ನೃಪತುಂಗ:
ಅವಳು ಸುಂದರಿ,ಸೌಂದರ್ಯವೇ ಮೂರ್ತಿವೆತ್ತಂತೆ ದೇವರು ಬಹಳ ಸಾವಧಾನದಿಂದ ಕುಳಿತು ಕಡೆದ ಶಿಲ್ಪದಂತವಳು. ಹಾಗೆಂದು ನಾನೇನು ಕುರೂಪಿಯಲ್ಲ, ಇತ್ತ ಸುಂದರನೂ ಅಲ್ಲ, ಆರಕ್ಕೇರದ ಮೂರಕ್ಕಿಳಿಯದ ಎಡಬಿಡಂಗಿ. ಅವಳು ಅಕ್ಷರಶಃ ಬಹುರ್ಮುಖಿ, ಯಾರಾದರೂ ಜೊತೆಯಲ್ಲಿ ಇದ್ದರೆ ಮಾತನಾಡುತ್ತಿರಬೇಕು, ಯಾರೂ ಇಲ್ಲವಾದರೆ ಹಾಡೊಂದು ಮೂಡಬೇಕು, ಧ್ವನಿ ಬೇಜಾರೆನಿಸಿದರೆ ಅಲ್ಲಿಯೇ ಒಂದು ಲೇಖನ ಹುಟ್ಟಬೇಕು, ಅವಳು ಸುಮ್ಮನೇ ಹದಿನೈದು ನಿಮಿಷ ಕುಳಿತಿದ್ದನ್ನು ಸ್ವತಃ ಅವಳೇ ನೋಡಿಲ್ಲವಂತೆ. ನಾನು ಭಾಗಶಃ ಅಂತರ್ಮುಖಿ, ಅದಕ್ಕಿಂತ ಮೂಡಿ ಎಂದರೆ ಸೂಕ್ತವೇನೋ. ಮಾತು ಕಡಿಮೆ, ಆಗಾಗ ಗೆಳೆಯರ ಜೊತೆಗೆ ಹರಟೆಹೊಡೆಯುತ್ತ ಕುಳಿತುಬಿಡುತ್ತೇನಾದರೂ ಯಾವಾಗಲೂ ಉಳಿದವರಿಂದ ಒಂದಿಷ್ಟು ಅಂತರ ಕಾಯ್ದುಕೊಳ್ಳುವುದರ ಜಾತಿ. ಜನ-ಜಾತ್ರೆಯಿಂದ ಆದಷ್ಟು ದೂರ. ಅವಳೋ ಕನಿಷ್ಟ ನಾಲ್ಕು ನಿಮಿಷಕ್ಕೊಂದು ಬಾರಿ ಹರೇ ಕೃಷ್ಣ ಎಂದು ತನ್ನಷ್ಟಕ್ಕೆ ತಾನೇ ಆದರೂ ಹೇಳಿಕೊಳ್ಳುವಷ್ಟು ಭಕ್ತೆ, ನಾನೋ ನೆನಪಾದರೆ ದೇವರಿಗೆ ಕೈ ಮುಗಿಯುವಷ್ಟರ ಮಟ್ಟಿಗೆ ಆಸ್ತಿಕ. ಅವಳು ಅಭ್ಯಾಸದಲ್ಲಿ ಓದಿನಲ್ಲಿ ಅಷ್ಟಕ್ಕಷ್ಟೇ, ನಾನು ಜೀನಿಯಸ್ ಅಂತಾರಲ್ಲಾ ಹಾಗೆ ವಿದ್ಯಾಭ್ಯಾಸದಲ್ಲಿ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ನಾನು (ನೃಪತುಂಗ) ಮತ್ತು ವೈದೇಹಿ ಪರಸ್ಪರ ವಿರುದ್ಧ ಧೃವಗಳು.
ಆದರೆ ವಿಚಿತ್ರ ನೋಡಿ, ನಾನು ಅದಾವ ಮಾಯದಲ್ಲೋ ಇವಳೊಡನೆ ಪ್ರೀತಿಯಲ್ಲಿ ಬಿದ್ದೆ. ನಮ್ಮಿಬ್ಬರ ಪರಿಚಯವಾಗಿ, ಅದು ಸ್ನೇಹವಾಗಿ, ಅದು ಯಾವುದೋ ಮಾಯದಲ್ಲಿ ಆಕರ್ಷಣೆಯಾಗಿ, ಅದು ಯಾವಾಗ ಪ್ರೇಮವಾಗಿ ಬದಲಾಯಿತೋ ನಾ ಕಾಣೆ. ಕ್ಲಾಸಿನಲ್ಲಿ ರೌಡಿಯ ತರಹ ಇದ್ದ ವಿನಯಕುಮಾರ್ ಶುಕ್ಲಾನಿಗೂ ಅವಳ ಮೇಲೆ ಇಷ್ಟವಿತ್ತು ಎಂಬ ವಿಷಯ ಗೊತ್ತಿದ್ದರೂ, ಪ್ರೀತಿ ಎಂದರೆ ಏನೆಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪ್ರೀತಿಸಲಾರಂಭಿಸಿದೆ. ಅಷ್ಟಕ್ಕೂ ನಮ್ಮಿಬ್ಬರ ಮಧ್ಯೆ ಇದ್ದದ್ದು ಕಾರಿಡಾರಿನಲ್ಲಿ ಸಿಕ್ಕಿದರೆ ’ಹಾಯ್’ ಹೇಳುವಷ್ಟು ಪರಿಚಯ. ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಎಲ್ಲ ಬಿಟ್ಟು ನಾನೇಕೆ ಅವಳನ್ನೇ ಪ್ರೀತಿಸಿದೆ? crushಗೆ, ಆಕರ್ಷಣೆಗೆ ಕಾರಣಗಳಿಬಹುದಾದರೂ, ಪ್ರೀತಿಗೆ ಕಾರಣಗಳನ್ನು ಹುಡುಕುವುದು ಕಷ್ಟ. ಹಾಗೆಂದು ನನ್ನದು ಮೊದಲ ನೋಟದ ಪ್ರೇಮವೇನೂ ಅಲ್ಲ, ಅದನ್ನು ನಂಬುವಷ್ಟು ಮೂರ್ಖನೇನೂ ನಾನಲ್ಲ. ಪ್ರೀತಿಯನ್ನು ವ್ಯಕ್ತಪಡಿಸಿದರೆ ಎಲ್ಲಿ ಈಗ ಸಿಗುವ ನಗೆಮಲ್ಲಿಗೆಯೂ ಮಾಯವಾಗಿಬಿಡುತ್ತದೆಯೇನೋ ಎಂಬ ಹೆದರಿಕೆ. ನನ್ನ ಪರಿಸ್ಥಿತಿ ಕೆಲವೊಮ್ಮೆ ನನಗೇ ವಿಚಿತ್ರವಾಗಿ ಕಾಣುತ್ತಿತ್ತು. ಕೊನೆಕೊನೆಗೆ ಅತ್ತ ವಿದ್ಯಾಭ್ಯಾಸದ ಕಡೆಗೂ ಗಮನ ಕೊಡಲೂ ಆಗದೇ ಇತ್ತ ಪ್ರೀತಿಯನ್ನೂ ವ್ಯಕ್ತಪಡಿಸಲಾರದೇ ಬದುಕೇ ನಿತ್ತು ಹೋದ ಭಾವನೆಯಲ್ಲಿ ಬದುಕುತ್ತಿದ್ದೆ. ಇನ್ನು ಭಾವನೆಗಳನ್ನು ಹತ್ತಿಕ್ಕಲಾಗದು ಎಂಬ ಭಾವನೆ ಬಂದಾಗ ಧೈರ್ಯ ತೆಗೆದುಕೊಂಡು ಪ್ರಪೋಸ್ ಮಾಡಿಯೇ ಬಿಟ್ಟೆ.ಅವಳು ಒಪ್ಪಿಕೊಳ್ಳಲಿಲ್ಲ, ತನಗೆ ಆ ತರಹದ ಭಾವನೆಯೇನೂ ಇಲ್ಲವೆಂದೂ ಹಾಗೂ ಪ್ರೀತಿ ಪ್ರೇಮ ಎಂಬ ’ಮರುಳಿ’ಗೆ ಬೀಳಲು ತನಗಾವ ಇಷ್ಟವೂ ಇಲ್ಲವೆಂದೂ, ಹೀಗೇ ಗೆಳೆಯರಾಗಿ ಇದ್ದುಬಿಡೋಣವೆಂದೂ ಅವಳು ಹೇಳಿದಳಾದರೂ ಅದು ಸತ್ಯವೆಂದು ಪ್ರೀತಿಯ ಗುಂಗಿನಲ್ಲಿದ್ದ ನನಗೆ ಅನಿಸಲಿಲ್ಲ. ಮನಸ್ಸು ಇನ್ನೂ ಧನಾತ್ಮಕವಾಗಿಯೇ ಇತ್ತು.
*****
ವೈದೇಹಿ:
ಇದಾಗಿ ಮೂರು ತಿಂಗಳು ಮಾತ್ರವಾಗಿತ್ತು, ಅದೊಂದು ದಿನ ನಾನು ಕಾಲೇಜಿನಿಂದ ಮನೆಗೆ ಬರುವ ದಾರಿಯಲ್ಲಿದ್ದ ಒಂದು ಓಣಿಯಲ್ಲಿ ಅಡ್ಡ ಬಂದ ಮುಸುಕುಧಾರಿಯೊಬ್ಬ ನನ್ನ ಮುಖಕ್ಕೆ ಅಸಿಡ್ ಹಾಕಿ ಹೋಗಿದ್ದ. ನನಗೆ ಜಗತ್ತೆಲ್ಲ ಕಪ್ಪಾಗಿ ಹೋಗಿತ್ತು ಆ ಕ್ಷಣದಲ್ಲಿ. ಮುಂದೆ ಪ್ರಜ್ಞೆ ಬಂದ ಮೇಲೆ ನನ್ನ ಮುಖವನ್ನು ನೋಡಲು ನನಗೇ ಭಯವಾಗುವಷ್ಟು ನನ್ನ ಮುಖ ಕುರೂಪವಾಗಿತ್ತು. ರಾಜ್ಯದಲ್ಲೆಲ್ಲಾ ದೊಡ್ಡ ವಿಷಯವಾಗಿಹೋಗಿತ್ತು ಈ ಆಸಿಡ್ ಪ್ರಕರಣ. ಚರ್ಚೆ, ಪ್ರತಿಭಟನೆಗಳೆಲ್ಲ ಎರಡು ವಾರಗಳವರೆಗೆ ನಡೆದು ನಂತರ ತಣ್ಣಗಾಗಿತ್ತು. ಯಾರಿಗೂ ಯಾರು ಮಾಡಿದ್ದು, ಏನು ಕಥೆ ಎಂದು ಗೊತ್ತಾಗಿರಲಿಲ್ಲ. ನೃಪತುಂಗನ ಇಮೇಜ್ ಅಷ್ಟು ಒಳ್ಳೆಯದಿದ್ದುದರಿಂದ ಯಾರೂ ಅವನ ಕಡೆ ಕೈ ತೋರಿಸಲಿಲ್ಲವಾದರೂ, ಎಲ್ಲರ ಒಂದು ಕಣ್ಣು ಅವನ ಮೇಲೇ ಇತ್ತು. ನನಗೂ ಯಾರು ತನ್ನ ಮೇಲೆ ಅಸಿಡ್ ಹಾಕಿದ್ದು ಎಂಬುದರ ಬಗ್ಗೆ ಖಚಿತತೆಯಿಲ್ಲವಾಗಿತ್ತಾದರೂ ನೃಪತುಂಗನ ಬಗ್ಗೆ ಒಂದು ಸಂಶಯವಿದ್ದಿದ್ದು ಹೌದು, ಪೋಲೀಸರು ವಿಚಾರಣೆ ಮಾಡಿದಾಗ ಹೇಳಿಬಿಡೋಣ ಎಂದೆನಿಸಿತ್ತಾದರೂ ನನ್ನ ಜೊತೆ ಸರಿಯಾಗಿ ಮಾತನಾಡಲೂ ತಡವರಿಸುವ, ಇರುವೆಗೂ ನೋವು ಮಾಡಲು ಹಿಂಜರಿಯುವ ಈತ ಇಂತಹ ಪಾತಕಕ್ಕೆ ಕೈ ಹಾಕಲಾರ ಎಂಬ ವಿಶ್ವಾಸವಿತ್ತು. ಮೇಲಾಗಿ ನನಗೂ ಅವನ ಬಗ್ಗೆ ಸ್ವಲ್ಪ ಭಾವನೆಗಳಿದ್ದವಲ್ಲಾ! ಪ್ರೀತಿ ಎಂದು ಸ್ಪಷ್ಟವಾಗಿ ಹೇಳಲು ತಿಳಿಯದಾದರೂ ಆ ಭಾವನೆಗಳು ಅವನಲ್ಲಿ ಅಂತಹ ಯಾವುದೇ ಕೆಟ್ಟ ಅಂಶವನ್ನು ನೋಡದಂತೆ ಕಟ್ಟಿಹಾಕಿದ್ದವು. ಆಸ್ಪತ್ರೆಯಲ್ಲಿದ್ದಾಗ ಪ್ರತೀ ದಿನವೂ ಎರಡು ಬಾರಿ ನನ್ನನ್ನು ನೋಡಲು ಬರುತ್ತಿದ್ದ, ಮಾತನಾಡಿಸಿಕೊಂಡು ಹೋಗುತ್ತಿದ್ದ. ನಾನು ಮಲಗಿದ್ದರೆ ಅಮ್ಮನ ಬಳಿ ನನ್ನ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದ.
ನೃಪತುಂಗ ಹೊರಗಿನ ಜಗತ್ತಿನ ಗುಸುಗುಸು ಗುಮಾನಿಗಳಿಗೂ ತನಗೂ ಯಾವ ಸಂಬಂಧವೂ ಇಲ್ಲದವನಂತೆ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೂರನೇ ದಿನಕ್ಕೇ ನಮ್ಮ ಮನೆಗೆ ಬಂದು ಭೇಟಿಯಾಗಿದ್ದ. ಮತ್ತೊಮ್ಮೆ ಪ್ರೇಮನಿವೇದನೆ ಮಾಡಿಕೊಂಡುಬಿಟ್ಟ. "ನೀನಿಲ್ಲದೇ ಇರಲು ನಾನು ಬಹಳ ಪ್ರಯತ್ನ ಪಟ್ಟೆನಾದರೂ ಅದು ನನಗೆ ಸಾಧ್ಯವಾಗಿಲ್ಲ, ದಯವಿಟ್ಟು ನನ್ನ ಮೇಲೆ ಕರುಣೆ ತೋರು, ನಿನ್ನನ್ನು ಮದುವೆಯಾಗಿ ನಾನು ಯಾವುದೋ ಆದರ್ಶ ಪಾಲಿಸುತ್ತೇನೆ ಎಂಬಷ್ಟು ಆದರ್ಶವಾದಿ ನಾನಲ್ಲ, ನನ್ನದು ಕೇವಲ ಪ್ರೀತಿಯ ಸ್ವಾರ್ಥ ಅಷ್ಟೇ!" ಇನ್ನಿಲ್ಲದಂತೆ ಬೇಡಿಕೊಂಡ. ಪ್ರೀತಿ ಎಂದರೇ ಹೀಗೇನೋ? ಆ ಕ್ಷಣದಲ್ಲಿ ಏನೆನ್ನಿಸಿತೋ, ಆ ಒಂದು ದುರ್ಬಲ ಕ್ಷಣದಲ್ಲಿ ಕರಗಿಹೋದೆನೆನಿಸಿದರೂ, ಮನಸ್ಸಿನಲ್ಲಿದದನ್ನು ಪ್ರಾಮಾಣಿಕವಾಗಿಯೇ ಹೇಳಿದೆ, "ಮೊದಲಿನಿಂದಲೂ ನಿನ್ನನ್ನು ನಾನು ಪ್ರೀತಿಸುತ್ತಿದ್ದೆ ಎಂದರೆ ಸುಳ್ಳಾಗಬಹುದೇನೋ, ಆದರೆ ಆ ದಿನ ನೀನು ಪ್ರಪೋಸ್ ಮಾಡಿದಾಗ ಹೇಳಿದಂತೆ ನನಗೆ ನಿನ್ನ ಬಗ್ಗೆ ಒಂದು ಚಿಕ್ಕ ಭಾವನೆಯೂ ಇರಲಿಲ್ಲ ಎಂಬುದೂ ಸುಳ್ಳೇ. ನಾನು ಪ್ರೀತಿ ಪ್ರೇಮದ ಬಗ್ಗೆ ಒಂದು ತಿರಸ್ಕಾರಭರಿತ ನಿರಾಸಕ್ತಿ ತೋರಿಸುತ್ತಿದ್ದುದು ಎಷ್ಟು ಸತ್ಯವೋ, ಅದಕ್ಕೆ ವಿರುದ್ಧವಾದ ಒಂದು ಮೃದುಭಾವನೆ ನನ್ನಲ್ಲಿ ಬೆಳೆಯಲಾರಂಭಿಸಿತ್ತು ಎಂಬುದೂ ಅಷ್ಟೇ ಸತ್ಯ. ಆದರೆ ನೂರು ಪ್ರತಿಶತ ನನ್ನ ಬಗ್ಗೆ ನನಗೇ ನಂಬಿಕೆಯಿಲ್ಲದೇ ಒಪ್ಪಿಕೊಳ್ಳಲು ಇಷ್ಟವಿರದಿದ್ದುದರಿಂದಾಗಿ ತಡೆಹಿಡಿದುಕೊಂಡೆ. ಆದರೆ ಈಗ ನೋಡಿದರೆ ಆಗ ನಾನು ಮಾಡಿದ್ದು ತಪ್ಪಾಯ್ತು ಎನ್ನಿಸುತ್ತದೆ. ಈಗ ನಾನು ನಿನ್ನನ್ನು ಒಪ್ಪಿಕೊಂಡರೆ ಮುಖ ಕುರೂಪವಾದ ಮೇಲೆ ನಾನು ಒಪ್ಪಿಕೊಂಡೆ ಎಂಬ ಅಪವಾದ ಬರುತ್ತದೆ. ಹಾಗೆಂದು ಈಗಲೂ ನಾನು ತಿರಸ್ಕರಿಸಿ ಮುಂದೆ ಜೀವನಪೂರ್ತಿ ಪಶ್ಚಾತ್ತಾಪ ಪಡಲಾರೆ, ನನಗೇನು ಮಾಡಬೇಕೆಂದು ತಿಳಿಯುತ್ತಿಲ್ಲ.ನಿಜವಾಗಿ ಪ್ರೀತಿಸಿದರೂ ಹೇಳಿಕೊಳ್ಳಲಾಗದ ಸ್ಥಿತಿಗೆ ನೂಕಿದ ವಿಧಿಯನ್ನು ಹಳಿಯುವುದನ್ನು ಬಿಟ್ಟು ಬೇರೇನನ್ನೂ ಮಾಡಲಾರೆನೇನೋ ಈಗ" ಹೇಳಿ ಮುಗಿಸಿರಲಿಲ್ಲ ನಾನು, ನೃಪತುಂಗನಿಗೆ ಸ್ವರ್ಗ ಭೂಮಿಯ ಮೇಲೆಯೇ ಕಂಡಿತ್ತು. ಖುಷಿಯಿಂದ ನಮ್ಮ ಮನೆಯ ಮಹಡಿಯ ಮೇಲೆಯೇ ಚಿಕ್ಕ ಮಕ್ಕಳಂತೆ ಗುಪ್ಪಳಿಸಿ ಹಾರಿದ್ದ.
*****
ವೈದೇಹಿ:
ಅದಾಗಿ ಆರು ವರ್ಷಗಳಾದವು, ನಮ್ಮಿಬ್ಬರ ಮದುವೆಯಾಗಿತ್ತು. ನಾವಿಬ್ಬರೂ ಪ್ರತಿಷ್ಟಿತ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಅವನು ಏನೇ ಎಂದುಕೊಂಡಿರಲಿ, ನೃಪತುಂಗ ನನ್ನ ಬಗ್ಗೆ ಹೀರೋ ಆಗಿದ್ದ. ಆ ಕುರೂಪಿ ಮುಖ ನನಗೇ ಅಸಹ್ಯ ಬರಿಸುತ್ತಿತ್ತು. ಹಾಗಿರುವಾಗ ನನ್ನನ್ನು ಇನ್ನೂ ಪ್ರೀತಿಸುವ ಇವನು ನನಗೆ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಎಷ್ಟೋಸಲ ಭಾವಿಸಿದ್ದೇನೆ, ಇಂದಿಗೂ ಹಾಗೇ ಭಾವಿಸುತ್ತೇನೆ. ಆ ವಿರೂಪವಾದ ಖವನ್ನು ಅವನಿಗೆ ಜೀವನಪೂರ್ತಿ ತೋರಿಸಿಕೊಂಡು ಇರಲು ನನಗೇ ಸಾಧ್ಯವಿರಲಿಲ್ಲವೆನಿಸಿ ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಂತರವೇ ಮದುವೆಯಾಗಲು ಒಪ್ಪಿಕೊಂಡೆ. ಆಸಿಡ್ ಎರಚಿದ ಇಡೀ ಪ್ರಕರಣವನ್ನು ಒಂದು ಕಹಿ ನೆನಪೆಂದು ನಾನು ಮರೆತಿದ್ದೇನೆ, ಮರೆಯಲು ಪ್ರಯತ್ನಿಸುತ್ತಿದ್ದೇನೆ, ಆ ಘಟನೆಯ ಬಗ್ಗೆ ನನ್ನಷ್ಟೇ ಅವನೂ ನೊಂದುಕೊಂಡಿದ್ದಾನೆ, ನೊಂದುಕೊಳ್ಳುತ್ತಾನೆ. ಆ ವಿಚಾರ ಬಂದಾಗಲೆಲ್ಲ ನನ್ನಷ್ಟೇ ಅವನೂ ಆ ವಿಷಯವನ್ನು ಬದಲಾಯಿಸುತ್ತೇವೆ.
ಹಾಗೇ ಒಂದು ಭಾನುವಾರದ ದಿನ ಬೆಳಿಗ್ಗೆ ಪೇಪರ್ ಓದುತ್ತಿದ್ದಾಗ, ನನ್ನ ನೆಚ್ಚಿನ ಮೂರನೇ ಪುಟದಲ್ಲಿದ್ದ ಒಂದು ಚಿಕ್ಕ ಸುದ್ದಿ ಗಮನ ಸೆಳೆದಿತ್ತು . ಪ್ರಖ್ಯಾತ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಯೊಬ್ಬ ಅವನು ಪ್ರೀತಿಸಿದ್ದ(?) ಹುಡುಗಿ ಅವನ ಪ್ರೀತಿಯನ್ನು ಒಪ್ಪದಾದಾಗ ತನ್ನದೇ ಒಂದಿಷ್ಟು ಜನ ಗೆಳೆಯರಿಂದ ಅವಳನ್ನು ಬಲಾತ್ಕರಿಸಿ ನಂತರ ದೊಡ್ಡ ಹೀರೋನ ತರಹ ಅವಳನ್ನು ಉದ್ಧಾರ ಮಾಡಿದವರ ರೀತಿ ಮದುವೆಯಾಗಿದ್ದನಂತೆ, "ಏನು ಕಾಲ ಬಂತಪ್ಪಾ, ಜನ ಪ್ರೀತಿ ಪ್ರೇಮವನ್ನು ಎಷ್ಟು ಸಾಧ್ಯವೋ ಅಷ್ಟು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಈ ದಿನಗಳಲ್ಲಿ" ಎಂದು ಸ್ವಗತಿಸಿ ನೃಪತುಂಗನನ್ನು ಎಬ್ಬಿಸಲು ಹೋದೆ. ರಜೆಯ ದಿನದಂದು ಇವನನ್ನು ಎಬ್ಬಿಸುವುದೆಂದರೆ ತಲೆಬಿಸಿಯೇ! ಮಧ್ಯಾಹ್ನದ ಲಂಚಿಗೆ ಸೇರೋಣ ಎಂದು ಹೇಳಿದ್ದ ಇಂಜಿನಿಯರಿಂಗ್ ಗೆಳೆಯರ ಕರೆಯನ್ನು ನೆನಪಿಸಿ ಆ ಹೆಳೆಯಲ್ಲಿಯೇ ಎಬ್ಬಿಸಿದರೆ ಹತ್ತು ನಿಮಿಷದಲ್ಲಿ ಏಳುತ್ತೇನೆ ಎಂಬ ಉತ್ತರ. ಹಾಗೇ ತನ್ನ ಹಾಸಿಗೆ ಹೊದಿಕೆಗಳನ್ನು ಮಡಿಚಿಟ್ಟು ಬರುತ್ತಿರಬೇಕಾದರೆ ಮತ್ತೊಮ್ಮೆ ಅದೇ ಸುದ್ದಿ ಕಣ್ಣಿಗೆ ಬಿದ್ದು ಘಕ್ಕನೆ ನಿಂತು ಬಿಟ್ಟೆ. ಯಾವುದೋ ಒಂದು ಘಳಿಗೆಯಲ್ಲಿ ತನ್ನ ಜೀವನದಲ್ಲಿ ಆಗಿದ್ದೂ ಇದೇನಾ ಎನ್ನಿಸಿತು. ಆದರೆ ಮಲಗಿದ್ದ ನೃಪತುಂಗನ ಮುಖವನ್ನು ಒಮ್ಮೆ ನೋಡಿದ ತಕ್ಷಣ ಆ ಎಲ್ಲಾ ಸಂದೇಹಗಳೂ ನಿಮಿಷಾರ್ಧದಲ್ಲಿ ಮರೆಯಾದವು. ಹಾಗೊಂದು ಮುಗ್ಧವಾದ ಮುಖ ಇರಬೇಕೆಂದರೆ ನಿಜವಾಗಿಯೂ ಅಮಾಯಕನಾಗಿರಬೇಕು; ಇಲ್ಲವೆಂದರೆ ಜೀವನವೆಲ್ಲಕ್ಕೂ ಸಾಕಾಗುವಷ್ಟು ನಾಟಕ ಮಾಡಲು ತಯಾರಾಗಿರಬೇಕು. ಆದರೆ ದಾಂಪತ್ಯದ ಈ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಈತನು ನಾಟಕ ಮಾಡುತ್ತಿದ್ದಾನೆ ಎಂದು ನನಗೆ ಎನಿಸಿಲ್ಲ, ಹೋಗಲಿ ನಾಟಕ ಆಡಬಲ್ಲ ಎಂದೇ ಎನಿಸಿಲ್ಲ.
ಈ ಆರು ವರ್ಷಗಳಲ್ಲಿ ಒಂದು ಬಾರಿಯೂ ನೃಪತುಂಗ ನನ್ನ ಪ್ಲಾಸ್ಟಿಕ್ ಸರ್ಜರಿ ಆದರೂ ಸಂಪೂರ್ಣವಾಗಿ ಮೊದಲಿನಂತಾಗಿರದ ಮುಖದ ಬಗ್ಗೆ ಮಾತನಾಡಿಲ್ಲ. ಮದುವೆಯ ಮೊದಲು ನಡೆದ ಘಟನೆಗಳ ಬಗ್ಗೆ ತಪ್ಪಿಯೂ ಮಾತೆತ್ತಿಲ್ಲ, ನನ್ನಲ್ಲಿ ಸ್ವಲ್ಪವೂ ಕೀಳರಿಮೆ ಬರುವಂತೆ ನಡೆದುಕೊಂಡಿಲ್ಲ. ನಾನು ಸಂಪೂರ್ಣವಾಗಿ ಸರಿಯಾಗಿದ್ದರೆ ನನ್ನನ್ನು ಹೇಗೆ ನಡೆಸಿಕೊಳ್ಳುತ್ತಿದ್ದನೋ ಹಾಗೆಯೇ ನಡೆಸಿಕೊಂಡಿದ್ದಾನೆ. ನನಗೂ ಆ ಘಟನೆಗಳೇನೂ ಸವಿನೆನಪಿನದ್ದಾಗದೇ
ಇದ್ದಿದ್ದರಿಂದ ನಾನೂ ಅದನ್ನು ಬಹುತೇಕ ಮರೆತಂತೆಯೇ ಬದುಕಿದ್ದೆ, ದಿನವೂ ಅದರ ಗುರುತುಗಳನ್ನು ನನ್ನ ಮುಖದ ಮೇಲೆಯೇ ನೋಡುತ್ತ ಇದ್ದರೂ. ನನಗೆ ನಿಜವಾಗಿಯೂ ಹೆಮ್ಮೆಯಿದೆ ಇವನು ನಡೆದುಕೊಂಡಿರುವ ರೀತಿಯ ಬಗ್ಗೆ, ನನ್ನನ್ನು ನಡೆಸಿಕೊಂಡಿರುವ ರೀತಿಯ ಬಗ್ಗೆ. ಆದರೆ ನನಗೇನು ಗೊತ್ತಿತ್ತು ಅದೇ ದಿನ ನನ್ನ ನಂಬಿಕೆಯ ಸೌಧವೇ ಬುಡಮೇಲಾಗುತ್ತದೆ ಎಂದು.
*****
ವೈದೇಹಿ:
ಅಂದು ಮಧ್ಯಾಹ್ನದ ಊಟಕ್ಕೆ ಮುಂಚೆ ಲಾಲ್ ಬಾಗಿನಲ್ಲಿ ಭೇಟಿಯಾಗುವುದು, ಮುಂದೆ ಹಾಗೆಯೇ ಎಲ್ಲಾದರೂ ಜಯನಗರದಲ್ಲಿ ಊಟ ಮಾಡುವುದೆಂಬ ಪ್ಲಾನಿತ್ತು. ಪ್ಲಾನು ನಮ್ಮ ಕ್ಲಾಸಿನ ಮತ್ತೊಂದು ಜೋಡಿಯಾದ ವೈಷ್ಣವಿ ಮತ್ತು ಪ್ರದ್ಯುಮ್ನರದ್ದು.ಇಂಜಿನಿಯರಿಂಗಿನಲ್ಲಿಯೂ ಅದು ಮುಗಿದ ನಂತರವೂ ನಮ್ಮ ಕ್ಲಾಸಿನವರ ಯಾವುದೇ ಚಟುವಟಿಕೆಯಾದರೂ ಆಗುವುದು ಅವರಿಬ್ಬರ ಮುಂದಾಳತ್ವದಲ್ಲಿಯೇ. ನಾವಿಬ್ಬರೂ ಸಮಯಕ್ಕಿಂತ ಮೊದಲೇ ಹೋಗಿ ಮುಟ್ಟಿದ್ದೆವು. ಗಾಜಿನ ಮನೆಯ ಪಕ್ಕದ ಉದ್ಯಾನವನದ ಒಂದು ವಿಶಾಲ ಮರದ ಕೆಳಗೆ ಕುಳಿತು ಉಳಿದವರ ಆಗಮನವನ್ನು ಕಾಯುತ್ತಿದ್ದ ನಮ್ಮಿಬ್ಬರ ಮನಸ್ಸಿನಲ್ಲಿಯೂ ಹಳೆಯ ನೆನಪುಗಳ ಕುಣಿತ, ಕೆಲವು ಸಿಹಿನೆನಪುಗಳ, ಹಲವು ಕಹಿನೆನಪುಗಳ ತಕಧಿಮಿತ. ಅದೇ ಗುಂಗಿನಲ್ಲಿ ನಾನು ಸ್ವಲ್ಪ ಆ ಭಾವುಕನಾಗಿ ಮೈಮರೆತುಬಿಟ್ಟೆನೆಂದು ಕಾಣುತ್ತದೆ. ನಾನು ಈ ಜಗತ್ತಿಗೆ ವಾಪಸ್ ಬಂದಾಗ ನನ್ನ ಸುತ್ತಲೂ ಮಿತ್ರರು ಸುತ್ತುವರೆದಿದ್ದರು. ಹಸನ್ಮುಖಿ ಚಾರುಲತೆ "ನೀನಿನ್ನೂ ಸ್ವಲ್ಪಾನೂ ಬದಲಾಗಿಲ್ಲ ಕಣೇ, ಅದೇ ರೀತಿ ಹಾಡುಹಗಲಲ್ಲೇ ಮೈಮರೆಯುತ್ತೀಯಾ, ಆಗೇನೂ ನೃಪತುಂಗನ ಧ್ಯಾನದಲ್ಲಿ ಇರುತ್ತಿದ್ದಿ ಎಂದು ಭಾವಿಸಿದರೆ ಈಗ ಏನು ಕಥೆ" ಎಂದು ಕಣ್ಣು ಮಿಟುಕಿಸಿ ನಗುತ್ತಿದ್ದಳು."ಮದುವೆಯಾದ ಮೇಲೆ ಗಂಡನ ಧ್ಯಾನದಲ್ಲಿ ಇರಬಾರದೆಂದೇನೂ ಇಲ್ಲವಲ್ಲ" ಎಂದೇನೋ ಹೇಳಿದೆನಾದರೂ ನೃಪತುಂಗ ಅಲ್ಲಿ ಇಲ್ಲದುದನ್ನು ಗಮನಿಸಿದ್ದೆ. ಹೀಗೆಯೇ ಮತ್ತೆ ಹದಿನೈದು ನಿಮಿಷಗಳು ಕಳೆಯುವಷ್ಟರಲ್ಲಿ ಬರಬೇಕಿದ್ದ ಎಲ್ಲರೂ ಬಂದಾಗಿತ್ತು. ಮತ್ತೆ ಕಾಲು ಗಂಟೆಯಾದರೂ ನೃಪತುಂಗನ ಪತ್ತೆಯಿಲ್ಲ. ನಾನು ಆ ಮಂಪರಿನಲ್ಲಿರುವಾಗ ಇವನೆಲ್ಲಿಗೆ ಹೋದ ಎಂದು ವಿಚಾರಿಸಿದರೆ ವಿನಯಕುಮಾರ್ ಶುಕ್ಲಾ ಜೊತೆಗೆ ಇವನೆಲ್ಲೋ ಗಾಜಿನ ಮನೆಯ ಹಿಂಭಾಗಕ್ಕೆ ಮಾತನಾಡುತ್ತಾ ಹೋದ ಎಂದು ವೈಷ್ಣವಿ ಹೇಳಿದಳು. ನನಗೋ ಈ ವಿನಯಕುಮಾರ್ ಶುಕ್ಲಾನ ಬಗ್ಗೆ ಸ್ವಲ್ಪವೂ ಒಳ್ಳೆಯ ಅಭಿಪ್ರಾಯವಿಲ್ಲ, ದೊಡ್ಡ ಫ಼್ಲರ್ಟು, ಕ್ಲಾಸಿನಲ್ಲಿಯೂ ಗೂಂಡಾ ತರ, ಕಂಡ ಕಂಡ ಹುಡುಗಿಯರ ಹಿಂದೆ ಬಿದ್ದಿರುತ್ತಿದ್ದ. ಅದರಲ್ಲೂ ನಾನೆಂದರೆ ಸ್ವಲ್ಪ ಹೆಚ್ಚೇ ಹುಚ್ಚು. ಒಮ್ಮೆ ಪ್ರಪೋಸ್ ಕೂಡ ಮಾಡಿಬಿಟ್ಟಿದ್ದ. ನಾನು ನಿಯತ್ತಾಗಿ ತಳ್ಳಿಹಾಕಿದ್ದೆ. ಆದರೂ ಪದೇ ಪದೇ ಹಿಂದೆ ಬೀಳುತ್ತಿದ್ದ. ನೃಪತುಂಗನಂತೆಯೇ ಅನಿಸಿದರೂ ನೃಪತುಂಗನ ಕಣ್ಣುಗಳಲ್ಲಿದ್ದ ಪ್ರಾಮಣಿಕತೆಗೂ, ಇವನ ಕಣ್ಣುಗಳಲ್ಲಿದ್ದ ವಾಂಛೆಗೂ ವ್ಯತ್ಯಾಸ ಸ್ಪಷ್ಟವಿತ್ತು. ಆದರೂ ನೃಪತುಂಗನನ್ನು ನಾನು ತಿರಸ್ಕರಿಸಿದರೂ ತಿರುಗಿ ಮದುವೆಯಾದೆ ಎಂಬುದು ಈಗ ಇತಿಹಾಸ. ಅದೆಲ್ಲಾ ಇರಲಿ, ನಾನು ನೃಪತುಂಗನನ್ನು ಮದುವೆಯಾಗಿದ್ದನ್ನು ತಿಳಿದರೆ ಇವನಿಗೇನಾದರೂ ಮಾಡಲೂ ಹೇಸುವವನಲ್ಲ ಆತ ಎನಿಸಿತ್ತು (ಈ ಭಾವನೆ ನನ್ನ ಮನಸ್ಸಿನಲ್ಲಿ ವಿನಯನ ಬಗ್ಗೆ ಇದ್ದ ಭಯದ ಉತ್ಪ್ರೇಕ್ಷೆಯ ಫಲ ಎಂದು ಈಗ ಅನಿಸುವುದಾದರೂ ಆ ಕ್ಷಣದಲ್ಲಿ ಹಾಗೆ ಎನಿಸಿರಲಿಲ್ಲ.) ದಿಗಿಲಾಗಿ ವೈಷ್ಣವಿ ತೋರಿದ ಕಡೆ ಓಡಿದೆ.
ಹಾಗೆಯೇ ಗಾಜಿನ ಮನೆಯ ಹಿಂದಕ್ಕೆ ಹೋದರೆ ವಿನಯ್ ಮತ್ತು ನೃಪತುಂಗ ಇಬ್ಬರೂ ನಾನು ಬರುತ್ತಿದ್ದ ದಿಕ್ಕಿಗೆ ಬೆನ್ನು ತಿರುಗಿಸಿಕೊಂಡು ಏನನ್ನೋ ಮಾತನಾಡುತ್ತಿದ್ದರು. ನೃಪತುಂಗ ಯಾವಾಗಲೂ ನನ್ನ ಬಳಿ ವಿನಯನ ಬಗ್ಗೆ ಶತ್ರುವಿನಂತೆ ಮಾತನಾಡುತ್ತಿದ್ದನಾದ್ದರಿಂದ, ಇವರುಬ್ಬರು ಹೀಗೆ ಮಾತನಾಡುವುದು ನನಗೂ ಆಶ್ಚರ್ಯವಾದಂತಾಗಿ ಏನು ಮಾತನಾಡುತ್ತಿರಬಹುದೆಂಬ ಕೆಟ್ಟ ಕುತೂಹಲದಲ್ಲಿ ಅವರಿಗೆ ತಿಳಿಯದಂತೆ ಹಿಂದೆ ಹೋಗಿ ನಿಂತೆ. ಇಬ್ಬರೂ ಏನೂ ಹಿತವಾಗಿ ಮಾತನಾಡುತ್ತಿರಲಿಲ್ಲವಾದರೂ ಅವರಿಬ್ಬರೂ ಜಗಳವಾಡುತ್ತಿರಲಿಲ್ಲ ಎಂಬುದು ದೂರದಿಂದಲೇ ವಿಹಿತವಾಗುತ್ತಿತ್ತು. ದೂರದಿಂದ ನೋಡಿದರೆ ನೃಪತುಂಗ ಏನನ್ನೋ ಬೇಡಿಕೊಳ್ಳುತ್ತಿದ್ದಂತೆ ಕಾಣುತ್ತಿತ್ತು. ಅಲ್ಲಿಯೇ ಮುಂದೆ ಗೋಡೆಯ ಮರೆಯಲ್ಲಿ ನಿಂತರೆ ನೃಪತುಂಗನ ಮಾತುಗಳು ಸ್ಪಷ್ಟವಾಗೇ ಕೇಳುತ್ತಿತ್ತು,
ನೃಪತುಂಗ "ಇದಕ್ಕೆ ಕೊನೆಯೆಲ್ಲಿ ವಿನಯ್? ಹೀಗೇ ಎಷ್ಟು ಸಲವಾಯ್ತು? ಪ್ರತೀ ಸಲ ನೀನು ಬಂದಾಗಲೂ ನಿನ್ನ ಕೈತುಂಬ ದುಡ್ಡು ಕೊಟ್ಟು ಕಳುಹಿಸಿದ್ದೇನೆ, ಮತ್ತೆ ನೀನು ಬರುತ್ತೀಯಾ ನನ್ನ ಕರಾಳ ಮುಖವನ್ನು ನನಗೇ ನೆನಪಿಸುತ್ತಾ. ಇದೇ ಒಂದು ಬ್ಲ್ಯಾಕ್ ಮೇಲಿಂದ ಎಷ್ಟು ಬಾರಿ ನನ್ನ ಜೀವವನ್ನು ಹಿಂಡಿದ್ದೀಯಾ? ನಿನಗೆ ಎಷ್ಟು ಸಲ ಹೇಳಿಲ್ಲ ನಾನು, ಏನು ಬೇಕಾದರೂ ಕೇಳು ಕೊಟ್ಟು ಬಿಡುತ್ತೇನೆ, ಒಂದೇ ಸಲಕ್ಕೆ, ನನ್ನ ಸಂಪೂರ್ಣ ಆಸ್ತಿಯನ್ನು ಬೇಕಾದರೂ ಎಂದು. ಪದೇ ಪದೇ ಹೀಗೆ ಬಂದು ಅರೆಮಾಗಿದ ಗಾಯಗಳನ್ನು ಮತ್ತೆ ಕೆದಕುವುದೇಕೆ? ಅಂದಿನ ಆ ಆಸಿಡ್ ಪ್ರಕರಣಕ್ಕೆ ನಾನು ಎಷ್ಟು ಪಶ್ಚಾತ್ತಾಪ ಪಟ್ಟಿರುವೆನೋ ನನಗೇ ಗೊತ್ತು. ಅದಕ್ಕೋಸ್ಕರ ಯಾವುದೇ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧ, ಅವಳನ್ನು ಕಳೆದುಕೊಳ್ಳುವುದೊಂದನ್ನು ಬಿಟ್ಟು. ನೀನಂದು ನೋಡಿದ್ದರೂ ನೋಡಿರದಿದ್ದರೂ ಅದು ನನ್ನ ಮನವನ್ನು ಖಂಡಿತವಾಗಿಯೂ ಕೊರೆಯುತ್ತಿತ್ತು, ಕೊರೆಯುತ್ತಿದೆ. ಆದರೆ ಕಾಲಕ್ರಮೇಣ ಮರೆಯುತ್ತಿದ್ದೆನೇನೋ, ಆದರೆ ನೀನು ಅದಕ್ಕೆ ಅವಕಾಶ ಕೊಟ್ಟೇ ಇಲ್ಲ. ಈ ಆರು ವರ್ಷಗಳಲ್ಲಿ ನನಗೆ ಎಷ್ಟು ಹಿಂಸೆ ಕೊಟ್ಟಿದ್ದೀಯಾ ಎಂಬ ಅಂದಾಜೂ ನಿನಗೆ ಇರಲಿಕ್ಕಿಲ್ಲ." ಎಂದ.
ವಿನಯ್ ಸಿನಿಮಾಗಳಲ್ಲಿ ತೋರಿಸುವ ರೌಡಿಗಳ ಅಟ್ಟಹಾಸದ ನಗೆಯನ್ನು ಒಮ್ಮೆ ನಕ್ಕು"ನಾನು ಬಯಸಿದ್ದೂ ಅದನ್ನೇ, ನಾನೂಒ ಅವಳನ್ನು ಪ್ರೀತಿಸಿದ್ದೆ ಎಂಬುದು ಇಷ್ಟು ಬೇಗ ನಿನಗೆ ಮರೆತು ಹೋಯಿತೇ? ನೀನಿಲ್ಲದಿದ್ದರೆ ಎಂದಿಗಾದರೂ ಅವಳು ನನ್ನನ್ನು ಒಪ್ಪುತ್ತಿದ್ದಳು. ಅಂದು ಕಾಲೇಜು ಬಿಟ್ಟು ಮನೆಗೆ ಹೋಗುವಾಗ ನೀನು ಅವಳನ್ನು ಹಿಂಬಾಲಿಸಿ ಹೋದೆ, ನಾನು ನಿನ್ನನ್ನು ಹಿಂಬಾಲಿಸಿ ಬಂದೆ, ಆ ನಿರ್ಜನ ನೇಕಾರರ ಓಣಿಯಲ್ಲಿ ನೀನು ಅವಳಿಗೆ ಪರಿಚಯ ಹತ್ತದಂತೆ ಅವಳ ಮುಖಕ್ಕೆ ಆಸಿಡ್ ಹಾಕಿದೆ. ನಿನ್ನನ್ನು ಕೊಂದುಬಿಡೋಣ ಎನ್ನಿಸಿತ್ತು. ಆದರೂ ನಿನ್ನ ಕೈಯ್ಯಲ್ಲಿ ಆಯುಧ ಇದ್ದಿದ್ದರಿಂದ ಸುಮ್ಮನಾದೆ ಆ ದಿನ. ನೀನು ಅವಳನ್ನು ಮದುವೆಯಾಗುತ್ತೀನಿ ಎಂದಾಗ ಎಲ್ಲರ ಕಣ್ಣಿನಲ್ಲೂ ನೀನು ಮತ್ತೊಂದಿಷ್ಟು ಮೇಲಕ್ಕೇರಿದೆ. ನಿಜವೆಂದರೆ ಆ ಸಮಯದಲ್ಲಿ ನಿನ್ನ ಬಗ್ಗೆ ವಿಪರೀತ ಹೇಸಿಕೆ ದ್ವೇಷ ಹುಟ್ಟಿತ್ತು. ಆದರೂ ನನಗೆ ಗೊತ್ತಿತ್ತು, ನೀನು ನಿನ್ನೊಳಗೆ ಎಷ್ಟು ಕೊರಗುತ್ತಿ ಎಂದು,ಆ ದಿನ ಮಾಡಿದ ಕಾರ್ಯಕ್ಕೆಪರಿತಪಿಸುತ್ತೀ ಎಂದು. ನನಗೆ ನಿನ್ನ ಮೇಲೆ ಸೇಡು ತೀರಿಸಿಕೊಳ್ಳಲು ಇದ್ದ ಅವಕಾಶವೂ ಅದೊಂದೇ. ನಿನ್ನ ಆ ಕೃತ್ಯಕ್ಕೆ ಇಡೀ ಜಗತ್ತಿನಲ್ಲಿ ಇದಕ್ಕೆ ನಾನೊಬ್ಬನೇ ಸಾಕ್ಷಿ. ನೀನು ಹೀಗೇ ಈ ನೋವಿನಲ್ಲಿ ತೊಳಲಾಡಬೇಕು, ಇರುವ ಯಾವುದೇ ಸುಖವನ್ನು ಅನುಭವಿಸಲು ಶಕ್ಯವಾಗಬಾರದು ಅದನ್ನು ನೋಡಿ ನಾನು ಖುಷಿಪಡಬೇಕು" ಎಂದು ವಿಜಯದ ನಗೆಯನ್ನುಮತ್ತೊಮ್ಮೆ ಬೀರಿದ.
ನೃಪತುಂಗ ಮತ್ತೂ ಸೋತ ದನಿಯಲ್ಲಿ "ನಾನು ಆಯ್ದುಕೊಂಡ ಮಾರ್ಗ ಕೆಟ್ಟದ್ದಿರಬಹುದು, ಅದು ಅವಳಿಗೆ ನೋವನ್ನು ಕೊಟ್ಟಿರಬಹುದು, ಅವಳ ಸೌಂದರ್ಯವನ್ನು ಕಿತ್ತುಕೊಂಡಿರಬಹುದು, ಆದರೆ ಅವಳ ಬಗೆಗಿನ ನನ್ನ ಎಲ್ಲಾ ಭಾವನೆಗಳೂ ಸತ್ಯವೇ. ನಾನಂತೂ ಅವಳಿಗಾಗಿ ಏನನ್ನು ಬೇಕಾದರೂ ಮಾಡಲು ತಯಾರಿದ್ದೆ. ಪ್ರೀತಿಯ ಹುಚ್ಚು ಎನ್ನುವಿಯೋ ಅಥವಾ ಮತ್ತೇನೋ ನಾನು ವೈದೇಹಿಯ ಮೇಲೆಯೇ ಆಸಿಡ್ ಹಾಕಲೂ ತಯಾರಾದೆ. ಆದರೆ ಅಂದು ನಾನು ಮಾಡಿದ ಕಾರ್ಯದ ಬಗ್ಗೆ ನನಗೆ ಇಂದಿಗೂ ನೋವಿದೆ, ಪಶ್ಚಾತ್ತಾಪವಿದೆ, ಹೊಡೆದುಕೊಳ್ಳುವಷ್ಟು ಸಿಟ್ಟು ಇದೆ. ಆದರೆ ಅದರಿಂದ ನಾನು ಮಾಡಿರುವ ಘೋರ ಸರಿಯಾಗುವುದಿಲ್ಲವಾದ್ದರಿಂದ ಅದನ್ನು ಮರೆಯಹೋಗುತ್ತೇನೆ. ಅಂದಿನಿಂದ ಇಂದಿನವರೆಗೆ ನೋವಿನ ಎಳೆಯೂ ತಾಕದಂತೆ ಅವಳನ್ನು ನೋಡಿಕೊಂಡಿದ್ದೇನೆ, ಅವಳಿಗೆ ಆ ನೆನಪುಗಳು ಸ್ವಲ್ಪವೂ ತಾಕದಂತೆ ಕಂಡುಕೊಂಡಿದ್ದೇನೆ." ಇನ್ನೂ ಏನೇನೋ ಹೇಳುತ್ತಿದ್ದ, ನನಗೆ ಭೂಮಿ ಬಾಯ್ತೆರೆಯಬಾರದೇ ಎನ್ನಿಸಿತು! ಮನುಷ್ಯರು ಇಷ್ಟೆಲ್ಲ ಕೆಟ್ಟವರಾಗಿರುತ್ತಾರಾ ಎಂದು, ಅದೂ ನನ್ನ ನೃಪತುಂಗನಂತಹವರೂ. ಹೇಗೋ ಸಾವರಿಸಿಕೊಂಡು ಉಳಿದ ಗೆಳೆಯರಿದ್ದ ಕಡೆಗೆ ಬಂದೆನಾದರೂ ಮನಸ್ಸು ಕಳೆದು ಹೋಗಿತ್ತು, ನನ್ನ ಎಲ್ಲಾ ಕಟ್ಟುಪಾಡುಗಳನ್ನು ಮರೆತು ಶೋಕಃತಪ್ತವಾಗಿತ್ತು. ಅದನ್ನು ಮುಚ್ಚಿಡುವ ನನ್ನೆಲ್ಲ ಪ್ರಯತ್ನಗಳೂ
ವಿಫಲವಾಗಿದ್ದವು.
*****
ವೈದೇಹಿ:
|
ಚಿತ್ರಕೃಪೆ: ಅಂತರ್ಜಾಲ |
ಅದಾಗಿ ಎರಡು ವಾರಗಳಾಗಿವೆ. ಮತ್ತೊಂದು ಭಾನುವಾರ ಬಂದಿದೆ. ನನ್ನ ಮನಸ್ಸು ನನಗೇ ಗೊತ್ತಿಲ್ಲದಷ್ಟು ಗೊಂದಲಗಳ ಗೂಡಾಗಿದೆ. ಯಾರದ್ದು ಸರಿ ಯಾರದ್ದು ತಪ್ಪು ಎಂಬ ವಿವೇಚನೆಯಲ್ಲಿ ಕಳೆದು ಹೋಗಿದ್ದೇನೆ. ಅದಕ್ಕಿಂತ ಹೆಚ್ಚಾಗಿ ಯಾರದ್ದು ಕಡಿಮೆ ತಪ್ಪು,ಯಾರದ್ದು ಹೆಚ್ಚು ಎಂಬುದರ ಬಗ್ಗೆ. ನಾನು ಒಪ್ಪಿಕೊಳ್ಳಲಿಲ್ಲ ಎಂಬ ಒಂದೇ ಕಾರಣಕ್ಕೆ ಆಸಿಡ್ ಹಾಕುವಷ್ಟು ಹೀನತೆಗೆ ಅವನು ಕೈಹಾಕಿದನೇ? ಹಾಗೆ ಮಾಡಿದರೆ ನಾನು ದುರ್ಬಲಳಾಗಿ ಅವನ ’ಹೊಂಚಿ’ಗೆ ಬೀಳಬಹುದೆಂಬ ಲೆಕ್ಕಾಚಾರವನ್ನು ನಾನು ನಿಜ ಮಾಡಿದೆನೇ? ಹಾಗೆ ನಾನು ಯೋಚಿಸಬಹುದೆಂಬಷ್ಟು ಕೀಳಾಗಿ ನನ್ನನ್ನು ಭಾವಿಸಿದನೇ? ಪ್ರೀತಿ ಎಂದರೆ ಇದೇನಾ? ಯಾವುದೇ ಬೆಲೆಗಾದರೂ ಪ್ರೀತಿ ಬೇಕು ಎನ್ನಿಸುತ್ತದೆಯೇ? ಅದಕ್ಕಾಗಿ ಪ್ರೀತಿಸಿದವಳಿಗೇ ಜೀವನಪರ್ಯಂತ ಶಿಕ್ಷೆಯಾದರೂ ಸರಿಯೇ? ಪ್ರೀತಿ ಎಂದರೆ ಪ್ರಾಮಣಿಕತೆ, ಸತ್ಯ, ನಿಯತ್ತುಗಳಿಗೆಲ್ಲ ಮೀರಿದ್ದೇ? ಹಾಗೇ ಎಂದುಕೊಂಡರೂ ಕೊನೆಪಕ್ಷ ಪ್ರೀತಿಸಿದವಳ ಬಳಿಯಾದರೂ ಪ್ರಾಮಾಣಿಕವಾಗಿರಬೇಕಲ್ಲವೇ? ಇದೇ ಪ್ರೀತಿಯ ಹೆಸರಿನಲ್ಲಿ ಏನನ್ನಾದರೂ ಕ್ಷಮಿಸಬಹುದೇ? ತನಗೆ ಬೇಕೆನಿಸಿದ್ದನ್ನು ದಕ್ಕಿಸಿಕೊಳ್ಳಲು ಏನನ್ನು ಬೇಕಾದರೂ ಮಾಡುವುದು ಬಾಲಿಶವಾಗಿ, ’ಜಂಗಲ್ ರಾಜ್’ ನ ನ್ಯಾಯವಾಗಿ ಕಾಣುವುದಿಲ್ಲವೇ? ಕ್ರಿಶ್ಚಿಯನ್ನರು ಹೇಳುವ ಹಾಗೆ ಎಲ್ಲಾ ತಪ್ಪುಗಳಿಗೂ ಪಶ್ಚಾತ್ತಾಪದಿಂದ ಕ್ಷಮೆ ಸಿಗುತ್ತದೆಯೇ? ಅದೊಂದನ್ನು ಕ್ಷಮಿಸಿಬಿಟ್ಟರೆ ಮತ್ತಿಡೀ ಜೀವನ ಪ್ರೀತಿಸಲು ಸಾಕಾಗುವಷ್ಟು ಕಾರಣಗಳನ್ನು ಅವನು ಈ ಆರು ವರ್ಷಗಳಲ್ಲಿ ಕೊಟ್ಟಿಲ್ಲವೇ? ಅದು ಹಾಗೆ ಕ್ಷಮಿಸಲಾಗದ ತಪ್ಪೇ? ನಾನೆಂದೂ ಯಾವುದೇ ತಪ್ಪನ್ನು ಮಾಡಿಲ್ಲವೇ? ಒಂದು ಬಾರಿಯಾದರೂ ನನಗಿಂತ ಅದೃಷ್ಟವಂತಳು ಯಾರಾದರೂ ಇರಬಹುದೆಂಬ ಯೋಚನೆಯನ್ನಾದರೂ ನನಗೆ ಬರಲು ನೃಪತುಂಗ ಬಿಟ್ಟಿದ್ದಾನೆಯೇ? ಅವನು ಮಾಡಿದ್ದು ತಪ್ಪು ಎಂಬುದು ವಿದಿತವಾದರೂ ಅದಕ್ಕೆ ಯಾವ ಶಿಕ್ಷೆ ನ್ಯಾಯವಾದದ್ದು ಎಂಬುದರ ಬಗ್ಗೆ ತಲೆ ಹರಿಯಲಾರದಾಯಿತು. ಅಕ್ಷಮ್ಯವಾದ ತಪ್ಪೇ ಅವನು ಮಾಡಿದ್ದು, ಅಥವಾ ಕ್ಷಮೆ ಎಂಬ ದೊಡ್ಡ ಶಬ್ದವನ್ನು ನಾನು ಸುಮ್ಮನೇ ಈ ವಿಷಯಕ್ಕೆ ಗಂಟು ಹಾಕುತ್ತಿದ್ದೇನೆಯೇ? ಯೋಚಿಸಿದಷ್ಟೂ ಕಗ್ಗಂಟಾಗುತ್ತ ಹೋಯಿತು ವಿಚಾರಧಾರೆ. ಆದರೂ ಅದು ಎಂತಹ ಅನಿವಾರ್ಯವಾದ ಪ್ರೀತಿಯೇ ಆದರೂ ಅವನು ಆಯ್ದುಕೊಂಡ ಮಾರ್ಗ ಹೀನವೇ, ನಾನೇ ಅದರಿಂದ ತೊಂದರೆಯನ್ನು ಅನುಭವಿಸಿದೆನೆಂಬುದನ್ನು ಕಡೆಗಣಿಸಿದರೂ ಅವನು ಮಾಡಿದ್ದನ್ನು ಪ್ರೀತಿಯ ಭಾಗ ಎಂದು ಪರಿಗಣಿಸಲು ನನ್ನಿಂದ ಸಾಧ್ಯವಿಲ್ಲವಾಯಿತು. ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ನಾವು ಹಿಂತಿರುಗಿ ನೋಡಿದರೆ ನಮ್ಮ ಜೀವನದಲ್ಲಿ ನಡೆದ ಎಷ್ಟೋ ಘಟನೆಗಳಲ್ಲಿ ನಾವು ಸುಮ್ಮನೇ ಮೋಸಹೋದೆವು ಎಂದು ಎನ್ನಿಸುತ್ತಹೋಗುತ್ತದೆ. ಆಂತಹದೇ ಭಾವನೆ ಮನದಲ್ಲಿ ಮೂಡಿನಿಂತು ಡೈವೋರ್ಸೇ ಸರಿ ಎನ್ನಿಸಿ ನಿರ್ಧಾರವೊಂದನ್ನು ಮನದಲ್ಲಿ ಮೂಡಿಸಿಕೊಂಡು ಕುಳಿತೆ.
*****
ವೈದೇಹಿ:
ಅದಾಗಿ ಮತ್ತಾರು ವರ್ಷಗಳು ಕಳೆದಿವೆ, ಅದು ಮತ್ತೊಂದು ಭಾನುವಾರ. ನಾನು ಅಂದೂ ಪೇಪರನ್ನು ಓದುತ್ತಿದ್ದೆ, ನೃಪತುಂಗ ಇನ್ನೂ ಮಲಗಿದ್ದ, ನಾನು ಎದ್ದು ಪೇಪರ್ ಓದುತ್ತಿದ್ದೆ, ಆರು ವರ್ಷದ ಕೆಳಗಿನ ಆ ಭಾನುವಾರದ ದಿನದ ಹಾಗೆಯೇ, ಒಂದು ಬದಲಾವಣೆಯನ್ನು ಹೊರತುಪಡಿಸಿ. ಇಂದು ಅಲ್ಲಿ ಬೆಡ್ರೂಮಿನಲ್ಲಿ ಮಲಗಿರುವ ನೃಪತುಂಗನ ಪಕ್ಕದಲ್ಲಿ ನಮ್ಮ ಚಿನ್ನದ ಬೊಂಬೆಯೊಂದು ಮಲಗಿದೆ, ಜಾಹ್ನವಿ ಎಂಬ ಹೆಸರಿನೊಂದಿಗೆ. ಆಶ್ಚರ್ಯವಾಗಬಹುದಲ್ಲಾ, ಹೇಗೆ ಇದು ಸಾಧ್ಯ ಎಂದು. ಅದನ್ನು ತಿಳಿಯಲು, ಡೈವೋರ್ಸ್ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೆನಲ್ಲಾ, ಆ ದಿನಕ್ಕೆ ಹೋಗೋಣ,ಒಮ್ಮೆ.
ಅಂದು ಮಧ್ಯಾಹ್ನ ಊಟಕ್ಕೆ ಕೂತಿದ್ದೆವು, ಊಟ ಸುರು ಮಾಡುತ್ತಿದ್ದಂತೆಯೇ ನೃಪತುಂಗ ಸುರುಮಾಡಿದ, "ವೈದೇಹಿ, ಮದುವೆಯಾಗಿ ನಾಳೆಗೆ ಆರು ವರ್ಷಗಳಾಗುತ್ತವೆ.ಎಷ್ಟು ಬೇಗ ಕಳೆದು ಹೋದವು ಅಲ್ಲಾ ಈ ದಿನಗಳು. ಆದರೆ ಅಂದಿನಿಂದ ಇಂದಿನವರೆಗೂ ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ವಿಚಾರಗಳಿವೆ. ಇವುಗಳನ್ನು ನನ್ನೊಳಗೇ ಇಟ್ಟುಕೊಂಡು ನಾನು ನೆಮ್ಮದಿಯಿಂದ ಇರಬಲ್ಲೆ ಎಂದು ತಿಳಿದಿದ್ದೆ, ಹಾಗೆಯೇ ಬಯಸಿದ್ದೆ ಕೂಡಾ. ಆದರೆ ಈಗೀಗ ಅದು ನನ್ನಿಂದ ಸಾಧ್ಯವಿಲ್ಲವೇನೋ ಎನ್ನಿಸುತ್ತಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪಾಪಪ್ರಜ್ಞೆ ಎಂಬುದು ಮನೆಯ ಒಳಹೊಕ್ಕ ಕಾಳ್ಗಿಚ್ಚಿನಂತೆ ಸುಡುತ್ತಿದೆ" ಎಷ್ಟು ಪ್ರಯತ್ನಪಟ್ಟರೂ ಪೀಠಿಕೆಯಿಂದ ಮುಂದಕ್ಕೆ ಹೋಗಲೇ ಸಾಧ್ಯವಾಗಲಿಲ್ಲ ಅವನಿಗೆ. ನಾನೇ "ಅದೇನು ಹೇಳಿ, ಇಷ್ಟೆಲ್ಲಾ ಪ್ರಸ್ತಾವನೆಯ ಅಗತ್ಯವಿಲ್ಲ. ಏನೆಂದು ಬೇಗ ವಿಷಯಕ್ಕೆ ಬನ್ನಿ." ಆಗಿದ್ದ ನನ್ನ ಮನಸ್ಥಿತಿಯಲ್ಲಿ ಸ್ವಲ್ಪ ಖಾರವಾಗಿಯೇ ಮಾತನಾಡಿದೆ. ಗತ್ಯಂತರವಿಲ್ಲದೇ ಅವನು ವಿಷಯಕ್ಕೆ ಬಂದ, ಕಾಲೇಜಿನಲ್ಲಿದ್ದಾಗ ಉಂಟಾದ ಪ್ರೇಮದಿಂದ ಹಿಡಿದು ಮೊನ್ನೆ ಮೊನ್ನೆಯವರೆಗಿನ ವಿನಯನ ಭೇಟಿಯವರೆಗೂ ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ಹೇಳಿದ. ಯಾವಾಗಿನ ಹಾಗೆಯೇ ಅದೇ ಅತಿ ಪ್ರಾಮಾಣಿಕವಾದ ಸ್ವರ, ನನಗೆ ನಂಬಲೇ ಬೇಡವೇ ಎಂಬ ದ್ವಂದ್ವ. ಪ್ರತೀ ಸಲವೂ ಇವನು ಹೀಗೆಯೇ ಮಾತನಾಡುತ್ತಿದ್ದನಲ್ಲವೇ, ಪ್ರತೀಸಲವೂ ನಾನು ನಂಬುತ್ತಿದ್ದೆನಲ್ಲವೇ, ಇಲ್ಲಿಯವರೆಗೂ ನಾನು ಹೀಗೆಯೇ ಇವನ ಪ್ರಾಮಾಣಿಕತೆಯ ಬಗ್ಗೆ ಎಳ್ಳಷ್ಟೂ ಸಂದೇಹ ಪಟ್ಟಿರಲಿಲ್ಲ. ಹಾಗೆಂದು ಅವನು ಸುಳ್ಳನ್ನು ಹೇಳಿ ನನ್ನನ್ನು ಭ್ರಮೆಯ ಕೂಪದಲ್ಲಿ ತಳ್ಳಿ ಹಾಕಿದ್ದನೆಂದಲ್ಲ, ಆದರೆ ಸತ್ಯವನ್ನು ಹೇಳದೇ ಹಾಗೆ ಮಾಡಿದ್ದ. ಅರ್ಧಸತ್ಯಕ್ಕೂ ಸಹ ಸುಳ್ಳಿನಷ್ಟೇ ದೋಷವಲ್ಲವೇ? ಹಾಗೆಂದು ಈಗ ಇವನ ಮುಖ ನೋಡಿದರೆ, ಎಷ್ಟೋ ದಿನ ಇವನು ತನ್ನೊಳಗಿನ ಯಾವುದೋ ಹೋರಾಟವನ್ನು ಸುಮ್ಮನಾಗಿಸುವಂತೆ ಕಾರಣವನ್ನೂ ಹೇಳದೇಸುಮ್ಮನೇ ಡಲ್ ಆಗಿ ಕೂರುತ್ತಿದ್ದುದನ್ನು ನೆನಪಿಸಿಕೊಂಡರೆ ಇವನು ಹೇಳುತ್ತಿರುವುದು, ಅವನ ಈಗಿನ ಭಾವನೆಗಳು ಸತ್ಯವೇ ಇರಬಹುದೆನ್ನಿಸುತ್ತದೆ. ಆದರೆ, ಯಾವುದೋ ಒಂದು ಹಠದಂತಹ ಶಕ್ತಿಯು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವನನ್ನು ಸಂತೈಸುವ ನನ್ನ ಒಳತೋಟಿಯನ್ನು ಹತ್ತಿಕ್ಕಿ ಸುಮ್ಮನಾಗಿಸಿತು. ಆದರೂ ನಾನೇನೂ ಆ ವಿಷಯವನ್ನು ಎತ್ತದೇ ಈ ವಿಷಯಗಳ ಬಗ್ಗೆ ಅವನೇ ಸ್ವಯಂಪ್ರೇರಿತವಾಗಿ ಮಾತನಾಡಿದ್ದರಿಂದ ಒಂದು ಸಮಾಧಾನವಾಗಿತ್ತು, ಹೇಗಿದ್ದರೂ ಒಂದಲ್ಲಾ ಒಂದು ದಿನ ಅವನೇ ಪ್ರಸ್ತಾಪಿಸಿ ತನ್ನ ತಪ್ಪನ್ನು ಹೇಳಿಕೊಳ್ಳುತ್ತಿದ್ದ ಎಂದು. ಅದಕ್ಕಿಂತ ಹೆಚ್ಚಾಗಿ ಅವನು ಮಾಡಿದ್ದಕ್ಕೆ ಹೃತ್ಪೂರ್ವಕವಾಗಿ ಪಶ್ಚಾತ್ತಾಪ ಪಟ್ಟಿದ್ದ ಎಂದು. ಏನೋ ಒಂದು, ಒಂದು ತರಹ ನಿರಾಳವಾಯಿತಾದರೂ ಅದನ್ನು ತೋರಿಸಿಕೊಳ್ಳಲು ಇಷ್ಟವಾಗಲಿಲ್ಲ. ಸುಮ್ಮನೇ ಉಳಿದೆ ಸ್ವಲ್ಪ ಹೊತ್ತು, ಅವನು ನಾನೇನಾದರೂ ಮಾತನಾಡುತ್ತೇನೆಂದು ನಿರೀಕ್ಷಿಸಿದ್ದನೇನೋ, ಕೊನೆಪಕ್ಷ ನನ್ನ ಪ್ರಕೃತಿಗೆ ವಿರುದ್ಧವಾಗಿ ಕಿರುಚಾಡಿಬಿಡುತ್ತೇನೆ ಎಂದಾದರೂ ಆಶಿಸಿದ್ದ. ಆದರೆ ನಾನು ಹಾಗೇ ಸುಮ್ಮನೇ ಮೌನವಾಗಿ ಕುಳಿತಿದ್ದುದನ್ನು ಅವನಿಗೆ ಸಹಿಸಲಾಗಲಿಲ್ಲ. ನನಗೆ ಮಾತುಗಳಿಂದ ಸಂತೈಸಲಾಗದಷ್ಟು ಆಘಾತ ಆಗಿರಬೇಕೆಂದು ಭಾವಿಸಿ ಅವನೂ ಸುಮಾರು ಹೊತ್ತು ಸುಮ್ಮನೇ ಕುಳಿತು ನಂತರ ಎದ್ದು ಹೋದ.
ಮನೆಯಲ್ಲಿ ನಾನೇ ನಿರ್ಮಿಸಿದ್ದ ಉಸಿರುಗಟ್ಟಿಸುವಿಕೆಯಿಂದ ಹೊರಬರಲು ಇತ್ತೆಚೆಗೆ ರೂಢಿಸಿಕೊಂಡಿದ್ದ ಅಭ್ಯಾಸದಂತೆ ಆ ಸಂಜೆಯೂ ವಾಯುವಿಹಾರಕ್ಕೆ ಹೋಗಿದ್ದೆ. ಸ್ವಲ್ಪ ದಿನಗಳಿಂದ ಇದ್ದ ನಿಶ್ಶಕ್ತಿ ಮತ್ತೊಂದಿಷ್ಟು ಜೋರಾದಂತಾಗಿ ತಲೆ ಬವಳಿಬಂದಂತಾಯಿತು. ಅಲ್ಲಿಯೇ ಕೆರೆಯ ದಂಡೆಯ ಮೇಲೆ ಕುಳಿತುಕೊಂಡೆನಾದರೂ ಸುಮಾರು ಹೊತ್ತಿನ ತನಕ ಬವಳಿಕೆ ಹಾಗೇ ಇತ್ತು. ಅಲ್ಲಿಯೇ ಕುಳಿತಿದ್ದೆ. ಹಾಗೆಯೇ ಮನಸ್ಸು ತನ್ನದೇ ಆನಿಕೆಯಲ್ಲಿ ಹಳೆಯ ನೆನಪುಗಳನ್ನೆಲ್ಲಾ ಮೆಲಕುಹಾಕುತ್ತಿತ್ತು. ನನಗೆ ನೃಪತುಂಗನ ಪರಿಚಯವಾದದ್ದು, ಪರಿಚಯ ಗೆಳೆತನಕ್ಕಿಂತ ಮೀರಿ ಬೆಳೆದಿದ್ದು, ಅದನ್ನು ಅವನು ವ್ಯಕ್ತಪಡಿಸಿದರೂ ತಾನೇ ಹಿಂಜರಿದಿದ್ದು, ಮತ್ತೆ ಪರಿಸ್ಥಿತಿಯ ಕೈಗೊಂಬೆಯಾಗಿಯೋ ಅಥವಾ ತನ್ನಿಷ್ಟದಂತೆಯೋ ಏನೋ ಒಂದಾಗಿ ಅವನನ್ನೇ ಮದುವೆಯಾಗಿದ್ದು, ಮೊನ್ನೆಯವರೆಗೂ ಅವನ ಬಗ್ಗೆ ನನ್ನ ಅದಮ್ಯ ಕೃತಜ್ಞತಾಭಾವ, ಅದು ಒಮ್ಮೆಲೇ ಕರಗಿ ತಿರಸ್ಕಾರಕ್ಕೆ ಸಮೀಪದ ಭಾವವಾಗಿ ಬದಲಾಗಿದ್ದು, ಹೀಗೆಯೇ ಎಷ್ಟೋ ವಿಷಯಗಳು ತಲೆಯಲ್ಲಿ ಸುಳಿದು ಹೋಗುತ್ತಿದ್ದವು. ಲಂಗುಲಗಾಮಿಲ್ಲದೇ ಮನಸ್ಸು ತನಗೆ ತೋಚಿದೆಡೆ ಹರಿಯುತ್ತಿತ್ತು. ಯಾಕೋ ಮನಸ್ಸು ತಳಮಳದಲ್ಲಿಯೇ ಸುಖ ಕಾಣುವಂತೆ ಅನಿಸಿ ಅದರಲ್ಲಿಯೂ ವಿರಕ್ತಿ ಮೂಡಿತು, ಅದೂ ಕೆಲವೇ ನಿಮಿಷಗಳ ಮಟ್ಟಿಗೆ ಮಾತ್ರ. ಮತ್ತದೇ ಅಸಹ್ಯದ ಭಾವನೆ ಆ ಆಸಿಡ್ ಘಟನೆಯ ಬಗ್ಗೆ ಮನದಲ್ಲಿ ಮೂಡಿ ಹೊಟ್ಟೆಯ ಆಳದಿಂದ ವಾಕರಿಕೆ ಹೊರನುಗ್ಗಿಬಂತು. ನೋಡಿದರೆ ನಿಜವಾಗಿಯೂ ವಾಂತಿ ಮಾಡಿದ್ದೆ, ಅದೇ ಆ ಪಾರ್ಕಿನ ಕಲ್ಲುಹಾಸಿನ ಪಕ್ಕದಲ್ಲೇ. ಅದಾದ ಮೇಲೆ ಸ್ವಲ್ಪ ಸಮಾಧಾನ ಆದಂತಾಗಿದ್ದು ಸತ್ಯ. ಬಹುಶಃ ಆ ಯೋಚನೆಯೇ ನನ್ನ ದೇಹದಲ್ಲಿ ಇಂತಹ ಪರಿಣಾಮವನ್ನು ಬೀರುತ್ತಿದೆಯೇ ಎನ್ನಿಸಿತು,ಈ ಸಲದ ಮುಟ್ಟೂ ಸರಿಯಾಗಿ ಆಗಿರಲಿಲ್ಲವಾದರೂ ಅದೇನೂ ನನಗೆ ಹೊಸ ವಿಷಯವಲ್ಲವಾಗಿದ್ದರಿಂದ ನಾನು ಅಷ್ಟು ಮಹತ್ವ ಕೊಡಲಿಲ್ಲ. ಆದರೆ ಮನಸ್ಸಿನಲ್ಲಿ ಯಾಕೋ ಸಂದೇಹ, ಏನಕ್ಕಾದರೂ ಇರಲಿ ಎಂದು ಗರ್ಭಪರೀಕ್ಷೆಯ ಕಿಟ್ ನಿಂದ ಪರೀಕ್ಷಿಸಿ ನೋಡಿದರೆ ಗರ್ಭಿಣಿ ಹೌದೆಂಬ ಉತ್ತರ. ತಾಯಿತನದ ಬಗ್ಗೆ ಇರುವ ಗೌರವಮಿಶ್ರಿತ ಸಡಗರ ಒಂದೇ ಸಲಕ್ಕೆ ಮನಸ್ಸನ್ನು ತುಂಬಿಕೊಂಡಿತ್ತು. ಮೊದಲ ಮೂರು ವರ್ಷ ಮಗು ಬೇಡ ಎಂದು ತಡೆದು, ಮತ್ತೆ ಮೂರು ವರ್ಷಗಳಲ್ಲಿ ಪ್ರಯತ್ನಿಸಿದರೂ ಮಕ್ಕಳಾಗದೇ ಹೋಗಿ ಹತಾಶೆಯಲ್ಲಿ ಮುಳುಗಿದ್ದೆ. "ಪ್ರಕೃತಿಯ ವಿರುದ್ಧವಾಗಿ ಹೋಗಿದ್ದಕ್ಕೆ ಇದು ಶಿಕ್ಷೆ" ಎಂದು ನೃಪತುಂಗನ ಅಜ್ಜಿ ಪಿಸುಮಾತಿನಲ್ಲಿ ಹೇಳುವುದನ್ನು ಕೇಳಿದ ಮೇಲಂತೂ ನನಗೆ ಅದೇ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು.ನನ್ನ ಭಾವನೆಗಳು ಆನಂದದ ಮಿತಿಯನ್ನು ಮೀರಿ ಬೇರೊಂದು ಮಟ್ಟಕ್ಕೆ ಬೆಳೆದಿತ್ತು. ಅದರ ಮಧ್ಯದಲ್ಲಿ ಉಳಿದ ಭಾವಗಳೆಲ್ಲ ನಶಿಸಿಹೋಗಿ ತಾಯ್ತನದ ಸಡಗರ ಮಾತ್ರ ಉಳಿದಿತ್ತು. ಮನಸ್ಸು ಆಗಲೇ ನೃಪತುಂಗನ ಜೊತೆಗೆ ರಾಜಿಗೆ ಒಪ್ಪಿತ್ತು, ಮಗುವಿನ ಕನಸ್ಸಿನಲ್ಲಿ. ಈ ವಿಷಯ ತಿಳಿಯುವ ಮೊದಲೇ ಒಂದು ಹಂತಕ್ಕೆ ನೃಪತುಂಗನದ್ದು ಕ್ಷಮಿಸಲಾರದ ತಪ್ಪೇನಲ್ಲ ಎಂದು ಒಪ್ಪಿಕೊಂಡಿದ್ದ ಮನಸ್ಸು ಈಗಂತೂ ಎಲ್ಲವನ್ನೂ ಮರೆತಿತ್ತು. ರಾಜಿಗೆ ಅಡ್ಡ ಬರುತ್ತಿದ್ದ ಅಹಂ ಎಲ್ಲೋ ಮರೆತು ಹೋದಂತಾಗಿ ನೃಪತುಂಗನಿಗೆ ವಿಷಯ ಹೇಳಲು ಸಂತೊಷದ ಕುಣಿದಾಟದ ಹೆಜ್ಜೆಯಲ್ಲಿ ನಡೆದೆ.