Monday, 9 January 2012

ಎಲ್ಲಿ ಹೋದವು ಆ ದಿನಗಳು.



ಜೀವನದಲ್ಲಿ ಒಂದನ್ನು ಹುಡುಕುತ್ತ ಮತ್ತೊಂದನ್ನು ಕಳೆದುಕೊಳ್ಳುವ ಸೂತ್ರಕ್ಕೆ ಅಂಟಿಕೊಂಡು ಬದುಕುವ ನಾವು ಜೀವನದ ಚಿಕ್ಕ ಚಿಕ್ಕ ಆನಂದಗಳನ್ನು ಕಳೆದುಕೊಳ್ಳುತ್ತಿದ್ದೀವೆ ಅನ್ನಿಸುತ್ತದೆ ನನಗೆ. ನಿಮಗೆ ಹಾಗೆನ್ನಿಸದೆ? ಆದರೆ ಇದರ ಬಗ್ಗೆ ಹೆಚ್ಚೇನನ್ನು ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿಯಲ್ಲಿರುವ ನಾವು ಕೆಲವುಗಳನ್ನು ಸುಂದರ ನೆನಪು ಎಂದಷ್ಟೇ ಭಾವಿಸಿ ನೆನೆಸಿಕೊಳ್ಳುವುದು ಸೂಕ್ತ. ಅಂತಹ ಒಂದು ಚಿಕ್ಕ ಪ್ರಯತ್ನ ಇದು. 

ಮೂರು ತಿಂಗಳ ಕೆಳಗೆ ಊರಿಗೆ ಹೋಗಿದ್ದೆ, ನವರಾತ್ರಿಗೆ. ಅದೊಂದು ದಿನ ಬೆಳಿಗ್ಗೆ ಅಪ್ಪ ತೋಟದ ಕಡೆಗೆ ಹೋಗುವ ಮುನ್ನ ಎಬ್ಬಿಸಿದರು, ರಾತ್ರಿ ಬೇಗ ಮಲಗಿದ್ದೆನಾಗಿ ಎಬ್ಬಿಸಿದ ಕೂಡಲೇ ಎದ್ದೆ. ಮೈಮುರಿಯುತ್ತ ಹೊರಗೆ ಬಂದೆನೆಂದರೆ ಪ್ರಕೃತಿಯಲ್ಲಿ ಅದೇನೋ ಸಡಗರ, ಹೆಸರು ಗೊತ್ತಿಲ್ಲದ ಅದೆಷ್ಟೋ ಹಕ್ಕಿಗಳು ತಾಳಮೇಳದ ಹಂಗಿಲ್ಲದೇ ಕೂಗುವ ದನಿಯೇನು(ನೆನಪಿರಲಿ ಇದು ನಡೆದಿದ್ದು ಕರ್ಕಿ, ಹೊನ್ನಾವರದಲ್ಲಿ ಮತ್ತು ಕರ್ಕಿಯೇನೂ ಜೀವವೈವಿಧ್ಯಕ್ಕೆ ಹೆಸರುವಾಸಿಯಲ್ಲ.), ಸೂರ್ಯನೆಲ್ಲಿ ಬಂದು ಭೂಮಿಯನ್ನು ಸುಟ್ಟುಬಿಡುತ್ತಾನೇನೋ ಎಂದು ದಿಗಿಲಿಗೆ ಬಿದ್ದಂತೆ ಹರಡಿಕೊಂಡ ಮರಗಿಡಗಳ ಕೊಂಬೆಗಳ ಹಂದರವೇನು, ನನ್ನ ಇರುವನ್ನು ಹೇಗಾದರೂ ಮರೆತೀರಿ ಎಂಬಂತೆ ದೂರದಲ್ಲಿ ಭೋರ್ಗರೆವ ಅರಬ್ಬೀ ಸಮುದ್ರದ ಅಲೆಗಳ ಆರ್ಭಟವೇನು, ದೂರದಲ್ಲಾಗಾಗ ಕೂಗಿ ಹೋಗುವ ರೈಲಿನ ಸೀಟಿಯ ಗಾಂಭೀರ್ಯವೇನು, ಮನೆಮುಂದಿನ ಅಂಗಳಕ್ಕೆ ಸಾರಿಸಲು ಅನುವಾಗುವಂತೆ ನೀರನ್ನು ಚುಮುಕಿಸುತ್ತಿದ್ದ ಪಕ್ಕದ ಮನೆಯ 'ದೊಡ್ಡಾಯಿ'(ನಮ್ಮಲ್ಲಿ ಹೀಗೇ ದೊಡ್ಡವರನ್ನು ಸಂಬಂಧ ಇಟ್ಟೇ ಕರೆಯುತ್ತೇವೆ, ಎಲ್ಲರನ್ನೂ ಸಾರಾಸಗಟಾಗಿ ಆಂಟಿ-ಅಂಕಲ್ ಎನ್ನುವುದಿಲ್ಲ)ಯ ಅವಸರವೇನು, ಮನೆಯ ಮುಂದೆಯೇ ನೀರುಹೊತ್ತು ಸಾಗುತ್ತಿದ್ದ ಕರಿಮಣಿಗೌಡ ಜನರ ಹುಡುಗಿಯರ ನಗುವೇನು, ಅದೊಂದು ಚೇತೋಹಾರೀ ಭಾವನೆ, ಇಡೀ ದಿನಕ್ಕೆ ಸಾಕಾಗುವಷ್ಟು ಚೈತನ್ಯವನ್ನು ತುಂಬಬಲ್ಲ ಶಕ್ತಿಮೂಲವದು. ಹಾಗೆಯೇ ಕುಳಿತುಕೊಂಡರೆ ಬಿಸಿಲೇರುವ ಪ್ರತೀ ಕ್ಷಣವನ್ನೂ ಅನುಭವಿಸಲು ಶಕ್ಯವಾಗುವಂತಹ ಅನುಭೂತಿ, ಪ್ರಕೃತಿಮಾತೆಯೇ ತನ್ನ ಮಡಿಲಲ್ಲಿ ಕೂರಿಸಿಕೊಂಡು ಜಗವನ್ನು ತೋರಿಸಿದಂತೆ. ಮಾತಿಗೆ ತಡವರಿಸುವ ನನ್ನಲ್ಲೂ ಪದಗಳ ಮಾಲೆಯನ್ನು ಮೂಡಿಸಿಬಿಡುತ್ತದೆ.  ಎಷ್ಟು ಬೆಳಗುಗಳ ಸೌಂದರ್ಯವನ್ನು ಕಳೆದುಕೊಂಡೆ ಎಂದು ನನ್ನನ್ನೇ ಶಪಿಸಿಕೊಂಡಿದ್ದೆ. ಎಷ್ಟು ದಿನವಾಗಿತ್ತು, ಹೀಗೊಂದು ಬೆಳಗನ್ನು ನೋಡಿ, ಹೀಗೊಮ್ಮೆ ಪ್ರಕೃತಿ ಆರಾಧನೆ ಮಾಡಿ! ಆದರೆ ಒಮ್ಮೆ ಬೆಂಗಳೂರಿಗೆ ಬನ್ನಿ, ನಿಮಗೇ ಗೊತ್ತಾಗುತ್ತದೆ ನಾನೇಕಷ್ಟು ಚಿಂತಿತನಾಗಿದ್ದೆ ಎಂದು. ದಿನಪ್ರಾರಂಭವಾಗುವುದೇ ವಾಹನಗಳ ಶಬ್ದಮಾಲಿನ್ಯದಿಂದ, ದಿನವಿಡೀ ಇಲ್ಲದ ಗುರಿಯ ಕಡೆಗಿನ ಕುರುಡು ಓಟ, ಬೇರೆ ಮೃಗಖಗಗಳು ಹೋಗಲಿ, ಕಾಗೆಯೂ ಸಿಗದಂತಹ ಪರಿಸ್ಥಿತಿ, ಪಕ್ಕದಮನೆಯಲ್ಲಿಯೇ ಏನಾದರೂ ಗೊತ್ತಾಗದಂತಹ ಅಜ್ಞಾನಭರಿತ ನಿರುಪೇಕ್ಷೆ, ರೊಟೀನ್ ಆಗಿಬಿಟ್ಟಿರುವ ಬದುಕು,ಎಲ್ಲವೂ ಸೇರಿ ಬದುಕು ಇಷ್ಟೇ ಅಲ್ಲ, ಇದಕ್ಕಿಂತ ಹಿರಿದೇನನ್ನೋ ನಾವು ಕಳೆದುಕೊಂಡಿದ್ದೇವೆ/ಕಳೆದುಕೊಳ್ಳುತ್ತಿದ್ದೇವೆ ಎನ್ನಿಸಿಬಿಡುವುದಿಲ್ಲವೇ?
ಅದೇ ದಿನ ಸಂಜೆ, ನವರಾತ್ರಿ ಹಬ್ಬ. ಅದು ಮತ್ತೆ ಬಾಲ್ಯದ ಮತ್ತೊಂದು ಮಗ್ಗುಲಿನ ನೆನಪುಗಳನ್ನು ಕೆದಕಿ ವರ್ತಮಾನದ ಶೂನ್ಯತೆಯನ್ನು ಎತ್ತಿಹಿಡಿಯುತ್ತದೆ.ಅದು ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗಿನ ಕಾಲ. ನವರಾತ್ರಿ ಯಾವಾಗಲೂ ದಸರಾ ರಜದಲ್ಲಿಯೇ ಬರುತ್ತಿತ್ತು.(ನನಗೆ ಗೊತ್ತು, ಈ ವಾಕ್ಯ ಅದೆಷ್ಟರ ಮಟ್ಟಿಗೆ ಅಭಾಸ ಎನ್ನಿಸಬಹುದು ಎಂದು.), ನಾನು ಅಜ್ಜನ ಮನೆಯಲ್ಲಿರುತ್ತಿದ್ದೆ. ನಮ್ಮ ಅಜ್ಜನ ದಾಯದಿಯವರೊಬ್ಬರ ಮನೆಯಲ್ಲಿ ಅಮ್ಮನವರನ್ನು ಕೂರಿಸುತ್ತಿದ್ದರು. ನವರಾತ್ರಿಯ ಪ್ರತೀ ದಿನವೂ(ರಾತ್ರಿಯೂ) ಅಲ್ಲಿಗೆ ಹೋಗುತ್ತಿದ್ದೆ. ಪ್ರತೀ ದಿನವೂ ನೆಂಟರಿಷ್ಟರೆಲ್ಲಾ ನೆರೆದಿರುತ್ತಿದ್ದರು. ಸಂಜೆಯಿಡೀ ದೇವರ ಕೊಣೆಯಲ್ಲಿ ಆಗುತ್ತಿದ್ದ ಪೂಜೆ, ಹೊರಜಗಲಿಯಲ್ಲಿ ನಡೆಯುತ್ತಿದ್ದ ಹರಟೆಗಳು, ಅಟ್ಟದ್ದ ಮೇಲೆ ಮಕ್ಕಳ ಪಂಗಡದಲ್ಲಿ ನಡೆಯುತ್ತಿದ್ದ ಯಾವುದೋ ಒಂದು ಆಟದ ಚಿಕ್ಕ ಚಿಕ್ಕ ಜಗಳಗಳು, ಮಂಗಳಾರತಿಯ ವೇಳೆಗೆ ಹೆಂಗಸರೆಲ್ಲ ಸೇರಿ ಹೇಳುತ್ತಿದ್ದ ಭಜನೆಗಳು, ದಿನನಿತ್ಯವೂ ದೊರೆಯುತ್ತಿದ್ದ ಹಬ್ಬದ ಊಟ ಎಲ್ಲವೂ ಹೀಗೇ ನೆನಪಿನಾಳದಿಂದ ಧುಮ್ಮಿಕ್ಕಿ ಹೊರಬಂತು. ಅದೆಷ್ಟು ಜನ, ಅದೆಷ್ಟು ಮಾತು,ಅದೆಷ್ಟು ನಗೆ, ಅದೆಷ್ಟು ಸುಂದರ ದಿನಗಳು, ಹೇಗೆ ಕಳೆದು ಹೋದವು ಎಂಬುದಕ್ಕೆ ನನ್ನ ಬಳಿ ಈಗಲೂ ಲೆಕ್ಕವಿಲ್ಲ. ಈಗ ನೋಡಿ, ಹಬ್ಬ ಇದೆಯೆಂದು ಕಾಲೇಜಿನ ಕ್ಯಾಲೆಂಡರ್ ನೆನಪಿಸುವ ಪರಿಸ್ಥಿತ್ ಬಂದು ಬಿಟ್ಟಿದ್ದು.ಆಚರಣೆಯೋ ಕೇಳುವುದೇ ಬೇಡ, ಹೆಚ್ಚೆಂದರೆ ಒಂದು ಪಾಯಸವನ್ನು ಮಾಡಿ ದೇವರಿಗೆ ಕೈಮುಗಿಯಬಹುದು ಎಂದು. ಇದನ್ನು ಸ್ವಂತ ಇಷ್ಟದಿಂದ ತಂದುಕೊಂಡಿದ್ದಲ್ಲವೇ? ಹಾಗೆ ಮಾಡಿಕೊಂಡು ಹೀಗೆ ಹಲುಬುವುದು ನ್ಯಾಯವೇ? ಯಾರಿಗ್ಗೊತ್ತು, ಜೀವನದಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರವಿಲ್ಲ, ಮೇಲಾಗಿ ಇರುವುದೆಲ್ಲ ಬಿಟ್ಟು ಇರದುದರ ಕಡೆಗೆ ತುಡಿವುದೇ ಜೀವನ. 

2 comments:

  1. ನೀವು ಆರಂಭದಲ್ಲಿ ಬರೆದಿರುವ ಸಾಲು ತುಂಬಾ ಇಷ್ಟವಾಯಿತು.
    ಸತ್ಯ, ಬೆಳಗನ್ನು ಆರಾಧಿಸಬೇಕು.
    ಸ್ವರ್ಣಾ

    ReplyDelete