Thursday 28 July 2011

ಕರೆ


೩೧-೦೭-೨೦೧೧ದ ಕರ್ಮವೀರದಲ್ಲಿ ಪ್ರಕಟವಾದ ನನ್ನ ಸಣ್ಣಕಥೆಯಿದು .ಒಂದೂವರೆ ವರ್ಷದ ಕೆಳಗೆ ಬರೆದಿದ್ದ ಕಥೆ ಈಗ ಪ್ರಕಟವಾದದ್ದು ತಡವೆನಿಸಿದರೂ ನೀಡಿದ ಸಂತೋಷ ಅಮಿತ.
...
          ಬೆಂಗಳೂರಿನ ಮಳೆಗೂ, ಪಂಚಾಂಗದ ತಿಂಗಳುಗಳ ಲೆಕ್ಕಾಚಾರಕ್ಕೂ ಯಾವುದೇ ಸಬಂಧವಿಲ್ಲ ಎಂಬ ತನ್ನದೇ ಸಿದ್ಧಾಂತವನ್ನು ಉದಾಹರಣೆಯೊಂದಿಗೆ ಪ್ರಮಾಣೀಕರಿಸುವ ಉತ್ಸಾಹದಲ್ಲಿದ್ದಂತೆ ಜನವರಿ ಎಂಬ ಚಳಿಗಾಲ-ಬೇಸಿಗೆಕಾಲಗಳ ಸಂಧಿಕಾಲದಲ್ಲಿ ಮಳೆ ಧೋssss ಎಂದು ಸುರಿಯುತ್ತಿತ್ತು. ಅಹುದು, ಅಹುದು, ಎಂದು ತಲೆದೂಗುವ ಭಟ್ಟಂಗಿಗಳಂತೆ, ಬೆಂಗಳೂರೆಂಬ ಉದ್ಯಾನನಗರಿಯಲ್ಲಿ ಅಳಿಯದೇ ಉಳಿದಿದ್ದ ಕೆಲವೇ ಕೆಲವು ಬೀದಿ ಬದಿಯ ಮರಗಳು ಸಾಧ್ಯವಿರುವಷ್ಟರ ಮಟ್ಟಿಗೆ ತಮ್ಮ ರೆಂಬೆಗಳನ್ನು ಅಲ್ಲಾಡಿಸುತ್ತಿದ್ದವು. ನಾಳಿನ ಕ್ರಿಕೆಟ್ ಪಂದ್ಯಕ್ಕೆ ಈಗಲೇ ಹೊನಲು-ಬೆಳಕಿನ ವ್ಯವಸ್ಥೆ ಸಿದ್ಧವಿದೆ ಎಂಬಂತೆ ಗುಡುಗು, ಸಿಡಿಲು, ಮಿಂಚುಗಳು ಮೇಳೈಸಿದ್ದವು.
ಅಂದು ಶುಕ್ರವಾರ ಬೇರೆ. ನಾಳೆ ಚಿನ್ನಸ್ವಾಮಿ ಕ್ರೀಡಂಗಂಣದಲ್ಲಿ ನಡೆಯುವ ಪಂದ್ಯಕ್ಕೆ, ತನ್ಮೂಲಕ ವಾರಾಂತ್ಯದ ರಜಕ್ಕೆ ಎಲ್ಲಿ ಈ ಮಳೆ ತಣ್ಣೀರು ಎರಚಿಬಿಡುತ್ತದೆಯೇನೋ ಎಂದು ಶಪಿಸುತ್ತಾ, ಸಾಧ್ಯವಾದಷ್ಟೂ ನೆನೆಯದಂತೆ ಜಯನಗರ ೩ನೇ ಬ್ಲಾಕಿನ ಮುನೆಯತ್ತ ವಿಶ್ವ(ವಿಶ್ವಂಭರ) ಸಾಗುತ್ತಿದ್ದ. ಕೇಂದ್ರಗ್ರಂಥಾಲಯದ ಬಳಿ ಇಳಿದು ತಲೆ ಮತ್ತು ಲ್ಯಾಪ್ ಟಾಪನ್ನಾದರೂಮಳೆಯಿಂದ ರಕ್ಷಿಸಿಕೊಳ್ಳುವ ಹಂಬಲದಲ್ಲಿ ಕೊಡೆಯನ್ನು ಗುರಾಣಿಯಂತೆ ಹಿಡಿದು ಸಾಗುತ್ತಿದ್ದ, ಎದುರಿನಿಂದ ಬರುತ್ತಿದ್ದ ರಿಕ್ಷಾ ಕರ್ಕಶವಾಗಿ ಹಾರ್ನ್ ಮಾಡುವವರೆಗೂ. ರಿಕ್ಷಾದ ವೇಗಕ್ಕೂ ಚಾಲಕನ ಆವೇಗಕ್ಕೂಹೆದರಿ ಸಾಧ್ಯವಿರುವಷ್ಟರ ಮಟ್ಟಿಗೆ ಪಕ್ಕಕ್ಕೆ ಸರಿದು ನಿಂತಾಗ ಕಂಡ ದೃಶ್ಯ ನಿಜಕ್ಕೂ ವಿಚಿತ್ರವಾಗಿತ್ತು.
ಸುಮಾರು ಐವತ್ತು ಪ್ರಾಯದ, ದಢೂತಿ ಹೊಟ್ಟೆಯ , ವೀರಪ್ಪನ್ ಮೀಸೆಯ, ಹಳ್ಳಿಹೈದನಂತಿದ್ದ ಆಸಾಮಿಯೊಬ್ಬ, ತನ್ನೊಂದಿಗೆ ಎಮ್ಮೆಯೊಂದನ್ನು ಹಾಗೇ ನಿಲ್ಲಿಸಿಕೊಂಡಿದ್ದ.ಮನಸ್ಸು ಏನೋ ಕೆಡುಕನ್ನು ಯೋಚಿಸಿತಾದರೂ ಏನಿರಬಹುದೆಂಬುದು ಸ್ಪಷ್ಟವಾಗಿ ತಿಳಿಯಲಿಲ್ಲ.ಛೇ, ಕಪ್ಪಾಗಿರುವನೆಂದೇ ನಾನು ಹೀಗೆಲ್ಲಾ ಸಂಶಯ ಪಡುತ್ತಿರುವುದು ಎನ್ನಿಸಿ, ಮನಸ್ಸಿಗೆ ಬೈದುಕೊಂಡು ಸುಮ್ಮನಾಗಿಸಿದೆನಾದರೂ ಒಳಮನಸ್ಸು ಅಷ್ಟೇ ಅಲ್ಲ ಎಂದು ಹಠ ಹಿಡಿದು ಕುಳಿತಂತಾಯ್ತು. ಟ್ರಾನ್ಸ್ ಫಾರ್ಮರ್ ಕೆಳಗೆ ನಿತ್ತುಕೊಂಡ ಈ ಪುಣ್ಯಾತ್ಮನ ಅಸ್ತಿತ್ವ ಯಾಕೋ ವಿಚಿತ್ರವೂ, ಕೇಡಿನದಾಗಿಯೂ ಕಂಡುಬಂತು. ದಿನಪತ್ರಿಕೆಗಳಲ್ಲಿ ಬರುತ್ತಿದ್ದ ’ಸಿಡಿಲು ಬಡಿದು ಸಾವು’ಗಳಂತಹ ಶೀರ್ಷಿಕೆಗಳ ಪ್ರಭಾವವೋ, ಸಾಮಾನ್ಯ ಪ್ರಜ್ಞೆಯೋ, ಮತ್ತೊಬ್ಬ ಮನುಷ್ಯನ ಬಗೆಗಿನ ಕನಿಷ್ಟ ಮಾನವೀಯತೆಯೋ ಯಾವುದೋ ಒಂದು ವಿಶ್ವನಿಗೆ ಸ್ಪೂರ್ತಿ ನೀಡಿ, ಆ ದೃಶ್ಯವನ್ನು ಕಂಡೂ ಕಾಣದಂತೆ ಮುಂದಕ್ಕೆ ಹೋಗಲು ಮನಸ್ಸು ಬಾರದೇ, ವಿಶ್ವ ಕೂಗಿ ಹೇಳಿದ್ದ ಆ ವ್ಯಕ್ತಿಗೆ,
"ಏಯ್ ಹಲ್ಲೋ, ಈ ರೀತಿ ಮಳೆ ಬರ‍್ತಾ ಇದೆ. ಇಷ್ಟು ಗುಡುಗು, ಸಿಡಿಲು ಬೇರೆ ಇದೆ. ಅಂತಾದ್ರಲ್ಲಿ ಬೇರೆ ಎಲ್ಲೂ ಜಾಗ ಸಿಗಲಿಲ್ವಾ ನಿನಗೆ? ಈ ಟ್ರಾನ್ಸ್ ಫಾರ್ಮರ್ ಕೆಳಗೆ ನಿಂತಿದ್ದೀಯಲ್ಲಾ, ಬೇರೆಲ್ಲಾದರೂ ಹೋಗೋ, ಅದನ್ನು ಕರೆದುಕೊಂಡು" ಎಂದ ಆ ವ್ಯಕ್ತಿಯ ಎಮ್ಮೆಯತ್ತ ಬೆರಳು ತೋರಿಸಿ.
ಆ ಮನುಷ್ಯನಿಗೆ ಅರ್ಥವಾದ ಹಾಗಿರಲಿಲ್ಲ. ಭಾಷೆಯೇ ಅರ್ಥವಾಗಲಿಲ್ಲವೋ ಅಥವಾ ಹೇಳಿದ್ದೇ ಕೇಳಲಿಲ್ಲವೋ ಸುಮ್ಮನೇ ಬೆಪ್ಪನಂತೆ ನಿಂತಿದ್ದ. ಮತ್ತೆ ಐದು ನಿಮಿಷದ ಒಳಗೆ ವಿಶ್ವ ಎಂಟು ಸಲ ಕೂಗಿಯಾಗಿತ್ತು. ಮೇಲೆ ಹೇಳಿದ್ದ ವಾಕ್ಯವನ್ನೇ ಸ್ವಲ್ಪ ತಿರುಚಿ ಹೇಳಿಯೂ ಪ್ರಯತ್ನ ಮಾಡಿದ್ದ.ತನಗೆ ಬರುತ್ತಿದ್ದ ಅರೆಬರೆ ತಮಿಳಿನಲ್ಲಿಯೇ ಹೇಳಲೂ ನೋಡಿದ. ಆ ಮನುಷ್ಯ ಕೊನೆಯ ಎರಡು ಬಾರಿ ಹೇಳಿದ್ದನ್ನು ಸ್ವಲ್ಪ ಕೇಳಿಸಿಕೊಂಡಂತೆ ಮಾಡಿದನಾದರೂ ಯಾವುದೇ ಪ್ರತಿಕ್ರೀಯೆಯನ್ನು ಕೊಡಲಿಲ್ಲ.ಇದೇ ಕೊನೆಯ ಬಾರಿ ಎಂದುಕೊಂಡು ಒಂಬತ್ತನೆಯ ಬಾರಿ ಕೂಗಲು ಬಾಯಿ ತೆರೆಯುವ ಮೊದಲು ವಿಶ್ವನಿಗೆ ಹೊಳೆದಿತ್ತು, ತಮ್ಮಿಬ್ಬರ ಮಧ್ಯೆ ಏನಿಲ್ಲವೆಂದರೂ ೧೦ಮೀಟರ್ ಅಂತರವಿತ್ತೆಂದು. ಈ ದೂರದ ಜೊತೆಗೆ ಮಳೆಯ ಆರ್ಭಟವೂ ಸೇರಿ ಅವನಿಗೆ ಕೇಳಿರದೇ ಹೋಗಿರಲು ಸಾಧ್ಯವಿದೆ ಎಂದೆಣಿಸಿ ಅವನ ಬಳಿಗೇ ಹೋಗಿ ಕೂಗಿ ಇಂತೆಂದ.
"ಕಿವಿ ಕೇಳಲ್ವಾ ನಿಂಗೆ, ಅಷ್ಟು ಬಾರಿ ಕೂಗಿದ್ರೂ ಕೇಳಿಸಲಿಲ್ವಾ, ಟ್ರಾನ್ಸ್ ಫ಼ಾರ್ಮರ್ ಕೆಳಗೇ ನಿಂತಿದ್ದಿಯಲ್ಲಾ, ಆಚೆ .........." ವಾಕ್ಯ ಪೂರ್ತಿಯಾಗುವ ಮೊದಲೇ ಕಣ್ನು ಕೊರೈಸುವ ಮಿಂಚಿನೊಡಗೂಡಿದ ಸಿಡಿಲು ವಿಶ್ವ ನಿಂತಿದ್ದ ಜಾಗಕ್ಕೆ ಅದೇ ಟ್ರಾನ್ಸ್ ಫ಼ಾರ್ಮರ್ ನ ಪಕ್ಕಕ್ಕೆ ಹೊಡೆದಿತ್ತು. ವಿಶ್ವ ಅಷ್ಟಕ್ಕೇ ನಿಲ್ಲಿಸಿದ್ದ ತನ್ನ ಕೊನೆಯ ಮಾತನ್ನು ಪೂರ್ತಿ ಮಾಡುವ ಅವಕಾಶವಿಲ್ಲದೇ.
...
ಕೊನೆಗೂ ’ಆತ’ ತನ್ನ ಟ್ರಾನ್ಸ್ ಫ಼ಾರ್ಮರ್ ನ ಪಕ್ಕದ ಜಾಗ ಖಾಲಿ ಮಾಡಿ ತನ್ನ ಎಮ್ಮೆಯ ಮೇಲೇರಿ ಹೊರಟ, ವಿಶ್ವನ ಪಾಪ ಪುಣ್ಯಗಳನ್ನು ಲೆಕ್ಕ ಹಾಕುತ್ತಾ, ಮತ್ತಾರಿಗೋ ’ಕರೆ’ ಕಳಿಸುತ್ತಾ.
...

No comments:

Post a Comment