Monday, 31 March 2014

ರಮ್ಯಚೈತ್ರಕಾಲ

"ಮೊದಲನೆಯದಾಗಿ ಎಲ್ಲರಿಗೂ ಯುಗಾದಿಯ ಶುಭಾಷಯಗಳು. "

ಚೈತ್ರ ಎಂದರೆ ಯುಗದ ಆದಿ, ಒಂದು ಹೊಸ ಋತುಚಕ್ರದ ಪ್ರಾರಂಭ. ಮನುಷ್ಯರಿಗೆ ಮಾತ್ರವಲ್ಲ, ಪ್ರಕೃತಿಗೆ ಕೂಡ ಇದು ಹೊಸ ವರ್ಷದ ಪ್ರಾರಂಭ. ಚೈತ್ರ ಎಂದರೆ ಹಸಿರು  ಚಿಗುರುವ ಸಮಯ, ಕೊರಡು ಕೊನರುವ ಸಮಯ, ಮಾಗಿಯಲ್ಲಿ ಕಳೆದುಕೊಂಡ ತನ್ನ ಹಸಿರಸಾಮ್ರಾಜ್ಯವನ್ನು ಮರುವಶಪಡಿಸಿಕೊಳ್ಳಲು ಪ್ರಕೃತಿ ಸಡಗರದಿಂದ ತಯಾರಾಗುವ ಸಮಯ. ಮಳೆಗಾಲದಲ್ಲಿ ಎಲ್ಲವೂ ಹಸಿರಿನಿಂದ ನಳನಳಿಸಬಹುದು, ಆದರೆ ಎಲ್ಲಕ್ಕೂ ಒಂದು ಪ್ರಾರಂಭ ಬೇಕಲ್ಲವೇ, ಅಂತಹ ಪ್ರಾರಂಭ ಇರುವುದು ಈ ಚೈತ್ರದಲ್ಲಿ. ನಮ್ಮ ಮನುಜಕುಲದ ’ಯುಗಾದಿ’ಯನ್ನು, ಹೊಸವರ್ಷದ ಹಬ್ಬವನ್ನು ಪ್ರಕೃತಿಯ ಹೊಸಋತುವಿಗೆ ಮೇಳೈಸಿದ ನಮ್ಮ ನಾಡಿನ ಹಿರಿಯರು ಎಷ್ಟು ವೈಚಾರಿಕವಾಗಿ, ವೈಜ್ಞಾನಿಕವಾಗಿ ಮುಂದುವರಿದಿದ್ದರು ಅಲ್ಲವೇ? ಪ್ರಕೃತಿಯ ಜೊತೆಗೇ ಬದುಕಿದ ನಮ್ಮ ಪೂರ್ವಜರು ಪ್ರಕೃತಿಯನ್ನೇ ಕಾಲದಂಡವಾಗಿರಿಸಿಕೊಂಡಿದ್ದು, ಗಿಡಮರಗಳು ಚಿಗುರುವ ಕಾಲವನ್ನೇ ಹೊಸವರ್ಷದ ಆರಂಭವನ್ನಾಗಿ ಸ್ವೀಕರಿಸಿದ್ದು ಒಂದು ಸರಳ, ಮಹಾನ್ ಯೋಚನೆ ಎನಿಸುತ್ತದೆ.

ಬೇಸಗೆ ಎಂದರೆ ಅದೊಂದು ಸುಂದರ ಕಾಲ. ಮಳೆಗಾಲದ ವರುಣನ ಆರ್ಭಟವಾಗಲೀ, ಚಳಿಗಾಲದ ಮೈಕೊರೆಯುವ ಚಳಿಯಾಗಲೀ ಇರದ ಹಿತಕಾಲ(ಇತ್ತೀಚೆಗಿನ ಕಾಲದಲ್ಲಿ ಹೆಚ್ಚುತ್ತಿರುವ, ಅತಿಯಾಗಿ ಹೆಚ್ಚಿರುವ ಬಿಸಿಲಿನ ಪ್ರಭಾವಗಳನ್ನು ಹೊರತುಪಡಿಸಿ). ಮುಂಜಿ, ಮದುವೆ ಇತ್ಯಾದಿ ಶುಭಕಾರ್ಯಗಳಿಗಾಗಿ ಮನೆಯವರೆಲ್ಲ ಕಾದ ಪಕ್ವಕಾಲ. ಯುಗಯುಗಗಳು ಕಳೆದರೂ ಯುಗಾದಿ ಮತ್ತೆ ಬರುತ್ತದೆ, ಹಳೆಯ ನೋವನ್ನು ಮರೆಸಿ ಹೊಸ ಖುಷಿಯನ್ನು ತರುತ್ತದೆ, ಎಂದು ನಂಬಿಕೊಂಡ ಜನರ ಪಾಲಿನ ಶುಭಪರ್ವಕಾಲ. ಬಾಡಿದ ಕೊರಡಿನಲ್ಲಿಯೂ ಕೂಡ ಹೊಸಬಾಳಿನ ಆಸೆಯಿಂದ ಕೊನರುವ ಧನಾತ್ಮಕ ಯೋಚನೆ ಮೂಡುವ ಕಾಲ. ರಜೆಯ ಮಜದ ಆಸೆಗೆ ಅದಕ್ಕಿಂತ ಮೊದಲಿರುವ ವಾರ್ಷಿಕ ಪರೀಕ್ಷೆಗಳೂ ಲೆಕ್ಕವಲ್ಲ ಎಂದು ಎಲ್ಲ ಮಕ್ಕಳೂ ಒಟ್ಟಿಗೇ ಲೆಕ್ಕಹಾಕಿಕೊಂಡುಬಿಡುವ ಸಮಯ ಇದು. ಊರಹೊರಗಿನ ಕವಳಿ, ಮುಳ್ಳುಹಣ್ಣು ಇತ್ಯಾದಿ ಗಿಡ ಮಟ್ಟಿಗಳು ಹಣ್ಣುಗಳನ್ನು ಬಿಟ್ಟುಕೊಂಡು ಊರಪೋರರನ್ನು  ಆಮಂತ್ರಿಸುತ್ತಿವೆಯೇನೋ ಎಂಬಂತೆ ಭಾಸವಾಗುವ ಕಾಲ. ಗ್ರಾಮಗಳಲ್ಲಾಗುವ ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಟೂರ್ನಮೆಂಟುಗಳಿಗೂ,  ದೇವರ ತೇರು, ಊರ ಜಾತ್ರೆ ಇತ್ಯಾದಿ ಸಂಭ್ರಮದ ಆಚರಣೆಗಳಿಗೂ ಸೂಕ್ತಕಾಲ. ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಕಾರ ಬಹುತೇಕ ಮಕ್ಕಳ ಭವಿಷ್ಯ ನಿರ್ಧರಿತವಾಗುವ ಸಾವಿರಾರು ಪ್ರವೇಶ ಪರೀಕ್ಷೆಗಳ, ನೂರಾರು ’ವರ್ಷವಿಡೀ-ಕಲಿತು-ಮೂರು-ಗಂಟೆ-ಕಕ್ಕು’ವ ಪರೀಕ್ಷೆಗಳ ಪರೀಕ್ಷಾಜ್ವರಕಾಲ. ಹುಳಿಕಾಯಿಯ ಮರಕ್ಕೆ ಮಾವಿನಕಾಯಿಗೆ ಕಲ್ಲು ಹೊಡೆಯುವುದರಿಂದ ಹಿಡಿದು ಹಣ್ಣಿಗೆ ಹಾಕಿದ ಈಶಾಡಿ ಹಣ್ಗಾಯಿಗಳನ್ನು ಕದಿಯುವ ತನಕದ ಮಾವಿನ ಹ(ಬ್ಬದ)ಣ್ಣಿನ ಕಾಲ.

ಬೇಸಗೆ ಎಂದರೆ ನೆನಪಾಗುವುದು ಬಾಲ್ಯ. ಅಲ್ಲಿದ್ದ ರಜಾ ಮತ್ತು ಅದರ ಮಜ. ಈಗಲೂ ಬೇಸಗೆ ಎಂದರೆ ನೆನಪಾಗುವುದು ಚಿಕ್ಕಂದಿನಲ್ಲಿ ಪರೀಕ್ಷೆ ಮುಗಿದ ಮೇಲೆ ಒಂದು ದಿನವೂ ತಪ್ಪದಂತೆ ಬೆಳಿಗ್ಗೆಯಿಂದ ಸಂಜೆಯವರೆಗೂ ಆಡುತ್ತಿದ್ದ ಕ್ರಿಕೆಟ್, ಬಾಲ್ ಬ್ಯಾಡ್ಮಿಂಟನ್ ಅಂತಹ ಸ್ಟಾಂಡರ್ಡ್ ಆಟಗಳು, ಗೇರುಬೀಜದ ಬೆಟ್ಟೆ ಆಟ, ಡಬ್ಬಾಡಿಬ್ಬಿಯಂತಹ ಜಾನಪದ ಆಟಗಳು, ರಜೆ ಮುಗಿಯುವ ಹೊತ್ತಿಗೆ ಮಳೆ ಬೀಳದ ಹೊರತು(ರಜೆಯ ಕೊನೆಯಲ್ಲಿ) ಹಣ್ಣಾಗದ ಮುಂಡಕ್ಕಿ ಹಣ್ಣಿಗೆ ಹಾಕಿದ ಶಾಪಗಳು, ಯಾವುದೇ ಗೊತ್ತು ಗುರಿಯಿಲ್ಲದೆ ಅಜ್ಜನ ಮನೆಯ ಸುತ್ತಲಿನ ಹಾಡಿ*ಯಲ್ಲಿ ಸುತ್ತಾಡಿದ ಅಲೆದಾಟಗಳು, ಗಣಪತಿಕಾಯಿ**ಯಲ್ಲಿ ಮೂರ್ತಿ ಮಾಡಿ ಅಜ್ಜನ ಮನೆಯಲ್ಲಿ ’ಪೂಜೆಯ ಆಟ’ ಆಡಿ; ಟೆರೇಸ್ ಮೇಲೆ ಅಡಿಗೆ ಆಡುತ್ತಿದ್ದ ತಂಗಿಯಂದಿರಿಗೆ ಬೆಂಕಿ ಹಚ್ಚಿಕೊಟ್ಟು, ಮನೆಯವರ ಹತ್ತಿರ ಉಗಿಸಿಕೊಂಡ ಬೈಗುಳಗಳು, ಅಜ್ಜನ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಬ್ರಹ್ಮಚಾರಿಯಾಗಿ ಕುಳಿತು ಗಳಿಸಿದ ದಕ್ಷಿಣೆಗಳು, ಬೇಸಗೆಯ ಕೊನೆಯಲ್ಲಿ ಬರುತ್ತಿದ್ದ ಮೊದಲ ಮಳೆಯಲ್ಲಿ ಮನೆಯ ಎದುರ ತೋಡಿನಲ್ಲಿ ಬಿಟ್ಟ ತಿರುಗಿ ಬಾರ ಕಾಗದದ ದೋಣಿಗಳು, ಅವಲಕ್ಕಿ ಮಜ್ಜಿಗೆಯ ಆಸೆಗೆ ದೊಡ್ಡಮ್ಮನಿಗೆ ಮಾಡಿಕೊಡುತ್ತಿದ್ದ ಮನೆಕೆಲಸಗಳು. ಎಲ್ಲದರಲ್ಲಿಯೂ ಚಿಂತೆಗಳಿಲ್ಲದ ಅದಮ್ಯ ಖುಷಿಯಿತ್ತು, ಜಗತ್ತು ನಮ್ಮದೇ ಏನೋ ಎಂಬಷ್ಟು ಸುಖವಿತ್ತು, ಎಲ್ಲ ದಿನವೂ ಹಬ್ಬವೇನೋ ಎಂಬಷ್ಟು ಸಂಭ್ರಮವಿತ್ತು. ನೆಲನೋಡದೆ ಓಡುವ ತರಾತುರಿಯಿತ್ತು, ಬಾಲ್ಯದ ಮುಗ್ಧ ಸಂತೋಷ ಇತ್ತು. ಎಲ್ಲಿ ಹೋದವು ಎಲ್ಲ; ನಾವು ದೊಡ್ಡವರಾದ ಹಾಗೆ***?

ಟಿಪ್ಪಣಿ:
*ಹಾಡಿ - ಕುಂದಾಪುರ ಕಡೆಯ ಶಬ್ದ, ಚಿಕ್ಕ ಕಾಡು ಎಂಬ ಅರ್ಥ ಬರುತ್ತದೆ.  ಮನೆಯ ಸುತ್ತಲೂ ಇರುತ್ತಿದ್ದ ಚಿಕ್ಕ ಚಿಕ್ಕ ಮರಗಳ ಗುಂಪು. ಎಕರೆಗಟ್ಟಲೆ ಇರುತ್ತಿದ್ದುದು ಹೌದಾದರೂ ಅದು ಎಂದಿಗೂ ಕಾಡು ಎಂದು ಕರೆಸಿಕೊಳ್ಳದು.
**ಗಣಪತಿ ಕಾಯಿ -  ಮಲೆನಾಡಿನಲ್ಲಿ/ಕರಾವಳಿಯ ಸಮೀಪದ ಕಾಡುಗಳಲ್ಲಿ ಬೆಳೆಯುವ ಒಂದು ಮರದ ಕಾಯಿ. ಹೊರಗಿನ ಗಟ್ಟಿಯಾದ ಸಿಪ್ಪೆಯನ್ನು ತೆಗೆದರೆ ಒಳಗೆ ಬಾದಾಮಿಯಂತಹ ಆದರೆ ಚಿಕ್ಕುಕಾಯಿಯಷ್ಟು ದೊಡ್ಡ ಬೀಜ. ಅದರೊಳಗೆ ಸೊಂಡಿಲಿನಂತ ಒಂದು ರಚನೆಯಿದ್ದು, ಅರ್ಧ ತೆರೆದ ಕಾಯಿ ಕುಳಿತ ಗಣಪತಿಯ ವಿಗ್ರಹದ ಹಾಗೆ ಕಾಣುತ್ತದೆ. ಬಾಲ್ಯದ ದೇವರ ಆಟಕ್ಕೆ ಬಲಿಯಾದ ಕಾಯಿಗಳೆಷ್ಟೋ, ಲೆಕ್ಕ ಇಟ್ಟವರಾರು.
***ಈಗೇನೂ ಖುಷಿಯಿಲ್ಲ ಎಂದೇನಲ್ಲ, ಆದರೆ ಆ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೇನೋ ನಾವು ಎನಿಸುತ್ತದೆ.