ಕಳೆದ ಭಾನುವಾರ ’ಅಪ್ಪಂದಿರ ದಿನ’ ಎಂದು ಅದರ ಹಿಂದಿನ ದಿನ ಗೆಳೆಯ ತನುಜ್ ಹೇಳದೇ ಹೋಗಿದ್ದರೆ ನನಗೆ ಗೊತ್ತೇ ಇರುತ್ತಿರಲಿಲ್ಲ ಎಂಬ ಮಟ್ಟಿಗೆ ಅವನು ಮರೆತು ಹೋಗಿದ್ದಾನೆ. ಅಮ್ಮ ಎಂದು, ಮಹಿಳೆ ಎಂದು ಎಷ್ಟೆಲ್ಲಾ ಮಹತ್ವ, ವಿಶೇಷತೆ ಪಡೆದುಕೊಳ್ಳುವ ತನ್ನ ಅರ್ಧಾಂಗಿಯ ಸಂಭ್ರಮದಲ್ಲಿಯೇ ಖುಷಿ ಕಂಡುಕೊಳ್ಳುವ ಆ ಅಪ್ಪ, ಅಮ್ಮನ ಒಳ್ಳೆಯತನದ ಸಾಗರದ ಎದುರು ಮರೆಯಾಗಿ ಹೋಗುತ್ತಾನೆ ಎನಿಸುವುದಿಲ್ಲವೇ ನಿಮಗೆ? ಹಾಗೆ ಮರೆತು ಹೋಗದ ಹಾಗಾಗಿ ಯಾರೋ ಇಬ್ಬರು ಅವರವರ ಅಪ್ಪಂದಿರಿಗೆ ’ಧನ್ಯವಾದ’ ಹೇಳುವ ಹಾಗಾದರೆ ಈ ಅಂಕಣ ಸಾರ್ಥಕ.

ಚಿಕ್ಕಂದಿನಲ್ಲೂ ಅಪ್ಪ ಎಂದರೆ ಕಣ್ಣ ಮುಂದೆ ಬರುತ್ತಿದ್ದುದು, ಕೇವಲ ಸಿಟ್ಟಲ್ಲ, ಅಪ್ಪ ಎಂದರೆ ಒಬ್ಬ ಹೀರೋ, ಉಳಿದವರಾರೂ ಮಾಡಲಾಗದ್ದನ್ನು ಮಾಡಬಲ್ಲ ಸುಪರ್ ಮ್ಯಾನ್, ಹೆಗಲ ಮೇಲೆ ಕೂರಿಸಿಕೊಂಡು ಹಿತ್ತಲಿಡೀ ಸುತ್ತು ತಿರುಗಿಸುತ್ತಿದ್ದ ಶಕ್ತಿಮಾನ್, ಅಪ್ಪ ಎಂದರೆ ಮಗ(ಳು) ಇಷ್ಟ ಪಡುತ್ತಾನೆ(ಳೆ) ಎಂಬ ಒಂದೇ ಕಾರಣಕ್ಕೆ ಎಷ್ಟೋ ದೂರದಿಂದ ಕಳಲೆ*ಯನ್ನು ಕೊಯ್ದುಕೊಂಡು ಬರುತ್ತಿದ್ದ, ಕರ್ಕಿಯಲ್ಲಿ ಮಾಡಿದ ಕೇಸರೀಬಾತ್ ನ್ನು ಸಿರಸಿಗೆ ಹೊತ್ತುಕೊಂಡು ಬರುತ್ತಿದ್ದ ಪ್ರೇಮಸಿಂಧು, ಎಲ್ಲಿ ಮಗ ಹಾಳಾಗಿಹೋಗುತ್ತಾನೇನೋ ಎಂದು ಕ್ರಿಕೆಟ್ ನ್ನು ದ್ವೇಷಿಸಲಾರಂಭಿಸಿದ ಭಾವಬಂಧು, ಮನೆಯ ಮಧ್ಯದಲ್ಲಿ TV ಎಂಬ ಮಾಯಾಪೆಟ್ಟಿಗೆಯನ್ನು ತಂದಿಡದೇ ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸಿದ ವಿವೇಕಿ, ತನ್ನ ನನಸಾಗದ ಕನಸುಗಳನ್ನೆಲ್ಲ ಮಗನಾದರೂ ನನಸು ಮಾಡಲಿ ಎಂದು ಹಂಬಲಿಸುವ ಮಹತ್ವಾಕಾಂಕ್ಷಿ ಕನಸುಗಾರ. ಇನ್ನೂ ಎಷ್ಟೆಷ್ಟೋ ವರ್ಣನೆಗಳನ್ನು ಕೊಡಬಹುದು, ಕೊಡುತ್ತಲೇ ಇರಬಹುದು.
ಹೌದು, ನಿಜವೆಂದರೆ ’ಅವರು’(ಅಮ್ಮ ಅಪ್ಪನಿಗೆ ಹಾಗೆ ಕರೆಯುತ್ತಿದ್ದಳಾದ್ದರಿಂದ ನಾನೂ ಅಪ್ಪನಿಗೆ ’ಅವರು’ ಎಂದೇ ಸಂಬೋಧಿಸುತ್ತಿದ್ದೆನಂತೆ,ಈಗಲೂ ಕೆಲವೊಮ್ಮೆ ಹಾಗೇ ಮಾಡುವುದುಂಟು) ಎಂದು ಪರಿಚಯವಾದ ಅಪ್ಪನೇ ನಾನು ಕಂಡ ಮೊದಲ ಹೀರೋ. ’ಅವರು’ ಆ ಪಟ್ಟವನ್ನು ಪಡೆದುಕೊಂಡಿದ್ದು ಉಳಿದವರು ದೈಹಿಕವಾಗಿ ಮಾಡಲ್ಲರದ್ದನ್ನೇನೋ ಅವನು ಮಾಡಬಲ್ಲವನಾಗಿದ್ದನೆಂದೇನಲ್ಲ, ರಸ್ತೆಯಲ್ಲಿ ಅಪ್ಪನ ಜೊತೆಗೆ ಹೋಗುತ್ತಿದ್ದರೆ ಎಲ್ಲರೂ ಗೌರವದಿಂದ ’ನಮಸ್ಕಾರ ಸರ್ ’ ಹೇಳಿ ಹೋಗುತ್ತಿದ್ದರೆಂಬುದೂ ಕಾರಣವಲ್ಲ, ನಮ್ಮ ಇಡೀ ಕುಟುಂಬದಲ್ಲಿ ಅಪ್ಪನೇ ಎತ್ತರ, ಮೈಕಟ್ಟುಗಳ ಅಳತೆಯಲ್ಲಿ ಎದ್ದು ಕಾಣುತ್ತಿದ್ದರೆಂಬುದಂತೂ ಮೊದಲೇ ಅಲ್ಲ. ಅದು ಮೊದಲಿನಿಂದಲೂ ಅವರು ಬೆಳೆಸಿಕೊಂಡು ಬಂದ ವ್ಯಕ್ತಿತ್ವಕ್ಕೆ, ನಡೆದುಕೊಂಡ ರೀತಿಗೆ ನಾನು ಕೊಡುವ ಒಂದು ಪಟ್ಟವಷ್ಟೇ. ಅಪ್ಪನನ್ನು ಏಕವಚನದಲ್ಲಿಯೇ ಕರೆಯುವ ಹವ್ಯಕರಲ್ಲಿ ಒಬ್ಬನಾದರೂ ಇಂದಿಗೂ ಅಪ್ಪನನ್ನು ಏಕವಚನದಲ್ಲಿ ಮಾತನಾಡಿಸಲು ಸಾಧ್ಯವಾಗಲಾರದಷ್ಟು ಗೌರವವನ್ನು ಈ ಅಪ್ಪ ಎಂಬ ವ್ಯಕ್ತಿ ಬೆಳೆಸಿಟ್ಟುಕೊಂಡಿದ್ದಾನೆ. ಆರ್ಥಿಕವಾಗಿ ಏನೆಂದರೆ ಏನೂ ಇಲ್ಲದ ಸ್ಥಿತಿಯಲ್ಲಿ, ತನ್ನ ಅಪ್ಪನನ್ನು ಕಳೆದುಕೊಂಡ ನಂತರ ತನ್ನ ಕುಟುಂಬವನ್ನು ಕೇವಲ ದುಡಿಮೆಯೊಂದನ್ನೇ ನೆಚ್ಚಿಕೊಂಡು ಇಂದು ನಾವಿರುವ ಮಟ್ಟಕ್ಕೆ ತಂದ ಎಂದರೆ ಅದು ಯಾವ ಸಾಧಕನಿಗೂ ಕಡಿಮೆಯಿಲ್ಲದ ಸಾಧನೆಯೇ. ಇಂದಿಗೂ ಅಪ್ಪ ಅರ್ಥ ಮಾಡಿಕೊಂಡಷ್ಟು ಸಾಮಾನ್ಯ ವಿಜ್ಞಾನ ನನಗೆ ಅರ್ಥವಾಗಿದೆ ಎಂದು ಧೈರ್ಯದಿಂದ ಹೇಳಿಕೊಳ್ಳಲಾರೆ ಎಂಬಷ್ಟರ ಮಟ್ಟಿಗೆ ಅಪ್ಪನದು ತಾರ್ಕಿಕ ಬುದ್ಧಿ. ಅವರ ಯೋಚನೆಯ ಮಟ್ಟ ಇಂದಿಗೂ ನನಗೆ ವಿಸ್ಮಯವೇ! ಕೇವಲ ವೃತ್ತಿಯಿಂದಷ್ಟೇ ಅಲ್ಲ, ಹುಟ್ಟಿನಿಂದಲೇ ಶಿಕ್ಷಕ**ರಾಗಿ ಹುಟ್ಟಿದವರಂತೆ ಜೀವನದಲ್ಲಿ ಎದುರಾಗುವ ಚಿಕ್ಕ ಚಿಕ್ಕ ಸಂಗತಿಗಳನ್ನು ಅರ್ಥ ಮಾಡಿಕೊಂಡಿದ್ದರು ಎಂಬಲ್ಲಿಗೆ ನನ್ನ ಗೌರವ ಮತ್ತೊಂದಿಷ್ಟು ಹೆಚ್ಚಾಗುತ್ತದೆ.
ಅಪ್ಪ ಎಂದರೇ ಹಾಗೇ, ಅದೊಂದು ಮಹತ್ವಾಕಾಂಕ್ಷೆಯ ಮೂರ್ತಿ, ಅಕ್ಷರಶಃ ಬೆವರನ್ನು ಸುರಿಸಿ ಕಟ್ಟಿದ ಮನೆಗಾಗಲೀ, ನಾನು ಖುಷಿಯಿಂದ ತಂದುಕೊಟ್ಟ ಅಂಕಪಟ್ಟಿಗಾಗಲೀ ಒಂದು ಸಮಾಧಾನದ ನಿಟ್ಟುಸಿರಷ್ಟೇ ಬೆಲೆ. ದೊಡ್ಡದೊಂದನ್ನು ಸಾಧಿಸಬೇಕೆಂಬ ಹಠ. ಅಪ್ಪ ಎಂದರೆ ಹಾಗೇ, ಎಂದಿಗೂ ಬಾಗದ ಸಮಾಧಾನದ ಹೆಗಲು. ಅಪ್ಪ ಎಂದರೆ ಸುಳ್ಳು ಸುಳ್ಳೇ ಸಿಟ್ಟನ್ನು ಆವಾಹಿಸಿಕೊಂಡಿರುವ ಹಿತೈಷಿ. ಅಪ್ಪ ಎಂದರೆ ಹೀಗೇ ಇನ್ನೆಷ್ಟೋ!
ಆಯ್ತು, ಜನ್ಮದಾತನಿಗೆ ಮತ್ತೊಮ್ಮೆ ಕೈಮುಗಿದು ನಮಸ್ಕರಿಸಿ (ಹೇಳದೇ ಹೋದರೂ ಅದು ಮಾನಸಿಕ ಅಭಿವ್ಯಕ್ತಿ ಎಂಬುದು ಇಲ್ಲಿಯೇ ಸ್ಪಷ್ಟ :P ) ಅವನ ಬಗೆಗಿನ ಈ ಅಂಕಣಕ್ಕೆ ಅಂತ್ಯ ಹಾಡುತ್ತಿದ್ದೇನೆ. ಇದಕ್ಕಿಂತ ಹೆಚ್ಚು ನಾವೇನನ್ನಾದರೂ ಕೊಡಬಹುದು, ಈ ಬದುಕನ್ನೇ ನಮಗೆ ಕೊಟ್ಟವನಿಗೆ. ( ಕೊನೆಯ ಸಾಲನ್ನು ನಾನು ಪುನರಾವರ್ತಿಸಿರುವೆನೆಂದು ನನಗೆ ಗೊತ್ತು, ಆದರೆ ಸಂದರ್ಭೋಚಿತವಾಗಿದೆ ಎಂದುಕೊಳ್ಳುತ್ತೇನೆ)
* ಕಳಲೆ- ಚಿಕ್ಕ ಬಿದಿರು. ಬಿದುರು ಚಿಕ್ಕದಾಗಿರುವಾಗ ಅದನ್ನು ಕೊಯ್ದು ತಂದು ಪಲ್ಯ, ಸಾಂಬಾರ್ ಮಾಡುತ್ತಾರೆ.
** ಶಿಕ್ಷಕ ಎಂಬುವವನು ಮೊದಲನೆಯದಾಗಿ ಎಲ್ಲವನ್ನು ಅರ್ಥ ಮಾಡಿಕೊಂಡಿರಬೇಕು ಎಂಬುದು ನನ್ನ ಅಭಿಪ್ರಾಯ.ಅದಕ್ಕೇ ಆ ರೀತಿಯಲ್ಲಿ ಈ ಶಬ್ದಪ್ರಯೋಗ.
No comments:
Post a Comment