Friday, 22 August 2014

ಪ್ರತೀ ಮಗುವಿನೊಂದಿಗೂ ಒಬ್ಬಳು ತಾಯಿ ಹುಟ್ಟುತ್ತಾಳೆ ..


ಡುಮ್ಮು, ಮುದ್ದು, ಕಂದು, ಚಂದು, ಪಾಪು ಇತ್ಯಾದಿ ನಾಮಾಂಕಿತ ಆದ್ಯಾ ಪುಟ್ಟಿ,

ಮೊದಲನೆಯದಾಗಿ ಎರಡನೇ ಹುಟ್ಟು ಹಬ್ಬದ ಶುಭಾಷಯಗಳು. ಅದ್ಭುತ ಸಂತೋಷಮಯ ಯಶಸ್ಸಿನ ಜೀವನ ನಿನ್ನದಾಗಲಿ.

ಇಂದಿಗೆ ಎರಡು ವರ್ಷವಾಯ್ತು, ನೀನು ಹುಟ್ಟಿ. ಎಷ್ಟು ಬೇಗ ಒಂದು ವರ್ಷ ಕಳೆದು ಹೋಯಿತು ಎನ್ನಿಸುತ್ತದೆ. ಮೊನ್ನೆಯಷ್ಟೇ ಅಮ್ಮ ಫೋನ್ ಮಾಡಿ ’ಭವಾನಿಗೆ ಆಪರೇಶನ್ ಆಯ್ತು, ಹೆಣ್ಣು ಮಗು. ಇಬ್ಬರೂ ಹುಷಾರಾಗಿದ್ದಾರೆ’ ಎಂದು ಹೇಳಿದ ಹಾಗಿದೆ.  ನಾನು ಅಫೀಸಿನಲ್ಲಿದ್ದೆ ಎಂಬುದನ್ನೂ ಮರೆತು ಒಂದು ಖುಷಿಯಲ್ಲಿ ಜಿಗಿದಿದ್ದು ಇನ್ನೂ ನೆನಪಿದೆ.  ವೈಯಕ್ತಿಕವಾಗಿ ಹೇಳಬೇಕೆಂದರೆ ಆ ಸಮಯದಲ್ಲಿ ಸಾಕಷ್ಟು ಪೆಟ್ಟುಗಳನ್ನು ತಿಂದಿದ್ದ, ಒಂದಾದ ಮೇಲೆ ಒಂದು ಕಹಿಯನ್ನೇ ಉಣ್ಣುತ್ತಾ ಬಂದಿದ್ದ ನಾನು ಬಹಳ ದಿನಗಳ ನಂತರ ಒಂದು ವಿಷಯವನ್ನು ಬಹಳೇ ಇಷ್ಟಪಟ್ಟು ಖುಷಿಪಟ್ಟಿದ್ದೆ. ನೀನು ಹುಟ್ಟಿದ ಹಿಂದಿನ ವಾರವಷ್ಟೇ ಮನೆಯಿಂದ ಬಂದಿದ್ದೆನಾದರೂ ಯಾವಾಗ ಮನೆಗೆ ಹೋಗುತ್ತೇನೋ ಎಂದು ಕಾತರಿಸಿ ಕಾಯತೊಡಗಿದ್ದೆ. ’ತಾಯಿಯಂತ ಅಕ್ಕ’ ತಾಯಿಯಾದಳು ಎಂಬ ಸಂತೋಷ, ನಾನು ಮಾವನಾದೆನೆಂಬ ಆನಂದ, ಎಲ್ಲಕ್ಕಿಂತ ಹೆಚ್ಚಾಗಿ ಅಕ್ಕ ಮತ್ತು ಅವಳ ಮಗಳು ಇಬ್ಬರೂ ಆರೋಗ್ಯವಂತರಾಗಿದ್ದಾರೆ ಎಂಬ ಸಮಾಧಾನ ಎಲ್ಲ ಸೇರಿ ಅದೊಂತರಾ ಅಮೃತಘಳಿಗೆ.

ನಮ್ಮ ಮನೆಯಲ್ಲಿ ನಾನು ಅಕ್ಕ(ನಿನ್ನಮ್ಮ ಭವಾನಿ, ನಿನ್ನ ಭಾಷೆಯಲ್ಲಿ ಬನಾನಿ) ಇಬ್ಬರೇ ಮಕ್ಕಳು. ಅಕ್ಕನಾದರೂ ತಾಯಿಯಂತೆ ನನ್ನನ್ನು ಆಡಿಸಿ ಬೆಳೆಸಿದ್ದಳು. ಆದರೆ ನನಗೆ? ನಾನೇ ಕಿರಿಯವನು. ಎಲ್ಲರೂ ನನ್ನನ್ನು ಆಡಿಸಿದವರೇ ಹೊರತು, ನಾನು ಯಾರನ್ನೂ ಆಡಿಸಿದ ನೆನಪಿಲ್ಲ. ಕಸಿನ್ಸ್ ಬಳಗದಲ್ಲಿಯೂ ತೀರಾ ನಾನು ಆಡಿಸುವಷ್ಟು ಚಿಕ್ಕವರು ಯಾರೂ ಇರಲಿಲ್ಲ, ಇದ್ದರೂ ಮೊದಲೇ ಕಿಡಿಗೇಡಿ/ಹಾಳುಗೇಡಿಯಾದ ನನ್ನನ್ನು ಅಷ್ಟು ಚಿಕ್ಕ ಮಕ್ಕಳ ಆಟಿಕೆಯ ಹತ್ತಿರ ಹೋಗಲೇ ಬಿಡುತ್ತಿರಲಿಲ್ಲ, ಇನ್ನು ಚಿಕ್ಕ ಮಕ್ಕಳನ್ನು ಆಡಿಸುವುದೆಲ್ಲ ಕನಸಿನ ಮಾತು. ಕೆಲವೊಮ್ಮೆ ಅಮ್ಮನ ಬಳಿ ನನಗೊಬ್ಬ ಚಿಕ್ಕ ತಮ್ಮನೋ/ತಂಗಿಯೋ ಬೇಕೆಂದು ಗಲಾಟೆ ಮಾಡುತ್ತಿದ್ದೆ ನಾನು, ತೀರಾ ಇತ್ತೀಚಿನವರೆಗೂ( ;) ). ಅಮ್ಮ, ’ನಿನ್ನನ್ನು ಬೆಳೆಸುವುದರಲ್ಲಿಯೇ ನನಗೆ ಏಳು ಹನ್ನೊಂದಾಯ್ತು, ಇನ್ನೊಂದು? ಸಾಧ್ಯವೇ ಇಲ್ಲ!’ ಎಂದು ಬಿಡುತ್ತಿದ್ದಳು. ಮತ್ತೊಂದು ಕಾರಣವೆಂದರೆ, ಚಿಕ್ಕವನಾಗಿದ್ದಾಗಿನಿಂದ ನನ್ನನ್ನು ಕಂಡರೆ ಚೀರಿಕೊಂಡ, ರಂಪ ಮಾಡಿಕೊಂಡ ಚಿಕ್ಕಮಕ್ಕಳೇ ಜಾಸ್ತಿ. ನನ್ನನ್ನು ಕಂಡರೆ ಅದಾವ ಕೆಂಪುಕಣ್ಣಿನ ಭೂತವನ್ನು ಕಂಡಂತಾಗುತ್ತಿತ್ತೋ ಏನೋ ಗೊತ್ತಿಲ್ಲ, ನಗುತ್ತಾ ಆಡುತ್ತಾ ಇದ್ದ ಮಕ್ಕಳೂ ನನ್ನ ಹತ್ತಿರ ಬಂದಕೂಡಲೇ ಅಳಲು ಸುರುಮಾಡಿಬಿಡುತ್ತಿದ್ದವು. ಆಗೆಲ್ಲಾ ನನಗೆ ನಮ್ಮ ಮನೆಯಲ್ಲೇ ಒಂದು ಮಗು ಇದ್ದಿದ್ದರೆ ಆ ಮಗುವಿಗೆ ನನ್ನ ಮುಖ ನೋಡಿ ನೋಡಿ ಅಭ್ಯಾಸವಾಗಿಯಾದರೂ ಅದು ಅಳುತ್ತಿರಲಿಲ್ಲವೇನೋ ಮತ್ತು ಅದು ಅಳದೇ ಇದ್ದದ್ದನ್ನು ನೋಡಿಯಾದರೂ ಉಳಿದ ಅಳುವ ಯಂತ್ರಗಳು ಬಾಯ್ಮುಚ್ಚಿಕೊಳ್ಳುತ್ತಿದ್ದವೋ ಏನೋ ಎಂದು ಅನಿಸುತ್ತಿತ್ತು. ಅದಕ್ಕೆಲ್ಲ ಉತ್ತರವಾಗಿಯೇನೋ ಎಂಬಂತೆ ಬಂದವಳು ನೀನು.

  ನೆನಪಿದೆ ಇಂದಿಗೂ. ನೀನು ಹುಟ್ಟಿದಾಗ ನನಗೆ ಅಲ್ಲಿ ಇರಲಾಗಲಿಲ್ಲವೆಂದು ಬಹಳೇ ಪರಿತಪಿಸಿದ್ದೆ. ಹೊಸದಾಗಿ ಸೇರಿದ್ದ ಕೆಲಸದ ಮಧ್ಯೆ ರಜೆ ಸಿಗದೇ ಇದ್ದುದರಿಂದ ನಿನ್ನನ್ನು ನೋಡಲು ಆ ವಾರಾಂತ್ಯದ ವರೆಗೂ ಕಾಯಬೇಕಾಗಿ ಬಂದಿತ್ತು. ಅಂದಿನ ನನ್ನ ಸಡಗರವನ್ನು ನೆನೆಸಿಕೊಂಡರೆ ನನಗೇ ಕಣ್ಣು ಮಂಜಾಗುತ್ತದೆ, ಕಾರಣವಿಲ್ಲದೇ. ನಿನ್ನ ಮೊದಲ ಫೋಟೋ ತೆಗೆದಿದ್ದು ನಾನೇ ಎಂಬುದೇ ನನಗೆ ಹೆಮ್ಮೆಯ ವಿಷಯ. ಕಡಲತಡಿಯ ಬಿಸಿಹವೆಯ ನಮ್ಮ ಮನೆಯಲ್ಲಿ ನಾನು ಬಾಯಿಯಲ್ಲಿ ಗಾಳಿ ಹಾಕಿದಾಗ ನೀನು ತೊಟ್ಟಿಲಲ್ಲಿಯೇ ನನ್ನ ಕಡೆ ತಿರುಗಿ ನಕ್ಕಂತೆ ಮುಖಮಾಡಿದರೆ ನನಗೊಂದು ಧನ್ಯಭಾವ. ನೀ ಚಿಕ್ಕವಳಿದ್ದಾಗ ರಾತ್ರಿಯಲ್ಲೇನಾದರೂ ಎದ್ದು ಗಲಾಟೆ ಮಾಡಿ ಮಲಗಿದ್ದ ಎಲ್ಲರನ್ನು ಎಬ್ಬಿಸಿದಾಗ ನಾನೂ ಎದ್ದರೆ ನನಗೆ ಒಳಗೊಳಗೇ ಖುಷಿ. ಎಂಟು ತಿಂಗಳಿಗೆ ತಿರುಗಿ ಬರುತ್ತಿ ಎಂದು ಗೊತ್ತಿದ್ದರೂ. ತೊಟ್ಟಿಲಲ್ಲಿ ನೀನು ಕಾಲು ಇಟ್ಟುಕೊಳ್ಳುತ್ತಿದ್ದ ವಿಧಾನಕ್ಕೆ ಕಪ್ಪೆಕಾಲು ಎಂದೂ, ಚಿಕ್ಕ ಕುತ್ತಿಗೆಯ ಮುಖಕ್ಕೆ ಕುಮಾರಸ್ವಾಮಿ ಎಂದು ಹೆಸರಿಡುವಲ್ಲಿ ಏನೋ ಮುದ. ಮಕ್ಕಳನ್ನು ಎತ್ತಿಕೊಳ್ಳಲು ಬಾರದ ನಾನು ನಿನ್ನನ್ನು ಎತ್ತಿಕೊಂಡಾಗ ನೀನು ಅಳದೇ ಹೋದರೆ, ಸ್ಕೈಪಿನಲ್ಲಿ ಮಾತನಾಡುವಾಗ ನೀನು ನನ್ನನ್ನು ’ ಸುಬ್ಬು ಮಾಮಾ’ ಎಂದು ಕೂಗಿದರೆ ನನಗದು ಹೇಳಿತೀರದ ಸಂಭ್ರಮ. ಬರಿ ಎರಡು ವರ್ಷಗಳಲ್ಲಿ ಎಷ್ಟೆಲ್ಲಾ ಸಂತೋಷಗಳನ್ನು ಕೊಟ್ಟಿರುವೆಯೇ, ಮುದ್ದುಮರಿ.

ಪ್ರತೀ ಮಗುವಿನೊಂದಿಗೂ ಒಬ್ಬಳು ತಾಯಿ ಹುಟ್ಟುತ್ತಾಳೆ. ನನ್ನ ಅಕ್ಕನಲ್ಲಿ ಒಬ್ಬಳು ತಾಯಿ ಹುಟ್ಟಿದ್ದು ನಿನ್ನಿಂದಲೇ? ಗೊತ್ತಿಲ್ಲ ಪುಟ್ಟಮ್ಮ. ನಿನಗೆ ಗೊತ್ತಿಲ್ಲದ ಗುಟ್ಟೆಂದರೆ ನನ್ನನ್ನು ನಿನ್ನಮ್ಮನ ಮೊದಲ ಮಗ ಎಂದು ಅಕ್ಕನ ಫ್ರೆಂಡ್ಸ್ ಆಡಿಕೊಳ್ಳುತ್ತಿದ್ದರು. ಬಹುಶಃ ಎಲ್ಲಾ ಅಕ್ಕಂದಿರೂ ತಮ್ಮ ತಮ್ಮ ತಮ್ಮಂದಿರಿಗೆ ತಾಯಿಸಮಾನರೇ. ಆ ಲೆಕ್ಕದಲ್ಲಿ ನಿನ್ನ ಮೇಲಿರುವ ಆಕೆಯ ಪ್ರೀತಿಯೆಲ್ಲವೂ ಮೊದಲು ನನ್ನ ಮೇಲಿದ್ದುದೇ(:P). ನನ್ನ ಮೇಲಿನ ಆಕೆಯ ಪ್ರೀತಿಯಲ್ಲಿ ಸ್ವಲ್ಪ ಭಾಗವನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಅಭ್ಯಂತರವೇನೂ ಇಲ್ಲ ನನ್ನದು, ಬದಲಾಗಿ ನನ್ನದೂ ಸ್ವಲ್ಪ ಪ್ರೀತಿ ಸೇರಿಸಿ ಮುದ್ದಿಸೇನು. ಬೇರೆ ದಾರಿಯಾದರೂ ಏನಿದೆ ಹೇಳು ನನಗೆ, ನಿನ್ನ ಮೋಡಿಯಲ್ಲಿ ಬಿದ್ದವನಿಗೆ.

ಕಂದು, ನೀನೆಂದರೆ ನಮಗೆಲ್ಲ ಒಂದು ಕನಸು, ಜೊತೆಗೆ ಒಂದಷ್ಟು ಕಾತರಗಳು, ಕಳವಳಗಳು, ಹಾರೈಕೆಗಳು, ಬೇಡಿಕೆಗಳು, ಯೋಚನೆಗಳು, ಆಲೋಚನೆಗಳು, ಜಾಗ್ರತೆಗಳು, ಚಿಂತೆಗಳು. ನೀನೆಂದರೆ ನಿನ್ನಮ್ಮನ ಜೀವ, ಅಪ್ಪನ ಪ್ರೀತಿ, ಮಾವಯ್ಯನ ಅಮರ ಬಾಂಧವ್ಯ, ಅಮ್ಮಮ್ಮನ ಚೈತನ್ಯ, ಅಜ್ಜನನ್ನು ಕರಗಿಸಬಲ್ಲ ಶಕ್ತಿ. ನೀನು ಕುಮಟಾದ ಅನಿಲಣ್ಣನ ಆಸ್ಪತ್ರೆಯಲ್ಲಿ ಹುಟ್ಟಿದ್ದು, ನಿನ್ನ ಮೊದಲ ವರ್ಷದ ಹುಟ್ಟುಹಬ್ಬದಲ್ಲಿ ನೀನು ನಿನ್ನ ಪುಟಾಣಿ ಕುರ್ಚಿಯಿಂದ ಬಿದ್ದಿದ್ದು ಎಲ್ಲ ಇಂದು ನಿನ್ನೆಯದೆನ್ನುವಷ್ಟು ಹೊಸತಾಗಿ ನೆನಪಿದೆ, ಆದರೆ ಆಗಲೇ ನಿನ್ನ ಎರಡನೇ ವರ್ಷದ ಹುಟ್ಟುಹಬ್ಬ ಬಂದಾಗಿದೆ. ಮೊದಲೆರಡು ವರ್ಷಗಳ ನೆನಪು ಯಾರಿಗೂ ಇರುವುದಿಲ್ಲವಾದ್ದರಿಂದ ಎರಡನೆಯ ಹುಟ್ಟುಹಬ್ಬ ನಿನ್ನ ಬಾಲ್ಯದ ಬಾಗಿಲು. ಈ ಎರಡು ವರ್ಷಗಳಲ್ಲಿ ಮನೆಯೊಳಗೆ ಕಟ್ಟಿಕೊಂಡ ನಿನ್ನ ಪ್ರೀತಿಯ ಸಾಮ್ರಾಜ್ಯವನ್ನು ಮನೆಯಿಂದ ಹೊರಗೆ ಬೆಳೆಸುವ ಸಮಯ.  ಮುಂದಿನ ನಾಲ್ಕು ವರ್ಷಗಳು ಶಾಲೆಗೆ ಕಳಿಸುವ ಮೊದಲು ಸಿಗುವ ಅಮೂಲ್ಯ ಕಾಲ, ಅದರ ಆರಂಭ ಈ ಹುಟ್ಟುಹಬ್ಬ.

ಚೆನ್ನಾಗಿ ಗೊತ್ತು ನನಗೆ, ನಿನಗಿದೆಲ್ಲಾ ಓದಲು ಬರುವುದಿಲ್ಲ ಎಂದು. ಆದರೂ ಬರೆದಿದ್ದೇನೆ. ಮುಂದೊಂದು ದಿನ ನೀ ಬೆಳೆದು ದೊಡ್ಡವಳಾದಾಗ ಓದಿಕೊಂಡು ಖುಷಿ ಪಡಬಹುದೇನೋ, ನಗಬಹುದೇನೋ ಎಂದು. ನೂರ್ಕಾಲ ಬಾಳು ಕಂದಾ, ಎಲ್ಲಾ ಯಶಸ್ಸೂ ಸಿಗಲಿ ನಿನಗೆ. ಯಾವತ್ತೂ ಸಂತೋಷದಿಂದಿರು, ಸುಖ ಮಾತ್ರ ಇರದ ಜಗತ್ತಿನಲ್ಲಿಯ ದುಃಖಗಳಲ್ಲೂ ಖುಷಿಯಾಗಿರು. ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ಮತ್ತೊಮ್ಮೆ, ಸಾವಿರ ಮುತ್ತುಗಳ ಜೊತೆಗೆ.

ಇಂತಿ ನಿನ್ನ ಮಾವಯ್ಯ
ಸುಬ್ಬು