Saturday 8 September 2012

ಕರಿಗೌಡರ ಕಿರಿಮಗಳು


ಒಂದು ಭಾವಗೀತೆಯಂತಹ ಕವಿತೆ ,ಹಿಂದಿಲ್ಲ ಮುಂದಿಲ್ಲ , ಸುಮ್ಮನೆ ಓದಿಕೊಳ್ಳಿ .

ಯಾರಿಗೂ ಹೇಳದಿರಿ ಕಿರಿಮಗಳು ಬಂದಿಹಳೆಂದು
ಊರಿನ ಹಿರಿಯ ಕರಿಗಿರಿಗೌಡರ ಮನೆಗಿಂದು
ಕನಸು ತಾ ನಿಜವಾದರೆ ಅವಳ ಹಾಗಿರಬಹುದು
ಕದ್ದು ನೋಡಲು ಯುವಕರು ಕೆಲಸ ಬಿಡಬಹುದು
ಸರತಿಯ ಸಾಲಾಗಬಹುದು ಗೌಡರ ಮನೆಯ ಮುಂದೆ
ಹರೆಯವೇ ನಾಚುವ ಪ್ರಾಯದ ಕನ್ನಿಕೆಯ ಹಿಂದೆ||||

ಯಾರು ಅಡಗಿಸಿದರೇನು, ಯಾರು ಹೇಳದಿದ್ದರೇನು
ದೇವತೆಯ ಆಗಮನ ಭಕ್ತರಿಗೆ ತಿಳಿಯದೇನು 
ಕುವರಿ ತಾನೆ ನೀರಿಗೆ ಬಂದಿರೆ, ಊರಿನ ಬಾವಿಗೆ.
ನಡೆದಲಿ ಮುತ್ತನು ಸುರಿಸಿ, ಹಿಡಿದಾ ಬಿಂದಿಗೆ,
ಜೇನನು ಚೆಲ್ಲಿ ನೀರನು ಒಯ್ಯಲು ಬಂದರೆ ಆಕೆ,
ಊರಿಗೂರೇ ಬಾಯ್ಬಿಟ್ಟು ಮೂಕವಾಗಿಬೇಕೆ.||||

ಚಿತ್ರಕ್ರಪೆ : ಅಂತರ್ಜಾಲ 
ಬಾವಿಯ ಬಳಿಯ ಶೆಟ್ಟರ ಅಂಗಡಿ ತುಂಬಿತ್ತು
ನೋಟವ ಕದಿವವರ ಕೊರಳದು ಆಚೆ ನೀಕಿತ್ತು.
ನೋಡಿದಳು ಓರೆಗಣ್ಣಲ್ಲಿ ಅಭಿಮಾನಿ ಬಳಗವ
ತಡೆದಳು ಉಕ್ಕಿ ಬರುತಿದ್ದ ಮುಗುಳುನಗುವ
ಕೊಡದಾ ಭಾರಕೆ ಬಳುಕಿದ ಸೊಂಟದ ಬಗ್ಗೆ,
ಕನಿಕರದಿಂದ ಕಳಿಸಿದ ವರುಣ ಮಳೆಯ ಬುಗ್ಗೆ.||||

ಓಡಿದಳಾಕೆ ಮನೆಯ ಕಡೆಗೆ ನೆನೆಯದ ಹಾಗೆ
ದಾವಣಿಯ ಮೇಲೆತ್ತಿ ಕೆಸರು ರಾಚದ ಹಾಗೆ
ತುಂಬಿದ ಬಿಂದಿಗೆಯ ನೀರನು ಅಲ್ಲಿಯೇ ಚೆಲ್ಲಿ
ನೀರಿನ ಸುರಿಮಳೆಗಂಜಿ ಓಡಿದಳು ವಲ್ಲಿ
ಹಿಂದೆಯೇ ಮೆಲ್ಲನೆ ಬಂದಿರೆ ಹಿಂಬಾಲಕರು
ಜಾರಿತು, ಬಿದ್ದಳು, ಅಗ್ರಹಾರದ ಎದುರು ||||

ಕೈಯೊಳಗಿದ್ದ ಕೊಡವು ಬಿದ್ದಿತ್ತು ಮಗುಚಿ
ಊರೇ ಓಡಿಬಂದಿತ್ತು ನೆರವಿನ ಕೈಚಾಚಿ
ಹಿಡಿದೆತ್ತುವ ನೆಪದಿ ಸುತ್ತುವರಿದ ಜನಕೆ
ಕನ್ನೆಯ ಮೈಸೋಕುವ ಧನ್ಯತೆಯ ಹವಣಿಕೆ
ನಾಚಿಬಿಟ್ಟಳು ಕುವರಿ ಮೈಯ್ಯೆಲ್ಲ ಕೆಂಪು
ಮಾತು ಮರೆತ ಆಕೆಯ ಮೌನವೂ ಇಂಪು||||

ಎದ್ದು ಕೂತಳು ಕುವರಿ ಬಿದ್ದು ಅಳುತ್ತ
ಉದುರುತಿದ್ದವು ಕಣ್ಣೀರ ಹನಿಯ ಮುತ್ತ
ಸಮಯವಾದರೂ ಬರದ ಮಗಳ ಅರಸಿ
ಕೊಡೆಹಿಡಿದು ಬಂದರು ತಂದೆ ಮಳೆಗೆ ಶಪಿಸಿ
ಗೌಡರು ಕರೆದೊಯ್ದರು ಮಗಳ ಸಾವರಿಸಿ
ಸುಮ್ಮನೇ ನಿಂತಿದ್ದ ಜನರ ಗದರಿಸಿ||||