Thursday 9 May 2013

ಏತಕೆ ಹೀಗಾಗಿದೆ ನಮ್ಮಯ ಬದುಕು...



ಬಹಳ ದಿನಗಳಾಗಿದ್ದವು ಹೀಗೊಂದು ಕವನ ಬರೆಯಬೇಕು ಎಂದುಕೊಂಡು. ಭಾವ ಗಟ್ಟಿಗೊಂಡಾಗ ಶಬ್ದ ಸಿಕ್ಕುತ್ತಿರಲಿಲ್ಲ, ಶಬ್ದ ಮೂಡಿದಾಗ ಜನ್ಮಜಾತ ಸೋಮಾರಿತನ ಬಿಡುತ್ತಿರಲಿಲ್ಲ. ಇರಲಿ ಬಿಡಿ, ವಿಷಯಕ್ಕೆ ಬಂದರೆ, ಒಂದೇ ಎರಡೇ, ಎಷ್ಟು ಸಮಸ್ಯೆಗಳು ನಮ್ಮ ಭಾರತಮ್ಮನಿಗೆ. ಜೀವನವಿಡೀ ಕೂತು ಪ್ರಯತ್ನಿಸಿದರೂ ಬಿಡಿಸಲಾಗದ ಕಗ್ಗಂಟಾಗುತ್ತಿದೆ ನಮ್ಮದೇ ಸಮಾಜ ಅಥವಾ ತನ್ನ ಲೋಭಕ್ಕೋಸ್ಕರ ನಮ್ಮ ಸಮಾಜವನ್ನು ಈ ಪ್ರಪಾತದ ಅಂಚಿಗೆ ನೂಕುತ್ತಿದ್ದಾರೆ ಸ್ವಾರ್ಥಚಿತ್ತದ ಮೂಢರು. ನಮ್ಮ ನಡುವೆಯೇ ನಡೆಯುತ್ತಿರುವ ದೆಲ್ಲಿ ಅತ್ಯಾಚಾರದಂತಹ, ಯೆಡ್ಡಿ ರಾಜಕೀಯದಂತಹ ಕೆಲವು ಘಟನೆಗಳು, ಅತಿ ಆಶಾವಾದಿಯನ್ನೂ ನಿರಾಶಾವಾದದ ಕಡೆ ಮುಖಮಾಡುವಂತೆ ಮಾಡಿಬಿಡಬಹುದು. ಈ ಕವನವೂ ಅಂತಹ ನಿರಾಶಾವಾದದ ಒಂದು ಅಭಿವ್ಯಕ್ತಿ ಎನ್ನಿಸಿದರೆ ಅದು ತಪ್ಪಲ್ಲ, ಆದರೆ ಈ ಕವನದ ಆಶಯ ಈ ನಿರಾಶೆಯ ಕಾರ್ಮೋಡದ ಆಚೆ ಒಳ್ಳೆಯ ಸಮಾಜದ ಬೆಳ್ಳಿರೇಖೆಯೊಂದಿದೆ ಎಂಬುದು, ಅದರ ಕಡೆ ನಾವೆಲ್ಲ ದುಡಿಯಬೇಕೆಂಬುದು.



ಏತಕೆ ಹೀಗಾಗಿದೆ ನಮ್ಮಯ ಬದುಕು, ಕಾಣದು ಮಾನವತೆ ಮಾನವನೆದೆಯಲ್ಲಿ,
ಒಳ್ಳೆಯತನವನೂ ನಂಬದ ಹಾಗೆ ಬೆಳೆದಿದೆ ಕ್ರೌರ್ಯವು ನಮ್ಮಯ ನಡುವಲ್ಲಿ
ಬದಲಾಯಿಸಬೇಕಿದೆ ನಮ್ಮಯ ನಾಡನು; ಯೋಚಿಸಬೇಕಿದೆ ನಾವುಗಳು
ನಮ್ಮಯ ಕತ್ತಲೆ ಮೆಟ್ಟಿ ನಿಲ್ಲಲೇಬೇಕು ಕಾದಿವೆ ಬೆಳಕಿನ ನಾಳೆಗಳು॥ಪ॥

ಬಾಲೆಗಳನೂ ಬಿಡದ ಕಾಮಣ್ಣನಾಗುತಿಹರಲ್ಲಾ ನಮ್ಮಜನ;
ಸ್ತ್ರೀಯಲ್ಲಿ ದೇವರನ್ನು ಕಂಡಿದ್ದು ನಮ್ಮವರೇನೇ?
ಅಮ್ಮ, ಅಕ್ಕ, ಗೆಳತಿ, ಮಗಳಾಗಿಯೂ ಗೊತ್ತಿರುವವಳನ್ನು;
ಮನೆಯ ಹೊರಗೆ ಕಂಡಿದ್ದು ಬರಿ ಕಾಮದ ಕಣ್ಣಿಂದಲೇ?||೧||

ನಮ್ಮ ರಕ್ತವ ಕುಡಿದು ತೇಗುತಿಹರಲ್ಲಾ ನಮ್ಮದೇ ನಾಯಕರು;
ಸಂಬಳವ ಹಿಂತಿರುಗಿಸಿದ ಶಾಸ್ತ್ರಿಗಳು ಹುಟ್ಟಿದ್ದು ಇಲ್ಲೇನಾ? *
ಮಾತೆತ್ತುವ ಮೊದಲು ಲಂಚಕೆ ಚಾಚುವರಲ್ಲ ಬೊಗಸೆಯನ್ನು;
’ಜನಸೇವೆಯ ದೇವಸೇವೆಯೆಂದವರು’ ನಾವೇನಾ? ||೨||

ಧರ್ಮ, ಜಾತಿ,ಭಾಷೆಗಳ ಭೇದದಲ್ಲಿ ಹೊಡೆದಾಡುವರಲ್ಲಾ;
ಗಾಂಧಿ ಕಂಡ ಕನಸು ಈ ದ್ವೇಷ ಕ್ರೌರ್ಯಗಳೇ?
ಕಂಡಲ್ಲಿ ಕತ್ತಿಯೆತ್ತಿ ರಕ್ತಚೆಲ್ಲುವರಲ್ಲಾ ಕ್ಷುಲ್ಲಕ ಕಾರಣಗಳಿಗೆ;
ಬುದ್ಧ, ಬಸವ, ಮಹಾವೀರರ  ನಾಡು ಇದುವೇ?||೩||

ಕಾಶ್ಮೀರವ ವೈರಿಗೆ ಬಿಟ್ಟು ನಿರುಪಯೋಗಿ ಜಾಗವೆಂಬರು
ರಕ್ತ ಚೆಲ್ಲಿ ಸ್ವಾತಂತ್ರ್ಯ ಗಳಿಸಿದ್ದು ಈ ಸುಖಕ್ಕೇ?
ಇರದ ಭೇದಗಳ ಹುಟ್ಟಿಸಿ ಮತವ ಗಿಟ್ಟಿಸುವರಲ್ಲಾ
’ಒಂದು ನಾಡು ಒಂದು ಕನಸು’ ಎಂದವರು ನಾವೇನಾ?||೪||


ಟಿಪ್ಪಣಿ:
* - ಲಾಲ ಬಹಾದ್ದೂರ್ ಶಾಸ್ತ್ರಿಗಳು ಅಧಿಕಾರದಲ್ಲಿದ್ದಾಗ ಒಮ್ಮೆ ಅವರಿಗೆ ತಮ್ಮ ಹೆಂಡತಿ ತನ್ನ ಸಂಬಳದಲ್ಲಿ ಸ್ವಲ್ಪ ಭಾಗವನ್ನು ಪ್ರತೀ ತಿಂಗಳೂ ಉಳಿತಾಯ ಮಾಡುತ್ತಿದ್ದುದು ಗೊತ್ತಾಗುತ್ತದೆ. ಆಗ ಅವರು ತನ್ನ ಸಂಬಳದಲ್ಲಿ ಅಷ್ಟುಭಾಗ ’ಹೆಚ್ಚುವರಿ’  ಎಂದು ತೀರ್ಮಾನಿಸಿ ಅಷ್ಟನ್ನು ಸರಕಾರಕ್ಕೆ ಹಿಂತಿರುಗಿಸಿದ್ದರು. ಎಂತಹ ನಿಸ್ವಾರ್ಥ ಉದಾತ್ತ ಭಾವ ಅಲ್ಲವೇ? ಇಂದಿನ ರಾಜಕಾರಣಿಗಳನ್ನು ಅವರ ಪಾದಧೂಳಿಗೆ ಹೋಲಿಸಲಾದರೂ ಸಾಧ್ಯವಿದೆಯೇ?


4 comments:

  1. ಇಂದಿನ ಓರೆ ಕೋರೆಗಳ ಜೊತೆಗೆ ನಮ್ಮನ್ನು ತಿದ್ದಳು ಹವಣಿಸುವ ಕವನ. ನೆಚ್ಚಿಗೆಯಾಯ್ತು.
    ನಿಮ್ಮ ಪ್ರಸ್ತಾವನೆ, ಕವನ ಮತ್ತು ಅಡಿ ಟಿಪ್ಪಣಿ ಶೈಲಿ ಚೆನ್ನಾಗಿದೆ ಮುಂದುವರೆಸಿರಿ.

    ReplyDelete
  2. ಮನ ಮುಟ್ಟೋ ವಾಸ್ತವದ ಭಾವ ಇಷ್ಟ ಆಯ್ತು
    ಕೋಲ್ಮಿಂಚಿನ ಅಂಚಿಂದ ಕಾರ್ಗತ್ತಲೆಯ ಕೂಪದೆಡೆಗೆ ಅನ್ನೋ ತರದ ಭಾವ
    ಹೆಣ್ಣಿನ ಬಗೆಗೆಗಿನ ,ರಾಜಕೀಯದ ಬಗೆಗಿನ ದುರಂತ ಭಾವ ಮನ ಕಲುಕೋ ತರ ಬಿಂಬಿಸಿರೋ ನಿಮ್ಮೀ ಕ್ರತಿಗೊಂದು ನಮನ .
    ಬರೀತಾ ಇರಿ
    ನಮಸ್ತೆ

    ReplyDelete
  3. subbu nanu thummba ista pattu ..kasta pattu odhidhe ..adare neejavaglu sampurvaghi thiliyadhe hoithu...

    ReplyDelete
  4. mana kalakuvudu odida mele .. thumba chennagide :)

    ReplyDelete