ಇದು
೫೦ನೆಯ ಪೋಸ್ಟ್ , ಕಳೆದ ಎರಡೂವರೆ ವರ್ಷಗಳಿಂದ ಈ ಬ್ಲಾಗನ್ನು ಇಷ್ಟಪಟ್ಟು, ನನ್ನನ್ನು ಪ್ರೋತ್ಸಾಹಿಸಿದ
ಎಲ್ಲರಿಗೂ ನನ್ನ ಧನ್ಯವಾದಗಳು.

ಕೇಳಿದನೇ ರಾಮದೇವ ನನ್ನ ಇಚ್ಛೆಯ, ನನ್ನದೇ ಸ್ವಯಂವರದಲ್ಲಿ
ಗಣಿಸಿದನೇ ಸತಿಯನ್ನು, ಪಿತೃವಾಕ್ಯ ಪರಿಪಾಲನೆಯ ಸಡಗರದಲ್ಲಿ
ಬೆಲೆಯಿತ್ತೇ ನನ್ನ ಮಾತಿಗೆ, ಅಳುವಿಗೆ, ಸಂದೇಹದ ಅಗ್ನಿಪರೀಕ್ಷೆಯಲ್ಲಿ
ಏನಾಯ್ತು ಪತಿಧರ್ಮ, ನನ್ನ ಅಪಹರಣದಿಂದ ಬಿಡಿಸಿ ಮತ್ತೆ ಕಾಡಿಗೆ ಅಟ್ಟಿದಲ್ಲಿ
ಎತ್ತಲಾಗದ ಬಿಲ್ಲ ದಾಶರಥಿ ಮುರಿದಾಗ ಜಾನಕಿಯ
ಮನವ ಗೆದ್ದನೇ
ಅರ್ಥವಾಗದ ಧರ್ಮಕ್ಕೆ ವನವಾಸಕ್ಕೆ ಹೋಗೆಂದರೆ
ಯಾಕೆಂದು ಕೇಳಿದೆನೇ
ಪತಿವ್ರತೆ ಏಕಪತ್ನೀವೃತಸ್ಥರಾದ ಮಾತ್ರಕ್ಕೆ
ಅದು ಆದರ್ಶ ಜೋಡಿಯೇ
ಎಲ್ಲಿತ್ತು ದಾಂಪತ್ಯ ದಂಡಕ, ಅಶೋಕವನ, ವಾಲ್ಮಿಕಿ ಅಶ್ರಮಗಳ ಮಧ್ಯೆ
ಅಬಲೆಯೆಂದರು, ಆದರ್ಶ ಸ್ತ್ರೀಯೆಂದರು, ನನ್ನ ಬಯಕೆಗಳೇ ಅವು
ನನಗೆ ಬೇಕಿದ್ದುದು ಒಂದಿಷ್ಟು ನೆಮ್ಮದಿ, ಅಲ್ಲೇ ಒಂದು ಪ್ರೀತಿಯ ತಾವು
ಈ ಪಾತಿವ್ರತ್ಯ, ಈ ಅನುಮಾನ, ಈ ಜಂಜಾಟ ಸಾಕಾಗಿ ಹೋಗಿತ್ತು
ಅನುಮಾನಿಸದೇ ಕೈಚಾಚಿದ ತಾಯಿ ಭೂಮಿಯ ಮಡಿಲಲ್ಲಿ
ಜಾಗವಿತ್ತು
ವಿ. ಸೂ. : ಇದು ಕೇವಲ ನನ್ನ ಭಾವನೆಗಳು, ಕೇವಲ ನನ್ನೊಬ್ಬನ ವಿಚಾರಗಳು. ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶ ನನ್ನಲ್ಲಿಲ್ಲ.
ಹಾಗೇನಾದರೂ ಅನಿಸಿದರೆ ಈ ಮೂಢನನ್ನು ಕ್ಷಮಿಸಿಬಿಡಿ ಒಮ್ಮೆ.