![]() |
ಚಿತ್ರಕೃಪೆ: ಅಂತರ್ಜಾಲ |
ಈ ಮಮತೆ ಇಂದು ನಿನ್ನೆಯದಲ್ಲ. ಮಾನವ ಪ್ರಾಣಿ ಚರಾಚರಗಳೆಲ್ಲ ಸುರುವಾಗುವ ಕಾಲದಿಂದಲೂ ಇದು ಹೀಗೇನೇ. ತನ್ನ ಮಕ್ಕಳೆಂದರೆ ಎಲ್ಲಾ ಸ್ತ್ರೀಕುಲಕ್ಕೂ ಅದೊಂದು ವಿಶೇಷ ಪ್ರೀತಿ. ಅದೇನೋ ಒಂದು 'protective instinct'. ಮಗ ಬೆಳೆದು ದೊಡ್ಡವನಾದರೂ ತಾಯಿಗೆ ಅವನಿನ್ನೂ ಚಿಕ್ಕವನೇ! ಎಲ್ಲಾದರೂ ಏನಾದರೂ ಚಿಕ್ಕದಾಗಿ ಹೆಚ್ಚು ಕಡಿಮೆಯಾದರೂ ಅವನಿಗಿಂತ ಹೆಚ್ಚು ಅವಳಿಗೇ ಗಾಬರಿ. ನಾವು ಉಂಡರೆ ಅವಳ ಹೊಟ್ಟೆ ತುಂಬೀತು ,ನಾವು ಎಡವಿದರೆ ಅವಳಿಗೆ ಗಾಯ, ನಮಗೆ ನೆಗಡಿ ಆದರೆ ಅವಳಿಗೆ ಕೆಮ್ಮು. ಅಡಿಗೆ ಕಡಿಮೆ ಆದ್ರೆ ಅವಳಿಗೆ ಹಸಿವಿಲ್ಲ ,ನಾವು ಉಂಡು ಒಳ್ಳೆ ಇದೆ ಎಂದರೆ ಅಷ್ಟಕ್ಕೇ ಆಕೆ ಧನ್ಯೆ ,ಇದೆಲ್ಲಾ ಒಬ್ಬ ಅಮ್ಮನನ್ನು ಬಿಟ್ಟು ಮತ್ತಾರಿಂದ ಸಾಧ್ಯ ಇದೆ. ಎಲ್ಲಿ ಮಗ ನೊಂದಾನು ಎಂದು ತನ್ನ ನೋವನ್ನು ತನ್ನಲ್ಲೇ ನುಂಗುವಂತೆ , ಅವನಿಗೂ ಹೇಳದೆ ಉಳಿಯುವಂತೆ ಮತ್ತಾರ ಮಮತೆ ಮಾಡಬಲ್ಲದು.
ಹಾಗೆಂದು ಅವಳಿಗೆ ಯಾವುದೇ ಅಪೇಕ್ಷೆ ಇಲ್ಲವೆಂದಲ್ಲ. ಕೆಲವು ಇವೆ. ತನ್ನ ಮಕ್ಕಳು ಯಾವಾಗಲೂ ಒಳ್ಳೆಯವರಾಗಿರಬೇಕು, ಎಲ್ಲರ ಕೈಯ್ಯಲ್ಲೂ ಹೊಗಳಿಸಿಕೊಳ್ಳಬೇಕು, ನೀತಿವಂತರಾಗಬೇಕು, ಇತ್ಯಾದಿ. ಚಿಕ್ಕಂದಿನಿಂದಲೂ ಸುರುವಾಗುತ್ತದೆ ಅದಕ್ಕೆ ತಯಾರಿ, ರಾಮಾಯಣ, ಮಹಾಭಾರತದ ಅರ್ಜುನ, ರಾಮಚಂದ್ರ, ಶ್ರವಣ, ಕರ್ಣರಿಂದ ಹಿಡಿದು ಮೊನ್ನೆ ಮೊನ್ನೆಯ ಶಾಸ್ತ್ರಿ, ಭಗತ್ ಸಿಂಗ್, ಗಾಂಧಿಯವರೆಗೂ ಎಲ್ಲಾ ಪುಣ್ಯಾತ್ಮರ ನಾಮಸ್ಮರಣೆ ಮಕ್ಕಳ ಮುಂದೆ ಮಾಡುತ್ತಾಳೆ. ಯಾರಾದರೂ ಒಬ್ಬರ ಹಾಗಾದರೂ ಆಗುತ್ತಾನೇನೋ ಎಂದು. ಇಷ್ಟೆಲ್ಲಾ ನೀತಿಕಥೆ ಹೇಳಿಕೊಡುವ ಇದೇ ಅಮ್ಮ ಮಗನಿಗೆ ಯಾವುದಾದರೂ ನೀತಿಯಿಂದ ಶಿಕ್ಷೆಯಾಗುವುದಾದರೆ ಅದಕ್ಕೇ ಸೆಡ್ಡು ಹೊಡೆಯಲು ಹಿಂಜರಿಯಳು. ಬಹುಶಃ ಅದಕ್ಕೇ ಹೇಳುವುದು ಪ್ರೀತಿ ಕುರುಡು ಎಂದು.
ಅಮ್ಮಾ, ಎಷ್ಟು ಬಾರಿ ಹೇಳಿದರೂ ನಿನ್ನ ಹಿರಿಮೆ ಹೆಚ್ಚೇ , ಗೊತ್ತು. ಆದರೂ ಏನೋ ಒಂದು ಚಿಕ್ಕ ನಮನ ಅಷ್ಟೇ , ಅದಕ್ಕಿಂತ ಹೆಚ್ಚು ಕೊಡಲು ನಮ್ಮಲ್ಲಿ ಏನಾದರೂ ಇದೆ, ಈ ಬದುಕನ್ನೇ ಕೊಟ್ಟವಳಿಗೆ.