Saturday 25 February 2012

ಪ್ರಣವ ಪ್ರೇಮ ಪುರಾಣ(ಭಾಗ ೧)


ಒಂದು ದೊಡ್ಡ ಕಥೆ, ಎರಡು ಸಿಕ್ಕ ಭಾಗಗಳಾಗಿ ಪ್ರಕಟಿಸುತ್ತಿದ್ದೇನೆ. ಪ್ರತಿಕ್ರೀಯೆಗಳಿಗೆ ಸ್ವಾಗತ.


ಪ್ರಣವ್ ಕಂಡಂತೆ:
ಎರಡು ವರ್ಷದ ಕೆಳಗೆ, ಎರಡೇ ಎರಡು ವರ್ಷದ ಕೆಳಗೆ ಯಾರಾದರೂ ನನ್ನನ್ನು ನೀನು ಹೀಗೆ ಬನಶಂಕರಿಯ ಈ ಒಂಟಿರೂಮಿನಲ್ಲಿ ಎರಡು ವರ್ಷದ ನಂತರ ಇರುತ್ತೀಯಾ, ಕಷ್ಟಪಟ್ಟು ಮಾತನಾಡುತ್ತಿದ್ದ ಕನ್ನಡವನ್ನು ಹೀಗೆ ಅಷ್ಟು ಪ್ರೀತಿಯಿಂದ ಕಲಿಯುತ್ತೀಯಾ ಎಂದು ಹೇಳಿದ್ದರೆ ಸ್ವತಃ ನಾನೇ ನಂಬುತ್ತಿರಲಿಲ್ಲವೇನೋ, ಆದರೆ ಒಬ್ಬ ಹುಡುಗಿ ಜೀವನದಲ್ಲಿ ಏನೆಲ್ಲಾ ಬದಲಾಯಿಸಬಹುದು ನೋಡಿ! ಮೂರನೇ ಸೆಮೆಸ್ಟರ್ ನ ಪ್ರಾರಂಭದಲ್ಲಿ  ಒಂದಿನ ಎಂದಿನಂತೆ ಲೇಟಾಗಿ ಕಾಲೇಜಿಗೆ ಬೈಕಿನಲ್ಲಿ ಬರುತ್ತಿದ್ದಾಗ ತಾನಾಗೇ ಬಂದು ಡ್ರಾಪ್ ಕೇಳಿ, ಹೋಗುವಾಗ ಒಂದು ಥ್ಯಾಂಕ್ಸ್ ಹೇಳಿ ನಗುವನ್ನೂ ಬೀರದೇ, ಎಷ್ಟು ಬಾರಿ ಅರ್ಥ ಮಾಡಿಕೊಂಡೆ ಎಂದು ತಿಳಿದುಕೊಂಡರೂ ಮತ್ತೂ ಅಪರಿಚಿತವಾಗಿಯೇ ಉಳಿದ ಸುವಿಧಾ ಎಂಬ ಒಂದು ಉದ್ದ ಜಡೆಯ ಒಡತಿ, ಇಷ್ಟೆಲ್ಲಾ ಬದಲಾವಣೆಯನ್ನು ನನ್ನ ಜೀವನದಲ್ಲಿ ತಂದಳು ಎಂಬುದು ಎಷ್ಟು ವಿಚಿತ್ರವೋ ಅಷ್ಟೇ ನಂಬಲಸಾಧ್ಯ ಕೂಡ.
ಆ ದಿನ ಹಾಗೆ ಅವಳು ತನ್ನ ಪಟ್ಟೆಪಟ್ಟೆಯ ಸಲ್ವಾರ್ ನ ನೆರಿಗೆಗಳನ್ನು ಸರಿಪಡಿಸಿಕೊಳ್ಳುತ್ತಾ, ಹಿಂದಕ್ಕೆ ತಿರುಗದಂತೆ ಹೋಗುತ್ತಿದ್ದರೆ ಈ ನನ್ನ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. ಅಲ್ಲಿಯವರೆಗೆ ಪ್ರಥಮ ನೋಟದ ಪ್ರೇಮವನ್ನು ಎಷ್ಟರ ಮಟ್ಟಿಗೆ ನಾನು ಅಸಹ್ಯಿಸಿಕೊಳ್ಳುತ್ತಿದ್ದೆನೋ, ಅಷ್ಟೇ ಪ್ರಮಾಣದಲ್ಲಿ ನಂಬಲು ಪ್ರಾರಂಭಿಸಿದೆ. ಜೀವನದಲ್ಲಿ ನಾನೆಂದಾದರೂ ಪ್ರೀತಿಸುವುದಾದರೆ ಇವಳನ್ನೇ ಎಂದು ಅಲ್ಲೇ ನಿರ್ಧರಿಸಿದ್ದು ಎಷ್ಟು ಅವಿವೇಕಿತನವೋ, ಅಷ್ಟೇ ಪ್ರಾಮಾಣಿಕತನದಿಂದ ಆ ಮಾತನ್ನು ಕಾಪಾಡಿಕೊಂಡು ಬಂದಿದ್ದೆ. ಕಾಲೇಜಿನಲ್ಲಿ ಮಾಡಲು ಕೆಲಸವಿಲ್ಲದೇ ಸುಮ್ಮನೇ ಗೆಳೆಯರ ಗುಂಪಿನೊಂದಿಗೆ ಅಲೆಯುತ್ತಿದ್ದ ನನಗೆ, ಒಂದು ಗುರಿಯು ಅಲ್ಲಿಯೇ ಗೋಚರವಾಗಿತ್ತು. ಜೀವನದಲ್ಲಿ ಗಂಭೀರತೆ ಎಂಬುದು ಇರಲೇಬಾರದು ಎಂದು ಪ್ರತಿಪಾದಿಸುತ್ತಿದ್ದವನು, ಒಂದೇ ಸಲಕ್ಕೆ ಸೀರಿಯಸ್ ಆಗಿ ಯೋಚನೆ ಮಾಡತೊಡಗಿದ್ದೆ. ಹೆಸರು ತಿಳಿಯುತ್ತದೆ ಎಂಬ ಒಂದೇ ಕಾರಣಕ್ಕೋಸ್ಕರ ಅವಳು ಇರುತ್ತಿದ್ದ ಮೊದಲ ವರ್ಷದ ತರಗತಿಗಳಿಗೆ ಹೋಗಿ ಕುಳಿತುಕೊಂಡು ಬಂದೆ. ಎಂದಿಗಾದರೂ ಬೇಕಾಗಬಹುದು ಎಂದು, ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಅವಳ ಕ್ಲಾಸಿನ ಮೂರು ನಾಲ್ಕು ಹುಡೂಗರ ಜೊತೆ ಮೇಲೆ ಬಿದ್ದು ಗೆಳೆತನ ಬೆಳೆಸಿಕೊಂಡೆ. ಎಲ್ಲಿ ಗೆಳೆಯರ ಬಳಿ ಹೇಳಿಕೊಂಡರೆ ಆಡಿಕೊಂಡುಬಿಡುತ್ತಾರೆನೋ ಎಂದುಕೊಂಡು ಸುಮ್ಮನೇ ಮನಸ್ಸಿನೊಳಗಿಟ್ಟುಕೊಂಡು ಕುಳಿತೆ. ಇಂಟರ್ನೆಟ್ ಎಂಬ ಇಂಟರ್ನೆಟ್ಟನ್ನು ಒಂದು ವಾರದ ಒಳಗೆ ಜಾಲಾಡಿಬಿಟ್ಟಾಗುತ್ತಿತ್ತು. ಅಷ್ಟೇನೂ ಇಷ್ಟವಿಲ್ಲದಿದ್ದರೂ, ಅವಳು ಕಾಲೇಜು ಡ್ಯಾನ್ಸ್ ಗ್ರುಪಿನಲ್ಲಿದ್ದಳು ಎಂಬ ಒಂದೇ ಕಾರಣಕ್ಕೆ, ಹುಟ್ಟು ನರ್ತಕನೇನೋ ಎಂಬಂತೆ ಸೇರಿಕೊಂಡೆ ಎಂಬ ಅಂಶಕ್ಕೆ ಇಂದಿಗೂ ನನಗೆ ಕಿರುನಗೆ ಮೂಡುತ್ತದೆ. ಕಂಡೂ ಕಾಣದಂತೆ, ಗುರುತಿಸಿಯೂ ಗುರುತಿಸದಂತೆ ಕಳೆದುಹೋಗುತ್ತಿದ್ದ ಘಳಿಗೆಗಳ ಮಧ್ಯೆ ನಾನು ಅವಕಾಶಗಳಿಗೆ ಕಾಯುತ್ತ ಕುಳಿತಿದ್ದೆ, ಥೇಟು ಚಾತಕಪಕ್ಷಿಯಂತೆ.
ಅಂತೂ ದೇವರು ಅಸ್ತು ಎಂದನೋ, ಸಂಭವನೀಯತೆಯ ನಿಯಮಗಳ ಅನುಗ್ರಹವೋ ಅಥವಾ ಕೇವಲ ನಮ್ಮಿಬ್ಬರ ಎತ್ತರದಲ್ಲಿದ್ದ ಸಾಮ್ಯತೆಯ ಫಲವೋ, ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಕೊಡಬೇಕಿದ್ದ ನೃತ್ಯಕ್ಕೆ ಕೇಶವ್ ಸರ್ ನಮ್ಮಿಬ್ಬರನ್ನು ಮುಂಭಾಗದ ಜೋಡಿಯಾಗಿ ಆರಿಸಿದ್ದರು. ಅದರಿಂದ ಅಧೀಕೃತವಾಗಿ ಸ್ವಲ್ಪ ಮಾತನಾಡಿ ಗೆಳೆತನ ಬೆಳೆಸಿಕೊಳ್ಳಬಹುದೆಂದು ನಾನು ಹೊಂಚು ಹಾಕಿಕೊಂಡಿದ್ದರೆ, ಅದು ಘನಘೋರವಾಗಿ ವಿಫಲವಾಗಿದ್ದು ದೈವವಿದಿತ ಕ್ರೂರಸತ್ಯ. ನಾನು ಕಂಡಷ್ಟೂ ಸಲವೂ ಬಿಗುಮಾನ ಮೀರಿ ಪರಿಚಯದ ನಗೆ ಬೀರಿ ಒಂದು ತಿರುನಗೆಯ ನಿರೀಕ್ಷೆಯಲ್ಲಿ ಕುಳಿತರೆ, ಅವಳು ಆ ನಗೆಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿದ್ದುಬಿಡುತ್ತಿದ್ದಳು. ಅವಳು ಒಂದು ದಿನ ಕಾಲೇಜಿಗೆ ಬರದಂತಾಗಿ, ಆ ದಿನದ ಪಾಠವನ್ನು ಹೇಳಿಕೊಡುವಂತೆ ನನ್ನನ್ನು ಕೇಳಿದಾಗಲೇ, ಅವಳಿಗೂ ನನ್ನ ಅಸ್ತಿತ್ವದ ಅರಿವಿದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು. ಆ ಸಂತೋಷದಲ್ಲಿಯೇ ಮುಳುಗಿ, ನಾನು ಮಾತನಾಡಲು ವಿಪರೀತ ತಡವರಿಸಿ ಅವಳೇ ’ಸ್ವಲ್ಪ ಕೂಲ್ ಡೌನ್’ ಎಂದು ಹೇಳಿದಳು ಎಂಬಲ್ಲಿಗೆ ಹುಡುಗಿ ಮೊದಲ ಬಾರಿಗೆ ನಕ್ಕಂತಾಯ್ತು. ನಗೆಮಲ್ಲಿಗೆ ಬಿರಿದಿತ್ತು ಅವಳ ಮುಖದಲ್ಲಿ, ಪ್ರೇಮಬೀಜ ಚಿಗಿದಿತ್ತು ನನ್ನ ಎದೆಯಲ್ಲಿ. ಅವಳಿಗೆ ಇಷ್ಟ ಎಂದು ದಿನವೂ ಮಧ್ಯಾಹ್ನದ ಬ್ರೇಕಿನಲ್ಲಿ ಕಾಲೇಜು ಗೇಟಿನ ಹೊರಗೆ ಹಾಕಿರುತ್ತಿದ್ದ ಟೆಂಟ್ ಗೆ ಊಟ ಮಾಡಲು ಹೋಗಲು ಪ್ರಾರಂಭಿಸಿದೆ. ಅಷ್ಟೇ ಆಗಿದ್ದರೆ ಉಳಿಯುತ್ತಿದ್ದನೇನೋ, ಆದರೆ ಒಂದು ಸಲ ಮಾತಿನ ಓಘದಲ್ಲಿ ’ಒಂದು ವರ್ಷದಿಂದ ಇಲ್ಲಿಯೇ ಊಟಕ್ಕೆ ಬರುತ್ತಿದ್ದೆ’ ಎಂದು ನಾನು ಹೇಳಿಕೊಂಡು, ಅವಳು ’ಇದು ಪ್ರಾರಂಭವಾಗಿದ್ದು  ಕೇವಲ ಒಂದು ತಿಂಗಳ ಹಿಂದೆ’ ಎಂದು ನಗುವನ್ನು ಪ್ರಯತ್ನಪೂರ್ವಕವಾಗಿ ತಡೆದುಕೊಂಡು ಹೇಳಿದಾಗ ನನ್ನ ಮುಖ ನನಗೇ ಗೊತ್ತಗುವಷ್ಟು ಇಂಗು ತಿಂದ ಮಂಗನಂತಾಗಿತ್ತು. ಹೀಗೆಯೇ ಹಾಗೋ ಹೀಗೋ ಎಂದುಕೊಂಡು ಸಿಕ್ಕ ಚಿಕ್ಕ ಚಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಹೀಗೆ ನಾನು ಒದ್ದಾಡುತ್ತಿರುವ ಸಮಯದಲ್ಲಿಯೇ ಕಾಲೇಜಿನಲ್ಲಿ ಒಂದು ರೇಸಿಂಗ್ ಕಾರು ನಿರ್ಮಾಣ ಮಾಡುವ ಪ್ರೊಜೆಕ್ಟ್ ’ಚೇತಕ್’ ಎಂಬ ಹೆಸರಿನಲ್ಲಿ ಪ್ರಾರಂಭವಾಯ್ತು. ನಾನು ಮತ್ತು ನನ್ನ ಗೆಳೆಯರೇ ಮುಂಚೂಣಿಯನ್ನು ತೆಗೆದುಕೊಂಡು ಕೆಲಸ ಪ್ರಾರಂಬಿಸಿದ್ದೆವು. ಯಾವ ಲೆಕ್ಚರರ್ ಹೇಳಿಕೊಟ್ಟಿದ್ದರ ಬಗ್ಗೆಗೂ ಎಂದಿಗೂ ತಲೆ ಕೆಡಿಸಿಕೊಳ್ಳದಿದ್ದ ನಾವು ಭಯಂಕರವಾಗಿ ಈ ಕೆಲಸದಲ್ಲಿ ಮುಳುಗಿಹೋದೆವು. ಇದರ ಮಧ್ಯೆ ಡ್ಯಾನ್ಸ್ ಕ್ಲಾಸೂ,ಅಲ್ಲಿ ಮಾತನಾಡಲು ಹೋಗಿ ಗೋಲ್ ಆಗದೇ ಹೋದ ಎಷ್ಟೋ ಪೆನಾಲ್ಟಿ ಕಿಕ್ ಗಳೂ, ದಿನಂಪ್ರತಿ ಸಿಕ್ಕಿದಾಗಲೂ ಇಬ್ಬರೂ ’ಹಾಯ್, ಬೈ’ ಹೇಳುವುದೂ( ಅವಳು ಯಾರಿಗೂ ಹಾಗೆ ವಿಶ್ ಮಾಡದವಳಲ್ಲವಾದ್ದರಿಂದ ತನ್ನನ್ನು ಅವಳು ಏನೋ ವಿಶೇಷವಾಗಿ ಗಣಿಸುತ್ತಾಳೆ, ಎಂದು ನಾನು ಭಾವಿಸತೊಡಗಿದ್ದು ತಪ್ಪಾದರೂ ಹರೆಯದ ಹುಡುಗರಿಗೆ ಅದು ಸಾಮಾನ್ಯವೇ!) ಇವೆಲ್ಲವೂ ದೈನಂದಿನ ಭಾಗವಾಗಿಹೋದವು.
ಸ್ವಾತಂತ್ರ್ಯ ದಿನದ ಕಾರ್ಯಕ್ರಮ ಸಾಂಗವಾಗಿ ನಡೆದು, ಎಂದರೆ ನಾನು ಎಲ್ಲೂ ತಪ್ಪು ಹೆಜ್ಜೆ ಹಾಕದೇ, ಸುವಿಧಾ ಅಮೋಘವಾಗಿ ನರ್ತಿಸಿದಳು ಎಂಬಲ್ಲಿಗೆ (ನನ್ನ ಕುಂದುಕೊರತೆಗಳನ್ನೂ ಮುಚ್ಚಿಹಾಕುವಂತೆ) ನಮ್ಮಿಬ್ಬರದ್ದು ಒಂದು ಸೆಟ್ ಆದ ನೃತ್ಯ ಜೋಡಿಯಾಯಿತು. ನಾನು ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದೆನಾದರೂ ಸುವಿಧಾಳ ಮಟ್ಟಕ್ಕೆ ಹೋಗುವುದು ಮನುಷ್ಯಮಾತ್ರದವರಿಗೆ  ಅಸಾಧ್ಯವೇ ಆಗಿತ್ತು. ಅವಳು ಡ್ಯಾನ್ಸ್ ಮಾಡುತ್ತಿದ್ದರೆ ಸುಲಲಿತ ಸರಳವಾಗಿ, ವಿ. ವಿ. ಎಸ್. ಲಕ್ಷ್ಮಣ್ ಬ್ಯಾಟಿಂಗ್ ನಂತೆ ಕಾಣುತ್ತಿತ್ತು, ಶಾಸ್ತ್ರೀಯ ನೃತ್ಯವನ್ನು ಅಭ್ಯಾಸಮಾಡಿಕೊಂದಿದ್ದಳಾದರೂ,  ಉಳಿದ ಪ್ರಕಾರಗಳಲ್ಲಿ ಅವಳೇನೂ ಹಿಂದೆ ಬಿದ್ದಿರಲಿಲ್ಲ. ಇದಾದ ಮೇಲೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ  ಇಂಜಿನಿಯರಿಂಗ್ ಕಾಲೇಜುಗಳ ಸ್ಪರ್ಧೆಗೆ ಈ ಸಲ ಇವರ ಕಾಲೇಜು ಆತಿಥ್ಯ ವಹಿಸಿಕೊಂಡಿತ್ತಾದ್ದರಿಂದ ಈ ಸಲದ ನೃತ್ಯಸ್ಪರ್ಧೆಯನ್ನು ಗೆಲ್ಲುವುದು ಕಾಲೇಜಿಗೆ ಪ್ರತಿಷ್ಠೆಯ ವಿಷಯವಾಗಿ ಹೋಗಿ, ನಾಡಿನ ಪ್ರಸಿದ್ಧ ಕೋರಿಯೋಗ್ರಾಫರ್ ನಾರಾಯಣಮೂರ್ತಿ ಅವರನ್ನು ಕರೆಸಿದ್ದರು, ಅವರೋ ಬಹುತೇಕ ಕನ್ನಡದಲ್ಲೇ ಅತಿವೇಗವಾಗಿ ಮಾತನಾಡುತ್ತಿದ್ದರಾಗಿ ನನಗೆ ಅರ್ಧಕ್ಕರ್ಧ ಅರ್ಥವಾಗುತ್ತಿರಲಿಲ್ಲವಾದ್ದರಿಂದ, ಅದೆಲ್ಲವನ್ನು ಕನ್ನಡತಜ್ಞೆ ಸುವಿಧಾಳೇ ಇಂಗ್ಲೀಷಿಗೆ ಭಾಷಾಂತರಿಸಿ ವಿವರಿಸಬೇಕಾಗುತ್ತಿತ್ತು. ಹೀಗೇ ಎಲ್ಲವೂ ಸುಸೂತ್ರವಾಗಿ ಹೋಗುತ್ತಿರಬೇಕಾದ ಸಮಯದಲ್ಲಿಯೇ ನಾನು ಒಂದು ಹುಚ್ಚುತನಕ್ಕೆ ಕೈ ಹಾಕಿದ್ದು, ಕೈ ಸುಟ್ಟುಕೊಂಡಿದ್ದು; ಪೂರ್ತಿಯಾಗೇನೂ ಅಲ್ಲದಿದ್ದರೂ. ಇದು ಆಗಿದ್ದು ಹೀಗೆ.
ನಾನು ಪ್ರತೀ ಬಾರಿ ಅವಳನ್ನು ನೋಡಿದಾಗಲೂ ಇವನ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. ನಿಜವಾಗಿಯೂ ಹೃದಯಮಂಡಲದಲ್ಲಿ ಏನೋ ಒಂದು ಚಲನೆ ಉಂಟಾಗಿ ಎಲ್ಲ ರಕ್ತನಾಳಗಳೂ ಸ್ಥಾನಪಲ್ಲಟವಾದ ಹಾಗೆ. ಎಲ್ಲರೂ ಹೇಳುವ ಹಾಗೆ, ಸಿನಿಮಾಗಳಲ್ಲಿ ತೋರಿಸುವ ಹಾಗೆ, ಮೊದಲ ಬಾರಿಯ ಪ್ರೀತಿಯ ಪುಳಕ. ಪ್ರತೀ ಬಾರಿ ಅವಳು ಮಾತನಾಡುವಾಗಲೂ ಉಳಿದ ಜಗತ್ತೆಲ್ಲ ಶೂನ್ಯಕ್ಕೆ ಹೋದ ಹಾಗೆ, ಗಾಳೀ ಉಸಿರಾಡುವುದನ್ನೂ ಮರೆತು ಅವಳನ್ನು ನೋಡುತ್ತಾ ಕಳೆದು ಹೋದ ಹಾಗೆ ಎನಿಸುತ್ತಿತ್ತು. ಅವಳ ಬಗ್ಗೆ ಯೋಚನೆ ಮಾಡುವಾಗಲೆಲ್ಲ ತಲೆಗಿಂತ ಹೃದಯವೇ ಹೆಚ್ಚು ಕೆಲಸ ಮಾಡುತ್ತಿತ್ತು. ಪ್ರಪಂಚವೇ ಹಗುರಾದಂತೆ, ತನ್ನ ಎದೆ ಮಾತ್ರ ಭಾರವಾದಂತೆ, ಎಲ್ಲ ಕಳೆದುಕೊಂಡೂ ಅತಿಖುಷಿಯಲ್ಲಿದ್ದಂತ ಅನುಭೂತಿ. ಜಗತ್ತೆಲ್ಲ ತನ್ನದೇ ಎಂದು ಅರಳು ಹುರಿದಂತೆ ಮಾತನಾಡುವ ನಾನು ಅವಳ ಸನ್ನಿಧಾನದಲ್ಲಿ ಪ್ರತಿ ಶಬ್ದಕ್ಕೂ ತಡವರಿಸುತ್ತಿದ್ದೆ. ಅದಕ್ಕೆ ಸರಿಯಾಗಿ, ಯಾರಿಗೂ ಪರಿಚಯದ ನಗೆಯನ್ನೂ ಆಡದ ಸುವಿಧಾ ನನ್ನನ್ನು ನೋಡಿದ ತಕ್ಷಣ ಏನೋ ಖುಷಿಗೊಂಡವಳಂತೆ ಕೈ ಬೀಸಿ ಹಾಯ್ ಎನ್ನುತ್ತಿದ್ದಳು. ಮಾತನಾಡುವಾಗಲೂ ಮತ್ತಾರ ಬಳಿಯೂ ತೋರಿಸದಂತ ತಾದಾತ್ಮ್ಯವನ್ನು ನನ್ನ ಬಳಿ ತೋರಿಸುತ್ತಿದ್ದಳು ( ಅವಳು ನಿಜವಾಗಿಯೂ ಹಾಗೆ ಮಾಡುತ್ತಿದ್ದಳೋ ಇಲ್ಲವೋ, ನನಗಂತೂ ಹಾಗನ್ನಿಸುತ್ತಿದ್ದುದು ನಿಜ). ಆದರೆ ಕೆಲವೊಮ್ಮೆ ಅವಳು ಅವಳ ಗೆಳತಿಯರ ಜೊತೆಗಿದ್ದಾಗ ವಿಚಿತ್ರವಾಗಿ ಪರಿಚಯವೇ ಇಲ್ಲದವರ ಹಾಗೆ ಆಡುತ್ತಿದ್ದುದನ್ನು ನಾನು ಗಮನಿಸಿದ್ದೆ. ಹುಡುಗಿಯರಿಗೆ ಸಹಜವಾಗಿಯೇ ಇರುವ ನಾಚಿಕೆ ಎಂದೇ ತಿಳಿದುಕೊಳ್ಳೋಣ ಎಂದರೆ ಸುವಿಧಾ ಹಾಗೆ ನಾಚಿಕೆಯ ಹೆಣ್ಣಲ್ಲ, ಮೇಲಾಗಿ ಕೆಲವೊಮ್ಮೆ ಬಹಳ ಹತ್ತಿರದವಳಂತೆ ಮಾತನಾಡುತ್ತಾ, ಮತ್ತೆ ಕೆಲವೊಂದು ಸಲ ಎಲ್ಲೋ ಒಮ್ಮೆ ನೋಡಿದವರ ಹಾಗೆ ಮಾಡಿಬಿಡುತ್ತಿದ್ದಳು. ಇದೆಲ್ಲಕ್ಕಿಂತ ಹೆಚ್ಚಾಗಿ, ಇದ್ದುದ್ದನ್ನು ಇಲ್ಲದ್ದನ್ನು ಎಲ್ಲಾ ಚಿಂತಿಸಿ ನನ್ನ ತಲೆ ಚಿಟ್ಟು ಹಿಡಿಯಲಾರಂಭಿಸಿ, ಇದಕ್ಕೊಂದು ಉತ್ತರ ಬೇಕು ಎಂದು ನನ್ನಷ್ಟಕ್ಕೆ ನಾನೇ ನಿರ್ಧರಿಸಿಕೊಂಡೆ. ಇರುವ ಅನಿಶ್ಚಿತತೆಗಿಂತ ಇಲ್ಲದ ಸೌಭಾಗ್ಯವೇ ಉತ್ತಮ ಎಂಬ ಹಂತಕ್ಕೆ ಬಂದು, ಯಾವುದೋ ಒಂದು ನಿರ್ಧಾರವಾಗಿಯೇ ಹೋಗಲಿ ಎಂದು ಪ್ರಪೋಸ್ ಮಾಡಬಿಡಲು ನಿರ್ಧರಿಸಿದೆ.
ಅಂದು ನವೆಂಬರ್ ಹದಿನೆಂಟು, ಮೊದಲೇ ನಿರ್ಧರಿಸಿದ್ದಂತೆ ಏನೋ ಅತಿ ಮುಖ್ಯವಾದದ್ದೇನನ್ನೋ ಮಾತನಾಡಬೇಕೆಂದು ಹೇಳಿ, ಕಾಲೇಜಿಗೆ ಬಂಕ್ ಹಾಕಿ ಅವಳ ಕೈಯ್ಯಲ್ಲೂ ಹೇಗೋ ಕಷ್ಟ ಪಟ್ಟು ಬಂಕ್ ಮಾಡಿಸಿ ಪ್ರಸಿದ್ಧ ದ್ವಾರಕಾ ಡೀಲಕ್ಸ್ ಗೆ ಕರೆದುಕೊಂಡು ಹೋಗುವುದರೊಳಗೆ ನನ್ನ ಅರ್ಧಭಾಗ ಬುದ್ಧಿ ಖರ್ಚಾಗಿತ್ತು. ಕುಳಿತು ಎಷ್ಟು ಹೊತ್ತಾದರೂ, ತಂದಿಟ್ಟ ತಿನಿಸುಗಳೆಲ್ಲ ಖರ್ಚಾಗುತ್ತ ಬಂದರೂ ಇಬ್ಬರೂ ತುಟಿಪಿಟಿಕ್ಕೆನ್ನಲಿಲ್ಲ. (ಆಗ ಸಿನಿಮಾಗಳಲ್ಲಿ ತೋರಿಸುವ ಹಾಗೇ ಸುವಿಧಾಳೇ, "ಏನೋ ಮಾತನಾಡಬೇಕೆಂದು ಕರೆದುಕೊಂಡು ಬಂದು ಹೀಗೆ ಸುಮ್ಮನೆ ಕುಳಿತರೆ ಹೇಗೆ?" ಎಂದು ಕೇಳುತ್ತಾಳೆ, ಆಗ ತಾನು ನಾಚಿದಂತೆ ಮಾಡಿ, ಏನೂ ಇಲ್ಲ ಎಂದು ಒಂದೆರಡು ಬಾರಿ ಹೇಳಿ ನಂತರ ಹೇಗೋ ಸ್ವಲ್ಪ ಒತ್ತಯಿಸಿಕೊಂಡು, ನಂತರ ಹೇಳಿದರಾಯಿತೆಂದು ನಾನು ಬಗೆದಿದ್ದರೆ ಅಲ್ಲಿ ನಡೆದಿದ್ದೇ ಬೇರೆ.) ಅವಳೇ ಮಾತನಾಡಿದ್ದೇನೋ ನಿಜ, ಆದರೆ ವಿಷಯವಂತೂ ಶಾಕ್ ಆಗುವಷ್ಟು ಫ್ರಾಂಕ್ ಆಗಿತ್ತು. " ಒಬ್ಬ ಪರಿಚಯದ ಹುಡುಗ, ಯಾವತ್ತೂ ಇಲ್ಲದಂತೇ ಅಲಂಕಾರ ಮಾಡಿಕೊಂಡು, ಅತಿವಿಶೇಷವಾಗಿ ಒಂದು ದಿನ ಒಂದು ಹೋಟೆಲ್ಲಿಗೆ ಕರೆದಾಗಲೇ ಏನಕ್ಕಿರಬಹುದೆಂಬ ಅಂದಾಜು ಯಾವ ಹುಡುಗಿಗಾದರೂ ಸಿಗುತ್ತದೆ. ಇದನ್ನು ತಿಳಿಯಲು ಯಾವ ಮನಶ್ಶಾಸ್ತ್ರದ ಅಧ್ಯಯನದ ಅವಶ್ಯಕತೆಯಾಗಲೀ, ಅತೀಂದ್ರಿಯ ಶಕ್ತಿಯ ಅನುಗ್ರಹವಾಗಲೀ ಬೇಕಾಗಿಲ್ಲ. ನಿನ್ನ ಇಲ್ಲಿಯವರೆಗಿನ ಪ್ರತಿ ನಡೆನುಡಿಯು ನೀನು ಇವತ್ತೇನನ್ನು ಹೇಳಬೇಕೆಂದುಕೊಂಡಿದ್ದೆಯೋ ಅದನ್ನು ಹೇಳುತ್ತಿತ್ತು. ಆದರೆ ನಾನೇ ಅದನ್ನು ನಿರ್ಲಕ್ಷಿಸುತ್ತಿದ್ದೆ. ಕಾರಣಗಳು, ಒಂದು, ನಾನು ಪ್ರೀತಿ ಎಂಬ ವಿಚಾರವನ್ನೇ ನಂಬಲಾರೆ, ಅದೂ ನನ್ನ ಅಕ್ಕನಿಗಾದ ಅನ್ಯಾಯವನ್ನು ನೋಡಿದ ಮೇಲೆ, ನಿನಗೆ ಗೊತ್ತಿಲ್ಲದಿದ್ದರೆ ಅದಕ್ಕೆ ಕಾರಣವಾದವನು ನಿನ್ನ ದೊಡ್ಡಮಾವನ ಮೈದುನನ ಮಗನೇ. ಎರಡು, ನಿನಗೇ ಆಗಲೀ, ನಿನ್ನಂತ ಮತ್ತಾವ ಆಗರ್ಭ ಶ್ರೀಮಂತರ ಮಗನಿಗೆ ಆಗಲೀ, ಹುಟ್ಟುವುದು crush ಅಥವಾ infatuation ಇರಬಹುದಷ್ಟೇ. ಸ್ವಂತವಾಗಿ ನಯಾಪೈಸೆ ದುಡಿಯದೇ ಹೋದರೂ, ಹಾಲು ಬಿಸಿ ಮಾಡಿ ಕಾಫಿ ಮಾಡಲು ಬರದೇ ಹೋದರೂ,ಅಪ್ಪ ಕೊಡಿಸಿದ ಹೈ ಫೈ ಬೈಕ್ ನ ಹಿಂದೆ ಕೂತು ಹೋಗುವ ಗರ್ಲ್ ಫ಼್ರೆಂಡ್ ನನಗೂ ಬೇಕು ಎಂದೆನಿಸುವ ಒಂದು ಬಯಕೆ. ಅದನ್ನೇ ಪ್ರೇಮ ಎಂದುಕೊಂಡು ಇನ್ನೊಬ್ಬರ ಬದುಕನ್ನು ಬಲಿ ಕೊಡುವ ಹುಂಬತನ. ಸ್ವಂತ ಮಾತೃಭಾಷೆಯನ್ನೇ ತಿಳಿಯದ ನೀನು,ಹೆತ್ತು ಹೊತ್ತು ಸಾಕಿದ ಅಪ್ಪ ಅಮ್ಮನಿಗೇ ಸರಿಯಾದ ಗೌರವವನ್ನು ತೋರಲು ತಿಳೀಯದ ನೀನು ಇಂದು ನನ್ನನ್ನು ಪ್ರೀತಿಸುತ್ತೆನೆಂದರೆ ನಾನಾದರೂ ಹೇಗೆ ಒಪ್ಪಲಿ, ಒಪ್ಪುವುದನ್ನು ಬಿಡು, ಹೇಗೆ ನಂಬಲಿ? ನಾನು ನಿನ್ನ ’ಪ್ರೀತಿ’ಯನ್ನು ಸಂದೇಹಿಸುವುದಕ್ಕಿಂತ ಹೆಚ್ಚಾಗಿ ನಿಮ್ಮಂತಹ ಹುಡುಗರ ಮನಸ್ಥಿತಿಯನ್ನು ಸಂದೇಹಿಸುತ್ತೇನೆ." ಹೀಗೆ ಒಂದೇ ಉಸಿರಿನಲ್ಲಿ ಹೇಳಿದಂತೆ ಹೇಳಿ ಮುಗಿಸಿ, ತಾನು ಯಾವತ್ತಿನಂತೆಯೇ ಭಾವರಹಿತವಾಗಿ ಉಳಿದು ನನ್ನ ಮುಖಭಾವ ಬದಲಾವಣೆಯನ್ನೇ ಗುರುತಿಸುವವಳಂತೆ ದಿಟ್ಟಿಸುತ್ತಾ ಕುಳಿತಳು. ನನಗೆ ಆಗ ನಿಜಕ್ಕೂ ಮಾತು ಮರೆತುಹೋಗಿ, ಸುಮ್ಮನೇ ಗುರಿಯಿಲ್ಲದ ದೃಷ್ಟಿಯನ್ನು ಖಾಲಿಯಾದ ಪ್ಲೇಟಿನ ಮೇಲೆ ಬೀರುತ್ತ ಕುಳಿತೆ. ಈಗ ನಾನು ಹಾಗೆ ಹೇಳುತ್ತಿರಲಿಲ್ಲವೇ ಇಲ್ಲ ಎಂಬ ಹುಂಬುಗಾರಿಕೆಯಾಗಲೀ, ಅಥವಾ ಹೌದು ಪ್ರಪೋಸ್ ಮಾಡಬೇಕೆಂದೇ ಇದ್ದೆ ಎಂಬ ಎದೆಗಾರಿಕೆಯಾಗಲೀ ನನಗಿಲ್ಲದೇ, ಏನೆಂದು ಮಾಡಬೇಕೆಂದು ತಿಳಿಯದೇ, ದೊಡ್ಡದೊಂದು ಗೊಂದಲದಲ್ಲಿ ಬಿದ್ದೆ. ಅವಳು ಹೇಳಿದ್ದೆಲ್ಲಾ ಅಕ್ಷರಶಃ ಸತ್ಯವೇ, ಕೆಲವೊಂದು ತನಗೇ ಗೊತ್ತಿಲ್ಲದ ತನ್ನ ಬಗೆಗಿನ ವಿಷಯಗಳು ಅವಳಿಗೆ ಗೊತ್ತು ಎಂಬುದು ಅವಳ ಮಾತಿನ ಶೈಲಿಯಿಂದಲೇ ತಿಳಿಯುತ್ತಿತ್ತು, ನಿನ್ನ ಬಳಿ ನನಗೆ ತಿಳಿಯದ್ದೇನೂ ಇಲ್ಲ ಎಂಬ ಆತ್ಮವಿಶ್ವಾಸ ಪ್ರತೀ ವಾಕ್ಯದಲ್ಲಿ ತುಳುಕುತ್ತಿತ್ತು. ಎರಡು ನಿರ್ಧಾರಗಳಂತೂ ಅಲ್ಲೇ ಹುಟ್ಟಿದ್ದವು. ಒಂದು, ಮನೆಯ ಬಾಯಿಗೇ ಚಮಚ ತಂದು ಇಡುವ ಆಳುಗಳ ಕೈಯ್ಯಿಂದ ತಪ್ಪಿಸಿಕೊಂಡು ಸ್ವಂತದ್ದೊಂದು ಚಿಕ್ಕದಾದ ರೂಮನ್ನಾದರೂ ಮಾಡಿಕೊಂಡು ಸ್ವಲ್ಪವಾಗಿಯಾದರೂ ದೈಹಿಕವಾಗಿಯಾದರೂ ಸ್ವಾವಲಂಬಿಯಾಗಿರಬೇಕು.ಎರಡು, ಅವಳ ಮುಖಕ್ಕೆ ಹೊಡೆದಂತೆ ಆಡುವ ಮಟ್ಟಿಗೆ ಕನ್ನಡವನ್ನು ಕಲಿಯಬೇಕು.
ಹಾಗೆ ನಿರ್ಧಾರ ತೆಗೆದುಕೊಂಡರೆ ಮುಗಿಯಿತು, ಅದು ಆಗಿಯೇ ತೀರಬೇಕು. ಕನ್ನಡ ಸ್ಪುಟವಾಗಿ ಬರದಿದ್ದುದು ನನ್ನ ತಪ್ಪೇ? ಮಾತೃಭಾಷೆಯು ಕನ್ನಡವೇ ಆಗಿದ್ದರೂ ಮೊದಲಿನಿಂದಲೂ ಮನೆಯಲ್ಲಿ ತಂದೆತಾಯಿ ಆಂಗ್ಲ ಭಾಷೆಯಲ್ಲಿಯೇ ಮಾತನಾಡಿದ್ದರಿಂದ ಕನ್ನಡದಲ್ಲಿ ತಡವರಿಸುತ್ತಿದ್ದುದು ಹೌದು. ಕಾರಣಗಳ ಬಗ್ಗೆ ಚಿಂತಿಸಲು ಇದು ಸಮಯವಲ್ಲ. ಆದರೂ ಕನ್ನಡವೆಂಬುದು ರಕ್ತದಲ್ಲಿ ಇದ್ದೇ ಇತ್ತಲ್ಲ. ಯಾವುದನ್ನು ಎರಡು ತಿಂಗಳಲ್ಲಿ ಕಲಿಯಬೇಕೆಂದು ಮಾಡಿದ್ದೆನೋ ಅದನ್ನು ಕೇವಲ ಮೂರು ವಾರದೊಳಗೆ ಕಲಿತು ಮುಗಿಸಿದ್ದೆ. ಅರಳು ಹುರಿದಂತೆ, ಇಂಗ್ಲೀಷಿನಲ್ಲಿ ಹೇಗೆ ಮಾತನಾಡುತ್ತಿದ್ದನೋ ಅದೇ ತರ ಕನ್ನಡದಲ್ಲೂ ಮಾತನಾಡಬಲ್ಲವನಾಗಿದ್ದೆ., ಆದರೆ ಅಷ್ಟಕ್ಕೆ ಸುಮ್ಮನಾಗುವ ಜಾಯಮಾನ ನನ್ನದಲ್ಲ, ಯಾವುದನ್ನು ಮಾಡಿದರೂ ಪ್ರಣವ ಮಾಡಿದ ಹಾಗಿರಬೇಕು ಎಂದು ಜನ ಆಡಿಕೊಳ್ಳಬೇಕೆ ವ್ಯಾಕರಣ, ಹಳೆಗನ್ನಡ, ಛಂದಸ್ಸಿಗೆ ಜಿಗಿದಿದ್ದೆ. ಕಲಿಯಬೇಕೆಂಬ ವಿದ್ಯಾರಾಕ್ಷಸ ಹೊಕ್ಕಿಕುಳಿತ ಮನುಷ್ಯನ ಜ್ಞಾನದಾಹವನ್ನು ತಣಿಸುವುದು ಅಂತಿಂತ ಕೆಲಸವಲ್ಲಾ ಎಂಬುದು ಅವನ ಎಲ್ಲಾ ಕನ್ನಡ ಬಲ್ಲ ಗೆಳೆಯರಿಗೂ, ನನಗೆ ಕನ್ನಡ ಪಾಠ ಹೇಳಿಕೊಡಲು ಬರುತ್ತಿದ್ದ ಗುರುಗಳಿಗೂ ಮನವರಿಕೆಯಾಗಿತ್ತು. ನನ್ನ ವೇಗವು ಎಲ್ಲರಿಗೂ ಎಷ್ಟು ಆಶ್ಚರ್ಯವನ್ನು ಹುಟ್ಟುಹಾಕಿತ್ತೋ ಅಷ್ಟೇ ಹೆದರಿಕೆಯನ್ನು ಉಂಟುಮಾಡಿತ್ತು. ಏನೇ ಇರಲಿ ಎರಡು ತಿಂಗಳೊಳಗೆ ಅವನ ಕನ್ನಡ ಯಾರಿಗೂ ಕಡಿಮೆಯಿಲ್ಲದಂತೆ ಬೆಳೆದಿತ್ತು. ಅದಕ್ಕೆ ಸಾಕ್ಷಿಯಾಗಿ ಅವನು ಬರೆದಿದ್ದ ಕವನವೊಂದು ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಹಾಗೆ ನೋಡಿದರೆ ಬೇರೊಂದು ರೂಮನ್ನು ಮಾಡುವುದೇ ದೊಡ್ಡ ತಲೆನೋವಾಗಿತ್ತು, ಮತ್ತೆ ಆ ಚೇತಕ್ ಪ್ರಾಜೆಕ್ಟ್ ಗೆ ದಿನವೂ ೮ ಗಂಟೆಯವರೆಗೆ ಉಳಿಯಬೇಕಾಗುತ್ತದೆಂದೂ, ಮನೆಯಿಂದ ಬಹಳ ದೂರವಾಗುತ್ತದೆಯೆಂದೂ, ಕಾರಿನಲ್ಲಾದರೂ ದಿನವೂ ಅಷ್ಟು ದೂರ ತಿರುಗಾಡುವುದು ತನ್ನ ಬೆನ್ನಿಗೆ ಒಳ್ಳೆಯದಲ್ಲವೆಂದೂ ಸುಳ್ಳು ಸುಳ್ಳೇ ಡಾಕ್ಟರ್ ಅಂಕಲ್ ಬಳಿ ಬರೆಸಿಕೊಂಡು ಹೋಗಿ ಕೊಟ್ಟ ಮೇಲೆಯೇ ಮನೆಯವರು ವಾರಕ್ಕೊಮ್ಮೆ ಮನೆಗೆ ಬರಲೇಬೇಕೆಂಬ ನಿಬಂಧನೆಯ ಮೇಲೆ ಬೇರೆ ರೂಮನ್ನು ಮಾಡಲು ಒಪ್ಪಿಗೆ ಕೊಟ್ಟಿದ್ದು. ಅದೂ ಅಡಿಗೆ ಮಾಡಲು, ರೂಮನ್ನು ನೋಡಿಕೊಳ್ಳಲು ಒಬ್ಬರು ಭಟ್ಟರನ್ನು ನೇಮಿಸಿದ ಮೇಲೆಯೇ. ಆದರೆ ಆ ಭಟ್ಟರನ್ನು ಒಪ್ಪಿಸಿ ಮನೆಯವರಿಗೆ ತಿಳಿಯದಂತೆ ಓಡಿಸುವುದೇನೂ ನನಗೆ ದೊಡ್ಡ ವಿಷಯವಾಗಿರಲಿಲ್ಲ ಬಿಡಿ. ಹಾಗೆ ದಿನವೂ ತನ್ನ ಅಡಿಗೆಯನ್ನು ತಾನೇ ಮಾಡಿಕೊಳ್ಳಲಾರಂಭಿಸಿದ ಎಂಬಲ್ಲಿಗೆ ಅವಳು ಹೇಳಿದ್ದ ಎಲ್ಲಾ ಪಾಯಿಂಟುಗಳಿಗೂ ಉತ್ತರ ಕೊಡಲು ಸಿದ್ಧನಾಗಿದ.
ನಾನು ಹಾಗೆ ಅವಳು ಅಂದು ಹೇಳಿದ ಮೇಲೆ ಅವಳನ್ನು ಕಂಡರೂ ಕಾಣದಂತೆ ಇರುತ್ತಿದ್ದೆ, ಅವಳೂ ಒಂದು ಸಲ ಒಂದು ನೋಟವನ್ನು ಬೀರಿ, ನನ್ನ ಮುಖದಲ್ಲಿ ಯಾವ ಭಾವವಿರಬಹುದು ಎಂದು ನೋಡಿರಬಹುದು ಎಂದು ಲೆಕ್ಕ ಹಾಕಿದ್ದೆ. ಇತ್ತೀಚೆಗೆ ಕಾಲೇಜಿನ ನೃತ್ಯದ ಟೀಮಿಗೂ ಹೋಗದೇ ಇರುತ್ತಿದ್ದುದರಿಂದ ಮಾತನಾಡುವ ಅವಶ್ಯಕತೆಯೂ ಬೀಳುತ್ತಿರಲಿಲ್ಲ. ನನ್ನ ಕನ್ನಡದ ಬಗ್ಗೆ ನನಗೆ ಆತ್ಮವಿಶ್ವಾಸ ಬಂದ ಮೇಲೆಯೇ ಅವಳ ಬಳಿ ನಾನು ಮಾತನಾಡಬೇಕೆಂದುಕೊಂಡು ಮೊದಲೇ ನಿರ್ಧರಿಸಿದ್ದೆ. ಎರಡು ತಿಂಗಳಾದ ಮೇಲೆ ಒಂದು ದಿನ ಸಿಕ್ಕಾಗ ಮಾತನಾಡಿಸಿದೆ, ಸ್ಪಟಿಕದಷ್ಟು ಸ್ಪಷ್ಟವಾಗಿ ಕಸ್ತೂರಿ ಕನ್ನಡದಲ್ಲಿ, " ಇಷ್ಟು ದಿನ ನಾನು ನಿಮ್ಮ .ಮುಖ ತಪ್ಪಿಸಿಕೊಂಡು ಹೋಗಿದ್ದನ್ನು ನೀವೇ ಡಿಫ಼ೈನ್ ಮಾಡಿರುವ ಸಿರಿವಂತರ ಮಕ್ಕಳ ಬೇಜವಾಬ್ದಾರಿಯ ಒಂದು ಭಾಗ ಎಂದು ತಿಳಿದುಕೊಂಡಿದ್ದೀರೆಂಬುದನ್ನೂ ನಾನು ಬಲ್ಲೆ. ನಾನು ಈ ಎರಡು ತಿಂಗಳಲ್ಲಿ ಏನು ಮಾಡಿದೆ ಎಂಬುದಾಗಲೀ,ಈ ಎರಡು ತಿಂಗಳಲ್ಲಿ ಯಾಕೆ ಹಾಗೆ ಮುಖ ತಪ್ಪಿಸಿ ಹೋಗುತ್ತಿದ್ದೆನೆಂಬುದಾಗಲೀ ಅವು ಈಗ ಅಪ್ರಸ್ತುತ. ನೀವು ಹೇಳಿದ ಹಾಗೆ ಇದ್ದ ಮೇಲೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಈ ಎರಡು ತಿಂಗಳಲ್ಲಿ ನಾನು ನಿಮ್ಮನ್ನು ನೆನೆಸಿಕೊಳ್ಳದ ಕ್ಷಣವಿಲ್ಲ ಎಂದು ಹೇಳಿದರೆ ಅದು ಬಹುಶಃ ನಾಟಕೀಯವಾಗಿ ಕಾಣಬಹುದಾದರೂ, ಆದರೆ ಅದು ಸತ್ಯ. ನನ್ನ ಪ್ರೀತಿಯ ತೀವ್ರತೆಯಾಗಲೀ, ಅದರ ಆಳವಾಗಲೀ ಇನಿತೂ ಕಡಿಮೆಯಾಗಿಲ್ಲ, ಆಗಲಾರದು ಎಂಬುದರ ಬಗ್ಗೆ ನನಗೆ ಅತಿ ಭರವಸೆಯಿದೆ, ಈಗಲಾದರೂ ನೀವು ಒಪ್ಪಿಕೊಂಡರೆ ನಾನು ಧನ್ಯ ಎಂದುಕೊಳ್ಳುತ್ತೇನೆ." ಅವಳದ್ದು ಮತ್ತದೇ ಭಾವರಹಿತ ತಾರ್ಕಿಕ ಮುಖಭಾವ. ಉತ್ತರವೂ ನಿರ್ಭಾವುಕವಾಗೇ ಇತ್ತು. "ನಾನು ಹಾಗೆ ತಿಳಿದುಕೊಂಡಿರಬಹುದು ಎಂದು ನೀವು ನೀವೇ ನಿರ್ಧರಿಸಿಕೊಂಡಿದ್ದಕ್ಕೆ ನಾನು ಜವಾಬ್ದಾರಳಲ್ಲ. ನೀವು ಕನ್ನಡದಲ್ಲಿ ಸಾಧಿಸಿದ ಪ್ರತೀ ಸಾಧನೆಯೂ ನನಗೆ ತಿಳಿದಿದೆ, ಅದಕ್ಕಾಗಿ ನನ್ನ ಅಭಿನಂದನೆಗಳು. ಸ್ವತಂತ್ರವಾಗಿ ಬೇರೊಂದು ಮನೆಯಲ್ಲಿ ಇದ್ದೀರಾ ಎಂದೂ ಕೇಳಿದೆ, ಅದಕ್ಕಾಗಿಯೂ ಅಭಿನಂದನೆಗಳು. ಆದರೆ ಜೀವನ ಎಂಬುದು ಒಂದು ಭಾಷೆಯನ್ನು ಕಲಿಯುವುದಷ್ಟಕ್ಕೇ ಆಗಲೀ, ಹಿಂದೆ ಮುಂದೆ ನೋಡದೇ ಅಪ್ಪ ಅಮ್ಮನ ಕೈಲಿ ಜಗಳ ಮಾಡಿಕೊಂಡು ಬೇರೆ ರೂಮನ್ನು ಮಾಡುವುದಷ್ಟಕ್ಕಾಗಲೀ ಸೀಮಿತವಲ್ಲ. ನಾನು ಅಂದು ಕೊಟ್ಟಿದ್ದು ಎರಡು ಉದಾಹರಣೆಗಳಷ್ಟೇ. ನೀವು ಅವೆರಡು ಉದಾಹರಣೆಗಳನ್ನು ಜೀವನವೆಂದುಕೊಂಡಿರೇ? ನನಗೆ ಅರ್ಥವಾಗಲಾರದು. ಆದರೆ ಅದಕ್ಕಿಂತ ಹೆಚ್ಚಿನ ಜೀವನವನ್ನು ನಾನು, ನನ್ನ ಕುಟುಂಬ ನೋಡಿದೆ. ನಿಮಗೆ ಅವಕಾಶ ಸಿಕ್ಕಿಲ್ಲ ಬಿಡಿ.ಅದು ಹೋಗಲಿ ಬಿಡಿ, ನೀವು ಈಗಲೂ ಪ್ರೀತಿಸುತ್ತೇನೆ ಎಂಬ ಭಾವವನ್ನಲ್ಲದೇ ನನ್ನನ್ನೇ ಪ್ರೀತಿಸುತ್ತೇನೆಂದು ಹೇಗೆ ಸಾಧಿಸಬಲ್ಲಿರಿ? ಕವಿಯ ಹಾಗೆ ಎರಡು ಸಾಲನ್ನು ಉದ್ಧರಿಸುವುದು ನಿಮ್ಮ ಕಾವ್ಯಪ್ರಜ್ಞೆಯನ್ನು ತೋರಿಸಬಲ್ಲುದಾಗಲೀ ಮತ್ತೇನನ್ನೂ ಅದು ಸ್ಪಷ್ಟಪಡಿಸಲಾರದು. ಎರಡು ತಿಂಗಳು ನಿಮ್ಮ ಪ್ರೀತಿ ಬದುಕಿದೆ ಎಂದು ಸಂತಸ ಪಟ್ಟಿರಲ್ಲವೇ, ನೋಡೋಣ, ಇನ್ನೂ ಆರು ತಿಂಗಳು ಹೋಗಲಿ, ಆಗಲೂ ಈ ಭಾವನೆ ಉಳಿದಿದ್ದರೆ ಆಗ ಮಾತನಾಡೋಣ. ಅದಾದ ಮೇಲೂ ನನ್ನಕ್ಕನಿಗೆ ಮೋಸ ಮಾಡಿದ ಕುಟುಂಬದ ನಿಮ್ಮನ್ನು ನಾನು ಪ್ರೀತಿಸಬಲ್ಲೆನೇ? ಕಾಲವೇ ಹೇಳಬೇಕು." ಪೂರ್ತಿಮಾಡುವ ಮೊದಲೇ ಅವನು ಪ್ರಾರಂಬಿಸಿದ್ದ "ಇರಬಹುದು, ನಾನು ನಿಮ್ಮನ್ನು ತಪ್ಪಾಗಿಯೇ ಊಹಿಸಿರಬಹುದು, ಅಥವಾ ಈಗ ಒಪ್ಪಿಕೊಳ್ಳಲು ನಿಮ್ಮ ಇಗೋ ಅಡ್ಡ ಬಂದಿರಲೂಬಹುದು. ಏನೇ ಆಗಿರಲಿ ನಿಮ್ಮೊಂದಿಗೆ ವಾದ ಮಾಡಲು ಮನಸ್ಸು ಏಕೋ ಒಪ್ಪಲಾರದು.ನಿಮಗೆ ಹೇಗೆ ಸರಿಕಾಣುತ್ತದೋ ಹಾಗೆ ಮಾಡಿ, ಸಾಧ್ಯವಾದರೆ ನಿಮ್ಮ ನೆನಪಿನಲ್ಲೇ ಒಬ್ಬಇದ್ದಾನೆ ಎಂಬುದನ್ನು ನೆನಪಿಡಿ." ಎಂದಷ್ಟೇ ಹೇಳಿ ಸುಮ್ಮನಾದ. " ಆದರೆ ಒಂದು ವಿಷಯ ನೆನಪಿರಲಿ, ನಿಮ್ಮ ಅಕ್ಕ ಶಾರ್ವರಿಯವರಿಗೆ ಮೋಸವಾಗಿದ್ದು ಕೇಶವಚಂದ್ರ ಜೋಷಿ ಯಿಂದ, ಅವನು ನನಗೆ ಯಾವ ರೀತಿಯಿಂದಲೂ ಸಂಬಂಧಿಕನಲ್ಲ, ನನ್ನ ಅಡ್ಡಹೆಸರು ಜೋಷಿ ಹೌದಾದರೂ, ನನ್ನ ಮಾವನ ಮೈದುನನವರ ಮನೆಯ ಅಡ್ಡಹೆಸರು ಶಾಸ್ತ್ರಿ ಎಂದು, ಜೋಷಿ ಎಂದಲ್ಲ, ಯಾರ ಮೇಲಾದರೂ ಆರೋಪ ಹೊರಿಸುವ ಮೊದಲು ಸರಿಯಾಗಿ ಯೋಚಿಸಿ, ನಿರ್ಧರಿಸಿ. ಕಣ್ಣಾರೆ ಕಂಡಿದ್ದನ್ನೂ ಪರಾಂಬರಿಸಿ ನೋಡಿ ಎನ್ನುತ್ತಾರೆ. ಅಂತಹುದರಲ್ಲಿ.... " ಇನ್ನೂ ಏನೇನೋ ಹೇಳಬೇಕೆಂದುಕೊಂಡಿದ್ದ, ಅದೆಲ್ಲಾ ಮನದಲ್ಲೇ ಉಳಿದುಕೊಂಡಿತು.
ಇದಕ್ಕೆ ಮೊದಲು ಶಾರ್ವರಿಯವರ ಕಥೆಯನ್ನು ಹೇಳಿಕೊಳ್ಳದೇ ಹೋದರೆ ಈ ಕಥೆ ಅಪೂರ್ಣವಾವುದಷ್ಟೇ ಅಲ್ಲದೇ ಅರ್ಥಹೀನವಾಗುತ್ತದೆ. ಶಾರ್ವರಿ ಎಂದರೆ ಸುವಿಧಾಳ ಅಕ್ಕ. ಅದೇ ಕಾಲೇಜು, ಅದೇ ಬ್ರಾಂಚು. ೫ ವರ್ಷಕ್ಕೆ ದೊಡ್ಡವಳು. ಈ ಕೇಶವಚಂದ್ರ ಜೋಷಿ ಎಂಬಾತನನ್ನು  ಪ್ರೀತಿಯೆಂದರೆ ಹೀಗೂ ಇರುತ್ತಾ ಎನ್ನುವ ತರಹ ಪ್ರೀತಿಸಿದ್ದಳು, ಅವನೂ ಹಾಗೇ ಇದ್ದ, ಪ್ರೀತಿಯೆಂಬುದನ್ನು ನೀಡಲೇ ಅವತರಿಸಿ ಬಂದ ಹಾಗೆ. ಆದರೆ ಕೊನೆಯ ವರ್ಷದ ಅಂತ್ಯಕ್ಕೆ ಬಂದಂತೆ ಇಲ್ಲಿಯವರೆಗೂ ಆಡಿಕೊಂಡ ಮಾತುಗಳೆಲ್ಲ ಬರೀ ಸುಳ್ಳೆಂಬಂತೆ ಮನೆಯಲ್ಲಿ ಮಾರ್ವಾಡಿಗಳ ಮನೆಯ ಹುಡುಗಿಯನ್ನು ಒಪ್ಪಲಾರರು ಎಂಬಂತಹ ಸುಳ್ಳು ಸುಳ್ಳೇ ಕಾರಣಗಳನ್ನು ಕೊಡಲಾರಂಭಿಸಿ ಪಲಾಯನದ ದಾರಿ ಹುಡುಕಲಾರಂಭಿಸಿದ. ಅಕ್ಷರಶಃ ಪ್ರೀತಿಯೆಂಬ ಹುಚ್ಚುಹೊಳೆಯಲ್ಲಿ ಬಿದ್ದಿದ್ದ ಅವಳಿಗೆ ನಿಜವಾದ ಹುಚ್ಚು ಹಿಡಿದು, ಸರಿಪಡಿಸಬೇಕಾದರೆ ಮತ್ತೊಂದು ವರ್ಷ ಹಾಗೂ ಬೆಂಗಳೂರಿನ ಪ್ರಖ್ಯಾತ ಮನಶ್ಶಾಸ್ತ್ರಜ್ಞರ ಸಹಾಯವೇ ಬೇಕಾಯ್ತು. ಅದೇ ಕ್ಲಾಸಿನಲ್ಲಿ ಕೇಶವಚಂದ್ರ ಶಾಸ್ತ್ರಿ  ಎಂಬ ಪ್ರಣವ್ ನ ಕಸಿನ್ ಇದ್ದುದು ಗೊತ್ತಿದ್ದು, ಪ್ರಣವ್ ನ ಅಡ್ಡಹೆಸರೂ ಜೋಷಿ ಎಂದಿದ್ದುದರಿಂದ ಸುವಿಧಾ ಗೊಂದಲ ಮಾಡಿಕೊಂಡು ತಪ್ಪಾಗಿ ಆರೋಪ ಹೊರೆಸಿದ್ದು ಪ್ರಣವ್ ನಿಗಂತೂ ತಪ್ಪಾಗಿ ಕಂಡುಬರಲಿಲ್ಲ. ಆದರೆ ಅದನ್ನೇ ಹೇಳಬೇಕೆಂದುಕೊಂಡನಾದರೂ ಅವಳಿದ್ದ ಆವೇಶದ ಆವೇಗದಲ್ಲಿ ಅವಳು ಒಪ್ಪಲಾರಳು ಎಣಿಸಿ ವಾಪಸಾಗಿದ್ದ.

ಸುವಿಧಾ ಹೇಳಿದಂತೆ: 
                                                                         ಕಾದು ನೋಡಿ... 

Friday 17 February 2012

ಉಸಿರುಗಟ್ಟಿಸುವಂತೆ ಕಾಡದಿರು


ಉಸಿರುಗಟ್ಟಿಸುವಂತೆ ಕಾಡದಿರು
ಸತ್ತ ಪ್ರೀತಿಯ ಸೂತಕವೇ
ನನ್ನ ಜೀವವ ಬಾಳಗೊಡು
ಮತ್ತಲ್ಲೇ ಚಿಗಿದು ಬೆಳೆಯಲೆಣಿಸದಿರು
ಮರುಜನ್ಮ ಬಯಸುವ ಬಯಕೆಯೇ
ನನ್ನಷ್ಟಕ್ಕೆ ನನ್ನ ಬಿಡು.||ಪ||

ಸಾಲುಗನಸುಗಳ ಹುಚ್ಚು ಮನವೇ
ಕಂಡ ಕನಸು ಕಮರೋ ಮೊದಲೇ
ಮುಂದಿನ ಕನಸಿನ ಗೋಜೇಕೆ.
ಮರಳಿ ಅರಳಬಹುದೇ ಕನಸು
ಎಂದಿತು ಹೃದಯ; ನಿನ್ನ ಜೊತೆಗೆ
ನಿನ್ನದೇ ಇಂತಹ ಜೂಜೇಕೆ||೧||

ಮಾತಾಡಬೇಕಿದ್ದಾಗಲೇ ಉಸಿರೆತ್ತಲಿಲ್ಲ
ಈಗ ಮೌನವೇ ಹಿತವಲ್ಲವೇ
ಯಾರಿಗೆ ಬೇಕು ನಿನ್ನ ಕನವರಿಕೆ.
ಮೌನಕಿರುವ ಸಹನೆ ಮಾತಿಗೆಲ್ಲಿ
ಕಟ್ಟಿದಷ್ಟು ಗಟ್ಟಿಯಾಗುವ ಮೌನವೇ
ಬಿಕ್ಕಿ ಹರಿಯುವ ಬಯಕೆಯಾಕೆ||೨||

ಅನಾದಿ ನೋವಿನ ಬೇಗುದಿಯಿದು
ಕೊರಳಸೆರೆ ಹಿಡಿದರೇನಂತೆ
ಬತ್ತದೆ ಉಮ್ಮಳಿಸುವ ಚಿಲುಮೆ.
ತಡೆಯಲಾರದ ತಾಪವಿದು
ಕರಗಿಹೋಗಿಹವು ಕನಸುಗಳೆಲ್ಲಾ
ಮನದಲಿ ಉನ್ಮಾದದ ಕುಲುಮೆ.||೩||

Friday 10 February 2012

ಪೂರ್ಣತೆಯ ಕಡೆಗೆ


ಬುಡಸೋರುವ ಕೊಡದಲ್ಲಿ, ಹಿಡಿದಿಡುವ ಆಸೆಯಲಿ
ತುದಿಕಾಣದ ಪಯಣವಿದು ತೀರಬಹುದೇ ದಾರಿ||ಪ||

ಬಗೆಹರಿಯದ ಮೌಲ್ಯವದು ’ಪೈ’ ಎಂದು
ಪರಿಧಿ ವ್ಯಾಸದ ಸರಳ ಅನುಪಾತವದು
ನಿಜಪೂರ್ಣಬೆಲೆಯ ಕಂಡುಹಿಡಿಯಲಾಗದೆ
ಎಷ್ಟು ಯುಗಗಳೋ ಅದರ ಹಿಂದೆ ಹಿಂದೆ
ಆದಿ ಗೂತ್ತಿಲ್ಲ ಈ ಪಯಣಕೆ, ಅಂತ್ಯ ಮೊದಲಿಲ್ಲ
ಮಸುಕು ಗಮ್ಯದ ಕಡೆಗೆ ಹುಡುಕಾಟವೇ ಎಲ್ಲ
ಸನಿಹವಾದರೂ ಎಂದೂ ನಿಖರವಲ್ಲ
ಪೂರ್ಣತೆಯ ಸುಳಿವಿಲ್ಲ, ಪ್ರಯತ್ನ ಬಿಟ್ಟಿಲ್ಲ
ತೀರದ ಹಠಕೆ ಅರ್ಪಣೆಯೇನು ಕಡಿಮೆಯ
ಹೋದೇವ ಹತ್ತಿರ, ಮುಟ್ಟೇವ ಗುರಿಯ?||೧|

ಅನಿಲ ಖನಿಜಗಳಷ್ಟೇ ಅವನಿಯಲಿದ್ದವಂತೆ
ಯಾವ ಮಾಯದಲ್ಲೋ ಜೀವ ಹುಟ್ಟಿತಂತೆ
ನಿರ್ಜೀವ ತಾ ಜೀವಕೆ ಜನ್ಮಕೊಟ್ಟಿತೇ ಇಲ್ಲಿ?
ದೇವ ತಾನೆಲ್ಲರನು ಸೃಷ್ಟಿಸಿದನೇ ಆದಿಯಲ್ಲಿ?
ನಿಜದ ಪೂರ್ಣತೆಗೆ ಅದೆಷ್ಟು ವ್ಯಾಖ್ಯಾನಗಳೋ
ಎಷ್ಟು ವಿಜ್ಞಾನಿ, ಅದೆಷ್ಟು ಕಾಲಜ್ಞಾನಿಗಳೋ
ಹಿಂದೆ ಬಿದ್ದವರು, ತಿರುಗಿ ವಿವರಿಸಹೋದವರು
ಸೃಷ್ಟಿನಿಗೂಢವ ಮುಟ್ಟಬಹುದೆ ಎಂದಿಗಾದರೂ||೨||

ಪ್ರೇಮ,  ದ್ವೇಷವಂತೆ, ಮತ್ತಿಷ್ಟು ಅರಿಷಡ್ವರ್ಗಗಳಂತೆ
ಮೂರು ದಿನದ ಬದುಕಿನಲಿ ನೂರೊಂದು ಭೇಧವಂತೆ
ತಪ್ಪೆಂದು ಗೊತ್ತಿದ್ದರೊ ಮೀರಲಾಗದ ದೌರ್ಬಲ್ಯವೇ
ತಿಳಿದರೂ ಅರಿಯದ ಮನಸ್ಸಿನ ಮೂಢತನವೇ
ಒಂದ ಮೆಟ್ಟಿದೆನೆಂದರೆ ತಲೆಯೆತ್ತಿದ್ದು ಮತ್ತೊಂದೆ
ಈ ಸಾಧನೆಯನಿಲ್ಲೇ ಸಾಧಿಸಿ ಮುಗಿಸಬಹುದೇ
ಪೂರ್ಣತೆಯೆಂಬ ಕಲ್ಪನೆಯೇ ಒಂದು ಭ್ರಮೆಯೇ
ದೂರದ ಮರೀಚಿಕೆಗೆ ತುಡಿವುದೇ ಬದುಕ ಮಾಯೆ||೩||

Friday 3 February 2012

ನಾವು ಹುಡುಗರು



ಚಿತ್ರಕೃಪೆ: ಅಂತರ್ಜಾಲ.
  • "ಜೀವಕ್ಕೆ ಜೀವ ಎಂಬಂತೆ ಓಡಾಡಿಕೊಂಡಿದ್ದ ಇಬ್ಬರು ಗೆಳೆಯರು ಈಗ ಮುಖಕ್ಕೆ ಮುಖ ಕೊಟ್ಟೂ ಮಾತನಾಡುವುದಿಲ್ಲ. "
  • " ಊರೆಂಬ ಊರಿಗೇ ಮಾದರಿ ಗೆಳೆಯರೆನಿಸಿಕೊಂಡವರಿಬ್ಬರಿಗೆ ಈಗ ಎಣ್ಣೆ ಸೀಗೇಕಾಯಿ ಸಂಬಂಧ.ಒಬ್ಬರಿನ್ನೊಬ್ಬರ ಮುಖವನ್ನು ನೋಡಲೂ ಬಯಸುವುದಿಲ್ಲ."
ನಾವು ಹುಡುಗರು ಯಾವಾಗಲೂ ಹೀಗೆಯೇ, ಏನನ್ನೇ ಆದರೂ ಅತಿಯಾಗಿಯೇ ಮಾಡುತ್ತೇವೆ. ಸ್ನೇಹವಾದರೂ ಅಷ್ಟೇ, ದ್ವೇಷವಾದರೂ ಅಷ್ಟೇ, ಪ್ರೀತಿಯಾದರೂ ಅಷ್ಟೇ, ನಿರಾಸಕ್ತಿಯಾದರೂ ಅಷ್ಟೇ! ಅಗತ್ಯಕ್ಕಿಂತ ಹೆಚ್ಚಾಗಿಯೇ ಮಾಡುವ ಈ ಗುಣ ಇದೆಯಲ್ಲಾ, ಇದು ನಮಗೆ ಹುಟ್ಟಿನಿಂದಲೂ ಬಂದಿರುತ್ತದೆ. ಅದಕ್ಕೇ, ನಮ್ಮಲ್ಲಿ ಕೆಲವು ಗೆಳೆತನಗಳು ಬಾಳುವುದು, ಮರೆಯಲು ಸಾಧ್ಯವೇ ಇಲ್ಲವೇನೋ ಎಂಬಂತೆ ಉಳಿಯುವುದು, ಮತ್ತೆ ಕೆಲವು ನೆನಪಿನ ಹಂಗೇ ಇಲ್ಲದಂತೆ ಮರೆತು ಮಣ್ಣಾಗುವುದು. ನಮ್ಮ ಜಗತ್ತು ಹೀಗೇ, ನೇರಾನೇರ. ಮನಸ್ಸನ್ನು ಹುಳ್ಳಾಗಿಸಿಕೊಂಡು ಮುಖದಲ್ಲಿ ನಗೆ ತರಿಸುವುದು ಭಾಗಶಃ ಅಸಾಧ್ಯವೇ. ಹಾಗೆ ತಂದುಕೊಂಡರೂ ಅದು ಕೃತಕವಾದದ್ದು ಎಂಬುದು ಕ್ಷಣಮಾತ್ರದಲ್ಲಿ ವೇದ್ಯವಾಗುತ್ತದೆ. ಮನಸ್ಸಿಗೆ ಏನೆನ್ನಿಸುತ್ತದೋ ಅದನ್ನು ಹಾಗೇ ಕಕ್ಕಿ ಬಿಡುತ್ತೇವೆ ಎಂದೇನಲ್ಲ, ಆದರೆ ಸತ್ಯದ ಮುಖಕ್ಕೆ ಹೊಡೆವ ರೀತಿಯಲ್ಲಿ ಸುಳ್ಳು ಹೇಳುವಲ್ಲಿ ನಾವು ತಡವರಿಸುತ್ತೇವೆ. ಹಾಗೆಂದು ಎಲ್ಲರೂ ಸತ್ಯ ಹರಿಶ್ಚಂದ್ರರೆಂದು ಹೇಳುತ್ತಿದ್ದೀನೆಂದುತಪ್ಪು ತಿಳಿದುಕೊಳ್ಳಬೇಡಿ.

ಹಾಗೆಯೇ ನಮ್ಮಲ್ಲಿ ಈಗೋ, ಅಹಂಕಾರ ಎಲ್ಲವೂ ಹೆಚ್ಚು. ಜೀವಕ್ಕೆ ಜೀವ ಕೊಡುವ ಗೆಳೆಯನ ಬಳಿಯೇ ಏನೋ ಒಂದು ಚಿಕ್ಕ ಸಹಾಯವನ್ನಪೇಕ್ಷಿಸಲು ಮನ ಹಿಂಜರಿಯುತ್ತದೆ.‘ ಅಲ್ಲೇ ಒಂದು ಹಿಂಜರಿಕೆ ಹುಟ್ಟಿ, ಅದನ್ನು ಸ್ವಲ್ಪ ಕಷ್ಟಪಟ್ಟಾದರೂ ನಾವೇ ಮಾಡುವ ಮಾರ್ಗವನ್ನು ಹುಡುಕುತ್ತೇವೆ. ಅದಕ್ಕೇ ಒಬ್ಬ ಗೆಳೆಯ ಸಹಾಯ ಕೇಳಿದಾಗ ಅದಕ್ಕೆ ಅಷ್ಟು ಅರ್ಥವಿರುತ್ತದೆ.ಯಾವುದನ್ನೂ ಸಂಪೂರ್ಣವಾಗಿ ಬಾಯಿಬಿಟ್ಟು ಮಾತನಾಡದೇ ಸ್ಪಷ್ಟವಾಗಿ ಅರ್ಥಮಾಡಿಸಬಲ್ಲ ತಾಕತ್ತು ಎಲ್ಲರಿಗೂ ಇರುತ್ತದೆ. ಅದು ಬಹಳ ಅವಶ್ಯಕವೂ ಆಗುತ್ತದೆ. ಅದು ಅರ್ಥವಾಗದೇ ಹೋದಾಗ ಎಷ್ಟೋ ಮಾತುಗಳು ಹೇಳದೇ ಉಳಿಯಲ್ಪಡುತ್ತದೆ, ಎಷ್ಟೋ ಭಾವಗಳು ಹೇಳದೆಯೇ ಉಳಿದುಹೋಗಿಬಿಡುತ್ತವೆ. ಹಾಗೇ ಅವುಗಳು ಉಳಿದುಹೋದವಲ್ಲಾ ಎಂದೋ, ಸುಮ್ಮನೇ ಒಂದು ಮುತ್ತಿನಂತಹಾ ಗೆಳೆತನವನ್ನು ಕಳೆದುಕೊಂಡನಲ್ಲಾ ಎಂದೋ, ಜೀವನವಿಡೀ ಪರಿತಪಿಸುತ್ತಾರೆ, ಅಹಂಕಾರದ ಕಳೆದುಕೊಂಡ ಅದೊಂದು ಘಳಿಗೆಗಾಗಿ. ಹೊರಗೆ ಎಷ್ಟೇ ಕಠಿಣವಾಗಿ, ಉಕ್ಕಿನಂತೆ ಭಾವರಹಿತವಾಗಿಯೇ ಇದ್ದರೂ ,ಅಮಸ್ಸಿನ ಒಳಮೂಲೆಯಲ್ಲಿ ಹೇಳಲಾಗದ ನಾಚಿಕೆಯ, ಹಮ್ಮಿನ, ತೀವ್ರತೆಯ ಎಷ್ಟೋ ವಿಭಿನ್ನ ಭಾವಗಳು ಅವಿತು ಕಾಡುತ್ತಿರುತ್ತವೆ. ಹೊರಗೆ ಮೃದುವಾಗಿ ಕಾಣುವುದು ಪರಂಪರಾಗತವಾಗಿ ಬಂದ ಪುರುಷನೆಂಬ ಇಮೇಜ್ ಗೆ ಎಲ್ಲಿ ಹೊರತಾಗಿಬಿಡುತ್ತೀನೇನೋ ಎಂಬ ಅಂಜಿಕೆಯಲ್ಲಿ ಹುಡುಗ ಮತ್ತೂ ಗಟ್ಟಿಯಾಗುತ್ತ ಹೋಗುತ್ತಾನೆ.

ಚಿತ್ರಕೃಪೆ: ಅಂತರ್ಜಾಲ.
ಹೀಗೆ ಕಲ್ಲಿಗಿಂತ ಕಠಿಣವಾಗಿ ಕಾಣುವ ಹುಡುಗರು ಕರಗಿಹೋಗಲು ಸಾಧ್ಯವೇ ಇಲ್ಲ ಎಂದೇನಲ್ಲ, ಭಾಷೆಯೋ, ತಾಯ್ನಾಡೋ ಯಾವುದೋ ಒಂದು ವಿಷಯಕ್ಕೆ ಎಲ್ಲ ಹುಡುಗರು ಭಾವುಕವಾಗಿ ಅಂಟಿಕೊಂಡಿರುತ್ತಾರೆ. ಹೆತ್ತ ತಾಯಿಯ ಬಗ್ಗೆ ಯಾರಾದರೂ ಒಂದು ಮಾತನಾಡಿದರೂ ಮಗ ಸಹಿಸಲಾರ, ತನ್ನ ತಾಯಿಯದ್ದೇ ತಪ್ಪಿದ್ದರೂ. ಹುಡುಗ ಕರಗಲು ಇಷ್ಟೆಲ್ಲಾ ಆಗಲೇಬೇಕೆಂದೇನಿಲ್ಲ. ಒಂದು ಪ್ರೀತಿ ಹುಟ್ಟಿದರೂ ಸಾಕು, ಹುಡುಗ ಹುಡುಗಿಗಿಂತ ಮೃದುವಾಗಬಲ್ಲ. ಎಲ್ಲ ಹುಡುಗರಿಗೂ ಅವರ ಜೀವನದಲ್ಲಿ ಒಂದು ಬಾರಿಯಾದರೂ ನಿಜವಾದ ಪ್ರೀತಿಯ ಅನುಭವವಾಗುತ್ತದೆ*. ಹಾಗೆ ಆಗಿ, ಎಲ್ಲ ಸರಿಹೋದರೆ ಸರಿ, ಇಲ್ಲದೇ ಹೋದರೆ(ಹೀಗೇ ಆಗುವ ಅವಕಾಶವೇ ಹೆಚ್ಚಿರುವುದರಿಂದ ನಾನು ಈ ವಿಷಯವನ್ನು ಇಷ್ಟು ಸಾಮಾನ್ಯೀಕರಿಸುತ್ತಿದ್ದೇನೆ.) ಅವರ ಕಥೆ, ಅಧೋಗತಿ. ಕೂತಲ್ಲಿ ಕೊರಗುತ್ತಾರೆ, ನಿಂತಲ್ಲಿ ನಿಟ್ಟುಸಿರು ಬಿಡುತ್ತಾರೆ, ಮಲಗಿದಲ್ಲಿ ಮುಲುಗುತ್ತಾರೆ. ಮಾತನಾಡಲು ಹಿಂಜರಿಯುತ್ತಾರೆ, ಮೌನವನ್ನು ಇಷ್ಟಪಡುತ್ತಾರೆ. ನೆನಪುಗಳನ್ನು ಮರೆಯಲು ವರ್ತಮಾನದ ಜೊತೆಗೆ ಹೆಣಗಾಡುತ್ತಾರೆ. ಜೀವದ ಗೆಳೆಯನಿಗೆ ಮಾತ್ರ ತಿಳಿಯುವಂತೆ ಬಿಕ್ಕುವುದುಂಟು, ಆದರೆ ಅದರ ವಿಷಯ ಆ ಗೆಳೆಯ ಹೊರಗೆ ಹೇಳಲಾರ ಎಂಬ ನಂಬಿಕೆ ಬಂದರೆ ಮಾತ್ರ(ಅಳುವುದು ಹುಡುಗರ ಜಗತ್ತಿಗೆ ಹೊರತಾಗಿದ್ದು ಮತ್ತು ವರ್ಜ್ಯ, ಕಡ್ಡಾಯವಾಗಿ!). ಎಲ್ಲರಿಗೂ ಭಾಗಶಃ ಒಂದಲ್ಲಾ ಒಂದು ಸಲ ಇಂತಹ ಪ್ರಸಂಗ ಎದುರಾಗಿರುವುದರಿಂದ ಗೆಳೆಯನ ಕಂಬನಿಗೆ ಈ ಗೆಳೆಯ ಕರವಸ್ತ್ರವಾಗುತ್ತಾನೆ. ಗೆಳೆಯನೊಬ್ಬನಿಗೆ ಇಂತಹದೊಂದು ಆಸಕ್ತಿಯಿದೆ ಎಂದಾಗ ಸ್ವಂತ ತನ್ನದೇ ಬದುಕೇನೋ ಸಂಭ್ರಮಿಸುವ ನಾವು, ದುಃಖವನ್ನೂ ಸ್ವಂತ ನಮ್ಮದೇ ಎಂದುಕೊಳ್ಳುತ್ತೇವೆ, ಅದಕ್ಕಾಗಿ ನೋಯುತ್ತೇವೆ.

ಮತ್ತೊಂದು ವಿಷಯ ನಾನು ಹೇಳಬೇಕೆಂದುಕೊಂಡಿದ್ದು, ನಂಬಿಕೆ. ಹುಡುಗ ಇನ್ನೊಬ್ಬ ಗೆಳೆಯನನ್ನು ನಂಬುವ ಮೊದಲು ಸಿಕ್ಕಪಟ್ಟೆ ಸಮಯ ತೆಗೆದುಕೊಳ್ಳುತ್ತಾನೆ, ಅತಿಯಾಯ್ತು ಎಂಬಷ್ಟೇ ಎಂದಿಟ್ಟುಕೊಳ್ಳಿ. ( ಇನ್ನು ನನ್ನಂತಹವರು ಗೆಳೆಯ ಎಂದು ಕರೆಯುವ ಮೊದಲೇ ಬಹಳ ಯೋಚಿಸುತ್ತಾರೆ ಬಿಡಿ.). ಅವರ ಸಂಪೂರ್ಣ ಗೆಳೆತನವೇ ಆ ನಂಬಿಕೆಯ ಮೇಲೆ ನಿಂತಿರುತ್ತದೆ. ಹಾಗೆ ಒಮ್ಮೆ ನಂಬಿದ ಮೇಲೆ ಏನನ್ನೇ ಆಗಲೀ ಇವನು ಹಿಂಜರಿಯುವುದಿಲ್ಲ, ಅವನು ಕೇಳಲೂ ಹಿಂಜರಿಯುವುದಿಲ್ಲ. ಅದೊಂದು ರೀತಿಯ ಸಂಪೂರ್ಣ ನಂಬಿಕೆಯ ಸ್ಥಿತಿ. ಆದರೆ ಯಾವುದೋ ಚಿಕ್ಕ ವಿಷಯದಲ್ಲಿ ನಂಬಿದ ಗೆಳೆಯ ಕೈಕೊಟ್ಟನೆಂದಿಟುಕೊಳ್ಳಿ, ಈ ಗೆಳೆಯ ವ್ಯಗ್ರನಾಗಿ ವ್ಯಾಘ್ರನಾಗುತ್ತಾನೆ. ಗೆಳೆತನದ ಅಡಿಪಾಯವೇ ಕಳಚಿಬಿದ್ದಂತಾಗಿ ಮನಸಾರೆ ಮನನೊಂದುಕೊಳ್ಳುತ್ತಾನೆ.ಹೀಗೆಯೇ ಅತಿರೇಕಕ್ಕೆ ಹೋದರೆ ಆ ಗೆಳೆತನವೇ ಅಂತ್ಯವಾಗಬಹುದು.

ಇದು ನಮ್ಮ(ಹುಡುಗರ) ಜಗತ್ತು, ನಾನು ಕಂಡಂತೆ. ಇದು ರಮ್ಯವೂ ಅಲ್ಲ. ಚಂದವೂ ಅಲ್ಲ; ನಗುವ ಬುಗ್ಗೆಯಲ್ಲ, ಮಾತಿನ ಮನೆಯಲ್ಲ. ಬದಲಾಗಿ ಇದು ಗಂಭೀರ, ಶಬ್ದಶೂನ್ಯ. ಇದು ಅಹಂಕಾರದ ಕೂಪ, ಕಟ್ಟಿಹಾಕಿದ ಭಾವನೆಗಳ ಸಂಕೀರ್ಣ. ಎಷ್ಟು ಇಷ್ಟಪಡುತ್ತೀರೋ ನಿಮಗೆ ಬಿಟ್ಟಿದ್ದು, ಅದಕ್ಕೇನೂ ಈ ಜಗತ್ತು ತಲೆ ಕೆಡಿಸಿಕ್ಕೊಳ್ಳದು, ಬಿಡಿ.

ಟಿಪ್ಪಣಿ:
* - ೧. ಹಾಗೆಂದು ಹುಡುಗಿಯರಿಗೆ ಆಗುವುದಿಲ್ಲ ಎಂದೇನಲ್ಲ, ಆದರೆ ಯಾವಾಗಲೂ ಅದಕ್ಕಾಗಿ ಪರಿತಪಿಸುವುದು ನಾನು ನೋದಿರುವ ಮಟ್ಟಿಗೆ ಹುಡುಗರೇ ಜಾಸ್ತಿ.
     ೨.ಕೆಲವರಿಗೆ ಒಂದಕ್ಕಿಂತ ಹೆಚ್ಚು ಬಾರಿ ಆಗಬಹುದು, ಅದಕ್ಕೆ ಅವರೇ ಜವಾಬ್ದಾರರು. :P
     ೩.ಇನ್ನು ಕೆಲವು ಅದೃಷ್ಟವಂತರಿಗೆ ಮೊದಲ ಪ್ರೀತಿಯೇ ಮದುವೆಯಾದ(ಗುವ) ಹುಡುಗಿಯ ಜೊತೆಗೆ ಆಗಿ ಅವರಿಗೆ ಕೊರಗುವ ಅಗತ್ಯವಿರುವುದಿಲ್ಲ.