ಕಥೆ ಈ ವಾರದ ಪಂಜುವಿನಲ್ಲಿ ಪ್ರಕಟವಾಗಿತ್ತು.

Monday, 10 June 2013

ಯಾವುದು ತಪ್ಪು? ಯಾವುದು ಸರಿ?



       'ವೈತರಣಿ' ಆದ ಮೇಲೆ ಬರೆದ ಮೊದಲ ಕಥೆ. ಯಾಕೋ ಮತ್ತಾವ ಕಥೆಯನ್ನು ಬರೆಯಬಾರದು ಎಂದು ಅನಿಸಿತ್ತು ಎಂದು ಹೇಳಿದರೆ ಸುಳ್ಳೆಂದು ನಿಮಗೆ ಅನ್ನಿಸಬಹುದೇನೋ ಆದರೆ ಸತ್ಯದ ಮಾತದು. ಇರಲಿ, ಹಳೆಯದನ್ನು ಮರೆತು (??) ಹೊಸ ಕಥೆಯನ್ನು ಓದಿಕೊಳ್ಳಿ,  ಇಷ್ಟೇ ಸಾಕು ಪೀಠಿಕೆ.  

೧೯೮೬, ಮೈಸೂರು:
          ಮುಂಜಾನೆಯ ಎಳೆಬಿಸಿಲಿನಲ್ಲಿ ಮಳೆ ಬಿದ್ದಂತಿತ್ತು ರಾಯರ ಮನೆಯ ವಾತಾವರಣ.  ಸಂತಸ, ಸಂಭ್ರಮಬೆರೆತ ಹವೆಯಲ್ಲಿ ಕಂಡೂ ಕಾಣದಂತೆ ಬಂದುಕೂತಿತ್ತು ಅಗಲಿಕೆಯ ಬೇಸರ. ಇಂಜಿನಿಯರಿಂಗ್ ಕಲಿಯಲು ಕಾಣದ ಬಾಂಬೆ ಐ. ಐ. ಟಿ.ಗೆ ಹೋಗುತ್ತಿರುವ ಮಗನನ್ನು ಕಳಿಸಿಕೊಡಲು ರಾವ್ ದಂಪತಿಗಳು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡ ಸಡಗರದೊಂದಿಗೆ, ಒಬ್ಬನೇ ಮಗ ತಮ್ಮನ್ನು ಬಿಟ್ಟು ಹೋಗುತ್ತಿದ್ದಾನಲ್ಲಾ ಎಂಬ ದುಃಖದ ಸೆಳವಿತ್ತು.  ಅತ್ತು ಸುಧಾರಿಸಿಕೊಂಡರು ಅಮ್ಮ ಅಲಮೇಲಮ್ಮ, ಹಲ್ಲು ಕಚ್ಚಿ ದುಃಖಕ್ಕೆ ಆಣೆಕಟ್ಟನ್ನು ಕಟ್ಟಿದ್ದರು ಸತ್ಯನಾರಾಯಣರಾಯರು. ಇದ್ದ ಒಬ್ಬನೇ ಮಗ, ಪುಟ್ಟು,  ತಮ್ಮ ಕಣ್ಣ ಮುಂದೇ ಇರಲಿ ಎಂಬ ಬಯಕೆ ಅದಮ್ಯವಾಗಿದ್ದರೂ, ಮಗನ ಶ್ರೇಯಸ್ಸಿಗೆ ಸಹಕಾರಿ ಈ ಅಗಲಿಕೆ ಎಂಬ ಜ್ಞಾನವೂ, ಮಹಾತ್ವಾಕಾಂಕ್ಷಿ ಮಗನ ಹಠವೂ ಸೇರಿ ಸತ್ಯನಾರಾಯಣರಾಯರ ಮತ್ತು ಅಲಮೇಲಮ್ಮನವರ ಬಾಯಿ ಕಟ್ಟಿಹೋಗಿತ್ತು. ರಾಯರು ಹೇಗೋ ಗಟ್ಟಿ ಮನಸ್ಸನ್ನು ಮಾಡಿ ತಡೆದುಕೊಂಡರಾದರೂ ಮೊದಲೇ ಕಾಯಿಲೆಗೆ ಬಿದ್ದಿದ್ದ ಅಲಮೇಲಮ್ಮನವರು ಇದೇ ಕೊರಗಿನಲ್ಲಿ ಸವೆಯುತ್ತಾ ಹೋದರು.

          ಮಗನಿಂದ ದೂರ ಇದ್ದ ಪ್ರತೀ ದಿನವೂ ಕೊರಗಿ ನವೆಯುತ್ತಿದ್ದ ತಂದೆತಾಯಿಗೆ ಪುಟ್ಟು ರಜೆಯಲ್ಲಿ ಮನೆಗೆ ಬಂದಾಗ ಹಬ್ಬ. ದಿನವೂ ತಪ್ಪದೇ ಪೂಜಿಸುತ್ತಿದ್ದ ಸಾಕ್ಷಾತ್ ದೇವರೇ ಅವತರಿಸಿದರೂ ಅಷ್ಟು ಸಂಭ್ರಮವಿರುತ್ತಿರಲಿಲ್ಲವೇನೋ ರಾಯರ ಮನೆಯಲ್ಲಿ. ಇದ್ದ ಒಬ್ಬನೇ ಮಗನಿಂದ ದೂರ ಇರಬೇಕಾದ ನೋವನ್ನಾದರೂ ಅಲಮೇಲಮ್ಮ ಸಹಿಸಿಕೊಂಡಿರುತ್ತಿದ್ದರೇನೋ, ಆದರೆ ಯಾವಾಗ ಮಗರಾಯ ಮನೆಯವರ ಇಚ್ಛೆಗೆ ವಿರುದ್ಧವಾಗಿ ತನ್ನ ಇಂಜಿನಿಯರಿಂಗಿನ ಸಹಪಾಠಿ ಜಾನು ಚಲವಾದಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದನೋ ಆಗ ಆ ತಾಯಿ ಹೃದಯ ಭಯಂಕರ ಆಘಾತವನ್ನು ಅನುಭವಿಸಿತ್ತು. ದಿನವಿಡೀ ದೇವರು ದಿಂಡಿರು ಎಂದು, ಮಡಿ ಮೈಲಿಗೆ ಎಂದು, ಅಸ್ಪ್ರಶ್ಯತೆಯನ್ನೂ ದೈವವಿದಿತ ನಿರ್ಬಂಧವೆಂದು ಯಥಾವತ್ತಾಗಿ ಪಾಲಿಸಿಕೊಂಡು ಬದುಕಿದ್ದ ಅಲಮೇಲಮ್ಮನವರಿಗೆ,  ಮಗ ಹರಿಜನ ಹುಡುಗಿಯೊಬ್ಬಳನ್ನು ಮದುವೆಯಾಗುವುದು ಜೀರ್ಣಿಸಿಕೊಳ್ಳಲಾಗಲೇ ಇಲ್ಲ. ಅದೇ ಹೃದಯಾಘಾತದಿಂದ ಅವರು ಅಸುನೀಗಿದ್ದರು. ಸತಿ, ಗೆಳತಿ, ಅರ್ಧಾಂಗಿ, ಆತ್ಮಬಂಧು ಎಲ್ಲ ಆಗಿದ್ದ ಹೆಂಡತಿಯನ್ನು ಕಳೆದುಕೊಂಡ ಮೇಲೆ ರಾಯರು ಬದುಕಿಯೂ ಸತ್ತಂತಾಗಿದ್ದರು. ಮಗನನ್ನು ತಾನು ಬದುಕಿರುವವರೆಗೂ ಕ್ಷಮಿಸಿರಲಿಲ್ಲ, ಕೊನೆಯವರೆಗೂ ಅವನನ್ನು ಮನದೊಳಕ್ಕೂ, ಮನೆಯೊಳಗೂ ಬಿಟ್ಟುಕೊಳ್ಳಲಿಲ್ಲ.

          ಸಂಪ್ರದಾಯವೆಂಬ ಹೆಸರಿನಲ್ಲಿ ಹಳೆಯ ಗೊಡ್ಡು ಮೂಢನಂಬಿಕೆಗಳೊಳಗೆ ಮುಳುಗಿದ್ದ ತಂದೆತಾಯಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದರೂ ಅವರ ವಿಚಾರಗಳು ಒಪ್ಪಿಕೆಯಾಗಿರಲಿಲ್ಲ ಪುಟ್ಟುವಿಗೆ. ಕಾಲ ಬದಲಾದಂತೆ ನಾವು ಬದಲಾಗಬೇಕು, ಜಾತಿ, ಧರ್ಮಗಳೆಂಬ ಭೇದಗಳನ್ನು ಮೀರಿ ನಿಲ್ಲಬೇಕು ಎಂದು ಎಷ್ಟು ವಾದ ಮಾಡಿದರೂ ಕಿವಿಗೇ ಹಾಕಿಕೊಳ್ಳದ ತಂದೆತಾಯಿಯರ ಬಗ್ಗೆ ಬೇಜಾರಿತ್ತು ಮಗನಿಗೆ. ಮೊದಲನೆಯದಾಗಿ ಇಂಜಿನಿಯರಿಂಗಿಗೋಸ್ಕರ ಮುಂಬೈಗೆ ಕಳಿಸಲೇ ಇಬ್ಬರಿಗೂ  ಇಷ್ಟವಿರದೇ ಇದ್ದುದು ಗುಟ್ಟೇನೂ ಅಗಿರಲಿಲ್ಲ. ಇಲ್ಲಿ ಕರ್ನಾಟಕದ ಯಾವುದೋ ಒಂದು ಇಂಜಿನಿಯರಿಂಗ್ ಕಾಲೇಜಿಗೆ ಹೋಗು ಎಂದು ಕೊನೆಯವರೆಗೂ ಒತ್ತಾಯಿಸಿದ್ದರು. ಆಗಲೂ ಸಾಕಷ್ಟು ವಾದವಿವಾದಗಳಾಗಿತ್ತು. ಯಾವುದೋ ಮಾತಿನ ಭರದಲ್ಲಿ ಪುಟ್ಟ "ನಿಮ್ಮ ಸರ್ಕಾರಿ ನೌಕರಿಗಳ ತಲೆಮಾರಿನವರಿಗೆ ಮಹಾತ್ವಾಕಾಂಕ್ಷೆಯೇ ಇಲ್ಲ, ಅಲ್ಪತೃಪ್ತರು ನೀವು. ನಿಮ್ಮಂತಹವರಿಂದಲೇ ನಮ್ಮ ದೇಶ ಇನ್ನೂ ಅಭಿವೃದ್ಧಿಶೀಲ ದೇಶವಾಗಿಯೇ ಉಳಿದಿರುವುದು" ಎಂದುಬಿಟಿದ್ದ. ಮುಂದೆ ಹಾಗೆ ಹೇಳಬಾರದಾಗಿತ್ತು ಎಂದು ಸಾವಿರ ಬಾರಿ ಎಂದುಕೊಂಡರೂ ಆಡಿದ ಮಾತು, ಕಳೆದುಕೊಂಡ ನಂಬಿಕೆ ಎರಡೂ ಹಿಂದಕ್ಕೆ ತಿರುಗಿ ಬರಲಿಲ್ಲ. ಅದಕ್ಕಿಂತ ದೊಡ್ಡ ಜಗಳ ಮದುವೆಯ ವಿಚಾರದಲ್ಲಿ ಆಗಿತ್ತು. ಗಾಂಧಿತತ್ವಗಳ ಬಗ್ಗೆ ಊರಿಡೀ ಭೋಧನೆ ಮಾಡುತ್ತಿದ್ದ ಅಪ್ಪ,ಅಣ್ಣಾವ್ರು ಕಾಮನಬಿಲ್ಲು ಚಿತ್ರದಲ್ಲಿ ಸರಿತಾಳನ್ನು ಅಂತರ್ಜಾತಿ ಮದುವೆಯಾಗುವಾಗ ಭಾವಪರವಶವಾಗುವ ಅಮ್ಮ, ಇಬ್ಬರೂ ತಮ್ಮ ಮನೆಯ ವಿಷಯಕ್ಕೆ ಬಂದಾಗ ಚೈತ್ರಳನ್ನು ಪೂರ್ವಾಗ್ರಹ ಪೀಡಿತವಾಗಿ ತಿರಸ್ಕರಿಸಿದಾಗ ಪುಟ್ಟನ ಆಶಾಸೌಧ ಕುಸಿದಿತ್ತು.  ಚೈತ್ರಳ ಜಾತಿಯ ಆಧಾರದ ಮೇಲೆ ಅವಳನ್ನು ಸಂಸ್ಕಾರಹೀನಳು ಎಂದು ಅಮ್ಮ ಕರೆದಾಗ ಪುಟ್ಟನ ಮೈ ಕುದ್ದು ಹೋಗಿತ್ತು, ಕೈ ಎತ್ತುವುದೊಂದು ಬಾಕಿ ಇತ್ತು. ಅಷ್ಟರೊಳಗೆ ಮೊದಲೇ ಹೃದ್ರೋಗಿಯಾಗಿದ್ದ ಅಲಮೇಲಮ್ಮ ಹೃದಾಯಾಘಾತಕ್ಕೊಳಗಾಗಿ ಹಾಗೆಯೇ ಮೃತಪಟ್ಟಿದ್ದರಿಂದ ಪುಟ್ಟನ ಮನಸ್ಸಿನ ತುಂಬ, ಗೊತ್ತೇ ಇರದಂತೆ ಪಶ್ಚಾತ್ತಾಪ ಮಡುಗಟ್ಟಿತ್ತು. ಮೊಮ್ಮಗನ ಆಗಮನದ ನಂತರ ರಾಯರು ಸೊಸೆಯನ್ನು ಸ್ವೀಕರಿಸಿದರಾದರೂ ಮಗನೇ ಹೆಂಡತಿಯ ಸಾವಿಗೆ ಕಾರಣ ಎಂದು ನಂಬಿದ್ದ ಅವರು ಪುಟ್ಟನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ತನ್ನ ಚಿತೆಗೆ ಮೊಮ್ಮಗನೇ ಅಗ್ನಿಸ್ಪರ್ಷ ಮಾಡಬೇಕು ಎಂದು ರಾಯರ ವಿಲ್ ಬೇರೆ ಮಾಡಿಬಿಟ್ಟಿದ್ದರು, ಎಂಬಲ್ಲಿಗೆ ಒಂದು ತಂದೆಮಗನ ಸಂಬಂಧ ಮುರಿದುಬಿದ್ದಿತ್ತು.

೨೦೧೧, ಬೆಂಗಳೂರು:
          ಧೋ ಎಂದು ಮಳೆಬಂದು ನಿಂತ ಮೇಲಿನ ಮೇಲಿನ ಮೌನ ಮನೆಮಾಡಿತ್ತು ವಿಶ್ವಮೂರ್ತಿಯವರ ಮನೆಯಲ್ಲಿ. ಹಿಂದಿನ ಆರು ತಿಂಗಳ ಕಾಲದಷ್ಟು ಸಮಯದಿಂದ ವಾದ ಮಾಡಿದರೂ ಒಪ್ಪದೇ, ವಿದೇಶಕ್ಕೆ ಹೊರಟುನಿಂತಿದ್ದ ಮಗನ ಎದುರು ಮತ್ತೆ ವಾದಕ್ಕೆ ನಿಲ್ಲುವುದು ಮೂರ್ಖತನ ಎಂದು ಗೊತ್ತಿದ್ದೂ ಜಗಳಕ್ಕೆ ನಿಂತಿದ್ದರು ಮೂರ್ತಿಗಳು ಮತ್ತು ಜಾನಕಮ್ಮ. ತಂದೆತಾಯಿಯರಿಗೆ ಗೊತ್ತೇ ಇಲ್ಲದಂತೆ GRE ಬರೆದುಕೊಂಡಿದ್ದಷ್ಟೇ ಅಲ್ಲದೇ, ಅಮೇರಿಕದ ಎರಡು ಬಹುಪ್ರತಿಷ್ಟಿತ ವಿಶ್ವವಿದ್ಯಾಲಯಗಳಿಂದ ಆಹ್ವಾನ ಬಂದಮೇಲಷ್ಟೇ ತಂದೆತಾಯಿಯರಿಗೆ ಹೇಳುವ ಉಡಾಫೆ ತೋರಿದ್ದ ಮಗ ಅನಿಕೇತ. ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿರುವಾಗ ಒಮ್ಮೆ ವಿದೇಶಕ್ಕೆ ಹೋಗುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದ ಅನಿಕೇತ, ಆದರೆ ತಂದೆತಾಯಿಯರಿಬ್ಬರೂ ವಿರೋಧವನ್ನು ವ್ಯಕ್ತಪಡಿಸಿದ ಮೇಲೆ, ಪಕ್ಕದ ಮನೆಯ ಅರಿಹಂತನ ಮೇಲೆ ಆಸ್ಟ್ರೇಲಿಯದಲ್ಲಿ ಆದ ಜನಾಂಗೀಯ ಧಾಳಿಯ ಬಗ್ಗೆ ಉದಾಹರಿಸಿದ ಮೇಲೆ ಸ್ವಲ್ಪ ಸುಮ್ಮನಾಗಿದ್ದ. ಅಷ್ಟಾದ ಮೇಲೂ ಮತ್ತೂ ತನ್ನ ಹಠವನ್ನೇ ಸಾಧಿಸಿ ಅನಿಕೇತ GRE ಬರೆಯಲು ಪ್ರಯತ್ನಿಸಿದನೆಂಬ ವಿಷಯ, ಅದೂ ತನ್ನ ಬೆನ್ನಹಿಂದೆ ಹೀಗೆ ಮಾಡುತ್ತಾನೆಂಬ ಅನಿರೀಕ್ಷಿತ ಹೊಡೆತ ಮೂರ್ತಿಗಳನ್ನು ಹಣ್ಣು ಮಾಡಿತ್ತು. ಇನ್ನು ಮಗನಿಗೆ ಅತಿವಿರೋಧ ವ್ಯಕ್ತಪಡಿಸಿದರೆ ಹಗ್ಗ ಹರಿದೀತು ಎಂದು ಭಾವಿಸಿ ಒಲ್ಲದ ಮನಸ್ಸಿನಿಂದ್ದಲೇ ಮಗನ ವಿದೇಶೀ ಕನಸಿಗೆ ಅನುಮತಿ ಕೊಟ್ಟರು ಮೂರ್ತಿಗಳು.

          ಅನಿಕೇತ ಅಷ್ಟೆಲ್ಲಾ ಇಷ್ಟಪಟ್ಟು ವಿದೇಶಕ್ಕೆ ಕಲಿಯಲು ಹೋಗುತ್ತೇನೆ ಎಂದಾಗ ಬೇಡ ಎನ್ನಲು ಶಿಕ್ಷಣಪ್ರೇಮಿ ಎಂದು ಗುರುತಿಸಿಕೊಂಡಿದ್ದ, ಯಾವುದೋ ಗುರುತು ಪರಿಚಯ ಇಲ್ಲದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಾ ಬಂದಿದ್ದ ಮೂರ್ತಿಗಳಿಗೆ ಇಷ್ಟ ಇರಲೇ ಇಲ್ಲವಾದರೂ ಒಬ್ಬ ತಂದೆಯಾಗಿ ಮಗನ ಬಗೆಗಿನ ಅತಿ ಕಕ್ಕುಲತೆಯೋ, ಅರಿಹಂತನ ಮೇಲಾಗಿದ್ದ ಮಾರಣಾಂತಿಕ ಹಲ್ಲೆಗಳಿಂದ ಮನಸ್ಸಿನ ಮೇಲೆ ಉಳಿದು ಹೋಗಿದ್ದ ಭಯದ ನೆರಳೋ, ಒಟ್ಟಾರೆಯಾಗಿ ಮೂರ್ತಿಗಳು ಖಡಾಖಂಡಿತವಾಗಿ ಮಗನ ವಿದೇಶೀ ಶಿಕ್ಷಣದ ಬಯಕೆಯನ್ನು ವಿರೋಧಿಸಿದ್ದರು. ಕೊನೆಗೂ ಎರಡೇ ವರ್ಷಗಳ ಮಟ್ಟಿಗೆ ಅಷ್ಟೇ ಅಲ್ಲವೇ ಎಂದುಕೊಂಡು ಒಪ್ಪಿದ್ದರು, ಅಲ್ಲಿ ’ಕೇವಲ’ ವಿದ್ಯಾಭ್ಯಾಸಕ್ಕೆ ಹೋಗುತ್ತಿರುವುದು ಎಂಬ ಪ್ರಮಾಣವನ್ನು ತೆಗೆದುಕೊಂಡ ಮೇಲೆ. MS ಮುಗಿದ ಮೇಲೆ ಯಾವಾಗ ಮಗರಾಯ ಸ್ವಲ್ಪವರ್ಷ ಅಲ್ಲಿಯೇ ಕೆಲಸಮಾಡಿ, ಅದರಿಂದ ಸಿಗುವ ಅನುಭವದ ಲಾಭದ ಬಗ್ಗೆ ಮಾತನಾಡತೊಡಗಿದನೋ ಆಗ ಮೂರ್ತಿಗಳಲ್ಲಿದ್ದ ನಿರಾಶಾವಾದಿ ಬೆಳೆಯುತ್ತ ಹೋದ, ಮಗ ಎಂದಿಗೂ ಹಿಂದಿರುಗಿ ಬರಲಾರ ಎನ್ನಿಸತೊಡಗಿತು. ಅಂತ್ಯಕಾಲದಲ್ಲಿ ಇರುವ ಒಬ್ಬ ಮಗನಿಂದ ದೂರವಿರುವಾ ಈ ಸಂಭ್ರಮಕ್ಕಾ ಅಷ್ಟೆಲ್ಲ ಪ್ರೀತಿಯಿಂದ ಮಗನನ್ನು ಬೆಳೆಸಿದ್ದು, ಇಂಜಿನಿಯರಿಂಗ್ ಕಲಿಸಿದ್ದು, ವಿದೇಶಕ್ಕೆ ಕಳಿಸಿ ಕಲಿಸಿದ್ದು ಎಂಬ ಪಶ್ಚಾತ್ತಾಪದ ಭಾವ ಮನಸ್ಸಲ್ಲಿ ಮನೆಮಾಡತೊಡಗಿತ್ತು. ಮತ್ತಾರು ತಿಂಗಳಿಗೆ ಜಾನಕಮ್ಮನವರಿಗೆ ಹೃದಯದ ಶಸ್ತ್ರಚಿಕಿತ್ಸೆ ಆದಾಗ, ಜೀವಕ್ಕಿಂತ ಹೆಚ್ಚಾಗಿ ಮಗನನ್ನು ಪ್ರೀತಿಸಿದ ತಾಯಿಯ ಸಾಯಲೂಬಹುದು ಎಂಬ ಸಂಶಯ ಇದ್ದರೂ ಏನೇನೋ ಕಾರಣ ಕೊಟ್ಟು ಮಗ ಬರದೇ ಇದ್ದಾಗ ಮತ್ತಷ್ಟು ಘಾಸಿಗೊಂಡಿತ್ತು ಮೂರ್ತಿಗಳ ಮನಸ್ಸು. ಇಷ್ಟೆಲ್ಲಾ ಸಾಲದು ಎಂದು ಅದೇ ಸಮಯದಲ್ಲಿ ಬಂದ ಗಾಳಿಸುದ್ದಿಯ ಪ್ರಕಾರ ಅನಿಕೇತ ಯಾರೊ ಒಬ್ಬ ಅಮೇರಿಕನ್ ಹುಡುಗಿಯ ಜೊತೆ ಲಿವ್-ಇನ್ ಇದ್ದನಂತೆ. ತನ್ನ ಮಗನ ಬಗ್ಗೆ ಯಾರಿಂದಲೋ ಕೇಳುವುದಾಯಿತಲ್ಲಾ ಎಂದು ಹಳಹಳಿಸುವುದೋ ಅಥವಾ ಭಾರತೀಯ ಸಂಸ್ಕ್ರತಿಯ ಬಗ್ಗೆ ಅಷ್ಟೆಲ್ಲಾ ಮಾತನಾಡುತ್ತಿದ್ದ ತನ್ನ ಮಗ ಒಬ್ಬ ಅಮೇರಿಕನ್ ಹುಡುಗಿಯ ಜೊತೆ ಅದೂ ಲಿವ್ ಇನ್ ಸಂಬಂಧದಲ್ಲಿ ಇದ್ದಾನಲ್ಲಾ ಎಂದು ಕೊರಗುವುದೋ ಎಂದು ತಿಳಿಯದಾಗಿತ್ತು ಮೂರ್ತಿಗಳಿಗೆ. ಆದರೂ ಯಾವುದೋ ಗಾಳಿಸುದ್ದಿಯನ್ನು ನಂಬಿ ಮಗನ ಬಗ್ಗೆ ಹೀಗೆ ಸಂದೇಹಿಸುವುದು ಸರಿಯಲ್ಲ ಎಂಬ ಭಾವನೆಯಿದ್ದಿದ್ದರಿಂದ ಮಗನನ್ನು ಕೇಳಲು ಹೋಗಿರಲಿಲ್ಲ ಮೂರ್ತಿಗಳು. ಎರಡು ತಿಂಗಳ ನಂತರ ಒಂದು ದಿನ ಮಗ ಕರೆಮಾಡಿದ್ದಾಗ ನಿಧಾನವಾಗಿ ವಿಷಯವನ್ನು ಎತ್ತಿದಾಗಲೂ ಮಗನ ಮನವೊಲಿಸಿ ಸರಿದಾರಿಗೆ ತರಬಹುದೆಂದು ಮೂರ್ತಿಗಳು ಶಾಂತವಾಗಿಯೇ ಇದ್ದರು, ಆದರೆ ಯಾವಾಗ ಮಗರಾಯ ಔಪಚಾರಿಕವಾಗಿಯೇನೋ ಎಂಬಂತೆ "ಮುಂದಿನ ತಿಂಗಳು ಮದುವೆಯಾಗುತ್ತಿದ್ದೇನೆ, ಬಂದುಬಿಡಿ, ಟಿಕೆಟ್ ಕಳಿಸುತ್ತೇನೆ" ಎಂದಾಗ ಮೂರ್ತಿಗಳಿಗೆ ಹೃದಯಾಘಾತವಾಗದೇ ಇದ್ದದ್ದು ದೊಡ್ಡದು. "ಇಲ್ಲಿಯವರೆಗಿನ ನಿನ್ನ ಎಲ್ಲ ತಪ್ಪುಗಳನ್ನು ಕ್ಷಮಿಸುತ್ತಾ, ನಿನ್ನ ಪರವಾಗಿ ನಿನ್ನ ಅಮ್ಮನಲ್ಲಿ ವಾದಿಸುತ್ತ ಬಂದ ನನಗೆ ನೀನು ನೀಡಿದ ಉಡುಗೊರೆಯೇ ಇದು ಅನಿಕೇತ? ಈ ವಿಷಯವನ್ನು ಜಾನಕಿಗೆ ಹೇಳಬೇಡ ಯಾವುದೇ ಕಾರಣಕ್ಕೂ. ಹಾರ್ಟ್ ಆಪರೇಶನ್ ಆದ ಮೇಲೆ ಯಾವುದೇ ಆಘಾತಕಾರಿ ಸುದ್ದಿ ಹೇಳಬಾರದು ಎಂದು ವೈದ್ಯರು ಹೇಳಿದ್ದಾರೆ. ಇನ್ನು ನನ್ನ ಜೀವನದ ಏಕೈಕ ಆಧಾರ ಅವಳು, ಅವಳನ್ನು ನಿನ್ನಿಂದಾಗಿ ಕಳೆದುಕೊಳ್ಳಲು ಇಷ್ಟವಿಲ್ಲ ನನಗೆ. ಅವಳಾಗಿಯೇ ಕೇಳಿದರೆ ಏನಾದರೂ ಕಾರಣವನ್ನು ಹೇಳಿ ಮದುವೆಯ ವಿಷಯವನ್ನು ಮುಂದೂಡು. ದಯವಿಟ್ಟು ಅಷ್ಟನ್ನು ಮಾಡು. please. " ಎಂದು ಹೇಳಿ ಫೋನನ್ನು ಕುಕ್ಕಿದ ವಿಶ್ವಮೂರ್ತಿ ರಾಯರಿಗೆ ಪುಟ್ಟನಾಗಿ ತಾನು ಮಾಡಿದ್ದು ತಪ್ಪೇ? ಎಂದು ಮೊದಲ ಬಾರಿಗೆ ಅನ್ನಿಸಿತು.

   
ಅಡಿ ಟಿಪ್ಪಣಿ:
     *  ನಮ್ಮ ಜೀವನವೇ ಹಾಗೆ ಅಲ್ಲವೇ, ಜೀವನಪೂರ್ತಿ ನಾವು ಬದುಕುವುದೇ ಹಾಗೆ. ನಮಗೆ ಯಾವುದು ಸರಿಯಾಗಿ ಕಾಣುತ್ತದೆಯೋ ಅದನ್ನೇ ನಾವು ಮಾಡುತ್ತೇವೆ. ನಮಗೆ ಸರಿಯಾಗಿ ಕಂಡ ನಿರ್ಧಾರ ನಮ್ಮೆದುರಲ್ಲಿರುವವರಿಗೆ ಸಹ ಸರಿಯಾಗಿ ಕಾಣಬೇಕೆಂದೇನಿಲ್ಲ. ಅಷ್ಟೇ ಅಲ್ಲ, ಸ್ವಲ್ಪ ಸಮಯದ ನಂತರ ನಮ್ಮ ನಿರ್ಧಾರ ನಮಗೇ ಸರಿಯಾಗಿ ಕಾಣದೇ ಹೋಗಬಹುದು. ಇಬ್ಬರ ನಡುವಿನ ಒಂದು ವಾದದಲ್ಲಿಯೇ ಆಗಲೀ, ಜೀವನದ ಅತಿಮುಖ್ಯ ನಿರ್ಧಾರಗಳಲ್ಲಿಯೇ ಆಗಲೀ, ಇನ್ನೊಬ್ಬರ ಬಗೆಗಿನ ಸರಿತಪ್ಪುಗಳ ನಿರ್ಣಯದಲ್ಲಿಯೇ ಆಗಲೀ, ಒಂದೇ ಸರಿ ಮತ್ತು ಒಂದೇ ತಪ್ಪು ಇರಲು ಸಾಧ್ಯವಿಲ್ಲ. ನಮಗೆ ಸರಿಯಾಗಿ ಕಂಡಿದ್ದು ಬೇರೆಯವರಿಗೆ ತಪ್ಪಾಗಿ ಕಾಣಬಹುದು. ಎಲ್ಲರ ದೃಷ್ಟಿಕೋನದಿಂದ ನೋಡಲು ಬಂದ ಹೊರತು ನಾವು ಅಂದುಕೊಳ್ಳುವ ಯಾವುದೇ ಸರಿಯೂ ಒಂದು 'absolute' ಸರಿ ಅಲ್ಲ. ಏನೇ ಇರಲಿ ಈ ಟಿಪ್ಪಣಿಯ ಬಗ್ಗೆಯಾಗಲೀ, ಆ ತಲೆಬರಹದ ಬಗೆಗಾಗಲೀ, ಹೆಚ್ಚು ತಲೆ ಕೆಡಿಸಿಕೊಳ್ಳದೇ ಸುಮ್ಮನೇ ಓದಿಕೊಳ್ಳಿ, ಒಂದು ಕಿರುಕಥೆ ಮಾತ್ರ ಎಂದುಕೊಂಡು.
       
   *ಈ ಕಥೆ  ಹಿಂದಿನ ವಾರದ (೩/೬/೧೩ರ) ಪಂಜು ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು .  ಅಲ್ಲಿ ಓದಿದವರಿಗೆ ಪುನರಾವರ್ತನೆ ಆದರೆ ಕ್ಷಮೆ ಇರಲಿ . 

Saturday, 4 August 2012

ನಿರಾಧಾರ-ನಿರ್ಧಾರ (ಕಥೆ)


ನೃಪತುಂಗ:
ಅವಳು ಸುಂದರಿ,ಸೌಂದರ್ಯವೇ ಮೂರ್ತಿವೆತ್ತಂತೆ ದೇವರು ಬಹಳ ಸಾವಧಾನದಿಂದ ಕುಳಿತು ಕಡೆದ ಶಿಲ್ಪದಂತವಳು. ಹಾಗೆಂದು ನಾನೇನು ಕುರೂಪಿಯಲ್ಲ, ಇತ್ತ ಸುಂದರನೂ ಅಲ್ಲ, ಆರಕ್ಕೇರದ ಮೂರಕ್ಕಿಳಿಯದ ಎಡಬಿಡಂಗಿ. ಅವಳು ಅಕ್ಷರಶಃ ಬಹುರ್ಮುಖಿ, ಯಾರಾದರೂ ಜೊತೆಯಲ್ಲಿ ಇದ್ದರೆ ಮಾತನಾಡುತ್ತಿರಬೇಕು, ಯಾರೂ ಇಲ್ಲವಾದರೆ ಹಾಡೊಂದು ಮೂಡಬೇಕು, ಧ್ವನಿ ಬೇಜಾರೆನಿಸಿದರೆ ಅಲ್ಲಿಯೇ ಒಂದು ಲೇಖನ ಹುಟ್ಟಬೇಕು, ಅವಳು ಸುಮ್ಮನೇ ಹದಿನೈದು ನಿಮಿಷ ಕುಳಿತಿದ್ದನ್ನು ಸ್ವತಃ ಅವಳೇ ನೋಡಿಲ್ಲವಂತೆ. ನಾನು ಭಾಗಶಃ ಅಂತರ್ಮುಖಿ, ಅದಕ್ಕಿಂತ ಮೂಡಿ ಎಂದರೆ ಸೂಕ್ತವೇನೋ. ಮಾತು ಕಡಿಮೆ, ಆಗಾಗ ಗೆಳೆಯರ ಜೊತೆಗೆ ಹರಟೆಹೊಡೆಯುತ್ತ ಕುಳಿತುಬಿಡುತ್ತೇನಾದರೂ ಯಾವಾಗಲೂ ಉಳಿದವರಿಂದ ಒಂದಿಷ್ಟು ಅಂತರ ಕಾಯ್ದುಕೊಳ್ಳುವುದರ ಜಾತಿ. ಜನ-ಜಾತ್ರೆಯಿಂದ ಆದಷ್ಟು ದೂರ. ಅವಳೋ ಕನಿಷ್ಟ ನಾಲ್ಕು ನಿಮಿಷಕ್ಕೊಂದು ಬಾರಿ  ಹರೇ ಕೃಷ್ಣ ಎಂದು ತನ್ನಷ್ಟಕ್ಕೆ ತಾನೇ ಆದರೂ ಹೇಳಿಕೊಳ್ಳುವಷ್ಟು ಭಕ್ತೆ, ನಾನೋ ನೆನಪಾದರೆ ದೇವರಿಗೆ ಕೈ ಮುಗಿಯುವಷ್ಟರ ಮಟ್ಟಿಗೆ ಆಸ್ತಿಕ. ಅವಳು ಅಭ್ಯಾಸದಲ್ಲಿ ಓದಿನಲ್ಲಿ ಅಷ್ಟಕ್ಕಷ್ಟೇ, ನಾನು ಜೀನಿಯಸ್ ಅಂತಾರಲ್ಲಾ ಹಾಗೆ ವಿದ್ಯಾಭ್ಯಾಸದಲ್ಲಿ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ನಾನು (ನೃಪತುಂಗ) ಮತ್ತು ವೈದೇಹಿ ಪರಸ್ಪರ ವಿರುದ್ಧ ಧೃವಗಳು.

ಆದರೆ ವಿಚಿತ್ರ ನೋಡಿ, ನಾನು ಅದಾವ ಮಾಯದಲ್ಲೋ ಇವಳೊಡನೆ ಪ್ರೀತಿಯಲ್ಲಿ ಬಿದ್ದೆ. ನಮ್ಮಿಬ್ಬರ ಪರಿಚಯವಾಗಿ, ಅದು ಸ್ನೇಹವಾಗಿ,  ಅದು ಯಾವುದೋ ಮಾಯದಲ್ಲಿ ಆಕರ್ಷಣೆಯಾಗಿ, ಅದು ಯಾವಾಗ ಪ್ರೇಮವಾಗಿ ಬದಲಾಯಿತೋ ನಾ ಕಾಣೆ. ಕ್ಲಾಸಿನಲ್ಲಿ ರೌಡಿಯ ತರಹ ಇದ್ದ ವಿನಯಕುಮಾರ್ ಶುಕ್ಲಾನಿಗೂ ಅವಳ ಮೇಲೆ ಇಷ್ಟವಿತ್ತು ಎಂಬ ವಿಷಯ ಗೊತ್ತಿದ್ದರೂ, ಪ್ರೀತಿ ಎಂದರೆ ಏನೆಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪ್ರೀತಿಸಲಾರಂಭಿಸಿದೆ. ಅಷ್ಟಕ್ಕೂ ನಮ್ಮಿಬ್ಬರ ಮಧ್ಯೆ ಇದ್ದದ್ದು ಕಾರಿಡಾರಿನಲ್ಲಿ ಸಿಕ್ಕಿದರೆ ’ಹಾಯ್’ ಹೇಳುವಷ್ಟು ಪರಿಚಯ. ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಎಲ್ಲ ಬಿಟ್ಟು ನಾನೇಕೆ ಅವಳನ್ನೇ ಪ್ರೀತಿಸಿದೆ? crushಗೆ, ಆಕರ್ಷಣೆಗೆ ಕಾರಣಗಳಿಬಹುದಾದರೂ, ಪ್ರೀತಿಗೆ ಕಾರಣಗಳನ್ನು ಹುಡುಕುವುದು ಕಷ್ಟ. ಹಾಗೆಂದು ನನ್ನದು ಮೊದಲ ನೋಟದ ಪ್ರೇಮವೇನೂ ಅಲ್ಲ, ಅದನ್ನು ನಂಬುವಷ್ಟು ಮೂರ್ಖನೇನೂ ನಾನಲ್ಲ. ಪ್ರೀತಿಯನ್ನು ವ್ಯಕ್ತಪಡಿಸಿದರೆ ಎಲ್ಲಿ ಈಗ ಸಿಗುವ ನಗೆಮಲ್ಲಿಗೆಯೂ ಮಾಯವಾಗಿಬಿಡುತ್ತದೆಯೇನೋ ಎಂಬ ಹೆದರಿಕೆ. ನನ್ನ ಪರಿಸ್ಥಿತಿ ಕೆಲವೊಮ್ಮೆ ನನಗೇ ವಿಚಿತ್ರವಾಗಿ ಕಾಣುತ್ತಿತ್ತು. ಕೊನೆಕೊನೆಗೆ ಅತ್ತ ವಿದ್ಯಾಭ್ಯಾಸದ ಕಡೆಗೂ ಗಮನ ಕೊಡಲೂ ಆಗದೇ ಇತ್ತ ಪ್ರೀತಿಯನ್ನೂ ವ್ಯಕ್ತಪಡಿಸಲಾರದೇ ಬದುಕೇ ನಿತ್ತು ಹೋದ ಭಾವನೆಯಲ್ಲಿ ಬದುಕುತ್ತಿದ್ದೆ. ಇನ್ನು ಭಾವನೆಗಳನ್ನು ಹತ್ತಿಕ್ಕಲಾಗದು ಎಂಬ ಭಾವನೆ ಬಂದಾಗ ಧೈರ್ಯ ತೆಗೆದುಕೊಂಡು ಪ್ರಪೋಸ್ ಮಾಡಿಯೇ ಬಿಟ್ಟೆ.ಅವಳು ಒಪ್ಪಿಕೊಳ್ಳಲಿಲ್ಲ, ತನಗೆ ಆ ತರಹದ ಭಾವನೆಯೇನೂ ಇಲ್ಲವೆಂದೂ ಹಾಗೂ ಪ್ರೀತಿ ಪ್ರೇಮ ಎಂಬ ’ಮರುಳಿ’ಗೆ ಬೀಳಲು ತನಗಾವ ಇಷ್ಟವೂ ಇಲ್ಲವೆಂದೂ, ಹೀಗೇ ಗೆಳೆಯರಾಗಿ ಇದ್ದುಬಿಡೋಣವೆಂದೂ ಅವಳು ಹೇಳಿದಳಾದರೂ ಅದು ಸತ್ಯವೆಂದು ಪ್ರೀತಿಯ ಗುಂಗಿನಲ್ಲಿದ್ದ ನನಗೆ ಅನಿಸಲಿಲ್ಲ. ಮನಸ್ಸು ಇನ್ನೂ ಧನಾತ್ಮಕವಾಗಿಯೇ ಇತ್ತು.
*****

ವೈದೇಹಿ:
ಇದಾಗಿ ಮೂರು ತಿಂಗಳು ಮಾತ್ರವಾಗಿತ್ತು, ಅದೊಂದು ದಿನ ನಾನು ಕಾಲೇಜಿನಿಂದ ಮನೆಗೆ ಬರುವ ದಾರಿಯಲ್ಲಿದ್ದ ಒಂದು ಓಣಿಯಲ್ಲಿ ಅಡ್ಡ ಬಂದ ಮುಸುಕುಧಾರಿಯೊಬ್ಬ ನನ್ನ ಮುಖಕ್ಕೆ ಅಸಿಡ್ ಹಾಕಿ ಹೋಗಿದ್ದ. ನನಗೆ ಜಗತ್ತೆಲ್ಲ ಕಪ್ಪಾಗಿ ಹೋಗಿತ್ತು ಆ ಕ್ಷಣದಲ್ಲಿ. ಮುಂದೆ ಪ್ರಜ್ಞೆ ಬಂದ ಮೇಲೆ ನನ್ನ ಮುಖವನ್ನು ನೋಡಲು ನನಗೇ ಭಯವಾಗುವಷ್ಟು ನನ್ನ ಮುಖ ಕುರೂಪವಾಗಿತ್ತು. ರಾಜ್ಯದಲ್ಲೆಲ್ಲಾ ದೊಡ್ಡ ವಿಷಯವಾಗಿಹೋಗಿತ್ತು ಈ ಆಸಿಡ್ ಪ್ರಕರಣ. ಚರ್ಚೆ, ಪ್ರತಿಭಟನೆಗಳೆಲ್ಲ ಎರಡು ವಾರಗಳವರೆಗೆ ನಡೆದು ನಂತರ ತಣ್ಣಗಾಗಿತ್ತು. ಯಾರಿಗೂ ಯಾರು ಮಾಡಿದ್ದು, ಏನು ಕಥೆ ಎಂದು ಗೊತ್ತಾಗಿರಲಿಲ್ಲ. ನೃಪತುಂಗನ ಇಮೇಜ್ ಅಷ್ಟು ಒಳ್ಳೆಯದಿದ್ದುದರಿಂದ ಯಾರೂ ಅವನ ಕಡೆ ಕೈ ತೋರಿಸಲಿಲ್ಲವಾದರೂ, ಎಲ್ಲರ ಒಂದು ಕಣ್ಣು ಅವನ ಮೇಲೇ ಇತ್ತು. ನನಗೂ ಯಾರು ತನ್ನ ಮೇಲೆ ಅಸಿಡ್ ಹಾಕಿದ್ದು ಎಂಬುದರ ಬಗ್ಗೆ ಖಚಿತತೆಯಿಲ್ಲವಾಗಿತ್ತಾದರೂ ನೃಪತುಂಗನ ಬಗ್ಗೆ ಒಂದು ಸಂಶಯವಿದ್ದಿದ್ದು ಹೌದು, ಪೋಲೀಸರು ವಿಚಾರಣೆ ಮಾಡಿದಾಗ ಹೇಳಿಬಿಡೋಣ ಎಂದೆನಿಸಿತ್ತಾದರೂ ನನ್ನ ಜೊತೆ ಸರಿಯಾಗಿ ಮಾತನಾಡಲೂ ತಡವರಿಸುವ, ಇರುವೆಗೂ ನೋವು ಮಾಡಲು ಹಿಂಜರಿಯುವ ಈತ ಇಂತಹ ಪಾತಕಕ್ಕೆ ಕೈ ಹಾಕಲಾರ ಎಂಬ ವಿಶ್ವಾಸವಿತ್ತು. ಮೇಲಾಗಿ ನನಗೂ ಅವನ ಬಗ್ಗೆ ಸ್ವಲ್ಪ ಭಾವನೆಗಳಿದ್ದವಲ್ಲಾ! ಪ್ರೀತಿ ಎಂದು ಸ್ಪಷ್ಟವಾಗಿ ಹೇಳಲು ತಿಳಿಯದಾದರೂ ಆ ಭಾವನೆಗಳು  ಅವನಲ್ಲಿ ಅಂತಹ ಯಾವುದೇ ಕೆಟ್ಟ ಅಂಶವನ್ನು ನೋಡದಂತೆ ಕಟ್ಟಿಹಾಕಿದ್ದವು. ಆಸ್ಪತ್ರೆಯಲ್ಲಿದ್ದಾಗ ಪ್ರತೀ ದಿನವೂ ಎರಡು ಬಾರಿ ನನ್ನನ್ನು ನೋಡಲು ಬರುತ್ತಿದ್ದ, ಮಾತನಾಡಿಸಿಕೊಂಡು ಹೋಗುತ್ತಿದ್ದ. ನಾನು ಮಲಗಿದ್ದರೆ ಅಮ್ಮನ ಬಳಿ ನನ್ನ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದ.

ನೃಪತುಂಗ ಹೊರಗಿನ ಜಗತ್ತಿನ ಗುಸುಗುಸು ಗುಮಾನಿಗಳಿಗೂ ತನಗೂ ಯಾವ ಸಂಬಂಧವೂ ಇಲ್ಲದವನಂತೆ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೂರನೇ ದಿನಕ್ಕೇ ನಮ್ಮ ಮನೆಗೆ ಬಂದು ಭೇಟಿಯಾಗಿದ್ದ. ಮತ್ತೊಮ್ಮೆ ಪ್ರೇಮನಿವೇದನೆ ಮಾಡಿಕೊಂಡುಬಿಟ್ಟ. "ನೀನಿಲ್ಲದೇ ಇರಲು ನಾನು ಬಹಳ ಪ್ರಯತ್ನ ಪಟ್ಟೆನಾದರೂ ಅದು ನನಗೆ ಸಾಧ್ಯವಾಗಿಲ್ಲ, ದಯವಿಟ್ಟು ನನ್ನ ಮೇಲೆ ಕರುಣೆ ತೋರು, ನಿನ್ನನ್ನು ಮದುವೆಯಾಗಿ ನಾನು ಯಾವುದೋ ಆದರ್ಶ ಪಾಲಿಸುತ್ತೇನೆ ಎಂಬಷ್ಟು ಆದರ್ಶವಾದಿ ನಾನಲ್ಲ, ನನ್ನದು ಕೇವಲ ಪ್ರೀತಿಯ ಸ್ವಾರ್ಥ ಅಷ್ಟೇ!" ಇನ್ನಿಲ್ಲದಂತೆ ಬೇಡಿಕೊಂಡ. ಪ್ರೀತಿ ಎಂದರೇ ಹೀಗೇನೋ?  ಆ ಕ್ಷಣದಲ್ಲಿ ಏನೆನ್ನಿಸಿತೋ, ಆ ಒಂದು ದುರ್ಬಲ ಕ್ಷಣದಲ್ಲಿ ಕರಗಿಹೋದೆನೆನಿಸಿದರೂ, ಮನಸ್ಸಿನಲ್ಲಿದದನ್ನು ಪ್ರಾಮಾಣಿಕವಾಗಿಯೇ ಹೇಳಿದೆ, "ಮೊದಲಿನಿಂದಲೂ ನಿನ್ನನ್ನು ನಾನು ಪ್ರೀತಿಸುತ್ತಿದ್ದೆ ಎಂದರೆ ಸುಳ್ಳಾಗಬಹುದೇನೋ, ಆದರೆ ಆ ದಿನ ನೀನು ಪ್ರಪೋಸ್ ಮಾಡಿದಾಗ ಹೇಳಿದಂತೆ ನನಗೆ ನಿನ್ನ ಬಗ್ಗೆ ಒಂದು ಚಿಕ್ಕ ಭಾವನೆಯೂ ಇರಲಿಲ್ಲ ಎಂಬುದೂ ಸುಳ್ಳೇ. ನಾನು ಪ್ರೀತಿ ಪ್ರೇಮದ ಬಗ್ಗೆ ಒಂದು ತಿರಸ್ಕಾರಭರಿತ ನಿರಾಸಕ್ತಿ ತೋರಿಸುತ್ತಿದ್ದುದು ಎಷ್ಟು ಸತ್ಯವೋ, ಅದಕ್ಕೆ ವಿರುದ್ಧವಾದ ಒಂದು ಮೃದುಭಾವನೆ ನನ್ನಲ್ಲಿ ಬೆಳೆಯಲಾರಂಭಿಸಿತ್ತು ಎಂಬುದೂ ಅಷ್ಟೇ ಸತ್ಯ. ಆದರೆ ನೂರು ಪ್ರತಿಶತ ನನ್ನ ಬಗ್ಗೆ ನನಗೇ ನಂಬಿಕೆಯಿಲ್ಲದೇ ಒಪ್ಪಿಕೊಳ್ಳಲು ಇಷ್ಟವಿರದಿದ್ದುದರಿಂದಾಗಿ ತಡೆಹಿಡಿದುಕೊಂಡೆ. ಆದರೆ ಈಗ ನೋಡಿದರೆ ಆಗ ನಾನು ಮಾಡಿದ್ದು ತಪ್ಪಾಯ್ತು ಎನ್ನಿಸುತ್ತದೆ. ಈಗ ನಾನು ನಿನ್ನನ್ನು ಒಪ್ಪಿಕೊಂಡರೆ ಮುಖ ಕುರೂಪವಾದ ಮೇಲೆ ನಾನು ಒಪ್ಪಿಕೊಂಡೆ ಎಂಬ ಅಪವಾದ ಬರುತ್ತದೆ. ಹಾಗೆಂದು ಈಗಲೂ ನಾನು ತಿರಸ್ಕರಿಸಿ ಮುಂದೆ  ಜೀವನಪೂರ್ತಿ ಪಶ್ಚಾತ್ತಾಪ ಪಡಲಾರೆ, ನನಗೇನು ಮಾಡಬೇಕೆಂದು ತಿಳಿಯುತ್ತಿಲ್ಲ.ನಿಜವಾಗಿ ಪ್ರೀತಿಸಿದರೂ ಹೇಳಿಕೊಳ್ಳಲಾಗದ ಸ್ಥಿತಿಗೆ ನೂಕಿದ ವಿಧಿಯನ್ನು ಹಳಿಯುವುದನ್ನು ಬಿಟ್ಟು ಬೇರೇನನ್ನೂ ಮಾಡಲಾರೆನೇನೋ ಈಗ" ಹೇಳಿ ಮುಗಿಸಿರಲಿಲ್ಲ ನಾನು, ನೃಪತುಂಗನಿಗೆ ಸ್ವರ್ಗ ಭೂಮಿಯ ಮೇಲೆಯೇ ಕಂಡಿತ್ತು. ಖುಷಿಯಿಂದ ನಮ್ಮ ಮನೆಯ ಮಹಡಿಯ ಮೇಲೆಯೇ ಚಿಕ್ಕ ಮಕ್ಕಳಂತೆ ಗುಪ್ಪಳಿಸಿ ಹಾರಿದ್ದ.
*****

ವೈದೇಹಿ:
ಅದಾಗಿ ಆರು ವರ್ಷಗಳಾದವು, ನಮ್ಮಿಬ್ಬರ ಮದುವೆಯಾಗಿತ್ತು. ನಾವಿಬ್ಬರೂ ಪ್ರತಿಷ್ಟಿತ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಅವನು ಏನೇ ಎಂದುಕೊಂಡಿರಲಿ, ನೃಪತುಂಗ ನನ್ನ ಬಗ್ಗೆ ಹೀರೋ ಆಗಿದ್ದ. ಆ ಕುರೂಪಿ ಮುಖ ನನಗೇ ಅಸಹ್ಯ ಬರಿಸುತ್ತಿತ್ತು. ಹಾಗಿರುವಾಗ ನನ್ನನ್ನು ಇನ್ನೂ ಪ್ರೀತಿಸುವ ಇವನು ನನಗೆ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಎಷ್ಟೋಸಲ ಭಾವಿಸಿದ್ದೇನೆ, ಇಂದಿಗೂ ಹಾಗೇ ಭಾವಿಸುತ್ತೇನೆ. ಆ ವಿರೂಪವಾದ ಖವನ್ನು ಅವನಿಗೆ ಜೀವನಪೂರ್ತಿ ತೋರಿಸಿಕೊಂಡು ಇರಲು ನನಗೇ ಸಾಧ್ಯವಿರಲಿಲ್ಲವೆನಿಸಿ ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಂತರವೇ ಮದುವೆಯಾಗಲು ಒಪ್ಪಿಕೊಂಡೆ. ಆಸಿಡ್ ಎರಚಿದ ಇಡೀ ಪ್ರಕರಣವನ್ನು ಒಂದು ಕಹಿ ನೆನಪೆಂದು ನಾನು ಮರೆತಿದ್ದೇನೆ, ಮರೆಯಲು ಪ್ರಯತ್ನಿಸುತ್ತಿದ್ದೇನೆ, ಆ ಘಟನೆಯ ಬಗ್ಗೆ  ನನ್ನಷ್ಟೇ ಅವನೂ ನೊಂದುಕೊಂಡಿದ್ದಾನೆ, ನೊಂದುಕೊಳ್ಳುತ್ತಾನೆ. ಆ ವಿಚಾರ ಬಂದಾಗಲೆಲ್ಲ ನನ್ನಷ್ಟೇ ಅವನೂ ಆ ವಿಷಯವನ್ನು ಬದಲಾಯಿಸುತ್ತೇವೆ.

ಹಾಗೇ ಒಂದು ಭಾನುವಾರದ ದಿನ ಬೆಳಿಗ್ಗೆ ಪೇಪರ್ ಓದುತ್ತಿದ್ದಾಗ, ನನ್ನ ನೆಚ್ಚಿನ ಮೂರನೇ ಪುಟದಲ್ಲಿದ್ದ ಒಂದು ಚಿಕ್ಕ ಸುದ್ದಿ ಗಮನ ಸೆಳೆದಿತ್ತು . ಪ್ರಖ್ಯಾತ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಯೊಬ್ಬ ಅವನು ಪ್ರೀತಿಸಿದ್ದ(?)  ಹುಡುಗಿ ಅವನ ಪ್ರೀತಿಯನ್ನು ಒಪ್ಪದಾದಾಗ ತನ್ನದೇ ಒಂದಿಷ್ಟು ಜನ ಗೆಳೆಯರಿಂದ ಅವಳನ್ನು ಬಲಾತ್ಕರಿಸಿ ನಂತರ ದೊಡ್ಡ ಹೀರೋನ ತರಹ ಅವಳನ್ನು ಉದ್ಧಾರ ಮಾಡಿದವರ ರೀತಿ ಮದುವೆಯಾಗಿದ್ದನಂತೆ, "ಏನು ಕಾಲ ಬಂತಪ್ಪಾ, ಜನ ಪ್ರೀತಿ ಪ್ರ‍ೇಮವನ್ನು ಎಷ್ಟು ಸಾಧ್ಯವೋ ಅಷ್ಟು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಈ ದಿನಗಳಲ್ಲಿ" ಎಂದು ಸ್ವಗತಿಸಿ ನೃಪತುಂಗನನ್ನು ಎಬ್ಬಿಸಲು ಹೋದೆ. ರಜೆಯ ದಿನದಂದು ಇವನನ್ನು ಎಬ್ಬಿಸುವುದೆಂದರೆ ತಲೆಬಿಸಿಯೇ! ಮಧ್ಯಾಹ್ನದ ಲಂಚಿಗೆ ಸೇರೋಣ ಎಂದು ಹೇಳಿದ್ದ ಇಂಜಿನಿಯರಿಂಗ್ ಗೆಳೆಯರ ಕರೆಯನ್ನು ನೆನಪಿಸಿ ಆ ಹೆಳೆಯಲ್ಲಿಯೇ ಎಬ್ಬಿಸಿದರೆ ಹತ್ತು ನಿಮಿಷದಲ್ಲಿ ಏಳುತ್ತೇನೆ ಎಂಬ ಉತ್ತರ. ಹಾಗೇ ತನ್ನ ಹಾಸಿಗೆ ಹೊದಿಕೆಗಳನ್ನು ಮಡಿಚಿಟ್ಟು ಬರುತ್ತಿರಬೇಕಾದರೆ ಮತ್ತೊಮ್ಮೆ ಅದೇ ಸುದ್ದಿ ಕಣ್ಣಿಗೆ ಬಿದ್ದು ಘಕ್ಕನೆ ನಿಂತು ಬಿಟ್ಟೆ. ಯಾವುದೋ ಒಂದು ಘಳಿಗೆಯಲ್ಲಿ ತನ್ನ ಜೀವನದಲ್ಲಿ ಆಗಿದ್ದೂ ಇದೇನಾ ಎನ್ನಿಸಿತು. ಆದರೆ ಮಲಗಿದ್ದ ನೃಪತುಂಗನ ಮುಖವನ್ನು ಒಮ್ಮೆ ನೋಡಿದ ತಕ್ಷಣ ಆ ಎಲ್ಲಾ ಸಂದೇಹಗಳೂ ನಿಮಿಷಾರ್ಧದಲ್ಲಿ ಮರೆಯಾದವು. ಹಾಗೊಂದು ಮುಗ್ಧವಾದ ಮುಖ ಇರಬೇಕೆಂದರೆ ನಿಜವಾಗಿಯೂ ಅಮಾಯಕನಾಗಿರಬೇಕು; ಇಲ್ಲವೆಂದರೆ ಜೀವನವೆಲ್ಲಕ್ಕೂ ಸಾಕಾಗುವಷ್ಟು ನಾಟಕ ಮಾಡಲು ತಯಾರಾಗಿರಬೇಕು. ಆದರೆ ದಾಂಪತ್ಯದ ಈ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಈತನು ನಾಟಕ ಮಾಡುತ್ತಿದ್ದಾನೆ ಎಂದು ನನಗೆ ಎನಿಸಿಲ್ಲ, ಹೋಗಲಿ ನಾಟಕ ಆಡಬಲ್ಲ ಎಂದೇ ಎನಿಸಿಲ್ಲ.

ಈ ಆರು ವರ್ಷಗಳಲ್ಲಿ ಒಂದು ಬಾರಿಯೂ ನೃಪತುಂಗ ನನ್ನ ಪ್ಲಾಸ್ಟಿಕ್ ಸರ್ಜರಿ ಆದರೂ ಸಂಪೂರ್ಣವಾಗಿ ಮೊದಲಿನಂತಾಗಿರದ ಮುಖದ ಬಗ್ಗೆ ಮಾತನಾಡಿಲ್ಲ. ಮದುವೆಯ ಮೊದಲು ನಡೆದ ಘಟನೆಗಳ ಬಗ್ಗೆ ತಪ್ಪಿಯೂ ಮಾತೆತ್ತಿಲ್ಲ, ನನ್ನಲ್ಲಿ  ಸ್ವಲ್ಪವೂ ಕೀಳರಿಮೆ ಬರುವಂತೆ ನಡೆದುಕೊಂಡಿಲ್ಲ. ನಾನು ಸಂಪೂರ್ಣವಾಗಿ ಸರಿಯಾಗಿದ್ದರೆ ನನ್ನನ್ನು ಹೇಗೆ ನಡೆಸಿಕೊಳ್ಳುತ್ತಿದ್ದನೋ ಹಾಗೆಯೇ ನಡೆಸಿಕೊಂಡಿದ್ದಾನೆ. ನನಗೂ ಆ ಘಟನೆಗಳೇನೂ ಸವಿನೆನಪಿನದ್ದಾಗದೇ
ಇದ್ದಿದ್ದರಿಂದ ನಾನೂ ಅದನ್ನು ಬಹುತೇಕ ಮರೆತಂತೆಯೇ ಬದುಕಿದ್ದೆ, ದಿನವೂ ಅದರ ಗುರುತುಗಳನ್ನು ನನ್ನ ಮುಖದ ಮೇಲೆಯೇ ನೋಡುತ್ತ ಇದ್ದರೂ. ನನಗೆ ನಿಜವಾಗಿಯೂ ಹೆಮ್ಮೆಯಿದೆ ಇವನು ನಡೆದುಕೊಂಡಿರುವ ರೀತಿಯ ಬಗ್ಗೆ, ನನ್ನನ್ನು ನಡೆಸಿಕೊಂಡಿರುವ ರೀತಿಯ ಬಗ್ಗೆ. ಆದರೆ ನನಗೇನು ಗೊತ್ತಿತ್ತು ಅದೇ ದಿನ ನನ್ನ ನಂಬಿಕೆಯ ಸೌಧವೇ ಬುಡಮೇಲಾಗುತ್ತದೆ ಎಂದು.
*****

ವೈದೇಹಿ:
ಅಂದು ಮಧ್ಯಾಹ್ನದ ಊಟಕ್ಕೆ ಮುಂಚೆ ಲಾಲ್ ಬಾಗಿನಲ್ಲಿ ಭೇಟಿಯಾಗುವುದು, ಮುಂದೆ ಹಾಗೆಯೇ ಎಲ್ಲಾದರೂ ಜಯನಗರದಲ್ಲಿ ಊಟ ಮಾಡುವುದೆಂಬ ಪ್ಲಾನಿತ್ತು. ಪ್ಲಾನು ನಮ್ಮ ಕ್ಲಾಸಿನ ಮತ್ತೊಂದು ಜೋಡಿಯಾದ ವೈಷ್ಣವಿ ಮತ್ತು ಪ್ರದ್ಯುಮ್ನರದ್ದು.ಇಂಜಿನಿಯರಿಂಗಿನಲ್ಲಿಯೂ ಅದು ಮುಗಿದ ನಂತರವೂ ನಮ್ಮ ಕ್ಲಾಸಿನವರ ಯಾವುದೇ ಚಟುವಟಿಕೆಯಾದರೂ ಆಗುವುದು ಅವರಿಬ್ಬರ ಮುಂದಾಳತ್ವದಲ್ಲಿಯೇ. ನಾವಿಬ್ಬರೂ ಸಮಯಕ್ಕಿಂತ ಮೊದಲೇ ಹೋಗಿ ಮುಟ್ಟಿದ್ದೆವು. ಗಾಜಿನ ಮನೆಯ ಪಕ್ಕದ ಉದ್ಯಾನವನದ ಒಂದು ವಿಶಾಲ ಮರದ ಕೆಳಗೆ ಕುಳಿತು ಉಳಿದವರ ಆಗಮನವನ್ನು ಕಾಯುತ್ತಿದ್ದ ನಮ್ಮಿಬ್ಬರ ಮನಸ್ಸಿನಲ್ಲಿಯೂ ಹಳೆಯ ನೆನಪುಗಳ ಕುಣಿತ, ಕೆಲವು ಸಿಹಿನೆನಪುಗಳ, ಹಲವು ಕಹಿನೆನಪುಗಳ ತಕಧಿಮಿತ. ಅದೇ ಗುಂಗಿನಲ್ಲಿ ನಾನು ಸ್ವಲ್ಪ ಆ ಭಾವುಕನಾಗಿ ಮೈಮರೆತುಬಿಟ್ಟೆನೆಂದು ಕಾಣುತ್ತದೆ. ನಾನು ಈ ಜಗತ್ತಿಗೆ ವಾಪಸ್ ಬಂದಾಗ ನನ್ನ ಸುತ್ತಲೂ ಮಿತ್ರರು ಸುತ್ತುವರೆದಿದ್ದರು. ಹಸನ್ಮುಖಿ ಚಾರುಲತೆ "ನೀನಿನ್ನೂ ಸ್ವಲ್ಪಾನೂ ಬದಲಾಗಿಲ್ಲ ಕಣೇ, ಅದೇ ರೀತಿ ಹಾಡುಹಗಲಲ್ಲೇ ಮೈಮರೆಯುತ್ತೀಯಾ, ಆಗೇನೂ ನೃಪತುಂಗನ ಧ್ಯಾನದಲ್ಲಿ ಇರುತ್ತಿದ್ದಿ ಎಂದು ಭಾವಿಸಿದರೆ ಈಗ ಏನು ಕಥೆ" ಎಂದು ಕಣ್ಣು ಮಿಟುಕಿಸಿ ನಗುತ್ತಿದ್ದಳು."ಮದುವೆಯಾದ ಮೇಲೆ ಗಂಡನ ಧ್ಯಾನದಲ್ಲಿ ಇರಬಾರದೆಂದೇನೂ ಇಲ್ಲವಲ್ಲ" ಎಂದೇನೋ ಹೇಳಿದೆನಾದರೂ ನೃಪತುಂಗ ಅಲ್ಲಿ ಇಲ್ಲದುದನ್ನು ಗಮನಿಸಿದ್ದೆ. ಹೀಗೆಯೇ ಮತ್ತೆ ಹದಿನೈದು ನಿಮಿಷಗಳು ಕಳೆಯುವಷ್ಟರಲ್ಲಿ ಬರಬೇಕಿದ್ದ ಎಲ್ಲರೂ ಬಂದಾಗಿತ್ತು. ಮತ್ತೆ ಕಾಲು ಗಂಟೆಯಾದರೂ ನೃಪತುಂಗನ ಪತ್ತೆಯಿಲ್ಲ. ನಾನು ಆ ಮಂಪರಿನಲ್ಲಿರುವಾಗ ಇವನೆಲ್ಲಿಗೆ ಹೋದ ಎಂದು ವಿಚಾರಿಸಿದರೆ ವಿನಯಕುಮಾರ್ ಶುಕ್ಲಾ ಜೊತೆಗೆ ಇವನೆಲ್ಲೋ ಗಾಜಿನ ಮನೆಯ ಹಿಂಭಾಗಕ್ಕೆ ಮಾತನಾಡುತ್ತಾ ಹೋದ ಎಂದು ವೈಷ್ಣವಿ ಹೇಳಿದಳು. ನನಗೋ ಈ ವಿನಯಕುಮಾರ್ ಶುಕ್ಲಾನ ಬಗ್ಗೆ ಸ್ವಲ್ಪವೂ ಒಳ್ಳೆಯ ಅಭಿಪ್ರಾಯವಿಲ್ಲ, ದೊಡ್ಡ ಫ಼್ಲರ್ಟು, ಕ್ಲಾಸಿನಲ್ಲಿಯೂ ಗೂಂಡಾ ತರ, ಕಂಡ ಕಂಡ ಹುಡುಗಿಯರ ಹಿಂದೆ ಬಿದ್ದಿರುತ್ತಿದ್ದ. ಅದರಲ್ಲೂ ನಾನೆಂದರೆ ಸ್ವಲ್ಪ ಹೆಚ್ಚೇ ಹುಚ್ಚು. ಒಮ್ಮೆ ಪ್ರಪೋಸ್ ಕೂಡ ಮಾಡಿಬಿಟ್ಟಿದ್ದ. ನಾನು ನಿಯತ್ತಾಗಿ ತಳ್ಳಿಹಾಕಿದ್ದೆ. ಆದರೂ ಪದೇ ಪದೇ ಹಿಂದೆ ಬೀಳುತ್ತಿದ್ದ. ನೃಪತುಂಗನಂತೆಯೇ ಅನಿಸಿದರೂ ನೃಪತುಂಗನ ಕಣ್ಣುಗಳಲ್ಲಿದ್ದ ಪ್ರಾಮಣಿಕತೆಗೂ, ಇವನ ಕಣ್ಣುಗಳಲ್ಲಿದ್ದ ವಾಂಛೆಗೂ ವ್ಯತ್ಯಾಸ ಸ್ಪಷ್ಟವಿತ್ತು. ಆದರೂ ನೃಪತುಂಗನನ್ನು ನಾನು ತಿರಸ್ಕರಿಸಿದರೂ ತಿರುಗಿ ಮದುವೆಯಾದೆ ಎಂಬುದು ಈಗ ಇತಿಹಾಸ. ಅದೆಲ್ಲಾ ಇರಲಿ, ನಾನು ನೃಪತುಂಗನನ್ನು ಮದುವೆಯಾಗಿದ್ದನ್ನು ತಿಳಿದರೆ ಇವನಿಗೇನಾದರೂ ಮಾಡಲೂ ಹೇಸುವವನಲ್ಲ ಆತ ಎನಿಸಿತ್ತು (ಈ ಭಾವನೆ ನನ್ನ ಮನಸ್ಸಿನಲ್ಲಿ ವಿನಯನ ಬಗ್ಗೆ ಇದ್ದ ಭಯದ ಉತ್ಪ್ರೇಕ್ಷೆಯ ಫಲ ಎಂದು ಈಗ ಅನಿಸುವುದಾದರೂ ಆ ಕ್ಷಣದಲ್ಲಿ ಹಾಗೆ ಎನಿಸಿರಲಿಲ್ಲ.) ದಿಗಿಲಾಗಿ ವೈಷ್ಣವಿ ತೋರಿದ ಕಡೆ ಓಡಿದೆ.

ಹಾಗೆಯೇ ಗಾಜಿನ ಮನೆಯ ಹಿಂದಕ್ಕೆ ಹೋದರೆ ವಿನಯ್ ಮತ್ತು ನೃಪತುಂಗ ಇಬ್ಬರೂ ನಾನು ಬರುತ್ತಿದ್ದ ದಿಕ್ಕಿಗೆ ಬೆನ್ನು ತಿರುಗಿಸಿಕೊಂಡು ಏನನ್ನೋ ಮಾತನಾಡುತ್ತಿದ್ದರು. ನೃಪತುಂಗ ಯಾವಾಗಲೂ ನನ್ನ ಬಳಿ ವಿನಯನ ಬಗ್ಗೆ ಶತ್ರುವಿನಂತೆ ಮಾತನಾಡುತ್ತಿದ್ದನಾದ್ದರಿಂದ, ಇವರುಬ್ಬರು ಹೀಗೆ ಮಾತನಾಡುವುದು ನನಗೂ ಆಶ್ಚರ್ಯವಾದಂತಾಗಿ ಏನು ಮಾತನಾಡುತ್ತಿರಬಹುದೆಂಬ ಕೆಟ್ಟ ಕುತೂಹಲದಲ್ಲಿ ಅವರಿಗೆ ತಿಳಿಯದಂತೆ ಹಿಂದೆ ಹೋಗಿ ನಿಂತೆ. ಇಬ್ಬರೂ  ಏನೂ ಹಿತವಾಗಿ ಮಾತನಾಡುತ್ತಿರಲಿಲ್ಲವಾದರೂ ಅವರಿಬ್ಬರೂ ಜಗಳವಾಡುತ್ತಿರಲಿಲ್ಲ ಎಂಬುದು ದೂರದಿಂದಲೇ ವಿಹಿತವಾಗುತ್ತಿತ್ತು. ದೂರದಿಂದ ನೋಡಿದರೆ ನೃಪತುಂಗ ಏನನ್ನೋ ಬೇಡಿಕೊಳ್ಳುತ್ತಿದ್ದಂತೆ ಕಾಣುತ್ತಿತ್ತು. ಅಲ್ಲಿಯೇ ಮುಂದೆ ಗೋಡೆಯ ಮರೆಯಲ್ಲಿ ನಿಂತರೆ ನೃಪತುಂಗನ ಮಾತುಗಳು ಸ್ಪಷ್ಟವಾಗೇ ಕೇಳುತ್ತಿತ್ತು,

ನೃಪತುಂಗ "ಇದಕ್ಕೆ ಕೊನೆಯೆಲ್ಲಿ ವಿನಯ್?  ಹೀಗೇ ಎಷ್ಟು ಸಲವಾಯ್ತು? ಪ್ರತೀ ಸಲ ನೀನು ಬಂದಾಗಲೂ ನಿನ್ನ ಕೈತುಂಬ ದುಡ್ಡು ಕೊಟ್ಟು ಕಳುಹಿಸಿದ್ದೇನೆ, ಮತ್ತೆ ನೀನು ಬರುತ್ತೀಯಾ ನನ್ನ ಕರಾಳ ಮುಖವನ್ನು ನನಗೇ ನೆನಪಿಸುತ್ತಾ. ಇದೇ ಒಂದು ಬ್ಲ್ಯಾಕ್ ಮೇಲಿಂದ ಎಷ್ಟು ಬಾರಿ ನನ್ನ ಜೀವವನ್ನು ಹಿಂಡಿದ್ದೀಯಾ? ನಿನಗೆ ಎಷ್ಟು ಸಲ ಹೇಳಿಲ್ಲ ನಾನು, ಏನು ಬೇಕಾದರೂ ಕೇಳು ಕೊಟ್ಟು ಬಿಡುತ್ತೇನೆ, ಒಂದೇ ಸಲಕ್ಕೆ, ನನ್ನ ಸಂಪೂರ್ಣ ಆಸ್ತಿಯನ್ನು ಬೇಕಾದರೂ ಎಂದು. ಪದೇ ಪದೇ ಹೀಗೆ ಬಂದು ಅರೆಮಾಗಿದ ಗಾಯಗಳನ್ನು ಮತ್ತೆ ಕೆದಕುವುದೇಕೆ? ಅಂದಿನ ಆ ಆಸಿಡ್ ಪ್ರಕರಣಕ್ಕೆ ನಾನು ಎಷ್ಟು ಪಶ್ಚಾತ್ತಾಪ ಪಟ್ಟಿರುವೆನೋ ನನಗೇ ಗೊತ್ತು. ಅದಕ್ಕೋಸ್ಕರ ಯಾವುದೇ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧ, ಅವಳನ್ನು ಕಳೆದುಕೊಳ್ಳುವುದೊಂದನ್ನು ಬಿಟ್ಟು. ನೀನಂದು ನೋಡಿದ್ದರೂ ನೋಡಿರದಿದ್ದರೂ ಅದು ನನ್ನ ಮನವನ್ನು ಖಂಡಿತವಾಗಿಯೂ ಕೊರೆಯುತ್ತಿತ್ತು, ಕೊರೆಯುತ್ತಿದೆ. ಆದರೆ ಕಾಲಕ್ರಮೇಣ ಮರೆಯುತ್ತಿದ್ದೆನೇನೋ, ಆದರೆ ನೀನು ಅದಕ್ಕೆ ಅವಕಾಶ ಕೊಟ್ಟೇ ಇಲ್ಲ. ಈ ಆರು ವರ್ಷಗಳಲ್ಲಿ ನನಗೆ ಎಷ್ಟು ಹಿಂಸೆ ಕೊಟ್ಟಿದ್ದೀಯಾ ಎಂಬ ಅಂದಾಜೂ ನಿನಗೆ ಇರಲಿಕ್ಕಿಲ್ಲ." ಎಂದ.

ವಿನಯ್ ಸಿನಿಮಾಗಳಲ್ಲಿ ತೋರಿಸುವ ರೌಡಿಗಳ ಅಟ್ಟಹಾಸದ ನಗೆಯನ್ನು ಒಮ್ಮೆ ನಕ್ಕು"ನಾನು ಬಯಸಿದ್ದೂ ಅದನ್ನೇ, ನಾನೂಒ ಅವಳನ್ನು ಪ್ರೀತಿಸಿದ್ದೆ ಎಂಬುದು ಇಷ್ಟು ಬೇಗ ನಿನಗೆ ಮರೆತು ಹೋಯಿತೇ? ನೀನಿಲ್ಲದಿದ್ದರೆ ಎಂದಿಗಾದರೂ ಅವಳು ನನ್ನನ್ನು ಒಪ್ಪುತ್ತಿದ್ದಳು. ಅಂದು ಕಾಲೇಜು ಬಿಟ್ಟು ಮನೆಗೆ ಹೋಗುವಾಗ ನೀನು ಅವಳನ್ನು ಹಿಂಬಾಲಿಸಿ ಹೋದೆ, ನಾನು ನಿನ್ನನ್ನು ಹಿಂಬಾಲಿಸಿ ಬಂದೆ, ಆ ನಿರ್ಜನ ನೇಕಾರರ ಓಣಿಯಲ್ಲಿ ನೀನು ಅವಳಿಗೆ ಪರಿಚಯ ಹತ್ತದಂತೆ ಅವಳ ಮುಖಕ್ಕೆ ಆಸಿಡ್ ಹಾಕಿದೆ. ನಿನ್ನನ್ನು ಕೊಂದುಬಿಡೋಣ ಎನ್ನಿಸಿತ್ತು. ಆದರೂ ನಿನ್ನ ಕೈಯ್ಯಲ್ಲಿ ಆಯುಧ ಇದ್ದಿದ್ದರಿಂದ ಸುಮ್ಮನಾದೆ ಆ ದಿನ. ನೀನು ಅವಳನ್ನು ಮದುವೆಯಾಗುತ್ತೀನಿ ಎಂದಾಗ ಎಲ್ಲರ ಕಣ್ಣಿನಲ್ಲೂ ನೀನು ಮತ್ತೊಂದಿಷ್ಟು ಮೇಲಕ್ಕೇರಿದೆ. ನಿಜವೆಂದರೆ ಆ ಸಮಯದಲ್ಲಿ ನಿನ್ನ ಬಗ್ಗೆ ವಿಪರೀತ ಹೇಸಿಕೆ ದ್ವೇಷ ಹುಟ್ಟಿತ್ತು. ಆದರೂ ನನಗೆ ಗೊತ್ತಿತ್ತು, ನೀನು ನಿನ್ನೊಳಗೆ ಎಷ್ಟು ಕೊರಗುತ್ತಿ ಎಂದು,ಆ ದಿನ ಮಾಡಿದ ಕಾರ್ಯಕ್ಕೆಪರಿತಪಿಸುತ್ತೀ ಎಂದು. ನನಗೆ ನಿನ್ನ ಮೇಲೆ ಸೇಡು ತೀರಿಸಿಕೊಳ್ಳಲು ಇದ್ದ ಅವಕಾಶವೂ ಅದೊಂದೇ. ನಿನ್ನ ಆ ಕೃತ್ಯಕ್ಕೆ ಇಡೀ ಜಗತ್ತಿನಲ್ಲಿ ಇದಕ್ಕೆ ನಾನೊಬ್ಬನೇ ಸಾಕ್ಷಿ. ನೀನು ಹೀಗೇ ಈ ನೋವಿನಲ್ಲಿ ತೊಳಲಾಡಬೇಕು, ಇರುವ ಯಾವುದೇ ಸುಖವನ್ನು ಅನುಭವಿಸಲು ಶಕ್ಯವಾಗಬಾರದು ಅದನ್ನು ನೋಡಿ ನಾನು ಖುಷಿಪಡಬೇಕು" ಎಂದು ವಿಜಯದ ನಗೆಯನ್ನುಮತ್ತೊಮ್ಮೆ ಬೀರಿದ.

ನೃಪತುಂಗ ಮತ್ತೂ ಸೋತ ದನಿಯಲ್ಲಿ "ನಾನು ಆಯ್ದುಕೊಂಡ ಮಾರ್ಗ ಕೆಟ್ಟದ್ದಿರಬಹುದು, ಅದು ಅವಳಿಗೆ ನೋವನ್ನು ಕೊಟ್ಟಿರಬಹುದು, ಅವಳ ಸೌಂದರ್ಯವನ್ನು ಕಿತ್ತುಕೊಂಡಿರಬಹುದು, ಆದರೆ ಅವಳ ಬಗೆಗಿನ ನನ್ನ ಎಲ್ಲಾ ಭಾವನೆಗಳೂ ಸತ್ಯವೇ. ನಾನಂತೂ ಅವಳಿಗಾಗಿ ಏನನ್ನು ಬೇಕಾದರೂ ಮಾಡಲು ತಯಾರಿದ್ದೆ. ಪ್ರೀತಿಯ ಹುಚ್ಚು ಎನ್ನುವಿಯೋ ಅಥವಾ ಮತ್ತೇನೋ ನಾನು ವೈದೇಹಿಯ ಮೇಲೆಯೇ ಆಸಿಡ್ ಹಾಕಲೂ ತಯಾರಾದೆ. ಆದರೆ ಅಂದು ನಾನು ಮಾಡಿದ ಕಾರ್ಯದ ಬಗ್ಗೆ ನನಗೆ ಇಂದಿಗೂ ನೋವಿದೆ, ಪಶ್ಚಾತ್ತಾಪವಿದೆ, ಹೊಡೆದುಕೊಳ್ಳುವಷ್ಟು ಸಿಟ್ಟು ಇದೆ. ಆದರೆ ಅದರಿಂದ ನಾನು ಮಾಡಿರುವ ಘೋರ ಸರಿಯಾಗುವುದಿಲ್ಲವಾದ್ದರಿಂದ ಅದನ್ನು ಮರೆಯಹೋಗುತ್ತೇನೆ. ಅಂದಿನಿಂದ ಇಂದಿನವರೆಗೆ ನೋವಿನ  ಎಳೆಯೂ ತಾಕದಂತೆ ಅವಳನ್ನು ನೋಡಿಕೊಂಡಿದ್ದೇನೆ, ಅವಳಿಗೆ ಆ ನೆನಪುಗಳು ಸ್ವಲ್ಪವೂ ತಾಕದಂತೆ ಕಂಡುಕೊಂಡಿದ್ದೇನೆ." ಇನ್ನೂ ಏನೇನೋ ಹೇಳುತ್ತಿದ್ದ, ನನಗೆ ಭೂಮಿ ಬಾಯ್ತೆರೆಯಬಾರದೇ ಎನ್ನಿಸಿತು! ಮನುಷ್ಯರು ಇಷ್ಟೆಲ್ಲ ಕೆಟ್ಟವರಾಗಿರುತ್ತಾರಾ ಎಂದು, ಅದೂ ನನ್ನ ನೃಪತುಂಗನಂತಹವರೂ. ಹೇಗೋ ಸಾವರಿಸಿಕೊಂಡು ಉಳಿದ ಗೆಳೆಯರಿದ್ದ ಕಡೆಗೆ ಬಂದೆನಾದರೂ ಮನಸ್ಸು ಕಳೆದು ಹೋಗಿತ್ತು, ನನ್ನ ಎಲ್ಲಾ ಕಟ್ಟುಪಾಡುಗಳನ್ನು ಮರೆತು ಶೋಕಃತಪ್ತವಾಗಿತ್ತು. ಅದನ್ನು ಮುಚ್ಚಿಡುವ ನನ್ನೆಲ್ಲ ಪ್ರಯತ್ನಗಳೂ ವಿಫಲವಾಗಿದ್ದವು.
*****

ವೈದೇಹಿ:
ಚಿತ್ರಕೃಪೆ: ಅಂತರ್ಜಾಲ
ಅದಾಗಿ ಎರಡು ವಾರಗಳಾಗಿವೆ. ಮತ್ತೊಂದು ಭಾನುವಾರ ಬಂದಿದೆ. ನನ್ನ ಮನಸ್ಸು ನನಗೇ ಗೊತ್ತಿಲ್ಲದಷ್ಟು ಗೊಂದಲಗಳ ಗೂಡಾಗಿದೆ. ಯಾರದ್ದು ಸರಿ ಯಾರದ್ದು ತಪ್ಪು ಎಂಬ ವಿವೇಚನೆಯಲ್ಲಿ ಕಳೆದು ಹೋಗಿದ್ದೇನೆ. ಅದಕ್ಕಿಂತ ಹೆಚ್ಚಾಗಿ ಯಾರದ್ದು ಕಡಿಮೆ ತಪ್ಪು,ಯಾರದ್ದು ಹೆಚ್ಚು ಎಂಬುದರ ಬಗ್ಗೆ. ನಾನು ಒಪ್ಪಿಕೊಳ್ಳಲಿಲ್ಲ ಎಂಬ ಒಂದೇ ಕಾರಣಕ್ಕೆ ಆಸಿಡ್ ಹಾಕುವಷ್ಟು ಹೀನತೆಗೆ ಅವನು ಕೈಹಾಕಿದನೇ? ಹಾಗೆ ಮಾಡಿದರೆ ನಾನು ದುರ್ಬಲಳಾಗಿ ಅವನ ’ಹೊಂಚಿ’ಗೆ ಬೀಳಬಹುದೆಂಬ ಲೆಕ್ಕಾಚಾರವನ್ನು ನಾನು ನಿಜ ಮಾಡಿದೆನೇ? ಹಾಗೆ ನಾನು ಯೋಚಿಸಬಹುದೆಂಬಷ್ಟು ಕೀಳಾಗಿ ನನ್ನನ್ನು ಭಾವಿಸಿದನೇ? ಪ್ರೀತಿ ಎಂದರೆ ಇದೇನಾ? ಯಾವುದೇ ಬೆಲೆಗಾದರೂ ಪ್ರೀತಿ ಬೇಕು ಎನ್ನಿಸುತ್ತದೆಯೇ? ಅದಕ್ಕಾಗಿ ಪ್ರೀತಿಸಿದವಳಿಗೇ ಜೀವನಪರ್ಯಂತ ಶಿಕ್ಷೆಯಾದರೂ ಸರಿಯೇ? ಪ್ರೀತಿ ಎಂದರೆ ಪ್ರಾಮಣಿಕತೆ, ಸತ್ಯ, ನಿಯತ್ತುಗಳಿಗೆಲ್ಲ ಮೀರಿದ್ದೇ? ಹಾಗೇ ಎಂದುಕೊಂಡರೂ ಕೊನೆಪಕ್ಷ ಪ್ರೀತಿಸಿದವಳ ಬಳಿಯಾದರೂ ಪ್ರಾಮಾಣಿಕವಾಗಿರಬೇಕಲ್ಲವೇ? ಇದೇ ಪ್ರೀತಿಯ ಹೆಸರಿನಲ್ಲಿ ಏನನ್ನಾದರೂ ಕ್ಷಮಿಸಬಹುದೇ? ತನಗೆ ಬೇಕೆನಿಸಿದ್ದನ್ನು ದಕ್ಕಿಸಿಕೊಳ್ಳಲು ಏನನ್ನು ಬೇಕಾದರೂ ಮಾಡುವುದು ಬಾಲಿಶವಾಗಿ, ’ಜಂಗಲ್ ರಾಜ್’ ನ ನ್ಯಾಯವಾಗಿ ಕಾಣುವುದಿಲ್ಲವೇ? ಕ್ರಿಶ್ಚಿಯನ್ನರು ಹೇಳುವ ಹಾಗೆ ಎಲ್ಲಾ ತಪ್ಪುಗಳಿಗೂ ಪಶ್ಚಾತ್ತಾಪದಿಂದ ಕ್ಷಮೆ ಸಿಗುತ್ತದೆಯೇ? ಅದೊಂದನ್ನು ಕ್ಷಮಿಸಿಬಿಟ್ಟರೆ ಮತ್ತಿಡೀ ಜೀವನ ಪ್ರೀತಿಸಲು ಸಾಕಾಗುವಷ್ಟು ಕಾರಣಗಳನ್ನು ಅವನು ಈ ಆರು ವರ್ಷಗಳಲ್ಲಿ ಕೊಟ್ಟಿಲ್ಲವೇ? ಅದು ಹಾಗೆ ಕ್ಷಮಿಸಲಾಗದ ತಪ್ಪೇ? ನಾನೆಂದೂ ಯಾವುದೇ ತಪ್ಪನ್ನು ಮಾಡಿಲ್ಲವೇ? ಒಂದು ಬಾರಿಯಾದರೂ ನನಗಿಂತ ಅದೃಷ್ಟವಂತಳು ಯಾರಾದರೂ ಇರಬಹುದೆಂಬ ಯೋಚನೆಯನ್ನಾದರೂ ನನಗೆ ಬರಲು ನೃಪತುಂಗ ಬಿಟ್ಟಿದ್ದಾನೆಯೇ? ಅವನು ಮಾಡಿದ್ದು ತಪ್ಪು ಎಂಬುದು ವಿದಿತವಾದರೂ ಅದಕ್ಕೆ ಯಾವ ಶಿಕ್ಷೆ ನ್ಯಾಯವಾದದ್ದು ಎಂಬುದರ ಬಗ್ಗೆ ತಲೆ ಹರಿಯಲಾರದಾಯಿತು. ಅಕ್ಷಮ್ಯವಾದ ತಪ್ಪೇ ಅವನು ಮಾಡಿದ್ದು, ಅಥವಾ ಕ್ಷಮೆ ಎಂಬ ದೊಡ್ಡ ಶಬ್ದವನ್ನು ನಾನು ಸುಮ್ಮನೇ ಈ ವಿಷಯಕ್ಕೆ ಗಂಟು ಹಾಕುತ್ತಿದ್ದೇನೆಯೇ? ಯೋಚಿಸಿದಷ್ಟೂ ಕಗ್ಗಂಟಾಗುತ್ತ ಹೋಯಿತು ವಿಚಾರಧಾರೆ. ಆದರೂ ಅದು ಎಂತಹ ಅನಿವಾರ್ಯವಾದ ಪ್ರೀತಿಯೇ ಆದರೂ ಅವನು ಆಯ್ದುಕೊಂಡ ಮಾರ್ಗ ಹೀನವೇ, ನಾನೇ ಅದರಿಂದ ತೊಂದರೆಯನ್ನು ಅನುಭವಿಸಿದೆನೆಂಬುದನ್ನು ಕಡೆಗಣಿಸಿದರೂ ಅವನು ಮಾಡಿದ್ದನ್ನು ಪ್ರೀತಿಯ ಭಾಗ ಎಂದು ಪರಿಗಣಿಸಲು ನನ್ನಿಂದ ಸಾಧ್ಯವಿಲ್ಲವಾಯಿತು. ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ನಾವು ಹಿಂತಿರುಗಿ ನೋಡಿದರೆ ನಮ್ಮ ಜೀವನದಲ್ಲಿ ನಡೆದ ಎಷ್ಟೋ ಘಟನೆಗಳಲ್ಲಿ ನಾವು ಸುಮ್ಮನೇ ಮೋಸಹೋದೆವು ಎಂದು ಎನ್ನಿಸುತ್ತಹೋಗುತ್ತದೆ. ಆಂತಹದೇ  ಭಾವನೆ ಮನದಲ್ಲಿ ಮೂಡಿನಿಂತು ಡೈವೋರ್ಸೇ ಸರಿ ಎನ್ನಿಸಿ ನಿರ್ಧಾರವೊಂದನ್ನು ಮನದಲ್ಲಿ ಮೂಡಿಸಿಕೊಂಡು ಕುಳಿತೆ.
*****

ವೈದೇಹಿ:
ಅದಾಗಿ ಮತ್ತಾರು ವರ್ಷಗಳು ಕಳೆದಿವೆ, ಅದು ಮತ್ತೊಂದು ಭಾನುವಾರ. ನಾನು ಅಂದೂ ಪೇಪರನ್ನು ಓದುತ್ತಿದ್ದೆ, ನೃಪತುಂಗ ಇನ್ನೂ ಮಲಗಿದ್ದ, ನಾನು ಎದ್ದು ಪೇಪರ್ ಓದುತ್ತಿದ್ದೆ, ಆರು ವರ್ಷದ ಕೆಳಗಿನ ಆ ಭಾನುವಾರದ ದಿನದ ಹಾಗೆಯೇ, ಒಂದು ಬದಲಾವಣೆಯನ್ನು ಹೊರತುಪಡಿಸಿ. ಇಂದು ಅಲ್ಲಿ ಬೆಡ್ರೂಮಿನಲ್ಲಿ ಮಲಗಿರುವ ನೃಪತುಂಗನ ಪಕ್ಕದಲ್ಲಿ ನಮ್ಮ ಚಿನ್ನದ ಬೊಂಬೆಯೊಂದು ಮಲಗಿದೆ, ಜಾಹ್ನವಿ ಎಂಬ ಹೆಸರಿನೊಂದಿಗೆ. ಆಶ್ಚರ್ಯವಾಗಬಹುದಲ್ಲಾ, ಹೇಗೆ ಇದು ಸಾಧ್ಯ ಎಂದು. ಅದನ್ನು ತಿಳಿಯಲು, ಡೈವೋರ್ಸ್ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೆನಲ್ಲಾ, ಆ ದಿನಕ್ಕೆ ಹೋಗೋಣ,ಒಮ್ಮೆ.

ಅಂದು ಮಧ್ಯಾಹ್ನ ಊಟಕ್ಕೆ ಕೂತಿದ್ದೆವು, ಊಟ ಸುರು ಮಾಡುತ್ತಿದ್ದಂತೆಯೇ ನೃಪತುಂಗ ಸುರುಮಾಡಿದ, "ವೈದೇಹಿ, ಮದುವೆಯಾಗಿ ನಾಳೆಗೆ ಆರು ವರ್ಷಗಳಾಗುತ್ತವೆ.ಎಷ್ಟು ಬೇಗ ಕಳೆದು ಹೋದವು ಅಲ್ಲಾ ಈ ದಿನಗಳು. ಆದರೆ ಅಂದಿನಿಂದ ಇಂದಿನವರೆಗೂ ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ವಿಚಾರಗಳಿವೆ. ಇವುಗಳನ್ನು ನನ್ನೊಳಗೇ ಇಟ್ಟುಕೊಂಡು ನಾನು ನೆಮ್ಮದಿಯಿಂದ ಇರಬಲ್ಲೆ ಎಂದು ತಿಳಿದಿದ್ದೆ, ಹಾಗೆಯೇ ಬಯಸಿದ್ದೆ ಕೂಡಾ. ಆದರೆ ಈಗೀಗ ಅದು ನನ್ನಿಂದ ಸಾಧ್ಯವಿಲ್ಲವೇನೋ ಎನ್ನಿಸುತ್ತಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪಾಪಪ್ರಜ್ಞೆ ಎಂಬುದು ಮನೆಯ ಒಳಹೊಕ್ಕ ಕಾಳ್ಗಿಚ್ಚಿನಂತೆ ಸುಡುತ್ತಿದೆ" ಎಷ್ಟು ಪ್ರಯತ್ನಪಟ್ಟರೂ ಪೀಠಿಕೆಯಿಂದ ಮುಂದಕ್ಕೆ ಹೋಗಲೇ ಸಾಧ್ಯವಾಗಲಿಲ್ಲ ಅವನಿಗೆ. ನಾನೇ "ಅದೇನು ಹೇಳಿ, ಇಷ್ಟೆಲ್ಲಾ ಪ್ರಸ್ತಾವನೆಯ ಅಗತ್ಯವಿಲ್ಲ. ಏನೆಂದು ಬೇಗ ವಿಷಯಕ್ಕೆ ಬನ್ನಿ." ಆಗಿದ್ದ ನನ್ನ ಮನಸ್ಥಿತಿಯಲ್ಲಿ ಸ್ವಲ್ಪ ಖಾರವಾಗಿಯೇ ಮಾತನಾಡಿದೆ. ಗತ್ಯಂತರವಿಲ್ಲದೇ ಅವನು ವಿಷಯಕ್ಕೆ ಬಂದ, ಕಾಲೇಜಿನಲ್ಲಿದ್ದಾಗ ಉಂಟಾದ ಪ್ರೇಮದಿಂದ ಹಿಡಿದು ಮೊನ್ನೆ ಮೊನ್ನೆಯವರೆಗಿನ ವಿನಯನ ಭೇಟಿಯವರೆಗೂ ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ಹೇಳಿದ. ಯಾವಾಗಿನ ಹಾಗೆಯೇ ಅದೇ ಅತಿ ಪ್ರಾಮಾಣಿಕವಾದ ಸ್ವರ, ನನಗೆ ನಂಬಲೇ ಬೇಡವೇ ಎಂಬ ದ್ವಂದ್ವ. ಪ್ರತೀ ಸಲವೂ ಇವನು ಹೀಗೆಯೇ ಮಾತನಾಡುತ್ತಿದ್ದನಲ್ಲವೇ, ಪ್ರತೀಸಲವೂ ನಾನು ನಂಬುತ್ತಿದ್ದೆನಲ್ಲವೇ, ಇಲ್ಲಿಯವರೆಗೂ ನಾನು ಹೀಗೆಯೇ ಇವನ ಪ್ರಾಮಾಣಿಕತೆಯ ಬಗ್ಗೆ ಎಳ್ಳಷ್ಟೂ ಸಂದೇಹ ಪಟ್ಟಿರಲಿಲ್ಲ. ಹಾಗೆಂದು ಅವನು ಸುಳ್ಳನ್ನು ಹೇಳಿ ನನ್ನನ್ನು ಭ್ರಮೆಯ ಕೂಪದಲ್ಲಿ ತಳ್ಳಿ ಹಾಕಿದ್ದನೆಂದಲ್ಲ, ಆದರೆ ಸತ್ಯವನ್ನು ಹೇಳದೇ ಹಾಗೆ ಮಾಡಿದ್ದ. ಅರ್ಧಸತ್ಯಕ್ಕೂ ಸಹ ಸುಳ್ಳಿನಷ್ಟೇ ದೋಷವಲ್ಲವೇ? ಹಾಗೆಂದು ಈಗ ಇವನ ಮುಖ ನೋಡಿದರೆ, ಎಷ್ಟೋ ದಿನ  ಇವನು ತನ್ನೊಳಗಿನ ಯಾವುದೋ ಹೋರಾಟವನ್ನು ಸುಮ್ಮನಾಗಿಸುವಂತೆ ಕಾರಣವನ್ನೂ ಹೇಳದೇಸುಮ್ಮನೇ ಡಲ್ ಆಗಿ ಕೂರುತ್ತಿದ್ದುದನ್ನು ನೆನಪಿಸಿಕೊಂಡರೆ ಇವನು ಹೇಳುತ್ತಿರುವುದು, ಅವನ ಈಗಿನ ಭಾವನೆಗಳು ಸತ್ಯವೇ ಇರಬಹುದೆನ್ನಿಸುತ್ತದೆ. ಆದರೆ, ಯಾವುದೋ ಒಂದು ಹಠದಂತಹ ಶಕ್ತಿಯು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವನನ್ನು ಸಂತೈಸುವ ನನ್ನ ಒಳತೋಟಿಯನ್ನು ಹತ್ತಿಕ್ಕಿ ಸುಮ್ಮನಾಗಿಸಿತು. ಆದರೂ ನಾನೇನೂ ಆ ವಿಷಯವನ್ನು ಎತ್ತದೇ ಈ ವಿಷಯಗಳ ಬಗ್ಗೆ ಅವನೇ ಸ್ವಯಂಪ್ರೇರಿತವಾಗಿ ಮಾತನಾಡಿದ್ದರಿಂದ ಒಂದು ಸಮಾಧಾನವಾಗಿತ್ತು,  ಹೇಗಿದ್ದರೂ ಒಂದಲ್ಲಾ ಒಂದು ದಿನ ಅವನೇ ಪ್ರಸ್ತಾಪಿಸಿ ತನ್ನ ತಪ್ಪನ್ನು ಹೇಳಿಕೊಳ್ಳುತ್ತಿದ್ದ ಎಂದು. ಅದಕ್ಕಿಂತ ಹೆಚ್ಚಾಗಿ ಅವನು ಮಾಡಿದ್ದಕ್ಕೆ ಹೃತ್ಪೂರ್ವಕವಾಗಿ ಪಶ್ಚಾತ್ತಾಪ ಪಟ್ಟಿದ್ದ ಎಂದು. ಏನೋ ಒಂದು, ಒಂದು ತರಹ ನಿರಾಳವಾಯಿತಾದರೂ ಅದನ್ನು ತೋರಿಸಿಕೊಳ್ಳಲು ಇಷ್ಟವಾಗಲಿಲ್ಲ. ಸುಮ್ಮನೇ ಉಳಿದೆ ಸ್ವಲ್ಪ ಹೊತ್ತು, ಅವನು ನಾನೇನಾದರೂ ಮಾತನಾಡುತ್ತೇನೆಂದು ನಿರೀಕ್ಷಿಸಿದ್ದನೇನೋ, ಕೊನೆಪಕ್ಷ ನನ್ನ ಪ್ರಕೃತಿಗೆ ವಿರುದ್ಧವಾಗಿ ಕಿರುಚಾಡಿಬಿಡುತ್ತೇನೆ ಎಂದಾದರೂ ಆಶಿಸಿದ್ದ. ಆದರೆ ನಾನು ಹಾಗೇ ಸುಮ್ಮನೇ ಮೌನವಾಗಿ ಕುಳಿತಿದ್ದುದನ್ನು ಅವನಿಗೆ ಸಹಿಸಲಾಗಲಿಲ್ಲ. ನನಗೆ ಮಾತುಗಳಿಂದ ಸಂತೈಸಲಾಗದಷ್ಟು ಆಘಾತ ಆಗಿರಬೇಕೆಂದು ಭಾವಿಸಿ ಅವನೂ ಸುಮಾರು ಹೊತ್ತು ಸುಮ್ಮನೇ ಕುಳಿತು ನಂತರ ಎದ್ದು ಹೋದ.

ಮನೆಯಲ್ಲಿ ನಾನೇ ನಿರ್ಮಿಸಿದ್ದ ಉಸಿರುಗಟ್ಟಿಸುವಿಕೆಯಿಂದ ಹೊರಬರಲು ಇತ್ತೆಚೆಗೆ ರೂಢಿಸಿಕೊಂಡಿದ್ದ ಅಭ್ಯಾಸದಂತೆ ಆ ಸಂಜೆಯೂ ವಾಯುವಿಹಾರಕ್ಕೆ ಹೋಗಿದ್ದೆ.  ಸ್ವಲ್ಪ ದಿನಗಳಿಂದ ಇದ್ದ ನಿಶ್ಶಕ್ತಿ ಮತ್ತೊಂದಿಷ್ಟು ಜೋರಾದಂತಾಗಿ ತಲೆ ಬವಳಿಬಂದಂತಾಯಿತು. ಅಲ್ಲಿಯೇ ಕೆರೆಯ ದಂಡೆಯ ಮೇಲೆ ಕುಳಿತುಕೊಂಡೆನಾದರೂ ಸುಮಾರು ಹೊತ್ತಿನ ತನಕ ಬವಳಿಕೆ ಹಾಗೇ ಇತ್ತು. ಅಲ್ಲಿಯೇ ಕುಳಿತಿದ್ದೆ. ಹಾಗೆಯೇ ಮನಸ್ಸು ತನ್ನದೇ ಆನಿಕೆಯಲ್ಲಿ ಹಳೆಯ ನೆನಪುಗಳನ್ನೆಲ್ಲಾ ಮೆಲಕುಹಾಕುತ್ತಿತ್ತು. ನನಗೆ ನೃಪತುಂಗನ ಪರಿಚಯವಾದದ್ದು, ಪರಿಚಯ ಗೆಳೆತನಕ್ಕಿಂತ ಮೀರಿ ಬೆಳೆದಿದ್ದು, ಅದನ್ನು ಅವನು ವ್ಯಕ್ತಪಡಿಸಿದರೂ ತಾನೇ ಹಿಂಜರಿದಿದ್ದು, ಮತ್ತೆ ಪರಿಸ್ಥಿತಿಯ ಕೈಗೊಂಬೆಯಾಗಿಯೋ ಅಥವಾ ತನ್ನಿಷ್ಟದಂತೆಯೋ ಏನೋ ಒಂದಾಗಿ ಅವನನ್ನೇ ಮದುವೆಯಾಗಿದ್ದು, ಮೊನ್ನೆಯವರೆಗೂ ಅವನ ಬಗ್ಗೆ ನನ್ನ ಅದಮ್ಯ ಕೃತಜ್ಞತಾಭಾವ, ಅದು ಒಮ್ಮೆಲೇ ಕರಗಿ ತಿರಸ್ಕಾರಕ್ಕೆ ಸಮೀಪದ ಭಾವವಾಗಿ ಬದಲಾಗಿದ್ದು, ಹೀಗೆಯೇ ಎಷ್ಟೋ ವಿಷಯಗಳು ತಲೆಯಲ್ಲಿ ಸುಳಿದು ಹೋಗುತ್ತಿದ್ದವು. ಲಂಗುಲಗಾಮಿಲ್ಲದೇ ಮನಸ್ಸು ತನಗೆ ತೋಚಿದೆಡೆ ಹರಿಯುತ್ತಿತ್ತು. ಯಾಕೋ ಮನಸ್ಸು ತಳಮಳದಲ್ಲಿಯೇ ಸುಖ ಕಾಣುವಂತೆ ಅನಿಸಿ ಅದರಲ್ಲಿಯೂ ವಿರಕ್ತಿ ಮೂಡಿತು, ಅದೂ ಕೆಲವೇ ನಿಮಿಷಗಳ ಮಟ್ಟಿಗೆ ಮಾತ್ರ. ಮತ್ತದೇ ಅಸಹ್ಯದ ಭಾವನೆ ಆ ಆಸಿಡ್ ಘಟನೆಯ ಬಗ್ಗೆ ಮನದಲ್ಲಿ ಮೂಡಿ ಹೊಟ್ಟೆಯ ಆಳದಿಂದ ವಾಕರಿಕೆ ಹೊರನುಗ್ಗಿಬಂತು. ನೋಡಿದರೆ ನಿಜವಾಗಿಯೂ ವಾಂತಿ ಮಾಡಿದ್ದೆ, ಅದೇ ಆ ಪಾರ್ಕಿನ ಕಲ್ಲುಹಾಸಿನ ಪಕ್ಕದಲ್ಲೇ. ಅದಾದ ಮೇಲೆ ಸ್ವಲ್ಪ ಸಮಾಧಾನ ಆದಂತಾಗಿದ್ದು ಸತ್ಯ. ಬಹುಶಃ ಆ ಯೋಚನೆಯೇ ನನ್ನ ದೇಹದಲ್ಲಿ ಇಂತಹ ಪರಿಣಾಮವನ್ನು ಬೀರುತ್ತಿದೆಯೇ ಎನ್ನಿಸಿತು,ಈ ಸಲದ ಮುಟ್ಟೂ ಸರಿಯಾಗಿ ಆಗಿರಲಿಲ್ಲವಾದರೂ ಅದೇನೂ ನನಗೆ ಹೊಸ ವಿಷಯವಲ್ಲವಾಗಿದ್ದರಿಂದ ನಾನು ಅಷ್ಟು ಮಹತ್ವ ಕೊಡಲಿಲ್ಲ.  ಆದರೆ ಮನಸ್ಸಿನಲ್ಲಿ ಯಾಕೋ ಸಂದೇಹ, ಏನಕ್ಕಾದರೂ ಇರಲಿ ಎಂದು ಗರ್ಭಪರೀಕ್ಷೆಯ ಕಿಟ್ ನಿಂದ ಪರೀಕ್ಷಿಸಿ ನೋಡಿದರೆ ಗರ್ಭಿಣಿ ಹೌದೆಂಬ ಉತ್ತರ. ತಾಯಿತನದ ಬಗ್ಗೆ ಇರುವ ಗೌರವಮಿಶ್ರಿತ ಸಡಗರ ಒಂದೇ ಸಲಕ್ಕೆ ಮನಸ್ಸನ್ನು ತುಂಬಿಕೊಂಡಿತ್ತು. ಮೊದಲ ಮೂರು ವರ್ಷ ಮಗು ಬೇಡ ಎಂದು ತಡೆದು, ಮತ್ತೆ ಮೂರು ವರ್ಷಗಳಲ್ಲಿ ಪ್ರಯತ್ನಿಸಿದರೂ ಮಕ್ಕಳಾಗದೇ ಹೋಗಿ ಹತಾಶೆಯಲ್ಲಿ ಮುಳುಗಿದ್ದೆ.  "ಪ್ರಕೃತಿಯ ವಿರುದ್ಧವಾಗಿ ಹೋಗಿದ್ದಕ್ಕೆ ಇದು ಶಿಕ್ಷೆ" ಎಂದು ನೃಪತುಂಗನ ಅಜ್ಜಿ ಪಿಸುಮಾತಿನಲ್ಲಿ ಹೇಳುವುದನ್ನು ಕೇಳಿದ ಮೇಲಂತೂ ನನಗೆ ಅದೇ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು.ನನ್ನ ಭಾವನೆಗಳು ಆನಂದದ ಮಿತಿಯನ್ನು ಮೀರಿ ಬೇರೊಂದು ಮಟ್ಟಕ್ಕೆ ಬೆಳೆದಿತ್ತು. ಅದರ ಮಧ್ಯದಲ್ಲಿ ಉಳಿದ ಭಾವಗಳೆಲ್ಲ ನಶಿಸಿಹೋಗಿ ತಾಯ್ತನದ ಸಡಗರ ಮಾತ್ರ ಉಳಿದಿತ್ತು. ಮನಸ್ಸು ಆಗಲೇ ನೃಪತುಂಗನ ಜೊತೆಗೆ ರಾಜಿಗೆ ಒಪ್ಪಿತ್ತು, ಮಗುವಿನ ಕನಸ್ಸಿನಲ್ಲಿ. ಈ ವಿಷಯ ತಿಳಿಯುವ ಮೊದಲೇ ಒಂದು ಹಂತಕ್ಕೆ ನೃಪತುಂಗನದ್ದು ಕ್ಷಮಿಸಲಾರದ ತಪ್ಪೇನಲ್ಲ ಎಂದು ಒಪ್ಪಿಕೊಂಡಿದ್ದ ಮನಸ್ಸು ಈಗಂತೂ ಎಲ್ಲವನ್ನೂ ಮರೆತಿತ್ತು. ರಾಜಿಗೆ ಅಡ್ಡ ಬರುತ್ತಿದ್ದ ಅಹಂ ಎಲ್ಲೋ ಮರೆತು ಹೋದಂತಾಗಿ ನೃಪತುಂಗನಿಗೆ ವಿಷಯ ಹೇಳಲು ಸಂತೊಷದ ಕುಣಿದಾಟದ ಹೆಜ್ಜೆಯಲ್ಲಿ ನಡೆದೆ.

Thursday, 25 August 2011

ಒಂದು ಡೈರಿಯ ಕಥೆ ( ಮುಂದುವರಿದಿದೆ)


ಟ್ರೇನಿನಲ್ಲಿ ಸಿಕ್ಕಿದ ಬ್ಯಾಗನ್ನು ಹಿಂದಿರುಗಿಸುವ ನೆಪದಲ್ಲಿ ಅನಾಮಿಕಾ ಅದರೊಳಗಿದ್ದ ಡೈರಿಯನ್ನು ಓದಲು ಪ್ರಾರಂಭಿಸುತ್ತಾಳೆ. 

ಮುಂದೆ ಓದಿ ...

ಒಂದಿಷ್ಟು ಪೀಠಿಕೆಯ ಹಾಗೆ ಬರೆದಿದ್ದನಾದರೂ ಅದು ಯಾವ ರೀತಿಯಿಂದಲೂ ವಿಳಾಸ ತಿಳಿಯಲು ಸಹಾಯವಾಗುವಂತೆ ಇರಲಿಲ್ಲ.ಹೆಚ್ಚಿನವು ಅವನ ಜೀವನದ ಬಗ್ಗೆ , ಅದರ ಬಗೆಗಿನ ಅವನ ಅನುಭವದ ಬಗ್ಗೆ ಇತ್ತು. ತಂದೆ ತಾಯಿಯರ ಪ್ರೇಮವಿವಾಹ (ತಾಯಿಯ ಕಡೆಯವರಿಂದ ಬಹಳೇ ವಿರೋಧ ಕಟ್ಟಿಕೊಂಡು) ,ಮೂಲ ದಕ್ಷಿಣ ಕನ್ನಡದ ಜೈನರಾದರೂ ಹುಬ್ಬಳ್ಳಿಯಲ್ಲಿ ವಾಸವಾಗಿರುವುದು,ಎಂಬುದನ್ನು ಬಿಟ್ಟರೆ ಮತ್ತೆಲ್ಲ ವಿವರಗಳೂ unuseful. ಮೂರನೇ ಕ್ಲಾಸಿನಲ್ಲಿ ಅಪ್ಪನಿಗೆ ಗೊತ್ತಿಲ್ಲದಂತೆ ವೆಂಕಪ್ಪ ಶೆಟ್ಟರ ಅಂಗಡಿಗೆ ಹೋಗಿ ಎರಡು ರುಪಾಯಿಯ ಚಿಕ್ಕಿ ತೆಗೆದುಕೊಂಡು ತಿನ್ನುತ್ತಿದ್ದುದು, ಎರಡೂ ಮನೆಯವರ ವಿರೋಧವಿದ್ದರೂ ವಿನಾಯಕ ಮಾವ(ಪ್ರಭಂಜನನ ಅಮ್ಮನ ತಮ್ಮ)ನ ಮಗಳು ಆವಂತಿಯ ಮೇಲೆ ಉಂಟಾದ crush, ಹೀಗೆ ಎಷ್ಟೋ ವಿಷಯಗಳನ್ನು ಮೊದಲ ಬಾರಿಗೆ ಮನಸ್ಸಿನಿಂದ ಹೊರಕ್ಕೆ ಹರಿಯಬಿಟ್ಟಿದ್ದ . ಮುಂದೆ ೯ನೇ ಕ್ಲಾಸಿನಲ್ಲಿರುವಾಗ ಅದೇ ಆವಂತಿ ಮೆದುಳು ಜ್ವರದಿಂದ ತೀರಿಕೊಂಡಾಗ , ಭಾಷೆಗೆ ಇರುವ ಮಿತಿ ನೋವಿಗೆ ಎಲ್ಲಿಂದ ಬರಬೇಕು ಎಂದುಬಿಡುತ್ತಾನೆ. ಅವನು ಬರೆದಿದ್ದೆಲ್ಲಾ ಸತ್ಯವೇ? ಆ ವಾಕ್ಯಗಳು ಸತ್ಯಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾಗಿದ್ದವು. ಪಿ.ಯು. ವಿನ ಘಟನೆಗಳ ಬಗೆಗಿನ ಅವನ ಕೆಲವು ವಾಕ್ಯಗಳನ್ನು ಅವನು ಬರೆದಂತೆಯೇ ಉದ್ಧರಿಸುತ್ತೇನೆ " ನನಗೆ ಸಹಸ್ರ ವಿಧದಲ್ಲಿ ಸಹಾಯ ಮಾಡಿದ ನವೀನನೊಂದಿಗೆ ಸಹಾ ನಾನು ಪ್ರಾಮಾಣಿಕವಾಗಿರಲಿಲ್ಲ ಎಂಬುದಕ್ಕೆ ನಾನು ದುಃಖ ಪಡುತ್ತೇನೆ,  ಯಾವುದೇ ಕೆಲಸ ಇದ್ದರೂ ದಿನವೂ ಕಾಲೇಜಿಗೆ ಕರ್ತವ್ಯವೇನೋ ಎನ್ನುವ ತರಹ drop ಕೊಡುತ್ತಿದ್ದ ’ನವೀ’ಗೆ , ಆವಂತಿಯ hangoverನಿಂದ ಹೊರ ಬರಲು ಬಹಳೇ ಸಹಾಯ ಮಾಡಿದ ’ನವೀ’ಗೆ , ಎಷ್ಟೋ ಸಲ ನನ್ನನ್ನು ಬಚಾವ್ ಮಾಡಲು ನನ್ನ ತಪ್ಪುಗಳನ್ನು ತನ್ನದೆಂದುಕೊಂಡು ನನ್ನ ಮತ್ತು ಅವನ ಮನೆಗಳೆರಡರಲ್ಲೂ ಬೈಸಿಕೊಳ್ಳುತ್ತಿದ್ದ ’ನವೀ’ಯ ಬಳಿ ಕೂಡಾ ಶೈಕ್ಷಣಿಕ ಅಸೂಯೆಯಿಂದ ವರ್ತಿಸಿದೆನೇ ? ಅದು ಅವನು ನನಗೆ ತೋರಿಸುತ್ತಿದ್ದ ಸಹಾನುಭೂತಿಗೆ ತೋರಿದ ಪ್ರತಿಕಾರ ಎಂದು ಹೇಳಿಕೊಂಡರೂ( ನಾನು ಜಗತ್ತಿನಲ್ಲಿ ಏನೆನ್ನಾದರೂ ಸಹಿಸಬಲ್ಲೆ , ಸಹಾನುಭೂತಿಯನ್ನಲ್ಲ ). ಐ ಐ ಟಿ ಯ ಮೆಟೀರಿಯಲ್ಸ್ , ನಾನು ತರಿಸುತ್ತಿಲ್ಲ ಎಂದಿದ್ದು , ಮಿಗಿಲಾಗಿ ಪ್ರಣಮ್ಯಳ ಬಗೆಗಿನ ನವೀನನ ಪ್ರೇಮವನ್ನು ಬಹಿರಂಗ ಮಾಡಿ ’ನವೀ’ಯ image ಹಾಳು ಮಾಡಿ ಹಾಕಿದ್ದು . ಕೇವಲ ತಮಾಷೆಗೆಂದು ಬರೆದಿದ್ದ ಒಂದು ಪತ್ರ , ಯಾರು ಯಾರದೋ ಕೈ ತಲುಪಿ ಕೊನೆಗೆ ಪ್ರಾಂಶುಪಾಲರು  ’ideal ಹುಡುಗ’ ನವೀನನಿಗೆ ಛೀಮಾರಿ ಹಾಕುವ ಹಾಗಾಗಿ ನವೀನ ಖಿನ್ನತೆಗೆ ಹೋಗುವಷ್ಟರ ಮಟ್ಟಿಗೆ ಬೇಜಾರಾಗಿ ಇದ್ದಾಗಲೂ ಸತ್ಯ ಒಪ್ಪಿಕೊಳ್ಳದೇ ಹೋಗಿದ್ದು ಅಕ್ಷಮ್ಯವೇ.ಆದರೆ ಅದೇ ಸಿಟ್ಟಿನಲ್ಲಿ ಪ್ರಣಾಮ್ಯಳ ಬಳಿ ಹೋಗಿ ಒಂದು ದಿನ ನಿನ್ನನ್ನು ನೋಡಿಕೊಳ್ಳೂತ್ತೇನೆ ಎಂದು ಧಮಕಿ ಹಾಕಿದರೂ , ಮುಂದೆ ಅವಳು ನನಗೆ ಬಹಳ ಕ್ಲೋಸ್ ಆಗಿದ್ದು ನಿಜ. ನವೀನ ಐ.ಐ.ಟಿ. ಯಲ್ಲಿ ಉತ್ತೀರ್ಣನಾಗಿ , ನಾನು ಆಗದೇ ಹೋಗಿದ್ದು ನನ್ನ ’ಚತುರ್’ತನಕ್ಕೆ ಆದ ಶಿಕ್ಷೆಯೇ ? " ಎಂದು ತನ್ನನ್ನೇ ಕೇಳಿಕೊಂಡು  ನವೀನನ ಬಗೆಗಿನ ಅಧ್ಯಾಯವನ್ನು ಅಂತ್ಯ ಮಾಡುತ್ತಾನೆ. ಈ ವಿಷಯದಲ್ಲಿ ನಿಜವಾಗಿಯೂ ಪ್ರಭಂಜನನ ತಪ್ಪಿತ್ತೇ ಅಥವಾ ಇದು ಅವನ ಅಕಾರಣ ಪ್ರಾಯಶ್ಚಿತ್ತವೇ ?  ಸರಿಯಾದ ಮಾಹಿತಿಯಿಲ್ಲದೇ ಅವಸರದ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ ಎಂದು ಆ ವಿಷಯವನ್ನು ಅಲ್ಲಿಗೇ ಬಿಟ್ಟೆ.
ಅವನು ಮುಂದುವರಿಯುತ್ತಾ ಹೇಳುತ್ತಾನೆ" ಹೊಸ ನಗರ , ಹೊಸ ಜೀವನ , ಹೊಸ ಗೆಳೆಯರು , ಹೀಗೆ ಮೊದಲ ಸೆಮಿಸ್ಟರ್ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಕಳೆದು ಹೋಗಿತ್ತು. ಅತಿ ಶಿಸ್ತಿನಿಂದ ಬೆಳೆಸಿದವರಿಗೆ , ಸ್ವಾತಂತ್ರ್ಯ ಮತ್ತು ಅವಕಾಶ ಒಟ್ಟಿಗೆ ಸಿಕ್ಕರೆ ಏನಾಗುತ್ತದೋ ಅದೇ ಅಯಿತು . ಚಲನಚಿತ್ರಗಳು, ಇಂಟರ್ನೆಟ್ ,ವೀಡಿಯೋ ಗೇಮ್ ಗಳು, ಮೊದಲಿನಿಂದ ಇದ್ದ ಪಠ್ಯೇತರ ಸಾಹಿತ್ಯದ ಪುಸ್ತಕ ಓದುವಿಕೆ , ಎಲ್ಲನೂ ಸೇರಿ ಮೊದಲ ಸೆಮಿಸ್ಟರ್ ನ್ನು ಭಯಂಕರ ವೈಫಲ್ಯವಾಗಿಸಿಬಿಟ್ಟವು. ಅದಕ್ಕಿಂತಲೂ ಹೆಚ್ಚು ಕಳವಳಕಾರಿಯಾಗಿದ್ದು ಅಗುತ್ತಿದ್ದ ನೈತಿಕ ಅಧಃಪತನ ,ಗಾಂಧಿವಾದಿ ಮಂಜಪ್ಪಯ್ಯ ಜೈನ್ ರ ಮೊಮ್ಮಗ ಅಶ್ಲೀಲ ಚಿತ್ರಗಳನ್ನು ನೋಡಿದ ಎನ್ನುವಲ್ಲಿಗೆ ನೈತಿಕತೆ ಒಂದು ಪಾತಾಳವನ್ನು ಮುಟ್ಟಿ ಆಗಿತ್ತು. ಅದಕ್ಕೆ ಗೆಳೆಯರನ್ನೂ , ಇಂಟೆರ್ನೆಟ್ಟನ್ನೂ ದೂರಿದರೆ ಅದು ಕೇವಲ ತಪ್ಪು ಜಾರಿಸುವ ಪ್ರಯತ್ನವಾಗುತ್ತದೆಯಾದ್ದರಿಂದ ತಪ್ಪೆಲ್ಲ ಅಗತ್ಯವಾದಷ್ಟು ಗಟ್ಟಿಯಾಗಿಲ್ಲದ ನನ್ನ ಮನೋನಿರ್ಧಾರದ್ದೇ , ಎನ್ನುವುದು ಹೆಚ್ಚು ಸಮಂಜಸ. ಹೀಗಿರುವಾಗ ಅಪ್ಪ ನನ್ನ ಹುಟ್ಟಿದ ಹಬ್ಬದ ಉಡುಗೊರೆಯಾಗಿ ಅಜ್ಜ ಮಂಜಪ್ಪಯ್ಯರ ಡೈರಿಯನ್ನು ಕೊಟ್ಟಿದ್ದು. ಅದು ನಿಜವಾಗಿಯೂ ನನ್ನ ಬದುಕನ್ನೇ ಬದಲಾಯಿಸಿತು. ಸತ್ಯ , ನ್ಯಾಯ ನಿಷ್ಟೆಯ ಬಗ್ಗೆ ಅವರ ಅಭಿಪ್ರಾಯ ಎಂತಹವರನ್ನು ಬದಲಾಯಿಸುವಂತಿತ್ತು. ಒಂದೊಂದು ಸಲ ಓದಿದಾಗ ಒಂದೊಂದು ಅರ್ಥ ಕಂಡು , ನನ್ನ  ಬಗ್ಗೆ ನನಗೇ ಅಸಹ್ಯ ಮೂಡಲಾರಂಭಿಸಿತು.ಎಂದು ಹೀಗೆ ಎಷ್ಟೋ ಚಿಕ್ಕ ದೊಡ್ದ ವಿಷಯಗಳ ಬಗ್ಗೆ, ಅವುಗಳ ಸರಿ-ತಪ್ಪು ನಿಲುವುಗಳ ಬಗ್ಗೆ  ಪ್ರಭಂಜನನು ಚರ್ಚೆ ಮಾಡುತ್ತ ಹೋಗುತ್ತಾನೆ. ತನ್ನ ಪ್ರತಿಯೊಂದು ಕಾರ್ಯವನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ವಿಶ್ಲೇಷಣೆ ಮಾಡಿಕೊಳ್ಳುತ್ತಾನೆ. ಹೀಗೆಯೇ ಮುಂದಿನ ಮೂರು ಸೆಮಿಸ್ಟರ್ ಗಳ ಮತ್ತೊಂದಿಷ್ಟು ಅಷ್ಟೇನೂ ,ಮಹತ್ವದ್ದು ಎನಿಸದಂತಹ ಘಟನೆಗಳು , ಒಂದಿಷ್ಟು ಅನುಭವಗಳು ,ಒಂದಿಷ್ಟು ಉಚಿತ ಉಪದೇಶಗಳು,ಡೈರಿಯ ಉಳಿದ ಹಾಳೆಗಳನ್ನು ತುಂಬುತ್ತದೆ.  ಕೊನೆಯ ಲಿಖಿತ ಪುಟದಲ್ಲಿದ್ದ ಈ ಸಾಲುಗಳು ನನ್ನ ಗಮನ ಸೆಳೆದಿದ್ದಂತೂ ಹೌದು " ನಾವೆಷ್ಟೇ ಒಳ್ಳೆಯವರಾಗಿರಹೋದರೂ ,ಪ್ರಾಮಾಣಿಕವಾಗಿರಹೋದರೂ , ಕೆಲವೊಂದು ಸಲ ವಿಧಿಯೋ ,ಆಕಸ್ಮಿಕಗಳೋ ನಿಮ್ಮನ್ನು ಅತ್ಯಂತ ಕೀಳಾಗಿ ಬಿಂಬಿಸಬಹುದು. ಆಗ ಅಂತಹವುಗಳನ್ನು ನಿರ್ಲಕ್ಷಿಸಿ , ನಿಮ್ಮ ತತ್ವಗಳಿಗೆ ಅಂಟಿಕೊಂಡಿರಬೇಕು ಎಂದು ನಾನೆಲ್ಲೋ ಮೊದಲು ಬರೆದಿದ್ದ ನೆನಪು , ಆದರೆ ಅದೆಷ್ಟು ಕಷ್ಟ ಎಂಬುದರ ಅನುಭವ ಇವತ್ತಾಯ್ತು , ಈಗಷ್ಟೇ ನಿದ್ರೆಯಿಂದ ಎಚ್ಚರವಾದರೂ ಮತ್ತೆ ಈಗ ಬಹಳ ನಿದ್ದೆ ಬರುತ್ತಿದೆಯಾದ್ದರಿಂದ ಈ ಘಟನೆಯ ಬಗ್ಗೆ ನಾಳೆ ಬರೆಯುತ್ತೇನೆ" ತಾರೀಕನ್ನು ನೋಡಿದರೆ ಮೇ ೨೯-೨೦೧೦, ಎಂದರೆ ನಿನ್ನೆ.
ಯಾರೂ ನೋಡಲಾರರು ಎಂಬ ಧೈರ್ಯವು ಎಂತಹ ತಪ್ಪನ್ನೂ ಮಾಡಲು ಪ್ರೋತ್ಸಾಹ ಕೊಡುತ್ತದೆ ಎಂಬುದೆಲ್ಲ ನಿಜವೆನಿಸಿ ನಾನೂ ಒಂದು ಡೈರಿಯನ್ನು ಬರೆಯಬೇಕೆಂಬ ಖಚಿತ ನಿರ್ಧಾರ ಮಾಡಿದ್ದೆ. ಆದರೆ ಇವಾವುವೂ ಬ್ಯಾಗ್ ನ್ನು ಹಿಂತಿರುಗಿಸುವ ನನ್ನ ಉದ್ದೇಶಕ್ಕೆ ಸಹಾಯಕಾರಿಯಾಗಲಿಲ್ಲವಾಗಿ ಮಾರನೆ ದಿನ ಕಾಲೇಜಿಗೆ ಫೋನು ಮಾಡಿ USN  ಉಪಯೋಗಿಸುವುದೇ ಅನಿವಾರ್ಯವಾಯಿತು.ಕಾಲೇಜಿನಿಂದ ವಿಳಾಸ ಮತ್ತು ಮನೆಯ ದೂರವಾಣಿ ಸಂಖ್ಯೆ ಪಡೆದು , ಮನೆಗೆ ಕರೆ ಮಾಡಿದರೆ ಅವನ ಅಮ್ಮ "ಅವನು ಇವತ್ತು ಬೆಳಿಗ್ಗೆಯಷ್ಟೇ ದಿಲ್ಲಿಗೆ ಹೊದ, ಅದೇನೋ internship ಅಂತೆ. ಹಾಂ, ಒಂದು ಬ್ಯಾಗ್ ನ್ನು ರೈಲಿನಲ್ಲಿ ಕಳೆದುಕೊಂಡನಂತೆ , ಬಹಳೇ ಪೇಚಾಡಿಕೊಂಡ ,ಅದೇನೇನೋ ಮಹತ್ವದ documents ಎಲ್ಲಾ ಇತ್ತಂತೆ " , ಎಂದು ಹೇಳಿ ಅವನ ಮೊಬೈಲ್ ಸಂಖ್ಯೆಯನ್ನು ಕೊಟ್ಟರು. ಪ್ರಭಂಜನ್ ಗೆ ಕರೆ ಮಾಡಿದರೆ ನಾನೆಣಿಸಿದ್ದಕ್ಕಿಂತ ಬಹಳ ಶಾಂತವಾಗಿದ್ದ ," ಸರಿ ಹಾಗಾದರೆ , ನೀವು ಡೈರಿಯನ್ನು ಓದಿಲ್ಲ ಎಂದು ನಾನು ನಂಬಲಾರೆ. ಎಂತಿದ್ದರೂ ನೀವು ಡೈರಿಯನ್ನು ಓದಿಯಾಗಿದೆ ,ಅದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ . ನಾನು ಬರುವುದು ಆಗಸ್ಟ್ ಪ್ರಾರಂಭದಲ್ಲಿ , ಕಾಲೇಜು ಆರಂಭವಾಗುವುದಕ್ಕಿಂತ ಒಂದು ವಾರ ಮೊದಲು .,ನಾನೇ ಬೆಳಗಾವಿಗೆ ಬರುತ್ತೇನೆ ತೆಗೆದುಕೊಂಡು ಹೋಗಲು. ನಮ್ಮ ಮನೆಗೆ ಬ್ಯಾಗ್ ನ್ನು ಕೊಟ್ಟರೆ ಅವರು ಓದುವ ಅವಕಾಶ ಇದೆಯಾದ್ದರಿಂದ ಅದು ನಿಮ್ಮ ಬಳಿಯಿರುವುದೇ ಸುರಕ್ಷಿತ . ನಿಜವೆಂದರೆ  ಡೈರಿ ಬರೆಯಲು ಪ್ರಾರಂಭಿಸಿದ್ದೇ ಅವರ ಕಲ್ಪನೆಯ ’ಪ್ರಭಂಜನ’ನ ಮಟ್ಟಕ್ಕೆ ನಾನು ನನ್ನನ್ನು ಪುನರುತ್ಥಾನ ಮಾಡಿಕೊಳ್ಳಲಿಕ್ಕೆ, .ಅಷ್ಟೇ. ಮುಂದೊಂದು ದಿನ ನಾನೇ ಹೇಳುತ್ತೇನೆ . ಏಕೆಂದರೆ ’ನನ್ನ ಮಗ ಹಿಂದೊಂದು ದಿನ ಹಾಳಾಗಿದ್ದನಾದರೂ ಮತ್ತೆ ಅವನಷ್ಟಕ್ಕೆ ಅವನೇ ಸ್ಫೂರ್ತಿ ಪಡೆದು ಸರಿಯಾದ ಎಂಬುದು ಎಷ್ಟು ಸಮಾಧಾನ ಕೊಡುತ್ತದೆಯೋ , ಅಷ್ಟೇ ಚಿಂತೆಯನ್ನು ನನ್ನ ಮಗ ಈಗ ದಾರಿ ತಪ್ಪಿದ್ದಾನೆ ಎಂಬುದು ಕೊಡುತ್ತದೆ ’ "  ಎಂದು ಒಂದೇ ಉಸಿರಿನಲ್ಲಿ ಹೇಳಿ ನಿಲ್ಲಿಸಿದ . ನಾನು ಕೇಳಬೇಕೆಂದಿದ್ದನ್ನೆಲ್ಲ ಕೇವಲ ಧ್ವನಿ ಬದಲಾವಣೆಯಿಂದಷ್ಟಲೇ ಗುರುತಿಸಿ , ಅದಕ್ಕೆ ತಕ್ಕ ಸಮಜಾಯಿಷಿ ಕೊಟ್ಟ ಪ್ರಭಂಜನನ ಬಗ್ಗೆ ಮೆಚ್ಚುಗೆ ಮೂಡಿದ್ದು ಸಹಜವೇ.

ಒಂದೂವರೆ ತಿಂಗಳ ನಂತರ...
ನನ್ನ ಜೀವನದ ದೊಡ್ಡ ಆಶ್ಚರ್ಯ ಆಗಿದ್ದು ಬೆಳಗಾವಿಯ ರೈಲ್ವೇ ನಿಲ್ದಾಣದಲ್ಲಿ , ಪ್ರಭಂಜನನನ್ನು ನೋಡಿದಾಗ. ಊಹೆಗಳೂ ಮುಟ್ಟದಷ್ಟು ಚಿಕ್ಕದಾಗಿತ್ತು ಜಗತ್ತು , ಪ್ರಭಂಜನ ಎದುರು ಬಂದು ನಿಂತಾಗ ಭೂಮಿ ಬಾಯಿ ಬಿಡಬಾರದೇ ಎನಿಸಿದ್ದು ಅವನ ಡೈರಿಯನ್ನು ಓದಿದ್ದ ನಾಚಿಕೆಯಿಂದಲ್ಲ . ಅರ್ಧ ಸತ್ತ ಒಂದು ಕಾಲು , ಕ್ಷಣಕ್ಷಣಕ್ಕೂ ಸರಿ ಪಡಿಸಿಕೊಳ್ಳುತ್ತಿದ್ದ ಕನ್ನಡಕ ,ನಿಮ್ಮ ಸಹಾನುಭೂತಿ ನೀವೆ ಇಟ್ಟುಕೊಳ್ಳಿ ಎಂದು ಕಣ್ಣಿನಲ್ಲೇ ಹೇಳಿಕೊಂಡು ಬರುವ ಈ ಪ್ರಭಂಜನ ಹಾಗೂ ಅಂದು ರಾತ್ರಿ ರೈಲಿನಲ್ಲಿ  ವಿನಾಕಾರಣ ನನ್ನ ಕೈಯಲ್ಲಿ ಬೈಸಿಕೊಂಡ ಆ ಕುಂಟು ಹುಡುಗ ಇಬ್ಬರೂ ಒಬ್ಬರೇ ಆದ್ದರಿಂದ . ಸಹಾನುಭೂತಿಯ ಬಗೆಗಿನ ಅವನ ಕೋಪ , ನವೀನನ ಕೊಡುತ್ತಿದ್ದ ಡ್ರಾಪ್ ನ ಮಹತ್ವ, ಅವನು ಬರೆದ ಕೊನೆಯ ದಿನದ ಅನುಭವ ಎಲ್ಲವೂ ಈಗ ಒಂದು ಸ್ಪಷ್ಟವಾದ ರೂಪ ಪಡೆಯತೊಡಗಿದವು.ನಾನೇನು ಮಾತನಾಡಲಿ ಎಂದು ತಡವರಿಸುತ್ತಿರುವಾಗ ಅವನೇ ಮಾತನಾಡತೊಡಗಿಡದ " ನೀವೇನೂ ಸಂಕೋಚಪಟ್ಟುಕೊಳ್ಳಬೇಡಿ , ಆ ದಿನ ನಿಮ್ಮ ಪರಿಸ್ಥಿತಿಯಲ್ಲಿ ನಾನಿದ್ದು , ನಾನು ಒಬ್ಬ ಹುಡುಗಿಯಾಗಿದ್ದರೂ ನೀವು ಮಾಡಿದ್ದನ್ನೇ ,ಮಾಡುತ್ತಿದ್ದೆನೇನೋ! ನೀವು ನನ್ನ ಅಳಲನ್ನು ಓದಿದ್ದರಿಂದ ನಿಮಗೆ ಮತ್ತೂ ಮುಜುಗರವೆನ್ನಿಸಬಹುದಷ್ಟೇ, ಈ ಡೈರಿಯ ವಿಷಯ ನಮ್ಮಿಬ್ಬರಲ್ಲಿಯೇ ಇರಲಿ , ಯಾರಿಗೂ ದಯವಿಟ್ಟು ಹೇಳಬೇಡಿ " ಎಂದು ತಿರಸ್ಕರಿಸಲಾಗದಂತೆ ಬೇಡಿಕೆಯನ್ನಿಟ್ಟು ಮಾತು ಮರೆತವನಂತೆ ನಿಂತ . ಮನಸ್ಸನ್ನು ಅರಿಯುವ ಅವನ ಶಕ್ತಿಗೆ ಬೆರಗಾಗಿ ,ಇಡೀ ಒಂದು ವರ್ಷದ ಡೈರಿಯಲ್ಲಿ  ಒಂದು ಸಲವೂ ತನ್ನ ಅಂಗವೈಕಲ್ಯದ ಬಗ್ಗೆ ಪ್ರಸ್ತಾಪಿಸದ ಅವನ ಆತ್ಮಗೌರವದ ಬಗ್ಗೆ ಪ್ರಶಂಸೆ ಮೂಡಿ ಮಾತನಾಡಬೇಕೆನ್ನೆಸಿದರೂ ಮಾತನಾಡಲಾರದೇ ಹೋದೆ. ನಾನು ಗೊಂದಲದಲ್ಲಿ ಮಾತನಾಡದಿದ್ದನ್ನು ನಿರಾಸಕ್ತಿ ಎಂದು ಅಪಾರ್ಥ ಮಾಡಿಕೊಂಡನೋ , ಅವನಿಗೂ ಮಾತಾಡಲು ಏನೂ ಸಿಗಲಿಲ್ಲವೋ ಈ ಭೇಟಿ ಇಷ್ಟಕ್ಕೇ ಸಾಕು ಎನ್ನುವಂತೆ " ಧನ್ಯವಾದಗಳು , ಕಳೆದು ಹೋಯ್ತೆಂದುಕೊಂಡಿದ್ದ ಅತಿ ಮಹತ್ವದ ಈ ಬ್ಯಾಗ್ ನ್ನು ಸಿಗುವಂತೆ ಮಾಡಿದ್ದಕ್ಕೆ" ಎಂದು ಹೇಳಿ , ನಾನು ತಲೆ ಅಲ್ಲಾಡಿಸಿದ್ದನ್ನು ನೋಡಿದ ಮೇಲೆ , ಮತ್ತೆ ಹಿಂತಿರುಗಿ ನೋಡದೇ ಹೋದ.
                                                                                                                         
ಟಿಪ್ಪಣಿ :

ಇದೊಂದು ಕಾರಣವಾಗಬಹುದೆಂದು ನಾನು ಭಾವಿಸೆನಾದರೂ ಈ ಕಥೆಯನ್ನು ಬರೆಯುವಾಗ ಬೇರೊಂದು ಐಡಿಯಾ ಬಂದು ಅದು ಈ ಕಥೆಯ ಮೇಲೆ ಒಂದಿಷ್ಟು ಪ್ರಭಾವ ಬೀರಿದ್ದರಿಂದ ಸ್ವಲ್ಪ ಅಪೂರ್ಣ ಎನಿಸಬಹುದೇ ಈ ಕಥೆ ? ನೀವೇ ತೀರ್ಪುಗಾರರು.


Saturday, 20 August 2011

ಒಂದು ಡೈರಿಯ ಕಥೆ


ಒಂದು ಕಥೆ ; ಪೂರ್ತಿಯಾಗಿ ಒಂದೇ ಸಲಕ್ಕೆ ಬರೆದರೆ ಬಹಳ ದೊಡ್ಡದಾಗಬಹುದೆಂಬ ಹೆದರಿಕೆಯಿಂದ ಎರಡು ಭಾಗವಾಗಿ ಅತಿಚಿಕ್ಕ ಧಾರಾವಾಹಿಯಾಗಿ ಪೋಸ್ಟಿಸುತ್ತಿದ್ದೇನೆ. 

ಮೊದಲ ಭಾಗ : 

ಇಂದಿಗೂ ನೆನಪಿದೆ . ಅದು ಶನಿವಾರ ೨೯ನೇ ತಾರಿಕು . ಮಧ್ಯಾಹ್ನವಷ್ಟೇ ಸೆಮಿಸ್ಟರ್ ಪರೀಕ್ಷೆ ಮುಗಿದಿತ್ತು., ಬೆಂಗಳೂರಿನ ಬಿಂಕದ ಬಲೆಯಿಂದ ತಪ್ಪಿಸಿಕೊಂಡು , ಬೆಳಗಾವಿಯೆಂಬ ಸ್ವಚ್ಛಂದ ಆಕಾಶದಲ್ಲಿಹಾರಲು ಮನವು ತವಕಿಸುತ್ತಿತ್ತು. ಬೇರೆಲ್ಲೂ ಜಾಗ ಸಿಗದೇ , ಬಹುತೇಕ ತುಂಬಿದ್ದ ಸಾಮಾನ್ಯ ಬೋಗಿಯಲ್ಲಿ ಜಾಗ ಹಿಡಿಯುವಲ್ಲಿ ನಾನು ನೃಪತುಂಗ (ನನ್ನ ದೊಡ್ಡಮ್ಮನ ಮಗ , ನನಗಿಂತ ಒಂದು ವರ್ಷಕ್ಕೆ ದೊಡ್ಡವನು , ನಮ್ಮದೇ ಕಾಲೇಜು) ಇಬ್ಬರೂ ಸುಸ್ತಾಗಿ ಹೋಗಿದ್ದೆವು. ನಮ್ಮ ಅಕ್ಕ-ಪಕ್ಕದಲ್ಲಿ ಬರೀ ಗಂಡು ಹುಡುಗರೇ ಇದ್ದದ್ದನ್ನು ಗಮನಿಸಿದಾಗ ಇರಿಸು-ಮುರಿಸಾಗಿದ್ದು ನಿಜ. ಆದರೆ ಅವರಲ್ಲಿಬ್ಬರು ನೃಪತುಂಗನ ಶಾಲಾ ಸಹಪಾಠಿಗಳೆಂದೂ , ಅವರ ಸಹಾಯದಿಂದಲೇ ನಮಗೇ ಸೀಟು ಸಿಕ್ಕಿದಂದು ನೃಪತುಂಗನಿಂದ ತಿಳಿದು ಬಂದಾಗ ಕೃತಜ್ಞತೆ ಮೂಡಿತ್ತು . ಹಿಂದಿನ ದಿನ night out  ಮಾಡಿದ್ದರಿಂದಲೇ ಏನೋ , ಎಂದೂ ರೈಲಿನಲ್ಲಿ ನಿದ್ದೆ ಮಾಡದ ನನಗೂ ಸ್ವಲ್ಪ ಕಣ್ಣು ಮುಚ್ಚಿ ಬಂದಂತಾಗುತ್ತಿತ್ತು.ಹೀಗೆ ತೂಕಡಿಸುತ್ತಿರುವಾಗ ಕಾಲ ಮೇಲೆ ಏನೋ ಯಮಭಾರದಂತದ್ದು ಬಿದ್ದಂತಾಯ್ತು. ಕಣ್ಣುಜ್ಜಿ ನೋಡಿದರೆ ಎದುರು ಬದಿಯಲ್ಲಿ ಕುಳಿತಿದ್ದ ಹುಡುಗರಲ್ಲಿ ಒಬ್ಬ ಕೆಳಗೆ ಬಿದ್ದುಕೊಂಡಿದ್ದ. ನನ್ನ ಕಾಲಗಂಟಿನ ಮೇಲೆ ಬಿದ್ದದ್ದು ಅವನ ತಲೆ ಎಂದು ತಿಳಿದು ಭಯಂಕರ ಸಿಟ್ಟು ಬಂತು.
"ರೀ , ಮಿಸ್ಟರ್, ವಿದ್ಯಾವಂತರ ತರಹ ಕಾಣ್ತೀರಾ, ಆದರೂ ಹೀಗಡ್ತೀರಾ, ಹೆಂಗಸರ ಜೊತೆ ಹೇಗೆ behave ಮಾಡಬೇಕು ಅಂತ ಗೊತ್ತಗಲ್ವಾ, ಛೀ........ " ಇನ್ನೂ ಏನೇನೋ ಬೈದುಬಿಡುತ್ತಿದ್ದೆನೇನೋ, ನೃಪತುಂಗ ತಡೆಯದೇ ಹೋಗಿದ್ದರೆ , ಕೆಳಗೆ ಬಿದ್ದಾತನ ಜೀವವಿಲ್ಲದ ಒಂದು ಕಾಲನ್ನು ನೋಡದೇ ಇದ್ದಿದ್ದರೆ. ಒಂದು ಕಾಲಿನ ಮೊಣಕಾಲಿನ ಕೆಳಗಿನ ಭಾಗ ಜೀವವನ್ನೇ ಕಳೆದುಕೊಂಡಿತ್ತು. . ಪಾಪ ಎನ್ನಿಸಿತಾದರೂ "sorry" ಎಂದು ಕೇಳಲು ಅಹಂ ಅಡ್ಡ ಬಂದು ಸುಮ್ಮನಾಗಿ , ಸರಿದು ಕಿಟಕಿಯಾಚೆಗಿನ ಕತ್ತಲನ್ನು ದಿಟ್ಟಿಸುತ್ತಾ ಕುಳಿತೆ.
ಹಾಗೇ ಕುಳಿತವಳಿಗೆ ಬೆಳಿಗ್ಗೆ ನೃಪತುಂಗ ಹುಬ್ಬಳ್ಳಿಯಲ್ಲಿ ಇಳಿಯುವ ಮೊದಲು ಎಬ್ಬಿಸಿದಾಗಲೇ ಎಚ್ಚರವಾಗಿದ್ದು. ನೃಪತುಂಗನಿಗೆ bye  ಮಾಡಿ ನನ್ನ ಸೀಟಿಗೆ ಬಂದು ಕೂರುವುದರೊಳಗೆ ಅವನದ್ದೇ ಫೊನು " ಏ ಅನಾಮಿಕಾ , ನಾನು ರೈಲಿನಲ್ಲೇ ಒಂದು ಬ್ಯಾಗ್ ಬಿಟ್ಟೆ , ಕಪ್ಪು ಬಣ್ಣದ್ದು . ಒಂದು ಸಲ ನೋಡಿಬಿಡು . " ಹೌದು , ನನ್ನ ಸೀಟಿನ ಮುಂದೇ ಇತ್ತು , ಅದನ್ನು ತೆಗೆದು ನನ್ನ ಸೀಟಿನ ಕೆಳಗಿದ್ದ ನನ್ನ ಲಗ್ಗೇಜಿನ ಜೊತೆ ಸೇರಿಸಿಟ್ಟೆ. ಅಕ್ಕ ಪಕ್ಕ , ಎದುರಿಗಿದ್ದ ಹುಡುಗರೆಲ್ಲಾ ಹುಬ್ಬಳ್ಳಿಯಲ್ಲಿಯೇ ಇಳಿದಿದ್ದರು. ಸ್ವಲ್ಪ ಹೊತ್ತಿಗೇ ಪಕ್ಕದ ಬೋಗಿಯಿಂದ ಮತ್ತೊಬ್ಬ ಬಂದು ಒಂದು ಕಪ್ಪು ಬ್ಯಾಗ್ ನ್ನು ಹುಡುಕತೊಡಗಿದಾಗ ನನಗಾಶ್ಚರ್ಯ, ಅವನನ್ನುಕೇಳಿಯೇ ಬಿಟ್ಟೆ .
" ನೀವು ಹುಡುಕುತ್ತಿರುವ ಬ್ಯಾಗ್ ನೃಪತುಂಗ ನದ್ದೇ? "
" ಅಲ್ಲ, ನನ್ನ ಫ್ರೆಂಡ್ ಪ್ರಭಂಜನನದ್ದು . wildcraft ಬ್ಯಾಗ್. ಅವನು ಹುಬ್ಬಳ್ಳಿಯಲ್ಲಿ ಇಳಿದುಕೊಂಡ. ನಾನು ಬೆಳಗಾವಿಗೆ ಹೋಗುವವನಿದ್ದುದರಿಂದ ಹುಡುಕುತ್ತೇನೆಎಂದು ಒಪ್ಪಿಕೊಂಡೆ" ಎಂದು ಹೇಳಿ, " ನೀವೇನಾದರೂ ನೋಡಿದಿರಾ ?" ಎಂದು ಕೇಳಿದ .
ಸುತ್ತ ಮುತ್ತ ಕಣ್ಣು ಹಾಯಿಸಿ ಎಲ್ಲೂ ಕಾಣದಾದಾಗ " ನೋಡಿಲ್ಲವಲ್ಲಾ" ಎಂದೆ.
ಬೆಳಗಾವಿಯಲ್ಲಿ ರೈಲು ನಿತ್ತು ಇನ್ನೇನು ಇಳಿಯಬೇಕು ಎನ್ನುವಷ್ಟರ ಹೊತ್ತಿಗೆ ನೃಪತುಂಗನ ಮತ್ತೊಂದು ಕಾಲ್ " ಸಿಕ್ತೇನೇ ನನ್ನ ಬ್ಯಾಗ್ , diesel  ಅಂತ ಬರಕಂಡಿದೆ ನೋಡು,...." ಏನೇನೋ ಹೇಳುತ್ತಿದ್ದ . ನಾನು ತೆಗೆದಿರಿಸಿಕೊಂಡಿದ್ದನ್ನು ನೋಡಿದರೆ wildcraft , ಆದ ಪ್ರಮಾದದ ಅರಿವಾಯ್ತು, ಆ ಹುಡುಗ ಕೇಳಿದಾಗ ಒಂದು ಸಲ ನೋಡುವ ವ್ಯವಧಾನವನ್ನು ತೋರದೇ " ನೋಡಿಲ್ಲ" ಎಂದ ತಪ್ಪಿಗೆ ಮತ್ತೊಂದು ಬ್ಯಾಗನ್ನೂ ಹೊತ್ತು ಮನೆಗೆ ಬಂದೆ.
ಮನೆಗೆ ಬಂದರೆ ರೈಲಿನ ಕಥೆಯ ಸುಳಿವೂ ನೆನಪಿರದ ಹಾಗೆ ಅಪ್ಪ ಅಮ್ಮನನ್ನು ಭೇಟಿಯಾದ ಸಂಭ್ರಮದಲ್ಲಿ ಮುಳುಗಿದೆ. ಮಧ್ಯಾಹ್ನ ಊಟವಾದ ನಂತರ ಲಘು ನಿದ್ದೆ ಮಾಡಲು ಹೋದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಅದೇ wildcraft ಬ್ಯಾಗ್ ತನ್ನ ಅಸ್ತಿತ್ವವನ್ನು ಜ್ಞಾಪಿಸಿತು.ತೆಗೆಯಲೇ , ಬೇಡವೇ ಎಂಬ ಗೊಂದಲದಲ್ಲಿಯೇ ಬ್ಯಾಗ್ ನ್ನು ತೆರೆದೆ. ಒಂದು ಟವೆಲ್, ಒಂದು shaving set , ಐದಾರು english ಪುಸ್ತಕಗಳು , ಯಾವುವೂ ನನಗೆ ಆ ಬ್ಯಾಗ್ ನ್ನು ಹಿಂತಿರುಗಿಸುವಲ್ಲಿ ಸಹಾಯ ಮಾಡುವಂತಹ ಸಾಮಾಗ್ರಿಗಳಿರಲಿಲ್ಲ . ಮತ್ತೆ ನೋಡಿದರೆ ಆ ಪುಸ್ತಕಗಳ ಅಡಿಯಲ್ಲಿ ನಲುಗಿ ಹೋಗಿದ್ದರೂ ತನ್ನದೇ ಅಸ್ತಿತ್ವ ಕಾಯ್ದುಕೊಂಡಿರುವಂತೆ ಒಂದು ಡೈರಿ ಇತ್ತು . ಅದೇ ಈ ಕಥೆಯ ಜೀವಾಳ.
ಇನ್ನೊಬ್ಬರ ಡೈರಿಯನ್ನು ಓದಬಾರದೆಂಬ ಪ್ರಜ್ಞೆಯನ್ನು ಮೀರಿ ಕುತೂಹಲ ಬೆಳೆದು ನಿಂತಾಗ , ಆ ಪ್ರಜ್ಞೆಯ ಕೆನ್ನೆಗೆ ಹೊಡೆಯುವಂತೆ ಅವನ ಡೈರಿಯ ಮೊದಲ ಪುಟದಲ್ಲೇ " ಇದು ಒಬ್ಬ ಭಾವುಕನ ಖಾಸಗಿ ಪ್ರದೇಶ , ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ. " ಎಂದು ಬರೆದಿತ್ತು.ಮತ್ತೆ ಇದನ್ನು ಓದುವುದರಿಂದ ಯಾವ ರೀತಿಯಿಂದಲಾದರೂ ಬ್ಯಾಗ್ ನ್ನು ಹಿಂತಿರುಗಿಸಲು ಸಹಾಯ ಆಗಬಹುದೆಂದು ಸುಳ್ಳು ಸುಳ್ಳೇ ನನಗೆ ನಾನೇ ಕಾರಣ  ಕೊಟ್ಟುಕೊಂಡು ,ಓದಲಾರಂಭಿಸಿದೆ.   ಹೆಸರು ಮತ್ತು USN ಬಿಟ್ಟರೆ ಮತ್ತಾವ ವೈಯಕ್ತಿಕ ಮಾಹಿತಿಯೂ ಮೊದಲ ಪುಟಗಳಲ್ಲಿ ಬರೆದಿರಲಿಲ್ಲ . ( ನಮ್ಮದೇ ಕಾಲೇಜು , ೪ನೇ ಸೆಮೆಸ್ಟೆರ್ ಎಂದು ತಿಳಿದಿದ್ದು USNನಿಂದ ) ಬೇರೆ ದಾರಿಯಿಲ್ಲದೇ ಮಾರನೆಯೆ ದಿನ ಕಾಲೇಜಿಗೆ ಫೊನ್ ಮಾಡಿ ಕೇಳುವುದೆಂದು ನಿರ್ಧರಿಸಿ ಡೈರಿಯನ್ನು ಮಡಚಿಟ್ಟೆನಾದರೂ ಮತ್ತೆ ಕದ್ದು ಓದುವ ಮನಸಾಗಿ ತೆಗೆದು ಓದಲು ಕುಳಿತೆ.
ಡೈರಿ ಪ್ರಾರಂಭವಾಗುವುದು ೧-೬-೨೦೦೯ರಿಂದ , ಅಂದರೆ ಪ್ರಭಂಜನರ ಬ್ಯಾಚಿನ ಮೊದಲ ಬೇಸಿಗೆ ರಜೆ ಸುರುವಾದಂದಿನಿಂದ. " ಇದೇನೂ, ಈ ಡೈರಿ ಬರೆಯುವುದೇನೂ  ಎಂದು ಇಲ್ಲದ ಬಯಕೆ ಮೂಡಿ , ಆ ಕ್ಷಣದಲ್ಲಿ ದಾಖಲಿಸಲು ಆರಂಭಿಸಿದ ಹವ್ಯಾಸವಲ್ಲ , ರೂಢಿಸಿಕೊಳ್ಳಬೇಕೆಂದು ಬಹಳೇ ಪ್ರಯತ್ನ ಪಟ್ಟು , ಹಠ ಕಟ್ಟಿ ಕುಳಿತು ಸುರು ಮಾಡಿದ ಅಭ್ಯಾಸ. ಸುಳ್ಳು ಹೇಳುವುದು ಎಷ್ಟು ತಪ್ಪೋ , ಸತ್ಯವನ್ನು ಪೂರ್ತಿಯಾಗಿ ಹೇಳದೇ ಹೋಗುವುದೂ ಅಷ್ಟೇ ಪಾಪ, "ಅಶ್ವತ್ಥಾಮೋ ಹತಃ ಕುಂಜರಃ" ಎಂದ ಹಾಗೆ . ಸಾಮಾನ್ಯ ಮಾತ್ರದವರು ಸತ್ಯಕ್ಕೆ , ಪ್ರಾಮಾಣಿಕತೆಗೆ ತಪ್ಪಿ ನಡೆಯಬಾರದೆಂದರೆ ಹೆಜ್ಜೆ ಹೆಜ್ಜೆಗೂ ನಮ್ಮನ್ನು ತಿದ್ದುವ ಒಂದು ಶಕ್ತಿ ಬೇಕು , ಒಂದು ಸಾಕ್ಷಿ ಬೇಕು, ನಾನು  ಮನೆಯಲ್ಲಿದ್ದಾಗ ಅಕ್ಕ  ಉತ್ಪಲಾ ಇದ್ದ ಹಾಗೆ. ಆಸ್ತಿಕರಿಗೆ ದೇವರು ನೋಡುತ್ತಾನೆಂಬ ಹೆದರಿಕೆ ಇರುವ ಹಾಗೆ. ಅದೇ ಕಾರಣಕ್ಕೆ ನಾನು ಡೈರಿ ಬರೆಯಲಾರಂಭಿಸಿದ್ದು " ಎಂದು ಕಾರಣ ಕೊಟ್ಟುಕೊಳ್ಳುತ್ತಾನೆ.
                                                                                                                             ಮುಂದುವರಿಯುವುದು ...