Sunday 25 November 2012

ಅಕ್ಕ



          ಅದೊಂದು ಅನಿರ್ಬಂಧಿತ ಪ್ರೀತಿ, ಬಹುಶಃ ತಾಯಿಯ ಪ್ರೀತಿಯೊಂದನ್ನು ಬಿಟ್ಟರೆ ಅತಿ ಶುದ್ಧವಾದದ್ದು. ಈ ಪ್ರೀತಿಗೆ ಆಕರ್ಷಣೆಯ ಅವಶ್ಯಕತೆಯಿಲ್ಲ, ಕಾರಣಗಳ ಹುಡುಕಾಟವಿಲ್ಲ, ಬಯಕೆ, ನಿರೀಕ್ಷೆಗಳೆಂಬ ಲೋಭದ ಹಿನ್ನೆಲೆಯಿಲ್ಲ, ಹುಡುಗ ಈ ಪ್ರೀತಿಗೆ ಅಂಗಲಾಚಬೇಕಿಲ್ಲ, ಹುಡುಗಿಗಾದರೂ ಯಾವುದೇ ಅಭದ್ರತೆಯ ಭಾವನೆ ಬರಲು ಕಾರಣವಿಲ್ಲ. ಅವರಿಬ್ಬರು ಹುಟ್ಟಿನಿಂದಲೇ 'made for each other'. ಹುಟ್ಟೇ ಈ ಪ್ರೀತಿಗೆ ಕಾರಣವಾಗಿರಬೇಕಾದರೆ ಬೇರಾವ ಬಂಧ ಇದಕ್ಕಿಂತ ಗಟ್ಟಿಯಾಗಿರಲು ಸಾಧ್ಯ. ಹೌದು, ನಾನು ಸಹೋದರ-ಸಹೋದರಿಯರ ಪ್ರೀತಿಯ ಬಗ್ಗೆ ಮಾತನಾಡುತ್ತಿರುವುದು, ಅದರಲ್ಲಿಯೂ ಅಕ್ಕ ತಮ್ಮಂದಿರ ಮಧ್ಯದ ಪ್ರೀತಿಯ ಬಗ್ಗೆ. ಎಲ್ಲ ಒಡಹುಟ್ಟಿದವರ ಮಧ್ಯೆಯೂ ಇದೇ ರೀತಿಯಾದ ಒಂದು ಪ್ರೀತಿ ಇರುತ್ತದೆಯೇನೋ, ಬಹುಶಃ. ಆದರೆ ನಾನು ಕಂಡ ಮಟ್ಟಿಗೆ, ಈ ಎಲ್ಲವುಗಳಲ್ಲಿ ಹಿರಿಯ ಸಹೋದರಿಯ ಪ್ರೀತಿ ಇದೆಯಲ್ಲಾ, ಅದು ಅಕ್ಷರಶಃ ಬೆಲೆ ಕಟ್ಟಲಾರದಂತದ್ದು. ಅದೂ ಸ್ವಲ್ಪ ಹೆಚ್ಚು ವರ್ಷಗಳ ವ್ಯತ್ಯಾಸ ಇತ್ತೆಂದರೆ ಮುಗಿಯಿತು, ಅಕ್ಕ ಆಕ್ಷರಶಃ ಎರಡನೇ ಅಮ್ಮನೇ. ಎಷ್ಟೋ ಸಲ ಅಮ್ಮನಿಗಿಂತಲೂ ಹತ್ತಿರ ಎನ್ನಿಸುತ್ತಾಳೆ. ಬೇಕಿದ್ದರೆ ನೀವೇ ನೋಡಿ, ನೀವು ನಿಮ್ಮ ಅಕ್ಕನ ಬಳಿ ಹೇಳಿಕೊಳ್ಳುವ ವಿಷಯಗಳನ್ನು ಕೆಲವೊಮ್ಮೆ ಅಮ್ಮನ ಬಳಿ ಪ್ರಸ್ತಾಪವೂ ಮಾಡಲಾಗುವುದಿಲ್ಲ, ಕೆಲವೊಮ್ಮೆ ಆ ವಿಷಯಗಳನ್ನು ನಿಮ್ಮ ಅತ್ಯಾಪ್ತ ಗೆಳೆಯನ ಬಳಿಯೂ ಹೇಳಿಕೊಳ್ಳಲಾಗುವುದಿಲ್ಲ.

            ಆಕೆ ತನ್ನ ತಮ್ಮನ ಮಟ್ಟಿಗೆ ಮೊದಲ ಮತ್ತು ಅತಿ ಹತ್ತಿರದ ಗೆಳತಿ, ಎರಡನೆಯ ಅಮ್ಮ, ಆತನನ್ನು ಆತನಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲ ಆತ್ಮಬಂಧು, ಚಿಕ್ಕಂದಿನಲ್ಲಿ ಎಲ್ಲದಕ್ಕೂ ಜಗಳವಾಡಿದ ಪರಮಸ್ಪರ್ಧಿ, ಸ್ವಲ್ಪ ದೊಡ್ಡವಳಾದ ಮೇಲೆ ತನ್ನ ಚಿಕ್ಕ ತಮ್ಮನಿಗೋಸ್ಕರ ಏನನ್ನು ಬೇಕಾದರೂ ತ್ಯಾಗ ಮಾಡಲು ಸಿದ್ಧವಾಗುವ ಸರ್ವತ್ಯಾಗಿ, ಯಾವುದೇ ಹಂಬಲವಿಲ್ಲದೆಯೇ ಪ್ರೀತಿಸುತ್ತಲೇ ಇರಬಲ್ಲ ಅಮೃತಮಯಿ, ಇನ್ನೂ ಏನೇನೋ. ತಂದೆ-ತಾಯಿಯರ ಪ್ರೀತಿಯಲ್ಲಿಯಾದರೂ ಮುಂದೆ ಮಕ್ಕಳು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬ ಸ್ವಾರ್ಥವಲ್ಲದ ಸ್ವಾರ್ಥವನ್ನು ಹುಡುಕಬಹುದೇನೋ, ಆದರೆ ಅಕ್ಕನ ಪ್ರೀತಿಯಲ್ಲಿ ಅಂತಹುದೊಂದರ ಕುರುಹೂ ಕಾಣಲಾರದು. ಕೆಲವೊಮ್ಮೆ ಹೆದರಿಕೆ ಹುಟ್ಟಿಸುತ್ತದೆ ಈ ಪ್ರೀತಿ, ಇಷ್ಟನ್ನು ನಾವು ತಿರುಗಿ ಕೊಡಲಾಗುತ್ತದೆಯೇ ಎಂದು, ಅದು ಹೋಗಲಿ, ಇಷ್ಟು ಪ್ರೀತಿಯನ್ನು ನಮಗೇ ಜೀರ್ಣಿಸಿಕೊಳ್ಳಲಿಕ್ಕಾಗುತ್ತದೆಯೇ ಎಂದು.

          ವೈಯಕ್ತಿಕವಾಗಿ ಬಂದರೆ ನನ್ನಕ್ಕ ಭವಾನಿಗೂ ನನಗೂ ಐದು ವರ್ಷಗಳ ವ್ಯತ್ಯಾಸ, ಅಂದ ಮಟ್ಟಿಗೆ ನಾನು ಚಿಕ್ಕವನಾಗಿದ್ದಾಗ ನನ್ನ ಮಟ್ಟಿಗೆ ಇವಳೇ ದಾದಿ, ಸಹಪಾಠಿ, ಎಲ್ಲವೂ. ಅಪ್ಪ ಅಮ್ಮ ನಮ್ಮಿಬ್ಬರನ್ನು ಮನೆಯಲ್ಲಿ ಬಿಟ್ಟು ಶಾಲೆಗೆ(ನನ್ನ ಅಪ್ಪ ಅಮ್ಮ ಇಬ್ಬರೂ ಶಿಕ್ಷಕರು) ಹೋದರೆ ಅವರು ಬರುವವರೆಗೆ ನನ್ನ ಜವಾಬ್ದಾರಿ ಅಕ್ಕನದ್ದು. ನನ್ನ ಹಠಗಳಿಗೆ ಪಕ್ಕಾಗುವುದಕ್ಕೂ, ನನ್ನ ಆಟಗಳಿಗೆ ಜೊತೆಯಾಗುವುದಕ್ಕೂ ಅವಳು ತಯಾರಿರಬೇಕಿತ್ತು.  ನನ್ನ ಮೊದಮೊದಲು ಕ್ರಿಕೆಟ್ ಆಡಿದ್ದೂ ಅಕ್ಕನೊಂದಿಗೇ, ಜಗಳವಾಡಿದ್ದೂ ಅಕ್ಕನೊಂದಿಗೇ, ಇದಕ್ಕೆ ನಾನು ಚಿಕ್ಕವನಾಗಿದ್ದಾಗ ನನ್ನ ವಯಸ್ಸಿನ ಹುಡುಗರು ಆಸುಪಾಸಿನಲ್ಲಿ ಯಾರೂ ಇರಲಿಲ್ಲವೆಂಬುದು ಹೌದಾದರೂ, ನನ್ನ ಚಿಕ್ಕಂದಿನ ಎಲ್ಲ ನೆನಪುಗಳಲ್ಲಿಯೂ ಅವಳದ್ದೊಂದು ಪಾಲಿದೆ ಎಂಬುದಂತೂ ಸತ್ಯ.

          ನಾನು ಐದು ವರ್ಷದವನಿರುವಾಗ ಅವಳು ನವೋದಯ ಶಾಲೆಗೆ ಹೋದಳು, ಅದಾದ ನಂತರ ನಮ್ಮ ಭೇಟಿಯೆಲ್ಲಾ ವಾರದ ಮೂರನೇ ಭಾನುವಾರವೇ, ಅದೂ ಅಪ್ಪ ಅಮ್ಮ ನನ್ನನ್ನು ಅವರ ಜೊತೆಗೆ ಕರೆದುಕೊಂಡು ಹೋದರೆ. ಕೆಲವೊಮ್ಮೆ ತಿಂಗಳುಗಟ್ಟಲೇ ಸಿಗದೇ ಹೋಗಿದ್ದುಂಟು. ಬೇಸಿಗೆ ರಜೆಯಲ್ಲಿ ಬಂದಾಗ ಮಾತ್ರ ಸರಿಯಾಗಿ ಸಿಗುತ್ತಿದ್ದಳಾಗಿ, ಅವಳ ರಜೆಗೆ ಅವಳಿಗಿಂತ ಹೆಚ್ಚಾಗಿ ನಾವು ಕಾಯುತ್ತಿದ್ದೆವು. ಈ ಸಮಯದಲ್ಲಿಯೇ ಒಂದು ದಿನ ನಾನು ಆಟವಾಡುವಾಗ ಅದು ಹೇಗೋ ತಲೆಯನ್ನು ಎಲ್ಲಿಯೋ ಹೊಡೆಸಿಕೊಂಡು ಹುಬ್ಬಿನ ಬಳಿ ಒಂದಿಂಚಿನಷ್ಟು ಗಾಯ ಮಾಡಿಕೊಂಡು ಮನೆಗೆ ಓಡಿ ಬಂದಿದ್ದೆ, ಉಳಿದವರೆಲ್ಲ ಹೇಗಾಯ್ತು ಎಂದು ಕೇಳುವುದರಲ್ಲಿಯೋ, ಮತ್ತೆಲ್ಲೋ ಬಿದ್ದ ಎಂದುಕೊಂಡು ಬಯ್ದುಕೊಳ್ಳುವುದರಲ್ಲಿಯೋ, ವ್ಯಸ್ತವಾಗಿದ್ದರೆ, ಅಕ್ಕ ನನ್ನ ಹಣೆಯಿಂದ ಬರುತ್ತಿದ್ದ ರಕ್ತವನ್ನು ತನ್ನ ಅಂಗಿಯಲ್ಲಿ ಒರೆಸಿದ್ದಳು. ಮತ್ತೆ ಅದೆಷ್ಟು ವರ್ಷಗಳ ಮೇಲೆ ಆ ಅಂಗಿಯನ್ನು ನೋಡಿದರೂ ಅದೇ ನೆನಪುಗಳು ಬರುತ್ತಿತ್ತು. ಇದು ಒಂದು ಘಟನೆಯಷ್ಟೇ, ಇಂತದ್ದೇ ಅದೆಷ್ಟೋ ಘಟನೆಗಳಿವೆ.

          ಅವಳು ಒಂದು ರೀತಿಯಲ್ಲಿ ನನಗೆ ಗುರು, ಮಾರ್ಗದರ್ಶಿ. ಇಲ್ಲಿಯವರೆಗಿನ ನನ್ನ ಜೀವನದ ಎಲ್ಲ ಹಂತಗಳ ನಿರ್ಧಾರಗಳಲ್ಲಿಯೂ ಅವಳದ್ದೊಂದು ಪಾಲಿದೆ. ಪ್ರವೇಶ ಪರೀಕ್ಷೆಯಲ್ಲಿ ಪಾಸಾದರೂ ನವೋದಯ ಶಾಲೆಗೆ ಹೋಗದಿದ್ದುದರಿಂದ ಹಿಡಿದು, ಪಿ. ಯು. ದಲ್ಲಿ ಬಯಾಲಜಿ ತೆಗೆದುಕೊಳ್ಳದೇ ಇದ್ದುದರವರೆಗೆ, ಎಡಗಡೆಗೆ ಕ್ರಾಪು ತೆಗೆಯುವುದರಿಂದ ಹಿಡಿದು ಇಂಜಿಯರಿಂಗಿನಲ್ಲಿ ಎಲೆಕ್ಟ್ರಾನಿಕ್ಸ್ ತೆಗೆದುಕೊಳ್ಳುವವರೆಗೆ ಅವಳ ಕೈವಾಡವಿದೆ. (ಕೆಲವೊಮ್ಮೆ ಅವಲ ಜೀವನದಲ್ಲಿ ಮಾಡಿದ ತಪ್ಪುಗಳನ್ನು ತಮ್ಮ ಪುನರಾವರ್ತಿಸದಿರಲಿ ಎಂಬುದು ಅವಳ ಉದ್ದೇಶವೂ ಇರಬಹುದು. ಉದಾ: ಪಿ. ಯು. ದಲ್ಲಿ ಬಯಾಲಜಿ ತೆಗೆದುಕೊಂಡಿದ್ದು)  ಪ್ರತಿ ಬಾರಿ ಅವಳ ಮಾತನ್ನು ಕೇಳಿದಾಗಲೂ ಒಳ್ಳೆಯದೇ ಆಗಿದೆ( at least ಇಲ್ಲಿಯವರೆಗೆ ಹಾಗೆನಿಸಿದೆ  :P). ಕೇಳದೇ ಹೋದಾಗ ಅದೃಷ್ಟ, ಬದುಕು ಎರಡೂ ಮುಗ್ಗರಿಸಿ ಬಿದ್ದಿದೆ ಎಂದೇನೂ ಅಲ್ಲ ಬಿಡಿ.  ನನ್ನ ಜೀವನದ ಬಹುತೇಕ ಎಲ್ಲ ವಿಷಯಗಳು ಅವಳಿಗೆ ಗೊತ್ತು, ಎಲ್ಲ ಗುಟ್ಟುಗಳೂ ಸಹ. ಹಲವನ್ನು ನಾನೇ ಹೇಳಿಕೊಂಡಿದ್ದೇನೆ, ಕೆಲವು ಅವಳೇ ಅರ್ಥಮಾಡಿಕೊಂಡಿದ್ದಾಳೆ. ಎಷ್ಟೋ ವಿಷಯಗಳನ್ನು ನಾನು ಮಾತನಾಡದೇ ಅವಳಿಗೆ ಅರ್ಥವಾಗುತ್ತದೆ, ನನಗೂ ಅವಳು ಮಾತನಾಡದೇ ಅರ್ಥವಾಗುತ್ತದೆ. ಅಥವಾ ಕೆಲವೊಂದು ಅರ್ಧ ಮಾತನಾಡಿದಾಗಲೇ ಅರ್ಥವಾಗುತ್ತದೆ, ಪರಸ್ಪರರಿಗೆ. ಮಜವಾಗುವುದೆಂದರೆ, ಕೆಲವೊಮ್ಮೆ ನಾಲ್ಕೈದು ಜನ ಮಾತನಾಡುತ್ತಿರುವಾಗ, ಇವಳೇನೋ ಅಂದಿರುವುದು ನನಗೆ ಮಾತ್ರ ಅರ್ಥವಾಗಿರುತ್ತದೆ, ಉಳಿದವರಿಗೆ ಕೇವಲ ಕೇಳಿರುತ್ತದೆ. ಬಹುಶಃ, ಇಷ್ಟು ವರ್ಷಗಳ ಒಡನಾಟದ ಪರಿಣಾಮವೂ ಇರಬಹುದು, ಈ ಪರಸ್ಪರ ಹೊಂದಾಣಿಕೆ. ಇಷ್ಟಕ್ಕೂ ಮೇಲಾಗಿ, ನಮಗಿಬ್ಬರಿಗೂ ಕಾಮನ್ ಆದ ಒಂದೇ ಒಂದು ಅಭಿರುಚಿಯಿಲ್ಲ, ನನಗೆ ಸಿಹಿ, ಉಪ್ಪು ಇಷ್ಟವಾದರೆ ಅವಳಿಗೆ ಖಾರ ಇಷ್ಟನಾನು ಆಜನ್ಮ ಫ಼ೆಡರರ್ ಭಕ್ತನಾದರೆ ಅವಳಿಗೆ ನಡಾಲ್ ಖುಷಿ, ನಾನು ಆರ್. ಸಿ. ಬಿ.ಯನ್ನು ಬೆಂಬಲಿಸಿದರೆ ಅವಳು ರಾಜಸ್ತಾನ್ ರಾಯಲ್ಸ್ ಅಭಿಮಾನಿ, ಹೀಗೇ ಪ್ರತಿಯೊಂದರಲ್ಲೂ ನಾವು ತದ್ವಿರುದ್ಧ. 

          ಈಗ ಅವಳು ಒಂದು ಮಗುವಿನ ತಾಯಿ, ಆದರೆ ಇಂದಿಗೂ ಅವಳು ಒಂದು ಮಗುವಿನ ಹಾಗೆಯೇ. ಕೆಲವೊಮ್ಮೆ ತಾಯಿಯ ಹಾಗೆ ಕಾಣುವ ಮತ್ತೆ ಕೆಲವು ಸಲ ಮಗುವಿನ ತರಹ ಆಡುವ ಈ ರೀತಿ ಕೇವಲ ಅವಳಿಗೆ ಮಾತ್ರ ಸಾಧ್ಯವೇನೋ. ಸಂತೋಷದಲ್ಲಿ ಕಳೆದ ಆ ಬಾಲ್ಯದ ಕ್ಷಣಗಳ ನೆನಪುಗಳೆಲ್ಲ ಇಂದು ನಿನ್ನೆಯದೇನೋ ಎನ್ನಿಸುತ್ತದೆ. ಅಂದಹಾಗೆ ಇಂದು ಅವಳ ಜನುಮದಿನ, ಮತ್ತೊಂದು ವರ್ಷ ಹೆಚ್ಚಾಯಿತು ಎಂದು ನೆನಪು ಮಾಡಿಕೊಡುವ ದಿನ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಇಲ್ಲೊಮ್ಮೆ ಹೇಳಿ ಒಮ್ದು ಪೂರ್ಣವಿರಾಮವನ್ನು ಇಡುತ್ತೇನೆ.

Saturday 3 November 2012

ಮತ್ತಿನ್ನೇನು ಬೇಕು



ನಿನ್ನೊಲವಿನ ಸಾಗರದಿ ನಾ ಮುಳುಗುವಂತಿದ್ದರೆ  
ನೀನರಿಯದೆ ಹೋದರೂ ನಾನಲ್ಲಿಯೇ ಇದ್ದರೆ 
ಮತ್ತಿನ್ನೇನು ಬೇಕು
ಜೀವಕೆ ಈ ಜೀವನಕಷ್ಟು ಸಾಕು ||ಪ||

ನಿನ್ನದೇ ನೆನಪಿನಲಿ ನಾ ಬವಳಿ ಬೆಂಡಾಗಿರೆ
ಕನಸಾಗಿಯಾದರೂ ನೀನೊಮ್ಮೆ ಸೋಕಿದರೆ
ಸಾವಿರದ ಗುಂಪಿನಲ್ಲೂ ಎದ್ದು ಕಾಣುವ ನೀ
ಎದ್ದು ನಿತ್ತರೂ ಕಾಣದ ನನ್ನೊಮ್ಮೆ ಗುರುತಿಸಿದರೆ
ಮತ್ತಿನ್ನೇನು ಬೇಕು
ಜೀವಕೆ ಜೀವನಕಷ್ಟು ಸಾಕು ||1||

ಹಾಡಲ್ಲದ ನನ್ನ ಹಾಡಿಗೆ ನೀ ಕಿವಿಯಾದರೆ
ನಗುಬಾರದ ಜೋಕಿಗೆ ನೀನೊಮ್ಮೆ ನಕ್ಕರೆ
ನಿನ್ನ ಘಮದ ನಡುವೆ ನಾ ಕಳೆದುಹೋದರೆ
ಅಲ್ಲಿ ನನ ಸುಳಿವನ್ನು ನೀನೇ ಪತ್ತೆಹಚ್ಚಿದರೆ
ಮತ್ತಿನ್ನೇನು ಬೇಕು
ಜೀವಕೆ ಜೀವನಕಷ್ಟು ಸಾಕು ||2||

ನಿನ್ನ ಯೋಚನೆಗಳಲಿ ನಾನೊಮ್ಮೆ ಬಂದರೆ
ಅದರಿಂದ ಮುಗುಳುನಗೆಯೊಂದು ಮೂಡಿದರೆ
ನಿನಗೆ ನನ್ನ ಮೇಲೊಂದು ಭಾವ ಮಡುಗಟ್ಟಿದರೆ
ನನ ಜೊತೆಗಿರುವ ಆಲೋಚನೆ ಹುಟ್ಟಿದರೆ
ಜೀವಕೆ ಮತ್ತಿನ್ನೇನು ಬೇಕು
ಈ ಜೀವನವೇ ಸಾಕು ||3||