ಎಷ್ಟೋ ದಿನಗಳಾದ ನಂತರ ಒಂದು ರೀತಿಯ ಪ್ರಾಸ(ಪ್ರತೀ ಸಾಲಿನಲ್ಲಿ ಬರುವ ಪ್ರತೀ ಶಬ್ದದ ಎರಡನೇ ಅಕ್ಷರ ಒಂದೇ,ಕೆಲವು exceptionಗಳಿಗೆ ಹೊರತಾಗಿ)ಕ್ಕೆ ಕಟ್ಟು ಬಿದ್ದು, ಭಾವಕ್ಕೆ ಚ್ಯುತಿಬರದಂತೆ ಪದ್ಯ ಬರೆಯಲು ಮಾಡಿರುವ ಪ್ರಯತ್ನವಿದು. ಅತಿಹೆಚ್ಚು ಸಮಯ ತೆಗೆದುಕೊಂಡ ಕವನವೆಂದರೆ ಇದೇ ಎಂದುಕೊಳ್ಳುತ್ತೇನೆ. ಓದಿ ನೋಡಿ.
ಚಿತ್ರಕೃಪೆ: ಅಂತರ್ಜಾಲ |
ಸಿಕ್ಕದ ಕನಸದು ಚಿಕ್ಕದೆಯಾದರೂ
ದಕ್ಕದ ದುಃಖಕೆ ಬಿಕ್ಕದೇಯಿರಬಹುದೇ
ಹಿರಿದೋ ಕಿರಿದೋ ಅರಿವಿರಬಹುದೆ,
ಮರುಕದ ಶರಧಿಗೆಲ್ಲಿಯ ಪರಿಚಯ||ಪ||
ಸನಿಹದಲಿ ನೀನಿರದೆ, ನೆನಪಿನಲಿ ಅನವರತ
ಕನವರಿಸುವುದೆ ಜೇನಾಯಿತೇ
ನೀ ದೊರಕದೇ ಸರಿಬರದ ವಿರಹದಲಿ ಪರಿತಪಿಸಿ
ಮನ ಕರಗಿದೆ ಅರಗಿನ ತರದಿ
ಉಸುರದೆ ಹೆಸರನು, ಉಸಿರದು ಕೊಸರಿದೆ;
ಆಸೆಯು ಮಾಸಿದಾಗ ಬೇಸರವೇ ಆಸರೆ||೧||
ಬಹು ಗಹನದ ಸಹಜೀವನದ ಅಹವಾಲಿಗೆ,
ಮೋಹವೆಂಬ ಕುಹುಕದ ಬಹುಮಾನವೇ
ಕ್ಷಮಿಸಲು ರಮಿಸುವ; ಭ್ರಮಿಸುವ ಪ್ರೇಮದ ತುಮುಲಗಳೇ,
ಸಮನಾರು ನಿಮಗೆ ಸಮರದಲಿ
ಹಿತವಾದ ಯಾತನೆಯಲಿ ಹತವಾಗಿಹೆ ನಾ,
ಕಾರಣ ಅತಿಕ್ರಮಿಸಿದ ಪ್ರೀತಿಯೇ||೨||
ಬಗೆಹರಿಯದ ಬೇಗೆಯಿದು ಯುಗವಾದರೂ,
ಮೊಗೆದೊಗೆದರೂ ಮುಗಿಯದ ಸಾಗರವು
ಬೇನೆಗೆ ಕನಲಿ ಮೌನವಾದನೇ ಭಾನು,
ತನ್ನ ತಾನೇ ಒಣಗಿಸಿಕೊಂಡನೇ ದೀನನಾಗಿ
ನಂದಾದೀಪವೇ ನಂದಿದ ಮೇಲೆ ಕಂದಿದೆ ವದನ,
ಬದುಕಾಗಿದೆ ಉದುರಿದ ಸದನ||೩||
ವ್ಹಾ.. ಸುಬ್ರಹ್ಮಣ್ಯರವರೆ ಸುಂದರವಾದ ರಚನೆ.. ಎಲ್ಲಿಯೂ ಭಾವ ಭೇದವಾಗದಂತೆ ತುಂಬಾ ಚೆಂದವಾಗಿ ಮೂಡಿ ಬಂದಿದೆ ಕವಿತೆ.. ಅಷ್ಟು ಸಮಯಗಳನ್ನು ಕವಿತೆಗೆ ಮುಡಿಪಿಟ್ಟಿದ್ದು ಸಾರ್ಥಕವಾದಂತೆನಿಸುತ್ತದೆ.. ಲಯಬದ್ಧವಾಗಿ ಹರಡಿಕೊಂಡಿರುವ ಕವಿತೆ ಸರಾಗವಾಗಿ ಓದಿಸಿಕೊಂಡಿದೆ.. ಪ್ರೀತಿಯ ಪ್ರತಿಯೊಂದು ಮಜಲುಗಳನ್ನೂ ಮನುಟ್ಟುವಂತೆ ಚಿತ್ರಿಸಿದೆ ಕವಿತೆ..
ReplyDeleteಸಿಕ್ಕದ ಕನಸದು ಚಿಕ್ಕದೆಯಾದರೂ
ದಕ್ಕದ ದುಃಖಕೆ ಬಿಕ್ಕದೇಯಿರಬಹುದೇ
ಈ ಸಾಲುಗಳು ಬಹುವಾಗಿ ಮನಸ್ಸನ್ನು ಬಂಧಿಸಿವೆ.. ತುಂಬಾ ಸುಂದರವಾದ ಕವಿತೆ..
ಇದೊಂದು ಪ್ರೀತಿಯ ಅಚ್ಚುಮೆಚ್ಚಿನ ಕವಿತೆ ತುಂಬಾ ಸುಂದರವಾಗಿದೆ
ReplyDelete