Tuesday 28 June 2011

ದೇವ-ಬಲ್ಲ


"ಹಾಸಿ ಬಿದ್ದಿರುವೆ ಮೈಯ ಚಾಚಿ
ನಿನ್ನಯ ಆಟಕೆ ಅಂಗಳವಾಗಿ,
ನಾನೇ ಹಿರಿಯ ನೀನು ಅಲ್ಪ"
ಎಂದಿತು ಹಲಗೆ ಬಳಪದ ತುಂಡಿಗೆ.
"ಕರಗಿ ನನ್ನೊಳು ನಾನೇ ಇಲ್ಲವಾಗಿ
ಮೂಡುವ ಬರಹಕೆ ದಾರಿಯಾಗಿ
ನಾನು ಇರದೇ, ನಿನ್ನದೇನು? "
ಎಂದುತ್ತರವನಿತ್ತಿತ್ತು ಬಳಪ.
ಕೇಳಿ ವಾದವ,ಅರ್ಥ ಕಾಣದೇ,
ಹಿರಿತನದ ಭ್ರಮೆಗೆ ಬೇಸರಿಕೆ ಮೂಡಿ,
ಗೋಡೆ-ಗಡಿಯಾರ ಸ್ವಗತಗೈದಿತು
"ಯಾರು ಮೇಲು? ಯಾರು ಕೆಳಗು?
ಒಬ್ಬರಿರದೆ ಇನ್ನೊಬ್ಬನಿಲ್ಲ
 ಕೈಗಳು ಸೇರದೆ ಶಬ್ದವೇ ಇಲ್ಲ
                                                  ಯಾವ ಮುಳ್ಳು* ಹೆಚ್ಚೋ, ಆ ದೇವಬಲ್ಲ"


"ಎಳೆವರು ಕಲ್ಲುಮಣ್ಣನೆಣಿಸದೆ
ನಿನ್ನ ಬೀರಲು ದಾರಿಯಾಗಿ,
ಆಳವಾಗದೇ ಬಾಳಲಾಗದೇ
ನನ್ನ ನೋವಿಗೆ ನಾನೇ ಕಿವಿಯಾಗಿ,
ಹೇಗೆ ನೀನು ಬೆಳೆಯ ಮೂಲ
ನಾನೇ ತಾನೆ ಅಗ್ರಮಾನ್ಯ"
ಎಂದಿತು ನೇಗಿಲು ಬೀಜಕ್ಕೆ.
"ಎಷ್ಟು ಉತ್ತರೂ ಹಾಗೇ ಇರುವೆ ನೀ ; 
ನನ್ನ ಹೊಟ್ಟೆಯ ನಾನೇ ಬಗೆದುಕೊಂಡು 
ಗಿಡ ಹುಟ್ಟಲು ದಾರಿಯಾದರೂ
ನೀನೇ ಮಾನ್ಯ, ನಾ ನಗಣ್ಯ "
ಉತ್ತರ ಸಿದ್ಧವಿತ್ತು ಬೀಜದ ಬಳಿ.
ಭೂತಾಯಿಗೆ ಬೇಜಾರು ಬಂದಿತ್ತು,
ಇಲ್ಲದ ಹಿರಿಮೆಗೆ, ಸಲ್ಲದ ಜಗಳಕೆ,
ಉಪದೇಶವು ಮನದೊಳೆ ಉಳಿದಿತ್ತು.
"ನಿಮಗೆ ನೀವೇ, ನೀವೇ ಹೆಚ್ಚು
ನಾನು ಎನ್ನುವ ಭ್ರಮೆಯ ಕಿಚ್ಚು
ತೀರದ ಅಹಂನ ಮನ್ನಣೆಯ ಹುಚ್ಚು
ಎಂದು ಕಲಿವಿರೋ ನೀವು, ಆ ದೇವಬಲ್ಲ"


"ನಾ ಕರಗಿ ಹರಿಯದ ಹೊರತು
ಎಂತು ಹುಟ್ಟೀತು ಕವಿತೆ
ಸಾರಹೀನವು ಬರಿಯ ಪದದ ಮಾಲೆ
ಜೀವವಿರದ ಬರಿ ಅಸ್ಥಿಯ ಸಂಕೋಲೆ"
ಭಾವವೆಂದಿತು ಎದೆಯುಬ್ಬಿಸಿ
ತನ್ನ ವ್ಯಾಪ್ತಿಯ ಮಹತ್ವವ ಪ್ರಲಾಪಿಸಿ.
"ಶಬ್ದ ಶಬ್ದದ ಮಧ್ಯ ಸಂಗ ಕೂಡಿ
ಅಲ್ಲಿ ಪ್ರಾಸದ ಸಂಬಂಧ ಮೂಡಿ
ರಾಗಜೋಡಣೆಗೆಷ್ಟೋ ಕ್ರಮಯೋಜನೆ**;
ಎಲ್ಲೂ ಕಾಣದ ಅಮೂರ್ತ ಭಾವಕೆ 
ಇಷ್ಟು ಮನ್ನಣೆ ಹೇಗೆ ತಾರ್ಕಿಕ?"
ಎಂದಿತು ಭಾಷೆ ತಾನೇ ಹಿರಿಯವ
                                                               ಎಂಬ ಭಾವದಿ,ಭಾವವ ತುಚ್ಛಿಸಿ.
                                                               ಬೀಗುತ ಕೇಳಿತ್ತು ಪ್ರಶ್ನೆಯ ಮಾಲೆ.
                                                               ಕವಿಮನನೊಂದು, ಪ್ರಲಾಪಿಸಿತ್ತು
                                                              "ಯಾರೂ ದೊಡ್ಡವರಲ್ಲ, ಇಲ್ಲಿ
                                                               ಅಲ್ಪರು ಯಾರೂ ಇಲ್ಲವೇ ಇಲ್ಲ .
                                                              ಯಾವುದ ಬಿಟ್ಟು ಯಾವುದೂ ಇಲ್ಲ, 
                                                               ಅತಿ ಉತ್ತಮ ಯಾವುದೋ, ಆ ದೇವಬಲ್ಲ"




*ಮುಳ್ಳು- ಗಡಿಯಾರದ ಮುಳ್ಳು
**ಕ್ರಮಯೋಜನೆ- ಆಂಗ್ಲ ಭಾಷೆಯ Permutation


Tuesday 21 June 2011

ಅಪ್ಪ - ಮರೆತು ಹೋಗುವ ಹೀರೋ


ಕಳೆದ ಭಾನುವಾರ ’ಅಪ್ಪಂದಿರ ದಿನ’ ಎಂದು ಅದರ ಹಿಂದಿನ ದಿನ ಗೆಳೆಯ ತನುಜ್ ಹೇಳದೇ ಹೋಗಿದ್ದರೆ ನನಗೆ ಗೊತ್ತೇ ಇರುತ್ತಿರಲಿಲ್ಲ ಎಂಬ ಮಟ್ಟಿಗೆ ಅವನು ಮರೆತು ಹೋಗಿದ್ದಾನೆ. ಅಮ್ಮ ಎಂದು, ಮಹಿಳೆ ಎಂದು ಎಷ್ಟೆಲ್ಲಾ ಮಹತ್ವ, ವಿಶೇಷತೆ ಪಡೆದುಕೊಳ್ಳುವ ತನ್ನ ಅರ್ಧಾಂಗಿಯ ಸಂಭ್ರಮದಲ್ಲಿಯೇ ಖುಷಿ ಕಂಡುಕೊಳ್ಳುವ ಆ ಅಪ್ಪ, ಅಮ್ಮನ ಒಳ್ಳೆಯತನದ ಸಾಗರದ ಎದುರು ಮರೆಯಾಗಿ ಹೋಗುತ್ತಾನೆ ಎನಿಸುವುದಿಲ್ಲವೇ ನಿಮಗೆ? ಹಾಗೆ ಮರೆತು ಹೋಗದ ಹಾಗಾಗಿ ಯಾರೋ ಇಬ್ಬರು ಅವರವರ ಅಪ್ಪಂದಿರಿಗೆ ’ಧನ್ಯವಾದ’ ಹೇಳುವ ಹಾಗಾದರೆ ಈ ಅಂಕಣ ಸಾರ್ಥಕ.
ನೆನಪಿದೆಯೇ, ನಾವು ಚಿಕ್ಕವರಿರುವಾಗ ಅಪ್ಪ ಎಂದರೆ ಹೇಗೆ ನಮಗೆ ಪರಿಚಯವಾಗಿದ್ದುದು ಎಂದು? ಒಂತರಾ ಖಳನಾಯಕನ ಹಾಗೆ, ಊಟ ಮಾಡದೇ ಇದ್ದಾಗ, ಜೋರಾಗಿ ಹಠ ಮಾಡಿದಾಗ  ಬಂದು ಹೆದರಿಸುವ ಕೆಂಪು ಕಣ್ಣಿನ ಭೂತದ ಹಾಗೆ. ನಾವೇನಾದರೂ ತಪ್ಪು ಮಾಡಿದಾಗ ಹೆದರಿಸುವ ಭಯೋತ್ಪಾದಕನಾಗಿ ಪರಿಚಯವಾಗುವ ಅಪ್ಪ ಬಹಳಷ್ಟು ಮಕ್ಕಳ ಪಾಲಿಗೆ ಹಾಗೆಯೇ ಉಳಿದು ಹೋಗುವುದು ದುರಂತ. ಮಮತೆ, ಪ್ರೀತಿ ಇಂತಹ ಶಬ್ದಗಳೆಲ್ಲ ಅಮ್ಮನೊಬ್ಬಳದ್ದೇ ಸೊತ್ತೇನೋ ಎಂಬಷ್ಟರ ಮಟ್ಟಿಗೆ ಅಪ್ಪನ ಪ್ರೀತಿ ಅಂತರ್ಮುಖಿ. ಕೇವಲ ಅವನ ಕೋಪ ತಾಪ ಮಾತ್ರ ಬಹಿರ್ಮುಖಿ. ಒಂದು ಊಟದ ವಿಷಯಕ್ಕೆ ಬಂದರೂ ಅಮ್ಮ ಹೇಳುವುದು ಹೀಗೇ, " ಬೇಗ ಬೇಗ ಊಟ ಮಾಡು, ಇಲ್ಲವೆಂದರೆ ಅಪ್ಪ ಬಂದು ಬಿಡುತ್ತಾರೆ. (ಅಪ್ಪನೇನೋ ದೂರ್ವಾಸ ಮುನಿ ಎನ್ನುವ ತರಹ) ಅವರು ಬಂದಾಗ ನಿನ್ನ ಊಟ ಆಗಿದ್ದರೆ ಅವರಿಗೆ ಸಿಟ್ಟು ಬರುವುದಿಲ್ಲ. (ಅಪ್ಪ ಇರುವುದೇ ಸಿಟ್ಟು ಮಾಡಿಕೊಳ್ಳಲಿಕ್ಕೆ ಎಂಬ ಧಾಟಿಯಲ್ಲಿ)." ಎಲ್ಲರ ಮನೆಯ ಕಥೆಯೂ ಇಷ್ಟೇ, ಅಮ್ಮ ದುಷ್ಟ , ಕೋಪಿಷ್ಟ ಅಪ್ಪನಿಂದ ಕಾಪಾಡುವ ಕಾರುಣ್ಯಮಯಿಯಾಗಿ ಕಾಣುತ್ತಾ ಹೋಗುತ್ತಾಳೆ. ಆದರೆ ಅಪ್ಪ, ಮಗನಿ(ಳಿ)ಗೆ ಶಿಸ್ತು ಬೇಕೆಂಬ ಒಂದೇ ಆಸೆಯಿಂದ ಸಿಟ್ಟಿನ ಮುಖವಾಡ ತೊಟ್ಟು ತನ್ನ ಅಗಾಧ ಮಮಕಾರವನ್ನು ಬಚ್ಚಿಟ್ಟುಕೊಳ್ಳುವ ಶಿಕ್ಷೆಯನ್ನು ಜೀವನಪೂರ್ತಿ(ಕೊನೆಪಕ್ಷ ಮಕ್ಕಳು ದೊಡ್ಡವರಾಗುವ ತನಕ) ಅನುಭವಿಸುವ ಶಿಕ್ಷೆಯನ್ನು ಪಡೆಯುತ್ತಾನೆ. ಅದರಲ್ಲಿಯೇ ಖುಷಿ ಪಡುತ್ತಾನೆ ಅವನು. ನಮ್ಮ ಲಿಂಗದಿಂದ ಹಿಡಿದು ಎಲ್ಲವನ್ನೂ  ನಿರ್ಧರಿಸುವ ಅಪ್ಪ, ಮಕ್ಕಳಿಗೆ ಮನೆಯ ಪರಿಸ್ಥಿತಿಯಲ್ಲಿ ಅತ್ಯುತ್ತಮವಾದದ್ದನ್ನ ದೊರಕಿಸುವುದೇ ತನ್ನ ಏಕಮಾತ್ರ ಕರ್ತವ್ಯ ಎಂಬಂತೆ ದುಡಿಯುತ್ತಾನೆ. ಅದೇ ಪ್ರಯತ್ನದಲ್ಲಿರುವಾಗ ಕೆಲವೊಮ್ಮೆ ಭಾವನಾತ್ಮಕವಾದ ಅಂತರ ತಂದೆ-ಮಕ್ಕಳ ಮಧ್ಯೆ ಬರುವುದು ಅನಪೇಕ್ಷಣೀಯವಾದರೂ ದುರದೃಷ್ಟಕರವಾಗಿ ಅದು ಬಹುಸಾಮಾನ್ಯ ವಿದ್ಯಮಾನವೇ.
ಚಿಕ್ಕಂದಿನಲ್ಲೂ ಅಪ್ಪ ಎಂದರೆ ಕಣ್ಣ ಮುಂದೆ ಬರುತ್ತಿದ್ದುದು, ಕೇವಲ ಸಿಟ್ಟಲ್ಲ, ಅಪ್ಪ ಎಂದರೆ ಒಬ್ಬ ಹೀರೋ, ಉಳಿದವರಾರೂ ಮಾಡಲಾಗದ್ದನ್ನು ಮಾಡಬಲ್ಲ ಸುಪರ್ ಮ್ಯಾನ್, ಹೆಗಲ ಮೇಲೆ ಕೂರಿಸಿಕೊಂಡು ಹಿತ್ತಲಿಡೀ ಸುತ್ತು ತಿರುಗಿಸುತ್ತಿದ್ದ ಶಕ್ತಿಮಾನ್, ಅಪ್ಪ ಎಂದರೆ ಮಗ(ಳು) ಇಷ್ಟ ಪಡುತ್ತಾನೆ(ಳೆ) ಎಂಬ ಒಂದೇ ಕಾರಣಕ್ಕೆ ಎಷ್ಟೋ ದೂರದಿಂದ ಕಳಲೆ*ಯನ್ನು ಕೊಯ್ದುಕೊಂಡು ಬರುತ್ತಿದ್ದ, ಕರ್ಕಿಯಲ್ಲಿ ಮಾಡಿದ ಕೇಸರೀಬಾತ್ ನ್ನು ಸಿರಸಿಗೆ ಹೊತ್ತುಕೊಂಡು ಬರುತ್ತಿದ್ದ ಪ್ರೇಮಸಿಂಧು, ಎಲ್ಲಿ ಮಗ ಹಾಳಾಗಿಹೋಗುತ್ತಾನೇನೋ ಎಂದು ಕ್ರಿಕೆಟ್ ನ್ನು ದ್ವೇಷಿಸಲಾರಂಭಿಸಿದ ಭಾವಬಂಧು, ಮನೆಯ ಮಧ್ಯದಲ್ಲಿ TV ಎಂಬ ಮಾಯಾಪೆಟ್ಟಿಗೆಯನ್ನು ತಂದಿಡದೇ ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸಿದ ವಿವೇಕಿ, ತನ್ನ ನನಸಾಗದ ಕನಸುಗಳನ್ನೆಲ್ಲ ಮಗನಾದರೂ ನನಸು ಮಾಡಲಿ ಎಂದು ಹಂಬಲಿಸುವ ಮಹತ್ವಾಕಾಂಕ್ಷಿ ಕನಸುಗಾರ. ಇನ್ನೂ ಎಷ್ಟೆಷ್ಟೋ ವರ್ಣನೆಗಳನ್ನು ಕೊಡಬಹುದು, ಕೊಡುತ್ತಲೇ ಇರಬಹುದು.
ಹೌದು, ನಿಜವೆಂದರೆ ’ಅವರು’(ಅಮ್ಮ ಅಪ್ಪನಿಗೆ ಹಾಗೆ ಕರೆಯುತ್ತಿದ್ದಳಾದ್ದರಿಂದ ನಾನೂ ಅಪ್ಪನಿಗೆ ’ಅವರು’ ಎಂದೇ ಸಂಬೋಧಿಸುತ್ತಿದ್ದೆನಂತೆ,ಈಗಲೂ ಕೆಲವೊಮ್ಮೆ ಹಾಗೇ ಮಾಡುವುದುಂಟು) ಎಂದು ಪರಿಚಯವಾದ ಅಪ್ಪನೇ ನಾನು ಕಂಡ ಮೊದಲ ಹೀರೋ. ’ಅವರು’ ಆ ಪಟ್ಟವನ್ನು ಪಡೆದುಕೊಂಡಿದ್ದು ಉಳಿದವರು ದೈಹಿಕವಾಗಿ ಮಾಡಲ್ಲರದ್ದನ್ನೇನೋ ಅವನು ಮಾಡಬಲ್ಲವನಾಗಿದ್ದನೆಂದೇನಲ್ಲ, ರಸ್ತೆಯಲ್ಲಿ ಅಪ್ಪನ ಜೊತೆಗೆ ಹೋಗುತ್ತಿದ್ದರೆ ಎಲ್ಲರೂ ಗೌರವದಿಂದ ’ನಮಸ್ಕಾರ ಸರ್ ’ ಹೇಳಿ ಹೋಗುತ್ತಿದ್ದರೆಂಬುದೂ ಕಾರಣವಲ್ಲ, ನಮ್ಮ ಇಡೀ ಕುಟುಂಬದಲ್ಲಿ ಅಪ್ಪನೇ ಎತ್ತರ, ಮೈಕಟ್ಟುಗಳ ಅಳತೆಯಲ್ಲಿ ಎದ್ದು ಕಾಣುತ್ತಿದ್ದರೆಂಬುದಂತೂ ಮೊದಲೇ ಅಲ್ಲ. ಅದು ಮೊದಲಿನಿಂದಲೂ ಅವರು ಬೆಳೆಸಿಕೊಂಡು ಬಂದ ವ್ಯಕ್ತಿತ್ವಕ್ಕೆ, ನಡೆದುಕೊಂಡ ರೀತಿಗೆ ನಾನು ಕೊಡುವ ಒಂದು ಪಟ್ಟವಷ್ಟೇ. ಅಪ್ಪನನ್ನು ಏಕವಚನದಲ್ಲಿಯೇ ಕರೆಯುವ ಹವ್ಯಕರಲ್ಲಿ ಒಬ್ಬನಾದರೂ ಇಂದಿಗೂ ಅಪ್ಪನನ್ನು ಏಕವಚನದಲ್ಲಿ ಮಾತನಾಡಿಸಲು ಸಾಧ್ಯವಾಗಲಾರದಷ್ಟು ಗೌರವವನ್ನು ಈ ಅಪ್ಪ ಎಂಬ ವ್ಯಕ್ತಿ ಬೆಳೆಸಿಟ್ಟುಕೊಂಡಿದ್ದಾನೆ. ಆರ್ಥಿಕವಾಗಿ ಏನೆಂದರೆ ಏನೂ ಇಲ್ಲದ ಸ್ಥಿತಿಯಲ್ಲಿ, ತನ್ನ ಅಪ್ಪನನ್ನು ಕಳೆದುಕೊಂಡ ನಂತರ ತನ್ನ ಕುಟುಂಬವನ್ನು ಕೇವಲ ದುಡಿಮೆಯೊಂದನ್ನೇ ನೆಚ್ಚಿಕೊಂಡು ಇಂದು ನಾವಿರುವ ಮಟ್ಟಕ್ಕೆ ತಂದ ಎಂದರೆ ಅದು ಯಾವ ಸಾಧಕನಿಗೂ ಕಡಿಮೆಯಿಲ್ಲದ ಸಾಧನೆಯೇ. ಇಂದಿಗೂ ಅಪ್ಪ ಅರ್ಥ ಮಾಡಿಕೊಂಡಷ್ಟು ಸಾಮಾನ್ಯ ವಿಜ್ಞಾನ ನನಗೆ ಅರ್ಥವಾಗಿದೆ ಎಂದು ಧೈರ್ಯದಿಂದ ಹೇಳಿಕೊಳ್ಳಲಾರೆ ಎಂಬಷ್ಟರ ಮಟ್ಟಿಗೆ ಅಪ್ಪನದು ತಾರ್ಕಿಕ ಬುದ್ಧಿ. ಅವರ ಯೋಚನೆಯ ಮಟ್ಟ ಇಂದಿಗೂ ನನಗೆ ವಿಸ್ಮಯವೇ! ಕೇವಲ ವೃತ್ತಿಯಿಂದಷ್ಟೇ ಅಲ್ಲ, ಹುಟ್ಟಿನಿಂದಲೇ ಶಿಕ್ಷಕ**ರಾಗಿ ಹುಟ್ಟಿದವರಂತೆ ಜೀವನದಲ್ಲಿ ಎದುರಾಗುವ ಚಿಕ್ಕ ಚಿಕ್ಕ ಸಂಗತಿಗಳನ್ನು ಅರ್ಥ ಮಾಡಿಕೊಂಡಿದ್ದರು ಎಂಬಲ್ಲಿಗೆ ನನ್ನ ಗೌರವ ಮತ್ತೊಂದಿಷ್ಟು ಹೆಚ್ಚಾಗುತ್ತದೆ.
ಅಪ್ಪ ಎಂದರೇ ಹಾಗೇ, ಅದೊಂದು ಮಹತ್ವಾಕಾಂಕ್ಷೆಯ ಮೂರ್ತಿ, ಅಕ್ಷರಶಃ ಬೆವರನ್ನು ಸುರಿಸಿ ಕಟ್ಟಿದ ಮನೆಗಾಗಲೀ, ನಾನು ಖುಷಿಯಿಂದ  ತಂದುಕೊಟ್ಟ ಅಂಕಪಟ್ಟಿಗಾಗಲೀ ಒಂದು ಸಮಾಧಾನದ ನಿಟ್ಟುಸಿರಷ್ಟೇ ಬೆಲೆ. ದೊಡ್ಡದೊಂದನ್ನು ಸಾಧಿಸಬೇಕೆಂಬ ಹಠ. ಅಪ್ಪ ಎಂದರೆ ಹಾಗೇ, ಎಂದಿಗೂ ಬಾಗದ ಸಮಾಧಾನದ ಹೆಗಲು. ಅಪ್ಪ ಎಂದರೆ ಸುಳ್ಳು ಸುಳ್ಳೇ ಸಿಟ್ಟನ್ನು ಆವಾಹಿಸಿಕೊಂಡಿರುವ ಹಿತೈಷಿ. ಅಪ್ಪ ಎಂದರೆ ಹೀಗೇ ಇನ್ನೆಷ್ಟೋ!
ಆಯ್ತು, ಜನ್ಮದಾತನಿಗೆ ಮತ್ತೊಮ್ಮೆ ಕೈಮುಗಿದು ನಮಸ್ಕರಿಸಿ (ಹೇಳದೇ ಹೋದರೂ ಅದು ಮಾನಸಿಕ ಅಭಿವ್ಯಕ್ತಿ ಎಂಬುದು ಇಲ್ಲಿಯೇ ಸ್ಪಷ್ಟ :P ) ಅವನ ಬಗೆಗಿನ ಈ ಅಂಕಣಕ್ಕೆ ಅಂತ್ಯ ಹಾಡುತ್ತಿದ್ದೇನೆ. ಇದಕ್ಕಿಂತ ಹೆಚ್ಚು ನಾವೇನನ್ನಾದರೂ ಕೊಡಬಹುದು, ಈ ಬದುಕನ್ನೇ ನಮಗೆ ಕೊಟ್ಟವನಿಗೆ. ( ಕೊನೆಯ ಸಾಲನ್ನು ನಾನು ಪುನರಾವರ್ತಿಸಿರುವೆನೆಂದು ನನಗೆ ಗೊತ್ತು, ಆದರೆ ಸಂದರ್ಭೋಚಿತವಾಗಿದೆ ಎಂದುಕೊಳ್ಳುತ್ತೇನೆ)
* ಕಳಲೆ- ಚಿಕ್ಕ ಬಿದಿರು. ಬಿದುರು ಚಿಕ್ಕದಾಗಿರುವಾಗ ಅದನ್ನು ಕೊಯ್ದು ತಂದು ಪಲ್ಯ, ಸಾಂಬಾರ್ ಮಾಡುತ್ತಾರೆ.
** ಶಿಕ್ಷಕ ಎಂಬುವವನು ಮೊದಲನೆಯದಾಗಿ ಎಲ್ಲವನ್ನು ಅರ್ಥ ಮಾಡಿಕೊಂಡಿರಬೇಕು ಎಂಬುದು ನನ್ನ ಅಭಿಪ್ರಾಯ.ಅದಕ್ಕೇ ಆ ರೀತಿಯಲ್ಲಿ ಈ ಶಬ್ದಪ್ರಯೋಗ.

Wednesday 15 June 2011

ಒಂದಿಷ್ಟು ಮೌಲ್ಯಗಳೂ-ಒಬ್ಬ ಹೆಚ್. ಓ. ಡಿ. ಯ ರಾಜಿನಾಮೆಯೂ


ಆಗಷ್ಟೇ ಥಿಯರಿ ಪರೀಕ್ಷೆಗಳು ಮುಗಿದು ಪ್ರಾಯೋಗಿಕ ಪರೀಕ್ಷೆಗಳು ಪ್ರಾರಂಭವಾಗಿದ್ದವು.ನೋಡನೋಡುತ್ತಿದ್ದಂತೆಯೇ ಅದೂ ಮುಗಿದುಹೋಗುವುದರೊಳಗಿತ್ತು.  ಎಲ್ಲರೂ ತಲೆಯ ಮೇಲೆ ಹತ್ತಿ ಕುಳಿತಿದ್ದ ಪರೀಕ್ಷಾಭೂತವನ್ನು ಕೆಳಗಿಳಿಸಿಕೊಂಡು ಹಗುರಾಗುವುದರೊಳಗಿದ್ದರು. ಆಗ ಬಂದಿತ್ತು ಆಘಾತ, PESEC ಬ್ರಾಂಚ್ ಕಂಡ ಒಬ್ಬ ಅತ್ಯುತ್ತಮ HOD ರಾಜೀನಾಮೆ ಕೊಟ್ಟಿದ್ದರು. ವಿದ್ಯಾರ್ಥಿವೃಂದಕ್ಕೆ ಏನೂ ತೋಚದೇ ಗರಬಡಿದಂತಾಗಿತ್ತು. ಮೊನ್ನೆ ಮೊನ್ನೆ GATEನ ಸಾಧನೆಗೆ ಅಭಿನಂದಿಸಿ ಖುಷಿ ಪಟ್ಟು, ಮುಂದಿನ ಸಲ ಅದಕ್ಕಿಂತ ಚೆನ್ನಾಗಿ ಮಾಡುವಿರಂತೆ ಎಂದು ಪ್ರೋತ್ಸಾಹಿಸಿ ಕಳಿಸಿಕೊಟ್ಟಿದ್ದ ಅದೇ HOD , ಈ ವರ್ಷವೂ ಬೇಸಿಗೆ ರಜೆಯಲ್ಲಿ ಉಚಿತ GATE  ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದ ಅದೇ HOD, ಹೀಗೆ ತುರ್ತಾಗಿ ರಾಜಿನಾಮೆ ಕೊಡುತ್ತಿದ್ದಾರೆ ಎಂಬ ಅಂಶವನ್ನು ಜೀರ್ಣಿಸಿಕೊಳ್ಳಲೇ ಸ್ವಲ್ಪ ಹೊತ್ತು ಬೇಕಾಯಿತು. ಹಾಗೆ ಗೊತ್ತಾದ ಮರುದಿನವೇ HODಯ ಕೋಣೆಯ ಎದುರು ಅವರ ವಿಧ್ಯಾರ್ಥಿಗಳ ಗುಂಪೇ ನೆರೆದಿತ್ತು. ಆ ಗುಂಪಿಗೆ(ನಾನೂ ಆ ಗುಂಪಿನಲ್ಲಿದ್ದೆ ಎಂಬುದನ್ನು ದಾಖಲಿಸುವುದು ಅನವಶ್ಯಕವಾದರೂ ದಾಖಲಿಸುತ್ತಿದ್ದೇನೆ.) ಅವರು ಕೊಟ್ಟ ಉತ್ತರದ ಬಗ್ಗೆ ಬರೆಯುವ ಮೊದಲು ಅದರ ಹಿಂದಿನ ದಿನ ನಡೆದ ಇದಕ್ಕೆ ಸಂಬಂಧವೇ ಇಲ್ಲ ಎಂದು ಮೇಲ್ನೋಟಕ್ಕೆ ಕಂಡರೂ ನಿಜವಾಗಿ ಸಂಬಂಧ ಪಟ್ಟಿರುವ  ಘಟನೆಯ ಬಗ್ಗೆ ಒಂದಿಷ್ಟು ಹೇಳುವುದು ಉಚಿತ.

ಅಂದು DC ಪ್ರಯೋಗಿಕ ಪರೀಕ್ಷೆ. ಓದಿದ್ದು ಕಡಿಮೆಯಾಗಿತ್ತೋ, ಅಥವಾ ಅಕಾರಣವಾಗಿ ಆಗಾಗ ಹುಟ್ಟುವ ತಾತ್ಕಾಲಿಕ ಜ್ಞಾನಶೂನ್ಯತೆಯೋ? ಏನೋ, ಸುಲಭದ ಪ್ರಯೋಗ ಬಂದಿದ್ದರೂ ಆ ಕ್ಷಣದಲ್ಲಿ ಏನೂ ತೋಚದಂತಾಗಿಹೋಯ್ತು. ಏನೋ ಕಷ್ಟ ಪಟ್ಟುಕೊಂಡು ಲಿಖಿತ ಭಾಗವನ್ನು ಪೂರ್ತಿಗೊಳಿಸಿದೆನಾದರೂ ಎಷ್ಟು ಒದ್ದಾಡಿಕೊಂಡರೂ ಪ್ರಯೋಗದ ಔಟ್ ಪುಟ್ ಬರಲಿಲ್ಲ. ತಲೆಹರಿದ ಮಟ್ಟಿಗೆ ಕ್ರಮಯೋಜನೆ-ವಿಕಲ್ಪಗಳನ್ನು ಅನ್ವಯಿಸಿದೆನಾದರೂ ಬಯಸಿದ ಉತ್ತರ ಬಾರದೇ ಹೋಯಿತು. ಯಾವತ್ತಿನ ಹಾಗೆ ಮತ್ತೊಂದಿಷ್ಟು ಯೋಚಿಸುವ ಕಷ್ಟಸಾಧ್ಯದ ದಾರಿಯನ್ನು ಬಿಟ್ಟು, ಗೆಳೆಯ ಶಿವದರ್ಶನ್ ನ್ನು ಕೇಳುವ ಅಡ್ದದಾರಿಯನ್ನು ಹಿಡಿದೆ. ಹಿಂದೊಮ್ಮೆ ಏಳನೇ ತರಗತಿಯಲ್ಲಿ ಹೀಗೇ ಕಾಪಿಮಾಡಿಕೊಂಡು ಅದಕ್ಕೆ ಪ್ರಾಯಶ್ಚಿತ್ತ ಪಟ್ಟುಕೊಂಡು ಬಿಟ್ಟಿದ್ದ ಚಾಳಿ ಮತ್ತೆ ಮರುಕಳಿಸಿತ್ತು ಎಂಬಲ್ಲಿಗೆ ಒಂದು ನೈತಿಕ ಅಧಃಪತನಕ್ಕೆ ದಾರಿ ಸುಗಮವಾಗಿತ್ತು. ೮ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಮೌಲ್ಯಗಳನ್ನು ಒಂದು ಕ್ಷುಲ್ಲಕ ಕ್ಷಣದಲ್ಲಿ ಬಲಿಕೊಟ್ಟ ನನ್ನನ್ನು ಅಣಕಿಸುವಂತೆ ನನ್ನ ಎಲ್ಲಾ ಪ್ರಯತ್ನಗಳ ನಂತರವೂ ಔಟ್ ಪುಟ್ ಬರಲಿಲ್ಲ. ಅನಿಸಿತ್ತು ಆಗಲೇ, ನಾವು ನಂಬಿರುವ ಮೌಲ್ಯಗಳನ್ನು ಬಿಟ್ಟರೆ ಎಂದಿಗೂ ಸುಖವಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಂಬಿ ಕೆಟ್ಟವರಿಲ್ಲವೋ, ನಂಬದೇ ಉದ್ಧಾರ ಆದವರಿಲ್ಲವೋ! ( ಏನನ್ನು ಬೇಕಾದರೂ ಆಗಬಹುದು,ಯಾವ ಒಳ್ಳೆಯ ಅಂಶವನ್ನು ಬೇಕಾದರೂ ಆಗಿರಬಹುದು.) ನಾವು ನಂಬಿರುವುದನ್ನು ನಾವೇ ಪಾಲಿಸದೇ ಹೋದರೆ, ಆ ದೇವರೂ ( ಅವನು ಇದ್ದರೆ ?? ) ಮೆಚ್ಚಲಾರ ಎಂಬಲ್ಲಿಗೆ ಈ ಲೇಖನದ ಮೊದಲ ಭಾಗ ಮುಗಿಯುತ್ತದೆ.

ಮತ್ತೆ HODಯ ಉತ್ತರದ ಬಗ್ಗೆ ಬರೋಣ, ಅಂದು HOD ಯಾವ ಸ್ಥಿತಪ್ರಜ್ಞ ಯೋಗಿಗೂ ಕಮ್ಮಿಯಿಲ್ಲದ ಶಾಂತತೆಯಲ್ಲಿ ಕೂತಿದ್ದರೂ, ಮುಖದ ಮೇಲೆ ಇದ್ದ ನಗು ಬಲವಂತದಿಂದ ತರಿಸಿಕೊಂಡಿದ್ದು ಎಂದು ಸ್ಪಷ್ಟವಾಗಿ ತೋರುತ್ತಿತ್ತು. ದುಃಖಿತರಾಗೇನೂ ಕಾಣದಿದ್ದರೂ ಮಾಮೂಲಿಯಾಗೇನೂ ಇರಲಿಲ್ಲ, ಹಾಗೆ ಮಾಮೂಲಾಗಿ ಇರುಲೆಂದು ಬಯಸುವುದೂ ಕಟುಕತನವಾಗಬಹುದು. ಇರಲಿ, "ಕೊನೆಪಕ್ಷ ನಮ್ಮ, ಎಂದರೆ ನಿಮ್ಮ ವಿಧ್ಯಾರ್ಥಿಗಳ ಸಲುವಾಗಿಯಾದರೂ ನಿಮ್ಮ ನಿರ್ಧಾರವನ್ನು ಪುನರ‍್ ವಿಮರ್ಶಿಸಿ" ಎಂದು ನಾವು ಕೊನೆಯ ಅಸ್ತ್ರವೆಂಬಂತೆ ಕೇಳಿದ್ದೆವು. ಯಾರ ಮೇಲೂ ಆಪಾದನೆ ಹೊರಿಸದಂತೆ HOD ಮಾತುಗಳನ್ನು ಆರಿಸಿ ಹೇಳಿದ್ದರು**, " ನಾನು ನನ್ನ ಜೀವನದಲ್ಲಿ ಕೆಲವು ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿದ್ದೇನೆ. ಈ ಕಾಲೇಜೂ ಇದರದ್ದೇ ಆದ ನೀತಿಗಳನ್ನು ಅಳವಡಿಸಿಕೊಂಡು ಬೆಳೆದುಕೊಂಡು ಬಂದಿದೆ.ಯಾವಾಗ ಇಬ್ಬರ ಮೌಲ್ಯಗಳಲ್ಲಿ ಹೊಂದಿಕೆಯಾಗುವುದಿಲ್ಲವೋ ಆಗ ಒಬ್ಬರು ಹೊಂದಿಕೊಳ್ಳಬೇಕಾಗುತ್ತದೆ. ಹಾಗೆ ಹೊಂದಿಕೊಳ್ಳಲಾರದೇ ಹೋದರೆ ಒಬ್ಬರು ಆ ವ್ಯವಸ್ಥೆಯಿಂದ ಹೊರಬರಬೇಕಾಗುತ್ತದೆ. ಇದೇ ಆಡಳಿತ ಕಟ್ಟಿದ ಕಾಲೇಜಿನಿಂದ ಅವರೇ ಹೊರಬರುವುದು ಸಾಧ್ಯವಿಲ್ಲವಾದ್ದರಿಂದ ನಾನು ಹೊರಹೋಗುತ್ತಿದ್ದೇನೆ.ಸಂಸಾರದಲ್ಲಿಯೂ ಅಷ್ಟೇ. ಇಬ್ಬರೂ ಒಂದಿಲ್ಲೊಂದು ವಿಷಯದಲ್ಲಿ ಹೊಂದಿಕೊಳ್ಳಬೇಕಾಗುತ್ತದೆ. ಎಲ್ಲ ಸಲವೂ ಒಬ್ಬರೇ ಹೊಂದಿಕೊಳ್ಳಬೇಕೆಂದರೆ ಬಿರುಕು ಹುಟ್ಟುವುದು ಸಹಜ. ಅಲ್ಲಿ ವಿಚ್ಛೇದನ ಆಗಬಹುದು. ಯಾರದ್ದೇನೂ ತಪ್ಪು ಇರಬೇಕೆಂದೇನೂ ಇಲ್ಲ. ಅವರಿಬ್ಬರಲ್ಲಿ ಹೊಂದಾಣಿಕೆ ಇಲ್ಲ ಅಷ್ಟೆ. ಇಲ್ಲೂ ಒಬ್ಬರ ವಿಚಾರಗಳನ್ನು ಮತ್ತೊಬ್ಬರ ಮೇಲೆ ಹೇರಲು ಹೋದರೆ ಘರ್ಷಣೆ ಮಾಮೂಲೇ. ಪ್ರತಿಯೊಂದು ಸಲವೂ ಒಬ್ಬರೇ ರಾಜಿ ಮಾಡಿಕೊಳ್ಳಬೇಕೆಂಬುದೂ ನ್ಯಾಯವಲ್ಲವಷ್ಟೇ. ನೀವು ನಂಬಿಕೊಂಡು ಬಂದ ಮೌಲ್ಯಗಳನ್ನು ಎಂದಿಗೂ ಬಿಡಬೇಡಿ. ಅವುಗಳನ್ನು ಬಿಟ್ಟ ಮೇಲೆ ನೀವೆಂದಿಗೂ ಯಶಸ್ವಿಯಾಗಲಾರಿರಿ. ಅಷ್ಟಕ್ಕೂ ನಾನು ಬರುವ ಮೊದಲೂ ಈ ಕಾಲೇಜು ಅಗ್ರಶ್ರೇಣಿಯಲ್ಲೇ ಇತ್ತು, ಇಂದಿಗೂ ಇದೆ. ನೀವರೂ ನಾನು ಈ ಕಾಲೇಜಿನಲ್ಲಿ ಇರುವೆನೆಂದು ಈ ಕಾಲೇಜನ್ನು ತೆಗೆದುಕೊಂಡವರಲ್ಲ, ಅಲ್ಲವೇ? ಇಲ್ಲಿಗೆ ಬಂದ ಮೇಲೆ ನನ್ನನ್ನು ಮೆಚ್ಚಿರಬಹುದು. ಇಷ್ಟು ಚಿಕ್ಕ ಸಮಯದಲ್ಲಿ ಹೀಗೆ ಒಂದು ಕಾಲೇಜನ್ನು ನಾಡಿನ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿ ಮಾಡಿದ್ದಾರೆ ಎಂದರೆ ಅದೇನೂ ಕಡಿಮೆ ಸಾಧನೆಯಲ್ಲ. ಯಾರಿಗೆ ಗೊತ್ತು, ನನಗಿಂತ ಬಹಳ ಉತ್ತಮ HODಯನ್ನು ಕರೆತರಬಹುದು. ಈಗ ನಾವು ಪರಸ್ಪರರಿಗೆ ಶುಭ ಹಾರೈಸಿ ಬೇರಾಗುವುದಷ್ಟೇ ಉಳಿದಿರುವುದು." ಎಂದು ಹೇಳಿ ಕೊನೆಯಲ್ಲಿ PESITನ ಹುಡುಗರನ್ನೊಂದಿಷ್ಟು ಹೊಗಳಿ ಇವತ್ತಿಗೆ ಇಷ್ಟು ಮಾತು ಸಾಕು
ಎಂಬಂತೆ ಬೀಳ್ಕೊಡುಗೆಯ ನಗೆ ನಕ್ಕರು ಎಂಬಲ್ಲಿಗೆ ಎರಡನೆಯ ಭಾಗವೂ ಮುಗಿಯುತ್ತದೆ.

ಆಗಿದ್ದು ಇಷ್ಟೇ, ಆಗಬೇಕಾದ ಆಲೋಚನೆಗಳು ಬಹಳಷ್ಟಿವೆ. ಹಾಗೆ HOD ಮೌಲ್ಯ ಮತ್ತು ನೀತಿಗಳ ಬಗ್ಗೆ ಹೇಳುತ್ತಿದ್ದರೆ ನನಗೆ ಹಿಂದಿನ ದಿನ ನಾನು ಮಾಡಿದ್ದ ಕೃತ್ಯದ ನೆನಪಾಗಿ ನಾಚಿಕೆಯೆನ್ನಿಸುತ್ತಿತ್ತು. ಸರಿಯಾದ ಸಮಯದಲ್ಲಿ ಇವರಂತೆ ಎಚ್ಚೆತ್ತುಕೊಳ್ಳದೇ ಹೋಗಿದ್ದರಿಂದ , ನನ್ನ ಮೌಲ್ಯಗಳನ್ನು ಬಿಡಬಾರದು ಎಂಬ ಪ್ರಜ್ಞೆ ಮೂಡದೇ ಇದ್ದುದರಿಂದಲೇ ತಾನೆ, ಮತ್ತೆ ಹಾಗೆ ಪ್ರಾಯಶ್ಚಿತ್ತ ಪಡುವ ಹಾಗೆ ಆಗಿದ್ದು. ಆ ಪ್ರಾಯಶ್ಚಿತ್ತದಿಂದ ಹುಟ್ಟಿದ ಅಪರಾಧಿ ಪ್ರಜ್ಞೆ, ತಪ್ಪು ಮಾಡಬಾರದು ಎಂಬ ಸಾಮಾನ್ಯ ಜ್ಞಾನ ಮುಂದೆಂದೂ ಇಂತಹ ಘಟನೆ ಮರುಕಳಿಸದಂತೆ ತಡೆಯುತ್ತದೆ ಎಂದು ನಂಬುತ್ತ ಈ ಲೇಖನಕ್ಕೆ ಅಂತ್ಯ ಹೇಳುತ್ತಿದ್ದೇನೆ.

** - ಇಲ್ಲಿ ಭಾಷಾಂತರದಲ್ಲಿ ತಪ್ಪಾಗಿರುವ ಸಾಧ್ಯತೆಯಿರುವುದರಿಂದ ಎಲ್ಲ ತಪ್ಪುಗಳಿಗೆ ಸಂಪೂರ್ಣವಾಗಿ ನಾನೇ ಹೊಣೆ.
subrahmanyahegde.wordpress.com