Friday, 25 October 2013

ಬೆಳದಿಂಗಳ ಬಾಲೆ


.
          ಪ್ರತೀ ದಿನದಂತೆ, ಕೋರಮಂಗಲದ ನಮ್ಮ ಮನೆಯಿಂದ ಬನಶಂಕರಿಯ ಕಾಲೇಜಿಗೆ ಹೊರಟವನು ಹಾಗೇ JP ನಗರದ ವೈಷ್ಣವಿಯ ಮನೆಯ ಕಡೆಗೆ ಗಾಡಿಯನ್ನು ತಿರುಗಿಸಿದೆ, ಅದೇನೂ ಕಾಲೇಜಿಗೆ ಹೋಗುವ ದಾರಿಯಲ್ಲಿ ಇಲ್ಲದಿದ್ದರೂ, ವೈಷ್ಣವಿ ಇಷ್ಟು ಹೊತ್ತಿಗೆ ಕಾಲೇಜು ಬಸ್ ನ್ನು ಹಿಡಿಯಲು ಮನೆಯಿಂದ ಹೊರಟಾಗಿರುತ್ತದೆ ಎಂದು ತಿಳಿದಿದ್ದರೂ. ಪ್ರೀತಿಸಿದ ವ್ಯಕ್ತಿ ಇದ್ದ ಜಾಗ ಎಂಬ ವಿಷಯ ಇದೆಯಲ್ಲಾ, ಅವಳು ನಡೆದ ದಾರಿಯ ಘಮ ಇಲ್ಲೇ ಹಬ್ಬಿದೆ ಎಂಬ ಭ್ರಮಾಭರಿತ ಸೊಗಸು ಮಾತಿನ ಅಗತ್ಯವಿಲ್ಲದೇ, ಕಾಲದೇಶಗಳ ಹಂಗಿಲ್ಲದೇ, ವ್ಯಕ್ತವಾಗುವ ಕಿಂಚಿತ್ ಪ್ರಯತ್ನವನ್ನೇ ಮಾಡದೇ ಇರುವ ಸ್ಥಿತಿಯಿದೆಯಲ್ಲಾ, ಅದು ಕೊಡುವ ಆನಂದವನ್ನು ಸಾಕ್ಷಾತ್ ಸಾನಿಧ್ಯವೂ ನೀಡಲಾರದು. ಅಂತಹ ಖುಷಿಯನ್ನು ಬಯಸಿ ಎಷ್ಟು ಸಲವೋ ಹೀಗೇ ಅವಳ ಮನೆಯ ಎದುರಿನ ರಸ್ತೆಯಲ್ಲಿ ನೆಲಕ್ಕೆ ಬೇರುಬಿಟ್ಟವನಂತೆ ನಿಂತುಬಿಟ್ಟಿದ್ದೇನೆ, ಎಷ್ಟೋ ಸಲ ಅದೇ ತಿರುವುಗಳಲ್ಲಿ ಹುಚ್ಚು ಹುಚ್ಚಾಗಿ ಅಲೆದಾಡಿದ್ದೇನೆ. ಏನೇ ಇರಲಿ, ವೈಷ್ಣವಿ ಎಂದರೆ ನನ್ನ ಪರಮಾಪ್ತ ಗೆಳತಿ, ಅಷ್ಟೆಯೇ? ಆಕೆ ನನ್ನ ಜೀವದ ಜೀವ, ಪ್ರಾಣದ ಪ್ರಾಣ, ಸರಳವಾಗಿ ಹೇಳಬೇಕೆಂದರೆ ನನ್ನ girlfriend, ಅಧಿಕೃತವಾಗಿಯೂ. ನಮ್ಮದೇ ಕ್ಲಾಸು. ಅಂದ ಹಾಗೆ ನನ್ನ ಹೆಸರು ಹೃಷೀಕೇಷ. ಇದು ಇಂಜಿನಿಯರಿಂಗ್ ನ ಕೊನೆಯ ವರ್ಷ, ಎಂದರೆ ನಾನು ವೈಷ್ಣವಿಯನ್ನು ಭೇಟಿಯಾಗಿ ಮೂರು ವರ್ಷಗಳು ತುಂಬಿವೆ, ಪ್ರಪೋಸ್ ಮಾಡಿ- ಅವಳು ಒಪ್ಪಿಕೊಂಡು ಎಲ್ಲ ಆಗಿಯೇ ಎರಡು ವರ್ಷವಾಗುತ್ತದೆ. ಕೆಲವೊಮ್ಮೆ ನನಗೇ ತಿಳಿಯದೇ ಈ ಐದು ಫೂಟಿನ ಹುಡುಗಿ ಏನು ಮೋಡಿ ಮಾಡಿಬಿಟ್ಟಳು ಎನಿಸುತ್ತದೆ. ಪ್ರೀತಿ ಎಂದರೆ ಹಾಗೇ, ಗೊತ್ತಿದ್ದೇ, ಇಷ್ಟವಿದ್ದೇ, ಬಾವಿಗೆ ಬೀಳುವ ಹುಚ್ಚುತನ, ಅದನ್ನೇ ಪರಮಾನಂದ ಎಂದು ತಿಳಿದುಕೊಂಡು ಖುಷಿಯಾಗಿರುವ ಪ್ರೌಢಿಮೆ. ಎಷ್ಟು ವೇಗವಾಗಿ, ಎಷ್ಟು ಸುಂದರವಾಗಿ ಈ ಎರಡು ವರ್ಷಗಳು ಕಳೆದು ಹೋದವು ಎನ್ನಿಸಿತು. ಕಾಲು ಗಂಟೆಯಾದ ಮೇಲೆ, ಇನ್ನು ಸಾಕು ಎನ್ನಿಸಿ ಕಾಲೇಜಿನ ಕಡೆ ಗಾಡಿಯನ್ನು ತಿರುಗಿಸಿದೆ. ಈ ಎರಡು ವರ್ಷಗಳಲ್ಲಿ ಎಂದಾದರೂ ನನ್ನ ಪ್ರೀತಿಯ ತೀವ್ರತೆ, ಅದರ ಸಾಂದ್ರತೆ ಕಡಿಮೆಯಾಗಿತ್ತೇ? ಎಂಬ ಪ್ರಶ್ನೆ ಏಕೋ ಮೂಡಿತ್ತು, ಆದರೆ ಅದು ಎಂದಾದರೂ ನಿನ್ನ ಹೃದಯಬಡಿತ ನಿಲ್ಲಿಸಿತ್ತೇ ಎಂಬ ಪ್ರಶ್ನೆಯಷ್ಟೇ ಮೂರ್ಖವಾಗಿ ಕಂಡುಬಂದು ತಲೆಕೊಡವಿಕೊಂಡೆ. ಅವಳದ್ದು? ಸಾಧ್ಯವೇ ಇಲ್ಲ, ಅವಳ  ಪ್ರತಿ ಹೃದಯಬಡಿತ, ಮನಸ್ಸಿನ ಪ್ರತೀ ತುಡಿತ ನನಗೆ ಗೊತ್ತು. ಯೋಚನೆ ಹೀಗೇ ಸಾಗಿತ್ತು. ಎದುರಿದ್ದ ಟೆಂಪೋ ಟ್ರಾವೆಲರ್ ಏಕೋ ಸಡನ್ ಆಗಿ ನಿತ್ತಿತ್ತು. ನಾನು ಬ್ರೇಕ್ ಹಾಕುವುದರೊಳಗೆ ಬೈಕ್ ಹೋಗಿ ಅದಕ್ಕೆ ಗುದ್ದಿ ಆಗಿತ್ತು. ಅಂಗಾತ ಬಿದ್ದಿದ್ದೆ, ಹಿಂದಿಂದ ಬರುತ್ತಿದ್ದ ಲಾರಿ ಕಾಲ ಮೇಲೆ ಹರಿದು ಹೋಗಿತ್ತು . ನೋವೆಲ್ಲ ಸಮೀಕರಿಸಿ ತಲೆಗೆ ನುಗ್ಗಿ ನರಮಂಡಲ ಧೀಂ ಎಂದಿತ್ತು. ಅದಕ್ಕೆ ಪರಿಹಾರ ಎಂಬಂತೆ ಪ್ರಜ್ಞೆ ತಪ್ಪಿತ್ತು. ಎಚ್ಚರ ತಪ್ಪುವಾಗ ಎದೆಯೊಳಗಿದ್ದ ವೈಷ್ಣವಿ, ಎಚ್ಚರವಾದಾಗ ಎದುರಿದ್ದಳು, ಆಸ್ಪತ್ರೆಯ ಬೆಡ್ ನ ಪಕ್ಕದಲ್ಲಿ.

.
          ಆ ಘಟನೆ ಆಗಿ ತಿಂಗಳಾಗಿದೆ. ನನ್ನ ಬಲಕಾಲು ಪೂರ್ಣವಾಗಿ ಜಜ್ಜಿ ಹೋಗಿದ್ದರಿಂದ ಆಪರೇಶನ್ ಮಾಡಿ ಕಾಲನ್ನು ತೆಗೆಯಬೇಕಾಯಿತು. ತಿಂಗಳಾಗುತ್ತ ಬಂದಿದೆ, ಕಾಲೇಜಿನ ಕಡೆ ಮುಖ ಹಾಕದೇ. ಕಾಲೇಜಿಗೆ ಹೋಗುವುದಕ್ಕೆ ಮೂಲಕಾರಣವೇ ನಾನಿರುವಲ್ಲಿಗೇ ದಿನವೂ ಬರುತ್ತದೆ ಎಂದರೆ, ಯಾರು ತಾನೇ ಕಾಲೇಜನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಬೇಜಾರು ಮಾಡಿಕೊಳ್ಳುತ್ತಾರೆ? ಮೊದಲ ಒಂದು ವಾರವಿಡೀ ಅವಳೂ ಕಾಲೇಜಿಗೆ ಹೋಗಿರಲಿಲ್ಲ. ದಿನವಿಡೀ ನನ್ನ ಅಮ್ಮನೂ, ಅವಳೂ ಆಸ್ಪತ್ರೆಯಲ್ಲಿಯೇ ಇರುತ್ತಿದ್ದರು. ಇಬ್ಬರ ಮನೆಯಲ್ಲಿಯೂ ನಮ್ಮ ಬಗ್ಗೆ ಗೊತ್ತಿದ್ದರಿಂದ, ಅದೆನೂ ಆಶ್ಚರ್ಯಕಾರಿ ಸಂಗತಿಯಲ್ಲ. ಮೊದಲೆರಡು ದಿನ ಅಮ್ಮನೂ ಪ್ರಜ್ಞೆ ಇಲ್ಲದಿದ್ದವಳ ಹಾಗೆ ಕುಳಿತಾಗ, ಇವಳೇ ಮನೆಯಿಂದ ಅಡಿಗೆ ಮಾಡಿಸಿಕೊಂಡು ತರುತ್ತಿದ್ದಳು. ನನಗೂ, ಅಮ್ಮನಿಗೂ ಆ ಸಮಯದಲ್ಲಿ ಒಂದು ದಿಕ್ಕಾಗಿದ್ದು ಅವಳೇ. ಒಂದು ವಾರದ ನಂತರ ಕಾಲೇಜಿಗೆ ಹೋಗಲು ಪ್ರಾರಂಭಿಸಿದಳಾದರೂ, ಮುಗಿಸಿ ಬಂದವಳು ನನ್ನ ಪಕ್ಕ ಬಂದು ಕೂತರೆ ,ಆಸ್ಪತ್ರೆಯನ್ನು ಬಿಟ್ಟು ಹೋಗಲೇ ತಯಾರಿರುತ್ತಿರಲಿಲ್ಲ. ಸಂಜೆಯಾಗಿ ಅವಳನ್ನು ಕಳಿಸಬೇಕಾದರೆ ಅಮ್ಮ, ನಾನು ನಮ್ಮ ಬುದ್ಧಿಶಕ್ತಿಯನ್ನೆಲ್ಲ ಖರ್ಚು ಮಾಡಬೇಕಾಗುತ್ತಿತ್ತು, ಕೆಲವೊಮ್ಮೆ ಅಮ್ಮ ಸುಳ್ಳು ಸುಳ್ಳೇ ಸಿಟ್ಟು ಮಾಡಿಕೊಂಡಿದ್ದೂ ಇದೆ, ಕೆಲವೊಮ್ಮೆ ಅಮ್ಮ ಮರೆಯಲ್ಲಿ ಖುಷಿಯಿಂದ ಕಣ್ಣನ್ನು ಒರೆಸಿಕೊಂಡಿದ್ದೂ ಇದೆ. ಒಂದೆರಡು ವಾರದ ನಂತರ, ನಾನು ದೊಡ್ಡ ತ್ಯಾಗಿಯ ಹಾಗೆ "ಈಗಲೂ, ಹೀಗೆ ನನ್ನ ಕಾಲು ಹೋದ ಮೇಲೂ ನೀನು ನನ್ನನ್ನು ಪ್ರೀತಿಸುತ್ತೀಯಾ ?, ನೀನು ನನ್ನನ್ನು ಮರೆತುಬಿಡುವುದು ಒಳ್ಳೆಯದೇನೋ" ಎಂದೆ ಯಾವುದೋ ಒಂದು ಗೊಂದಲದಲ್ಲಿ. "ಛಟೀರ್!"ಬಿದ್ದಿತ್ತು ನನ್ನ ಕೆನ್ನೆಯ ಮೇಲೊಂದು ಪೆಟ್ಟು. "ಮೂರ್ಖ, ನೀನು ಇಷ್ಟು ಚಿಲ್ಲರೆಯಾಗಿ ಯೋಚಿಸುತ್ತೀಯಾ ಎಂದು ನನಗೆ ತಿಳಿದಿರಲಿಲ್ಲ. ಅಷ್ಟಕ್ಕೂ ನಾನು ಪ್ರೀತಿಸಿದ್ದು ಹೃಷೀಕೇಷ ಎಂಬ ವ್ಯಕ್ತಿಯನ್ನು, ಅವನ ಕಾಲನ್ನಲ್ಲ" ಕಣ್ಣ ತುಂಬ ನೀರನ್ನು ತುಂಬಿಕೊಂಡು ಹೇಳಿದಳುಅವಳ ಪ್ರತಿಕ್ರೀಯೆ ನನ್ನ ಬಗ್ಗೆ ನನಗೇ ಅಸಹ್ಯವಾದ ಹೇಸಿಕೆ ಹುಟ್ಟಿತು. ಅವಳ ಬಗ್ಗೆ ಮನದಲ್ಲಿದ್ದ ಒಂದು ಹೆಮ್ಮೆ ಮತ್ತಿಷ್ಟು ಬಲಿತಿತ್ತು. ಹೀಗೆ ಇವಳು ದಿನವೂ ನನ್ನ ಪಕ್ಕ ಬಂದು ಕೂರುವುದಾದರೆ ಜೀವನ ಪೂರ್ತಿ ಹೀಗೇ ಆಸ್ಪತ್ರೆಯಲ್ಲಿರಲು ನಾನು ತಯಾರಿದ್ದೆ. ಜೀವನದಲ್ಲಿ ಮತ್ತೇನು ಬೇಕು, ಜೀವಕೊಟ್ಟ ಅಮ್ಮ ಮತ್ತು ಜೀವಕೊಡಲು ತಯಾರಿರುವ ಹುಡುಗಿಯ ಸಂಪೂರ್ಣ ಸಾನಿಧ್ಯ ಬಿಟ್ಟು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಹೊತ್ತಿಗೆ ನನ್ನ ಒಂದು ಕಾಲು ಇಲ್ಲದೆಯೇ, ಕುಂಟು ಹಾಕಿಕೊಂಡಿರಬೇಕಾದ ಮುಂದಿನ ಜೀವನಕ್ಕೆ ತಯಾರಾಗಿದ್ದೆ.

.
          ಇದಾಗಿ ಮತ್ತೊಂದು ತಿಂಗಳು ಕಳೆದಿತ್ತು. ಅವಳ ಮಾವನ ಮಗ ಸಿಂಧೂರ ಅಮೇರಿಕಾದಿಂದ ಬಂದಿದ್ದ. ಅವಳೊಂದಿಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಒಡನಾಡತೊಡಗಿದ. ಬೈಕಿನಲ್ಲಿ ಕೂರಲು ಹಿಂಜರಿಯುತ್ತಿದ್ದವಳಿಗೆ ದಿನವೂ ಅವನೇ ಡ್ರಾಪ್ ಕೊಡತೊಡಗಿದಾಗ, ಹಾಗಾದರೂ ಅವಳಿಗೆ ಅನುಕೂಲವಾಗುತ್ತದಲ್ಲ ಎಂದು ಸುಮ್ಮನೇ ಇದ್ದೆ, ಮಧ್ಯದ ಬ್ರೇಕ್ ಗಳಲ್ಲಿ ಅವನು ಸುಮ್ಮಸುಮ್ಮನೇ ಕಾಲೇಜಿಗೆ ಬಂದು ಅವಳನ್ನು ಮಾತನಾಡಿಸತೊಡಗಿದರೂ ಏನೋ ಸಂಬಂಧಿಕರು ಎಂದು ಸುಮ್ಮನಿದ್ದೆ, ನನ್ನ ಯೋಗಕ್ಷೇಮದ ಬಗ್ಗೆ ಅವಳು ವಿಚಾರಿಸುವುದನ್ನು ಕಡಿಮೆಮಾಡಿದಾಗಲೂ ಸಿಂಪತಿಯನ್ನು ಅಪೇಕ್ಷಿಸಿತೇ ಮನ ಎಂದು ನನ್ನ ಮನಸ್ಸಿಗೇ ಬೈದುಕೊಂಡು ಸುಮ್ಮನಿದ್ದೆ, ಆದರೆ ನನಗೆ ಬರುತ್ತಿದ್ದ ಮೆಸೇಜು, ಕಾಲುಗಳು ಬತ್ತಿಹೋಗಿ, ನಾನು ಮಾಡಿದ ಮೆಸೆಜುಗಳಿಗೂ ಉತ್ತರ ಬರದೇ ನನ್ನ ಬಗ್ಗೆ ನಿರ್ಲಕ್ಷ್ಯ ತೋರಲಾರಂಭಿಸಿದಾಗ ಮಾತ್ರ ಚಡಪಡಿಸಿಹೋದೆ. ಮುಖಕ್ಕೆ ಮುಖ ಕೊಟ್ಟು ದಿಟ್ಟಿಸಲೂ ಅವಳು ಹಿಂಜರಿದು ತಲೆ ಬಗ್ಗಿಸಿಕೊಂಡು ಹೋದಾಗ ನಾನು ಪಾತಾಳಕ್ಕೆ ಕುಗ್ಗಿಹೋದೆ. "ಏಕೆ ಹೀಗೆ ಮಾಡುತ್ತಿರುವೆ? ನನ್ನ ಕಾಲು ಮುರಿದು ಹೋಗಿದೆ ಎಂಬ ಒಂದೇ ಕಾರಣಕ್ಕಾಗಿಯೇ?" ಎಂದಾಗ "ಇರಬಹುದು,ಈಗ ನಾನು ನಿನ್ನನ್ನಂತೂ ಪ್ರೀತಿಸುತ್ತಿಲ್ಲ " ಎಂದು ಮುಖಕ್ಕೆ ಹೊಡೆದಂತೆ ಅವಳು ಹೇಳಿದಾಗ ಮೊದಲ ಬಾರಿಗೆ ನಾನು ಅಂಗವಿಕಲ ಎನ್ನಿಸಿತು. "ಹಾಗಾದರೆ ಆಸ್ಪತ್ರೆಯಲ್ಲಿ ಹೇಳಿದ್ದೆಲ್ಲಾ?" ಎಂದಿದ್ದಕ್ಕೆ ಮೌನವೇ ಉತ್ತರ. ಮತ್ತೂ ಒತ್ತಾಯಪಡಿಸಿದರೆ "ಆಗಲಾದರೂ ನಾನು ನಿನಗೆ ಮಾನಸಿಕ ಬೆಂಬಲ ಇತ್ತೆನಲ್ಲಾ ಎಂದು ಖುಷಿಪಡು. ಆಗ ನಾನು ಮಾಡಿದ ಸಹಾಯಕ್ಕೆ ಕೃತಜ್ಞನಾಗಿರು" ಎಂದು ಮತ್ತೂ ನಿಷ್ಠುರವಾಗಿ ಹೇಳಿದ್ದು ನನಗೆ ಅವಮಾನಕಾರಿಯಾಗಿ ಕಂಡುಬರಲೆಂದೆಯೇ ಅವಳು ಅಗತ್ಯಕ್ಕಿಂತ ಖಾರವಾಗಿ ಮಾತನಾಡುತ್ತಿದ್ದಾಳೆ ಎಂದು ಒಳಮನಸ್ಸಿಗೆ ಎನ್ನಿಸಿತು, ಆದರೆ ಬುದ್ಧಿ ಅದನ್ನು ತಿರಸ್ಕಾರ ಎಂದೇ ಗಣಿಸಿ, ಅವಳ ಬಗ್ಗೆ ಮತ್ತಿಷ್ಟು ಅಸಹ್ಯಿಸಿಕೊಂಡಿತು. ಹಾಗೆ ನಮ್ಮಿಬ್ಬರ ಸಂಬಂಧ ಮತ್ತೆಂದಿಗೂ ಸರಿಪಡಿಸಲಾರದ ಮಟ್ಟಿಗೆ ಹಾಳಾಯಿತು. ನನಗೇ ಇಂದು ಇಲ್ಲಿ ಬರೆಯಲು ಇಷ್ಟ ಪಡದ ಶಬ್ದಗಳನ್ನೆಲ್ಲಾ ಉಪಯೋಗಿಸಿಕೊಂಡು ಬಯ್ದುಬಿಟ್ಟೆ. ಗೆಳೆಯರ ಬಳಗದಲ್ಲೆಲ್ಲಾ ಅವಳ ಬಗ್ಗೆ ಒಂತರಾ ಕೆಟ್ಟ ಇಮೇಜನ್ನು ಹುಟ್ಟಿಸಿಬಿಟ್ಟೆ. ಇದರ ಮಧ್ಯೆ ಒಂದೆರಡು ಸಲ ಅವಳ ಕಸಿನ್ ನನ್ನ ಬಳಿ ಮಾತನಾಡಲು ನೋಡಿದನಾದರೂ ನಾನು ಅವಕಾಶ ಕೊಡದೇ ತಪ್ಪಿಸಿಕೊಂಡು ಬಿಟ್ಟೆ.

.
          ಒಂದು ತಿಂಗಳು ಕಳೆದಿತ್ತೇ? ಲೆಕ್ಕ ಇಟ್ಟವರಾರು? ಭಾವ ಕರಗಿ, ಕೊರಗು ಮೂಡಿ, ದುಃಖ ತಿರುತಿರುಗಿ ಉಮ್ಮಳಿಸಿ ಬಂದು ಮಾತು ಕಟ್ಟಿಹೋದಂತಾದಾಗ ದಿನದ ಲೆಕ್ಕ ಇಡುವ ವ್ಯವಧಾನ ಯಾರಿಗಾದರೂ ಇದ್ದೀತು.   ಒಂದು ಸಂಜೆ ಹೀಗೆ ಕಾಲೇಜಿನ ಕಟ್ಟೆಯ ಮೇಲೆ ಕೂತು ಅವಳ ಬಗ್ಗೆಯೇ ಏನೋ ಒಂದು ಮಾತನಾಡುತ್ತಿರಬೇಕಾದರೆ ಸಿಂಧೂರ ಎಲ್ಲಿಲ್ಲದ ಗಡಿಬಿಡಿಯಿಂದ ಓಡಿಬಂದಾಗಲೇ ಮನಸ್ಸು ಏನೋ ಕೇಡನ್ನು ಸಂಶಯಿಸಿತ್ತು.ಬಂದವನೇ ಹಿಂದೆ ಮುಂದೆ ನೋಡದೇ, ನನ್ನನ್ನು ಒಂದು ಮಾತ್ರ ಮಾತನ್ನೂ ಕೇಳದೇ"ಆಸ್ಪತ್ರೆಗೆ ಹೋಗೋಣ ಬನ್ನಿ" ಎಂದು ಬೈಕಿನಲ್ಲಿ ಕೂರುವಂತೆ ಹೇಳಿ ಸ್ಟಾರ್ಟ್ ಮಾಡಿದ. ಏನಕ್ಕೆ ಎಂಬ ಪ್ರಶ್ನೆಗೆ ಮೌನವೇ ಉತ್ತರ. ಬಹಳೇ ಕಿರಿಕ್ ಮಾಡಿ, ಇನ್ನು ಹೇಳದಿದ್ದರೆ ಓಡುತ್ತಿರುವ ಗಾಡಿಯಿಂದ ಇಳಿದು ಬಿಡುತ್ತೇನೆ ಎಂದು ಬೆದರಿಕೆ ಹಾಕಿದಾಗ, "ನಿಮ್ಮ ಅದೃಷ್ಟ ಸರಿಯಾಗಿದ್ದರೆ ವೈಷ್ಣವಿಯನ್ನು ಜೀವಂತವಾಗಿ ನೋಡಬಹುದು" ಎಂದಷ್ಟೇ ಹೇಳಿ ಇನ್ನು ಹಾರುವುದಾದರೆ ಹಾರಿ ಎಂಬ ಧಾಟಿಯಲ್ಲಿ ಬೈಕನ್ನು ಯಮವೇಗದಲ್ಲಿ ಹೊಡೆಯತೊಡಗಿದ. ಯಾವ ವೇಗದಲ್ಲಿ ಹೋದರೇನು, ಜೀವ ಕಾದಿರಲಿಲ್ಲ. ಬದುಕಿದ್ದಾಗ ಇದ್ದ ಅದೇ ತುಂಟನಗೆಯನ್ನು ಸತ್ತ ಮೇಲೂ ಇರಿಸಿಕೊಳ್ಳಲು ಸಾಧ್ಯವೇ ಎಂದು ಅಚ್ಚರಿಗೊಳ್ಳುವಷ್ಟು ನಿರಾಳವಾಗಿ ಮಲಗಿಕೊಂಡಿದ್ದಳು ಆಸ್ಪತ್ರೆಯ ಮಂಚದ ಮೇಲೆ. ನನಗ್ಯಾಕೋ ನಂಬಲಾಗಲಿಲ್ಲ, ನಂಬಬೇಕು ಎಂದು ಕೂಡ ಎನ್ನಿಸಲಿಲ್ಲ. ನಾವೆಷ್ಟೇ ಸುಳ್ಳು ಸುಳ್ಳಾಗಿ ದ್ವೇಷಿಸಿದಂತೆ ತೋರಿಸಿಕೊಂಡರೂ ಒಮ್ಮೆ ಪ್ರೀತಿಸಿದ ಮೇಲೆ ಆ ವ್ಯಕ್ತಿಯ ಬಗ್ಗೆ ಬೇರಾವ ಭಾವವೂ ಮೂಡಲೂ ಸಾಧ್ಯವಿಲ್ಲ. ಪ್ರೀತಿ ಎಂಬ ಒಂದು ಭಾವನೆ ಎದೆಯಲ್ಲಿ ಬೇರು ಬಿಟ್ಟು ಕೂತ ಮೇಲೆ ಬೇರೆ ಭಾವಗಳಿಗೆ ಜಾಗವಾದರೂ ಎಲ್ಲಿಂದ ಸಿಕ್ಕೀತು. ಆ ವ್ಯಕ್ತಿಯ ಬಗ್ಗೆ ಇರಬಹುದಾದದ್ದು ಮತ್ತೇನೂ ಅಲ್ಲ, ಕೇವಲ ಪ್ರೀತಿ. ಈ ಪ್ರೀತಿ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವುದೆಂದೂ, ನಮ್ಮ ಬಳಿ ಇರುವ  ವ್ಯಕ್ತಿಯ ಮಹತ್ವ ಅವರಿಂದ ದೂರವಾದ ಮೇಲೆ ಮಾತ್ರ ತಿಳಿಯುತ್ತದೆಯೆಂದೂ ತಿಳಿದುಕೊಳ್ಳಲು ನಾನು ಜೀವನದಲ್ಲಿ ಇಷ್ಟು ದೊಡ್ಡ ಬೆಲೆಯನ್ನು ತೆರಬೇಕಾಯಿತೇ?

.
          ನನಗಾದ ಶಾಕ್ಅನ್ನೂ , ಆ ದುಃಖವನ್ನೂ ಮತ್ತಾರು ಅರ್ಥ ಮಾಡಿಕೊಂಡರೋ ಇಲ್ಲವೋ ಗೊತ್ತಿಲ್ಲ ಸಿಂಧೂರ ಮಾತ್ರ ಚೆನ್ನಾಗಿ ಅರ್ಥೈಸಿಕೊಂಡ " ಇಲ್ಲೇ ಹೊರಗೆ ಹೋಗಿ ಬರೋಣ" ಎಂದು ಆಸ್ಪತ್ರೆಯಿಂದ ಸ್ವಲ್ಪ ಹೊರಗೆ ಕರೆದುಕೊಂಡು ಬಂದವನು ಮೊದಲೆ ನಿರ್ಧರಿಸಿಕೊಂಡಿದ್ದಂತೆ ಮಾತನಾಡತೊಡಗಿದನು, "ರಿಷಿ, ನೀನು ವೈಷ್ಣವಿಯ ಬಗ್ಗೆ ಏನು ತಿಳಿದುಕೊಂಡಿದ್ದೆಯೋ, ಈಗ ಏನನ್ನು ಭಾವಿಸಿರುವೆಯೋ ನನಗೆ ಗೊತ್ತಿಲ್ಲ. ಅವಳ ಬಗ್ಗೆ ನಿನ್ನಲ್ಲಿರುವ  ಸಂದೇಹಗಳೆಲ್ಲ ಊಹೆಗಳಷ್ಟೇ! ನಾನು ಅರ್ಥ ಮಾಡಿಕೊಳ್ಳಬಲ್ಲೆ, ನಿನ್ನ ಯೋಚನಾಲಹರಿ ಹೇಗೆ ಸಾಗಿರಬಹುದು ಎಂದು. ಆದರೆ ಒಂದಂತೂ ನಿಜ. ಅವಳು ಪುಟಕ್ಕಿಟ್ಟ ವಜ್ರ.ಅಂತಹ ಹುಡುಗಿ ಎಲ್ಲರಿಗೂ ಸಿಗಲಾರಳು. ಎಲ್ಲಿಯೂ..." ಅವನೇ ಸ್ವಲ್ಪ ಹೊತ್ತು ಬಿಟ್ಟು ಮುಂದುವರಿಸಿದ. "ಅವಳು ಬೆಳದಿಂಗಳಂತ ಹುಡುಗಿ. ಬಿಸಿಯಾಗಿರದ ಸುಡದ ತಣ್ಣನೆಯ ಬೆಳಕು ಅವಳು. ನಿನಗೇ ಗೊತ್ತಲ್ಲ, ಮಾತನಾಡಿದರೆ ಮುತ್ತು ಉದುರಿದಂತ ಇಂಪು. ನಡೆದರೆ ಭೂಮಿ ಹಸಿರಾದೀತು ಎಂಬ ಆಸೆ, ಅಂತಹವಳು. ನಾನು ಅವಳೂ ಚಿಕ್ಕಂದಿನಿಂದಲೂ ಆಡಿ ಬೆಳೆದವರು. ಸಿಂಧೂರಣ್ಣ ಎನ್ನುತ್ತಿದ್ದಳು, ಪ್ರೀತಿಯಿಂದ ಸಿಂಧೂ ಎಂದಷ್ಟೇ ಕರೆದುಬಿಡುತ್ತಿದ್ದುದೂ ಇತ್ತು. ನನಗೆ ಸ್ವಂತ ತಂಗಿಯಿದ್ದರೂ ಇಷ್ಟು ದುಃಖಿಸುತ್ತಿರಲಿಲ್ಲವೇನೋ, ಅಂತಹ ಹುಡುಗಿ. ನಾನು MBBS  ಮುಗಿಸಿ ಅಮೇರಿಕಾಕ್ಕೆ ಉನ್ನತ ಶಿಕ್ಷಣಕ್ಕೆ ಹೋದ ಮೇಲೂ ಆವಾಗಾವಾಗ ಫೋನ್ ಮಾಡುತ್ತಿದ್ದಳು, ತಪ್ಪದೇ ಕಾಗದ ಬರೆಯುತ್ತಿದ್ದಳು. ನಿನ್ನ ಬಗ್ಗೆ ನೀನು ಪ್ರಪೋಸ್ ಮಾಡಿದಂದೇ ಹೇಳಿದ್ದಳು. ನಿನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಳು, ಕೊನೆಯವರೆಗೂ ಪ್ರೀತಿಸಿದಳು, ಪ್ರೀತಿಸುತ್ತಲೇ ಕೊನೆಯುಸಿರೆಳೆದಳು." ನನಗಿಂತ ಹೆಚ್ಚಾಗಿ ಅವನು ಬಿಕ್ಕಳಿಸಿದನೇ, ಅದಕ್ಕೋಸ್ಕರವೇ ಮುಖವನ್ನು ಮತ್ತೊಂದೆಡೆಗೆ ತಿರುಗಿಸಿದನೇ, ನಾನು ಹುಡುಕಲು ಹೋಗಲಿಲ್ಲ. "ನನಗೆ ನಿನ್ನ ಕೋಪವೂ ಅರ್ಥವಾಗುತ್ತದೆ. ಹೌದು ಅದಕ್ಕೂ ಅರ್ಥವಿದೆ. ನಿನ್ನ ಜಾಗದಲ್ಲಿ ನಾನಿದ್ದರೂ ನಾನು ಹಾಗೇ ತಿಳಿಯುತ್ತಿದ್ದೆನೇನೋ. ಆದರೆ ಅವಳ ಮನಸ್ಸು ನಮ್ಮ ಕಲ್ಪನೆಗೆ ಸಿಗದಷ್ಟು ದೊಡ್ಡದು. ನಿನಗೆ ಆ ದಿನ ಅಪಘಾತ ಆಗಿ ಕಾಲು ಕತ್ತರಿಸಿದರಲ್ಲ, ಅದಾಗಿ ಒಂದಿಷ್ಟು ದಿನ ಇವಳು ನಿನ್ನೊಂದಿಗೆ ಸರಿಯಾಗೆಯೇ ಇದ್ದಳು ನಿನಗೆ ನೆನಪಿರಬಹುದು. ಸುಮಾರು ಒಂದು ತಿಂಗಳಾದ ಮೇಲೆ ಒಂದು ದಿನ ವಿಪರೀತ ಹೊಟ್ಟೆ ನೋವು ಬಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಳು. ಆಗ ಪರೀಕ್ಷೆ ಮಾಡಿದಾಗ ತಿಳಿದಿದ್ದು, ಈ ಬೆಳದಿಂಗಳ ಹುಡುಗಿಗೆ ಆ ಬೆಳದಿಂಗಳ ಬಾಲೆ(ಸುನಿಲ ಕುಮಾರ್ ದೇಸಾಯಿಯವರ ಚಲನಚಿತ್ರ)’ಗೆ ಇದ್ದ ಖಾಯಿಲೆಯೇ ಬಂದಿದ್ದು ಎಂದು. ಕೊನೆಯವರೆಗೂ ಬಾಹ್ಯಲಕ್ಷಣಗಳನ್ನು ತೋರಿಸದೇ ಸುಪ್ತವಾಗಿ ಉಳಿದುಬಿಡುವ ಮದ್ದಿಲ್ಲದ ಖಾಯಿಲೆಯದು. ಈ ವಿಷಯ ತಿಳಿದಿದ್ದುದು ಅವಳಿಗೆ, ನನಗೆ ಹಾಗೂ ಅವಳ ತಂದೆಯವರಿಗೆ ಮಾತ್ರ. ನನಗೆ ತಿಳಿದಾಕ್ಷಣ ನಾನು ಸ್ಟೇಟ್ಸ್ ನಿಂದ ಬಂದೆ. ನಿನಗೆ ಹೇಳಲೇಬಾರದು ಎಂದು ಖಡಾಖಂಡಿತವಾಗಿ ಹೇಳಿದ್ದಳು ಆಣೆ ತೆಗೆದುಕೊಂಡಿದ್ದಳು. ಯಾಕೆ ಎಂದರೆ "ಅವನು ಅದನ್ನು ತಡೆದುಕೊಳ್ಳಲಾರನೋ, ವಿಷಯ ಗೊತ್ತಾದರೆ ನನಗಿಂತ ಮೊದಲೇ ಅವನು ಸಾಯಬಹುದು" ಅವಳ ಧ್ವನಿ ಏನನ್ನೂ ವೈಭವೀಕರಿಸಿದ ಹಾಗೆ ಕೇಳುತ್ತಿರಲಿಲ್ಲ, ಸತ್ಯವನ್ನು ಹೇಳುವ ನಿಷ್ಟುರವಿದ್ದಂತಿತ್ತು. ನಿನ್ನ ಪ್ರೀತಿಯ ಆಳ, ಆ ಪೊಸೆಸಿವ್ ನೆಸ್ ಗಳ ಬಗ್ಗೆ ಅವಳಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಅವಳು ಹೆದರಿಕೊಂಡಿದ್ದುದು, ಎಲ್ಲಿ ನೀನೇನಾದರೂ ಭಾನಗಡಿ ಮಾಡಿಕೊಂಡುಬಿಡುತ್ತೀಯೇನೋ ಎಂದು. ಪರಿಹಾರವೇನು, ನಿನ್ನ ದೃಷ್ಟಿಯಲ್ಲಿ ಅವಳು ಕೆಟ್ಟವಳಾದರೆ ಮಾತ್ರ ಅವಳ ದುರ್ವಾರ್ತೆಯನ್ನು ಅರಗಿಸಕೊಳ್ಳಬಲ್ಲ ಶಕ್ತಿ ನಿನಗೆ ಸಿಗಬಹುದು ಎಂದು ನಿನ್ನಿಂದ ದೂರವಾಗಬೇಕೆಂದುಕೊಂಡಳು, ಅದಕ್ಕಾಗಿ ಕೆಟ್ಟವಳೆಂಬ ಪಟ್ಟವನ್ನು ಹೊರಲೂ ಸಿದ್ಧವಾದಳು. ಹೊತ್ತಳೂ ಕೂಡ. ಅವಳಿಗೆ ಇದ್ದಿದ್ದು ಒಂದೇ ಆಸೆ, ನೀನು ಸುಖವಾಗಿರಬೇಕೆಂದು. ಅದಕ್ಕಾಗಿ, ಅವಳ ನೆನಪಿನಲ್ಲಿ ನೀನು ಕೊರಗಬಾರದೆಂದು ಅವಳು ನಿನ್ನಿಂದ ದೂರವಾಗಲು ನೋಡಿದಳೇ ವಿನಃ ನಿನ್ನ ಕಾಲಿಗಾದ ಅಪಘಾತದಿಂದಲ್ಲ" ನನ್ನ ಪ್ರತಿಕ್ರಿಯೆ, ಭೂಮಿ ಬಾಯ್ಬಿಡಬಾರದೇ ಎನ್ನಿಸುವಂತಿತ್ತು. ಉತ್ತರ ಕೊಡಲು ಯಾವ ಮುಖವಿಲ್ಲದೇ, ಅದಕ್ಕೆ ಬೇಕಾದ ಶಕ್ತಿ, ಇಚ್ಛೆಗಳಿಲ್ಲದೇ, ನಾನು ಸುಮ್ಮನೇ ಥೇಟು ಬೆಳದಿಂಗಳ ಬಾಲೆಯ ಕೊನೆಯಲ್ಲಿ ಅನಂತನಾಗ್ ಬರುವ ಹಾಗೆ ಸಾವಿನ ಮನೆಯಿಂದ ದುಃಖದ ಮೂಟೆಯನ್ನು ಮನದಲ್ಲಿ ಹೊತ್ತು ಗುರಿ-ದಿಕ್ಕುಗಳ ಹಂಗಿಲ್ಲದೇ ಅಲ್ಲಿಂದ ಸುಮ್ಮನೇ ಹೊರಬಿದ್ದೆ.

ಈ ಕಥೆ ಈ ವಾರದ ಪಂಜುವಿನಲ್ಲಿ ಪ್ರಕವಾಗಿತ್ತು.

Friday, 2 August 2013

ದೇವರು ಮೆಚ್ಚಿದ ಭಕ್ತ

ಟಿಪ್ಪಣಿ :

ಚಿಕ್ಕ ಮಕ್ಕಳ ನೀತಿ ಕಥೆ ಎನ್ನಿಸಬಹುದು, ಆದರೆ ದೇವರು ಎಂದರೆ ಇದೇ ಎಂದು ನಂಬಿರುವವನು ನಾನು. ಯಾರಾದರೂ ದೇವರನ್ನು ನಂಬುತ್ತೀಯಾ  ಎಂದು ಕೇಳಿದಾಗ ಹೌದು ಎನ್ನುವವನು ನಾನು. 'Do good, get Good' ಎನ್ನುವುದೇ ದೇವರ ಸೂತ್ರ ಎನ್ನುವುದು ನನ್ನ ಉದ್ದೇಶ ಅಷ್ಟೇ. ವೈಯಕ್ತಿಕವಾಗಿ ಅಕಾರಣವಾಗಿ ಇಷ್ಟ ಆದ ಕಥೆ.  ಇಲ್ಲಿಯವರೆಗೂ ಓದುವಷ್ಟು ತಾಳ್ಮೆ ಉಳಿದಿದ್ದರೆ ನಿಮ್ಮ ಅಭಿಪ್ರಾಯ ತಿಳಿಸಿ :)
------------------------------------------------------------------------------------------------------------
ಅದೊಂದು ಊರು, ಆ ಊರಿನಲ್ಲಿ ಒಂದು ದೇವಸ್ಥಾನ. ಆ ದೇವಸ್ಥಾನಕ್ಕೆ ಒಬ್ಬ ದೇವರು. ಎಲ್ಲಾ ಊರುಗಳ ಎಲ್ಲ ದೇವರುಗಳಂತೆ ಭಕ್ತಗಣಗಳಿಂದ ಸೇವೆ ಮಾಡಿಸಿಕೊಂಡು, ಹಣ್ಣು ಕಾಯಿಗಳನ್ನು ತನ್ನ ಹೆಸರಿನಲ್ಲಿ ಅರ್ಪಿಸಿ ಭ(ಭಂ)ಜಿಸುತ್ತಿರುವ ಜನಸಮೂಹವನ್ನು ಕಂಡು ಒಳಗೊಳಗೆ ನಗುತ್ತಿರುವ ಸರ್ವಜ್ಞ, ಸರ್ವಾಂತರ್ಯಾಮಿ, ಸರ್ವಶಕ್ತ ಆತ.

ಎಲ್ಲವೂ ಹೀಗೇ ಇರಲು, ಕಾಲಚಕ್ರ ಸುಮ್ಮನೇ ಉರುಳುತ್ತಿರಲು, ದೇವನಿಗೆ ಒಂದು ದಿನ ಜಗಜ್ಜನಿತವಾದ ತನ್ನ ಮಾಮೂಲು ಮೂಕ ಧಾಟಿಯನ್ನು ಮೀರಿ ತನ್ನೂರಿನ ಒಬ್ಬ ಶ್ರೀಸಾಮಾನ್ಯನ ಬಳಿ ಒಂದಿಷ್ಟು ಸಮಯ ಕಳೆಯುವ ಮನಸ್ಸು ಮೂಡಿತು. ಸಮಯ ಇದ್ದಿದ್ದರೆ ಎಲ್ಲ ಭಕ್ತರನ್ನೂ ಭೇಟಿಯಾಗಿ ಬಿದುತ್ತಿದ್ದನೇನೋ ಪರಮಾತ್ಮ, ಆದರೆ ಈ ಭೂಮಿಯ ಮತ್ತು ಈ ಭೂಮಿಯಂತದ್ದೇ ಅದೆಷ್ಟೋ ಲೋಕಗಳ ಸೃಷ್ಟಿ ಸ್ಥಿತಿ ಲಯಗಳ ಹೊಣೆಹೊತ್ತ ಪರಮಾತ್ಮನಿಗೆ ಅಷ್ಟೆಲ್ಲಾ ಸಮಯ ಸಿಕ್ಕಿತಾದರೂ ಹೇಗೆ? ಅದಕ್ಕೆ ಈಗಿನ ಕಾಲದ ಚುನಾವಣೆ ಕಾಲದ ಗಿರ್ಮಿಟ್ ನಂತಲ್ಲದೇ ನಿಜವಾಗಿ ಒಬ್ಬ ಸದ್ಭಕ್ತನನ್ನು ಭೇಟಿ ಮಾಡುವ ನೈಜಭಾವ ಮೂಡಿತ್ತು ಆಗಿನ ಕಾಲದ ಆ ದೇವರಿಗೆ. ಸರಿ, ಆಯ್ತು ಯಾರನ್ನು ಭೇಟಿ ಮಾಡೋದು ಎಂದು ತೀರ್ಮಾನಿಸಬೇಕಲ್ಲಾ? ಆ ದಿನ ರಾಂಡಮ್ ಆಗಿ ಆಯ್ಕೆ ಮಾಡಿದ ಒಂದು ಊರಿನ ಎಲ್ಲರ ಕನಸಿನೊಳಗೂ ದೇವರು ಬಂದಿದ್ದ. "ಮುಂದಿನ ಸೋಮವಾರ ನಿಮ್ಮ ಊರ ದೇವಸ್ಥಾನದಲ್ಲಿ ಪ್ರತ್ಯಕ್ಷನಾಗುತ್ತೇನೆ ನಾನು. ಅಂದು ನನಗೆ ಅತ್ಯುತ್ತಮ ಕಾಣಿಕೆಯನ್ನು ತರುವ ಒಬ್ಬ ಸದ್ಭಕ್ತನ ಜೊತೆ ಒಂದು ದಿನವನ್ನು ಕಳೆಯುತ್ತೇನೆ ನಾನು. (ಈ ಕಾಲದ ಲಿಮಿಟೆಡ್ ಆಫರ್ ಗಳನ್ನು ಹೇಳುತ್ತಾರಲ್ಲಾ ಆ ಧಾಟಿಯಲ್ಲಿ) ಆದ್ದರಿಂದ ಯೋಚಿಸಿ ನನಗೇನು ಇಷ್ಟವೋ ಅದನ್ನು ತೆಗೆದುಕೊಂಡು ಬನ್ನಿ " ಎಂದಷ್ಟೇ ಹೇಳಿ ಮತ್ತೆ ತನ್ನ ಅಗೋಚರ ಮೋಡ್ ಗೆ ಹೋದ ಪರಮಾತ್ಮ.

ಮಾರನೆಯ ದಿನ ಬೆಳಿಗ್ಗೆ ಎದ್ದ ಜನರೆಲ್ಲರಿಗೂ ನಿನ್ನೆ ಕಂಡದ್ದು ಕನಸೋ ನಿಜವೋ ಎಂಬ ಬಗ್ಗೆ ಭಯಂಕರ ಗೊಂದಲ. ಒಬ್ಬ ದೇವರನ್ನು ಶಂಕ್ರಚಕ್ರಧಾರಿಯನ್ನು ನೋಡಿದ್ದರೆ ಮತ್ತೊಬ್ಬ ಅದೇ ದೇವರನ್ನು ಬೂದಿ ಬಡಿದುಕೊಂಡ ಸ್ಮಶಾನವಾಸಿಯನ್ನು ನೋಡಿದ್ದ, ಒಬ್ಬನಿಗೆ ಶ್ವೇತಾಂಬರಿ ಸಾತ್ವಿಕ ಸರಸ್ವತಿಯಾಗಿ ಕಂಡರೆ, ಮತ್ತೊಬ್ಬಳಿಗೆ ರುಂಡಮಾಲಾಧಾರಿಯಾದ ದುರ್ಗೆಯಾಗಿ ಗೋಚರಿಸಿದ್ದಳು. ಏನೇ ಇರಲಿ, ಎಲ್ಲರಿಗೂ ದೇವರು ಕಂಡಿದ್ದ ಆ ರಾತ್ರಿಯಾ ಕನಸಿನಲ್ಲಿ. ಮಾರನೆಯ ಬೆಳಿಗ್ಗೆ ಎಲ್ಲರೂ ಇನ್ನೊಬ್ಬರ ಬಳಿ ವಿಚಾರಿಸಿದ್ದೇ ವಿಚಾರಿಸಿದ್ದು, ತಮ್ಮ ಅಪೂರ್ವ ಅನುಭವವನ್ನು ವಿವರಿಸಿದ್ದೆ ವಿವರಿಸಿದ್ದು. ಆದರೆ ಕಾಣಿಕೆಯ ವಿಷಯ ಉಳಿದವರಿಗೆ ತಿಳಿದು ಹೋದರೆ ಅವರು ನಮಗಿಂತ ಅಮೂಲ್ಯವಾದದ್ದನ್ನು ತಂದು ದೇವರ ಜೊತೆ ಒಂದು ದಿನ ಕಾಲಕಳೆಯುವ ಅವಕಾಶವನ್ನು ಕಸಿದುಕೊಂಡುಬಿಡುತ್ತಾರೋ ಎಂಬ ಹೆದರಿಕೆಯಿಂದ ಯಾರೂ ತಮಗೆ ಕಾಣಿಸಿಕೊಂಡ ದೇವರ ಅತ್ಯುತ್ತಮ ಕಾಣಿಕೆಯ ಬೇಡಿಕೆಯನ್ನು ಪ್ರಸ್ತಾಪಿಸಲಿಲ್ಲ. ಲಕ್ಷ್ಮೀಪತಿ ಎಂಬ ಬಡರೈತನನ್ನು ಬಿಟ್ಟರೆ. ತನಗೆ ಕಂಡ  ದೇವರ ಬೇಡಿಕೆಯನ್ನು ನೆರೆಹೊರೆಯವರ ಹತ್ತಿರ ಹೇಳಿದಾಗ ಅವನಿಗೆ ಸಿಕ್ಕಿದ್ದು ನಿರೀಕ್ಷಿತ ಅಪಹಾಸ್ಯ ಮಾತ್ರ, "ಊರಲ್ಲಿ ಮತ್ಯಾರಲ್ಲೂ ಏನನ್ನೂ ಕೇಳದ ದೇವರು ಕಡುಬಡವರಲ್ಲಿ ಅತಿಬಡವನಾದ ನಿನ್ನನ್ನು ಕೇಳಿದ್ದಾನೆ ಎಂದರೆ ಅದೇ ದೇವರ ಮಾಯೆ " ಎಂದು ಒಬ್ಬ ಹೇಳಿದರೆ "ಎಷ್ಟಂದರೂ ಲಕ್ಷ್ಮೀಪತಿಯಲ್ಲವೇ ಈತ, ಅದಕ್ಕೆ ಕೇಳಿರಬೇಕು" ಎಂದು ಗೊಳ್ಳನೇ ನಕ್ಕ ಇನ್ನೊಬ್ಬ. ಎಲ್ಲರೂ ತಾವು ಈ ಲಕ್ಷ್ಮೀಪತಿಗಿಂತ ಉತ್ತಮ ಕಾಣಿಕೆ ತೆಗೆದುಕೊಂಡುಹೋದರೆ ಸಾಕು ಎಂಬ ಸಮಾಧಾನಕ್ಕೆ ಬಂದಿದ್ದರು. ಆದರೆ ಲಕ್ಷ್ಮೀಪತಿ ಯಾರ ಬಳಿಯೂ ದೇವರು ಏನನ್ನೂ ಕೇಳದೆ ಇದ್ದುದರಿಂದ ತನ್ನ ಬಳಿ ಕೇಳಿದ್ದು ತನ್ನ ಒಂದು ಭ್ರಮೆಯಷ್ಟೇ ಎಂದು ಭಾವಿಸಿ ಸೋಮವಾರ ಕೈ ಬೀಸಿಕೊಂಡು ಹೋಗುವುದೆಂದು ನಿರ್ಧರಿಸಿದ್ದ.

ಎಲ್ಲರೂ ಕಾತರಿಸಿ ಕಾಯುತ್ತಿದ್ದ ಸೋಮವಾರ ಬಂತು. ಮುಂಜಾನೆಯ ಮೊದಲ ಸೂರ್ಯಕಿರಣ ಬೀಳುವುದರ ಒಳಗೆ ಊರಿಗೆ ಊರೇ ದೇವಸ್ಥಾನದ ಎದುರು ಪ್ರತ್ಯಕ್ಷವಾಗಿತ್ತು. ಊರ ಜಮೀನ್ದಾರ ತನ್ನ ಹದಿನೈದು ಎಕರೆಯ ಭೂಮಿಯ ಪತ್ರವನ್ನು ತೆಗೆದುಕೊಂಡು ಬಂದಿದ್ದರೆ, ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಪೂಜಾರಿ ಅರ್ಧ ಕೆ. ಜಿ. ಆಗುವಷ್ಟು ಚಿನ್ನದ ಆಭರಣಗಳನ್ನು ತಂದಿದ್ದ, ಶ್ರೀಮಂತ ರೈತನೊಬ್ಬ ಐದು ಗಾಡಿಯಷ್ಟು ಧವಸವನ್ನು ತಂದರೆ ಬಡ ಕೂಲಿಯವನೊಬ್ಬ ತನ್ನ ಮಗಳ ಮದುವೆಗೆಂದು ತೆಗೆದಿಟ್ಟಿದ್ದ ಎಲ್ಲ ದುಡ್ಡನ್ನೂ ತಂದಿದ್ದ. ಆದರೆ ಲಕ್ಷ್ಮೀಪತಿ? ಪಾಪ ಏನಾದರೂ ತರಬೇಕೆಂಬ ಯಾವ ಜ್ಞಾನವೂ ಇಲ್ಲದೆ ಸುಮ್ಮನೆ ಕೈ ಬೀಸಿಕೊಂಡು ಬಂದಿದ್ದ. ದೇವಸ್ಥಾನದ ಪ್ರಾಂಗಣಕ್ಕೆ ಬಂದು ನೋಡುತ್ತಾನೆ, ಎಲ್ಲರೂ ಬಗೆಬಗೆಯ ಕಾಣಿಕೆಗಳೊಂದಿಗೆ ಬಂದಿದ್ದಾರೆ.  ಒಬ್ಬರನ್ನೊಬ್ಬರು ನೂಕಿಕೊಂಡು ದೇವಸ್ಥಾನದ ನೂರೆಂಟು ಮೆಟ್ಟಿಲುಗಳನ್ನು ಹತ್ತುತ್ತಿದ್ದಾರೆ. ತಾನೊಬ್ಬನೇ ಬರಿಕೈ ಸರದಾರ. ಆಯ್ತು ಹಾಗಿದ್ದರೆ, ದೇವರು ಕಾಣಿಸಿಕೊಳ್ಳುವುದರ ಒಳಗೆ ಮನೆಗೆ ಹೋಗಿ ಮುಂದಿನ ವಾರಕ್ಕೆಂದು ಇಟ್ಟಿದ್ದ ಸ್ವಲ್ಪ ರಾಗಿಯನ್ನಾದರೂ ತರೋಣ ಎಂದು ಭಾವಿಸಿ ಹತ್ತಿದ್ದ ಹತ್ತು ಮೆಟ್ಟಿಲುಗಳನ್ನು ಇಳಿದು ಮನೆಯ ಕಡೆ ಹೊರಡುತ್ತಾನೆ.

ಇತ್ತ ಕಡೆ ದೇವಸ್ಥಾನದ ಗರ್ಭಗುಡಿಯಲ್ಲೋ ಜನರ ಹಾಹಾಕಾರ. ಎಲ್ಲರೂ ದೇವರ ಬಗ್ಗೆ ದೇವರ ಕನಸ್ಸಿನ ಬಗ್ಗೆ ಮಾತನಾಡುವವರೇ , ತಾವು ತಂದಿದ್ದನ್ನು ಅಡಗಿಸಿಟ್ಟು ಇನ್ನೊಬ್ಬರು ಎಷ್ಟು ಸುಳ್ಳು ಹೇಳಿದರು, ಏನನ್ನೂ ತರುವುದಿಲ್ಲ ಎಂದು ಏನೇನನ್ನೆಲ್ಲ ತಂದರು ಎಂದು ಅಣಕಿಸುವವರೇ. ದೇವರು ಅವತರಿಸಿದರೆ ನಮ್ಮ ಸತ್ಯವನ್ನು ಮಾತ್ರ ಅದು ಹೇಗೋ ನಂಬಿ ಉಳಿದವರದನ್ನು ತಿರಸ್ಕರಿಸುತ್ತಾನೆ ಎಂದು ದೇವರಂತಹ ದೇವರ ಕಣ್ಣಿಗೇ ಮಣ್ಣು ಹಾಕಲು ನೋಡುವವರೇ ! ಹೀಗೆಯೇ ಜನ ಗುಜುಗುಡುತ್ತಿರಲು, ತನಗೆ ದೇವರು ಕಾಣಲಿ ಎಂಬುದಕ್ಕಿಂತ ತನಗೊಬ್ಬನಿಗೆ ಮಾತ್ರ ದೇವರು ಕಾಣಲಿ ಎಂದು ಹಂಬಲಿಸುತ್ತಿರಲು ದೇವರು ಪ್ರತ್ಯಕ್ಷನಾಗಿದ್ದ ದಿವ್ಯ ಬೆಳಕಿನ ಹಿನ್ನೆಲೆಯಲ್ಲಿ. ಆದರೆ ಅದಕ್ಕಿಂತ ದೊಡ್ಡ ಆಶ್ಚರ್ಯ ಆಗಿದ್ದು ಅವನ ಪಕ್ಕದಲ್ಲಿ ನಿಂತಿದ್ದ ಲಕ್ಷ್ಮಿಪತಿಯನ್ನು ನೋಡಿ.

ಜನ ಆಶ್ಚರ್ಯದಿಂದ ಬಾಯಿ ತೆಗೆದವರು ಬಾಯ್ ಮುಚ್ಚಿರಲಿಲ್ಲ, ದೇವರು ಮಾತನಾಡತೊಡಗಿದ್ದ "ಭಕ್ತರೇ, ನಿಮಗೆಲ್ಲ ನನ್ನ ಪರಿಚಯ ಮರೆತು ಹೋಗಿರಬೇಕು ಹೋಗಿರಬೇಕು ಅಲ್ವಾ? ಯಾರಿಗೂ ನನ್ನ ಪರಿಚಯ ಸಿಗಲಿಲ್ಲ ನಾನು ದೇವಸ್ಥಾನದ ಹೊರಕ್ಕೆ ಕುಳಿತಿದ್ದರೂ ನೀವಾರೂ ನನ್ನನ್ನು ಗುರುತಿಸಲಿಲ್ಲ. ಅಂದು ನಾನು ನಿಮ್ಮ ಕನಸಿನಲ್ಲಿ ಬಂದಾಗ ಏನೆಂದು ಹೇಳಿದ್ದೆ? ನಿಮ್ಮ ಬಳಿಯಲ್ಲಿರುವ ಅತಿ ಅಮೂಲ್ಯವಾದದ್ದನ್ನು ತೆಗೆದುಕೊಂಡು ಬನ್ನಿ ಎಂದು. ನೀವು ಮಾಡಿದ್ದಾದರೂ ಏನು, ಚಿನ್ನವನ್ನು, ನಗನಾಣ್ಯವನ್ನು, ಧವಸಧಾನ್ಯ್ಗಳನ್ನು ತಂದು ಸುರಿದಿರಿ ನನ್ನ ಮುಂದೆ. ಏಳು ಜಗದ ಒಡೆಯನಾದ ನನಗೇ ಸಂಪತ್ತಿನ ಅವಶ್ಯಕತೆ ಬಂತು ಎಂದುಕೊಂಡಿರೋ ನೀವು? ಹುಚ್ಚಪ್ಪಗಳಿರಾ, ನೀವೇ ನಿಮ್ಮಲ್ಲಿಯೇ ಒಮ್ಮೆ ನನ್ನಲ್ಲಿರುವ ಅತ್ಯಮೂಲ್ಯ ವಸ್ತು ಯಾವುದೆಂದು ಕೇಳಿಕೊಂಡಿದ್ದರೆ ನನ್ನ ಮುಖ ಪರಿಚಯವಾದರೂ ಆಗುತ್ತಿತ್ತು. ನಾನು ನಿಮ್ಮ ಮನಸ್ಸಿನಲ್ಲಿಯೇ ಇದ್ದೆ ಅಮೂರ್ತವಾಗಿ. ಮೌಲ್ಯ ಕಟ್ಟಲಾಗದ ನಿಮ್ಮ ಸುಂದರ ಮನಸ್ಸನ್ನು ಮತ್ತಷ್ಟು ನಿರ್ಮಲಗೊಳಿಸಿಕೊಂಡು ತೆಗೆದುಕೊಂಡು ಬನ್ನಿ ಎಂದು ಬಿಡಿಸಿ ಹೇಳದೇ ಇದ್ದದ್ದು ನನ್ನ ತಪ್ಪೇ?  "

ದೇವರು ಹೀಗೆ ಲೆಕ್ಚರ್ ಕೊಡ್ತಾ ಕೂರ್ತಿದ್ನೇನೋ ಅಷ್ಟ ಹೊತ್ತಿಗೆ ಜಮೀನ್ದಾರ ಮಧ್ಯೆ ಬಾಯಿ ಹಾಕಿದ್ದ "ಅದೆಲ್ಲಾ ಸರಿ, ನಮಗೆ ಪರಿಚಯ ಸಿಗ್ಲಿಲ್ಲ ಅಂತ ನೀನು ಹೇಳಿದ್ರೆ ಒಪ್ಕೊಳೋಣ, ಯಾರ್ಗೂ ಗೊತ್ತಾಗ್ಲಿಲ್ಲ, ಆದ್ರೆ ಎಲ್ಲ ಬಿಟ್ಟು ಈ ಲಕ್ಷ್ಮಿಪತಿನಾ ಏನಕ್ಕೆ ನಿನ್ನ ಪಕ್ಕದಲ್ಲಿ ಕೂರಿಸಿಕೊಂಡಿದೀಯಾ?"  ಜಗದೊಡೆಯನಿಗೆ ಸವಾಲ್ ಹಾಕಿದ್ದ ಊರ ಒಡೆಯ.

ದೇವರು ನಕ್ಕುಬಿಟ್ಟ, ಜಮೀನ್ದಾರನಿಗೆ ನಾನ್ಯಾಕೆ ಈ ಪ್ರಶ್ನೆ ಕೇಳಿದೆನೊ ಎಂದು  ಎನ್ನಿಸುವ ಹಾಗೆ. ದೇವರಿಗೂ ಇಷ್ಟು ವ್ಯಂಗ್ಯ ಬರುತ್ತದೆಯೇ ಎಂದು ಜನರು ತಲೆಕೆಡಿಸಿಕೊಂಡಿರಬೇಕಾದರೆ ನಗುವನ್ನು ನಿಲ್ಲಿಸಿ ಮತ್ತೆ ಮಾತನಾಡತೊಡಗಿದ ಪರಮಾತ್ಮ.
"ಈಗಲೂ ಬಿಟ್ಟಿಲ್ಲ ನೋಡಿ ನಿಮ್ಮ ಚಾಳಿ, ನಾನು ನಿಮ್ಮನ್ನು ಯಾಕೆ ಆಯ್ದುಕೊಳ್ಳಲಿಲ್ಲ  ಎಂಬ ಬಗ್ಗೆ ಅಂತರ್ಮಥನ ಮಾಡಿಕೊಳ್ಳುವುದನ್ನು ಬಿಟ್ಟು ಅವನನ್ನು ಏಕೆ ಆಯ್ದುಕೊಂಡೆ ಎಂಬ ಅಸೂಯಾಭಾವವೇ ನಿಮಗೆ ಮುಖ್ಯವಾಗಿಬಿಟ್ಟಿದೆ. ನಿಮ್ಮ ಶ್ರೇಯಸ್ಸಿಗೆ ನಿಮಗೆ ಹಕ್ಕಿದೆಯೇ ಹೊರತು ಇನ್ನೊಬ್ಬನ ಅವನತಿಗಲ್ಲ ಅಲ್ಲವೇ? ಇರಲಿ ಬಿಡಿ ನಿಮಗೆ ಅರ್ಥವಾಗದೇನೂ ಇರಬಹುದು ನನ್ನ ಮಾತು, ಹಾಗಾದ ಪಕ್ಷದಲ್ಲಿ ನೀವು ಬೇರೆಯೇ ಅರ್ಥವನ್ನೂ ಕಲ್ಪಿಸಿ ಅದು ನನ್ನದೇ ಮಾತೆಂದು ನನಗೇ  ನಂಬಿಸಬಹುದು, ಏನೇ ಇರಲಿ ಯಾಕೆ ಲಕ್ಷ್ಮೀಪತಿಯನ್ನು ಮೆಚ್ಚಿದೆ ಎಂಬುದಕ್ಕೆ ಅವನ ಬಡತನದ ಮಧ್ಯೆಯೂ ಒಂದು ಹಿಡಿ ರಾಗಿ ತಂದ ಎಂಬುದೇ ಕಾರಣ ಅಲ್ಲ. ಅದೂ ಒಂದಿರಬಹುದು ಅಷ್ಟೇ. ನೀವೆಲ್ಲ ನಿಮ್ಮ ನಿಮ್ಮೊಳಗಣ ಸುಳ್ಳನ್ನು ಸತ್ಯ ಎಂದು ಬಿಂಬಿಸುವ ಪ್ರಯತ್ನದಲ್ಲಿ ಅವನ ಬಳಿ ನಾನು ಏನನ್ನೂ ತರಲು ಹೇಳಿಲ್ಲ ಎಂದು ಹಾಸ್ಯವಾಡಿದಿರಲ್ಲ, ಪಾಪ ಮುಗ್ಧ ಲಕ್ಷ್ಮಿಪತಿ ನಂಬಿದ್ದ ಅದನ್ನು. ಹಾಗೆಂದೇ ಕೈ ಬೀಸಿಕೊಂಡು ಬಂದಿದ್ದ, ಆದರೆ ನಿಮ್ಮ ಕಾಣಿಕೆಗಳನ್ನು ನೋಡಿ ಗಾಬರಿ ಬಿದ್ದ ಆತ ಬೇಗನೇ ಮನೆಗೆ ಹೋಗಿ ಮುಂದಿನ ವಾರಕ್ಕೆಂದು ಇಟ್ಟಿದ್ದ ಒಂದು ಹಿಡಿ ರಾಗಿಯನ್ನು ತರಲು ಯೋಚಿಸುತ್ತಾನೆ ಅದೇ ಕಾರಣಕ್ಕೆ ಹೊರಡುತ್ತಾನೆ ಕೂಡ. ಆದರೆ ಅಷ್ಟು ಹೊತ್ತಿಗೆ ಅವನ ಕಣ್ಣಿಗೆ  ಅಲ್ಲಿಯೇ ಮೆಟ್ಟಿಲುಗಳ ಬುಡದಲ್ಲಿ ಕುಳಿತಿದ್ದ ಒಬ್ಬ ಕುಂಟನು ಕಾಣುತ್ತಾನೆ, ನಾನೇ ಆ ಕುಂಟ. ನೀವೆಲ್ಲರೂ ಮೆಟ್ಟಿಲುಗಳನ್ನು ಹತ್ತಿ ಓಡುವಾಗ ನಿಮ್ಮೆಲ್ಲರಲ್ಲಿ ಕೇಳಿಕೊಂಡ ಹಾಗೆ ಅವನ ಬಳಿಯೂ ದಯವಿಟ್ಟು ನನಗೆ ಮೆಟ್ಟಿಲುಗಳನ್ನು ಹತ್ತಲು ಸಹಾಯ ಮಾಡುವಂತೆ ಕೇಳಿದೆ. ನಾನು ತಂದಿರುವ ಕಾಣಿಕೆಯಲ್ಲಿ ಅರ್ಧ ಭಾಗ ಕೊಡುವ ಆಸೆಯನ್ನೂ ತೊರಿಸಿದೆ. ಎರಡು ಸೆಕೆಂಡುಗಳಷ್ಟು ಯೋಚಿಸಿದ ಆತ, "ಕಾಣಿಕೆಯನ್ನು ತರಲು ಹೋಗಲೇ ಅಥವಾ ಈ ಕುಂಟನಿಗೆ ಸಹಾಯ ಮಾಡಲೇ" ಎಂದು , ಕೇವಲ ಎರಡೇ ಸೆಕೆಂಡುಗಳು. "ಅಯ್ಯಾ, ನೀನು ನನಗೆ ಅರ್ಧ ಭಾಗವನ್ನು ಕೊಡುವುದು ಬೇಡ ದೇವಸ್ಥಾನದ ಮೆಟ್ಟಿಲುಗಳನ್ನು ನಾನು ಹತ್ತಿಸುತ್ತೇನೆ. ದೇವರಿಗೆ ಕೊಡಲು ನಾನು ಕಾಣಿಕೆ ತರಬೇಕಿದೆ ಮನೆಗೆ ಹೋಗಿ. ನಾನು ಬರುವುದರೊಳಗೆ ದೇವರು ಪ್ರತ್ಯಕ್ಷನಾದರೆ ಏನು ಮಾಡುವುದು? ನನ್ನನ್ನೇ ಆರಿಸಿಕೊಳ್ಳಲಿ ಎಂದು ಬಯಸುವುದು ಬಹಳೇ ಮಹಾತ್ವಾಕಾಂಕ್ಷೆಯಾದೀತಾದರೂ ಒಮ್ಮೆ ಆತನ ಮುಖವನ್ನು ನೋಡಬೇಕೆಂಬ ಆಸೆಯಿದೆ. ಇರಲಿ ಬಿಡು, ನಿನ್ನನ್ನು ಮೇಲೆ ಹರಿಸಿ ದೇವಸ್ಥಾನದ ಮುಖ್ಯಗಂಟೆಯ ಬಳಿ ಕೂರಿಸಿ ಹೋಗುತ್ತೇನೆ. ದೇವರು ಪ್ರತ್ಯಕ್ಷನಾಗುವ ಹಾಗೆ ಕಂಡುಬಂದರೆ ಮೂರು ಸಲ ಗಂಟೆ ಬಾರಿಸುತ್ತೀಯಾ? ನಾನು ಮನೆಗೆ ಹೋಗುವ ದಾರಿಯಲ್ಲಿದ್ದರೆ ತಿರುಗಿ ಬರುತ್ತೇನೆ . ಅಷ್ಟನ್ನು ಮಾಡುವೆಯಾ ಗೆಳೆಯಾ? ದಯವಿಟ್ಟು ಉಳಿದವರ ಹಾಗೆ ಮೋಸ ಮಾಡಬೇಡ" ಎಂದ. ಇಂತಹ ಮುಗ್ಧನೆದುರು ನನಗೇ ಆ ಕುಂಟನ ಅವತಾರದಲ್ಲಿ ಕೂರುವುದು ಕಷ್ಟವಾಯಿತು, ನೀವು ಜನಗಳು ಹೇಗಾದರೂ ಇರುತ್ತೀರೆನೋ."

ಜನರು ಮುಂದಿನ ವಾದಕ್ಕೆ ಅಣಿಯಾಗುವುದರೊಳಗೆ ದೇವರು ಅಂತರ್ಧಾನನಾಗಿದ್ದ ಲಕ್ಷ್ಮೀಪತಿಯ ಜೊತೆಗೆ.  


ಇದು ಈ ವಾರದ ಪಂಜುವಿನಲ್ಲಿ ಪ್ರಕಟವಾಗಿತ್ತು ದೇವರು ಮೆಚ್ಚಿದ ಭಕ್ತ.  

Monday, 24 June 2013

ಅಪ್ಪ

ಹತ್ತು ದಿನದ ಕೆಳಗೆ ಅಪ್ಪಂದಿರ ದಿನವಿತ್ತು ಎಂದು ಎಲ್ಲಾ ಬ್ಲಾಗಿಗರು ಬ್ಲಾಗನ್ನು ಪೋಸ್ಟ್ ಮಾಡಿದಾಗಲೇ ತಿಳಿದದ್ದು ನನಗೆ. ಅಷ್ಟರ ಮಟ್ಟಿಗೆ ಮರೆತಿದ್ದೇನೆ ಅಪ್ಪನನ್ನು? ಸಾಧ್ಯವೇ ಇಲ್ಲ. ಅಕ್ಷರಶಃ ಪ್ರತಸ್ಮರಣೀಯರಾದ ಅಪ್ಪನನ್ನು ಹಾಗೆ ಮರೆಯಲಾದೀತೇ? ಅಪ್ಪನ ದಿನ ಮಾತ್ರ ಮರೆತು ಹೋಗಿತ್ತು ಅಷ್ಟೇ. ಯಾಕೋ ಏನೋ ಬರೆಯಬೇಕೆಂಬ ಮೂಡು ಬಂದು ಕೂತು ಬಿಟ್ಟಿತ್ತು ತಲೆಯಲ್ಲಿ. ಮೊದಲೇ ಅಪ್ಪನ ಬಗ್ಗೆ ಎರಡು ಬಾರಿ ಬರೆದಿದ್ದೆನಾದರೂ ಬರೆಯಲು ಬೇಕಾದಷ್ಟು ವಿಷಯಗಳಿದ್ದವು ಬಿದಿದ್ ಅಪ್ಪನ ಬಗ್ಗೆ. ಹಾಗೆ ಹುಟ್ಟಿದ್ದು ಈ ಗದ್ಯದಂತಹ ಪದ್ಯ. ಗದ್ಯವೇ ಇದು? ಅಲ್ಲ ಎನಿಸುತ್ತದೆ . ಪದ್ಯವೇ ಇದು? ಮೊದಲೇ ಅಲ್ಲ. ಸ್ವಲ್ಪ ಶಿಸ್ತಿನ ಹಿಡಿತಕ್ಕೊಳಪಡಿಸಿದ ಭಾವಗಳು ಅಷ್ಟೇ ಇವು, ಗದ್ಯಪದ್ಯವೆಂಬ ಭೇಧವಿಲ್ಲದೆ. 

ಅಪ್ಪಾ ನೆನಪಿದೆಯೇ ನಿನಗೆ ,
ದವಾಖಾನೆಯ ವಾಸನೆಯ ನಡುವೆ ಮೊದಲ ಬಾರಿ ಮುತ್ತು ಸುರಿದಂತೆ ನಾನತ್ತಿದ್ದು;
ಕಿಟಕಿಯ ಪಕ್ಕದ ಹಾಸಿಗೆಯ ಗಡಿಯಲ್ಲಿ ಅಂಗಾತದಿಂದ ನಾನು ಮಗ್ಗುಲು ಬದಲಿಸಿದ್ದು;
ಜಾತ್ರೆಯ ಮನೆಯ ಗದ್ದಲದ ಅಂಗಳದಲ್ಲಿ ಅಳುಕುತ್ತಾ ನಾ ಮೊದಲ ಹೆಜ್ಜೆ ಹಾಕಿದ್ದು* ;
ಅಜ್ಜನ ಮನೆಯ ಚಾವಡಿಯಲ್ಲಿ ಮಲಗಿಸಿ, ಪೂರ್ತಿ ಮಳೆಗಾಲಕ್ಕೊಂದು ಬಾಯ್ ಹೇಳಿದ್ದು**.
ಹೋಗಲಿ ಬಿಡು, ನೆನಪಿರಲಿಕ್ಕಿಲ್ಲ ನಿನಗೆ; ಹೇಗಾದರೂ ನೆನಪಿದ್ದೀತು ಈ ಚಿಲ್ಲರೆ ಘಟನೆಗಳು,
ನನ್ನ ನಾಳೆಗಳಿಗಾಗಿ ನಿನ್ನ ವರ್ತಮಾನವ ಅರ್ಪಿಸುವ ನಿನ್ನ ಬಿಡುವಿಲ್ಲದ ಚಟದ ಮಧ್ಯೆ. ॥೧॥


ಅಪ್ಪಾ ಗಮನಿಸಿದ್ದೆಯೇ ನೀನು,
ಕೂಸುಮರಿಯಾಗಿ ನಿನ್ನ ಬೆನ್ನು ಹತ್ತಲೆಂದೇ ಎಷ್ಟೋ ಸಲ ನಾ ಊಟ ಬೇಡವೆಂದಿದ್ದು;
ಕೋಪದ ಕೆಂಪುಕಣ್ಣಿಗೆ ಹೆದರಿ ಬೇಡವೆಂದಾಗಲೂ ಮುದುರಿ ಊಟಕ್ಕೆ ಬಂದು ಕೂತಿದ್ದು
ಶಾಲೆಯ ಮೊದಲ ದಿನ ಹುಡುಗು ಬುದ್ದಿಗೆ ನೀ ಬಾರಿಸಿದಾಗಲೂ ನಾ ಹಲ್ಲು ಕಚ್ಚಿ ನಿಂತಿದ್ದು;
ಊರಿಡೀ ನನ್ನ ಹೊಗಳಿದಾಗಲೂ ನಿನ್ನೊಂದು ನಗೆಯ ಕೊಡುಗೆಗಾಗಿ ನಾನು ಹಂಬಲಿಸಿದ್ದು;
ಇರಲಿಕ್ಕಿಲ್ಲ ಬಿಡು, ಗೊತ್ತಿರಲಿಕ್ಕಿಲ್ಲ ನಿನಗೆ; ನನ್ನ ಈ ಸಣ್ಣ ಕೋರಿಕೆಗಳು ಕನವರಿಕೆಗಳು ;
ಮಗನೆಂಬ ಕನಸನ್ನು ಹಗಲು ರಾತ್ರಿಯೆಂದೆಣಿಸದೆ ಕಂಡ ನಿನ್ನ ಹುಚ್ಚುತನದ ಮಧ್ಯೆ ॥೨॥

ಅಪ್ಪಾ ಗೊತ್ತಿದೆಯೇ ನಿನಗೆ ,
ನೀ ಹೇಳಿದ ಎಲ್ಲ ಆದರ್ಶಪುರುಶರ ಕಥೆಗಳಿಗಿಂತ ನನಗೆ ನಿನ್ನ ಕಥೆಯೇ ಸ್ಪೂರ್ತಿಯಾಗಿದ್ದು;
ನಿನಗೇ ತಿಳಿಯದ ಹಾಗೆ ನಿನ್ನ ಬದುಕ ಕಟ್ಟಿಕೊಂಡಿದ್ದಲ್ಲದೇ ನಮ್ಮ ಬದುಕನೂ ಕಟ್ಟಿಕೊಟ್ಟಿದ್ದು;
ಅಪ್ಪನ ಕಂಡ ನೆನಪಿಲ್ಲದ ನೀನು ನನ್ನ ಮಟ್ಟಿಗೆ ಜಗತ್ತಿನ  ಅತಿ ಆದರ್ಶ ಅಪ್ಪನಾಗಿರುವುದು;
ಒರಟುತನದಲ್ಲಿ ಮುಚ್ಚಿಟ್ಟಷ್ಟೂ ನಿನ್ನ ಪ್ರೀತಿ ; ಹೃದಯಕ್ಕೆ ವ್ಯಕ್ತವಾದದ್ದು ಮತ್ತೆ ಹತ್ತಿರವಾದದ್ದು;
ಯಾವುದರ ಬಗೆಗಾದರೂ ಕಲ್ಪನೆಯಿತ್ತೇ ನಿನಗೆ; ಬಂದೇ ಇರಲಿಕ್ಕಿಲ್ಲ ಬಿಡು ಈ ಆಲೊಚನೆಗಳು;
ಗೊತ್ತಾಗಿ ನಿನಗಾದರೂ ಏನಾಗಬೇಕಿದೆ ನನ್ನ ಭವಿಷ್ಯದ ನಿನ್ನದೇ ಯೋಚನೆಗಳ ಮಧ್ಯೆ ॥೩॥

ಟಿಪ್ಪಣಿಗಳು:

*ನಾನು  ನಡಿಗೆ ಕಲಿತದ್ದು ಅತಿ ತಡವಾಗಿ. ಅಜ್ಜನ ಮನೆಯಿದ್ದ ಊರಲ್ಲಿ ಜಾತ್ರೆಯಿದ್ದಾಗ, ಪೌರೋಹಿತ್ಯದ ಮನೆಯ ಗಡಿಬಿಡಿಅಲ್ಲಿ ಎಲ್ಲ ಓಡಾಡುತ್ತಿದ್ದಾಗ ಯಾರಿಗೂ ಕಾಣದಂತೆ ಚಪ್ಪರಕ್ಕೆ ಕಟ್ಟಿದ್ದ ಕಂಬಗಳ ಮಧ್ಯೆ ನದೆದಿದ್ದೆನಂತೆ ನಾನು.

** ಅಪ್ಪ ಅಮ್ಮ ಇಬ್ಬರೂ ಶಿಕ್ಷಕರಿದ್ದುದರಿಂದ, ಶಿರಸಿಯಂತ ಶಿರಸಿಯೆಂಬ ಮಲೆನಾಡಿನಲ್ಲಿ  ನನ್ನನ್ನು ಶಾಲೆಗೇ ಕರೆದುಕೊಂಡು ಹೋಗುವುದು ಇಬ್ಬರಿಗೂ ಅಸಾಧ್ಯಾವಿದ್ದುದರಿಂದ ನನ್ನನ್ನು ಕಡಲತಡಿಯ ಕುಂದಾಪುರದಲ್ಲಿ ಅಜ್ಜನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು ಮೇ ತಿಂಗಳ ಕೊನೆಯಲ್ಲಿ ಒಂದು ದಿನ ನನ್ನನ್ನು ಮಲಗಿಸಿ ಬರುವಾಗ ದೊಡ್ಡ ಮಾವಿನ ಹಣ್ಣನ್ನು ತರುತ್ತೇವೆ ಎಂದು ಹೇಳಿ  ಹೋಗುತ್ತಿದ್ದ ಅಪ್ಪನನ್ನು ಮತ್ತೆ ನೋಡುತ್ತಿದ್ದುದು ನಾನು ಅಕ್ಟೊಬರ್ ರಜೆಯಲ್ಲಿಯೇ.