Saturday, 2 March 2013

ಸೀತೆಯ ಸ್ವಗತ


ಇದು ೫೦ನೆಯ ಪೋಸ್ಟ್ , ಕಳೆದ ಎರಡೂವರೆ ವರ್ಷಗಳಿಂದ ಈ ಬ್ಲಾಗನ್ನು ಇಷ್ಟಪಟ್ಟು, ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.


ಪೀಠಿಕೆ : ನಾವು ಯೋಚಿಸುವ ಎಲ್ಲ ಮಾತುಗಳನ್ನು ನಾವು ಹೇಳುವುದಿಲ್ಲ, ಹೇಳಲೂಬಾರದು ಬಿಡಿ. ಕೆಲವೊಂದು ಮಾತುಗಳು ನಮ್ಮಲ್ಲಿಯೇ ಉಳಿದು ಹೋಗುತ್ತವೆ, ಯಾವುದಾದರೂ ಕಾರಣದಿಂದಕೆಲವೊಮ್ಮೆ ಧೈರ್ಯದ ಕೊರತೆಯಿಂದ, ಕೆಲವೊಮ್ಮೆ ಧರ್ಮದ ಹೆದರಿಕೆಯಿಂದ, ಕೆಲವೊಮ್ಮೆ ಹೇಳಬಾರದೆಂದು ತೀರ್ಮಾನಿಸಿದ್ದರಿಂದ. ಎಲ್ಲರಲ್ಲಿಯೂ ಈ ಮಾತುಗಳಿರುತ್ತವೆ. ಸೀತೆಯಲ್ಲಿಯೂ ಇಂತಹ ಮಾತುಗಳು ಒಂದಿಷ್ಟು ಉಳಿದಿದ್ದವೇ? ಗೊತ್ತಿಲ್ಲ. ಅದನ್ನು ನೋಡುವ ಪ್ರಯತ್ನವಷ್ಟೇ ಇದು. ಶ್ರೀರಾಮಚಂದ್ರನ ಎಂದರೆ ಧರ್ಮಸ್ವರೂಪಿ ಆತ. ಯಾವುದು ಧರ್ಮ ಎಂಬುದರ ಬಗೆಗಿನ ವಿವೇಚನೆಯಲ್ಲಿ ಆತನನ್ನು ಮೀರಿಸಿದವರಿಲ್ಲ. ಆದರೆ ಸಂಸಾರ ಎಂದರೆ ಧರ್ಮ ಒಂದೇ ಅಲ್ಲ ಅಲ್ಲವೇ? ಆಧುನಿಕ ಜಗತ್ತಿನ ಮೌಲ್ಯಗಳ ಭೂತಗನ್ನಡಿಯಲ್ಲಿ ಶ್ರೀರಾಮಚಂದ್ರನನ್ನು ನೋಡುವ ತಪ್ಪುಪ್ರಯತ್ನವೇ ಇದು? ನೀವೇ ನಿರ್ಣಾಯಕರು.

ಕೇಳಿದನೇ ರಾಮದೇವ ನನ್ನ ಇಚ್ಛೆಯ, ನನ್ನದೇ ಸ್ವಯಂವರದಲ್ಲಿ
ಗಣಿಸಿದನೇ ಸತಿಯನ್ನು, ಪಿತೃವಾಕ್ಯ ಪರಿಪಾಲನೆಯ ಸಡಗರದಲ್ಲಿ
ಬೆಲೆಯಿತ್ತೇ ನನ್ನ ಮಾತಿಗೆ, ಅಳುವಿಗೆ, ಸಂದೇಹದ ಅಗ್ನಿಪರೀಕ್ಷೆಯಲ್ಲಿ
ಏನಾಯ್ತು ಪತಿಧರ್ಮ, ನನ್ನ ಅಪಹರಣದಿಂದ ಬಿಡಿಸಿ ಮತ್ತೆ ಕಾಡಿಗೆ ಅಟ್ಟಿದಲ್ಲಿ

ಎತ್ತಲಾಗದ ಬಿಲ್ಲ ದಾಶರಥಿ ಮುರಿದಾಗ ಜಾನಕಿಯ ಮನವ ಗೆದ್ದನೇ
ಅರ್ಥವಾಗದ ಧರ್ಮಕ್ಕೆ ವನವಾಸಕ್ಕೆ ಹೋಗೆಂದರೆ ಯಾಕೆಂದು ಕೇಳಿದೆನೇ
ಪತಿವ್ರತೆ ಏಕಪತ್ನೀವೃತಸ್ಥರಾದ ಮಾತ್ರಕ್ಕೆ ಅದು ಆದರ್ಶ ಜೋಡಿಯೇ
ಎಲ್ಲಿತ್ತು ದಾಂಪತ್ಯ ದಂಡಕ, ಅಶೋಕವನ, ವಾಲ್ಮಿಕಿ ಅಶ್ರಮಗಳ ಮಧ್ಯೆ

ಅಬಲೆಯೆಂದರು, ಆದರ್ಶ ಸ್ತ್ರೀಯೆಂದರು, ನನ್ನ ಬಯಕೆಗಳೇ ಅವು
ನನಗೆ ಬೇಕಿದ್ದುದು ಒಂದಿಷ್ಟು ನೆಮ್ಮದಿ, ಅಲ್ಲೇ ಒಂದು ಪ್ರೀತಿಯ ತಾವು
ಈ ಪಾತಿವ್ರತ್ಯ, ಈ ಅನುಮಾನ, ಈ ಜಂಜಾಟ ಸಾಕಾಗಿ ಹೋಗಿತ್ತು
ಅನುಮಾನಿಸದೇ ಕೈಚಾಚಿದ ತಾಯಿ ಭೂಮಿಯ ಮಡಿಲಲ್ಲಿ ಜಾಗವಿತ್ತು


ವಿ. ಸೂ. : ಇದು ಕೇವಲ ನನ್ನ ಭಾವನೆಗಳು, ಕೇವಲ ನನ್ನೊಬ್ಬನ ವಿಚಾರಗಳು. ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶ ನನ್ನಲ್ಲಿಲ್ಲ. ಹಾಗೇನಾದರೂ ಅನಿಸಿದರೆ ಈ ಮೂಢನನ್ನು ಕ್ಷಮಿಸಿಬಿಡಿ ಒಮ್ಮೆ. 

2 comments:

 1. ಸುಬ್ರಹ್ಮಣ್ಯಜೀ,
  ಇತಿಹಾಸ ಪುರಾಣದ ಕಥೆಗಳನ್ನು ಮಾನವೀಯತೆಯ ದಿಕ್ಕಿನಿಂದ ನೋಡುತ್ತಾ ಹೋದರೆ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರ ಒಂದೊಂದು ದಿಕ್ಕಿನಲ್ಲಿ ಕಾಣುತ್ತದೆ..ಇದು ಸಹಜವೇ...ಈಗಾಗಲೇ ಈ ಬಗ್ಗೆ ಸುಮಾರು ಬರಹಗಳೂ ಬಂದಿವೆ...
  ನನಗೆ ತಿಳಿದಿರುವ ಮಟ್ಟಿಗೆ ರಾವಣನನ್ನು ಕುರಿತೂ ಆತನ ಒಳ್ಳೆಯ ಗುಣಗಳು,ಕಾಲಕ್ಕೆ ತಕ್ಕಂತೆ ಆತ ಬದಲಾಗಿದ್ದನ್ನೂ ಕೆಲವರು ಬರೆದಿದ್ದಾರೆ...ಊರ್ಮಿಳೆಯ ಬಗ್ಗೆಯೂ ಬರೆದದ್ದಿದೆ..ಸೀತೆಯನ್ನೇ ಪ್ರಧಾನವಾಗಿಟ್ಟುಕೊಂಡು ಸೀತಾಯಣವಿರುವುದೆಂದೂ ಎಲ್ಲೋ ಕೇಳಿದ ನೆನಪು...
  ಅವುಗಳನ್ನು ಅವರವರ ಕಲ್ಪನೆಗೆ ಬಿಡಬೇಕಷ್ಟೇ...ಅವುಗಳನ್ನು ಗೌರವಿಸಬೇಕಷ್ಟೇ..ಹಾಗಾಗಿ ಸಮಾಜಕ್ಕೆ ಕೆಟ್ಟ ಸಂದೇಶ ಕೊಡದಿರುವ ಬರಹಗಳ ಬಗ್ಗೆ ನೀವು ಯೋಚಿಸಬೇಕಾಗೇ ಇಲ್ಲವೇನೋ...ಬರೆಯುತ್ತಿರಿ..

  ಸೀತೆ ...ಅವಳ ಅಳಲನ್ನು ನೋಡುವ ಪ್ರಯತ್ನ..
  ಭಾವ ಬಹಳ ಇಷ್ಟವಾಯ್ತು..ಬ್ಲಾಗಿನ ಹೆಸರೇ ಭಾವಸ್ರಾವ ವಲ್ಲವೇ!!..
  ಸ್ವಲ್ಪ ಚಿತ್ರ ಹಾಗೂ ಬರಹವನ್ನು ಸರಿಯಾಗಿ ಮೇಲೆ ಅಥವಾ ಕೆಳಗೆ ಹೊಂದಿಸಿದ್ದರೆ ಇನ್ನೂ ಚೆನ್ನವೇನೋ...ನೋಡಿ ಒಂದ್ಸಲ...ಅಕ್ಕ ಪಕ್ಕದಲ್ಲಿ ಯಾಕೋ ಅಷ್ಟು ಚೆನ್ನಾಗಿ ಕಾಣುತ್ತಿಲ್ಲ ನನ್ನ ಕಣ್ಣಿಗೆ...
  ಮತ್ತೆ ಅಭಿನಂದನೆಗಳು ಅರ್ಧ ಶತಕಕ್ಕಾಗಿ...ನಡೆಯುತಿರಲಿ ಬ್ಲಾಗ್ ಯಾನ...

  ReplyDelete
 2. 50ನೇ ಪೋಸ್ಟಿನ ಅಭಿನಂದನೆಗಳು ಹೆಗಡೇರೇ. ಒಳ್ಳೆಯ ಬ್ಲಾಗಿಗೆ ಬಂದು ಬರಹ ಓದಿದ ಖುಷಿ ನನಗಾಯಿತು. ರಾಮಚಂದ್ರನನ್ನು ನೀವು ನೋಡಿದ ಪರಿ ನನಗೆ ಹೆಚ್ಚಿನ ಓದಿಗೆ ಪ್ರೇರೇಪಿಸಿತು.

  'ಅರ್ಥವಾಗದ ಧರ್ಮಕ್ಕೆ ವನವಾಸಕ್ಕೆ ಹೋಗೆಂದರೆ ಯಾಕೆಂದು ಕೇಳಿದೆನೇ' ಇಡೀ ರಾಮಾಯಣದ ವಿಶ್ಲೇಷಣೆ ಇಲ್ಲಿ ಕೊಟ್ಟಿದ್ದೀರಿ. ಧನ್ಯವಾದಗಳು.

  http://badari-poems.blogspot.in

  ReplyDelete