Wednesday 20 February 2013

ವೈತರಣಿ



ವೈತರಣಿ , ಬಹಳ ಕಾಡಿದ ಕಥೆ ಅದು. ಒಂದು ತರಹ ಅನುಭವಿಸಿ ಬರೆದಿದ್ದೆ ಅದನ್ನುಹಾಗೆಂದು ಅದೇನೂ ಭಾರೀ ದೊಡ್ಡ ರಚನೆ ಎಂದಾಗಲೀ, ಅದು ನಿಜ ಜೀವನಕ್ಕೆ ಸಂಬಂಧಿಸಿದ್ದೆನ್ದಾಗಲೀ ಅಲ್ಲ. ಆದರೂ ಅದನು ಬರೆಯುವಾಗ ಯಾವುದೋ ಒಂದು ಕ್ಷಣದಲ್ಲಿ ಭಾವುಕನಾಗಿದ್ದುದು ಹೌದು, ವಿನಾಕಾರಣ. ಅದೇ ಗುಂಗಿನಲ್ಲಿ ಬರೆದ ಕವನ. ಇಷ್ಟವಾಗುವುದು ಕಷ್ಟವಿದೆಯೇನೋ, ಸಾಧ್ಯವಾದರೆ ಓದಿ ನೋಡಿ. ನೋಡಿ 
ಕಥೆಯ ಹಿನ್ನೆಲೆ ಬೇಕೆನಿಸಿದರೆ ಒಮ್ಮೆ ಓದಿ ನೋಡಿ ನಮ್ಮ ವೈತರಣಿಯ ಕಥೆಯನ್ನು ಇನ್ನೊಮ್ಮೆ ವೈತರಣಿ  


ಸಾವಿರ ಫ್ರಿಲ್ಲುಗಳನು ಮೆತ್ತಗೆ ಒದೆಯುತ್ತ,
ಆ ತುಂಟ ಕಣ್ಣಲ್ಲೇ ಭಾವಗಳನು ಮಿಡಿಯುತ್ತ,
ನನಸೇ ಕನಸಾಗಿ ಬಂದಿತ್ತೇ ನನ್ನೆದುರು ಎನಿಸುತ್ತ,
ಹೊತ್ತೊಯ್ದ ಕಾಲನಡೆತಡೆಯ ಮೀರಿ ನಿಲ್ಲುತ್ತ,
            ತಿರುಗಿ ಬಾರೊಮ್ಮೆ ನೀ ನನ್ನ  ವಸಂತ
            ನಿನಗಾಗೇ ಕಾದಿರುವೆ ನಾನನವರತ

ಕೂಡಿ ಕಂಡ ಕನಸುಗಳ ಪೂರ್ತಿಮಾಡಲು,
ಮಾರಾಟಕ್ಕಿರದ ಜಗವ ಪುಕ್ಕಟೆ ಕೊಳ್ಳಲು,
ಬೇಲಿಹೂಗಳಿಗೆ ಮುಡಿಯ ಸಗ್ಗ ತೋರಲು ,
ನಿನ್ನ ನೆನಪುಗಳ ಧಾಳಿಯಿಂದ ನನ್ನ ಬಿಡಿಸಲು,
           ನಿಯಾಮಕನ ನಿಯಮಗಳಿಗೆ ಆಗಿ ಸವಾಲು
           ಆಗಿಬಿಡು ನೀ ಮತ್ತೊಮ್ಮೆ ನನ್ನ ಪಾಲು

ಮರೆತೆನೆಂದರೂ ಮರುಕಳಿಸುವ ವೇದನೆಗೆ,
ತಿರುತಿರುಗಿ ಕಾಡುವ ಶೂನ್ಯದ ಯೋಚನೆಗಳಿಗೆ
ದುಃಖವುಕ್ಕಿ ಧುಮ್ಮಿಕ್ಕುವ ದುಃಖದ ನದಿ ನನಗೆ,
ಸಂತೈಸಿ ಬಾಚಿ ಅಪ್ಪಿಕೊಳ್ಳುವ ಶರಧಿ ನೀನಾಗೆ,
          ಒತ್ತರಿಸಿ ಬರುವ ದುಃಖ ಬತ್ತಿ ಹೋಗುವ ಹಾಗೆ
          ಬಾ ವೈತರಣಿ ಬಾ ಸಾವು ಸಾಯುವ ಹಾಗೆ