Tuesday, 9 June 2015

ಶ್ರೀನಿವಾಸ


ಗೃಹಪ್ರವೇಶದ ಹಿಂದಿನ ದಿನ
ಗೃಹಪ್ರವೇಶದ ವಾರ್ಷಿಕೋತ್ಸವದ ದಿನ ಹಾಕೋಣ ಎಂದು ಬರೆಯಲಾರಂಭಿಸಿದ್ದು, ಅಂತೂ ಇಂತೂ ಇಂದು ಪೂರ್ತಿಗೊಳಿಸಿದ್ದೇನೆ ಒಂದು ತಿಂಗಳ ನಂತರ. ನನ್ನ ಉದಾಸೀನತೆಗೆ ಬಯ್ದುಕೊಂಡು ಓದಿಕೊಳ್ಳಿ. :)

ಅದು ಬಹಳ ಕಷ್ಟ ಕಂಡು ಬೆಳೆದಿದ್ದ ಒಬ್ಬ ಮಾಸ್ತರರ ಬಲುದೊಡ್ಡ ಕನಸು, ಅವರ ಹೆಂಡತಿಯ ಪಾಲಿಗೆ ಹೆಮ್ಮೆಯ ನನಸು, ಅವರಿಬ್ಬರು ಮಕ್ಕಳ ಪಾಲಿಗೆ ಅದು ಅಪ್ಪನ ಬೆವರಿನ ಮೂರ್ತರೂಪ, ಅವರ ಅಕ್ಕ ಅಮ್ಮನವರ ಪಾಲಿಗೆ ಬದಲಾದ ವಾಸಸ್ಥಾನ, ಅದೇ ನಮ್ಮ ಮನೆ, ’ಶ್ರೀನಿವಾಸ’. ಮನೆಯ ಗೃಹಪ್ರವೇಶವಾಗಿ ಬರೋಬ್ಬರಿ ೭ ವರ್ಷಗಳಾದವು, ಆದರೂ ನಮ್ಮ ಪಾಲಿಗೆ ಇದು ಹೊಸಮನೆಯೇ.

೮೦-೯೦ರ ದಶಕದ ಪ್ರತೀ ಉದ್ಯೋಗಿಯ ಕನಸದು, ಸ್ವಂತ ಮನೆಯೊಂದನ್ನು ಕಟ್ಟಿಸುವುದು. ಇದ್ದ ಮನೆ ಅಷ್ಟು
ಹಾಲುಕ್ಕಿಸಿದ ಖುಷಿಯಲ್ಲಿ ಅಮ್ಮ
ಗಟ್ಟಿಯಾಗಿರದ, ಬಹಳ ಹಳೆಯ ಮನೆಯಾಗಿದ್ದರಿಂದ ಈ ಆಸೆ ಅಪ್ಪನ ತಲೆಯಲ್ಲಿ ಮತ್ತೂ ಪ್ರಬಲವಾಗಿರಬೇಕು. ಅಪ್ಪನ ತಲೆಯಲ್ಲಿ ಹೊಸಮನೆ ಕಟ್ಟಿಸುವ ಯೋಚನೆ ತುಂಬಾ ಮೊದಲಿಂದಲೇ ಇತ್ತಿರಬೇಕು. ಮದುವೆಯಾಗುವ ಸಮಯದಿಂದಲೇ ಮನೆ ಕಟ್ಟಬೇಕು ಎಂಬ ಯೋಚನೆಯಿತ್ತು ಎಂದು ಅಮ್ಮ ಹೇಳಿದ ನೆನಪು. ದಾಯಾದಿ ಚಿಕ್ಕಮ್ಮನ ಜೊತೆಗಿನ ಮನೆ ಜಾಗದ ಬಗೆಗಿನ ಕೋರ್ಟ್ ಕೇಸು, ಇಬ್ಬರು ಮಕ್ಕಳ ವಿಧ್ಯಾಭ್ಯಾಸ, ಮನೆ ಕಟ್ಟಬೇಕೆಂದಿದ್ದ ಕರ್ಕಿಯಿಂದ ೧೦೦ ಕಿ.ಮೀ. ದೂರದಲ್ಲಿದ್ದ ಕೆಲಸ, ಹೀಗೇ ಅನೇಕ ಕಾರಣಗಳಿಂದ ಮನೆ ಕಟ್ಟುವ ಯೋಜನೆ ೨೦೦೫ರವರೆಗೂ ಮುಂದೆ ಹಾಕಲ್ಪಡುತ್ತಾ ಬಂತು.

ಅಂತೂ ಮನೆ ಕಟ್ಟುವ ಯೋಗ ಬಂದಿದ್ದು ನಾನು ಹತ್ತನೇ ಕ್ಲಾಸಿನಲ್ಲಿದ್ದಾಗಲೇ, ಎಂದರೆ ಅಪ್ಪ-ಅಮ್ಮನ ಮದುವೆಯಾಗಿ
ತುಳಸಿಪೂಜೆಯ ಕಾರ್ಯಕ್ರಮ, ಅಮ್ಮ, ಅಪ್ಪ, ಭಟ್ರು
೨೩ ವರ್ಷಗಳ ನಂತರವೇ. ಇಷ್ಟು ತಡವಾಗಿ ಶುರುವಾದ ಮನೆ ಕಟ್ಟಾಣ, ತೆಗೆದುಕೊಂಡಿದ್ದು ಬರೋಬ್ಬರಿ ಎರಡು ವರ್ಷಗಳನ್ನು, ಬಹುಶಃ ಅದಕ್ಕಿಂತಲೂ ಹೆಚ್ಚು ಸಮಯವನ್ನು. ಅಪ್ಪ ಪ್ರತೀ ವಾರವೂ, ಕೆಲವೊಮ್ಮೆ ಪ್ರತೀ ದಿನವೂ ಮಲೆನಾಡಿನ ಸಿದ್ದಾಪುರದಿಂದ ಕರಾವಳಿಯ ಹೊನ್ನಾವರದ ಕರ್ಕಿಗೆ ಮನೆ ಕಟ್ಟಿಸಲೋಸುಗ ತಿರುಗಾಡಿದ್ದೇನೂ ಕಡಿಮೆ ಸಾಹಸವಲ್ಲ, ಆಚಾರಿಗೆ ಮರದ ಸಾಮಾನು ಬೇಕೆಂದೋ, ಮರದ ತುಂಡುಗಳು ಕಡಿಮೆ ಬಿದ್ದವೆಂದೋ, ಗಾರೆ ಕೆಲಸದವರಿಗೆ ದುಡ್ಡು ಕೊಡಬೇಕಾಗಿದ್ದರಿಂದಲೋ, ಟೈಲ್ಸ್ ಹಾಕುವವನು ಮೊದಲು ಒಪ್ಪಿದ್ದ ಬಣ್ಣವನ್ನು ಬಿಟ್ಟು ಬೇರಾವುದನ್ನೋ ಹಾಕಲು ಹವಣಿಸುತ್ತಿದ್ದಾನೆಂಬ ಹೆದರಿಕೆಗೋ, ನೀರಿನ ಪೈಪ್ ಕೆಲಸ ಮಾಡುತ್ತಿದ್ದ ಹನುಮಂತ ಎರಡು ವಾರದಿಂದ ಪತ್ತೆಯಿಲ್ಲ ಎಂಬ ಗಾಬರಿಗೋ, ಹೀಗೇ ಸಾವಿರ ಕಾರಣಗಳಿಗೆ ಅಪ್ಪ ಓಡಾಡಿದ್ದಿದೆ. ಅಪ್ಪನ ಈ ಶ್ರಮಕ್ಕೆ ಹೇಳಿ ಮುಗಿಸಲಾರದಷ್ಟು ಕಾರಣಗಳಿದ್ದವು, ಅವಶ್ಯಕತೆಗಳಿದ್ದವು, ಘಟ್ಟದ ದಾರಿಯಲ್ಲಿ ವಾಂತಿ ಬರುವಂತಾದರೂ ವಾರಕ್ಕೆ ಆರು ಬಾರಿ ಅದೇ ದಾರಿಯಲ್ಲಿ ತಿರುಗಿದ/ತಿರುಗಬೇಕಾಗಿದ್ದ ಜರೂರತ್ತುಗಳಿದ್ದವು. ನಾನು ಪಿ. ಯು. ಗೆ ಉಜಿರೆಗೆ ಹೋಗುವಾಗ ನಮ್ಮ ಮನೆಯ ನಾಣಜ್ಜನ ಹಿತ್ತಿಲಲ್ಲಿ ಪಾಯ ಹಾಕುತ್ತಿದ್ದಿದ್ದುದು ನೆನಪಿದೆ, ನಾನು ಪಿ.ಯು ಮುಗಿಸುವ ಹೊತ್ತಿಗೆ ಅಪ್ಪ ಕಟ್ಟಿ ನಿಲ್ಲಿಸಿಬಿಟ್ಟಿದ್ದರು ನಮ್ಮ ಹೆಮ್ಮೆಯ ಚಂದದ ಮನೆಯನ್ನು.

ಈಗಲೂ ನಮ್ಮ ಸಂಬಂಧಿಕರಲ್ಲಿ ಇಷ್ಟು ದೊಡ್ಡ ಮನೆಯಾಕೆ ಕಟ್ಟಿಸಿದರು ಎಂಬುದರ ಬಗ್ಗೆ ಪ್ರಶ್ನೆಗಳಿವೆ, ಗೊಂದಲಗಳಿವೆ. ಸ್ವಲ್ಪ ಮಟ್ಟಿಗೆ ನನಗೂ ಇದೆ. ಆದರೆ ಪ್ರತೀಸಲ ನನಗೆ ನಮ್ಮ ಮನೆಯನ್ನು ಕಂಡಾಗ, ಒಳಹೊಕ್ಕಾಗ, ತಿರುಗಾಡಿದಾಗ
ಶ್ರೀನಿವಾಸ - ಹಿಂದಿನಿಂದ 
ಕಾಣುವುದು, ಅನುಭವಕ್ಕೆ ಸಿಗುವುದು ಬರೀ ಮನೆಯಲ್ಲ, ನಮ್ಮ ಮನೆಯೆಂಬ ಆಪ್ತ ಭಾವವಷ್ಟೇ ಅಲ್ಲ, ಇದು ಅಮ್ಮನ ತ್ಯಾಗ, ಅಪ್ಪನ ಬೆವರಿನ ರೂಪ ಎಂಬ ದೊಡ್ಡ ಗೌರವ ಅದು,  ಕಳೆದ ವರ್ಷ ಅಮ್ಮನ ನಿವೃತ್ತಿ ಆದ ಮೇಲೆ ಈಗ ಸಂಪೂರ್ಣವಾಗಿ  ಇಲ್ಲಿಯೇ ಇರುತ್ತಿದ್ದಾರೆ, ಮೊದಲಿನ ಹಾಗೆ ವರ್ಷದ ಅರ್ಧಕಾಲ ಸಿದ್ದಪುರದಲ್ಲಿರುವ ಅವಶ್ಯಕತೆ ಇಲ್ಲ ಅಪ್ಪ ಅಮ್ಮ ಇಬ್ಬರಿಗೂ. ಅಂತೂ ೬೦ ವರ್ಷದ ಮೇಲೆ ಸ್ವಂತ ಮನೆಯಲ್ಲಿ ಇರುವ ಯೋಗ ಬಂದಿದೆ ಅವರಿಬ್ಬರಿಗೂ. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿರುವ ನಾನು, ಅಕ್ಕ ಇಬ್ಬರೂ ಆಗಾಗ ಭೇಟಿ ಕೊಡುವ ವಿಸಿಟರ್ಸ್ ಆಗಿದ್ದೇವೆ ಎಂಬುದಷ್ಟೇ ನಮ್ಮ ಮನೆಯ ಕೊರಗು. 

Sunday, 15 March 2015

ಧರಣಿ ಮಂಡಲ ಮಧ್ಯದೊಳಗೆ

ಪುಣ್ಯಕೋಟಿಯ ಹಾಡನ್ನು ಕೇಳದ ಕನ್ನಡಿಗನಿದ್ದಾನೇ? ಇಲ್ಲವೆನಿಸುತ್ತದೆ. ನಮ್ಮ ಮತ್ತು ನಮ್ಮ ಹಿಂದಿನ  ಪೀಳಿಗೆಯವರೆಲ್ಲರಿಗೂ ಸುಪರಿಚಿತವಾಗಿರುವ ಹಸುವಿನ ಹಾಡದು. ರಾಗಬದ್ಧವಾಗಿ ಹಾಡಲು ಬರುವ, ಜಾನಪದ ಸೊಗಡಿರುವ, ಶುದ್ಧ ಕನ್ನಡದ ಅದ್ಭುತ ರಚನೆಯಿದು. ಮಗುವಿನ ಬಗೆಗಿನ ತಾಯಿಯ ಮಮತೆಯನ್ನು, ಅದಕ್ಕಿಂತ ಹಿರಿದಾದ ಸತ್ಯದ ಸತ್ವವನ್ನು ಎತ್ತಿಹಿಡಿಯುವ ಗೋವಿನಷ್ಟೇ, ’ಸುಳ್ಳು ಹೇಳುವ ಎಲ್ಲ ಅವಶ್ಯಕತೆಯಿದ್ದರೂ ಈ ಪುಣ್ಯಕೋಟಿ ಕೂಡ ಸತ್ಯವನ್ನು ಹೇಳುತ್ತಿರಲೂಬಹುದು’ ಎಂದು ಯೋಚಿಸಿ ಅದರ ಸತ್ಯಸಂಧತೆಯನ್ನು ರುಜುವಾತುಪಡಿಸಲು ಅವಕಾಶಕೊಡುವ ಮತ್ತು ಧರ್ಮಮಾರ್ಗದಲ್ಲಿ ನಡೆದ ಗೋವನ್ನು ತಿನ್ನದೇ ಬಿಡುವ ವ್ಯಾಘ್ರನೂ ಆಪ್ತನಾಗುತ್ತಾನೆ. ಅದಕ್ಕೇ ಈ ಹಾಡು ಇಷ್ಟೆಲ್ಲ ಮಕ್ಕಳ/ದೊಡ್ಡವರ ಹೃದಯದಲ್ಲಿ ಮನೆಮಾಡಿರುವುದು.

ನನಗೆ ಈ ಹಾಡಿನ ಪರಿಚಯವಾಗಿದ್ದು ನಾನು ೩-೪ ವರ್ಷದವನಾಗಿದ್ದಾಗ. ಆಗ ನಾನು ವರ್ಷದ ಎಂಟು ತಿಂಗಳು ಅಜ್ಜನ ಮನೆಯಲ್ಲಿರುತ್ತಿದ್ದೆ. ಪ್ರತಿ ಸಂಜೆ ದಿನದ ಆಟವೆಲ್ಲ ಮುಗಿದ ಬಳಿಕ ಕೈಕಾಲು ತೊಳೆದು ಬಂದು ದೇವರ ಕೋಣೆಯಲ್ಲಿ ಕುಳಿತು ಬಾಯಿಪಾಟ ಒಪ್ಪಿಸಿದ ಬಳಿಕ ದೊಡ್ಡಮ್ಮ ಹೇಳುತ್ತಿದ್ದ ಹಾಡು ಇದು. ಎಷ್ಟು ಕೇಳಿದರೂ ಸಾಕೆನಿಸದು, ಪ್ರತೀ ದಿನವೂ ಕೇಳಲೇಬೇಕು, ಪ್ರತೀ ದಿನವೂ ಪುಣ್ಯಕೋಟಿಯನ್ನು ಮೆಚ್ಚಲೇಬೇಕು, ಪುಣ್ಯಕೋಟಿಯು ಕರುವನ್ನು ಸಮಾಧಾನಿಸುವಾಗ ಕರುವಿನ ಜೊತೆಗೆ ನಾನೂ ಕಣ್ಣೀರಾಗಲೇಬೇಕು, ಪುಣ್ಯಕೋಟಿ ಸಾಯುವುದಿಲ್ಲ ಎಂದು ಗೊತ್ತಾದಾಗ ಒಂದು ಸಮಾಧಾನ ಹುಟ್ಟಿ ನಾನು ಕಣ್ಣೊರೆಸಿಕೊಳ್ಳಬೇಕು, ಅರ್ಬುತ ಪ್ರಾಣತ್ಯಾಗ ಮಾಡುವಾಗ ಸತ್ಯವನ್ನೇ ಮಾತನಾಡಬೇಕು ಎಂಬ ನೀತಿಯನ್ನು ದೊಡ್ಡಮ್ಮ ಹೇಳಲೇಬೇಕು. ಈ ದಿನಚರಿ ವರ್ಷಗಟ್ಟಲೇ ನಡೆದಿತ್ತು. ಪ್ರತೀ ದಿನವೂ ಅತ್ತರೂ ಒಂದು ದಿನವೂ ಹಾಡು ಕೇಳುವುದು ತಪ್ಪುತ್ತಿರಲಿಲ್ಲ. ಈ ಹಾಡಿನಲ್ಲಿ ಅಂತದ್ದೊಂದು ಮೋಡಿ ಇತ್ತು, ಹೇಳುತ್ತಿದ್ದ ರೀತಿಯಲ್ಲಿ ತಿರುತಿರುಗಿ ಕೇಳಿದರೂ ಬೇಜಾರು ಬರದ ಆಕರ್ಷಣೆ ಇತ್ತು, ಕತೆಯಲ್ಲಿ ಪ್ರತಿ ಬಾರಿಯೂ ಅಂದಿನ ಬಾಲ-ಸುಬ್ರಹ್ಮಣ್ಯನ ಕಣ್ಣುಗಳಲ್ಲಿ ನೀರಿಳಿಸುವಷ್ಟು ಹಾಗೂ ಮತ್ತೂ ಒಂದಿಷ್ಟು ಭಾವನಾತ್ಮಕತೆ ಇತ್ತು.

ಪುಣ್ಯಕೋಟಿಯದ್ದು ಒಂದು ಸರಳ ನೀತಿಕತೆ. ಪುಣ್ಯಕೋಟಿ ಕರ್ನಾಟ ದೇಶದ ಒಬ್ಬ ಗೊಲ್ಲನ ದೊಡ್ಡಿಯ ಗೋವು. ಒಂದು ದಿನ ಮೇಯಲು ಕಾಡಿಗೆ ಹೋಗಿದ್ದಾಗ ಅರ್ಬುತ ಎಂಬ ವ್ಯಾಘ್ರ(ನೆನಪಿಟ್ಟುಕೊಳ್ಳಿ, ಅದು ದುಷ್ಟವ್ಯಾಘ್ರವಲ್ಲ, ಬರೀ ವ್ಯಾಘ್ರ)ನ ಕೈಯಲ್ಲಿ ಸಿಕ್ಕಿಕೊಂಡು ಬೀಳುತ್ತಾಳೆ. ಬಗೆದು ತಿನ್ನುತ್ತೇನೆ ಎನ್ನುವ ಹುಲಿರಾಯನಲ್ಲಿ ತನ್ನ ಚಿಕ್ಕ ಕರುವಿಗೆ ಕೊನೆಯ ಬಾರಿ ಮೊಲೆಯಿತ್ತು ಬೀಳ್ಕೊಟ್ಟು ಬರುತ್ತೇನೆ, ದಯವಿಟ್ಟು ಹೋಗಿ ಬರಲು ಅವಕಾಶ ಮಾಡಿಕೊಡು ಎನ್ನುತ್ತದೆ. ಪುಣ್ಯಕೋಟಿಯನ್ನು ಮೊದಮೊದಲು ಅನುಮಾನಿಸಿದರೂ ನಂತರ ಅರ್ಬುತ ಪುಣ್ಯಕೋಟಿಗೆ ಹೋಗಿಬರಲು ಅವಕಾಶ ಮಾಡಿಕೊಡುತ್ತದೆ. ಎಂತಿದ್ದರೂ ಹೀಗೆ ಹೋದ ಹಸು ಎಂದಿಗೂ ತಿರುಗಿಬರಲಾರದು ಎಂಬ ಧೈರ್ಯದಲ್ಲಿದ್ದ ಅರ್ಬುತನ ನಂಬಿಕೆಯನ್ನು ಸುಳ್ಳು ಮಾಡುವಂತೆ ಪುಣ್ಯಕೋಟಿ ತಿರುಗಿ ಬರುತ್ತಾಳೆ, ಅದೂ ಅವಸರ ಅವಸರವಾಗಿ. ತನ್ನ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಸತ್ಯವನ್ನು ಮೆರೆದ ಪುಣ್ಯಾತ್ಗಿತ್ತಿ ಪುಣ್ಯಕೋಟಿಯಂತವಳ ಬಗ್ಗೆ ಸಂಶಯ ಪಟ್ಟೆನಲ್ಲಾ, ಇವಳನ್ನು ತಿನ್ನಲು ಹವಣಿಸಿದೆನಲ್ಲಾ ಎಂಬ ತನ್ನನ್ನು ತಾನೇ ಹಳಿದುಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ ಅರ್ಬುತ ಸಾಯವ ಅಗತ್ಯವಿರಲಿಲ್ಲ ಎಂಬುದು ನಿಜವಾದರೂ ಇಷ್ಟು ಚಂದದ ನೆನಪುಗಳನ್ನು ಕೊಟ್ಟ ಹಾಡಿನ ಅಷ್ಟು ಚಿಕ್ಕ ತಪ್ಪನ್ನು ಕೆದಕುವುದು ಕೃತಘ್ನತೆಯಾದೀತು.

ಎಲ್ಲವೂ ರಾಗ ಬದ್ಧ ಇಲ್ಲಿ, ಪ್ರಾಸದ ಜೊತೆಗೆ. ಎಲ್ಲವೂ ನೀತಿಯುಕ್ತ ಇಲ್ಲಿ, ಖಳನಾಗಿ ಚಿತ್ರಿತವಾದ ಹುಲಿರಾಯನೂ ನೀತಿಯ ಗೆರೆಯನ್ನು ದಾಟಿ ನಡೆಯಲಾರ. ಪುಣ್ಯಕೋಟಿಯಂತೂ ನಮ್ಮ ಕರ್ನಾಟ ದೇಶದ ಲೋಕಲ್ ಸತ್ಯ ಹರಿಶ್ಚಂದ್ರ. ಮುಂಜಾವಿನ ಸಮಯದಲ್ಲಿ ಕೊಳಲನ್ನು ಬಾರಿಸುತ್ತಾ ಎಲ್ಲ ಗೋವುಗಳ ಹೆಸರು ಹಿಡಿದು ಕರೆವ ಗೊಲ್ಲನ ಚಿತ್ರಣವೂ ಇಲ್ಲಿ ಸ್ಪಟಿಕ ಸ್ಪಷ್ಟ. ಹುಲಿಯ ಬಳಿ ಕೊನೆಯ ಬಾರಿ ಮಗುವನ್ನು ನೋಡಿಬರಲು ಕಳಿಸಿಕೊಡಲು ಕೇಳಿಕೊಳ್ಳುವಾಗ, ತನ್ನ ಒಡಹುಟ್ಟು ದನಗಳ ಬಳಿ ತನ್ನ ಕರುವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳುವಾಗ, ಮತ್ತೆ ಹುಲಿಯ ಎದುರು ಬಂದು ನಿಂತು ಈಗ ನನ್ನನ್ನು ತಿನ್ನು ಎಂದು ಹೇಳುವಾಗ ಪುಣ್ಯಕೋಟಿಯ ಗಂಟಲು ಉಬ್ಬಿ ಬರುವುದೂ ವೇದ್ಯವಾಗಿಸುವಷ್ಟು ಶಕ್ತಿಶಾಲಿ ನಮ್ಮ ಈ ಪುಣ್ಯಕೋಟಿಯ ಹಾಡು. ಕಥನ-ಕಾವ್ಯಗಳ ಪ್ರ‍ೇಮಿಗಳ ಪಾಲಿಗೆ(ನಾನೂ ಒಬ್ಬ ಈ ಗುಂಪಿನಲ್ಲಿ) ಪುಣ್ಯಕೋಟಿಯ ಹಾಡು ಹೃದಯಕ್ಕೆ ಅತಿ ಹತ್ತಿರವಾದದ್ದು. ಜನಪದದ ಕೊಡುಗೆಯಾದ ಈ ಹಾಡಿನ ಬಳಕೆಯೇ ಈ ಹಾಡಿಗೆ, ಹಾಡು ಕಟ್ಟಿದ ಅನಾಮಿಕ ಜನಪದಕ್ಕೆ ನಾವು ಕೊಡಬಹುದಾದ ಕೊಡುಗೆ. ನಮ್ಮ ಮನೆಯ ಮಕ್ಕಳಿಗೆ ಹೇಳಿಕೊಡುವ ಮೂಲಕ, ತಂತ್ರಜ್ಞಾನದ ಇಂದಿನ ಕಾಲದಲ್ಲಿ, ಕೊನೆಪಕ್ಷ ಯೂಟ್ಯೂಬಿನಲ್ಲಿ ಕೇಳಿಸುವ ಮೂಲಕ ಈ ಹಾಡನ್ನು, ಇಂತದ್ದೇ ಎಷ್ಟೋ ಹಾಡು-ಕಥೆಗಳನ್ನು ಉಳಿಸಬಹುದು, ಬೆಳೆಸಬಹುದು. ಉಳಿಸೋಣ, ಬೆಳೆಸೋಣ ನಾವು.

ಸೂಚನೆ.  ಪುಣ್ಯಕೋಟಿಯ ಹಾಡಿನ ಯೂಟ್ಯೂಬಿನ ಕೊಂಡಿ ಪುಣ್ಯಕೋಟಿ . ಒಮ್ಮೆ ಕೇಳಿಬಿಡಿ, ಬಾಲ್ಯಕ್ಕೊಮ್ಮೆ ಹೋಗಿಬನ್ನಿ. 

Friday, 21 November 2014

ಬೇಲೂರು, ಹಳೆಬೀಡು, ಶ್ರವಣಬೆಳಗೊಳ - ನಾನು ಕಂಡಂತೆ

ಇತಿಹಾಸವನ್ನು ಇಷ್ಟಪಡುವವರಿಗೆ ಬೇಲೂರು, ಹಳೆಬೀಡು ಚಿನ್ನದ ಗಣಿಯಿದ್ದಂತೆ, ಎಷ್ಟು ಸಲ ನೋಡಿದರೂ ಮುಗಿಯದು, ಎಷ್ಟು ಸಲ ಕಣ್ಣು ತುಂಬಿಕೊಂಡರೂ ಸಾಕೆನಿಸದು, ಎಷ್ಟು ಕೊಂಡಾಡಿದರೂ ಹೆಚ್ಚೆನಿಸದು. ಹೊಯ್ಸಳರು ಕಟ್ಟಿದ ಇಲ್ಲಿನ ದೇಗುಲಗಳು ಅತ್ಯುನ್ನತ ಶ್ರೇಣಿಯ ಶಿಲ್ಪಕಲೆಯ ತಾಣಗಳಾಗಿವೆ. ಹಳೆಬೀಡಿನ ಹೊರಭಾಗದ ಕೆತ್ತನೆಗಳಿಗೆ ಬೇಲೂರಿನ ಒಳಭಾಗದ ಕೆತ್ತನೆಗಳೇ ಸಾಟಿ, ಬೇರೆಲ್ಲ ಹೋಲಿಕೆಗಳೂ ಚಿಲ್ಲರೆ ಎನ್ನಿಸಿಬಿಡಬಹುದು. ಬೇಲೂರಿನ ಶಿಲಾಬಾಲಿಕೆಯರ ಬಗ್ಗಂತೂ ಮಾತನಾಡುವುದೇ ಬೇಡ. ಸೌಂದರ್ಯವನ್ನು ಹೋಲಿಸುವ ಮಾನವೇ ಆಗಿಬಿಟ್ಟಿವೆ ಈ ಶಿಲ್ಪಗಳು. ಇಂತಹ ಬೇಲೂರು,ಹಳೇಬೀಡಿಗೆ ಮತ್ತು ಶ್ರವಣಬೆಳಗೊಳಕ್ಕೆ ಹೋಗುತ್ತಿದ್ದೇವೆ, ಬರುತ್ತೀಯಾ? ಎಂದು ಬ್ಲಾಗ್ಗೆಳೆಯ(ಬ್ಲಾಗು+ಗೆಳೆಯ, ಕಂಗ್ಲೀಶು ಸಂಧಿ) ಪ್ರಶಸ್ತಿ ಕೇಳಿದಾಗ ಇಲ್ಲವೆಂದು ನಾನಾದರೂ ಹೇಗೆ ಹೇಳಿಯೇನು. ಹೀಗೆ ಬೇಲೂರು ಹಳೇಬೀಡುಗಳನ್ನು ಎರಡನೇ ಬಾರಿ ನೋಡುವ ಭಾಗ್ಯ ನನ್ನದಾಗಿ, ಒಂದು ಭಾನುವಾರ(೦೯/೧೧/೨೦೧೪)ದಂದು ಪ್ರಶಸ್ತಿ, ಹರೀಶ್, ಸುಮುಖರ ಜೊತೆ ಹೊಯ್ಸಳರ ಶಿಲಾಸ್ವರ್ಗಗಳಿಗೆ ಹೊರಟಿದ್ದೆ.

ಒಡೆಗಲ್ ಬಸದಿ
ಮಾಗಿಯ ಬೆಳಗ್ಗೆ ನಾಲ್ಕೂವರೆಗೆ ಎದ್ದು ನಿತ್ಯಕರ್ಮಾದಿಗಳನ್ನು ಮುಗಿಸಿಕೊಂಡು ಬುಕ್ ಮಾಡಿದ್ದ ಕಾರನ್ನು ಹತ್ತಿ ಕೂತಾಗ ಗಂಟೆ ಐದೂಮುಕ್ಕಲು. ಮೊದಲು ಹೊರಟಿದ್ದು ತ್ಯಾಗಮೂರ್ತಿ ಗೊಮ್ಮಟೇಶನ ಊರು ಶ್ರವಣಬೆಳಗೊಳಕ್ಕೆ. ಊರ ಒಳಹೊಕ್ಕುವ ಮೊದಲೇ ದೂರಿಂದಲೇ ಕಾಣಸಿಗುತ್ತಾನೆ ಭವ್ಯಮೂರ್ತಿ ಗೊಮ್ಮಟೇಶ್ವರ. ಶ್ರವಣಬೆಳಗೊಣದಲ್ಲಿ ಮುಖ್ಯವಾಗಿ
ಇರುವುದು ಎರಡು ಬೆಟ್ಟಗಳು. ಗೊಮ್ಮಟೇಶ್ವರ ಇರುವ ವಿಂಧ್ಯಗಿರಿ ಮತ್ತು ಚಂದ್ರಗುಪ್ತ ಮೌರ್ಯ ಇದ್ದ ಚಂದ್ರಗಿರಿ. ವಿಂಧ್ಯಗಿರಿಯ ಬುಡದಲ್ಲಿ ಎಳನೀರೊಂದನ್ನು ಕುಡಿದು ಬೆಟ್ಟ ಹತ್ತಲು ಸುರುವಿಟ್ಟಾಗ ೯ ಗಂಟೆ. ಹತ್ತಿದಷ್ಟಕ್ಕೂ ಮುಗಿಯದ ಮೆಟ್ಟಿಲುಗಳನ್ನು ಹತ್ತುತ್ತ ಹಿಂದೆ ಕಾಣುವ ಕಲ್ಯಾಣಿ ಅದರ ಹಿನ್ನೆಲೆಯಲ್ಲಿನ ಚಂದ್ರಗಿರಿಯ ಸೊಬಗನ್ನು ಸವಿಯುವುದೇ ಸುಖ.  ಶ್ರವಣಬೆಳಗೊಳ ಪ್ರಸಿದ್ಧವಾಗಿದ್ದು ವೈರಾಗ್ಯದ ಸಂಕೇತವಾದ ಒಂದು ಭವ್ಯ ಮೂರ್ತಿಯಿಂದಲೇ ಆದರೂ, ಇಲ್ಲಿರುವ ಉಳಿದ ಶಿಲ್ಪಗಳು, ಬಸದಿಗಳೂ ಶಿಲ್ಪ ಸೌಂದರ್ಯದಲ್ಲಿ ಕಡಿಮೆಯೇನಿಲ್ಲ. ಬೆಟ್ಟ ಹತ್ತುವಾಗ ಮೊದಲು ಸಿಗುವುದು ಒಡೆಗಲ್ ಬಸದಿ(ಮುಖ್ಯ ಮಂಟಪಕ್ಕೆ ಓರೆಯಾಗಿಟ್ಟ ಕಲ್ಲುಗಳ ಆಧಾರ ಇರುವುದರಿಂದ ಈ ಹೆಸರು) ಅಥವಾ ತ್ರಿಕೂಟ ಬಸದಿ (ಮೂರು ಪೀಠಗಳಿರುವುದರಿಂದ ಈ ಹೆಸರು). ನೇಮಿನಾಥ, ಶಾಂತಿನಾಥ, ವೃಷಭನಾಥರೆಂಬ ಮೂವರು ತೀರ್ಥಂಕರರ ಪೂಜೆ ಇಲ್ಲಿ ನಡೆಯುತ್ತದೆ. ಆ ಶಾಂತ ವಾತಾವರಣದಲ್ಲಿ ಬಿಳಿ ಬಣ್ಣದ ಬಟ್ಟೆಯನ್ನು ಸುತ್ತಿಕೊಂಡಿದ್ದ ಅರ್ಚಕರು ತಿಲಕ ಇಟ್ಟಾಗ ರೋಮಾಂಚನದಂತಹ ಸುಂದರ ಅನುಭವವಾಯ್ತು. ಬಸದಿ, ಮೂರ್ತಿಗಳಷ್ಟೇ ಅಲ್ಲದೇ ಈ ಬೆಟ್ಟದ ಮೇಲೆ ಅಲ್ಲಲ್ಲಿ ಶಾಸನಗಳನ್ನು, ಸಾವಿರಾರು ವರ್ಷಗಳ ಹಿಂದಿನ ಬರಹಗಳನ್ನು ಗಮನಿಸಬಹುದು.
ವೈರಾಗ್ಯಮೂರ್ತಿ ಗೊಮ್ಮಟೇಶ್ವರ

ಅಲ್ಲಿಂದ ದಾಟಿ ಮುಂದೆ ಸಾಗಿದರೆ ಸಿಗುವುದು ಚಾವುಂಡರಾಯನ ತ್ಯಾಗದ ಕಂಬ. ಎರಡಂತಸ್ತಿನ ಈ ಕಂಬದಿಂದ ಗಂಗಮಂತ್ರಿ ಚಾವುಂಡರಾಯ ಬಡಬಗ್ಗರಿಗೆ ದಾನಮಾಡುತ್ತಿದ್ದುದಲ್ಲದೇ ತನ್ನ ಜೀವನವನ್ನೂ ಇಲ್ಲಿಯೇ ತ್ಯಾಗ ಮಾಡಿದನೆಂಬ ಪ್ರತೀತಿ ಇದೆ. ಮುಂದೆ ಸಾಗಿದರೆ ಸಿಗುವುದು ಗೊಮ್ಮಟನ ಮಂದಿರದ ದ್ವಾರ, ’ಅಖಂಡ ಬಾಗಿಲು’. ದೇಶದಲ್ಲಿಯೇ ದೊಡ್ಡದಾದ ಪದ್ಮಪಾಣಿಯಾಗಿ ಕುಳಿತ ಗಜಲಕ್ಷ್ಮಿಯ ಉಬ್ಬುಶಿಲ್ಪವನ್ನು ಈ ಬಾಗಿಲಿನ ಮೇಲೆ ಕಾಣಬಹುದು. ಇಲ್ಲಿಯೇ ಅಕ್ಕಪಕ್ಕದಲ್ಲಿ ಬಾಹುಬಲಿ ಮತ್ತು ಭರತನ ಅಪರೂಪದ, ಆಳೆತ್ತರದ ವಿಗ್ರಹಗಳಿವೆ. ಇದೆಲ್ಲವೂ ಒಂದು ತೂಕವಾದರೆ ಮುಂದೆ ಇರುವ ಬಾಹುಬಲಿಯ ಮೂರ್ತಿಯದ್ದೇ ಒಂದು ತೂಕ. ಎಲ್ಲವನ್ನೂ ತ್ಯಾಗ ಮಾಡಿ, ವೈರಾಗ್ಯದ ಮೂರ್ತರೂಪವಾಗಿ ನಿಂತ ಬಾಹುಬಲಿಯ ಗಂಗರ ಶಿಲ್ಪಕಲೆಯ ಅದ್ಭುತ ಸಾಧನೆ. ಬೋಳು ಬೆಟ್ಟದ ಮೇಲೆ ಕ್ರೇನುಗಳಿಲ್ಲದ ಕಾಲದಲ್ಲಿ ೫೭ ಅಡಿ ಎತ್ತರದ ಈ ಏಕಶಿಲಾಮೂರ್ತಿಯನ್ನು, ಈ ಬಸದಿಗಳನ್ನು ಕೆತ್ತಿ, ನಿಲ್ಲಿಸಿದ ಶಿಲ್ಪಿಗಳ ಬಗ್ಗೆ ಹೆಮ್ಮೆ ಮೂಡುತ್ತದೆ. ೧೧ ಶತಮಾನಗಳಷ್ಟು ದೀರ್ಘಕಾಲ ಬಿಸಿಲು, ಗಾಳಿ, ಮಳೆಗೆ ಮೈಯ್ಯೊಡ್ಡಿ ನಿಂತ ಗೊಮ್ಮಟನ ಭವ್ಯ ಮೂರ್ತಿಯ ಕಾಲ್ಬುಡದಲ್ಲಿ ನಿಂತಾಗ ನಾವೆಲ್ಲ ಎಷ್ಟು ಚಿಕ್ಕವರು ಎಂಬ ನಿಜಭಾವ ಮನಸ್ಸಲ್ಲಿ ಮೂಡಿತ್ತು.

ಚಾವುಂಡರಾಯ ಬಸದಿ
ವಿಂಧ್ಯಗಿರಿಯ ಎದುರಿರುವ ಪುಷ್ಕರಣಿಯನ್ನು(ಈ ಪುಷ್ಕರಣಿಯಿಂದಲೇ ಬೆಳಗೊಳ(ಬಿಳಿ ಕೊಳ) ಎಂಬ ಹೆಸರು ಬಂದಿರುವುದು) ಬಳಸಿ ಹೋದರೆ ಸಿಗುವುದು ಚಂದ್ರಗಿರಿ, ವಿಂಧ್ಯಗಿರಿಗೆ ಹೋಲಿಸಿದರೆ ಇದು ಸ್ವಲ್ಪ ಚಿಕ್ಕದಿರುವುದರಿಂದ ಚಿಕ್ಕಬೆಟ್ಟ ಎಂಬ ಹೆಸರೂ ಇದೆ. ಚಂದ್ರಗುಪ್ತ ಮೌರ್ಯ ತನ್ನ ಮಗ ಬಿಂದುಸಾರನಿಗೆ ಪಟ್ಟಾಭಿಷೇಕ ಮಾಡಿ ಗುರು ಭದ್ರಬಾಹುರಿಂದ ಜೈನದೀಕ್ಷೆಯನ್ನು ತೆಗೆದುಕೊಂಡು ಉಪವಾಸ ಮಾಡಿ ಮರಣವನ್ನಪ್ಪಿದನೆಂದು ಹೇಳಲಾಗಿರುವ ಗುಹೆ ಇಲ್ಲಿದೆ. ಅಷ್ಟೇ ಅಲ್ಲದೇ ಈ ಬೆಟ್ಟದ ಮೇಲೆ ಕತ್ತಲೆ ಬಸದಿ, ಚಂದ್ರಗುಪ್ತ ಬಸದಿ, ಶಾಸನ ಬಸದಿ, ಶಾಂತಿನಾಥ ಬಸದಿ ಹೀಗೆ ಒಟ್ಟಾರೆ ೧೪ ಬಸದಿಗಳಿವೆ. ಇವುಗಳ ಮಧ್ಯ ಗಮನ ಸೆಳೆಯುವುದು ಚಾವುಂಡರಾಯ ಬಸದಿ. ’ಬಿರುದುರುವಾರಿಗಳ
ಯಕ್ಷಿಯ ಮೂರ್ತಿ
ಯಕ್ಷಿಣಿಯ ಮೂರ್ತಿ
ಮುಖತಿಳಕ’ ಎಂಬ ಬಿರುದನ್ನು ಹೊಂದಿದ್ದ ಗಂಗಾಚಾರಿ ಕೆತ್ತಿದ ನೇಮಿನಾಥರ ವಿಗ್ರಹವನ್ನು ಹೊಂದಿರುವ ಈ ಎರಡಂತಸ್ತಿನ ಬಸದಿಯ ಹೊರಗೋಡೆಯ ಮೇಲೆ ಅತ್ಯಂತ ಸುಂದರ ಕೆತ್ತನೆಗಳಿವೆ. ಇದನ್ನು ಸ್ವತಃ ಚಾವುಂಡರಾಯನೇ ಕಟ್ಟಿಸಿದನೇ ಅಥವಾ ಅವನ ನೆನಪಲ್ಲಿ ಬೇರಾರೋ ಕಟ್ಟಿಸಿದರೋ ಎಂಬ ಬಗ್ಗೆ ಗೊಂದಲಗಳಿವೆ. ಈ ಬಸದಿಗಳಲ್ಲಿ ಗಮನ ಸೆಳೆಯುವ ಶಿಲ್ಪಗಳೆಂದರೆ ಯಕ್ಷಿ ಮತ್ತು ಯಕ್ಷಿಣಿಯರದ್ದು. ಬಸದಿಗಳಲ್ಲಿನ ತೀರ್ಥಂಕರರ ಮೂರ್ತಿ ದಿವ್ಯವಾಗಿ ಅಲೌಕಿಕವಾಗಿ ಕಂಡರೆ ಈ ಯಕ್ಷಿ-ಯಕ್ಷಿಣಿಯರ ಮೂರ್ತಿಗಳು ಶಿಲ್ಪಕಲೆಯ ಅದ್ಭುತ ಸಾಧನೆಗಳಾಗಿ ಆಕರ್ಷಿಸುತ್ತವೆ. ಹೆಚ್ಚು ಕಡಿಮೆ ೧೧ ಶತಮಾನಗಳನ್ನು ಕಂಡಿರುವ ಈ ಗಂಗರ ಬಸದಿಗಳು ಮುಸ್ಲಿಂ ರಾಜರ ಧಾಳಿಗೂ, ಬ್ರಿಟಿಷರ ಕಳ್ಳತನಕ್ಕೂ ತುತ್ತಾಗದೇ ಉಳಿದಿದ್ದು ಜೈನಭಕ್ತರ, ಕಲಾರಸಿಕರ ಪುಣ್ಯ ಎನ್ನಿಸುತ್ತದೆ.


ಚೆನ್ನಕೇಶವ ದೇವಸ್ಥಾನದ ಪ್ರವೇಶದ್ವಾರ
ಗಂಗರ ಶ್ರವಣಬೆಳಗೊಳವನ್ನು(ಹೊಯ್ಸಳ ಶಿಲ್ಪಕಲಾಕೃತಿಗಳು ಇಲ್ಲಿ ಇವೆಯಾದರೂ ಬೆಳಗೊಳ ಹೆಚ್ಚು ಕಡಿಮೆ ಪೂರ್ತಿಯಾಗಿ ಗಂಗರದ್ದೇ) ನೋಡಿಯಾದ ಮೇಲೆ ಹೊರಟಿದ್ದು ಹೊಯ್ಸಳರ ಬೇಲೂರಿಗೆ. ಹೊಯ್ಸಳರ ರಾಜಧಾನಿಯಾಗಿ, ಶಿಲಾಬಾಲಿಕೆಯರ ತವರೂರಾಗಿ, ಚೆನ್ನಕೇಶವನ ನೆಲೆಯೂರಾಗಿ, ಶಿಲ್ಪಕಲಾಸಗ್ಗವಾಗಿ ಮೆರೆದ ಮೆರೆಯುತ್ತಿರುವ ಬೇಲೂರಿನ ಚೆನ್ನಕೇಶವ ದೇವಸ್ಥಾನ ಸಮುಚ್ಛಯದಲ್ಲಿ ಚೆನ್ನಕೇಶವ ದೇವಸ್ಥಾನವಲ್ಲದೇ ಕಪ್ಪೆ ಚೆನ್ನಿಗರಾಯ, ಸೌಮ್ಯನಾಯಕಿ(ಲಕ್ಷ್ಮಿ), ರಂಗನಾಯಕಿ(ಅಂಡಾಳ್) ದೇವಸ್ಥಾನ,  ವೀರ ನಾರಾಯಣ ದೇವಸ್ಥಾನಗಳಿವೆ. ಆದರೂ ಮುಖ್ಯ ಆಕರ್ಷಣೆ ಚನ್ನಕೇಶವ ದೇವಸ್ಥಾನವೇ.ಬೇಲೂರಿನ ಚೆನ್ನಕೇಶವ ದೇವಾಲಯ ವಿಜಯನಗರ ಸಾಮ್ರಾಟರ ಕುಲದೇವತೆಯಾದ್ದರಿಂದ ವಿಜಯನಗರದ  ರಾಜರ ಕೊಡುಗೆಗಳೂ ಇಲ್ಲಿವೆ. ಚೆನ್ನಕೇಶವ ದೇವಾಲಯದ ಎದುರಿಗಿರುವ ಗರುಡಸ್ಥಂಭ, ಎದುರಿಗಿರುವ ರಾಜಗೋಪುರಗಳು ವಿಜಯನಗರ ಸಾಮ್ರಾಜ್ಯದ ರಚನೆಗಳು.

ಚೋಳರ ವಿರುದ್ಧದ ತಲಕಾಡು ಯುದ್ಧದ ವಿಜಯದ ನೆನಪಿಗಾಗಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ಚೆನ್ನಕೇಶವ ದೇವಸ್ಥಾನವನ್ನು ಕಟ್ಟಿಸಲು ಪ್ರಾರಂಭಿಸಿದನಾದರೂ ಈ
ದೇವಸ್ಥಾನ ಕಟ್ಟಿ(ಕೆತ್ತಿ) ಮುಗಿದಿದ್ದು ೧೦೩ ವರ್ಷಗಳ ನಂತರ, ವಿಷ್ಣುವರ್ಧನನ ಮೊಮ್ಮಗ ವೀರಬಲ್ಲಾಳನ ಕಾಲದಲ್ಲಿ. ಹೊಯ್ಸಳರ ಶಿಲ್ಪಕಲೆಯಂತೆ ಎತ್ತರಿಸಿದ ನಕ್ಷತ್ರಾಕಾರದ ಜಗಲಿಯ ಮೇಲೆ ಕಟ್ಟಿರುವ ಈ ಏಕಕೂಟ ದೇವಸ್ಥಾನ ಉಳಿದೆಲ್ಲ ದೇವಸ್ಥಾನಗಳಿಗಿಂತ ಎದ್ದು ನಿಲ್ಲುವುದು ಒಳಾಂಗಣದಲ್ಲಿರುವ ಸೂಕ್ಷ್ಮಕೆತ್ತನೆಗಳಿಗೆ, ಹೊರ ಆವರಣದಲ್ಲಿರುವ ಶಿಲಾಬಾಲಿಕೆಯರ ಸೌಂದರ್ಯಕ್ಕೆ, ಪ್ರತೀ ಶಿಲ್ಪದಲ್ಲೂ ವ್ಯಕ್ತವಾಗಿರುವ ಕಲಾಭಿರುಚಿಗೆ. ಒಳಾಂಗಣದಲ್ಲಿ ಒಟ್ಟಾರೆಯಾಗಿ ೪೮ ಕಂಬಗಳಿದ್ದು, ಪ್ರತಿಯೊಂದು ಕಂಬವೂ ಉಳಿದ ಕಂಬಗಳಿಗಿಂತ ಬಹು ಭಿನ್ನವಾದ ಕೆತ್ತನೆಯನ್ನು ಹೊಂದಿದೆ.  ದೇಗುಲದ ಬಲಭಾಗದಲ್ಲಿರುವ ಒಂದು ಕಂಬದ ಮೇಲೆ ದೇಗುಲದಲ್ಲಿರುವ ಎಲ್ಲ ಶಿಲ್ಪಗಳದ್ದೂ ಚಿಕ್ಕ ಪ್ರತಿಕೃತಿಯನ್ನು ಕೆತ್ತಲಾಗಿದೆ. ಮೊದಲು ಈ ಕಂಬವನ್ನು ಕಂಬದ ಮಧ್ಯದ ಆಧಾರದ ಮೇಲೆ ತಿರುಗಿಸಲಾಗುತ್ತಿಂತೆ, ೧೯ನೇ ಶತಮಾನದಲ್ಲಿ ಗೋಪುರ ಕುಸಿದಾಗ ಈ ಕಂಭದ ಮೇಲೆ ಭಾರ ಬಿದ್ದುದರಿಂದ ಈಗ ಅದು ಸಾಧ್ಯವಿಲ್ಲ. ದೇವಮೂರುತಿಯ ಎದುರಿರುವ ಜಯ-ವಿಜಯರ ಮೂರ್ತಿಗಳು, ದೇವಸ್ಥಾನದ ಒಳದ್ವಾರದ ಮೇಲಿರುವ ಅತಿಸೂಕ್ಷ್ಮ ಕೆತ್ತನೆಗಳು, ಅತಿಸುಂದರಿ ಮೋಹಿನಿ ರೂಪಿ ವಿಷ್ಣುವಿನ ವಿಗ್ರಹ, ಛಾವಣಿಯಲ್ಲಿ ಕೆತ್ತಿರುವ ಸುಂದರ ಕಲಾಕೃತಿಗಳು, ಸಾಕ್ಷಾತ್ ಚೆನ್ನಕೇಶವನ ವಿಗ್ರಹ ಎಲ್ಲವೂ ಸೇರಿ ಬೇಲೂರಿನ ಚೆನ್ನಕೇಶವ ದೇವಾಲಯವನ್ನು
ಹೊಯ್ಸಳರ ರಾಜಲಾಂಛನ- ಹುಲಿಯನ್ನು ಕೊಲ್ಲುತ್ತಿರುವ ಸಳ (ಚೆನ್ನಕೇಶವ ದೇಗುಲದ ಬಾಗಿಲಲ್ಲಿ)
ಅತ್ಯಂತ ಸುಂದರ ಒಳಾಂಗಳವುಳ್ಳ ದೇಗುಲವಾಗಿ ಮಾಡುತ್ತವೆ. ಈ ದೇವಾಲಯದಲ್ಲಿರುವ ಒಟ್ಟೂ ೪೨ ಶಿಲಾಬಾಲಿಕೆಯರಲ್ಲಿ ನಾಲ್ಕು ಶಿಲಾಬಾಲಿಕೆಯರ ವಿಗ್ರಹಗಳು ದೇವಸ್ಥಾನದ ಒಳಭಾಗದಲ್ಲಿ ಮೂರ್ತಿಯ ಎದುರಿನ ಕಂಬಗಳ ಮೇಲಿದ್ದು(ಇವುಗಳಲ್ಲಿ ಒಂದು ಸ್ವತಃ ನಾಟ್ಯರಾಣಿ ಶಾಂತಲಾದೇವಿಯನ್ನೇ ಮಾದರಿಯಾಗಿಟ್ಟುಕೊಂಡು ಕೆತ್ತಿದ್ದೆನ್ನಲಾಗಿದೆ) ಉಳಿದ ೩೮ ವಿಗ್ರಹಗಳು ಹೊರ ಆವರಣದ ಗೋಡೆಗಳ ಮೇಲಿವೆ. ದರ್ಪಣಸುಂದರಿ, ಶುಕಭಾಷಿಣಿ, ಕೀರವಾಣಿ, ಮರ್ಕಟಮೋಹಿನಿ  ಹೀಗೆ ವಿವಿಧ ಭಂಗಿಗಳಲ್ಲಿರುವ ಈ ಶಿಲಾಬಾಲಿಕೆಯರ ಶಿಲ್ಪಗಳು ಅತಿಸುಂದರ, ಅತಿಸೂಕ್ಷ್ಮ ಕೆತ್ತನೆಗೆ ಮಾದರಿಗಳಾಗಿವೆ. ಪ್ರತೀ ಚಿತ್ರದಲ್ಲಿಯೂ ಅತಿ ಚಿಕ್ಕ ಮಾಹಿತಿಗೂ ಗಮನಕೊಟ್ಟು ಕೆತ್ತಲಾಗಿದೆ. ಉದಾಹರಣೆಗೆ ಒಂದು ಶಿಲ್ಪದಲ್ಲಿ ಸುಂದರಿ ಹಲಸಿನ ಹಣ್ಣನ್ನು ತಿನ್ನುತ್ತಿರುತ್ತಾಳೆ, ನೊಣವೊಂದು ಹಣ್ಣಿನ ಹತ್ತಿರ ಬಂದಿರುತ್ತದೆ, ಹಲ್ಲಿಯೊಂದು ನೊಣವನ್ನು ಹಿಡಿಯಲು ಕಾಯುತ್ತಿರುತ್ತದೆ, ಹಲ್ಲಿಯ ಮುಖವೂ ಸ್ಪಷ್ಟವಾಗಿ ಕಾಣುವ ಹಾಗೆ ಕೆತ್ತಿರುವುದು ಹೊಯ್ಸಳ ಶಿಲ್ಪಿಗಳ ಹೆಗ್ಗಳಿಕೆಯೇ. ಇನ್ನೊಂದು ಉದಾಹರಣೆಯೆಂದರೆ, ಒಬ್ಬ ಸುಂದರಿ ಸ್ನಾನ ಮಾಡಿ ಅಲಂಕಾರ ಮಾಡಿಕೊಂಡು ಪ್ರಿಯನಿಗಾಗಿ ಕಾಯುತ್ತಿರುತ್ತಾಳೆ, ಸಖಿಯು ಅವಳಿಗೆ ಬಾಳೆಹಣ್ಣನ್ನು ಸುಲಿದು ಕೊಡುತ್ತಿರುತ್ತಾಳೆ. ಕಾಲಬುಡದಲ್ಲಿರುವ ಮಂಗವೊಂದು ಹಣ್ಣಿಗಾಗಿ ಕಾತರದಿಂದ ಕಾಯುತ್ತಿರುವುದಕ್ಕೂ, ಸುಂದರಿ ಗಂಡನಿಗೆ ಕಾಯುತ್ತಿರುವುದಕ್ಕೂ ಸಮೀಕರಿಸಿ ತೋರಿಸಲಾಗಿದೆ. ಶಕ್ತಿಯ ಪ್ರತೀಕವಾದ ಆನೆ,
ಚೆನ್ನಕೇಶವ ದೇವಾಲಯದ ದೀಪಸ್ಥಂಭ - ಏಕಶಿಲಾ ರಚನೆ
ಧೈರ್ಯದ ಪ್ರತೀಕವಾದ ಸಿಂಹ, ವೇಗದ ಗುರುತಾದ ಕುದುರೆ ಹೀಗೆ ಮೂರು ಸಾಲುಗಳಲ್ಲಿ ರಾಜನಿಗಿರಬೇಕಾದ ಗುಣಗಳನ್ನು ದೇವಸ್ಥಾನದ ಸುತ್ತಲೂ ಹೊರಗೋಡೆಯಲ್ಲಿ ಕೆತ್ತಿ ನಿಲ್ಲಿಸಲಾಗಿದೆ. ಅದರ ಮೇಲೆ ಪುರಾಣಗಳ ವಿವಿಧ ಸನ್ನಿವೇಶಗಳನ್ನು, ವಿವಿಧ ದೇವರುಗಳ ಹಲವಾರು ಭಂಗಿಗಳನ್ನು ಕೆತ್ತಲಾಗಿದ್ದು ಇಲ್ಲಿ ಒಟ್ಟಾರೆ ೧೦,೦೦೦ ಇಂತಹ ಶಿಲ್ಪಕಲಾಕೃತಿಗಳಿವೆ. ದೇವರಿಗೇ ಮೋಡಿ ಮಾಡುವಂತಹ ಈ ಶಿಲ್ಪಕಲೆಗೆ ಹುಲುಮಾನವರಾದ ನಾವು ಮರುಳಾಗುವುದು ದೊಡ್ಡ ವಿಷಯವೇ? ಮತ್ತೊಂದು ವಿಶೇಷವೆಂದರೆ ೯ ಶತಮಾನಗಳಷ್ಟು ದೀರ್ಘಕಾಲದಿಂದ ಇಲ್ಲಿ ದಿನವೂ ಪೂಜೆ ಆಗುತ್ತಿರುವುದು ಮತ್ತು ಮತಾಂಧ ಧಾಳಿಕೋರರ ಧಾಳಿಗೆ ಇದು ತುತ್ತಾಗದೇ ಇರುವುದು.

ಚೆನ್ನಕೇಶವ ದೇವಸ್ಥಾನದ ಹಿಂಭಾಗದಲ್ಲಿ ರಂಗನಾಯಕಿ ಮತ್ತು ಸೌಮ್ಯನಾಯಕಿಯರ ದೇವಸ್ಥಾನಗಳಿವೆ. ಗೈಡುಗಳು ಈ ದೇವಸ್ಥಾನಗಳ ಬಗ್ಗೆ ಮಾಹಿತಿಗಳನ್ನು ನೀಡುವುದಿಲ್ಲವಾದರೂ ಇವುಗಳ ಅನುಪಮ ಶಿಲ್ಪಕಲೆಗಳು ಆಸಕ್ತರನ್ನು ಸೆಳೆಯುತ್ತವೆ. ಇವೇ ದೇವಾಲಯಗಳು ಬೇರೆ ಊರಲ್ಲೆಲ್ಲಾದರೂ ಇದ್ದಿದ್ದರೆ ಇವೇ ಪ್ರಸಿದ್ಧ ದೇಗುಲಗಳಾಗಿ ಮೆರೆಯುತ್ತಿದ್ದವೇನೋ, ಆದರೆ
ಬೇಲೂರಿನ ಚೆನ್ನಕೇಶವನ ಪ್ರಭೆಯೆದುರು ಇವು ಸ್ವಲ್ಪ ಮಂಕಾದಂತೆ ಕಾಣುತ್ತವೆ. ಸುಂದರ ಕಂಬಗಳನ್ನು ಬೇಲಿಗೆ ಹಾಕಿರುವದನ್ನು ನೋಡಿದಾಗ ಇರುವ ಮನಸ್ಸು ಅವುಗಳ ಈ ಪಾಡಿಗೆ ಮರುಗಬೇಕೋ, ಅಥವಾ ಇಷ್ಟೆಲ್ಲಾ ಶಿಲ್ಪಕಲಾಸಂಪತ್ತು ಎಂದು ಹೆಮ್ಮೆಪಡುವುದೋ ತಿಳಿಯದೇ ಶ್ರೀಗಂಧದ ಮರವನ್ನು ಕಟ್ಟಿಗೆಯಾಗಿ ಉಪಯೋಗಿಸಿದ ಕಮ್ಮಾರನ ಕಥೆಯ ನೆನಪಾಗುತ್ತದೆ. ಇದೇ ದೇಗುಲದ ಆವರಣದಲ್ಲಿ ನಿಲ್ಲಿಸಿಟ್ಟ(ನೆನಪಿಡಿ. ಹುಗಿಯದೇ, ಕೇವಲ ನಿಲ್ಲಿಸಿಟ್ಟ) ದೀಪಸ್ಥಂಭವೊಂದಿದ್ದು, ಬರೀ ಭಾರಕೇಂದ್ರದ** ಆಧಾರದ ಮೇಲೆ ೯೦೦ ವರ್ಷಗಳಿಂದ ನಿಂತಿರುವುದು ವೈಜ್ಞಾನಿಕ ತಿಳುವಳಿಕೆಗೆ ಸಾಕ್ಷಿ.

ಹೊಯ್ಸಳೇಶ್ವರ ದೇವಾಲಯ, ಹಳೆಬೀಡು
ಬೇಲೂರನ್ನು ಬಿಟ್ಟು ಮುಂದೆ ಹೋಗಿದ್ದು ಹೊಯ್ಸಳರ ರಾಜಧಾನಿ ಹಳೇಬೀಡಿಗೆ. ಎರಡು ವಿಷ್ವಪ್ರಸಿದ್ಧ ಪ್ರವಾಸಿಕೇಂದ್ರಗಳನ್ನು ಜೋಡಿಸುವ ಬೇಲೂರು-ಹಳೆಬೀಡು ರಸ್ತೆಯೂ ಒಂದು ಮಟ್ಟಕ್ಕೆ ಉತ್ಖನನಕ್ಕೆ ಇಡಾಗಿದ್ದು, ವಾಹನಚಾಲನೆ ನರಕಸದೃಶವಾಗಿದೆ. ಬೇಲೂರು ಕೇಶವರೂಪಿ ವಿಷ್ಣುವಿನದಾದರೆ ಹಳೆಬೀಡು ಹೊಯ್ಸಳೇಶ್ವರ ಎಂಬ ಹೆಸರಿನಿಂದ ಪರಿಚಿತನಾಗಿರುವ ಶಿವನದ್ದು. ಈ ದೇಗುಲ ನಕ್ಷತ್ರಾಕಾರದ ಎತ್ತರಿಸಿದ ಜಗುಲಿಯ ಮೇಲಿರುವ ದ್ವಿಕೂಟ ರಚನೆ. ಒಂದು ಭಾಗದಲ್ಲಿ ಹೊಯ್ಸಳೇಶ್ವರನ ಪೂಜೆ ನಡೆದರೆ(ಹೊಯ್ಸಳೇಶ್ವರ ಎಂಬುದು ರಾಜ ವಿಷ್ಣುವರ್ಧನನ ಬಿರುದೂ ಸಹ)
ಹೊಯ್ಸಳೇಶ್ವರ ದೇವಾಲಯದ ನಂದಿ
ಮತ್ತೊಂದು ಭಾಗದಲ್ಲಿ ಶಾಂತಲೇಶ್ವರನ(ಶಾಂತಲೇಶ್ವರ ಹೆಸರು ರಾಣಿ ಶಾಂತಲೆಯ ಹೆಸರಿನಿಂದ ಬಂದಿದ್ದು) ಪೂಜೆ ನಡೆಯುತ್ತದೆ. ಎರಡು ದೇವಮೂರ್ತಿಯ ಮುಂದೂ ಕಲ್ಲಿನಲ್ಲಿ ಪ್ರತಿಬಿಂಬ ಕಾಣುವಷ್ಟು ನುಣುಪಾದ ಕಲ್ಲಿನ ಬೃಹದಾಕಾರದ ಒಂದೊಂದು ನಂದಿಯ ವಿಗ್ರಹಗಳಿವೆ. ಈ ದೇವಸ್ಥಾನವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತೆರೆದಿದ್ದು ಇದರ ಆವರಣದಲ್ಲಿ ಪುರಾತತ್ವ ಇಲಾಖೆಯವರ ಒಂದು ವಸ್ತು ಸಂಗ್ರಹಾಲಯವಿದೆ.

ಗಾತ್ರದಲ್ಲಿ, ಶಿಲ್ಪಗಳ ಸಂಖ್ಯೆಯಲ್ಲಿ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಚೆನ್ನಕೇಶವ ದೇವಾಲಯಕ್ಕಿಂತ ದೊಡ್ಡದಾಗಿದ್ದು ಇಲ್ಲಿ ೨೦ ಸಾವಿರದಷ್ಟು ಶಿಲ್ಪಗಳನ್ನು ಕೆತ್ತಲಾಗಿದೆ. ಚೆನ್ನಕೇಶವ ದೇವಾಲಯದ ಒಳಾಂಗಣದ ಸೌಂದರ್ಯದಿಂದ ಪ್ರಸಿದ್ಧವಾದರೆ ಹೊಯ್ಸಳೇಶ್ವರ ದೇವಾಲಯದ ಹೊರಗೋಡೆಯ ಮೇಲಿನ ಕೆತ್ತನೆಗಳು ವಿಶ್ವಪ್ರಸಿದ್ಧ. ಇಡೀ
ದೇವಾಲಯದ ಹೊರಮೈಗುಂಟ ಕೆಳಗೆ ಆನೆ, ನಂತರ ಸಿಂಹ, ಅದರ ಮೇಲೆ ಹೂಮಾಲೆ, ಅದರ ಮೇಲೆ ಕುದುರೆ, ಮಕರ ಹೀಗೆ ವಿವಿಧ ಗುಣಗಳ ಸಂಕೇತಗಳ ೧೧ ಪದರಗಳ ಕೆತ್ತನೆಗಳಿವೆ. ಅದರ ಮೇಲೆ ಪುರಾಣಗಳ ವಿವಿಧ ಪ್ರಸಂಗಗಳನ್ನು, ದೇವದೇವಿಯರ ವಿವಿಧ ಭಂಗಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಬಾಳೆಮರಗಳ ಮರೆಯಿಂದ ವಾಲಿಗೆ ಬಾಣ ಹೂಡುವ ಶ್ರೀರಾಮಚಂದ್ರ, ರಾಕ್ಷಸನ ಮರ್ಧನ ಮಾಡಿ ಮುಖದ ಚರ್ಮವನ್ನು ಕೈಯ್ಯಲ್ಲೇ ಹಿಡಿದೆಳೆದ ರುದ್ರ ಭಯಂಕರ ಈಶ್ವರ, ಅತಿ ಅಪರೂಪಕ್ಕೆ ನರ್ತನ ಭಂಗಿಯಲ್ಲಿರುವ ಶ್ರೀಲಕ್ಷ್ಮಿ, ಕಲ್ಲಿಂದಲೋ ಕಂಬದಿಂದಲೋ ಎದ್ದೇ ಬಂದಿದ್ದಾನೇನೋ ಎಂಬಂತೆ ಕಾಣುವ
ಬ್ರಹ್ಮ- ವಿಷ್ಣು - ಮಹೇಶ್ವರ
ಉಗ್ರನರಸಿಂಹ, ಪದ್ಮವ್ಯೂಹದ ಒಳಹೊರಟಿರುವ ಅಭಿಮನ್ಯು, ಸೃಷ್ಟಿ-ಸ್ಥಿತಿ-ಲಯಕರ್ತುಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಬ್ರಹತ್ ಕೆತ್ತನೆ, ಪಾರ್ವತಿ ತನ್ನ ಮೇಲೆ ಕೂತಿದ್ದಕ್ಕೆ ಸಿಟ್ಟು ಮಾಡಿ ಒಡೆಯ ಶಿವನ ಕೈಯ್ಯಲ್ಲಿ ನೇವರಿಸಿಕೊಳ್ಳುವ ನಂದಿ ಇವುಗಳ ಸೌಂದರ್ಯವನ್ನು ಶಬ್ದಗಳ ಬಂಧದಲ್ಲಿ ಕಟ್ಟಿಹಾಕಲಾದೀತೇ? ಎಷ್ಟು ನೋಡಿದರೂ ಸಾಕೆನಿಸದ ಈ ಕಲಾದೇಗುಲವನ್ನು ನೋಡಿಯೇ ಆನಂದಿಸಬೇಕು.

ಹೊಯ್ಸಳರು ಆಳ್ವಿಕೆಯ ಮಧ್ಯಭಾಗದಲ್ಲಿ ರಾಜಧಾನಿ ಹಳೆಬೀಡಿಗೆ ಬದಲಾಯಿಸಲ್ಪಡುತ್ತದೆ. ಹಾಗೆಯೇ ಅವರ ಕಲಾರಾಜಧಾನಿಯಾಗೂ ಇದು ಮೆರೆಯುತ್ತದೆ. ೧೨೦ ವರ್ಷಗಳ ಕಟ್ಟಲ್ಪಟ್ಟ ಈ ದೇವಾಲಯ ಮುಸ್ಲೀಮರ ಧಾಳಿಗೆ ಒಳಗಾಗುವಾಗ ಇನ್ನೂ ನಿರ್ಮಾಣಾವಸ್ಥೆಯಲ್ಲಿಯೇ ಇತ್ತು.
ಬಾಳೆಮರಗಳ ಮರೆಯಿಂದ ವಾಲಿಗೆ ಬಾಣ ಹೂಡುವ ಶ್ರೀರಾಮಚಂದ್ರ
ಆದ್ದರಿಂದಲೇ ಒಳಾಂಗಣದ ಕೆಲವು ಭಾಗಗಳಲ್ಲಿ, ಕಂಬದ ಕೆತ್ತನೆಗಳಲ್ಲಿ ಕೆಲವು ಕಡೆ ಕೆತ್ತನೆ ನಿಂತಿರುವುದನ್ನು ನೋಡಬಹುದು. ಹಂಪಿಯ ದೌರ್ಭಾಗ್ಯಕ್ಕೆ ಮರುಗುವ ಮನ ಹಳೆಬೀಡು ಮುಸ್ಲಿಮರ ಧಾಳಿಗೊಳಗಾಗಿಯೂ ಆ ಮಟ್ಟಿಗಿನ ದುರ್ಗತಿ ಹೊಂದದೇ ಇದ್ದಿದ್ದಕ್ಕೆ ಸಂತಸ ಪಡುತ್ತದೆ. ಆದರೆ ಮುಂದೆ ಬಂದ ಬ್ರಿಟೀಷರು ಇದ್ದ ೭೪ ಶಿಲಾಬಾಲಿಕೆಯರಲ್ಲಿ ೭೦ನ್ನು ಇಂಗ್ಲೆಂಡಿಗೆ ಕದ್ದೊಯ್ದರು ಎಂದಾಗ ಅದೇ ಮನಸ್ಸು ಕುದಿಯುತ್ತದೆ. ಗಾಯದ ಮೇಲೆ ಬರೆ ಎಂಬಂತೆ ಕೆಲವೊಂದಿಷ್ಟುಕಡೆ ಕೆಲವು ಶಿಲ್ಪಗಳು ಸ್ಥಳೀಯರ, ಪ್ರವಾಸಿಗರ ದೌರ್ಜನ್ಯಕ್ಕೆ ತುತ್ತಾಗಿದೆ. ಒಟ್ಟಾರೆಯಾಗಿ ಇಂತ ಭವ್ಯ ಇತಿಹಾಸವನ್ನು, ಕಲೆಯನ್ನು ಹೋದಿರುವ ನಾವು ಭರತೀಯರು ಅದನ್ನು ಉಳಿಸಿಕೊಳ್ಳುವಲ್ಲಿ ಆಸ್ವಾದಿಸುವಲ್ಲಿ ಎಡುವುತ್ತೇವೇನೋ ಎನ್ನಿಸುತ್ತದೆ.

ಇಷ್ತು ಹೊತ್ತಿಗೆ ಸೂರ್ಯಾಸ್ತ ಆಗುತ್ತ ಬಂತು.
ಪದ್ಮವ್ಯೂಹದ ಒಳಹೊರಟಿರುವ ಅಭಿಮನ್ಯು
ಸಮಯಾವಕಾಶದ ಕೊರತೆಯಿದ್ದುದರಿಂದ, ಹಿಂದಿನಿಂದ ಸೆಕ್ಯುರಿಟಿಯವರು ಸೀಟಿ ಊದುತ್ತಾ ಓಡಿಸುತ್ತಿದ್ದುದರಿಂದ ಒಂದಕ್ಕಿಂತ ಒಂದು ಚಂದವಿರುವ ಈ ಶಿಲ್ಪಗಳನ್ನು ಗಡಿಬಿಡಿಯಲ್ಲಿ ನೋಡಬೇಕಾಗಿ/ಚಾಯಾಚಿತ್ರ ತೆಗೆಯಬೇಕಾಗಿ ಬಂತು. ಇದೇ ಗಡಿಬಿಡಿಯಲ್ಲಿ(ಮಾಹಿತಿ ಇರದಿದ್ದುದೂ ಒಂದು ಕಾರಣ :( ) ಕೇದಾರೇಶ್ವರ ದೇವಸ್ಥಾನವನ್ನು ನೋಡದೇ ಬಿಡಬೇಕಾಗಿ ಬಂತು. ಮುಂದೊಮ್ಮೆ ಕನಿಷ್ಟ ಇನ್ನೊಮ್ಮೆ ಬರುತ್ತೇನೆ ಎಂದು ನನ್ನಷ್ಟಕ್ಕೆ ಹೇಳಿಕೊಂಡು ಬೆಂಗಳೂರಿನತ್ತ ತಿರುಗಿ ಹೊರಟೆವು.

ಇತಿಹಾಸದ ಬಗ್ಗೆ ಆಸಕ್ತಿ ಇದ್ದರೆ, ಕದಂಬ, ಗಂಗ, ಚಾಲುಕ್ಯ, ಹೊಯ್ಸಳರೆಂದರೆ-ಕನ್ನಡನಾಡಿನ ಚರಿತ್ರೆಯೆಂದರೆ ಚಿಕ್ಕದೊಂದು ರೋಮಾಂಚನ ಉಂಟಾಗುತ್ತದೆ ಎಂದರೆ, ಶಿಲ್ಪಕಲೆಯನ್ನು ಆಸ್ವಾದಿಸುವ ಗೌರವಿಸುವ ಮನಸ್ಸಿದೆ ಎಂದರೆ, ಕಲ್ಲುಗಳು ಮಾತನಾಡುವುದನ್ನು ಕೇಳಿಸಿಕೊಳ್ಳುವ ಇಚ್ಛೆಯಿದ್ದರೆ, ಅದನ್ನು ಜವಾಬ್ದಾರಿಯುತವಾಗಿ ಅನುಭವಿಸುವ ಪ್ರೌಡಿಮೆ ಇದ್ದರೆ, ನೀವು ಬೇಲೂರು-ಹಳೆಬೀಡನ್ನು ನೋಡಲೇಬೇಕು. ಬೆಂಗಳೂರಿನಿಂದ ಕೇವಲ ೨೦೦ ಕಿ.ಮೀ. ದೂರದಲ್ಲಿರುವ ಇವೆರಡು ಸ್ಥಳಗಳನ್ನು ಒಂದೇ ದಿನದಲ್ಲಿ ನೋಡಿ ಮುಗಿಸಬಹುದು.

ಟಿಪ್ಪಣಿಗಳು:
**. ಬುಡದಲ್ಲಿ ದಪ್ಪವಿದ್ದು ತುದಿಗೆ ಹೋದಂತೆ ನಿರ್ದಿಷ್ಟ ಪ್ರಮಾಣದಲ್ಲಿ ತೆಳ್ಳಗಾಗುತ್ತ ಬಂದರೆ centre of gravity ಕಂಬದ ಮಧ್ಯಭಾಗದಲ್ಲಿ ಬಂದು ಯಾವ ಆಧಾರವೂ ಇಲ್ಲದೇ ಹಾಗೇ ನಿಲ್ಲಬಲ್ಲುದು.


ವಿಶೇಷ ಸೂಚನೆ: ನನ್ನ ತಿಳಿವಿಗೆ ಅರ್ಥವಾದ ಹಾಗೆ, ನನ್ನ ಜ್ಞಾನಕ್ಕನುಗುಣವಾಗಿ ಬರೆದಿದ್ದೇನೆ.  ಯಾವುದಾದರೂ ಅಂಶದ ಬಗ್ಗೆ, ಇಸವಿಯ ಬಗ್ಗೆ, ಇತಿಹಾಸದ ಬಗ್ಗೆ ಏನಾದರೂ ತಪ್ಪಿದ್ದರೆ ಹೇಳಿ, ತಿದ್ದಿಕೊಳ್ಳುತ್ತೇನೆ.

ಇನ್ನೊಂದು ಅತಿ ವಿಶೇಷ ಸೂಚನೆ: ಗೆಳೆಯ ಪ್ರಶಸ್ತಿ ಬೇಲೂರು ಹಳೆಬೀಡಿನ ದೇವಾಲಯಗಳ ಬಗ್ಗೆ ಬರೆದಿದ್ದಾನೆ. ಅದರ ಜೊತೆಗೆ ಹೊಯ್ಸಳರ ಬೇರೆ ದೇವಾಲಯಗಳ ಬಗೆಗೂ ಚಂದದ ಚಿತ್ರಗಳು ಮತ್ತು ಉತ್ತಮ ಮಾಹಿತಿ ಇದೆ. ಓದಿ ನೋಡಿ.
೧. ಪಾತಾಳೇಶ್ವರ ದೇಗುಲ ,ಬೇಲೂರು
೨. ಚೆನ್ನಕೇಶವ ದೇವಾಲಯ, ಬೇಲೂರು
೩. ಕೇದಾರೇಶ್ವರ ದೇವಾಲಯ, ಹಳೇಬೀಡು
೪. ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇವಾಲಯ, ಹಳೇಬೀಡು