Showing posts with label ಪುಣ್ಯಕೋಟಿ. Show all posts
Showing posts with label ಪುಣ್ಯಕೋಟಿ. Show all posts

Sunday, 15 March 2015

ಧರಣಿ ಮಂಡಲ ಮಧ್ಯದೊಳಗೆ

ಪುಣ್ಯಕೋಟಿಯ ಹಾಡನ್ನು ಕೇಳದ ಕನ್ನಡಿಗನಿದ್ದಾನೇ? ಇಲ್ಲವೆನಿಸುತ್ತದೆ. ನಮ್ಮ ಮತ್ತು ನಮ್ಮ ಹಿಂದಿನ  ಪೀಳಿಗೆಯವರೆಲ್ಲರಿಗೂ ಸುಪರಿಚಿತವಾಗಿರುವ ಹಸುವಿನ ಹಾಡದು. ರಾಗಬದ್ಧವಾಗಿ ಹಾಡಲು ಬರುವ, ಜಾನಪದ ಸೊಗಡಿರುವ, ಶುದ್ಧ ಕನ್ನಡದ ಅದ್ಭುತ ರಚನೆಯಿದು. ಮಗುವಿನ ಬಗೆಗಿನ ತಾಯಿಯ ಮಮತೆಯನ್ನು, ಅದಕ್ಕಿಂತ ಹಿರಿದಾದ ಸತ್ಯದ ಸತ್ವವನ್ನು ಎತ್ತಿಹಿಡಿಯುವ ಗೋವಿನಷ್ಟೇ, ’ಸುಳ್ಳು ಹೇಳುವ ಎಲ್ಲ ಅವಶ್ಯಕತೆಯಿದ್ದರೂ ಈ ಪುಣ್ಯಕೋಟಿ ಕೂಡ ಸತ್ಯವನ್ನು ಹೇಳುತ್ತಿರಲೂಬಹುದು’ ಎಂದು ಯೋಚಿಸಿ ಅದರ ಸತ್ಯಸಂಧತೆಯನ್ನು ರುಜುವಾತುಪಡಿಸಲು ಅವಕಾಶಕೊಡುವ ಮತ್ತು ಧರ್ಮಮಾರ್ಗದಲ್ಲಿ ನಡೆದ ಗೋವನ್ನು ತಿನ್ನದೇ ಬಿಡುವ ವ್ಯಾಘ್ರನೂ ಆಪ್ತನಾಗುತ್ತಾನೆ. ಅದಕ್ಕೇ ಈ ಹಾಡು ಇಷ್ಟೆಲ್ಲ ಮಕ್ಕಳ/ದೊಡ್ಡವರ ಹೃದಯದಲ್ಲಿ ಮನೆಮಾಡಿರುವುದು.

ನನಗೆ ಈ ಹಾಡಿನ ಪರಿಚಯವಾಗಿದ್ದು ನಾನು ೩-೪ ವರ್ಷದವನಾಗಿದ್ದಾಗ. ಆಗ ನಾನು ವರ್ಷದ ಎಂಟು ತಿಂಗಳು ಅಜ್ಜನ ಮನೆಯಲ್ಲಿರುತ್ತಿದ್ದೆ. ಪ್ರತಿ ಸಂಜೆ ದಿನದ ಆಟವೆಲ್ಲ ಮುಗಿದ ಬಳಿಕ ಕೈಕಾಲು ತೊಳೆದು ಬಂದು ದೇವರ ಕೋಣೆಯಲ್ಲಿ ಕುಳಿತು ಬಾಯಿಪಾಟ ಒಪ್ಪಿಸಿದ ಬಳಿಕ ದೊಡ್ಡಮ್ಮ ಹೇಳುತ್ತಿದ್ದ ಹಾಡು ಇದು. ಎಷ್ಟು ಕೇಳಿದರೂ ಸಾಕೆನಿಸದು, ಪ್ರತೀ ದಿನವೂ ಕೇಳಲೇಬೇಕು, ಪ್ರತೀ ದಿನವೂ ಪುಣ್ಯಕೋಟಿಯನ್ನು ಮೆಚ್ಚಲೇಬೇಕು, ಪುಣ್ಯಕೋಟಿಯು ಕರುವನ್ನು ಸಮಾಧಾನಿಸುವಾಗ ಕರುವಿನ ಜೊತೆಗೆ ನಾನೂ ಕಣ್ಣೀರಾಗಲೇಬೇಕು, ಪುಣ್ಯಕೋಟಿ ಸಾಯುವುದಿಲ್ಲ ಎಂದು ಗೊತ್ತಾದಾಗ ಒಂದು ಸಮಾಧಾನ ಹುಟ್ಟಿ ನಾನು ಕಣ್ಣೊರೆಸಿಕೊಳ್ಳಬೇಕು, ಅರ್ಬುತ ಪ್ರಾಣತ್ಯಾಗ ಮಾಡುವಾಗ ಸತ್ಯವನ್ನೇ ಮಾತನಾಡಬೇಕು ಎಂಬ ನೀತಿಯನ್ನು ದೊಡ್ಡಮ್ಮ ಹೇಳಲೇಬೇಕು. ಈ ದಿನಚರಿ ವರ್ಷಗಟ್ಟಲೇ ನಡೆದಿತ್ತು. ಪ್ರತೀ ದಿನವೂ ಅತ್ತರೂ ಒಂದು ದಿನವೂ ಹಾಡು ಕೇಳುವುದು ತಪ್ಪುತ್ತಿರಲಿಲ್ಲ. ಈ ಹಾಡಿನಲ್ಲಿ ಅಂತದ್ದೊಂದು ಮೋಡಿ ಇತ್ತು, ಹೇಳುತ್ತಿದ್ದ ರೀತಿಯಲ್ಲಿ ತಿರುತಿರುಗಿ ಕೇಳಿದರೂ ಬೇಜಾರು ಬರದ ಆಕರ್ಷಣೆ ಇತ್ತು, ಕತೆಯಲ್ಲಿ ಪ್ರತಿ ಬಾರಿಯೂ ಅಂದಿನ ಬಾಲ-ಸುಬ್ರಹ್ಮಣ್ಯನ ಕಣ್ಣುಗಳಲ್ಲಿ ನೀರಿಳಿಸುವಷ್ಟು ಹಾಗೂ ಮತ್ತೂ ಒಂದಿಷ್ಟು ಭಾವನಾತ್ಮಕತೆ ಇತ್ತು.

ಪುಣ್ಯಕೋಟಿಯದ್ದು ಒಂದು ಸರಳ ನೀತಿಕತೆ. ಪುಣ್ಯಕೋಟಿ ಕರ್ನಾಟ ದೇಶದ ಒಬ್ಬ ಗೊಲ್ಲನ ದೊಡ್ಡಿಯ ಗೋವು. ಒಂದು ದಿನ ಮೇಯಲು ಕಾಡಿಗೆ ಹೋಗಿದ್ದಾಗ ಅರ್ಬುತ ಎಂಬ ವ್ಯಾಘ್ರ(ನೆನಪಿಟ್ಟುಕೊಳ್ಳಿ, ಅದು ದುಷ್ಟವ್ಯಾಘ್ರವಲ್ಲ, ಬರೀ ವ್ಯಾಘ್ರ)ನ ಕೈಯಲ್ಲಿ ಸಿಕ್ಕಿಕೊಂಡು ಬೀಳುತ್ತಾಳೆ. ಬಗೆದು ತಿನ್ನುತ್ತೇನೆ ಎನ್ನುವ ಹುಲಿರಾಯನಲ್ಲಿ ತನ್ನ ಚಿಕ್ಕ ಕರುವಿಗೆ ಕೊನೆಯ ಬಾರಿ ಮೊಲೆಯಿತ್ತು ಬೀಳ್ಕೊಟ್ಟು ಬರುತ್ತೇನೆ, ದಯವಿಟ್ಟು ಹೋಗಿ ಬರಲು ಅವಕಾಶ ಮಾಡಿಕೊಡು ಎನ್ನುತ್ತದೆ. ಪುಣ್ಯಕೋಟಿಯನ್ನು ಮೊದಮೊದಲು ಅನುಮಾನಿಸಿದರೂ ನಂತರ ಅರ್ಬುತ ಪುಣ್ಯಕೋಟಿಗೆ ಹೋಗಿಬರಲು ಅವಕಾಶ ಮಾಡಿಕೊಡುತ್ತದೆ. ಎಂತಿದ್ದರೂ ಹೀಗೆ ಹೋದ ಹಸು ಎಂದಿಗೂ ತಿರುಗಿಬರಲಾರದು ಎಂಬ ಧೈರ್ಯದಲ್ಲಿದ್ದ ಅರ್ಬುತನ ನಂಬಿಕೆಯನ್ನು ಸುಳ್ಳು ಮಾಡುವಂತೆ ಪುಣ್ಯಕೋಟಿ ತಿರುಗಿ ಬರುತ್ತಾಳೆ, ಅದೂ ಅವಸರ ಅವಸರವಾಗಿ. ತನ್ನ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಸತ್ಯವನ್ನು ಮೆರೆದ ಪುಣ್ಯಾತ್ಗಿತ್ತಿ ಪುಣ್ಯಕೋಟಿಯಂತವಳ ಬಗ್ಗೆ ಸಂಶಯ ಪಟ್ಟೆನಲ್ಲಾ, ಇವಳನ್ನು ತಿನ್ನಲು ಹವಣಿಸಿದೆನಲ್ಲಾ ಎಂಬ ತನ್ನನ್ನು ತಾನೇ ಹಳಿದುಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ ಅರ್ಬುತ ಸಾಯವ ಅಗತ್ಯವಿರಲಿಲ್ಲ ಎಂಬುದು ನಿಜವಾದರೂ ಇಷ್ಟು ಚಂದದ ನೆನಪುಗಳನ್ನು ಕೊಟ್ಟ ಹಾಡಿನ ಅಷ್ಟು ಚಿಕ್ಕ ತಪ್ಪನ್ನು ಕೆದಕುವುದು ಕೃತಘ್ನತೆಯಾದೀತು.

ಎಲ್ಲವೂ ರಾಗ ಬದ್ಧ ಇಲ್ಲಿ, ಪ್ರಾಸದ ಜೊತೆಗೆ. ಎಲ್ಲವೂ ನೀತಿಯುಕ್ತ ಇಲ್ಲಿ, ಖಳನಾಗಿ ಚಿತ್ರಿತವಾದ ಹುಲಿರಾಯನೂ ನೀತಿಯ ಗೆರೆಯನ್ನು ದಾಟಿ ನಡೆಯಲಾರ. ಪುಣ್ಯಕೋಟಿಯಂತೂ ನಮ್ಮ ಕರ್ನಾಟ ದೇಶದ ಲೋಕಲ್ ಸತ್ಯ ಹರಿಶ್ಚಂದ್ರ. ಮುಂಜಾವಿನ ಸಮಯದಲ್ಲಿ ಕೊಳಲನ್ನು ಬಾರಿಸುತ್ತಾ ಎಲ್ಲ ಗೋವುಗಳ ಹೆಸರು ಹಿಡಿದು ಕರೆವ ಗೊಲ್ಲನ ಚಿತ್ರಣವೂ ಇಲ್ಲಿ ಸ್ಪಟಿಕ ಸ್ಪಷ್ಟ. ಹುಲಿಯ ಬಳಿ ಕೊನೆಯ ಬಾರಿ ಮಗುವನ್ನು ನೋಡಿಬರಲು ಕಳಿಸಿಕೊಡಲು ಕೇಳಿಕೊಳ್ಳುವಾಗ, ತನ್ನ ಒಡಹುಟ್ಟು ದನಗಳ ಬಳಿ ತನ್ನ ಕರುವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳುವಾಗ, ಮತ್ತೆ ಹುಲಿಯ ಎದುರು ಬಂದು ನಿಂತು ಈಗ ನನ್ನನ್ನು ತಿನ್ನು ಎಂದು ಹೇಳುವಾಗ ಪುಣ್ಯಕೋಟಿಯ ಗಂಟಲು ಉಬ್ಬಿ ಬರುವುದೂ ವೇದ್ಯವಾಗಿಸುವಷ್ಟು ಶಕ್ತಿಶಾಲಿ ನಮ್ಮ ಈ ಪುಣ್ಯಕೋಟಿಯ ಹಾಡು. ಕಥನ-ಕಾವ್ಯಗಳ ಪ್ರ‍ೇಮಿಗಳ ಪಾಲಿಗೆ(ನಾನೂ ಒಬ್ಬ ಈ ಗುಂಪಿನಲ್ಲಿ) ಪುಣ್ಯಕೋಟಿಯ ಹಾಡು ಹೃದಯಕ್ಕೆ ಅತಿ ಹತ್ತಿರವಾದದ್ದು. ಜನಪದದ ಕೊಡುಗೆಯಾದ ಈ ಹಾಡಿನ ಬಳಕೆಯೇ ಈ ಹಾಡಿಗೆ, ಹಾಡು ಕಟ್ಟಿದ ಅನಾಮಿಕ ಜನಪದಕ್ಕೆ ನಾವು ಕೊಡಬಹುದಾದ ಕೊಡುಗೆ. ನಮ್ಮ ಮನೆಯ ಮಕ್ಕಳಿಗೆ ಹೇಳಿಕೊಡುವ ಮೂಲಕ, ತಂತ್ರಜ್ಞಾನದ ಇಂದಿನ ಕಾಲದಲ್ಲಿ, ಕೊನೆಪಕ್ಷ ಯೂಟ್ಯೂಬಿನಲ್ಲಿ ಕೇಳಿಸುವ ಮೂಲಕ ಈ ಹಾಡನ್ನು, ಇಂತದ್ದೇ ಎಷ್ಟೋ ಹಾಡು-ಕಥೆಗಳನ್ನು ಉಳಿಸಬಹುದು, ಬೆಳೆಸಬಹುದು. ಉಳಿಸೋಣ, ಬೆಳೆಸೋಣ ನಾವು.

ಸೂಚನೆ.  ಪುಣ್ಯಕೋಟಿಯ ಹಾಡಿನ ಯೂಟ್ಯೂಬಿನ ಕೊಂಡಿ ಪುಣ್ಯಕೋಟಿ . ಒಮ್ಮೆ ಕೇಳಿಬಿಡಿ, ಬಾಲ್ಯಕ್ಕೊಮ್ಮೆ ಹೋಗಿಬನ್ನಿ.