Friday, 17 February 2012

ಉಸಿರುಗಟ್ಟಿಸುವಂತೆ ಕಾಡದಿರು


ಉಸಿರುಗಟ್ಟಿಸುವಂತೆ ಕಾಡದಿರು
ಸತ್ತ ಪ್ರೀತಿಯ ಸೂತಕವೇ
ನನ್ನ ಜೀವವ ಬಾಳಗೊಡು
ಮತ್ತಲ್ಲೇ ಚಿಗಿದು ಬೆಳೆಯಲೆಣಿಸದಿರು
ಮರುಜನ್ಮ ಬಯಸುವ ಬಯಕೆಯೇ
ನನ್ನಷ್ಟಕ್ಕೆ ನನ್ನ ಬಿಡು.||ಪ||

ಸಾಲುಗನಸುಗಳ ಹುಚ್ಚು ಮನವೇ
ಕಂಡ ಕನಸು ಕಮರೋ ಮೊದಲೇ
ಮುಂದಿನ ಕನಸಿನ ಗೋಜೇಕೆ.
ಮರಳಿ ಅರಳಬಹುದೇ ಕನಸು
ಎಂದಿತು ಹೃದಯ; ನಿನ್ನ ಜೊತೆಗೆ
ನಿನ್ನದೇ ಇಂತಹ ಜೂಜೇಕೆ||೧||

ಮಾತಾಡಬೇಕಿದ್ದಾಗಲೇ ಉಸಿರೆತ್ತಲಿಲ್ಲ
ಈಗ ಮೌನವೇ ಹಿತವಲ್ಲವೇ
ಯಾರಿಗೆ ಬೇಕು ನಿನ್ನ ಕನವರಿಕೆ.
ಮೌನಕಿರುವ ಸಹನೆ ಮಾತಿಗೆಲ್ಲಿ
ಕಟ್ಟಿದಷ್ಟು ಗಟ್ಟಿಯಾಗುವ ಮೌನವೇ
ಬಿಕ್ಕಿ ಹರಿಯುವ ಬಯಕೆಯಾಕೆ||೨||

ಅನಾದಿ ನೋವಿನ ಬೇಗುದಿಯಿದು
ಕೊರಳಸೆರೆ ಹಿಡಿದರೇನಂತೆ
ಬತ್ತದೆ ಉಮ್ಮಳಿಸುವ ಚಿಲುಮೆ.
ತಡೆಯಲಾರದ ತಾಪವಿದು
ಕರಗಿಹೋಗಿಹವು ಕನಸುಗಳೆಲ್ಲಾ
ಮನದಲಿ ಉನ್ಮಾದದ ಕುಲುಮೆ.||೩||

Friday, 10 February 2012

ಪೂರ್ಣತೆಯ ಕಡೆಗೆ


ಬುಡಸೋರುವ ಕೊಡದಲ್ಲಿ, ಹಿಡಿದಿಡುವ ಆಸೆಯಲಿ
ತುದಿಕಾಣದ ಪಯಣವಿದು ತೀರಬಹುದೇ ದಾರಿ||ಪ||

ಬಗೆಹರಿಯದ ಮೌಲ್ಯವದು ’ಪೈ’ ಎಂದು
ಪರಿಧಿ ವ್ಯಾಸದ ಸರಳ ಅನುಪಾತವದು
ನಿಜಪೂರ್ಣಬೆಲೆಯ ಕಂಡುಹಿಡಿಯಲಾಗದೆ
ಎಷ್ಟು ಯುಗಗಳೋ ಅದರ ಹಿಂದೆ ಹಿಂದೆ
ಆದಿ ಗೂತ್ತಿಲ್ಲ ಈ ಪಯಣಕೆ, ಅಂತ್ಯ ಮೊದಲಿಲ್ಲ
ಮಸುಕು ಗಮ್ಯದ ಕಡೆಗೆ ಹುಡುಕಾಟವೇ ಎಲ್ಲ
ಸನಿಹವಾದರೂ ಎಂದೂ ನಿಖರವಲ್ಲ
ಪೂರ್ಣತೆಯ ಸುಳಿವಿಲ್ಲ, ಪ್ರಯತ್ನ ಬಿಟ್ಟಿಲ್ಲ
ತೀರದ ಹಠಕೆ ಅರ್ಪಣೆಯೇನು ಕಡಿಮೆಯ
ಹೋದೇವ ಹತ್ತಿರ, ಮುಟ್ಟೇವ ಗುರಿಯ?||೧|

ಅನಿಲ ಖನಿಜಗಳಷ್ಟೇ ಅವನಿಯಲಿದ್ದವಂತೆ
ಯಾವ ಮಾಯದಲ್ಲೋ ಜೀವ ಹುಟ್ಟಿತಂತೆ
ನಿರ್ಜೀವ ತಾ ಜೀವಕೆ ಜನ್ಮಕೊಟ್ಟಿತೇ ಇಲ್ಲಿ?
ದೇವ ತಾನೆಲ್ಲರನು ಸೃಷ್ಟಿಸಿದನೇ ಆದಿಯಲ್ಲಿ?
ನಿಜದ ಪೂರ್ಣತೆಗೆ ಅದೆಷ್ಟು ವ್ಯಾಖ್ಯಾನಗಳೋ
ಎಷ್ಟು ವಿಜ್ಞಾನಿ, ಅದೆಷ್ಟು ಕಾಲಜ್ಞಾನಿಗಳೋ
ಹಿಂದೆ ಬಿದ್ದವರು, ತಿರುಗಿ ವಿವರಿಸಹೋದವರು
ಸೃಷ್ಟಿನಿಗೂಢವ ಮುಟ್ಟಬಹುದೆ ಎಂದಿಗಾದರೂ||೨||

ಪ್ರೇಮ,  ದ್ವೇಷವಂತೆ, ಮತ್ತಿಷ್ಟು ಅರಿಷಡ್ವರ್ಗಗಳಂತೆ
ಮೂರು ದಿನದ ಬದುಕಿನಲಿ ನೂರೊಂದು ಭೇಧವಂತೆ
ತಪ್ಪೆಂದು ಗೊತ್ತಿದ್ದರೊ ಮೀರಲಾಗದ ದೌರ್ಬಲ್ಯವೇ
ತಿಳಿದರೂ ಅರಿಯದ ಮನಸ್ಸಿನ ಮೂಢತನವೇ
ಒಂದ ಮೆಟ್ಟಿದೆನೆಂದರೆ ತಲೆಯೆತ್ತಿದ್ದು ಮತ್ತೊಂದೆ
ಈ ಸಾಧನೆಯನಿಲ್ಲೇ ಸಾಧಿಸಿ ಮುಗಿಸಬಹುದೇ
ಪೂರ್ಣತೆಯೆಂಬ ಕಲ್ಪನೆಯೇ ಒಂದು ಭ್ರಮೆಯೇ
ದೂರದ ಮರೀಚಿಕೆಗೆ ತುಡಿವುದೇ ಬದುಕ ಮಾಯೆ||೩||

Friday, 3 February 2012

ನಾವು ಹುಡುಗರು



ಚಿತ್ರಕೃಪೆ: ಅಂತರ್ಜಾಲ.
  • "ಜೀವಕ್ಕೆ ಜೀವ ಎಂಬಂತೆ ಓಡಾಡಿಕೊಂಡಿದ್ದ ಇಬ್ಬರು ಗೆಳೆಯರು ಈಗ ಮುಖಕ್ಕೆ ಮುಖ ಕೊಟ್ಟೂ ಮಾತನಾಡುವುದಿಲ್ಲ. "
  • " ಊರೆಂಬ ಊರಿಗೇ ಮಾದರಿ ಗೆಳೆಯರೆನಿಸಿಕೊಂಡವರಿಬ್ಬರಿಗೆ ಈಗ ಎಣ್ಣೆ ಸೀಗೇಕಾಯಿ ಸಂಬಂಧ.ಒಬ್ಬರಿನ್ನೊಬ್ಬರ ಮುಖವನ್ನು ನೋಡಲೂ ಬಯಸುವುದಿಲ್ಲ."
ನಾವು ಹುಡುಗರು ಯಾವಾಗಲೂ ಹೀಗೆಯೇ, ಏನನ್ನೇ ಆದರೂ ಅತಿಯಾಗಿಯೇ ಮಾಡುತ್ತೇವೆ. ಸ್ನೇಹವಾದರೂ ಅಷ್ಟೇ, ದ್ವೇಷವಾದರೂ ಅಷ್ಟೇ, ಪ್ರೀತಿಯಾದರೂ ಅಷ್ಟೇ, ನಿರಾಸಕ್ತಿಯಾದರೂ ಅಷ್ಟೇ! ಅಗತ್ಯಕ್ಕಿಂತ ಹೆಚ್ಚಾಗಿಯೇ ಮಾಡುವ ಈ ಗುಣ ಇದೆಯಲ್ಲಾ, ಇದು ನಮಗೆ ಹುಟ್ಟಿನಿಂದಲೂ ಬಂದಿರುತ್ತದೆ. ಅದಕ್ಕೇ, ನಮ್ಮಲ್ಲಿ ಕೆಲವು ಗೆಳೆತನಗಳು ಬಾಳುವುದು, ಮರೆಯಲು ಸಾಧ್ಯವೇ ಇಲ್ಲವೇನೋ ಎಂಬಂತೆ ಉಳಿಯುವುದು, ಮತ್ತೆ ಕೆಲವು ನೆನಪಿನ ಹಂಗೇ ಇಲ್ಲದಂತೆ ಮರೆತು ಮಣ್ಣಾಗುವುದು. ನಮ್ಮ ಜಗತ್ತು ಹೀಗೇ, ನೇರಾನೇರ. ಮನಸ್ಸನ್ನು ಹುಳ್ಳಾಗಿಸಿಕೊಂಡು ಮುಖದಲ್ಲಿ ನಗೆ ತರಿಸುವುದು ಭಾಗಶಃ ಅಸಾಧ್ಯವೇ. ಹಾಗೆ ತಂದುಕೊಂಡರೂ ಅದು ಕೃತಕವಾದದ್ದು ಎಂಬುದು ಕ್ಷಣಮಾತ್ರದಲ್ಲಿ ವೇದ್ಯವಾಗುತ್ತದೆ. ಮನಸ್ಸಿಗೆ ಏನೆನ್ನಿಸುತ್ತದೋ ಅದನ್ನು ಹಾಗೇ ಕಕ್ಕಿ ಬಿಡುತ್ತೇವೆ ಎಂದೇನಲ್ಲ, ಆದರೆ ಸತ್ಯದ ಮುಖಕ್ಕೆ ಹೊಡೆವ ರೀತಿಯಲ್ಲಿ ಸುಳ್ಳು ಹೇಳುವಲ್ಲಿ ನಾವು ತಡವರಿಸುತ್ತೇವೆ. ಹಾಗೆಂದು ಎಲ್ಲರೂ ಸತ್ಯ ಹರಿಶ್ಚಂದ್ರರೆಂದು ಹೇಳುತ್ತಿದ್ದೀನೆಂದುತಪ್ಪು ತಿಳಿದುಕೊಳ್ಳಬೇಡಿ.

ಹಾಗೆಯೇ ನಮ್ಮಲ್ಲಿ ಈಗೋ, ಅಹಂಕಾರ ಎಲ್ಲವೂ ಹೆಚ್ಚು. ಜೀವಕ್ಕೆ ಜೀವ ಕೊಡುವ ಗೆಳೆಯನ ಬಳಿಯೇ ಏನೋ ಒಂದು ಚಿಕ್ಕ ಸಹಾಯವನ್ನಪೇಕ್ಷಿಸಲು ಮನ ಹಿಂಜರಿಯುತ್ತದೆ.‘ ಅಲ್ಲೇ ಒಂದು ಹಿಂಜರಿಕೆ ಹುಟ್ಟಿ, ಅದನ್ನು ಸ್ವಲ್ಪ ಕಷ್ಟಪಟ್ಟಾದರೂ ನಾವೇ ಮಾಡುವ ಮಾರ್ಗವನ್ನು ಹುಡುಕುತ್ತೇವೆ. ಅದಕ್ಕೇ ಒಬ್ಬ ಗೆಳೆಯ ಸಹಾಯ ಕೇಳಿದಾಗ ಅದಕ್ಕೆ ಅಷ್ಟು ಅರ್ಥವಿರುತ್ತದೆ.ಯಾವುದನ್ನೂ ಸಂಪೂರ್ಣವಾಗಿ ಬಾಯಿಬಿಟ್ಟು ಮಾತನಾಡದೇ ಸ್ಪಷ್ಟವಾಗಿ ಅರ್ಥಮಾಡಿಸಬಲ್ಲ ತಾಕತ್ತು ಎಲ್ಲರಿಗೂ ಇರುತ್ತದೆ. ಅದು ಬಹಳ ಅವಶ್ಯಕವೂ ಆಗುತ್ತದೆ. ಅದು ಅರ್ಥವಾಗದೇ ಹೋದಾಗ ಎಷ್ಟೋ ಮಾತುಗಳು ಹೇಳದೇ ಉಳಿಯಲ್ಪಡುತ್ತದೆ, ಎಷ್ಟೋ ಭಾವಗಳು ಹೇಳದೆಯೇ ಉಳಿದುಹೋಗಿಬಿಡುತ್ತವೆ. ಹಾಗೇ ಅವುಗಳು ಉಳಿದುಹೋದವಲ್ಲಾ ಎಂದೋ, ಸುಮ್ಮನೇ ಒಂದು ಮುತ್ತಿನಂತಹಾ ಗೆಳೆತನವನ್ನು ಕಳೆದುಕೊಂಡನಲ್ಲಾ ಎಂದೋ, ಜೀವನವಿಡೀ ಪರಿತಪಿಸುತ್ತಾರೆ, ಅಹಂಕಾರದ ಕಳೆದುಕೊಂಡ ಅದೊಂದು ಘಳಿಗೆಗಾಗಿ. ಹೊರಗೆ ಎಷ್ಟೇ ಕಠಿಣವಾಗಿ, ಉಕ್ಕಿನಂತೆ ಭಾವರಹಿತವಾಗಿಯೇ ಇದ್ದರೂ ,ಅಮಸ್ಸಿನ ಒಳಮೂಲೆಯಲ್ಲಿ ಹೇಳಲಾಗದ ನಾಚಿಕೆಯ, ಹಮ್ಮಿನ, ತೀವ್ರತೆಯ ಎಷ್ಟೋ ವಿಭಿನ್ನ ಭಾವಗಳು ಅವಿತು ಕಾಡುತ್ತಿರುತ್ತವೆ. ಹೊರಗೆ ಮೃದುವಾಗಿ ಕಾಣುವುದು ಪರಂಪರಾಗತವಾಗಿ ಬಂದ ಪುರುಷನೆಂಬ ಇಮೇಜ್ ಗೆ ಎಲ್ಲಿ ಹೊರತಾಗಿಬಿಡುತ್ತೀನೇನೋ ಎಂಬ ಅಂಜಿಕೆಯಲ್ಲಿ ಹುಡುಗ ಮತ್ತೂ ಗಟ್ಟಿಯಾಗುತ್ತ ಹೋಗುತ್ತಾನೆ.

ಚಿತ್ರಕೃಪೆ: ಅಂತರ್ಜಾಲ.
ಹೀಗೆ ಕಲ್ಲಿಗಿಂತ ಕಠಿಣವಾಗಿ ಕಾಣುವ ಹುಡುಗರು ಕರಗಿಹೋಗಲು ಸಾಧ್ಯವೇ ಇಲ್ಲ ಎಂದೇನಲ್ಲ, ಭಾಷೆಯೋ, ತಾಯ್ನಾಡೋ ಯಾವುದೋ ಒಂದು ವಿಷಯಕ್ಕೆ ಎಲ್ಲ ಹುಡುಗರು ಭಾವುಕವಾಗಿ ಅಂಟಿಕೊಂಡಿರುತ್ತಾರೆ. ಹೆತ್ತ ತಾಯಿಯ ಬಗ್ಗೆ ಯಾರಾದರೂ ಒಂದು ಮಾತನಾಡಿದರೂ ಮಗ ಸಹಿಸಲಾರ, ತನ್ನ ತಾಯಿಯದ್ದೇ ತಪ್ಪಿದ್ದರೂ. ಹುಡುಗ ಕರಗಲು ಇಷ್ಟೆಲ್ಲಾ ಆಗಲೇಬೇಕೆಂದೇನಿಲ್ಲ. ಒಂದು ಪ್ರೀತಿ ಹುಟ್ಟಿದರೂ ಸಾಕು, ಹುಡುಗ ಹುಡುಗಿಗಿಂತ ಮೃದುವಾಗಬಲ್ಲ. ಎಲ್ಲ ಹುಡುಗರಿಗೂ ಅವರ ಜೀವನದಲ್ಲಿ ಒಂದು ಬಾರಿಯಾದರೂ ನಿಜವಾದ ಪ್ರೀತಿಯ ಅನುಭವವಾಗುತ್ತದೆ*. ಹಾಗೆ ಆಗಿ, ಎಲ್ಲ ಸರಿಹೋದರೆ ಸರಿ, ಇಲ್ಲದೇ ಹೋದರೆ(ಹೀಗೇ ಆಗುವ ಅವಕಾಶವೇ ಹೆಚ್ಚಿರುವುದರಿಂದ ನಾನು ಈ ವಿಷಯವನ್ನು ಇಷ್ಟು ಸಾಮಾನ್ಯೀಕರಿಸುತ್ತಿದ್ದೇನೆ.) ಅವರ ಕಥೆ, ಅಧೋಗತಿ. ಕೂತಲ್ಲಿ ಕೊರಗುತ್ತಾರೆ, ನಿಂತಲ್ಲಿ ನಿಟ್ಟುಸಿರು ಬಿಡುತ್ತಾರೆ, ಮಲಗಿದಲ್ಲಿ ಮುಲುಗುತ್ತಾರೆ. ಮಾತನಾಡಲು ಹಿಂಜರಿಯುತ್ತಾರೆ, ಮೌನವನ್ನು ಇಷ್ಟಪಡುತ್ತಾರೆ. ನೆನಪುಗಳನ್ನು ಮರೆಯಲು ವರ್ತಮಾನದ ಜೊತೆಗೆ ಹೆಣಗಾಡುತ್ತಾರೆ. ಜೀವದ ಗೆಳೆಯನಿಗೆ ಮಾತ್ರ ತಿಳಿಯುವಂತೆ ಬಿಕ್ಕುವುದುಂಟು, ಆದರೆ ಅದರ ವಿಷಯ ಆ ಗೆಳೆಯ ಹೊರಗೆ ಹೇಳಲಾರ ಎಂಬ ನಂಬಿಕೆ ಬಂದರೆ ಮಾತ್ರ(ಅಳುವುದು ಹುಡುಗರ ಜಗತ್ತಿಗೆ ಹೊರತಾಗಿದ್ದು ಮತ್ತು ವರ್ಜ್ಯ, ಕಡ್ಡಾಯವಾಗಿ!). ಎಲ್ಲರಿಗೂ ಭಾಗಶಃ ಒಂದಲ್ಲಾ ಒಂದು ಸಲ ಇಂತಹ ಪ್ರಸಂಗ ಎದುರಾಗಿರುವುದರಿಂದ ಗೆಳೆಯನ ಕಂಬನಿಗೆ ಈ ಗೆಳೆಯ ಕರವಸ್ತ್ರವಾಗುತ್ತಾನೆ. ಗೆಳೆಯನೊಬ್ಬನಿಗೆ ಇಂತಹದೊಂದು ಆಸಕ್ತಿಯಿದೆ ಎಂದಾಗ ಸ್ವಂತ ತನ್ನದೇ ಬದುಕೇನೋ ಸಂಭ್ರಮಿಸುವ ನಾವು, ದುಃಖವನ್ನೂ ಸ್ವಂತ ನಮ್ಮದೇ ಎಂದುಕೊಳ್ಳುತ್ತೇವೆ, ಅದಕ್ಕಾಗಿ ನೋಯುತ್ತೇವೆ.

ಮತ್ತೊಂದು ವಿಷಯ ನಾನು ಹೇಳಬೇಕೆಂದುಕೊಂಡಿದ್ದು, ನಂಬಿಕೆ. ಹುಡುಗ ಇನ್ನೊಬ್ಬ ಗೆಳೆಯನನ್ನು ನಂಬುವ ಮೊದಲು ಸಿಕ್ಕಪಟ್ಟೆ ಸಮಯ ತೆಗೆದುಕೊಳ್ಳುತ್ತಾನೆ, ಅತಿಯಾಯ್ತು ಎಂಬಷ್ಟೇ ಎಂದಿಟ್ಟುಕೊಳ್ಳಿ. ( ಇನ್ನು ನನ್ನಂತಹವರು ಗೆಳೆಯ ಎಂದು ಕರೆಯುವ ಮೊದಲೇ ಬಹಳ ಯೋಚಿಸುತ್ತಾರೆ ಬಿಡಿ.). ಅವರ ಸಂಪೂರ್ಣ ಗೆಳೆತನವೇ ಆ ನಂಬಿಕೆಯ ಮೇಲೆ ನಿಂತಿರುತ್ತದೆ. ಹಾಗೆ ಒಮ್ಮೆ ನಂಬಿದ ಮೇಲೆ ಏನನ್ನೇ ಆಗಲೀ ಇವನು ಹಿಂಜರಿಯುವುದಿಲ್ಲ, ಅವನು ಕೇಳಲೂ ಹಿಂಜರಿಯುವುದಿಲ್ಲ. ಅದೊಂದು ರೀತಿಯ ಸಂಪೂರ್ಣ ನಂಬಿಕೆಯ ಸ್ಥಿತಿ. ಆದರೆ ಯಾವುದೋ ಚಿಕ್ಕ ವಿಷಯದಲ್ಲಿ ನಂಬಿದ ಗೆಳೆಯ ಕೈಕೊಟ್ಟನೆಂದಿಟುಕೊಳ್ಳಿ, ಈ ಗೆಳೆಯ ವ್ಯಗ್ರನಾಗಿ ವ್ಯಾಘ್ರನಾಗುತ್ತಾನೆ. ಗೆಳೆತನದ ಅಡಿಪಾಯವೇ ಕಳಚಿಬಿದ್ದಂತಾಗಿ ಮನಸಾರೆ ಮನನೊಂದುಕೊಳ್ಳುತ್ತಾನೆ.ಹೀಗೆಯೇ ಅತಿರೇಕಕ್ಕೆ ಹೋದರೆ ಆ ಗೆಳೆತನವೇ ಅಂತ್ಯವಾಗಬಹುದು.

ಇದು ನಮ್ಮ(ಹುಡುಗರ) ಜಗತ್ತು, ನಾನು ಕಂಡಂತೆ. ಇದು ರಮ್ಯವೂ ಅಲ್ಲ. ಚಂದವೂ ಅಲ್ಲ; ನಗುವ ಬುಗ್ಗೆಯಲ್ಲ, ಮಾತಿನ ಮನೆಯಲ್ಲ. ಬದಲಾಗಿ ಇದು ಗಂಭೀರ, ಶಬ್ದಶೂನ್ಯ. ಇದು ಅಹಂಕಾರದ ಕೂಪ, ಕಟ್ಟಿಹಾಕಿದ ಭಾವನೆಗಳ ಸಂಕೀರ್ಣ. ಎಷ್ಟು ಇಷ್ಟಪಡುತ್ತೀರೋ ನಿಮಗೆ ಬಿಟ್ಟಿದ್ದು, ಅದಕ್ಕೇನೂ ಈ ಜಗತ್ತು ತಲೆ ಕೆಡಿಸಿಕ್ಕೊಳ್ಳದು, ಬಿಡಿ.

ಟಿಪ್ಪಣಿ:
* - ೧. ಹಾಗೆಂದು ಹುಡುಗಿಯರಿಗೆ ಆಗುವುದಿಲ್ಲ ಎಂದೇನಲ್ಲ, ಆದರೆ ಯಾವಾಗಲೂ ಅದಕ್ಕಾಗಿ ಪರಿತಪಿಸುವುದು ನಾನು ನೋದಿರುವ ಮಟ್ಟಿಗೆ ಹುಡುಗರೇ ಜಾಸ್ತಿ.
     ೨.ಕೆಲವರಿಗೆ ಒಂದಕ್ಕಿಂತ ಹೆಚ್ಚು ಬಾರಿ ಆಗಬಹುದು, ಅದಕ್ಕೆ ಅವರೇ ಜವಾಬ್ದಾರರು. :P
     ೩.ಇನ್ನು ಕೆಲವು ಅದೃಷ್ಟವಂತರಿಗೆ ಮೊದಲ ಪ್ರೀತಿಯೇ ಮದುವೆಯಾದ(ಗುವ) ಹುಡುಗಿಯ ಜೊತೆಗೆ ಆಗಿ ಅವರಿಗೆ ಕೊರಗುವ ಅಗತ್ಯವಿರುವುದಿಲ್ಲ.