Monday, 5 March 2012

ಪ್ರಣವ ಪ್ರೇಮ ಪುರಾಣ(ಭಾಗ ೨ )

ಹಿಂದಿನ ಭಾಗದಲ್ಲಿ ...
             ಮೊದಲ ನೋಟದ ಪ್ರೇಮವೋ ಏನೋ ಪ್ರಣವನಂತೂ  ಸುವಿಧಾಳನ್ನು ಪ್ರೀತಿಸುತ್ತಾನೆ. ಪ್ರೀತಿಯನ್ನು ಒಪ್ಪದ ಹುಡುಗಿ ಅವನ ಪ್ರೀತಿಯನ್ನು ಪರೀಕ್ಷಿಸಬಯಸುತ್ತಾಳೆ ಅದರಲ್ಲಿ ಅವನಷ್ಟರ ಮಟ್ಟಿಗೆ ಅವನು ಯಶಸ್ವಿಯೇ ಆಗುತ್ತಾನೆ. ಆದre ವಿಧಿಯ ಲೆಕ್ಕಾಚಾರವೇ ಬೇರಿತ್ತು ಎಂಬುದು ಪ್ರಣವನಿಗೆ ಹೊಳೆದು ಹತಾಶನಾಗುತ್ತಾನೆ. ಈ ಸನ್ನಿವೇಶದಿಂದ ಮುಂದಕ್ಕೆ   ಸುವಿಧಾ ತನ್ನ ಕತೆಯನ್ನು ವಿವರಿಸುತ್ತಾಳೆ. ಹಿಂದಿನ ಭಾಗವನ್ನು ಒಮ್ಮೆ ಓದಿ ನೋಡಿ
http://subrahmanyahegde.blogspot.in/2012/02/blog-post_25.html


ಸುವಿಧಾ ಹೇಳಿದಂತೆ:
ನನ್ನ ಕಥೆಯೇನೂ ಬಹಳ ವಿಭಿನ್ನವಾಗಿರಲಿಲ್ಲ. ಅಲ್ಲಿ ಹಾಗೆ ಅವನ ಮುಖಕ್ಕೆ ಹೊಡೆದ ಹಾಗೆ ಹೇಳಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದರಿಂದಲೇ ಅಷ್ಟು ಹೇಳಬಲ್ಲವಳಾಗಿದ್ದೆ. ಆದರೆ ತಾನು ಹೇಳಿದ್ದೆಲ್ಲಾ ಸತ್ಯವೇ? ಹೇಳುವಷ್ಟು ಪ್ರೌಢಿಮೆ, ಅದಕ್ಕಿಂತ ಹೆಚ್ಚಾಗಿ ಅವಶ್ಯಕತೆ ನಿಜವಾಗಿಯೂ ತನಗೆ ಇತ್ತೇ? ಉಳಿದ ಕಾರಣಗಳೆಲ್ಲಾ ಸುಳು ಸುಳ್ಳೇ ಒಂದು ಮುಖ್ಯ ಕಾರಣದ ಸುತ್ತ ತಾನೇ ಕೊಟ್ಟುಕೊಂಡ ಸಮರ್ಥನೆಗಳಷ್ಟೇ ಅಲ್ಲವೇ? ಆದರೆ ತನಗೇಕೆ ಅವನ ಎದುರಲ್ಲಿ ಹಾಗೆ ಎಲ್ಲೂ ಇಲ್ಲದ ಉದ್ವೇಗ ಬರುವುದು? ಯಾಕೆ ಹಾಗೆ ಬುದ್ಧಿಯ ಕಟ್ಟಪ್ಪಣೆಯನ್ನು ಮೀರಿ ಅವನ ಜೊತೆಗೆ ಮಾತನಾಡುವ ಬಯಕೆ ಮನಸ್ಸಿನಲ್ಲಿ ಹುಟ್ಟುವುದು? ಎಷ್ಟು ಅವಿತಿಟ್ಟುಕೊಳ್ಳಲು ನೋಡಿದರೂ ಆ ಕಿರುನಗೆ ಏಕೆ ಹೊರಗಿಣುಕುವುದು? ಯಾಕದು ಆ ಅಸ್ವಾಭಾವಿಕ ಪ್ರಸನ್ನತೆ ಮೂಡುವುದು? ಆದರೆ ಅಕ್ಕ? ಅವಳು ಹಾಗೆ ನಿದ್ದೆಮಾತ್ರೆಗಳನ್ನು ಲೆಕ್ಕವಿಡದೆ ನುಂಗಿ ಕೋಮಾಕ್ಕೆ ಹೋಗಿ ಕುಳಿತಾಗ, ಕೋಮಾದಿಂದ ಹೊರಬಂದಾದ ಮೇಲೂ ಬುದ್ಧಿಸ್ಥಿಮಿತದಲ್ಲಿಲ್ಲದೇ ಒಂದು ವರ್ಷ ಒದ್ದಾಡಿದಾಗ, ದಿನಂಪ್ರತಿ ಕೇಶವಚಂದ್ರ ಜೋಷಿಯ ವಂಶಕ್ಕೆಲ್ಲಾ ಶಾಪ ಹಾಕಿರಲಿಲ್ಲವೇ? ಅವಳಿಗೆ ಚಿಕಿತ್ಸೆ ಮಾಡಲು ಬರುತ್ತಿದ್ದ ಶ್ರೀಧರ್ ಡಾಕ್ಟರ್ರೇ ಪ್ರೀತಿ ಪ್ರೀತಿ ಎಂದು ಕನವರಿಸುತ್ತಿದ್ದ ಇವಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾಗಿದ್ದರಿಂದ ಇಂದು ಅವಳು ಮನುಷ್ಯರ ತರಹ ಬದುಕಿದ್ದಾಳೆ, ಅಷ್ಟೇ! ಅಕ್ಕ ಹಾಗಾಗಿ ಒಂದಿಡೀ ವರ್ಷ ಆ ನೋವಿನಲ್ಲಿ ನಲುಗಲು ಅವನ ಕಸಿನ್ ಕಾರಣ ಎಂಬ ವಿಷಯ ನನ್ನಲ್ಲಿ ಪ್ರ‍ೇಮ ಎಂಬುದರ ಬಗ್ಗೆಯೇ ವಾಕರಿಕೆ ಹುಟ್ಟು ಹಾಕಿತ್ತು.  ಪ್ರಣವನ ಪರಿಚಯವಾಗಿ, ಯಾಕೋ ಇವನು ಗೆಳೆಯನಾಗಷ್ಟೇ ಉಳಿಯಲಾರ ಎನಿಸಿದ ನಂತರ ಒಂದು ದಿನ ಅವನ ಬಗ್ಗೆ ವಿಚಾರಿಸುತ್ತಿರುವಾಗ ಆಕಸ್ಮಿಕವಾಗಿ ಸಿಕ್ಕ ಆ ಮಾಹಿತಿ, ಇವನ ಬಗ್ಗೆ ಒಂದು ತಿರಸ್ಕಾರಭರಿತ ಉಪೇಕ್ಷೆಗೆ ದಾರಿ ಮಾಡಿಕೊಟ್ಟಿತ್ತು. ಅದಾದ ಮೇಲೆ ಅದೆಷ್ಟು ಬಾರಿಯೋ ಹತ್ತಿಕ್ಕಿಕೊಂಡ ಹೃದಯದ ಭಾವನೆಗಳು ಅವಕಾಶ ಸಿಕ್ಕಿದಾಗಲೆಲ್ಲ ಭುಗಿಲೆದ್ದು ಮನಸ್ಸಿನ ಆದೇಶದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದವು. ಎಷ್ಟೋ ಸಲ ರೋಸಿ ಹೋಗಿ ಇದೆಲ್ಲ ಒಪ್ಪಿಕೊಂಡುಬಿಡಲಾ ಎನಿಸಿದ್ದೂ ಹೌದು. ಆದರೆ ಒಂದು ಸಲಕ್ಕೆ ಅಕ್ಕನ ನೆನಪಾದಾಗ ಇದೆಲ್ಲಾ ವ್ಯಭಿಚಾರ ಎನಿಸುತ್ತಿತ್ತು. ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲದಲ್ಲಿ ಎಷ್ಟೋ ರಾತ್ರಿಗಳು ಹೇಳಹೆಸರಿಲ್ಲದಂತೆ ಕಳೆದುಹೋದವು.
ಹೀಗೇ ದಿನಗಳು ಉರುಳುತ್ತಿದ್ದವು. ನಾಲ್ಕು ತಿಂಗಳಾಗಿದ್ದವೆಂದು ಕ್ಯಾಲೆಂಡರ್ ಹೇಳುತ್ತಿತ್ತು. ಅದೊಂದು ಭಾನುವಾರ ಅಕ್ಕನ ಮನೆಗೆ ಹೀಗೇ ಹೋಗಿದ್ದೆ. ಅವರ ಮನೆಯಲ್ಲಿ ಯಾರೋ ಅತಿಥಿಗಳಿದ್ದರು ಎಂದು ಮನೆಯ ಬಾಗಿಲಿನಲ್ಲಿದ್ದ ಶೂಗಳೇ ಹೇಳುತ್ತಿದ್ದವು. ನಾನು ಒಳಹೊಕ್ಕೊಡನೆಯೇ ಭಾವ, " ಇವಳು ಶಾರ್ವರಿಯ ತಂಗಿ, ಸುವಿಧಾ ಎಂದು PESITನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ, ಇವರು ಕೇಶವಚಂದ್ರ ಶಾಸ್ತ್ರಿ  ಎಂದು ಸುವಿಧಾಳ ಕ್ಲಾಸ್ ಮೇಟು. ಯು. ಎಸ್. ನಲ್ಲಿ ಇರುತ್ತಾರಂತೆ. ... " ಇನ್ನೂ ಏನೋ ಹೇಳಲು ಹೋಗುತ್ತಿದ್ದರು. ಆಗ ಕೇಶವಚಂದ್ರ ರವರೇ, " ಓ, PESIT ತಾನೇ, ನಮ್ಮ ಪ್ರಣವ್ ಗೊತ್ತಿರಬೇಕಲ್ಲಾ, ನನಗೆ ಕಸಿನ್ ಆಗಬೇಕು ಅವನು. ನಮ್ಮ ಮನೆಯಲ್ಲಿಯೇ ಆಡಿಕೊಂಡಿದ್ದವನು..." ಇನ್ನೂ ಏನೇನೋ ಹೇಳುತ್ತಿದ್ದರು. ನನಗೆ ಕೇಳುತ್ತಿರಲಿಲ್ಲ. ಇವರು ಇಲ್ಲಿಗೆ ಮನೆಗೆ ಬಂದೂ, ಅಕ್ಕ ನಗುನಗುತ್ತಿದ್ದಾಳೆ ಎಂದರೆ ಅಕ್ಕನಿಗೆ ಮೋಸ ಮಾಡಿದಾತ ಈತನಲ್ಲ. ಹಾಗಾದರೆ ಏನೋ ಒಂದು ಗಜಿಬಿಜಿಯಾಗಿದೆ ನನ್ನ ಲೆಕ್ಕಾಚಾರದಲ್ಲಿ ಎಂದುಕೊಂಡಳು. ತಕ್ಷಣ "ಇವತ್ತು ನನ್ನ ಪ್ರಾಜೆಕ್ಟ್ ಗ್ರುಪಿನ ಮೀಟಿಂಗ್ ಇದೆ ಭಾವ, ನಾನು ಮರೆತು ಬಿಟ್ಟಿದ್ದೆ" ಎಂದವಳೇ ಮನೆಯತ್ತ ಸ್ಕೂಟಿಯನ್ನು ತಿರುಗಿಸಿದ್ದಳು. ಮನೆಗೆ ಬಂದು ಅಕ್ಕ ತವರಿನಲ್ಲೇ ಬಿಟ್ಟು ಹೋಗಿದ್ದ ಒಂದಿಷ್ಟು ಡೈರಿಗಳನ್ನು ತೆಗೆದು ನೋಡಿದರೆ ಅದರಲ್ಲಿ ಎಲ್ಲ ಕಡೆ ಇದ್ದಿದು ಬರೀ ಕೇಶವಚಂದ್ರ ಎಂದು ಮಾತ್ರ. ಹಾಗಾದರೆ ಈ ಪ್ರಣವ್ ನ ಕಸಿನ್ ಯಾರು ? ಮತ್ತೊಂದು ಗೊಂದಲ ತಲೆಯಲ್ಲಿ ಸೇರಿ ಮಾರನೆಯ ಸೋಮವಾರದ ಬೆಳುಗನ್ನೇ ಕಾಯುತ್ತಾ ಕುಳಿತಳು.
ಬೆಳಿಗ್ಗೆಯ ತಿಂಡಿಯನ್ನೂ ತಿನ್ನದೇ ಕಾಲೇಜಿಗೆ ಓಡಿದವಳಿಗೆ,ಕಾಲೇಜು ಮುಟ್ಟಿದ ಮೇಲೆಯೇ, ಕಾಲೇಜು ಆಫೀಸು ತೆಗೆಯುವುದು ೯ ಗಂಟೆಗೆ ಎಂಬ ನೆನಪಾಗಿದ್ದು. ಗಡಿಯಾರ ನೋಡಿದರೆ ೭.೪೫. ಹತ್ತಿರದಲ್ಲೇ ಇದ್ದ ಅಕ್ಕನ ಮನೆಗೆ ಹೋದರಾಯಿತೆಂದು ಸ್ಕೂಟಿ ತಿರುಗಿಸುವುದರೊಳಗೆ ಪ್ರಣವನನ್ನು ಗೇಟಿನಲ್ಲಿ ಕಂಡಂತಾಯಿತು.  ಇವಳ ಮುಖದಲ್ಲಿ ಕಿರುನಗೆ ಯಾವುದೇ ಅಡೆತಡೆಯಿಲ್ಲದೇ ಹೃತ್ಪೂರ್ವಕವಾಗಿ ಬಂದಿತ್ತು. ಯಾಕೋ ಅವನು ನಗೆಯನ್ನು ಹೊರತರಿಸಲು ಅನುಮಾನ ಪಟ್ಟನೇ? ಎದುರು ಬರುತ್ತಿದ್ದಾತ ಬೇಕೆಂದೇ ಪಕ್ಕಕ್ಕೆ ಸರಿದು ಹೋದಂತಾಗಿ, ’ಹಗ್ಗ ಹರಿಯುತ್ತಿದೆಯೇ ಪ್ರಭುವೇ?’ ಎನ್ನಿಸಿತು. ಏನೇ ಇರಲಿ, ಎಂದು ಅಕ್ಕನ ಹೊಸಕೆರೆಹಳ್ಳಿಯ ಮನೆಯ ಕಡೆ ಸ್ಕೂಟಿಯನ್ನು ತಿರುಗಿಸಿದೆ. ಅಲ್ಲಿ ಹೋದರೆ ಮತ್ತೆ ಅದೇ ಕೇಶವಚಂದ್ರ ಶಾಸ್ತ್ರಿ ನ ದರ್ಶನ. ಆತ ನನ್ನದೇ ವಿಳಾಸ ಹುಡುಕಿಕೊಂಡು ಬಂದಿದ್ದರಂತೆ. ನಾನು ಸಿಕ್ಕಿದಾಗ ಬಹಳವೇ ಖುಷಿಯಾಗಿದ್ದು ಮುಖದಲ್ಲಿಯೇ ತಿಳಿಯುತ್ತಿತ್ತು.
ನನ್ನನ್ನು ಮನೆಯಿಂದ ಸ್ವಲ್ಪ ಹೊರಕ್ಕೆ ಕರೆದುಕೊಂಡು ಹೋಗಿ ಅವರು ಕೇಳಿದ್ದಿಷ್ಟೇ, " ನಿನಗೆ ನಮ್ಮ ಪ್ರಣವ್ ಗೊತ್ತೇ? ಅವನು ನಿಮ್ಮದೇ ಡಿಪಾರ್ಟ್ ಮೆಂಟ್, ನಿನಗೆ ಒಂದು ವರ್ಷಕ್ಕೆ ಸೀನಿಯರ್.ಆಗಬೇಕು"
ನಾನು, " ಗೊತ್ತಿರುವುದೇನು, ನಾನೂ ಮತ್ತೂ ಅವನು ವರ್ಷವಿಡೀ ಡ್ಯಾನ್ಸ್ ಪಾರ್ಟ್ನರ್ಸ್ ಆಗಿದ್ವಿ, ಚನ್ನಾಗಿಯೇ ಗೊತ್ತಿದೆ. ಇತ್ತೀಚೆಗೆ ಎಲ್ಲಿಯೂ ಸಿಕ್ಕುತ್ತಿಲ್ಲ,  ಅವನು ಕ್ಲಾಸಿಗೆ ಸಹ ಸರಿಯಾಗಿ ಬರುತ್ತಿಲ್ಲ ಎಂದು ಯಾರೋ ಹೇಳುತ್ತಿದ್ದ ನೆನಪು" ಹೇಳಬೇಕಿದ್ದರೆ ಮನದಲ್ಲಿದ್ದ ಬೇಸರವನ್ನು, ಕಾತರಿಕೆಯನ್ನು ಮಾತಿನಲ್ಲಿ ತೋರಿಸಬಾರದೆಂದು ಬಹಳೇ ಪ್ರಯತ್ನಪಟ್ಟೆ. "ಅವನೇನಾದರೂ ಸರಿಯಾಗಿರದೇ ಇದ್ದರೆ ಅದಕ್ಕೆ ನಾನೇ ಕಾರಣ" ಎಂದು ಬಾಯ್ತುದಿಯವರೆಗೆ ಬಂದ ಮಾತನ್ನು ಅಲ್ಲಿಯೇ ತಡೆದು ನಿಲ್ಲಿಸಿದೆ. ಆದರೂ ಹೀಗೆ ನನ್ನನ್ನೇಕೆ ವಿಚಾರಿಸುತ್ತಿದ್ದಾರೆ ಎಂದು ಖಚಿತವಾಗಿ ತಿಳಿಯದೇ ಪ್ರಣವನೇನಾದರೂ ಎಲ್ಲವನ್ನೂ ಹೇಳಿಬಿಟ್ಟಿರುವನೇ ಎಂಬ ಅನುಮಾನ ಬಂತು. ಸ್ವಾಭಿಮಾನಿ ಪ್ರಣವ್ ಹೀಗೆ ತನ್ನ ರಾಯಭಾರ್ಯಕ್ಕೆ ಇನ್ನೊಬ್ಬರನ್ನು ಕಳಿಸುವುದು ಸಾಧ್ಯವಿಲ್ಲವೆನಿಸಿತು.
"ಹೌದಮ್ಮಾ, ಈಗೀಗ ಏನೂ ಸರಿಯಾಗಿ ಮಾಡುತ್ತಿಲ್ಲ ಅವನು, ಆ ತರಹದ ಆಗರ್ಭ ಶ್ರೀಮಂತನಾಗಿ ಯಾವುದೋ ಒಂದು ರೂಮು ಮಾಡಿಕೊಂಡಿರುತ್ತೇನೆ ಎಂದ, ಏನೋ ಅವನ ಇಷ್ಟ ಎಂದು ಬಿಟ್ಟಾಯ್ತು. ಈಗ ನೋಡಿದರೆ ಪಕ್ಕಾ ದೇವದಾಸ್ ತರಹ ಆಗಿಹೋಗಿದ್ದಾನೆ. ಯಾವುದರಲ್ಲಿಯೂ ಆಸಕ್ತಿ ಇಲ್ಲದವರ ತರಹ. ಆ ಗಡ್ಡ ನೋಡಿದರೇ ತಿಳಿಯುತ್ತದೆ ಏನೋ ಸರಿಯಿಲ್ಲ ಎಂದು. ಅವನೇನಾದರೂ ಪ್ರೀತಿ ಗೀತಿಯಲ್ಲಿ ಬಿದ್ದಿದ್ದಾನೆಯೇ? ಕಾಲೇಜಿನಲ್ಲೇನು ಸುದ್ದಿಯಿದೆಯೇ? ಗೊತ್ತಿದ್ದರೆ ಹೇಳಮ್ಮಾ! ಅವನು ಏನು ಬೇಕೆಂದರೆ ಅಪ್ಪ ಅಮ್ಮ ತಲೆಯ ಮೇಲೆ ಹೊತ್ತು ಮಾಡುತ್ತಾರೆ, ಆದರೆ ಕೇಳುವ ಅಭ್ಯಾಸವಲ್ಲ ಅವಂದು. ಮಗನ ಸ್ಥಿತಿಯನ್ನು ನೋಡಲಾರದೇ ನೋಯುತ್ತಿದ್ದಾರೆ. ನಾನು ನಿನ್ನನ್ನು ನಿನ್ನೆ ಭೇಟಿಯಾಗಿದ್ದರಿಂದ ನಿನಗೇನಾದರೂ ಗೊತ್ತಿರಬಹುದು ಎಂದು ನಿನ್ನನ್ನರಸುತ್ತಿದ್ದೆ"
ನನಗೆ ಏನೋ ಒಂದು ರಿಲೀಫ಼್ ಸಿಕ್ಕಂತಾಯ್ತಾದರೂ, ನನ್ನ ಮೂಲಭೂತ ಸಂದೇಹ ಇನ್ನೂ ಬಗೆಹರಿದಿರಲಿಲ್ಲ, ಅದಕ್ಕಾಗಿಯೇ"ಆಯ್ತು ಅದರ ಚಿಂತೆ ನನಗೆ ಬಿಡಿ, ನಾನು ಅದನ್ನೆಲ್ಲ ವಿಚಾರಿಸಿಕೊಳ್ಳುತ್ತೇನೆ. ಆದರೆ ಒಂದು ವಿಚಾರ ನಿಮ್ಮ ಕ್ಲಾಸಿನಲ್ಲಿ ಕೇಶವಚಂದ್ರ ಜೋಷಿ ಎಂದು ಒಬ್ಬನಿದ್ದನೇ? "ಎಂದು ಕೇಳಬೇಕಿದ್ದರೆ ನನ್ನ ಎದೆಬಡಿತ ನನಗೇ ಕೇಳುತ್ತಿತ್ತು. ಅವರು ಹೌದೆನ್ನಲಿ ಎಂದು ಮನಸ್ಸು ಎಂದೂ ನಂಬದ ದೇವರನ್ನು ಬೇಡುತ್ತಿತ್ತು.
ಆ ಹೆಸರು ಕೇಳಿದೊಡನೆಯೇ ಅವರ ಮುಖದ ಭಾವನೆಗಳು ಗಮನೀಯ ಎನ್ನುವ ಮಟ್ಟಿಗೆ ಬದಲಾದವು. " ಹೌದು, ಆ ಹೆಸರಿನ ಒಬ್ಬ ಲೋಫ಼ರ್ ಇದ್ದ. ಅವನೇ ನಿಮ್ಮಕ್ಕನಿಗೆ ಮೋಸ ಮಾಡಿದ್ದು. ಈಗ ಅದಕ್ಕಾಗಿ ಅನುಭವಿಸುತ್ತಿದ್ದಾನೆ, ಅವನಿಗೆ ಬ್ಲಡ್ ಕ್ಯಾನ್ಸರ್ ಇದೆಯಂತೆ" ನನಗೆ ಮತ್ತೇನೂ ಕೇಳಿರಲಿಲ್ಲ, ಕೇಳಬೇಕಾಗೂ ಇರಲಿಲ್ಲ, ಕೇಳಬೇಕೆಂದೆನಿಸಿರಲೂ ಇಲ್ಲ. ನಾನು ಒಂದು ಖುಷಿಯ ಸಿಳ್ಳೆ ಹಾಕಿಕೊಂಡು ಕಾಲೇಜಿನತ್ತ ಪ್ರಣವ್ ನನ್ನು ಭೇಟಿಯಾಗಲು ಹೊರಟೆ.

1 comment:

  1. ಭಾಗ ೧ ರಂತೆಯೇ ಭಾಗ ಎರಡರಲ್ಲೂ ಬಿಗುವಿದೆ.

    ನಿರೂಪಣಾ ಶೈಲಿಯಲ್ಲಿ ಓದಿಸಿಕೊಂಡು ಹೋಗುವ ಕಲೆಗಾರಿಕೆ ಇದೆ.

    ಇದೇ ಸರಳತೆಯನ್ನು ಉಳಿಸಿ ಬೆಳೆಸಿ. ಶುಭವಾಗಲಿ...

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete