Showing posts with label nenpu(ನೆನಪು). Show all posts
Showing posts with label nenpu(ನೆನಪು). Show all posts

Wednesday, 28 September 2011

ನೆನಪೇ



ಭಾವ ಮಡುಗಟ್ಟಿ, ಇನ್ನು ತಡೆಯಲಾರದಾದಂತಾಗ ಆಗುವುದೇ ಭಾವಪ್ರವಾಹ, ಇಲ್ಲಿ ಇರುವುದು ಕೇವಲ ಭಾವಸ್ರಾವವಷ್ಟೇ. ಕೆಲವೊಮ್ಮೆ ಸಿಗದ ಶಬ್ದಕ್ಕೋಸ್ಕರ ತಡಕಾಡಿ ಸುಳ್ಳಾಡಬಹುದೇನೋ, ಆದರೆ ಒಂದು ಭಾವಕ್ಕೆ ದ್ರೋಹ ಬಗೆಯಲಾಗದು.  ಇದು ಈ ಕವನ ಸರಣಿಯ ಕೊನೆಯ ಕವಿತೆ. ಅಂಕಣ, ಲೇಖನ , ಕಥೆಗಳನ್ನು ಬರೆಯಲು ಬೇಕಾಗದೇ ಹೋಗುವ ಸ್ಪೂರ್ತಿಯ ಅವಶ್ಯಕತೆ ಕವನಕ್ಕೆ ಬೇಕೇ? ಏನೇ ಇರಲಿ, ’ಅನಾಮಿಕಾ’ದಿಂದ ಪ್ರಾರಂಭಿಸಿ ’ನಿನಗೆ’ ಎಂದು ಭಾವಾರ್ಪಿಸಿ, ಒಂದು ’ಸ್ವಗತ’ ದಲ್ಲಿ ಉಮ್ಮಳಿಸಿ , ’ಇವಳೇ’ ಎಂದು ಕನವರಿಸಿ, ’ನೆನಪೇ’ದಲ್ಲಿ ನಿಲ್ಲುತ್ತಿದೆ. ಆದಷ್ಟು ಬೇಗ ಮುಗಿಸಬೇಕೆಂದುಕೊಂಡಿದ್ದರಿಂದ ಈ ಪದ್ಯದ ಕೊನೆಯ ಸಾಲುಗಳು ಅವಸರದ ಸಾಹಿತ್ಯ ಎನಿಸುತ್ತವೆಯೇ? ನನಗೆ ಹಾಗೆನ್ನಿಸಿತು. ಓದು ನಿಮ್ಮದು.

ಮರೆತು ಹೋದೆ ಎಂದರೆ ಮರೆತು ಹೋದೀತೇ
ಸುತ್ತಿ ಬಳಸಿ ಮತ್ತೆ ಅಲ್ಲೇ ಬರುವ ನೆನಪ ಮಾಲಿಕೆಯೇ||

ಒಂದು ಕನಸ ಹೆಸರಲಿ ಕಳೆದುಹೋದ
ರಾತ್ರಿಗಳೆಷ್ಟೋ ಇಷ್ಟಪಟ್ಟು; ಮನಸನೆಟ್ಟು.
ಕಣ್ಣ ಮುಚ್ಚಿ ಕೂತರೂ ಸಹ, ರೆಪ್ಪೆಗಡಿಯ
ಧಿಕ್ಕರಿಸಿ ದಾಟಿ ಬಂದ ಚಿತ್ರಗಳೆಷ್ಟೋ
ಹೃದಯ ಬಿಕರಿಯಾಗಿದ್ದರ ಬಗ್ಗೆ, ನನಗೇ
ಮಾಹಿತಿಯಿಲ್ಲದ್ದಕ್ಕೆ ಪರಿತಪಿಸಿದ್ದೆಷ್ಟೋ||೧||

ಇಲ್ಲಿ ಅಲ್ಲಿ ಎಲ್ಲಾ ನೀನೇ, ಯಾರೂ ಇಲ್ಲ
ಇಲ್ಲವೆಂದರೂ ಅಲ್ಲೂ ನೀನೇ, ನೀನೇ ಎಲ್ಲ
ಇಷ್ಟು ಅಷ್ಟು ಎಷ್ಟು ಎನ್ನಲಿ; ಇಂತಿಷ್ಟೇ ಎನ್ನಲು
ಅಳತೆಯುಂಟೇ, ಮನದಾಳದ ತಿಳಿಯದ ಆಳಕೆ
 ಅನಂತವೊಂದೇ ಮಿತಿಯೇ ನಿನ್ನಯ ಮೋಡಿಗೆ
ಹೋಗದಿದ್ದರೇ ಒಳಿತೇ,ಶಬ್ದಹುಡುಕುವ ಗೋಜಿಗೆ||೨||

ಒಂದು ಮನಸಿಗೆ ಒಂದೇ ಅಲ್ಲವೇ ಕನಸು;
ಎಲ್ಲ ಕನಸಲ್ಲಿಯೂ ಬರುವುದೇ ನಿನ್ನ ಮನಸೇ
ಮಾನಸ ವಿಶಾಲ, ಅನಂತವೆಲ್ಲ ಹೌದಲ್ಲ,
ನೀನೊಬ್ಬಳೇ ಹೇಗೆ ಹಬ್ಬಿ ಕುಳಿತೆಯೇ;
ನಿನ್ನಿಂದ ಅಷ್ಟಿಷ್ಟು ಸರಿ ಇದ್ದ ನನ್ನ ನೆನಪು,
ಸ್ವಾಧೀನ ತಪ್ಪುವ ಹಾಗಾಗಿ ಹೋಯಿತೇ.||೩||

Saturday, 24 September 2011

ಇವಳೇ!



ಇವಳೇ ಅವಳೇ ಇಲ್ಲಿ ಅಲ್ಲಿ ಎಲ್ಲೆಲ್ಲೂ ಇಹಪರಕೆಲ್ಲ ಮೀರಿದವಳೇ
ನೀನೆಂದರೆ, ದೇವರು ನನಗಾಗಿ ಮಾಡಿದ ಗುಣಸಮುಚ್ಛಯವೇ
ನಿನ್ನ ನೆನಪೆಂದರೆ ನಾನುತ್ತರವ ಬಯಸದ ಪ್ರಶ್ನೆಗಳ ಗುಚ್ಛವೇ ||ಪ||

ಶಬ್ದ ಸಿಗದೇ ತಡವರಿಸಿ ತೊಳಲುವುದೇ ನಿನಗೆ ಪ್ರಿಯವೇ
ಮನದ ತುಂಬ ರಂಗೇರಿಸಿದ್ದು ನಿನ್ನ ನೋಟದ ಮದರಂಗಿಯೇ
ಬರಿ ನಗೆಯಿಂದಲೇ ಎದೆಭಾರವಾಗಿಸುವುದೇ ನಿನ್ನಾಟವೇ
ಕಣ್ಣ ಮುಚ್ಚಿಯೂ ನಿನ್ನ ನೋಡುವಂತಾಗುವುದು ನಿನ್ನ ಕೃಪೆಯೇ||೧||

ನಿನ್ನ ಅನವರತ ಕನವರಿಸುತಲಿರುವುದೇ ನಿನ್ನ ಮೋಡಿಯೇ
ಏನೂ ಇರದೇ ಖುಷಿಯಾಗುವಂತಾಗುವುದೇ ನಿನ್ನ ನೆನಪೇ
ಎಲ್ಲಾ ಮರೆತು ರಾಮನ ಭಜಿಸಿದ್ದು ನಿನ್ನೊಲುಮೆಗಾಗಿಯೇ
ನನಗೇ ಗಾಬರಿಯಾಗುವಂತಾಡಿದ್ದು ನನ್ನೆದೆಯ ಕಲರವವೇ||೨||

ಎಲ್ಲಾ ಕಡೆ ನಿನ್ನನ್ನೇ ಕಂಡಂತೆ ಭ್ರಮಿಸಿದ್ದು ನನ್ನ ತಪ್ಪೇ
ತಪ್ಪು ಸರಿ ವಿವೇಚನೆ ಬದಿಗೊತ್ತಿ ಕೊರಗಿದ್ದು ನನ್ನ ವಿಧಿಯೇ
ಸೊಗಸಾದ ಸಾಂಗತ್ಯ ಭಾವಿಸಿ ಕುಣಿದಿದ್ದು ಬರಿ ಕನಸೇ
ಏನು ಮಾಡಲೆಂಬ ಅಖಂಡ ಗೊಂದಲಕೆ ನೀ ಕಾರಣವೇ||೩||

Friday, 20 May 2011

ಒಬ್ಬ ರಾಘವೇಂದ್ರ ಹೆಗಡೆಯ ನೆನಪಿಗೆ

ಹೌದಲ್ಲ, ಆಗಲೇ ನಾಲ್ಕು ವರ್ಷಗಳು ಆಗಿ ಹೋದವು. ಹೀಗೆ ಇದೇ ಮೇ ಕಳೆದು ಮಳೆ  ಬರಲು ಸುರುವಾಗುವ ಸಮಯದಲ್ಲಿಯೇ,  ಒಂದು ದಿನ ಗೆಳೆಯ ಗುರು ಭಟ್ಟನಿಗೆ ಕರೆ ಮಾಡಿದಾಗ ಆ ಘೋರ ತಿಳಿದಿದ್ದು. ಅವನು ಹೇಳಿದ್ದನ್ನು ಅರಗಿಸಿಕೊಳ್ಳುವುದಿರಲಿ ನಂಬಲೇ ಸಾಧ್ಯವಾಗಲಾರದಾಯ್ತು. ಯಾವಾಗಲೂ ಮಾಡುವಂತೆ ಏನೋ ಒಂದು prank  ಮಾಡುತ್ತಿರಬಹುದೇನೋ ಎಂದುಕೊಂಡೆ, ಹಾಗೆ ಆಗಿದ್ದರೆ ಒಳ್ಳೆಯದಿತ್ತು. ಆದರೆ ಬದುಕು ಹಾಗೇ, ಎಲ್ಲವೂ ನಾವು ಬಯಸಿದ ಹಾಗೇ ಆದರೆ ಕ್ರೂರ ವಿಧಿಗೆ ಸಂತೋಷವೆಲ್ಲಿ? ಗುರು ನಮ್ಮ ರಾಘು ಇದ್ನಲ್ಲ, ಅವನು ಮೊನ್ನೆ ಹೋಗ್ಬಿಟ್ಟ ಅಂತೆಎಂದಾಗ, ’ಹೇಗೆ?’ ಎಂದು ಕೇಳಬೇಕೆಂಬಷ್ಟರ  ಮಟ್ಟಿಗೂ ಪ್ರಜ್ಞೆ ಇರದಂತೆ ಗರ ಬಡಿದ ಹಾಗಾಗಿಹೋಗಿತ್ತು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಭಟ್ಟನೇ ಕರುಳಿನಲ್ಲೇನೋ ತೊಂದರೆಯಿತ್ತಂತೆ, ಹೊಟ್ಟೆ ನೋವು ಎಂದು ಆಗಾಗ ಹೇಳುತ್ತಿದ್ದನಲ್ಲ, ಅದೇ ಇದ್ದಿರಬಹುದು.   ಎಂದ ಎನ್ನುವಷ್ಟಕ್ಕೆ ಒಂದು ಅಧ್ಯಾಯದ ಅಂತ್ಯವಾಗುತ್ತದೆ. 
          ಅದಕ್ಕಿಂತ ಒಂದು ವರ್ಷ ಹಿಂದಕ್ಕೆ ಹೋಗೋಣ. ನಾನು ೧ ಪಿ.ಯು. ಗೆ ಹಿಂದೆ ಮುಂದೆ ಗೊತ್ತಿಲ್ಲದ ಉಜಿರೆಗೆ ಹೋಗಿ ಸಿದ್ಧವನಕ್ಕೆ ( ನಮ್ಮ ಹಾಸ್ಟೆಲ್ ಹೆಸರದು) ಕಾಲಿಟ್ಟಿದ್ದೆ. ನಾನು ಬಂದಿದ್ದೇ ಲೇಟು, ಉಳಿದವರೆಲ್ಲ ಮೊದಲೇ ಬಂದಿದ್ದರಾಗಿ, ಹೊಸ ಪ್ರದೇಶದಲ್ಲಿ ಇಬ್ಬರು ಅಪರಿಚಿತರು ಮೊದಲು ಭೇಟಿಯಾದ ಕೂಡಲೇ ಹುಟ್ಟುವ ಗೆಳೆತನ ಮೂಡುವ ಅವಕಾಶ ಹಾಗೆ ತಪ್ಪಿ ಹೋಗಿತ್ತು. ಅದರ ಮೇಲೆ ಇವನು ಟಾಪರ್ ಅಂತೋಎಂಬ ಆಶ್ಚರ್ಯ, ಉದ್ವೇಗ ಭರಿತ  ಕೌತುಕ, ಹಾಗೂ ಇವನು ಸಾಮಾನ್ಯರ ಜೊತೆಗೆ ಹೊಂದಿಕೊಳ್ಳಲಾರದ ಭಿನ್ನತಳಿ ಎಂಬ ಪೂರ್ವಾಗ್ರಹದಿಂದ ಎಷ್ಟೋ ಹುಡುಗರು ಅಷ್ಟು ಹೊತ್ತಿಗಾಗಲೇ ಪೀಡಿತರಾಗಿದ್ದರೇನೋ ಎಂಬಷ್ಟರ ಮಟ್ಟಿಗೆ ನನಗೆ ರೂಮಿಗೆ ಬಂದ ಒಂದು ಗಂಟೆಯೊಳಗೆ ಏಕಾಂಗಿತನ ಕಾಡತೊಡಗಿತ್ತು. ಯಾರೂ ಮಾತನಾಡಲೂ ಸಿಗದ ಹಾಗಾಗಿ ಸುಮ್ಮನೇ ಕುಳಿತಿದ್ದೆ. ಆಗ ಯಾವ ಮಾಯೆಯಿಂದ ಬಂದೆಯೋ ನೀನು, ಅದೇ ರಭಸ, ಅದೇ ದಾಪುಗಾಲುಗಳು, ನಡೆದರೆ ನೆಲವೇ ಶಬ್ದ ಮಾಡುವ ಕುಳ್ಳ, ಬೊಜ್ಜಲ್ಲದಿದ್ದರೂ ಬೊಜ್ಜೆನಿಸುವ ದಪ್ಪನೆಯ ಶರೀರ. ಮೊದಲಿದ್ದ ಅಲ್ಪ ಪರಿಚಯವೇ ಸಾಕಾಗಿ ನನ್ನ ಬೆನ್ನ ಮೇಲೊಂದು ಗುದ್ದು ಬಿದ್ದಿತ್ತು. ಅಗಲಿದ್ದ ಜೀವದ ಗೆಳೆಯರ ಪುನರ್ಮಿಲನದಲ್ಲಿ ಮಾತನಾಡಹುದಾದ ಶೈಲಿ. ಸರ್ರನೇ ನಿನ್ನ ರೂಮಿಗೆ ಕರೆದುಕೊಂಡು ಹೋಗಿ ನಿನ್ನ ಅಮ್ಮ ಮಾಡಿಕೊಟ್ಟಿದ್ದ ಏನೋ ಕಜ್ಜಾಯವನ್ನು, ನನಗೇ ಕೊಡಲು ನಿಮ್ಮಮ್ಮ ಹೇಳಿದ್ದರೇನೋ ಎಂಬಂತೆ ಕೊಟ್ಟೆ. ಸಂಜೆ ಬಂದು ನಿನ್ನ ಬ್ಯಾಗನ್ನು ನೋಡಿಕೊಳ್ಳುತ್ತೇನೆ ಎಂಬ ಭರವಸೆ ಕೊಟ್ಟೆ. ನಿನ್ನ ಶೈಲಿಯೇ ಹಾಗೆ, ಯಾವ ಪೀಠಿಕೆಗೆ ಆಗಲೀ, ಯಾವ formalityಗೆ ಆಗಲೀ ಅವಕಾಶವಿಲ್ಲ.ಎಲ್ಲವೂ ನೇರಾನೇರ.
          ಎರಡು ಫ಼್ಲೋರ್ ಗಳ ಅಂತರ ನಮ್ಮಿಬ್ಬರ ರೂಮುಗಳ ಮಧ್ಯೆ ಇತ್ತಾದರೂ ಅದೇನೂ ಅಷ್ಟರ ಮಟ್ಟಿಗಿನ ಅಂತರ ಎನಿಸಲಿಲ್ಲ. ಪ್ರತೀ ಸಲವೂ ನೀನು ಬರುತ್ತಿದ್ದೆ ಏನೋ ಒಂದು ವಿಷಯ ಇಟ್ಟುಕೊಂಡು. ಹೊಸಿಲ ಹೊರಗಿನಿಂದಲೇ ಗಟ್ಟಿಯಾಗಿ ಏನೋ ಒಂದನ್ನು ಕೂಗಿಕೊಂಡು ಬರುವ ರೀತಿಗೇ ಇದು ರಾಘವೇಂದ್ರನೇ ಎಂದು ಗೊತ್ತಾಗುತ್ತಿತ್ತು, ತುಡುಗು ದನಕ್ಕೆ ಕಟ್ಟಿದ ಗಂಟೆಯ ಶಬ್ದದ ಹಾಗೆ, ಆ ಹೋಲಿಕೆಯನ್ನೂ ನೀನೇ ಕೊಟ್ಟಿದ್ದು. ಕೆಲವೊಮ್ಮೆ ಕಿರಿಕಿರಿಯಾಗುವ ಹಾಗಾಗುತ್ತಿತ್ತಾದರೂ ಹಾಗೆ ಮಾಡಲು ಗೆಳೆಯನಿಗೆ ಮಾತ್ರ ಹಕ್ಕಿದೆಯಲ್ಲವೇ. ಅದರ ಬಗ್ಗೇನೂ ತಕರಾರಿಲ್ಲ ಬಿಡು. ನನಗಿನ್ನೂ ನೆನಪಿದೆ, ಪ್ರತೀ ಶನಿವಾರವೂ ಹಾಸ್ಟೆಲ್ ನಲ್ಲಿ ತೋರಿಸುತ್ತಿದ್ದ ಫಿಲಂಗೆ ಹೋಗುವ ಮುಂಚೆ ನಮ್ಮ ರೂಮಿಗೆ ಬರುವುದು, ನನಗೆ ಬರಲು ಹೇಳುವುದು, ನಾನು ಇಷ್ಟವಿಲ್ಲ ಎಂದು ಹೇಳುವುದು, ಆದರೂ ಎಳೆದುಕೊಂಡು ಹೋಗುವುದು, ನಾನಲ್ಲೇ ನಿದ್ದೆ ಮಾಡುವುದು, ನಿನಗೂ ನೋಡಲು ಮನಸ್ಸು ಬಾರದೇ ಎದ್ದು ಬರುವುದು, ಇದು ಎಷ್ಟುಬಾರಿಯೋ? ಲೆಕ್ಕ ಇಟ್ಟವರಾರು. ಕೊನೆಕೊನೆಗೆ ನಿನಗೇ ಬೇಜಾರಾಗಿ ನೀನೂ ಹೋಗುವುದನ್ನು ನಿಲ್ಲಿಸಿದೆ , atleast ನನ್ನನ್ನು ಕರೆಯುವುದನ್ನು ನಿಲ್ಲಿಸಿದೆ. ಹೋಗಲಿ ಬಿಡು.
          ಎಷ್ಟೋ ನೆನಪುಗಳು, ಆಡಿಕೊಂಡ ಎಷ್ಟೋ ಮಾತುಗಳು , ಆಡದೇ ಹೋದ ಎಷ್ಟೋ ಯೋಚನೆಗಳು. ಒಂದೊಂದು ನೆನಪೂ ಚಿನ್ನದ ಬೆಲೆಯದ್ದು, ಬೆಲೆಯಿಡಲು ಸಾಧ್ಯವಾದರೆ. ಏನೋ tease ಮಾಡಿದರೆ ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡು ೨೫ ಡಿಪ್ಸ್ ನ್ನು ನಿತ್ತ ನೆಲದಲ್ಲಿ ಹೊಡೆದು ತೋರಿಸಿದ್ದು ಆಗ ಆಶ್ಚರ್ಯವೆನಿಸಿದರೂ ಈಗ funny ಅನಿಸುತ್ತದೆ. ಯಾವಗಲೋ ಒಮ್ಮೆ NTSE ಟ್ರೇನಿಂಗ್ ಸಮಯದಲ್ಲಿ ಕೆಮಿಸ್ಟ್ರಿ ಕ್ಲಾಸಿನಲ್ಲಿ ಆಯ್ಕೆಗಳನ್ನು ಕೊಡುವ ಮೊದಲೇ ಉತ್ತರ ಸಿಆಯ್ಕೆ ಎಂದು ಹೇಳುವಷ್ಟರ ಮಟ್ಟಿಗೆ ನಿದ್ರೆ ಮಾಡುತ್ತಿದ್ದ ನನ್ನ ಸಾಮರ್ಥ್ಯವನ್ನು ಆಡಿಕೊಳ್ಳುತ್ತಿದ್ದ ಬಗೆ ನನಗೇ ನಗೆ ತರಿಸುತ್ತದೆ ಎಂದರೆ ಅದು ಸುಳ್ಳಲ್ಲ. ರೀಡಿಂಗ್ ಟೇಬಲ್ ಮೇಲೆ ಅಪ್ಪ ಅಮ್ಮನ ಒಂದು ಛಾಯಾಚಿತ್ರ ಇಟ್ಟುಕೊಂಡು, ಪ್ರತೀ ಸಲ ಓದಲು ಕೂರುವ ಮೊದಲು ನಮಸ್ಕರಿಸುತ್ತಿದ್ದ ನಿನ್ನ ಅಭ್ಯಾಸವನ್ನು ನಾನು ಆಡಿಕೊಂಡಿದ್ದು , ನೀನು ಉರಿದುಕೊಂಡಿದ್ದು , ನಾನು ಕ್ಷಮೆ ಕೇಳಲೂ ಹಿಂಜರಿದಿದ್ದು , ಇವೆಲ್ಲಾ ನನ್ನ ಹುಡುಗಾಟದ ಅತಿರೇಕ ಎಂದು ಇವತ್ತು ಎನ್ನಿಸುತ್ತದೆ. ಇದೆಲ್ಲದರ ಮಧ್ಯದಲ್ಲಿ ನಿನಗೆ ಆವಾಗಾವಾಗ ಬರುತ್ತಿದ್ದ ಹೊಟ್ಟೆನೋವು ಗಮನಕ್ಕೆ ಬರದಂತೆ ಹೋಯಿತೇ, ಅಥವಾ ಹಾಗೆ ತೋರಿಸಿಕೊಂಡು ಸಂತಾಪ ಹುಟ್ಟಿಸಿಕೊಳ್ಳುವುದು ನಿನ್ನ ಜಾಯಮಾನಕ್ಕೆ ಆಗಿಬಾರದು ಎಂದು ಸುಮ್ಮನಾದೆಯೇ. ಏನೋ ಹೀಗೇ ಅದೊಂದು ಹದದಲ್ಲಿ ಹೋಗುತ್ತಿತ್ತು ಬದುಕು ಆ ಸಂಜೆಯವರೆಗೆ. ಅದೇನೋ ಚಿಕ್ಕ ಮಾತೇ ದೊಡ್ಡ ವಾದವಾಗಿ ಮನಸ್ಸೆಲ್ಲಾ ಹುಳಿಹುಳಿಯಾಗಿದ್ದು ಒಂದು ಹಂತ. ಮತ್ತೆ ಎದುರಲ್ಲಿ ಸಿಕ್ಕಾಗ ಪರಿಚಯದ ನಗೆ ನಕ್ಕು ಮಾತನಾಡುವಷ್ಟು ಆತ್ಮೀಯತೆ ಮತ್ತೆ ಮೂಡಿತಾದರೂ ಅದು ಹೃದಯದಿಂದ ಬಂದಿದ್ದಲ್ಲ ಎಂದು ಇಬ್ಬರಿಗೂ ಗೊತ್ತಾಗುತ್ತಿತ್ತು. ಮತ್ತೆ ಅದೇ ಭಾವ ಮೂಡಲು ಸಮಯ ಬೇಕಾಗುತ್ತಿತ್ತು. ನಾನು ಕಾಯಲು ತಯಾರಿದ್ದೆ. ಆದರೆ ಕಾಯಲು ನೀನು ಬಹಳ ದಿನ ಉಳಿಯಲಿಲ್ಲವಲ್ಲ.
          ಹಾಗೆ ಒಂದು ವರ್ಷದ ಕೊನೆಗೆ ಫಲಿತಾಂಶ ಬಂದಿತ್ತು. ಆಶ್ಚರ್ಯಕರವಾಗಿ ಸಿದ್ಧವನದ ಎಲ್ಲಾ ಘಟಾನುಘಟಿಗಳ ಮಧ್ಯೆ ಒಬ್ಬ ರಾಘವೇಂದ್ರ ಹೆಗಡೆ ಫಸ್ಟ್ ಬಂದಿದ್ದ. ಯಾರು ಊಹಿಸಿದ್ದರೋ ಬಿಟ್ಟಿದ್ದರೋ ಗೊತ್ತಿಲ್ಲ, ಈ ಒಬ್ಬ ರಾಘವೇಂದ್ರ ಹೆಗಡೆ ಭಯಂಕರ ಕೂಲ್ ಆಗಿದ್ದ. ಎಷ್ಟು ಜನ ಶುಭ ಹಾರೈಸಿದ್ದರೋ, ಎಷ್ಟು ಜನ ಮನದಲ್ಲೇ ಮುಲುಗಿದರೋ ಗೊತ್ತಿಲ್ಲ , ನಾನಂತೂ ಮುಂದಿನ ವರ್ಷ ನೋಡಿಕೊಳ್ಳುತ್ತೇನೆಂಬ ಸ್ಪೂರ್ತಿ ಪಡೆದಿದ್ದೆ. ನಿಜವೆಂದರೆ ನಾನು ಖುಷಿ ಪಟ್ಟಿದ್ದೆ, ನಾನಂತೂ ಆ ಸ್ಥಾನವನ್ನೂ ಪಡೆಯುವುದನ್ನು ಬಯಸುತ್ತಿರಲಿಲ್ಲವಾಗಿ ಒಬ್ಬ ನಮ್ಮೂರಿನವನು ಫಸ್ಟ್ ಬಂದ ಎಂಬ ಹೆಮ್ಮೆ ಹೆಗಲೇರಿತ್ತು. ಹೆಗಲೇರಿದ ಹೆಮ್ಮೆ ಮನಸ್ಸಿನಲ್ಲಿಳಿಯುವ ಮೊದಲೇ ನಿನ್ನ ಕರುಳು ಕೈ ಕೊಟ್ಟಿತ್ತು. ಮಾಡಿದ ಆಪರೇಶನ್ ಕೂಡ ಕೈ ಕೊಟ್ಟು ನೀನು ಎಲ್ಲರನ್ನು ಬಿಟ್ಟು ಅನಂತವನ್ನು ಸೇರಿದ್ದೆ.
         
ಯಾವುದೇ ವಸ್ತುವಿರಲಿ, ವ್ಯಕ್ತಿಯಿರಲಿ , ಅದರ ಅಸ್ತಿತ್ವದ ಮಹತ್ವ ಅದು ಇರುವಾಗ ತಿಳಿಯಲಾರದು. ಅದನ್ನು ಕಳೆದುಕೊಂಡ ಮೆಲೆಯೇ ಅದನ್ನು ಎಷ್ಟು ಕಳೆದುಕೊಂಡಿದ್ದೇವೆ ಎಂಬುದರ ಅಂದಾಜು ಸಿಗುವುದು. ಈಗ ಹೀಗೇ ಒಮ್ಮೆ ಹಿಂತಿರುಗಿ ನೋಡಿಕೊಂಡರೆ ಅದೆಷ್ಟು ಸವಿಘಳಿಗೆಗಳನ್ನು ಒಂದು ಅಹಂನ ಹೆಸರಿನಲ್ಲಿ ಕಳೆಯಗೊಟ್ಟೆವು ಎನಿಸುತ್ತದೆ. ಆ ಅಪ್ರಬುದ್ಧತೆಗೆ ,ಮರುಕ ಹುಟ್ಟುತ್ತದೆ. ಹಾಗೆಂದೂ ನೀನೇ ನನ್ನ 'best friend' ಆಗಿದ್ದೆ ಎಂದರೆ ಅದು ಸುಳ್ಳಾಗಬಹುದೇನೋ, ಆದರೆ ನಿನ್ನನ್ನು ಇಂದಿಗೂ miss ಮಾಡಿಕೊಳ್ಳುವಷ್ಟರ ಮಟ್ಟಿಗೆ ನಾನು ನಿನ್ನನ್ನು ನೆನಪಿಟ್ಟಿದ್ದೇನೆ, ಹಾಗೂ  ಸಮಯಕ್ಕೆ ಏನನ್ನಾದರೂ ಮರೆಸುವ ಶಕ್ತಿಯಿದೆ ಎಂಬುದು ಎಲ್ಲ ಸರಿಯೂ ಸತ್ಯವಾಗಬೇಕೆಂದೇನೂ ಇಲ್ಲ ಎಂದು ಹೇಳುವುದಷ್ಟನ್ನು ಈ ಲೇಖನ ಮಾಡಬಲ್ಲುದಾದರೆ ಅಲ್ಲಿಗೆ ಇದು ಸಾರ್ಥಕ್ಯವನ್ನು ಕಂಡೀತು.