Friday, 16 December 2011

ಮನುಜ...ಯಾರ ಹೊಗಳಿಕೆಗೆ ಏನು ಬೆಲೆ;
ಯಾವ ಮೆಚ್ಚಿಗೆಗೆ, ಏಕೆ ನಟನೆ
ದೇವನಿರುತ ಸರ್ವಾಂತರ್ಯಾಮಿಯಾಗಿ
ಎಲ್ಲಬಲ್ಲವನ ಮೆಚ್ಚಿಸದೇ ದಕ್ಕೀತೆ ಸಗ್ಗ
ನಮ್ಮತನವ ನಾವು ಮರೆತು, ಜನರ
ವಿಚಾರಕೆ ಸಲ್ಲದ ಮನ್ನಣೆಯಿತ್ತು.

ಅನಂತ ಮನದ ಸುತ್ತ ಚಿಕ್ಕ ಬೇಲಿ ಹಾಕಿ
ಎಲ್ಲ ನೆನಪಿಟ್ಟುಕೊಂಬೆನೆಂಬ ಹೊಂಚಹಾಕಿ
ಬಣ್ಣದ ಕೋಟೆಯ ಮಧ್ಯದಲಿ ನಾವಡಗಿ
ನಮ್ಮ ಹಗಲುವೇಷಕೆ ನಾವೆ ನಾಚಿ
ನಮ್ಮದಲ್ಲದ ಬದುಕ ನಾವು ಬಾಳಿ
ಕಳೆದುಕೊಂಡೆವೆಂದು ಪರತಪಿಸಬಹುದೆ.

ಅನ್ಯರತಪ್ಪಿಗೆ ಭೂತಗನ್ನಡಿಯಿಟ್ಟು
ತನ್ನ ತಪ್ಪನು ಒಪ್ಪಿತಗೊಳಿಸಿ,
ವಾದದಲ್ಲಿ ಗೆದ್ದೆನೆಂದರೆ,ಮಾತಿನಲ್ಲಿ
ಮೀರಿದೆನೆಂದರೆ ಕ್ಷಮೆಯು ಉಂಟೇ;
ನಿಜದ ಪಶ್ಚಾತ್ತಾಪವಿರದೆ ಮಾಡಿದ
ಪಾಪದೋಷಕೆ ಮುಕ್ತಿಯುಂಟೇ?

ಇರಲಾರದ ಭ್ರಮೆಯ ಮೂಡಿಸಿ
ಮನದ ಮೇಲೆ ಘಾಸಿಮಾಡಿ
ಬುದ್ಧಿಯುದ್ಧವ ಗೆದ್ದೆನೆಂದರೇನಂತೆ
ಗೆಲ್ಲಲಾದೀತೆ ನಿಜವ ಬುದ್ಧಿಮಾತ್ರಕೆ
ಸುಳ್ಳಿನಲೆಯ ಮೇಲೆ ನಿಜವ ಸೇರಿ
ದಕ್ಕಬಹುದೇ ದಿಕ್ಕು, ದೇವಬಲ್ಲ!

Saturday, 10 December 2011

ಒಂದು ನಾಣ್ಯ-ಎರಡು ಮುಖ


ಅವರ ಹೆಸರು NS ಸೀತಾ ಎಂದು,ಎಲ್ಲರೂ NSS ಎಂದು ಕರೆಯುತ್ತಿದ್ದರು. ನಮ್ಮ ಕಾಲೇಜಿನಲ್ಲಿ ಫಿಸಿಕ್ಸ್ ಶಿಕ್ಷಕಿ. ಕಡಿಮೆಯೆಂದರೂ ೩೦ ವರ್ಷಗಳ ಅನುಭವವಿದ್ದವರು. ವಿಷಯದಲ್ಲಿಯೇ ತಲ್ಲೀನವಾಗಿ ಬಿಡುತ್ತಿದ್ದ ಅವರ ಶೈಲಿ ಎಲ್ಲರಿಗೂ ಅಚ್ಚುಮೆಚ್ಚು. ಕೆಲವೊಮ್ಮೆ ಹೆಚ್ಚಾಗಿಯೇ ತಮ್ಮನ್ನು ತಾವೇ ತೊಡಗಿಸಿಕೊಂಡುಬಿಡುತ್ತಿದ್ದ ಅವರ ಕೆಲವು ಹಾವಭಾವಗಳನ್ನು, ಕೈ ತಿರುಗಿಸುವ ವಿಧಾನವನ್ನು ನಾವು ಅದೇಷ್ಟೋ ಸಲ ಆಡಿಕೊಂಡಿದ್ದೇವೆ, ಕೆಲವೊಮ್ಮೆ ಈ ಮಂಗಾಟಗಳನ್ನು ನೋಡಿದ್ದರಾದರೂ ನಕ್ಕು ಸುಮ್ಮನಾಗಿ ಬಿಡುತ್ತಿದ್ದಷ್ಟು ಪ್ರಬುದ್ಧರಾಗಿದ್ದರು, ಕೊನೆ ಪಕ್ಷ ನಮಗೆ ಹಾಗೆ ಕಾಣುತ್ತಿದ್ದರು.
ಇವೆಲ್ಲದರ ಮಧ್ಯೆ ಅವರಿಗೆ ಅವರದ್ದೇ ಒಂದು ವಿಶಿಷ್ಟ ಲಕ್ಷಣವಿತ್ತು, ಅವರ ವರ್ಷಕ್ಕೆ ಹೋಲಿಕೆಯಾಗದ ತಲೆಗೂದಲು. ಎಲ್ಲೂ ಒಂದೂ ಕೂದಲಿನಲ್ಲೂ ವರ್ಷದ ಛಾಯೆ ತಾಗದಂತೆ ಎಲ್ಲಕೂದಲೂ ಅಚ್ಚಕಪ್ಪು, ಅದೂ ದಿನವೂ ಒಂದು ಕೂದಲೂ ಅದರ ಜಾಗ ಬಿಟ್ಟು ಸ್ವಲ್ಪವೂ ಕೊಂಕಾಗುತ್ತಿರಲಿಲ್ಲ, ’ಕೂದಲು ಕೊಂಕದ ಹಾಗೆ’ ಅಂತಾರಲ್ಲ ಹಾಗೆ. ಹೆದರಬೇಡಿ, ಅವರೇನೂ ಪುಟ್ಟಪರ್ತಿ ಸಾಯಿಬಾಬಾರ ಮತ್ತೊಂದು ಅವತಾರವಲ್ಲ, ಇವರು ವಿಗ್ ಹಾಕುತ್ತಿದ್ದರು ಎಂಬ ವಿಷಯ ಅವರಷ್ಟೇ ಚೆನ್ನಾಗಿ ಅವರ ಶಿಷ್ಯಗಣಕ್ಕೂ ಗೊತ್ತಿತ್ತು. ಅವರ ವಿಗ್ ಬಗ್ಗಂತೂ ಸಾವಿರಾರು ಕತೆಗಳು ಹುಟ್ಟಿ ದಂತಕತೆಗಳಾಗುವ ಮಟ್ಟಿಗೆ ಬೆಳೆದಿದ್ದವು. ಇಂಜಿನಿಯರಿಂಗ್ ಕಾಲೇಜುಗಳೆಂದರೆ ಗೊತ್ತಲ್ಲ, ಹೀಗೆ, ಯಾರೋ ಒಬ್ಬ ಹೇಳಿದ್ದ ಜೋಕ್ ಒಂದು ಕತೆಯಾಗಲು ಹೆಚ್ಚು ದಿನ ಬೇಡ ಇಲ್ಲಿ, ಯಾರ ಬಗ್ಗೆ ಬೇಕಿದ್ದರೂ ಇರಬಹುದು. ನಾನೇನೂ ಇದಕ್ಕೆ ಹೊರತಲ್ಲ, ಅವರನ್ನು ಬಹಳೇ ಗೌರವಿಸುತ್ತಿದ್ದೆನಾದರೂ ಅವರ ಬಗ್ಗೆ ಆಡಿಕೊಳ್ಳುವುದರಲ್ಲಿ ನಾನೂ ಹಿಂದೆಬಿದ್ದಿರಲಿಲ್ಲ. ಆದರೆ ಒಂದುದಿನದ ಒಂದು ಲೋಕಾಭಿರಾಮದ ಮಾತುಕತೆಯಲ್ಲಿ ಎಲ್ಲವೂ ಬದಲಾಗಿದ್ದವು.
ಅದೊಂದು ದಿನ ನಾವು  ಪ್ರೊಜೆಕ್ಟ್ ಮೇಟ್ಸ್ ಎಲ್ಲ OAT(Open Air Theatre)ಯಲ್ಲಿ ಕೂತು ಊಟ ಮಾಡುತ್ತಿದ್ದೆವು. ಮಾತು ಹೀಗೇ ಆಚೀಚೆ ದಿಕ್ಕುದೆಸೆಯಿಲ್ಲದ ಅತ್ತಿತ್ತ, ಎತ್ತಲೋ ಹರಿಯುತ್ತಿತ್ತು. ಕೊನೆಗೆ ಮೊದಲ ವರ್ಷದ ಇಂಜಿನಿಯರಿಂಗ್ ನ ನೆನಪುಗಳ ಬಗ್ಗೆ, ಕೆಲವು ಟೀಚರ್ ಗಳ ಮೂರ್ಖತನದ ಬಗ್ಗೆ, ನಮ್ಮದೇ ಕ್ಷುಲ್ಲಕ ಕ್ಷಣಗಳ ಬಗ್ಗೆ ಹೀಗೇ ಗುರಿಯಿಲ್ಲದೇ ಮಾತು ಹರಟೆಯಾಗುತ್ತಿತ್ತು. ಟೀಚರ್ ಗಳ ಬಗ್ಗೆ ಆಡಿಕೊಳ್ಳುವ ಕಾರ್ಯಕ್ರಮ ಅವ್ಯಾಹತವಾಗಿ ನಡೆದಿತ್ತು. ಮಧ್ಯೆ ನಾನೇತಕ್ಕೋ ಇವರ ವಿಚಾರ ತಂದೆ,
"ನನಗಿನ್ನೂ ನೆನಪಿದೆ, ಮೊದಲ  ವರ್ಷದಲ್ಲಿ NSS ಬರುತ್ತಿದ್ದರಲ್ಲ. ಅವರು ಹಾಗೂ ಅವರ ವಿಗ್ ಬಹಳೇ ಮಜವಾಗಿರುತ್ತಿತ್ತು. ಈಗ ಬೇರೆ ವಿಗ್ ಹಾಕಿಕೊಂಡು ಬರುತ್ತಿದ್ದಾರೆ ಎನಿಸುತ್ತದೆ. ಯಾಕಾದರೂ ಇವರೆಲ್ಲ... " 
ಇನ್ನೂ ನಾನು ವಾಕ್ಯವನ್ನು ಮುಗಿಸಿರಲಿಲ್ಲ, ಅಲ್ಲೇ ಇದ್ದ ಇಂದುಜಾಳಿಗೆ ತಡೆಯಲಾಗಲಿಲ್ಲ ಎನಿಸುತ್ತದೆ,
"Dude, ಅವರ ಬಗ್ಗೆ ಏನೂ ಗೊತ್ತಿಲ್ಲದೆ ಸುಮ್ಮನೇ ಯಾಕೆ ಆಡಿಕೊಳ್ಳುತ್ತೀಯಾ. ಅವರಿಗೆ ಕ್ಯಾನ್ಸರ್ ಇದೆ ಎಂದು ನಿನಗೆ ಗೊತ್ತಾ, ಅದಕ್ಕೆ ಕೊಡುವ ಟ್ರೀಟ್ ಮೆಂಟಿನಿಂದ ಅವರ ಕೂದಲೆಲ್ಲ ಬಿದ್ದುಹೋಗುವುದರಿಂದ ಅವರು ವಿಗ್ ಹಾಕಿಕೊಳ್ಳುತ್ತಾರೆ ಎಂದು ಗೊತ್ತೇ, ಆಡಿಕೊಳ್ಳುವುದು ತಪ್ಪಲ್ಲದಿದ್ದರೂ ಎಲ್ಲರ ಬಗ್ಗೆಯೂ ಆಡಿಕೊಳ್ಳುವುದು, ಅದೂ ಇಂತಹ ಕೇಸ್ ಗಳಲ್ಲಿ ತಪ್ಪಾಗಬಹುದೇನೋ!" 
ಎಂದು almost ಕಿರುಚಿದಳು. ಒಂದು ರೀತಿಯಲ್ಲಿ ಅವಮಾನಕ್ಕೆ ಮೀರಿದ ನಾಚಿಕೆಯಾಗಿತ್ತು ನನಗೆ. ಏನು ಪ್ರತಿಕ್ರೀಯೆ ಕೊಡಬೇಕು ಎಂದು ತಿಳಿಯದ ಹಾಗೆ ಮೂಕನಾಗಿ ಕುಳಿತಿದ್ದೆ ಅಲ್ಲಿಯೇ . ನಾವು ತಿಳಿಯದೆ ಎಷ್ಟು ತಪ್ಪು ಮಾಡುತ್ತೀವಲ್ಲಾ ಎನ್ನಿಸಿತು. ತಪ್ಪೋ ಸರಿಯೋ, ಗೊತ್ತಿದ್ದೋ ಗೊತ್ತಿಲ್ಲದೆಯೋ, ನನ್ನಲ್ಲಿ ಒಂತರಾ ಅಪರಾಧಿಪ್ರಜ್ಞೆ ತುಂಬಿ ಮಂಕಾಗಿದ್ದು ನಿಜ. ನೀವಿದ್ದರೂ ಹಾಗೇ ಅಗುತ್ತಿತ್ತು ಅಲ್ಲವೇ?

Saturday, 3 December 2011

ಅಕ್ಕಾ...


ಎರಡನೆಯ ಅಮ್ಮನೆನ್ನಲೇ ನಿನಗೆ ,
ಎಲ್ಲ ಕಡೆ ತಿದ್ದಿ ತೀಡಿದ ಗುರುವೆನ್ನಲೇ
ಅಥವಾ ಮೊದಲ ಗೆಳತಿಯೆಂದರೆ ಸಾಕೆ;
ಏನೆಂದರೇನಂತೆ ನನ್ನಾತ್ಮ ಬಂಧುವೇ
ಹೇಗಾದರೇನಂತೆ ಎಲ್ಲ ತಿಳಿದಿರುವವಳೇ!

ಜೊತೆಗೆ ಆಡಿದ್ದು ಕಮ್ಮಿ, ಕಾಡಿದ್ದೇ ಹೆಚ್ಚು
ಬಾಯಿಗೆ ನಿಜದ ಕೋಲು ಹಾಕುವ ಹುಚ್ಚು
ಜೊತೆಗೆ ಕಳೆದ ದಿನಗಳೆಲ್ಲ ಮರಳುವಂತೆ
ಕಳೆಯಬೇಕು ಮರಳದ ದಿನಗಳನ್ನು
ಕಾಲ ಸ್ತಬ್ಧವಾಗಬಾರದಿತ್ತೇ ಬಾಲ್ಯದಲಿ

ಬಲು ಟೊಳ್ಳಾಗಿ ಬಣ್ಣ ಹಚ್ಚಿ ಬದುಕುವ
ಜನರಿಗಿಂತ ನೀನದೆಷ್ಟು  ಭಿನ್ನ
ಮನಸ ಬಿಡಿಸಿ ಓದಬಲ್ಲ ಓದುಗಳೇ
ಸುಮ್ಮನೇ ಶಬ್ದದ ಆಡಂಬರವೇಕೆ
ಮನಸಿನಾಳದ ಮಾತ ಹೇಳಲು ನಿನಗೆ.

ಆಟದಲಿ ಗಾಯವಾಗಿ ರಕ್ತ ಬಂದರೆ
ಒರೆಸಿದ್ದು ನೀನು; ಹಾಕಿದ ಬಟ್ಟೆಯಲಿ
ಬದುಕಲಿ ಸೋತು ಬಂದರೆ
ಸಂತೈಸಿದ್ದು ನೀನೇ; ನಿತ್ತ ನಿಲುವಿನಲಿ
ನಿಷ್ಕಾಮ ಪ್ರೀತಿಯಲಿ ನಂಬಿಕೆ ಹುಟ್ಟಿಸಿದವಳೇ,
ಹೇಳದೇ ಎಲ್ಲ ತಿಳಿದ ನೀ ಬರೀ ಸೋದರಿಯೇ.

Friday, 25 November 2011

ಗೆಳೆಯಾ...


ಅಂತೂ ಮುದದ ಪ್ರೀತಿಯ ಏಕತಾನತೆಗೆ ಒಂದು ವಿರಾಮ ಸಿಕ್ಕಿದೆ, ಅಲ್ಪವಿರಾಮವೇ ಇರಬಹುದು. ಅಲ್ಲ ಇದು ಅಲ್ಪವಿರಾಮವೇ. ಏನೇ ಇರಲಿ, ಈ ಕವನ ಇರುವುದು, ಕಳೆದು ಹೋಗುವ ಗೆಳೆಯನ ಬಗ್ಗೆ, ಮಸುಕಾಗಬಹುದಾದ ಗೆಳೆತನದ ಬಗ್ಗೆ. ಯಾರೂ ವೈಯಕ್ತಿಕ ಎಂದುಕೊಳ್ಳಬಾರದು.

ತಿರುಗಿ ಸುರುಮಾಡೆ ನಾನೆಂಬ ಹಠವದೇಕೆ, ಅದೇನು ಹಗೆ
ಪದಗಳಿಗೆ ತಡಕಾಡದೇ ಕೊರಗುವ ಶಬ್ದಮರೆತ ಕವಿಯ ಹಾಗೆ||ಪ||

ಮಾಯದ ಗಾಯಕೆ ಮುಲಾಮು ಹಚ್ಚಿ ಕೆದಕುವ ಮನಸಾಗಿದೆ
ರಾಜಿ ಮಾತಾಡದೇ ಭೇದಕೆ ರಾಜೀನಾಮೆ ಕೊಟ್ಟ ಕನಸಾಗಿದೆ
ಇಷ್ಟು ಹತ್ತಿರ ಬಂದು ದೂರವೇ ಉಳಿದಿದ್ದಕ್ಕೆ ಮುನಿಸಾಗಿದೆ
ನಸುನಗುವಿಗೆ ದಾರಿಯಾಗಲೆಂದು ಜಗಳವೊಂದ ಕರೆಸಾಗಿದೆ||೧||

ಖಾಲಿ ಸಂದೇಶಗಳಲ್ಲಿ ಮಾತು ತುಂಬಿದ್ದವು ಅಲ್ಲವೇ ಗೆಳೆಯ
ಬಿಗುಮಾನದ ಮೌನದಲಿ ಮರೆತು ಹೋಯಿತೆ ಪರಿಚಯ
ಮುನಿದ ಮನಕೆ ಮಾತಾಡಲು, ಆಡದಿರಲು ಬೇಕೆ ಪ್ರಮೇಯ
ಹೇಗೆ ಹುಟ್ಟಿಸಿ ಹೇಳಲಿ ಮಿತ್ರಾ, ಇನ್ನೂ ಹುಟ್ಟೇ ಇಲ್ಲದ ವಿಷಯ||೨||

ಜಗಳವಾದರೆ ಆಗಲಿ ಮೌನ ಹಿತವೆ, ಕಳೆವುದೇ ಅಲವರಿಕೆ
ಮಾತಿಗೆಲ್ಲ ಅಕಾಲಿಕ ಮರಣವಾಗಿ ಶೂನ್ಯ ಕಾಡಿತ್ತು ಯಾಕೆ
ಹಮ್ಮಿನಾವೇಶದ ನಡುವೆ ಕೇಳದೇ, ಈ ಸ್ನೇಹದ ಕನವರಿಕೆ
ಜ್ಞಾನದನ್ವೇಷಣೆಯ ಮಧ್ಯೆ ಆಗಲಿಲ್ಲವೇ ಸಮಯ ಭಾವಗ್ರಾಹಕೆ||೩||

Wednesday, 16 November 2011

ಹಾಗೇ ಸುಮ್ಮನೇ


ನನ್ನೊಲವ ಮನದಲ್ಲೇ ಗಟ್ಟಿಗೊಳಿಸಿ-
ಕುಳಿತೆ ಯಾರಿಗೂ ತಿಳಿಯದಂತೆ;
ಅವಳಿಗೂ ತಿಳಿಯಲಿಲ್ಲ.
ಪ್ರಯೋಜನವಿಲ್ಲವೆಂದು ಅವಳೆದುರು
ಹರಿಯಬಿಟ್ಟೆ ಒಂದು ಸಲ;
ಅವಳಿಗಿಷ್ಟವಾಗಲಿಲ್ಲ.
ಮನನೊಂದು ಕೊರಗಿ,
ಕವನವಾಗಿಸಿದೆ ನೋವ;
ಇಷ್ಟಪಟ್ಟಿರಿ ನೀವು.
ನಾನೇನಂದುಕೊಳ್ಳಲಿ ಈಗ,
ದುಃಖದ ಅರ್ಥ ಕಳೆದುಹೋಗಿದೆ ಎಂದೋ
ಅವಳು ತಿರಸ್ಕರಿದಂದೇ;
ಸಂತೋಷ ಎನಿಸದಾಗಿದೆ
ಜೀವದ ಜೀವವಿರದೆ;
ಇದನ್ನೇ ಎನ್ನುವುದೇ ನಿರ್ಭಾವ ಎಂದು.

Saturday, 12 November 2011

ಹಿಂದೆ ಮುಂದೆ ನೋಡದೇ ಬಂದು ಬಿಡು ಕನಸೆ

ಇದು ೨೫ನೇ ಪೋಸ್ಟ್. ಎಷ್ಟು ಬೇಗ ಇಷ್ಟು ಬರೆದೆ ಎನ್ನಿಸುತ್ತದೆ. ಈ ಬ್ಲಾಗ್ ಎಂಬ ಮಾಧ್ಯಮ ಇಲ್ಲದೆ ಹೋಗಿದ್ದರೆ ಇಷ್ಟು ಬರೆಯುತ್ತಿರಲಿಲ್ಲ ಎಂಬುದು ದಿಟ.   ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.

ಅದಿರಲಿ , ಬೇರೇನಾದರೂ ಬರೆಯಬೇಕೆಂದುಕೊಂಡು ಮನಸ್ಸಲ್ಲಿ ತುಂಬಿಕೊಂಡರೂ ಮನಸ್ಸಿನಲ್ಲಿ ಮತ್ತದೇ ಭಾವಲಹರಿ ಮೂಡಿ ಕೂಡುತ್ತಿದೆ. ನನಗೇ ಏಕತಾನತೆ ಎನಿಸುವ ಮಟ್ಟಿಗೆ ಒಂದೇ ವಿಷಯದ ಬಗ್ಗೆ ಬರೆಯುತ್ತಿದ್ದೇನೆ. ಗೊತ್ತಿಲ್ಲ ಎಲ್ಲಿಯವರೆಗೆ ಎಂದು. ಅಷ್ಟಕ್ಕೂ ಎಲ್ಲವೂ ಗೊತ್ತಿದ್ದರೆ ಜೀವನಕ್ಕೆ ಅರ್ಥವೇನು? ಇರಲಿ ಬಿಡಿ. ನನ್ನ ಕವನ, ಅದಾವುದನ್ನೂ ಯೋಚಿಸದೆ ಹಾಗೆ ಸುಮ್ಮನೆ ಓದಿಕೊಳ್ಳಿ.

ಹಿಂದೆ ಮುಂದೆ ನೋಡದೇ ಬಂದು ಬಿಡು ಕನಸೆ
ಎರಡು ಕೈ ಚಾಚಿ ಸ್ವಾಗತಿಸಲು ನನ್ನ ಮನಸಿದೆ
ಆಕರ್ಷಣೆಯ ಮೂಲವೇ ತಪ್ಪಿಹೋದರೇನಂತೆ
ಅದನು ಮೀರಿ ಸೆಳೆದು ಬಿಡುವುದು ನಿನಗೆ ಹೊಸದೆ||ಪ||

ಮೊದಲ ಬಾರಿ ಹುಟ್ಟಿ ಅರಳಿದ  ಭಾವನೆಯೇ
ಹೆಸರಿನ ಗೊಡವೆಯೇಕೆ ನಿನಗೆ ಅದು ಬೇಕೆ?
ಪದೆ ಪದೆ ಮನದಾಳ ಕಲಕುವ ಬಯಕೆಯೇ
ನನಗೇ ತಿಳಿಯದೇ ಹೋಗಿದೆ ಏನಿದು ಹಂಚಿಕೆ||೧||

 ಯಾವ ರಾಗವೋ ಯಾವ ತಾಳವೋ ತಿಳಿಯದು
ನನಗೆ ತಿಳಿದಿದ್ದು ಒಂದೆ ಅದು ನಿನ್ನ ಅನುರಾಗ
ಚಿಮ್ಮಿ ಬಂದವು ಭಾವದ ಒರತೆ  ಕಟ್ಟು ಮೀರಿ
ಭಾವಗಳಭಾವದ ಬರಡುತನವ ನೀಗಿದಾಗ||೨||

ಬರೀ ಮಾತೊಂದಕೆ ಸುತ್ತೆಲ್ಲ ಹೊರಜಗತ್ತು
ಮಸುಕು ಮಬ್ಬಾಗಿದೆ ನನಗೆ ಗೊತ್ತೇ ಇಲ್ಲದೇ
ಕಾದು ಸಾಕಾಗಿದೆ ನಿನ್ನನೇ ಹುಡುಕಿದೆ
ವಲಸೆ ಹೋಗಿದೆ ನನ್ನೆದೆ ತಿರುಗಿ ಬಾರದೆ||೩||

ಹೃದಯ ಬಡಿಯದೆ ನಿಂತಿದೆ ನೀ ಬರಬಹುದೆ ಎಂದು
ನಗೆಯೊಂದನೆಸೆಯಬಾರದೆ ಸಾಕಾಗಿದೆ ನೊಂದು
ಪ್ರೀತಿಯಲಿ ನಾನು ಉನ್ಮತ್ತ ನನಗಾವ ಪ್ರಮೇಯ
ನಶೆ ತಲೆಗೇರಿದೆ ಇಳಿವ ದಾರಿ ತಿಳಿಯದೆ ಅಯೋಮಯ||೪||

Saturday, 5 November 2011

ಒಂದಿಷ್ಟು ಹನಿಗವನಗಳು
ಒಲವು ಭಾಷ್ಪೀಕರಿಸಿ ಮಾತಾಗಿ
ಮಾತು ಘನಿಸಿ ಮೌನವಾಗಿ
ಮೌನ ಕರಗಿ ಅಶ್ರುವಾಗಿ
ಕೆನ್ನೆಯನಪ್ಪಳಿಸುವುದೆ
ಪ್ರೇಮ ವರ್ಷಚಕ್ರವೇ


ಇದೆ ಕೊನೆಯ ಬಾರಿ ಎಂದು
ಮರೆತು ಬಿಡುವೆ ಇನ್ನು ಎಂದು
ಕಟ್ಟು ಹಾಕಿ ಕುಳಿತರೂ
ಬತ್ತಿ ಹೋಗದ ನೆನಪೇ
ನಿನಗೇನ ಮಾಡಲಿ ನಾನು?

ನಿನಗರ್ಥವಾಗದ ಹಾಗೆ
ನಾ ನಿನ್ನ ಪ್ರೀತಿಸಿದೆನೆಂದರೆ
ಅದು ನನ್ನ ತಪ್ಪೇ ನೀನೇ ಹೇಳು
ನನಗೆ  ಹೇಳಲರಿಯದು ಎಂದು
ನನ್ನ ಮನದಾಳದ ಒಡತಿಯೇ
ನಿನಗೆ ನಿಜವಾಗಿಯೂ ತಿಳಿಯದೇ

ಪ್ರಿಯಸಖಿ ಎಂದರೂ
ಈಡಿಯಟ್ ನೀನೆಂದರೂ
ಜೀವದುಸಿರು ಎಂದರೂ
ಭಾವಸ್ರಾವದ ಸೆಲೆಯೆಂದರೂ
ಮನಬಿಟ್ಟು ಹೋಗೆಂದರೂ
ಕೈ ಚಾಚಿ ಬಾ ಎಂದರೂ
ಯಾವಾಗ ನಾ ಏನೇ ಎಂದರೂ
ಎಲ್ಲೆಡೆ ಹಾಸುಹೊಕ್ಕಾಗಿರುವುದು
ಅಲ್ಲೆಲ್ಲ ಕಾಣುವುದು ಬರೀ ನೀ ಮಾತ್ರವೇ

Saturday, 29 October 2011

ಭಾವಲೋಕ- ಕನ್ನಡ ರಾಜ್ಯೋತ್ಸವ ವಿಶೇಷ


ಹೌದು ಕನ್ನಡ ರಾಜ್ಯೋತ್ಸ ಮತ್ತೆ ಬಂದು ಬಿಟ್ಟಿದೆ, ಹಿಂದಿನ ವರ್ಷ ಕಟ್ಟಿದ ಹಳದಿ ಕೆಂಪು ಬಣ್ಣದ ಪ್ಲಾಸ್ಟಿಕ್ ಪತಾಕೆಗಳು ಬಣ್ಣ ಕಳೆದುಕೊಳ್ಳುವ ಮೊದಲೇ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯ ತಯಾರಾಗುತ್ತಿದೆ. ಹೀಗೇ ಕನ್ನಡದ ಬಗ್ಗೆ ಬರೆಯಲು, ಅದರ ಹಿರಿಮೆಯನ್ನು ಹೊಗಳಲು ನನ್ನ ಬ್ಲಾಗು ಅತಿ ಚಿಕ್ಕ ಜಾಗವಾದೀತು.ಇರಲಿ ಬಿಡಿ, ಅಂತೆಯೇ ನಾನು ಕನ್ನಡ ರಾಜ್ಯೋತ್ಸವದ ಪ್ರಯುಕ್ತವಾಗಿ ನನಗಿಷ್ಟವಾದ ಒಂದಿಷ್ಟು ಭಾವಗೀತೆಗಳ ಹಾಗೂ ಅದರ ರಚನಾಕಾರರ ಬಗ್ಗೆ ನಾಲ್ಕು ಮಾತು ಬರೆಯೋಣ ಎಂದುಕೊಂಡಿದ್ದೇನೆ.
ಭಾವಗೀತೆ ಎಂದ ಕೂಡಲೇ ನೆನಪಾಗುವುದು ಮೈಸೂರು ಮಲ್ಲಿಗೆಯ ಕೆ. ಎಸ್. ನರಸಿಂಹಸ್ವಾಮಿ, ಒಂದು ರೀತಿಯಲ್ಲಿ ಭಾವಗೀತೆಗಳಿಗೆ ಅನ್ವರ್ಥನಾಮದ ಹಾಗೆ. ಅದ್ವಿತೀಯ ಪ್ರೇಮಕವಿ, ಕಸ್ತೂರಿ ಕನ್ನಡದಲ್ಲಿ ಕಾಮನಬಿಲ್ಲನ್ನು ಚಿತ್ರಿಸಿದರು. ಯಾವ ಹಂಗಿಲ್ಲದೇ ಹೀಗೇ ಶಬ್ದಗಳನ್ನು ಪೊಣಿಸುವ ಗೋಜಿಗೇ ಹೋಗದೇ ಭಾವವನ್ನು ಹಾಗೆಯೇ ಹರಿಬಿಟ್ಟರು, ಒಂದಿಡೀ ಪೀಳಿಗೆಗೆ ಸಾಲುವಷ್ಟು ಪ್ರೀತಿಯನ್ನು ಹಂಚಿದರು. ಭಾವವನ್ನು ಹರಿಯಬಿಡಲು ಕವನ ಮಾಧ್ಯಮವೇ ಸಶಕ್ತವೆಂದು ತಿರುತಿರುಗಿ ತೋರಿಸಿದರು. ಮೈಸೂರು ಮಲ್ಲಿಗೆಯ ಕಂಪನ್ನು ನಾಡಿಡೀ ಸಾರಿದರು. ಸರಸ, ವಿರಸ, ಮುನಿಸು, ಬೇಸರ ಎಲ್ಲ ತಾನೊಂದಾಗಿ ಭಾವಗೀತೆ ಎಂಬ ಪ್ರಕಾರಕ್ಕೆ ಜೀವ ಕೊಟ್ಟರು. "ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ ..." ಎಂದು ಪತ್ನಿಯಾಗಿ ಅಂಗಲಾಚಿದರು."ಒಂದಿರುಳು ಕನಸಿನಲಿ ..." ಎಂದು ಇಬ್ಬರೊಳಗೊಬ್ಬರಾಗಿ ಸಂಭಾಷಿಸಿದರು.  "ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು..." ಎಂದು ಪ್ರೇಮಿಯಾಗಿ ತನ್ನವಳನ್ನು ಅಕ್ಷರಶಃ ಹಾಡಿ ಹೊಗಳಿದರು. ಶಾನುಭಾಗರ ಮಗಳಾಗಿ, ರಾಯರಾಗಿ, ಬಳೆಗಾರ ಚೆನ್ನಯ್ಯನಾಗಿ ಬಂದರು ಮನೆಗೆ, ಮನಕ್ಕೆ ಬಂದರು. ಸರಳ ಭಾಷೆಯಲ್ಲಿಯೇ ಅದ್ಭುತ ರಚನೆ ಸಾಧ್ಯ, ಹೌದಲ್ಲ ಎನ್ನಿಸಿಬಿಟ್ಟರು. ಇಷ್ಟೆಲ್ಲ ಆದರೂ ಸಾಲದು ಎಂಬಂತೆ "ದೀಪವೂ ನಿನ್ನದೇ, ಗಾಳಿಯು ನಿನ್ನದೇ... " ಎಂದು ಒಂದು ಗೀತೆಯನ್ನು ಬರೆದರು ನೋಡಿ, ಎಷ್ಟೋ ಜನರು ಹಾಗೆಯೇ ಮರುಳಾಗಿಹೋದರು.ಹಾಗೂ ಕೆಲವು "ಬದುಕು ಮಾಯೆಯ ಆಟ..." ದಂತಹ ಹಾಡುಗಳನ್ನು ಬರೆದರು ಎಂಬಲ್ಲಿಗೆ ಭಾವ ಮತ್ತು ಬದುಕು ಒಂದಾದವು. ಅವರ ಒಂದು ಕವನಸಂಕಲನದ ಹೆಸರಲ್ಲಿ, ಭಾವಗೀತೆಗಳಿಗೇ ಅರ್ಪಿತವಾದ ಒಂದು ಚಲನಚಿತ್ರವೂ ಬಂತು ಎಂದರೆ ಜನಮನದಲ್ಲಿ ಅವರು ಬೀರಿದ್ದ ಪ್ರಭಾವದ ಅರಿವಾದೀತು. (ಇವರ ಹೆಸರಿನ ಪಾರ್ಕ್ BSK ೩ನೇ ಸ್ಟೇಜ್ ನಲ್ಲಿಯೇ ಇದೆ, ಹಾಗೂ ಅಲ್ಲಿ ಪ್ರತೀ ವರ್ಷ ಜನವರಿ ೨೬ಕ್ಕೆ(ಅವರ ಜನ್ಮದಿನ) ಅವರ ಹಾಡುಗಳ ಗಾಯನ ಕಾರ್ಯಕ್ರಮವಿರುತ್ತದೆಯಂತೆ.)
ದ. ರಾ. ಬೇಂದ್ರೆ ಮತ್ತೊಬ್ಬ ಅದ್ವಿತೀಯ ’ವರಕವಿ’. ನರಸಿಂಹಸ್ವಾಮಿಯವರು ಮೈಸೂರು ಮಲ್ಲಿಗೆಯ ಕಂಪನ್ನು ಹಬ್ಬಿಸಿದರೆ ಬೇಂದ್ರೆಯವರು ಉತ್ತರ ಕರ್ನಾಟಕದ ಗಂಡುಮೆಟ್ಟಿದ ಭಾಷೆಯಲ್ಲಿಯೇ ಬರೆದರು. ಅದರಲ್ಲಿಯೇ ಹಾಡಿದರು. ಅದರ ಜೀವಸತ್ವದ ಸೆಲೆಯನ್ನು ಜಗಕ್ಕೆ ಜನಕ್ಕೆ ತೋರಿಸಿಕೊಟ್ಟರು. ಸಾಮಾನ್ಯವಾಗಿ ಎರಡೆರಡು ಅರ್ಥಗಳಿರುತ್ತಿದ್ದ (ದ್ವಂದ್ವಾರ್ಥ ಅಲ್ಲ) ಪದ್ಯಗಳು ಒಂದು ರೀತಿಯಲ್ಲಿ ಸಾಮಾನ್ಯವಾಗಿಯೂ ಮತ್ತೊಂದು ರೀತಿಯಲ್ಲಿ ಅಧ್ಯಾತ್ಮಿಕವಾಗಿಯೂ ಇರುತ್ತಿದ್ದವು. "ನಾಕು ತಂತಿ...", "ಒಂದೆ ಬಾರಿ ಹಿಂದ ನೋಡಿ..." ಮುಂತಾದವು ಉದಾಹರಣೆಗಳು. ಕೆಲವು ಕಾವ್ಯಗಳು ಮೊದಲ ಸಾಲೊಂದನ್ನೇ ಕೇಳಿದರೆ  ದಾರಿತಪ್ಪಿಸುವ ಹಾಗೆ ಇರುತ್ತಿದ್ದವು. ಅತ್ಯುತ್ತಮ ಉದಾಹರಣೆ, "ನೀ ಹೀಂಗ ನೋಡಬ್ಯಾಡ ನನ್ನ...", ಇದೊಂದೇ ಸಾಲನ್ನು ನೋಡಿದರೆ ಪ್ರೇಮಗೀತೆ ಎಂದೆನಿಸುವ ಹಾಡು ತನ್ನಲ್ಲಿ ಅಡಗಿಸಿಕೊಂಡಿರುವ ನೋವು ಅಪಾರ. ಚಿಕ್ಕ ಮಗು ಸತ್ತಾಗ ಅದರ ಮುಂದೆ ಅಳದೇ ಮೊನವಾಗಿ ಕುಳಿತ ಹೆಂಡತಿಯನ್ನು ನೋಡಿ ಮೂಡಿದ ಕವಿತೆ ಎಂದು ಅರ್ಥವಾಗುವುದು ಇಲ್ಲೇ,"ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ,ನಾ ತಡಿಲಾರೆ ಅದು ಯಾಕ ನೋಡತೀ, ಮತ್ತ ಮತ್ತ ನೀ ಇತ್ತ" ಅದೇ ನೋವಿನಲ್ಲಿ ಮುಂದೆ ಹೇಳುತ್ತಾರೆ, "ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡದಂಗ ಗಾಳಿಯ ನೆವಕ, ಅತ್ತರೆ ಅತ್ತು ಬಿಡು ಹೊನಲು ಬರಲಿ, ನಕ್ಯಾಕ ಮರಸತಿ ದುಃಖ," ಇಂದಿಗೂ ಒಂದು ಅತಿಶ್ರೇಷ್ಟ ಭಾವಗೀತೆ ಎಂದು ನಂಬುತ್ತೇನೆ, ಅದೂ ಸಿ. ಅಶ್ವಥ್ ರ ಧ್ವನಿಯಲ್ಲಿ ಕೇಳಿದ ಮೇಲೆ.
ಮತ್ತೊಬ್ಬ ಭಾವಕವಿ ಎಂದರೆ ಗೋಪಾಲಕೃಷ್ಣ ಅಡಿಗರು, ನವ್ಯಪ್ರಕಾರದ ನೇತಾರರು. ನಾನು ನನ್ನ ಬ್ಲಾಗಿನ ಅಡಿಬರಹವನ್ನು ಕದ್ದಿದ್ದು ಇವರಿಂದಲೇ, "ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ನಡೆವುದೇ ಜೀವನ", ಜೀವನನವನ್ನು ಕಂಡು ಬರೆದ ಕವಿ. ದಿಟ್ಟ ಮಾತಿನ, ನೇರನುಡಿಯ ಎಲೆಮರೆಯ ಕವಿ. "ಯಾವ ಮೋಹನ ಮುರಳಿ ಕರೆಯಿತೋ..." ಅಂತೂ ಇಂದಿಗೂ ಅತೀ ಜನಪ್ರೀಯ ಭಾವಗೀತೆಗಳಲ್ಲಿ ಒಂದು. ಕಣ್ಣು ತುಂಬಿ ಬರುವ ತರಹ ಈಗಲೂ ಅನಿಸುತ್ತದೆ. ಅಂತಹ ಕಾವ್ಯವನ್ನು ಕಟ್ಟಿಕೊಟ್ಟ ಅಡಿಗರೇ "ಎದೆಯು ಮರಳಿ ತೊಳಲುತಿದೆ..." ಅಂತಹ ಪದ್ಯವನ್ನೂ ಬರೆಯುತ್ತಾರೆ. ದುಃಖದ ಭಾವಭಿವ್ಯಕ್ತಿಯಲ್ಲಿ ಕವಿಯ ಸತ್ವದ ಪರೀಕ್ಷೆಯಾಗುತ್ತದೆ ಎಂಬುದೇ ನಿಜವಾದರೆ ಅಡಿಗರು ಮೊದಲ ಪಂಕ್ತಿಯ ಭಾವಕವಿಗಳಲ್ಲಿ ಬರುತ್ತಾರೆ, ಅಲ್ಲದಿದ್ದರೂ ಸಹ.
ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟರು ಮತ್ತೊಬ್ಬ ಕಡಿಮೆ ಪರಿಚಿತ ದೊಡ್ಡ ಕವಿ."ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು ..." ಅತಿ ಅರ್ಥಗರ್ಭಿತ ಕವನ. ಅದರಲ್ಲಿ ಭೂಮಿ-ಮುಗಿಲು, ಹಡಗು-ಕಡಲು, ಕನ್ನಡಿ-ಮುಖ ಹೀಗೆ ಅವರು ಕೊಡುವ ಉದಾಹರಣೆಗಳುಂಟಲ್ಲ, ಅವು ಅವರ ಹಿರಿಮೆಯನ್ನು, ಅವರ ಯೋಚನಾವ್ಯಾಪ್ತಿಯನ್ನು ಪರಿಚಯಿಸುತ್ತವೆ. "ಎಲ್ಲಿ ಜಾರಿತೋ ಮನವು, ಎಲ್ಲೆ ಮೀರಿತು ಮನವು ..." . ಎಂತಹ ಸುಂದರ ಪ್ರಾಸ, ಕಲ್ಪನೆಯಲ್ಲವೇ. ಹೆಚ್ಚಿನವರಿಗೆ ಗೊತ್ತೇ ಇಲ್ಲದ, ಗೊತ್ತಾಗುವ ಹಂಬಲ, ಪ್ರಯತ್ನ ಮಾಡದ ಸರಳಕವಿ. ಇಬ್ಬರು ರಾಷ್ಟ್ರಕವಿಗಳಾದ ಕುವೆಂಪು ಮತ್ತು ಜಿ. ಎಸ್. ಶಿವರುದ್ರಪ್ಪನವರನ್ನು ಹೇಗಾದರೂ ಬಿಡಲಾದೀತು. ಕುವೆಂಪುರವರ ಬಹಳಷ್ಟು ಕವನಗಳು ಬಹಳಷ್ಟು ಜನರಿಗೆ ಅರ್ಥವಾಗದೇ ಕಬ್ಬಿಣದ ಕಡಲೆ ಎನಿಸಿದ್ದು ಹೌದಾದರೂ, ವಿಮರ್ಶಕರ ಪಂಡಿತರ ದೃಷ್ಟಿಯಲ್ಲಿ ಮೆಚ್ಚಿಕೆ ಪಡೆದವು. "ತನುವು ನಿನ್ನದೆ, ಮನವು ನಿನ್ನದೇ..." "ಒ ನನ್ನ ಚೇತನ" ಎಲ್ಲವೂ ಒಂದಕ್ಕಿಂತ ಮತ್ತೊಂದು ಪರಿಪೂರ್ಣ ಕಾವ್ಯಗಳೇ. ನೆನಪಿದೆಯೇ, ಪ್ರೌಢಶಾಲೆಯ ಕನ್ನಡಪದ್ಯಭಾಗದಲ್ಲಿದ್ದ "ದೇವರು ಋಜು ಮಾಡಿದನು..." ಎಂಬ ಪದ್ಯ, ಹಾರಿದ ಬಿಳಿ ಕೊಕ್ಕರೆಗಳ ಸಾಲನ್ನು ದೇವರ ಋಜು ಎಂದು ಭಾವಿಸುವ ಕವಿಯ ಕಲ್ಪನೆ ಮುದ ಕೊಡದೇ ಇದ್ದರೆ ಕೇಳಿ.ಇನ್ನು ಜಿ. ಎಸ್. ಶಿವರುದ್ರಪ್ಪನವರಾದರೋ "ಎದೆ ತುಂಬಿ ಹಾಡಿದೆನು..." ಎಂಬ ಅಮರಗೀತೆಯನ್ನೇ ನೀಡಿದರು, ಕೇಳಿದಾಗಲೆಲ್ಲ ಎದೆ ತುಂಬಿ ಬಂದಂತಾಗುತ್ತದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಬಿ. ಎಂ. ಶ್ರೀಕಂಠಯ್ಯನವರ "ಕರುಣಾಳು ಬಾ ಬೆಳಕೆ..."ಗೆ ಯಾವ ಮಂತ್ರಕ್ಕೂ ಇಲ್ಲದ ಶಕ್ತ್ಯಾಹ್ವಾನದ ಶಕ್ತಿಯಿದೆ.
ಇವೆಲ್ಲ ಹಾಡುಗಳಿಗೂ, ಈ ಪ್ರತೀ ಭಾವಪುಂಜಗಳಿಗೂ ಇರುವ ಸಾಮಾನ್ಯತೆಯೇನು? ಎಲ್ಲವೂ ಒಂದು ಹೇಳಲಾಗದ ಸಮಾಧಾನವನ್ನು ಹೇಳುತ್ತವೆ.ಎಲ್ಲವೂ ಒಂದಲ್ಲಾಒಂದು ರೀತಿಯಲ್ಲಿ ಬದುಕಿನ ಬಗ್ಗೆ ಮಾರ್ಗದರ್ಶನ ಮಾಡುತ್ತವೆ. ಏನೋ ಒಂದು ಸುಖವಾದ ಸಂತೋಷವನ್ನು ಕೊಡುತ್ತದೆ.ಇದನ್ನು ಇಷ್ಟಕ್ಕೆ ಮುಗಿಸಿದರೆ ಎಲ್ಲಾ ಹಾಡುಗಳಿಗೆ ಜೀವ ತುಂಬಿದ ಗಾಯಕರಿಗೆ ದ್ರೋಹ ಬಗೆದಂತಾಗುತ್ತದೆ, ನನಗೆ ನಿಜವಾಗಿಯೂ ಭಾವಗೀತೆಗಳ ಹುಚ್ಚನ್ನ್ನು ಹತ್ತಿಸಿದ್ದು, ಇಂತಹ ಒಬ್ಬ ಹಾಡುಗಾರ್ತಿಯೇ. ಎಂ. ಡಿ. ಪಲ್ಲವಿ, ಸಿ. ಅಶ್ವತ್, ಮೈಸೂರು ಅನಂತಸ್ವಾಮಿ ಇವರಿಗೆಲ್ಲ ನಾನು ಅನತಾನಂತ ಕೃತಜ್ಞನಾಗಿರಬೇಕು.

Saturday, 22 October 2011

ಬೇಸರಿಕೆ

ಮತ್ತದೇ ಬೇಸರ, ಅದೇ ಸಂಜೆ! ಶನಿವಾರದ ಸಾಪ್ತಾಹಿಕ ಅಂಕಣ,ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ  ನಾನ್ಯಾಕೋ ಗದ್ಯದಿಂದ  ಪದ್ಯ  ಪ್ರಕಾರದ ಕಡೆಗೇ ವಾಲುತ್ತಿದ್ದೇನೆ ಎನ್ನಿಸುತ್ತಿದೆ.  ಈ ಶಿಫ್ಟ್ ನ ಬಗ್ಗೂ , ಈ ಕವನದ ಬಗ್ಗೂ ಕಮೆಂಟಿಸಿ. :-) 


 ಮುಸ್ಸಂಜೆ ಮಸುಗಪ್ಪಿನಲಿ ಹಬ್ಬಿರುವ ಬೇಸರವೇ,
ಕನಿಕರವು ಮೂಡಿ ಹೊರಟುಹೋಗಲು ಒಲ್ಲೆಯೇಕೆ?
ಉಸಿರ ಮರೆಸುವ ಹಾಗೆ ನಿಡುಸುಯ್ದ ನಿಟ್ಟುಸಿರೆ,
ಮರಳಿ ಬಾರದ ಹಾಗೆ ಮರೆತಿದ್ದು ನಿನ್ನ ಹೆಸರೆ?||ಪ||

ಬಡವಾದ ಬದುಕಿನಲಿ ಕನಸೊಂದು ಹೊರಳಿದಲ್ಲೆ
ಅವಲತ್ತುಕೊಂಡಿರಲು ಸಹಕರಿಸಬಾರದೆ ತಾ ನಲ್ಲೆ.
ಯಾರೂ ಕರೆಯದೆ ಬರುವ ನೆನಪುಗಳ ಆಕ್ರಮಣ
ಮತ್ತಲ್ಲೇ ಚಿಗುರುವ ಬೇಸರಕೆ ಏಕೆ ಬೇಕು ಕಾರಣ||೧||

ಕನಸೆಲ್ಲ ಬರಿದಾಗಿ ಶೂನ್ಯವೇ ಸ್ಥಿರವಾಗಿ  ನಿಲ್ಲಬಹುದೇ
ಕರಗಿ ಹೋಗಿದ್ದು ಮರುಗಿ ಬಂದಾಗ  ತಿರುಗಿ ಸೇರಬಹುದೇ
ಮರೆತು ಹೋದ ಸ್ಪೂರ್ತಿ ತಿರುಗಿ ಬಂದು ಕಾಡಿದಂತಾಗಿ
ತೊಳಲಾಡಿತೆ ಮನವು ಇದ್ದಕ್ಕಿದ್ದಲ್ಲೇ ಬವಳಿ ಬಂದಂತಾಗಿ||೨||

ಮನತುಂಬಿ ಕೇಳಿದೆನು ಮರೆತು ಹೋಗದಿರು ನನ್ನುಸಿರೆ
ಉಸಿರೇ ಇಲ್ಲದ ಮೇಲೆ ಏನಿದೆ ಜೀವನವು ಬರಿ ಹೆಸರೆ
ಬೇಸರಿಕೆ ತಾನೇ ಬೇಸರಿಸಿ, ತನ್ನದೇ ಏಕಾಂತಕೆ ತಲ್ಲಣಿಸಿ
ಹೋಗದೇ ಉಳಿಯಿತೇ, ಮುರಿಯದ ಮೌನಕೆ ಕನಿಕರಿಸಿ||೩||

Saturday, 15 October 2011

ಒಂದು ಭಾವಗೀತೆಒಂದು ಬೇಸರದ ಸಂಜೆ ಮೌನವು ಮಾತನಾಡಲು ವಿಫಲವಾದಾಗ, ಮಾತನಾಡಿದ್ದು ಕಾವ್ಯ.ಓದಿ ನೋಡಿ.  ಕಾಲ್ಪನಿಕ ವಸ್ತುವಿಗೆ ನೈಜದ ಲೇಪನ. ಮದುವೆಯಾಗಿ ಒಂದಿಷ್ಟು ವರ್ಷಗಳು ಕಳೆದ ಮೇಲೆ, ಒಂದು ಸಂಜೆಯ ಹೊತ್ತು, ಮನೆಯ ಅಂಗಳದಲದಲ್ಲಿ ಕೂತು ಮಗುವಿನಾಟ ನೋಡುತ್ತಿದ್ದ ಕವಿ, ಆಗತಾನೆ ಬಂದು ಕುಳಿತ ಮಡದಿಯೊಂದಿಗೆ ಮಾತನಾಡುವ ನಾಲ್ಕು ಮಾತುಗಳನ್ನು ಕಾವ್ಯವಾಗಿಸಲು ನೋಡಿದ್ದೇನೆ.


ನನ್ನವಳ ಎದುರಲ್ಲಿ ಸಂಜೆಸಾಯುವ ಸಮಯಕ್ಕೆ
ಕಾಲುಚಾಚಿ ಕುಳಿತಿದ್ದೆ ಮಗುವಿನಾಟ ನೊಡುತಲಿ
ಯಾಕೊ ಮನಸು ಹೇಳಿಬಿಡು ಎಂತು, ಹೇಳಿಬಿಟ್ಟೆ
’ನೀನೆ ನನ್ನ ಜೀವ’ವೆಂದು ನೋಡಿದಳು ವಿಸ್ಮಯದಿ ||ಪ||

"ಒಂದು ಇಳಿಸಂಜೆಯಲ್ಲಿ ನೇಸರ ಬೇಸರಗೊಂಡಿರಲು
ಮೊದಲ ನೋಟದ ಪ್ರೇಮವ ನಂಬಿದೆ ನಿನ್ನ ನೋಡಿ
ಸುಳಿಮಿಂಚೊಂದು ಹೊಕ್ಕಿತ್ತು ಮೈಮನದೊಳಗೆಲ್ಲಾ
ಸುಳಿವಿನಿತು ಇಲ್ಲದೆ ಬಿದ್ದಿದ್ದೆ ಪ್ರೇಮದಲಿ ಹಾಡುಹಗಲೇ" ||೧||

"ಅತಿಯಾಗಿ ಶೃತಿಯ ಮೀರಿ ಹಾಡತೊಡಗಿತ್ತು ಹೃದಯ
ಇಹ ಮರೆತಿತ್ತು, ಪರವು ತೆರೆದಿತ್ತು ಎಲ್ಲವೂ ನಿನ್ನ ದಯ
ನಿನ್ನ ಸನ್ನಿಧಾನದ ಸವಿಯವಕಾಶಕೆ ಕಾತರಿಸಿದೆ ಸಖಿ"
"ತಿಳಿಯದೇನಾದರೂ ಹೇಳಿರಲ್ಲಾ"ಎಂದು ನಕ್ಕುಬಿಟ್ಟಳಾಕೆ ||೨||

ಪರಿತಪನೆ ಅಂತಿರಲು ಆರಾಧನೆ ಮಿತಿ ಮೀರುತಿರಲು,
"ಪ್ರೀತಿಸುವೆ ಎನ್ನಲು ತಡವರಿಸಿದೆ ನಾ ಮಾತು ಬರದೆ!"
"ತಡವರಿಸಿದಡೇನು, ಒಪ್ಪಲಿಲ್ಲವೆ ನಾನು ಬಾಯಿ ಮುಚ್ಚಿ"
ಉತ್ತರವ ಕೊಟ್ಟಳಾಕೆ ಪ್ರಶ್ನೆ ಮರೆಸುವ ತನ್ನ ಶೈಲಿಯಲ್ಲಿ ||೩||

ಜಗಳವಿತ್ತೆ ನಿನ್ನ ಜೊತೆ, ಸೋತಿದ್ದೆನಲ್ಲಾ ಮೊದಲದಿನವೇ
ಜಿಗಿದಿದ್ದೆ ನಾ ಅನಂತದ ಅಂಬರಕೆ ನೀ ಒಪ್ಪಿದಂದೇ
ಅಂದಿನಿಂದಲೂ ಹಿಂದಿಗಿಂತಲೂ ಇಂದು; ಮುಂದೂ
ಬಯಸಿದ್ದು ನಿನ್ನನ್ನೇ ತಾನೇ ಎಂದಿಗೂ ಎಂದೆಂದಿಗೂ ||೪||

Wednesday, 28 September 2011

ನೆನಪೇಭಾವ ಮಡುಗಟ್ಟಿ, ಇನ್ನು ತಡೆಯಲಾರದಾದಂತಾಗ ಆಗುವುದೇ ಭಾವಪ್ರವಾಹ, ಇಲ್ಲಿ ಇರುವುದು ಕೇವಲ ಭಾವಸ್ರಾವವಷ್ಟೇ. ಕೆಲವೊಮ್ಮೆ ಸಿಗದ ಶಬ್ದಕ್ಕೋಸ್ಕರ ತಡಕಾಡಿ ಸುಳ್ಳಾಡಬಹುದೇನೋ, ಆದರೆ ಒಂದು ಭಾವಕ್ಕೆ ದ್ರೋಹ ಬಗೆಯಲಾಗದು.  ಇದು ಈ ಕವನ ಸರಣಿಯ ಕೊನೆಯ ಕವಿತೆ. ಅಂಕಣ, ಲೇಖನ , ಕಥೆಗಳನ್ನು ಬರೆಯಲು ಬೇಕಾಗದೇ ಹೋಗುವ ಸ್ಪೂರ್ತಿಯ ಅವಶ್ಯಕತೆ ಕವನಕ್ಕೆ ಬೇಕೇ? ಏನೇ ಇರಲಿ, ’ಅನಾಮಿಕಾ’ದಿಂದ ಪ್ರಾರಂಭಿಸಿ ’ನಿನಗೆ’ ಎಂದು ಭಾವಾರ್ಪಿಸಿ, ಒಂದು ’ಸ್ವಗತ’ ದಲ್ಲಿ ಉಮ್ಮಳಿಸಿ , ’ಇವಳೇ’ ಎಂದು ಕನವರಿಸಿ, ’ನೆನಪೇ’ದಲ್ಲಿ ನಿಲ್ಲುತ್ತಿದೆ. ಆದಷ್ಟು ಬೇಗ ಮುಗಿಸಬೇಕೆಂದುಕೊಂಡಿದ್ದರಿಂದ ಈ ಪದ್ಯದ ಕೊನೆಯ ಸಾಲುಗಳು ಅವಸರದ ಸಾಹಿತ್ಯ ಎನಿಸುತ್ತವೆಯೇ? ನನಗೆ ಹಾಗೆನ್ನಿಸಿತು. ಓದು ನಿಮ್ಮದು.

ಮರೆತು ಹೋದೆ ಎಂದರೆ ಮರೆತು ಹೋದೀತೇ
ಸುತ್ತಿ ಬಳಸಿ ಮತ್ತೆ ಅಲ್ಲೇ ಬರುವ ನೆನಪ ಮಾಲಿಕೆಯೇ||

ಒಂದು ಕನಸ ಹೆಸರಲಿ ಕಳೆದುಹೋದ
ರಾತ್ರಿಗಳೆಷ್ಟೋ ಇಷ್ಟಪಟ್ಟು; ಮನಸನೆಟ್ಟು.
ಕಣ್ಣ ಮುಚ್ಚಿ ಕೂತರೂ ಸಹ, ರೆಪ್ಪೆಗಡಿಯ
ಧಿಕ್ಕರಿಸಿ ದಾಟಿ ಬಂದ ಚಿತ್ರಗಳೆಷ್ಟೋ
ಹೃದಯ ಬಿಕರಿಯಾಗಿದ್ದರ ಬಗ್ಗೆ, ನನಗೇ
ಮಾಹಿತಿಯಿಲ್ಲದ್ದಕ್ಕೆ ಪರಿತಪಿಸಿದ್ದೆಷ್ಟೋ||೧||

ಇಲ್ಲಿ ಅಲ್ಲಿ ಎಲ್ಲಾ ನೀನೇ, ಯಾರೂ ಇಲ್ಲ
ಇಲ್ಲವೆಂದರೂ ಅಲ್ಲೂ ನೀನೇ, ನೀನೇ ಎಲ್ಲ
ಇಷ್ಟು ಅಷ್ಟು ಎಷ್ಟು ಎನ್ನಲಿ; ಇಂತಿಷ್ಟೇ ಎನ್ನಲು
ಅಳತೆಯುಂಟೇ, ಮನದಾಳದ ತಿಳಿಯದ ಆಳಕೆ
 ಅನಂತವೊಂದೇ ಮಿತಿಯೇ ನಿನ್ನಯ ಮೋಡಿಗೆ
ಹೋಗದಿದ್ದರೇ ಒಳಿತೇ,ಶಬ್ದಹುಡುಕುವ ಗೋಜಿಗೆ||೨||

ಒಂದು ಮನಸಿಗೆ ಒಂದೇ ಅಲ್ಲವೇ ಕನಸು;
ಎಲ್ಲ ಕನಸಲ್ಲಿಯೂ ಬರುವುದೇ ನಿನ್ನ ಮನಸೇ
ಮಾನಸ ವಿಶಾಲ, ಅನಂತವೆಲ್ಲ ಹೌದಲ್ಲ,
ನೀನೊಬ್ಬಳೇ ಹೇಗೆ ಹಬ್ಬಿ ಕುಳಿತೆಯೇ;
ನಿನ್ನಿಂದ ಅಷ್ಟಿಷ್ಟು ಸರಿ ಇದ್ದ ನನ್ನ ನೆನಪು,
ಸ್ವಾಧೀನ ತಪ್ಪುವ ಹಾಗಾಗಿ ಹೋಯಿತೇ.||೩||

Saturday, 24 September 2011

ಇವಳೇ!ಇವಳೇ ಅವಳೇ ಇಲ್ಲಿ ಅಲ್ಲಿ ಎಲ್ಲೆಲ್ಲೂ ಇಹಪರಕೆಲ್ಲ ಮೀರಿದವಳೇ
ನೀನೆಂದರೆ, ದೇವರು ನನಗಾಗಿ ಮಾಡಿದ ಗುಣಸಮುಚ್ಛಯವೇ
ನಿನ್ನ ನೆನಪೆಂದರೆ ನಾನುತ್ತರವ ಬಯಸದ ಪ್ರಶ್ನೆಗಳ ಗುಚ್ಛವೇ ||ಪ||

ಶಬ್ದ ಸಿಗದೇ ತಡವರಿಸಿ ತೊಳಲುವುದೇ ನಿನಗೆ ಪ್ರಿಯವೇ
ಮನದ ತುಂಬ ರಂಗೇರಿಸಿದ್ದು ನಿನ್ನ ನೋಟದ ಮದರಂಗಿಯೇ
ಬರಿ ನಗೆಯಿಂದಲೇ ಎದೆಭಾರವಾಗಿಸುವುದೇ ನಿನ್ನಾಟವೇ
ಕಣ್ಣ ಮುಚ್ಚಿಯೂ ನಿನ್ನ ನೋಡುವಂತಾಗುವುದು ನಿನ್ನ ಕೃಪೆಯೇ||೧||

ನಿನ್ನ ಅನವರತ ಕನವರಿಸುತಲಿರುವುದೇ ನಿನ್ನ ಮೋಡಿಯೇ
ಏನೂ ಇರದೇ ಖುಷಿಯಾಗುವಂತಾಗುವುದೇ ನಿನ್ನ ನೆನಪೇ
ಎಲ್ಲಾ ಮರೆತು ರಾಮನ ಭಜಿಸಿದ್ದು ನಿನ್ನೊಲುಮೆಗಾಗಿಯೇ
ನನಗೇ ಗಾಬರಿಯಾಗುವಂತಾಡಿದ್ದು ನನ್ನೆದೆಯ ಕಲರವವೇ||೨||

ಎಲ್ಲಾ ಕಡೆ ನಿನ್ನನ್ನೇ ಕಂಡಂತೆ ಭ್ರಮಿಸಿದ್ದು ನನ್ನ ತಪ್ಪೇ
ತಪ್ಪು ಸರಿ ವಿವೇಚನೆ ಬದಿಗೊತ್ತಿ ಕೊರಗಿದ್ದು ನನ್ನ ವಿಧಿಯೇ
ಸೊಗಸಾದ ಸಾಂಗತ್ಯ ಭಾವಿಸಿ ಕುಣಿದಿದ್ದು ಬರಿ ಕನಸೇ
ಏನು ಮಾಡಲೆಂಬ ಅಖಂಡ ಗೊಂದಲಕೆ ನೀ ಕಾರಣವೇ||೩||

Sunday, 11 September 2011

ಗುರು ದೇವೋ ಭವಹೌದು! ಒಂದು ವಾರದ ಹಿಂದೆ ಇದನ್ನು ಪ್ರಕಟಿಸಿದ್ದರೆ ಸಂದರ್ಭಕ್ಕೆ ಸೂಕ್ತವಾಗಿರುತ್ತಿತ್ತು, ಆದರೆ ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗದೇ ಹೀಗೆ ಒಂದು ವಾರದ ಮುಂದೂಡಿಕೆಗೆ ಕ್ಷಮೆ ಕೇಳಿಕೊಂಡು ಈ ಅಂಕಣವನ್ನು ಬರೆಯುತ್ತಿದ್ದೇನೆ.
ಅಕ್ಷರವೊಂದನ್ನು ಕಲಿಸಿದಾತನೂ ಗುರು ಎಂಬ ಕವಿವಾಣಿಯೇ ಹೇಳುವಂತೆ ಗುರು ಎಂಬ ಶಬ್ದದ ವ್ಯಾಪ್ತಿ, ಅದರ ಕೀರ್ತಿ ದೊಡ್ಡದು. ಎಲ್ಲರಿಂದಲೂ ಒಂದಿಲ್ಲೊಂದು ರೀತಿಯಲ್ಲಿ ನಾವು ಏನನ್ನಾದರೂ ಕಲಿಯುವುದರಿಂದ ಎಲ್ಲರೂ ಗುರುಮಾನ್ಯರೇ. ಹಾಗಿರುವಾಗ ಜೀವನದಲ್ಲಿ ಮರೆಯದಂತಹ ಶಿಕ್ಷಕರಾಗಿ, ಬದುಕನ್ನು ಕಲಿಸಿಕೊಟ್ಟ ಒಂದಿಷ್ಟು ಜನ ಶಿಕ್ಷಕರ ಬಗ್ಗೆ ಕೃತಜ್ಞತೆಯ ಎರಡು ಮಾತನಾಡುವುದಷ್ಟು ಸಾಧ್ಯವಾದರೆ ನಾನು ಧನ್ಯ.
ಎಲ್ಲರಿಗೂ ಸಾರ್ವತ್ರಿಕವಾಗಿ ಮೊದಲ ಗುರುವೆಂದರೆ ತಾಯಿಯೇ. ಅಂಬೆಗಾಲಿಕ್ಕುವುದರಿಂದ ಹಿಡಿದು ಅಕ್ಷರಾಭ್ಯಾಸ ಮಾಡುವುದರವರೆಗೆ ಎಲ್ಲವನ್ನೂ ಕೈ ಹಿಡಿದು ತಿದ್ದಿ ತೀಡಿ ಕಲಿಸುವುದು ಅಮ್ಮನೇ. ಆದರೆ ಇಲ್ಲಿ ಮನೆಯಲ್ಲಿ ಮರೆಯಾಗಿಯೇ ಉಳಿಯುವ ಗುರುವಿನ ಪಾತ್ರ ಅಪ್ಪನದ್ದು. ಅಮ್ಮನ ಒಲವಿನಲ್ಲಿಯೇ ಒಂದಾಗಿ, ಅಲ್ಲಿನ ಶಿಕ್ಷಣಕ್ಕೆ ಸಿಟ್ಟಿನ ಅಗತ್ಯವಾದಾಗ ಮಾತ್ರ ಪ್ರತ್ಯಕ್ಷವಾಗುವ ಅಪ್ಪ ಇಲ್ಲಿಯೂ ಮರೆಯಲ್ಲಿಯೇ ಕುಳಿತುಕೊಳ್ಳುವ ಮರೆತು ಹೋಗುವ ಹೀರೋನೇ! ಜೀವಕ್ಕೆ ಜೀವವೇ ಆದ ಗಣಿತದ ಮೂಲವಾದ ಮಗ್ಗಿಗಳಿಂದ ಹಿಡಿದು, ಕಾಗುಣಿತ ಅಭ್ಯಾಸದವರೆಗೂ ಅಪ್ಪನ ಪಾತ್ರ ದೊಡ್ಡದು. ಅಪ್ಪನ ಶಕ್ತಿಸಾಮರ್ಥ್ಯ ಕೇವಲ ಶೈಕ್ಷಣಿಕವಿಚಾರಗಳಿಗೆ ಸೀಮಿತವಾಗದೇ, ಅದರಾಚೆಗಿನ ಬದುಕಿಗೂ ಹಬ್ಬಿದೆ.ಆತ ಬದುಕಿ ತೋರಿಸಿದ ಜೀವನವೇ ಆದರ್ಶಪ್ರಾಯ. ನಾನು ಕಲಿಯಲು ಸಾಧ್ಯವಾಗದೇ ಹೋಗಿರುವ ಎಷ್ಟೋ ವಿಷಯಗಳನ್ನೂ ಹೇಳಿಕೊಟ್ಟ ಅಪ್ಪ, ಕಡೇ ಪಕ್ಷ ನನ್ನ ಮಟ್ಟಿಗಂತೂ ಒಬ್ಬ ಮಹಾನ್ ಶಿಕ್ಷಕನೇ.
ನಾವು ಕಾಲೇಜು ಜೀವನದಲ್ಲಿ ಬರುವ ಶಿಕ್ಷಕರನ್ನು ತೆಗಳಬಹುದು, ಅವರ ಭಂಗಿಗಳನ್ನು ಆಡಿಕೊಂಡು ನಗಾಡಬಹುದು, ಆದರೆ ಪ್ರೈಮರಿ ಸ್ಕೂಲಿನಲ್ಲಿ ಪಾಠ ಮಾಡಿದ ಗುರುಗಳನ್ನು ಹೀಗೆ ಆಡಿಕೊಳ್ಳುವವರನ್ನು ನಾನಂತೂ ನೋಡಿಲ್ಲ. ಅದು ಆ ಶಿಕ್ಷಕರು ಉ(ಬೆ)ಳೆಸಿಕೊಂಡು ಬಂದಿರುವ ಗೌರವ. ಅದು ಒಬ್ಬ ಗುರುವಿನ ನಿಸ್ವಾರ್ಥ ದುಡಿಮೆಗೆ ಕೊಡಲ್ಪಡುವ ಒಂದು ಚಿಕ್ಕ ಮರ್ಯಾದೆ. ಸುಖಾ ಸುಮ್ಮನೇ ಮಗ್ಗಿ ಬರೆಯಲು ಹೇಳಿ, ಪೇಪರ್ ಅಡ್ಡ ಹಿಡಿದುಕೊಂಡು ಕ್ಲಾಸಿನಲ್ಲಿಯೇ ನಿದ್ದೆ ಮಾಡುತ್ತಿದ್ದ XYZ ಸರ್ ಬಗ್ಗಾಗಲೀ, ತಮ್ಮ ಮಗನಿಗೆ ಹೆಚ್ಚು ಮಾರ್ಕ್ಸ್ ಬರುವಂತೆ ಪರೀಕ್ಷಾ ಪತ್ರಿಕೆಯನ್ನು ಸೆಟ್ ಮಾಡುತ್ತಿದ್ದ ABC ಮೇಡಮ್ ಬಗ್ಗೆ ಆಗಲೀ ಆಗ ಕೋಪ ಸ್ವಲ್ಪ ಬರುತ್ತಿತ್ತೇನೋ ಈಗಂತೂ ಮೂಡುವುದು ಕೇವಲ ಅನಾಲೋಚಿತ ಗೌರವವಷ್ಟೇ. ಹಾಗೆ ನೋಡಿದರೆ ಅವರು ಹಾಗೆ ಮಾಡಿದ್ದರಿಂದಲೇ ನನ್ನ ಜೀವನದಲ್ಲಿ ಎಷ್ಟೋ ಬದಲಾವಣೆಯಾಗಿದೆ ಎಂದು ಎನಿಸುತ್ತದೆ, ಇಂದಿಗೂ ನನ್ನ ಕೈಬರಹ ಓದುವ ಮಟ್ಟಿಗೆ ಎಂದರೆ ಅದು XYZರಿಂದಲೇ, ಹಾಗೆ ABC ಮಾಡದೇ ಹೋಗಿದ್ದರೆ ನನಗೆ ಗಣಿತದ ಬಗ್ಗೆ ಹಾಗೆ ಕೆಚ್ಚು ಬಂದು ಅದು ಒಂದು ಪ್ರೀತಿಯಾಗಿ ಬದಲಾಗುತ್ತಿರಲೇ ಇಲ್ಲವೇನೋ? ಯಾರಿಗೆ ಗೊತ್ತು. ಅಪ್ಪ ಅಮ್ಮನೇ ಶಾಲೆಯಲ್ಲೂ ಶಿಕ್ಷಕರಾಗಿ ನೋಡುವ ಭಾಗ್ಯ ನನ್ನ ಪಾಲಿಗಿದ್ದುದರಿಂದ ಮತ್ತೊಂದು ಸಲ ಅವರನ್ನು ನೆನಪಿಸಿಕೊಂಡು ಪ್ರೌಢ ಶಾಲೆಯ ಕಡೆ ಹೊರಳುತ್ತೇನೆ.
ವಿಶ್ವದಲ್ಲಿ ಇರುವ ಎಲ್ಲಾ ಉತ್ತಮ ಶಿಕ್ಷಕರನ್ನೂ ಸೇರಿಸಿ ಒಂದು ಗ್ರುಪ್ ಮಾಡಿ ಒಂದು ಶಾಲೆಗೆ ಕಳುಹಿಸಿದರೆ ಹೇಗಿರುತ್ತದೆಯೋ ಹಾಗಿತ್ತು ನಮ್ಮ ಹೈಸ್ಕೂಲು. ಸುಬ್ಬುವಿನ ಅಧಿಕಪ್ರಸಂಗಿತನವನ್ನು ವೈಜ್ಞಾನಿಕ ಕುತೂಹಲವಾಗಿ ಬದಲಾಯಿಸಿದ ಶೈಲಾ ಮೇಡಮ್, ಕನಿಷ್ಟ ಎರಡು ಸಾವಿರ ಪೇಜ್ ಗಳಷ್ಟಾದರೂ ನೋಟ್ಸ್ ಬರೆಸಿ ೧೦ನೇ ಕ್ಲಾಸಿನಲ್ಲಿ ೯೯ ಅಂಕ ಬರುವಂತೆ ಮಾಡಿದ KN ಮಿಸ್, ಜೀವನದಲ್ಲಿ ಮೊದಲ ಬಾರಿಗೆ ಇಂಗ್ಲೀಷ್ ಎಂಬ ಭಾಷೆಯ ಮಹತ್ವವನ್ನು ಹೇಳಿಕೊಟ್ಟ RV ಹೆಗಡೆ ಸರ್, ಕನ್ನಡದ ಕಿಚ್ಚನ್ನು ಎಲ್ಲರ ಎದೆಯೊಳಗೂ ಹಚ್ಚುವಂತೆ ಪಾಠ ಮಾಡುತ್ತಿದ್ದ ರೇಣುಕಾ ಮೇಡಮ್, ಇದಿಷ್ಟೇ ಜೀವನ ಅಲ್ಲವೆಂಬಂತೆ ಮಳೆಯಲ್ಲಿ ಆಡುವ ಕ್ರಿಕೆಟ್ ನ ಮಜವನ್ನು ತೋರಿಸಿಕೊಟ್ಟ ಸ್ವಾಮಿ ಸರ್,ಹೀಗೆ ಇವರನ್ನೆಲ್ಲಾ ಗುರುಗಳಾಗಿ ಹೊಂದಲು ನಾವೆಷ್ಟು ಅದೃಷ್ಟವಂತರು ಎನಿಸುತ್ತದೆ. ಹಾಗೆ ಹೈಸ್ಕೂಲ್ ಕಾಲವನ್ನು ಸುವರ್ಣಯುಗವಾಗಿ ಮಾಡುವಲ್ಲಿ ಇವರೆಲ್ಲರ ಪಾತ್ರ ಹಿರಿದು.
ಇನ್ನು ಪಿ. ಯು. ಗೆ ಬಂದರೆ ಯಾರ ಹೆಸರನ್ನು ಬರೆಯಲಿ ಯಾರ ಹೆಸರನ್ನು ಬಿಡಲಿ ಎಂಬುದೇ ದೊಡ್ಡ ತಲೆಬಿಸಿ, ಹಾಗಿತ್ತು ಅವರ ಜ್ಞಾನದ ಮಟ್ಟ, ಹಾಗಿತ್ತು ಅವರ ಕಲಿಸುವ ಪರಿ, ಹಾಗಿತ್ತು ಅವರು ತಮ್ಮ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿ. SDM ಕಾಲೇಜಿನಲ್ಲಿಯೇ ನಾನು ಇಂದಿಗೂ ನಾನು ಕಂಡ ಶ್ರೇಷ್ಟ ಶಿಕ್ಷಕ ಎಂದು ಗೌರವಿಸುವ ಕೇಶವ್ ರನ್ನು ಭೇಟಿಯಾಗಿದ್ದು. ಅವರು ನಡೆದಾಡುವ ವಿಶ್ವಕೋಶ ಮಾತ್ರ ಆಗಿದ್ದರೆ ಅವರೇ the best ಆಗುತ್ತಿರಲಿಲ್ಲವೇನೋ, ಅದು ಅವರು ಮಾತನಾಡುತ್ತಿದ್ದ ವಿಷಯಗಳಷ್ಟೇ ಅಲ್ಲ, ಅವರು ಬದುಕಿದ ಪರಿಯೂ ಅಷ್ಟೇ ಆದರ್ಶಪ್ರಾಯ, ಅನುಕರಣೀಯ.ಗಣೇಶ್ ನಾಯಕ್  ರ ತನ್ಮಯತೆ ಇಂದಿಗೂ ವಿಸ್ಮಯವೇ. ಸ್ಮಿತಾ ಮೇಡಮ್ ರ ಜೀವನಪ್ರೀತಿ, ಆತ್ಮವಿಶ್ವಾಸ ನೋಡಿ ಕಲಿಯಬೇಕಾದದ್ದು ಎಷ್ಟೋ ಇದೆ ಎನ್ನಿಸುತ್ತದೆ. ಗಣಪಯ್ಯ ಸರ್ ಮೊದಲ ಕ್ಲಾಸಿನಲ್ಲಿ "ನಾನು ಎಡಚ, ದಯವಿಟ್ಟು ಸ್ವಲ್ಪ ಹೊಂದಿಕೊಳ್ಳಿ" ಎಂದು ಹೇಳಲೇಬೇಕಿರದ ಮಾತನ್ನು ಹೇಳುವಷ್ಟು ವಿನಯವನ್ನು ತಮ್ಮ ಐವತ್ತರ ಹರೆಯದಲ್ಲೂ ಉಳಿಸಿಕೊಂಡು ಬಂದಿದ್ದರು ಎಂಬುದೂ ಅಷ್ಟೇ ಆಶ್ಚರ್ಯಕರವಾಗಿ ಕಾಣುತ್ತದೆ. ಹಾಸ್ಟೆಲ್ ವಾರ್ಡನ್ ಆದರೂ ಎಷ್ಟೋ ವಿಧದಲ್ಲಿ ಬರಿ ಉತ್ತಮಕ್ಕಿಂತ ಉತ್ತಮ ಗುರುವಾಗಿದ್ದರು. ಹೀಗೇ ಬರೆಯುತ್ತಾ ಹೋದರೆ ಎಷ್ಟು ಪೇಜುಗಳನ್ನು ಬೇಕಾದರೂ ವರ್ಣಿಸಬಹುದಾದರೂ ಇದನ್ನು ಇಲ್ಲಿಗೇ ನಿಲ್ಲಿಸುತ್ತಿರುವುದು ಉಳಿದವರ ಕೊಡುಗೆಯನ್ನು ಅಲ್ಲಗಳೆದಂತೆ ಎಂದು ದಯಮಾಡಿ ಭಾವಿಸಬಾರದು.
ಇನ್ನು ಪೆಸಿಟ್ ನ ಗುರುಗಳ ಬಗೆಗೆ ನಾನು ಬರೆಯದೇ ಇರುವುದೇ ಒಳ್ಳೆಯದು ಭಾವಿಸುತ್ತೇನಾದರೂ ಕೆಲವು ಲೆಕ್ಚರರ್ ಗಳ ಹೆಸರನ್ನಾದರೂ ಇಲ್ಲಿ ಹೇಳದೇ ಹೋಗುವುದು ಅಪಮಾನ ಎನಿಸಬಹುದು. ಎಲ್ಲ ಬಲ್ಲ ಹಿಟ್ಲರ್ ಎನಿಸುತ್ತಿದ್ದ RV ಅಯ್ಯರ್, ಕೈಯ್ಯನ್ನು ೧೮೦ ಡಿಗ್ರಿ ತಿರುಗಿಸಬಲ್ಲವರಾಗಿದ್ದ MGG, ಅಸಾಧ್ಯ Digital Communicationನ್ನೂ ಸಹ ಅತಿ ಸರಳವಾಗಿ ಹೇಳಿಕೊಂಡು ಹೋದ ಕೆ ರಘುನಾಥ್ ಸರ್, ವಿಧ್ಯಾರ್ಥಿಗಳಿಗೇ ಬಂಕ್ ಹಾಕುವ ಬಗ್ಗೆ ಉಪಾಯ ಹೇಳಿಕೊಡುವಷ್ಟು ಮಕ್ಕಳೊಳಗೊಬ್ಬರಾಗುತ್ತಿದ್ದ ಸ್ನೇಹಲ್ ಪಿಂಟೋ ಹೀಗೆ ಮರಳುಗಾಡಿನ ಮರೀಚಿಕೆಯಂತೆ ಬೆರಳೆಣಿಕೆಯಷ್ಟು ಜನ ಶಿಕ್ಷಕರು ಸಿಗಬಹುದು. ಆದರೆ ಇಂಜಿನಿಯರಿಂಗ್ ನಲ್ಲಿ ಶಿಕ್ಷಕರಾಗುವವರು ನಮ್ಮ ನಮ್ಮ ಗೆಳೆಯರೇ. ಅಥವಾ ನಮ್ಮ ಗೆಳೆಯ ಬಳಗವೇ. ’Education for the real word' ಎಂದೇ ಹೇಳಿಕೊಂಡು ಬರುವ PESIT ನ ಫ್ರೆಂಡುಗಳು ನಿಮ್ಮನ್ನು ನಿಜವಾದ ಪ್ರಪಂಚಕ್ಕೆ ತಯ್ಯಾರು ಮಾಡುತ್ತಾರೆ, ಎಂಬಲ್ಲಿಗೆ ಅವರಿಗೂ ಒಂದು ಧನ್ಯವಾದ ಸಲ್ಲುತ್ತದೆ.

Sunday, 4 September 2011

ಸ್ವಗತ...


ಕಟ್ಟಿ ಹಾಕಲೇಕಳಲ, ಉಕ್ಕಿ ಹರಿಯಲಿಕ್ಕೆ ಬಿಡು
ಅಪ್ಪಳಿಸಿ ಮರೆಯಾಗುವ ಅಲೆಯಂತೆ
ಹೊರಹಾಕಿಬಿಡು ಉಮ್ಮಳಿಸಿ ಬರುವ ದುಃಖವ
ಎಂದೆಂದಿಗೂ ತಿರುಗಿಬಾರದಂತೆ
ಹೇಳಿಕೊಳ್ಳಲಾಗದಿದ್ದರೇನಂತೆ ಬಿಕ್ಕಿಬಿಡು
ಬತ್ತಿಹೋಗಲಿ ಕಣ್ಣೀರಿನ ಒರತೆ||೧||

ಹೃದಯ ಬೆಂದು ಸೀದು ಹೋಗುವ ಮುನ್ನ
ಆರಿಸಿಬಿಡು ಜೀವಮರೆಯದ ಭೀತಿ
ಮಳೇನೀರು ಹರಿವ ಹೊಳೆಯಾಗಿ ಇಳೆಯ
ಕೊಳೆಯ ಕೊಚ್ಚಿಹಾಕುವ ರೀತಿ
ಭೋರ್ಗರೆದು ಹರಿಯಲಿ ನಿನ್ನೆದೆಯ ನೋವು
ಮುಳುಗಿಹೋಗಲಿ ಅನುಭೂತಿ||೨||

ಸಾಕು ಎಂದಿತು ಮನಸು, ಇನ್ನೂ ಮುಗಿದಿಲ್ಲ
ಎಂದು ಕನವರಿಸಿತು ಕನಸು
ಅದಮ್ಯವೊಂದು ಅತಿ ರಮ್ಯವೆಂದು ಹುಡುಕಿ
ಕಂಡಿತ್ತು ಕುರುಡು ಕನಸು
’ನಿನಗಲ್ಲ ಇದುವು, ತರವಲ್ಲ ನಿನ್ನಿರುವು ಕನಸೆ’
ತೊಲಗಾಚೆ ಎಂದಿತ್ತು ಮನಸು||೩||

Tuesday, 30 August 2011

ನಿನಗೆ ...

ಹದವ ಮರೆತಿದೆ ಹೃದಯ,
ಬದಲಾಗಿ ಬಿಟ್ಟಿದೆ ಬದುಕು,
ಸಮಯ ಉರುಳಿದೆ ತಿಳಿಯದೇ.
ಸಾವಿರ ’ಜಿಬಿ’ಯ ಮೆದುಳ ತುಂಬ,
ನಿನ್ನ ನೆನಪಿನದೇ ಕಾರುಬಾರು.  
ಏನ ಮಾಡಲಿ ನಾ,ಎಲ್ಲಿ ಹೋಗಲಿ,
ಎಲ್ಲ ನಿನ್ನದೇ, ನನ್ನದೆಲ್ಲಾ, ಎಲ್ಲವೂ.

ಹೆಸರಲ್ಲೇ ಖುಷಿಯಿದೆ ರವ*ದಿ,
ಉಸಿರಲ್ಲೇ ಬೆರೆತಿದೆ ಮುದದಿ.
ಬರೆದಾಗಿದೆ ನನ್ನಯ ಭವಿತ ;
ಸಾವಿರ ಭಾವ ಒಮ್ಮೆಲೆ ಮೂಡಿ,
ನನ್ನೆದೆಯು ಕುಸಿದಿತ್ತಲ್ಲೇ,
ಭೂಮಿ ಭಾರವ ಹೊತ್ತಂತೆ.
ಕಳೆದು ಹೋದ ನನ್ನ ನಾನೇ
ಹುಡುಕಾಡಿದೆ ದಡ ಮುಟ್ಟದಂತೆ. 

ಯಾರು ನೀನೋ, ಏನು ಮಾಯೆಯೋ
ಏನೂ ತಿಳಿಯದಂತೆ, ಏನು ಮೋಡಿ-
ಮಾಡಿದೆಯೋ ಒಂದು ನೋಟದಲ್ಲಿ .
ನಿನಗೆಲ್ಲಿ ಗೊತ್ತು ನನ್ನೆದೆಯ ಪಾಡು,
ಮುಗಿಲು ಮುಟ್ಟಿದೆ ದಿಗಿಲು ಇಲ್ಲಿ. 
ಮರೆವನೇ ಮರೆಯುವ  ತರಹದಿ 
ಮಾಡಿ ಬಿಟ್ಟಿತ್ತು ನಿನ್ನ ನೆನಪಲೀಲೆ.

*ರವ = ಶಬ್ದ 

Thursday, 25 August 2011

ಒಂದು ಡೈರಿಯ ಕಥೆ ( ಮುಂದುವರಿದಿದೆ)


ಟ್ರೇನಿನಲ್ಲಿ ಸಿಕ್ಕಿದ ಬ್ಯಾಗನ್ನು ಹಿಂದಿರುಗಿಸುವ ನೆಪದಲ್ಲಿ ಅನಾಮಿಕಾ ಅದರೊಳಗಿದ್ದ ಡೈರಿಯನ್ನು ಓದಲು ಪ್ರಾರಂಭಿಸುತ್ತಾಳೆ. 

ಮುಂದೆ ಓದಿ ...

ಒಂದಿಷ್ಟು ಪೀಠಿಕೆಯ ಹಾಗೆ ಬರೆದಿದ್ದನಾದರೂ ಅದು ಯಾವ ರೀತಿಯಿಂದಲೂ ವಿಳಾಸ ತಿಳಿಯಲು ಸಹಾಯವಾಗುವಂತೆ ಇರಲಿಲ್ಲ.ಹೆಚ್ಚಿನವು ಅವನ ಜೀವನದ ಬಗ್ಗೆ , ಅದರ ಬಗೆಗಿನ ಅವನ ಅನುಭವದ ಬಗ್ಗೆ ಇತ್ತು. ತಂದೆ ತಾಯಿಯರ ಪ್ರೇಮವಿವಾಹ (ತಾಯಿಯ ಕಡೆಯವರಿಂದ ಬಹಳೇ ವಿರೋಧ ಕಟ್ಟಿಕೊಂಡು) ,ಮೂಲ ದಕ್ಷಿಣ ಕನ್ನಡದ ಜೈನರಾದರೂ ಹುಬ್ಬಳ್ಳಿಯಲ್ಲಿ ವಾಸವಾಗಿರುವುದು,ಎಂಬುದನ್ನು ಬಿಟ್ಟರೆ ಮತ್ತೆಲ್ಲ ವಿವರಗಳೂ unuseful. ಮೂರನೇ ಕ್ಲಾಸಿನಲ್ಲಿ ಅಪ್ಪನಿಗೆ ಗೊತ್ತಿಲ್ಲದಂತೆ ವೆಂಕಪ್ಪ ಶೆಟ್ಟರ ಅಂಗಡಿಗೆ ಹೋಗಿ ಎರಡು ರುಪಾಯಿಯ ಚಿಕ್ಕಿ ತೆಗೆದುಕೊಂಡು ತಿನ್ನುತ್ತಿದ್ದುದು, ಎರಡೂ ಮನೆಯವರ ವಿರೋಧವಿದ್ದರೂ ವಿನಾಯಕ ಮಾವ(ಪ್ರಭಂಜನನ ಅಮ್ಮನ ತಮ್ಮ)ನ ಮಗಳು ಆವಂತಿಯ ಮೇಲೆ ಉಂಟಾದ crush, ಹೀಗೆ ಎಷ್ಟೋ ವಿಷಯಗಳನ್ನು ಮೊದಲ ಬಾರಿಗೆ ಮನಸ್ಸಿನಿಂದ ಹೊರಕ್ಕೆ ಹರಿಯಬಿಟ್ಟಿದ್ದ . ಮುಂದೆ ೯ನೇ ಕ್ಲಾಸಿನಲ್ಲಿರುವಾಗ ಅದೇ ಆವಂತಿ ಮೆದುಳು ಜ್ವರದಿಂದ ತೀರಿಕೊಂಡಾಗ , ಭಾಷೆಗೆ ಇರುವ ಮಿತಿ ನೋವಿಗೆ ಎಲ್ಲಿಂದ ಬರಬೇಕು ಎಂದುಬಿಡುತ್ತಾನೆ. ಅವನು ಬರೆದಿದ್ದೆಲ್ಲಾ ಸತ್ಯವೇ? ಆ ವಾಕ್ಯಗಳು ಸತ್ಯಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾಗಿದ್ದವು. ಪಿ.ಯು. ವಿನ ಘಟನೆಗಳ ಬಗೆಗಿನ ಅವನ ಕೆಲವು ವಾಕ್ಯಗಳನ್ನು ಅವನು ಬರೆದಂತೆಯೇ ಉದ್ಧರಿಸುತ್ತೇನೆ " ನನಗೆ ಸಹಸ್ರ ವಿಧದಲ್ಲಿ ಸಹಾಯ ಮಾಡಿದ ನವೀನನೊಂದಿಗೆ ಸಹಾ ನಾನು ಪ್ರಾಮಾಣಿಕವಾಗಿರಲಿಲ್ಲ ಎಂಬುದಕ್ಕೆ ನಾನು ದುಃಖ ಪಡುತ್ತೇನೆ,  ಯಾವುದೇ ಕೆಲಸ ಇದ್ದರೂ ದಿನವೂ ಕಾಲೇಜಿಗೆ ಕರ್ತವ್ಯವೇನೋ ಎನ್ನುವ ತರಹ drop ಕೊಡುತ್ತಿದ್ದ ’ನವೀ’ಗೆ , ಆವಂತಿಯ hangoverನಿಂದ ಹೊರ ಬರಲು ಬಹಳೇ ಸಹಾಯ ಮಾಡಿದ ’ನವೀ’ಗೆ , ಎಷ್ಟೋ ಸಲ ನನ್ನನ್ನು ಬಚಾವ್ ಮಾಡಲು ನನ್ನ ತಪ್ಪುಗಳನ್ನು ತನ್ನದೆಂದುಕೊಂಡು ನನ್ನ ಮತ್ತು ಅವನ ಮನೆಗಳೆರಡರಲ್ಲೂ ಬೈಸಿಕೊಳ್ಳುತ್ತಿದ್ದ ’ನವೀ’ಯ ಬಳಿ ಕೂಡಾ ಶೈಕ್ಷಣಿಕ ಅಸೂಯೆಯಿಂದ ವರ್ತಿಸಿದೆನೇ ? ಅದು ಅವನು ನನಗೆ ತೋರಿಸುತ್ತಿದ್ದ ಸಹಾನುಭೂತಿಗೆ ತೋರಿದ ಪ್ರತಿಕಾರ ಎಂದು ಹೇಳಿಕೊಂಡರೂ( ನಾನು ಜಗತ್ತಿನಲ್ಲಿ ಏನೆನ್ನಾದರೂ ಸಹಿಸಬಲ್ಲೆ , ಸಹಾನುಭೂತಿಯನ್ನಲ್ಲ ). ಐ ಐ ಟಿ ಯ ಮೆಟೀರಿಯಲ್ಸ್ , ನಾನು ತರಿಸುತ್ತಿಲ್ಲ ಎಂದಿದ್ದು , ಮಿಗಿಲಾಗಿ ಪ್ರಣಮ್ಯಳ ಬಗೆಗಿನ ನವೀನನ ಪ್ರೇಮವನ್ನು ಬಹಿರಂಗ ಮಾಡಿ ’ನವೀ’ಯ image ಹಾಳು ಮಾಡಿ ಹಾಕಿದ್ದು . ಕೇವಲ ತಮಾಷೆಗೆಂದು ಬರೆದಿದ್ದ ಒಂದು ಪತ್ರ , ಯಾರು ಯಾರದೋ ಕೈ ತಲುಪಿ ಕೊನೆಗೆ ಪ್ರಾಂಶುಪಾಲರು  ’ideal ಹುಡುಗ’ ನವೀನನಿಗೆ ಛೀಮಾರಿ ಹಾಕುವ ಹಾಗಾಗಿ ನವೀನ ಖಿನ್ನತೆಗೆ ಹೋಗುವಷ್ಟರ ಮಟ್ಟಿಗೆ ಬೇಜಾರಾಗಿ ಇದ್ದಾಗಲೂ ಸತ್ಯ ಒಪ್ಪಿಕೊಳ್ಳದೇ ಹೋಗಿದ್ದು ಅಕ್ಷಮ್ಯವೇ.ಆದರೆ ಅದೇ ಸಿಟ್ಟಿನಲ್ಲಿ ಪ್ರಣಾಮ್ಯಳ ಬಳಿ ಹೋಗಿ ಒಂದು ದಿನ ನಿನ್ನನ್ನು ನೋಡಿಕೊಳ್ಳೂತ್ತೇನೆ ಎಂದು ಧಮಕಿ ಹಾಕಿದರೂ , ಮುಂದೆ ಅವಳು ನನಗೆ ಬಹಳ ಕ್ಲೋಸ್ ಆಗಿದ್ದು ನಿಜ. ನವೀನ ಐ.ಐ.ಟಿ. ಯಲ್ಲಿ ಉತ್ತೀರ್ಣನಾಗಿ , ನಾನು ಆಗದೇ ಹೋಗಿದ್ದು ನನ್ನ ’ಚತುರ್’ತನಕ್ಕೆ ಆದ ಶಿಕ್ಷೆಯೇ ? " ಎಂದು ತನ್ನನ್ನೇ ಕೇಳಿಕೊಂಡು  ನವೀನನ ಬಗೆಗಿನ ಅಧ್ಯಾಯವನ್ನು ಅಂತ್ಯ ಮಾಡುತ್ತಾನೆ. ಈ ವಿಷಯದಲ್ಲಿ ನಿಜವಾಗಿಯೂ ಪ್ರಭಂಜನನ ತಪ್ಪಿತ್ತೇ ಅಥವಾ ಇದು ಅವನ ಅಕಾರಣ ಪ್ರಾಯಶ್ಚಿತ್ತವೇ ?  ಸರಿಯಾದ ಮಾಹಿತಿಯಿಲ್ಲದೇ ಅವಸರದ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ ಎಂದು ಆ ವಿಷಯವನ್ನು ಅಲ್ಲಿಗೇ ಬಿಟ್ಟೆ.
ಅವನು ಮುಂದುವರಿಯುತ್ತಾ ಹೇಳುತ್ತಾನೆ" ಹೊಸ ನಗರ , ಹೊಸ ಜೀವನ , ಹೊಸ ಗೆಳೆಯರು , ಹೀಗೆ ಮೊದಲ ಸೆಮಿಸ್ಟರ್ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಕಳೆದು ಹೋಗಿತ್ತು. ಅತಿ ಶಿಸ್ತಿನಿಂದ ಬೆಳೆಸಿದವರಿಗೆ , ಸ್ವಾತಂತ್ರ್ಯ ಮತ್ತು ಅವಕಾಶ ಒಟ್ಟಿಗೆ ಸಿಕ್ಕರೆ ಏನಾಗುತ್ತದೋ ಅದೇ ಅಯಿತು . ಚಲನಚಿತ್ರಗಳು, ಇಂಟರ್ನೆಟ್ ,ವೀಡಿಯೋ ಗೇಮ್ ಗಳು, ಮೊದಲಿನಿಂದ ಇದ್ದ ಪಠ್ಯೇತರ ಸಾಹಿತ್ಯದ ಪುಸ್ತಕ ಓದುವಿಕೆ , ಎಲ್ಲನೂ ಸೇರಿ ಮೊದಲ ಸೆಮಿಸ್ಟರ್ ನ್ನು ಭಯಂಕರ ವೈಫಲ್ಯವಾಗಿಸಿಬಿಟ್ಟವು. ಅದಕ್ಕಿಂತಲೂ ಹೆಚ್ಚು ಕಳವಳಕಾರಿಯಾಗಿದ್ದು ಅಗುತ್ತಿದ್ದ ನೈತಿಕ ಅಧಃಪತನ ,ಗಾಂಧಿವಾದಿ ಮಂಜಪ್ಪಯ್ಯ ಜೈನ್ ರ ಮೊಮ್ಮಗ ಅಶ್ಲೀಲ ಚಿತ್ರಗಳನ್ನು ನೋಡಿದ ಎನ್ನುವಲ್ಲಿಗೆ ನೈತಿಕತೆ ಒಂದು ಪಾತಾಳವನ್ನು ಮುಟ್ಟಿ ಆಗಿತ್ತು. ಅದಕ್ಕೆ ಗೆಳೆಯರನ್ನೂ , ಇಂಟೆರ್ನೆಟ್ಟನ್ನೂ ದೂರಿದರೆ ಅದು ಕೇವಲ ತಪ್ಪು ಜಾರಿಸುವ ಪ್ರಯತ್ನವಾಗುತ್ತದೆಯಾದ್ದರಿಂದ ತಪ್ಪೆಲ್ಲ ಅಗತ್ಯವಾದಷ್ಟು ಗಟ್ಟಿಯಾಗಿಲ್ಲದ ನನ್ನ ಮನೋನಿರ್ಧಾರದ್ದೇ , ಎನ್ನುವುದು ಹೆಚ್ಚು ಸಮಂಜಸ. ಹೀಗಿರುವಾಗ ಅಪ್ಪ ನನ್ನ ಹುಟ್ಟಿದ ಹಬ್ಬದ ಉಡುಗೊರೆಯಾಗಿ ಅಜ್ಜ ಮಂಜಪ್ಪಯ್ಯರ ಡೈರಿಯನ್ನು ಕೊಟ್ಟಿದ್ದು. ಅದು ನಿಜವಾಗಿಯೂ ನನ್ನ ಬದುಕನ್ನೇ ಬದಲಾಯಿಸಿತು. ಸತ್ಯ , ನ್ಯಾಯ ನಿಷ್ಟೆಯ ಬಗ್ಗೆ ಅವರ ಅಭಿಪ್ರಾಯ ಎಂತಹವರನ್ನು ಬದಲಾಯಿಸುವಂತಿತ್ತು. ಒಂದೊಂದು ಸಲ ಓದಿದಾಗ ಒಂದೊಂದು ಅರ್ಥ ಕಂಡು , ನನ್ನ  ಬಗ್ಗೆ ನನಗೇ ಅಸಹ್ಯ ಮೂಡಲಾರಂಭಿಸಿತು.ಎಂದು ಹೀಗೆ ಎಷ್ಟೋ ಚಿಕ್ಕ ದೊಡ್ದ ವಿಷಯಗಳ ಬಗ್ಗೆ, ಅವುಗಳ ಸರಿ-ತಪ್ಪು ನಿಲುವುಗಳ ಬಗ್ಗೆ  ಪ್ರಭಂಜನನು ಚರ್ಚೆ ಮಾಡುತ್ತ ಹೋಗುತ್ತಾನೆ. ತನ್ನ ಪ್ರತಿಯೊಂದು ಕಾರ್ಯವನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ವಿಶ್ಲೇಷಣೆ ಮಾಡಿಕೊಳ್ಳುತ್ತಾನೆ. ಹೀಗೆಯೇ ಮುಂದಿನ ಮೂರು ಸೆಮಿಸ್ಟರ್ ಗಳ ಮತ್ತೊಂದಿಷ್ಟು ಅಷ್ಟೇನೂ ,ಮಹತ್ವದ್ದು ಎನಿಸದಂತಹ ಘಟನೆಗಳು , ಒಂದಿಷ್ಟು ಅನುಭವಗಳು ,ಒಂದಿಷ್ಟು ಉಚಿತ ಉಪದೇಶಗಳು,ಡೈರಿಯ ಉಳಿದ ಹಾಳೆಗಳನ್ನು ತುಂಬುತ್ತದೆ.  ಕೊನೆಯ ಲಿಖಿತ ಪುಟದಲ್ಲಿದ್ದ ಈ ಸಾಲುಗಳು ನನ್ನ ಗಮನ ಸೆಳೆದಿದ್ದಂತೂ ಹೌದು " ನಾವೆಷ್ಟೇ ಒಳ್ಳೆಯವರಾಗಿರಹೋದರೂ ,ಪ್ರಾಮಾಣಿಕವಾಗಿರಹೋದರೂ , ಕೆಲವೊಂದು ಸಲ ವಿಧಿಯೋ ,ಆಕಸ್ಮಿಕಗಳೋ ನಿಮ್ಮನ್ನು ಅತ್ಯಂತ ಕೀಳಾಗಿ ಬಿಂಬಿಸಬಹುದು. ಆಗ ಅಂತಹವುಗಳನ್ನು ನಿರ್ಲಕ್ಷಿಸಿ , ನಿಮ್ಮ ತತ್ವಗಳಿಗೆ ಅಂಟಿಕೊಂಡಿರಬೇಕು ಎಂದು ನಾನೆಲ್ಲೋ ಮೊದಲು ಬರೆದಿದ್ದ ನೆನಪು , ಆದರೆ ಅದೆಷ್ಟು ಕಷ್ಟ ಎಂಬುದರ ಅನುಭವ ಇವತ್ತಾಯ್ತು , ಈಗಷ್ಟೇ ನಿದ್ರೆಯಿಂದ ಎಚ್ಚರವಾದರೂ ಮತ್ತೆ ಈಗ ಬಹಳ ನಿದ್ದೆ ಬರುತ್ತಿದೆಯಾದ್ದರಿಂದ ಈ ಘಟನೆಯ ಬಗ್ಗೆ ನಾಳೆ ಬರೆಯುತ್ತೇನೆ" ತಾರೀಕನ್ನು ನೋಡಿದರೆ ಮೇ ೨೯-೨೦೧೦, ಎಂದರೆ ನಿನ್ನೆ.
ಯಾರೂ ನೋಡಲಾರರು ಎಂಬ ಧೈರ್ಯವು ಎಂತಹ ತಪ್ಪನ್ನೂ ಮಾಡಲು ಪ್ರೋತ್ಸಾಹ ಕೊಡುತ್ತದೆ ಎಂಬುದೆಲ್ಲ ನಿಜವೆನಿಸಿ ನಾನೂ ಒಂದು ಡೈರಿಯನ್ನು ಬರೆಯಬೇಕೆಂಬ ಖಚಿತ ನಿರ್ಧಾರ ಮಾಡಿದ್ದೆ. ಆದರೆ ಇವಾವುವೂ ಬ್ಯಾಗ್ ನ್ನು ಹಿಂತಿರುಗಿಸುವ ನನ್ನ ಉದ್ದೇಶಕ್ಕೆ ಸಹಾಯಕಾರಿಯಾಗಲಿಲ್ಲವಾಗಿ ಮಾರನೆ ದಿನ ಕಾಲೇಜಿಗೆ ಫೋನು ಮಾಡಿ USN  ಉಪಯೋಗಿಸುವುದೇ ಅನಿವಾರ್ಯವಾಯಿತು.ಕಾಲೇಜಿನಿಂದ ವಿಳಾಸ ಮತ್ತು ಮನೆಯ ದೂರವಾಣಿ ಸಂಖ್ಯೆ ಪಡೆದು , ಮನೆಗೆ ಕರೆ ಮಾಡಿದರೆ ಅವನ ಅಮ್ಮ "ಅವನು ಇವತ್ತು ಬೆಳಿಗ್ಗೆಯಷ್ಟೇ ದಿಲ್ಲಿಗೆ ಹೊದ, ಅದೇನೋ internship ಅಂತೆ. ಹಾಂ, ಒಂದು ಬ್ಯಾಗ್ ನ್ನು ರೈಲಿನಲ್ಲಿ ಕಳೆದುಕೊಂಡನಂತೆ , ಬಹಳೇ ಪೇಚಾಡಿಕೊಂಡ ,ಅದೇನೇನೋ ಮಹತ್ವದ documents ಎಲ್ಲಾ ಇತ್ತಂತೆ " , ಎಂದು ಹೇಳಿ ಅವನ ಮೊಬೈಲ್ ಸಂಖ್ಯೆಯನ್ನು ಕೊಟ್ಟರು. ಪ್ರಭಂಜನ್ ಗೆ ಕರೆ ಮಾಡಿದರೆ ನಾನೆಣಿಸಿದ್ದಕ್ಕಿಂತ ಬಹಳ ಶಾಂತವಾಗಿದ್ದ ," ಸರಿ ಹಾಗಾದರೆ , ನೀವು ಡೈರಿಯನ್ನು ಓದಿಲ್ಲ ಎಂದು ನಾನು ನಂಬಲಾರೆ. ಎಂತಿದ್ದರೂ ನೀವು ಡೈರಿಯನ್ನು ಓದಿಯಾಗಿದೆ ,ಅದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ . ನಾನು ಬರುವುದು ಆಗಸ್ಟ್ ಪ್ರಾರಂಭದಲ್ಲಿ , ಕಾಲೇಜು ಆರಂಭವಾಗುವುದಕ್ಕಿಂತ ಒಂದು ವಾರ ಮೊದಲು .,ನಾನೇ ಬೆಳಗಾವಿಗೆ ಬರುತ್ತೇನೆ ತೆಗೆದುಕೊಂಡು ಹೋಗಲು. ನಮ್ಮ ಮನೆಗೆ ಬ್ಯಾಗ್ ನ್ನು ಕೊಟ್ಟರೆ ಅವರು ಓದುವ ಅವಕಾಶ ಇದೆಯಾದ್ದರಿಂದ ಅದು ನಿಮ್ಮ ಬಳಿಯಿರುವುದೇ ಸುರಕ್ಷಿತ . ನಿಜವೆಂದರೆ  ಡೈರಿ ಬರೆಯಲು ಪ್ರಾರಂಭಿಸಿದ್ದೇ ಅವರ ಕಲ್ಪನೆಯ ’ಪ್ರಭಂಜನ’ನ ಮಟ್ಟಕ್ಕೆ ನಾನು ನನ್ನನ್ನು ಪುನರುತ್ಥಾನ ಮಾಡಿಕೊಳ್ಳಲಿಕ್ಕೆ, .ಅಷ್ಟೇ. ಮುಂದೊಂದು ದಿನ ನಾನೇ ಹೇಳುತ್ತೇನೆ . ಏಕೆಂದರೆ ’ನನ್ನ ಮಗ ಹಿಂದೊಂದು ದಿನ ಹಾಳಾಗಿದ್ದನಾದರೂ ಮತ್ತೆ ಅವನಷ್ಟಕ್ಕೆ ಅವನೇ ಸ್ಫೂರ್ತಿ ಪಡೆದು ಸರಿಯಾದ ಎಂಬುದು ಎಷ್ಟು ಸಮಾಧಾನ ಕೊಡುತ್ತದೆಯೋ , ಅಷ್ಟೇ ಚಿಂತೆಯನ್ನು ನನ್ನ ಮಗ ಈಗ ದಾರಿ ತಪ್ಪಿದ್ದಾನೆ ಎಂಬುದು ಕೊಡುತ್ತದೆ ’ "  ಎಂದು ಒಂದೇ ಉಸಿರಿನಲ್ಲಿ ಹೇಳಿ ನಿಲ್ಲಿಸಿದ . ನಾನು ಕೇಳಬೇಕೆಂದಿದ್ದನ್ನೆಲ್ಲ ಕೇವಲ ಧ್ವನಿ ಬದಲಾವಣೆಯಿಂದಷ್ಟಲೇ ಗುರುತಿಸಿ , ಅದಕ್ಕೆ ತಕ್ಕ ಸಮಜಾಯಿಷಿ ಕೊಟ್ಟ ಪ್ರಭಂಜನನ ಬಗ್ಗೆ ಮೆಚ್ಚುಗೆ ಮೂಡಿದ್ದು ಸಹಜವೇ.

ಒಂದೂವರೆ ತಿಂಗಳ ನಂತರ...
ನನ್ನ ಜೀವನದ ದೊಡ್ಡ ಆಶ್ಚರ್ಯ ಆಗಿದ್ದು ಬೆಳಗಾವಿಯ ರೈಲ್ವೇ ನಿಲ್ದಾಣದಲ್ಲಿ , ಪ್ರಭಂಜನನನ್ನು ನೋಡಿದಾಗ. ಊಹೆಗಳೂ ಮುಟ್ಟದಷ್ಟು ಚಿಕ್ಕದಾಗಿತ್ತು ಜಗತ್ತು , ಪ್ರಭಂಜನ ಎದುರು ಬಂದು ನಿಂತಾಗ ಭೂಮಿ ಬಾಯಿ ಬಿಡಬಾರದೇ ಎನಿಸಿದ್ದು ಅವನ ಡೈರಿಯನ್ನು ಓದಿದ್ದ ನಾಚಿಕೆಯಿಂದಲ್ಲ . ಅರ್ಧ ಸತ್ತ ಒಂದು ಕಾಲು , ಕ್ಷಣಕ್ಷಣಕ್ಕೂ ಸರಿ ಪಡಿಸಿಕೊಳ್ಳುತ್ತಿದ್ದ ಕನ್ನಡಕ ,ನಿಮ್ಮ ಸಹಾನುಭೂತಿ ನೀವೆ ಇಟ್ಟುಕೊಳ್ಳಿ ಎಂದು ಕಣ್ಣಿನಲ್ಲೇ ಹೇಳಿಕೊಂಡು ಬರುವ ಈ ಪ್ರಭಂಜನ ಹಾಗೂ ಅಂದು ರಾತ್ರಿ ರೈಲಿನಲ್ಲಿ  ವಿನಾಕಾರಣ ನನ್ನ ಕೈಯಲ್ಲಿ ಬೈಸಿಕೊಂಡ ಆ ಕುಂಟು ಹುಡುಗ ಇಬ್ಬರೂ ಒಬ್ಬರೇ ಆದ್ದರಿಂದ . ಸಹಾನುಭೂತಿಯ ಬಗೆಗಿನ ಅವನ ಕೋಪ , ನವೀನನ ಕೊಡುತ್ತಿದ್ದ ಡ್ರಾಪ್ ನ ಮಹತ್ವ, ಅವನು ಬರೆದ ಕೊನೆಯ ದಿನದ ಅನುಭವ ಎಲ್ಲವೂ ಈಗ ಒಂದು ಸ್ಪಷ್ಟವಾದ ರೂಪ ಪಡೆಯತೊಡಗಿದವು.ನಾನೇನು ಮಾತನಾಡಲಿ ಎಂದು ತಡವರಿಸುತ್ತಿರುವಾಗ ಅವನೇ ಮಾತನಾಡತೊಡಗಿಡದ " ನೀವೇನೂ ಸಂಕೋಚಪಟ್ಟುಕೊಳ್ಳಬೇಡಿ , ಆ ದಿನ ನಿಮ್ಮ ಪರಿಸ್ಥಿತಿಯಲ್ಲಿ ನಾನಿದ್ದು , ನಾನು ಒಬ್ಬ ಹುಡುಗಿಯಾಗಿದ್ದರೂ ನೀವು ಮಾಡಿದ್ದನ್ನೇ ,ಮಾಡುತ್ತಿದ್ದೆನೇನೋ! ನೀವು ನನ್ನ ಅಳಲನ್ನು ಓದಿದ್ದರಿಂದ ನಿಮಗೆ ಮತ್ತೂ ಮುಜುಗರವೆನ್ನಿಸಬಹುದಷ್ಟೇ, ಈ ಡೈರಿಯ ವಿಷಯ ನಮ್ಮಿಬ್ಬರಲ್ಲಿಯೇ ಇರಲಿ , ಯಾರಿಗೂ ದಯವಿಟ್ಟು ಹೇಳಬೇಡಿ " ಎಂದು ತಿರಸ್ಕರಿಸಲಾಗದಂತೆ ಬೇಡಿಕೆಯನ್ನಿಟ್ಟು ಮಾತು ಮರೆತವನಂತೆ ನಿಂತ . ಮನಸ್ಸನ್ನು ಅರಿಯುವ ಅವನ ಶಕ್ತಿಗೆ ಬೆರಗಾಗಿ ,ಇಡೀ ಒಂದು ವರ್ಷದ ಡೈರಿಯಲ್ಲಿ  ಒಂದು ಸಲವೂ ತನ್ನ ಅಂಗವೈಕಲ್ಯದ ಬಗ್ಗೆ ಪ್ರಸ್ತಾಪಿಸದ ಅವನ ಆತ್ಮಗೌರವದ ಬಗ್ಗೆ ಪ್ರಶಂಸೆ ಮೂಡಿ ಮಾತನಾಡಬೇಕೆನ್ನೆಸಿದರೂ ಮಾತನಾಡಲಾರದೇ ಹೋದೆ. ನಾನು ಗೊಂದಲದಲ್ಲಿ ಮಾತನಾಡದಿದ್ದನ್ನು ನಿರಾಸಕ್ತಿ ಎಂದು ಅಪಾರ್ಥ ಮಾಡಿಕೊಂಡನೋ , ಅವನಿಗೂ ಮಾತಾಡಲು ಏನೂ ಸಿಗಲಿಲ್ಲವೋ ಈ ಭೇಟಿ ಇಷ್ಟಕ್ಕೇ ಸಾಕು ಎನ್ನುವಂತೆ " ಧನ್ಯವಾದಗಳು , ಕಳೆದು ಹೋಯ್ತೆಂದುಕೊಂಡಿದ್ದ ಅತಿ ಮಹತ್ವದ ಈ ಬ್ಯಾಗ್ ನ್ನು ಸಿಗುವಂತೆ ಮಾಡಿದ್ದಕ್ಕೆ" ಎಂದು ಹೇಳಿ , ನಾನು ತಲೆ ಅಲ್ಲಾಡಿಸಿದ್ದನ್ನು ನೋಡಿದ ಮೇಲೆ , ಮತ್ತೆ ಹಿಂತಿರುಗಿ ನೋಡದೇ ಹೋದ.
                                                                                                                         
ಟಿಪ್ಪಣಿ :

ಇದೊಂದು ಕಾರಣವಾಗಬಹುದೆಂದು ನಾನು ಭಾವಿಸೆನಾದರೂ ಈ ಕಥೆಯನ್ನು ಬರೆಯುವಾಗ ಬೇರೊಂದು ಐಡಿಯಾ ಬಂದು ಅದು ಈ ಕಥೆಯ ಮೇಲೆ ಒಂದಿಷ್ಟು ಪ್ರಭಾವ ಬೀರಿದ್ದರಿಂದ ಸ್ವಲ್ಪ ಅಪೂರ್ಣ ಎನಿಸಬಹುದೇ ಈ ಕಥೆ ? ನೀವೇ ತೀರ್ಪುಗಾರರು.


Saturday, 20 August 2011

ಒಂದು ಡೈರಿಯ ಕಥೆ


ಒಂದು ಕಥೆ ; ಪೂರ್ತಿಯಾಗಿ ಒಂದೇ ಸಲಕ್ಕೆ ಬರೆದರೆ ಬಹಳ ದೊಡ್ಡದಾಗಬಹುದೆಂಬ ಹೆದರಿಕೆಯಿಂದ ಎರಡು ಭಾಗವಾಗಿ ಅತಿಚಿಕ್ಕ ಧಾರಾವಾಹಿಯಾಗಿ ಪೋಸ್ಟಿಸುತ್ತಿದ್ದೇನೆ. 

ಮೊದಲ ಭಾಗ : 

ಇಂದಿಗೂ ನೆನಪಿದೆ . ಅದು ಶನಿವಾರ ೨೯ನೇ ತಾರಿಕು . ಮಧ್ಯಾಹ್ನವಷ್ಟೇ ಸೆಮಿಸ್ಟರ್ ಪರೀಕ್ಷೆ ಮುಗಿದಿತ್ತು., ಬೆಂಗಳೂರಿನ ಬಿಂಕದ ಬಲೆಯಿಂದ ತಪ್ಪಿಸಿಕೊಂಡು , ಬೆಳಗಾವಿಯೆಂಬ ಸ್ವಚ್ಛಂದ ಆಕಾಶದಲ್ಲಿಹಾರಲು ಮನವು ತವಕಿಸುತ್ತಿತ್ತು. ಬೇರೆಲ್ಲೂ ಜಾಗ ಸಿಗದೇ , ಬಹುತೇಕ ತುಂಬಿದ್ದ ಸಾಮಾನ್ಯ ಬೋಗಿಯಲ್ಲಿ ಜಾಗ ಹಿಡಿಯುವಲ್ಲಿ ನಾನು ನೃಪತುಂಗ (ನನ್ನ ದೊಡ್ಡಮ್ಮನ ಮಗ , ನನಗಿಂತ ಒಂದು ವರ್ಷಕ್ಕೆ ದೊಡ್ಡವನು , ನಮ್ಮದೇ ಕಾಲೇಜು) ಇಬ್ಬರೂ ಸುಸ್ತಾಗಿ ಹೋಗಿದ್ದೆವು. ನಮ್ಮ ಅಕ್ಕ-ಪಕ್ಕದಲ್ಲಿ ಬರೀ ಗಂಡು ಹುಡುಗರೇ ಇದ್ದದ್ದನ್ನು ಗಮನಿಸಿದಾಗ ಇರಿಸು-ಮುರಿಸಾಗಿದ್ದು ನಿಜ. ಆದರೆ ಅವರಲ್ಲಿಬ್ಬರು ನೃಪತುಂಗನ ಶಾಲಾ ಸಹಪಾಠಿಗಳೆಂದೂ , ಅವರ ಸಹಾಯದಿಂದಲೇ ನಮಗೇ ಸೀಟು ಸಿಕ್ಕಿದಂದು ನೃಪತುಂಗನಿಂದ ತಿಳಿದು ಬಂದಾಗ ಕೃತಜ್ಞತೆ ಮೂಡಿತ್ತು . ಹಿಂದಿನ ದಿನ night out  ಮಾಡಿದ್ದರಿಂದಲೇ ಏನೋ , ಎಂದೂ ರೈಲಿನಲ್ಲಿ ನಿದ್ದೆ ಮಾಡದ ನನಗೂ ಸ್ವಲ್ಪ ಕಣ್ಣು ಮುಚ್ಚಿ ಬಂದಂತಾಗುತ್ತಿತ್ತು.ಹೀಗೆ ತೂಕಡಿಸುತ್ತಿರುವಾಗ ಕಾಲ ಮೇಲೆ ಏನೋ ಯಮಭಾರದಂತದ್ದು ಬಿದ್ದಂತಾಯ್ತು. ಕಣ್ಣುಜ್ಜಿ ನೋಡಿದರೆ ಎದುರು ಬದಿಯಲ್ಲಿ ಕುಳಿತಿದ್ದ ಹುಡುಗರಲ್ಲಿ ಒಬ್ಬ ಕೆಳಗೆ ಬಿದ್ದುಕೊಂಡಿದ್ದ. ನನ್ನ ಕಾಲಗಂಟಿನ ಮೇಲೆ ಬಿದ್ದದ್ದು ಅವನ ತಲೆ ಎಂದು ತಿಳಿದು ಭಯಂಕರ ಸಿಟ್ಟು ಬಂತು.
"ರೀ , ಮಿಸ್ಟರ್, ವಿದ್ಯಾವಂತರ ತರಹ ಕಾಣ್ತೀರಾ, ಆದರೂ ಹೀಗಡ್ತೀರಾ, ಹೆಂಗಸರ ಜೊತೆ ಹೇಗೆ behave ಮಾಡಬೇಕು ಅಂತ ಗೊತ್ತಗಲ್ವಾ, ಛೀ........ " ಇನ್ನೂ ಏನೇನೋ ಬೈದುಬಿಡುತ್ತಿದ್ದೆನೇನೋ, ನೃಪತುಂಗ ತಡೆಯದೇ ಹೋಗಿದ್ದರೆ , ಕೆಳಗೆ ಬಿದ್ದಾತನ ಜೀವವಿಲ್ಲದ ಒಂದು ಕಾಲನ್ನು ನೋಡದೇ ಇದ್ದಿದ್ದರೆ. ಒಂದು ಕಾಲಿನ ಮೊಣಕಾಲಿನ ಕೆಳಗಿನ ಭಾಗ ಜೀವವನ್ನೇ ಕಳೆದುಕೊಂಡಿತ್ತು. . ಪಾಪ ಎನ್ನಿಸಿತಾದರೂ "sorry" ಎಂದು ಕೇಳಲು ಅಹಂ ಅಡ್ಡ ಬಂದು ಸುಮ್ಮನಾಗಿ , ಸರಿದು ಕಿಟಕಿಯಾಚೆಗಿನ ಕತ್ತಲನ್ನು ದಿಟ್ಟಿಸುತ್ತಾ ಕುಳಿತೆ.
ಹಾಗೇ ಕುಳಿತವಳಿಗೆ ಬೆಳಿಗ್ಗೆ ನೃಪತುಂಗ ಹುಬ್ಬಳ್ಳಿಯಲ್ಲಿ ಇಳಿಯುವ ಮೊದಲು ಎಬ್ಬಿಸಿದಾಗಲೇ ಎಚ್ಚರವಾಗಿದ್ದು. ನೃಪತುಂಗನಿಗೆ bye  ಮಾಡಿ ನನ್ನ ಸೀಟಿಗೆ ಬಂದು ಕೂರುವುದರೊಳಗೆ ಅವನದ್ದೇ ಫೊನು " ಏ ಅನಾಮಿಕಾ , ನಾನು ರೈಲಿನಲ್ಲೇ ಒಂದು ಬ್ಯಾಗ್ ಬಿಟ್ಟೆ , ಕಪ್ಪು ಬಣ್ಣದ್ದು . ಒಂದು ಸಲ ನೋಡಿಬಿಡು . " ಹೌದು , ನನ್ನ ಸೀಟಿನ ಮುಂದೇ ಇತ್ತು , ಅದನ್ನು ತೆಗೆದು ನನ್ನ ಸೀಟಿನ ಕೆಳಗಿದ್ದ ನನ್ನ ಲಗ್ಗೇಜಿನ ಜೊತೆ ಸೇರಿಸಿಟ್ಟೆ. ಅಕ್ಕ ಪಕ್ಕ , ಎದುರಿಗಿದ್ದ ಹುಡುಗರೆಲ್ಲಾ ಹುಬ್ಬಳ್ಳಿಯಲ್ಲಿಯೇ ಇಳಿದಿದ್ದರು. ಸ್ವಲ್ಪ ಹೊತ್ತಿಗೇ ಪಕ್ಕದ ಬೋಗಿಯಿಂದ ಮತ್ತೊಬ್ಬ ಬಂದು ಒಂದು ಕಪ್ಪು ಬ್ಯಾಗ್ ನ್ನು ಹುಡುಕತೊಡಗಿದಾಗ ನನಗಾಶ್ಚರ್ಯ, ಅವನನ್ನುಕೇಳಿಯೇ ಬಿಟ್ಟೆ .
" ನೀವು ಹುಡುಕುತ್ತಿರುವ ಬ್ಯಾಗ್ ನೃಪತುಂಗ ನದ್ದೇ? "
" ಅಲ್ಲ, ನನ್ನ ಫ್ರೆಂಡ್ ಪ್ರಭಂಜನನದ್ದು . wildcraft ಬ್ಯಾಗ್. ಅವನು ಹುಬ್ಬಳ್ಳಿಯಲ್ಲಿ ಇಳಿದುಕೊಂಡ. ನಾನು ಬೆಳಗಾವಿಗೆ ಹೋಗುವವನಿದ್ದುದರಿಂದ ಹುಡುಕುತ್ತೇನೆಎಂದು ಒಪ್ಪಿಕೊಂಡೆ" ಎಂದು ಹೇಳಿ, " ನೀವೇನಾದರೂ ನೋಡಿದಿರಾ ?" ಎಂದು ಕೇಳಿದ .
ಸುತ್ತ ಮುತ್ತ ಕಣ್ಣು ಹಾಯಿಸಿ ಎಲ್ಲೂ ಕಾಣದಾದಾಗ " ನೋಡಿಲ್ಲವಲ್ಲಾ" ಎಂದೆ.
ಬೆಳಗಾವಿಯಲ್ಲಿ ರೈಲು ನಿತ್ತು ಇನ್ನೇನು ಇಳಿಯಬೇಕು ಎನ್ನುವಷ್ಟರ ಹೊತ್ತಿಗೆ ನೃಪತುಂಗನ ಮತ್ತೊಂದು ಕಾಲ್ " ಸಿಕ್ತೇನೇ ನನ್ನ ಬ್ಯಾಗ್ , diesel  ಅಂತ ಬರಕಂಡಿದೆ ನೋಡು,...." ಏನೇನೋ ಹೇಳುತ್ತಿದ್ದ . ನಾನು ತೆಗೆದಿರಿಸಿಕೊಂಡಿದ್ದನ್ನು ನೋಡಿದರೆ wildcraft , ಆದ ಪ್ರಮಾದದ ಅರಿವಾಯ್ತು, ಆ ಹುಡುಗ ಕೇಳಿದಾಗ ಒಂದು ಸಲ ನೋಡುವ ವ್ಯವಧಾನವನ್ನು ತೋರದೇ " ನೋಡಿಲ್ಲ" ಎಂದ ತಪ್ಪಿಗೆ ಮತ್ತೊಂದು ಬ್ಯಾಗನ್ನೂ ಹೊತ್ತು ಮನೆಗೆ ಬಂದೆ.
ಮನೆಗೆ ಬಂದರೆ ರೈಲಿನ ಕಥೆಯ ಸುಳಿವೂ ನೆನಪಿರದ ಹಾಗೆ ಅಪ್ಪ ಅಮ್ಮನನ್ನು ಭೇಟಿಯಾದ ಸಂಭ್ರಮದಲ್ಲಿ ಮುಳುಗಿದೆ. ಮಧ್ಯಾಹ್ನ ಊಟವಾದ ನಂತರ ಲಘು ನಿದ್ದೆ ಮಾಡಲು ಹೋದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಅದೇ wildcraft ಬ್ಯಾಗ್ ತನ್ನ ಅಸ್ತಿತ್ವವನ್ನು ಜ್ಞಾಪಿಸಿತು.ತೆಗೆಯಲೇ , ಬೇಡವೇ ಎಂಬ ಗೊಂದಲದಲ್ಲಿಯೇ ಬ್ಯಾಗ್ ನ್ನು ತೆರೆದೆ. ಒಂದು ಟವೆಲ್, ಒಂದು shaving set , ಐದಾರು english ಪುಸ್ತಕಗಳು , ಯಾವುವೂ ನನಗೆ ಆ ಬ್ಯಾಗ್ ನ್ನು ಹಿಂತಿರುಗಿಸುವಲ್ಲಿ ಸಹಾಯ ಮಾಡುವಂತಹ ಸಾಮಾಗ್ರಿಗಳಿರಲಿಲ್ಲ . ಮತ್ತೆ ನೋಡಿದರೆ ಆ ಪುಸ್ತಕಗಳ ಅಡಿಯಲ್ಲಿ ನಲುಗಿ ಹೋಗಿದ್ದರೂ ತನ್ನದೇ ಅಸ್ತಿತ್ವ ಕಾಯ್ದುಕೊಂಡಿರುವಂತೆ ಒಂದು ಡೈರಿ ಇತ್ತು . ಅದೇ ಈ ಕಥೆಯ ಜೀವಾಳ.
ಇನ್ನೊಬ್ಬರ ಡೈರಿಯನ್ನು ಓದಬಾರದೆಂಬ ಪ್ರಜ್ಞೆಯನ್ನು ಮೀರಿ ಕುತೂಹಲ ಬೆಳೆದು ನಿಂತಾಗ , ಆ ಪ್ರಜ್ಞೆಯ ಕೆನ್ನೆಗೆ ಹೊಡೆಯುವಂತೆ ಅವನ ಡೈರಿಯ ಮೊದಲ ಪುಟದಲ್ಲೇ " ಇದು ಒಬ್ಬ ಭಾವುಕನ ಖಾಸಗಿ ಪ್ರದೇಶ , ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ. " ಎಂದು ಬರೆದಿತ್ತು.ಮತ್ತೆ ಇದನ್ನು ಓದುವುದರಿಂದ ಯಾವ ರೀತಿಯಿಂದಲಾದರೂ ಬ್ಯಾಗ್ ನ್ನು ಹಿಂತಿರುಗಿಸಲು ಸಹಾಯ ಆಗಬಹುದೆಂದು ಸುಳ್ಳು ಸುಳ್ಳೇ ನನಗೆ ನಾನೇ ಕಾರಣ  ಕೊಟ್ಟುಕೊಂಡು ,ಓದಲಾರಂಭಿಸಿದೆ.   ಹೆಸರು ಮತ್ತು USN ಬಿಟ್ಟರೆ ಮತ್ತಾವ ವೈಯಕ್ತಿಕ ಮಾಹಿತಿಯೂ ಮೊದಲ ಪುಟಗಳಲ್ಲಿ ಬರೆದಿರಲಿಲ್ಲ . ( ನಮ್ಮದೇ ಕಾಲೇಜು , ೪ನೇ ಸೆಮೆಸ್ಟೆರ್ ಎಂದು ತಿಳಿದಿದ್ದು USNನಿಂದ ) ಬೇರೆ ದಾರಿಯಿಲ್ಲದೇ ಮಾರನೆಯೆ ದಿನ ಕಾಲೇಜಿಗೆ ಫೊನ್ ಮಾಡಿ ಕೇಳುವುದೆಂದು ನಿರ್ಧರಿಸಿ ಡೈರಿಯನ್ನು ಮಡಚಿಟ್ಟೆನಾದರೂ ಮತ್ತೆ ಕದ್ದು ಓದುವ ಮನಸಾಗಿ ತೆಗೆದು ಓದಲು ಕುಳಿತೆ.
ಡೈರಿ ಪ್ರಾರಂಭವಾಗುವುದು ೧-೬-೨೦೦೯ರಿಂದ , ಅಂದರೆ ಪ್ರಭಂಜನರ ಬ್ಯಾಚಿನ ಮೊದಲ ಬೇಸಿಗೆ ರಜೆ ಸುರುವಾದಂದಿನಿಂದ. " ಇದೇನೂ, ಈ ಡೈರಿ ಬರೆಯುವುದೇನೂ  ಎಂದು ಇಲ್ಲದ ಬಯಕೆ ಮೂಡಿ , ಆ ಕ್ಷಣದಲ್ಲಿ ದಾಖಲಿಸಲು ಆರಂಭಿಸಿದ ಹವ್ಯಾಸವಲ್ಲ , ರೂಢಿಸಿಕೊಳ್ಳಬೇಕೆಂದು ಬಹಳೇ ಪ್ರಯತ್ನ ಪಟ್ಟು , ಹಠ ಕಟ್ಟಿ ಕುಳಿತು ಸುರು ಮಾಡಿದ ಅಭ್ಯಾಸ. ಸುಳ್ಳು ಹೇಳುವುದು ಎಷ್ಟು ತಪ್ಪೋ , ಸತ್ಯವನ್ನು ಪೂರ್ತಿಯಾಗಿ ಹೇಳದೇ ಹೋಗುವುದೂ ಅಷ್ಟೇ ಪಾಪ, "ಅಶ್ವತ್ಥಾಮೋ ಹತಃ ಕುಂಜರಃ" ಎಂದ ಹಾಗೆ . ಸಾಮಾನ್ಯ ಮಾತ್ರದವರು ಸತ್ಯಕ್ಕೆ , ಪ್ರಾಮಾಣಿಕತೆಗೆ ತಪ್ಪಿ ನಡೆಯಬಾರದೆಂದರೆ ಹೆಜ್ಜೆ ಹೆಜ್ಜೆಗೂ ನಮ್ಮನ್ನು ತಿದ್ದುವ ಒಂದು ಶಕ್ತಿ ಬೇಕು , ಒಂದು ಸಾಕ್ಷಿ ಬೇಕು, ನಾನು  ಮನೆಯಲ್ಲಿದ್ದಾಗ ಅಕ್ಕ  ಉತ್ಪಲಾ ಇದ್ದ ಹಾಗೆ. ಆಸ್ತಿಕರಿಗೆ ದೇವರು ನೋಡುತ್ತಾನೆಂಬ ಹೆದರಿಕೆ ಇರುವ ಹಾಗೆ. ಅದೇ ಕಾರಣಕ್ಕೆ ನಾನು ಡೈರಿ ಬರೆಯಲಾರಂಭಿಸಿದ್ದು " ಎಂದು ಕಾರಣ ಕೊಟ್ಟುಕೊಳ್ಳುತ್ತಾನೆ.
                                                                                                                             ಮುಂದುವರಿಯುವುದು ...

Sunday, 31 July 2011

ನೋವು


ನೋವು ಸರ್ವಾಂತರ್ಯಾಮಿ. ಬುದ್ಧ ಹೇಳಿದ ಹಾಗೇ ಸಾವಿಲ್ಲದ ಮನೆ ಇರುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನೋವಿಲ್ಲದ ಮನವೂ ಅಲಭ್ಯ. ಅಂತಹ ನೋವನ್ನು ಉಂಡ/ಉಣ್ಣುತ್ತಿರುವ  ಎಷ್ಟೋ  ಮನಗಳಿಗೆ ಈ ಕವನದ ಅರ್ಪಣೆ. 

ಎಲ್ಲೆಂದರಲ್ಲಂತೆ, ಎಲ್ಲೆ ಇರದಂತೆ ಹಬ್ಬಿಕೊಂಡಿದೆ ನೋವು
ಸೂರ್ಯರಶ್ಮಿ ಕಾಣದಲ್ಲೂ, ಕವಿಯ ಪ್ರಜ್ಞೆ ನೋಡದಲ್ಲೂ
ವಾಯುವೇ ಉಸಿರುಗಟ್ಟುವಲ್ಲೂ, ನೀರಪಸೆ ಮುಟ್ಟದಲ್ಲೂ
ಭೌತ ಮಾತ್ರಕೆ ವ್ಯಾಪ್ತಿಮಿತಿಯ ಹಂಗಲ್ಲದೇ ಭಾವಕುಂಟೇ

ಊರ ಹೊರಗಿನ ಹೆಬ್ಬಲಸಿನ ಮರಕೆ ಗೊತ್ತು; ಭಗ್ನಪ್ರೇಮದ ನೋವು
ಗೆಳೆಯರಾಗೇ ಉಳಿದು ಹೋಗುವ ಭಯದಿ ಪ್ರೇಮ ನಿವೇದಿಸಿ
ಒಂದು ಉತ್ತರವೂ ಸಿಗದೇ ನರಳಿ, ಇದ್ದ ಸ್ನೇಹವೂ ಮರೆಯಾಗಿ
ತಿರುತಿರುಗಿ ಬಿಕ್ಕಿದ ಹುಡುಗನೊಬ್ಬನ ಮನದಾಳದ ವೇದನೆ||೧||  

ಹೆರಿಗೆ ಆಸ್ಪತ್ರೆಯ ಹಾಸಿಗೆಗೆ ಗೊತ್ತು; ಜೀವಸೃಷ್ಟಿಯ ಕಾರ್ಪಣ್ಯ
ಮೂಲ ತಿಳಿಯದ ನೋವೇ, ಭಾವವಾಗಿ ಹೊಸ ಜೀವಕೆ ತಾವಾಗಿ
ಬರಿಮಾಂಸ ಮುದ್ದೆಯೊಂದು ತಾಯಿಯೊಬ್ಬಳಿಗೆ ಜನ್ಮ ನೀಡಿತೆಂದರೂ
ಅಮ್ಮ ಮಗುವನ್ನು ಜೋಡಿಸಿತೆಂದರೂ ಪಟ್ಟ ನೋವಿಗೆ ಸಮವೇ||೨||

ಕಟುಕನ ಮನೆಯ ಗೂಟಕೆ ಗೊತ್ತು; ಪ್ರಾಣಹರಣವ ನೋಡುವ ವ್ಯಥೆ
ಗೊತ್ತಿದ್ದರೂ ಹೇಳಲಾಗದ, ಹೇಳಿದರೂ ಉಳಿಯದ ಅಸಹಾಯಕತೆ
ರಕ್ತದೋಕುಳಿಗಾ ಸಾಕ್ಷಿಯಾಗಿ ಮೂಕವಾಗಿ, ಕಣ್ಣಮುಚ್ಚಿ, ಹಲ್ಲು ಕಚ್ಚಿ
ಯಾವ ನೋವು ಹೆಚ್ಚೋ, ಯಾರ ಭಾವ ಹೆಚ್ಚೋ ದೇವಬಲ್ಲನು ||೩||

Thursday, 28 July 2011

ಕರೆ


೩೧-೦೭-೨೦೧೧ದ ಕರ್ಮವೀರದಲ್ಲಿ ಪ್ರಕಟವಾದ ನನ್ನ ಸಣ್ಣಕಥೆಯಿದು .ಒಂದೂವರೆ ವರ್ಷದ ಕೆಳಗೆ ಬರೆದಿದ್ದ ಕಥೆ ಈಗ ಪ್ರಕಟವಾದದ್ದು ತಡವೆನಿಸಿದರೂ ನೀಡಿದ ಸಂತೋಷ ಅಮಿತ.
...
          ಬೆಂಗಳೂರಿನ ಮಳೆಗೂ, ಪಂಚಾಂಗದ ತಿಂಗಳುಗಳ ಲೆಕ್ಕಾಚಾರಕ್ಕೂ ಯಾವುದೇ ಸಬಂಧವಿಲ್ಲ ಎಂಬ ತನ್ನದೇ ಸಿದ್ಧಾಂತವನ್ನು ಉದಾಹರಣೆಯೊಂದಿಗೆ ಪ್ರಮಾಣೀಕರಿಸುವ ಉತ್ಸಾಹದಲ್ಲಿದ್ದಂತೆ ಜನವರಿ ಎಂಬ ಚಳಿಗಾಲ-ಬೇಸಿಗೆಕಾಲಗಳ ಸಂಧಿಕಾಲದಲ್ಲಿ ಮಳೆ ಧೋssss ಎಂದು ಸುರಿಯುತ್ತಿತ್ತು. ಅಹುದು, ಅಹುದು, ಎಂದು ತಲೆದೂಗುವ ಭಟ್ಟಂಗಿಗಳಂತೆ, ಬೆಂಗಳೂರೆಂಬ ಉದ್ಯಾನನಗರಿಯಲ್ಲಿ ಅಳಿಯದೇ ಉಳಿದಿದ್ದ ಕೆಲವೇ ಕೆಲವು ಬೀದಿ ಬದಿಯ ಮರಗಳು ಸಾಧ್ಯವಿರುವಷ್ಟರ ಮಟ್ಟಿಗೆ ತಮ್ಮ ರೆಂಬೆಗಳನ್ನು ಅಲ್ಲಾಡಿಸುತ್ತಿದ್ದವು. ನಾಳಿನ ಕ್ರಿಕೆಟ್ ಪಂದ್ಯಕ್ಕೆ ಈಗಲೇ ಹೊನಲು-ಬೆಳಕಿನ ವ್ಯವಸ್ಥೆ ಸಿದ್ಧವಿದೆ ಎಂಬಂತೆ ಗುಡುಗು, ಸಿಡಿಲು, ಮಿಂಚುಗಳು ಮೇಳೈಸಿದ್ದವು.
ಅಂದು ಶುಕ್ರವಾರ ಬೇರೆ. ನಾಳೆ ಚಿನ್ನಸ್ವಾಮಿ ಕ್ರೀಡಂಗಂಣದಲ್ಲಿ ನಡೆಯುವ ಪಂದ್ಯಕ್ಕೆ, ತನ್ಮೂಲಕ ವಾರಾಂತ್ಯದ ರಜಕ್ಕೆ ಎಲ್ಲಿ ಈ ಮಳೆ ತಣ್ಣೀರು ಎರಚಿಬಿಡುತ್ತದೆಯೇನೋ ಎಂದು ಶಪಿಸುತ್ತಾ, ಸಾಧ್ಯವಾದಷ್ಟೂ ನೆನೆಯದಂತೆ ಜಯನಗರ ೩ನೇ ಬ್ಲಾಕಿನ ಮುನೆಯತ್ತ ವಿಶ್ವ(ವಿಶ್ವಂಭರ) ಸಾಗುತ್ತಿದ್ದ. ಕೇಂದ್ರಗ್ರಂಥಾಲಯದ ಬಳಿ ಇಳಿದು ತಲೆ ಮತ್ತು ಲ್ಯಾಪ್ ಟಾಪನ್ನಾದರೂಮಳೆಯಿಂದ ರಕ್ಷಿಸಿಕೊಳ್ಳುವ ಹಂಬಲದಲ್ಲಿ ಕೊಡೆಯನ್ನು ಗುರಾಣಿಯಂತೆ ಹಿಡಿದು ಸಾಗುತ್ತಿದ್ದ, ಎದುರಿನಿಂದ ಬರುತ್ತಿದ್ದ ರಿಕ್ಷಾ ಕರ್ಕಶವಾಗಿ ಹಾರ್ನ್ ಮಾಡುವವರೆಗೂ. ರಿಕ್ಷಾದ ವೇಗಕ್ಕೂ ಚಾಲಕನ ಆವೇಗಕ್ಕೂಹೆದರಿ ಸಾಧ್ಯವಿರುವಷ್ಟರ ಮಟ್ಟಿಗೆ ಪಕ್ಕಕ್ಕೆ ಸರಿದು ನಿಂತಾಗ ಕಂಡ ದೃಶ್ಯ ನಿಜಕ್ಕೂ ವಿಚಿತ್ರವಾಗಿತ್ತು.
ಸುಮಾರು ಐವತ್ತು ಪ್ರಾಯದ, ದಢೂತಿ ಹೊಟ್ಟೆಯ , ವೀರಪ್ಪನ್ ಮೀಸೆಯ, ಹಳ್ಳಿಹೈದನಂತಿದ್ದ ಆಸಾಮಿಯೊಬ್ಬ, ತನ್ನೊಂದಿಗೆ ಎಮ್ಮೆಯೊಂದನ್ನು ಹಾಗೇ ನಿಲ್ಲಿಸಿಕೊಂಡಿದ್ದ.ಮನಸ್ಸು ಏನೋ ಕೆಡುಕನ್ನು ಯೋಚಿಸಿತಾದರೂ ಏನಿರಬಹುದೆಂಬುದು ಸ್ಪಷ್ಟವಾಗಿ ತಿಳಿಯಲಿಲ್ಲ.ಛೇ, ಕಪ್ಪಾಗಿರುವನೆಂದೇ ನಾನು ಹೀಗೆಲ್ಲಾ ಸಂಶಯ ಪಡುತ್ತಿರುವುದು ಎನ್ನಿಸಿ, ಮನಸ್ಸಿಗೆ ಬೈದುಕೊಂಡು ಸುಮ್ಮನಾಗಿಸಿದೆನಾದರೂ ಒಳಮನಸ್ಸು ಅಷ್ಟೇ ಅಲ್ಲ ಎಂದು ಹಠ ಹಿಡಿದು ಕುಳಿತಂತಾಯ್ತು. ಟ್ರಾನ್ಸ್ ಫಾರ್ಮರ್ ಕೆಳಗೆ ನಿತ್ತುಕೊಂಡ ಈ ಪುಣ್ಯಾತ್ಮನ ಅಸ್ತಿತ್ವ ಯಾಕೋ ವಿಚಿತ್ರವೂ, ಕೇಡಿನದಾಗಿಯೂ ಕಂಡುಬಂತು. ದಿನಪತ್ರಿಕೆಗಳಲ್ಲಿ ಬರುತ್ತಿದ್ದ ’ಸಿಡಿಲು ಬಡಿದು ಸಾವು’ಗಳಂತಹ ಶೀರ್ಷಿಕೆಗಳ ಪ್ರಭಾವವೋ, ಸಾಮಾನ್ಯ ಪ್ರಜ್ಞೆಯೋ, ಮತ್ತೊಬ್ಬ ಮನುಷ್ಯನ ಬಗೆಗಿನ ಕನಿಷ್ಟ ಮಾನವೀಯತೆಯೋ ಯಾವುದೋ ಒಂದು ವಿಶ್ವನಿಗೆ ಸ್ಪೂರ್ತಿ ನೀಡಿ, ಆ ದೃಶ್ಯವನ್ನು ಕಂಡೂ ಕಾಣದಂತೆ ಮುಂದಕ್ಕೆ ಹೋಗಲು ಮನಸ್ಸು ಬಾರದೇ, ವಿಶ್ವ ಕೂಗಿ ಹೇಳಿದ್ದ ಆ ವ್ಯಕ್ತಿಗೆ,
"ಏಯ್ ಹಲ್ಲೋ, ಈ ರೀತಿ ಮಳೆ ಬರ‍್ತಾ ಇದೆ. ಇಷ್ಟು ಗುಡುಗು, ಸಿಡಿಲು ಬೇರೆ ಇದೆ. ಅಂತಾದ್ರಲ್ಲಿ ಬೇರೆ ಎಲ್ಲೂ ಜಾಗ ಸಿಗಲಿಲ್ವಾ ನಿನಗೆ? ಈ ಟ್ರಾನ್ಸ್ ಫಾರ್ಮರ್ ಕೆಳಗೆ ನಿಂತಿದ್ದೀಯಲ್ಲಾ, ಬೇರೆಲ್ಲಾದರೂ ಹೋಗೋ, ಅದನ್ನು ಕರೆದುಕೊಂಡು" ಎಂದ ಆ ವ್ಯಕ್ತಿಯ ಎಮ್ಮೆಯತ್ತ ಬೆರಳು ತೋರಿಸಿ.
ಆ ಮನುಷ್ಯನಿಗೆ ಅರ್ಥವಾದ ಹಾಗಿರಲಿಲ್ಲ. ಭಾಷೆಯೇ ಅರ್ಥವಾಗಲಿಲ್ಲವೋ ಅಥವಾ ಹೇಳಿದ್ದೇ ಕೇಳಲಿಲ್ಲವೋ ಸುಮ್ಮನೇ ಬೆಪ್ಪನಂತೆ ನಿಂತಿದ್ದ. ಮತ್ತೆ ಐದು ನಿಮಿಷದ ಒಳಗೆ ವಿಶ್ವ ಎಂಟು ಸಲ ಕೂಗಿಯಾಗಿತ್ತು. ಮೇಲೆ ಹೇಳಿದ್ದ ವಾಕ್ಯವನ್ನೇ ಸ್ವಲ್ಪ ತಿರುಚಿ ಹೇಳಿಯೂ ಪ್ರಯತ್ನ ಮಾಡಿದ್ದ.ತನಗೆ ಬರುತ್ತಿದ್ದ ಅರೆಬರೆ ತಮಿಳಿನಲ್ಲಿಯೇ ಹೇಳಲೂ ನೋಡಿದ. ಆ ಮನುಷ್ಯ ಕೊನೆಯ ಎರಡು ಬಾರಿ ಹೇಳಿದ್ದನ್ನು ಸ್ವಲ್ಪ ಕೇಳಿಸಿಕೊಂಡಂತೆ ಮಾಡಿದನಾದರೂ ಯಾವುದೇ ಪ್ರತಿಕ್ರೀಯೆಯನ್ನು ಕೊಡಲಿಲ್ಲ.ಇದೇ ಕೊನೆಯ ಬಾರಿ ಎಂದುಕೊಂಡು ಒಂಬತ್ತನೆಯ ಬಾರಿ ಕೂಗಲು ಬಾಯಿ ತೆರೆಯುವ ಮೊದಲು ವಿಶ್ವನಿಗೆ ಹೊಳೆದಿತ್ತು, ತಮ್ಮಿಬ್ಬರ ಮಧ್ಯೆ ಏನಿಲ್ಲವೆಂದರೂ ೧೦ಮೀಟರ್ ಅಂತರವಿತ್ತೆಂದು. ಈ ದೂರದ ಜೊತೆಗೆ ಮಳೆಯ ಆರ್ಭಟವೂ ಸೇರಿ ಅವನಿಗೆ ಕೇಳಿರದೇ ಹೋಗಿರಲು ಸಾಧ್ಯವಿದೆ ಎಂದೆಣಿಸಿ ಅವನ ಬಳಿಗೇ ಹೋಗಿ ಕೂಗಿ ಇಂತೆಂದ.
"ಕಿವಿ ಕೇಳಲ್ವಾ ನಿಂಗೆ, ಅಷ್ಟು ಬಾರಿ ಕೂಗಿದ್ರೂ ಕೇಳಿಸಲಿಲ್ವಾ, ಟ್ರಾನ್ಸ್ ಫ಼ಾರ್ಮರ್ ಕೆಳಗೇ ನಿಂತಿದ್ದಿಯಲ್ಲಾ, ಆಚೆ .........." ವಾಕ್ಯ ಪೂರ್ತಿಯಾಗುವ ಮೊದಲೇ ಕಣ್ನು ಕೊರೈಸುವ ಮಿಂಚಿನೊಡಗೂಡಿದ ಸಿಡಿಲು ವಿಶ್ವ ನಿಂತಿದ್ದ ಜಾಗಕ್ಕೆ ಅದೇ ಟ್ರಾನ್ಸ್ ಫ಼ಾರ್ಮರ್ ನ ಪಕ್ಕಕ್ಕೆ ಹೊಡೆದಿತ್ತು. ವಿಶ್ವ ಅಷ್ಟಕ್ಕೇ ನಿಲ್ಲಿಸಿದ್ದ ತನ್ನ ಕೊನೆಯ ಮಾತನ್ನು ಪೂರ್ತಿ ಮಾಡುವ ಅವಕಾಶವಿಲ್ಲದೇ.
...
ಕೊನೆಗೂ ’ಆತ’ ತನ್ನ ಟ್ರಾನ್ಸ್ ಫ಼ಾರ್ಮರ್ ನ ಪಕ್ಕದ ಜಾಗ ಖಾಲಿ ಮಾಡಿ ತನ್ನ ಎಮ್ಮೆಯ ಮೇಲೇರಿ ಹೊರಟ, ವಿಶ್ವನ ಪಾಪ ಪುಣ್ಯಗಳನ್ನು ಲೆಕ್ಕ ಹಾಕುತ್ತಾ, ಮತ್ತಾರಿಗೋ ’ಕರೆ’ ಕಳಿಸುತ್ತಾ.
...

Wednesday, 27 July 2011

ಕರೆ

ನನ್ನ ’ಕರೆ’ ಎಂಬ ಸಣ್ಣಕಥೆ ಕರ್ಮವೀರದಲ್ಲಿ ಪ್ರಕಟವಾಗಿದೆ ಎಂಬಲ್ಲಿಗೆ ನನ್ನ ಬರಹ ಕೇವಲ ನನ್ನ ಬ್ಲಾಗಿಗೆ ಮಾತ್ರ ಸೀಮಿತವಲ್ಲ ಎಂದು ನಾನು ಖುಷಿ ಪಡುವಂತಾಯ್ತು. ಮೊದಲ ಬಾರಿ ಪ್ರಕಟವಾದ ಲೇಖನ ಕೊಡುವ ಸಂತೋಷ ಇದೆಯಲ್ಲಾ ಅದು ನಿಜವಾಗಿಯೂ ಸಾಟಿಯಿಲ್ಲದ್ದು. ಕರ್ಮವೀರದ link ಸಿಗದ ಕಾರಣ ಓದ ಬಯಸುವವರು ಕೊಳ್ಳಲೇಬೇಕಾಗಬಹುದು. :P

Sunday, 24 July 2011

ನಾವೇಕೆ ದೇವರನ್ನು ನಂಬಬೇಕು?ದೇವರು ನಿಜವಾಗಲೂ ಇದ್ದಾನೆಯೇ?
ಈ ಪ್ರಶ್ನೆ ಇಂದು ನಿನ್ನೆಯದಲ್ಲ, ನನಗೆ ಬುದ್ಧಿ ಬಂತು ಎಂದು ನಾನು ತಿಳಿದುಕೊಂಡಾಗಿನಿಂದ ಎಷ್ಟು ಸಹಸ್ರ ಕೋಟಿ ಸಲ ನನಗೆ ನಾನೇ ಇದನ್ನು ಕೇಳಿಕೊಂಡಿದ್ದೇನೋ? ಅಷ್ಟೂ ಸಲವೂ ಒಂದೊಂದು ಉತ್ತರ ಸಿಕ್ಕಿದೆಯಾದರೂ ಪ್ರತೀ ಸಲ ಅದು ಹಿಂದಿನ ಸಲಕ್ಕಿಂತ ವಿಭಿನ್ನವಾಗಿ ಬಂದಿದ್ದು ಒಂದು ತಮಾಷೆಯ ವಿಷಯ.ಮೊನ್ನೆ ಮತ್ತೊಂದು ಬಾರಿ ಹಳೆಯ ಪ್ರಶ್ನೆ ಹೊಸ ರೂಪದಲ್ಲಿ ಹೆಡೆಯೆತ್ತಿ ಎದ್ದು ನಿಂತಾಗ, ನಾನು ಆಸ್ತಿಕನೇ ನಾಸ್ತಿಕನೇ ಎಂಬ ಪ್ರಶ್ನೆ ಮತ್ತಿಷ್ಟು ದಟ್ಟವಾಯಿತು. ಆಸ್ತಿಕನೊಬ್ಬನು ದೇವರನ್ನು ತಾನೇ ಕಂಡಿರುವ ಹಾಗೆ ಮಾತನಾಡುವಾಗ ಹುಟ್ಟು ನಾಸ್ತಿಕನಂತಾಡುವ ನಾನೇ, ಚಾರ್ವಾಕನ ದತ್ತು ಮಕ್ಕಳ ತರಹ ಮಾತನಾಡುವವರ ಜೊತೆಗೆ ಪಕ್ಕ ದೈವಭಕ್ತನ ತರಹ ಆಡುತ್ತೇನೆ.ಅದಿರಲಿ ಬಿಡಿ, ನನ್ನ ಬರಹವನ್ನು ಕೇವಲ ತಲೆಬರಹದ ವ್ಯಾಪ್ತಿಗಷ್ಟೇ ಮಿತಿಗೊಳಿಸಿ, ದೇವರು ಇರುತ್ತಾನೆ ಎಂದೇ ಭಾವಿಸಿ/ನಂಬಿಕೊಂಡು, ನಾವು ಶ್ರೀಸಾಮಾನ್ಯರೆನಿಸಿಕೊಂಡವರು ಏಕಾದರೂ ದೇವರನ್ನು ನಂಬಬೇಕು ಎಂಬುದಷ್ಟಕ್ಕೇ ಪ್ರಸ್ತುತದ ಪ್ರಶ್ನೆಯನ್ನು ಸೀಮಿತಗೊಳಿಸಿಕೊಂಡು ಮುಂದುವರಿಯುತ್ತಿದ್ದೇನೆ.
’ನಾವೇಕೆ ದೇವರನ್ನು ನಂಬಬೇಕು?’
ಮೊದಲನೆಯದಾಗಿ ಮತ್ತೇನೂ ಅಲ್ಲದೇ ಹೋದರೂ ಒಂದು ’ನಂಬಿಕೆ’ಯ ಕಾರಣಕ್ಕಾಗಿಯಾದರೂ ದೇವರು ಎಂಬ ಒಬ್ಬ ವ್ಯಕ್ತಿ ಅಥವಾ ಒಂದು ವಿಚಾರ ಬೇಕು. ಹೌದು, ನಂಬಿಕೆ ಏನನ್ನಾದರೂ ಮಾಡಬಲ್ಲುದು. ಮೂಕನನ್ನು ವಾಚಾಳಿಯಾಗಿಸಬಲ್ಲದು, ಕುರುಡನು ಗಿರಿಯನ್ನು ಹತ್ತುವಂತೆ ಮಾಡಬಲ್ಲುದು, ಕೊರಡ ಕೊನರಿಸಬಲ್ಲುದು, ಶಿಲೆಯನ್ನು ಅಹಲ್ಯೆಯಾಗಿಸಬಲ್ಲುದು.  ನಂಬಿಕೆ ಎಂಬುದೇ ಒಂದು ಶಕ್ತಿ, ಜೀವನದಲ್ಲಿ ನಾವು ಮಾಡಿರುವ ಒಳ್ಳೆಯದು ಕೆಟ್ಟದ್ದನ್ನೆಲ್ಲ ಲೆಕ್ಕ ಇಟ್ಟು ದೇವರು ಫಲ ಕೊಡುತ್ತಾನೆ ಎಂಬುದು ಒಂದು ನಂಬಿಕೆ. ನನ್ನ ಯಾವ ಗೆಳೆಯರೂ ನನ್ನನ್ನು ಅರ್ಥ ಮಾಡಿಕೊಳ್ಳಲಾರರು ಎಂದುಕೊಳ್ಳುವಾಗ ದೇವರಿಗೆ ಸಿಗುವ ವಿನಾಯತಿ ಅದೇ ನಂಬಿಕೆಯ ಮತ್ತೊಂದು ರೂಪ, ಅದು ದೇವರಾಗಿರಬಹುದು, ದೈವವಾಗಿರಬಹುದು. ಒಂದು ಅಮೂರ್ತ ಶಕ್ತಿಯನ್ನು ನಮ್ಮ ಇಂದ್ರಿಯಗಳ ಮಟ್ಟಿಗೆ ಸಾಕ್ಷಾತ್ಕರಿಸಿಕೊಡಲು ಒಂದು ಮೂರ್ತ ಸ್ವರೂಪದ ಅವಶ್ಯಕತೆಯಾಗಿ ದೇವರು ಇದ್ದಾನೆ. ಪರಿಸ್ಥಿತಿ ಕೈ ಮೀರಿ ಹೋದಾಗ, ಈ ಜಗತ್ತಿನ ಯಾವ ಭೌತ ಶಕ್ತಿಯೂ ಇನ್ನು ಸಹಾಯ ಮಾಡಲಾರದು ಎಂದಾಗ ಈ ’ನಂಬಿಕೆ’ ಎಂಬ ಮಾಯಾಶಬ್ದ ನಿಜವಾಗಿಯೂ ಚಮತ್ಕಾರವನ್ನು ಮಾಡಬಲ್ಲುದು. ’ನಾವು ಅತಿಕಷ್ಟದಲ್ಲಿರುವಾಗಲೂ ಯಾವುದೋ ಒಂದು ಶಕ್ತಿ ನಮಗೆ ಸಹಾಯ ಮಾಡಬಲ್ಲುದು’ ಎಂಬ ನಂಬಿಕೆಯಿದೆಯಲ್ಲಾ, ಅದು ನಮ್ಮ ಮಾನಸಿಕ ಸ್ಥೈರ್ಯ ಬಿದ್ದುಹೋಗದಂತೆ ಕಾಪಾಡಿ, ಸದ್ಯದ ತೊಂದರೆಯಿಂದ ಹೊರಬರುವ ಶಕ್ತಿಯನ್ನು ನಮಗೆ ಕೊಡುತ್ತದೆ. ದೇವರನ್ನು ನಂಬಲೇ ಬಾರದೆಂದು ಹಠ ತೊಟ್ಟವರು ಅಥವಾ ನಿಜವಾಗಿಯೂ ಆ ಮಾನಸಿಕ ಸ್ಥೈರ್ಯ ಇರುವವರು ಇದನ್ನು ಅಲ್ಲಗಳೆಯಬಹುದಷ್ಟೇ!
ನನಗೆ ಕಾಣುವ ಎರಡನೆಯ ಕಾರಣ ’ಹೆದರಿಕೆ’. ’ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ’ ಎಂಬ ದೇವರ image ಇದೆಯಲ್ಲಾ, ಅದು ಚಿಕ್ಕ ಮಕ್ಕಳು ಹಠ ಮಾಡುವುದರಿಂದ ಹಿಡಿದು ದೊಡ್ಡವರು ಕಳ್ಳತನ ಮಾಡುವುದರವರೆಗೆ ಬಹಳ ಅನಪೇಕ್ಷಿತ ಕಾರ್ಯಗಳನ್ನು ನಿಲ್ಲಿಸಬಲ್ಲುದು. ನಮಗೇ, ಆರಕ್ಷಕ ವ್ಯವಸ್ಥೆಯ ಹೆದರಿಕೆಯಿಲ್ಲದೇ ಇದ್ದಿದ್ದರೆ ನಾವಿಷ್ಟು ನಾಗರೀಕರ ಹಾಗೆ ಬದುಕುತ್ತಿದ್ದೆವೋ? ನಾವು ಜನಸಾಮಾನ್ಯರು ಶಿಕ್ಷೆಯ ಹೆದರಿಕೆಯಿಲ್ಲದೇ ಹೋದರೆ ತಪ್ಪು ಎನಿಸಿದರೂ ಅದನ್ನು ಮಾಡದೇ ಹೋಗಲಾರೆವು, ಅಲ್ಲವೇ? ಹಾಗೆಯೇ ದೇವರು ಈ ತಪ್ಪು ಮಾಡದಂತೆ ತಡೆಯುವ ಆರಕ್ಷಕ, ಆದರೆ ಅವನ ಶಕ್ತಿ, ವ್ಯಾಪ್ತಿ ದೊಡ್ಡದು. ಎಷ್ಟೋ ಜನರು ನರಕದ ಶಿಕ್ಷೆಗಂಜಿಯೇ ಒಳ್ಳೆಯವರಾಗಿ ಉಳಿದಿದ್ದಾರೆ ಎಂದರೆ ಸ್ವಲ್ಪ ಉತ್ಪ್ರೇಕ್ಷೆಯಾದೀತೇನೋ, ಆದರೆ ಒಂದು ದೃಷ್ಟಿಯಿಂದ ಅದು ನಿಜ. ಮನಸ್ಸಾಕ್ಷಿಯ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದವರಿಗೆ ದೇವರು ಅತ್ಯಗತ್ಯ.
ದೇವರ ಅವಶ್ಯಕತೆ ಮತ್ತೆ ಬರುವುದು ಅಹಂ ಎಂಬ ಒಂದು ಅರಿಷಡ್ವರ್ಗವನ್ನು ಹತ್ತಿಕ್ಕಲು. ನಾವೇ ಸರ್ವೋಚ್ಚರು ಎಂದು ಭಾವಿಸಿ, ಅದನ್ನೇ ನಿಜ ಎಂದು ನಂಬಿಕೊಂಡುಬಿಡುವ ಮನುಷ್ಯನ ಮೂಲ ಲಕ್ಷಣವನ್ನು ಒಂದು ಮಿತಿಯಲ್ಲಿಡಲು ಜಗತ್ತಿನ ಹೋಲಿಕೆಗಳಿಗೆ ಮೀರಿದ ಒಬ್ಬ ಅಪ್ರಮೇಯ ದೇವರೇ ಬೇಕು. ಏನೇನನ್ನೋ ಕಂಡುಹಿಡಿದು ಯಾವ ಯಾವುದೋ ವೈಚಿತ್ರ್ಯಗಳನ್ನು ವಿವರಿಸಿದ ವಿಜ್ಞಾನವೇ ಅರ್ಧಜ್ಞಾನವೆನಿಸಿಕೊಳ್ಳಬೇಕಾದರೆ ಇನ್ನೂ ಸಾಧಿಸಬೇಕಾಗಿರುವುದೇನೋ ಇದೆ , ಇನ್ನೂ ಕಂಡುಕೊಳ್ಳಬೇಕಾಗಿರುವುದೇನೋ ಇದೆ ಎಂಬುದನ್ನು ಆ ಅಸ್ತಿತ್ವ ತೋರಿಸುತ್ತದೆ. ನಮಗೆ ಅರ್ಥವೇ ಆಗದ ದೇವರ ಅಸ್ತಿತ್ವದ ಬಗ್ಗೆ ಮಾತನಾಡುವ ಹಕ್ಕು ನಮಗೆಷ್ಟರ ಮಟ್ಟಿಗೆ ಇದೆ? ಏನೇ ಇರಲಿ, ನಾವೆಷ್ಟು ಚಿಕ್ಕವರು ಎಂಬುದರ ಅರಿವು ನಮ್ಮಲ್ಲಿ ಹುಟ್ಟುವುದಕ್ಕೆ ನಮಗಿಂತ ಎಲ್ಲದರಲ್ಲಿಯೂ ಶ್ರೇಷ್ಠವಾದ ಒಬ್ಬ ದೇವರು ಬೇಕು.
ಮತ್ತೊಂದು ಅಂಶ, ಪ್ರಾಚೀನ ಕಾಲದಿಂದ ಹಿಡಿದು ಇಂದಿನವರೆಗೂ ಸಾಹಿತ್ಯ, ಚಿತ್ರಕಲೆ, ಸಂಗೀತ ಎಲ್ಲಾ ಕಲಾಪ್ರಕಾರಕ್ಕೂ ದೇವರೇ ಮೂಲಸೆಲೆ, ಸ್ಪಷ್ಟವಾಗಿ ತಿಳಿಯದ ದೇವರ ಸ್ವರೂಪ ಎಷ್ಟೋ ಕಲಾನವೀನತೆಗೆ ದಾರಿಮಾಡಿಕೊಟ್ಟಿದೆ.
ಪಂಪ, ರನ್ನ ,ಕುಮಾರವ್ಯಾಸಾದಿಗಳು ಬರೆದದ್ದೂ ದೇವರ ಕಥೆಯನ್ನೇ, ದಾಸಶ್ರ‍ೇಷ್ಟರು, ಅಕ್ಕ, ಬಸವಣ್ಣಾದಿಗಳು ಹಾಡಿಹೊಗಳಿದ್ದು ದೇವರ ವಿವಿಧ ರೂಪಗಳನ್ನೇ, ಅಜಂತ, ಎಲ್ಲೋರಾಗಳಲ್ಲಿ ಶಿಲೆ ಕಲೆಯಾಗಿದ್ದು ದೇವರ ಮೂರ್ತಿಯ ರೂಪದಲ್ಲಿಯೇ! ಒಂದು ವೇಳೆ ದೇವರೆಂಬ ವಿಚಾರವೇ ಇಲ್ಲದಿದ್ದರೆ ಕಲೆಗೆ ಆಗುತ್ತಿದ್ದ ಹಾನಿ ಅಪಾರ.
ಈ ವ್ಯಾಪಾರೀಕೃತ ಕಾಲದಲ್ಲಿ ದೇವರು ಕೇವಲ ಅಧ್ಯಾತ್ಮಿಕ ಶಕ್ತಿಯಾಗಷ್ಟೇ ಉಳಿಯದೇ ಎಷ್ಟೋ ಜನರ ಉದ್ಯೋಗವಾಗಿದ್ದಾನೆ ಉದಾ: ದೇಶದ ಕೋಟ್ಯಾಂತರ ದೇವಸ್ಥಾನಗಳಲ್ಲಿರುವ ಅರ್ಚಕರ ಹೊಟ್ಟೆಪಾಡಿನ ಪ್ರಶ್ನೆಯೇ ದೇವರು. ಈ ಒಂದು ನಂಬಿಕೆಯನ್ನು ಹಣವಾಗಿ ಪರಿವರ್ತಿಸಿಕೊಳ್ಳಲೇ ಎಷ್ಟೋ ದೇವಸ್ಥಾನಗಳು, ದೇವಸ್ಥಾನ ಸರಪಳಿಗಳು*( ಹೌದು, ಹೋಟೆಲ್ ಉದ್ಯಮದ ಹಾಗೆಯೇ) ಈಗಲೂ ಜನ್ಮತಾಳುತ್ತಿವೆ.ಅದು ತಪ್ಪು ಎಂದು ನಮಗೆ ಅನ್ನಿಸಿದರೂ ಅವರ ಹೊಟ್ಟೇಪಾಡೂ ನಡೆಯಬೇಕೆಂಬುದೂ ಸತ್ಯವಷ್ಟೇ!
ಇನ್ನೂ ಎಷ್ಟೋ ವಿಷಯಗಳಿವೆಯಾದರೂ ಸದ್ಯಕ್ಕೆ ಇಷ್ಟು ಸಾಕೆಂದುಕೊಂಡು ಒಂದು ಪೂರ್ಣವಿರಾಮವನ್ನಿಡುತ್ತಿದ್ದೇನೆ.

ಟಿಪ್ಪಣಿ:
೧. * - ಒಂದು ಈ ತರಹದ ಸರಪಳಿಯ ಹೆಸರನ್ನು ಬರೆಯುವ ಬಯಕೆಯನ್ನು ಸುಮ್ಮನೇ ಅದುಮಿಡುತ್ತಿದ್ದೇನೆ. :-|
೨.ಈ ಲೇಖನದ ಅರ್ಥ ನಾನು ಆಸ್ತಿಕ ಎಂದಾಗಲೀ ನಾಸ್ತಿಕ ಎಂದಾಗಲೀ ಅಲ್ಲ.

Tuesday, 28 June 2011

ದೇವ-ಬಲ್ಲ


"ಹಾಸಿ ಬಿದ್ದಿರುವೆ ಮೈಯ ಚಾಚಿ
ನಿನ್ನಯ ಆಟಕೆ ಅಂಗಳವಾಗಿ,
ನಾನೇ ಹಿರಿಯ ನೀನು ಅಲ್ಪ"
ಎಂದಿತು ಹಲಗೆ ಬಳಪದ ತುಂಡಿಗೆ.
"ಕರಗಿ ನನ್ನೊಳು ನಾನೇ ಇಲ್ಲವಾಗಿ
ಮೂಡುವ ಬರಹಕೆ ದಾರಿಯಾಗಿ
ನಾನು ಇರದೇ, ನಿನ್ನದೇನು? "
ಎಂದುತ್ತರವನಿತ್ತಿತ್ತು ಬಳಪ.
ಕೇಳಿ ವಾದವ,ಅರ್ಥ ಕಾಣದೇ,
ಹಿರಿತನದ ಭ್ರಮೆಗೆ ಬೇಸರಿಕೆ ಮೂಡಿ,
ಗೋಡೆ-ಗಡಿಯಾರ ಸ್ವಗತಗೈದಿತು
"ಯಾರು ಮೇಲು? ಯಾರು ಕೆಳಗು?
ಒಬ್ಬರಿರದೆ ಇನ್ನೊಬ್ಬನಿಲ್ಲ
 ಕೈಗಳು ಸೇರದೆ ಶಬ್ದವೇ ಇಲ್ಲ
                                                  ಯಾವ ಮುಳ್ಳು* ಹೆಚ್ಚೋ, ಆ ದೇವಬಲ್ಲ"


"ಎಳೆವರು ಕಲ್ಲುಮಣ್ಣನೆಣಿಸದೆ
ನಿನ್ನ ಬೀರಲು ದಾರಿಯಾಗಿ,
ಆಳವಾಗದೇ ಬಾಳಲಾಗದೇ
ನನ್ನ ನೋವಿಗೆ ನಾನೇ ಕಿವಿಯಾಗಿ,
ಹೇಗೆ ನೀನು ಬೆಳೆಯ ಮೂಲ
ನಾನೇ ತಾನೆ ಅಗ್ರಮಾನ್ಯ"
ಎಂದಿತು ನೇಗಿಲು ಬೀಜಕ್ಕೆ.
"ಎಷ್ಟು ಉತ್ತರೂ ಹಾಗೇ ಇರುವೆ ನೀ ; 
ನನ್ನ ಹೊಟ್ಟೆಯ ನಾನೇ ಬಗೆದುಕೊಂಡು 
ಗಿಡ ಹುಟ್ಟಲು ದಾರಿಯಾದರೂ
ನೀನೇ ಮಾನ್ಯ, ನಾ ನಗಣ್ಯ "
ಉತ್ತರ ಸಿದ್ಧವಿತ್ತು ಬೀಜದ ಬಳಿ.
ಭೂತಾಯಿಗೆ ಬೇಜಾರು ಬಂದಿತ್ತು,
ಇಲ್ಲದ ಹಿರಿಮೆಗೆ, ಸಲ್ಲದ ಜಗಳಕೆ,
ಉಪದೇಶವು ಮನದೊಳೆ ಉಳಿದಿತ್ತು.
"ನಿಮಗೆ ನೀವೇ, ನೀವೇ ಹೆಚ್ಚು
ನಾನು ಎನ್ನುವ ಭ್ರಮೆಯ ಕಿಚ್ಚು
ತೀರದ ಅಹಂನ ಮನ್ನಣೆಯ ಹುಚ್ಚು
ಎಂದು ಕಲಿವಿರೋ ನೀವು, ಆ ದೇವಬಲ್ಲ"


"ನಾ ಕರಗಿ ಹರಿಯದ ಹೊರತು
ಎಂತು ಹುಟ್ಟೀತು ಕವಿತೆ
ಸಾರಹೀನವು ಬರಿಯ ಪದದ ಮಾಲೆ
ಜೀವವಿರದ ಬರಿ ಅಸ್ಥಿಯ ಸಂಕೋಲೆ"
ಭಾವವೆಂದಿತು ಎದೆಯುಬ್ಬಿಸಿ
ತನ್ನ ವ್ಯಾಪ್ತಿಯ ಮಹತ್ವವ ಪ್ರಲಾಪಿಸಿ.
"ಶಬ್ದ ಶಬ್ದದ ಮಧ್ಯ ಸಂಗ ಕೂಡಿ
ಅಲ್ಲಿ ಪ್ರಾಸದ ಸಂಬಂಧ ಮೂಡಿ
ರಾಗಜೋಡಣೆಗೆಷ್ಟೋ ಕ್ರಮಯೋಜನೆ**;
ಎಲ್ಲೂ ಕಾಣದ ಅಮೂರ್ತ ಭಾವಕೆ 
ಇಷ್ಟು ಮನ್ನಣೆ ಹೇಗೆ ತಾರ್ಕಿಕ?"
ಎಂದಿತು ಭಾಷೆ ತಾನೇ ಹಿರಿಯವ
                                                               ಎಂಬ ಭಾವದಿ,ಭಾವವ ತುಚ್ಛಿಸಿ.
                                                               ಬೀಗುತ ಕೇಳಿತ್ತು ಪ್ರಶ್ನೆಯ ಮಾಲೆ.
                                                               ಕವಿಮನನೊಂದು, ಪ್ರಲಾಪಿಸಿತ್ತು
                                                              "ಯಾರೂ ದೊಡ್ಡವರಲ್ಲ, ಇಲ್ಲಿ
                                                               ಅಲ್ಪರು ಯಾರೂ ಇಲ್ಲವೇ ಇಲ್ಲ .
                                                              ಯಾವುದ ಬಿಟ್ಟು ಯಾವುದೂ ಇಲ್ಲ, 
                                                               ಅತಿ ಉತ್ತಮ ಯಾವುದೋ, ಆ ದೇವಬಲ್ಲ"
*ಮುಳ್ಳು- ಗಡಿಯಾರದ ಮುಳ್ಳು
**ಕ್ರಮಯೋಜನೆ- ಆಂಗ್ಲ ಭಾಷೆಯ Permutation


Tuesday, 21 June 2011

ಅಪ್ಪ - ಮರೆತು ಹೋಗುವ ಹೀರೋ


ಕಳೆದ ಭಾನುವಾರ ’ಅಪ್ಪಂದಿರ ದಿನ’ ಎಂದು ಅದರ ಹಿಂದಿನ ದಿನ ಗೆಳೆಯ ತನುಜ್ ಹೇಳದೇ ಹೋಗಿದ್ದರೆ ನನಗೆ ಗೊತ್ತೇ ಇರುತ್ತಿರಲಿಲ್ಲ ಎಂಬ ಮಟ್ಟಿಗೆ ಅವನು ಮರೆತು ಹೋಗಿದ್ದಾನೆ. ಅಮ್ಮ ಎಂದು, ಮಹಿಳೆ ಎಂದು ಎಷ್ಟೆಲ್ಲಾ ಮಹತ್ವ, ವಿಶೇಷತೆ ಪಡೆದುಕೊಳ್ಳುವ ತನ್ನ ಅರ್ಧಾಂಗಿಯ ಸಂಭ್ರಮದಲ್ಲಿಯೇ ಖುಷಿ ಕಂಡುಕೊಳ್ಳುವ ಆ ಅಪ್ಪ, ಅಮ್ಮನ ಒಳ್ಳೆಯತನದ ಸಾಗರದ ಎದುರು ಮರೆಯಾಗಿ ಹೋಗುತ್ತಾನೆ ಎನಿಸುವುದಿಲ್ಲವೇ ನಿಮಗೆ? ಹಾಗೆ ಮರೆತು ಹೋಗದ ಹಾಗಾಗಿ ಯಾರೋ ಇಬ್ಬರು ಅವರವರ ಅಪ್ಪಂದಿರಿಗೆ ’ಧನ್ಯವಾದ’ ಹೇಳುವ ಹಾಗಾದರೆ ಈ ಅಂಕಣ ಸಾರ್ಥಕ.
ನೆನಪಿದೆಯೇ, ನಾವು ಚಿಕ್ಕವರಿರುವಾಗ ಅಪ್ಪ ಎಂದರೆ ಹೇಗೆ ನಮಗೆ ಪರಿಚಯವಾಗಿದ್ದುದು ಎಂದು? ಒಂತರಾ ಖಳನಾಯಕನ ಹಾಗೆ, ಊಟ ಮಾಡದೇ ಇದ್ದಾಗ, ಜೋರಾಗಿ ಹಠ ಮಾಡಿದಾಗ  ಬಂದು ಹೆದರಿಸುವ ಕೆಂಪು ಕಣ್ಣಿನ ಭೂತದ ಹಾಗೆ. ನಾವೇನಾದರೂ ತಪ್ಪು ಮಾಡಿದಾಗ ಹೆದರಿಸುವ ಭಯೋತ್ಪಾದಕನಾಗಿ ಪರಿಚಯವಾಗುವ ಅಪ್ಪ ಬಹಳಷ್ಟು ಮಕ್ಕಳ ಪಾಲಿಗೆ ಹಾಗೆಯೇ ಉಳಿದು ಹೋಗುವುದು ದುರಂತ. ಮಮತೆ, ಪ್ರೀತಿ ಇಂತಹ ಶಬ್ದಗಳೆಲ್ಲ ಅಮ್ಮನೊಬ್ಬಳದ್ದೇ ಸೊತ್ತೇನೋ ಎಂಬಷ್ಟರ ಮಟ್ಟಿಗೆ ಅಪ್ಪನ ಪ್ರೀತಿ ಅಂತರ್ಮುಖಿ. ಕೇವಲ ಅವನ ಕೋಪ ತಾಪ ಮಾತ್ರ ಬಹಿರ್ಮುಖಿ. ಒಂದು ಊಟದ ವಿಷಯಕ್ಕೆ ಬಂದರೂ ಅಮ್ಮ ಹೇಳುವುದು ಹೀಗೇ, " ಬೇಗ ಬೇಗ ಊಟ ಮಾಡು, ಇಲ್ಲವೆಂದರೆ ಅಪ್ಪ ಬಂದು ಬಿಡುತ್ತಾರೆ. (ಅಪ್ಪನೇನೋ ದೂರ್ವಾಸ ಮುನಿ ಎನ್ನುವ ತರಹ) ಅವರು ಬಂದಾಗ ನಿನ್ನ ಊಟ ಆಗಿದ್ದರೆ ಅವರಿಗೆ ಸಿಟ್ಟು ಬರುವುದಿಲ್ಲ. (ಅಪ್ಪ ಇರುವುದೇ ಸಿಟ್ಟು ಮಾಡಿಕೊಳ್ಳಲಿಕ್ಕೆ ಎಂಬ ಧಾಟಿಯಲ್ಲಿ)." ಎಲ್ಲರ ಮನೆಯ ಕಥೆಯೂ ಇಷ್ಟೇ, ಅಮ್ಮ ದುಷ್ಟ , ಕೋಪಿಷ್ಟ ಅಪ್ಪನಿಂದ ಕಾಪಾಡುವ ಕಾರುಣ್ಯಮಯಿಯಾಗಿ ಕಾಣುತ್ತಾ ಹೋಗುತ್ತಾಳೆ. ಆದರೆ ಅಪ್ಪ, ಮಗನಿ(ಳಿ)ಗೆ ಶಿಸ್ತು ಬೇಕೆಂಬ ಒಂದೇ ಆಸೆಯಿಂದ ಸಿಟ್ಟಿನ ಮುಖವಾಡ ತೊಟ್ಟು ತನ್ನ ಅಗಾಧ ಮಮಕಾರವನ್ನು ಬಚ್ಚಿಟ್ಟುಕೊಳ್ಳುವ ಶಿಕ್ಷೆಯನ್ನು ಜೀವನಪೂರ್ತಿ(ಕೊನೆಪಕ್ಷ ಮಕ್ಕಳು ದೊಡ್ಡವರಾಗುವ ತನಕ) ಅನುಭವಿಸುವ ಶಿಕ್ಷೆಯನ್ನು ಪಡೆಯುತ್ತಾನೆ. ಅದರಲ್ಲಿಯೇ ಖುಷಿ ಪಡುತ್ತಾನೆ ಅವನು. ನಮ್ಮ ಲಿಂಗದಿಂದ ಹಿಡಿದು ಎಲ್ಲವನ್ನೂ  ನಿರ್ಧರಿಸುವ ಅಪ್ಪ, ಮಕ್ಕಳಿಗೆ ಮನೆಯ ಪರಿಸ್ಥಿತಿಯಲ್ಲಿ ಅತ್ಯುತ್ತಮವಾದದ್ದನ್ನ ದೊರಕಿಸುವುದೇ ತನ್ನ ಏಕಮಾತ್ರ ಕರ್ತವ್ಯ ಎಂಬಂತೆ ದುಡಿಯುತ್ತಾನೆ. ಅದೇ ಪ್ರಯತ್ನದಲ್ಲಿರುವಾಗ ಕೆಲವೊಮ್ಮೆ ಭಾವನಾತ್ಮಕವಾದ ಅಂತರ ತಂದೆ-ಮಕ್ಕಳ ಮಧ್ಯೆ ಬರುವುದು ಅನಪೇಕ್ಷಣೀಯವಾದರೂ ದುರದೃಷ್ಟಕರವಾಗಿ ಅದು ಬಹುಸಾಮಾನ್ಯ ವಿದ್ಯಮಾನವೇ.
ಚಿಕ್ಕಂದಿನಲ್ಲೂ ಅಪ್ಪ ಎಂದರೆ ಕಣ್ಣ ಮುಂದೆ ಬರುತ್ತಿದ್ದುದು, ಕೇವಲ ಸಿಟ್ಟಲ್ಲ, ಅಪ್ಪ ಎಂದರೆ ಒಬ್ಬ ಹೀರೋ, ಉಳಿದವರಾರೂ ಮಾಡಲಾಗದ್ದನ್ನು ಮಾಡಬಲ್ಲ ಸುಪರ್ ಮ್ಯಾನ್, ಹೆಗಲ ಮೇಲೆ ಕೂರಿಸಿಕೊಂಡು ಹಿತ್ತಲಿಡೀ ಸುತ್ತು ತಿರುಗಿಸುತ್ತಿದ್ದ ಶಕ್ತಿಮಾನ್, ಅಪ್ಪ ಎಂದರೆ ಮಗ(ಳು) ಇಷ್ಟ ಪಡುತ್ತಾನೆ(ಳೆ) ಎಂಬ ಒಂದೇ ಕಾರಣಕ್ಕೆ ಎಷ್ಟೋ ದೂರದಿಂದ ಕಳಲೆ*ಯನ್ನು ಕೊಯ್ದುಕೊಂಡು ಬರುತ್ತಿದ್ದ, ಕರ್ಕಿಯಲ್ಲಿ ಮಾಡಿದ ಕೇಸರೀಬಾತ್ ನ್ನು ಸಿರಸಿಗೆ ಹೊತ್ತುಕೊಂಡು ಬರುತ್ತಿದ್ದ ಪ್ರೇಮಸಿಂಧು, ಎಲ್ಲಿ ಮಗ ಹಾಳಾಗಿಹೋಗುತ್ತಾನೇನೋ ಎಂದು ಕ್ರಿಕೆಟ್ ನ್ನು ದ್ವೇಷಿಸಲಾರಂಭಿಸಿದ ಭಾವಬಂಧು, ಮನೆಯ ಮಧ್ಯದಲ್ಲಿ TV ಎಂಬ ಮಾಯಾಪೆಟ್ಟಿಗೆಯನ್ನು ತಂದಿಡದೇ ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸಿದ ವಿವೇಕಿ, ತನ್ನ ನನಸಾಗದ ಕನಸುಗಳನ್ನೆಲ್ಲ ಮಗನಾದರೂ ನನಸು ಮಾಡಲಿ ಎಂದು ಹಂಬಲಿಸುವ ಮಹತ್ವಾಕಾಂಕ್ಷಿ ಕನಸುಗಾರ. ಇನ್ನೂ ಎಷ್ಟೆಷ್ಟೋ ವರ್ಣನೆಗಳನ್ನು ಕೊಡಬಹುದು, ಕೊಡುತ್ತಲೇ ಇರಬಹುದು.
ಹೌದು, ನಿಜವೆಂದರೆ ’ಅವರು’(ಅಮ್ಮ ಅಪ್ಪನಿಗೆ ಹಾಗೆ ಕರೆಯುತ್ತಿದ್ದಳಾದ್ದರಿಂದ ನಾನೂ ಅಪ್ಪನಿಗೆ ’ಅವರು’ ಎಂದೇ ಸಂಬೋಧಿಸುತ್ತಿದ್ದೆನಂತೆ,ಈಗಲೂ ಕೆಲವೊಮ್ಮೆ ಹಾಗೇ ಮಾಡುವುದುಂಟು) ಎಂದು ಪರಿಚಯವಾದ ಅಪ್ಪನೇ ನಾನು ಕಂಡ ಮೊದಲ ಹೀರೋ. ’ಅವರು’ ಆ ಪಟ್ಟವನ್ನು ಪಡೆದುಕೊಂಡಿದ್ದು ಉಳಿದವರು ದೈಹಿಕವಾಗಿ ಮಾಡಲ್ಲರದ್ದನ್ನೇನೋ ಅವನು ಮಾಡಬಲ್ಲವನಾಗಿದ್ದನೆಂದೇನಲ್ಲ, ರಸ್ತೆಯಲ್ಲಿ ಅಪ್ಪನ ಜೊತೆಗೆ ಹೋಗುತ್ತಿದ್ದರೆ ಎಲ್ಲರೂ ಗೌರವದಿಂದ ’ನಮಸ್ಕಾರ ಸರ್ ’ ಹೇಳಿ ಹೋಗುತ್ತಿದ್ದರೆಂಬುದೂ ಕಾರಣವಲ್ಲ, ನಮ್ಮ ಇಡೀ ಕುಟುಂಬದಲ್ಲಿ ಅಪ್ಪನೇ ಎತ್ತರ, ಮೈಕಟ್ಟುಗಳ ಅಳತೆಯಲ್ಲಿ ಎದ್ದು ಕಾಣುತ್ತಿದ್ದರೆಂಬುದಂತೂ ಮೊದಲೇ ಅಲ್ಲ. ಅದು ಮೊದಲಿನಿಂದಲೂ ಅವರು ಬೆಳೆಸಿಕೊಂಡು ಬಂದ ವ್ಯಕ್ತಿತ್ವಕ್ಕೆ, ನಡೆದುಕೊಂಡ ರೀತಿಗೆ ನಾನು ಕೊಡುವ ಒಂದು ಪಟ್ಟವಷ್ಟೇ. ಅಪ್ಪನನ್ನು ಏಕವಚನದಲ್ಲಿಯೇ ಕರೆಯುವ ಹವ್ಯಕರಲ್ಲಿ ಒಬ್ಬನಾದರೂ ಇಂದಿಗೂ ಅಪ್ಪನನ್ನು ಏಕವಚನದಲ್ಲಿ ಮಾತನಾಡಿಸಲು ಸಾಧ್ಯವಾಗಲಾರದಷ್ಟು ಗೌರವವನ್ನು ಈ ಅಪ್ಪ ಎಂಬ ವ್ಯಕ್ತಿ ಬೆಳೆಸಿಟ್ಟುಕೊಂಡಿದ್ದಾನೆ. ಆರ್ಥಿಕವಾಗಿ ಏನೆಂದರೆ ಏನೂ ಇಲ್ಲದ ಸ್ಥಿತಿಯಲ್ಲಿ, ತನ್ನ ಅಪ್ಪನನ್ನು ಕಳೆದುಕೊಂಡ ನಂತರ ತನ್ನ ಕುಟುಂಬವನ್ನು ಕೇವಲ ದುಡಿಮೆಯೊಂದನ್ನೇ ನೆಚ್ಚಿಕೊಂಡು ಇಂದು ನಾವಿರುವ ಮಟ್ಟಕ್ಕೆ ತಂದ ಎಂದರೆ ಅದು ಯಾವ ಸಾಧಕನಿಗೂ ಕಡಿಮೆಯಿಲ್ಲದ ಸಾಧನೆಯೇ. ಇಂದಿಗೂ ಅಪ್ಪ ಅರ್ಥ ಮಾಡಿಕೊಂಡಷ್ಟು ಸಾಮಾನ್ಯ ವಿಜ್ಞಾನ ನನಗೆ ಅರ್ಥವಾಗಿದೆ ಎಂದು ಧೈರ್ಯದಿಂದ ಹೇಳಿಕೊಳ್ಳಲಾರೆ ಎಂಬಷ್ಟರ ಮಟ್ಟಿಗೆ ಅಪ್ಪನದು ತಾರ್ಕಿಕ ಬುದ್ಧಿ. ಅವರ ಯೋಚನೆಯ ಮಟ್ಟ ಇಂದಿಗೂ ನನಗೆ ವಿಸ್ಮಯವೇ! ಕೇವಲ ವೃತ್ತಿಯಿಂದಷ್ಟೇ ಅಲ್ಲ, ಹುಟ್ಟಿನಿಂದಲೇ ಶಿಕ್ಷಕ**ರಾಗಿ ಹುಟ್ಟಿದವರಂತೆ ಜೀವನದಲ್ಲಿ ಎದುರಾಗುವ ಚಿಕ್ಕ ಚಿಕ್ಕ ಸಂಗತಿಗಳನ್ನು ಅರ್ಥ ಮಾಡಿಕೊಂಡಿದ್ದರು ಎಂಬಲ್ಲಿಗೆ ನನ್ನ ಗೌರವ ಮತ್ತೊಂದಿಷ್ಟು ಹೆಚ್ಚಾಗುತ್ತದೆ.
ಅಪ್ಪ ಎಂದರೇ ಹಾಗೇ, ಅದೊಂದು ಮಹತ್ವಾಕಾಂಕ್ಷೆಯ ಮೂರ್ತಿ, ಅಕ್ಷರಶಃ ಬೆವರನ್ನು ಸುರಿಸಿ ಕಟ್ಟಿದ ಮನೆಗಾಗಲೀ, ನಾನು ಖುಷಿಯಿಂದ  ತಂದುಕೊಟ್ಟ ಅಂಕಪಟ್ಟಿಗಾಗಲೀ ಒಂದು ಸಮಾಧಾನದ ನಿಟ್ಟುಸಿರಷ್ಟೇ ಬೆಲೆ. ದೊಡ್ಡದೊಂದನ್ನು ಸಾಧಿಸಬೇಕೆಂಬ ಹಠ. ಅಪ್ಪ ಎಂದರೆ ಹಾಗೇ, ಎಂದಿಗೂ ಬಾಗದ ಸಮಾಧಾನದ ಹೆಗಲು. ಅಪ್ಪ ಎಂದರೆ ಸುಳ್ಳು ಸುಳ್ಳೇ ಸಿಟ್ಟನ್ನು ಆವಾಹಿಸಿಕೊಂಡಿರುವ ಹಿತೈಷಿ. ಅಪ್ಪ ಎಂದರೆ ಹೀಗೇ ಇನ್ನೆಷ್ಟೋ!
ಆಯ್ತು, ಜನ್ಮದಾತನಿಗೆ ಮತ್ತೊಮ್ಮೆ ಕೈಮುಗಿದು ನಮಸ್ಕರಿಸಿ (ಹೇಳದೇ ಹೋದರೂ ಅದು ಮಾನಸಿಕ ಅಭಿವ್ಯಕ್ತಿ ಎಂಬುದು ಇಲ್ಲಿಯೇ ಸ್ಪಷ್ಟ :P ) ಅವನ ಬಗೆಗಿನ ಈ ಅಂಕಣಕ್ಕೆ ಅಂತ್ಯ ಹಾಡುತ್ತಿದ್ದೇನೆ. ಇದಕ್ಕಿಂತ ಹೆಚ್ಚು ನಾವೇನನ್ನಾದರೂ ಕೊಡಬಹುದು, ಈ ಬದುಕನ್ನೇ ನಮಗೆ ಕೊಟ್ಟವನಿಗೆ. ( ಕೊನೆಯ ಸಾಲನ್ನು ನಾನು ಪುನರಾವರ್ತಿಸಿರುವೆನೆಂದು ನನಗೆ ಗೊತ್ತು, ಆದರೆ ಸಂದರ್ಭೋಚಿತವಾಗಿದೆ ಎಂದುಕೊಳ್ಳುತ್ತೇನೆ)
* ಕಳಲೆ- ಚಿಕ್ಕ ಬಿದಿರು. ಬಿದುರು ಚಿಕ್ಕದಾಗಿರುವಾಗ ಅದನ್ನು ಕೊಯ್ದು ತಂದು ಪಲ್ಯ, ಸಾಂಬಾರ್ ಮಾಡುತ್ತಾರೆ.
** ಶಿಕ್ಷಕ ಎಂಬುವವನು ಮೊದಲನೆಯದಾಗಿ ಎಲ್ಲವನ್ನು ಅರ್ಥ ಮಾಡಿಕೊಂಡಿರಬೇಕು ಎಂಬುದು ನನ್ನ ಅಭಿಪ್ರಾಯ.ಅದಕ್ಕೇ ಆ ರೀತಿಯಲ್ಲಿ ಈ ಶಬ್ದಪ್ರಯೋಗ.

Wednesday, 15 June 2011

ಒಂದಿಷ್ಟು ಮೌಲ್ಯಗಳೂ-ಒಬ್ಬ ಹೆಚ್. ಓ. ಡಿ. ಯ ರಾಜಿನಾಮೆಯೂ


ಆಗಷ್ಟೇ ಥಿಯರಿ ಪರೀಕ್ಷೆಗಳು ಮುಗಿದು ಪ್ರಾಯೋಗಿಕ ಪರೀಕ್ಷೆಗಳು ಪ್ರಾರಂಭವಾಗಿದ್ದವು.ನೋಡನೋಡುತ್ತಿದ್ದಂತೆಯೇ ಅದೂ ಮುಗಿದುಹೋಗುವುದರೊಳಗಿತ್ತು.  ಎಲ್ಲರೂ ತಲೆಯ ಮೇಲೆ ಹತ್ತಿ ಕುಳಿತಿದ್ದ ಪರೀಕ್ಷಾಭೂತವನ್ನು ಕೆಳಗಿಳಿಸಿಕೊಂಡು ಹಗುರಾಗುವುದರೊಳಗಿದ್ದರು. ಆಗ ಬಂದಿತ್ತು ಆಘಾತ, PESEC ಬ್ರಾಂಚ್ ಕಂಡ ಒಬ್ಬ ಅತ್ಯುತ್ತಮ HOD ರಾಜೀನಾಮೆ ಕೊಟ್ಟಿದ್ದರು. ವಿದ್ಯಾರ್ಥಿವೃಂದಕ್ಕೆ ಏನೂ ತೋಚದೇ ಗರಬಡಿದಂತಾಗಿತ್ತು. ಮೊನ್ನೆ ಮೊನ್ನೆ GATEನ ಸಾಧನೆಗೆ ಅಭಿನಂದಿಸಿ ಖುಷಿ ಪಟ್ಟು, ಮುಂದಿನ ಸಲ ಅದಕ್ಕಿಂತ ಚೆನ್ನಾಗಿ ಮಾಡುವಿರಂತೆ ಎಂದು ಪ್ರೋತ್ಸಾಹಿಸಿ ಕಳಿಸಿಕೊಟ್ಟಿದ್ದ ಅದೇ HOD , ಈ ವರ್ಷವೂ ಬೇಸಿಗೆ ರಜೆಯಲ್ಲಿ ಉಚಿತ GATE  ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದ ಅದೇ HOD, ಹೀಗೆ ತುರ್ತಾಗಿ ರಾಜಿನಾಮೆ ಕೊಡುತ್ತಿದ್ದಾರೆ ಎಂಬ ಅಂಶವನ್ನು ಜೀರ್ಣಿಸಿಕೊಳ್ಳಲೇ ಸ್ವಲ್ಪ ಹೊತ್ತು ಬೇಕಾಯಿತು. ಹಾಗೆ ಗೊತ್ತಾದ ಮರುದಿನವೇ HODಯ ಕೋಣೆಯ ಎದುರು ಅವರ ವಿಧ್ಯಾರ್ಥಿಗಳ ಗುಂಪೇ ನೆರೆದಿತ್ತು. ಆ ಗುಂಪಿಗೆ(ನಾನೂ ಆ ಗುಂಪಿನಲ್ಲಿದ್ದೆ ಎಂಬುದನ್ನು ದಾಖಲಿಸುವುದು ಅನವಶ್ಯಕವಾದರೂ ದಾಖಲಿಸುತ್ತಿದ್ದೇನೆ.) ಅವರು ಕೊಟ್ಟ ಉತ್ತರದ ಬಗ್ಗೆ ಬರೆಯುವ ಮೊದಲು ಅದರ ಹಿಂದಿನ ದಿನ ನಡೆದ ಇದಕ್ಕೆ ಸಂಬಂಧವೇ ಇಲ್ಲ ಎಂದು ಮೇಲ್ನೋಟಕ್ಕೆ ಕಂಡರೂ ನಿಜವಾಗಿ ಸಂಬಂಧ ಪಟ್ಟಿರುವ  ಘಟನೆಯ ಬಗ್ಗೆ ಒಂದಿಷ್ಟು ಹೇಳುವುದು ಉಚಿತ.

ಅಂದು DC ಪ್ರಯೋಗಿಕ ಪರೀಕ್ಷೆ. ಓದಿದ್ದು ಕಡಿಮೆಯಾಗಿತ್ತೋ, ಅಥವಾ ಅಕಾರಣವಾಗಿ ಆಗಾಗ ಹುಟ್ಟುವ ತಾತ್ಕಾಲಿಕ ಜ್ಞಾನಶೂನ್ಯತೆಯೋ? ಏನೋ, ಸುಲಭದ ಪ್ರಯೋಗ ಬಂದಿದ್ದರೂ ಆ ಕ್ಷಣದಲ್ಲಿ ಏನೂ ತೋಚದಂತಾಗಿಹೋಯ್ತು. ಏನೋ ಕಷ್ಟ ಪಟ್ಟುಕೊಂಡು ಲಿಖಿತ ಭಾಗವನ್ನು ಪೂರ್ತಿಗೊಳಿಸಿದೆನಾದರೂ ಎಷ್ಟು ಒದ್ದಾಡಿಕೊಂಡರೂ ಪ್ರಯೋಗದ ಔಟ್ ಪುಟ್ ಬರಲಿಲ್ಲ. ತಲೆಹರಿದ ಮಟ್ಟಿಗೆ ಕ್ರಮಯೋಜನೆ-ವಿಕಲ್ಪಗಳನ್ನು ಅನ್ವಯಿಸಿದೆನಾದರೂ ಬಯಸಿದ ಉತ್ತರ ಬಾರದೇ ಹೋಯಿತು. ಯಾವತ್ತಿನ ಹಾಗೆ ಮತ್ತೊಂದಿಷ್ಟು ಯೋಚಿಸುವ ಕಷ್ಟಸಾಧ್ಯದ ದಾರಿಯನ್ನು ಬಿಟ್ಟು, ಗೆಳೆಯ ಶಿವದರ್ಶನ್ ನ್ನು ಕೇಳುವ ಅಡ್ದದಾರಿಯನ್ನು ಹಿಡಿದೆ. ಹಿಂದೊಮ್ಮೆ ಏಳನೇ ತರಗತಿಯಲ್ಲಿ ಹೀಗೇ ಕಾಪಿಮಾಡಿಕೊಂಡು ಅದಕ್ಕೆ ಪ್ರಾಯಶ್ಚಿತ್ತ ಪಟ್ಟುಕೊಂಡು ಬಿಟ್ಟಿದ್ದ ಚಾಳಿ ಮತ್ತೆ ಮರುಕಳಿಸಿತ್ತು ಎಂಬಲ್ಲಿಗೆ ಒಂದು ನೈತಿಕ ಅಧಃಪತನಕ್ಕೆ ದಾರಿ ಸುಗಮವಾಗಿತ್ತು. ೮ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಮೌಲ್ಯಗಳನ್ನು ಒಂದು ಕ್ಷುಲ್ಲಕ ಕ್ಷಣದಲ್ಲಿ ಬಲಿಕೊಟ್ಟ ನನ್ನನ್ನು ಅಣಕಿಸುವಂತೆ ನನ್ನ ಎಲ್ಲಾ ಪ್ರಯತ್ನಗಳ ನಂತರವೂ ಔಟ್ ಪುಟ್ ಬರಲಿಲ್ಲ. ಅನಿಸಿತ್ತು ಆಗಲೇ, ನಾವು ನಂಬಿರುವ ಮೌಲ್ಯಗಳನ್ನು ಬಿಟ್ಟರೆ ಎಂದಿಗೂ ಸುಖವಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಂಬಿ ಕೆಟ್ಟವರಿಲ್ಲವೋ, ನಂಬದೇ ಉದ್ಧಾರ ಆದವರಿಲ್ಲವೋ! ( ಏನನ್ನು ಬೇಕಾದರೂ ಆಗಬಹುದು,ಯಾವ ಒಳ್ಳೆಯ ಅಂಶವನ್ನು ಬೇಕಾದರೂ ಆಗಿರಬಹುದು.) ನಾವು ನಂಬಿರುವುದನ್ನು ನಾವೇ ಪಾಲಿಸದೇ ಹೋದರೆ, ಆ ದೇವರೂ ( ಅವನು ಇದ್ದರೆ ?? ) ಮೆಚ್ಚಲಾರ ಎಂಬಲ್ಲಿಗೆ ಈ ಲೇಖನದ ಮೊದಲ ಭಾಗ ಮುಗಿಯುತ್ತದೆ.

ಮತ್ತೆ HODಯ ಉತ್ತರದ ಬಗ್ಗೆ ಬರೋಣ, ಅಂದು HOD ಯಾವ ಸ್ಥಿತಪ್ರಜ್ಞ ಯೋಗಿಗೂ ಕಮ್ಮಿಯಿಲ್ಲದ ಶಾಂತತೆಯಲ್ಲಿ ಕೂತಿದ್ದರೂ, ಮುಖದ ಮೇಲೆ ಇದ್ದ ನಗು ಬಲವಂತದಿಂದ ತರಿಸಿಕೊಂಡಿದ್ದು ಎಂದು ಸ್ಪಷ್ಟವಾಗಿ ತೋರುತ್ತಿತ್ತು. ದುಃಖಿತರಾಗೇನೂ ಕಾಣದಿದ್ದರೂ ಮಾಮೂಲಿಯಾಗೇನೂ ಇರಲಿಲ್ಲ, ಹಾಗೆ ಮಾಮೂಲಾಗಿ ಇರುಲೆಂದು ಬಯಸುವುದೂ ಕಟುಕತನವಾಗಬಹುದು. ಇರಲಿ, "ಕೊನೆಪಕ್ಷ ನಮ್ಮ, ಎಂದರೆ ನಿಮ್ಮ ವಿಧ್ಯಾರ್ಥಿಗಳ ಸಲುವಾಗಿಯಾದರೂ ನಿಮ್ಮ ನಿರ್ಧಾರವನ್ನು ಪುನರ‍್ ವಿಮರ್ಶಿಸಿ" ಎಂದು ನಾವು ಕೊನೆಯ ಅಸ್ತ್ರವೆಂಬಂತೆ ಕೇಳಿದ್ದೆವು. ಯಾರ ಮೇಲೂ ಆಪಾದನೆ ಹೊರಿಸದಂತೆ HOD ಮಾತುಗಳನ್ನು ಆರಿಸಿ ಹೇಳಿದ್ದರು**, " ನಾನು ನನ್ನ ಜೀವನದಲ್ಲಿ ಕೆಲವು ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿದ್ದೇನೆ. ಈ ಕಾಲೇಜೂ ಇದರದ್ದೇ ಆದ ನೀತಿಗಳನ್ನು ಅಳವಡಿಸಿಕೊಂಡು ಬೆಳೆದುಕೊಂಡು ಬಂದಿದೆ.ಯಾವಾಗ ಇಬ್ಬರ ಮೌಲ್ಯಗಳಲ್ಲಿ ಹೊಂದಿಕೆಯಾಗುವುದಿಲ್ಲವೋ ಆಗ ಒಬ್ಬರು ಹೊಂದಿಕೊಳ್ಳಬೇಕಾಗುತ್ತದೆ. ಹಾಗೆ ಹೊಂದಿಕೊಳ್ಳಲಾರದೇ ಹೋದರೆ ಒಬ್ಬರು ಆ ವ್ಯವಸ್ಥೆಯಿಂದ ಹೊರಬರಬೇಕಾಗುತ್ತದೆ. ಇದೇ ಆಡಳಿತ ಕಟ್ಟಿದ ಕಾಲೇಜಿನಿಂದ ಅವರೇ ಹೊರಬರುವುದು ಸಾಧ್ಯವಿಲ್ಲವಾದ್ದರಿಂದ ನಾನು ಹೊರಹೋಗುತ್ತಿದ್ದೇನೆ.ಸಂಸಾರದಲ್ಲಿಯೂ ಅಷ್ಟೇ. ಇಬ್ಬರೂ ಒಂದಿಲ್ಲೊಂದು ವಿಷಯದಲ್ಲಿ ಹೊಂದಿಕೊಳ್ಳಬೇಕಾಗುತ್ತದೆ. ಎಲ್ಲ ಸಲವೂ ಒಬ್ಬರೇ ಹೊಂದಿಕೊಳ್ಳಬೇಕೆಂದರೆ ಬಿರುಕು ಹುಟ್ಟುವುದು ಸಹಜ. ಅಲ್ಲಿ ವಿಚ್ಛೇದನ ಆಗಬಹುದು. ಯಾರದ್ದೇನೂ ತಪ್ಪು ಇರಬೇಕೆಂದೇನೂ ಇಲ್ಲ. ಅವರಿಬ್ಬರಲ್ಲಿ ಹೊಂದಾಣಿಕೆ ಇಲ್ಲ ಅಷ್ಟೆ. ಇಲ್ಲೂ ಒಬ್ಬರ ವಿಚಾರಗಳನ್ನು ಮತ್ತೊಬ್ಬರ ಮೇಲೆ ಹೇರಲು ಹೋದರೆ ಘರ್ಷಣೆ ಮಾಮೂಲೇ. ಪ್ರತಿಯೊಂದು ಸಲವೂ ಒಬ್ಬರೇ ರಾಜಿ ಮಾಡಿಕೊಳ್ಳಬೇಕೆಂಬುದೂ ನ್ಯಾಯವಲ್ಲವಷ್ಟೇ. ನೀವು ನಂಬಿಕೊಂಡು ಬಂದ ಮೌಲ್ಯಗಳನ್ನು ಎಂದಿಗೂ ಬಿಡಬೇಡಿ. ಅವುಗಳನ್ನು ಬಿಟ್ಟ ಮೇಲೆ ನೀವೆಂದಿಗೂ ಯಶಸ್ವಿಯಾಗಲಾರಿರಿ. ಅಷ್ಟಕ್ಕೂ ನಾನು ಬರುವ ಮೊದಲೂ ಈ ಕಾಲೇಜು ಅಗ್ರಶ್ರೇಣಿಯಲ್ಲೇ ಇತ್ತು, ಇಂದಿಗೂ ಇದೆ. ನೀವರೂ ನಾನು ಈ ಕಾಲೇಜಿನಲ್ಲಿ ಇರುವೆನೆಂದು ಈ ಕಾಲೇಜನ್ನು ತೆಗೆದುಕೊಂಡವರಲ್ಲ, ಅಲ್ಲವೇ? ಇಲ್ಲಿಗೆ ಬಂದ ಮೇಲೆ ನನ್ನನ್ನು ಮೆಚ್ಚಿರಬಹುದು. ಇಷ್ಟು ಚಿಕ್ಕ ಸಮಯದಲ್ಲಿ ಹೀಗೆ ಒಂದು ಕಾಲೇಜನ್ನು ನಾಡಿನ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿ ಮಾಡಿದ್ದಾರೆ ಎಂದರೆ ಅದೇನೂ ಕಡಿಮೆ ಸಾಧನೆಯಲ್ಲ. ಯಾರಿಗೆ ಗೊತ್ತು, ನನಗಿಂತ ಬಹಳ ಉತ್ತಮ HODಯನ್ನು ಕರೆತರಬಹುದು. ಈಗ ನಾವು ಪರಸ್ಪರರಿಗೆ ಶುಭ ಹಾರೈಸಿ ಬೇರಾಗುವುದಷ್ಟೇ ಉಳಿದಿರುವುದು." ಎಂದು ಹೇಳಿ ಕೊನೆಯಲ್ಲಿ PESITನ ಹುಡುಗರನ್ನೊಂದಿಷ್ಟು ಹೊಗಳಿ ಇವತ್ತಿಗೆ ಇಷ್ಟು ಮಾತು ಸಾಕು
ಎಂಬಂತೆ ಬೀಳ್ಕೊಡುಗೆಯ ನಗೆ ನಕ್ಕರು ಎಂಬಲ್ಲಿಗೆ ಎರಡನೆಯ ಭಾಗವೂ ಮುಗಿಯುತ್ತದೆ.

ಆಗಿದ್ದು ಇಷ್ಟೇ, ಆಗಬೇಕಾದ ಆಲೋಚನೆಗಳು ಬಹಳಷ್ಟಿವೆ. ಹಾಗೆ HOD ಮೌಲ್ಯ ಮತ್ತು ನೀತಿಗಳ ಬಗ್ಗೆ ಹೇಳುತ್ತಿದ್ದರೆ ನನಗೆ ಹಿಂದಿನ ದಿನ ನಾನು ಮಾಡಿದ್ದ ಕೃತ್ಯದ ನೆನಪಾಗಿ ನಾಚಿಕೆಯೆನ್ನಿಸುತ್ತಿತ್ತು. ಸರಿಯಾದ ಸಮಯದಲ್ಲಿ ಇವರಂತೆ ಎಚ್ಚೆತ್ತುಕೊಳ್ಳದೇ ಹೋಗಿದ್ದರಿಂದ , ನನ್ನ ಮೌಲ್ಯಗಳನ್ನು ಬಿಡಬಾರದು ಎಂಬ ಪ್ರಜ್ಞೆ ಮೂಡದೇ ಇದ್ದುದರಿಂದಲೇ ತಾನೆ, ಮತ್ತೆ ಹಾಗೆ ಪ್ರಾಯಶ್ಚಿತ್ತ ಪಡುವ ಹಾಗೆ ಆಗಿದ್ದು. ಆ ಪ್ರಾಯಶ್ಚಿತ್ತದಿಂದ ಹುಟ್ಟಿದ ಅಪರಾಧಿ ಪ್ರಜ್ಞೆ, ತಪ್ಪು ಮಾಡಬಾರದು ಎಂಬ ಸಾಮಾನ್ಯ ಜ್ಞಾನ ಮುಂದೆಂದೂ ಇಂತಹ ಘಟನೆ ಮರುಕಳಿಸದಂತೆ ತಡೆಯುತ್ತದೆ ಎಂದು ನಂಬುತ್ತ ಈ ಲೇಖನಕ್ಕೆ ಅಂತ್ಯ ಹೇಳುತ್ತಿದ್ದೇನೆ.

** - ಇಲ್ಲಿ ಭಾಷಾಂತರದಲ್ಲಿ ತಪ್ಪಾಗಿರುವ ಸಾಧ್ಯತೆಯಿರುವುದರಿಂದ ಎಲ್ಲ ತಪ್ಪುಗಳಿಗೆ ಸಂಪೂರ್ಣವಾಗಿ ನಾನೇ ಹೊಣೆ.
subrahmanyahegde.wordpress.com 

Sunday, 29 May 2011

ತಲ್ಲಣಿಸದಿರು...

ಈ post ಹುಟ್ಟಿದ್ದು ಒಂದು ತಿಂಗಳ ಮೊದಲು, ಒಂದು ಕ್ಷಣದಲ್ಲಿ ಹುಟ್ಟಿದ  ಬಾವವನ್ನು ಹಾಗೇ  ಬರೆಯಲು ತೆಗೆದುಕೊಂಡಿದ್ದು ಒಂದೆರಡು ಗಂಟೆ . ಅದರಿಂದ  ಅಲ್ಲಲ್ಲಿ ಅಪ್ರಬುಧ್ಧ ಎನ್ನಿಸಬಹುದಾದರೂ ಇದನ್ನು ಇಲ್ಲಿ publish ಮಾಡದೇ ಇರಲಾರದಾದೆ . ಒಂದು ಕ್ಷಣದ ಕೋಪವನ್ನು ತಡೆಯಲಾರದೆ ಮುಂದೆ ಪರಿತಪಿಸುವುದರ ಬದಲು ....

ಸಿಟ್ಟು ಮಾಡಬೇಡವೇ ಮನವೇ, ಸುಮ್ಮನಿರು
ಕೆಟ್ಟ ಆವೇಶ ಯಾಕೆ ನಿನಗೆ ಮಾತಿನಲ್ಲಿ
ಪುಟ್ಟ ಕಾರಣವೇ ಸಾಕೇ, ನಿನ್ನ
ಕಟ್ಟು ತಪ್ಪಿ ಹೀಗೆ ಹರಿಯಗೊಡಲು ||


ಕೊಡವು ಬಿದ್ದಿತ್ತು ಮುಂಗುಸಿಯ ಮೇಲೆ
ಒಡನೆ ಸತ್ತಿತ್ತು ತನ್ನದಲ್ಲದ ತಪ್ಪಿಗೆ
ಒಡೆದಿತ್ತು ಹಾಲು ಮರಳಿ ಸರಿಯಾಗದಂತೆ
ಒಂದು ನಿಮಿಷದಾವೇಶದ ಗುರುತಿಗೆ


ಕೋಪ ಮಾಡಿಕೊಳ್ಳಲಾರೆ ಇನ್ನು ಎಂದೆ
ತಾಪ ತಡೆದುಕೊಂಬೆ ಒಳಗೆ ಎಂದೆ
ಪಾಪ! ಮರೆತುಹೋಯಿತೆ ನಿನಗೆ ಅಲ್ಲೇ
ದೀಪ ಬೆಂಕಿಯಾಯ್ತೇ ಗಾಳಿ ಸಿಕ್ಕಿದಲ್ಲೇ


ಒತ್ತರಿಸಿ ಬಂದಿತ್ತಲ್ಲೇ ರೋಷ, ಪಿತ್ತ ಕರಗಿ
ಚಿತ್ತ ಮರುಗಿತ್ತಲ್ಲೇ ದುಡುಕಿಗೆ, ಹುಡುಗುಬುದ್ಧಿಗೆ
ಎತ್ತ ಹೋದರೋ ನಿನ್ನ ದುಡುಕಿಗೆ ಬೇಸರಿಸಿ,
ಪತ್ತೆ ಇಲ್ಲದ ರೀತಿಯಲ್ಲಿ ಅನಂತದೊಳಗೆ

Friday, 20 May 2011

ಒಬ್ಬ ರಾಘವೇಂದ್ರ ಹೆಗಡೆಯ ನೆನಪಿಗೆ

ಹೌದಲ್ಲ, ಆಗಲೇ ನಾಲ್ಕು ವರ್ಷಗಳು ಆಗಿ ಹೋದವು. ಹೀಗೆ ಇದೇ ಮೇ ಕಳೆದು ಮಳೆ  ಬರಲು ಸುರುವಾಗುವ ಸಮಯದಲ್ಲಿಯೇ,  ಒಂದು ದಿನ ಗೆಳೆಯ ಗುರು ಭಟ್ಟನಿಗೆ ಕರೆ ಮಾಡಿದಾಗ ಆ ಘೋರ ತಿಳಿದಿದ್ದು. ಅವನು ಹೇಳಿದ್ದನ್ನು ಅರಗಿಸಿಕೊಳ್ಳುವುದಿರಲಿ ನಂಬಲೇ ಸಾಧ್ಯವಾಗಲಾರದಾಯ್ತು. ಯಾವಾಗಲೂ ಮಾಡುವಂತೆ ಏನೋ ಒಂದು prank  ಮಾಡುತ್ತಿರಬಹುದೇನೋ ಎಂದುಕೊಂಡೆ, ಹಾಗೆ ಆಗಿದ್ದರೆ ಒಳ್ಳೆಯದಿತ್ತು. ಆದರೆ ಬದುಕು ಹಾಗೇ, ಎಲ್ಲವೂ ನಾವು ಬಯಸಿದ ಹಾಗೇ ಆದರೆ ಕ್ರೂರ ವಿಧಿಗೆ ಸಂತೋಷವೆಲ್ಲಿ? ಗುರು ನಮ್ಮ ರಾಘು ಇದ್ನಲ್ಲ, ಅವನು ಮೊನ್ನೆ ಹೋಗ್ಬಿಟ್ಟ ಅಂತೆಎಂದಾಗ, ’ಹೇಗೆ?’ ಎಂದು ಕೇಳಬೇಕೆಂಬಷ್ಟರ  ಮಟ್ಟಿಗೂ ಪ್ರಜ್ಞೆ ಇರದಂತೆ ಗರ ಬಡಿದ ಹಾಗಾಗಿಹೋಗಿತ್ತು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಭಟ್ಟನೇ ಕರುಳಿನಲ್ಲೇನೋ ತೊಂದರೆಯಿತ್ತಂತೆ, ಹೊಟ್ಟೆ ನೋವು ಎಂದು ಆಗಾಗ ಹೇಳುತ್ತಿದ್ದನಲ್ಲ, ಅದೇ ಇದ್ದಿರಬಹುದು.   ಎಂದ ಎನ್ನುವಷ್ಟಕ್ಕೆ ಒಂದು ಅಧ್ಯಾಯದ ಅಂತ್ಯವಾಗುತ್ತದೆ. 
          ಅದಕ್ಕಿಂತ ಒಂದು ವರ್ಷ ಹಿಂದಕ್ಕೆ ಹೋಗೋಣ. ನಾನು ೧ ಪಿ.ಯು. ಗೆ ಹಿಂದೆ ಮುಂದೆ ಗೊತ್ತಿಲ್ಲದ ಉಜಿರೆಗೆ ಹೋಗಿ ಸಿದ್ಧವನಕ್ಕೆ ( ನಮ್ಮ ಹಾಸ್ಟೆಲ್ ಹೆಸರದು) ಕಾಲಿಟ್ಟಿದ್ದೆ. ನಾನು ಬಂದಿದ್ದೇ ಲೇಟು, ಉಳಿದವರೆಲ್ಲ ಮೊದಲೇ ಬಂದಿದ್ದರಾಗಿ, ಹೊಸ ಪ್ರದೇಶದಲ್ಲಿ ಇಬ್ಬರು ಅಪರಿಚಿತರು ಮೊದಲು ಭೇಟಿಯಾದ ಕೂಡಲೇ ಹುಟ್ಟುವ ಗೆಳೆತನ ಮೂಡುವ ಅವಕಾಶ ಹಾಗೆ ತಪ್ಪಿ ಹೋಗಿತ್ತು. ಅದರ ಮೇಲೆ ಇವನು ಟಾಪರ್ ಅಂತೋಎಂಬ ಆಶ್ಚರ್ಯ, ಉದ್ವೇಗ ಭರಿತ  ಕೌತುಕ, ಹಾಗೂ ಇವನು ಸಾಮಾನ್ಯರ ಜೊತೆಗೆ ಹೊಂದಿಕೊಳ್ಳಲಾರದ ಭಿನ್ನತಳಿ ಎಂಬ ಪೂರ್ವಾಗ್ರಹದಿಂದ ಎಷ್ಟೋ ಹುಡುಗರು ಅಷ್ಟು ಹೊತ್ತಿಗಾಗಲೇ ಪೀಡಿತರಾಗಿದ್ದರೇನೋ ಎಂಬಷ್ಟರ ಮಟ್ಟಿಗೆ ನನಗೆ ರೂಮಿಗೆ ಬಂದ ಒಂದು ಗಂಟೆಯೊಳಗೆ ಏಕಾಂಗಿತನ ಕಾಡತೊಡಗಿತ್ತು. ಯಾರೂ ಮಾತನಾಡಲೂ ಸಿಗದ ಹಾಗಾಗಿ ಸುಮ್ಮನೇ ಕುಳಿತಿದ್ದೆ. ಆಗ ಯಾವ ಮಾಯೆಯಿಂದ ಬಂದೆಯೋ ನೀನು, ಅದೇ ರಭಸ, ಅದೇ ದಾಪುಗಾಲುಗಳು, ನಡೆದರೆ ನೆಲವೇ ಶಬ್ದ ಮಾಡುವ ಕುಳ್ಳ, ಬೊಜ್ಜಲ್ಲದಿದ್ದರೂ ಬೊಜ್ಜೆನಿಸುವ ದಪ್ಪನೆಯ ಶರೀರ. ಮೊದಲಿದ್ದ ಅಲ್ಪ ಪರಿಚಯವೇ ಸಾಕಾಗಿ ನನ್ನ ಬೆನ್ನ ಮೇಲೊಂದು ಗುದ್ದು ಬಿದ್ದಿತ್ತು. ಅಗಲಿದ್ದ ಜೀವದ ಗೆಳೆಯರ ಪುನರ್ಮಿಲನದಲ್ಲಿ ಮಾತನಾಡಹುದಾದ ಶೈಲಿ. ಸರ್ರನೇ ನಿನ್ನ ರೂಮಿಗೆ ಕರೆದುಕೊಂಡು ಹೋಗಿ ನಿನ್ನ ಅಮ್ಮ ಮಾಡಿಕೊಟ್ಟಿದ್ದ ಏನೋ ಕಜ್ಜಾಯವನ್ನು, ನನಗೇ ಕೊಡಲು ನಿಮ್ಮಮ್ಮ ಹೇಳಿದ್ದರೇನೋ ಎಂಬಂತೆ ಕೊಟ್ಟೆ. ಸಂಜೆ ಬಂದು ನಿನ್ನ ಬ್ಯಾಗನ್ನು ನೋಡಿಕೊಳ್ಳುತ್ತೇನೆ ಎಂಬ ಭರವಸೆ ಕೊಟ್ಟೆ. ನಿನ್ನ ಶೈಲಿಯೇ ಹಾಗೆ, ಯಾವ ಪೀಠಿಕೆಗೆ ಆಗಲೀ, ಯಾವ formalityಗೆ ಆಗಲೀ ಅವಕಾಶವಿಲ್ಲ.ಎಲ್ಲವೂ ನೇರಾನೇರ.
          ಎರಡು ಫ಼್ಲೋರ್ ಗಳ ಅಂತರ ನಮ್ಮಿಬ್ಬರ ರೂಮುಗಳ ಮಧ್ಯೆ ಇತ್ತಾದರೂ ಅದೇನೂ ಅಷ್ಟರ ಮಟ್ಟಿಗಿನ ಅಂತರ ಎನಿಸಲಿಲ್ಲ. ಪ್ರತೀ ಸಲವೂ ನೀನು ಬರುತ್ತಿದ್ದೆ ಏನೋ ಒಂದು ವಿಷಯ ಇಟ್ಟುಕೊಂಡು. ಹೊಸಿಲ ಹೊರಗಿನಿಂದಲೇ ಗಟ್ಟಿಯಾಗಿ ಏನೋ ಒಂದನ್ನು ಕೂಗಿಕೊಂಡು ಬರುವ ರೀತಿಗೇ ಇದು ರಾಘವೇಂದ್ರನೇ ಎಂದು ಗೊತ್ತಾಗುತ್ತಿತ್ತು, ತುಡುಗು ದನಕ್ಕೆ ಕಟ್ಟಿದ ಗಂಟೆಯ ಶಬ್ದದ ಹಾಗೆ, ಆ ಹೋಲಿಕೆಯನ್ನೂ ನೀನೇ ಕೊಟ್ಟಿದ್ದು. ಕೆಲವೊಮ್ಮೆ ಕಿರಿಕಿರಿಯಾಗುವ ಹಾಗಾಗುತ್ತಿತ್ತಾದರೂ ಹಾಗೆ ಮಾಡಲು ಗೆಳೆಯನಿಗೆ ಮಾತ್ರ ಹಕ್ಕಿದೆಯಲ್ಲವೇ. ಅದರ ಬಗ್ಗೇನೂ ತಕರಾರಿಲ್ಲ ಬಿಡು. ನನಗಿನ್ನೂ ನೆನಪಿದೆ, ಪ್ರತೀ ಶನಿವಾರವೂ ಹಾಸ್ಟೆಲ್ ನಲ್ಲಿ ತೋರಿಸುತ್ತಿದ್ದ ಫಿಲಂಗೆ ಹೋಗುವ ಮುಂಚೆ ನಮ್ಮ ರೂಮಿಗೆ ಬರುವುದು, ನನಗೆ ಬರಲು ಹೇಳುವುದು, ನಾನು ಇಷ್ಟವಿಲ್ಲ ಎಂದು ಹೇಳುವುದು, ಆದರೂ ಎಳೆದುಕೊಂಡು ಹೋಗುವುದು, ನಾನಲ್ಲೇ ನಿದ್ದೆ ಮಾಡುವುದು, ನಿನಗೂ ನೋಡಲು ಮನಸ್ಸು ಬಾರದೇ ಎದ್ದು ಬರುವುದು, ಇದು ಎಷ್ಟುಬಾರಿಯೋ? ಲೆಕ್ಕ ಇಟ್ಟವರಾರು. ಕೊನೆಕೊನೆಗೆ ನಿನಗೇ ಬೇಜಾರಾಗಿ ನೀನೂ ಹೋಗುವುದನ್ನು ನಿಲ್ಲಿಸಿದೆ , atleast ನನ್ನನ್ನು ಕರೆಯುವುದನ್ನು ನಿಲ್ಲಿಸಿದೆ. ಹೋಗಲಿ ಬಿಡು.
          ಎಷ್ಟೋ ನೆನಪುಗಳು, ಆಡಿಕೊಂಡ ಎಷ್ಟೋ ಮಾತುಗಳು , ಆಡದೇ ಹೋದ ಎಷ್ಟೋ ಯೋಚನೆಗಳು. ಒಂದೊಂದು ನೆನಪೂ ಚಿನ್ನದ ಬೆಲೆಯದ್ದು, ಬೆಲೆಯಿಡಲು ಸಾಧ್ಯವಾದರೆ. ಏನೋ tease ಮಾಡಿದರೆ ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡು ೨೫ ಡಿಪ್ಸ್ ನ್ನು ನಿತ್ತ ನೆಲದಲ್ಲಿ ಹೊಡೆದು ತೋರಿಸಿದ್ದು ಆಗ ಆಶ್ಚರ್ಯವೆನಿಸಿದರೂ ಈಗ funny ಅನಿಸುತ್ತದೆ. ಯಾವಗಲೋ ಒಮ್ಮೆ NTSE ಟ್ರೇನಿಂಗ್ ಸಮಯದಲ್ಲಿ ಕೆಮಿಸ್ಟ್ರಿ ಕ್ಲಾಸಿನಲ್ಲಿ ಆಯ್ಕೆಗಳನ್ನು ಕೊಡುವ ಮೊದಲೇ ಉತ್ತರ ಸಿಆಯ್ಕೆ ಎಂದು ಹೇಳುವಷ್ಟರ ಮಟ್ಟಿಗೆ ನಿದ್ರೆ ಮಾಡುತ್ತಿದ್ದ ನನ್ನ ಸಾಮರ್ಥ್ಯವನ್ನು ಆಡಿಕೊಳ್ಳುತ್ತಿದ್ದ ಬಗೆ ನನಗೇ ನಗೆ ತರಿಸುತ್ತದೆ ಎಂದರೆ ಅದು ಸುಳ್ಳಲ್ಲ. ರೀಡಿಂಗ್ ಟೇಬಲ್ ಮೇಲೆ ಅಪ್ಪ ಅಮ್ಮನ ಒಂದು ಛಾಯಾಚಿತ್ರ ಇಟ್ಟುಕೊಂಡು, ಪ್ರತೀ ಸಲ ಓದಲು ಕೂರುವ ಮೊದಲು ನಮಸ್ಕರಿಸುತ್ತಿದ್ದ ನಿನ್ನ ಅಭ್ಯಾಸವನ್ನು ನಾನು ಆಡಿಕೊಂಡಿದ್ದು , ನೀನು ಉರಿದುಕೊಂಡಿದ್ದು , ನಾನು ಕ್ಷಮೆ ಕೇಳಲೂ ಹಿಂಜರಿದಿದ್ದು , ಇವೆಲ್ಲಾ ನನ್ನ ಹುಡುಗಾಟದ ಅತಿರೇಕ ಎಂದು ಇವತ್ತು ಎನ್ನಿಸುತ್ತದೆ. ಇದೆಲ್ಲದರ ಮಧ್ಯದಲ್ಲಿ ನಿನಗೆ ಆವಾಗಾವಾಗ ಬರುತ್ತಿದ್ದ ಹೊಟ್ಟೆನೋವು ಗಮನಕ್ಕೆ ಬರದಂತೆ ಹೋಯಿತೇ, ಅಥವಾ ಹಾಗೆ ತೋರಿಸಿಕೊಂಡು ಸಂತಾಪ ಹುಟ್ಟಿಸಿಕೊಳ್ಳುವುದು ನಿನ್ನ ಜಾಯಮಾನಕ್ಕೆ ಆಗಿಬಾರದು ಎಂದು ಸುಮ್ಮನಾದೆಯೇ. ಏನೋ ಹೀಗೇ ಅದೊಂದು ಹದದಲ್ಲಿ ಹೋಗುತ್ತಿತ್ತು ಬದುಕು ಆ ಸಂಜೆಯವರೆಗೆ. ಅದೇನೋ ಚಿಕ್ಕ ಮಾತೇ ದೊಡ್ಡ ವಾದವಾಗಿ ಮನಸ್ಸೆಲ್ಲಾ ಹುಳಿಹುಳಿಯಾಗಿದ್ದು ಒಂದು ಹಂತ. ಮತ್ತೆ ಎದುರಲ್ಲಿ ಸಿಕ್ಕಾಗ ಪರಿಚಯದ ನಗೆ ನಕ್ಕು ಮಾತನಾಡುವಷ್ಟು ಆತ್ಮೀಯತೆ ಮತ್ತೆ ಮೂಡಿತಾದರೂ ಅದು ಹೃದಯದಿಂದ ಬಂದಿದ್ದಲ್ಲ ಎಂದು ಇಬ್ಬರಿಗೂ ಗೊತ್ತಾಗುತ್ತಿತ್ತು. ಮತ್ತೆ ಅದೇ ಭಾವ ಮೂಡಲು ಸಮಯ ಬೇಕಾಗುತ್ತಿತ್ತು. ನಾನು ಕಾಯಲು ತಯಾರಿದ್ದೆ. ಆದರೆ ಕಾಯಲು ನೀನು ಬಹಳ ದಿನ ಉಳಿಯಲಿಲ್ಲವಲ್ಲ.
          ಹಾಗೆ ಒಂದು ವರ್ಷದ ಕೊನೆಗೆ ಫಲಿತಾಂಶ ಬಂದಿತ್ತು. ಆಶ್ಚರ್ಯಕರವಾಗಿ ಸಿದ್ಧವನದ ಎಲ್ಲಾ ಘಟಾನುಘಟಿಗಳ ಮಧ್ಯೆ ಒಬ್ಬ ರಾಘವೇಂದ್ರ ಹೆಗಡೆ ಫಸ್ಟ್ ಬಂದಿದ್ದ. ಯಾರು ಊಹಿಸಿದ್ದರೋ ಬಿಟ್ಟಿದ್ದರೋ ಗೊತ್ತಿಲ್ಲ, ಈ ಒಬ್ಬ ರಾಘವೇಂದ್ರ ಹೆಗಡೆ ಭಯಂಕರ ಕೂಲ್ ಆಗಿದ್ದ. ಎಷ್ಟು ಜನ ಶುಭ ಹಾರೈಸಿದ್ದರೋ, ಎಷ್ಟು ಜನ ಮನದಲ್ಲೇ ಮುಲುಗಿದರೋ ಗೊತ್ತಿಲ್ಲ , ನಾನಂತೂ ಮುಂದಿನ ವರ್ಷ ನೋಡಿಕೊಳ್ಳುತ್ತೇನೆಂಬ ಸ್ಪೂರ್ತಿ ಪಡೆದಿದ್ದೆ. ನಿಜವೆಂದರೆ ನಾನು ಖುಷಿ ಪಟ್ಟಿದ್ದೆ, ನಾನಂತೂ ಆ ಸ್ಥಾನವನ್ನೂ ಪಡೆಯುವುದನ್ನು ಬಯಸುತ್ತಿರಲಿಲ್ಲವಾಗಿ ಒಬ್ಬ ನಮ್ಮೂರಿನವನು ಫಸ್ಟ್ ಬಂದ ಎಂಬ ಹೆಮ್ಮೆ ಹೆಗಲೇರಿತ್ತು. ಹೆಗಲೇರಿದ ಹೆಮ್ಮೆ ಮನಸ್ಸಿನಲ್ಲಿಳಿಯುವ ಮೊದಲೇ ನಿನ್ನ ಕರುಳು ಕೈ ಕೊಟ್ಟಿತ್ತು. ಮಾಡಿದ ಆಪರೇಶನ್ ಕೂಡ ಕೈ ಕೊಟ್ಟು ನೀನು ಎಲ್ಲರನ್ನು ಬಿಟ್ಟು ಅನಂತವನ್ನು ಸೇರಿದ್ದೆ.
         
ಯಾವುದೇ ವಸ್ತುವಿರಲಿ, ವ್ಯಕ್ತಿಯಿರಲಿ , ಅದರ ಅಸ್ತಿತ್ವದ ಮಹತ್ವ ಅದು ಇರುವಾಗ ತಿಳಿಯಲಾರದು. ಅದನ್ನು ಕಳೆದುಕೊಂಡ ಮೆಲೆಯೇ ಅದನ್ನು ಎಷ್ಟು ಕಳೆದುಕೊಂಡಿದ್ದೇವೆ ಎಂಬುದರ ಅಂದಾಜು ಸಿಗುವುದು. ಈಗ ಹೀಗೇ ಒಮ್ಮೆ ಹಿಂತಿರುಗಿ ನೋಡಿಕೊಂಡರೆ ಅದೆಷ್ಟು ಸವಿಘಳಿಗೆಗಳನ್ನು ಒಂದು ಅಹಂನ ಹೆಸರಿನಲ್ಲಿ ಕಳೆಯಗೊಟ್ಟೆವು ಎನಿಸುತ್ತದೆ. ಆ ಅಪ್ರಬುದ್ಧತೆಗೆ ,ಮರುಕ ಹುಟ್ಟುತ್ತದೆ. ಹಾಗೆಂದೂ ನೀನೇ ನನ್ನ 'best friend' ಆಗಿದ್ದೆ ಎಂದರೆ ಅದು ಸುಳ್ಳಾಗಬಹುದೇನೋ, ಆದರೆ ನಿನ್ನನ್ನು ಇಂದಿಗೂ miss ಮಾಡಿಕೊಳ್ಳುವಷ್ಟರ ಮಟ್ಟಿಗೆ ನಾನು ನಿನ್ನನ್ನು ನೆನಪಿಟ್ಟಿದ್ದೇನೆ, ಹಾಗೂ  ಸಮಯಕ್ಕೆ ಏನನ್ನಾದರೂ ಮರೆಸುವ ಶಕ್ತಿಯಿದೆ ಎಂಬುದು ಎಲ್ಲ ಸರಿಯೂ ಸತ್ಯವಾಗಬೇಕೆಂದೇನೂ ಇಲ್ಲ ಎಂದು ಹೇಳುವುದಷ್ಟನ್ನು ಈ ಲೇಖನ ಮಾಡಬಲ್ಲುದಾದರೆ ಅಲ್ಲಿಗೆ ಇದು ಸಾರ್ಥಕ್ಯವನ್ನು ಕಂಡೀತು.