Friday, 2 August 2013

ದೇವರು ಮೆಚ್ಚಿದ ಭಕ್ತ

ಟಿಪ್ಪಣಿ :

ಚಿಕ್ಕ ಮಕ್ಕಳ ನೀತಿ ಕಥೆ ಎನ್ನಿಸಬಹುದು, ಆದರೆ ದೇವರು ಎಂದರೆ ಇದೇ ಎಂದು ನಂಬಿರುವವನು ನಾನು. ಯಾರಾದರೂ ದೇವರನ್ನು ನಂಬುತ್ತೀಯಾ  ಎಂದು ಕೇಳಿದಾಗ ಹೌದು ಎನ್ನುವವನು ನಾನು. 'Do good, get Good' ಎನ್ನುವುದೇ ದೇವರ ಸೂತ್ರ ಎನ್ನುವುದು ನನ್ನ ಉದ್ದೇಶ ಅಷ್ಟೇ. ವೈಯಕ್ತಿಕವಾಗಿ ಅಕಾರಣವಾಗಿ ಇಷ್ಟ ಆದ ಕಥೆ.  ಇಲ್ಲಿಯವರೆಗೂ ಓದುವಷ್ಟು ತಾಳ್ಮೆ ಉಳಿದಿದ್ದರೆ ನಿಮ್ಮ ಅಭಿಪ್ರಾಯ ತಿಳಿಸಿ :)
------------------------------------------------------------------------------------------------------------
ಅದೊಂದು ಊರು, ಆ ಊರಿನಲ್ಲಿ ಒಂದು ದೇವಸ್ಥಾನ. ಆ ದೇವಸ್ಥಾನಕ್ಕೆ ಒಬ್ಬ ದೇವರು. ಎಲ್ಲಾ ಊರುಗಳ ಎಲ್ಲ ದೇವರುಗಳಂತೆ ಭಕ್ತಗಣಗಳಿಂದ ಸೇವೆ ಮಾಡಿಸಿಕೊಂಡು, ಹಣ್ಣು ಕಾಯಿಗಳನ್ನು ತನ್ನ ಹೆಸರಿನಲ್ಲಿ ಅರ್ಪಿಸಿ ಭ(ಭಂ)ಜಿಸುತ್ತಿರುವ ಜನಸಮೂಹವನ್ನು ಕಂಡು ಒಳಗೊಳಗೆ ನಗುತ್ತಿರುವ ಸರ್ವಜ್ಞ, ಸರ್ವಾಂತರ್ಯಾಮಿ, ಸರ್ವಶಕ್ತ ಆತ.

ಎಲ್ಲವೂ ಹೀಗೇ ಇರಲು, ಕಾಲಚಕ್ರ ಸುಮ್ಮನೇ ಉರುಳುತ್ತಿರಲು, ದೇವನಿಗೆ ಒಂದು ದಿನ ಜಗಜ್ಜನಿತವಾದ ತನ್ನ ಮಾಮೂಲು ಮೂಕ ಧಾಟಿಯನ್ನು ಮೀರಿ ತನ್ನೂರಿನ ಒಬ್ಬ ಶ್ರೀಸಾಮಾನ್ಯನ ಬಳಿ ಒಂದಿಷ್ಟು ಸಮಯ ಕಳೆಯುವ ಮನಸ್ಸು ಮೂಡಿತು. ಸಮಯ ಇದ್ದಿದ್ದರೆ ಎಲ್ಲ ಭಕ್ತರನ್ನೂ ಭೇಟಿಯಾಗಿ ಬಿದುತ್ತಿದ್ದನೇನೋ ಪರಮಾತ್ಮ, ಆದರೆ ಈ ಭೂಮಿಯ ಮತ್ತು ಈ ಭೂಮಿಯಂತದ್ದೇ ಅದೆಷ್ಟೋ ಲೋಕಗಳ ಸೃಷ್ಟಿ ಸ್ಥಿತಿ ಲಯಗಳ ಹೊಣೆಹೊತ್ತ ಪರಮಾತ್ಮನಿಗೆ ಅಷ್ಟೆಲ್ಲಾ ಸಮಯ ಸಿಕ್ಕಿತಾದರೂ ಹೇಗೆ? ಅದಕ್ಕೆ ಈಗಿನ ಕಾಲದ ಚುನಾವಣೆ ಕಾಲದ ಗಿರ್ಮಿಟ್ ನಂತಲ್ಲದೇ ನಿಜವಾಗಿ ಒಬ್ಬ ಸದ್ಭಕ್ತನನ್ನು ಭೇಟಿ ಮಾಡುವ ನೈಜಭಾವ ಮೂಡಿತ್ತು ಆಗಿನ ಕಾಲದ ಆ ದೇವರಿಗೆ. ಸರಿ, ಆಯ್ತು ಯಾರನ್ನು ಭೇಟಿ ಮಾಡೋದು ಎಂದು ತೀರ್ಮಾನಿಸಬೇಕಲ್ಲಾ? ಆ ದಿನ ರಾಂಡಮ್ ಆಗಿ ಆಯ್ಕೆ ಮಾಡಿದ ಒಂದು ಊರಿನ ಎಲ್ಲರ ಕನಸಿನೊಳಗೂ ದೇವರು ಬಂದಿದ್ದ. "ಮುಂದಿನ ಸೋಮವಾರ ನಿಮ್ಮ ಊರ ದೇವಸ್ಥಾನದಲ್ಲಿ ಪ್ರತ್ಯಕ್ಷನಾಗುತ್ತೇನೆ ನಾನು. ಅಂದು ನನಗೆ ಅತ್ಯುತ್ತಮ ಕಾಣಿಕೆಯನ್ನು ತರುವ ಒಬ್ಬ ಸದ್ಭಕ್ತನ ಜೊತೆ ಒಂದು ದಿನವನ್ನು ಕಳೆಯುತ್ತೇನೆ ನಾನು. (ಈ ಕಾಲದ ಲಿಮಿಟೆಡ್ ಆಫರ್ ಗಳನ್ನು ಹೇಳುತ್ತಾರಲ್ಲಾ ಆ ಧಾಟಿಯಲ್ಲಿ) ಆದ್ದರಿಂದ ಯೋಚಿಸಿ ನನಗೇನು ಇಷ್ಟವೋ ಅದನ್ನು ತೆಗೆದುಕೊಂಡು ಬನ್ನಿ " ಎಂದಷ್ಟೇ ಹೇಳಿ ಮತ್ತೆ ತನ್ನ ಅಗೋಚರ ಮೋಡ್ ಗೆ ಹೋದ ಪರಮಾತ್ಮ.

ಮಾರನೆಯ ದಿನ ಬೆಳಿಗ್ಗೆ ಎದ್ದ ಜನರೆಲ್ಲರಿಗೂ ನಿನ್ನೆ ಕಂಡದ್ದು ಕನಸೋ ನಿಜವೋ ಎಂಬ ಬಗ್ಗೆ ಭಯಂಕರ ಗೊಂದಲ. ಒಬ್ಬ ದೇವರನ್ನು ಶಂಕ್ರಚಕ್ರಧಾರಿಯನ್ನು ನೋಡಿದ್ದರೆ ಮತ್ತೊಬ್ಬ ಅದೇ ದೇವರನ್ನು ಬೂದಿ ಬಡಿದುಕೊಂಡ ಸ್ಮಶಾನವಾಸಿಯನ್ನು ನೋಡಿದ್ದ, ಒಬ್ಬನಿಗೆ ಶ್ವೇತಾಂಬರಿ ಸಾತ್ವಿಕ ಸರಸ್ವತಿಯಾಗಿ ಕಂಡರೆ, ಮತ್ತೊಬ್ಬಳಿಗೆ ರುಂಡಮಾಲಾಧಾರಿಯಾದ ದುರ್ಗೆಯಾಗಿ ಗೋಚರಿಸಿದ್ದಳು. ಏನೇ ಇರಲಿ, ಎಲ್ಲರಿಗೂ ದೇವರು ಕಂಡಿದ್ದ ಆ ರಾತ್ರಿಯಾ ಕನಸಿನಲ್ಲಿ. ಮಾರನೆಯ ಬೆಳಿಗ್ಗೆ ಎಲ್ಲರೂ ಇನ್ನೊಬ್ಬರ ಬಳಿ ವಿಚಾರಿಸಿದ್ದೇ ವಿಚಾರಿಸಿದ್ದು, ತಮ್ಮ ಅಪೂರ್ವ ಅನುಭವವನ್ನು ವಿವರಿಸಿದ್ದೆ ವಿವರಿಸಿದ್ದು. ಆದರೆ ಕಾಣಿಕೆಯ ವಿಷಯ ಉಳಿದವರಿಗೆ ತಿಳಿದು ಹೋದರೆ ಅವರು ನಮಗಿಂತ ಅಮೂಲ್ಯವಾದದ್ದನ್ನು ತಂದು ದೇವರ ಜೊತೆ ಒಂದು ದಿನ ಕಾಲಕಳೆಯುವ ಅವಕಾಶವನ್ನು ಕಸಿದುಕೊಂಡುಬಿಡುತ್ತಾರೋ ಎಂಬ ಹೆದರಿಕೆಯಿಂದ ಯಾರೂ ತಮಗೆ ಕಾಣಿಸಿಕೊಂಡ ದೇವರ ಅತ್ಯುತ್ತಮ ಕಾಣಿಕೆಯ ಬೇಡಿಕೆಯನ್ನು ಪ್ರಸ್ತಾಪಿಸಲಿಲ್ಲ. ಲಕ್ಷ್ಮೀಪತಿ ಎಂಬ ಬಡರೈತನನ್ನು ಬಿಟ್ಟರೆ. ತನಗೆ ಕಂಡ  ದೇವರ ಬೇಡಿಕೆಯನ್ನು ನೆರೆಹೊರೆಯವರ ಹತ್ತಿರ ಹೇಳಿದಾಗ ಅವನಿಗೆ ಸಿಕ್ಕಿದ್ದು ನಿರೀಕ್ಷಿತ ಅಪಹಾಸ್ಯ ಮಾತ್ರ, "ಊರಲ್ಲಿ ಮತ್ಯಾರಲ್ಲೂ ಏನನ್ನೂ ಕೇಳದ ದೇವರು ಕಡುಬಡವರಲ್ಲಿ ಅತಿಬಡವನಾದ ನಿನ್ನನ್ನು ಕೇಳಿದ್ದಾನೆ ಎಂದರೆ ಅದೇ ದೇವರ ಮಾಯೆ " ಎಂದು ಒಬ್ಬ ಹೇಳಿದರೆ "ಎಷ್ಟಂದರೂ ಲಕ್ಷ್ಮೀಪತಿಯಲ್ಲವೇ ಈತ, ಅದಕ್ಕೆ ಕೇಳಿರಬೇಕು" ಎಂದು ಗೊಳ್ಳನೇ ನಕ್ಕ ಇನ್ನೊಬ್ಬ. ಎಲ್ಲರೂ ತಾವು ಈ ಲಕ್ಷ್ಮೀಪತಿಗಿಂತ ಉತ್ತಮ ಕಾಣಿಕೆ ತೆಗೆದುಕೊಂಡುಹೋದರೆ ಸಾಕು ಎಂಬ ಸಮಾಧಾನಕ್ಕೆ ಬಂದಿದ್ದರು. ಆದರೆ ಲಕ್ಷ್ಮೀಪತಿ ಯಾರ ಬಳಿಯೂ ದೇವರು ಏನನ್ನೂ ಕೇಳದೆ ಇದ್ದುದರಿಂದ ತನ್ನ ಬಳಿ ಕೇಳಿದ್ದು ತನ್ನ ಒಂದು ಭ್ರಮೆಯಷ್ಟೇ ಎಂದು ಭಾವಿಸಿ ಸೋಮವಾರ ಕೈ ಬೀಸಿಕೊಂಡು ಹೋಗುವುದೆಂದು ನಿರ್ಧರಿಸಿದ್ದ.

ಎಲ್ಲರೂ ಕಾತರಿಸಿ ಕಾಯುತ್ತಿದ್ದ ಸೋಮವಾರ ಬಂತು. ಮುಂಜಾನೆಯ ಮೊದಲ ಸೂರ್ಯಕಿರಣ ಬೀಳುವುದರ ಒಳಗೆ ಊರಿಗೆ ಊರೇ ದೇವಸ್ಥಾನದ ಎದುರು ಪ್ರತ್ಯಕ್ಷವಾಗಿತ್ತು. ಊರ ಜಮೀನ್ದಾರ ತನ್ನ ಹದಿನೈದು ಎಕರೆಯ ಭೂಮಿಯ ಪತ್ರವನ್ನು ತೆಗೆದುಕೊಂಡು ಬಂದಿದ್ದರೆ, ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಪೂಜಾರಿ ಅರ್ಧ ಕೆ. ಜಿ. ಆಗುವಷ್ಟು ಚಿನ್ನದ ಆಭರಣಗಳನ್ನು ತಂದಿದ್ದ, ಶ್ರೀಮಂತ ರೈತನೊಬ್ಬ ಐದು ಗಾಡಿಯಷ್ಟು ಧವಸವನ್ನು ತಂದರೆ ಬಡ ಕೂಲಿಯವನೊಬ್ಬ ತನ್ನ ಮಗಳ ಮದುವೆಗೆಂದು ತೆಗೆದಿಟ್ಟಿದ್ದ ಎಲ್ಲ ದುಡ್ಡನ್ನೂ ತಂದಿದ್ದ. ಆದರೆ ಲಕ್ಷ್ಮೀಪತಿ? ಪಾಪ ಏನಾದರೂ ತರಬೇಕೆಂಬ ಯಾವ ಜ್ಞಾನವೂ ಇಲ್ಲದೆ ಸುಮ್ಮನೆ ಕೈ ಬೀಸಿಕೊಂಡು ಬಂದಿದ್ದ. ದೇವಸ್ಥಾನದ ಪ್ರಾಂಗಣಕ್ಕೆ ಬಂದು ನೋಡುತ್ತಾನೆ, ಎಲ್ಲರೂ ಬಗೆಬಗೆಯ ಕಾಣಿಕೆಗಳೊಂದಿಗೆ ಬಂದಿದ್ದಾರೆ.  ಒಬ್ಬರನ್ನೊಬ್ಬರು ನೂಕಿಕೊಂಡು ದೇವಸ್ಥಾನದ ನೂರೆಂಟು ಮೆಟ್ಟಿಲುಗಳನ್ನು ಹತ್ತುತ್ತಿದ್ದಾರೆ. ತಾನೊಬ್ಬನೇ ಬರಿಕೈ ಸರದಾರ. ಆಯ್ತು ಹಾಗಿದ್ದರೆ, ದೇವರು ಕಾಣಿಸಿಕೊಳ್ಳುವುದರ ಒಳಗೆ ಮನೆಗೆ ಹೋಗಿ ಮುಂದಿನ ವಾರಕ್ಕೆಂದು ಇಟ್ಟಿದ್ದ ಸ್ವಲ್ಪ ರಾಗಿಯನ್ನಾದರೂ ತರೋಣ ಎಂದು ಭಾವಿಸಿ ಹತ್ತಿದ್ದ ಹತ್ತು ಮೆಟ್ಟಿಲುಗಳನ್ನು ಇಳಿದು ಮನೆಯ ಕಡೆ ಹೊರಡುತ್ತಾನೆ.

ಇತ್ತ ಕಡೆ ದೇವಸ್ಥಾನದ ಗರ್ಭಗುಡಿಯಲ್ಲೋ ಜನರ ಹಾಹಾಕಾರ. ಎಲ್ಲರೂ ದೇವರ ಬಗ್ಗೆ ದೇವರ ಕನಸ್ಸಿನ ಬಗ್ಗೆ ಮಾತನಾಡುವವರೇ , ತಾವು ತಂದಿದ್ದನ್ನು ಅಡಗಿಸಿಟ್ಟು ಇನ್ನೊಬ್ಬರು ಎಷ್ಟು ಸುಳ್ಳು ಹೇಳಿದರು, ಏನನ್ನೂ ತರುವುದಿಲ್ಲ ಎಂದು ಏನೇನನ್ನೆಲ್ಲ ತಂದರು ಎಂದು ಅಣಕಿಸುವವರೇ. ದೇವರು ಅವತರಿಸಿದರೆ ನಮ್ಮ ಸತ್ಯವನ್ನು ಮಾತ್ರ ಅದು ಹೇಗೋ ನಂಬಿ ಉಳಿದವರದನ್ನು ತಿರಸ್ಕರಿಸುತ್ತಾನೆ ಎಂದು ದೇವರಂತಹ ದೇವರ ಕಣ್ಣಿಗೇ ಮಣ್ಣು ಹಾಕಲು ನೋಡುವವರೇ ! ಹೀಗೆಯೇ ಜನ ಗುಜುಗುಡುತ್ತಿರಲು, ತನಗೆ ದೇವರು ಕಾಣಲಿ ಎಂಬುದಕ್ಕಿಂತ ತನಗೊಬ್ಬನಿಗೆ ಮಾತ್ರ ದೇವರು ಕಾಣಲಿ ಎಂದು ಹಂಬಲಿಸುತ್ತಿರಲು ದೇವರು ಪ್ರತ್ಯಕ್ಷನಾಗಿದ್ದ ದಿವ್ಯ ಬೆಳಕಿನ ಹಿನ್ನೆಲೆಯಲ್ಲಿ. ಆದರೆ ಅದಕ್ಕಿಂತ ದೊಡ್ಡ ಆಶ್ಚರ್ಯ ಆಗಿದ್ದು ಅವನ ಪಕ್ಕದಲ್ಲಿ ನಿಂತಿದ್ದ ಲಕ್ಷ್ಮಿಪತಿಯನ್ನು ನೋಡಿ.

ಜನ ಆಶ್ಚರ್ಯದಿಂದ ಬಾಯಿ ತೆಗೆದವರು ಬಾಯ್ ಮುಚ್ಚಿರಲಿಲ್ಲ, ದೇವರು ಮಾತನಾಡತೊಡಗಿದ್ದ "ಭಕ್ತರೇ, ನಿಮಗೆಲ್ಲ ನನ್ನ ಪರಿಚಯ ಮರೆತು ಹೋಗಿರಬೇಕು ಹೋಗಿರಬೇಕು ಅಲ್ವಾ? ಯಾರಿಗೂ ನನ್ನ ಪರಿಚಯ ಸಿಗಲಿಲ್ಲ ನಾನು ದೇವಸ್ಥಾನದ ಹೊರಕ್ಕೆ ಕುಳಿತಿದ್ದರೂ ನೀವಾರೂ ನನ್ನನ್ನು ಗುರುತಿಸಲಿಲ್ಲ. ಅಂದು ನಾನು ನಿಮ್ಮ ಕನಸಿನಲ್ಲಿ ಬಂದಾಗ ಏನೆಂದು ಹೇಳಿದ್ದೆ? ನಿಮ್ಮ ಬಳಿಯಲ್ಲಿರುವ ಅತಿ ಅಮೂಲ್ಯವಾದದ್ದನ್ನು ತೆಗೆದುಕೊಂಡು ಬನ್ನಿ ಎಂದು. ನೀವು ಮಾಡಿದ್ದಾದರೂ ಏನು, ಚಿನ್ನವನ್ನು, ನಗನಾಣ್ಯವನ್ನು, ಧವಸಧಾನ್ಯ್ಗಳನ್ನು ತಂದು ಸುರಿದಿರಿ ನನ್ನ ಮುಂದೆ. ಏಳು ಜಗದ ಒಡೆಯನಾದ ನನಗೇ ಸಂಪತ್ತಿನ ಅವಶ್ಯಕತೆ ಬಂತು ಎಂದುಕೊಂಡಿರೋ ನೀವು? ಹುಚ್ಚಪ್ಪಗಳಿರಾ, ನೀವೇ ನಿಮ್ಮಲ್ಲಿಯೇ ಒಮ್ಮೆ ನನ್ನಲ್ಲಿರುವ ಅತ್ಯಮೂಲ್ಯ ವಸ್ತು ಯಾವುದೆಂದು ಕೇಳಿಕೊಂಡಿದ್ದರೆ ನನ್ನ ಮುಖ ಪರಿಚಯವಾದರೂ ಆಗುತ್ತಿತ್ತು. ನಾನು ನಿಮ್ಮ ಮನಸ್ಸಿನಲ್ಲಿಯೇ ಇದ್ದೆ ಅಮೂರ್ತವಾಗಿ. ಮೌಲ್ಯ ಕಟ್ಟಲಾಗದ ನಿಮ್ಮ ಸುಂದರ ಮನಸ್ಸನ್ನು ಮತ್ತಷ್ಟು ನಿರ್ಮಲಗೊಳಿಸಿಕೊಂಡು ತೆಗೆದುಕೊಂಡು ಬನ್ನಿ ಎಂದು ಬಿಡಿಸಿ ಹೇಳದೇ ಇದ್ದದ್ದು ನನ್ನ ತಪ್ಪೇ?  "

ದೇವರು ಹೀಗೆ ಲೆಕ್ಚರ್ ಕೊಡ್ತಾ ಕೂರ್ತಿದ್ನೇನೋ ಅಷ್ಟ ಹೊತ್ತಿಗೆ ಜಮೀನ್ದಾರ ಮಧ್ಯೆ ಬಾಯಿ ಹಾಕಿದ್ದ "ಅದೆಲ್ಲಾ ಸರಿ, ನಮಗೆ ಪರಿಚಯ ಸಿಗ್ಲಿಲ್ಲ ಅಂತ ನೀನು ಹೇಳಿದ್ರೆ ಒಪ್ಕೊಳೋಣ, ಯಾರ್ಗೂ ಗೊತ್ತಾಗ್ಲಿಲ್ಲ, ಆದ್ರೆ ಎಲ್ಲ ಬಿಟ್ಟು ಈ ಲಕ್ಷ್ಮಿಪತಿನಾ ಏನಕ್ಕೆ ನಿನ್ನ ಪಕ್ಕದಲ್ಲಿ ಕೂರಿಸಿಕೊಂಡಿದೀಯಾ?"  ಜಗದೊಡೆಯನಿಗೆ ಸವಾಲ್ ಹಾಕಿದ್ದ ಊರ ಒಡೆಯ.

ದೇವರು ನಕ್ಕುಬಿಟ್ಟ, ಜಮೀನ್ದಾರನಿಗೆ ನಾನ್ಯಾಕೆ ಈ ಪ್ರಶ್ನೆ ಕೇಳಿದೆನೊ ಎಂದು  ಎನ್ನಿಸುವ ಹಾಗೆ. ದೇವರಿಗೂ ಇಷ್ಟು ವ್ಯಂಗ್ಯ ಬರುತ್ತದೆಯೇ ಎಂದು ಜನರು ತಲೆಕೆಡಿಸಿಕೊಂಡಿರಬೇಕಾದರೆ ನಗುವನ್ನು ನಿಲ್ಲಿಸಿ ಮತ್ತೆ ಮಾತನಾಡತೊಡಗಿದ ಪರಮಾತ್ಮ.
"ಈಗಲೂ ಬಿಟ್ಟಿಲ್ಲ ನೋಡಿ ನಿಮ್ಮ ಚಾಳಿ, ನಾನು ನಿಮ್ಮನ್ನು ಯಾಕೆ ಆಯ್ದುಕೊಳ್ಳಲಿಲ್ಲ  ಎಂಬ ಬಗ್ಗೆ ಅಂತರ್ಮಥನ ಮಾಡಿಕೊಳ್ಳುವುದನ್ನು ಬಿಟ್ಟು ಅವನನ್ನು ಏಕೆ ಆಯ್ದುಕೊಂಡೆ ಎಂಬ ಅಸೂಯಾಭಾವವೇ ನಿಮಗೆ ಮುಖ್ಯವಾಗಿಬಿಟ್ಟಿದೆ. ನಿಮ್ಮ ಶ್ರೇಯಸ್ಸಿಗೆ ನಿಮಗೆ ಹಕ್ಕಿದೆಯೇ ಹೊರತು ಇನ್ನೊಬ್ಬನ ಅವನತಿಗಲ್ಲ ಅಲ್ಲವೇ? ಇರಲಿ ಬಿಡಿ ನಿಮಗೆ ಅರ್ಥವಾಗದೇನೂ ಇರಬಹುದು ನನ್ನ ಮಾತು, ಹಾಗಾದ ಪಕ್ಷದಲ್ಲಿ ನೀವು ಬೇರೆಯೇ ಅರ್ಥವನ್ನೂ ಕಲ್ಪಿಸಿ ಅದು ನನ್ನದೇ ಮಾತೆಂದು ನನಗೇ  ನಂಬಿಸಬಹುದು, ಏನೇ ಇರಲಿ ಯಾಕೆ ಲಕ್ಷ್ಮೀಪತಿಯನ್ನು ಮೆಚ್ಚಿದೆ ಎಂಬುದಕ್ಕೆ ಅವನ ಬಡತನದ ಮಧ್ಯೆಯೂ ಒಂದು ಹಿಡಿ ರಾಗಿ ತಂದ ಎಂಬುದೇ ಕಾರಣ ಅಲ್ಲ. ಅದೂ ಒಂದಿರಬಹುದು ಅಷ್ಟೇ. ನೀವೆಲ್ಲ ನಿಮ್ಮ ನಿಮ್ಮೊಳಗಣ ಸುಳ್ಳನ್ನು ಸತ್ಯ ಎಂದು ಬಿಂಬಿಸುವ ಪ್ರಯತ್ನದಲ್ಲಿ ಅವನ ಬಳಿ ನಾನು ಏನನ್ನೂ ತರಲು ಹೇಳಿಲ್ಲ ಎಂದು ಹಾಸ್ಯವಾಡಿದಿರಲ್ಲ, ಪಾಪ ಮುಗ್ಧ ಲಕ್ಷ್ಮಿಪತಿ ನಂಬಿದ್ದ ಅದನ್ನು. ಹಾಗೆಂದೇ ಕೈ ಬೀಸಿಕೊಂಡು ಬಂದಿದ್ದ, ಆದರೆ ನಿಮ್ಮ ಕಾಣಿಕೆಗಳನ್ನು ನೋಡಿ ಗಾಬರಿ ಬಿದ್ದ ಆತ ಬೇಗನೇ ಮನೆಗೆ ಹೋಗಿ ಮುಂದಿನ ವಾರಕ್ಕೆಂದು ಇಟ್ಟಿದ್ದ ಒಂದು ಹಿಡಿ ರಾಗಿಯನ್ನು ತರಲು ಯೋಚಿಸುತ್ತಾನೆ ಅದೇ ಕಾರಣಕ್ಕೆ ಹೊರಡುತ್ತಾನೆ ಕೂಡ. ಆದರೆ ಅಷ್ಟು ಹೊತ್ತಿಗೆ ಅವನ ಕಣ್ಣಿಗೆ  ಅಲ್ಲಿಯೇ ಮೆಟ್ಟಿಲುಗಳ ಬುಡದಲ್ಲಿ ಕುಳಿತಿದ್ದ ಒಬ್ಬ ಕುಂಟನು ಕಾಣುತ್ತಾನೆ, ನಾನೇ ಆ ಕುಂಟ. ನೀವೆಲ್ಲರೂ ಮೆಟ್ಟಿಲುಗಳನ್ನು ಹತ್ತಿ ಓಡುವಾಗ ನಿಮ್ಮೆಲ್ಲರಲ್ಲಿ ಕೇಳಿಕೊಂಡ ಹಾಗೆ ಅವನ ಬಳಿಯೂ ದಯವಿಟ್ಟು ನನಗೆ ಮೆಟ್ಟಿಲುಗಳನ್ನು ಹತ್ತಲು ಸಹಾಯ ಮಾಡುವಂತೆ ಕೇಳಿದೆ. ನಾನು ತಂದಿರುವ ಕಾಣಿಕೆಯಲ್ಲಿ ಅರ್ಧ ಭಾಗ ಕೊಡುವ ಆಸೆಯನ್ನೂ ತೊರಿಸಿದೆ. ಎರಡು ಸೆಕೆಂಡುಗಳಷ್ಟು ಯೋಚಿಸಿದ ಆತ, "ಕಾಣಿಕೆಯನ್ನು ತರಲು ಹೋಗಲೇ ಅಥವಾ ಈ ಕುಂಟನಿಗೆ ಸಹಾಯ ಮಾಡಲೇ" ಎಂದು , ಕೇವಲ ಎರಡೇ ಸೆಕೆಂಡುಗಳು. "ಅಯ್ಯಾ, ನೀನು ನನಗೆ ಅರ್ಧ ಭಾಗವನ್ನು ಕೊಡುವುದು ಬೇಡ ದೇವಸ್ಥಾನದ ಮೆಟ್ಟಿಲುಗಳನ್ನು ನಾನು ಹತ್ತಿಸುತ್ತೇನೆ. ದೇವರಿಗೆ ಕೊಡಲು ನಾನು ಕಾಣಿಕೆ ತರಬೇಕಿದೆ ಮನೆಗೆ ಹೋಗಿ. ನಾನು ಬರುವುದರೊಳಗೆ ದೇವರು ಪ್ರತ್ಯಕ್ಷನಾದರೆ ಏನು ಮಾಡುವುದು? ನನ್ನನ್ನೇ ಆರಿಸಿಕೊಳ್ಳಲಿ ಎಂದು ಬಯಸುವುದು ಬಹಳೇ ಮಹಾತ್ವಾಕಾಂಕ್ಷೆಯಾದೀತಾದರೂ ಒಮ್ಮೆ ಆತನ ಮುಖವನ್ನು ನೋಡಬೇಕೆಂಬ ಆಸೆಯಿದೆ. ಇರಲಿ ಬಿಡು, ನಿನ್ನನ್ನು ಮೇಲೆ ಹರಿಸಿ ದೇವಸ್ಥಾನದ ಮುಖ್ಯಗಂಟೆಯ ಬಳಿ ಕೂರಿಸಿ ಹೋಗುತ್ತೇನೆ. ದೇವರು ಪ್ರತ್ಯಕ್ಷನಾಗುವ ಹಾಗೆ ಕಂಡುಬಂದರೆ ಮೂರು ಸಲ ಗಂಟೆ ಬಾರಿಸುತ್ತೀಯಾ? ನಾನು ಮನೆಗೆ ಹೋಗುವ ದಾರಿಯಲ್ಲಿದ್ದರೆ ತಿರುಗಿ ಬರುತ್ತೇನೆ . ಅಷ್ಟನ್ನು ಮಾಡುವೆಯಾ ಗೆಳೆಯಾ? ದಯವಿಟ್ಟು ಉಳಿದವರ ಹಾಗೆ ಮೋಸ ಮಾಡಬೇಡ" ಎಂದ. ಇಂತಹ ಮುಗ್ಧನೆದುರು ನನಗೇ ಆ ಕುಂಟನ ಅವತಾರದಲ್ಲಿ ಕೂರುವುದು ಕಷ್ಟವಾಯಿತು, ನೀವು ಜನಗಳು ಹೇಗಾದರೂ ಇರುತ್ತೀರೆನೋ."

ಜನರು ಮುಂದಿನ ವಾದಕ್ಕೆ ಅಣಿಯಾಗುವುದರೊಳಗೆ ದೇವರು ಅಂತರ್ಧಾನನಾಗಿದ್ದ ಲಕ್ಷ್ಮೀಪತಿಯ ಜೊತೆಗೆ.  


ಇದು ಈ ವಾರದ ಪಂಜುವಿನಲ್ಲಿ ಪ್ರಕಟವಾಗಿತ್ತು ದೇವರು ಮೆಚ್ಚಿದ ಭಕ್ತ.