Friday, 3 February 2012

ನಾವು ಹುಡುಗರುಚಿತ್ರಕೃಪೆ: ಅಂತರ್ಜಾಲ.
  • "ಜೀವಕ್ಕೆ ಜೀವ ಎಂಬಂತೆ ಓಡಾಡಿಕೊಂಡಿದ್ದ ಇಬ್ಬರು ಗೆಳೆಯರು ಈಗ ಮುಖಕ್ಕೆ ಮುಖ ಕೊಟ್ಟೂ ಮಾತನಾಡುವುದಿಲ್ಲ. "
  • " ಊರೆಂಬ ಊರಿಗೇ ಮಾದರಿ ಗೆಳೆಯರೆನಿಸಿಕೊಂಡವರಿಬ್ಬರಿಗೆ ಈಗ ಎಣ್ಣೆ ಸೀಗೇಕಾಯಿ ಸಂಬಂಧ.ಒಬ್ಬರಿನ್ನೊಬ್ಬರ ಮುಖವನ್ನು ನೋಡಲೂ ಬಯಸುವುದಿಲ್ಲ."
ನಾವು ಹುಡುಗರು ಯಾವಾಗಲೂ ಹೀಗೆಯೇ, ಏನನ್ನೇ ಆದರೂ ಅತಿಯಾಗಿಯೇ ಮಾಡುತ್ತೇವೆ. ಸ್ನೇಹವಾದರೂ ಅಷ್ಟೇ, ದ್ವೇಷವಾದರೂ ಅಷ್ಟೇ, ಪ್ರೀತಿಯಾದರೂ ಅಷ್ಟೇ, ನಿರಾಸಕ್ತಿಯಾದರೂ ಅಷ್ಟೇ! ಅಗತ್ಯಕ್ಕಿಂತ ಹೆಚ್ಚಾಗಿಯೇ ಮಾಡುವ ಈ ಗುಣ ಇದೆಯಲ್ಲಾ, ಇದು ನಮಗೆ ಹುಟ್ಟಿನಿಂದಲೂ ಬಂದಿರುತ್ತದೆ. ಅದಕ್ಕೇ, ನಮ್ಮಲ್ಲಿ ಕೆಲವು ಗೆಳೆತನಗಳು ಬಾಳುವುದು, ಮರೆಯಲು ಸಾಧ್ಯವೇ ಇಲ್ಲವೇನೋ ಎಂಬಂತೆ ಉಳಿಯುವುದು, ಮತ್ತೆ ಕೆಲವು ನೆನಪಿನ ಹಂಗೇ ಇಲ್ಲದಂತೆ ಮರೆತು ಮಣ್ಣಾಗುವುದು. ನಮ್ಮ ಜಗತ್ತು ಹೀಗೇ, ನೇರಾನೇರ. ಮನಸ್ಸನ್ನು ಹುಳ್ಳಾಗಿಸಿಕೊಂಡು ಮುಖದಲ್ಲಿ ನಗೆ ತರಿಸುವುದು ಭಾಗಶಃ ಅಸಾಧ್ಯವೇ. ಹಾಗೆ ತಂದುಕೊಂಡರೂ ಅದು ಕೃತಕವಾದದ್ದು ಎಂಬುದು ಕ್ಷಣಮಾತ್ರದಲ್ಲಿ ವೇದ್ಯವಾಗುತ್ತದೆ. ಮನಸ್ಸಿಗೆ ಏನೆನ್ನಿಸುತ್ತದೋ ಅದನ್ನು ಹಾಗೇ ಕಕ್ಕಿ ಬಿಡುತ್ತೇವೆ ಎಂದೇನಲ್ಲ, ಆದರೆ ಸತ್ಯದ ಮುಖಕ್ಕೆ ಹೊಡೆವ ರೀತಿಯಲ್ಲಿ ಸುಳ್ಳು ಹೇಳುವಲ್ಲಿ ನಾವು ತಡವರಿಸುತ್ತೇವೆ. ಹಾಗೆಂದು ಎಲ್ಲರೂ ಸತ್ಯ ಹರಿಶ್ಚಂದ್ರರೆಂದು ಹೇಳುತ್ತಿದ್ದೀನೆಂದುತಪ್ಪು ತಿಳಿದುಕೊಳ್ಳಬೇಡಿ.

ಹಾಗೆಯೇ ನಮ್ಮಲ್ಲಿ ಈಗೋ, ಅಹಂಕಾರ ಎಲ್ಲವೂ ಹೆಚ್ಚು. ಜೀವಕ್ಕೆ ಜೀವ ಕೊಡುವ ಗೆಳೆಯನ ಬಳಿಯೇ ಏನೋ ಒಂದು ಚಿಕ್ಕ ಸಹಾಯವನ್ನಪೇಕ್ಷಿಸಲು ಮನ ಹಿಂಜರಿಯುತ್ತದೆ.‘ ಅಲ್ಲೇ ಒಂದು ಹಿಂಜರಿಕೆ ಹುಟ್ಟಿ, ಅದನ್ನು ಸ್ವಲ್ಪ ಕಷ್ಟಪಟ್ಟಾದರೂ ನಾವೇ ಮಾಡುವ ಮಾರ್ಗವನ್ನು ಹುಡುಕುತ್ತೇವೆ. ಅದಕ್ಕೇ ಒಬ್ಬ ಗೆಳೆಯ ಸಹಾಯ ಕೇಳಿದಾಗ ಅದಕ್ಕೆ ಅಷ್ಟು ಅರ್ಥವಿರುತ್ತದೆ.ಯಾವುದನ್ನೂ ಸಂಪೂರ್ಣವಾಗಿ ಬಾಯಿಬಿಟ್ಟು ಮಾತನಾಡದೇ ಸ್ಪಷ್ಟವಾಗಿ ಅರ್ಥಮಾಡಿಸಬಲ್ಲ ತಾಕತ್ತು ಎಲ್ಲರಿಗೂ ಇರುತ್ತದೆ. ಅದು ಬಹಳ ಅವಶ್ಯಕವೂ ಆಗುತ್ತದೆ. ಅದು ಅರ್ಥವಾಗದೇ ಹೋದಾಗ ಎಷ್ಟೋ ಮಾತುಗಳು ಹೇಳದೇ ಉಳಿಯಲ್ಪಡುತ್ತದೆ, ಎಷ್ಟೋ ಭಾವಗಳು ಹೇಳದೆಯೇ ಉಳಿದುಹೋಗಿಬಿಡುತ್ತವೆ. ಹಾಗೇ ಅವುಗಳು ಉಳಿದುಹೋದವಲ್ಲಾ ಎಂದೋ, ಸುಮ್ಮನೇ ಒಂದು ಮುತ್ತಿನಂತಹಾ ಗೆಳೆತನವನ್ನು ಕಳೆದುಕೊಂಡನಲ್ಲಾ ಎಂದೋ, ಜೀವನವಿಡೀ ಪರಿತಪಿಸುತ್ತಾರೆ, ಅಹಂಕಾರದ ಕಳೆದುಕೊಂಡ ಅದೊಂದು ಘಳಿಗೆಗಾಗಿ. ಹೊರಗೆ ಎಷ್ಟೇ ಕಠಿಣವಾಗಿ, ಉಕ್ಕಿನಂತೆ ಭಾವರಹಿತವಾಗಿಯೇ ಇದ್ದರೂ ,ಅಮಸ್ಸಿನ ಒಳಮೂಲೆಯಲ್ಲಿ ಹೇಳಲಾಗದ ನಾಚಿಕೆಯ, ಹಮ್ಮಿನ, ತೀವ್ರತೆಯ ಎಷ್ಟೋ ವಿಭಿನ್ನ ಭಾವಗಳು ಅವಿತು ಕಾಡುತ್ತಿರುತ್ತವೆ. ಹೊರಗೆ ಮೃದುವಾಗಿ ಕಾಣುವುದು ಪರಂಪರಾಗತವಾಗಿ ಬಂದ ಪುರುಷನೆಂಬ ಇಮೇಜ್ ಗೆ ಎಲ್ಲಿ ಹೊರತಾಗಿಬಿಡುತ್ತೀನೇನೋ ಎಂಬ ಅಂಜಿಕೆಯಲ್ಲಿ ಹುಡುಗ ಮತ್ತೂ ಗಟ್ಟಿಯಾಗುತ್ತ ಹೋಗುತ್ತಾನೆ.

ಚಿತ್ರಕೃಪೆ: ಅಂತರ್ಜಾಲ.
ಹೀಗೆ ಕಲ್ಲಿಗಿಂತ ಕಠಿಣವಾಗಿ ಕಾಣುವ ಹುಡುಗರು ಕರಗಿಹೋಗಲು ಸಾಧ್ಯವೇ ಇಲ್ಲ ಎಂದೇನಲ್ಲ, ಭಾಷೆಯೋ, ತಾಯ್ನಾಡೋ ಯಾವುದೋ ಒಂದು ವಿಷಯಕ್ಕೆ ಎಲ್ಲ ಹುಡುಗರು ಭಾವುಕವಾಗಿ ಅಂಟಿಕೊಂಡಿರುತ್ತಾರೆ. ಹೆತ್ತ ತಾಯಿಯ ಬಗ್ಗೆ ಯಾರಾದರೂ ಒಂದು ಮಾತನಾಡಿದರೂ ಮಗ ಸಹಿಸಲಾರ, ತನ್ನ ತಾಯಿಯದ್ದೇ ತಪ್ಪಿದ್ದರೂ. ಹುಡುಗ ಕರಗಲು ಇಷ್ಟೆಲ್ಲಾ ಆಗಲೇಬೇಕೆಂದೇನಿಲ್ಲ. ಒಂದು ಪ್ರೀತಿ ಹುಟ್ಟಿದರೂ ಸಾಕು, ಹುಡುಗ ಹುಡುಗಿಗಿಂತ ಮೃದುವಾಗಬಲ್ಲ. ಎಲ್ಲ ಹುಡುಗರಿಗೂ ಅವರ ಜೀವನದಲ್ಲಿ ಒಂದು ಬಾರಿಯಾದರೂ ನಿಜವಾದ ಪ್ರೀತಿಯ ಅನುಭವವಾಗುತ್ತದೆ*. ಹಾಗೆ ಆಗಿ, ಎಲ್ಲ ಸರಿಹೋದರೆ ಸರಿ, ಇಲ್ಲದೇ ಹೋದರೆ(ಹೀಗೇ ಆಗುವ ಅವಕಾಶವೇ ಹೆಚ್ಚಿರುವುದರಿಂದ ನಾನು ಈ ವಿಷಯವನ್ನು ಇಷ್ಟು ಸಾಮಾನ್ಯೀಕರಿಸುತ್ತಿದ್ದೇನೆ.) ಅವರ ಕಥೆ, ಅಧೋಗತಿ. ಕೂತಲ್ಲಿ ಕೊರಗುತ್ತಾರೆ, ನಿಂತಲ್ಲಿ ನಿಟ್ಟುಸಿರು ಬಿಡುತ್ತಾರೆ, ಮಲಗಿದಲ್ಲಿ ಮುಲುಗುತ್ತಾರೆ. ಮಾತನಾಡಲು ಹಿಂಜರಿಯುತ್ತಾರೆ, ಮೌನವನ್ನು ಇಷ್ಟಪಡುತ್ತಾರೆ. ನೆನಪುಗಳನ್ನು ಮರೆಯಲು ವರ್ತಮಾನದ ಜೊತೆಗೆ ಹೆಣಗಾಡುತ್ತಾರೆ. ಜೀವದ ಗೆಳೆಯನಿಗೆ ಮಾತ್ರ ತಿಳಿಯುವಂತೆ ಬಿಕ್ಕುವುದುಂಟು, ಆದರೆ ಅದರ ವಿಷಯ ಆ ಗೆಳೆಯ ಹೊರಗೆ ಹೇಳಲಾರ ಎಂಬ ನಂಬಿಕೆ ಬಂದರೆ ಮಾತ್ರ(ಅಳುವುದು ಹುಡುಗರ ಜಗತ್ತಿಗೆ ಹೊರತಾಗಿದ್ದು ಮತ್ತು ವರ್ಜ್ಯ, ಕಡ್ಡಾಯವಾಗಿ!). ಎಲ್ಲರಿಗೂ ಭಾಗಶಃ ಒಂದಲ್ಲಾ ಒಂದು ಸಲ ಇಂತಹ ಪ್ರಸಂಗ ಎದುರಾಗಿರುವುದರಿಂದ ಗೆಳೆಯನ ಕಂಬನಿಗೆ ಈ ಗೆಳೆಯ ಕರವಸ್ತ್ರವಾಗುತ್ತಾನೆ. ಗೆಳೆಯನೊಬ್ಬನಿಗೆ ಇಂತಹದೊಂದು ಆಸಕ್ತಿಯಿದೆ ಎಂದಾಗ ಸ್ವಂತ ತನ್ನದೇ ಬದುಕೇನೋ ಸಂಭ್ರಮಿಸುವ ನಾವು, ದುಃಖವನ್ನೂ ಸ್ವಂತ ನಮ್ಮದೇ ಎಂದುಕೊಳ್ಳುತ್ತೇವೆ, ಅದಕ್ಕಾಗಿ ನೋಯುತ್ತೇವೆ.

ಮತ್ತೊಂದು ವಿಷಯ ನಾನು ಹೇಳಬೇಕೆಂದುಕೊಂಡಿದ್ದು, ನಂಬಿಕೆ. ಹುಡುಗ ಇನ್ನೊಬ್ಬ ಗೆಳೆಯನನ್ನು ನಂಬುವ ಮೊದಲು ಸಿಕ್ಕಪಟ್ಟೆ ಸಮಯ ತೆಗೆದುಕೊಳ್ಳುತ್ತಾನೆ, ಅತಿಯಾಯ್ತು ಎಂಬಷ್ಟೇ ಎಂದಿಟ್ಟುಕೊಳ್ಳಿ. ( ಇನ್ನು ನನ್ನಂತಹವರು ಗೆಳೆಯ ಎಂದು ಕರೆಯುವ ಮೊದಲೇ ಬಹಳ ಯೋಚಿಸುತ್ತಾರೆ ಬಿಡಿ.). ಅವರ ಸಂಪೂರ್ಣ ಗೆಳೆತನವೇ ಆ ನಂಬಿಕೆಯ ಮೇಲೆ ನಿಂತಿರುತ್ತದೆ. ಹಾಗೆ ಒಮ್ಮೆ ನಂಬಿದ ಮೇಲೆ ಏನನ್ನೇ ಆಗಲೀ ಇವನು ಹಿಂಜರಿಯುವುದಿಲ್ಲ, ಅವನು ಕೇಳಲೂ ಹಿಂಜರಿಯುವುದಿಲ್ಲ. ಅದೊಂದು ರೀತಿಯ ಸಂಪೂರ್ಣ ನಂಬಿಕೆಯ ಸ್ಥಿತಿ. ಆದರೆ ಯಾವುದೋ ಚಿಕ್ಕ ವಿಷಯದಲ್ಲಿ ನಂಬಿದ ಗೆಳೆಯ ಕೈಕೊಟ್ಟನೆಂದಿಟುಕೊಳ್ಳಿ, ಈ ಗೆಳೆಯ ವ್ಯಗ್ರನಾಗಿ ವ್ಯಾಘ್ರನಾಗುತ್ತಾನೆ. ಗೆಳೆತನದ ಅಡಿಪಾಯವೇ ಕಳಚಿಬಿದ್ದಂತಾಗಿ ಮನಸಾರೆ ಮನನೊಂದುಕೊಳ್ಳುತ್ತಾನೆ.ಹೀಗೆಯೇ ಅತಿರೇಕಕ್ಕೆ ಹೋದರೆ ಆ ಗೆಳೆತನವೇ ಅಂತ್ಯವಾಗಬಹುದು.

ಇದು ನಮ್ಮ(ಹುಡುಗರ) ಜಗತ್ತು, ನಾನು ಕಂಡಂತೆ. ಇದು ರಮ್ಯವೂ ಅಲ್ಲ. ಚಂದವೂ ಅಲ್ಲ; ನಗುವ ಬುಗ್ಗೆಯಲ್ಲ, ಮಾತಿನ ಮನೆಯಲ್ಲ. ಬದಲಾಗಿ ಇದು ಗಂಭೀರ, ಶಬ್ದಶೂನ್ಯ. ಇದು ಅಹಂಕಾರದ ಕೂಪ, ಕಟ್ಟಿಹಾಕಿದ ಭಾವನೆಗಳ ಸಂಕೀರ್ಣ. ಎಷ್ಟು ಇಷ್ಟಪಡುತ್ತೀರೋ ನಿಮಗೆ ಬಿಟ್ಟಿದ್ದು, ಅದಕ್ಕೇನೂ ಈ ಜಗತ್ತು ತಲೆ ಕೆಡಿಸಿಕ್ಕೊಳ್ಳದು, ಬಿಡಿ.

ಟಿಪ್ಪಣಿ:
* - ೧. ಹಾಗೆಂದು ಹುಡುಗಿಯರಿಗೆ ಆಗುವುದಿಲ್ಲ ಎಂದೇನಲ್ಲ, ಆದರೆ ಯಾವಾಗಲೂ ಅದಕ್ಕಾಗಿ ಪರಿತಪಿಸುವುದು ನಾನು ನೋದಿರುವ ಮಟ್ಟಿಗೆ ಹುಡುಗರೇ ಜಾಸ್ತಿ.
     ೨.ಕೆಲವರಿಗೆ ಒಂದಕ್ಕಿಂತ ಹೆಚ್ಚು ಬಾರಿ ಆಗಬಹುದು, ಅದಕ್ಕೆ ಅವರೇ ಜವಾಬ್ದಾರರು. :P
     ೩.ಇನ್ನು ಕೆಲವು ಅದೃಷ್ಟವಂತರಿಗೆ ಮೊದಲ ಪ್ರೀತಿಯೇ ಮದುವೆಯಾದ(ಗುವ) ಹುಡುಗಿಯ ಜೊತೆಗೆ ಆಗಿ ಅವರಿಗೆ ಕೊರಗುವ ಅಗತ್ಯವಿರುವುದಿಲ್ಲ.

2 comments:

  1. ಉತ್ತಮ ಬರಹ ಸುಬ್ರಹ್ಮಣ್ಯ ಹೆಗಡೆ - ಅಕ್ಷರಶಃ ನಿಜ", ಹುಡುಗರ ಬಾಳಲ್ಲಿ ಎಲ್ಲವೂ ತೀವ್ರವೇ!
    ಪ್ರೀತಿಯಿರಲಿ, ಸಂಕೋಚವಿರಲಿ, ದ್ವೇಷವಿರಲಿ ಮತ್ತು ಸ್ವಾಭಿಮಾನವೂ ಕೂಡ ಅಗತ್ಯಕ್ಕಿಂತ ಜಾಸ್ತಿ ಬಿಡಿ ;)

    ReplyDelete
  2. ಹುಡುಗರ ಲೋಕವನ್ನು ಮನೋಜ್ಞವಾಗಿ ತೆರೆದಿಟ್ಟಿದ್ದೀರಿ ಸುಬ್ರಹ್ಮಣ್ಯ ಹೆಗಡೆಯವರೆ.. ನಾವು ಏನು ಮಾಡಿದರೂ ಅತಿಯಾಗಿಯೇ ಮಾಡುವುದು ಸ್ನೇಹ, ಪ್ರೀತಿ, ದ್ವೇಷ, ಸ್ವಾಭಿಮಾನ, ಸಂಕೋಚ ಎಲ್ಲವೂ ಅತಿಯೇ.. ಯಾಕೆಂದರೆ ಅವುಗಳು ನಮಗೆ ಹುಟ್ಟಿನಿಂದ ಬಂದಂತಹ ಆಸ್ತಿಗಳು.. ನಾವು ಅವುಗಳನ್ನು ಕಳೆದುಕೊಳ್ಳಲೂ ತಯಾರಿರುವುದಿಲ್ಲ ಮತ್ತು ಅವುಗಳು ನಮ್ಮನ್ನು ಬಿಟ್ಟೂ ಹೋಗುವುದಿಲ್ಲ.. ಹೊರಗೆ ತುಂಬಾ ಒರಟಾಗಿ ಕಾಣುವ ಹುಡುಗನ ಅಂತರಾಳ ತುಂಬಾ ಸೂಕ್ಷ್ಮವಾಗಿರುತ್ತದೆ.. ತುಂಬಾ ಭಾವಗಳ ಬಗ್ಗೆ ಒಮ್ಮೆಲೇ ಚಿಂತಿಸಿ, ತಕ್ಷಣಕ್ಕೆ ಪ್ರತಿಕ್ರಿಯಿಸಿಬಿಡುತ್ತಾನೆ.. ಅವನ ಭಾವಗಳಿಗೆ ಒಂದು ಲಾಲಿತ್ಯವಾಗಲಿ, ಮೃದುತ್ವವಾಗಲಿ ಇರುವುದಿಲ್ಲ.. ಆದರೆ ಅಂತರಾಳದಲ್ಲಿ ತುಂಬಾ ಮೃದುವಾಗಿರಬಹುದು ಅದಕ್ಕೆ ಕಾರಣ ಅವನಲ್ಲಿ ಹುಟ್ಟಿಬಹುದಾದಂತ ಪ್ರೀತಿ.. ನಿಜಕ್ಕೂ ನಿಮ್ಮ ಈ ಲೇಖನವನ್ನು ಓದಿ ಖುಷಿಯಾಯ್ತು.. ನಮ್ಮ(ಹುಡುಗರ) ಮನಸ್ಥಿತಿಗಳನ್ನು ತುಂಬಾ ಚೆನ್ನಾಗಿ ಅಭಿವ್ಯಕ್ತಿಸಿದ್ದೀರಿ..:)))

    ReplyDelete