Friday, 25 November 2011

ಗೆಳೆಯಾ...


ಅಂತೂ ಮುದದ ಪ್ರೀತಿಯ ಏಕತಾನತೆಗೆ ಒಂದು ವಿರಾಮ ಸಿಕ್ಕಿದೆ, ಅಲ್ಪವಿರಾಮವೇ ಇರಬಹುದು. ಅಲ್ಲ ಇದು ಅಲ್ಪವಿರಾಮವೇ. ಏನೇ ಇರಲಿ, ಈ ಕವನ ಇರುವುದು, ಕಳೆದು ಹೋಗುವ ಗೆಳೆಯನ ಬಗ್ಗೆ, ಮಸುಕಾಗಬಹುದಾದ ಗೆಳೆತನದ ಬಗ್ಗೆ. ಯಾರೂ ವೈಯಕ್ತಿಕ ಎಂದುಕೊಳ್ಳಬಾರದು.

ತಿರುಗಿ ಸುರುಮಾಡೆ ನಾನೆಂಬ ಹಠವದೇಕೆ, ಅದೇನು ಹಗೆ
ಪದಗಳಿಗೆ ತಡಕಾಡದೇ ಕೊರಗುವ ಶಬ್ದಮರೆತ ಕವಿಯ ಹಾಗೆ||ಪ||

ಮಾಯದ ಗಾಯಕೆ ಮುಲಾಮು ಹಚ್ಚಿ ಕೆದಕುವ ಮನಸಾಗಿದೆ
ರಾಜಿ ಮಾತಾಡದೇ ಭೇದಕೆ ರಾಜೀನಾಮೆ ಕೊಟ್ಟ ಕನಸಾಗಿದೆ
ಇಷ್ಟು ಹತ್ತಿರ ಬಂದು ದೂರವೇ ಉಳಿದಿದ್ದಕ್ಕೆ ಮುನಿಸಾಗಿದೆ
ನಸುನಗುವಿಗೆ ದಾರಿಯಾಗಲೆಂದು ಜಗಳವೊಂದ ಕರೆಸಾಗಿದೆ||೧||

ಖಾಲಿ ಸಂದೇಶಗಳಲ್ಲಿ ಮಾತು ತುಂಬಿದ್ದವು ಅಲ್ಲವೇ ಗೆಳೆಯ
ಬಿಗುಮಾನದ ಮೌನದಲಿ ಮರೆತು ಹೋಯಿತೆ ಪರಿಚಯ
ಮುನಿದ ಮನಕೆ ಮಾತಾಡಲು, ಆಡದಿರಲು ಬೇಕೆ ಪ್ರಮೇಯ
ಹೇಗೆ ಹುಟ್ಟಿಸಿ ಹೇಳಲಿ ಮಿತ್ರಾ, ಇನ್ನೂ ಹುಟ್ಟೇ ಇಲ್ಲದ ವಿಷಯ||೨||

ಜಗಳವಾದರೆ ಆಗಲಿ ಮೌನ ಹಿತವೆ, ಕಳೆವುದೇ ಅಲವರಿಕೆ
ಮಾತಿಗೆಲ್ಲ ಅಕಾಲಿಕ ಮರಣವಾಗಿ ಶೂನ್ಯ ಕಾಡಿತ್ತು ಯಾಕೆ
ಹಮ್ಮಿನಾವೇಶದ ನಡುವೆ ಕೇಳದೇ, ಈ ಸ್ನೇಹದ ಕನವರಿಕೆ
ಜ್ಞಾನದನ್ವೇಷಣೆಯ ಮಧ್ಯೆ ಆಗಲಿಲ್ಲವೇ ಸಮಯ ಭಾವಗ್ರಾಹಕೆ||೩||

Wednesday, 16 November 2011

ಹಾಗೇ ಸುಮ್ಮನೇ


ನನ್ನೊಲವ ಮನದಲ್ಲೇ ಗಟ್ಟಿಗೊಳಿಸಿ-
ಕುಳಿತೆ ಯಾರಿಗೂ ತಿಳಿಯದಂತೆ;
ಅವಳಿಗೂ ತಿಳಿಯಲಿಲ್ಲ.
ಪ್ರಯೋಜನವಿಲ್ಲವೆಂದು ಅವಳೆದುರು
ಹರಿಯಬಿಟ್ಟೆ ಒಂದು ಸಲ;
ಅವಳಿಗಿಷ್ಟವಾಗಲಿಲ್ಲ.
ಮನನೊಂದು ಕೊರಗಿ,
ಕವನವಾಗಿಸಿದೆ ನೋವ;
ಇಷ್ಟಪಟ್ಟಿರಿ ನೀವು.
ನಾನೇನಂದುಕೊಳ್ಳಲಿ ಈಗ,
ದುಃಖದ ಅರ್ಥ ಕಳೆದುಹೋಗಿದೆ ಎಂದೋ
ಅವಳು ತಿರಸ್ಕರಿದಂದೇ;
ಸಂತೋಷ ಎನಿಸದಾಗಿದೆ
ಜೀವದ ಜೀವವಿರದೆ;
ಇದನ್ನೇ ಎನ್ನುವುದೇ ನಿರ್ಭಾವ ಎಂದು.

Saturday, 12 November 2011

ಹಿಂದೆ ಮುಂದೆ ನೋಡದೇ ಬಂದು ಬಿಡು ಕನಸೆ

ಇದು ೨೫ನೇ ಪೋಸ್ಟ್. ಎಷ್ಟು ಬೇಗ ಇಷ್ಟು ಬರೆದೆ ಎನ್ನಿಸುತ್ತದೆ. ಈ ಬ್ಲಾಗ್ ಎಂಬ ಮಾಧ್ಯಮ ಇಲ್ಲದೆ ಹೋಗಿದ್ದರೆ ಇಷ್ಟು ಬರೆಯುತ್ತಿರಲಿಲ್ಲ ಎಂಬುದು ದಿಟ.   ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.

ಅದಿರಲಿ , ಬೇರೇನಾದರೂ ಬರೆಯಬೇಕೆಂದುಕೊಂಡು ಮನಸ್ಸಲ್ಲಿ ತುಂಬಿಕೊಂಡರೂ ಮನಸ್ಸಿನಲ್ಲಿ ಮತ್ತದೇ ಭಾವಲಹರಿ ಮೂಡಿ ಕೂಡುತ್ತಿದೆ. ನನಗೇ ಏಕತಾನತೆ ಎನಿಸುವ ಮಟ್ಟಿಗೆ ಒಂದೇ ವಿಷಯದ ಬಗ್ಗೆ ಬರೆಯುತ್ತಿದ್ದೇನೆ. ಗೊತ್ತಿಲ್ಲ ಎಲ್ಲಿಯವರೆಗೆ ಎಂದು. ಅಷ್ಟಕ್ಕೂ ಎಲ್ಲವೂ ಗೊತ್ತಿದ್ದರೆ ಜೀವನಕ್ಕೆ ಅರ್ಥವೇನು? ಇರಲಿ ಬಿಡಿ. ನನ್ನ ಕವನ, ಅದಾವುದನ್ನೂ ಯೋಚಿಸದೆ ಹಾಗೆ ಸುಮ್ಮನೆ ಓದಿಕೊಳ್ಳಿ.

ಹಿಂದೆ ಮುಂದೆ ನೋಡದೇ ಬಂದು ಬಿಡು ಕನಸೆ
ಎರಡು ಕೈ ಚಾಚಿ ಸ್ವಾಗತಿಸಲು ನನ್ನ ಮನಸಿದೆ
ಆಕರ್ಷಣೆಯ ಮೂಲವೇ ತಪ್ಪಿಹೋದರೇನಂತೆ
ಅದನು ಮೀರಿ ಸೆಳೆದು ಬಿಡುವುದು ನಿನಗೆ ಹೊಸದೆ||ಪ||

ಮೊದಲ ಬಾರಿ ಹುಟ್ಟಿ ಅರಳಿದ  ಭಾವನೆಯೇ
ಹೆಸರಿನ ಗೊಡವೆಯೇಕೆ ನಿನಗೆ ಅದು ಬೇಕೆ?
ಪದೆ ಪದೆ ಮನದಾಳ ಕಲಕುವ ಬಯಕೆಯೇ
ನನಗೇ ತಿಳಿಯದೇ ಹೋಗಿದೆ ಏನಿದು ಹಂಚಿಕೆ||೧||

 ಯಾವ ರಾಗವೋ ಯಾವ ತಾಳವೋ ತಿಳಿಯದು
ನನಗೆ ತಿಳಿದಿದ್ದು ಒಂದೆ ಅದು ನಿನ್ನ ಅನುರಾಗ
ಚಿಮ್ಮಿ ಬಂದವು ಭಾವದ ಒರತೆ  ಕಟ್ಟು ಮೀರಿ
ಭಾವಗಳಭಾವದ ಬರಡುತನವ ನೀಗಿದಾಗ||೨||

ಬರೀ ಮಾತೊಂದಕೆ ಸುತ್ತೆಲ್ಲ ಹೊರಜಗತ್ತು
ಮಸುಕು ಮಬ್ಬಾಗಿದೆ ನನಗೆ ಗೊತ್ತೇ ಇಲ್ಲದೇ
ಕಾದು ಸಾಕಾಗಿದೆ ನಿನ್ನನೇ ಹುಡುಕಿದೆ
ವಲಸೆ ಹೋಗಿದೆ ನನ್ನೆದೆ ತಿರುಗಿ ಬಾರದೆ||೩||

ಹೃದಯ ಬಡಿಯದೆ ನಿಂತಿದೆ ನೀ ಬರಬಹುದೆ ಎಂದು
ನಗೆಯೊಂದನೆಸೆಯಬಾರದೆ ಸಾಕಾಗಿದೆ ನೊಂದು
ಪ್ರೀತಿಯಲಿ ನಾನು ಉನ್ಮತ್ತ ನನಗಾವ ಪ್ರಮೇಯ
ನಶೆ ತಲೆಗೇರಿದೆ ಇಳಿವ ದಾರಿ ತಿಳಿಯದೆ ಅಯೋಮಯ||೪||

Saturday, 5 November 2011

ಒಂದಿಷ್ಟು ಹನಿಗವನಗಳು
ಒಲವು ಭಾಷ್ಪೀಕರಿಸಿ ಮಾತಾಗಿ
ಮಾತು ಘನಿಸಿ ಮೌನವಾಗಿ
ಮೌನ ಕರಗಿ ಅಶ್ರುವಾಗಿ
ಕೆನ್ನೆಯನಪ್ಪಳಿಸುವುದೆ
ಪ್ರೇಮ ವರ್ಷಚಕ್ರವೇ


ಇದೆ ಕೊನೆಯ ಬಾರಿ ಎಂದು
ಮರೆತು ಬಿಡುವೆ ಇನ್ನು ಎಂದು
ಕಟ್ಟು ಹಾಕಿ ಕುಳಿತರೂ
ಬತ್ತಿ ಹೋಗದ ನೆನಪೇ
ನಿನಗೇನ ಮಾಡಲಿ ನಾನು?

ನಿನಗರ್ಥವಾಗದ ಹಾಗೆ
ನಾ ನಿನ್ನ ಪ್ರೀತಿಸಿದೆನೆಂದರೆ
ಅದು ನನ್ನ ತಪ್ಪೇ ನೀನೇ ಹೇಳು
ನನಗೆ  ಹೇಳಲರಿಯದು ಎಂದು
ನನ್ನ ಮನದಾಳದ ಒಡತಿಯೇ
ನಿನಗೆ ನಿಜವಾಗಿಯೂ ತಿಳಿಯದೇ

ಪ್ರಿಯಸಖಿ ಎಂದರೂ
ಈಡಿಯಟ್ ನೀನೆಂದರೂ
ಜೀವದುಸಿರು ಎಂದರೂ
ಭಾವಸ್ರಾವದ ಸೆಲೆಯೆಂದರೂ
ಮನಬಿಟ್ಟು ಹೋಗೆಂದರೂ
ಕೈ ಚಾಚಿ ಬಾ ಎಂದರೂ
ಯಾವಾಗ ನಾ ಏನೇ ಎಂದರೂ
ಎಲ್ಲೆಡೆ ಹಾಸುಹೊಕ್ಕಾಗಿರುವುದು
ಅಲ್ಲೆಲ್ಲ ಕಾಣುವುದು ಬರೀ ನೀ ಮಾತ್ರವೇ