Wednesday, 1 May 2013

ಹಾಡು ಮುಗಿದರೇನು...




ಬಹಳ ಹಿಂದೆ ಬರೆದ ಕವನ. ಬ್ಲಾಗಿಗೆ ಹಾಕಬಾರದು ಎಂದುಕೊಂಡಿದ್ದೆ, ಆದರೂ ಪ್ರಕಟಿಸುತ್ತಿದ್ದೇನೆ. ದಕ್ಕದ ಪ್ರೀತಿಗೆ, ಮಾತಾಗಿ ಮೂಡದ ಮನಸ್ಸಿನ ಭಾವನೆಗಳಿಗೆ  ಕೊರಗಿ ನರಳುವ ಒಂದು ಮನಸಿನ ಭಾವನೆಗಳೋ ಇವು? ಪ್ರೀತಿಸುತ್ತಿದ್ದೇನೆ ಎಂಬ ಭಾವವನ್ನು ಪ್ರೀತಿಸಿದ ಹುಚ್ಚುಮನಸ್ಸಿನ ಗೊಂದಲವೋ ಇವು? ಎಲ್ಲ ಬಿಟ್ಟೆನೆಂದ ಮೇಲೂ ಬಿಡಲಾಗದ ಬಂಧದೊಳಗೆ ಸಿಕ್ಕಿಬಿದ್ದ ತೊಳಲಾಟಗಳೇ ಇವು? ನಿರ್ಧಾರ ನಿಮ್ಮದು.


ಹಾಡು ಮುಗಿದರೇನು ಭಾವದ ತೊಳಲಾಟ ಮುಗಿದೀತೇ ಈ ಜನುಮದಲಿ
ಕನಸು ಒಡೆದು ಹೋದರೂ ಅದರ ಮಂಪರು ಸರಿದೀತೇ ಅರೆಕ್ಷಣದಲಿ||ಪ||

ಬಾಗಿಲುಗಳಿಲ್ಲದ ಮಾನಸದೂರಿಗೆ ಪುನಃ ಲಗ್ಗೆಯ ಹಾಕಿದವಳೇ
ಇನಿತೂ ಸುಳಿವಿಲ್ಲದಂತೆ ಪೂರಾ ಕೊಳ್ಳೆಯ ಹೊಡೆದವಳೇ
ತನ್ನಯ ವಿನಹ ನಿನಗೇನಿದೆ ಜಗದಲಿ ಎಂದು ಸವಾಲೆಸೆದವಳೇ
ದಿನವಹಿ ನೆನೆದರೂ ತಿರುಗಿ ತಾ ಹೊಸದೆನಿಸುವ ನಿತ್ಯನೂತನಳೇ||೧||

ಅಗೆದಗೆದು ಮೊಗೆದರೂ ಮುಗಿದು ಹೋಗದಂತ ಚೈತನ್ಯದ ಬುಗ್ಗೆಯೇ
ಅರಳುವ ಮೊದಲೇ ಪರಿಮಳ ಬೀರುವ ಅದಮ್ಯ ಸ್ಪೂರ್ತಿಯ ಮೊಗ್ಗೆಯೇ
ಜ್ಯೋತಿರ್ವರ್ಷಗಳಿಗೆ ಹಿರಿದಾದ ಮನವ ಹಿಡಿಯಲಿ ಬಂಧಿಸಿದ ಶಕ್ತಿಯೇ
ಅರೆನಗೆಯಲಿ ನೀ ದೊರಕಿಸುವುದು ಏಳು ಜನುಮಗಳಿಗಧಿಕದ ಮುಕ್ತಿಯೇ||೨||

ಮನವ ದೇಹದಿಂದಗಲಿಸಿ ಅಪಹರಿಸಿದಾಕೆ ನೀನಾತ್ಮಬಂಧುವೇ
ಬಿಂದುಮಾತ್ರದ ಸಂಧಾನದಲಿ ಬಂಧನಕ್ಕಿಕ್ಕಿದ ಪ್ರೇಮಸಿಂಧುವೇ
ಕೊಳ್ಳೆ ಹೋದ ಮನವಿದು ನೋಯದು, ಲೂಟಿಯ ಧಾಟಿಗೆ ಮರುಳಾಗಿ
ಮೈಮರೆತಿದೆ ದೇಹಹೀನ ಮನಸು,ವಿರಹದ ಸುಖಕೆ ತನ್ಮಯವಾಗಿ||೩||

Saturday, 2 March 2013

ಸೀತೆಯ ಸ್ವಗತ


ಇದು ೫೦ನೆಯ ಪೋಸ್ಟ್ , ಕಳೆದ ಎರಡೂವರೆ ವರ್ಷಗಳಿಂದ ಈ ಬ್ಲಾಗನ್ನು ಇಷ್ಟಪಟ್ಟು, ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.


ಪೀಠಿಕೆ : ನಾವು ಯೋಚಿಸುವ ಎಲ್ಲ ಮಾತುಗಳನ್ನು ನಾವು ಹೇಳುವುದಿಲ್ಲ, ಹೇಳಲೂಬಾರದು ಬಿಡಿ. ಕೆಲವೊಂದು ಮಾತುಗಳು ನಮ್ಮಲ್ಲಿಯೇ ಉಳಿದು ಹೋಗುತ್ತವೆ, ಯಾವುದಾದರೂ ಕಾರಣದಿಂದ,  ಕೆಲವೊಮ್ಮೆ ಧೈರ್ಯದ ಕೊರತೆಯಿಂದ, ಕೆಲವೊಮ್ಮೆ ಧರ್ಮದ ಹೆದರಿಕೆಯಿಂದ, ಕೆಲವೊಮ್ಮೆ ಹೇಳಬಾರದೆಂದು ತೀರ್ಮಾನಿಸಿದ್ದರಿಂದ. ಎಲ್ಲರಲ್ಲಿಯೂ ಈ ಮಾತುಗಳಿರುತ್ತವೆ. ಸೀತೆಯಲ್ಲಿಯೂ ಇಂತಹ ಮಾತುಗಳು ಒಂದಿಷ್ಟು ಉಳಿದಿದ್ದವೇ? ಗೊತ್ತಿಲ್ಲ. ಅದನ್ನು ನೋಡುವ ಪ್ರಯತ್ನವಷ್ಟೇ ಇದು. ಶ್ರೀರಾಮಚಂದ್ರನ ಎಂದರೆ ಧರ್ಮಸ್ವರೂಪಿ ಆತ. ಯಾವುದು ಧರ್ಮ ಎಂಬುದರ ಬಗೆಗಿನ ವಿವೇಚನೆಯಲ್ಲಿ ಆತನನ್ನು ಮೀರಿಸಿದವರಿಲ್ಲ. ಆದರೆ ಸಂಸಾರ ಎಂದರೆ ಧರ್ಮ ಒಂದೇ ಅಲ್ಲ ಅಲ್ಲವೇ? ಆಧುನಿಕ ಜಗತ್ತಿನ ಮೌಲ್ಯಗಳ ಭೂತಗನ್ನಡಿಯಲ್ಲಿ ಶ್ರೀರಾಮಚಂದ್ರನನ್ನು ನೋಡುವ ತಪ್ಪುಪ್ರಯತ್ನವೇ ಇದು? ನೀವೇ ನಿರ್ಣಾಯಕರು.

ಕೇಳಿದನೇ ರಾಮದೇವ ನನ್ನ ಇಚ್ಛೆಯ, ನನ್ನದೇ ಸ್ವಯಂವರದಲ್ಲಿ
ಗಣಿಸಿದನೇ ಸತಿಯನ್ನು, ಪಿತೃವಾಕ್ಯ ಪರಿಪಾಲನೆಯ ಸಡಗರದಲ್ಲಿ
ಬೆಲೆಯಿತ್ತೇ ನನ್ನ ಮಾತಿಗೆ, ಅಳುವಿಗೆ, ಸಂದೇಹದ ಅಗ್ನಿಪರೀಕ್ಷೆಯಲ್ಲಿ
ಏನಾಯ್ತು ಪತಿಧರ್ಮ, ನನ್ನ ಅಪಹರಣದಿಂದ ಬಿಡಿಸಿ ಮತ್ತೆ ಕಾಡಿಗೆ ಅಟ್ಟಿದಲ್ಲಿ

ಎತ್ತಲಾಗದ ಬಿಲ್ಲ ದಾಶರಥಿ ಮುರಿದಾಗ ಜಾನಕಿಯ ಮನವ ಗೆದ್ದನೇ
ಅರ್ಥವಾಗದ ಧರ್ಮಕ್ಕೆ ವನವಾಸಕ್ಕೆ ಹೋಗೆಂದರೆ ಯಾಕೆಂದು ಕೇಳಿದೆನೇ
ಪತಿವ್ರತೆ ಏಕಪತ್ನೀವೃತಸ್ಥರಾದ ಮಾತ್ರಕ್ಕೆ ಅದು ಆದರ್ಶ ಜೋಡಿಯೇ
ಎಲ್ಲಿತ್ತು ದಾಂಪತ್ಯ ದಂಡಕ, ಅಶೋಕವನ, ವಾಲ್ಮಿಕಿ ಅಶ್ರಮಗಳ ಮಧ್ಯೆ

ಅಬಲೆಯೆಂದರು, ಆದರ್ಶ ಸ್ತ್ರೀಯೆಂದರು, ನನ್ನ ಬಯಕೆಗಳೇ ಅವು
ನನಗೆ ಬೇಕಿದ್ದುದು ಒಂದಿಷ್ಟು ನೆಮ್ಮದಿ, ಅಲ್ಲೇ ಒಂದು ಪ್ರೀತಿಯ ತಾವು
ಈ ಪಾತಿವ್ರತ್ಯ, ಈ ಅನುಮಾನ, ಈ ಜಂಜಾಟ ಸಾಕಾಗಿ ಹೋಗಿತ್ತು
ಅನುಮಾನಿಸದೇ ಕೈಚಾಚಿದ ತಾಯಿ ಭೂಮಿಯ ಮಡಿಲಲ್ಲಿ ಜಾಗವಿತ್ತು


ವಿ. ಸೂ. : ಇದು ಕೇವಲ ನನ್ನ ಭಾವನೆಗಳು, ಕೇವಲ ನನ್ನೊಬ್ಬನ ವಿಚಾರಗಳು. ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶ ನನ್ನಲ್ಲಿಲ್ಲ. ಹಾಗೇನಾದರೂ ಅನಿಸಿದರೆ ಈ ಮೂಢನನ್ನು ಕ್ಷಮಿಸಿಬಿಡಿ ಒಮ್ಮೆ. 

Wednesday, 20 February 2013

ವೈತರಣಿ



ವೈತರಣಿ , ಬಹಳ ಕಾಡಿದ ಕಥೆ ಅದು. ಒಂದು ತರಹ ಅನುಭವಿಸಿ ಬರೆದಿದ್ದೆ ಅದನ್ನು. ಹಾಗೆಂದು ಅದೇನೂ ಭಾರೀ ದೊಡ್ಡ ರಚನೆ ಎಂದಾಗಲೀ, ಅದು ನಿಜ ಜೀವನಕ್ಕೆ ಸಂಬಂಧಿಸಿದ್ದೆನ್ದಾಗಲೀ ಅಲ್ಲ. ಆದರೂ ಅದನು ಬರೆಯುವಾಗ ಯಾವುದೋ ಒಂದು ಕ್ಷಣದಲ್ಲಿ ಭಾವುಕನಾಗಿದ್ದುದು ಹೌದು, ವಿನಾಕಾರಣ. ಅದೇ ಗುಂಗಿನಲ್ಲಿ ಬರೆದ ಕವನ. ಇಷ್ಟವಾಗುವುದು ಕಷ್ಟವಿದೆಯೇನೋ, ಸಾಧ್ಯವಾದರೆ ಓದಿ ನೋಡಿ. ನೋಡಿ 
ಕಥೆಯ ಹಿನ್ನೆಲೆ ಬೇಕೆನಿಸಿದರೆ ಒಮ್ಮೆ ಓದಿ ನೋಡಿ ನಮ್ಮ ವೈತರಣಿಯ ಕಥೆಯನ್ನು ಇನ್ನೊಮ್ಮೆ.  ವೈತರಣಿ  


ಸಾವಿರ ಫ್ರಿಲ್ಲುಗಳನು ಮೆತ್ತಗೆ ಒದೆಯುತ್ತ,
ಆ ತುಂಟ ಕಣ್ಣಲ್ಲೇ ಭಾವಗಳನು ಮಿಡಿಯುತ್ತ,
ನನಸೇ ಕನಸಾಗಿ ಬಂದಿತ್ತೇ ನನ್ನೆದುರು ಎನಿಸುತ್ತ,
ಹೊತ್ತೊಯ್ದ ಕಾಲನಡೆತಡೆಯ ಮೀರಿ ನಿಲ್ಲುತ್ತ,
            ತಿರುಗಿ ಬಾರೊಮ್ಮೆ ನೀ ನನ್ನ  ವಸಂತ
            ನಿನಗಾಗೇ ಕಾದಿರುವೆ ನಾನನವರತ

ಕೂಡಿ ಕಂಡ ಕನಸುಗಳ ಪೂರ್ತಿಮಾಡಲು,
ಮಾರಾಟಕ್ಕಿರದ ಜಗವ ಪುಕ್ಕಟೆ ಕೊಳ್ಳಲು,
ಬೇಲಿಹೂಗಳಿಗೆ ಮುಡಿಯ ಸಗ್ಗ ತೋರಲು ,
ನಿನ್ನ ನೆನಪುಗಳ ಧಾಳಿಯಿಂದ ನನ್ನ ಬಿಡಿಸಲು,
           ನಿಯಾಮಕನ ನಿಯಮಗಳಿಗೆ ಆಗಿ ಸವಾಲು
           ಆಗಿಬಿಡು ನೀ ಮತ್ತೊಮ್ಮೆ ನನ್ನ ಪಾಲು

ಮರೆತೆನೆಂದರೂ ಮರುಕಳಿಸುವ ವೇದನೆಗೆ,
ತಿರುತಿರುಗಿ ಕಾಡುವ ಶೂನ್ಯದ ಯೋಚನೆಗಳಿಗೆ, 
ದುಃಖವುಕ್ಕಿ ಧುಮ್ಮಿಕ್ಕುವ ದುಃಖದ ನದಿ ನನಗೆ,
ಸಂತೈಸಿ ಬಾಚಿ ಅಪ್ಪಿಕೊಳ್ಳುವ ಶರಧಿ ನೀನಾಗೆ,
          ಒತ್ತರಿಸಿ ಬರುವ ದುಃಖ ಬತ್ತಿ ಹೋಗುವ ಹಾಗೆ
          ಬಾ ವೈತರಣಿ ಬಾ ಸಾವು ಸಾಯುವ ಹಾಗೆ