Saturday 28 January 2012

ಸಖಿ ಒಮ್ಮೆ ಒಪ್ಪಿಸಿಕೊ


ಸಖಿ ಒಮ್ಮೆ ಒಪ್ಪಿಸಿಕೊ, ಜೀತಕ್ಕಿರುವೆ ನಿನ್ನ ಬಳಿ, ಕಡೆಯ ಉಸಿರಿನವರೆಗೂ|
ನೀನಿರದ ಎದೆಯಿದು ದೇವನಿರದ ಗುಡಿಯದು , ಏನಿದೆ ಅಲ್ಲಿ ಜೀವಾತ್ಮ ತಾನಿರದೆ|ಪ||

ನೀನಿರುವಲ್ಲಿಯೇ ಭೂಮಿ ತಾ ಚಿಗುರಿ ಅರಳಿರೆ, ಸ್ವರ್ಗದ ಹಂಗು ನನಗದು ಏಕೆ?
ನಿನ್ನದೊಂದು ನೆನಪ ಹನಿಯಿಂದಲೇ ಚಿರಾಯುವಾಗಿರಲು ಅಮೃತ ಬೇರೆ ಬೇಕೆ?
ಸೋಲು ಗೆಲುವೆಲ್ಲ ನಿನ್ನಿರುವಿನಿಂದರಲೇ ನಿರ್ಧಾರವಾಗಿರೆ ಬೇರೆ ಖುಷಿಗರ್ಥವಿದೆಯೇ?
ನೆನಪ ತುಂಬ ನಿನ್ನ ರಾಜ್ಯವೇ ವ್ಯಾಪಿಸರಲು ಮರೆವು ಹೆಚ್ಚಿರುವುದು ಅಚ್ಚರಿಯೇ?||೧||

ನಿನ್ನ ಕನಸದು ಸುರುವಾದ ಮೇಲೆ, ಬೇರೆಲ್ಲಾ ಆಸೆಗಳು ಬತ್ತಿ ಹೋಗಿದ್ದು ವಿಶೇಷವೇ?
ಚಿತ್ತಭಿತ್ತಿಯಲ್ಲಿ ಚಿತ್ರಿಸಿರೆ ನೀ ಮಳೆಬಿಲ್ಲ, ಬಿಳಿಯ ಬೆಳಕು ತಾ ವರ್ಣಹೀನವಲ್ಲವೇ?
ನೀನೊಮ್ಮೆ ನಕ್ಕರೆ ಸಾಕು ನಾನಂದತುಂದಲಿತ; ಜನ ನನಗೆ ಮರುಳೆಂದರೆ ನನಗೇನು!
ನಿನ್ನ ಹೆಸರೆ ಕಿವಿಯಲ್ಲಿ ಪ್ರತಿಧ್ವನಿಸಿರೆ, ಕಿವುಡನೆನಿಸಿಕೊಂಬಲು ನಾ ಹಿಂಜರಿವನೇ||೨||

ನೀನಿಲ್ಲದ ಬದುಕು ಅದು ಬದುಕೇ ಬರಡು ಹಾಡು ನಾನು ಬದುಕಲಿ ಏಕೆ? ಹೇಗೆ?
ಅಗಾಧ ಮಾನಸವೇ ಚಿಕ್ಕದೆನಿಸಿಬಿಟ್ಟಿತೇ ಚಿಕ್ಕದೊಂದು ಪ್ರೀತಿಯ ವೈಶಾಲ್ಯಕೆ!
ಉಸಿರೆಂದರೂ ನೀನೇ, ನಿಟ್ಟುಸಿರಾದರೂ ನೀನೇ, ಏನಾದರೂ, ಆಗದೇ ಹೋದರೂ.
ಜಗದೇಳು ವೈಚಿತ್ರ್ಯಗಳಿಗೆ ಮೀರಿದ ವಿಸ್ಮಯ ನೀ, ನಿನಗೊಂದು ಹೋಲಿಕೆ ಕೊಡಬಹುದೇ||೩||

Thursday 19 January 2012

ಸಿಕ್ಕದ ಕನಸು


ಎಷ್ಟೋ ದಿನಗಳಾದ ನಂತರ ಒಂದು ರೀತಿಯ ಪ್ರಾಸ(ಪ್ರತೀ ಸಾಲಿನಲ್ಲಿ ಬರುವ ಪ್ರತೀ ಶಬ್ದದ ಎರಡನೇ ಅಕ್ಷರ ಒಂದೇ,ಕೆಲವು exceptionಗಳಿಗೆ ಹೊರತಾಗಿ)ಕ್ಕೆ ಕಟ್ಟು ಬಿದ್ದು, ಭಾವಕ್ಕೆ ಚ್ಯುತಿಬರದಂತೆ ಪದ್ಯ ಬರೆಯಲು ಮಾಡಿರುವ ಪ್ರಯತ್ನವಿದು. ಅತಿಹೆಚ್ಚು ಸಮಯ ತೆಗೆದುಕೊಂಡ ಕವನವೆಂದರೆ ಇದೇ ಎಂದುಕೊಳ್ಳುತ್ತೇನೆ. ಓದಿ ನೋಡಿ.
ಚಿತ್ರಕೃಪೆ: ಅಂತರ್ಜಾಲ

ಸಿಕ್ಕದ ಕನಸದು ಚಿಕ್ಕದೆಯಾದರೂ
ಕ್ಕದ ದುಃಕೆ ಬಿಕ್ಕದೇಯಿರಬಹುದೇ
ಹಿರಿದೋ ಕಿರಿದೋ ಅರಿವಿರಬಹುದೆ,
ರುಕದ ಶಧಿಗೆಲ್ಲಿಯ ಪರಿಚಯ||ಪ||

ನಿಹದಲಿ ನೀನಿರದೆ, ನೆಪಿನಲಿ ಅವರತ
 ಕವರಿಸುವುದೆ ಜೇನಾಯಿತೇ
ನೀ ದೊಕದೇ ಸರಿಬರದ ವಿಹದಲಿ ಪರಿತಪಿಸಿ
ಮನ ಕಗಿದೆ ಅಗಿನ ತದಿ
ಸುರದೆ ಹೆರನು, ಉಸಿರದು ಕೊರಿದೆ;
ಸೆಯು ಮಾಸಿದಾಗ ಬೇರವೇ ಆರೆ||೧||
                                                                           
ಹುನದ ಸಜೀವನದ ಅವಾಲಿಗೆ,
ಮೋವೆಂಬ ಕುಹುಕದ ಬಹುಮಾನವೇ
ಕ್ಷಮಿಸಲು ರಮಿಸುವ; ಭ್ರಮಿಸುವ ಪ್ರೇದ ತುಮುಲಗಳೇ,
ನಾರು ನಿಗೆ ಸರದಲಿ
ಹಿವಾದ ಯಾನೆಯಲಿ ಹವಾಗಿಹೆ ನಾ,
 ಕಾರಣ ಅತಿಕ್ರಮಿಸಿದ ಪ್ರೀತಿಯೇ||೨||

ಗೆಹರಿಯದ ಬೇಗೆಯಿದು ಯುವಾದರೂ,
ಮೊಗೆದೊಗೆದರೂ ಮುಗಿಯದ ಸಾರವು
ಬೇನೆಗೆ ಕಲಿ ಮೌವಾದನೇ ಭಾನು,
ತನ್ನ ತಾನೇಗಿಸಿಕೊಂಡನೇ ದೀನಾಗಿ
ನಂದಾದೀಪವೇ ನಂದಿದ ಮೇಲೆ ಕಂದಿದೆ ವನ,
ದುಕಾಗಿದೆ ಉದುರಿದ ಸನ||೩||

Monday 9 January 2012

ಎಲ್ಲಿ ಹೋದವು ಆ ದಿನಗಳು.



ಜೀವನದಲ್ಲಿ ಒಂದನ್ನು ಹುಡುಕುತ್ತ ಮತ್ತೊಂದನ್ನು ಕಳೆದುಕೊಳ್ಳುವ ಸೂತ್ರಕ್ಕೆ ಅಂಟಿಕೊಂಡು ಬದುಕುವ ನಾವು ಜೀವನದ ಚಿಕ್ಕ ಚಿಕ್ಕ ಆನಂದಗಳನ್ನು ಕಳೆದುಕೊಳ್ಳುತ್ತಿದ್ದೀವೆ ಅನ್ನಿಸುತ್ತದೆ ನನಗೆ. ನಿಮಗೆ ಹಾಗೆನ್ನಿಸದೆ? ಆದರೆ ಇದರ ಬಗ್ಗೆ ಹೆಚ್ಚೇನನ್ನು ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿಯಲ್ಲಿರುವ ನಾವು ಕೆಲವುಗಳನ್ನು ಸುಂದರ ನೆನಪು ಎಂದಷ್ಟೇ ಭಾವಿಸಿ ನೆನೆಸಿಕೊಳ್ಳುವುದು ಸೂಕ್ತ. ಅಂತಹ ಒಂದು ಚಿಕ್ಕ ಪ್ರಯತ್ನ ಇದು. 

ಮೂರು ತಿಂಗಳ ಕೆಳಗೆ ಊರಿಗೆ ಹೋಗಿದ್ದೆ, ನವರಾತ್ರಿಗೆ. ಅದೊಂದು ದಿನ ಬೆಳಿಗ್ಗೆ ಅಪ್ಪ ತೋಟದ ಕಡೆಗೆ ಹೋಗುವ ಮುನ್ನ ಎಬ್ಬಿಸಿದರು, ರಾತ್ರಿ ಬೇಗ ಮಲಗಿದ್ದೆನಾಗಿ ಎಬ್ಬಿಸಿದ ಕೂಡಲೇ ಎದ್ದೆ. ಮೈಮುರಿಯುತ್ತ ಹೊರಗೆ ಬಂದೆನೆಂದರೆ ಪ್ರಕೃತಿಯಲ್ಲಿ ಅದೇನೋ ಸಡಗರ, ಹೆಸರು ಗೊತ್ತಿಲ್ಲದ ಅದೆಷ್ಟೋ ಹಕ್ಕಿಗಳು ತಾಳಮೇಳದ ಹಂಗಿಲ್ಲದೇ ಕೂಗುವ ದನಿಯೇನು(ನೆನಪಿರಲಿ ಇದು ನಡೆದಿದ್ದು ಕರ್ಕಿ, ಹೊನ್ನಾವರದಲ್ಲಿ ಮತ್ತು ಕರ್ಕಿಯೇನೂ ಜೀವವೈವಿಧ್ಯಕ್ಕೆ ಹೆಸರುವಾಸಿಯಲ್ಲ.), ಸೂರ್ಯನೆಲ್ಲಿ ಬಂದು ಭೂಮಿಯನ್ನು ಸುಟ್ಟುಬಿಡುತ್ತಾನೇನೋ ಎಂದು ದಿಗಿಲಿಗೆ ಬಿದ್ದಂತೆ ಹರಡಿಕೊಂಡ ಮರಗಿಡಗಳ ಕೊಂಬೆಗಳ ಹಂದರವೇನು, ನನ್ನ ಇರುವನ್ನು ಹೇಗಾದರೂ ಮರೆತೀರಿ ಎಂಬಂತೆ ದೂರದಲ್ಲಿ ಭೋರ್ಗರೆವ ಅರಬ್ಬೀ ಸಮುದ್ರದ ಅಲೆಗಳ ಆರ್ಭಟವೇನು, ದೂರದಲ್ಲಾಗಾಗ ಕೂಗಿ ಹೋಗುವ ರೈಲಿನ ಸೀಟಿಯ ಗಾಂಭೀರ್ಯವೇನು, ಮನೆಮುಂದಿನ ಅಂಗಳಕ್ಕೆ ಸಾರಿಸಲು ಅನುವಾಗುವಂತೆ ನೀರನ್ನು ಚುಮುಕಿಸುತ್ತಿದ್ದ ಪಕ್ಕದ ಮನೆಯ 'ದೊಡ್ಡಾಯಿ'(ನಮ್ಮಲ್ಲಿ ಹೀಗೇ ದೊಡ್ಡವರನ್ನು ಸಂಬಂಧ ಇಟ್ಟೇ ಕರೆಯುತ್ತೇವೆ, ಎಲ್ಲರನ್ನೂ ಸಾರಾಸಗಟಾಗಿ ಆಂಟಿ-ಅಂಕಲ್ ಎನ್ನುವುದಿಲ್ಲ)ಯ ಅವಸರವೇನು, ಮನೆಯ ಮುಂದೆಯೇ ನೀರುಹೊತ್ತು ಸಾಗುತ್ತಿದ್ದ ಕರಿಮಣಿಗೌಡ ಜನರ ಹುಡುಗಿಯರ ನಗುವೇನು, ಅದೊಂದು ಚೇತೋಹಾರೀ ಭಾವನೆ, ಇಡೀ ದಿನಕ್ಕೆ ಸಾಕಾಗುವಷ್ಟು ಚೈತನ್ಯವನ್ನು ತುಂಬಬಲ್ಲ ಶಕ್ತಿಮೂಲವದು. ಹಾಗೆಯೇ ಕುಳಿತುಕೊಂಡರೆ ಬಿಸಿಲೇರುವ ಪ್ರತೀ ಕ್ಷಣವನ್ನೂ ಅನುಭವಿಸಲು ಶಕ್ಯವಾಗುವಂತಹ ಅನುಭೂತಿ, ಪ್ರಕೃತಿಮಾತೆಯೇ ತನ್ನ ಮಡಿಲಲ್ಲಿ ಕೂರಿಸಿಕೊಂಡು ಜಗವನ್ನು ತೋರಿಸಿದಂತೆ. ಮಾತಿಗೆ ತಡವರಿಸುವ ನನ್ನಲ್ಲೂ ಪದಗಳ ಮಾಲೆಯನ್ನು ಮೂಡಿಸಿಬಿಡುತ್ತದೆ.  ಎಷ್ಟು ಬೆಳಗುಗಳ ಸೌಂದರ್ಯವನ್ನು ಕಳೆದುಕೊಂಡೆ ಎಂದು ನನ್ನನ್ನೇ ಶಪಿಸಿಕೊಂಡಿದ್ದೆ. ಎಷ್ಟು ದಿನವಾಗಿತ್ತು, ಹೀಗೊಂದು ಬೆಳಗನ್ನು ನೋಡಿ, ಹೀಗೊಮ್ಮೆ ಪ್ರಕೃತಿ ಆರಾಧನೆ ಮಾಡಿ! ಆದರೆ ಒಮ್ಮೆ ಬೆಂಗಳೂರಿಗೆ ಬನ್ನಿ, ನಿಮಗೇ ಗೊತ್ತಾಗುತ್ತದೆ ನಾನೇಕಷ್ಟು ಚಿಂತಿತನಾಗಿದ್ದೆ ಎಂದು. ದಿನಪ್ರಾರಂಭವಾಗುವುದೇ ವಾಹನಗಳ ಶಬ್ದಮಾಲಿನ್ಯದಿಂದ, ದಿನವಿಡೀ ಇಲ್ಲದ ಗುರಿಯ ಕಡೆಗಿನ ಕುರುಡು ಓಟ, ಬೇರೆ ಮೃಗಖಗಗಳು ಹೋಗಲಿ, ಕಾಗೆಯೂ ಸಿಗದಂತಹ ಪರಿಸ್ಥಿತಿ, ಪಕ್ಕದಮನೆಯಲ್ಲಿಯೇ ಏನಾದರೂ ಗೊತ್ತಾಗದಂತಹ ಅಜ್ಞಾನಭರಿತ ನಿರುಪೇಕ್ಷೆ, ರೊಟೀನ್ ಆಗಿಬಿಟ್ಟಿರುವ ಬದುಕು,ಎಲ್ಲವೂ ಸೇರಿ ಬದುಕು ಇಷ್ಟೇ ಅಲ್ಲ, ಇದಕ್ಕಿಂತ ಹಿರಿದೇನನ್ನೋ ನಾವು ಕಳೆದುಕೊಂಡಿದ್ದೇವೆ/ಕಳೆದುಕೊಳ್ಳುತ್ತಿದ್ದೇವೆ ಎನ್ನಿಸಿಬಿಡುವುದಿಲ್ಲವೇ?
ಅದೇ ದಿನ ಸಂಜೆ, ನವರಾತ್ರಿ ಹಬ್ಬ. ಅದು ಮತ್ತೆ ಬಾಲ್ಯದ ಮತ್ತೊಂದು ಮಗ್ಗುಲಿನ ನೆನಪುಗಳನ್ನು ಕೆದಕಿ ವರ್ತಮಾನದ ಶೂನ್ಯತೆಯನ್ನು ಎತ್ತಿಹಿಡಿಯುತ್ತದೆ.ಅದು ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗಿನ ಕಾಲ. ನವರಾತ್ರಿ ಯಾವಾಗಲೂ ದಸರಾ ರಜದಲ್ಲಿಯೇ ಬರುತ್ತಿತ್ತು.(ನನಗೆ ಗೊತ್ತು, ಈ ವಾಕ್ಯ ಅದೆಷ್ಟರ ಮಟ್ಟಿಗೆ ಅಭಾಸ ಎನ್ನಿಸಬಹುದು ಎಂದು.), ನಾನು ಅಜ್ಜನ ಮನೆಯಲ್ಲಿರುತ್ತಿದ್ದೆ. ನಮ್ಮ ಅಜ್ಜನ ದಾಯದಿಯವರೊಬ್ಬರ ಮನೆಯಲ್ಲಿ ಅಮ್ಮನವರನ್ನು ಕೂರಿಸುತ್ತಿದ್ದರು. ನವರಾತ್ರಿಯ ಪ್ರತೀ ದಿನವೂ(ರಾತ್ರಿಯೂ) ಅಲ್ಲಿಗೆ ಹೋಗುತ್ತಿದ್ದೆ. ಪ್ರತೀ ದಿನವೂ ನೆಂಟರಿಷ್ಟರೆಲ್ಲಾ ನೆರೆದಿರುತ್ತಿದ್ದರು. ಸಂಜೆಯಿಡೀ ದೇವರ ಕೊಣೆಯಲ್ಲಿ ಆಗುತ್ತಿದ್ದ ಪೂಜೆ, ಹೊರಜಗಲಿಯಲ್ಲಿ ನಡೆಯುತ್ತಿದ್ದ ಹರಟೆಗಳು, ಅಟ್ಟದ್ದ ಮೇಲೆ ಮಕ್ಕಳ ಪಂಗಡದಲ್ಲಿ ನಡೆಯುತ್ತಿದ್ದ ಯಾವುದೋ ಒಂದು ಆಟದ ಚಿಕ್ಕ ಚಿಕ್ಕ ಜಗಳಗಳು, ಮಂಗಳಾರತಿಯ ವೇಳೆಗೆ ಹೆಂಗಸರೆಲ್ಲ ಸೇರಿ ಹೇಳುತ್ತಿದ್ದ ಭಜನೆಗಳು, ದಿನನಿತ್ಯವೂ ದೊರೆಯುತ್ತಿದ್ದ ಹಬ್ಬದ ಊಟ ಎಲ್ಲವೂ ಹೀಗೇ ನೆನಪಿನಾಳದಿಂದ ಧುಮ್ಮಿಕ್ಕಿ ಹೊರಬಂತು. ಅದೆಷ್ಟು ಜನ, ಅದೆಷ್ಟು ಮಾತು,ಅದೆಷ್ಟು ನಗೆ, ಅದೆಷ್ಟು ಸುಂದರ ದಿನಗಳು, ಹೇಗೆ ಕಳೆದು ಹೋದವು ಎಂಬುದಕ್ಕೆ ನನ್ನ ಬಳಿ ಈಗಲೂ ಲೆಕ್ಕವಿಲ್ಲ. ಈಗ ನೋಡಿ, ಹಬ್ಬ ಇದೆಯೆಂದು ಕಾಲೇಜಿನ ಕ್ಯಾಲೆಂಡರ್ ನೆನಪಿಸುವ ಪರಿಸ್ಥಿತ್ ಬಂದು ಬಿಟ್ಟಿದ್ದು.ಆಚರಣೆಯೋ ಕೇಳುವುದೇ ಬೇಡ, ಹೆಚ್ಚೆಂದರೆ ಒಂದು ಪಾಯಸವನ್ನು ಮಾಡಿ ದೇವರಿಗೆ ಕೈಮುಗಿಯಬಹುದು ಎಂದು. ಇದನ್ನು ಸ್ವಂತ ಇಷ್ಟದಿಂದ ತಂದುಕೊಂಡಿದ್ದಲ್ಲವೇ? ಹಾಗೆ ಮಾಡಿಕೊಂಡು ಹೀಗೆ ಹಲುಬುವುದು ನ್ಯಾಯವೇ? ಯಾರಿಗ್ಗೊತ್ತು, ಜೀವನದಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರವಿಲ್ಲ, ಮೇಲಾಗಿ ಇರುವುದೆಲ್ಲ ಬಿಟ್ಟು ಇರದುದರ ಕಡೆಗೆ ತುಡಿವುದೇ ಜೀವನ. 

Monday 2 January 2012

ಮನಃ-ಪರಿವರ್ತನೆ


ಎರಡು ವಾರಗಳಿಂದ ಈ ಅಂಕಣದಲ್ಲಿ ಏನನ್ನೂ ಬರೆಯಲಾಗದೇ ಇದ್ದಿದ್ದಕ್ಕೆ ಕ್ಷಮೆಯಿರಲಿ, ಕಾರಣಗಳನ್ನು ಕೊಡುವುದು ಕ್ಷುಲ್ಲಕವಾಗಿ ಕಾಣಬಹುದಾದ್ದರಿಂದ ಆ ಪ್ರಯತ್ನವನ್ನು ಮಾಡಲು ಹೋಗಲಾರೆ.

ಕಳಿಂಗ ಯುದ್ಧ ಮುಗಿದ ಮೇಲಿನ ಕಥೆ. ಸಾಮ್ರಾಟ ಅಶೋಕನ ಮನಸ್ಸು ಬದಲಾಗಿರಬಹುದಾದ ಸನ್ನಿವೇಶವನ್ನು ಪದ್ಯರೂಪದಲ್ಲಿಡಲು ಒಂದು ಚಿಕ್ಕ ಪ್ರಯತ್ನ. ೧೦ನೇ ತರಗತಿಯಲ್ಲಿ ಬರೆದಿದ್ದು.

ವರ್ಣಿಸಲೇನು, ಸಾಮ್ರಾಟ ಅಶೋಕನಾಗಿದ್ದ ಆತ
ದೇವನಾಂಪ್ರಿಯನಾಗಿ ಬದಲಾದ ವೃತ್ತಾಂತವ||ಪ|| 

ಬಹುದೀರ್ಘ ಸಮಯದಾ ತರುವಾಯದಲ್ಲಿ
ಆ ಸಂಜೆ ನಗು ಕಂಡಿತ್ತಾ ಅರಸನಲ್ಲಿ
ಕಳಿಂಗದೆದುರಿನಾ ವಿಜಯದಾ ಭರದಲ್ಲಿ
ಅ'ಶೋಕ' ಮರೆತಿದ್ದ ತನ್ನ ಹೆಸರಿನ ಅರ್ಥವನಲ್ಲಿ||೧|| 

ಹದ್ದಿಗೆ ಹಾವಿನ ಮೇಲಿನಾ ಅಸೆಯ ರೀತಿ
ಮಂತ್ರಿಮಾಗಧರಿಗೆ ಕಳಿಂಗದ ಮೇಲೆ ವಿಕೃತ ಪ್ರೀತಿ
ಕಳಿಂಗದಾ ಜನರು ಕೇಳಿರಲಿಲ್ಲ ಆ ಶಬ್ದ 'ಭೀತಿ'
                                              ಹೋರಿ ಸತ್ತರಾ ವೀರ ಅಭಿಮನ್ಯುವಿನ ಜಾತಿ||೨|| 

ರಾಜನಾ ಬಿಡಾರದಿ ವಿಜಯದಾ ಸಂತೋಷಕೂಟ
ತೃಪ್ತನಾಗಲಿಲ್ಲ ರಕ್ತದ ಮದ ಏರಿದ್ದ ಸಾಮ್ರಾಟ
ಮಾತಿತ್ತು, ಒಂದು 'ಬೆಕ್ಕಿಗೆ ಆತ ಇಲಿಗೆ ಪ್ರಾಣಸಂಕಟ
ಎಂಬಂತೆ ನೋಡಬಯಸಿದ್ದ ತನ್ನ ಕ್ರೌರ್ಯದಾಟ||೩|| 

ಚಕ್ರವರ್ತಿಯ ಮಾತು ಮೀರಲಾಪುದೇ ಹೇಳಿ
ವಿಷಯ ಹರಡಿತ್ತು ಅರಮನೆಯಲ್ಲೆಡೆಯಲಿ
ಮಂತ್ರಿವೃಂದವು ಆತನಿಗಾ ದಾರಿ ತೋರುತಲಿ
ರಣರಂಗಕೆ ಭೇಟಿಯಿತ್ತರಾ ಮೂಡು ಸಂಜೆಯಲಿ||೪|| 

ದಾರಿಯಲಿ ಸುತ್ತೆಲ್ಲ ಹರಡಿತ್ತು ಸೂತಕದ ಭಾವನೆ
ಹೊಕ್ಕಿತ್ತು ಹೆಮ್ಮೆಯಲಿ ರಾಜರಥ ರಣರಂಗವನೆ
ಮಾಡಿದ್ದ ಅಶೋಕವನಲ್ಲಿ ಉದ್ಗಾರ, "ಓ ದೇವನೇ"
ಈ ಎಲ್ಲ ಕ್ರೌರ್ಯ ನನ್ನ ಹಮ್ಮಿಗೋಸ್ಕರವೇನೇ?||೫|| 

ನಿಂತಿತು ರಥ, ಇಳಿದನಾ ರಾಜ, ತೋದಿತ್ತು
ಅವನ ಪಾದ ರಕ್ತದಿಂದ, ಕಾಲಿಗೇ ಸೋಕಿತ್ತು
ಹೆಣದ ಬುರುಡೆ, ಅಲ್ಲಿ ಚೂರಾದ ಸ್ಥಿಪಂಜರವಿತ್ತು
ಸತ್ತಿದ್ದ ಬದುಕಿನ ಅವಶೇಷಗಳಿಗೂ ಜೀವವಿತ್ತು||೬|| 

"ತನ್ನೊಬ್ಬನ ಲೋಭಕೀ ರೀತಿ ಬೇಜಾರು
ತನಗೇಕೆ ಬಂದಿತ್ತು ಅಜ್ಞಾನದ ಮಂಪರು
ಯಾವ ಸಾರ್ಥಕತೆಗೆ ಈ ಜನರ ಕಣ್ಣೀರು
ಯಾರ ಶಾಪಕೆ ಹರಿದಿತ್ತು ಕಳಿಗದ ನೆತ್ತರು"||೭|| 

"ಯಾರಿಗೆ ಬೇಕು ಈ ದುಃಖ; ಈ ಅಳು;
ಮುಗ್ಧ ಜನರ ಜೀವನ ಬರಿ ಹಾಳು"
"ಏ ದೇವಾ, ಯಾಕೆ ನನ್ನ ಮನದೊಳು
ತೆಗೆಯಲಾರದೇ ಹೋದೆ ಮನಸ ಹೂಳು"||೮|| 

ಅಶೋಕನೆಂದಿಗೂ ಕಾಣದಾ ನೋವಿನ ಸೆಳಕು
ಎದೆಯಲ್ಲಿ ಮೂಡಿತ್ತು ಅಹಿಂಸೆಯ ಬೆಳಕು
ತೊಳೆದಿತ್ತು ಅರಿಷಡ್ವರ್ಗಗಳ ಕೊಳಕು
ಶುದ್ಧವಾಗಿತ್ತವನ ತನು ಮನ ಹೊರಕು ಒಳಕು||೯|| 

"ಪಡುವಣದಿ ಮುಳುಗುತಿದ್ದ ಸೂರ್ಯನೂ ಕೂಡ
ಈ ಮುಗ್ಧ, ವೀರ ಜನರ ದುಃಖ ನೋಡ
ಲಾರದಾದನೇ ದೇವೆ, ನಾನೆಂತಹ ಮಾಡ
ಬಾರದ ತಪ್ಪ ಮಾಡಿದೆ, ಏನ ತೆರಲಿ ದಂಡ"||೧೦|| 

ಸಾಮ್ರಾಟ ಅಶೋಕ ಪ್ರತಿಜ್ಞೆಗೈದ "ಓ ಮಿತ್ರರೇ!
ನಾನೆಂದಿಗೂ ರಾಜ್ಯವಿಸ್ತಾರದ ಹೆಸರೆತ್ತಲಾರೆ
ನನ್ನ ಮೇಲೆ ಬಿದ್ದರೆ ಅವರ ಹೆಸರುಳಿಸಲಾರೆ"
ಎಂದು ರಕ್ತಲೇಪಿತ ಖಡ್ಗವ ಕೈಬಿಟ್ಟನಾತ ಕೈಯಾರೆ||೧೧|| 

ಮೂಡಿದನಾತನಾ ಎದೆಯಲಿ ಅಹಿಂಸಾರವಿ
ಯಾರಿಗೆ ಬೇಕು ಇದು, ಈ ರಾಜ್ಯ; ಈ ಪದವಿ;
ಕಲಿಯಾಗೀ ಹೋರಿದಾತ ಆದನೇ ಶಾಂತಿಕವಿ
 "ಬುದ್ಧಂ ಶರಣಂ ಗಚ್ಛಾಮಿ" ಎಂದ ಮೌರ್ಯಕುಲರವಿ||೧೨||