Saturday 15 December 2012

ನಮ್ಮ ಚಿತ್ರರಂಗ ಎತ್ತ ಸಾಗುತ್ತಿದೆ?



"ನಮ್ಮ ಚಿತ್ರರಂಗ ಎತ್ತ ಸಾಗುತ್ತಿದೆ? " ಇತ್ತೀಚೆಗೆ ಪ್ರತೀ ಬಾರಿ ನಾನು ಒಂದು ಚಿತ್ರವನ್ನು ನೋಡಿ ಬಂದ ಮೇಲೂ ಈ ಪ್ರಶ್ನೆಯನ್ನು ನನ್ನಲ್ಲೇ ಕೇಳಿಕೊಳ್ಳುತ್ತೇನೆ. ಎಷ್ಟು ಗಾಢವಾಗಿ  ಕೇಳಿಕೊಳ್ಳುತ್ತೇನೆ ಎಂಬುದು ಆ ಚಿತ್ರ ಮೂಡಿಸಿದ ನಿರಾಶೆಯ ಮೇಲೆ ಅವಲಂಬಿಸಿರುತ್ತದೆ, ಅಷ್ಟೇ. ಕೆಲವೊಂದು ಚಲನಚಿತ್ರಗಳಿಂದ ಅರ್ಧಗಂಟೆಯ ಒಳಗೇ ಎದ್ದು ಬಂದಿದ್ದೇನೆ, ಈ ನಿರ್ದೇಶಕ ಮತ್ತು ನಿರ್ಮಾಪಕರನ್ನು ಆಜೀವಪರ್ಯಂತ ಚಿತ್ರಗಳನ್ನು ಮಾಡದಂತೆ ನಿಷೇಧಿಸಿ, ಪ್ರ‍ೇಕ್ಷಕರಿಗೆ ಮಾನಸಿಕ ಕಿರುಕಳ ನೀಡಿದ ಅಪರಾಧದ ಮೇಲೆ ಜೈಲಿಗೆ ಹಾಕಬೇಕುಉ ಎಂದು ಶಾಪ ಹಾಕಿಕೊಂಡು. ಇತ್ತೀಚೆಗೆ ಸುಮಾರು ನಾಲ್ಕೈದು ವರ್ಷಗಳಿಂದ ನೋಡಬೇಕೆನಿಸಿದ ಪ್ರತಿ ಚಲನಚಿತ್ರವನ್ನೂ ನೋಡಿದ್ದೇನೆ, ಆದರೆ ನೋಡಿದ ಮೇಲೂ ನೋಡಲೇಬೇಕಿತ್ತು ಈ ಚಿತ್ರವನ್ನು ಎನ್ನಿಸಿದ್ದು ಬಹಳ ಕಡಿಮೆ ಸಲ. ಯಾಕೆ ಹೀಗೆ? ನಮ್ಮಲ್ಲಿ ಕಲಾವಿದರ ಕೊರತೆಯಿದೆಯೇ? ನಿರ್ದೇಶಕರ ಕಲ್ಪನೆಗೆ ಬರವೇ? ಕಥೆಗಳೇ ಇಲ್ಲವೇ? ಯಾರೂ ಇಷ್ಟಪಟ್ಟು ಫಿಲಂ ಮಾಡುತ್ತಿಲ್ಲವೇ? ಸ್ಯಾಂಡಲ್ ವುಡ್ ಎಂಬುದೇ ಕಾಟಾಚಾರದ ವ್ಯವಹಾರವೇ? ಅಥವಾ ಇದು ಕಪ್ಪುಹಣವನ್ನು ಬಿಳಿಯದನ್ನಾಗಿ ಮಾಡುವ ವ್ಯವಸ್ಥಿತಜಾಲ ಮಾತ್ರವಾಗಿ ಉಳಿದು ಹೋಗಿದೆಯೇ? ಇವೆಲ್ಲವೂ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳೇ!

ಚಿತ್ರಕೃಪೆ : ಅಂತರ್ಜಾಲ 
ಏಕೆ ಹೀಗಾಗುತ್ತಿದೆ? ನನಗನಿಸುವ ಮಟ್ಟಿಗೆ ಮೊದಲನೆಯ ಕಾರಣ ಯಾರೂ ಇಷ್ಟಪಟ್ಟು ಚಲನಚಿತ್ರಗಳನ್ನು ಮಾಡುತ್ತಿಲ್ಲ. ಯಾವುದೋ ಒಬ್ಬ ಪುಣ್ಯಾತ್ಮ ರಿಯಲ್ ಎಸ್ಟೇಟ್ ದಂಧೆಯಲ್ಲೋ, ರಾಜಕಾರಣದಲ್ಲೋ, ಮತ್ತಾವ ವ್ಯವಹಾರದಲ್ಲೋ ಮಾಡಿದ ದುಡ್ಡು ಕಪ್ಪುಹಣದ ರೂಪದಲ್ಲಿದ್ದು ಅದನ್ನು legal ದುಡ್ಡನ್ನಾಗಿ ಮಾಡುವ ಹಂಬಲದಿಂದ ಮೂವಿ ಮಾಡುವವರಿದ್ದಾರೆ. ಒಂದಿಷ್ಟೂ ಪ್ರಚಾರವಿಲ್ಲದೇ ಬರುವ ಹೆಸರೇ ಕೇಳಿರದ, ಕಥೆಯೆಮ್ಬ ಗಂಧಗಾಳಿಯೇ ಇರದ ಸಾವಿರಾರು ಮೂವಿಗಳಿವೆಯಲ್ಲಾ ಇವುಗಳೆಲ್ಲಾ ಮೂವಿ ಮಾಡಬೇಕೆಂದಿರುವವನ ಪ್ರಾಮಾಣಿಕ ಪ್ರಯತ್ನ ಎಂದು ಹೇಗೆ ನಂಬಬಹುದು? ನಾನು ಒಂದು ಬ್ಲಾಗು ಬರೆದರೇ ಅದಕ್ಕೆ ಸಾಕಷ್ಟು ಪ್ರಚಾರ ಕೊಟ್ಟುಕೊಳ್ಳುತ್ತೇನೆ, ಜನಕ್ಕೆ ಗೊತ್ತಾಗಲಿ ಬರೆದಿರುವುದು ಎಂದು. ಹಾಗಿರುವಾಗ  ಈ ಮೂವಿಗಳು ಪ್ರಚಾರದ ಗೋಜಿಗೇ ಹೋಗದೇ ಯಾವುದೋ ಒಂದಿಷ್ಟು ಥಿಯೇಟರ್ ಗಳಲ್ಲಿ ಯಾವುದೇ ಸುದ್ದಿಯಿಲ್ಲದೇ ರಿಲೀಸ್ ಆಗುತ್ತವೆ, ಕೇವಲ ನಾಮಕಾವಸ್ಥೆಗೆ ಎಂಬಂತೆ. ನಿರ್ಮಾಪಕರಿಗಾಗಲೀ ನಿರ್ದೇಶಕರಿಗಾಗಲೀ ಜನ ತಮ್ಮ ಚಿತ್ರವನ್ನು ನೋಡಬೇಕೆಂದೇನಿರುವುದಿಲ್ಲ, ಕಪ್ಪುಹಣದ ವಿಲೇವಾರಿಯೇ ಉದ್ದೇಶವಾಗಿರುವಾಗ. 
ಇನ್ನು ಕೆಲವರಿದ್ದಾರೆ, ಕೆಲವು ನಿರ್ದೇಶಕರು/ನಿರ್ಮಾಪಕರು/ನಟರು.  ಎದೆಯೆತ್ತರಕ್ಕೆ ಬೆಳೆದ ಮಗನಿ(ಳಿ)ಗೆ ಇನ್ನೂ ಕೆಲಸ/ಅವಕಾಶ ಸಿಗದಿದ್ದುದರಿಂದ ಅವನಿ(ಳಿ)ಗೆ ಒಂದು ಅವಕಾಶ ಕೊಡುವ ಒಂದೇ ಕಾರಣದ ಸಲುವಾಗಿ ಮೂವಿ ಮಾಡುತ್ತಾರೆ. ಅವರ ಮಗನೊಬ್ಬ ಹೀರೋ ಆದ ಎಂಬಲ್ಲಿಗೆ ಆ ಮೂವಿ ಸಾರ್ಥಕ್ಯ ಕಾಣುತ್ತದೆ. ಶಾಲೆಯಲ್ಲಿ ಫಿಸಿಕಲ್ ಎಜುಕೇಶನ್ ಟೀಚರ್ ಮಗ ಶಾಲೆಯ ಸ್ಪೋರ್ಟ್ಸ್ ಟೀಮಿನ ನಾಯಕನನ್ನಾಗಿ ಮಾಡಿದಂತೆ. ಜಗ್ಗೇಶ್ , ಎಸ್ ನಾರಾಯಣ್ ಎಂಬುವು ಕೇವಲ ಒಂದೆರಡು ಹೆಸರುಗಳು ಈ ಲಿಸ್ಟಿನಲ್ಲಿ. ಆ ಮೂವಿಗಳು ತೋಪೆದ್ದು ಹೋದವು ಎಂದು ಬಿಡಿಸಿ ಹೇಳಬೇಕಿಲ್ಲವಷ್ಟೇ. 
ಚಿತ್ರಕೃಪೆ : ಅಂತರ್ಜಾಲ 
ಇನ್ನು ಮತ್ತೆ ಕೆಲವರಿಗೆ ಮೆಲುಕು ಹಾಕುವ ಚಟ, ಅತ್ಯುತ್ತಮ ಉದಾಹರಣೆ ನಮ್ಮ ಶಿವರಾಜ್ ಕುಮಾರ್, ರವಿಚಂದ್ರನ್ ರಂತಹವರು. ಒಂದು ಕಾಲದಲ್ಲಿ ತಾನೂ ಮೂವಿ ಮಾಡುತ್ತಿದ್ದೆ ಮತ್ತು ಜನರು ಇಷ್ಟಪಟ್ಟು ನೋಡುತ್ತಿದ್ದರು ಎಂಬ ಕನವರಿಕೆಯಿಂದಲೋ, ಈಗಲೂ ಆ ವರ್ಚಸ್ಸು, ಕ್ರಿಯೇಟಿವಿಟಿ ನಮ್ಮಲ್ಲಿ ಉಳಿದಿದೆ ಎಂಬ ಸುಳ್ಳು ನಂಬಿಕೆಯನ್ನು ಅತಿಯಾಗಿ ನಂಬಿಕೊಂಡು ಈಗಲೂ ಮೂವಿ ಮಾಡುತ್ತಾರೆ. ವಯಸ್ಸಿನ ಜೊತೆಗೆ ಬರಬೇಕಾದ ಪ್ರೌಢಿಮೆ ಬರದೇ, ಈಗಲೂ ಹರೆಯದ ಯುವಕನ ಪಾತ್ರ ಮಾಡಲು ಹೋಗುವ ಇಂತಹವರು, ಕಮಲ್ ಹಾಸನ್, ಅಮಿತಾಭ್, ಮುಮ್ಮೂಟಿಯಂತಹವರಿಂದ ಕಲಿಯುವುದು ಬೇಕಾದಷ್ಟಿದೆ. ಅಥವಾ ಶಾಹ್ ರುಖ್, ಅಮೀರ್ ಖಾನ್ ನಂತಹವರು ಈಗಲೂ ಕಾಲೇಜ್ ಹುಡುಗನ ಪಾತ್ರ ಮಾಡುತ್ತಾರೆ ಎಂಬುದು ನಿಜವಾದರೂ ಅವರು ಹರೆಯದ ಹುಡುಗನ ಹಾಗೆಯೇ ಕಾಣಿಸಿಕೊಳ್ಳುತ್ತಾರೆ, ಕೊನೆಪಕ್ಷ ಆ ಸಿನಿಮಾದ ಮಟ್ಟಿಗೆ.
ಯಾರಿಗೂ ತಿಳಿಯದಂತೆ ರಿಮೇಕ್ ಮಾಡುವ ಕಲೆ ತನಗೆ ಸಿದ್ಧಿಸಿದೆ ಎಂಬ ಹುಂಬತನವೊಂದಿದೆ, ಅದೂ ಹಾಲಿವುಡ್ ಮೂವಿಗಳಿಂದಲೋ, ಹಳೆಯ ಮೂವಿಗಳಿಂದಲೋ ಭಟ್ಟಿ ಇಳಿಸುವವರಲ್ಲಿ ಇದು ಹೆಚ್ಚು. ಹಾಗೆಂದು ನಾನು ರಿಮೇಕ್ ಮಾಡುವುದರ ವಿರುದ್ಧ ಎಂದೇನೂ ಅಲ್ಲ. ರಿಮೇಕ್ ಆದ ಮೂವಿ ಬದಲಾಗಿ ಫ್ರೇಮ್ ಟು ಫ್ರೇಮ್ ಒರಿಜಿನಲ್ ಹಾಗೇ ಇರುತ್ತದೆ ಎಂದಾದರೆ ಯಾಕೆ ರಿಮೇಕ್ ಮಾಡಬೇಕಿತ್ತು, ಡಬ್ಬಿಂಗ್ ಮಾಡಿದ್ದರೆ ಸಾಕಾಗುತ್ತಿರಲಿಲ್ಲವೇ? ಅದೂ ಹೋಗಲಿ, ಹೀಗೆ ಮಕ್ಕಿ ಕಾ ಮಕ್ಕಿ ಕಾಪಿ ಮಾಡಿದ ಮೇಲೂ 'ಇಂತಹ ಮೂವಿಯನ್ನು ರಿಮೇಕ್ ಮಾಡುತ್ತಿದ್ದೇವೆ' ಎಂದು ಕ್ರೆಡಿಟ್ ಸಹ ಕೊಟ್ಟುಕೊಳ್ಳುವುದಿಲ್ಲ ಈ ಭೂಪರು. ಸುದೀಪ್ ನಂತಹವರು ಕೇವಲ ರಿಮೇಕ್ ಮೂವಿಗಳಿಗೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡುಬಿಟ್ಟಿದ್ದಾರೆ. ಮೂಲ ಚಿತ್ರದಿಂದ ಸ್ವಲ್ಪವೂ ಬದಲಾವಣೆ ಮಾಡದೇ ಹಾಗೇ ತೆರೆಗೆ ಬರುವ ಈ ಮೂವಿಗಳನ್ನು ನೋಡುವುದೆಂದರೆ ಸಮಯವ್ಯರ್ಥವೇ, ಅದೂ ಮೂಲಚಲನಚಿತ್ರವನ್ನು ನೀವು ನೋಡಿದ್ದರೆ. 
ತಾನು ಕಥೆಯಿಲ್ಲದೇ ಮೂವಿ ಮಾಡಿದರೂ ಜನರು ನೋಡುತ್ತಾರೆ, ನೋಡದೇ ಏನು ಮಾಡುತ್ತಾರೆ ಎಂಬ ಉಡಾಫೆಯಿಂದ ಮೂವಿ ಮಾಡುವ ನಿರ್ದೇಶಕರು ಕೆಲವರಿದ್ದಾರೆ. ಕೊನೆಯ ಬಾರಿಗೆ ಯೋಗರಾಜ್ ಭಟ್ಟರ ಮೂವಿಯಲ್ಲಿ ಕಥೆಯ ಎಳೆಯೊಂದಿದ್ದುದು ನನಗೆ ನೆನಪಿಲ್ಲ. ಹೌದು, ಅವರು ಅತಿ ಪ್ರತಿಭಾವಂತ ಡಯಲಾಗ್ ರೈಟರ್, ಆದರೆ ಮೂವಿಯೊಂದನ್ನು ಎರಡೂವರೆ ತಾಸು ಕುಳಿತು ನೋಡಲು ಕೇವಲ ಡಯಲಾಗ್ ಗಳು ಸಾಕಾಗುವುದಿಲ್ಲವಷ್ಟೇ . ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಭಟ್ಟರೇ ಸ್ವತಃ 'ತಮ್ಮ ಡ್ರಾಮಾ ಮೂವಿಯಲ್ಲಿ ಕಥೆಯಿದೆ' ಎಂದು ಹೇಳಿಕೆ ಕೊಟ್ಟಿದ್ದರು. ಇನ್ನು ಭಟ್ಟರು ಬರೆದು ಹರಿಕೃಷ್ಣರು ಸಂಗೀತ ಕೊಟ್ಟ ಕೆಲವು ಹಾಡುಗಳೋ ದೇವರಿಗೇ ಪ್ರೀತಿ. ಅಲ್ಲಿಯೂ ಪ್ರೇಕ್ಷಕರ ಬಗೆಗಿನ ಉಡಾಫೆಯನ್ನು ಧಾರಾಳವಾಗಿ ನೋಡಬಹುದು.
ಇಷ್ಟೆಲ್ಲಾ ಆದ ಮೇಲೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವ ಬಗ್ಗೆ ನಮ್ಮವರದ್ದು ಕಡುವಿರೋಧ. ಎಲ್ಲಿ ಡಬ್ ಮಾಡಲು ಬಿಟ್ಟರೆ ತಮಗೆ ರಿಮೇಕ್ ಮಾಡುವ ಅವಕಾಶ ತಪ್ಪಿ ಹೋಗುತ್ತದೆಯೆನೋ ಎಂಬ ಹೆದರಿಕೆಯೋ, ಅಥವಾ ತಮಗೆ ಅವರ ಚಿತ್ರಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದರ ಅಪರೋಕ್ಷ ಒಪ್ಪಿಗೆಯೋ ಒಟ್ಟಾರೆಯಾಗಿ ನಮ್ಮವರಿಗೆ ಡಬ್ಬಿಂಗ್ ಎಂದರೆ ಸುತಾರಾಂ ಇಷ್ಟವಿಲ್ಲ, ಕೆಲವರಂತೂ ಇದನ್ನು ಕನ್ನಡದ ಅಳಿವಿನ ಬಗ್ಗೆ ಸಮೀಕರಿಸಿಬಿಟ್ಟರು. 'ಸತ್ಯಮೇವ ಜಯತೇ' ಯಂತಹ ಕಾರ್ಯಕ್ರಮಗಳು ಮತ್ತೆಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಪ್ರಸಾರವಾದರೂ ಕನ್ನಡದವರು ಹಿಂದಿಯಲ್ಲಿಯೇ ನೋಡಿ ಖುಷಿ ಪಡಬೇಕಾಯಿತು.
ಇಷ್ಟೆಲ್ಲಾ ಕಾರಣಗಳಿವೆ, ಪರಿಹಾರ?? ಆ ದೇವರಿಗೇ ಗೊತ್ತು. 

ಒಂದು ಹಂಬಲಿಕೆ:

ಚಿತ್ರಕೃಪೆ : ಅಂತರ್ಜಾಲ 
ಕೆಲವೊಮ್ಮೆ ಯಾಕೋ ಮನಸ್ಸು ಅಣ್ಣಾವ್ರನ್ನು ನೆನೆಯುತ್ತದೆ. ೨೦೦ ಚಿತ್ರಗಳನ್ನು ಮಾಡಿದರೂ ಎಲ್ಲಿಯೂ ಏಕತಾನತೆಗೆ ಅವಕಾಶ ಮಾಡಿಕೊಡದಿದ್ದ, ೫೦ ವರ್ಷಗಳಷ್ಟು ದೀರ್ಘಕಾಲ ಚಿತ್ರರಂಗದಲ್ಲಿದ್ದರೂ ಕನ್ನಡ ಬಿಟ್ಟು ಬೇರೆ ಚಿತ್ರರಂಗದ ಕಡೆ ಮುಖಮಾಡದ ಮೇರು ಕಲಾವಿದ ಆತ. ಮನಸ್ಸು ಯಾಕೋ ಆತ ಈಗ ಬದುಕಿರಬೇಕಿತ್ತು ಎಂದು ಹಂಬಲಿಸುತ್ತದೆ.

Thursday 6 December 2012

ನಾಲ್ಕು ಮಿನಿ ಕಥೆಗಳು




ರೋಮಾಂಚನ
          ಒಂದು ಸಂಜೆ ಬಿ. ಎಮ್. ಟಿ. ಸಿ. ಬಸ್ಸಿನಲ್ಲಿ ಅಫೀಸಿನಿಂದ ಮನೆಗೆ ಬರುತ್ತಿದ್ದೆ. ಕಿಟಕಿಯ ಪಕ್ಕದ ಸೀಟಿನಲ್ಲಿ ಕೂತಿದ್ದೆ. ಕಿವಿಗೆ ಹಾಕಿಕೊಂಡಿದ್ದ ಎಫ಼್. ಎಮ್. ನಲ್ಲಿ ಅಣ್ಣಾವ್ರು ಹಾಡಿದ್ದ ’ಓಂ’ ಚಿತ್ರದ ’ಬ್ರಹ್ಮಾನಂದ ಸಾಕಾರ ಹಾಡು ಬಂತು. ಮೈ ತುಂಬ ಅಕ್ಷರಶಃ ರೋಮಾಂಚನ, ಪುಳಕ. ಕಾರಣ ಕಿಟಕಿಯಿಂದ ಬರುತ್ತಿದ್ದ ಗಾಳಿಯೋ? ಅಣ್ಣಾವ್ರ ಕಂಚಿನ ಕಂಠವೋ? ಗೊತ್ತಾಗಲಿಲ್ಲ.
...
ನಂಬಿಕೆ
          ಎರಡನೇ ಕ್ಲಾಸಿಗೆ ಹೊಸ ಟೀಚರ್ ಬಂದಿದ್ದರು. ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ಚಿಕ್ಕಮಕ್ಕಳ ಅಪಹರಣದ ಬಗ್ಗೆ ಮಕ್ಕಳಿಗೆ ತಿಳಿಹೇಳುವಂತೆ ಬಂದ ನೋಟಿಸಿನ ಆದೇಶದಂತೆ, "ಜಾಣ ಹುಡುಗರೇ, ಯಾರಾದರೂ ಅಪರಿಚಿತರು ನಿಮ್ಮನ್ನು ಪುಸಲಾಯಿಸಿದರೆ ಒಪ್ಪಿಕೊಳ್ಳಬೇಡಿ. ಯಾರೇ ಆಗಲಿ ಅಪರಿಚಿತರನ್ನು ನಂಬಬೇಡಿ. ...!" ಎಂದು ಹೇಳಿ ಮುಗಿಸಿರಲಿಲ್ಲ, ಕೊನೆಯ ಬೆಂಚಿನಿಂದ ಗುಂಡ ಕೂಗಿದ್ದ, "ನಿಮ್ಮನ್ನು ಹೇಗೆ ನಂಬುವುದು?"
...
ಏಕಿಷ್ಟು ನಿಧಾನ?
          ದಿನವೂ ಅವನು ಅವಳನ್ನು ಮನೆಯಿಂದ ಆಫೀಸಿಗೆ, ಅಫೀಸಿನಿಂದ ಮನೆಗೆ ಡ್ರಾಪ್ ಮಾಡುತ್ತಿದ್ದ. ರಸ್ತೆಯಲ್ಲಿ ಇವನು ಬೈಕನ್ನು ಬಿಟ್ಟುಕೊಂಡು ಹೋದರೆ ಸೈಕಲ್ಲುಗಳನ್ನು ಬಿಟ್ಟು ಮತ್ತೆಲ್ಲ ಚಲಿಸುವ ವಾಹನಗಳೂ ಇವನನ್ನು ಓವರ್ ಟೇಕ್ ಮಾಡುತ್ತಿದ್ದವು. ಒಂದು ದಿನ ತಡೆಯಲಾರದೇ ಕೇಳಿಬಿಟ್ಟಳು, "ಗೆಳೆಯಾ, ಏಕೆ ನೀನು ಇಷ್ಟು ನಿಧಾನ? ಬೆಂಗಳೂರಿನ ಟ್ರಾಫಿಕ್ಕಿನ ಬಗ್ಗೆ ಇಷ್ಟೆಲ್ಲ ಹೆದರಿಕೆಯೇ? ಅಥವಾ ಗಾಡಿಯ ಸಾಮರ್ಥ್ಯವೇ ಇಷ್ಟೇ?" ಮುಗ್ಧವಾಗಿರುವಂತೆ ಕೇಳಿದರೂ ವ್ಯಂಗ್ಯ ಧ್ವನಿಸುತ್ತಿತ್ತು. "ಹಾ ಹೌದು, ಎರಡೂ ನಿಜ ಎಂದೇ ತಿಳಿದುಕೋ" ಎಂದು ಹೊರಗೆ ಹೇಳಿ, ಮನಸ್ಸಿನಲ್ಲೇ "ತಾನು ನಿಧಾನವಾಗಿ ಹೋದರೆ ಅವಳ ಸಾನ್ನಿಧ್ಯ ಹೆಚ್ಚು ಹೊತ್ತು ಸಿಗುತ್ತದೆ" ಎಂಬ ನಿಜದ ಕಾರಣವನ್ನು ಮೆಲುಕು ಹಾಕಿದವನ ಧ್ವನಿ ತೋರಿಸದೇ ಮುಚ್ಚಿಟ್ಟುಕೊಂಡಿದ್ದ ಪ್ರೀತಿಯನ್ನು ಸ್ಫುರಿಸುತ್ತಿತ್ತು.
...
ಆ ಜಾಗ ನನಗೆ ಬೇಡ:
          ಅದು ಜನ ಕಿಕ್ಕಿರಿದು ತುಂಬಿದ್ದ ಬಸ್ಸು. ಹಿರಿಯ ನಾಗರೀಕರೊಬ್ಬರು ನಿಂತಿದ್ದರು. ಅವರು ನಿಂತಿದ್ದ ಜಾಗಕ್ಕೆ ಪಕ್ಕದಲ್ಲಿದ್ದ ಸೀಟಿನಿಂದ ಒಬ್ಬ ಇಳಿದಿದ್ದರಿಂದ ಆ ಸೀಟು ಖಾಲಿ ಆಯ್ತು. ಎಲ್ಲಿದ್ದನೋ ಒಬ್ಬ ನವಯುವಕ ಅರೆಕ್ಷಣದಲ್ಲಿ ಬಂದು ಕುಳಿತುಬಿಟ್ಟಿದ್ದ. ಕುಳಿತಮೇಲೆ ಹೆಮ್ಮೆಯಿಂದ ತನ್ನ ಚುರುಕುತನಕ್ಕೆ ತನ್ನನ್ನೇ ಪ್ರಶಂಸಿಸಿಕೊಳ್ಳಲೇನೋ ಎಂಬಂತೆ ಸುತ್ತಮುತ್ತ ನೋಡಿ ಜಗದ್ವಿಜಯದ ನಗೆನಕ್ಕ. ಪಕ್ಕದಲ್ಲಿ ನಿಂತಿದ್ದ ಹಣ್ಣು ಹಣ್ಣು ಮುದುಕರನ್ನು ನೋಡಿ ಅದೇನೆನ್ನಿಸಿತೋ ಸೀಟನ್ನು ಬಿಟ್ಟುಕೊಡಲು ತಯಾರಾದ, ಆ ಹಿರಿಯ ನಾಗರೀಕರೋ ಅಲ್ಲಿ ಕೂರಲು ಒಪ್ಪದೇ, " ಇದು ವಿಕಲಚೇತನರಿಗೆ ಕಾದಿರಿಸಿದ ಜಾಗ, ನನಗೆ ದೇವರು ಎರಡು ಎರಡು ಕೈ, ಕಾಲು ಹಾಗೂ ಎಲ್ಲ ಭಾಗಗಳನ್ನು ಸರಿಯಾಗಿ ಕೊಟ್ಟಿದ್ದಾನೆ" ಎಂದರು ಎಂಬಲ್ಲಿಗೆ ಆ ಜನತುಂಬಿದ ಬಸ್ಸಿನಲ್ಲಿ ಒಬ್ಬ ಹೀರೋ ಹುಟ್ಟಿದ್ದರು. 
...