Thursday 10 April 2014

ಹಂಪಿ - ನಾನು ಕಂಡಂತೆ

ಹಂಪಿ, ಮುಸಲರ ಧಾಳಿಯ ವಿರುದ್ಧ ದಕ್ಷಿಣ ಭಾರತಕ್ಕೆ ರಕ್ಷೆಯಾಗಿ ನಿಂತ ವಿಜಯನಗರದ ರಾಜರ ರಾಜಧಾನಿಯಾಗಿ ಮೆರೆದ ಜಾಗವಿದು, ಮುತ್ತು-ಹವಳಗಳನ್ನು ಬೀದಿಬದಿಯಲ್ಲಿ ಮಾರಿದ ಸಮೃದ್ಧಿಯ ಸಿರಿವಂತಿಕೆಯ ನೆನಪಾಗಿ ಉಳಿದಿರುವ ಗುರುತಿದು. ಎಂತೆಲ್ಲ ವೈಭವಗಳನ್ನು ಕಂಡು ಮೆರೆದು ಈಗ ಹೃದಯವಿದ್ರಾವಕ ರೀತಿಯಲ್ಲಿ ಭಗ್ನವಾಗಿ ಕುಳಿತು ಮನ ಮರುಗಿಸುವ ವಿಶ್ವ ಪರಂಪರೆ ತಾಣವಿದು. ಹನುಮಂತನ ಜನ್ಮಸ್ಥಳವಾಗಿ, ವಾಲಿ-ಸುಗ್ರೀವರ ಯುದ್ಧಕಣವಾಗಿ, ಶಬರಿ ಶ್ರೀರಾಮಚಂದ್ರನಿಗೆ ಕಾದ ತಾಣವಾಗಿ ಹೀಗೆ ಪುರಾಣವನ್ನು ಹಾಸಿಹೊದ್ದಿರುವ ಪುಣ್ಯಭೂಮಿಯಿದು.

ನಾನು ಚಿಕ್ಕಂದಿನಿಂದಲೂ ನೋಡಬೇಕೆಂದಿದ್ದ ಕೆಲವು ಸ್ಥಳಗಳಲ್ಲಿ ಹಂಪಿ ಒಂದು. ಚಿಕ್ಕಂದಿನಿಂದಲೇ ಇತಿಹಾಸದ ಬಗ್ಗೆ ಒಲವಿದ್ದ ನನಗೆ ಹಂಪಿ ಆಸಕ್ತಿಕರವಾಗಿ ಗೋಚರಿಸಿದ್ದು ಆಶ್ಚರ್ಯವಲ್ಲ. ಎಷ್ಟ್ ದಿನಗಳ ಯೋಚನೆಯ ನಂತರ ಅಂತೂ ಕೊನೆಗೆ ಹಂಪಿಗೆ ಹೋಗುವ ಸುಯೋಗ ಯುಗಾದಿಯ ವಾರಾಂತ್ಯದ(ಮಾರ್ಚ್ ೨೯-೩೦) ರಜೆಯಲ್ಲಿ ಬಂದಿತ್ತು. ಹೋಗುವ ಮೊದಲು ವಿಜಯನಗರದ ಇತಿಹಾಸವನ್ನು ಸ್ವಲ್ಪ ಓದಿದರೆ ಎಷ್ಟರ ಮಟ್ಟಿಗೆ ಇತಿಹಾಸವನ್ನು ಮರೆತಿದ್ದೆ ಎಂಬುದು ನೆನಪಾಗಿತ್ತು.ಹೊರಡುವ ಎರಡು ದಿನಗಳ ಹಿಂದಿನಿಂದಲೇ ಮನದಲ್ಲಿ ಏನೋ ಒಂದು ಸಡಗರ, ಸಂಭ್ರಮ, ಕುತೂಹಲ. ಹೊರಟಿದ್ದು ನಾನು ಮತ್ತು ಗೆಳೆಯರಾದ ಶಶಾಂಕ, ರಾಜೀವ, ನವೀನ ಮತ್ತು ಗುರು ಭಟ್ಟ. ಶುಕ್ರವಾರ ಸಂಜೆ ಕೆಲಸ ಮುಗಿಸಿ ಹೊರಟ ನಮಗೆ ಸಿಕ್ಕಿದ್ದು ಈ. ಕ. ರ. ಸಾ. ಸಂ. ದ ಕೆಂಪು ಬಸ್ಸಿನ ಕೊನೆಯ ಸೀಟು.(ಕೆಂಪು ಬಸ್ಸಿನ ಕೊನೆಯ ಸೀಟಿನ ಪ್ರಯಾಣ ಯಾವುದನ್ನೂ ಅತಿಯಾಗಿ ಪ್ಲಾನ್ ಮಾಡಲು ಹೋಗದ ಬ್ಯಾಚುಲರ್ ಬದುಕಿನ ಭಾಗವದು). ಹೊಸಪೇಟೆಗೆ ಹೋಗಿ ಮುಟ್ಟಿದ್ದು ಬೆಳಗಿನ ಜಾವ ಐದುವರೆಗೆ. ಅಲ್ಲಿಂದ ಹಂಪಿಗೆ ಹೋಗಿ ಒಂದು ವಿರುಪಾಕ್ಷ ದೇವಸ್ಥಾನದ ಹತ್ತಿರ ಒಂದು ರೂಮನ್ನು ಹಿಡಿದು ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ದಿನದ ತಿರುಗಾಟಕ್ಕೆ ಅಣಿಯಾದೆವು.
ಹಂಪಿಯ ಕಲ್ಲಿನ ರಥ 

ಹಂಪಿಯಲ್ಲಿ ಸುತ್ತಮುತ್ತ ತಿರುಗಾಡಲು ಬಾಡಿಗೆ ಸೈಕಲ್, ಬೈಕ್, ರಿಕ್ಷಾಗಳ ವ್ಯವಸ್ಥೆಯಿದೆ. ನದಿಯ ಬಲದಂಡೆಯ ಎಲ್ಲ ಸ್ಥಳಗಳನ್ನು ಒಂದೆ ದಿನ ನೋಡುವ ಯೋಚನೆಯಿದ್ದಿದ್ದರಿಂದ ಹಾಗೂ ಗುರುತು ಪರಿಚಯವಿರದ ಅತಿಸೆಖೆಯ ಸ್ಥಳದಲ್ಲಿ ತಿರುಗಾಡುವುದರೊಳಗೆ ಬಸವಳಿಯುವ ಭಯವಿದ್ದುದರಿಂದ ರಿಕ್ಷಾದಲ್ಲಿ ಹೋಗಲು ನಿಶ್ಚಿಯಿಸಿ ಮೊದಲು ನಾವಿದ್ದ ಜಾಗದಿಂದ ಅತಿದೂರದ ವಿಜಯವಿಠ್ಠಲ ದೇವಸ್ಥಾನಕ್ಕೆ ಹೊರಟೆವು. ಪ್ರಭುದೇವರಾಯ ಕಟ್ಟಿದ ದೇವಸ್ಥಾನಕ್ಕೆ ಮುಖಮಂಟಪ, ಸಂಗೀತ ಮಂಟಪ, ಕಲ್ಲಿನರಥಗಳನ್ನೆಲ್ಲ ಸೇರಿಸಿದ್ದು ಕೃಷ್ಣದೇವರಾಯ. ಎದುರಿನ ಗೋಪುರದ ಒಳಹೊಕ್ಕ ಕೂಡಲೇ ಕಣ್ಣಿಗೆ ಬೀಳುವುದು ಕಲ್ಲಿನರಥ. ಗರುಡನ ಮೂರ್ತಿಯಿರುವ ಈ ರಥ ಏಳು ಕಲ್ಲುಗಳಿಂದ ಮಾಡಿದ್ದಾದರೂ ಏಕಶಿಲಾಕೆತ್ತನೆಯೇನೋ ಎಂಬ ಸಂಶಯ ಬರುವಷ್ಟು ನಾಜೂಕಾಗಿ ಕೆತ್ತಲ್ಪಟ್ಟಿದೆ. ರಥವೆಳೆಯುವ ಕುದುರೆಗಳು ವಿಜಯನಗರದ ಮೇಲಾದ ಧಾಳಿಯಲ್ಲಿ ಮುರಿದು ಹೋಗಿದ್ದು, ಪುರಾತತ್ವ ಇಲಾಖೆಯವರು ಉತ್ಖನನದಲ್ಲಿ ಸಿಕ್ಕ ಎರಡು ಆನೆಯ ಮೂರ್ತಿಗಳನ್ನು ಕುದುರೆಗಳ ಜಾಗದಲ್ಲಿ ನಿಲ್ಲಿಸಿದ್ದಾರೆ. ಬಿಸಿಲು-ಮಳೆಗೆ ಮೈಯ್ಯೊಡ್ಡಿ ನಿಂತ ರಥದ ಬದಿಗಳಲ್ಲಿ ಇಂದಿಗೂ ಅಂದು ಬಳಸಿದ ಕಾಡಿಗೆಯ ಕಪ್ಪು, ಅಲಂಕಾರದ ಹಸಿರು, ಕೆಂಪು ಬಣ್ಣಗಳನ್ನು ಗಮನಿಸಬಹುದು. ರಥದ ಚಕ್ರಗಳು ತುಸು ಸವೆಯಲು ಕಾರಣವಾದ ಪ್ರವಾಸಿಗರ ಸ್ಪರ್ಷದ ಬಗ್ಗೂ, ಕಲೆಯ ಸ್ವರ್ಗವ ಗುರುತಿಸದೇ ಹಂಪಿಯನ್ನು ಧ್ವಂಸ ಮಾಡಿದ ಪಂಚ ಸುಲ್ತಾನರ ಬಗ್ಗೂ ಹೇಸಿಕೆ ಹುಟ್ಟಿಸುತ್ತದೆ ಶಿಥಿಲಾವಸ್ಥೆಗೆ ಬಂದಿರುವ ಶಿಲ್ಪಗಳು.

ಸಂಗೀತ ಮಂಟಪ, ನಾಜೂಕಾಗಿ ಕೆತ್ತಲ್ಪಟ್ಟ ನೃತ್ಯ ಮಂಟಪ

ವಿಜಯ ವಿಠ್ಠಲ ದೇವಸ್ಥಾನದಲ್ಲಿರುವ ಕೃಷ್ಣದೇವರಾಯನ ಶಿಲ್ಪ,
ಯುದ್ಧಕ್ಕೆ ಹೊರಟು ನಿಂತ ಭಂಗಿ
ರಥದ ಮುಂದಕ್ಕೇ ಇರುವುದು ವಿಜಯವಿಠ್ಠಲ ದೇವಸ್ಥಾನ. ಜಗತ್ಪ್ರಸಿದ್ಧ ಸಂಗೀತ ಮಂಟಪ ಈ ದೇವಸ್ಥಾನದ ಭಾಗವೇ. ಪ್ರತೀ ಕಲ್ಲಿನ ಕಂಬವೂ ನಾಲ್ಕು-ಆರು-ಏಳು ಹೀಗೆ ಭಿನ್ನ ಭಿನ್ನ ಸಂಖ್ಯೆಯ ಮರಿಕಂಬಗಳನ್ನು ಹೊಂದಿದ್ದು, ಪ್ರತೀ ಕಂಬ-ಮರಿಕಂಬ ಹೊರಡಿಸುವ ಧ್ವನಿಯೂ ಭಿನ್ನವೇ. ಕೃಷ್ಣದೇವರಾಯನ ಎರಡನೇ ಹೆಂಡತಿ ಚಿನ್ನಾಂಬಿಕೆ ಈ ಮಂಟಪದಲ್ಲಿ ನೃತ್ಯ ಮಾಡುತ್ತಿದ್ದರೆ ಉಳಿದ ಪ್ರಜೆಗಳು ನೋಡದಂತೆ ಮಾಡಲು ಪರದೆ ಹೊದಿಸುತ್ತಿದ್ದರಂತೆ. ಈ ಪರದೆ ಹಾಕಲು ಬಳಸುತ್ತಿದ್ದ ಕೊಂಡಿಗಳನ್ನು, ಅದರ ಮುಖಾಂತರವೇ ಮಳೆಗಾಲದಲ್ಲಿ ನೀರು ಬಿದ್ದು ಹರಿದುಹೋಗುವಂತೆ, ಶ್ರಾವಣದಲ್ಲಿ ದೀಪಾರಾಧನೆಯ ಸಮಯದಲ್ಲಿ ದೀಪ ಹತ್ತಿಸಿಡಲು ಬಳಕೆಯಾಗುವಂತೆ ಕೆತ್ತಲಾಗಿದೆ. ಈಗ ಪುರಾತತ್ವ ಇಲಾಖೆ ಜೀರ್ಣೋದ್ಧಾರ ಮಾಡುತ್ತಿರುವುದರಿಂದ ಹಾಗೂ ಮೊದಲು ಬಂದ ಪ್ರವಾಸಿಗರು ಹೆಚ್ಚು ಶಬ್ದ ಬರಲಿ ಎಂದು ಈ ಕಲ್ಲುಗಳನ್ನು ಕೀಗಳಿಂದ, ಕಲ್ಲುಗಳಿಂದ ಹೊಡೆದು ಶಿಥಿಲಗೊಳಿಸಲಾರಂಭಿಸಿದ್ದರಿಂದ ಈಗ ಈ ಮಂಟಪದ ಒಳಗೆ ಯಾರನ್ನೂ ಬಿಡುತ್ತಿಲ್ಲ.  ಅಷ್ಟರ ಮಟ್ಟಿಗೆ ಅದು ನಮ್ಮ ದುರಂತವೇ. ಇಡೀ ದೇವಸ್ಥಾನದ ಹೊರಗೋಡೆಯ ಮೇಲೆಲ್ಲ ರಾಮ ವನವಾಸಕ್ಕೆ ಹೊರಟದ್ದರಿಂದ ಶ್ರೀರಾಮ ಪಟ್ಟಾಭಿಷೇಕದವರೆಗಿನ ರಾಮಾಯಣದ ವಿವಿಧ ಸನ್ನಿವೇಶಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಆವರಣದಲ್ಲಿರುವ ಎಲ್ಲ
ಮಂಟಪಗಳೂ ಅದ್ಭುತವಾಗಿ ಕೆತ್ತಲ್ಪಟ್ಟಿವೆ ಎಂದಷ್ಟೇ ಹೇಳಿದರೆ ಈ ಸೌಂದರ್ಯಕ್ಕೆ ಅವಮಾನ ಮಾಡಿದಂತೆಯೇ. ಶಬ್ದಗಳಲ್ಲಿ ಎಲ್ಲವನ್ನು ಕಟ್ಟಿಕೊಡಲು ನಾನು ಶಕ್ತನಲ್ಲವೇನೋ? ಗೊತ್ತಿಲ್ಲ. ಈ ದೇವಸ್ಥಾನದ ಎದುರುಗಡೆ, ಸುಮಾರು ೫೦೦-೬೦೦ ಮೀ ದೂರದವರೆಗೆ ದಾರಿಯ ಇಕ್ಕೆಲಗಳಲ್ಲಿಯೂ ಸಾಲಾಗಿ ನಿಲ್ಲಿಸಿದ ಕಲ್ಲಿನ ಮಂಟಪದತಹ ರಚನೆಗಳಿವೆ. ವಿಜಯನಗರದ ಕಾಲದಲ್ಲಿ, ಮುತ್ತು ರತ್ನ ಗಳನ್ನು ಬೀದಿಬದಿ ಮಾರುತ್ತಿದ್ದರು ಎಂದು ಕೇಳಿದ್ದೆವಲ್ಲಾ, ಅದು ಇಲ್ಲಿಯೇ ಎಂದು ಗೈಡ್ ಹೇಳಿದಾಗ ನನ್ನಲ್ಲಿ ಒಂದು ರೋಮಾಂಚನ.
ವಿಜಯ ವಿಠ್ಠಲ ದೇವಸ್ಥಾನದಲ ಎದುರಿರುವ ಕಲ್ಲಿನ ಮಂಟಪಗಳು,
ಬೀದಿಬದಿಯಲ್ಲಿ ಮುತ್ತುರತ್ನಗಳನ್ನು ಮಾರುತ್ತಿದ್ದುದು ಇಲ್ಲಿಯೇ

ವಿಜಯವಿಠ್ಠಲ ದೇವಸ್ಥಾನದ ಹಿಂದೆಯೇ ತುಂಗಭದ್ರಾ ನದಿಗೆ ತಾಗಿ ಪುರಂದರ ಮಂಟಪ ಇದೆ. ಸದ್ಯಕ್ಕೆ ದುರಸ್ತಿ
ತುಲಾಭಾರ ಮಂಟಪ, ವಿಶೇಷ ಸಮಾರಂಭಗಳಲ್ಲಿ
ರಾಜನನ್ನು ಚಿನ್ನದಲ್ಲಿ ತೂಕ ಮಾಡಿ ಅದನ್ನು ಪ್ರಜೆಗಳಿಗೆ ಹಂಚುತ್ತಿದ್ದರಂತೆ
ಮಾಡುತ್ತಿದ್ದಾರಾದ್ದರಿಂದ ನಾವು ಒಳಗೆ ಹೋಗಲಿಲ್ಲ. ಅಲ್ಲಿಯೇ ಪಕ್ಕದಲ್ಲಿ ತುಲಾಭಾರ ಮಂಟಪವಿದೆ. ವಿಜಯ ವಿಠ್ಠಲ ದೇಗುಲದ ಎದುರುಗಡೆ ಸ್ವಲ್ಪ ಮುಂದಕ್ಕೆ ಕುದುರೆಗೊಂಬೆ ಮಂಟಪವಿದೆ. ಎಲ್ಲ ಕಡೆ ನಾಮಫಲಕಗಳನ್ನು ಹಾಕಿಟ್ಟಿದ್ದಾರಾದರೂ ಮತ್ತೇನೂ ಮಾಡಿಲ್ಲ. ನಮ್ಮ ಸಂಸ್ಕೃತಿಯನ್ನು, ನಮ್ಮ ಇತಿಹಾಸವನ್ನು ಹೇಳುವ ಈ ಜಾಗಗಳ ಬಗ್ಗೆ ನಾವು/ ಸರ್ಕಾರ ಇನ್ನೊಂದು ಸ್ವಲ್ಪ ಹೆಚ್ಚು ಜಾಗೃತಿ ತೋರಿಸಬೇಕೇನೋ ಎನ್ನಿಸಿತು. ಹಲವಾರು ಚಿಕ್ಕಚಿಕ್ಕ ದೇವಸ್ಥಾನಗಳ ಬಳಿ ಯಾರೂ ಇರುವುದಿಲ್ಲ, ಯಾರಾದರೂ ದುಷ್ಕರ್ಮಿಗಳು ಅತಿಸುಲಭದಲ್ಲಿ ವಿಕೃತಿ ಮಾಡಬಹುದು. ಅದಕ್ಕೆ ಉದಾಹರಣೆ ತುಲಾಭಾರ ಮಂಟಪದ ಪಕ್ಕಕ್ಕಿರುವ ಗೋಡೆಯ ಮೇಲೆ ಕಾಣಸಿಗುವ ಇಂಗ್ಲೀಷಿನಲ್ಲಿ ಕೆತ್ತಲ್ಪಟ್ಟ ಅಮರಪ್ರೇಮಿಗಳ(ವ್ಯಂಗ್ಯದ ದನಿಯಲ್ಲಿ ಓದಿಕೊಳ್ಳಿ) ಹೆಸರುಗಳು.

ರಾಣಿಯರ ಸ್ನಾನಗೃಹ


ನವರಾತ್ರಿ ಮೈದಾನದ ದೊಡ್ಡ ವೇದಿಕೆ
ವಿಜಯವಿಠ್ಠಲ ದೇವಸ್ಥಾನವನ್ನು ನೋಡಿ ಮುಗಿಸಿ ಬಂದವರು ಮುಂದೆ ಹೋಗಿದ್ದು ರಾಣಿಯ ಸ್ನಾನ ಗೃಹಕ್ಕೆ, ಈಗ ಸ್ನಾನ ಮಾಡಲು ಯಾವ ರಾಣಿಯೂ ಇಲ್ಲ, ಕೊನೆಗೆ ನೀರೂ ಇಲ್ಲ ಈ ಸ್ನಾನಗ್ರಹದಲ್ಲಿ. ಯಾರದರೂ ರಾಜಾತಿಥಿಗಳು ಬಂದಾಗ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದರಂತೆ ವಿಹಾರಕ್ಕೆ ವಿನೋದಕ್ಕೆ ಮತ್ತು ಸ್ನಾನಕ್ಕೆ. ಇದನ್ನು ಮುಗಿಸಿಕೊಂಡು ಹೋಗಿದ್ದು ನವರಾತ್ರಿ ದಿಬ್ಬಕ್ಕೆ. ಎಕರೆಗಟ್ಟಲೇ ದೊಡ್ಡ ಸಮತಟ್ಟಾದ ಮೈದಾನ. ಅದರ ತುಂಬಾ ಚಿಕ್ಕ ಚಿಕ್ಕ ವೇದಿಕೆಗಳು. ಒಂದು ಕಡೆ ಮೂವತ್ತು-ನಲ್ವತ್ತು ಅಡಿ ಎತ್ತರದ ಕಲ್ಲಿನ ವಿಶಾಲವಾದ ವೇದಿಕೆ. ಈಗ ಮೈಸೂರಿನಲ್ಲಿ ಆಗುತ್ತಿರುವ ನವರಾತ್ರಿ(ದಸರಾ) ಉತ್ಸವ ಮೊದಲು ಹಂಪಿಯಲ್ಲಾಗುತ್ತಿತ್ತಂತೆ. ಆಗ ಈ ಮೈದಾನದ ತುಂಬೆಲ್ಲ ಕಾರ್ಯಕ್ರಮಗಳು. ಮುಖ್ಯ ಕಾರ್ಯಕ್ರಮ ಈ
ನವರಾತ್ರಿ ಮೈದಾನದ ಕಲ್ಯಾಣಿ
ದೊಡ್ಡ ವೇದಿಕೆಯ ಮೇಲೆ. ಈ ವೇದಿಕೆಯಲ್ಲಿಯೂ ಸೂಕ್ಷ್ಮ ಸುಂದರ ಕೆತ್ತನೆಗಳನ್ನು ಗಮನಿಸಬಹುದು. ಇದೇ ಮೈದಾನದ ಒಂದು ಬದಿಗೆ ಕಲ್ಯಾಣಿ ಒಂದಿದೆ. ಸಂಪೂರ್ಣವಾಗಿ symmetric ಆಗಿರುವ ಇದೂ ಒಂದು ಆಕರ್ಷಣೆಯ ಕೇಂದ್ರವೇ. ಈ ಮೈದಾನದಲ್ಲಿಯೇ ಒಂದು ಪಿಸುಮಾತಿನ ಕೆಳಮಹಡಿಯಿದೆ, ನೋಡಿದೆವಾದರೂ ನಮಗೆ ಅದರ ಮಹತ್ವ ತಿಳಿಯಲಿಲ್ಲ.

ಇಲ್ಲಿಂದ ಹೊರಬಂದ ಕೂಡಲೇ ಸಿಗುವುದು ಹಜಾರ ರಾಮ ದೇವಸ್ಥಾನ. ಗೋಡೆಯ ಮೆಲೆಲ್ಲ ರಾಮಾಯಣದ ವಿವಿಧ ಚಿತ್ರಗಳನ್ನು ಕೆತ್ತಿರುವುದರಿಂದ ಹಜಾರ ರಾಮ- ಸಾವಿರ ರಾಮರ ದೇಗುಲ ಎಂಬ ಹೆಸರು ಬಂದಿದೆ. ಉಳಿದೆಲ್ಲ ಕೆತ್ತನೆಗಳಿಗಿಂತ ವಿಭಿನ್ನವಾಗಿ ಕಾಣುವ ಈ ದೇಗುಲದ

ಹಜಾರ ರಾಮಚಂದ್ರ ದೇವಸ್ಥಾನದ ಕೆಲವು ಶಿಲ್ಪಗಳು
ಶಿಲ್ಪಗಳು ತಮ್ಮ ಮೇರು ಸೌಂದರ್ಯದಿಂದ ಎದ್ದು ಕಾಣುತ್ತವೆ. ರಾಜಕುಟುಂಬದವರ ಖಾಸಗಿ ದೇಗುಲವಾಗಿದ್ದ ಇದು, ಹಂಪಿಗೆ ಕೇಂದ್ರಬಿಂದುವಿನಂತಹ ಪ್ರದೇಶದಲ್ಲಿದೆ. ಇದರ ಹಿಂದೆಯೇ ಕೃಷ್ಣದೇವರಾಯನ ಅರಮನೆಯಿತ್ತು ಎಂಬ ವದಂತಿ ಇದೆ. (ಪಂಚ ಸುಲ್ತಾನರ ಧಾಳಿಯಲ್ಲಿ ಹಂಪಿಯ ಅರಮನೆಯನ್ನು ಸುಟ್ಟು ಹಾಕುತ್ತಾರೆ. ಯಾರಿಗೂ ಕೃಷ್ಣದೇವರಾಯನ ಅರಮನೆ ಎಲ್ಲಿದೆ ಎಂದು ನಿಖರವಾಗಿ ನಿರ್ಧರಿಸಲಾಗಿಲ್ಲ.)
ಕಮಲ್ ಮಹಲ್

ಹಜಾರ ರಾಮನ ದೇಗುಲ ನೋಡಿ ಬಂದ ನಾವು ಮುಂದೆ ಹೋಗಿದ್ದು ಹಂಪಿಯ ಮತ್ತೊಂದು ಪ್ರಸಿದ್ಧ ಸ್ಮಾರಕ ಕಮಲ್
ಗಜಶಾಲೆ
ಮಹಲ್ ಗೆ. ಸುತ್ತಲೂ ಹುಲ್ಲುಹಾಸಿನಿಂದ ಸುತ್ತುವರೆದಿರುವ ಇದು ನಿಜಕ್ಕೂ ಚಾಯಚಿತ್ರಗ್ರ್ರಹಕರಿಗೆ ಹೇಳಿ ಮಾಡಿಸಿದ ಜಾಗ. ಎಲ್ಲ ಕೋನಗಳೂ ದಿವ್ಯವೇ, ಭವ್ಯವೇ , ದೃಶ್ಯಕಾವ್ಯವೇ. ಕಮಲದ ರೂಪದಲ್ಲಿರುವುದರಿಂದ ಕಮಲ ಮಹಲ್ ಎಂಬ ಹೆಸರು ಬಂದಿದೆ ಎಂದು ಬೇರೆ ಹೇಳಬೇಕೆಂದೇನಿಲ್ಲ. ಎಲ್ಲವನ್ನೂ ಕಲ್ಲಿನಿಂದ ನಿರ್ಮಿಸಲಾಗಿರುವ ಹಂಪಿಯಲ್ಲಿ ಕಮಲ ಮಹಲ್ ಸುಣ್ಣ ಮತ್ತು ಇಟ್ಟಿಗೆಯಿಂದ ಕಟ್ಟಲ್ಪಟ್ಟಿದೆ. ಇದರ ಹಿಂದಿನ ಆವರಣದಲ್ಲಿ ಗಜಶಾಲೆಯಿದೆ. ಕಮಾನಿನ ಆಕಾರದಲ್ಲಿರುವ ಪ್ರತೀ ರಚನೆಯೂ ರಾಜನ/ದೇವರ ಮೆರವಣಿಗೆಯ ರಾಜಾನೆಗಳಿಗೆ ಆಶ್ರಯ ಕೊಟ್ಟಿತ್ತು. ಇದರ ಎದುರಿರುವ ಮೈದಾನದಲ್ಲಿ ಕವಾಯತುಗಳು, ಮೆರವಣಿಗೆಗಳು ನಡೆಯುತ್ತಿದ್ದವಂತೆ. ಕಮಲ್ ಮಹಲ್ ಮತ್ತು ಗಜಶಾಲೆಯ ವಾಸ್ತುಶಿಲ್ಪವು ವಿಜಯನರದ ಶಿಲ್ಪಕಲೆಯ ಮೇಲೆ ಮುಸ್ಲಿ ವಾಸ್ತುಶಿಲ್ಪದ ಪ್ರಭಾವವನ್ನು ನೋಡಬಹುದು.


ಭೂಮ್ಯಾಂತರ್ಗತ ಶಿವ ದೇವಾಲಯ
ಇಲ್ಲಿಂದ ಹೊರಟವರಿಗೆ ಮುಂದೆ ಸಿಕ್ಕಿದ್ದು ಭೂಮ್ಯಾಂತರ್ಗತ ಶಿವ ದೇವಸ್ಥಾನ. ಎದುರಿರುವ ನಂದಿಯ ವಿಗ್ರಹದ ಆಧಾರದ ಮೇಲೆ ಇಲ್ಲೊಂದು ಶಿವ ದೇವಸ್ಥಾನವಿರಬಹುದು ಎಂಬ ಯೋಚನೆ ಬಂದು ಸಿಕ್ಕ ಈ ದೇಗುಲ ಭೂ ಮಟ್ಟಕ್ಕಿಂತ ಕೆಳಗಿದೆ. ಅರ್ಧ ತುಂಬಿಕೊಂಡಿರುವ ನೀರನ್ನು ತೆಗೆಯುವ, ಶಿಥಿಲಗೊಂಡ ದೇಗುಲವನ್ನು ಪುನಃ ನಿಲ್ಲಿಸುವ ಕಾಮಗಾರಿ ವರ್ಷಾನುಗಟ್ಟಲೆಯಿಂದ ನಡೆಯುತ್ತಲೇ ಇದೆ, ಹಾಗೆಂದು ಅಲ್ಲಿಯೇ ಕೆಲಸ ಮಾಡುತ್ತ ಈಗ ನಿವೃತ್ತಿಯ ಪ್ರಾಯಕ್ಕೆ ಬಂದಿರುವ ಓರ್ವ ಕೆಲಸಗಾರರು ಬೇಜಾರಲ್ಲಿ ಹೇಳಿದರೆ ವಿಜಯನಗರದ ರಾಜರ ನಿಟ್ಟುಸಿರು ಕೊರಳಿಗೆ ತಾಗಿದಂತಿತ್ತು.


ನಂತರ ಹೋಗಿದ್ದು ವಿಶ್ವ ಪ್ರಸಿದ್ಧ ಲಕ್ಷ್ಮಿನರಸಿಂಹನ ವಿಗ್ರಹ ನೋಡಲು. ತೊಡೆಯ ಮೇಲೆ ಪತ್ನಿಯನ್ನು ಕೂರಿಸಿಕೊಂಡಿದ್ದ
ಚಿರವಿರಹಿ ಲಕ್ಷ್ಮಿನರಸಿಂಹ 
ನರಸಿಂಹನ ಬಹು ಎತ್ತರದ ವಿಗ್ರಹವಿದು. ಕುಪ್ರಸಿದ್ಧ ಧಾಳಿಯಲ್ಲಿ ಉಳಿದೆಲ್ಲರಿಗಿಂತಲೂ ಹೆಚ್ಚು ಹಾನಿಗೀಡಾಗಿದ್ದು ನಮ್ಮ ಈ ಲಕ್ಷ್ಮಿನರಸಿಂಹನಿಗೆ. ಲಕ್ಷ್ಮಿಯ ವಿಗ್ರಹವನ್ನು ಮುರಿದು ಹಾಕಿದ ಧಾಳಿಕೋರರು ನರಸಿಂಹನ ಕಣ್ಣಲ್ಲಿ ಒಂದು ಅಸಹನೀಯ ವೇದನೆಯನ್ನು ಮೂಡಿಸಿ ಹೋಗಿಬಿಟ್ಟರು. ಪುರಾತತ್ವ ಇಲಾಖೆಯವರು ಅದನ್ನು ಬದಲಾಯಿಸಿದ್ದಾರಾದರೂ ಮೂಲ ದಿವ್ಯ ರೂಪಕ್ಕೆ ತರಲಾದರೂ ಹೇಗೆ ಸಾಧ್ಯವಾದೀತು? ಈ ಮೂರ್ತಿ ಬಹುಕಾಲದವರೆಗೆ ಮನಸ್ಸಲ್ಲೇ ಕಾಡುತ್ತಿರುತ್ತದೆ. ಇದರ ಪಕ್ಕದಲ್ಲೇ ಒಂದು ಬ್ರಹತ್ ಶಿವಲಿಂಗವಿದೆ. ಪ್ರತೀ ಕಲ್ಲೂ ಶಿಲ್ಪವಾಗಿರುವ ಹಂಪಿಯಲ್ಲಿರದಿದ್ದರೆ ಈ ಶಿವಲಿಂಗವೇ ಒಂದು ಪ್ರವಾಸಿ ತಾಣವಾಗುತ್ತಿತ್ತೇನೋ?

ನೂರಾರು ದೇವಸ್ಥಾನಗಳಿರುವ ಹಂಪಿಯಲ್ಲಿ ಇನ್ನೂ ಪೂಜೆ ಆಗುತ್ತಿರುವುದು ಮುಖ್ಯವಾಗಿ ವಿರುಪಾಕ್ಷ ದೇವಾಲಯದಲ್ಲಿ ಮತ್ತು ಉದ್ದಾನ ವೀರಭದ್ರ ದೇವಾಲಯದಲ್ಲಿ. ಉಳಿದೆಲ್ಲ ಕಡೆ ದೇವರ ಮೂರ್ತಿಗಳು ಭಗ್ನವಾಗಿರುವುದರಿಂದ ಈಗ ಪೂಜೆ ನಡೆಯುತ್ತಿಲ್ಲ. ವೀರಭದ್ರ ದೇಗುಲದ ಗೋಪುರದವರೆಗೂ ರಸ್ತೆ ಬಂದು ಕುಳಿತಿದೆ. ಅಷ್ಟೇನೂ ಶಿಲ್ಪಕಲಾ ಮಹತ್ವ ಕಾಣದಾದರೂ(ಇಡೀ ದಿನ ೪೦ ಡಿಗ್ರಿ ಬಿಸಿಲಲ್ಲಿ ತಿರುಗಿದ್ದ ಮನಸ್ಸಿಗೆ ಕಂಡಿಲ್ಲ ಎಂದರೆ ಅದು ನನ್ನ ಸುಸ್ತನ್ನ ಹೇಳುತ್ತದೆಯೇ ವಿನಃ ಸೌಂದರ್ಯರಾಹಿತ್ಯವಿದೆ ಎಂದಲ್ಲ) ಜೀವಂತಿಕೆಯ ದೃಷ್ಟಿಯಿಂದ ಈ ದೇವಸ್ಥಾನ ಮನಸೆಳೆಯುತ್ತದೆ. ಈ ದೇವಾಲಯವನ್ನು ನೋಡಿ ಮುಗಿಸಿದ ಮೇಲೆ ಎಲ್ಲರೂ ಸುಸ್ತಾಗಿದ್ದೆವು. ಹಂಪಿಯ  ಬಗ್ಗೆ ಹೇಳಲೇಬೇಕಾದ ಅಂಶ ಎಂದರೆ ಸೆಕೆ, ಬಾಯಾರಿಕೆ. ಎಷ್ಟು ನೀರು ಕುಡಿದರೂ ಸಾಲದು, ಎಷ್ಟು ನೀರನ್ನು ತಲೆಯ ಮೇಲೆ ಹೊಯ್ದುಕೊಂಡರೂ ಸಾಲದು. ತಾಳಲಾರದ ಸೆಖೆ. ತಲೆಯ ಮೇಲೆ ಒಂದು ಟೊಪ್ಪಿಯನ್ನೂ ಹಾಕದೇ ತಿರುಗಿದ ನಮಗೆ ರೂಮಿಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವ ಅವಶ್ಯಕತೆಯಾಗಿತ್ತು.

ಮೈ ಕೈ ಕಾಲಲ್ಲೆಲ್ಲ ಸುಸ್ತು. ಮನಸ್ಸಲ್ಲಿ ಬತ್ತದ ಉತ್ಸಾಹ. ಸಂಜೆ ಸೂರ್ಯಾಸ್ತಕ್ಕೆ ಮಾತಂಗ ಪರ್ವತ ಹತ್ತುವುದೆಂದು ನಿರ್ಧರಿಸಿ
ಮಾತಂಗ ಪರ್ವತದ ಮೇಲಿಂದ ಸೂರ್ಯಾಸ್ತ
ಬೆಡ್ಡಿನಲ್ಲಿ ಬಿದ್ದವನಿಗೆ ಅದ್ಭುತ ನಿದ್ದೆ, ಆ ಸೆಖೆಯಲ್ಲಿಯೂ(ಫ್ಯಾನ್ ಕೆಳಗೆ ಬಿದ್ದುಕೊಂಡರೂ ಸ್ವಲ್ಪವೂ ತಂಪಾಗದಂತಹ ಸೆಖೆಯಿದೆ). ಎದ್ದು ಹೊರಟಿದ್ದು ಐದೂವರೆಗೆ. ಆಗಲೇ ಸೂರ್ಯಾಸ್ತದ ಲಕ್ಷಣಗಳು ಕಾಣತೊಡಗಿದ್ದವು. ಹೆಚ್ಚು ಕಮ್ಮಿ ಒಂದರ್ಧ ಕಿ.ಮೀ.ಯನ್ನು ದಡಬಡನೇ ನಡೆದು ಮಾತಂಗ ಪರ್ವತವನ್ನು ತಲುಪಿಕೊಂಡ ನಾವು ಹತ್ತಲು ಸುರುಮಾಡಿದೆವು. ಕಲ್ಲೇ ಗುಡ್ಡವಾಗಿ ನಿಂತಿರುವ ಇಲ್ಲಿಂದ ಹಂಪಿಯ ವಿರುಪಾಕ್ಷ ದೇಗುಲ ಸಮುಚ್ಚಯದ ಒಂದು ಪಕ್ಷಿನೋಟ ಸಿಗುತ್ತದೆ. ಇದರ ಮೇಲೂ ಒಂದು ಗುಡಿಯಿದೆಯಾದರೂ ನನಗೆ ನೋಡಲಾಗಲಿಲ್ಲ. :( ಸೂರ್ಯಾಸ್ತದ ಸಮಯದಲ್ಲಿ ಹಂಪಿಯ ಮಾನವ ನಿರ್ಮಿತ ಅದ್ಭುತ ಶಿಲ್ಪಕಲೆಯು ಪ್ರಕೃತಿಯ ಸುಂದರ ಹಿನ್ನೆಲೆಯೊಂದಿಗೆ ಕಂಗೊಳಿಸುತ್ತದೆ. ನೀವು ಹಂಪಿಯ ಸುತ್ತಮುತ್ತಲಿನ ಯಾವುದಾದರೂ ಗುಡ್ಡವನ್ನು ಹತ್ತಿದರೆ ಸುತ್ತೆಲ್ಲ ಕಾಣುವುದು ಬರೀ ಕಲ್ಲಿನ ರಾಶಿಗಳೇ. ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಕಲ್ಲಿನ ರಾಶಿಗಳೇ, ನೀವು ನಿತ್ತಿರುವುದೂ ಒಂದು ಕಲ್ಲಿನ ರಾಶಿಯ ಮೇಲೆಯೇ ಆಗಿರುತ್ತದೆ.

ವಿರುಪಾಕ್ಷ ದೇವಸ್ಥಾನ , ಮುಖ್ಯಬೀದಿ, ಹಂಪಿ
ಮಾತಂಗ ಪರ್ವತವನ್ನು ಇಳಿದು ಬಂದ ನಾವು ಹೋಗಿದ್ದು ಹಂಪಿಯ ಆಕರ್ಷಣೆಯ ಕೇಂದ್ರಬಿಂದುವಾದ, ಕರ್ನಾಟಕದ ಆ ಲೆಕ್ಕದಲ್ಲಿ ಇಡೀ ಭಾರತದಲ್ಲೇ ಅತಿ ಹಳೆಯ (ಪೂಜೆ ನಡೆಯುತ್ತಿರುವ) ದೇವಸ್ಥಾನಗಳಲ್ಲಿ ಒಂದಾದ ವಿರುಪಾಕ್ಷ ದೇವಸ್ಥಾನಕ್ಕೆ. ೭ನೇ ಶತಮಾನದಲ್ಲಿ ಕಟ್ಟಿರಬಹುದೆಂಬ ಅಂದಾಜಿದೆ. ಎಂತಹ ನಾಸ್ತಿಕನ ಬಳಿಯೂ ಒಮ್ಮೆ ಕೈ ಮುಗಿಸಿಕೊಳ್ಳುವ, ದೇವರು ಇದ್ದರೆ ಇಲ್ಲಿಯೇ ಎಲ್ಲೋ ಇರಬಹುದು ಎಂಬ ಭಾವನೆ ಮೂಡಿಸುವ ತಾಕತ್ತು ಈ ದೇವಸ್ಥಾನಕ್ಕಿದೆ. ಎತ್ತರದ ಗೋಪುರ ದಾಟಿ ಒಳಗೆ ಹೋದರೆ ದೊಡ್ಡ ಪ್ರಾಂಗಣ. ನೂರಾರು ಜನ ಕೂತರೂ ಮತ್ತೂ ಖಾಲಿಯೇ ಇದೆ ಎನ್ನಿಸುವಷ್ಟು. ಇದನ್ನು ದಾಟಿ ಒಳಕ್ಕೆ ಹೋದರೆ ಕಲ್ಲಿನ ಮಂಟಪವೊಂದಿದೆ. ಇಲ್ಲಿನ ಕೆತ್ತನೆಗಳೂ ಅದ್ಭುತವಾಗಿದೆ(ಫೋಟೋಗಳಿಲ್ಲ, ಹೆಚ್ಚು ವಿವರಗಳು ಸಿಕ್ಕಿಲ್ಲ, ಆದ್ದರಿಂದ ಬರೀ ಸುಂದರವಾಗಿದೆ ಎಂದಷ್ಟೇ ಹೇಳಲು ಶಕ್ಯ ನಾನು.) ಇಲ್ಲಿ ಪ್ರತಿ ಹೆಜ್ಜೆಗೂ ’ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ’ ಹಾಡು ರಿಂಗಣಿಸುತ್ತದೆ. ತುಂಗಭದ್ರಾ ನದಿಗೆ ತಾಗಿಕೊಂಡಿರುವ ಈ ದೇಗುಲ ಈ ದೇಗುಲದಲ್ಲಿ ಮೂರು ತಲೆಯ ನಂದಿಯಿದೆಯಂತೆ(ನಮಗೆ ನೋಡಲಾಗಲಿಲ್ಲ ಇದನ್ನು, ಮಾಹಿತಿಯಿರದೇ ಇದ್ದುದರಿಂದ), ಇದು ಒಂದು ವಿಚಿತ್ರ, ವಿಶಿಷ್ಟ ಶಿಲ್ಪ ಎಂಬ ಮಾತಿದೆ.

ಇತಿಹಾಸವನ್ನು ಸ್ವಲ್ಪವೇ ಸ್ವಲ್ಪ ಇಷ್ಟ ಪಡುತ್ತೀರಾದರೆ, ಶಿಲ್ಪಕಲೆಗಳನ್ನು ನೋಡುತ್ತಾ ಮೈಮರೆಯಲು ನಿಮಗೆ ಸಾಧ್ಯವಿದೆ ಎಂದಾದರೆ, ಸ್ವಲ್ಪ ಸೆಖೆ ಹೆಚ್ಚಾದರೂ ಉತ್ಸಾಹ ಬತ್ತದು ಎಂಬ ಖಾತರಿ ಇದ್ದರೆ ನೀವು ಹಂಪಿಯನ್ನು ನೋಡಬೇಕು. ವಿಜಯನಗರವೆಂಬ ಸಾಮ್ರಾಜ್ಯ ಸ್ಥಾಪಿತವಾಗಿ, ಬೆಳೆದು, ಮೆರೆದು, ದುರದೃಷ್ಟಕರವಾಗಿ ಅವನತಿ ಹೊಂದಿದ ಗಂಡುಭೂಮಿಯನ್ನು ಮುಟ್ಟಲೇಬೇಕು, ಮುಟ್ಟಿ ನಮಸ್ಕರಿಸಬೇಕು. ಇಲ್ಲಿರುವ ಕಲೆಯ ಸಿರಿವಂತಿಕೆಗೆ ಹೆಮ್ಮೆ ಪಡಬೇಕು, ಭಗ್ನವಾಗಿ ಕುಳಿತ ಶಿಲ್ಪಗಳ ದುರಂತಕ್ಕೆ ಮರುಗಬೇಕು.  ನಾವೂ ಇತಿಹಾಸದ ಭಾಗವಾಗದೇ ಇದ್ದರೆ ಹಾಳು ಕೊಂಪೆಯಾಗಷ್ಟೇ ಪರಿಚಿತವಾಗುವ ಹಂಪಿ, ಇತಿಹಾಸದ ಬಗ್ಗೆ ಸ್ವಲ್ಪ ಕುತೂಹಲ ವಹಿಸಿದರೂ ಸ್ವರ್ಗವೆನಿಸಿಬಿಡುತ್ತದೆ. ಕಲ್ಲೆಲ್ಲವೂ ಶಿಲ್ಪವಾಗಿರುವ ಊರಿದು, ಕೈ ಮುಗಿದು ಒಳಗೆ ಹೋಗಬೇಕು, ಮನಸ್ಸು ಭಾರವಾಗೇ ವಾಪಸ್ಸು ಬರಬೇಕು.
...