Monday, 2 January 2012

ಮನಃ-ಪರಿವರ್ತನೆ


ಎರಡು ವಾರಗಳಿಂದ ಈ ಅಂಕಣದಲ್ಲಿ ಏನನ್ನೂ ಬರೆಯಲಾಗದೇ ಇದ್ದಿದ್ದಕ್ಕೆ ಕ್ಷಮೆಯಿರಲಿ, ಕಾರಣಗಳನ್ನು ಕೊಡುವುದು ಕ್ಷುಲ್ಲಕವಾಗಿ ಕಾಣಬಹುದಾದ್ದರಿಂದ ಆ ಪ್ರಯತ್ನವನ್ನು ಮಾಡಲು ಹೋಗಲಾರೆ.

ಕಳಿಂಗ ಯುದ್ಧ ಮುಗಿದ ಮೇಲಿನ ಕಥೆ. ಸಾಮ್ರಾಟ ಅಶೋಕನ ಮನಸ್ಸು ಬದಲಾಗಿರಬಹುದಾದ ಸನ್ನಿವೇಶವನ್ನು ಪದ್ಯರೂಪದಲ್ಲಿಡಲು ಒಂದು ಚಿಕ್ಕ ಪ್ರಯತ್ನ. ೧೦ನೇ ತರಗತಿಯಲ್ಲಿ ಬರೆದಿದ್ದು.

ವರ್ಣಿಸಲೇನು, ಸಾಮ್ರಾಟ ಅಶೋಕನಾಗಿದ್ದ ಆತ
ದೇವನಾಂಪ್ರಿಯನಾಗಿ ಬದಲಾದ ವೃತ್ತಾಂತವ||ಪ|| 

ಬಹುದೀರ್ಘ ಸಮಯದಾ ತರುವಾಯದಲ್ಲಿ
ಆ ಸಂಜೆ ನಗು ಕಂಡಿತ್ತಾ ಅರಸನಲ್ಲಿ
ಕಳಿಂಗದೆದುರಿನಾ ವಿಜಯದಾ ಭರದಲ್ಲಿ
ಅ'ಶೋಕ' ಮರೆತಿದ್ದ ತನ್ನ ಹೆಸರಿನ ಅರ್ಥವನಲ್ಲಿ||೧|| 

ಹದ್ದಿಗೆ ಹಾವಿನ ಮೇಲಿನಾ ಅಸೆಯ ರೀತಿ
ಮಂತ್ರಿಮಾಗಧರಿಗೆ ಕಳಿಂಗದ ಮೇಲೆ ವಿಕೃತ ಪ್ರೀತಿ
ಕಳಿಂಗದಾ ಜನರು ಕೇಳಿರಲಿಲ್ಲ ಆ ಶಬ್ದ 'ಭೀತಿ'
                                              ಹೋರಿ ಸತ್ತರಾ ವೀರ ಅಭಿಮನ್ಯುವಿನ ಜಾತಿ||೨|| 

ರಾಜನಾ ಬಿಡಾರದಿ ವಿಜಯದಾ ಸಂತೋಷಕೂಟ
ತೃಪ್ತನಾಗಲಿಲ್ಲ ರಕ್ತದ ಮದ ಏರಿದ್ದ ಸಾಮ್ರಾಟ
ಮಾತಿತ್ತು, ಒಂದು 'ಬೆಕ್ಕಿಗೆ ಆತ ಇಲಿಗೆ ಪ್ರಾಣಸಂಕಟ
ಎಂಬಂತೆ ನೋಡಬಯಸಿದ್ದ ತನ್ನ ಕ್ರೌರ್ಯದಾಟ||೩|| 

ಚಕ್ರವರ್ತಿಯ ಮಾತು ಮೀರಲಾಪುದೇ ಹೇಳಿ
ವಿಷಯ ಹರಡಿತ್ತು ಅರಮನೆಯಲ್ಲೆಡೆಯಲಿ
ಮಂತ್ರಿವೃಂದವು ಆತನಿಗಾ ದಾರಿ ತೋರುತಲಿ
ರಣರಂಗಕೆ ಭೇಟಿಯಿತ್ತರಾ ಮೂಡು ಸಂಜೆಯಲಿ||೪|| 

ದಾರಿಯಲಿ ಸುತ್ತೆಲ್ಲ ಹರಡಿತ್ತು ಸೂತಕದ ಭಾವನೆ
ಹೊಕ್ಕಿತ್ತು ಹೆಮ್ಮೆಯಲಿ ರಾಜರಥ ರಣರಂಗವನೆ
ಮಾಡಿದ್ದ ಅಶೋಕವನಲ್ಲಿ ಉದ್ಗಾರ, "ಓ ದೇವನೇ"
ಈ ಎಲ್ಲ ಕ್ರೌರ್ಯ ನನ್ನ ಹಮ್ಮಿಗೋಸ್ಕರವೇನೇ?||೫|| 

ನಿಂತಿತು ರಥ, ಇಳಿದನಾ ರಾಜ, ತೋದಿತ್ತು
ಅವನ ಪಾದ ರಕ್ತದಿಂದ, ಕಾಲಿಗೇ ಸೋಕಿತ್ತು
ಹೆಣದ ಬುರುಡೆ, ಅಲ್ಲಿ ಚೂರಾದ ಸ್ಥಿಪಂಜರವಿತ್ತು
ಸತ್ತಿದ್ದ ಬದುಕಿನ ಅವಶೇಷಗಳಿಗೂ ಜೀವವಿತ್ತು||೬|| 

"ತನ್ನೊಬ್ಬನ ಲೋಭಕೀ ರೀತಿ ಬೇಜಾರು
ತನಗೇಕೆ ಬಂದಿತ್ತು ಅಜ್ಞಾನದ ಮಂಪರು
ಯಾವ ಸಾರ್ಥಕತೆಗೆ ಈ ಜನರ ಕಣ್ಣೀರು
ಯಾರ ಶಾಪಕೆ ಹರಿದಿತ್ತು ಕಳಿಗದ ನೆತ್ತರು"||೭|| 

"ಯಾರಿಗೆ ಬೇಕು ಈ ದುಃಖ; ಈ ಅಳು;
ಮುಗ್ಧ ಜನರ ಜೀವನ ಬರಿ ಹಾಳು"
"ಏ ದೇವಾ, ಯಾಕೆ ನನ್ನ ಮನದೊಳು
ತೆಗೆಯಲಾರದೇ ಹೋದೆ ಮನಸ ಹೂಳು"||೮|| 

ಅಶೋಕನೆಂದಿಗೂ ಕಾಣದಾ ನೋವಿನ ಸೆಳಕು
ಎದೆಯಲ್ಲಿ ಮೂಡಿತ್ತು ಅಹಿಂಸೆಯ ಬೆಳಕು
ತೊಳೆದಿತ್ತು ಅರಿಷಡ್ವರ್ಗಗಳ ಕೊಳಕು
ಶುದ್ಧವಾಗಿತ್ತವನ ತನು ಮನ ಹೊರಕು ಒಳಕು||೯|| 

"ಪಡುವಣದಿ ಮುಳುಗುತಿದ್ದ ಸೂರ್ಯನೂ ಕೂಡ
ಈ ಮುಗ್ಧ, ವೀರ ಜನರ ದುಃಖ ನೋಡ
ಲಾರದಾದನೇ ದೇವೆ, ನಾನೆಂತಹ ಮಾಡ
ಬಾರದ ತಪ್ಪ ಮಾಡಿದೆ, ಏನ ತೆರಲಿ ದಂಡ"||೧೦|| 

ಸಾಮ್ರಾಟ ಅಶೋಕ ಪ್ರತಿಜ್ಞೆಗೈದ "ಓ ಮಿತ್ರರೇ!
ನಾನೆಂದಿಗೂ ರಾಜ್ಯವಿಸ್ತಾರದ ಹೆಸರೆತ್ತಲಾರೆ
ನನ್ನ ಮೇಲೆ ಬಿದ್ದರೆ ಅವರ ಹೆಸರುಳಿಸಲಾರೆ"
ಎಂದು ರಕ್ತಲೇಪಿತ ಖಡ್ಗವ ಕೈಬಿಟ್ಟನಾತ ಕೈಯಾರೆ||೧೧|| 

ಮೂಡಿದನಾತನಾ ಎದೆಯಲಿ ಅಹಿಂಸಾರವಿ
ಯಾರಿಗೆ ಬೇಕು ಇದು, ಈ ರಾಜ್ಯ; ಈ ಪದವಿ;
ಕಲಿಯಾಗೀ ಹೋರಿದಾತ ಆದನೇ ಶಾಂತಿಕವಿ
 "ಬುದ್ಧಂ ಶರಣಂ ಗಚ್ಛಾಮಿ" ಎಂದ ಮೌರ್ಯಕುಲರವಿ||೧೨||

2 comments:

  1. Wonderfully written at a very young age.
    Keep writing.
    Swarna

    ReplyDelete
  2. thank you swarna,abhimaanakke runi. that time i was struggling too much for either antyaprasasa or adiprasa.

    ReplyDelete