"ನಮ್ಮ ಚಿತ್ರರಂಗ ಎತ್ತ ಸಾಗುತ್ತಿದೆ? " ಇತ್ತೀಚೆಗೆ ಪ್ರತೀ ಬಾರಿ ನಾನು ಒಂದು ಚಿತ್ರವನ್ನು ನೋಡಿ ಬಂದ ಮೇಲೂ ಈ ಪ್ರಶ್ನೆಯನ್ನು ನನ್ನಲ್ಲೇ ಕೇಳಿಕೊಳ್ಳುತ್ತೇನೆ. ಎಷ್ಟು ಗಾಢವಾಗಿ ಕೇಳಿಕೊಳ್ಳುತ್ತೇನೆ ಎಂಬುದು ಆ ಚಿತ್ರ ಮೂಡಿಸಿದ ನಿರಾಶೆಯ ಮೇಲೆ ಅವಲಂಬಿಸಿರುತ್ತದೆ, ಅಷ್ಟೇ. ಕೆಲವೊಂದು ಚಲನಚಿತ್ರಗಳಿಂದ ಅರ್ಧಗಂಟೆಯ ಒಳಗೇ ಎದ್ದು ಬಂದಿದ್ದೇನೆ, ಈ ನಿರ್ದೇಶಕ ಮತ್ತು ನಿರ್ಮಾಪಕರನ್ನು ಆಜೀವಪರ್ಯಂತ ಚಿತ್ರಗಳನ್ನು ಮಾಡದಂತೆ ನಿಷೇಧಿಸಿ, ಪ್ರೇಕ್ಷಕರಿಗೆ ಮಾನಸಿಕ ಕಿರುಕಳ ನೀಡಿದ ಅಪರಾಧದ ಮೇಲೆ ಜೈಲಿಗೆ ಹಾಕಬೇಕುಉ ಎಂದು ಶಾಪ ಹಾಕಿಕೊಂಡು. ಇತ್ತೀಚೆಗೆ ಸುಮಾರು ನಾಲ್ಕೈದು ವರ್ಷಗಳಿಂದ ನೋಡಬೇಕೆನಿಸಿದ ಪ್ರತಿ ಚಲನಚಿತ್ರವನ್ನೂ ನೋಡಿದ್ದೇನೆ, ಆದರೆ ನೋಡಿದ ಮೇಲೂ ನೋಡಲೇಬೇಕಿತ್ತು ಈ ಚಿತ್ರವನ್ನು ಎನ್ನಿಸಿದ್ದು ಬಹಳ ಕಡಿಮೆ ಸಲ. ಯಾಕೆ ಹೀಗೆ? ನಮ್ಮಲ್ಲಿ ಕಲಾವಿದರ ಕೊರತೆಯಿದೆಯೇ? ನಿರ್ದೇಶಕರ ಕಲ್ಪನೆಗೆ ಬರವೇ? ಕಥೆಗಳೇ ಇಲ್ಲವೇ? ಯಾರೂ ಇಷ್ಟಪಟ್ಟು ಫಿಲಂ ಮಾಡುತ್ತಿಲ್ಲವೇ? ಸ್ಯಾಂಡಲ್ ವುಡ್ ಎಂಬುದೇ ಕಾಟಾಚಾರದ ವ್ಯವಹಾರವೇ? ಅಥವಾ ಇದು ಕಪ್ಪುಹಣವನ್ನು ಬಿಳಿಯದನ್ನಾಗಿ ಮಾಡುವ ವ್ಯವಸ್ಥಿತಜಾಲ ಮಾತ್ರವಾಗಿ ಉಳಿದು ಹೋಗಿದೆಯೇ? ಇವೆಲ್ಲವೂ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳೇ!
![]() |
ಚಿತ್ರಕೃಪೆ : ಅಂತರ್ಜಾಲ |
ಇನ್ನು ಕೆಲವರಿದ್ದಾರೆ, ಕೆಲವು ನಿರ್ದೇಶಕರು/ನಿರ್ಮಾಪಕರು/ನಟರು. ಎದೆಯೆತ್ತರಕ್ಕೆ ಬೆಳೆದ ಮಗನಿ(ಳಿ)ಗೆ ಇನ್ನೂ ಕೆಲಸ/ಅವಕಾಶ ಸಿಗದಿದ್ದುದರಿಂದ ಅವನಿ(ಳಿ)ಗೆ ಒಂದು ಅವಕಾಶ ಕೊಡುವ ಒಂದೇ ಕಾರಣದ ಸಲುವಾಗಿ ಮೂವಿ ಮಾಡುತ್ತಾರೆ. ಅವರ ಮಗನೊಬ್ಬ ಹೀರೋ ಆದ ಎಂಬಲ್ಲಿಗೆ ಆ ಮೂವಿ ಸಾರ್ಥಕ್ಯ ಕಾಣುತ್ತದೆ. ಶಾಲೆಯಲ್ಲಿ ಫಿಸಿಕಲ್ ಎಜುಕೇಶನ್ ಟೀಚರ್ ಮಗ ಶಾಲೆಯ ಸ್ಪೋರ್ಟ್ಸ್ ಟೀಮಿನ ನಾಯಕನನ್ನಾಗಿ ಮಾಡಿದಂತೆ. ಜಗ್ಗೇಶ್ , ಎಸ್ ನಾರಾಯಣ್ ಎಂಬುವು ಕೇವಲ ಒಂದೆರಡು ಹೆಸರುಗಳು ಈ ಲಿಸ್ಟಿನಲ್ಲಿ. ಆ ಮೂವಿಗಳು ತೋಪೆದ್ದು ಹೋದವು ಎಂದು ಬಿಡಿಸಿ ಹೇಳಬೇಕಿಲ್ಲವಷ್ಟೇ.
![]() |
ಚಿತ್ರಕೃಪೆ : ಅಂತರ್ಜಾಲ |
ಯಾರಿಗೂ ತಿಳಿಯದಂತೆ ರಿಮೇಕ್ ಮಾಡುವ ಕಲೆ ತನಗೆ ಸಿದ್ಧಿಸಿದೆ ಎಂಬ ಹುಂಬತನವೊಂದಿದೆ, ಅದೂ ಹಾಲಿವುಡ್ ಮೂವಿಗಳಿಂದಲೋ, ಹಳೆಯ ಮೂವಿಗಳಿಂದಲೋ ಭಟ್ಟಿ ಇಳಿಸುವವರಲ್ಲಿ ಇದು ಹೆಚ್ಚು. ಹಾಗೆಂದು ನಾನು ರಿಮೇಕ್ ಮಾಡುವುದರ ವಿರುದ್ಧ ಎಂದೇನೂ ಅಲ್ಲ. ರಿಮೇಕ್ ಆದ ಮೂವಿ ಬದಲಾಗಿ ಫ್ರೇಮ್ ಟು ಫ್ರೇಮ್ ಒರಿಜಿನಲ್ ಹಾಗೇ ಇರುತ್ತದೆ ಎಂದಾದರೆ ಯಾಕೆ ರಿಮೇಕ್ ಮಾಡಬೇಕಿತ್ತು, ಡಬ್ಬಿಂಗ್ ಮಾಡಿದ್ದರೆ ಸಾಕಾಗುತ್ತಿರಲಿಲ್ಲವೇ? ಅದೂ ಹೋಗಲಿ, ಹೀಗೆ ಮಕ್ಕಿ ಕಾ ಮಕ್ಕಿ ಕಾಪಿ ಮಾಡಿದ ಮೇಲೂ 'ಇಂತಹ ಮೂವಿಯನ್ನು ರಿಮೇಕ್ ಮಾಡುತ್ತಿದ್ದೇವೆ' ಎಂದು ಕ್ರೆಡಿಟ್ ಸಹ ಕೊಟ್ಟುಕೊಳ್ಳುವುದಿಲ್ಲ ಈ ಭೂಪರು. ಸುದೀಪ್ ನಂತಹವರು ಕೇವಲ ರಿಮೇಕ್ ಮೂವಿಗಳಿಗೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡುಬಿಟ್ಟಿದ್ದಾರೆ. ಮೂಲ ಚಿತ್ರದಿಂದ ಸ್ವಲ್ಪವೂ ಬದಲಾವಣೆ ಮಾಡದೇ ಹಾಗೇ ತೆರೆಗೆ ಬರುವ ಈ ಮೂವಿಗಳನ್ನು ನೋಡುವುದೆಂದರೆ ಸಮಯವ್ಯರ್ಥವೇ, ಅದೂ ಮೂಲಚಲನಚಿತ್ರವನ್ನು ನೀವು ನೋಡಿದ್ದರೆ.
ತಾನು ಕಥೆಯಿಲ್ಲದೇ ಮೂವಿ ಮಾಡಿದರೂ ಜನರು ನೋಡುತ್ತಾರೆ, ನೋಡದೇ ಏನು ಮಾಡುತ್ತಾರೆ ಎಂಬ ಉಡಾಫೆಯಿಂದ ಮೂವಿ ಮಾಡುವ ನಿರ್ದೇಶಕರು ಕೆಲವರಿದ್ದಾರೆ. ಕೊನೆಯ ಬಾರಿಗೆ ಯೋಗರಾಜ್ ಭಟ್ಟರ ಮೂವಿಯಲ್ಲಿ ಕಥೆಯ ಎಳೆಯೊಂದಿದ್ದುದು ನನಗೆ ನೆನಪಿಲ್ಲ. ಹೌದು, ಅವರು ಅತಿ ಪ್ರತಿಭಾವಂತ ಡಯಲಾಗ್ ರೈಟರ್, ಆದರೆ ಮೂವಿಯೊಂದನ್ನು ಎರಡೂವರೆ ತಾಸು ಕುಳಿತು ನೋಡಲು ಕೇವಲ ಡಯಲಾಗ್ ಗಳು ಸಾಕಾಗುವುದಿಲ್ಲವಷ್ಟೇ . ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಭಟ್ಟರೇ ಸ್ವತಃ 'ತಮ್ಮ ಡ್ರಾಮಾ ಮೂವಿಯಲ್ಲಿ ಕಥೆಯಿದೆ' ಎಂದು ಹೇಳಿಕೆ ಕೊಟ್ಟಿದ್ದರು. ಇನ್ನು ಭಟ್ಟರು ಬರೆದು ಹರಿಕೃಷ್ಣರು ಸಂಗೀತ ಕೊಟ್ಟ ಕೆಲವು ಹಾಡುಗಳೋ ದೇವರಿಗೇ ಪ್ರೀತಿ. ಅಲ್ಲಿಯೂ ಪ್ರೇಕ್ಷಕರ ಬಗೆಗಿನ ಉಡಾಫೆಯನ್ನು ಧಾರಾಳವಾಗಿ ನೋಡಬಹುದು.
ಇಷ್ಟೆಲ್ಲಾ ಆದ ಮೇಲೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವ ಬಗ್ಗೆ ನಮ್ಮವರದ್ದು ಕಡುವಿರೋಧ. ಎಲ್ಲಿ ಡಬ್ ಮಾಡಲು ಬಿಟ್ಟರೆ ತಮಗೆ ರಿಮೇಕ್ ಮಾಡುವ ಅವಕಾಶ ತಪ್ಪಿ ಹೋಗುತ್ತದೆಯೆನೋ ಎಂಬ ಹೆದರಿಕೆಯೋ, ಅಥವಾ ತಮಗೆ ಅವರ ಚಿತ್ರಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದರ ಅಪರೋಕ್ಷ ಒಪ್ಪಿಗೆಯೋ ಒಟ್ಟಾರೆಯಾಗಿ ನಮ್ಮವರಿಗೆ ಡಬ್ಬಿಂಗ್ ಎಂದರೆ ಸುತಾರಾಂ ಇಷ್ಟವಿಲ್ಲ, ಕೆಲವರಂತೂ ಇದನ್ನು ಕನ್ನಡದ ಅಳಿವಿನ ಬಗ್ಗೆ ಸಮೀಕರಿಸಿಬಿಟ್ಟರು. 'ಸತ್ಯಮೇವ ಜಯತೇ' ಯಂತಹ ಕಾರ್ಯಕ್ರಮಗಳು ಮತ್ತೆಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಪ್ರಸಾರವಾದರೂ ಕನ್ನಡದವರು ಹಿಂದಿಯಲ್ಲಿಯೇ ನೋಡಿ ಖುಷಿ ಪಡಬೇಕಾಯಿತು.
ಇಷ್ಟೆಲ್ಲಾ ಕಾರಣಗಳಿವೆ, ಪರಿಹಾರ?? ಆ ದೇವರಿಗೇ ಗೊತ್ತು.
ಒಂದು ಹಂಬಲಿಕೆ: