Sunday 6 February 2011

ಕನ್ನಡ ಸಾಹಿತ್ಯ ಸಮ್ಮೇಳನ - ಒಂದು ಅನುಭವ ,ಒಂದು ಚಿಂತನೆ


"ನಾಳೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೊಗ್ತಾ ಇದ್ದೇನೆ ,ಬರ್ತೀಯಾ?"
"mad o what dude "
ಇದು ನನ್ನ ಒಬ್ಬ ಕನ್ನಡಿಗ ಮಿತ್ರ , ಅವನ ಗೆಳೆಯನೊಬ್ಬನನ್ನು(ಅವನೂ ಕನ್ನಡಿಗನೇ!!! ) ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದಾಗ ಸಿಕ್ಕಿದ ಉತ್ತರ . ಈ ವಿಷಯಕ್ಕೆ ಮತ್ತೆ ಬರೋಣ, ಈಗ ಕನ್ನಡದ ನುಡಿಹಬ್ಬವನ್ನು ಆಚರಿಸೋಣ.ಬೆಂದಕಾಳೂರಿಗೆ ೩೦ ವರ್ಷಗಳ ನಂತರ ಬಂದಿರುವ ಕನ್ನಡದ ರಥವನ್ನು ಸ್ವಾಗತಿಸೋಣ , ಎಂದೆಲ್ಲಾ ಹೇಳಿಕೊಂಡು ಹೋಗಿದ್ದೆವು ಕನ್ನಡದ ಸಾಹಿತ್ಯ ಸಮ್ಮೇಳನಕ್ಕೆ.
ನಡುಮಧ್ಯಾಹ್ನದ ಬಿಸಿಲಿನಲ್ಲಿ national collegeನ ಮೈದಾನದ ಒಳ ಹೊಕ್ಕವರು ಮೊದಲು ಅರಸಿದ್ದು , ಕಂಡದ್ದು ಪುಸ್ತಕ ಪ್ರದರ್ಶನವನ್ನು. ಕನ್ನಡ ಪುಸ್ತಕಗಳೆಂದರೆ ಬಾಯ್ಬಿಡುವ ನನಗೆ ಸ್ವರ್ಗವೇ ಭೂಮಿಗೆ ಬಂದಂತಿತ್ತು , ಅಲ್ಲಿನ ಪುಸ್ತಕ ಮಳಿಗೆಗಳನ್ನು ನೋಡಿ. ನಿಜಕ್ಕೂ  ಮನದಣಿಯೆ ನೋಡಿ ಖುಷಿ ಪಡುವಷ್ಟು ಪುಸ್ತಕಗಳು ,  frequent ಆಗಿ ಕಿವಿಗೆ  ಬೀಳುತ್ತಿದ್ದ ಕನ್ನಡ ಸಂಭಾಷಣೆಗಳು ( ಊರಿನ ವಾತಾವರಣವನ್ನು ನೆನಪಿಸುವಷ್ಟು ) , ರಿಯಾಯಿತಿಯೇನೂ ಅಲ್ಲದೇ ಹೋದರೂ ರಿಯಾಯಿತಿ ಎನ್ನಿಸುವ ಆಕರ್ಷಕ offerಗಳು ಎಲ್ಲಾ ಅದ್ಭುತವಾಗಿ ಕಂಡಿದ್ದು ಆಶ್ಚರ್ಯವೇನೂ ಅಲ್ಲ .ಆದರೆ ಅದ್ಭುತಗಳೂ ಅತಿಶಯಗಳೂ ಈ ಸಮ್ಮೇಳನದ ಮಟ್ಟಿಗೆ ಅಲ್ಲಿಗೇ ಮುಗಿದು ಹೋಗಿದ್ದು ದುರಂತ . ಪುಸ್ತಕ ಪ್ರದರ್ಶನದ ಹೆಚ್. ನರಸಿಂಹಯ್ಯ ಮಹಾದ್ವಾರದಿಂದ ಹೊರಬಂದು ಸಮ್ಮೇಳನದ ಸಭಾಂಗಣದ ಕೆಂಪೇಗೌಡ ಮಹಾದ್ವಾರವನ್ನು(ಅವುಗಳ ಮಧ್ಯದ ಅಂತರ ೧೦ಮೀ ಅಷ್ಟೇ !! ) ಪ್ರವೇಶಿಸುವುದರ ಒಳಗೆ ಉಸಿರು ಹಿಡಿದುಕೊಳ್ಳುವಷ್ಟು ಸಾಕಾಗಿತ್ತು. ಹೇಗೋ ಕಷ್ಟ ಪಟ್ಟು ಜನಜಂಗುಳಿಯ ಮಧ್ಯೆ ಹೋಗಿ ನಿಂತರೆ , ಕನ್ನಡ ಕಂಡ ಒಬ್ಬ ಅತ್ಯುತ್ತಮ ದೂರದರ್ಶನ ನಿರೂಪಕಿ ಅಪರ್ಣ ಹಾಗೂ ಚಂದನದ ಮಹೇಶ್ ಜೋಷಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು . ನಾಡಗೀತೆಗೆ ಚಪ್ಪಾಳೆ ಹೊಡೆವಂತ ಅಪಭೃಂಶವಾದರೂ , ಕಾರ್ಯಕ್ರಮವನ್ನು ನೋಡಲು ಅಕ್ಷರಶಃ ಸಾವಿರಾರು ಜನರು ನಿಂತಿದ್ದರೂ ಅವರಿಗೆ ತೊಂದರೆಯಾದೀತೆಂದು ಲೆಕ್ಕಿಸದೇ ಓಡಿಯಾಡಿದ chips , biscuits ಮಾರಾಟಗಾರರ ಹಪಾಹಪಿ ಕಿರಿಕಿರಿಯಾದರೂ , ಹಾಡು-ಕುಣಿತವಾಗಿ ಬಂದ ಕುವೆಂಪುರವರ ಎರಡು ಉನ್ನತ ಕೊಡುಗೆಗಳಾದ ನಾಡಗೀತೆ , ರೈತಗೀತೆಗಳು ಒಮ್ಮೆ ಎಲ್ಲರನ್ನು ರೋಮಾಂಚನಗೊಳಿಸಿದ್ದನ್ನು ಯಾವ ಕನ್ನಡಿಗನೂ ಅಲ್ಲಗಳೆಯಲಾರ. ಆದರೂ ಬೆಜಾರಿಗೆ ಕಾರಣವಾಗುತ್ತಿದುದೆಂದರೆ ನಮ್ಮ ಆಸೆಬುರುಕ ರಾಜಕಾರಣಗಳಿಗೆ ಸಿಗುತ್ತಿದ್ದ ಮಹತ್ವ - ಯಾವ ಸಾಹಿತಿಗೂ ಸಿಗದ  ಜೈಕಾರ , ಚಪ್ಪಾಳೆಗಳು ನಮ್ಮ ಸ್ವಘೋಷಿತ ’ ಜನಪ್ರಿಯ ’ ರಾಜಕಾರಣಿಗಳಿಗೆ ದೊರಕಿದ್ದು ನನ್ನ ಪ್ರಕಾರ ಸಾಹಿತ್ಯದ ಘೋರ ವೈಫಲ್ಯವೇ.  ನಮ್ಮ ಮಾನ್ಯ ಮಂತ್ರಿವರ್ಯರೊಬ್ಬರು "ಪಕ್ಷಭೇದ ಮರೆತು ಒಂದೇ ವೇದಿಕೆಯನ್ನು ಹಂಚಿಕೊಂಡ ತಮ್ಮ ಸಹೋದ್ಯೋಗಿ" ಗಳ ಹೃದಯವೈಶಾಲ್ಯತೆಯನ್ನು ಮೆಚ್ಚಿ ಹೊಗಳಿದ್ದಕ್ಕೆ ಎಲ್ಲರೂ ಮುಸಿ ಮುಸಿ ನಕ್ಕರೋ ಅಥವಾ ನನಗೆ ಮಾತ್ರ ಹಾಗೆನಿಸಿತೋ ನಾನು ತಿಳಿಯಲಿಲ್ಲ. ( "ಇರಬೆಕಾದದ್ದು ಇರಬೇಕಾದ ಕಡೆ ಇಲ್ಲದೇ ಹೋದರೆ ,ಇರಕೂಡದ ಕಡೆ ಏನಾದರೂ ಇದ್ದರೆ ಅದು ಕಸ" ಎಂದು ಕೈಲಾಸಂ ವ್ಯಾಖ್ಯಾನಿಸಿದ್ದರು ಎಂಬ ನೆನಪು,  ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳು ಕಸವೇ ಅಥವಾ ಮತ್ತೇನೋ ಕೈಲಾಸಮ್ಮೇ ಹೇಳಬೇಕು.)
ಅಷ್ಟು ಹೊತ್ತಿಗಾಗಲೇ ಮಧ್ಯಾಹ್ನದ ಊಟದ ಹೊತ್ತು ದಾಟಿ ಹೊಟ್ಟೆ ತಾಳ ಹಾಕುತ್ತಿದ್ದುದರಿಂದಲೋ , ಹಿಂದಿನ ಉಡುಪಿ ಸಮ್ಮೇಳನದ ಭೋಜನ ವ್ಯವಸ್ಥೆಯ ಯಶಸ್ಸಿನ ಕಥೆಗಳಿಂದ ಪ್ರಭಾವಿತವಾಗಿಯೋ ನಾನು ತಿರುಗಿ ಹೋಗುವ ಗೆಳೆಯರ ಮಾತಿಗೆ ಜಗ್ಗದೇ ಭೋಜನದ (ಅ?)ವ್ಯವಸ್ಥೆಯಿದ್ದ ’ಮಕ್ಕಳ ಕೂಟ’ ಕಡೆಗೆ ಹೆಜ್ಜೆ ಹಾಕಿದೆ, ಗೆಳೆಯರನ್ನೂ ಕರೆದುಕೊಂಡು. ಪ್ರಾಯ ಕಳೆದರೂ ಪ್ರೌಢರಾಗದ ( ಗೆಳೆಯ ರಾಹುಲ್ ನ ಆಂಗ್ಲ ಪದಪ್ರಯೋಗ ’grown ups who are yet to grow up' ಕನ್ನಡೀಕರಣ ) ಜನರ ಅಕಾರಣ ಆತುರವೋ, ’ಸರದಿಯ ಸಾಲು’ (queue) ಎಂಬುದರ ಅರ್ಥ ತಿಳಿಯದ , ತಿಳಿದರೂ ತಿಳಿಯದಂತಿರುವ ಪ್ರಜೆಗಳ ಜಾಣಮೂರ್ಖತ್ವವೋ, ಸಮ್ಮೇಳನದ ಸಂಘಟಕರ ವ್ಯವಸ್ಥೆಯಲ್ಲಾದಲೋಪವೋ , ಅಥವಾ ನಮ್ಮ ಬೆಂದಕಾಳೂರಿನ ’traffic ನ ಪ್ರಭಾವವೋ ಒಟ್ಟಾರೆಯಾಗಿ ಊಟದ ವ್ಯವಸ್ಥೆ ದೊಡ್ಡ ಅಧ್ವಾನವಾಗಿ ಹೋಗಿತ್ತು . ಅನ್ನವಿದ್ದಾಗ plate ಇಲ್ಲದೇ , plate ಸಿಕ್ಕಿದಾಗ ಅನ್ನವಿಲ್ಲದೇ ,ಎರಡೂ ಸಿಕ್ಕಿದಾಗ ಸಾಂಬಾರ್ ಖಾಲಿಯಾಗಿ ಅನುಭವಿಸಿದ ಹಸಿವೆಗೆ ಅದಕ್ಕಿಂತ ದೊಡ್ಡದಾದ frustration ಗೆ , ಇವೆಲ್ಲದರ ಮಧ್ಯೆ ಅನಾಗರೀಕವಾಗಿ ನಡೆದುಕೊಳ್ಳುತ್ತಿದ್ದ ನಾಗರೀಕರ ಮನಸ್ಥಿತಿಗೆ ಎಂತಹವರೂ ರೋಸಿ ಹೋಗದೇ ಇರಲಾರರು. ಬೆಂಗಳೂರಿನ trafficನ ಅವಾಂತರಕ್ಕೆ ಬಲಿಯಾಗಿ ಪದಾರ್ಥಗಳನ್ನು ಮುಟ್ಟಿಸಲಾರದೇ ಹೊದ cateringನವರ ತಪ್ಪಾ?, ಸಾಲನ್ನು ತಪ್ಪಿಸಿ ನುಗ್ಗಿ ಬರುತ್ತಿದ್ದ ಜನರನ್ನು ನಿಯಂತ್ರಿಸಲಾರದೇ ಅಸಹಾಯಕ ಪ್ರೇಕ್ಷಕರಾದ ,ಕನ್ನಡದ ಸೇವೆ ಎಂದು ನಿಸ್ವಾರ್ಥವಾಗಿ ದುಡಿದ ಸ್ವಯಂಸೇವಕರ,ಸಂಘಟಕರ ತಪ್ಪಾ? ಮತ್ತಾವ ಕಾರಣವೂ ಇಲ್ಲದೇ ಕೇವಲ ಕನ್ನಡದ ನುಡಿಜಾತ್ರೆ ಎಂದು ನಾಡಿನ ವಿವಿಧ ಭಾಗಗಳಿಂದ ರಾಜಧಾನಿಗೆ ಬಂದು , ಒಂದು ಊಟಕ್ಕೂ ಕಷ್ಟಪಡಬೇಕಾಗಿ ಬಂದಾಗ ಉಂಟಾದ ಹತಾಷೆಯಿಂದ ಕನಲಿದರೂ ದಾಂಧಲೆಮಾಡದ ಕನ್ನಡಾಭಿಮಾನಿಗಳ ತಪ್ಪಾ? ಒಂದು breking news ಕೊಡುವ ಭರದಲ್ಲಿ ತಾವು ಜನರಿಗೆ ಮತ್ತಿಷ್ಟು ತೊಂದರೆ ಕೊಡುತ್ತಿದ್ದೇವೆ ಎಂಬುದನ್ನು ಗಮನಿಸದೇ ಹೋದ ದೂರದರ್ಶನ ವರದಿಗಾರರ ತಪ್ಪಾ? apparently, 'no one killed jessica' , ಎಂದರೆ ಯಾರೊಬ್ಬರದ್ದೂ ತಪ್ಪಲ್ಲ,ಎಲ್ಲರದ್ದೂ ತಪ್ಪು . ೨:೧೫ನಿಂದ ೩:೪೫ ವರೆಗೆ ಕಾದ ಮೇಲೂ ಊಟ ಸಿಕ್ಕದೇ ಹೋದಾಗ ಉಂಟಾಗುವ ಹತಾಶೆ , ಆಕ್ರೋಶಗಳಿವೆಯಲ್ಲಾ ಅವುಗಳು ಸಾಹಿತ್ಯದ ಬಗೆಗಿನ ಅತ್ಯಂತ ಗಹನ ಆಸಕ್ತಿಯನ್ನೂ ತಿಂದು ಹಾಕಿ ಬಿಡಬಲ್ಲದು, ಅಷ್ಟಕ್ಕೂ ಯಾವುದೇ ಲಲಿತಕಲೆಯಾದರೂ ಅಗತ್ಯವೆನಿಸುವುದು ಹೊಟ್ಟೆ ತುಂಬಿದ ಮೇಲಷ್ಟೇ?  ಹೀಗೆ ಯಾರ ಮೇಲೆಂದು ಸ್ಪಷ್ಟವಾಗಿರದ ಒಂದು ಕ್ರೋಧ ಹುಟ್ಟಿ ಮನೆಗೆ ವಾಪಸ್ ಹೊರಟಾಗ ಮಧ್ಯಾಹ್ನ ೪:೨೦. ನಾನೇಕೆ ಇಷ್ಟೆಲ್ಲಾ ಊಟದ ವ್ಯವಸ್ಥೆಯ ಬಗ್ಗೆ ಬರೆದೆನೆಂದರೆ ಅದರಲ್ಲಿ ಅಷ್ಟರ ಮಟ್ಟಿಗೆ ಸುಧಾರಣೆ ಸಾಧ್ಯವಿತ್ತು ಎಂದೇ ಹೊರತು ಬೇರಾವ ಕಾರಣದಿಂದಲೂ ಅಲ್ಲ.
ಈಗ ಮತ್ತೆ ಮೊದಲು ಹೇಳಿದ " mad o wat ?" ಪ್ರಸಂಗಕ್ಕೆ ಬರೋಣ , " ಏಕೆ ಹೀಗಾಗುತ್ತಿದೆ ? ನಮ್ಮ ಕನ್ನಡದ ಸಮ್ಮೇಳನ ಎಂಬ ಭಾವನೆ ಏಕೆ ನಮಗೆ ಬರುತ್ತಿಲ್ಲ , ಬರುವುದಿಲ್ಲ . ಎಲ್ಲಿ ವಿಫಲವಾಗುತ್ತಿದೆ ಕನ್ನಡ , ಕನ್ನಡತನ? " ಎಂದೆಲ್ಲಾ ಯೋಚಿಸುವ ಮೊದಲು ಸಮ್ಮೇಳನಕ್ಕೆ ಹೋಗಿ ನನಗೆ ಮಾಡಲಾಗಿದ್ದಾದರೂ ಏನು ? ಎರಡು ಪುಸ್ತಕಗಳನ್ನು ತೆಗೆದುಕೊಂಡೆ ಎಂಬುದನ್ನು ಬಿಟ್ಟರೆ ಯಾವ ಪುರುಷಾರ್ಥಸಾಧನೆಯಾಯಿತು ನಾನು ಅಲ್ಲಿಗೆ ಹೋಗಿ ? ನಾನು ಅಲ್ಲಿ ಕಂಡದ್ದನ್ನೆಲ್ಲವನ್ನೂ ನಾನು ಕಂಡದ್ದಕ್ಕಿಂತ ಬಹಳೇ ಸ್ಪುಟವಾಗಿ ಮನೆಯಲ್ಲಿ ಕೂತೇ ಕಾಣಬಹುದಾದ ಅವಕಾಶವನ್ನು ದೂರದರ್ಶನ ತಂದುಕೊಟ್ಟಿಲ್ಲವೇ ? ಈ blog ಬರೆಯುವಷ್ಟು ಸಿಟ್ಟು ಬಂತೆಂಬದನ್ನು ಬಿಟ್ಟರೆ ಮತ್ತಾವ ಉಪಯೋಗವೂ ಕಂಡುಬಂದಿಲ್ಲ . ಇನ್ನು metro ಆಗುವ ಆತುರದಲ್ಲಿ ಕನ್ನಡವೇ ಕಳೆದು ಹೋಗುವ ಸ್ಥಿತಿಯಲ್ಲಿರುವಾಗ ಸಾಹಿತ್ಯ ಸಮ್ಮೇಳನ ಹೇಗೆ ಮುಂದಿನ ಪೀಳಿಗೆಯವರಲ್ಲಿ ಉತ್ಸಾಹ ಹುಟ್ಟಿಸಬಹುದು. national college ನ ಮೈದಾನ ತುಂಬಿ ಹೋಗುವಷ್ಟು ಜನರಿದ್ದದ್ದು ಹೌದಾದರೂ ಅದರಲ್ಲಿ ಯುವಜನಾಂಗದ ಪಾಲು ಗಣನೀಯವಾಗಿ ಕಡಿಮೆ. ಪುಸ್ತಕ ಪ್ರದರ್ಶನದಲ್ಲಿಯೂ , ಓದುವ ಚಟಕ್ಕೆ ಬಿದ್ದ ಹಳೆ ತಲೆಮಾರಿನ ಹಿರಿಯರೆದುರು ಉಳಿದವರ ಸಂಖ್ಯೆ ಬೆರಳೆಣಿಕೆ ಎನ್ನಿಸುವಷ್ಟಿತ್ತು.  ಈ ಸಂಗತಿಗಳೆಲ್ಲಾ ಆತಂಕ , ಹೋಗಲಿ ಒಂದು ಬೇಜಾರನ್ನೂ ನಮ್ಮಲ್ಲಿ ಮೂಡಿಸಲಾರದೇ ?
ಮತ್ತೊಮ್ಮೆ ಹಿಂದೊಮ್ಮೆ ಬಳಸಿದ್ದ ಅದೇ ವಾಕ್ಯವನ್ನು ಮತ್ತೊಮ್ಮೆ ಉಚ್ಛರಿಸುತ್ತಾ , "ಯಾವುದೇ ಭಾಷೆ , ಸಂಸ್ಕೃತಿ ಉಳಿಯುವುದು ಅದಕ್ಕಾಗಿ ’ಅರ್ಥವಿಲ್ಲದೇ’ ಹೋರಾಡುವುದರಿಂದಾಗಲೀ , ನಾನು ಅದರ ಅಭಿಮಾನಿ ಎಂದು ಹೇಳಿಕೊಳ್ಳೂವುದರಿಂದಾಗಲೀ ಅಲ್ಲ , ಅದರನ್ನು ದಿನನಿತ್ಯದ ಜೀವನದಲ್ಲಿ ಬಳಸುವುದರಿಂದ " ಎಂದು ಹೇಳಿ ಇದಕ್ಕೆ " ಸಂಸ್ಕೃತವೇ ಅತ್ಯುತ್ತಮ ಉದಾಹರಣೆ " ಎಂದಕೊಂಡು ಈ ಲೇಖನಕ್ಕೆ ಅಂತ್ಯ ಹೇಳುತ್ತಿದ್ದೇನೆ.